ಹಿಂದೂಸ್ಥಾನಿ ಸಂಗೀತವನ್ನು ವ್ಯಾಪಕವಾಗಿ ಪ್ರಚಾರಪಡಿಸಿ, ಜನಾನುರಾಗಿ ಗಾಯಕರಾಗಿ ನಾಡಿನಲ್ಲಿ ಹೆಸರು ಗಳಿಸಿರುವ ರಾಮಚಂದ್ರ ಶಂಕರ ದೀಕ್ಷಿತ ಜಂತಲಿ ಅವರು ಕನ್ನಡ ನಾಡಿನ ಅಪರೂಪದ ಕಲಾವಿದರಲ್ಲೊಬ್ಬರು. ವೃತ್ತಿಯಿಂದ ರೈಲ್ವೆ ನೌಕರರಾದರೂ ತಮ್ಮ ಸಂಗೀತ ಪ್ರವೃತ್ತಿಯನ್ನು ಸತತವಾಗಿ ಬೆಳೆಸಿಕೊಂಡು ಬಂದ ರಾಮಚಂದ್ರ ಶಂಕರ ದೀಕ್ಷಿತ್‌ ಜಂತಲಿ ಸಂಗೀತ ಮನೆತನಕ್ಕೆ ಸೇರಿದವರು. ೧೯೨೭ರಲ್ಲಿ ಹಾನಗಲ್‌ನಲ್ಲಿ ಜನಿಸಿದ ಇವರ ತಂದೆ ಉದ್ದಾಮ ಸಂಸ್ಕೃತ ಪಂಡಿತರು. ಗ್ವಾಲಿಯರ್ ಘರಾಣೆಯ ಭಾಸ್ಕರ ಬುವ ಭಕಲೆ, ಬಾಲಕೃಷ್ಣ ಬುವಾ ಈಚಲಕರಂಜೀಕರ್ ರವರುಗಳಲ್ಲಿ ಸಂಗೀತವನ್ನು ಅಭ್ಯಸಿಸಿದ ಅವರು ನಾಟಕಗಳಲ್ಲಿ ಪಾತ್ರವಹಿಸುತ್ತಿದ್ದರಲ್ಲದೇ ಅನೇಕ ಶಿಷ್ಯರನ್ನು ತಯಾರು ಮಾಡಿದ್ದರು. ಅವರುಗಳಲ್ಲಿ ರಾಮಚಂದ್ರರೂ ಒಬ್ಬರು. ಸಂಗೀತದಲ್ಲಿ “ವಿಶಾರದ” ಗಳಿಸಿ ಪತ್ನಿ ವಸಂತಾದೇವಿ (ದ.ಕೃ. ಭರದ್ವಾಜರ ಪುತ್ರಿ) ಯವರೊಂದಿಗೆ ಅವ್ಯಾಹತವಾಗಿ ಸಂಗೀತ ಸೇವೆಯ ಮುಂದುವರಿಸಿಕೊಂಡು ಬಂದು ತಮ್ಮ ಶಂಕರ ಸಂಗೀತ ವಿದ್ಯಾಲಯದ ಮೂಲಕ ಅನೇಕ ಶಿಷ್ಯಂದಿರನ್ನು ತಯಾರು ಮಾಡಿದ್ದಾರೆ.

ಧಾರವಾಡದ ಆಕಾಶವಾಣಿ ಕೇಳುಗರಿಗೆ ಜಂತಲಿ ಅಪರಿಚಿತರೇನಲ್ಲ. ಇವರ ಗಾಯನ ಮತ್ತು ಸಂಗೀತವನ್ನು ಕುರಿತಾದ ವಿಶೇಷ ಕಾರ್ಯಕ್ರಮಕಗಳು ಈಗಲೂ ಅವರ ಸ್ಮೃತಿಪಟಲದಲ್ಲಿ ಅಚ್ಚೊತ್ತಿರಲು ಸಾಕು. ಶ್ರೀಯುತರು ರಾಜ್ಯಮಟ್ಟದ ಶಾಸ್ತ್ರೀಯ, ಸುಗಮ ಸಂಗೀತ ಸ್ಪರ್ಧೆಗಳಿಗೆ ತೀರ್ಪುಗಾರರಾಗಿ ಕೆಲಸ ಮಾಡಿದ್ದಾರೆ. ಇವರ ಶಿಷ್ಯರಲ್ಲಿ ಅನೇಕರು ಆಕಾಶವಾಣಿಯ ವಿವಿಧ ಕೇಂದ್ರಗಳಲ್ಲಿ ನೌಕರರಾಗಿ, ಕಲಾವಿದರಾಗಿ, ಶಾಲಾ ಕಾಲೇಜುಗಳಲ್ಲಿ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದಾರೆ. ಇವರ “ಶಂಕರ ದೀಕ್ಷಿತ್‌ ಆರ್ಟ್ ಸರ್ಕಲ್‌” ಅನೇಕ ಉದಯೋನ್ಮುಕ ಕಲಾವಿದರಿಗೆ ಉತ್ತೇಜನವೀಯುವಲ್ಲಿ ಯಶಸ್ವಿಯಾಗಿದೆ. ಜಂತಲಿಯವರಿಗೆ ಅನೇಕ ಸನ್ಮಾನಗಳು ಸಂದಿವೆ. ಅವುಗಳಲ್ಲಿ ಜಿಲ್ಲಾಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಹೆಸರಿಸುವಂತಹುದು. ೧೯೯೨-೯೩ರ “ಕರ್ನಾಟಕ ಕಲಾ ತಿಲಕ’, ಎಂಬ ಬಿರುದು ನೀಡಿ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಇವರನ್ನು ಗೌರವಿಸಿದೆ. ‘ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ’, ‘ನಾದಶ್ರೀ’ ಮುಂತಾದ ಪ್ರಶಸ್ತಿ ಪಡೆದ ಅವರು ೭೬ ವರ್ಷಗಳ ಕಾಲ (ನಿಧನ: ೧೭-೮-೧೯೯೯) ಬಾಳಿ ಸಂಗೀತ ಕ್ಷೇತ್ರದ ಅಪಾರ ಸೇವೆ ಮಾಡಿದರು.