ಸಂಗೀತ ಸಂಸ್ಕೃತವನ್ನು ಹಲವಾರು ತಲೆಮಾರುಗಳಿಂದ ಮೈಗೂಡಿಸಿಕೊಂಡ ಶ್ರೀ ತ್ಯಾಗರಾಜರ ನೇರ ಶಿಷ್ಯ ಪರಂಪರೆಗೆ ಸೇರಿದ ಕುಟುಂಬದಲ್ಲಿ ವರಲಕ್ಷ್ಮಿ – ಬಿ. ರಾಮಯ್ಯ ದಂಪತಿಗಳ ತೃತೀಯ ಪುತ್ರರಾಗಿ ೯-೫-೧೯೨೭ ರಂದು ಜನಿಸಿದ ಸತ್ಯನಾರಾಯಣರವರು ರಸಾಯನ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದು ಹಲವಾರು ವಿಶ್ವವಿದ್ಯಾಲಯಗಳಿಂದ ಪ್ರೌಢ-ಸಂಶೋಧನಾತ್ಮಕ ಪ್ರಬಂಧಗಳ ಮಂಡನೆಗಾಗಿ ಡಿ. ಲಿಟ್‌ ಡಾಕ್ಟೋರೇಟ್‌ ಪದವಿಗಳನ್ನು ಪಡೆದಿರುವರು.

ಸಂಗೀತ ನೃತ್ಯ ಶಾಸ್ತ್ರಜ್ಞರಾದ ಇವರು ದೇಶ-ವಿದೇಶಗಳಲ್ಲಿ ನಡೆದಿರುವ ಅಸಂಖ್ಯಾತ ಸಮ್ಮೇಳನಗಳಲ್ಲಿ ಅಧ್ಯಕ್ಷರಾಗಿ, ನಿರ್ವಾಹಕರಾಗಿ, ನಿರ್ದೇಶಕರಾಗಿ ಅತ್ಯಂತ ಸಮರ್ಥವಾಗಿ ಕಾರ್ಯನಿರ್ವಹಿಸಿದ್ದಾರೆ. ಸಂಗೀತ ನೃತ್ಯಗಳೊಡನೆ ಪುರಾತತ್ವ ಮನೋವೈಜ್ಞಾನಿಕ ಮಂತ್ರ-ತಂತ್ರ, ಶಾಸ್ತ್ರ ಯೋಗಶಾಸ್ತ್ರ ದೃಗ್ಗಣಿತ ಆಯುರ್ವೇದ ಮುಂತಾದ ಹಲವು ಹತ್ತು ಶಾಸ್ತ್ರಗಳ ಅಧ್ಯಯನ ಮಾಡಿ ವೇದೋಪನಿಷತ್ತುಗಳನ್ನು ಅಭ್ಯಯಿಸಿ ಅವರಿಗೆ ಅವರ ಸಾಟಿ ಎನ್ನುವಂತಹ ಎತ್ತರವನ್ನು ಸಾಧಿಸಿದ್ದಾರೆ. ಗುರು ಯಜ್ಞ ನಾರಾಯಣ ಸೋಮಯಾಜಿಯವರಿಂದ ದೀಕ್ಷಿತರಾಗಿ ‘ಸತ್ಯಾನಂದನಾಥ’ ಎಂಬ ಅಭಿದಾನವನ್ನು ಪಡೆದಿದ್ದಾರೆ.

ಯೂರೋಪ್‌, ಇಂಗ್ಲೆಂಡ್‌, ರಷ್ಯಾ, ಮಲೇಶಿಯಾ, ಸಿಂಗಪೂರ್, ಚೈನಾ ಮುಂತಾದ ದೇಶಗಳಿಗೆ ಭಾರತವನ್ನು ಪ್ರತಿನಿಧಿಸುವ ಸಾಂಸ್ಕೃತಿಕ ರಾಯಭಾರಿಯಾಗಿ ಗೌರವ ಗಳಿಸಿದ್ದಾರೆ. ರಾಜ್ಯದ ಹಾಗೂ ರಾಷ್ಟ್ರದ ಸರ್ಕಾರಿ ವಲಯಗಳಲ್ಲಿ ಬಹು ಭಾಷಾ ತಜ್ಞರಾದ ಇವರ ಪಾತ್ರ ಬಹಳ ಹಿರಿದು, ಸಂಶೋಧನಾತ್ಮಕ ಪ್ರವೃತ್ತಿಯ ಕ್ರಿಯಾಶೀಲ ಸತ್ಯನಾರಾಯಣರು ತಮ್ಮ ವಿಚಾರ ಮಂಥನದಿಂದ ಮೂಡಿದ ಜ್ಞಾನಾಮೃತವನ್ನು ಲೇಖನಗಳ ರೂಪದಲ್ಲಿ ಪುಸ್ತಕಗಳ ಸ್ವರೂಪದಲ್ಲಿ ಸಂಗೀತ ಸಾರಸ್ವತ ಜಗತ್ತಿಗೆ ನೀಡಿದ್ದಾರೆ.

ಅಮೃತೇಶ್ವರಿ ಮಹಾ ಷೋಡಶೀ ಮುಂತಾದ ಮಹಾಮಂತ್ರ ಸಿದ್ಧಿಗಳನ್ನು ಪಡೆದಿರುವ ಶ್ರೀಯುತರು ಸ್ವಭಾವತಃ ನಿತ್ಯ ತೃಪ್ತರು. ಔದಾರ್ಯ ಹೃದಯ ಶ್ರೀಮಂತಿಕೆಗಳಿಂದ ಪೂರ್ಣರು. ಹೋಮಿಯೋಪಥಿ, ಆಯುರ್ವೇದಗಳನ್ನು ಬಲ್ಲ ಉತ್ತಮ ವೈದ್ಯರೂ ಸಹ! ಇಂಡಿಯನ್‌ಮ್ಯೂಸಿಕ್‌ಕಾಂಗ್ರೆಸ್‌ನ ಅಧ್ಯಕ್ಷರಾಗಿ ಕಲಾ ಸರಸ್ವತಿಯ ನಿರ್ದೇಶಕರಾಗಿ, ವರಲಕ್ಷ್ಮಿ ಅಕಾಡೆಮಿ ಆಫ್‌ ಫೈನ್‌ಆರ್ಟ್ಸ್‌‌ನ ಅವಿಭಾಜ್ಯ ಅಂಗವಾಗಿ, ಇಂದಿರಾಗಾಂಧಿ ರಾಷ್ಟ್ರೀಯ ಕಲಾ ಕೇಂದ್ರದ ಬೆಂಗಳೂರು ವಿಭಾಗದ ನೇತಾರರಾಗಿ, ಪ್ರಾದೇಶಿಕ ಸಂಶೋಧನಾ ವಿಭಾಗದ ನಿರ್ದೇಶಕರಾಗಿ ಇವರು ಸಲ್ಲಿಸಿರುವ ಸೇವೆ ಅದ್ವಿತೀಯ.

ಕರ್ನಾಟಕ ಸಂಗೀತ ವಾಹಿನಿ, ನರ್ತನ ನಿರ್ಣಯ, ಬೃಹದ್ದೇಶೀ, ಪುಂಡರೀಕ ಮಾಲಾ ಮುಂತಾದ ಗ್ರಂಥಗಳಿಗೆ ಅವರು ಬರೆದಿರುವ ಪ್ರವೇಶಿಕೆ ಅವರ ವ್ಯಕ್ತಿತ್ವಕ್ಕೆ ತಲಸ್ಪರ್ಶಿಯಾಗಿ ಯಾವುದೇ ವಿಷಯವನ್ನು ವಿಶ್ಲೇಷಿಸುವ ಅವರ ಕ್ರಮಕ್ಕೆ ಹಿಡಿದ ದರ್ಪಣ.

ಮಹಾ ಮಹೋಪಾಧ್ಯಾಯ, ಸಂಗೀತ ಕಲಾರತ್ನ ಸಂಗೀತ ಶಾಸ್ತ್ರಾ ಸರಸ್ವತಿ, ರಾಷ್ಟ್ರಭೂಷಣ, ಗಾನ ಜ್ಞಾನಪಯೋನಿಧಿ, ಕರ್ನಾಟಕ ಕಲಾ ತಿಲಕ, ವೇದಶ್ರೀ ಸಂಹಿತಾಚಾರ್ಯ, ಲಲಿತ ಕಲಾಶ್ರಯ, ಗೀತ ನಾಟ್ಯಕೋವಿದ ಮುಂತಾದ ಪ್ರಶಸ್ತಿಗಳೂ, ನಾನಾ ಸಂಘ ಸಂಸ್ಥೆ ಸಭೆಗಳ ಸನ್ಮಾನಗಳೂ ಶ್ರೀಯುತರಿಗೆ ಅಯಾಚಿತವಾಗಿ ಲಭಿಸಿರುವ ಸಾರ್ಥಕ ಗೌರವ ಕುಸುಮಗಳು.