ಸಂಗೀತ ವಿದ್ವಾನ್‌ ರಾ. ಚಂದ್ರಶೇಖರಯ್ಯನವರು ರಾಕ್ಷಸನಾಮ ಸಂವತ್ಸರದ ವೈಶಾಖ ಬಹುಳ ಸಪ್ತಮಿಯಂದು ಮೈಸೂರಿನಲ್ಲಿ ಜನಿಸಿದರು. ಅದ್ವಿತೀಯ ಪಲ್ಲವಿಗಾಯಕ ಪಲ್ಲವಿ ರಾಮಲಿಂಗಯ್ಯನವರ ಪೌತ್ರ ರಾ. ಚಂಧ್ರಶೇಖರಯ್ಯನವರು.

ತಂದೆ ರಾಮಯ್ಯನವರಲ್ಲಿ ಸಂಗೀತವು ಆಧ್ಯಾತ್ಮ ಸಾಧನೆಯ ಅಂತರ್ವಾಹಿನಿಯಾದರೆ, ಅವರ ಜ್ಯೇಷ್ಠಪುತ್ರ ರಾ.ಚಂದ್ರಶೇಖರಯ್ಯನವರಲ್ಲಿ ಸಂಗೀತವು ಭೋರ್ಗರೆದು ಹರಿದ ವಾಗ್ಗೇಯವಾಹಿನಿ. ಅಲ್ಲದೆ ಅವರ ತಾಯಿ ವರಲಕ್ಷ್ಮಮ್ಮನವರು ಶ್ರೇಷ್ಠಮಟ್ಟದ ಗಾಯಕಿಯೂ, ವೀಣಾವಾದಕಿಯೂ ಆಗಿದ್ದರು. ಅವರು ವೀಣಾ ಸುಂದರಶಾಸ್ತ್ರಿಗಳಲ್ಲಿ ಸಂಗೀತಾಭ್ಯಾಸವನ್ನು ಮಾಡಿದ್ದರು. ಹೀಗೆ, ಒಂದು ಕಡೆ ತಾತನವರಿಂದಲೂ ಮತ್ತೊಂದು ಕಡೆ ತಾಯಿಯವರಿಂದಲೂ ಸಂತ ತ್ಯಾಗರಾಜರ ಪರಂಪರೆಯ ಮೆರುಗನ್ನು ಪಡೆದ ರಾ. ಚಂದ್ರಶೇಖರಯ್ಯನವರು ಸಹಜವಾಗಿಯೇ ನಮ್ಮ ನಾಡಿನ ಒಬ್ಬ ಶ್ರೇಷ್ಠ ಸಂಗೀತವಿದ್ವಾಂಸರಾಗಿ, ತ್ರಿಭಾಷಾ ವಾಗ್ಗೇಯಕಾರರಾಗಿಕ ಮೆರೆದವರು.

ಬಾಲ್ಯದಲ್ಲಿ ತಾಯಿಯವರಿಂದಲೇ ಮೊದಲ ಸಂಗೀತ ಪಾಠವಾಯಿತು. ಮನೆಯಲ್ಲಿ ಕಡುಬಡತನವಿದ್ದರೂ ತಾಯಿ ವರಲಕ್ಷ್ಮಿಯವರದು ಹೃದಯಶ್ರೀಮಂತಿಕೆ. ತಮ್ಮ ಪುತ್ರರಲ್ಲಿ ಸಂಗೀತದ ಬಗೆಗೆ ಪ್ರೀತಿಯನ್ನೂ ಹುರುಪನ್ನೂ ಹಚ್ಚಿದರು. ಚಂದ್ರಶೇಖರಯ್ಯನವರ ಸಂಗೀತ ಸಾಧನೆ ಅವರ ತಮ್ಮ ಸೀತಾರಾಮರ ಜೊತೆಗೆ ಸಾಗಿತು. ಸಂಗೀತದ ಬೇರು ಅವರಲ್ಲಿ ರಕ್ತಗತವಾಗಿತ್ತು. ಸಂಗೀತದಲ್ಲಿ ಸದಭಿರುಚಿ. ಅನುಭಾವ ತಲ್ಲೀನತೆಗಳನ್ನು ತಾಯಿಯೇ ನಿರ್ಮಿಸಿದ್ದರು, ಮೊದಲ ಪಾಠವನ್ನು ಮಾಡಿದ್ದರು. ಸಂಗೀತದ ಸಾಧನೆಯನ್ನು ಮಾತ್ರ ಅವರೇ ರೂಪಿಸಿಕೊಳ್ಳಬೇಕಾಗಿದ್ದಿತು. ಹೀಗಾಗಿ ಸಂಗೀತದಲ್ಲಿನ ಅವರ ಅಭ್ಯಾಸ, ಸಾಧನೆ ಮತ್ತು ಕಲಿಕೆಗಳು ಅವರೇ ಅವರಿಗಾಗಿ ಏರ್ಪಡಿಸಿಕೊಂಡ ದಾರಿಯಾಯಿತು. ತಮ್ಮ ೧೪ನೆಯ ವಯಸ್ಸಿಗೇ ಮೈಸೂರಿನಲ್ಲಿ ಅವರ ಮೊಟ್ಟಮೊದಲ ಕಚೇರಿ ನಡೆಯಿತು. ಅವರ ೧೮ನೆಯ ವಯಸ್ಸಿನಲ್ಲಿ ತಾಯಿಯಿಂದ ಶ್ರೀವಿದ್ಯೆಯ ಉಪದೇಶವಾಯಿತು. ಇವೆರಡರ ಅನುಷ್ಠಾನವು ಅವರ ಜೀವನದುದ್ದಕ್ಕೂ ನಡೆಯುತ್ತಿತ್ತು.

ರಾ. ಚಂದ್ರಶೇಖರಯ್ಯನವರು ಅಕ್ಷರವಿದ್ಯೆಯನ್ನೂ ಕಲಿಕಯಲು ಮುಂದಾದರು. ಅತೀವ ಶ್ರದ್ಧೆ, ಪರಿಶ್ರಮಗಳಿಂದ ವಾಣಿಜ್ಯ ಶಾಸ್ತ್ರದಲ್ಲಿ ಉತ್ತಮ ಶ್ರೇಣಿಯಲ್ಲಿ ಬಿ.ಕಾಮ್‌ ಪದವಿಯನ್ನೂ ಗಳಿಸಿದರು. ಈ ವಿದ್ಯೆಯಿಂದ ಅವರು ಹಲವಾರು ಸಂಘ ಸಂಸ್ಥೆಗಳಲ್ಲಿ ವಿವಿಧ ಪದವಿಗಳಲ್ಲಿ ಉದ್ಯೋಗಗಳನ್ನು ಮಾಡಲು ಸಹಾಯಕವಾದರೂ ಮುಂದೆ ಅವರು ತಮ್ಮಂದಿರೊಡನೆ ಕೂಡಿ ಕಟ್ಟಿ ನಡೆಸಿದ ಅಕ್ಕರೆಯ ಸಂಸ್ಥೆ ‘ಶ್ರೀ ವರಲಕ್ಷ್ಮೀ ಆಫ್‌ ಫೈನ್‌ ಆರ್ಟ್ಸ್’ಅನ್ನು ಸುವ್ಯವಸ್ಥಿತವಾಗಿ ನಡೆಸಲು ಅತ್ಯಂತ ಸಹಕಾರಿಯಾಯಿತು.

ಶ್ರೀಯುತರ ಜೀವನವು ಅತ್ಯಂತ ಸೋಜಿಗ ಪ್ರಸಂಗಗಳ ಸರಮಾಲೆಯೆನ್ನಬಹುದು. ಇವುಗಳಲ್ಲಿ ಮೊದಲನೆಯದು ಬಹುಷಃ ಅವರೂ ಅವರ ಸೋದರರೂ ‘ಮೈಸೂರ್ ಬ್ರದರ್ಸ್’-ಮೈಸೂರು ಸಹೋದರರು ಎಂಬ ಹೆಸರನ್ನು ಪಡೆದುಕೊಂಡದ್ದು . ಅವರ ಪ್ರಥಮ ಸಂಗೀತ ಕಚೇರಿಯು ನಡೆದದ್ದು ೧೯೨೯ರಲ್ಲಿ ಮೈಸೂರಿನ ಜೈನ್‌ ಹಾಸ್ಟಲಿನಲ್ಲಿ. ಅವರ ಸೋದರ ಶ್ರೀ ಸೀತಾರಾಂರವರೊಡಗೂಡಿ ಒಂದೇ ಹಾರ್ಮೋನಿಯಂ ವಾದ್ಯದಲ್ಲಿ ಬೇರೆ ಬೇರೆ ಸ್ಥಾಯಿಗಳಲ್ಲಿ ನುಡಿಸುತ್ತಾ ಶಾಸ್ತ್ರೀಯ ದ್ವಂದ್ವಗಾಯನ ಕಚೇರಿಯನ್ನು ನಡೆಸಿ ಅಂದು ಕಿಕ್ಕಿರಿದು ಸೇರಿದ್ದ ಶ್ರೋತೃವೃಂದದಿಂದ ಅಪಾರ ಪ್ರಶಂಸೆಗೆ ಪಾತ್ರರಾದರು. ಇಂತಹ ಜನಪ್ರೀತಿ ಮತ್ತು ಬೆಂಬಲಗಳಿಂದ ಮುಂದೆ ಈ ‘ಮೈಸೂರು ಸಹೋದರರು’ ಸಂಯುಕ್ತವಾದ ಸಂಘಟಿತವಾದ ಕಾರ್ಯಗಳಿಂದ ಸಂಗೀತ-ನೃತ್ಯಕ್ಷೇತ್ರಗಳಿಗೆ ತಮ್ಮ ಅಮೂಲ್ಯ ಕಾಣಿಕೆಯನ್ನು ಸಲ್ಲಿಸಲು ಪ್ರೇರಣೆಯಾಯಿತು.

ಚಂದ್ರಶೇಖರಯ್ಯನವರ ಜೀವನದಲ್ಲಿ ಮತ್ತೊಂದು ಮಹತ್ವದ ಪ್ರಸಂಗ ನಡೆಯಿತು. ಇದು ನಡೆದದ್ದು ೧೯೩೮ರಲ್ಲಿ. ಆ ವೇಳೆಗಾಗಲೇ ಅತ್ಯಂತ ಜನಪ್ರಿಯತೆ ಮತ್ತು ಖ್ಯಾತಿಯನ್ನು ಶ್ರೀಯುತರು ಪಡೆದಿದ್ದರು. ಆಗಿನ ಶೃಂಗೇರಿ ಶಾರದಾಪೀಠದ ಹಿರಿಯ ಜಗದ್ಗುರುಗಳಾಗಿದ್ದ ಶ್ರೀಮದಭಿನವ ವಿದ್ಯಾತೀರ್ಥರ ಪೂರ್ವಾರ್ಶರಮದ ತಂದೆಯವರಾಗಿದ್ದ ಶ್ರೀ ಕೈಪು ರಾಮಾಶಾಸ್ತ್ರಿಯವರು ಮೈಸೂರಿನಲ್ಲಿ ವಾಸಿಸುತ್ತಿದ್ದು ಅವರ ಸ್ವಗೃಹದಲ್ಲಿ ವೈಭವದಿಂದ ಶ್ರೀ ತ್ಯಾಗರಾಜ ಆರಾಧನೆಯನ್ನು ನಡೆಸುತ್ತಿದ್ದರು. ಎಂದಿನಂತೆ ಆ ವರ್ಷವೂ ಸಹ ಅಂದರೆ, ತಾರೀಖು ೨೧.೦೧.೧೯೩೮ರಂದು ಮೈಸೂರಿನ ಹಿರಿಯರ ವಿದ್ವಾಂಸರಾದ ಶ್ರೀ ವಾಸುದೇವಾಚಾರ್ಯರಾದಿಯಾಗಿ ಗಣ್ಯರ ಸಮ್ಮುಖದಲ್ಲಿ ಕಚೇರಿಗಳು ನಡೆಯಿತು. ಅಂದು ಮೈಸೂರು ಸಹೋದರರು ಭಾವಭಕ್ತಿಪರವಶರಾಗಿ ತಮ್ಮ ಸಂಗೀತ ಸೇವೆಯನ್ನು ಮಾಡಿದರು. ಈ ಸೋದರ ದ್ವಯರ ಅಂದಿನ ಕಚೇರಿಯನ್ನು ಶ್ರೀ ವಾಸುದೇವಾಚಾರ್ಯರು ಬಹುವಾಗಿ ಮೆಚ್ಚಿ ಆಶೀರ್ವದಿಸಿದರು. ಹೀಗೆ ಹಿರಿಯರ ರಸಿಕರ ಆಶೀರ್ವಾದ ಮೆಚ್ಚುಗೆಗಳನ್ನು ಪಡೆದು ಧನ್ಯಭಾವದಲ್ಲಿ ಹಿಂತಿರುಗಿದ ರಾ. ಚಂದ್ರಶೇಖರಯ್ಯನವರಿಗೆ ಅದೇ ರಾತ್ರಿ ೧೨ ಗಂಟೆಗೆ ಶ್ರೀತ್ಯಾಗರಾಜಸ್ವಾಮಿಯವರ ದಿವ್ಯಾನುಗ್ರಹವಾದಂತೆ ಒಂದು ವಿಶೇಷಾನುಭವವಾಯಿತು. ತಕ್ಷಣವೇ ಮುಖಾರಿ ರಾಗದಲ್ಲಿ “ತ್ಯಾಗರಾಜ ನಿನ್ನೇಕೋರಿಯುನ್ನಾನು” ಎಂಬ ಕೃತಿಯನ್ನು ರಚಿಸಿ ಅದನ್ನು  ತ್ಯಾಗರಾಜರಿಗೆ ಸಮರ್ಪಿಸಿದರು. ನಂತರ ಮಾರನೆಯ ದಿನ ಬೆಳಿಗ್ಗೆ ಎದ್ದು ತಾಯಿಯವರಲ್ಲಿ ಈ ವಿಚಾರವನ್ನು ತಿಳಿಸಿ ಆ ಕೃತಿಯನ್ನು ಹಾಡಿದಾಗ ತಾಯಿಯವರು ಅತ್ಯಂತ ಆನಂದೆ ಪಟ್ಟು ಆಶೀರ್ವದಿಸಿ ಇಂತಹ ಕೃತಿರಚನೆಗಳಿಗೆ ಪ್ರೋತ್ಸಾಹವನ್ನಿತ್ತರು. ಇದು ರಾ. ಚಂದ್ರಶೇಖರಯ್ಯನವರ ವಾಗ್ಗೇಯಕಾರ ಜೀವನದ ನಾಂದಿಯಾಯಿತು. ಅವರ ಪ್ರತಿಯೊಂದು ರಚನೆಯನ್ನೂ ಆದರದಿಂದ ಕೇಳುತ್ತಿದ್ದ ತಾಯಿಯವರ ಪ್ರೋತ್ಸಾಹವು ಅವರಲ್ಲಿನ ವಾಗ್ಗೇಯ ಕಲ್ಪನಾಶಕ್ತಿಯು ವಿಕಸಿತಗೊಳ್ಳುವುದಕ್ಕೆ ಕಾರಣವಾಯಿತು. ದೇವತಾಸಾನ್ನಿಧ್ಯದಲ್ಲಿ, ತೀರ್ಥಕ್ಷೇತ್ರಗಳ ಸಂದರ್ಶನ ಸಂದರ್ಭಗಳಲ್ಲಿ, ಗುರು ಸಮ್ಮುಖದಲ್ಲಿ ಅಲ್ಲದೆ ಅವರ ಪ್ರವಾಸಗಳ ಸುಸಮಯದಲ್ಲಿಯೂ ಆಶುಸ್ಪೂರ್ತಿಯ ಅನುಭವ ಅನುಭಾವಗಳ ಫಲವಾಗಿ ನೂರಾರು  ಕೃತಿಗಳು ಮೂಡಿಬಂತು. ಕೆಲವು ವೇಳೆ, ಇಂತಹ ಸ್ಫೂರ್ತಿಯು ಅವರನ್ನು ನೂತನ ರಾಗಗಳನ್ನು ಸೃಷ್ಠಿಮಾಡಲು ಪ್ರೇರೇಪಿಸಿದಾಗ ಅವುಗಳನ್ನು ಲಕ್ಷ್ಯದಲ್ಲಿ ಸಮನ್ವಯಗೊಳಿಸಲು ವಿಶೇಷವಾದ ಪದ ರಾಗಬಂಧವುಳ್ಳ ಕೀರ್ತನೆಗಳನ್ನೂ ಮಾಡಿದ್ದಾರೆ. ಹೀಗೆ, ಅವರ ಸುಧಾಶ್ರುತಿ, ಅಯೋಧ್ಯ, ಕಾಮೇಶ್ವರಿ, ಭಂಡಮರ್ದಿನಿ, ಅರುಣಾಂಬಿಕಾ, ಶೋಭನ, ಸುಂದರಿ, ಶ್ರುತಿಸ್ವರೂಪಿಣೀ ಇತ್ಯಾದಿ ಹೊಸರಾಗಗಳು ಹಾಗೂ ಕೃತಿಗಳು ಸಂಗೀತಗಾರರಲ್ಲಿಯೂ ಸಂಗೀತಾಸಕ್ತರಲ್ಲಿಯೂ ಜನಪ್ರಿಯವಾಗಿದೆ. ಇವುಗಳೇ ಅಲ್ಲದೆ, ಕರ್ಣಾಟಕ ಸಂಗೀತದಲ್ಲಿ ಅಪರೂಪವೂ, ಪ್ರಯೋಗದಲ್ಲಿ ಅತ್ಯಂತ ಕಠಿಣವೂ ಆದ ಮಾಂಜಿ, ಫರಜು, ಸ್ತವರಾಜ, ಜ್ಯೋತಿಸ್ವರೂಪಿಣಿ, ಧವಳಾಂಬರಿ ಇತ್ಯಾದಿ ರಾಗಗಳಲ್ಲಿಯೂ ಕೃತಿಗಳನ್ನು ರಚಿಸಿ ಲಕ್ಷ್ಯಲಕ್ಷಣವನ್ನೂ ಸಮನ್ವಯಿಸಿದ್ದಾರೆ. ಕೃತಿಗಳಲ್ಲಿ ಸ್ವನಾಮ ಮತ್ತು ರಾಗಮುದ್ರೆಗಳಂತೆ ಪಲ್ಲವಿಗಳಲ್ಲಿ ತಾಳನಾಮಮುದ್ರೆಗಳನ್ನು ಬಳಸಿ ಅವರ ಕೃತಿರಚನಾ ಚಮತ್ಕಾರವನ್ನು ತೋರಿಸಿದ್ದಾರೆ. ರಾಗಮಾಲಿಕಾ ಕೃತಿಗಳಂತೆ, ತಾಳಮಾಲಿಕಾ ಹಾಗೂ ಗತಿಮಾಲಿಕಾ ಕೃತಿಗಳ ರಚಿಸಿರುವ ಹೆಗ್ಗಳಿಕೆ ರಾ. ಚಂದ್ರಶೇಖರಯ್ಯನವರದು.

ರಾ.ಚಂದ್ರಶೇಖರಯ್ಯನವರ ಕೃತಿಗಳಲ್ಲಿ ಒಂದು ಮುಖ್ಯವಾದ ಅಂಶವೆಂದರೆ, ಅಲ್ಲಿನ ಮಾತು ಧಾತುಗಳಲ್ಲಿ ಸರಳ ಸಹಜತೆ. ಸಾಹಿತ್ಯವು ಅವರ ಭಕ್ತಿಯನ್ನು  ನೇರವಾಗಿ ಪ್ರತಿಬಿಂಬಿಸಿದರೆ, ಸಂಗೀತವು ರಾಗದ ಜೀವಸ್ವರ ಗಮಕಸಂಚಾರಗಳಿಂದ ಸಮೃದ್ಧವಾಗಿ ತಾಳದ ಅಚ್ಚುಕಟ್ಟಾದ ವಿನ್ಯಾಸಗಳಿಂದ ಪರಿಪೂರಿತವಾಗಿದೆ. ಶ್ರೀಮುದ್ದುಸ್ವಾಮ ದೀಕ್ಷಿತರ ಕೃತಿಗಳು ಇವರ ಕೃತಿರಚನಾಕೌಶಲದ ಮೇಲೆ ತುಂಬ ಪ್ರಭಾವ ಬೀರಿದೆ. ಅನುಪಲ್ಲವಿ ಮತ್ತು ಚರಣಖಂಡಗಳಲ್ಲಿ ಮಧ್ಯಮಕಾಲದ ಸಾಹಿತ್ಯವನ್ನು  ಅವರ ಬಹುತೇಕ ಕೃತಿಗಳಲ್ಲಿ ಕಾಣಬಹುದು. ಶ್ರೀಯುತರು ಕನ್ನಡ ತೆಲುಗು ಮತ್ತು ಸಂಸ್ಕೃತಭಾಷೆಗಳಲ್ಲಿ ರಚನೆಗಳನ್ನು ಮಾಡಿದ್ದಾರೆ. ೧೯೩೮ರಿಂದ ೩೦೦ಕ್ಕೂ ಮೀರಿ ಗೀತೆ, ಸ್ವರಜತಿ, ವರ್ಣ, ಕೃತಿ, ಪದ, ತಿಲ್ಲಾನ, ದೇವರನಾಮ, ಇತ್ಯಾದಿ ವಿವಿಧ ಬಗೆಯ ಪ್ರಕಾರಗಳನ್ನೂ ಮತ್ತು ಗಮಕವಾಚನಕ್ಕೆಂದು ವಾರ್ಧಿಕ-ಭಾಮಿನೀ ಷಟ್ಪದಿಗಳೂ, ನೃತ್ಯಗೀತೆ, ಶಿಶುಗೀತೆಗಳನ್ನು ರಚಿಸಿ, ಆಕಾಶವಾಣಿ ಮತ್ತು ಸಾರ್ವಜನಿಕ ವೇದಿಕೆಗಳ ಮೂಲಕ ಹಾಡಿ, ಹಾಡಿಸಿ ಬಳಕೆಗೆ ತಂದಿದ್ದಾರೆ. ಇವುಗಳಲ್ಲಿ ತೆಲುಗಿನಲ್ಲಿ ರಚಿಸಿರುವ ಶ್ರೀ ತ್ರಿಪುರಸುಂದರೀ ನವಾವರಣ ಕೃತಿಗಳೂ, ಶೃಂಗೇರೀ ಪಂಚರತ್ನ ಕೃತಿಗಳೂ ರಾ. ಚಂದ್ರಶೇಖರಯ್ಯನವರು ಸಂಗೀತ ಪ್ರಪಂಚಕ್ಕೆ ಇತ್ತ ಅಮೂಲ್ಯ ಕೊಡುಗೆಗಳಾಗಿವೆ. ಇವರ ಕೃತಿಗಳು ಉತ್ತಮರೀತಿಯಲ್ಲಿ ಛಂದೋಬದ್ಧವಾಗಿದೆ. ವಿಪುಲವೂ ಸುಂದರವೂ ಆದ ಪ್ರಥಮ, ದ್ವಿತೀಯ, ಮಧ್ಯ, ಅಂತ್ಯಪ್ರಾಸಗಳಲ್ಲಿಯೂ, ತಾಳಾಂಗಪ್ರಾಸ ಮತ್ತು ಪದಪ್ರಾಸಗಳಲ್ಲಿಯೂ, ಹೇರಳವಾದ ಸ್ವರಾಕ್ಷರ ಪ್ರಯೋಗಗಳಿಂದಲೂ ಸಮೃದ್ಧವಾಗಿದೆ.

ಪಲ್ಲವಿ ರಾಮಲಿಂಗಯ್ಯನವರ ವಂಶದಲ್ಲಿ ಜನಿಸಿದ ರಾ. ಚಂದ್ರಶೇಖರಯ್ಯನವರಿಗೆ ಸಹಜವಾಗಿಯೇ ಪಲ್ಲವಿ ಗಾಯನದಲ್ಲಿ ಒಲವಿತ್ತು. ಸಹೋದರರ ಒಡಗೂಡಿ ಭಾರತದಾದ್ಯಂತ ತಮ್ಮ ಕಚೇರಿಗಳಲ್ಲಿ ವಿಶೇಷ ಪಲ್ಲವಿಗಳನ್ನು ಪ್ರಸ್ತುತಪಡಿಸಿ ಪಂಡಿತರ ಶ್ಲಾಘನೆಗಳಿಗೆ ಪಾತ್ರರಾಗಿದ್ದರು. ಅವರ ಗುಂಭಶಾರೀರವು ಪಲ್ಲವಿ ಗಾಯನಕ್ಕೆಂದೇ ಹೇಳಿಮಾಡಿಸಿದಂತಿತ್ತು. ಪಲ್ಲವಿ ಗಾಯನಕ್ಕೆ ಮುಂಚೆ ವಿದ್ವತ್ಪೂರ್ಣವಾಗಿ ಹಾಡುತ್ತಿದ್ದ ರಾಗಾಲಾಪನೆ, ಅವರದೇ ಆದ ಹೊಸಶೈಲಿಯ ತಾನಗಳ ಗಾಯನವು ಅವರ ಪಲ್ಲವಿ ಗಾಯನಕ್ಕೆ ಹೊಸತಿರುವನ್ನೂ ಮೆರುಗನ್ನೂ ಕೊಡುತ್ತಿತ್ತು. ೧೯೫೧ರಲ್ಲಿ ಅವರ ಆರಾಧ್ಯದೈವವಾದ ಶ್ರೀ ತ್ರಿಪುರಸುಂದರಿಯ ಅನುಗ್ರಹದಿಂದ ಅಪರೂಪದ ೧೦೮ ದೇಶೀತಾಳಗಳಲ್ಲಿ ಪಲ್ಲವಿ ರಚನೆಮಾಡುವಂತೆ ಪ್ರೇರೇಪಣೆಯಾಯಿತು. ಹೀಗಾಗಿ, ಕೇವಲ ಗ್ರಂಥಸ್ಥವಾಗಿದ್ದ, ಬಹುಕ್ಲಿಷ್ಟವೂ, ವಿದ್ವತ್ಪೂರ್ಣವೂ ಆದ ಅಷ್ಟೋತ್ತರ ಶತತಾಳಗಳನ್ನೂ ಅವುಗಳಲ್ಲಿ ಸಂಸ್ಕೃತಭಾಷೆಯಲ್ಲಿ ಪಲ್ಲವಿಗಳನ್ನೂ ರಚಿಸಲಾರಂಭಿಸಿದರು. ಹೀಗೆ ರಚಿತವಾದ ಪಲ್ಲವಿಗಳನ್ನು ನಾಡಿನಾದ್ಯಂತ ತಜ್ಞವೇದಿಕೆಗಳಲ್ಲಿ, ಸಂಗೀತಸಮ್ಮೇಳನಗಳಲ್ಲಿ ಪ್ರಸ್ತುತಪಡಿಸಿ ಸಂಗೀತವಿದ್ವತ್ಸಮೂಹದ ಮೆಚ್ಚುಗೆಗೆ ಪಾತ್ರರಾದರು.

ಶ್ರೀಯುತರು ಅನೇಕ ಸಂಗೀತ ಗ್ರಂಥರಚನೆಗಳನ್ನೂ ಮಾಡಿದ್ದಾರೆ. ಚಂದ್ರಶೇಖರ ಕೃತಿರತ್ನಮಾಲಾ (ಇವುಗಳಲ್ಲಿ ಪ್ರಥಮಸಂಪುಟದ ಶೃಂಗೇರಿ ಪಂಚರತ್ನ, ದೇವೀಕೃತಿಗಳು, ಶೀವ-ವಿಷ್ಣುಪರ ಕೃತಿಗಲು-ಎರಡನೆಯ ಭಾಗ ಮತ್ತು ಭಕ್ತಿ-ಭಜನ-ನೃತ್ಯ-ಶಿಶು-ದೇಶಪ್ರೇಮ ಗೀತೆಗಳು), ಚಂದ್ರಶೇಖರ ಮಹಾಮಾರ್ಗಾದಿ ಅಷ್ಟೋತ್ತರ ಶತತಾಳ ಪಲ್ಲವಿರತ್ನ ಮಾಲಿಕಾ, ತ್ರಿಪುರಸುಂದರೀ ನವಾವರಣಕೃತಿಮಾಲಾ, ಹಿಂದುಸ್ತಾನೀ ಮತ್ತು ಕರ್ಣಾಟಕ ರಾಗಗಳಲ್ಲಿ ಕನ್ನಡದೇವರನಾಮಗಳು, ಸಂಗೀತಲಕ್ಷಣಂ-ಸಂಗೀತಶಾಸ್ತ್ರವಿವೇಚನೆ ಇವುಗಳು ಅವರ ಗ್ರಂಥರಚನಾ ಸಾಮರ್ಥ್ಯವನ್ನು ಪ್ರತಿಬಿಂಬಿಸುತ್ತವೆ.

ರಾ. ಚಂದ್ರಶೇಖರಯ್ಯನವರು ಒಬ್ಬ ದಕ್ಷ ಸಂಗೀತಶಿಕ್ಷಕರಾಗಿಯೂ ಪ್ರಸಿದ್ಧಿಪಡೆದಿದ್ದರು. ಅವರ ೮೫ ವರ್ಷದ ದೀರ್ಘಕಾಲದ ಸಾರ್ಥಕ ಬದುಕಿನಲ್ಲಿ ಅನೇಕ ಸಾಂಸ್ಕೃತಿಕ, ಧಾರ್ಮಿಕ ಮತ್ತು ಸಾಮಾಜಿಕ ಸಂಘಸಂಸ್ಥೆಗಳನ್ನು ಕಟ್ಟಿ ಯಶಸ್ವಿಯಾಗಿ ನಡೆಸಿದರು. ಅನೇಕ ರಾಷ್ಟ್ರ ರಾಜ್ಯಮಟ್ಟದ ಪ್ರತಿಷ್ಠಿತ ಕಲಾಸಂಘಟನೆಗಳಲ್ಲಿ ಪ್ರಮುಖಪಾತ್ರವನ್ನು ವಹಿಸಿದ್ದರು. ಡೆಲ್ಲಿಯ ಕೇಂದ್ರ ಸಂಗೀತ ನಾಟಕ ಅಕಾಡೆಮಿಯ ಪ್ರಥಮ ಆವರ್ತದ ಜನರಲ್‌ ಕೌನ್ಸಿಲರ್, ರಾಜ್ಯ ಸಂಗೀತ ನೃತ್ಯ ಅಕಾಡೆಮಿಯ ಸದಸ್ಯ, ರಾಜ್ಯ ಸಂಗೀತ ಸಲಹಾ ಬೋರ್ಡಿನ ಸದಸ್ಯ, ಸರ್ಕಾರದ ಸಂಗೀತ ವಿದ್ವತ್‌ ಪರೀಕ್ಷಾ ಬೋರ್ಡಿನ ಅಧ್ಯಕ್ಷ, ಆಕಾಶವಾಣಿಯ ಆಡೀಷನ್‌ ಬೋರ್ಡಿನ ಸದಸ್ಯ ಮತ್ತು ಕರ್ಣಾಟಕದ, ತಮಿಳುನಾಡಿನ ಸಂಗೀತ ಸಮ್ಮೇಳನಗಳ ತಜ್ಞರ ಸಮಿತಿ ಕಾರ್ಯಚಾಲನ ಸಮಿತಿಗಳ ಸದಸ್ಯ/ಅಧ್ಯಕ್ಷ, ಹೀಗೆ ೩೭೫ಕ್ಕೂ ಮೀರಿ ಕಲಾ, ಸಾಂಸ್ಕೃತಿಕ, ಸಾಮಾಜಿಕ, ಧಾರ್ಮಿಕ ಸಂಘಸಂಸ್ಥೆಗಳಲ್ಲಿ ತಮ್ಮ ಸೇವೆಯನ್ನು ಸಲ್ಲಿಸಿದರು.

೧೯೭೩ರಲ್ಲಿ ಪಾಶ್ಚಿಮಾತ್ಯ ದೇಶಗಳ ಸಂಚಾರವನ್ನು ಕೈಗೊಂಡ ಚಂದ್ರಶೇಖರಯ್ಯನವರು, ಇಂಗ್ಲೆಂಡ್‌ ಮತ್ತು ಯುರೋಪಿನ ಬಹುಭಾಗಗಳಲ್ಲಿ ಪ್ರವಾಸಮಾಡಿ ಕಚೇರಿ, ಉಪನ್ಯಾಸ ಮತ್ತು ಪ್ರಾತ್ಯಕ್ಷಿಕೆಗಳನ್ನು ನಡೆದಿ ಅನೇಕ ಪ್ರಶಸ್ತಿ ಗೌರವಗಳನ್ನು ಅಲ್ಲಿ ಗಳಿಸಿಕೊಂಡರು. ರಾ. ಚಂದ್ರಶೇಖರಯ್ಯನವರು ಗಳಿಸಿಕೊಂಡ ಪ್ರಶಸ್ತಿಗಳು, ಬಿರುದುಗಳು ಮತ್ತು ಗೌರವಗಳು ಅಪಾರ.

ಶ್ರೀಯುತರದು ಬಹುಮುಖ ಪ್ರತಿಭೆ. ಅವರು ಒಬ್ಬ ಪ್ರಾಮಾಣಿಕ ಜ್ಯೋತಿಷಿಯಾಗಿದ್ದರು. ಶುದ್ಧಸರಳ ಅಂತಃಕರಣದಿಂದ ಅವರು ನೀಡುತ್ತಿದ್ದ ಭವಿಷ್ಯವಾಣಿಯು ಬಹುಮಟ್ಟಿಗೆ ನಿಜವಾಗುತ್ತಿದ್ದವು. ಹೀಗಾಗಿ ಅವರ ಸ್ನೇಹಿತರು, ಕಲಾಬಂಧುಗಳು, ತರುಣಮಿತ್ರರು ಅವರಲ್ಲಿ ಬಂದು ತಮ್ಮ ಜಾತಕವನ್ನು ಓದಿಸಿ ಸೂಕ್ತ ಸಲಹೆ ಸೂಚನೆಗಳನ್ನು ಪಡೆಯುತ್ತಿದ್ದರು. ಅವರ ಮತ್ತೊಂದು ಮುಖ್ಯ ಆಸಕ್ತಿ ನಾಟಕಕಲೆ. ಬಾಲ್ಯದಿಂದಲೇ ಇದರಲ್ಲಿ ವಿಶೇಷ ಆಸಕ್ತಿ ಪ್ರತಿಭೆಯನ್ನು ಹೊಂದಿದ್ದರು. ಇಪ್ಪತ್ತು ವರ್ಷಕ್ಕೂ ಮೀರಿ ನಟರಾಗಿ ನಮ್ಮ ನಾಡಿನ ಮಹಾನ್‌ ನಾಟಕಕಾರರೂ, ನಿರ್ದೇಶಕರೂ ಆಗಿದ್ದ ಟಿ.ಪಿ. ಕೈಲಾಸಂ ನಾರಾಯಣಶಾಸ್ತ್ರಿ, ಎಸ್‌.ವಿ. ಕೃಷ್ಣಮಾಚಾರ್‌, ರಾಘವಾಚಾರ್, ನಟೇಶ್‌, ವೆಂಬರ ವೆಂಕಟಾಚಾರ್, ಲಕ್ಷ್ಮಣಯ್ಯ, ಸಂಪತ್‌, ಸಿ.ಆನಂದರಾವ್‌, ನಂಜಪ್ಪ ಇಂತಹ ಮಹನೀಯರ ಕುಲುಮೆಯಲ್ಲಿ ಪಳಗಿ ಪುಟಗೊಂಡಿದ್ದರು. ಆಗಿನ ಕಾಲಕ್ಕೆ ಮೈಸೂರಿನಲ್ಲಿ ಸುಪ್ರಸಿದ್ಧವಾಗಿದ್ದ ‘ಲಿಟರರಿ ಡ್ರಮಾಟಿಕ್‌ ಆಸೋಸಿಯೇಷನ್‌’ ಸಂಸ್ಥೆಯ ನಟಸದಸ್ಯರಾಗಿ “ಲವಕುಶ”, “ರಾಮಲಕ್ಷ್ಮಣ” ಇತ್ಯಾದಿ ಪಾತ್ರಗಳಲ್ಲಿ ಅವರ ಸಹೋದರ ಶ್ರೀ ರಾ. ಸೀತಾರಾಂರೊಡನೆ ಮಿಂಚಿ ಬಾಲನಟಶ್ರೇಷ್ಠರೆಂದು ಪ್ರಖ್ಯಾತಿಯನ್ನು ಪಡೆದಿದ್ದರು.

ಸುದೃಢವಾದ ಶರೀರ ಮತ್ತು ಆರೋಗ್ಯದಿಂದ ೮೫ ವರ್ಷಗಳ ಕಾಲ ಕಲಾಮಯವಾದ ಜೀವನವನ್ನು ನಡೆಸಿದ ರಾ. ಚಂದ್ರಶೇಖರಯ್ಯನವರು ಯಾವತ್ತೂ ಹಸನ್ಮುಖಿಯಾಗಿರುತ್ತಿದ್ದರು. ಅವರ ನಿಲುವಿನಲ್ಲಿ ಒಂದು ಗಾಂಭೀರ್ಯವಿತ್ತು. ಮೂರು ಅಂಗುಲದ ಜರಿಪಂಚೆಯನ್ನು ಮೈಸೂರು ಕಚ್ಚೆ ಹಾಕಿ, ನೀಟಾಗಿ, ಗರಿಗರಿಯಾಗಿ ಎಲ್ಲ ಜರಿಯ ಪದರಗಳೂ ಕಾಣುವಂಥೆ ಉಟ್ಟು, ಅಂದವಾದ ಮೈಸೂರು ರೇಷ್ಮೆ ಶರ್ಟನ್ನು ಹಾಕಿಕೊಂಡು ಬಲಗೈಯಲ್ಲಿ ಠೀವಿಯಾಗಿ ಒಂದು ಛತ್ರಿಯನ್ನು ಹಿಡಿದು (ಇದು ಒಂದು ರೀತಿಯ ಆಭರಣವೆಂಬಂತೆ ಧರಿಸುತ್ತಿದ್ದರು. ಮಳೆ ಇರಲಿ-ಇರದಿರಲಿ, ಬಿಸಿಲಿರಲಿ ಇರದಿರಲಿ ಛತ್ರಿಯನ್ನು ಮಾತ್ರ ಅವರು ಹಿಡಿದೇ ಇರುತ್ತಿದ್ದುದು ಅವರದೊಂದು ವೈಶಿಷ್ಟ್ಯ!) ಎಡಗೈಯಲ್ಲಿ ಹಿಡಿದು ನಡೆಯುತ್ತಿದ್ದರೆ ಎಷ್ಟೇ ದೂರದಿಂದಲಾದರೂ ಸಹ ಅವರು ರಾ.ಚಂದ್ರಶೇಖರಯ್ಯನವರೆಂದು ಸುಲಭವಾಗಿ ಊಹಿಸಬಹುದಿತ್ತು. ಅವರು ತಮ್ಮ ವಿನಯ, ಗಾಂಭೀರ್ಯ, ಸರಳತೆ, ಸದ್ಗುಣಗಳಿಂದ ಶೀಷ್ಯರ, ಗೆಳೆಯರ, ಸಂಗೀತಗಾರ ಒಡನಾಡಿಗಳ ವಿಶೇಷ ಗೌರವಾದರಗಳಿಗೆ ಪಾತ್ರರಾಗಿದ್ದರು. ಕಲೆಗಾರರನ್ನೂ, ಗೆಳೆಯರನ್ನೂ ಕಲೆಹಾಕಿ ವೈಭವದ ಉತ್ಸಾಹಕೂಟಗಳನ್ನು ತಾವೇ ಏರ್ಪಡಿಸಿಕೊಂಡು ನಲಿಯುವುದು ಅವರಿಗೊಂದು ಸಿದ್ಧಿಸಿದ ಚಾತುರ್ಯವಾಗಿತ್ತು. ರಾ. ಚಂದ್ರಶೇಖರಯ್ಯನವರು ಒಬ್ಬ ಕೊಡುಗೈ ದಾನಿ. ತಾನು ಕಷ್ಟಪಟ್ಟು ಅರ್ಜಿಸಿದುದನ್ನು ಉಳಿಸಿದ್ದನ್ನು ಸತ್ಪಾತ್ರದಾನದ ವಿನಿಯೋಗಕ್ಕಾಗಿ ಎಂದು ನಂಬಿದ್ದರು. ಅಂತೆಯೇ ನಡೆದುಕೊಂಡರೂ ಸಹ. ಕಲೆ, ಸಂಸ್ಕೃತಿ, ಸಮಾಜಗಳಿಗಾಗಿ ಅವರು ಉತ್ಸಾಹದಿಂದ ಸಲ್ಲಿಸಿದ ಅವಿಶ್ರಾಂತ ನಿಸ್ವಾರ್ಥಸೇವೆಯು ಆದರ್ಶಪ್ರಾಯವಾಗಿತ್ತು. ಅವರ ಕೊನೆಯ ಉಸಿರಿನ ತನಕ ವಾಗ್ಗೇಯಕಾರ ಸೃಜನಾತ್ಮಕತೆಯನ್ನು ಉಳಿಸಿಕೊಂಡಿದ್ದರು.

ನಾಟ್ಯಶಾಸ್ತ್ರಕೋವಿದ, ಭರತಶಾಸ್ತ್ರಪ್ರವೀಣ, ವಾಗ್ಗೇಯಗಾನಭಾರತಿ, ಸಂಗೀತ ರತ್ನಾಕರ, ವಾಗ್ಗೇಯವಿದ್ಯಾವಾರಿಧಿ, ಗಾನರತ್ನಾಕರ, ಸಂಗೀತಕಲಾರತ್ನ ಇವೇ ಮೊದಲಾದ ನಾಡಿನ ಪ್ರತಿಷ್ಠಿತ ಗೌರವ ಬಿರುದುಗಳು ನಮ್ಮ ನಾಡು ಮತ್ತು ಜನತೆ ಅವರಿಗಾಗಿ ಹಾಗೂ ಅವರ ಅವಿಶ್ರಾಂತ ಕಲಾಸೇವೆಗಾಗಿ ಇತ್ತ ಗೌರವ, ಸೂಚಿಸಿದ ಮೆಚ್ಚುಗೆ. ಇವನ್ನು ಪಡೆದ ರಾ. ಚಂದ್ರಶೇಖರಯ್ಯನವರು ಅನನ್ಯ ಕಲಾವಿದ, ವಾಗ್ಗೇಯಕಾರ.