. ರೂಪಕಲಕ್ಷಣ

ರೂಪಕಮೆಂಬುದು ಪೆಱವರ ರೂಪಾದಿ-ಗುಣಂಗಳಾನಭೇದೋಕ್ತಿಗಳಿಂ |

ರೂಪಿಸುವುದಿಂತು ‘ಬಾಹು-ಲತಾ’ ‘ಪಾದಾಂಬುಜ’-‘ಮುಖೇಂದು’-‘ನಯನಾಳಿ’ಗಳಿಂ ||೧೨||

i) ಸಮಸ್ತರೂಪಕ

ಸ್ಮಿತಕುಸುಮಮಧರಪಲ್ಲವಮತಿಶಯನಯನಾಳಿ ಬಾಹುಶಾಖಂ ಕಾಂತಾ– |

ಲತೆಯಿಂದಿಂತು ಸಮಸ್ತಾಶ್ರಿತಂ ಸಮಸ್ತಂ ಸಮಸ್ತ-ರೂಪಕಮಕ್ಕುಂ ||೧೩||

ii) ವ್ಯಸ್ತರೂಪಕ

ಕುಸುಮಂ ಸ್ಮಿತಮಳಿ ನಯನಂ ಕಿಸಲಯಮಧರಂ ಭುಜ-ದ್ವಯಂ ವಿಟಪಂ ಮ- |

ತ್ತಸು-ವಲ್ಲಭೆ ಲತೆಯೆಂಬುದಿದಸಮಸ್ತಂ ವ್ಯಸ್ತ-ರೂ[1]ಪಕ-ಕ್ರಮಮಖಿಲಂ ||೧೪||

iii) ಸಾವಯವರೂಪಕ

ಸ್ಫುರಿತಾಧರ-ಪಲ್ಲವೆ ಬಂಧುರ-ಲೋಚನ-ಕುಸುಮ ಲೋಲ-ಭೂಜ-ಶಾಖೆ ಮನೋ- |

ಹರೆ ಕಾಂತೆಯೆಂಬುದವಯವ-ನಿರೂಪಣ-ಕ್ರಮದಿನವಯವಂ ರೂಪಕದೊಳ್ ||೧೫||

೧೨-೧೩. ಬೇರೆಯವುಗಳ (=ಪ್ರಕೃತವಲ್ಲದವುಗಳ) ರೂಪ, ಗುಣ ಮುಂತಾದುವನ್ನು ಪ್ರಕೃತ ವಸ್ತುಗಳಲ್ಲಿ ಅಭೇದಾರೋಪಮಾಡಿ (ಇದನ್ನು ಅದೇ ಎಂದು*) ರೂಪಿಸುವುದೇ ‘ರೂಪಕ’ವೆಂಬ ಅಲಂಕಾರ. ಉದಾಹರಣೆಗಳು-ಬಾಹುಲತೆ, ಪಾದಾಂಬುಜ, ಮುಖಚಂದ್ರ, ನಯನಾಳಿ (ನಯನ+‘ಅಳಿ’ ಎಂದರೆ ದುಂಬಿ), ಸ್ಮಿತಕುಸುಮ, ಅಧರಪಲ್ಲವ, ನಯನಾಳಿ (ಇದು ಪುನರುಕ್ತವಾಗಿದೆ; ‘ಕುಂತಳಾಳಿ’ ಎಂದು ಬೇಕಾದರೆ ಪಾಠಾಂತರ ಕಲ್ಪಿಸಿಕೊಂಡು ಪುನರುಕ್ತಿಯನ್ನು ನಿವಾರಿಸಬಹುದು), ಬಾಹುಶಾಖೆ, ಕಾಂತಾಲತೆ. ಈ ಎಲ್ಲ ಉದಾಹರಣೆಗಳೂ ಸಮಸ್ತಪದಗಳಾಗಿರುವುದರಿಂದ ಇಲ್ಲ ರೂಪಕವು ಸಮಾಸವನ್ನಾಶ್ರಯಿಸಿ ಬಂದಿದೆ. ಆದ್ದರಿಂದ ಅದನ್ನು ‘ಸಮಸ್ತರೂಪಕ’ವೆಂದೇ ಕರೆಯಬಹುದು.

೧೪. *ಅಂತಹ ಪದಗಳಲ್ಲೇ ಸಮಾಸ ಬಿಡಿಸಿಯೂ ರೂಪಕವನ್ನು ಹೇಳಬಹುದು-* ಕುಸುಮವೇ ನಗೆ (ಹೋಲಿಸಿ- ‘ಮುಗುಳ್ನಗೆ); ದುಂಬಿಯೇ ಕಣ್ಣು; ಚಿಗುರೇ ತುಟಿ; ಮರದ ಗೊಂಬೆಯೇ ಭುಜದ್ವಯ; ಪ್ರಾಣಕಾಂತೆಯೇ ಲತೆ-ಹೀಗೆ ಸಮಾಸವಿಲ್ಲದೆ (ಬಿಡಿಬಿಡಿಯಾಗಿಯೇ) ರೂಪಕ ಮಾಡಿದ್ದಾರೆ ಅದೆಲ್ಲ ‘ವ್ಯಸ್ತರೂಪಕ’ವೆನಿಸುವುದು.

೧೫. ‘ಕಾಂತೆಯು ಚಂಚಲಾಧರ-ಪಲ್ಲವೆ, ರುಚಿರ-ನೇತ್ರಕುಸುಮೆ, ವಿಲೋಲ-ಭುಜಶಾಖೆ’ ಎನ್ನುವುದು ಒಂದೊಂದು ಅವಯವಗಳ ರೂಪಣವನ್ನೊಳಗೊಳ್ಳುವುದರಿಂದ ‘ಅವಯವ ರೂಪಕ’ (ಅಥವಾ ಸಾವಯವ ರೂಪಕ). *ಇಲ್ಲಿ ಅವಯವಿಯಾದ ಕಾಂತೆಗೆ ಲತೆಯೆಂಬ ಅಭೇದಾರೋಪ ರಸಿಕರಿಂದ ಊಹ್ಯ.*

iv) ಅವಯವಿರೂಪಕ

ತರಳತರ-ಲೋಚನಂ ನಿರ್ಭರ-ರಾಗ-ರಸಂ ಮುಖಾರವಿಂದಂ ನಿನ್ನಾ |

ದೊರೆಕೊಳಿಸಿದೊ[2]ಸಗೆಯೇಂ ಬಂಧುರಮೆಂಬುದಿದವಯವಿ-ಕ್ರಮಂ ರೂಪಕದೊಳ್ ||೧೬||

v) ವಿಷಮರೂಪಕ

ಮೃದುತರ-ಕಪೋಲ-ಫಲಕಂ ವದನಾಂಬುಜಮಾಯತೋನ್ನತ-ಭ್ರೂ-ಚಾಪಂ |

ಮುದಮಂ ಪಡೆದತ್ತೆನಗೆಂಬುದು ವಿಷಮಿತ-ರೂಪ-ವಿಷಮ-ರೂಪಕಮಕ್ಕುಂ ||೧೭||

೧೬. ‘ಚಂಚಲನೇತ್ರವೂ ನಿರ್ಭರಪ್ರೇಮರಸಾನ್ವಿತವೂ ಆದ ನಿನ್ನ ಮುಖಾರವಿಂದವು ಉಂಟುಮಾಡುತ್ತಿರುವ ಆನಂದ ಅದೆಷ್ಟು ಮನೋಹರ!’ ಎಂಬಲ್ಲಿ ಅವಯವಿಯಾದ ಮುಖವನ್ನಷ್ಟೇ ಅರವಿಂದವೆಂದು ರೂಪಣಮಾಡಿ ನಿರ್ದೇಶಿಸಿರುವುದರಿಂದ ಇದು ‘ಅವಯವಿರೂಪಕ’. *ಇಲ್ಲಿ ಕವಿಸಮಯದಂತೆ ಅವಯವಗಳಾದ ನೇತ್ರ-ದುಂಬಿ; ‘ಪ್ರೇಮರಸ’-ಮಕರಂದ, ಮುಂತಾದ ರೂಪಕಗಳು ರಸಿಕರಿಂದ ಊಹ್ಯ.*

೧೭. ‘ಮೃದುತರವಾದ ಕಪೋಲತಲವನ್ನುಳ್ಳುದೂ ವಿಶಾಲ ಮತ್ತು ಉನ್ನತ ಭ್ರೂಚಾಪವನ್ನುಳ್ಳುದೂ ಆದ ವದನಾಂಬುಜವು ನನಗೆ ಆನಂದವನ್ನುಂಟುಮಾಡಿತು’ ಎಂಬಾಗ ‘ವಿಷಮರೂಪಕ’. *ಏಕೆಂದರೆ. ಅವಯವಿಯಾದ ಹುಬ್ಬನ್ನು ಚಾಪವೆಂದೂ ರೂಪಣಮಾಡಿದೆ; ಅದರ ಇನ್ನೊಂದಾದ ಮೃದುಕಪೋಲತಲವನ್ನು ರೂಪಣ ಮಾಡದೆ ಹಾಗೆಯೇ ಬಿಟ್ಟಿದೆ. ಹೀಗೆ ಅಂಗಗಳಲ್ಲಿ ಒಂದನ್ನು ರೂಪಿಸಿ, ಇನ್ನೊಂದನ್ನು ರೂಪಿಸದೆ ಇದ್ದಾಗ ರೂಪಕ ‘ವಿಷಮ’ವೆನಿಸುವುದು. ಹೋಲಿಸಿ-ದಂಡಿ-

ರೂಪಣಾದಂಗಿನೋಂಗಾನಾಂ ರೂಪಣಾಶ್ರಯಾತ್ |

ರೂಪಕಂ ವಿಷಮಂ ನಾಮ….(MM-೭೯).

‘ಅಂಗಿಯ ರೂಪಣ. ಅಂಗಗಳಲ್ಲಿ ಒಂದರ ರೂಪಣ, ಇನ್ನೊಂದರ ಅರೂಪಣವೇ ವಿಷಮ ರೂಪಕಕ್ಕೆ ಆಶ್ರಯವೆಂಬ ಲಕ್ಷಣ ಇಲ್ಲಿ ಸ್ಪಷ್ಟವಿದೆ. ದಂಡಿಯ ಉದಾಹರಣೆಯಲ್ಲಿ ಸಹ ‘ಮದರಕ್ತಕಪೋಲೇನ ಮನ್ಮಥಸ್ತ್ವನ್ನುಖೇಂದುನಾ ನರ್ತಿತಥಭ್ರೂಲತೇನ…(MM-೮೦) ಅಂಗಿಯಾದ ಮುಖ-ಇಂದುಗಳಿಗೆ ರೂಪಣವಿದೆ; ಒಂದು ಅಂಗವಾದ ಭ್ರೂ-ಲತೆಗೂ ರೂಪಣವಿದೆ; ಆದರೆ ಇನ್ನೊಂದು ಅಂಗವಾದ ಕಪೋಲಕ್ಕೆ ರೂಪಣವಿಲ್ಲ ಇಲ್ಲಿ ಪ್ರೊ. ಎಂ. ವಿ. ಸೀತಾರಾಮಯ್ಯನವರು ‘ಕಪೋಲ-ಫಲಕ’ ಎನ್ನುವಾಗ ಫಲಕವೆಂಬುದು ಪದಾರ್ಥಾಂತರವೆಂದೂ, ಆದ್ದರಿಂದ ಕಪೋಲ-ಫಲಕಗಳಿಗೆ ಕೂಡ ರೂಪಣವಿದೆಯೆಂದೂ ಭಾವಿಸಿದ್ದರಿಂದ ಲಕ್ಷ್ಯ-ಲಕ್ಷಣ ಸಮನ್ವಯಕ್ಕಾಗಿ ಬಳಸುದಾರಿ ಹಿಡಿದಿದ್ದಾರೆ. ‘ಪುಟ’, ‘ತಟ’,‘ತಲ’ ಇತ್ಯಾದಿಗಳಂತೆ ‘ಫಲಕವೂ ಸ್ವವಿಶೇಷವಾಚಿಯೇ ಹೊರತು ಪದಾರ್ಥಾಂತರವಾಚಿಯಲ್ಲ. ಉದಾಹರಣೆಗೆ ‘ಲಲಾಟ’-‘ಲಲಾಟಪುಟ’ ಅಥವಾ ‘ಲಲಾಟತಲ’ ಅಥವಾ ‘ಲಲಾಟಫಲಕ’; ‘ಪರ್ಯಂಕ’-‘ಪರ್ಯಂಕತಲ’; ‘ಭೂ’-‘ಭೂತಲ’; ‘ದಿಕ್’-‘ದಿಕ್ತಟ’. ಇತ್ಯಾದಿ ಸಂಸ್ಕೃತ ಪ್ರಯೋಗಗಳನ್ನು ನೋಡಬಹುದು.*

vi) ವಿಶೇಷಣರೂಪಕ

ಜಿನ-ಚರಣ-ನಖಾದರ್ಶಂ ವಿನತಾಮರ-ರಾಜ-ರಾ*ಜಿ-ವದನ-ಪ್ರತಿಮಂ |

ಮನದೊಳ್ ಸಲೆ ನಿಲ್ಕೆಂಬುದು ವಿನಿಶ್ಚಿತ-ವಿಶೇಷಣೋರು-ರೂಪಕಮಕ್ಕುಂ ||೧೮||

೧೮. ‘ವಿನತರಾದ ದೇವತೆಗಳು ಹಾಗೂ ರಾಜರ ಮುಖಗಳೆಂಬ ಪ್ರತಿಮೆ ಎಂದರೆ ಪ್ರತಿಬಿಂಬಗಳನ್ನುಳ್ಳ ಜಿನಪಾದನಖವೆಂಬ ಕನ್ನಡಿ ನಮ್ಮ ಮನಸ್ಸಿನಲ್ಲಿ ಎಂದೆಂದೂ ನಿಲ್ಲಲಿ’ ಎಂಬುದು ವಿಶೇಷಣ-ರೂಪಕ*ಇಲ್ಲಿಯೂ ಮುಳಿಯ ತಿಮ್ಮಪ್ಪಯ್ಯನವರು ಮತ್ತು ಪ್ರೊ. ಎಂ.ವಿ. ಸೀತಾರಾಮಯ್ಯನವರು ಲಕ್ಷ್ಯ-ಲಕ್ಷಣ ಸಮನ್ವಯವನ್ನು ಸರಿಯಾಗಿ ಮಾಡದೆ, ಪಾಠಗಳನ್ನೂ ತಿದ್ದಿ ಪರದಾಡಿದ್ದಾರೆ. ದಂಡಿಯ ಮೂಲದಲ್ಲಿರುವ ಲಕ್ಷ್ಯ-ಲಕ್ಷಣಗಳೇ ತದ್ವತ್ತಾಗಿ ಇಲ್ಲಿಯೂ ಕಾಣಬರುತ್ತಿವೆ. ಇಲ್ಲಿ ವಿಶೇಷಣ-‘ವಿನತಾಮರರಾಜರಾಜಿವದನಪ್ರತಿಮಂ’. ಈ “ವಿಶೇಷಣವು ರೂಪಣಗೊಂಡಿಲ್ಲ” ಎನ್ನುತ್ತಾರೆ ಪ್ರೊ. ಎಂ. ವಿ. ಸೀತಾರಾಮಯ್ಯನವರು. ಇದು ನಮಗೆ ಸೋಜಿಗವೆನಿಸುತ್ತದೆ. ಏಕೆಂದರೆ ವಿಶೇಷ್ಯದಲ್ಲಿ=ನಖದಲ್ಲಿ ‘ಆದರ್ಶ’ ಅಥವಾ ಕನ್ನಡಿಯೆಂಬ ರೂಪಣ *ಇದನ್ನಿದೆಯೆಂದು ಅವರೂ ಒಪ್ಪಿದ್ದಾರೆ* ಇದೆಯೆಂದಮೇಲೆ ಅದು ಏಕೆಂಬ ಸಮರ್ಥನೆ ಅಗತ್ಯವಾಗುತ್ತದೆ. ಆ ಸಮರ್ಥನೆಗಾಗಿ ಒಂದು ಇಡಿಯ ವಿಶೇಷಣ ವಿರುತ್ತದೆ, ಲಕ್ಷಣದ ಪ್ರಕಾರ. ಇಲ್ಲಿ ‘ಮುಖಗಳೆಂಬ ಪ್ರತಿಮೆಗಳನ್ನು (=ಪ್ರತಿಬಿಂಬಗಳನ್ನು) (ತನ್ನಲ್ಲಿ) ತಳೆದಿರುವ’ ಎಂಬುದೇ ಆ ವಿಶೇಷಣ. ಇಲ್ಲಿ ಆ ವಿಶೇಷಣದ ಸಾರ್ಥಕ್ಯವನ್ನು ಮನಗಂಡ ಬಳಿಕವೇ ವಿಶೇಷ್ಯದ ರೂಪಣೆ ಚಮತ್ಕಾರಾವಹವಾಗುತ್ತದೆ ಎಂದರೆ ಔಚಿತ್ಯಪೂರ್ಣವೆನಿಸುತ್ತದೆ. ದಂಡಿಯ ಮೂಲ ಉದಾಹರಣೆಯಲ್ಲಿ (MM-೮೧) ‘ಗಂಗೆಯ ನೀರೆಂಬ ರೇಶಿಮೆಯ ಸೀರೆ ತುದಿಗೆ ಸಿಲುಕಿಕೊಂಡ’ ಹರಿಪಾದ ಎಂಬ ವಿಶೇಷಣದ ರೂಪಕ ಸಿದ್ಧವಾದ ನಂತರವೇ, ವಿಶೇಷ್ಯವಾದ ಹರಿಪಾದ ದೇವತೆಗಳ ಧ್ವಜವಾಗಿದೆ ಎಂಬ ರೂಪಕಕ್ಕೆ ಅನುವು ದೊರೆಯುತ್ತದೆ. ಆ ವಿಶೇಷಣದ ರೂಪಕವಿಲ್ಲವಾಗಿದ್ದರೆ ಈ ವಿಶೇಷ್ಯರೂಪಕವೂ ಸಾರ್ಥಕವೆನಿಸುತ್ತಿರಲಿಲ್ಲ. ಇಲ್ಲಿಯೂ ದೇವತೆಗಳ ವದನಗಳು ಪ್ರತಿಬಿಂಬಿತವಾಗಿರುವ ಎಂಬ ವಿಶೇಷಣದ ಮಹಿಮೆಯನ್ನು ಅವಧಾರಿಸಿದ ಬಳಿಕವೇ ಅದರ ವಿಶೇಷ್ಯವಾದ ಜಿನಪಾದನಖ ಆದರ್ಶ ಅಥವಾ ಕನ್ನಡಿಯಾಗಿದೆಯೆಂಬ ರೂಪಕ ಔಚಿತ್ಯಾವಹವೆನಿಸುತ್ತದೆ. ಇಲ್ಲಿ ‘ಪ್ರತಿಮೆ’ ಎಂಬುದರ ವಾಚ್ಯಾರ್ಥವನ್ನು ವಿಟ್ಟು ಅರ್ಥಾಂತರಗಳನ್ನು ಗ್ರಹಿಸುವುದು ಅನಗತ್ಯ. ಗ್ರಂಥಕಾರನ ಜಿನಭಕ್ತಿಗೆ ಇದೊಂದು ಉತ್ತಮ ನಿದರ್ಶನ. ಇವನು ಇಂದಿನವರಂತೆ ದಂಡಿಯ ಕೇವಲ ಅನುವಾದವನ್ನಷ್ಟೇ ಮಾಡುತ್ತಿಲ್ಲ; ತನ್ನ ಮನೋಧರ್ಮಾನುಸಾರ ಬೇಕಾದಷ್ಟು ಸ್ವಾತಂತ್ರ್ಯವನ್ನು ಗ್ರಂಥ ನಿರೂಪಣೆಯಲ್ಲಿ ಪ್ರದರ್ಶಿಸಿದ್ದಾನೆ.*

vii) ವಿರುದ್ಧರೂಪಕ

ಕಮಲಾಕರದೊಳ್ ಸಂಕೋಚಮನೞಲಂ ಚಕ್ರವಾಕದೊಳ್ ಮಾಡದು ನಿ- |

ನ್ನ ಮುಖೇಂದು-ಬಿಂಬಮಿಂದುಗೆ ಸ[3]ಮನೆಂಬುದು ಮಿಗೆ ವಿರುದ್ಧ-ರೂಪಕಮಕ್ಕುಂ ||೧೯||

viii) ಹೇತುರೂಪಕ

ಕುಲಗಿರಿಯಯ್ ಗೌರವದಿಂ ನೆಲನಯ್ ಸೈರಣೆಯಿನಿಂದುವಯ್ ಶಾಂ[4]ತಿಯಿನಾ- |

ಜಲನಿಧಿಯಯ್ ಗುಣ್ಪಿಂದೆಂದಲಸದೆ ಪೇೞಂತು ಹೇತು-ರೂಪಕ-ವಿಧಿಯಂ ||೨೦||

 

ix) ಶ್ಲಿಷ್ಟರೂಪಕ

ಕುಮುದಾನಂದನ-ಕರವತಿ-ಕಮಲಾಕರ-ರಾಗ-ಹರಮುದಾರಂ ನಿನ್ನಾ |

ವಿಮಳ-ಯಶೋ-ವಿಧುವೆಂಬುದು ಕಮನೀಯಂ ಶ್ಲೇಷ-ರೂಪಕಾಲಂಕಾರಂ ||೨೧||

೧೯. ‘ಕಮಲಾಕರದಲ್ಲಿ’ (=ಕಮಲವನದಲ್ಲಿ) ತಾವರೆ ಹೂಗಳ ಸಂಕೋಚವನ್ನಾಗಲಿ ಚಕ್ರವಾಕಪಕ್ಷಿಯಲ್ಲಿ ವಿರಹತಾಪವನ್ನಾಗಲಿ ಮಾಡದೆ ಇದ್ದರೂ ನಿನ್ನ ಮುಖಚಂದ್ರ ಚಂದ್ರಸದೃಶವೇ ಇದೆ’ ಎಂದರೆ ‘ವಿರುದ್ಧರೂಪಕ’. *ಏಕೆಂದರೆ ಇಲ್ಲಿ ಚಂದ್ರಕಾರ್ಯಗಳನ್ನು ಮಾಡಿಲ್ಲದಿದ್ದರೂ ಚಂದ್ರನೇ ಎಂದರೆ ಚಂದ್ರಸದೃಶನೇ ಎಂಬ ಮಾತು ವಿರೋಧವನ್ನೊಳಗೊಂಡಿದೆ. ಚಂದ್ರನಂತೆ ಆನಂದದಾಯಕವಾಗಿದೆಯೆಂದು ಊಹಿಸಿಕೊಂಡಾಗ ವಿರೋಧ ಪರಿಹೃತವಾಗಿ ‘ವಿರೋಧಾಭಾಸ’ವೆನಿಸುವುದು. ಹೀಗೆ ಉಕ್ತಿಚಮತ್ಕಾರದಿಂದ ಸಾದೃಶ್ಯಮೂಲವಾದ ರೂಪಕಾಲಂಕಾರ ಕೂಡ ವಿರೋಧವನ್ನೊಳಗೊಳ್ಳಬಹುದು.*

೨೦. ‘(ರಾಜನೆ!) ನೀನು ಗುರುತ್ವದಿಂದ ಕುಲಪರ್ವತ; ಸಹನೆಯಿಂದ ಭೂಮಿ; ಶಾಂತಿಯಿಂದ ಚಂದ್ರ; ಗಾಂಭೀರ್ಯದಿಂದ ಸಮುದ್ರ’ ಎಂದಾಗ ರೂಪಕಕ್ಕೆ ಉಚಿತ ಕಾರಣವನ್ನು ಕಲ್ಪಿಸಿರುವುದರಿಂದ ‘ಹೇತುರೂಪಕ’ವೆನಿಸುವುದು *ಹೇತು=ಕಾರಣ*.

೨೧. ‘ನಿನ್ನ ಶ್ರೇಷ್ಠ ಮತ್ತು ನಿರ್ಮಲ ಯಶಶ್ಚಂದ್ರ ಕೂಡ ಕುಮುದ-ಆನಂದ ಕರ, ಕಮಲಾಕರ-ರಾಗದ ಅಪಹಾರಕ’ ಎಂದಾಗ ರಮಣೀಯವಾದ ‘ಶ್ಲಿಷ್ಟರೂಪಕ’. *ಎರಡರ್ಥಗಳಿರುವ ಪದಗಳಿಗೆ ‘ಶ್ಲಿಷ್ಟ’ವೆಂದು ಹೆಸರು. ಪ್ರಕೃತ ಉದಾಹರಣೆಯಲ್ಲಿ ಎರಡು ವಿಶೇಷಣಗಳಿಗೂ ಚಂದ್ರಪರವಾದ ಅರ್ಥ- ಕನ್ನೈದಿಲೆಗೆ ಹರ್ಷಕಾರಿ, ಕಮಲ ವನದ ಕೆಂಬಣ್ಣ ಅಥವಾ ಪ್ರೀತಿಯನ್ನು ಅಪಹರಿಸುವವನು ಎಂದು. ಅದೇ ಪದಗಳಿಗೆ ರಾಜಪರವಾದ ಇನ್ನೊಂದು ಅರ್ಥ-ಭೂಮಿಗೆ ಆನಂದದಾಯಕ, ಲಕ್ಷ್ಮಿಯ ಕರಾನುರಾಗವನ್ನು ಅಪಹರಿಸಿದವನು ಎಂದರೆ ಸಂಪಾದಿಸಿದವನು, ಎಂದು ಹೀಗೆ ಎರಡೆರಡು ಅರ್ಥಗಳಿಂದ ಶ್ಲಿಷ್ಟ ವಿಶೇಷಣಗಳಿರುವುದರಿಂದ ರೂಪಕವು ಶ್ಲಿಷ್ಟರೂಪಕವಾಗಿದೆ.

x) ವಿಭಿನ್ನರೂಪಕ

ಪರಿಚಿತ-ಸನಾಭಿ-ರಾಗಾಂಕುರಜಲಸೇಚಂ ವಿರೋಧಿ-ತರು-ದ[5]ಮದಹನಂ |

ಪರಮೋದಯ-ರವಿ-ಗಗನಂ ಪರಾಕ್ರಮವದೆನೆ ವಿಭಿನ್ನ-ರೂಪಕಮಕ್ಕುಂ ||೨೨||

xi) ರೂಪಕರೂಪಕ

ವದನಾಂಬುಜ-ರಂಗದೊಳೀ ಮದಾಲಸ-ಭ್ರೂ-ಲತಾ-ವಿಲಾಸಿನಿ ಲೀಲಾ- |

ಸ್ಪದ-ನೃತ್ಯಮನಾಗಿಸಿದಪ್ಪದಿದೆಂಬುದು ರೂಪಕೋರು-ರೂಪಕಮಕ್ಕುಂ ||೨೩||

xii) ರೂಪಕಾಪಹ್ನುತಿ

ವದನಮಿದಲ್ತಂಬುರುಹಂ ಮದ-ಲೋಲ-ವಿಲೋಚನಂಗಳಲ್ಲಮಿವಳಿಗಳ್ |

ಮುದಮಲ್ಲಿದು ವಿ[6]ಕಸನಮೆಂಬಿದನಿಂ[7]ಬೆನೆ ಬಗೆಗೆ ರೂಪಕಾಪಹ್ನುತಿಯಂ ||೨೪||

೨೨. ‘ನಿನ್ನ ಪರಾಕ್ರಮವು ಪರಿಚಿತರಾದ ಬಂಧುಗಳ ಪ್ರೇಮಾಂಕುರಕ್ಕೆ ಜಲಸೇಚಕ ಅಥವಾ ನೀರೆರೆಯುವ ಮಳೆಮೋಡ; ವೈರಿಗಳೆಂಬ ಮರಗಳಿಗೆ ಕಾಳ್ಕಿಚ್ಚು; ಪರಮಾಭ್ಯುದಯವೆಂಬ ಸೂರ್ಯನು ಮೂಡುವ ಗಗನ’ ಎಂದರೆ ‘ವಿಭಿನ್ನ-ರೂಪಕ’ *ಇಲ್ಲಿ ಒಂದನ್ನೇ ಎಂದರೆ ಪರಾಕ್ರಮವೊಂದನ್ನೇ ವಿಭಿನ್ನವಾಗಿ ಅಥವಾ ಬೇರೆ ಬೇರೆ ಪ್ರಕಾರವಾಗಿ ರೂಪಿಸಲಾಗಿದೆ. ಒಂದನ್ನೇ ಮೂದೆರನಾಗಿ ರೂಪಿಸಿದೆ. ಒಮ್ಮೆ ಮೋಡವೆಂದು, ಇನ್ನೊಮ್ಮೆ ಕಿಚ್ಚೆಂದು, ಮತ್ತೊಮ್ಮೆ ಗಗನವೆಂದು. ಹೀಗೆ ಪರಿಪರಿಯಿಂದ ರೂಪಿಸುವುದೇ ವಿಭಿನ್ನರೂಪಕ. ಇಲ್ಲಿ ವೈಷಮ್ಯವಾಗಲಿ ವಿರೋಧವಾಗಲಿ ರೂಪಿತವಾಗಲು ಅವಕಾಶವಿಲ್ಲ.*

೨೩. ಈ ಮುಖಕಮಲವೆಂಬ ರಂಗಸ್ಥಲದಲ್ಲಿ ಮದಾಲಸಳಾದ ಭ್ರೂಲತೆಯೆಂಬ ವಿಲಾಸಿನಿಯ ಲೀಲಾನೃತ್ಯಗೈಯುತ್ತಿರುವಳು’ ಎಂಬಲ್ಲಿ ‘ರೂಪಕ-ರೂಪಕ’ ಪ್ರಕಟವಾಗಿದೆ. *ಒಂದು ರೂಪಕದಲ್ಲಿ ಅಂತರ್ಗತವಾಗಿ ಇನ್ನೊಂದು ರೂಪಕ ಬರುವದೇ ಇದರ ಲಕ್ಷಣ. ‘ವದನಾಂಬುಜರಂಗ’ ಎನ್ನುವಾಗ ‘ವದನಾಂಬುಜವೇ ರಂಗವೆಂಬ ಒಟ್ಟುರೂಪಕದ ಮಡಿಲಲ್ಲಿಯೇ ವದನವೇ ಅಂಬುಜವೆಂಬ ಅಂತರ್ಗತ ರೂಪಕವಿದೆ. ಹಾಗೆಯೇ ‘ಭ್ರೂಲತಾವಿಲಾನಿಸಿ’ ಎನ್ನುವಾಗಲೂ ‘ಭ್ರೂಲತೆಯೇ ವಿಲಾಸಿನಿ’ಯೆಂಬ ಒಟ್ಟುರೂಪಕದಲ್ಲಿ ಗರ್ಭೀಕೃತವಾಗಿ ‘ಭ್ರೂ ಎಂಬುದೇ ಲತೆ’ ಎಂಬ ಅಂತರ್ಗತರೂಪಕ ಸೇರಿಕೊಂಡಿದೆ.*

೨೭. ‘ಇದು ಮುಖವಲ್ಲ, ಕಮಲ; ಇವು ಮದಲೋಲ ನಯನಗಳಲ್ಲ, ದುಂಬಿಗಳು; ಇದು ಹರ್ಷವಲ್ಲ, ವಿಕಾಸ’ ಎಂದಾಗ ‘ರೂಪಕಾಪಹ್ನುತಿ’. *ಒಂದು ವಸ್ತುವನ್ನು ಅದಲ್ಲವೆಂದು ಅಲ್ಲಗಳೆದು ಮರೆಯಿಸುವುದೇ ಅಪಹ್ನುತಿ. ಮುಖವನ್ನು ಮುಖವಲ್ಲವೆಂದಾಗ ಅಪಹ್ನುತಿ. ಅದನ್ನು ಕಮಲವೆಂದು ಆರೋಪಿಸಿದಾಗ ರೂಪಕ. ಹೀಗೆ ಇದರಲ್ಲಿ ಅಪಹ್ನುತಿ, ರೂಪಕ, ಎರಡೂ ಕೂಡಿಯೇ ಇರುವುದರಿಂದ ಇದು ‘ರೂಪಕಾಪಹ್ನುತಿ’.*

xiii ) ಯುಕ್ತರೂಪಕ

ಮೊಗಮೆಂಬಂಬುಜದಲರಾ ನಗೆಯೆಂಬ ವಿ[8]ಕಾಸಮೊ[9]ಪ್ಪುವದಱೊಳ್ ಸುೞಗುಂ |

ಮಿಗೆ ಕಣ್ಗಳೆಂಬ ತುಂಬಿಗಳೊಗೆದೊ[10]ಸಗೆಯಿನಿನೆ ಸುಯುಕ್ತರೂಪಕಮಕ್ಕುಂ ||೨೫||

xiv) ವ್ಯಾಜರೂಪಕ

ನಗೆಯೆಂಬ ನೆವದೆ ಬೆಳಗಿನ ಮೊಗಮೆಂಬೀ ನೆವದೆ ತಿಂಗಳೊಳಗೆಸೆದಾದಂ |

ಸೊಗಯಿಸಿ ತೋರ್ಕುಂ ಲೋಚನ-ಯುಗಮೆಂಬೀ ನೆವದೆ ಲಕ್ಷ್ಮಮೆನೆತದ್ವ್ಯಾಜಂ ||೨೬||

 

ವರ-ರೂಪಕ-ಭೇದಮನಿಂತಿರೆ ಪೇೞ್ದೆಂ ಕಿಱದನುೞದುದಂ ಲಕ್ಷ್ಯದೊಳಾ- |

ದರದಱಗೆ ತೋರ್ಪೆನರ್ಥಾಂತರ-ವಿನ್ಯಾಸಕ್ಕೆ ಲಕ್ಷ್ಯ-ಲಕ್ಷಣ-ಯುಗಮಂ ||೨೭||


[1] ರೂಪಗಂ ಕ್ರಮ ‘ಅ’.

[2] ದೊಸಗೆಯಂ ‘ಮ, ಬ’.

* ರಾಜ ‘ಪಾ, ಸೀ’. ಇದು ಅರ್ಥಕ್ಕೆ ಹೊಂದದೆಂದು ಅಲ್ಪವ್ಯತ್ಯಾಸಮಾಡಿ ಪಾಠವನ್ನು ‘ರಾಜಿ’ ಎಂದು ಇಲ್ಲಿ ಪರಿಷ್ಕರಿಸಲಾಗಿದೆ.

[3] ಸಮಮೆಂಬುದು ‘ಬ’.

[4] ಶಾಂತಿಯನಾ ‘ಅ’.

[5] ವನ ‘ಕ’.

[6] ‘ವಿ’ ಲುಪ್ತ ‘ಅ’, ಬ’.

[7] ನಿಂಬನೆ ‘ಪಾ’, ನಿಂಬಿನೆ ‘ಮ’.

[8] ವಿಕಾಸ ‘ಪಾ.

[9] ದೊಪ್ಪುವದಱೊಳ್ ‘ಅ, ಬ’.

[10] ದೊಸೆಗೆಯನೆನೆ ‘ಬ’.