ಸುತ್ತಮುತ್ತ ಹಾರುತಲಿವೆ ರೆಕ್ಕೆಬಂದ ರೇಡಿಯೋ!
ಈ ನಗರದ ನೈರ್ಮಲ್ಯವೆ ಜೀವತಳೆದ ಮೋಡಿಯೋ!
ಆಹಾ ಆಲಿಸಯ್ಯ, ಏನು ಗೀತವಾದ್ಯ ಗಾರುಡಿ
ಒಮ್ಮೆ ಅಲ್ಲಿ, ಒಮ್ಮೆ ಇಲ್ಲಿ, ನಾಕ-ನರಕ ಮೂರಡಿ.

ಸೊಳ್ಳೆ ಎನ್ನಬಹುದೆ ಇಂಥ ಸಂಗೀತದ ಮರಿಗಳ
ಬಿಟ್ಟಿ ಗಾನವೆರೆವ ನೆಲದ ಗಂಧರ್ವರ ಬಳಗವ?
ನಮ್ಮ ದೇಹದಾರೋಗ್ಯವನಳೆವ ರಕ್ತಮಾಪಕ,
ಇವೂ ವೈದ್ಯರೊಂದೆ ಎನಲು ಹೌದಲ್ಲವೆ ರೂಪಕ?

ಓಹೊ ಕೇಳು ಕತ್ತಲನ್ನು ಮಿಡಿದು ಕಡೆದು ಬರುತಿವೆ!
ಸದಾ ಎಚ್ಚರಾಗಿರೆಂದು ಚುಚ್ಚಿ ಚುಚ್ಚಿ ಹಾಡಿವೆ!
ಸೊಳ್ಳೆಪರದೆಯೊಳಗೆ ಕುಳಿತು ಆಲಿಸಯ್ಯ ಗಾನವ
ಇಲ್ಲದಿರಲಿ, ನೀನೆ ಬಲ್ಲೆ ಏನೆಂಬುವ ಅನುಭವ!