ರೀಟೇಲ್ ಮಳಿಗೆ ಅಥವಾ ಸೂಪರ್ ಮಾರುಕಟ್ಟೆಯಲ್ಲಿ ನಾವು ವಸ್ತುವೊಂದನ್ನು ಖರೀದಿಸುವಾಗ ನೆಡೆಯುವುದೇನು ಎಂದು ನೆನಪಿಸಿಕೊಳ್ಳಿ.

ಅ) ಬಿಲ್ಲಿಂಗ್ ಕೌಂಟರ್ ಹತ್ತಿರ ನಾವು ಬಂದಾಗ, ನಾವು ಖರೀದಿಸಲು ಬಯಸುವ ವಸ್ತುವನ್ನು ಅಲ್ಲಿರುವ ಸಿಬ್ಬಂದಿ ಕೈಗೆತ್ತಿಕೊಳ್ಳುತ್ತಾರೆ.

ಆ) ನಂತರ ಬಾರ್‍ಕೋಡ್ ಸ್ಕ್ಯಾನರ್ ಬಳಸಿ ಆ ವಸ್ತುವಿನ ಮೇಲೆ ಅಂಟಿಸಿರುವ ಬಾರ್‍ಕೋಡ್ ಲೇಬಲ್‍ನಲ್ಲಿರುವ ಮಾಹಿತಿಯನ್ನು ಪಡೆದುಕೊಳ್ಳುತ್ತಾರೆ.

ಇ) ಇಂತಹ ಬಾರ್‍ಕೋಡ್ ಲೇಬಲ್‍ನಿಂದ ದೊರೆಯುವ ಮಾಹಿತಿಯಲ್ಲಿ ಏನಿರುತ್ತದೆ ಎಂದು ರೀಟೇಲ್ ಉದ್ಯಮದಲ್ಲಿ ಕೆಲಸ ಮಾಡಲು ಇಚ್ಛಿಸುವವರಿಗೆ ಮತ್ತು ಗ್ರಾಹಕರಿಗೂ ಗೊತ್ತಿದ್ದರೆ ಅನುಕೂಲ. ಹೀಗಾಗಿ, ಈ ಕುರಿತು ಮಾಹಿತಿಯನ್ನು ಇಂದಿನ ಲೇಖನದಲ್ಲಿ ನೀಡಲಾಗಿದೆ.

ಬಾರ್‍ಕೋಡ್ ಅಂದರೇನು ?

ಕಿರಾಣಿ ಅಂಗಡಿಯ ಸರಕು ಲೆಕ್ಕವಿಡಲು ಸಹಾಯವಾಗಲು ಬಾರ್‍ಕೋಡ್ ಬಳಸಬಹುದು ಎಂದು 1948ರಲ್ಲಿ ನಾರ್‍ಮನ್ ಜೋ ವುಡ್‍ಲ್ಯಾಂಡ್ ಮತ್ತು ಬರ್ನಿ ಸಿಲ್ಪರ್ ಎನ್ನುವ ಇಬ್ಬರು ವಿಜ್ಞಾನಿಗಳು ಪ್ರತಿಪಾದಿಸಿದರು. ಟೆಲಿಗ್ರಾಫ್ ಮತ್ತು ರೇಡಿಯೋ ಸಂವಹನದಲ್ಲಿ ಬಳಸುವ ಮೋರ್ಸ ಕೋಡ್ ಬಳಸಿ, ಇವರು ಬಾರ್‍ಕೋಡ್ ಮತ್ತು ಈ ಬಾರ್‍ಕೋಡ್ ಓದಲು ಸೂಕ್ತವಾದ ಬಾರ್‍ಕೋಡ್ ರೀಡರ್‍ವೊಂದನ್ನು ಅಭಿವೃದ್ಧಿಪಡಿಸಿದರು. ಬುಲ್ ಐ ಕೋಡ್ ಎಂದು ಕರೆಯಲಾದ ಈ ಬಾರ್‍ಕೋಡ್‍ಗೆ 1952ರಲ್ಲಿ ಇವರಿಗೆ ಪೇಟೆಂಟ್ ನೀಡಲಾಯಿತು. ಆದರೆ ವೃತ್ತಾಕಾರದಲ್ಲಿದ್ದ ಈ ಬಾರ್‍ಕೋಡ್‍ನ್ನು ಕಿರಾಣಿ ಅಂಗಡಿಯಲ್ಲಿ ಬಳಸಲು ಸಾಕಷ್ಟು ಸಮಸ್ಯೆಗಳು ಎದುರಾದವು.

ಬುಲ್ ಐ ಬಾರ್‍ಕೋಡ್ ಬಳಕೆಯಲ್ಲಿ ಎದುರಾಗುತ್ತಿರುವ ಸಮಸ್ಯೆಗಳನ್ನು ಪರಿಹರಿಸಲು 1973ರಲ್ಲಿ ಯೂನಿವರ್ಸಲ್ ಪ್ರಾಡಕ್ಟ್ ಕೋಡ್ (ಯು.ಪಿ.ಸಿ)ಯನ್ನು ಅಭಿವೃದ್ಧಿಪಡಿಸಲಾಯಿತು. ಐಬಿಎಂ ಸಂಸ್ಥೆಯ ಉದ್ಯೋಗಿ ಜಾರ್ಜ ಲಾವರರ್ ನೀಡಿದ ಮಾಹಿತಿಯನ್ನು ಆಧರಿಸಿ ಜೋ ವುಡ್‍ಲ್ಯಾಂಡ್ ಎನ್ನುವವರು ಯು.ಪಿ.ಸಿಯನ್ನು ಅಭಿವೃದ್ಧಿಪಡಿಸಿದರು. 1974ರಲ್ಲಿ ವಿಗ್ಲಿ ಸಂಸ್ಥೆಯ ಚೂಯಿಂಗ್ ಗಮ್ ಪ್ಯಾಕಿನ ಮೇಲೆ ಮೊದಲ ಬಾರಿಗೆ ಯು.ಪಿ.ಸಿಯನ್ನು ಯಶಸ್ವಿಯಾಗಿ ಬಳಸಲಾಯಿತು. 1992ರಲ್ಲಿ ಯು.ಪಿ.ಸಿಯನ್ನು ಅಭಿವೃದ್ಧಿಪಡಿಸಿದ್ಧಕ್ಕಾಗಿ ಜೋ ವುಡಲ್ಯಾಂಡ್‍ರವರಿಗೆ ಅಮೇರಿಕಾದ ರಾಷ್ಟ್ರಪತಿ ಜಾರ್ಜ ಬುಷರವರು ತಂತ್ರಜ್ಞಾನ ಕ್ಷೇತ್ರದಲ್ಲಿ ನೀಡಲಾಗುವ ಅಮೇರಿಕಾದ ರಾಷ್ಟ್ರೀಯ ಪದಕವನ್ನು ನೀಡಿ ಸನ್ಮಾನಿಸಿದರು. 1970ರಿಂದ ಇಂದಿನವರೆಗೂ, ಬಾರ್‍ಕೋಡ್ ಮತ್ತು ಸ್ಕ್ಯಾನಿಂಗ್ ತಂತ್ರಜ್ಞಾನದಲ್ಲಿ ಅಭಿವೃದ್ಧಿಯಾಗಿದೆ.

ಹೀಗಾಗಿ ಲೀನಿಯರ್ ಬಾರ್‍ಕೋಡ್‍ಗಳಾದ ಯು.ಪಿ.ಸಿ ಮತ್ತು ಇ.ಎ.ಎನ್‍ಗಳಿಂದ ಈಗ ಜನಪ್ರಿಯವಾಗುತ್ತಿರುವ ಮ್ಯಾಟ್ರಿಕ್ಸ್ ಬಾರ್‍ಕೋಡ್ “ಕ್ಯೂಆರ್”ಗಳವರೆಗೆ ಬಾರ್‍ಕೋಡ್ ಪಯಣ ಮುಂದುವರೆದಿದೆ.

ಇ.ಎ.ಎನ್ ಬಾರ್‍ಕೋಡ್ ಅಂದರೇನು:

ಯುರೋಪ್‍ನಲ್ಲಿರುವ ಅಂತರಾಷ್ಟ್ರೀಯ ಆರ್ಟಿಕಲ್ ನಂಬರಿಂಗ್ ಅಸೋಷಿಯೇಷನ್‍ನವರು ಇ.ಎ.ಎನ್-13 ಎನ್ನುವ ಹೆಸರಿನ ಬಾರ್‍ಕೋಡ್‍ನ್ನು ಅಭಿವೃದ್ಧಿಪಡಿಸಿದರು. ಇದನ್ನು ಡಿ.ಯು.ಎನ್-13 ಎಂದು ಕೂಡಾ ಕರೆಯಲಾಗುತ್ತದೆ.

ಅಮೇರಿಕಾದ ಯು.ಪಿ.ಸಿ-ಎ ಬಾರ್‍ಕೋಡ್ ಅಂತರಾಷ್ಟ್ರೀಯ ವ್ಯಾಪಾರಕ್ಕೆ ಹೆಚ್ಚು ಸೂಕ್ತವಾಗಿಲ್ಲ ಅದ್ದರಿಂದ ಇ.ಎ.ಎನ್-13ನ್ನು ಅಭಿವೃದ್ಧಿಪಡಿಸಲಾಯಿತು ಎಂದು ಹೇಳಲಾಯಿತು.

ಚಿತ್ರದಲ್ಲಿ ಇ.ಎ.ಎನ್-13 ಬಾರ್‍ಕೋಡಿನ ಉದಾಹರಣೆಯನ್ನು ನೀಡಲಾಗಿದೆ.

ಇ.ಎ.ಎನ್-13 ಬಾರ್‍ಕೋಡಿನಲ್ಲಿ ನಾಲ್ಕು ಭಾಗಗಳಿರುತ್ತವೆ.

1)  ನಂಬರ್ ಸಿಸ್ಟಮ್ :

ಇದಕ್ಕಾಗಿ ಬಾರ್‍ಕೋಡಿನ ಮೊದಲ ಎರಡು ಅಥವಾ ಮೂರು ಅಂಕಿಗಳನ್ನು ಬಳಸಲಾಗುತ್ತದೆ. ಇದರಿಂದ ಈ ಬಾರ್‍ಕೋಡ್‍ನ್ನು ಬಳಸಲು ಉದ್ಯಮಕ್ಕೆ ನೀಡಿದ ದೇಶ ಅಥವಾ ಆರ್ಥಿಕ ವಲಯ ಯಾವುದು ಎಂದು ತಿಳಿಯುತ್ತದೆ.

ಉದಾಹರಣೆಗೆ : 890 ಅಂದರೆ ಭಾರತ, 888 ಅಂದರೆ ಸಿಂಗಾಪುರ, 50 ಅಂದರೆ ಬ್ರಿಟನ್, ಹೀಗೆ ನಂಬರ್ ಸಿಸ್ಟಮ್‍ನ್ನು ಬಳಸಿ ದೇಶ ಅಥವಾ ಅರ್ಥಿಕ ವಲಯದ ಮಾಹಿತಿಯನ್ನು ಪಡೆಯಬಹುದು.

2) ಉದ್ಯಮದ ಕೋಡ್:

ಇದಕ್ಕೆ ಬಾರ್‍ಕೋಡಿನಲ್ಲಿರುವ ನಂಬರ್ ಸಿಸ್ಟಮ್ ನಂತರದ 5 ಅಂಕಿಗಳನ್ನು ಬಳಸಲಾಗುತ್ತದೆ. ಈ ಕೋಡಿನಲ್ಲಿರುವ ಮಾಹಿತಿಯಿಂದ ಯಾವ ಉದ್ಯಮವು ಈ ಬಾರ್‍ಕೋಡ್ ಬಳಸಿದೆ ಎಂದು ತಿಳಿಯಲು ಸಾಧ್ಯವಾಗುತ್ತದೆ.

3)ಪ್ರಾಡಕ್ಟ್ ಕೋಡ್: ಇದಕ್ಕಾಗಿ ಬಾರ್‍ಕೋಡಿನಲ್ಲಿರುವ ನಂಬರ್ ಸಿಸ್ಟಮ್ ಮತ್ತು ಉದ್ಯಮ ಕೋಡ್‍ನಂತರದ ಅಂಕಿಗಳನ್ನು ಬಳಸಲಾಗುತ್ತದೆ. ಒಂದು ಉದ್ಯಮ ಕೋಡ್ ಹೊಂದಿರುವ ಸಂಸ್ಥೆ ತಾನು ತಯಾರಿಸುವ ವಿವಿಧ ಉತ್ಪನ್ನಗಳಿಗೆ ತನಗೆ ಇಷ್ಟವಾದ ಪ್ರಾಡಕ್ಟ್ ಕೋಡ್‍ನ್ನು ನೀಡಲು ಅವಕಾಶ ನೀಡಲಾಗಿದೆ.

4)ಚೆಕ್ ಡಿಜಿಟ್: ಇದು ಬಾರ್‍ಕೋಡಿನ ಕೊನೆಯ ಸಂಖ್ಯೆಯಾಗಿರುತ್ತದೆ. ಬಾರ್‍ಕೋಡ್ ರೀಡರ್ ಬಳಸಿ ಒಂದು ಬಾರ್‍ಕೋಡ್ ಲೇಬಲ್ ಓದಿದಾಗ, ಬಾರ್‍ಕೋಡಿನಲ್ಲಿರುವ ಮಾಹಿತಿಯನ್ನು ಸರಿಯಾಗಿ ರೀಡರ್ ಗ್ರಹಿಸಿರುವುದೇ ಅಥವಾ ಇಲ್ಲವೆ ಎನ್ನುವುದನ್ನು ತಿಳಿಯಲು ಚೆಕ್ ಡಿಜಿಟ್ ಬಳಸಲಾಗುತ್ತದೆ.

ಇನ್ನು ಯು.ಪಿ.ಸಿ-ಎ ಮತ್ತು ಇ.ಎ.ಎನ್ ನಡುವಿನ ವ್ಯತ್ಯಾಸವೇನು?

ಈ ಎರಡೂ ಬಾರ್‍ಕೋಡುಗಳ ಒಂದು ಉದಾಹರಣೆಯನ್ನು ಈ ಚಿತ್ರದಲ್ಲಿ ನೀಡಲಾಗಿದೆ.

ಯು.ಪಿ.ಸಿ-ಎ ಮತ್ತು ಇ.ಎ.ಎನ್-13 ನಡುವಿನ ವ್ಯತ್ಯಾಸಗಳು ಹೀಗಿವೆ;

1)  ಯು.ಪಿ.ಸಿ-ಎ ನಲ್ಲಿ ಮೊದಲ ಅಂಕಿ ಯಾವಾಗಲೂ 0 ಅಗಿರುತ್ತದೆ.

2) ಇ.ಎ.ಎನ್-13 ನಲ್ಲಿ ನಂಬರ್ ಸಿಸ್ಟಮ್‍ಗೆ ಎರಡು ಅಂಕಿಗಳನ್ನು ನೀಡಿದರೆ, ಯು.ಪಿ.ಸಿ-ಎನಲ್ಲಿ ನಂಬರ್ ಸಿಸ್ಟಮ್‍ಗೆ ಒಂದು ಅಂಕಿಯನ್ನು ನೀಡಲಾಗುತ್ತದೆ.

ಇದರ ಹೊರತಾಗಿ ಯು.ಪಿ.ಸಿ-ಎ ಮತ್ತು ಇ.ಎ.ಎನ್-13 ಎರಡೂ ರೀತಿಯ ಬಾರ್‍ಕೋಡ್‍ಗಳು ಒಂದೇ ರೀತಿಯಾಗಿವೆ.

ಇ.ಎ.ಎನ್-8 ಎನ್ನುವ ಹೆಸರಿನ ಬಾರ್‍ಕೋಡ್‍ನ್ನು ಕೂಡಾ ಬಳಸಲಾಗುತ್ತದೆ. ಸಾಮಾನ್ಯವಾಗಿ ಚಿಕ್ಕ ಗಾತ್ರದ ವಸ್ತುಗಳಿಗೆ ಬಾರ್‍ಕೋಡ್ ಲೇಬಲ್ ಬಳಸುವಾಗ ಸ್ಥಳಾವಕಾಶ ಕಡಿಮೆ ಇರುತ್ತದೆ. ಇಂತಹ ಸಂದರ್ಭದಲ್ಲಿ ಇ.ಎ.ಎನ್-8 ಬಾರ್‍ಕೋಡ್‍ನ್ನು ಬಳಸಲಾಗುತ್ತದೆ.

ನಂಬರ್ ಸಿಸ್ಟಮ್‍ಗಾಗಿ ಬಾರ್‍ಕೋಡಿನ ಮೊದಲ 2 ಅಥವಾ 3 ಅಂಕಿಗಳನ್ನು ಮತ್ತು ಪ್ರಾಡಕ್ಟ್ ಕೋಡಿಗಾಗಿ ನಂತರದ 4 ಅಥವಾ 5 ಅಂಕಿಗಳನ್ನು ಬಳಸಲಾಗುತ್ತದೆ. ಅಮೇರಿಕಾದ ಯು.ಪಿ.ಸಿ-ಇ ಬಾರ್‍ಕೋಡ್‍ಗಳಿಗೆ ಪರ್ಯಾಯವಾಗಿ ಯುರೋಪ್‍ನಲ್ಲಿರುವ ಅಂತರಾಷ್ಟ್ರೀಯ ಆರ್ಟಿಕಲ್ ನಂಬರಿಂಗ್ ಅಸೋಷಿಯೇಷನ್‍ನವರು ಇ.ಎ.ಎನ್-8 ಅಭಿವೃದ್ಧಿಪಡಿಸಿದರು.

ಯು.ಪಿ.ಸಿ, ಇ.ಎ.ಎನ್ ನಂತೆ ಜೆ.ಎ.ಎನ್ ( ಜಪಾನೀಸ್ ಆರ್ಟಿಕಲ್ ನಂಬರಿಂಗ್) ಮತ್ತು ಐ.ಎ.ಎನ್ ( ಇಂಟರ್‌ನ್ಯಾಷನಲ್ ಆರ್ಟಿಕಲ್ ನಂಬರಿಂಗ್) ಬಾರ್‍ಕೋಡ್‍ಗಳು ಕೂಡಾ ಬಳಕೆಯಲ್ಲಿವೆ. ಯು.ಪಿ.ಸಿಯ ಬಾರ್‍ಕೋಡ್‍ನಂತೆ ಅಭಿವೃದ್ಧಿಪಡಿಸಲಾಗಿರುವ ಈ ಬಾರ್‍ಕೋಡ್‍ಗಳಲ್ಲಿ, ಬಳಸಲಾಗಿರುವ ಅಂಕಿಗಳ ಸಂಖ್ಯೆಯಲ್ಲಿ ಮಾತ್ರ ವ್ಯತ್ಯಾಸವಿದೆ.

ಇನ್ನು ಗ್ರಂಥಾಲಯಗಳು, ರಕ್ತ ನಿಧಿಗಳಲ್ಲಿ, ವಿಮಾನಯಾನ ಮೂಲಕ ಕಳುಹಿಸಲಾಗುವ ಪಾರ್ಸಲ್‍ಗಳಲ್ಲಿ ಕೋಡಾಬಾರ್ ಎನ್ನುವ ಹೆಸರಿನ ಬಾರ್‍ಕೋಡ್‍ಗಳನ್ನು ಬಳಸಲಾಗುತ್ತದೆ.

ಉದಾಹರಣೆಗೆ ಗ್ರಂಥಾಲಯಗಳಲ್ಲಿ ಬಳಸಲಾಗುವ ಕೋಡಾಬಾರ್ ಬಾರ್‍ಕೋಡ್‍ನ ಹೇಗಿರುತ್ತದೆ ಎಂದು ತಿಳಿದುಕೊಳ್ಳೋಣ.

1)  ಮೊದಲನೆಯ ಅಂಕಿ, ಇದು ಕೋಡಾಬಾರ್ ಬಾರ್‍ಕೋಡ್ ಎಂದು ತಿಳಿಸುತ್ತದೆ.

2) 2 ರಿಂದ 5ನೆ ಅಂಕಿಗಳು, ಗ್ರಂಥಾಲಯದ ಮಾಹಿತಿ ನೀಡುತ್ತವೆ.

3)  ನಂತರದ 8 ಅಂಕಿಗಳು, ಪುಸ್ತಕದ ಮಾಹಿತಿ ನೀಡುತ್ತವೆ.

4) ಕೊನೆಯ ಅಂಕಿಯನ್ನು ಚೆಕ್ ಅಂಕಿಯಾಗಿ ಬಳಸಲಾಗುತ್ತದೆ

ಡೇಟಾ ಮ್ಯಾಟ್ರಿಕ್ಸ್ ಅಥವಾ ಡೇಟಾ ಕೋಡ್ ಹೆಸರಿನ ಬಾರ್‍ಕೋಡನ್ನು ಎಲ್ಕೆಟ್ರಾನಿಕ್ಸ್ ಬಿಡಿಭಾಗಗಳು, ಔಷಧಗಳಲ್ಲಿ ಬಳಸಲಾಗುತ್ತದೆ. ಅಮೇರಿಕಾದ ಅಂಚೆ ಕಚೇರಿಗಳನ್ನು ಇ-ಸ್ಟಾಂಪುಗಳನ್ನು ಮುದ್ರಿಸಲು ಈ ಬಾರ್‍ಕೋಡ್‍ನ್ನು ಬಳಸುತ್ತಾರೆ. ಡೇಟಾ ಕೋಡ್ ಹೇಗಿರಬೇಕು ಎಂದು ನಿರ್ಧರಿಸುವ ಮಾನದಂಡವನ್ನು 1996ರಲ್ಲಿ ಅಭಿವೃದ್ಧಿಪಡಿಸಲಾಯಿತು. ಈ ಮಾನದಂಡಕ್ಕೆ ಇ.ಸಿ.ಸಿ.200 ಎಂದು ಕರೆಯಲಾಗುತ್ತದೆ.

ಯುನೈಟೆಡ್ ಪಾರ್ಸಲ್ ಸರ್ವಿಸ್ ಸಂಸ್ಥೆಯು ಪಾರ್ಸಲ್‍ಗಳಲ್ಲಿ ಬಳಸಲು ಮ್ಯಾಕ್ಸಿಕೋಡ್‍ನ್ನು 1992ರಲ್ಲಿ ಅಭಿವೃದ್ಧಿಪಡಿಸಿತು. ಇದನ್ನು ಯುಪಿಎಸ್ ಕೋಡ್ ಅಥವಾ ಕೋಡ್-6 ಎಂದು ಕರೆಯಲಾಗುತ್ತದೆ. ನೀವು ಕೊರಿಯರ್ ಮೂಲಕ ಕಳುಹಿಸಿದ ಪಾರ್ಸಲ್‍ನ್ನು ಬುಕಿಂಗ್‍ನಿಂದ ಡಿಲೇವರಿವರೆಗೂ ಅಂತರಜಾಲ ತಾಣ ಬಳಸಿ ಟ್ರಾಕ್ ಮಾಡುವ ಸೌಲಭ್ಯವನ್ನು ನೀಡುವ ಸಂಸ್ಥೆಗಳು, ಈ ಕೋಡ್‍ನ್ನು ಬಳಸುತ್ತವೆ.

ಕ್ಯೂ.ಆರ್ ಕೋಡ್ ಅಥವಾ ಕ್ವಿಕ್ ರೆಸ್ಪಾನ್ಸ್ ಕೋಡ್

ನಿಪ್ಪಾನ್ ಡೆನ್ಸೋ ಐಡಿ ಸಿಸ್ಟಮ್ಸ್ ನವರು ಅಭಿವೃದ್ಧಿ ಪಡಿಸಿದ ಮ್ಯಾಟ್ರಿಕ್ಸ್ ಆಧಾರಿತ ಬಾರ್‍ಕೋಡ್ ಇದಾಗಿದೆ. ಅಮೇರಿಕಾದ ಪೇಟೆಂಟ್‍ನ್ನು ಈ ಸಂಸ್ಥೆ ಪಡೆದಿದ್ದರೂ, ಕ್ಯೂ.ಆರ್ ಕೋಡ್‍ನ್ನು ಸಾರ್ವಜನಿಕ ಬಳಕೆಗೆ ಬಿಡುಗಡೆ ಮಾಡಿದ್ದಾರೆ.

1960ರಲ್ಲಿ ಜಪಾನಿನಲ್ಲಿ ಸೂಪರ್ ಮಾರುಕಟ್ಟೆಗಳು ಮತ್ತು ರೀಟೇಲ್ ಮಳಿಗೆಗಳು ಜನಪ್ರಿಯವಾಗತೊಡಗಿದವು. ಆಗ ಗ್ರಾಹಕರು ಖರೀದಿಸುವ ಪ್ರತಿಯೊಂದು ವಸ್ತುವಿನ ಬೆಲೆಯನ್ನು ಕ್ಯಾಷ್ ರಿಜಿಸ್ಟರ್‍ನಲ್ಲಿ ನಮೂದಿಸಿ, ಬಿಲ್ ತಯಾರಿಸಬೇಕಾಗಿತ್ತು. ಪ್ರತಿದಿನ ಮಾರಾಟವಾಗುವ ನೂರಾರು ವಸ್ತುಗಳ ಬೆಲೆಯನ್ನು ನಮೂದಿಸಿ, ಬಿಲ್ ತಯಾರಿಸುವ ಶ್ರಮದಾಯಕವಾದ ಈ ಕೆಲಸವನ್ನು ಬಾರ್‍ಕೋಡ್ ಬಳಸಿ ಮಾಡಬಹುದು ಎಂದು ಜಪಾನಿನಲ್ಲಿ ಬಾರ್‍ಕೋಡ್ ಬಳಸಲು ಪ್ರಾರಂಭಿಸಿದರು. ಈ ಬಾರ್‍ಕೋಡ್‍ಗಳಲ್ಲಿ ಜಪಾನಿ ಭಾಷೆಯ ಅಕ್ಷರಗಳನ್ನು ಕೂಡಾ ಬಳಸಲು ಸಾಧ್ಯವಾಗುವಂತೆ ಮಾಡಲು ಜಪಾನಿನ ಡೆನ್ಸೋ ವೇವ್ ಇನಕ್ ಸಂಸ್ಥೆಯ ತಂತ್ರಜ್ಞರು ಕೆಲಸವಾರಂಭಿಸಿದರು.

ಸುಮಾರು ಒಂದು ವರ್ಷದ ಪ್ರಯತ್ನದ ನಂತರ ಸುಮಾರು 7000 ಅಕ್ಷರಗಳನ್ನು ಬಳಸಬಹುದಾದ ಕ್ಯೂ.ಆರ್ ಕೋಡ್‍ನ್ನು ಈ ತಂತ್ರಜ್ಞರು ಅಭಿವೃದ್ಧಿಪಡಿಸುವಲ್ಲಿ ಯಶಸ್ವಿಯಾದರು. ಸಾಮಾನ್ಯ ಬಾರ್‍ಕೋಡಿಗಿಂತ ಹಲವು ಪಟ್ಟು ಅಧಿಕ ಮಾಹಿತಿಯನ್ನು ಈ ಕೋಡ್‍ನಲ್ಲಿ ಸಂಗ್ರಹಿಸಿಡಬಹುದಾಗಿತ್ತು. ಹೀಗಿದ್ದರೂ, ಸಾಮಾನ್ಯ ಬಾರ್‍ಕೋಡಿಗಿಂತ ಹತ್ತುಪಟ್ಟು ವೇಗವಾಗಿ ಕ್ಯೂ.ಆರ್ ಕೋಡಿನಲ್ಲಿದ್ದ ಮಾಹಿತಿಯನ್ನು ಓದಲು ಸಾಧ್ಯವಾಗಿದ್ದು, ಬಾರ್‍ಕೋಡ್ ತಂತ್ರಜ್ಞಾನ ಕ್ಷೇತ್ರದಲ್ಲಿ ಹೊಸ ಸಂಚಲನವನ್ನುಂಟು ಮಾಡಿತ್ತು.

ಈಗ ಕ್ಯೂ.ಆರ್ ಕೋಡ್‍ಗಳನ್ನು ರೀಟೇಲ್ ಉದ್ಯಮ, ಆಹಾರೋದ್ಯಮ, ಪ್ರವಾಸೋದ್ಯಮ, ಮೊಬೈಲ್ ಫೋನ್ ಸೇವೆಗಳು, ಹೀಗೆ ಹಲವಾರು ಕ್ಷೇತ್ರಗಳಲ್ಲಿ ವ್ಯಾಪಕವಾಗಿ ಬಳಸಲಾಗುತ್ತಿದೆ. ಕ್ಯೂ.ಆರ್ ಕೋಡ್ 40 ಆವೃತ್ತಿಯಲ್ಲಿ ಲಭ್ಯವಿದ್ದು, ಈ ಕುರಿತು ಹೆಚ್ಚಿನ ಮಾಹಿತಿಯನ್ನು ಆಸಕ್ತರು ವಿವಿಧ ಪುಸ್ತಕಗಳು ಮತ್ತು ಅಂತರಜಾಲ ತಾಣಗಳಿಂದ ಓದಿ ತಿಳಿದುಕೊಳ್ಳಬಹುದಾಗಿದೆ.

ಪುಸ್ತಕಗಳಿಗೆ ಬಾರ್‍ಕೋಡ್

ಐ.ಎಸ್.ಬಿ.ಎನ್ ( ಇಂಟರ್‌ ನ್ಯಾಷನಲ್ ಸ್ಟ್ಯಾಂಡರ್ಡ್ ಬುಕ್ ನಂಬರ್) 10 ಅಥವಾ 13 ಸಂಖ್ಯೆಗಳನ್ನು ಹೊಂದಿದ್ದು, ಇದನ್ನು ಪುಸ್ತಕಗಳಲ್ಲಿ ಬಳಸಲಾಗುತ್ತಿದೆ. 1965ರಲ್ಲಿ ಡಬ್ಲಿನ್‍ನಲ್ಲಿರುವ ಟ್ರಿನಿಟಿ ಕಾಲೇಜಿನ ನಿವೃತ್ತ ಸಂಖ್ಯಾಶಾಸ್ತ್ರ ಪ್ರಾಧ್ಯಾಪಕರಾಗಿದ್ದ ಗೊರ್ಡಾನ್ ಫಾಸ್ಟರ್‌ರವರು ಪುಸ್ತಕಗಳಿಗಾಗಿ ಇಂತಹ ಕೋಡ್ ನೀಡುವ ವ್ಯವಸ್ಥೆಯನ್ನು ಪ್ರಾರಂಭಿಸಿದರು. ಪ್ರಕಾಶಕರು ಪುಸ್ತಕಗಳನ್ನು ನೊಂದಣಿ ಮಾಡಿಸಿಕೊಂಡರೆ ಮಾತ್ರ, ಆ ಪುಸ್ತಕದ ಮಾರಾಟದ ಹಕ್ಕನ್ನು ಅವರಿಗೆ ನೀಡಲಾಗುತ್ತಿತ್ತು. 1966-67ರಲ್ಲಿ ಅಮೇರಿಕಾ ಮತ್ತು ಬ್ರಿಟನ್, ಪುಸ್ತಕಗಳಿಗೆ ಐ.ಎ.ಬಿ.ಎನ್ ಕೋಡ್ ನೀಡಲು ಪ್ರಾರಂಭಿಸಿದ್ದವು. ಮೊದಲು 9 ಅಂಕಿಗಳ ಕೋಡ್ ಬಳಸಲಾಗುತ್ತಿತ್ತು. ತದನಂತರ 10 ಅಂಕಿಗಳ ಕೋಡ್ ಬಳಕೆಗೆ ಬಂದಿತು. 1970 ನಂತರ ಅಂತರಾಷ್ಟ್ರೀಯ ಮಟ್ಟದಲ್ಲಿ ಏಕರೂಪತೆ ತರಲು, 13 ಅಂಕಿಗಳ ಕೋಡ್‍ನ್ನು ಬಳಕೆಗೆ ತರಲಾಯಿತು.

ಐ.ಎಸ್.ಬಿ.ಎನ್ ಕೋಡ್‍ನಲ್ಲಿ ಪುಸ್ತಕದ ಲೇಖಕ, ಪ್ರಕಾಶಕ, ಮಾರಾಟಗಾರ, ಹಕ್ಕು ಸಾಮ್ಯತೆ, ಗ್ರಂಥಾಲಯದ ಮಾಹಿತಿ, ಅನ್‍ಲೈನ್ ಮಾರಾಟ ಸೌಲಭ್ಯ, ಯಾವ ದೇಶ ಮತ್ತು ಭಾಷೆಯಲ್ಲಿ ಪುಸ್ತಕ ಪ್ರಕಟವಾಗಿದೆ, ಪ್ರಕಟಣಾ ವರ್ಷ, ಬೆಲೆ, ಪುಸ್ತಕದ ರಕ್ಷಾಪುಟ ಮತ್ತು ಒಳಪುಟಗಳಿಗೆ ಬಳಸಿರುವ ಕಾಗದದ ಮಾಹಿತಿ, ಮೊದಲಾದ ಮಾಹಿತಿಯನ್ನು ನೀಡಲಾಗುತ್ತದೆ.

ಐ.ಎಸ್.ಬಿ.ಎನ್‍ನ್ನು ಲೇಖಕರು, ಪ್ರಕಾಶಕರು, ಸಹಕಾರಿ ಸಂಸ್ಥೆಗಳು, ಮುದ್ರಕರು, ವಿಶ್ವವಿದ್ಯಾಲಯಗಳು, ಸರ್ಕಾರದ ಇಲಾಖೆಗಳು, ಹೀಗೆ ಪುಸ್ತಕೋದ್ಯಮದಲ್ಲಿ ಭಾಗಿಯಾಗಿರುವ ಎಲ್ಲರಿಗೂ ನೀಡಲಾಗುತ್ತದೆ. ಭಾರತದಲ್ಲಿ ರಾಜಾರಾಮ್ ಮೋಹನ್ ರಾಯ್ ನ್ಯಾಷನಲ್ ಏಜೆನ್ಸಿ ಫಾರ್ ಐ.ಎಸ್.ಬಿ.ಎನ್ ಹೆಸರಿನ ಸಂಸ್ಥೆಯು ಈ ಕೋಡ್‍ನ್ನು ಉಚಿತವಾಗಿ ನೀಡುತ್ತದೆ.

ಐ.ಎಸ್.ಬಿ.ಎನ್ ಕೋಡ್‍ನ್ನು ಮುದ್ರಿತ ಪುಸ್ತಕಗಳು, ಶೈಕ್ಷಣಿಕ ಬಳಕೆಗಾಗಿರುವ ಕಿರುಚಿತ್ರಗಳು ಮತ್ತು ವೀಡಿಯೋ, ಬಹುಮಾಧ್ಯಮ ಪ್ರಕಟಣೆಗಳು, ಶೈಕ್ಷಣಿಕ ಬಳಕೆಯ ತಂತ್ರಾಂಶಗಳು, ಭೂಪಟ, ನಕ್ಷೆಗಳು, ಇ-ಪುಸ್ತಕಗಳು, ಭೋದನಾ ಸಾಮಗ್ರಿಗಳು, ದಿನಚರಿಗಳು ಮತ್ತು ಕ್ಯಾಲೆಂಡರ್‍ಗಳು, ಹೀಗೆ ವಿವಿಧ ಕಡೆಯಲ್ಲಿ ಬಳಸಬಹುದಾಗಿದೆ. ಈ ಕೋಡ್ ಹೊಂದುವುದು ಕಡ್ಡಾಯವಾಗಿಲ್ಲ ಆದರೆ ಈ ಕೋಡ್ ಇರುವ ಪುಸ್ತಕಗಳನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ವಿಶಿಷ್ಠವಾಗಿ ಗುರುತಿಸುತ್ತಾರೆ. ಮತ್ತು ಈ ಕೋಡ್ ಬಳಸಿ ಬಿಲ್ ಸಿದ್ಧಪಡಿಸಿ, ಮಾರಾಟ ಮಾಡಲು ಅನುಕೂಲವಾಗುತ್ತದೆ.

ಇವರಿಂದ ಈ ಕೋಡ್ ಪಡೆಯಲು ಇಚ್ಛಿಸುವವರು, ಪುಸ್ತಕದ ಹೆಸರು, ವಿಷಯ, ಭಾಷೆ, ಲೇಖಕರ ಹೆಸರು ಮತ್ತು ವಿಳಾಸ, ಪ್ರಕಾಶಕರ ಹೆಸರು ಮತ್ತು ವಿಳಾಸ, ಹಕ್ಕುಸಾಮ್ಯ ಮಾಹಿತಿ, ಮುದ್ರಣ ವರ್ಷ, ಮುದ್ರಣ ಸ್ಥಳ, ಪುಸ್ತಕದ ಒಟ್ಟು ಪುಟಗಳ ಸಂಖ್ಯೆ, ಪುಸ್ತಕದ ಬೆಲೆ, ರಕ್ಷಾಪುಟ ಮತ್ತು ಒಳಪುಟಗಳಿಗಾಗಿ ಬಳಸಿರುವ ಕಾಗದದ ವಿವರ, ಸಂಪರ್ಕ ವಿಳಾಸವನ್ನು ನೀಡಬೇಕು. ಇದರೊಡನೆ ಮುಖಪುಟ ಮತ್ತು ಹಿಂಬದಿಯ ರಕ್ಷಾಪುಟದ ಚಿತ್ರ, ವಿಳಾಸದ ಪುರಾವೆ ಮತ್ತು ಸ್ಟಾಂಪ್ ಲಗತ್ತಿಸಿದ ಸ್ವವಿಳಾಸದ ಅಂಚೆ ಲಕೋಟೆಯನ್ನು ಕಳುಹಿಸಬೇಕಾಗುತ್ತದೆ.

ಅರ್ಜಿ ಕಳುಹಿಸಬೇಕಾದ ವಿಳಾಸ ಹೀಗಿದೆ,

ರಾಜಾರಾಮ್ ಮೋಹನ್ ರಾಯ್ ಐ.ಎಸ್.ಬಿ.ಎನ್ ಏಜೆನ್ಸಿ, ಉನ್ನತ ಶಿಕ್ಷಣ ಇಲಾಖೆ, ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ, ರೂಂ ನಂಬರ್ 13, ಜೀವನ್ ದೀಪ ಬಿಲ್ಡಿಂಗ್, 4ನೆ ಮಹಡಿ, ಪಾರ್ಲಿಮೆಂಟ್ ಸ್ಟ್ರೀಟ್, ನವದೆಹಲಿ – 110001

ಉದಯ ಶಂಕರ ಪುರಾಣಿಕ