ಕಾವ್ಯ ಎನ್ನುವುದು ಭಾಷೆಯ ಮೂಲಕ ನಡೆಯುವ ಒಂದು ಕ್ರಿಯೆ. ನಮ್ಮ ಸಮಸ್ತ ವ್ಯವಹಾರವೂ ಭಾಷೆಯ ಮೂಲಕವೆ ನಡೆಯುತ್ತದೆಯಾದರೂ, ಅಲ್ಲಿ ಭಾಷೆಯನ್ನು ನಾವು ಹೊಸದಾಗೇನೂ ಸೃಷ್ಟಿಸುವುದಿಲ್ಲ; ಆಗಲೇ ಸಿದ್ಧವಾಗಿರುವ ಹಾಗೂ ಪ್ರಚಲಿತವಾಗಿರುವ ಭಾಷಾಸಾಮಗ್ರಿಯನ್ನು, ನಾವು ನಮ್ಮ ಅನಿಸಿಕೆ ಆಲೋಚನೆಗಳನ್ನು ಇತರರಿಗೆ ತಿಳಿಯಪಡಿಸಲು ಕೇವಲ ಒಂದು ಮಾಧ್ಯಮವನ್ನಾಗಿ ಬಳಸಿಕೊಳ್ಳುತ್ತೇವೆ. ವ್ಯವಹಾರದಲ್ಲಿ ಹೇಗೋ, ಕಾವ್ಯ ನಿರ್ಮಿತಿಯಲ್ಲೂ ಕೂಡಾ ಕವಿಗೆ ಇದೇ ಭಾಷೆ ಒಂದು ಸಾಮಗ್ರಿಯಂತೆ ಒದಗಿಬರುತ್ತದೆಯಾದರೂ, ಅದೇ ಭಾಷೆಯನ್ನು ಕವಿ ಒಂದು ರೀತಿಯಲ್ಲಿ ಮುರಿದು ಕಟ್ಟುವ ಕ್ರಿಯೆಯಲ್ಲಿ ಅದನ್ನೊಂದು ವಿಶಿಷ್ಟ ಉದ್ದೇಶಕ್ಕೆ ಮಾಧ್ಯಮವನ್ನಾಗಿ ರೂಪಿಸಿಕೊಳ್ಳುತ್ತಾನೆ. ಅವನಿಗೆ ಮುಖ್ಯವಾದದ್ದು ಕೇವಲ ಭಾಷೆಯ ರೂಪ ಅಲ್ಲ; ಅವನಿಗೆ ಮುಖ್ಯವಾದದ್ದು ಭಾಷೆಯ ಸ್ವರೂಪ. ಒಂದು ಭಾಷೆಯಲ್ಲಿನ ಪದಗಳು, ಪದಪುಂಜಗಳು ಯಾವ ಯಾವ ಅರ್ಥವಂತಿಕೆಯನ್ನು ಒಳಗೊಳ್ಳಬಲ್ಲವು ಗಳೆಂಬುದನ್ನೂ, ಭಾಷೆಯನ್ನು ಯಾವ ಒಂದು ವಿನ್ಯಾಸಕ್ಕೆ ಒಳಪಡಿಸಿದರೆ ಏನೇನು ಪರಿಣಾಮ ರಮಣೀಯತೆಗಳು ನಿಷ್ಪನ್ನವಾಗಬಹುದೆಂಬುದನ್ನೂ ಬಲ್ಲವನ ಅಥವಾ ವಿದಗ್ಧನ ‘ಗ್ರಂಥನ ಕೌಶಲ’ವೆ ಕಾವ್ಯ ಭಾಷೆಯ ವಿಶಿಷ್ಟ ಲಕ್ಷಣವಾಗಿದೆ. ಇದು ಭಾಷೆಯನ್ನು ವ್ಯಾವಹಾರಿಕ ನೆಲೆಯಿಂದ ಒಂದು ರೀತಿಯಲ್ಲಿ ‘ಅತಿಶಯತೆ’ಗೆ ಏರಿಸುವುದು ಮಾತ್ರವಲ್ಲದೆ, ಕವಿ ತನ್ನ ಅನುಭವ ತೀವ್ರತೆಯನ್ನು ಓದುಗರಿಗೆ ಸಂವಹನಗೊಳಿಸುವ, ಮತ್ತು ತನ್ಮೂಲಕ ಅವರಲ್ಲಿ ಸಮಾನ ಭಾವೋದ್ದೀಪಗೊಳಿಸುವ ಒಂದು ಕಲಾಮಾಧ್ಯಮದ ನಿರ್ಮಾಣ ಕ್ರಿಯೆಯೂ ಆಗಿದೆ. ಹೀಗೆ ಕವಿಯಾದವನು ತನ್ನ ಅನುಭವಕ್ಕೆ ಭಾಷೆಯ ಮೂಲಕ ಆಕಾರವನ್ನು ನೀಡುವ ಅಥವಾ ಅಭಿವ್ಯಕ್ತಿಸುವ ಕ್ರಿಯೆಯ ಸ್ವರೂಪವನ್ನು ಕುರಿತು ಭಾರತೀಯ ಹಾಗೂ ಪಾಶ್ಚಿಮಾತ್ಯ ವಿಮರ್ಶಕರು Style (ಶೈಲಿ) ಎಂದೂ ಕರೆದಿದ್ದಾರೆ.

ಭಾರತೀಯ ಆಲಂಕಾರಿಕರು ರೀತಿಯ ಸ್ವರೂಪವನ್ನು ಕುರಿತು ಚರ್ಚೆ ಮಾಡಿದ್ದು, ನಾಟಕವನ್ನು ಹಾಗೂ ಕಾವ್ಯವನ್ನು ಇರಿಸಿಕೊಂಡು. ಆದರೆ ಪಾಶ್ಚಿಮಾತ್ಯರಲ್ಲಿ ಶೈಲಿಯನ್ನು ಕುರಿತ ಚರ್ಚೆ ಮೊದಲು ಭಾಷಣ ಕಲೆ (Rhetoric)ಯ ಸಂದರ್ಭದಲ್ಲಿ ಪ್ರಾರಂಭವಾದದ್ದು, ಅನಂತರ ಬರೆಹದ ಭಾಷೆಯ ಸ್ವರೂಪದ ವಿಶ್ಲೇಷಣೆಗೂ ಅನ್ವಯಿತವಾತೊಡಗಿತು. ಭಾರತೀಯ ಆಲಂಕಾರಿಕರು ಮುಖ್ಯವಾಗಿ ಸಾಹಿತ್ಯ ಅಥವಾ ಕಾವ್ಯಭಾಷೆಯಲ್ಲಿನ ‘ಪದಸಂಘಟನಾ’ಕ್ರಮಗಳನ್ನೂ, ‘ವಿಶಿಷ್ಟ ಪದರಚನೆ’ಗಳನ್ನೂ ‘ವಚನ ವಿನ್ಯಾಸಗಳನ್ನೂ ಗಮನಕ್ಕೆ ತೆಗೆದುಕೊಂಡು ರೀತಿಯ ಸ್ವರೂಪವನ್ನು ವಿವರಿಸ ತೊಡಗಿದರೇ ಹೊರತು, ಪಾಶ್ಚಿಮಾತ್ಯ ವಿಮರ್ಶಕರಂತೆ, ಭಾಷೆಯನ್ನು ಈ ಒಂದು ವಿಶಿಷ್ಟ ಕ್ರಮದಲ್ಲಿ ಪ್ರಯೋಗಿಸುವುದರ ಹಿಂದಿರುವ ಕವಿಯ ವ್ಯಕ್ತಿತ್ವವನ್ನು (ಕುಂತಕನೊಬ್ಬನ ಹೊರತು) ಗಮನಕ್ಕೆ ಅಷ್ಟಾಗಿ ತೆಗೆದುಕೊಂಡಂತೆ ತೋರುವುದಿಲ್ಲ. ಪಶ್ಚಿಮದಲ್ಲಿ ಕಾವ್ಯವಿಚಾರಗಳನ್ನು ಕುರಿತು ಮೊಟ್ಟಮೊದಲು ಮಾತನಾಡಿದ ಪ್ಲೇಟೋನ ಬರಹಗಳಲ್ಲಿ ಸೂಚ್ಯವಾಗಿ, ಮತ್ತು ತದನಂತರ ಲಾಂಜಿನಸ್‌ನ ಕಾವ್ಯ ಚರ್ಚೆಗಳಲ್ಲಿ ಶೈಲಿ ಎಂಬುದು “ಕವಿಯ ಸಮಗ್ರ ವ್ಯಕ್ತಿತ್ವದ ವಿವಿಧಾಂಗಗಳೆಲ್ಲವೂ ಒಮ್ಮುಖವಾಗಿ ದುಡಿದು ನುಡಿದದ್ದರ ಪರಿಣಾಮ”[1] ಎಂಬ ಮಾತು ಸ್ಪಷ್ಟವಾಗಿ ಕಾಣಿಸಿಕೊಳ್ಳುತ್ತದೆ. ಮತ್ತು ಉದ್ದಕ್ಕೂ ಪಾಶ್ಚಿಮಾತ್ಯ ಕಾವ್ಯಮೀಮಾಂಸೆಯಲ್ಲಿ ಶೈಲಿಯನ್ನು ಕುರಿತ ಚರ್ಚೆ ಎಂದೂ ಅದರ ಹಿಂದಿರುವ ಕವಿಯ ವ್ಯಕ್ತಿತ್ವವನ್ನು ಮರೆಯುವುದಿಲ್ಲ. ಭಾರತೀಯರ ಪ್ರಕಾರ ರೀತಿ ಎನ್ನುವುದು ಕಾವ್ಯ ಭಾಷೆಯಲ್ಲಿನ ಗುಣ ವಿಶಿಷ್ಟವಾದ ಪದರಚನೆಯಾದರೆ, ಪಾಶ್ಚಿಮಾತ್ಯರ ಶೈಲಿ ಮುಖ್ಯವಾಗಿ ಕವಿಯ ವಿಶಿಷ್ಟ ವ್ಯಕ್ತಿತ್ವವೊಂದರ ಅಭಿವ್ಯಕ್ತಿಯಾಗಿದೆ.

‘ರೀತಿ’ -ಎಂದರೆ ಬರವಣಿಗೆಯ ಒಂದು ಕ್ರಮ. ಈ ಬರವಣಿಗೆ ಕವಿ ಬಳಸುವ ಭಾಷೆಯಿಂದ ರೂಪಗೊಳ್ಳುವ ಪದ ಸರಣಿಯಿಂದ ಕೂಡಿರುತ್ತದೆ. ಈ ಪದಗಳ ಜೋಡಣೆ ಕವಿಯಿಂದ ಕವಿಗೆ ಬೇರೆಯಾಗಿರುತ್ತದೆ. ತಮ್ಮ ಎದುರು, ಆಗಲೆ ಪ್ರಚಲಿತವಾದ ಹಲವು ಸಂಸ್ಕೃತ ಕಾವ್ಯಗಳನ್ನಿರಿಸಿಕೊಂಡು, ಅದರ ಭಾಷೆಯ ವೈಶಿಷ್ಟ ವನ್ನು ಪರಿಶೀಲಿಸಿದ ನಮ್ಮ ಆಲಂಕಾರಿಕರ ಕಣ್ಣಿಗೆ ಕಂಡದ್ದು, ಅಲ್ಲಿನ ವಿಶೇಷ ರೀತಿಯ ಪದರಚನೆಗಳು. ಸಂಸ್ಕೃತ ಭಾಷೆಯ ಹಾಗೂ ಅದರ ದಟ್ಟವಾದ ಪ್ರಭಾವಕ್ಕೆ ಸಿಕ್ಕ ಪ್ರಾದೇಶಿಕ ಭಾಷೆಗಳ ‘ರೀತಿ’ಯಲ್ಲಿ ಉದ್ದುದ್ದನೆಯ ಸಮಾಸಗಳು ಮತ್ತು ಸಮಾಸ ಯುಕ್ತವಾದ ರಚನೆಗಳು ಇರುವುದೇ ಅವುಗಳ ವೈಶಿಷ್ಟ . ಮತ್ತು ಈ ಪದರಚನೆ ಗಳಿಂದಲೇ, ಕಾವ್ಯದ ಭಾಷೆ, ವ್ಯಾವಹಾರಿಕ ಭಾಷೆಯಿಂದ ಭಿನ್ನವಾಗುವುದೆಂಬುದನ್ನು ಗುರುತಿಸಿದರು. ‘ರೀತಿ’ಯನ್ನು ಕುರಿತ ಕೆಲವು ಸುಪ್ರಸಿದ್ಧ ಸೂತ್ರಗಳು ಈ ಮಾತನ್ನು ಇನ್ನಷ್ಟು ಸ್ಪಷ್ಟಪಡಿಸುತ್ತವೆ: ರೀತಿ ಎಂದರೆ ‘ವಿಶಿಷ್ಟ ಪದರಚನೆ – ಎನ್ನುತ್ತಾನೆ ವಾಮನ; ‘ವಚನವಿನ್ಯಾಸಕ್ರಮ’ ಎನ್ನುತ್ತಾನೆ ರಾಜಶೇಖರ; ‘ಪದ ಸಂಘಟನೆ’ ಎನ್ನುತ್ತಾರೆ, ವಿಶ್ವನಾಥ ಮತ್ತು ವಿದ್ಯಾನಾಥರು; ‘ಪದವಿನ್ಯಾಸ ಭಂಗಿ’ -ಎನ್ನುತ್ತಾನೆ ಸಿಂಗಭೂಪಾಲ. ಈ ಕೆಲವು ಸೂತ್ರಗಳನ್ನು ಗಮನಿಸಿದರೆ ರೀತಿಯನ್ನು ಕುರಿತು ಚರ್ಚಿಸುವಾಗ ನಮ್ಮ ಆಲಂಕಾರಿಕರು ಮೂಲಮಾನವನ್ನಾಗಿ ಇರಿಸಿಕೊಂಡದ್ದು, ಬರವಣಿಗೆಯಲ್ಲಿ ಕಂಡು ಬರುವ ಪದಗಳ ಅಥವಾ ಪದಪುಂಜಗಳ ವಿಶಿಷ್ಟ ರಚನೆಗಳನ್ನು, ವಿನ್ಯಾಸಗಳನ್ನು, ಸಂಘಟನೆಗಳನ್ನು ಮತ್ತು ಭಂಗಿಗಳನ್ನು. ಕಾವ್ಯಭಾಷೆಯಲ್ಲಿರುವ ಪದರಚನೆಯಾಗಲಿ, ಪದವಿನ್ಯಾಸವಾಗಲಿ ವಿಶಿಷ್ಟವೆಂಬುದೇನೋ ನಿಜವೆ. ಆದರೆ ಆ ವಿಶಿಷ್ಟತೆ ಇರುವುದು ಎಲ್ಲಿ ಎಂಬ ಪ್ರಶ್ನೆಗೆ ಉತ್ತರವಾಗಿ ವಾಮನನು ಹೇಳುವುದು ‘ಗುಣಗಳಲ್ಲಿ’ ಎಂದು. ಎಂದರೆ, ರೀತಿ ಎಂಬುದು ‘ವಿಶಿಷ್ಟ ಪದರಚನೆ’; ಈ ವಿಶಿಷ್ಟತೆ ಆಯಾ ಪದರಚನೆಗಳು ತಮ್ಮಲ್ಲಿ ಒಳಗೊಂಡಿರುವ ಗುಣಗಳಲ್ಲಿದೆ. ಹೀಗೆ ಕೆಲವು ವಿಶಿಷ್ಟವಾದ ಗುಣಗಳಿಂದ ಕೂಡಿರುವ, ಅಥವಾ ಗುಣ ವಿಶಿಷ್ಟವಾದ ಪದರಚನೆಯೇ ರೀತಿ; ಇಂಥ ರೀತಿಯೆ ಕಾವ್ಯದ ಆತ್ಮ,[2] -ಎನ್ನುತ್ತಾನೆ ವಾಮನ.

ರೀತಿಯನ್ನು ಕುರಿತ ಚರ್ಚೆಯಲ್ಲಿ ಮತ್ತೆ ಮತ್ತೆ ಪ್ರಸ್ತಾಪಿತವಾಗುವುದು ಗುಣವನ್ನು ಕುರಿತ ವಿಚಾರ. ಗುಣವೆಂದರೇನೆಂದು ಸೂತ್ರೀಕರಿಸುವುದು ಕಷ್ಟ. ಯಾಕೆಂದರೆ ಲಾಕ್ಷಣಿಕನಿಂದ ಲಾಕ್ಷಣಿಕನಿಗೆ, ಪ್ರಸ್ಥಾನದಿಂದ ಪ್ರಸ್ಥಾನಕ್ಕೆ ಗುಣದ ಸ್ವರೂಪವು ಮಾರ್ಪಾಡಾಗುತ್ತ ಹೋಗಿದೆ. “ಪ್ರಾಚೀನರ ಮತದಂತೆ ‘ಗುಣ’ ಎನ್ನುವುದು ಒಟ್ಟಿನ ಮೇಲೆ ಶಬ್ದ, ಅರ್ಥ ಇವುಗಳ ವಿಶೇಷ ರಚನೆಯನ್ನು ಸೂಚಿಸುತ್ತಿತ್ತೆಂದು ಹೇಳಬಹುದು”[3] -ಎನ್ನುತ್ತಾರೆ. ತೀ.ನಂ. ಶ್ರೀಕಂಠಯ್ಯನವರು.  ಗುಣಗಳು ಶಬ್ದಾರ್ಥ ರಚನೆಯನ್ನು ಕುರಿತ ಸಂದರ್ಭದಲ್ಲಿ ಚರ್ಚಿತವಾಗಿರುವುದು ನಿಜ; ರೀತಿ ಪ್ರಸ್ಥಾನದ ವಾಮನನಂತೂ ವಿಶಿಷ್ಟ ಪದರಚನೆಯ ವೈಶಿಷ್ಟ ವಿರುವುದೇ ಅವು ಗುಣಾತ್ಮಕವಾಗಿರುವುದರಲ್ಲಿ ಎಂದು ಹೇಳುತ್ತಾನೆ. ಗುಣ ಎಂದರೆ, ವಿಶಿಷ್ಟ ಪದರಚನೆಯು ಅಭಿವ್ಯಕ್ತಪಡಿಸುವ ಒಂದು ಮನೋಧರ್ಮ ಅಥವಾ ಅನುಭವ. ಯಾಕೆಂದರೆ, ಕವಿಯು ವಿಶಿಷ್ಟವಾದ ಪದರಚನೆಗಳ ಮೂಲಕವೇ, ಆಯಾ ಸಂದರ್ಭದ ಭಾವವನ್ನು ತಿಳಿಸಲು ಸಾಧ್ಯವಾಗುವುದು. ಒಂದು ಸುಕುಮಾರ ಸಂದರ್ಭದ ಭಾವಾಭಿವ್ಯಕ್ತಿ ರೂಪಿಸಿಕೊಳ್ಳುವ ‘ಪದರಚನೆ’, ಒಂದು ವೀರರಸ ಸಂದರ್ಭದ ಭಾವಾಭಿವ್ಯಕ್ತಿ ರೂಪಿಸಿಕೊಳ್ಳುವ ಪದರಚನೆಯಿಂದ ಸಂಪೂರ್ಣ ಬೇರೆಯಾಗಿರುತ್ತದೆ. ಈ ಪದರಚನೆ ಆಯಾ ಸಂದರ್ಭಕ್ಕೆ ಉಚಿತವಾದ ‘ಅಲಂಕಾರ’ಗಳನ್ನು ನಿರ್ಮಾಣ ಮಾಡುವುದರಲ್ಲಿ ಹೇಗೋ ಹಾಗೆಯೇ, ಇಡೀ ಸಂದರ್ಭವನ್ನು ವರ್ಣಿಸುವ ಶಬ್ದಾರ್ಥ ವಿನ್ಯಾಸಗಳನ್ನೂ ವ್ಯಾಪಿಸಿಕೊಂಡಿರುತ್ತದೆ. ಹಾಗೆಯೇ ಇದು ಕವಿಯಿಂದ ಕವಿಗೆ ಅವನ ಸ್ವಭಾವಾನುಸಾರಿಯಾಗಿಯೂ ಬೇರೆ ಬೇರೆಯಾಗಿರಬಹುದು. ರನ್ನನಂಥ ಕವಿಯ ‘ಪದ ರಚನೆ’ಗೂ ನಾಗಚಂದ್ರನಂಥ ಕವಿಯ ‘ಪದ ರಚನೆ’ಗೂ ವ್ಯತ್ಯಾಸವಿರುವುದು ಈ ಕಾರಣದಿಂದಲೇ. ಅಲಂಕಾರಗಳ ನಿರ್ಮಿತಿ ಆಯಾ ಕವಿಯ ಚಿತ್ರಕ ಶಕ್ತಿಯನ್ನು ಅವಲಂಬಿಸಿದ್ದರೆ, ಕವಿಯ ವಿಶಿಷ್ಟ ಪದರಚನಾ ಸಾಮರ್ಥ್ಯ ಅಥವಾ ರೀತಿಯು ಇಡೀ ಕಾವ್ಯದ ಶಬ್ದಾರ್ಥ ವಿರಚನೆಯನ್ನು ನಿಯಂತ್ರಿಸುವ ಅವನ ಮನೋಧರ್ಮದ ಮೇಲೆ ನಿಂತಿರುತ್ತದೆ. ಈ ದೃಷ್ಟಿಯಿಂದ ‘ಅಲಂಕಾರ’ವೇ ಬೇರೆ, ‘ಗುಣ’ವೇ ಬೇರೆ.  ಗುಣ ಎಂಬುದು, ಪದರಚನೆಯ ಮೂಲಕ ಅಭಿವ್ಯಂಜಕವಾಗುವ ಮನೋಧರ್ಮ. ಮಾಘ ಮತ್ತು ಮಮ್ಮಟ ಇವರು ಇದೇ ಅರ್ಥದ ವಿವರಣೆಯನ್ನು ಕೊಡುತ್ತಾರೆ. “ಕಾವ್ಯದಲ್ಲಿ ಪ್ರಧಾನವಾದ ರಸಕ್ಕೆ ಬೇರ್ಪಡಿಸಲಾರದಂತೆ ಇರತಕ್ಕ ಉತ್ಕರ್ಷಕಾರಕಗಳಾದ ಧರ್ಮಗಳೇ ಗುಣಗಳು;… ಹಾಗೆಯೇ ಮಾಧುರ್ಯ ಮುಂತಾದವು ರಸದ ಗುಣಗಳೇ ಹೊರತು ಅಕ್ಷರ ಮುಂತಾದವುಗಳನ್ನು ಅವಲಂಬಿಸುವುದಿಲ್ಲ”[4] -ಎನ್ನುತ್ತಾನೆ ಮಮ್ಮಟ. ಗುಣಗಳು ರಸ ಧರ್ಮಗಳೆಂದು ಆನಂದವರ್ಧನ ಅಭಿಪ್ರಾಯಪಡುತ್ತಾನೆ. ಈ ದೃಷ್ಟಿಯಿಂದ ಕವಿಯ ಪದರಚನೆಗಳು ಮೂಲತಃ ರಸಾಭಿವ್ಯಕ್ತಿಯ ಸಾಧನಗಳೇ. ‘ಗುಣ’ ಎಂಬ ಮಾತಿಗೆ ಭಾರತೀಯ ಕಾವ್ಯಮೀಮಾಂಸೆಯಲ್ಲಿ ಇಷ್ಟೊಂದು ವ್ಯಾಪಕವಾದ ಅರ್ಥವಿರುವುದಾದರೂ, ವಾಮನನ ಸೂತ್ರದಲ್ಲಿ ಬರುವ ‘ವಿಶೇಷೋಗುಣಾತ್ಮಾ’ ಎಂಬ ಮಾತಿನಿಂದ ಇಷ್ಟೂ ಅರ್ಥ ಹೊರಡುತ್ತದೆಯೆ ಎಂಬುದು ಸಂದೇಹಾಸ್ಪದವಾಗಿದೆ. ಯಾಕೆಂದರೆ ವಾಮನನು ‘ಗುಣ’ವೆಂದರೇನೆಂದು ವಿವರಿಸುವುದಿಲ್ಲ; ಆದರೆ ರೀತಿ ಎಂಬುದು ಗುಣವಿಶಿಷ್ಟವಾದ ಪದರಚನೆ ಎಂಬುದನ್ನು ಹೇಳುತ್ತಾ, ಈ ಬಗೆಯ ಗುಣವಿಶಿಷ್ಟವಾದ ಪದರಚನೆಯುಳ್ಳ ರೀತಿಗಳ ಬಗ್ಗೆ ಪ್ರಸ್ತಾಪಿಸುತ್ತಾ, ಸಮಗ್ರ (ಎಂದರೆ ಹಿಂದಿನವರು ಹೇಳಿದ ಹತ್ತೂ ಗುಣಗಳನ್ನು) ಗುಣಗಳುಳ್ಳದ್ದು ವೈದರ್ಭೀ ಎಂದೂ, ಓಜಸ್ಸು ಮತ್ತು ಕಾಂತಿಗಳುಳ್ಳದ್ದು ಗೌಡೀ ಎಂದೂ, ಮಾಧುರ್ಯ ಸೌಕುಮಾರ್ಯಗಳುಳ್ಳದ್ದು ಪಾಂಚಾಲೀ ಎಂದೂ ಹೇಳುತ್ತಾರೆ.

ಮೊದಲಿಗೆ ರೀತಿಯನ್ನು ಕುರಿತ ವಿಂಗಡಣೆ ಪ್ರಾರಂಭವಾದದ್ದೇ, ಅಂದಿನ ಭಾರತೀಯ ವಿವಿಧ ಪ್ರಾಂತ್ಯಗಳ ಬರವಣಿಗೆಗಳಲ್ಲಿ ಯಾವ ಯಾವ ಗುಣಗಳು ಇವೆ ಎನ್ನುವುದರ ಪರಿಶೀಲನೆಯಿಂದ. ಈ ಗುಣಗಳು ದಂಡಿಯ ಕಾಲಕ್ಕೆ ಹತ್ತೆಂದು ಪರಿಗಣಿತವಾಗಿದ್ದು’* ಕೊನೆಗೆ ಓಜಸ್ಸು, ಪ್ರಸಾದ, ಹಾಗೂ ಮಾಧುರ್ಯ ಈ ಮೂರನ್ನೆ ಮುಖ್ಯವಾಗಿ ಎಣಿಸತೊಡಗಿದರು.  ಓಜಸ್ಸು ಪ್ರಸಾದ ಮೊದಲಾದ ಎಲ್ಲ ಗುಣಗಳನ್ನು ಒಳಗೊಳ್ಳುವ ರೀತಿಗೆ ವೈದರ್ಭಿ ಎಂದೂ, ಓಜಸ್ಸು ಮತ್ತು ಕಾಂತಿ ಎಂಬ ಎರಡು ಗುಣಗಳನ್ನು ಒಳಗೊಳ್ಳುವ ರೀತಿಗೆ ಪಾಂಚಾಲೀ -ಎಂದೂ ವಾಮನನು ಮೂರು ರೀತಿಗಳ ವಿಶೇಷ ಲಕ್ಷಣವನ್ನು ವಿವರಿಸುತ್ತಾನೆ. ಹೀಗೆಯೇ, ಮುಂದೆ ಲಾಟೀಯ ಮತ್ತು ಮಿಥಿಲಾ ಎಂಬ ಇನ್ನೆರಡು ರೀತಿಗಳೂ ಈ ಪಟ್ಟಿಗೆ ಸೇರಿಕೊಂಡವು. ರೀತಿಯ ವಿಂಗಡಣೆಯಲ್ಲಿ ಅವರು ಗಮನಿಸಿದ್ದು, ಇಂತಿಂತಹ ಗುಣಗಳಿದ್ದರೆ ಇಂತಿಂತಹ ರೀತಿಗಳಾಗುತ್ತವೆ ಎಂಬುದನ್ನು. ಈ ಗುಣಗಳನ್ನು ಗುರುತಿಸುವುದು, ಆಯಾ ರೀತಿ ಒಳಕೊಳ್ಳುವ ಪದರಚನೆಗಳ ಆಧಾರದಿಂದ. ಸಂಸ್ಕೃತ ಭಾಷೆಯ ವಿವಿಧ ಕಾವ್ಯಗಳನ್ನು ತಮ್ಮ ಮುಂದೆ ಇರಿಸಿಕೊಂಡು, ಕಾವ್ಯಭಾಷೆಯ ವಿಶೇಷತೆಯನ್ನು ಪರಿಶೀಲಿಸಿದ ಆಲಂಕಾರಿಕರ ಕಣ್ಣಿಗೆ ಕಂಡದ್ದು ಸಂಸ್ಕೃತ ಕಾವ್ಯ ಭಾಷೆಗೇ ವಿಶಿಷ್ಟವಾದ ಸಮಾಸ ರಚನೆ. ಈ ಸಮಾಸ ರಚನೆಯ ಅಸಾಧಾರಣತೆಯನ್ನು ಅವರು ಪದರಚನೆ, ಸಂಘಟನೆ ಎಂಬ ಹೆಸರಿನಿಂದ ಕರೆಯತೊಡಗಿದರು. ಇಷ್ಟು ಉದ್ದವಾದ ಸಮಾಸಗಳು ಮತ್ತಾವ ಭಾಷೆಯಲ್ಲೂ ಸಾಧ್ಯವಿಲ್ಲ. ಈ ಸಮಾಸಗಳು ಅಥವಾ ಪದರಚನೆಗಳು, ಪರುಷ ಮತ್ತು ಕೋಮಲ ವರ್ಣಗಳಿಂದ ಕೂಡಿದಾಗ, ಪರುಷ ವರ್ಣಗಳು ಕೂಡಿದಾಗಿನ ಅಥವಾ ಕೋಮಲ ವರ್ಣಗಳು ಕೂಡಿದಾಗಿನ ರಚನೆಗಿಂತ ಬೇರೆಯಾಗಿರುತ್ತವೆ. ಹಾಗೆಯೆ ಪರುಷ ವರ್ಣ ಸಂಯುಕ್ತ್ತವಾದ ಸಮಾಸ ರಚನೆ, ಒಟ್ಟಾಗಿ ಒಂದು ಗುಣವನ್ನು ಅಥವಾ ಮನೋಧರ್ಮವನ್ನು ಸೂಚಿಸಿದರೆ, ಕೋಮಲ ವರ್ಣ ಸಂಯುಕ್ತವಾದ ಸಮಾಸ ರಚನೆ ಬೇರೊಂದು ಗುಣವನ್ನು ಸೂಚಿಸುತ್ತದೆ. ಮೊದಲನೆಯದು ಓಜಸ್ಸೆಂಬ ಗುಣವನ್ನು ಪ್ರತಿನಿಧಿಸುತ್ತದೆ; ಎರಡನೆಯದು ಮಾಧುರ್ಯವನ್ನು ಸೂಚಿಸುತ್ತದೆ. ‘ಅಬ್ಜದಳಾಕ್ಷೀ’ ಎಂಬ ಪದರಚನೆಗೂ, ‘ಕಂಜದಳನಯನೆ’ ಎಂಬ ಪದರಚನೆಗೂ, ಅರ್ಥದಲ್ಲಿ ಏನೂ ವ್ಯತ್ಯಾಸವಿಲ್ಲದಿದ್ದರೂ, ಆ ಪದಸಮುಚ್ಚಯ ಎರಡು ಬೇರೆ ಬೇರೆಯ ಗುಣಗಳನ್ನು ಪ್ರಕಟಿಸುತ್ತವೆ. ‘ಕುರುಭೂಭೃತ್‌ಬಲತೂಲಕಾಲಪವನಂ’ ಎಂಬ ವಾಕ್ಯದೊಳಗಣ ಪದವಿನ್ಯಾಸಕ್ಕೂ, ‘ಬಂದುದೊಂದು ಮಂದಶ್ವಸನಂ’ ಎಂಬ ವಾಕ್ಯದೊಳಗಣ ಪದವಿನ್ಯಾಸಕ್ಕೂ ವ್ಯತಾಸವಿದೆ. ಈ ಒಂದು ಅಂಶವನ್ನು ಲೆಕ್ಕಕ್ಕೆ ತೆಗೆದುಕೊಂಡು, ಓಜಸ್ಸು, ಪ್ರಸಾದ, ಮಾಧುರ್ಯ ಇತ್ಯಾದಿ ಗುಣಗಳು, ಯಾವ ಯಾವ ಕವಿಯ ಪದರಚನೆಗಳಲ್ಲಿ ಯಾವ ಯಾವ ಪ್ರಮಾಣದಲ್ಲಿ ಕಾಣಿಸಿಕೊಳ್ಳುತ್ತವೆ  ಎನ್ನುವುದರ ಆಧಾರ ಮೇಲೆ ಇದು ವೈದರ್ಭೀ, ಇದು ಗೌಡೀ, ಇದು ಪಾಂಚಾಲೀ ಎಂದು ‘ರೀತಿ’ಗಳನ್ನು ವಿಂಗಡಿಸತೊಡಗಿದರು. “ಮಾಧುರ್ಯ ವ್ಯಂಜಕವಾದ ವರ್ಣಗಳಿಂದಲೂ, ಸಮಾಸವಿಲ್ಲದ ಅಥವಾ ಸಣ್ಣ ಸಣ್ಣ ಸಮಾಸಗಳುಳ್ಳ ಪದಗಳಿಂದಲೂ ಕೂಡಿರುವ ಲಲಿತವಾದ ಪದರಚನೆ-ವೈದರ್ಭೀ; ಓಜೋ ವ್ಯಂಜಕವಾದ ವರ್ಣಗಳಿಂದಲೂ ದೊಡ್ಡ ದೊಡ್ಡ ಸಮಾಸಗಳಿಂದಲೂ ಕೂಡಿರುವ ಆಡಂಬರ ಉಳ್ಳ ಮತ್ತು ಬಿಗಿಯಾದ ಪದ ರಚನೆ-ಗೌಡೀ; ಮಿಕ್ಕ ವರ್ಣಗಳಿಂದ ಕೂಡಿಯೂ ಸಣ್ಣ ಸಣ್ಣ ಸಮಾಸಗಳುಳ್ಳದ್ದಾಗಿಯೂ ಇರುವ ಪದ ರಚನೆ-ಪಾಂಚಾಲೀ.”[5] ಈ ವಿಂಗಡಣೆಯ ಕ್ರಮವನ್ನು ನಿರ್ದುಷ್ಟವಾದುದೆಂದು ಒಪ್ಪಿಕೊಂಡರೂ, ಕೆಲವು ಗುಣಗಳ ಇರುವಿಕೆ ಅಥವಾ ಇಲ್ಲದಿರುವಿಕೆಯಷ್ಟೇ ರೀತಿಯನ್ನು ಕುರಿತ ವಿವರಣೆಗೆ ಸಾಲದು. ಕೇವಲ ಕಾವ್ಯ ಭಾಷೆಯ ರಚನೆ ಮತ್ತು ಆ ರಚನೆಗಳು ಒಳಕೊಳ್ಳುವ ಗುಣಗಳಷ್ಟೆ ಅವರಿಗೆ ಮುಖ್ಯವಾಯಿತೆ ಹೊರತು, ಇಂತಿಂತಹ ಎಡೆಗಳಲ್ಲಿ ಇಂತಿಂತಹ ಗುಣಗಳೇ ಸರಿ ಎಂಬುದನ್ನು ನಿಯಮಿಸತಕ್ಕ ಮೂಲ ಸೂತ್ರ ಯಾವುದು ಎಂಬುದನ್ನು ಈ ವಿಂಗಡಣೆ ಹೇಳುವುದಿಲ್ಲ.  “ಯಾವುದೇ ತತ್ವದ ಆಧಾರವಿಲ್ಲದ, ಕೇವಲ ಪ್ರಯೋಗ ಹಾಗೂ ಸಮೀಕ್ಷೆಯನ್ನು ಅವಲಂಬಿಸುವ, ರೀತಿಯನ್ನು ಕುರಿತ ವಿಶ್ಲೇಷಣೆಯ ಈ ಪ್ರಯತ್ನ, ನಿಜವಾಗಿಯೂ ಭಾರತೀಯ ಚಿಂತನ ವಿಧಾನಕ್ಕೆ ಅನುಗುಣವಾಗಿಲ್ಲ.”[6]

ಗೌಡೀ, ವೈದರ್ಭೀ, ಪಾಂಚಾಲೀ, ಲಾಟೀಯ ಇತ್ಯಾದಿಗಳು, ಕೆಲವು ಗುಣ ವಿಶಿಷ್ಟವಾದ ಬರೆವಣಿಗೆಗಳು ಮಾತ್ರವಲ್ಲದೆ, ಅಂದಿನ ಭಾರತೀಯ ಪ್ರಾದೇಶಿಕ ಕಾವ್ಯ ಸಂಪ್ರದಾಯಗಳನ್ನೂ ಸೂಚಿಸುತ್ತವೆ. ಯಾಕೆಂದರೆ, ಗೌಡ, ವಿದರ್ಭ, ಪಾಂಚಾಲ, ಲಾಟ -ಇವುಗಳು ದೇಶವಾಚಕಗಳು. ಹಿಂದೆ ಈ ದೇಶದ ಬುದ್ಧಿಯ ಭಾಷೆ ಸಂಸ್ಕೃತವಾಗಿದ್ದು, ಅದು ಅಂದಿನ ಭಾರತೀಯ ಭೌಗೋಳಿಕ ಪರಿಸರದಲ್ಲಿ, ಬೇರೆ ಬೇರೆಯ ಪ್ರದೇಶಗಳಲ್ಲಿನ ಸಾಹಿತ್ಯ ರಚನೆಯಲ್ಲಿ ಗುರುತಿಸಬಹುದಾದ ವ್ಯತ್ಯಾಸಗಳನ್ನು ಪಡೆದುಕೊಂಡಿತ್ತೆಂದು ತೋರುತ್ತದೆ. ಒಂದೊಂದು ದೇಶದ ನಡೆ ನುಡಿ ಆಚಾರ ವಿಚಾರ ಇತ್ಯಾದಿಗಳು, ಒಂದೊಂದು ಪ್ರದೇಶಕ್ಕೂ ಬೇರೆ ಬೇರೆಯಾಗಿದ್ದುಕೊಂಡು ಮತ್ತು ಅಲ್ಲಿನ ಪ್ರಾದೇಶಿಕ ಭಾಷೆಯ ಸಂಸರ್ಗ ಇತ್ಯಾದಿಗಳಿಂದ ಕೂಡಾ, ಅಲ್ಲಲ್ಲಿನ ಬದುಕನ್ನು ತಕ್ಕಷ್ಟು ಮಟ್ಟಿಗೆ ಅಭಿವ್ಯಕ್ತಪಡಿಸುವ ಸಾಹಿತ್ಯ ಭಾಷೆಯಲ್ಲಿ ಗುರುತಿಸಬಹುದಾದ ವ್ಯತ್ಯಾಸಗಳನ್ನು ತರಬಲ್ಲುದು. ಮೊಟ್ಟ ಮೊದಲಿಗೆ ಭರತ ತನ್ನ ನಾಟ್ಯಶಾಸ್ತ್ರದಲ್ಲಿ ಈ ಸಂಗತಿಯನ್ನು ಗುರುತಿಸುತ್ತಾನೆ. ಒಂದೊಂದು ದೇಶಕ್ಕೆ ಹೇಗೋ, ಒಂದೊಂದು ಪ್ರಾಂತ್ಯಕ್ಕೂ ವಿಶಿಷ್ಟವಾದ ಪ್ರಾದೇಶಿಕ ಲಕ್ಷಣಗಳಿರುತ್ತವೆ; ಈ ವೈಲಕ್ಷಣ್ಯಗಳು ಅಲ್ಲಲ್ಲಿನ ಜನಗಳ ನಡೆ ನುಡಿಗಳಲ್ಲಿ ಅಭಿವ್ಯಕ್ತವಾಗುತ್ತವೆ. ಇದನ್ನೆ ಭರತ ‘ಪ್ರವೃತ್ತಿ’ ಎಂದು ಕರೆದು, ನಾಟ್ಯ ಈ ಪ್ರವೃತ್ತಿಯ ಅನುಕರಣ  ಎನ್ನುತ್ತಾನೆ. ಬದುಕಿನಲ್ಲಿ ಅಭಿವ್ಯಕ್ತವಾಗುವ ಈ ಪ್ರವೃತ್ತಿಯೆ ಸಾಹಿತ್ಯದ ಅಭಿವ್ಯಕ್ತಿಯಲ್ಲಿ ರೀತಿ ಎನ್ನಿಸಿಕೊಳ್ಳುತ್ತದೆ.[7] ವಾಸ್ತವವಾಗಿ, ಸಾಹಿತ್ಯದ ಭಾಷೆ ಮೂಲತಃ ಆಯಾ ಪ್ರಾದೇಶಿಕ ಭಾಷಾ ವೈಲಕ್ಷಣ್ಯಗಳ ಕಾರಣದಿಂದ ಬೇರೆ ಬೇರೆಯಾಗಿರುವುದರಿಂದ ‘ರೀತಿ’ಗಳಲ್ಲಿಯೂ ವ್ಯತ್ಯಾಸ ಕಾಣಿಸುತ್ತದೆ,* ಎಂಬ ಭರತನ ಈ ಒಳನೋಟವನ್ನು, ಸರಿಯಾಗಿ ಗ್ರಹಿಸದ ಕಾರಣದಿಂದಲೋ ಏನೋ, ಮತ್ತೆ ಮತ್ತೆ ಆಲಂಕಾರಿಕರು ಒಂದೊಂದು ಪ್ರದೇಶದ ಬರವಣಿಗೆಯೊಳಗಣ ರಚನೆಗಳನ್ನು ಮತ್ತು ಅವು ಒಳಗೊಳ್ಳುವ ಗುಣಗಳನ್ನೂ ಲೆಕ್ಕ ಹಾಕುತ್ತಾ ಕುಳಿತುಕೊಂಡರು. ಒಂದು ಪ್ರದೇಶದ ಹಾಗೂ ಮತ್ತೊಂದು ಪ್ರದೇಶದ ಬರವಣಿಗೆಯ ವ್ಯತ್ಯಾಸಗಳನ್ನು ಮಾರ್ಗಭೇದಗಳೆಂದು ಹೆಸರಿಸಿದರು. ಈ ಬಗ್ಗೆ ಮೊಟ್ಟಮೊಡಲು ವಿಚಾರ ಮಾಡಿದವನು ಬಾಣ. ಅವನು ಪ್ರಾದೇಶಿಕವಾದ ಬರವಣಿಗೆಯ ಭೇದಗಳನ್ನು ಎಣಿಸುತ್ತ, ಉತ್ತರದವರಲ್ಲಿ ಶ್ಲೇಷೆಯೂ, ಪಶ್ಚಿಮದವರಲ್ಲಿ ಅರ್ಥ ಪ್ರಾಧಾನ್ಯತೆಯೂ, ದಕ್ಷಿಣದಲ್ಲಿ ಉತ್ಪ್ರೇಕ್ಷಾ ಪ್ರಾಧಾನ್ಯವೂ, ಗೌಡ ದೇಶದ ಮಾರ್ಗದಲ್ಲಿ ಅಕ್ಷರ ಡಂಬರತೆಯೂ ಇದೆ -ಎಂದು ಹೇಳುತ್ತಾ, ಅತ್ಯುತ್ತಮವಾದ ‘ಮಾರ್ಗ’ ಈ ನಾಲ್ಕರ ಲಕ್ಷಣವನ್ನೂ ಒಳಗೊಳ್ಳುತ್ತದೆ ಎನ್ನುತ್ತಾನೆ. ಸಂಸ್ಕೃತ ಭಾಷೆಯ ರಚನಾ ವೈಶಿಷ್ಟ ವನ್ನು ಗಮನದಲ್ಲಿರಿಸಿಕೊಂಡು ಮುಖ್ಯವಾಗಿ ಚರ್ಚಿತವಾಗ ತೊಡಗಿದ ಬರವಣಿಗೆಯ ವಿಧಾನಗಳು ಎರಡೇ -ಒಂದು ವೈದರ್ಭೀ, ಮತ್ತೊಂದು ಗೌಡೀ. ಭಾಮಹ-ದಂಡಿ ಇವರ ಕಾಲಕ್ಕೆ ಈ ಎರಡೂ ಮುಖ್ಯವಾದ ಕಾವ್ಯಮಾರ್ಗಗಳೆಂದು ಪರಿಗಣಿತವಾಗಿದ್ದವು. ಇವುಗಳಲ್ಲಿ ವೈದರ್ಭೀ ಶ್ರೇಷ್ಠವಾದ ಬರವಣಿಗೆ ಎಂದೂ, ಗೌಡೀ ಅಷ್ಟೇನೂ ಶ್ರೇಷ್ಠವಲ್ಲದ ಬರವಣಿಗೆ ಎಂದೂ ಹೇಳಲಾಗುತ್ತಿತ್ತು. ದಂಡಿ “ಮಾತುಗಳ ಮಾರ್ಗ ಅನೇಕವಾಗಿವೆ; ಒಂದೊಂದಕ್ಕೂ ಇರುವ ಭೇದಗಳು ಬಹಳ ಸೂಕ್ಷ . ಆದ್ದರಿಂದ (ಅವೆಲ್ಲವನ್ನೂ ಹೇಳಲು ಹೊರಡದೆ) ಭೇದಗಳು ಸ್ಪಷ್ಟವಾಗಿರುವ ವೈದರ್ಭಿ ಮತ್ತು ಗೌಡೀಯ ಎಂಬ ಎರಡು ಮಾರ್ಗಗಳನ್ನು ಮಾತ್ರ ವಿವರಿಸುತ್ತೇನೆ”[8] ಎನ್ನುತ್ತಾನೆ. ಇವುಗಳಲ್ಲಿ ಹತ್ತು ಗುಣಗಳನ್ನೂ ಉಳ್ಳದ್ದು ವೈದರ್ಭೀ; ಅದರ ವಿಪರ್ಯಾಸವೇ ಗೌಡೀ ಎಂದು ಎರಡು ಮಾರ್ಗಗಳ ವ್ಯತ್ಯಾಸವನ್ನು ವಿವರಿಸುತ್ತಾನೆ. ಎಂದರೆ ಸರ್ವ ಗುಣಸಂಪನ್ನವಾದ ವೈದರ್ಭಿಯೇ ಶ್ರೇಷ್ಠ ಎಂದಂತಾಯಿತು. ಭಾಮಹನೂ ಈ ಎರಡು ‘ಮಾರ್ಗ’ಗಳನ್ನು ಎರಡು ಬಗೆಯ ಕಾವ್ಯಜಾತಿಗಳೆಂದು ತಿಳಿಯುತ್ತಾನೆ. ಅಷ್ಟೇ ಅಲ್ಲ; ಈ ಎರಡರಲ್ಲಿ ಒಂದು ಒಳ್ಳೆಯದೂ ಮತ್ತೊಂದು ಒಳ್ಳೆಯದಲ್ಲ ಎಂಬ ಭಾವನೆಯನ್ನು ಕುರಿತು ಮೊಟ್ಟಮೊದಲಿಗೆ ತನ್ನ ಅಸಮ್ಮತಿಯನ್ನು ದಾಖಲಿಸುತ್ತಾನೆ. “ಇದು ಗೌಡೀಯ, ಇದು ವೈದರ್ಭ ಹೀಗೆ ಬೇರೆ ಬೇರೆ ವಿಂಗಡಿಸುವುದೇತಕ್ಕೆ? ಅಲಂಕಾರಗಳಿಂದ ಕೂಡಿದ್ದು, ಅರ್ಥಪುಷ್ಟಿಯಿಂದ ತುಂಬಿ, ಯುಕ್ತಿ ಯುಕ್ತವಾಗಿರುವುದಲ್ಲದೆ, ಸರಳವೂ ಆಗಿದ್ದರೆ ಗೌಡೀಯವೂ ಒಳ್ಳೆಯದೆ, ವೈದರ್ಭವೂ ಒಳ್ಳೆಯದೆ.”[9] ಒಳ್ಳೆಯ ರೀತಿಯನ್ನು ಅದರ ಸೊಗಸಿಗಾಗಿ ಮೆಚ್ಚಬೇಕೇ ಹೊರತು ಇದು ವೈದರ್ಭೀ, ಆದ್ದರಿಂದ ಒಳ್ಳೆಯದು, ಇದು ಗೌಡೀ, ಆದ್ದರಿಂದ ಚೆನ್ನಾಗಿಲ್ಲ ಎಂದು ಹೇಳುವುದು ಸಮಪರ್ಕವಲ್ಲ ಎಂದ ಭಾಮಹನ ವಾದ ತರ್ಕಬದ್ಧವಾಗಿದೆ. ಯಾಕೆಂದರೆ ಕೆಲವು ವೇಳೆ ಗೌಡೀ ರೀತಿಯಲ್ಲಿ ಬರೆದ ಕೃತಿಗಳು ಚೆನ್ನಾಗಿರಬಹುದು; ವೈದರ್ಭೀ ರೀತಿಯಲ್ಲಿ ಬರೆದ ಕೃತಿಗಳು ಚೆನ್ನಾಗಿಲ್ಲದಿರಬಹುದು. ಜತೆಗೆ ಆಯಾ ಪ್ರದೇಶಗಳವರು, ಒಂದೇ ಒಂದು ನಿಯತವಾದ ‘ರೀತಿ’ಯಲ್ಲಿಯೇ ಕಾವ್ಯರಚನೆ ಮಾಡಬೇಕೆಂದು ಹೇಳುವುದಾಗಲೀ, ಮಾಡುತ್ತಾರೆಂದು ಭಾವಿಸುವುದಾಗಲೀ ಸರಿಯಲ್ಲ.

ಭಾಮಹನ ಈ ವಿಮರ್ಶೆ ಬಂದನಂತರವೂ ಸಹ ‘ರೀತಿ’ಯನ್ನು ಪ್ರದೇಶ ನಿಷ್ಠವಾಗಿ ನೋಡುವ ಹವ್ಯಾಸ ಕಡಿಮೆಯೇನೂ ಆಗಲಿಲ್ಲ. ಜತೆಗೆ ಗೌಡೀ ರೀತಿಯ ಬಗ್ಗೆ ತಾತ್ಸಾರವೂ ವೈದರ್ಭಿಯ ಬಗ್ಗೆ ಮೆಚ್ಚುಗೆಯೂ ಉಳಿದುಕೊಂಡೇ ಬಂತು. ಒಂದು ಪಂಡಿತಪ್ರಿಯವಾದ ಅಕ್ಷರ ಡಂಬರತೆಯ ಗೌಡೀ, ಮತ್ತೊಂದು ಸರ್ವಜನ ಹೃದ್ಯವಾದ ವೈದರ್ಭೀ, ಈ ಎರಡೇ ಬಹುಕಾಲ ಚರ್ಚಿತವಾಗುತ್ತಿದ್ದ ರೀತಿಗಳು. ಪಾಶ್ಚಿಮಾತ್ಯ ಕಾವ್ಯಮೀಮಾಂಸೆಯಲ್ಲಿಯೂ ಮೊದಲಿಗೆ ಎರಡೇ ಶೈಲಿಗಳನ್ನು ಕುರಿತು ಚರ್ಚೆ ನಡೆದಿತ್ತೆಂಬುದನ್ನು ಇಲ್ಲಿ ಗಮನಿಸಬಹುದು.  “ಅರಿಸ್ಟಾಟಲ್‌ನೂ ಹೇಳುವುದು ಎರಡೇ ಶೈಲಿಗಳು. ಒಂದು ಒಳ್ಳೆಯದು ಮತ್ತೊಂದು ಒಳ್ಳೆಯದಲ್ಲದ್ದು. ಒಳ್ಳೆಯದರಲ್ಲಿ ಸರಳತೆ, ಸುಕುಮಾರತೆ, ಓಜಸ್ಸು ಈ ಗುಣಗಳಿವೆ; ಒಳ್ಳೆಯದಲ್ಲದ್ದು, ಜಡವಾದದ್ದು, ದಂಡಿಯು ಹೇಳುವ ಗೌಡೀ ಮಾರ್ಗವನ್ನು ಹೋಲುವಂಥದು.”[10] ರೋಮನ್ ಸಾಹಿತ್ಯ ವಿಮರ್ಶೆಯಲ್ಲಿ ಸಿಸಿರೋ ಎರಡು ಶೈಲಿಗಳನ್ನು ಪ್ರಸ್ತಾಪಿಸುತ್ತಾನೆ: ಒಂದು ವರ್ಣರಂಜಿತವಾದ, ಅಲಂಕಾರ ಪ್ರಚುರವಾದ ಏಶಿಯಾಟಿಕ್ (ಅಥವಾ ಸ್ಥೂಲವಾಗಿ ಪೌರ್ವಾತ್ಯ), ಮತ್ತೊಂದು ಹಿತ ಮಿತವಾದ, ವಿಶೇಷ ಬಿಗಿಯಾದ ಆಟ್ಟಿಕ್ (ಅಥವಾ ಗ್ರೀಕ್).[11] “ಮನುಷ್ಯ ಸ್ವಭಾವವನ್ನು ನಾವು ಸ್ಥೂಲವಾಗಿ ಗಣನೆಗೆ ತೆಗೆದುಕೊಂಡಲ್ಲಿ ಎರಡು ಮುಖ್ಯ ಜಾತಿಗಳು ಕಂಡುಬರುತ್ತವೆ. ಪ್ರತಿಯೊಬ್ಬನದೂ ಸರಳ ಸ್ವಭಾವ ಅಥವಾ ಆಡಂಬರದ ಸ್ವಭಾವ. ಅದರಂತೆ ಶೈಲಿಯೂ ಎರಡು ವಿಧವೆನ್ನಬಹುದು: ಸರಳ ಸಾಲಂಕೃತ.”[12] “ಕಾವ್ಯಾಭಿವ್ಯಕ್ತಿಯನ್ನು ಪರಿಶೀಲಿಸಿದರೆ, ಕಡೆಗೆ ನಿಲ್ಲುವುದು ಎರಡೇ ರೀತಿ: ಸರಳವಾದುದು, ಅಕ್ಷರ ಡಂಬರತೆಯಿಂದ ಕೂಡಿದ್ದು; ಸಾಧಾರಣ, ಉದಾತ್ತ; ನಿರಾಲಂಕೃತ ಮತ್ತು ಸಾಲಂಕೃತ. ಮೊದಲನೆಯದು ಸ್ವಭಾವೋಕ್ತಿ ಹಾಗೂ ರಸೋಕ್ತಿಯಾದರೆ, ಎರಡನೆಯದು ವಕ್ರೋಕ್ತಿ.”[13]

ರೀತಿಯನ್ನು ಕುರಿತ ಚರ್ಚೆಯಲ್ಲಿ ವಾಮನನದು ಬಹು ಮುಖ್ಯವಾದ ಹೆಸರು. ಯಾವುದನ್ನು ದಂಡಿಯು ‘ಮಾರ್ಗ’ ಎಂದು ಕರೆದನೋ, ಅದನ್ನೇ ವಾಮನನು ‘ರೀತಿ’ ಎಂದು ಕರೆಯುತ್ತಾನೆ. ಇಲ್ಲಿ “ಪದವೊಂದೇ ಅಲ್ಲ; ಅದರ ಪದವಿಯೂ ಹೊಸತು.”[14] ಕಾವ್ಯದ ಸ್ವಾರಸ್ಯವನ್ನು ಅಲಂಕಾರಗಳಲ್ಲಿ ಅನ್ವೇಷಿಸುತ್ತಿದ್ದ ಪರಿಸರದಲ್ಲಿ, ಅಲಂಕಾರವೆಂದರೆ, ಮೂಲತಃ ಸೌಂದರ್ಯವೇ (ಸೌಂದರ್ಯಮಲಂಕಾರಃ) ಎಂಬ ಹೊಸ ವ್ಯಾಖ್ಯಾನವನ್ನು ನೀಡಿ, ಕಾವ್ಯದ ಆತ್ಮವೇ ರೀತಿ (ರೀತಿರಾತ್ಮಾ ಕಾವ್ಯಸ್ಯ) ಎಂಬ ಹೊಸ ಮಾತನ್ನು ಹೇಳಿದವನು ವಾಮನ. “ವಾಮನನಿಗಿಂತ ಹಿಂದಿನ ಯಾವ ಆಲಂಕಾರಿಕನೂ ಹೀಗೆ ಕಾವ್ಯದ ಆತ್ಮವನ್ನು ವಿಚಾರ ಮಾಡಲು ಹೊರಟಿರಲಿಲ್ಲ.”[15]

ವಾಮನನ ರೀತಿಯ ಸೂತ್ರೀಕರಣ ದಂಡಿ ಭಾಮಹ ಇತ್ಯಾದಿ ಆಲಂಕಾರಿಕರ ವಿವರಣೆಯಿಂದ ಮೂಲತಃ ಭಿನ್ನವಾಗಿದೆ. ರೀತಿ ಎಂದರೆ ‘ವಿಶಿಷ್ಟ ಪದರಚನೆ’ ಎಂದು ಸ್ಪಷ್ಟವಾಗಿ ಹೇಳಿದ್ದಲ್ಲದೆ, ಆ ಪದ ರಚನೆ ಗುಣ ವಿಶಿಷ್ಟವಾದುದೆಂಬುದನ್ನು ಹೇಳಿದನು. ಹಿಂದಿನವರೂ ‘ಗುಣ’ಗಳನ್ನೂ ರೀತಿಯ ಅಥವಾ ಮಾರ್ಗದ ವಿಂಗಡನೆಯಲ್ಲಿ ಎಣಿಸಿದರಾದರೂ, ಗುಣಗಳ ಜತೆಗೆ ಅಲಂಕಾರಗಳೂ ಇರಬೇಕೆಂದು ಹೇಳಿದರು. ಮತ್ತು ಅವರು ಎತ್ತಿ ಹಿಡಿದದ್ದು ಬಂಧದ ಅತಿಶಯತೆಗೆ ಕಾರಣಗಳಾದ ಶಬ್ದಗುಣಗಳನ್ನು. ಶಬ್ದಗುಣಗಳನ್ನು ಮೂಲಮಾನವನ್ನಾಗಿ ಮಾಡಿಕೊಂಡ ‘ರೀತಿ’ಯ ಕಲ್ಪನೆ ಸಾಮಾನ್ಯ ಮಟ್ಟದ್ದಾಗುತ್ತದೆ. ಆದರೆ ವಾಮನನು ರೀತಿಯ ತಳಹದಿಯನ್ನಾಗಿ ಎಣಿಸಿದ್ದು ಅರ್ಥಗುಣಗಳನ್ನು. ಅರ್ಥಗುಣಗಳು ವ್ಯಾಪಕವೂ ರಸ ನಿಶ್ಯಂದಿಗಳೂ ಆಗುತ್ತವೆ. ವಾಮನನು ಹೇಳುವ ಓಜಸ್ಸು, ಪ್ರಸಾದ, ಮಾಧುರ್ಯ ಕಾಂತಿ ಇತ್ಯಾದಿಗಳು ಅರ್ಥಗುಣಗಳು. ಜತೆಗೆ ಈ ಗುಣಗಳೇ ಕಾವ್ಯದ ರೀತಿಯ ಮುಖ್ಯ ಲಕ್ಷಣಗಳೆಂಬಂತೆ ಆತ ನಿರೂಪಿಸುತ್ತಾನೆ.[16] ಗುಣ ವಿಶಿಷ್ಟವಾದ ಪದರಚನೆಯೇ ರೀತಿ ಎಂಬ ಪರಿಕಲ್ಪನೆ ಇಡೀ ಕಾವ್ಯ ಶರೀರವನ್ನು (ಅಲಂಕಾರಗಳನ್ನು ಒಳಗೊಂಡು) ವ್ಯಾಪಿಸುತ್ತದೆ. ಕಾವ್ಯ ಶರೀರದ ಸಮಸ್ತ ಅಭಿವ್ಯಕ್ತಿಯನ್ನೇ ‘ವಿಶಿಷ್ಟ ಪದರಚನೆ’ ಎಂದು ಹೇಳುವ ಈ ವ್ಯಾಖ್ಯಾನ “ಅಲಂಕಾರ ಪ್ರಸ್ಥಾನದವರ ದೃಷ್ಟಿಗಿಂತ ಹೆಚ್ಚು ವ್ಯಾಪಕವೆಂಬುದು ನಿಜ. ಕಾವ್ಯಶರೀರದಲ್ಲಿ ಅಲ್ಲೊಂದು ಇಲ್ಲೊಂದು ಕಡೆ ಮಿನುಗುವ ಅಲಂಕಾರಗಳಿಗಿಂತ, ಅದಷ್ಟನ್ನೂ ಒಳಗೊಳ್ಳುವ ವಚನ ವಿನ್ಯಾಸ ಕ್ರಮದ ವಿಭಜನೆಯಲ್ಲಿ ಕಾವ್ಯದ ತಿರುಳಿಗೆ ಹೆಚ್ಚು ಹತ್ತಿರವಾಗಿ ಬರುತ್ತೇವೆ.[17]

ಗುಣವಿಶಿಷ್ಟವಾದ ಪದರಚನೆಯನ್ನೆ ರೀತಿ ಎಂದ ಹೇಳಿದ ವಾಮನ ಮೂರು ರೀತಿಗಳನ್ನು ಪ್ರಸ್ತಾಪಿಸುತ್ತಾನೆ. ಇದುವರೆಗೆ ಚರ್ಚಿತವಾಗುತ್ತಿದ್ದ, ಗೌಡೀ, ವೈದರ್ಭೀಗಳ ಜತೆಗೆ ಪಾಂಚಾಲಿ ಎಂಬ ಮೂರನೆಯದೊಂದನ್ನು ಸೇರಿಸುತ್ತಾನೆ. ಪಾಂಚಾಲಿ ಎಂಬ ಮೂರನೆಯದೂ ದೇಶ ವಿಶಿಷ್ಟವಾದದ್ದೇ, ಉಳಿದೆರಡರಂತೆ. ಒಂದು ಮುಖ್ಯವಾದ ವ್ಯತ್ಯಾಸವೆಂದರೆ, ಈತ ಹಿಂದಿನವರಂತೆ, ಒಂದಕ್ಕಿಂತ ಇನ್ನೊಂದು ರೀತಿ ಒಳ್ಳೆಯದು ಎನ್ನುವುದಿಲ್ಲ; ರೀತಿಗಳು ಮೂರು ಬಗೆ, ಮತ್ತು “ರೀತಿಗಳಲ್ಲಿ ಕಾಣುವ ಭೇದಕ್ಕೆ ಗುಣಗಳಲ್ಲಿರುವ ಭೇದಗಳೇ ಕಾರಣ”[18] ಎನ್ನುತ್ತಾನೆ. ಹೀಗಿರುವಾಗ ದೇಶವಾಚಕವಾಗಿ ರೀತಿಯನ್ನು ಹೆಸರಿಸುವುದೇತಕ್ಕೆ ಎಂದು ಕೇಳಿದರೆ ಉತ್ತರ, “ವಿದರ್ಭವೇ ಮೊದಲಾದ ದೇಶಗಳಲ್ಲಿ ಕಂಡಿರುವ ಕಾರಣ”[19] ಎಂಬುದು. ಆದರೂ ಅವನು ಬಹುವಾಗಿ ಮೆಚ್ಚಿಕೊಂಡುದು ಮತ್ತು ಎತ್ತಿ ಹಿಡಿದದ್ದು ವೈದರ್ಭಿಯನ್ನೇ.

ರೀತಿಯ ಚರಿತ್ರೆಯಲ್ಲಿ ಎರಡನೆಯ ಹಂತ ಮೊದಲಾದದ್ದು ರುದ್ರಟನಿಂದ. ಈತ ನಾಲ್ಕನೆಯದಾದ ಲಾಟೀಯ ಎಂಬುದನ್ನು ಗುರುತಿಸಿದನಾದರೂ, ಅವನು ಹೇಳಿದ ಹೊಸ ಮಾತೆಂದರೆ, ‘ಗೌಡೀ, ವೈದರ್ಭೀ, ಇತ್ಯಾದಿಗಳನ್ನು ಕೇವಲ ದೇಶನಿಷ್ಠವೆಂದು ಹೇಳುವುದು ಸರಿಯಲ್ಲ; ಯಾವ ಒಂದು ಪ್ರದೇಶದ ಕವಿಯಲ್ಲೂ ಈ ಎಲ್ಲಾ ರೀತಿಗಳೂ ಅಥವಾ ರೀತಿಯಲ್ಲಿರುವ ಗುಣಗಳ ಮಿಶ್ರಣಗಳೂ ಕಾಣಬಹುದು. ವಾಸ್ತವವಾಗಿ ರೀತಿಯಲ್ಲಿ ಭೇದಗಳಾಗುವುದು ಆಯಾ ಕವಿ ನಿರ್ವಹಿಸುವ ವಸ್ತುವಿನಿಂದ. ವಿಷಯ ಔಚಿತ್ಯವೇ, ಕಾವ್ಯದ ವಿವಿಧ ಎಡೆಗಳಲ್ಲಿ ರೀತಿಯನ್ನು ನಿರ್ಣಯಿಸುತ್ತದೆ’ -ಎಂಬುದು. ಇದು ಬಹಳ ಮುಖ್ಯವಾದ ಮಾತು. ಮಹಾಕಾವ್ಯೋಚಿತವಾದ ಅಥವಾ ಸುದೀರ್ಘ ಕಥಾನಿರೂಪಣೆಯನ್ನುಳ್ಳ ವಸ್ತುವನ್ನು ಆರಿಸಿಕೊಂಡು ಕೃತಿರಚನೆ ಮಾಡುವ ಕವಿ, ಸಂದರ್ಭೋಚಿತವಾಗಿ, ವಿವಿಧ ರಸಗಳನ್ನು ಚಿತ್ರಿಸುವ ಕಾವ್ಯಭಾಗಗಳಲ್ಲಿ ಯಾವುದೇ ಒಂದು ‘ರೀತಿ’ಯನ್ನು ಅನುಸರಿಸುವುದು ಅಸಂಭವ; ಅದರ ಬದಲು ಆಯಾ ಸಂದರ್ಭದ ‘ರಸ’ವೇ, ತನ್ನ ‘ರೀತಿ’ಯನ್ನು ನಿರ್ಣಯಿಸುತ್ತದೆ.

ಕಾವ್ಯ ಹಾಗೂ ನಾಟಕಗಳೆರಡರ ಲಕ್ಷಣವನ್ನು ಒಳಗೊಳ್ಳುವಂಥ ಮೊಟ್ಟ ಮೊದಲ ಗ್ರಂಥ ಶೃಂಗಾರಪ್ರಕಾಶವನ್ನು ಬರೆದ ಭೋಜನು, ವೃತ್ತಿ ಹಾಗೂ ರೀತಿಗಳನ್ನು ‘ಅನುಭಾವ’ವೆಂದು ಪರಿಗಣಿಸಬೇಕೆನ್ನುತ್ತಾನೆ. ಇವನು ರೀತಿಗೆ ಪರ‍್ಯಾಯವಾಗಿ ಪಂಥ ಎಂಬ ಮಾತನ್ನು ಬಳಸುತ್ತಾನೆ. ‘ಅನುಭಾವ’ ಎಂದರೆ ನಾಟಕದಲ್ಲಿ, ವ್ಯಕ್ತವಾಗುವ ಭಾವವು ಯಾವುದೆಂಬುದನ್ನು, ಗುರುತಿಸಲು ಸಹಾಯಕವಾದ ನಟನ ಅಂಗಾಭಿನಯಗಳು. ಒಂದು ಮಾತಿನಲ್ಲಿ ಹೇಳಬೇಕಾದರೆ ‘ಅನುಭಾವ’ವು ಅಭಿನಯದ ಭಾಷೆ. ಸಾಹಿತ್ಯದಲ್ಲಿ ಆ ಕೆಲಸವನ್ನು, ಆಯಾ ಸಂದರ್ಭದ ಕವಿಭಾವ ಯಾವುದೆಂಬುದನ್ನು ನಾವು ಗುರುತಿಸಲು ಸಾಧ್ಯವಾಗುತ್ತದೆ. ‘ವೃತ್ತಿ’ ಎಂದರೆ, ನಾಟಕದಲ್ಲಿ ರಸೋಚಿತವಾದ ಅಭಿವ್ಯಕ್ತಿ ಎಂದೇ ಅರ್ಥ. ಈ ವೃತ್ತಿಗಳು ಕೈಶಿಕೀ, ಸಾತ್ವತೀ, ಆರಭಟೀ, ಭಾರತೀ ಎಂದು ನಾಲ್ಕು ಬಗೆಯಾಗಿವೆ. ನಾಟಕದಲ್ಲಿ ಅಭಿನಯಿಸತಕ್ಕ ವಿಷಯಗಳ ಸ್ವರೂಪ ವಿಶೇಷಕ್ಕನುಗುಣವಾಗಿ ಈ ನಾಲ್ಕು ವೃತ್ತಿಗಳನ್ನು ಹೇಳಲಾಗಿದೆ. ರೀತಿಯನ್ನು ಕುರಿತ ಚರ್ಚೆಯ ಸಂದರ್ಭದಲ್ಲಿ, ಮಾಧುರ್ಯ, ಕೋಮಲತೆಗಳನ್ನು ಅಭಿವ್ಯಕ್ತಪಡಿಸಲು ತಕ್ಕದಾದ ವೈದರ್ಭಿಯು ಕೈಶಿಕೀವೃತ್ತಿಗೂ, ಶೃಂಗಾರ ರಸಕ್ಕೂ ಸಂಬಂಧಿಸಲ್ಪಟ್ಟಿತು. ಹಾಗೆಯೆ ಗೌಡಿಯು ಆರಭಟಿಯೊಂದಿಗೆ ಮತ್ತು ರೌದ್ರಾದಿ ರಸಗಳೊಂದಿಗೆ ಸಂಬಂಧಿಸಲ್ಪಟ್ಟಿತು. ಪಾಂಚಾಲೀ ಲಾಟೀಯಗಳೂ ಈ ಎರಡಕ್ಕೂ ಮಧ್ಯವರ್ತಿ ಗಳಾಗಿದ್ದುಕೊಂಡು, ಮೊದಲನೆಯದು ವೈದರ್ಭೀಯ, ಎರಡನೆಯದು ಗೌಡೀಯ ಅಂಶಗಳನ್ನು ಒಳಗೊಳ್ಳತೊಡಗಿದವು. ರೀತಿಯ ಚರ್ಚೆಯನ್ನು ಕುರಿತ ಈ ಹಂತದಲ್ಲಿ ರೀತಿ ಎಂಬುದು, ಪ್ರದೇಶನಿಷ್ಠವಲ್ಲ; ಅದು ವಿಷಯಾನುಸಾರಿಯಾದುದು -ಎಂದು ಹೇಳಿದರೂ, ಇಲ್ಲಿಯೂ ರಸಕ್ಕೆ ರೀತಿಯೊಂದಿಗಿರುವ ಸಂಬಂಧವನ್ನು ಗುರುತಿಸಿದ್ದು ‘ಪದ ಸಂಘಟನೆ’ ಅಥವಾ ‘ಪದ ರಚನೆ’ಗಳ ಮೂಲಮಾನದಲ್ಲೇ.

ಅದೇನೇ ಇರಲಿ, ರೀತಿಯು ವಿಷಯಾನುಸಾರಿಯಾಗಿ ಬೇರೆ ಬೇರೆಯಾಗಿರುತ್ತದೆ; ಯಾವುದೇ ರೀತಿಯನ್ನು ಕೇವಲ ಪ್ರದೇಶ ನಿಷ್ಠವೆಂದು ಎಣಿಸುವುದು ಅಸಮರ್ಪಕ ಎಂಬ ವಿಚಾರ ಮಹತ್ವದ್ದು. ಪಶ್ಚಿಮದ ಕಾವ್ಯಮೀಮಾಂಸೆಯಲ್ಲಿಯೂ ಶೈಲಿಯ ಚರ್ಚೆಯನ್ನು ಕುರಿತ ಸಂದರ್ಭಗಳಲ್ಲಿ ಇದೇ ಮಾತನ್ನು ಅರಿಸ್ಟಾಟಲ್, ಸಿಸಿರೋ, ಹೊರೆಸ್ ಇವರು ಒತ್ತಿ ಹೇಳಿದ್ದಾರೆ. ಉದಾತ್ತ ವಿಷಯಗಳಿಗೆ ಉದಾತ್ತವಾದ ಶೈಲಿಯೇ ಸರಿ, ಎಂಬ ಮಾತು ಪೂರ್ವ ಹಾಗೂ ಪಶ್ಚಿಮದವರ ಜಿಜ್ಞಾಸೆಯಲ್ಲಿ ಸಮಾನವಾಗಿ ಕಂಡು ಬರುವಂಥದ್ದು. ವಸ್ತುವಿಗೆ ಅನುಸಾರವಾಗಿ ಶೈಲಿಯು, ಗಂಭೀರ, ಮಧ್ಯಮ ಮತ್ತು ಸಾಮಾನ್ಯ ಎಂದು ಮೂರು ಬಗೆಯಾಗುತ್ತದೆ ಎಂದು ಡಾಂಟೆ ಹೇಳುತ್ತಾನೆ. ವಿಷಯಾನುಸಾರಿಯಾಗಿ ರೀತಿ ಬದಲಾಗುತ್ತದೆ- ಹರಿಯುವ ಹೊಳೆಯ ಚಲನೆ ಮತ್ತು ವೇಗ, ಅದು ಹರಿಯುವ ನೆಲದ ಏರಿಳಿತಗಳಿಗೆ ಅನುಸಾರವಾಗಿ ಬದಲಾಗುವಂತೆ.

ರೀತಿ ಸಿದ್ಧಾಂತದಲ್ಲಿ ಬಹಳ ಮುಖ್ಯವಾದ ಹಾಗೂ ಸಾರವತ್ತಾದ ವಿಚಾರವೊಂದನ್ನು ಪ್ರತಿಪಾದನೆ ಮಾಡಿದವನು ಕುಂತಕ. ಗೌಡೀ, ವೈದರ್ಭೀ, ಪಾಂಚಾಲೀ ಎಂದು ಪ್ರಾದೇಶಿಕ ಭಾಷಾ ವೈಲಕ್ಷಣ್ಯಗಳನ್ನು ಅವಲಂಬಿಸಿ ಕರೆಯುತ್ತಿದ್ದ ಹೆಸರುಗಳನ್ನು ಅವನು ನಿರಾಕರಿಸುತ್ತಾನೆ. ಅದರ ಬದಲು ಸಂಸ್ಕೃತ ಮಹಾಕವಿ ಕೃತಿಗಳ ಬರವಣಿಗೆಯ ಕ್ರಮವನ್ನು ತನ್ನ ಚರ್ಚೆಗೆ ಮೂಲಮಾನವನ್ನಾಗಿ ಅಂಗೀಕರಿಸುತ್ತಾನೆ. ಜತೆಗೆ ಆಯಾ ಕವಿಗಳ ರೀತಿ ಭೇದಗಳನ್ನು ದಂಡಿಯಂತೆ ‘ಮಾರ್ಗ’ ಎಂದು ಕರೆಯುತ್ತಾನೆ. ಯಾವುದೇ ರೀತಿಯ ಅಥವಾ ಮಾರ್ಗಗಳ ಲಕ್ಷಣವನ್ನು ಅವುಗಳ ಬಂಧ ಗುಣಗಳ ಮೇಲೆ, ಅಂದರೆ ಪದ ರಚನೆಗಳು ಒಳಗೊಳ್ಳುವ ವರ್ಣ ವಿನ್ಯಾಸಗಳ ಮೇಲೆ ಮಾತ್ರ ಗುರುತಿಸುವುದರ ಬದಲು, ಅಲಂಕಾರವನ್ನು ಹಾಗೂ ರಸವನ್ನು ನಿಯೋಜಿಸುವ ಕವಿಮನೋಧರ್ಮದ ಮೇಲಿನಿಂದ ನಿರ್ಣಯಿಸಬೇಕೆನ್ನುವುದು ಅವನ ನಿಲುವು. ಹಾಗೆಯೆ ಯಾವುದೇ ರೀತಿಯನ್ನು ಇದು ಒಳ್ಳೆಯದು, ಇದು ಒಳ್ಳೆಯದಲ್ಲದ್ದು, ಇದು ಆ ದೇಶ ನಿಷ್ಠವಾದದ್ದು, ಇದು ಈ ದೇಶನಿಷ್ಠವಾದದ್ದು ಎಂದು ವಿಂಗಡಿಸಿ ನೋಡುವ ವಿಧಾನವನ್ನು ಅವನು ಒಪ್ಪುವುದಿಲ್ಲ. ನಿಜವಾದ ರೀತಿ ಅಥವಾ ಮಾರ್ಗದ ಶ್ರೇಷ್ಠತೆ ಅಥವಾ ಕನಿಷ್ಠತೆ ಆಯಾ ಕವಿಯ ಪ್ರತಿಭೆ ಹಾಗೂ ವ್ಯುತ್ಪತ್ತಿಗಳ ತಾರತಮ್ಯವನ್ನೂ ಮತ್ತು ಕವಿ ಸ್ವಭಾವವನ್ನೂ ಅವಲಂಬಿಸಿದೆ ಎನ್ನುವುದು ಅವನ ಮತ. ಈ ದೃಷ್ಟಿಯಿಂದ ರೀತಿಯನ್ನು ನಿರ್ಣಯಿಸಬೇಕಾದದ್ದು ಕವಿ ಸ್ವಭಾವದ ಮೇಲಿನಿಂದ. ಯಾಕೆಂದರೆ ಕಾವ್ಯವನ್ನು ಬರೆಯುತ್ತಿರುವವನು ಕವಿ. ಕವಿ ಮೂಲತಃ ಒಬ್ಬ ವ್ಯಕ್ತಿಯಾಗಿರುವುದರಿಂದ, ಆತನಿಗೆ ತನ್ನದೇ ಆದೊಂದು ವ್ಯಕ್ತಿತ್ವವಿರುವುದರಿಂದ, ಮತ್ತು ಆತ ಆ ವ್ಯಕ್ತಿತ್ವಕ್ಕೆ ವಿಶಿಷ್ಟವಾದ ಮನೋಧರ್ಮದ ಮೂಲಕವೆ ಅನುಭವಗಳನ್ನು ಗ್ರಹಿಸುವುದರಿಂದ, ಆತ ಆರಿಸಿಕೊಳ್ಳುವ ವಸ್ತು, ಬಳಸುವ ಭಾಷೆ, ನಿರ್ವಹಿಸುವ ವಿಧಾನ, ಒಟ್ಟಿನಲ್ಲಿ ಇಡೀ ಅವನ ಕಾವ್ಯಾಭಿವ್ಯಕ್ತಿ ಅವನ ವಿಶಿಷ್ಟ ಸ್ವಭಾವದ ಅಭಿವ್ಯಕ್ತಿಯಾಗಿರುವುದು ತೀರಾ ಸಹಜವಾಗಿದೆ. ಕವಿಸ್ವಭಾವವೆಂಬುದು, ಕವಿಯಿಂದ ಕವಿಗೆ ಬೇರೆಯಾಗುವುದರಿಂದ, ಎಷ್ಟು ಜನ ಕವಿಗಳಿದ್ದಾರೋ ಅಷ್ಟೂ ಬಗೆಯ ಕವಿಸ್ವಭಾವಗಳಿರುವುದೂ ಮತ್ತು ಆ ಕಾರಣದಿಂದ ಅಷ್ಟೇ ಮಾರ್ಗ ಭೇದಗಳಿರುವುದು ಸಾಧ್ಯವೆಂದು ಕುಂತಕ ಅಭಿಪ್ರಾಯಪಡುತ್ತಾನೆ. ಆದರೂ ಅವನು ಮಾರ್ಗ ಭೇದಗಳನ್ನು ಮೂರೆಂದು ವಿಭಾಗಿಸಿ, ರೀತಿ ಅಥವಾ ಮಾರ್ಗಗಳನ್ನು ‘ಸುಕುಮಾರ’ ‘ವಿಚಿತ್ರ’ ಮತ್ತು ‘ಮಧ್ಯಮ’ ಎಂದು ಹೆಸರಿಸುತ್ತಾನೆ. ವಾಸ್ತವವಾಗಿ ಮೂರನೆಯದು ಮೊದಲೆರಡರ ಲಕ್ಷಣಗಳ ಸಮ್ಮಿಶ್ರಣ ರೂಪದ್ದು. ಈ ವಿಂಗಡನೆಗಳನ್ನು ಕವಿಗಳ ಬರಹಗಳಿಗೆ ಅನ್ವಯಿಸುತ್ತಾ, ಕಾಳಿದಾಸನನ್ನು ‘ಸುಕುಮಾರ’ ಮಾರ್ಗದ ಪ್ರತಿನಿಧಿ ಎಂದೂ, ಬಾಣನನ್ನು ‘ವಿಚಿತ್ರ’ ಮಾರ್ಗದ ಪ್ರತಿನಿಧಿ ಎಂದೂ, ಕುಂತಕ ಉದಾಹರಿಸುತ್ತಾನೆ. ಈ ಮೂರು ಮಾರ್ಗಗಳಲ್ಲಿಯೂ ಮಾಧುರ್ಯ, ಪ್ರಸಾದ, ಲಾವಣ್ಯ ಇತ್ಯಾದಿ ಗುಣಗಳಿವೆ ಎಂದು ಅವನು ಹೇಳಿದರೂ ಕುಂತಕನ ಪಾಲಿಗೆ ಅವು ವಾಮನನಲ್ಲಿಯಂತೆ ‘ರೀತಿ’ಯನ್ನು ನಿರ್ಣಯಿಸುವ ಮೂಲಮಾನಗಳಲ್ಲ; ಅವುಗಳು ಕಾವ್ಯ ಸೌಂದರ್ಯದ ಛಾಯಾ ವೈಚಿತ್ರ ಗಳು ಮಾತ್ರ. ಹಾಗೆಯೇ ಇವನು ಹೇಳುವ ಮೂರು ಮಾರ್ಗಗಳು, ಹಿಂದಿನವರ ರೀತಿಯ ಪರಿಕಲ್ಪನೆಯಲ್ಲಿದ್ದಂತೆ ಒಂದು ಮತ್ತೊಂದಕ್ಕಿಂತ ಶ್ರೇಷ್ಠವೋ, ಕನಿಷ್ಠವೋ, ಆದವುಗಳಲ್ಲ.[20]

ಕುಂತಕನ ಈ ರೀತಿ ತತ್ವ, ಅವನಿಗಿಂತ ಹಿಂದಿನವರ ರೀತಿಯ ಕಲ್ಪನೆಗಿಂತ ವಿಶಿಷ್ಟವೂ, ಒಂದರ್ಥದಲ್ಲಿ ಸಮಗ್ರವೂ ಆಗಿರುವಂತೆ ತೋರುತ್ತದೆ. ಯಾಕೆಂದರೆ ಕುಂತಕನಿಗಿಂತ ಹಿಂದಿನವರ ರೀತಿ ತತ್ವ, ಕೇವಲ ಗುಣಾಧಾರಿತವಾದದ್ದು. “ಕೇವಲ ಗುಣಾಧಾರಿತ ರೀತಿ ತತ್ವ ಭಾರತೀಯ ಉತ್ಕೃಷ್ಟ ಕಾವ್ಯಗಳ ಅಧ್ಯಯನಕ್ಕೆ ಏನೇನೂ ಸಾಲದು; ಹಾಗೆಯೇ ರೀತಿಗಳು ಮೂರು ಅಥವಾ ನಾಲ್ಕು ಎನ್ನುವುದೂ ಭಾರತೀಯ ಮಹಾಕಾವ್ಯಗಳ ಅಳತೆಗೆ ಸಾಲದು.”[21] ಇದಕ್ಕಿಂತಲೂ ಮುಖ್ಯವಾದ ಇನ್ನೂ ಒಂದು ಮಾತೆಂದರೆ, ಸಂಸ್ಕೃತ ಕಾವ್ಯಭಾಷೆಗೇ ವಿಶಿಷ್ಟವಾದ ಸಮಾಸಯುಕ್ತವಾದ ‘ಪದರಚನೆ’ ‘ಪದಸಂಘಟನೆ’ ‘ವಚೋವಿನ್ಯಾಸಕ್ರಮ’ ಇತ್ಯಾದಿಗಳಲ್ಲಿನ ಗುಣವಿಶಿಷ್ಟತೆಯನ್ನು ಮೂಲ ಮಾನವನ್ನಾಗಿರಿಸಿಕೊಂಡ ವಾಮನ ಮತ್ತಿತರರ ರೀತಿಯ ಚರ್ಚೆಯಿಂದ ನಿಷ್ಪನ್ನವಾಗುವ ಲಕ್ಷಣಗಳನ್ನು, ದೇಸೀ ಪ್ರಧಾನವಾದ ಸಂಸ್ಕೃತೇತರ ಭಾಷಾ ಸಾಹಿತ್ಯ ಕೃತಿಗಳ ರೀತಿಯ ಪರಿಶೀಲನೆಗೆ ಅನ್ವಯಿಸಲು ಬರುವುದಿಲ್ಲ. ಯಾಕೆಂದರೆ ಅವುಗಳ ಭಾಷಾರಚನೆ ಸಂಸ್ಕೃತಕ್ಕಿಂತ ಭಿನ್ನವಾದದ್ದು. ಈ ದೃಷ್ಟಿಯಿಂದ, ಕವಿ ಸ್ವಭಾವವನ್ನು ಮೂಲಮಾನವ ನ್ನಾಗಿಸಿಕೊಂಡು ಒಬ್ಬ ಕವಿಯ ರೀತಿಯನ್ನು ಪರಿಶೀಲಿಸಬೇಕೆನ್ನುವ ಕುಂತಕನ ಸಿದ್ಧಾಂತ, ಎಲ್ಲಾ ಬಗೆಯ ಕಾವ್ಯಗಳ ‘ರೀತಿ’ಗಳನ್ನು ಅರ್ಥಮಾಡಿಕೊಳ್ಳಲು ಉಪಯುಕ್ತವಾಗುವ, ಅತ್ಯಂತ ಆಧುನಿಕವೂ ಹಾಗೂ ಸಮಗ್ರವೂ ಆದ ಒಂದು ತತ್ವವಾಗಿದೆ.

ಇದುವರೆಗೂ ಗಮನಿಸಿದಂತೆ, ಭಾರತೀಯ ರೀತಿ ಸಿದ್ಧಾಂತದ ಚರ್ಚೆ ಮುಖ್ಯವಾಗಿ ಮೂರು ನೆಲೆಗಳ ಮೇಲೆ ನಿಂತಿದೆ: ಮೊದಲನೆಯ ಹಂತದಲ್ಲಿ ಅದು ಕೃತಿಗಳಲ್ಲಿನ ಗುಣ ವಿಶಿಷ್ಟವಾದ ಪದರಚನೆಗಳನ್ನೂ ಮತ್ತು ಆಯಾ ಪ್ರದೇಶಗಳಲ್ಲಿ ಪ್ರಚಲಿತವಾದ ಬರವಣಿಗೆಯ ವೈಲಕ್ಷಣಗಳನ್ನೂ ಮೂಲಮಾನವನ್ನಾಗಿರಿಸಿಕೊಂಡಿದೆ. ಎರಡನೆಯ ಹಂತದಲ್ಲಿ ಅದು ಕವಿ ಆರಿಸಿಕೊಳ್ಳುವ ಮತ್ತು ನಿರ್ವಹಿಸುವ ವಸ್ತು ಅಥವಾ ವಿಷಯವನ್ನು ಮೂಲಮಾನವನ್ನಾಗಿರಿಸಿಕೊಂಡಿದೆ. ಮೂರನೆಯ ಹಂತದಲ್ಲಿ ಅದು, ಕವಿಯ ವ್ಯಕ್ತಿತ್ವವನ್ನು ಅಥವಾ ಸ್ವಭಾವವನ್ನು ಮೂಲಮಾನವನ್ನಾಗಿರಿಸಿ ಕೊಂಡಿದೆ. ಒಂದೊಂದು ಹಂತದಲ್ಲಿ ಒಂದೊಂದು ಅಂಶದ ಮೇಲೆ ಒತ್ತುಬಿದ್ದು, ಚರ್ಚೆ ನಡೆದು ವಿಚಾರವು ಮುಂದುವರಿದಿರುವುದಾದರೂ, ಇಡೀ ಚರ್ಚೆ ಒಟ್ಟಿನಲ್ಲಿ ಎಲ್ಲ ಕಾಲದ ಬರವಣಿಗೆಯಲ್ಲಿಯೂ ಇರಬಹುದಾದ ಮುಖ್ಯವಾದ ಸಂಗತಿಗಳನ್ನು ಗಣನೆಗೆ ತೆಗೆದುಕೊಂಡಿದೆ ಎನ್ನುವುದು ತೀರಾ ಗಮನಾರ್ಹವಾದ ವಿಷಯವಾಗಿದೆ. ಯಾವುದೇ ಕವಿಯ ಅಭಿವ್ಯಕ್ತಿಯಲ್ಲಿ ಅವನ ಭಾಷೆಯ ಬಳಕೆಯ ಹಿನ್ನೆಲೆಗಿರುವ ವಿಶಿಷ್ಟ ಅಂಶಗಳು ಮುಖ್ಯವಾಗಿ ಮೂರು ಎಂದು ಎಣಿಸಬಹುದು. ಒಂದು, ಕವಿ ಬದುಕುವ ಸಾಮಾಜಿಕ ಪರಿಸರದ ಅಥವಾ ಪ್ರದೇಶದ ಭಾಷಾ ವೈಲಕ್ಷಣ್ಯಗಳು ಅವನ ಕಾವ್ಯ ಭಾಷೆಯಲ್ಲಿ ಕಾಣಿಸಿಕೊಳ್ಳುತ್ತವೆ ಮತ್ತು ಬರವಣಿಗೆಯನ್ನು ಇತರರ ಬರವಣಿಗೆಯಿಂದ ಪ್ರತ್ಯೇಕಿಸುವ ಅಂಶಗಳಾಗುತ್ತವೆ. ಎರಡು, ಕವಿ ತನ್ನ ಕೃತಿರಚನೆಗೆ ಆರಿಸಿಕೊಳ್ಳುವ ಕಾವ್ಯ ವಸ್ತುವಿನ ಭಾವ ಅಥವಾ ರಸ, ಅದಕ್ಕುಚಿತವಾಗಿ ಅವನು ಬಳಸುವ ಭಾಷೆಯ ರೂಪವನ್ನು ಅಥವಾ ಅವನ ಅಭಿವ್ಯಕ್ತಿಯ ರೀತಿಯನ್ನು ನಿರ್ಣಯಿಸುತ್ತದೆ. ಮೂರು, ಪ್ರತಿಯೊಬ್ಬ ನಿಜವಾದ ಕವಿಯ ಬರಹದ ಸ್ವರೂಪವನ್ನು, ಅವನದೇ ಆದ ವ್ಯಕ್ತಿವಿಶಿಷ್ಟವಾದ ಮನೋಧರ್ಮ ಅಥವಾ ಸ್ವಭಾವ ನಿರ್ಣಯಿಸುತ್ತದೆ. ಮತ್ತು ಅಂಥ ಬರವಣಿಗೆ ಅವನ ಸ್ವಭಾವಕ್ಕೆ ಅನುಸಾರವಾದುದಾಗಿರುತ್ತದೆ. ಕಾವ್ಯ ಎಂಬುದು ವ್ಯಕ್ತಿ ವಿಶಿಷ್ಟವಾದ ಪದರಚನೆಗಳ ಮೂಲಕ ಅಭಿವ್ಯಕ್ತವಾಗುವ ಕವಿ ಸ್ವಭಾವದ ಪರಿಣಾಮವಾಗಿದೆ ಮತ್ತು ಎಷ್ಟೆಷ್ಟು ಬಗೆಯ ಕವಿ ಸ್ವಭಾವಗಳುಂಟೋ ಅಷ್ಟಷ್ಟೂ ಬಗೆಯ ರೀತಿ ಅಥವಾ ಮಾರ್ಗ ಭೇದಗಳುಂಟು. ಭಾರತೀಯ ರೀತಿ ಸಿದ್ಧಾಂತದ, ಈ ಮೂರನೆಯ ಹಂತದ ಚರ್ಚೆ ಕುಂತಕನಲ್ಲಿ ಕವಿಯ ವ್ಯಕ್ತಿತ್ವವನ್ನು ಕಾವ್ಯ ಚರ್ಚೆಯ ಕೇಂದ್ರವನ್ನಾಗಿ ಮಾಡಿಕೊಂಡದ್ದು ತುಂಬ ಮಹತ್ವದ ಸಂಗತಿಯಾಗಿದೆ. ಕುಂತಕನ ರೀತಿ ಸಿದ್ಧಾಂತ, ಆಶ್ಚರ್ಯಕರವಾಗಿ ಪಾಶ್ಚಿಮಾತ್ಯ ಶೈಲಿ ಸಿದ್ಧಾಂತಕ್ಕೆ ಅತ್ಯಂತ ಸಮೀಪದ್ದಾಗಿದೆ.

ಭಾಷಣದಲ್ಲಾಗಲಿ, ಬರವಣಿಗೆಯಲ್ಲಾಗಲೀ ಭಾಷೆಯನ್ನು ಒಂದು ನಿರ್ದಿಷ್ಟ ಉದ್ದೇಶಕ್ಕಾಗಿ ಹಾಗೂ ಪರಿಣಾಮಕ್ಕಾಗಿ ಬಳಸುವ ಕಲೆಯನ್ನು ಪಾಶ್ಚಿಮಾತ್ಯ ವಿಮರ್ಶಕರು ‘ಸ್ಟೆ ಲ್’ ಎಂದು ಕರೆದು ಅದರ ಲಕ್ಷಣಗಳನ್ನು ಚರ್ಚಿಸಿದ್ದಾರೆ. ‘ಸ್ಟೆ ಲ್’ ಎಂದರೆ ಮೂಲತಃ ಬರವಣಿಗೆಯ ಒಂದು ಸಾಧನ ಎಂದು ಅರ್ಥ. ಇಂಗ್ಲಿಷಿನ ‘ಸ್ಟೆ ಲ್’ ಎಂಬುದು ಲ್ಯಾಟಿನ್ ಭಾಷೆಯ ಸ್ಟೆ ಲಸ್ ಎಂಬ ಪದದಿಂದ ನಿಷ್ಟನ್ನವಾಗಿದೆ. ‘ಸ್ಟೆ ಲಸ್’ ಎಂದರೆ ಪ್ರಾಚೀನ ರೋಮನ್ನರು ಜೇನು ಮೇಣದ ಹಲಗೆಗಳ ಮೇಲೆ ಬರೆಯುವುದಕ್ಕೆ ಬಳಸುತ್ತಿದ್ದ, ಲೋಹದಿಂದಲೋ, ಮೂಳೆಯಿಂದಲೋ ತಯಾರಿಸಲ್ಪಟ್ಟ ಒಂದು ಲೇಖನಿಯಾಕಾರದ ಬರೆಯುವ ಸಾಧನ.* ಕ್ರಮೇಣ ಈ ಮಾತಿನ ಅರ್ಥ ವಿಸ್ತೃತವಾಗಿ, ಒಬ್ಬನ ಬರವಣಿಗೆಯ ರೀತಿ ಎಂದೂ, ತದನಂತರ ಒಬ್ಬನು ತನ್ನನ್ನು ತಾನು ವಿಶಿಷ್ಟವಾದ ರೀತಿಯಲ್ಲಿ ಅಭಿವ್ಯಕ್ತಿಸಿಕೊಳ್ಳುವ ಕ್ರಮ ಎಂದೂ ಅನ್ವಯಿತವಾಗತೊಡಗಿತು.[22] ಸಾಹಿತ್ಯದ ಸಂದರ್ಭದಲ್ಲಿ ಬರವಣಿಗೆಯ ಒಂದು ಕ್ರಮ, ಉತ್ತಮ ಬರವಣಿಗೆಯ ಒಂದು ವಿಧಾನ ಎಂಬ ಅರ್ಥಗಳನ್ನು ಪಡೆದುಕೊಂಡದ್ದಲ್ಲದೆ, ಬದುಕಿನ ವಿವಿಧ ವ್ಯಕ್ತಿಗಳ ನಡವಳಿಕೆಗಳಲ್ಲಿ ವ್ಯಕ್ತವಾಗುವ ಅವರದೇ ಎಂದು ಗುರುತಿಸಬಹುದಾದ ವೈಲಕ್ಷಣ್ಯ ಎಂಬ ಅರ್ಥವ್ಯಾಪ್ತಿಯನ್ನು ಈ ಸ್ಟೆ ಲ್ ಎಂಬ ಪದ ಒಳಗೊಳ್ಳುತ್ತದೆ. ನಮ್ಮ ಆಧುನಿಕ ಸಾಹಿತ್ಯ ಚರ್ಚೆಯ ಸಂದರ್ಭದಲ್ಲಿ, ‘ಸ್ಟೆ ಲ್’ ಎಂಬುದಕ್ಕೆ ಸಂವಾದಿಯಾಗಿ ‘ಶೈಲಿ’ ಎಂಬ ಪದವನ್ನು ಬಳಸಲಾಗುತ್ತಿದೆ. ಸಂಸ್ಕೃತ ಭಾಷೆಯಲ್ಲಿ ಶೈಲಿ ಎಂಬ ಪದವಿದ್ದರೂ, ಅದು ಬರವಣಿಗೆಯ ಒಂದು ವಿಧಾನ ಮತ್ತು ನಡವಳಿಕೆಯ ಒಂದು ಕ್ರಮ ಎನ್ನುವ ಅರ್ಥಗಳನ್ನು ಅದು ಒಳಗೊಳ್ಳುವುದಾದರೂ+ ಭಾರತೀಯ ಕಾವ್ಯಮೀಮಾಂಸೆ ಈ ಪದವನ್ನು, ಕಾವ್ಯದಲ್ಲಿ ಭಾಷೆಯನ್ನು ಬಳಸಿಕೊಳ್ಳುವ ಒಂದು ಕ್ರಮ ಎಂಬ ಅರ್ಥದಲ್ಲಿ ಬಳಸಲೇ ಇಲ್ಲ. ಅದರ ಬದಲು ನಮ್ಮ ಆಲಂಕಾರಿಕರು ಬಳಸಿದ್ದು ‘ರೀತಿ’ ಮತ್ತು ‘ಮಾರ್ಗ’ ಎಂಬ ಪದಗಳನ್ನು. ಆಧುನಿಕ ಸಾಹಿತ್ಯ ವಿಮರ್ಶೆಯಲ್ಲಿ ಮಾತ್ರ ‘ಸ್ಟೆ ಲ್’ ಎಂಬುದಕ್ಕೆ ಸಂವಾದಿಯಾಗಿ ‘ಶೈಲಿ’ ಎಂಬುದನ್ನು ಬಳಸಲಾಗುತ್ತಿದೆ. ‘ಶೀಲಸ್ಯ ಇಯಂ ಶೈಲೀ’ ಎಂಬ ಉಕ್ತಿಯೊಂದು ಕೇಳಿ ಬರುತ್ತಿದ್ದು, ಪ್ರಾಚೀನವೆಂದು ಭ್ರಮೆ ಹುಟ್ಟಿಸುವ ಈ ಸೂತ್ರವನ್ನು ಇತ್ತೀಚೆಗೆ ಯಾರೋ ಮಾಡಿಕೊಂಡಿರಬಹುದೆಂದು ತೋರುತ್ತದೆ. ಶೈಲಿ ಎಂಬ ಈ ಪದ ಕವಿ ಕಾವ್ಯಾಭಿವ್ಯಕ್ತಿಯಲ್ಲಿ ಭಾಷೆಯನ್ನು ವಿಶಿಷ್ಟವಾಗಿ ಬಳಸುವ ಕ್ರಮ ಎಂಬ ಅರ್ಥವನ್ನು, ಹಿಂದಿನ ‘ರೀತಿ’ ಹಾಗೂ ‘ಮಾರ್ಗ’ ಎಂಬ ಪದಗಳಿಗಿಂತ ಭಿನ್ನವಾದ ಮತ್ತು ವ್ಯಾಪಕವಾದ ರೀತಿಯಲ್ಲಿ ಕೊಡುವುದರಿಂದ, ಈ ಪದ ಕಾವ್ಯಮೀಮಾಂಸೆ ಹಾಗೂ ಸಾಹಿತ್ಯ ವಿಮರ್ಶೆಯ ಕ್ಷೇತ್ರಕ್ಕೆ ಒಳ್ಳೆಯ ಕೊಡುಗೆಯಾಗಿದೆ.*

ಶೈಲಿ ಎಂಬ ಮಾತನ್ನು ಸಾಮಾನ್ಯವಾಗಿ ಎರಡು ಅರ್ಥಗಳಲ್ಲಿ ಬಳಸಲಾಗಿದೆ: ಒಂದು, ಭಾಷಣದಲ್ಲಾಗಲೀ ಬರಹದಲ್ಲಾಗಲೀ ಭಾಷೆಯನ್ನು ಬಳಸುವ ಕ್ರಮ; ಎರಡು, ಒಬ್ಬ ಲೇಖಕನನ್ನು ಬರವಣಿಗೆಯೊಂದರಲ್ಲಿ ಗುರುತಿಸಬಹುದಾದಂತಹ ವ್ಯಕ್ತಿ ವಿಶಿಷ್ಟಾಭಿವ್ಯಕ್ತಿ.

ಶೈಲಿಯನ್ನು ಕುರಿತು ಆಧುನಿಕ ಪಾಶ್ಚಾತ್ಯ ಸಾಹಿತ್ಯ ವಿಮರ್ಶಕರು ಹೇಳುವ ಎಷ್ಟೋ ಅಭಿಪ್ರಾಯಗಳಿಗೆ ಹಿನ್ನೆಲೆಯಾಗಿರುವುದು ಗ್ರೀಕ್ ಹಾಗೂ ರೋಮನ್ ಸಾಹಿತ್ಯ ವಿಮರ್ಶೆಯ ಮಾತುಗಳು. ಪ್ರಾಚೀನ ವಿಮರ್ಶರಲ್ಲಿ ಶೈಲಿಯನ್ನು ಕುರಿತು ಮಾತನಾಡಿದ ಎಲ್ಲರೂ, ಮುಖ್ಯವಾಗಿ ಗಮನದಲ್ಲಿರಿಸಿಕೊಂಡದ್ದು ಭಾಷಣ ಶಾಸ್ತ್ರವನ್ನು (Rhetoric). ಪ್ಲೇಟೋನಿಂದ ಹಿಡಿದು ಡಾಂಟೆಯವರೆಗೆ ಸಾಹಿತ್ಯವನ್ನು ಕುರಿತ ಚರ್ಚೆ ಭಾಷಣಶಾಸ್ತ್ರವನ್ನು ಬಿಟ್ಟು ನಡೆದದ್ದೇ ಇಲ್ಲ. ಭಾಷೆಯ ಬಳಕೆ ಹಾಗೂ ಸಾಧಿಸಬೇಕಾದ ಪರಿಣಾಮಗಳು, ಭಾಷಣಶಾಸ್ತ್ರದ ಮುಖ್ಯ ವಿಷಯಗಳು. ಬರವಣಿಗೆ ಕೂಡಾ ಭಾಷೆಯನ್ನು ಬಳಸುವ ಇನ್ನೊಂದು ಕಲೆಯಾದದ್ದರಿಂದ, ವಾಗ್ಮಿತೆಯನ್ನು ಕುರಿತು ಅವರು ಅಭಿವ್ಯಕ್ತಪಡಿಸಿದ ಅಭಿಪ್ರಾಯಗಳು ಬರೆಹದ ಶೈಲಿಗೂ ಅನ್ವಯಿಸುತ್ತವೆ. ಶೈಲಿಯನ್ನು ಕುರಿತು ಮಾತಾಡಿದ ಮೊದಲಿಗರೆಂದರೆ ಪ್ಲೇಟೋ, ಅರಿಸ್ಟಾಟಲ್, ಸಿಸಿರೋ, ಹೋರೆಸ್, ಲಾಂಜಿನಸ್ ಇವರು. ಇವರೆಲ್ಲರ ಅಭಿಪ್ರಾಯಗಳನ್ನು ಕ್ರೋಢೀಕರಿಸಿ ಶೈಲಿಯ ಲಕ್ಷಣವನ್ನು ಹೀಗೆ ಹೇಳಬಹುದು: ಮೊದಲನೆಯದಾಗಿ, ಮಾತನಾಡುವವನಿಗಾಗಲೀ ಬರೆಯುವವನಿಗಾಗಲಿ ಒಂದು ನಿರ್ದಿಷ್ಟವಾದ ವಿಷಯವಿರಬೇಕು. ವಿಷಯವಿದ್ದರಷ್ಟೇ ಸಾಲದು. ಅವನು ಅದನ್ನು ಹೇಗೆ ನಿರೂಪಿಸಬೇಕೆಂಬುದನ್ನು ತಿಳಿದಿರಬೇಕು. ಹಾಗೆ ತಿಳಿದಿದ್ದರೆ ಹೇಳುವ ಮಾತುಗಳಿಗೆ ಒಂದು ವಿಶೇಷ ಲಕ್ಷಣ ಕೂಡಿಕೊಳ್ಳುತ್ತದೆ. ಹೇಗೆ ನಿರೂಪಿಸಬೇಕೆನ್ನುವುದು ತಂತ್ರಕ್ಕೆ ಸಂಬಂಧಪಟ್ಟ ವಿಷಯ. ಇದೂ ಸುಮ್ಮನೆ ಬರುವಂಥದಲ್ಲ. ಸತತ ಪರಿಶ್ರಮದಿಂದ ಸಾಧ್ಯವಾಗತಕ್ಕದ್ದು. ಎರಡನೆಯದಾಗಿ, ಹೇಳುವ ಮಾತುಗಳು ಒಂದು ಕ್ರಮಬದ್ಧವಾದ ರಚನೆಯನ್ನು ಒಳಗೊಂಡಿರಬೇಕು. ಈ ರಚನೆ ಸುಸಂಬದ್ಧವಾಗಿದ್ದು, ನಿಶ್ಚಿತವಾದ ಪರಿಣಾಮವನ್ನು ಸಾಧಿಸುವ ಕಡೆಗಿರಬೇಕು. ಕಡೆಯದಾಗಿ ತಾನು ಯಾರಿಗಾಗಿ ಹೇಳುತ್ತಿದ್ದೇನೆ ಎಂಬ ಎಚ್ಚರ ಇರಬೇಕು; ಇಲ್ಲದಿದ್ದರೆ ಹೇಳಿದ್ದು ನಿಷ್ಫಲವಾದೀತು.

ಶೈಲಿ ಎನ್ನುವುದು ವಿಷಯಕ್ಕೆ ತಕ್ಕ ಭಾಷೆಯನ್ನು ಬಳಸುವುದರ ಮೇಲೆ ನಿಂತಿದೆ. ಭಾಷೆ ಎನ್ನುವುದು ಸದಾ ಪರಿವರ್ತನಶೀಲವಾದದ್ದು. “ಪ್ರತಿವರ್ಷವೂ ಕಾಡಿನಲ್ಲಿ ಹುಟ್ಟಿದ ಎಲೆಗಳು ಮಾಗಿಯಲ್ಲಿ ಒಣಗಿ ಉದುರಿ ಮತ್ತೆ ಹೊಸ ಎಲೆಗಳು ಕಾಣಿಸಿಕೊಳ್ಳುವಂತೆ, ಹಳೆಯ ಪೀಳಿಗೆಯ ಶಬ್ದಗಳೂ ಮುಪ್ಪಿನಿಂದ ಮೃತವಾಗುತ್ತವೆ. ಹೊಸ ಶಬ್ದಗಳು ಹುಟ್ಟಿ ಯುವಕರಂತೆ ಸೊಂಪಾಗಿ ಶಕ್ತಿಪೂರ್ಣವಾಗಿ ಬೆಳೆಯುತ್ತವೆ. ವ್ಯಾವಹಾರಿಕ ಪ್ರಯೋಗದ ಅವಶ್ಯಕತೆಗನುಸಾರವಾಗಿ ಈಗ ರೂಢಿಯಲ್ಲಿ ಕಾಣದಿರುವ ಅನೇಕ ಶಬ್ದಗಳು ಮುಂದೆ ಜನ್ಮ ತಾಳುತ್ತವೆ. ಇನ್ನು ಮಾನ್ಯವಾಗಿರುವ ಅನೇಕವು ಅದೃಶ್ಯವಾಗುತ್ತವೆ. ಪ್ರಯೋಗವೇ ಭಾಷೆಯ ನಿಜವಾದ ಪ್ರಭು, ನಿರ್ಣಾಯಕ ಮತ್ತು ಮಾನದಂಡ.”[23] ಇಂಥ ಭಾಷೆಯ ಜಾಯಮಾನವನ್ನು ಬಲ್ಲ ಕವಿ “ಪದಗಳ ಸಂಯೋಜನೆಯಲ್ಲಿಯೂ ಒಂದು ಪದವನ್ನು ಆರಿಸಿ ಇನ್ನೊಂದನ್ನು ಬಿಡುವಾಗ ಸೂಕ್ಷ್ಮ ವಿವೇಚನೆ ಮತ್ತು ಎಚ್ಚರಗಳಿಂದ ಕೂಡಿರಬೇಕು. ಸಂಘಟನಾ ಕೌಶಲದಿಂದ ರೂಢಿಯ ಪದವೊಂದು ನವೀನವಾಗಿ ಕಾಣುವಂತಾದರೆ ನಿರೂಪಣೆ ಬಹಳ ಶ್ರೇಷ್ಠ ರೀತಿಯದಾಗಿರುತ್ತದೆ”[24] ಕವಿ ಬಳಸುವ ಶೈಲಿಯು ಅವನು ಆರಿಸಿಕೊಳ್ಳುವ ಕಾವ್ಯ ಪ್ರಕಾರ ಹಾಗೂ ವಸ್ತುವಿಗೆ ಅನುಗುಣವಾಗಿರಬೇಕು. ಆಯಾ ಸಾಹಿತ್ಯ ಪ್ರಕಾರದ ಪಾತ್ರಗಳ ಸಾಮಾಜಿಕ ಸ್ತರ ಸ್ವಭಾವ ಹಾಗೂ ಪ್ರದೇಶಗಳಿಗೆ ಅನುಸಾರವಾಗಿರಬೇಕು.  ಇಲ್ಲದಿದ್ದರೆ ಅದು ಅಪಹಾಸ್ಯಕ್ಕೆ ಗುರಿಯಾಗಬೇಕಾಗುತ್ತದೆ.[25] ಭಾಷೆಯಲ್ಲಿ ಕಾಲದಿಂದ ಕಾಲಕ್ಕೆ ವ್ಯತ್ಯಾಸಗಳಾಗುವುದರಿಂದ, ಅಂದಂದಿನ ಕವಿ ಅಂದಂದಿನ ಭಾಷೆಯನ್ನು ಬಳಸಿದಾಗ “ಒಂದೊಂದು ಯುಗಕ್ಕೂ ಅದರದರ ಮಾತಿನ ರೀತಿ ವಿಶಿಷ್ಟ ವಾಗಿರುತ್ತದೆ.[26] “ಹೀಗೆ (ಅಂದಂದಿಗೆ) ಬೇರೆಯಾದ ಭಾಷೆಯನ್ನು ವಿಶಿಷ್ಟವಾದ ರೀತಿಯಲ್ಲಿ ಬಳಸುವುದರಿಂದಲೇ ಕಾವ್ಯತ್ವ ಸಿದ್ಧಿಸುತ್ತದೆ.”[27] ನಿಜವಾದ ಶೈಲಿಯಲ್ಲಿ “ವಿಷಯ ಮತ್ತು ರೀತಿ ಎಂದು ಒಂದರಿಂದೊಂದನ್ನು ಬೇರ್ಪಡಿಸಲಾಗುವುದಿಲ್ಲ.”[28] ಒಳ್ಳೆಯ ಶೈಲಿಯ ಲಕ್ಷಣವೆಂದರೆ, ಅದು ಸಂತೋಷವನ್ನು ಒದಗಿಸುವಂಥದು; ಓದುಗರನ್ನು ತನ್ನ ಮಾಂತ್ರಿಕಶಕ್ತಿಯಿಂದ ಸೆರೆ ಹಿಡಿಯುವಂಥದು; ಇದು ಕೇವಲ ನಿಯಮಪಾಲನೆಯಿಂದಾಗಲೀ, ಕೇವಲ ಪ್ರತಿಭೆ ಅಥವಾ ಕಲೆಗಾರಿಕೆಯಿಂದ ಮಾತ್ರವಾಗಲಿ ಸಿದ್ಧಿಸತಕ್ಕದ್ದಲ್ಲ. ಪ್ರತಿಭೆ ಹಾಗೂ ಕಲೆಗಾರಿಕೆಗಳೆರಡರ ಸಾಹಚರ್ಯದಿಂದ ಸಾಧ್ಯ.[29] ಎಲ್ಲಕ್ಕಿಂತ ಮಿಗಿಲಾಗಿ ಶೈಲಿಯು ಕವಿಯ “ವ್ಯಕ್ತಿತ್ವದ ವಿವಿಧಾಂಗಗಳೆಲ್ಲವೂ ಒಮ್ಮುಖವಾಗಿ ದುಡಿದು ನುಡಿದದ್ದರ ಪರಿಣಾಮ.”[30] ಶೈಲಿಯು ವ್ಯಕ್ತಿ ವಿಶಿಷ್ಟವಾದುದರಿಂದ, ಅದು ಸದಾ ಒಂದೇ ರೀತಿಯದಾಗಿರಲಾರದು, “ಅದು ಬರೆಯುವವನ ಸ್ವಭಾವ, ಸಾಮರ್ಥ್ಯ, ಅಭಿರುಚಿಗಳನ್ನು ಹೇಗೋ ಹಾಗೆ ಪ್ರಸ್ತುತದ ವಿಷಯ ಸಂದರ್ಭ ಉದ್ದೇಶಗಳನ್ನು ಹೊಂದಿಕೊಂಡು, ಬೇರೆ ಬೇರೆಯ ರೂಪಗಳನ್ನು ತಾಳಬೇಕಾಗುತ್ತದೆ.”[31]

ಪಾಶ್ಚಾತ್ಯ ಸಾಹಿತ್ಯ ವಿಮರ್ಶೆಯ ಪ್ರಾಚೀನ ಹಾಗೂ ಮಧ್ಯಯುಗದ ಈ ವಿಚಾರ ಸರಣಿಯನ್ನು ಗಮನಿಸಿದರೆ, ಶೈಲಿಯ ಲಕ್ಷಣವನ್ನು ಕುರಿತು ಮುಂದಿನವರು ಹೇಳಿದ್ದು ಎಷ್ಟೊಂದು ಕಡಿಮೆ ಮತ್ತು ಇವರು ಹೇಳಿದ್ದೆಲ್ಲವೂ ಒಂದಲ್ಲ ಒಂದು ರೀತಿಯಲ್ಲಿ ಆ ಚಿಂತನೆಗಳ ಆಧಾರದ ಮೇಲೆ ಮುಂದುವರಿದದ್ದಾಗಿದೆ ಎನ್ನುವುದು ಸ್ಪಷ್ಟವಾದ ಸಂಗತಿಯಾಗಿದೆ. ಮುಂದಿನ ಸಂಪ್ರದಾಯ ಯುಗದ ಹಾಗೂ ರೋಮ್ಯಾಂಟಿಕ್ ಯುಗದ ಶೈಲಿಯನ್ನು ಕುರಿತ ಚಿಂತನೆಯ ಎಷ್ಟೋ ವಿಚಾರಗಳು, ಪ್ರಾಚೀನ ಹಾಗೂ ಮಧ್ಯಯುಗದ ಬಿತ್ತನೆಯ ಫಲಗಳಾಗಿವೆ ಎಂಬುದು ಗಮನಿಸತಕ್ಕ ಅಂಶವಾಗಿದೆ. ಹಾಗೆಯೇ ಭಾಮಹನಿಂದ ಹಿಡಿದು ಕುಂತಕನವರೆಗೆ ಭಾರತೀಯ ಪರಿಸರದಲ್ಲಿ ರೀತಿ ಮತ್ತು ಮಾರ್ಗಗಳನ್ನು ಕುರಿತು ನಡೆದ ಚರ್ಚೆಯ ಅನೇಕ ಅಂಶಗಳು, ನಮ್ಮಲ್ಲಿನವರಿಗಿಂತ ಹೆಚ್ಚು ಖಚಿತವಾಗಿ ಪಾಶ್ಚಾತ್ಯ ಚಿಂತನಗಳಲ್ಲಿ ಕಾಣಿಸಿಕೊಂಡಿವೆ.


[1] ವಿ.ಎಂ. ಇನಾಂದಾರ್ : ಪಾಶ್ಚಾತ್ಯ ವಿಮರ್ಶೆಯ ಪ್ರಾಚೀನ ಪರಂಪರೆ. ಪು. ೮೫.

[2] ವಾಮನ: ಕಾವ್ಯಾಲಂಕಾರ ಸೂತ್ರ-ವೃತ್ತಿ, ೧-೬, ೭.

[3] ತೀ.ನಂ. ಶ್ರೀಕಂಠಯ್ಯ: ಭಾರತೀಯ ಕಾವ್ಯಮೀಮಾಂಸೆ, ಪು. ೪೧-೪೨.

[4] ಮಮ್ಮಟನ ಕಾವ್ಯ ಪ್ರಕಾಶ. ೮-೧ ಅನು: ಡಾ. ಕೆ. ಕೃಷ್ಣಮೂರ್ತಿ. ಪು. ೨೭೭-೨೭೮.

* ದಂಡಿ ಹೇಳುವ ಹತ್ತು ಗುಣಗಳು ಇವು : ಶ್ಲೇಷ, ಪ್ರಸಾದ, ಸಮತೆ, ಮಾಧುರ್ಯ, ಸೌಕುಮಾರ್ಯ, ಅಭಿವ್ಯಕ್ತಿ, ಉದಾರತ್ವ, ಓಜಸ್ಸು, ಕಾಂತಿ ಮತ್ತು ಸಮಾಧಿ.

[5] ಕನ್ನಡ ಕೈಪಿಡಿ ಸಂಪುಟ ೧. ಭಾಗ ೩ (ಅಲಂಕಾರ : ಎ.ಆರ್. ಕೃಷ್ಣಶಾಸ್ತ್ರೀ) ಪು. ೨೩೩.

[6] Edwin Gerow : A Glossary of Indian Figures of Speach, Introduction, p. 26.

[7] V. Raghavan : Some Concepts of Alankara Shastra, p. 139-140

* ಇಂದಿನ ಕನ್ನಡದ ವಿವಿಧ ಶೈಲಿಗಳನ್ನು ಗಮನಿಸಿದರೂ, ಕರ್ನಾಟಕದ ವಿವಿಧ ಪ್ರಾದೇಶಿಕ ಭಾಷಾ ವೈಲಕ್ಷಣ್ಯಗಳು, ಆಯಾ ಪ್ರಾದೇಶಿಕ ಭಾಷಾಸಾಹಿತ್ಯಾಭಿವ್ಯಕ್ತಿಯಲ್ಲಿ ಕಾಣುತ್ತವೆ. ಮೈಸೂರು ಕನ್ನಡ; ಮಂಗಳೂರು ಕನ್ನಡ; ಮಹಾರಾಷ್ಟ್ರ ಗಡಿಯ ಕನ್ನಡ ಇತ್ಯಾದಿ. ನಮ್ಮ ಕನ್ನಡದ ಪ್ರಮುಖ ಲೇಖಕರ ಬರವಣಿಗೆಯಲ್ಲಿ ಅವರು ಹುಟ್ಟಿ ಬೆಳೆದು ಬಂದ ಪ್ರದೇಶದ ಭಾಷಾ ವೈಲಕ್ಷಣಗಳನ್ನು ಸ್ಪಷ್ಟವಾಗಿ ಗುರುತಿಸಬಹುದು.

[8] ದಂಡಿ : ಕಾವ್ಯಾದರ್ಶ ೧-೪೦ ಅನು: ಡಾ. ಕೆ. ಕೃಷ್ಣಮೂರ್ತಿ, ಪು. ೧೪.

[9] ಭಾಮಹ: ಕಾವ್ಯಾಲಂಕಾರ: ೧-೩೨; ೧-೩೪; ಅನು ಡಾ. ಕೆ. ಕೃಷ್ಣಮೂರ್ತಿ, ಪು. ೧೪

[10] V. Raghavan. Some Concepts of Alankara shastra p. 139-140

[11] ವಿ.ಎಂ. ಇನಾಂದಾರ್: ಪಾಶ್ಚಾತ್ಯ ವಿಮರ್ಶೆಯ ಮಧ್ಯಯುಗ, ಪು. ೨೦.

[12] ಎಸ್.ವಿ. ರಂಗಣ್ಣ : ಶೈಲಿ ೧. ಪು. ೨೩.

[13] V. Raghavan: Some Concepts of Alankara Shastra. p. 139.

[14] ತೀ.ನಂ. ಶ್ರೀಕಂಠಯ್ಯ: ಭಾರತೀಯ ಕಾವ್ಯಮೀಮಾಂಸೆ, ಪು. ೩೩.

[15] ಅಲ್ಲೇ, ಪು. ೩೩.

[16] V. Raghavan: Some Concepts of Alankara Shastra p. 145.

[17] ತೀ.ನಂ. ಶ್ರೀಕಂಠಯ್ಯ: ಭಾರತೀಯ ಕಾವ್ಯಮೀಮಾಂಸೆ, ಪು. ೪೫.

[18] ವಾಮನ: ಕಾವ್ಯಾಲಂಕಾರ ಸೂತ್ರವೃತ್ತಿ: ೧-೧-೧೦. ಅನು: ಡಾ. ಕೆ. ಕೃಷ್ಣಮೂರ್ತಿ, ಪು. ೧೪.

[19] ಅಲ್ಲೇ, ಪು. ೩೩.

[20] V. Raghavan : Some Concepts of Alankara Shastra. p. 163-172.

[21] Edwin Gerow: A Glossary of India Figures of Speech. Introduction p. 35.

* ಆಕ್ಸ್‌ಫರ್ಡ್ ನಿಘಂಟುವಿನಲ್ಲಿ ‘ಯಾವ ವ್ಯಂಗ್ಯವನ್ನೂ ಒಳಗೊಳ್ಳದೆ style ಎಂದರೆ  ಇನ್ನೊಬ್ಬರನ್ನು ತಿವಿಯುವ ಒಂದು ಆಯುಧ, ಎಂಬ ಅರ್ಥವನ್ನು ಕೊಡಲಾಗಿದೆ.

[22] F.L. Lucas: Style, p. 15-16

+ ೧) ಅಭಿನವ ಗುಪ್ತನಲ್ಲಿ ‘ಶೈಲಿ’ ಎಂಬ ಪದದ ಉಲ್ಲೇಖವಿದೆ. ಧ್ವನ್ಯಾಲೋಕ ಲೋಚನ III-4ರವೃತ್ತಿಗೆ ವ್ಯಾಖ್ಯೆ ಬರೆಯುತ್ತಾ ಕಾರಿಕೆಗೂ ವೃತ್ತಿಗೂ ನಿರೂಪಣಾ ವಿಧಾನದಲ್ಲಿ ಇರುವ ವ್ಯತ್ಯಾಸವನ್ನು ವಿವರಿಸುತ್ತಾ, “ವೃತ್ತಿಕಾರೇಣ ತ್ವನ್ವಯ ಪೂರ್ವಕೋ ವ್ಯತಿರೇಕ ಇತಿ ಶೈಲಿ ಮನುಸರ್ತುಮನ್ವಯಃ ಪೂರ್ವಮುಪಾತ್ತಃ” (ವೃತ್ತಿಕಾರನು ಅನ್ವಯದ   ನಂತರ ವ್ಯತಿರೇಕ ಎಂಬ ಶೈಲಿಯನ್ನು ಅನುಸರಿಸಿ ಮೊದಲು ಅನ್ವಯವನ್ನು ವಿವರಿಸಿದ್ದಾನೆ). Hindi Dhvanyaloka With Lochana : Jagannath Pathak 1965 p. 329.

೨) ಮೋನಿಯರ್ ವಿಲಿಯಮ್ಸ್ ಅವರ ನಿಘಂಟುವಿನಲ್ಲಿ ‘ಶೈಲಿ’ ಎಂಬುದಕ್ಕೆ ಕಾವ್ಯಸಾಹಿತ್ಯ ಮತ್ತು ಕಥೆಗಳು ಎಂಬ ಅರ್ಥವನ್ನು ಕೊಡಲಾಗಿದೆ.

೩) ಆಪ್ಟೆಯವರ ಸಂಸ್ಕೃತ ಇಂಗ್ಲಿಷ್ ನಿಘಂಟುವಿನಲ್ಲಿ ‘ಶೈಲಿ’ ಎಂಬುದಕ್ಕೆ ವ್ಯಾಕರಣ ಸೂತ್ರದ ಸಂಕ್ಷಿಪ್ತ ವಿವರಣೆ; ಅಭಿವ್ಯಕ್ತಿಯ ಒಂದು ವಿಧಾನ; ತಮ್ಮ ಅಭಿಪ್ರಾಯವನ್ನು ಇನ್ನೊಬ್ಬರಿಗೆ ಉಪದೇಶಿಸುವ ರೀತಿಯಲ್ಲಿ ಹೇಳುವ ಕ್ರಮ; ನಡವಳಿಕೆ; ಸ್ವಭಾವ, ಕ್ರಮ-ಇತ್ಯಾದಿ ಅರ್ಥಗಳನ್ನು ಕೊಡಲಾಗಿದೆ.

* ಇಂಗ್ಲಿಷಿನ Style ಎಂಬ ಪದಕ್ಕೆ ಸಂವಾದಿಯಾಗಿ ಆಧುನಿಕ ಸಾಹಿತ್ಯ ವಿಮರ್ಶೆಯಲ್ಲಿ ಶೈಲಿ ಎಂಬ ಪದವನ್ನು ಬಳಸಿದವರಲ್ಲಿ ನನ್ನ ಗಮನಕ್ಕೆ ಬಂದ ಮಟ್ಟಿಗೆ, ಆಚಾರ್ಯ ಬಿ.ಎಂ. ಶ್ರೀಕಂಠಯ್ಯನವರೆ ಮೊದಲಿಗರೆಂದು ತೋರುತ್ತದೆ. ಧಾರವಾಡ ವಿದ್ಯಾವರ್ಧಕ ಸಂಘದಲ್ಲಿ ೧೯೧೧ರಲ್ಲಿ ‘ಕನ್ನಡ ಮಾತು ತಲೆ ಎತ್ತುವ ಬಗೆ’ ಎಂಬ ಅವರ ಲಿಖಿತ ಭಾಷಣದಲ್ಲಿ, ೧೯೨೧ರಲ್ಲಿ ತಮ್ಮ ‘ಇಂಗ್ಲಿಷ್ ಗೀತೆಗಳು’ ಪುಸ್ತಕದ ಮುನ್ನುಡಿಯಲ್ಲಿ, ೧೯೨೮ರಲ್ಲಿ ಪ್ರಕಟವಾದ ರನ್ನ ಕವಿ ಪ್ರಶಸ್ತಿಯ ಮುನ್ನುಡಿಯಲ್ಲಿ, ಮತ್ತೆ ಮುಂದೆ ಅನೇಕ ಸಂದರ್ಭಗಳಲ್ಲಿ ‘ಶೈಲಿ’ ಎಂಬ ಪದವನ್ನು ಹೊಸಗನ್ನಡ ವಿಮರ್ಶೆಯ ಬರವಣಿಗೆಯಲ್ಲಿ ಅವರು ಬಳಕೆಗೆ ತಂದಂತೆ ತೋರುತ್ತದೆ.

ನೋಡಿ : ಕನ್ನಡ ಅಧ್ಯಯನ ಸಂಸ್ಥೆ ಪ್ರಕಟಿಸಿರುವ, ಶ್ರೀ ಸಾಹಿತ್ಯ: ಪು. ೨೪೯, ೨೫೧, ೨೭೫, ೨೯೫, ೩೪೪, ೩೪೦.

[23] ಎನ್. ಬಾಲಸುಬ್ರಮಣ್ಯ: ಹೊರೆಸನ ಸಾಹಿತ್ಯ ವಿಮರ್ಶೆ. ಪು. ೧೫೫; ೧೧೭.

[24] ಎನ್. ಬಾಲಸುಬ್ರಮಣ್ಯ: ಹೊರೆಸನ ಪಾಶ್ಚಾತ್ಯ ವಿಮರ್ಶೆಯ ಮಧ್ಯಯುಗ, ಪು.೧೪೪.

[25] ಅಲ್ಲೇ. ೧೧೭, ೧೧೯.

[26] ಸಿಸಿರೋ: ವಿ.ಎಂ. ಇನಾಂದಾರ್: ಪಾಶ್ಚಾತ್ಯ ವಿಮರ್ಶೆಯ ಮಧ್ಯಯುಗ, ಪು. ೩೦.

[27] ಡಾಂಟೆ: ಅಲ್ಲೇ, ಪು. ೧೦೧.

[28] ಸಿಸಿರೋ: ವಿ.ಎಂ. ಇನಾಂದಾರ್, ಅಲ್ಲೇ, ಪು. ೨೪.

[29] ಲಾಂಜಿನಸ್ : ವಿ.ಎಂ. ಇನಾಂದಾರ್: ಪಾಶ್ಚಾತ್ಯ ವಿಮರ್ಶೆಯ ಪ್ರಾಚೀನ ಪರಂಪರೆ, ಪು. ೭೬

[30] ಸಿಸಿರೋ: ವಿ.ಎಂ. ಇನಾಂದಾರ್, ಅಲ್ಲೇ, ಪು. ೨೪.

[31] ವಿ.ಎಂ. ಇನಾಂದಾರ್ : ಪಾಶ್ಚಾತ್ಯ ವಿಮರ್ಶೆಯ ಮಧ್ಯಯುಗ, ಪು. ೨೫.