ಎಲ್ಲೋ ಯಾವುದೋ ಕೀಲು ತಪ್ಪಿದೆ ಒಳಗೆ,
ಅದರಿಂದಲೇ ಇಷ್ಟು ಅವ್ಯವಸ್ಥೆ
ಹೊತ್ತು ಹೊತ್ತಿಗೆ ಅರಿತು ಕೀ ಕೊಟ್ಟು ಇಟ್ಟು-
ಕೊಂಡಿದ್ದರಿರುತಿತ್ತೆ ಈ ಅವಸ್ಥೆ ?

ಯಾವ ಅಂಗಡಿಗೆ ಒಯ್ದು ತೋರಿಸಿದರೂ ಇಷ್ಟೆ :
ಇದರ ಒರಿಜಿನಲ್ ಈಗ ಸ್ಟಾಕಿಲ್ಲ.
ಅಲ್ಲಿಗೇ ಬರೆದರೂ ಸಿಕ್ಕುವುದಿಲ್ಲ : ರಿಪೇರಿ
ಈಗಂತು ಸಾಧ್ಯವಿಲ್ಲ.

ಬೇಕಾದರೊಂದಿಷ್ಟು ಸರಿಪಡಿಸಿಕೊಡುತ್ತೇವೆ
ಹೇಗೋ ದಿನ ತಳ್ಳಬಹುದು.
ಈ ಲೋಕದಲ್ಲಿ ಯಾವುದು ತಾನೆ ಶಾಶ್ವತ ಹೇಳಿ,
ನಕ್ಷತ್ರಕೂ ತುಕ್ಕು ಹಿಡಿಯಬಹುದು.

ಸೂರ‍್ಯಚಂದ್ರರ ಗಾಲಿ ಎಷ್ಟು ಸವೆದಿರಬಹುದೊ
ಹೀಗೆ ದಿನವೂ ತಿರುಗಿ ನೀಲಿಯಲ್ಲಿ
ಎಂದೋ ಒಂದು ದಿನ ಅವೂ ಕೆಟ್ಟು ಹಾಳಾಗಿ, ಬಂದು
ಬೀಳುವುವೇನೊ ಗುಜರಿಯಲ್ಲಿ.

ಸದ್ಯ ನಡೆಯುತಿದೆಯಲ್ಲ ಸ್ವಾಮಿ ಈ ನಿಮ್ಮ
ಯಂತ್ರ ; ಇದ್ದಷ್ಟು ದಿನ ಇರಲಿ ಭದ್ರ.
ನಾ ಕಂಡ ಮಾತು ಹೇಳುತ್ತೇನೆ : ಎಲ್ಲ ಯಂತ್ರದ ಒಳಗೂ
ಇದ್ದೇ ಇರುತ್ತದೆ ಏನಾದರೂ ಛಿದ್ರ.