ರೆಕ್ಕೆ ಅವರೆ ದ್ವಿದಳ ತರಕಾರಿಗಳ ಗುಂಪಿಗೆ ಸೇರಿದ ಬಳ್ಳಿ. ಕಾಯಿ, ಕಾಳು, ಚಿಗುರು, ಬೇರುಗೆಡ್ಡೆಗಳು ಮುಂತಾದ ಎಲ್ಲ ಭಾಗಗಳೂ ಆಹಾರವಾಗಿ ಉಪಯುಕ್ತ. ಅಧಿಕ ಪ್ರಮಾಣದ ಪ್ರೋಟೀನ್ ಅನ್ನು ಒದಗಿಸುತ್ತದೆ. ಪೌಷ್ಟಿಕ ಗುಣಗಳಲ್ಲಿ ಸೋಯಾ ಅವರೆಯಷ್ಟೆ ಮುಖ್ಯ. ಕಾಳುಗಳಲ್ಲಿ ಹೀಮೋಗ್ಲುಟೆನಿನ್ ಮತ್ತು ಟ್ರಿಪ್ಸಿನ್ ರಾಸಾಯನಿಕ ಪದಾರ್ಥಗಳಿದ್ದು ಅವು ಬೇಯಿಸಿದಾಗ ಅಥವಾ ಹುರಿದಾಗ ಇಲ್ಲದಾಗುತ್ತವೆ. ಹುರಿದ ಕಾಳು ನೆಲಗಡಲೆ ಬೀಜದಂತಿರುತ್ತವೆ. ಒಣಕಾಳುಗಳಿಂದ ಗಿಣ್ಣಿನಂತಹ ಹುಳಿಪದಾರ್ಥವನ್ನು ತಯಾರಿಸುತ್ತಾರೆ. ಇಂಡೋನೇಷ್ಯಾದಲ್ಲಿ ಟೆಂಪೆ ಮತ್ತು ತಾಹು ಎಂಬ ತಿಂಡಿಗಳನ್ನು ತಯಾರಿಸುತ್ತಾರೆ. ಇದರ ಕಾಳುಗಳಿಂದ ತಯಾರಾದ ಹಿಟ್ಟು ಮಕ್ಕಳ ಬಲಹೀನತೆಯನ್ನು ಹೋಗಲಾಡಿಸಬಲ್ಲದು. ಅವುಗಳಲ್ಲಿನ ಟೋಕೋಫೆರಾಲ್ ಪದಾರ್ಥವು ’ಎ’ ಜೀವಸತ್ವ ಹೆಚ್ಚು ಸಮರ್ಥವಾಗಿ ಬಳಕೆಯಾಗಲು ನೆರವಾಗುತ್ತದೆ.

ಪೌಷ್ಟಿಕ ಗುಣಗಳು:

೧೦೦ ಗ್ರಾಂ ಕಾಯಿ ಮತ್ತು ಕಾಳುಗಳಲ್ಲಿನ ವಿವಿಧ ಪೋಷಕಾಂಶಗಳು

  ಕಾಯಿ ಬಲಿತ ಕಾಳು
ತೇವಾಂಶ ೭೬-೯೨ ಗ್ರಾಂ ೬.೭-೨೪.೬ಗ್ರಾಂ
ಶರ್ಕರಪಿಷ್ಟ ೩.೧-೩.೮ಗ್ರಾಂ ೨೮.೬-೫೧.೬ಗ್ರಾಂ
ಪ್ರೊಟೀನ್ ೧.೯-೨.೯ಗ್ರಾಂ ೨೯.೮-೫೭.೪ಗ್ರಾಂ
ಕೊಬ್ಬು ೦.೨-೦.೩ಗ್ರಾಂ ೧೫.೦-೨೦.೪ಗ್ರಾಂ
ಒಟ್ಟು ಖನಿಜ ಪದಾರ್ಥ ೦.೪-೦.೯ಗ್ರಾಂ ೩.೬-೪.೦ಗ್ರಾಂ
ಕ್ಯಾಲ್ಸಿಯಂ ೬೫-೩೫೦ ಮಿ.ಗ್ರಾಂ ೨೦೪-೫೭೦ ಮಿ. ಗ್ರಾಂ
ರೈಬೊಫ್ಲೇವಿನ್ ೦.೧೨ ಗ್ರಾಂ ೦.೨ ಮಿ. ಗ್ರಾಂ
ಥಯಮಿನ್ ೦.೧೨ಗ್ರಾಂ ೧.೪ ಮಿ.ಗ್ರಾಂ
ನಯಾಸಿನ್ ೦.೫೦ ಗ್ರಾಂ
’ಸಿ’ ಜೀವಸತ್ವ ೨೩-೨೭ ಮಿ. ಗ್ರಾಂ
ಟೋಕೋಫೆರಾಲ್   ೧೨೬ ಮಿ.ಗ್ರಾಂ
ನಾರುಪದಾರ್ಥ ೧.೨-೨.೬ ಮಿ.ಗ್ರಾಂ. ೫.೦-೧೨.೦೫ ಗ್ರಾಂ

 

೧೦೦ ಗ್ರಾಂ ಹೂವು, ಎಲೆ ಚಿಗುರು ಮತ್ತು ಗೆಡ್ಡೆಗಳಲ್ಲಿನ ವಿವಿಧ ಪೋಷಕಾಂಶಗಳು

  ಹೂವು ಎಲೆ ಚಿಗುರು ಗೆಡ್ಡೆಗಳು
ತೇವಾಂಶ ೮೪.೨ಗ್ರಾಂ ೬೪.೨-೭೭.೭ ಗ್ರಾಂ.  
ಶರ್ಕರಪಿಷ್ಟ ೨೭.೨ ಗ್ರಾಂ
ಪ್ರೊಟೀನ್ ೫.೬ ಗ್ರಾಂ ೫.೭-೧೫.೦ ಗ್ರಾಂ ೧೨.೨-೧೫.೦ ಗ್ರಾಂ
ಕೊಬ್ಬು ೦೯.ಗ್ರಾಂ ೦.೭-೧.೧ ಗ್ರಾಂ ೦.೫-೧.೧ ಗ್ರಾಂ
ಒಟ್ಟು ಖನಿಜ ಪದಾರ್ಥ ೦.೯ ಗ್ರಾಂ
ನಾರು ಪದಾರ್ಥ ೧೭ ಗ್ರಾಂ
ಕ್ಯಾಲ್ಸಿಯಂ ೦.೦೫ ಗ್ರಾಂ

ಔಷಧೀಯ ಗುಣಗಳು: ಈ ತರಕಾರಿಯಲ್ಲಿ ಹಲವಾರು ಅಮೈನೋ ಆಮ್ಲಗಳಿವೆ. ಚಳಿಗಾಲದಲ್ಲಿ ಶರೀರಕ್ಕೆ ಉಷ್ಣತೆಯನ್ನುಂಟು ಮಾಡುವ ಗುಣಗಳು ಇದರಲ್ಲಿವೆ. ಸಿಪ್ಪೆ ಸಮೇತ ಕಾಳುಗಳನ್ನು ತಿನ್ನುವುದು ಲಾಭದಾಯಕ. ಅದರಿಂದ ಮಲಬದ್ಧತೆ ಮತ್ತು ಹೊಟ್ಟೆಯ ಉಬ್ಬರಗಳು ದೂರವಾಗುತ್ತವೆ.

ಉಗಮ ಮತ್ತು ಹಂಚಿಕೆ : ರೆಕ್ಕೆ ಅವರೆಯ ತವರೂರಿನ ಬಗ್ಗೆ ಮಾಹಿತಿ ಲಭ್ಯವಿಲ್ಲ. ಏಷ್ಯಾದ ಉಷ್ಣಪ್ರದೇಶಗಳು ಇದರ ಮೂಲಸ್ಥಾನವೆಂಬ ಅಭಿಪ್ರಾಯ ಸಹ ಇದೆ. ಬರ್ಕಿಲ್(೧೯೩೫) ಅಭಿಪ್ರಾಯದಲ್ಲಿ ಮಡಗಾಸ್ಕರ್ ಇಲ್ಲವೇ ಮಾರಿಷಸ್‌ನಲ್ಲಿ ಇದು ವಿಕಾಸಗೊಂಡಿದೆ. ನ್ಯೂಗಿನಿ, ವೆಸ್ಟ್ ಇಂಡೀಸ್‌ಗಳೂ ಇದರ ಮೂಲಸ್ಥಾನವಿರಬಹುದು ಎಂದೂ ಸಹ ಅಭಿಪ್ರಾಯ ಪಡುತ್ತಾರೆ. ಅದಕ್ಕೆ ಆಧಾರ ಅಲ್ಲಿಕಂಡುಬರುವ ಹಲವಾರು ಸ್ಥಳೀಯ ಬಗೆಗಳು. ಆಫ್ರಿಕಾದಲ್ಲಿ ಇದರ ಬೇಸಾಯ ಕಡಿಮೆ.

ಸಸ್ಯ ವರ್ಣನೆ: ಇದು ಲೆಗ್ಯೂಮಿನೋಸೀ ಕುಟುಂಬದ ಫ್ಯಾಬೇಸೀ ಉಪಕುಟುಂಬಕ್ಕೆ ಸೇರಿದ ಬಹುವಾರ್ಷಿಕ ಬಳ್ಳಿ ಸಸ್ಯ. ಈ ಬಳ್ಳಿಸಸ್ಯ ಆಸರೆಯ ನೆರವಿನಿಂದ ಮೇಲಕ್ಕೇರಬಲ್ಲದು; ೩ ರಿಂದ ೪ ಮೀಟರ್ ಎತ್ತರಕ್ಕೆ ಬೆಳೆಯಬಲ್ಲದು. ಪ್ರತಿವರ್ಷ ಹೊಸ ಚಿಗುರು ಕಾಣಿಸಿಕೊಂಡು ಎರಡು ಮೂರು ಮೀಟರ್‌ಗಳಷ್ಟು ಉದ್ದಕ್ಕೆ ಸಾಗುತ್ತದೆ. ಕಾಂಡ ಬಲಹೀನ, ಏಣುಗಳು, ಹಸುರು ಬಣ್ಣ.

ಎಲೆಗಳಲ್ಲಿ ತಲಾ ಮೂರು ಉಪಪತ್ರಗಳು, ಎಲೆತೊಟ್ಟು ಉದ್ದ, ಮೇಲ್ಭಾಗದಲ್ಲಿ ಉದ್ದಕ್ಕೆ ಆಳವಾದ ಗೀರು, ಅದರ ಬುಡದಲ್ಲಿ ದೊಡ್ಡ ಕಾವು. ಪರ್ವ ಪುಚ್ಚಗಳು ಹೋಳಾಗಿ ಈಟಿಯಂತೆ ಕಾಣುವುವು. ಉಪ ಎಲೆಗಳು ಅಂಡಾಕಾರ, ಅಂಚು ಒಡೆದಿರುವುದಿಲ್ಲ. ತುದಿ ಚೂಪು, ೮ ರಿಂದ ೧೫ ಸೆಂ.ಮೀ. ಉದ್ದ ಹಾಗೂ ೪ ರಿಂದ ೧೨ ಸೆಂ.ಮೀ ಅಗಲ, ಹಸುರು ಬಣ್ಣ.

ಹೂಗೊಂಚಲು ಉದ್ದ, ೨ರಿಂದ ೧೦ ಹೂಗಳು, ನೀಲಿ ಬಣ್ಣ, ಬಿಳುಪು, ಕೆನ್ನೀಲಿ ಮುಂತಾಗಿ. ರಕ್ಷಾದಳಗಳು ಮತ್ತು ಪುಷ್ಪಪಾತ್ರೆಯ ಎಸಳುಗಳು ಅಂಟಿದಂತೆ, ದೊಡ್ಡ ಪತಾಕಾದಳ, ಮೇಲ್ಮುಖನಾಗಿ ಬಾಗಿರುತ್ತದೆ. ಕೇಸರಗಳಲ್ಲಿ ಒಂದು ಮಾತ್ರ ಬೇರ್ಪಟ್ಟಿರುತ್ತದೆ. ಅಂಡಕೋಶಗಳೂ ಬಹಳ ಉದ್ದ ಶಲಾಕೆ, ಬಾಗಿರುತ್ತದೆ, ಮೇಲೆಲ್ಲಾ ನವಿರಾದ ತುಪ್ಪಳ, ಕಾಯಿಗಳ ಉದ್ದ ೬ ರಿಂದ ೩೬ ಸೆಂ.ಮೀ., ಅಗಲ ೨.೫ ರಿಂದ ೩.೫ ಸೆಂ.ಮೀ. ಗಳಷ್ಟು ಕಾಯಿಗಳ ಉದ್ದಕ್ಕೆ ನಾಲ್ಕು ಏಣುಗಳು, ಅವುಗಳ ಅಂಚುಗಳು ನಿರಿಗೆ ಹಿಡಿದಂತೆ, ಕಾಯಿ ಅಡ್ಡಲಾಗಿ ಕೊಯ್ದಲ್ಲಿ ಶಿಲುಬೆಯ ಆಕಾರ, ಹಸುರು ಬಣ್ಣ, ಉದ್ದಕ್ಕೆ ಸೀಳಿದಂತೆ ಎರಡು ಹೋಳಾಗುತ್ತವೆ, ಕಾಳುಗಳ ಸಂಖ್ಯೆ ೫ ರಿಂದ ೨೦. ಕಾಯಿಗಳ ಬೆಳವಣಿಗೆ ಎರಡು ಹಂತಗಳಲ್ಲಿ ಪೂರ್ಣಗೊಳ್ಳುತ್ತದೆ. ಮೊದಲ ಹಂತದಲ್ಲಿ ಕಾಯಿ ಪೂರ್ಣವೃದ್ಧಿ ಹೊಂದಿದರೆ ಎರಡನೇ ಹಂತದಲ್ಲಿ ಕಾಳು ಬಲಿತು ಪಕ್ವಗೊಳ್ಳುತ್ತವೆ. ಅವುಗಳನ್ನು ಆವರಿಸಿರುವ ಭಾಗ ಸುಕ್ಕುಗಟ್ಟಿ ಒಣಗುತ್ತದೆ. ಮೊದಲ ಹಂತಕ್ಕೆ ೨೦ ದಿನಗಳೂ ಎರಡನೇ ಹಂತಕ್ಕೆ ೪೪ ದಿನಗಳೂ ಹಿಡಿಸುವುದಾಗಿ ತಿಳಿದು ಬಂದಿದೆ. ಕಾಳು ಗುಂಡಗೆ ಗೋಲಿಯಂತೆ, ಸಿಪ್ಪೆ ಬಿಳುಪು, ಹಳದಿ, ಕಂದು, ಕಪ್ಪು ಇತ್ಯಾದಿ ಬಣ್ಣ. ಕೆಲವೊಮ್ಮೆ ಅದರ ಮೇಲೆ ಮಚ್ಚಿಗಳಿರುವುದುಂಟು. ಕಾಯಿ ಒಣಗಿದಾಗ ಕಾಳು ಸುಲಭವಾಗಿ ಬೇರ್ಪಡುವುದಿಲ್ಲ. ಬೀಜ ಮಚ್ಚೆ ಅದರ ಅರ್ಧದಷ್ಟು ಉದ್ದವಿರುತ್ತದೆ, ಅಂಡಾಕಾರ, ನೂರು ಕಾಳುಗಳ ತೂಕ ಸುಮಾರು ೩೦ ಗ್ರಾಂಗಳಷ್ಟು.

ಬೇರು ಸಮೂಹ ದೊಡ್ಡದು, ಗೆಡ್ಡೆಗಳಿರುತ್ತವೆ, ಜೊತೆಗೆ ಅಣುಜೀವಿ ಗಂಟುಗಳೂ ಸಹ ಇರುತ್ತವೆ. ಬಳ್ಳಿಯೊಂದರ ಬೇರುಗಳಲ್ಲಿ ೬೨೦ಕ್ಕೂ ಮೇಲ್ಪಟ್ಟು ಗಂಟುಗಳಿರಬಹುದು. ಒಂದು ಹೆಕ್ಕೇಟರು ಪ್ರದೇಶದಲ್ಲಿನ ಬೇರುಗಂಟುಗಳ ತೂಕ ೦.೮೫ ಟನ್ನುಗಳಷ್ಟು. ಇದುವರೆಗೆ ನಡೆಸಿದ ಅಧ್ಯಯನಗಳಲ್ಲಿ ಅತಿ ಹೆಚ್ಚು ದೊಡ್ಡ ಗಂಟು ೧.೨ ಸೆಂ.ಮೀ ಉದ್ದ, ಅಷ್ಟೇ ಅಗಲ ಮತ್ತು ೦.೬ ಗ್ರಾಂ ತೂಕವಿದ್ದುದು ತಿಳಿದುಬಂದಿದೆ. ಮಲೇಷ್ಯಾದಲ್ಲಿ ನಡೆಸಿದ ಅಧ್ಯಯನಗಳಲ್ಲಿ ಬಿಡಿ ಬಳ್ಳಿಗಳಲ್ಲಲಿ ೪೪೦ ಬೇರುಗಂಟುಗಳಿದ್ದುದು ವರದಿಯಾಗಿದೆ.

ಈ ಗಂಟುಗಳಲ್ಲಿ ರೈಜೋಬಿಯಂ ಅಣುಜೀವಿಗಳಿದ್ದು ಗಾಳಿಯಲ್ಲಿನ  ಸಾರಜನಕವನ್ನು ಹಿಡಿದಿಟ್ಟು ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುತ್ತವೆ.

ಹವಾಗುಣ: ಇದು ಉಷ್ಣವಲಯದ ಬೆಳೆ. ಕಡಿಮೆ ಅವಧಿಯ ಬಿಸಿಲು ಬೆಳಕುಗಳು ಬೇಕು. ಬಿಸಿಯಿಂದ ಕೂಡಿದ ಆರ್ದ್ರ ಹವಾಗುಣ ಬೇಸಾಯಕ್ಕೆ ಬಹು ಸೂಕ್ತ. ಒಣಹವೆ ಇದ್ದರೂ  ಅಡ್ಡಿಯಿಲ್ಲ. ಸಮುದ್ರ ಮಟ್ಟದಿಂದ ೨೦೦೦ ಮೀಟರ್ ಎತ್ತರದವರೆಗೆ ಬೆಳೆಯಬಹುದು. ವಾರ್ಷಿಕ ಮಳೆ ೨೫೦ ಸೆಂ.ಮೀ ಗಳಷ್ಟಿದ್ದರೂ ಹಾನಿಯಿಲ್ಲ. ಅನಾವೃಷ್ಟಿಯನ್ನು ತಡೆದುಕೊಳ್ಳಬಲ್ಲದು.

ಭೂಗುಣ: ಇದಕ್ಕೆ ಗೋಡುಮಣ್ಣಾದಲ್ಲಿ ಉತ್ತಮ. ನೀರು ಬಸಿಯುವ ವ್ಯವಸ್ಥೆ ಇರಬೇಕು.

ತಳಿಗಳು: ಈ ಬೆಳೆಯ ಸುಧಾರಣೆಗೆ ಸಾಕಷ್ಟು ಅವಕಾಶವಿದೆ. ಇದು ಬಳ್ಳಿ ಸಸ್ಯ, ಆಸರೆ ಬೇಕು. ಆಸರೆಯಿಲ್ಲದೆ ಬೆಳೆಯಬಲ್ಲ ತಳಿಗಳು ಅಗತ್ಯವಿದೆ. ಊತಕವಿಧಾನದಲ್ಲಿ ಸಸ್ಯ ಪುನುರುಜ್ಜೀವನ ಮಾಡುವ ಪ್ರಯತ್ನಗಳು ಅಲ್ಲಲ್ಲಿ ನಡೆದಿವೆ. ತಳಿಸಂಗ್ರಹಣೆ ಮತ್ತು ಮಿಶ್ರತಳಿಗಳ ಉತ್ಪಾದನೆಗಳಿಗೆ ಆದ್ಯ ಗಮನ ನೀಡಬೇಕಾಗಿದೆ.

ಈ ಬೆಳೆಯ ತಳಿಗಳ ಸಂಖ್ಯೆ ಕಡಿಮೆ. ಅವುಗಳಲ್ಲಿ ದೊಡ್ಡ ಕಾಯಿ ಮತ್ತು ಸಣ್ಣ ಕಾಯಿಗಳ ಬಗೆಗಳೆಂದು ಎರಡು ಬಗೆ. ಪಪುವಾ ನ್ಯೂಗಿನಿಯಲ್ಲಿ ಇದರ ಒಂದು ನೂರು ತಳಿಗಳಿವೆಯೆಂದು ತಿಳಿದು ಬಂದಿದೆ. ಗೆಡ್ಡೆಗಳಲ್ಲಿ ಕಾಯಿಗಳಲ್ಲಿ ಹಾಗೂ ಕಾಳುಗಳಲ್ಲಿ ಬಹಳಷ್ಟು ವ್ಯತ್ಯಾಸ ಕಂಡುಬರುತ್ತದೆ. ಕೆಲವೊಂದರಲ್ಲಿ ಬೇರುಗೆಡ್ಡೆಗಳಿದ್ದರೆ ಮತ್ತೆ ಕೆಲವೊಂದರಲ್ಲಿ ಇರುವುದಿಲ್ಲ.

ಸಸ್ಯಾಭಿವೃದ್ಧಿ: ಹೆಚ್ಚಾಗಿ ಅನುಸರಿಸುವುದು ಬೀಜ ಪದ್ಧತಿಯನ್ನು. ದೊಡ್ಡ ಗಾತ್ರದ ಹಾಗೂ ಕೀಟ ಮತ್ತು ರೋಗಗಳಿಂದ ಮುಕ್ತವಿರುವ ಕಾಳನ್ನು ಬಿತ್ತಬೇಕು. ಕಾಳು ಬಲುಗಡುಸು. ಬಿತ್ತುವ ಮುಂಚೆ ಸ್ವಲ್ಪ ಕಾಲ ನೀರಿನಲ್ಲಿ ನೆನೆಸಿಟ್ಟರೆ ಮೃದುಗೊಂಡುಬೇಗ ಮೊಳೆಯಬಲ್ಲವು.

ಭೂಮಿ ಸಿದ್ಧತೆ  ಮತ್ತು ಬಿತ್ತನೆ: ಮಳೆಗಾಲದ ಪ್ರಾರಂಭದಲ್ಲಿ ಬಿತ್ತುವುದು ಒಳ್ಳೆಯದು. ಭೂಮಿಯನ್ನು ಒಂದೆರಡು ಸಾರಿ ಉಳುಮೆ ಮಾಡಿ ಸಮ ಮಾಡಬೇಕು. ಅನಂತರ ದಿಂಡು ಮತ್ತು ಕಾಲುವೆಗಳನ್ನು ತಯಾರಿಸಿ, ತಿಪ್ಪೆಗೊಬ್ಬರ ಹಾಕಿ ಮಣ್ಣಿನಲ್ಲಿ ಬೆರೆಸಬೇಕು.

ಕಾಯಿ ಮತ್ತು ಕಾಳುಗಳ ಉತ್ಪಾದನೆಗೆ ಸಾಲುಗಳ ನಡುವೆ ೧೨೦ ಸೆಂ.ಮೀ ಮತ್ತು ಸಾಲಿನಲ್ಲಿ ೬೦ ಸೆಂ.ಮೀ ಅಂತರ ಕೊಡಬೇಕು. ಗೆಡ್ಡೆಗಳ ಉತ್ಪಾದನೆಗೆ ಸಾಲುಗಳ ನಡುವೆ ೧೫ ಸೆಂ.ಮೀ. ಹಾಗೂ ಸಾಲಿನಲ್ಲಿ ೭.೫-೧೫.೦ ಸೆಂ.ಮೀ ಅಂತರ ಕೊಡಬೇಕು. ಬಿತ್ತುವ ಕಾಲಕ್ಕೆ ಮಣ್ಣು ಹಸಿಯಾಗಿರಬೇಕು. ಹೆಕ್ಟೇರಿಗೆ ಸುಮಾರು ೨೦ ಕಿ.ಗ್ರಾಂ ಬೇಕಾಗುತ್ತವೆ. ಸುಮಾರು ೧೦-೧೨ ದಿನಗಳಲ್ಲಿ ಅವು ಮೊಳೆಯುತ್ತವೆ.

ಗೊಬ್ಬರ: ಈ ಬೆಳೆಗೆ ಹೆಚ್ಚಿನ ಫಲವತ್ತು ಬೇಕಾಗಿಲ್ಲ. ಹೆಕ್ಟೇರಿಗೆ ೧೦-೧೨ ಟನ್ ತಿಪ್ಪೆಗೊಬ್ಬರ, ೩೦ ಕಿ.ಗ್ರಾಂ ರಂಜಕ ಮತ್ತು ೩೦ ಕಿ.ಗ್ರಾಂ ಪೊಟ್ಯಾಷ್ ಸತ್ವಗಳನ್ನು ಕೊಡುವುದು ಸೂಕ್ತ.

ನೀರಾವರಿ: ರೆಕ್ಕೆ ಅವರೆಗೆ ನೀರು ಕೊಟ್ಟಲ್ಲಿಬಳ್ಳಿಗಳು ಸೊಂಪಾಗಿ ಬೆಳೆಯುತ್ತವೆ. ಒಣಹವೆ ಇದ್ದಾಗ ವಾರಕ್ಕೊಮ್ಮೆ ನೀರು ಕೊಟ್ಟರೆ ಸಾಕು. ಈ ಬೆಳೆಗೆ ದಿನಕ್ಕೆ ೮ ಮಿಮೀ. ತೇವ ಅಗತ್ಯವಿರುವುದಾಗಿ ತಿಳಿದುಬಂದಿದೆ.

ಆಸರೆಯ ಮೇಲೆ ಹಬ್ಬಿಸುವಿಕೆ: ಇದರ  ಬಳ್ಳಿಗಳಿಗೆ ಆಸರೆ ಬೇಕು. ನೈಜೀರಿಯದಲ್ಲಿನ  ಸಂಶೋಧನೆಗಳಲ್ಲಿ ತಂತಿ ಜಾಲರಿಯ ಮೇಲೆ ಹಬ್ಬಿಸಿದ ಬಳ್ಳಿಗಳು ಇತರ ವಿಧಾನಗಳಿಗಿಂತ ಎರಡು ಪಟ್ಟು ಹೆಚ್ಚು ಇಳುವರಿ ಕೊಟ್ಟಿದೆ. ಕೋಲುಗಳನ್ನು ಸಿಕ್ಕಿಸಿ, ಬಳ್ಳಿಗಳು ಹಬ್ಬುವಂತೆ ಮಾಡುವುದು ಸಾಮಾನ್ಯ. ಈ ಪದ್ಧತಿಯಲ್ಲಿ ಕೊಯ್ಲು ಮಾಡುವುದು ಕಷ್ಟ.

ಚಪ್ಪರ ಅಥವಾ ತಡಿಕೆ ವಿಧಾನ ಉತ್ತಮ. ನೆಲಮಟ್ಟದಿಂದ ೧.೨-೨.೪ ಮೀಟರ್ ಎತ್ತರದ ಚಪ್ಪರವಾದರೆ ಅನುಕೂಲ. ಬಳ್ಳಿಗಳ ಬುಡದಲ್ಲಿ ಸರ್ವೆ, ಲಾಂಟಾನ ಅಥವಾ ಬಿದಿರುವ ಕಂಟೆಗಳನ್ನು ನೆಟ್ಟರೂ ಸಾಕು.

ಅಂತರ ಬೇಸಾಯ ಮತ್ತುಕಳೆ ಹತೋಟಿ: ಈ ಬೆಳೆಗೆ ಹೆಚ್ಚಿನ ಅಂತರ ಬೇಸಾಯ ಬೇಕಾಗಿಲ್ಲ. ಕಳೆಗಳನ್ನು ಕಿತ್ತು ಹಾಕಿ ಸಾಲು ಎಳೆದರೆ ಸಾಕು. ಅನಂತರದ ದಿನಗಳಲ್ಲಿ ಹಂಬುಗಳು ದಟ್ಟವಾಗಿ ಬೆಳೆದು ನೆರಳನ್ನುಂಟು ಮಾಡುವ ಕಾರಣ ಕಳೆಗಳು ಅಷ್ಟಾಗಿ ಬರಲಾರವು. ಅವಂತರ ಬೇಸಾಯ ಹಗುರವಾಗಿರಬೇಕು.

ಮಿಶ್ರ ಬೆಳೆಯಾಗಿ: ಈ ಬೆಳೆಯೊಂದಿಗೆ ಇತರ ಬೆಳೆಗಳನ್ನು ಬೆಳೆದಲ್ಲಿ ಅಧಿಕ ಲಾಭ ಸಾಧ್ಯ. ಸಿಹಿ ಗೆಣಸು, ಕೆಸವಿನ ದಂಟು, ಬಾಳೆ, ಸೊಪ್ಪು ತರಕಾರಿಗಳು ಮುಂತಾಗಿ ಬೆಳೆಯಬಹುದು. ತರಕಾರಿ ತೋಟಗಳ ಅಂಚಿನಲ್ಲಿ, ಬೇಲಿಯ ಉದ್ದಕ್ಕೆ, ಕೈ ತೋಟಗಳಲ್ಲಿ ಮುಂತಾಗಿ ಬೆಳೆಯಬಹುದು.

ಬೇರುಗಂಟುಗಳ ನಿರ್ಮಾಣ: ಬೇರುಗಂಟುಗಳು ಕೆನ್ನೀಲಿ, ಬಿಳುಪು ಹಾಗೂ ಕಂದು ಛಾಯೆಯಿಂದ ಕೂಡಿರುತ್ತವೆ. ಮೇಲ್ಮಣಿನ ೩೦-೬೦ ಸೆಂ.ಮೀ. ಪದರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಇರುತ್ತವೆ. ಇನ್ನೂ ಆಳಕ್ಕೆ ಹೋದಂತೆಲ್ಲಾ ಅವುಗಳ ಸಂಖ್ಯೆ ಕುಂಠಿತಗೊಳ್ಳುತ್ತದೆ. ಮಲೇಷ್ಯಾದಲ್ಲಿ ಸರಾಸರಿ ಬಳ್ಳಿಗಳಲ್ಲಿನ ಬೇರುಗಂಟುಗಳ ಸಂಖ್ಯೆ ೪೪೦ ಇದ್ದುದಾಗಿ ವರದಿಯಾಗಿದೆ.

ಬೇರುಗಂಟುಗಳ ನಿರ್ಮಾಣ ತುಂಬ ನಿಧಾನ. ಇದು ಹಲವಾರು ಹಂತಗಳಲ್ಲಿ ನಡೆಯುವ ಕಾರ್ಯ. ಕಾಳುಮೊಳೆತ ಒಂದು ವಾರದವರೆಗೆ ಬೇರುಗಂಟುಗಳಿರುವುದಿಲ್ಲ. ಆದರೆ ಎರಡನೆಯ ವಾರದಲ್ಲಿ ಸೂಕ್ಷ್ಮ ಗಾತ್ರದ ಗಂಟುಗಳೂ ಹಾಗೂ ನಾಲ್ಕನೆಯ ವಾರದಲ್ಲಿ ದೊಡ್ಡ ಗಾತ್ರದ ಗಂಟುಗಳೂ ಕಂಡು ಬಂದಿದ್ದಾಗಿ ವರದಿಯಾಗಿದೆ. ಈ ರೀತಿಯ ಗಂಟುಗಳಾಗಲು ಅಣುಜೀವಿ ಲೇಪನದ ಅಗತ್ಯವಿಲ್ಲ.

ಕೊಯ್ಲು ಮತ್ತು ಇಳುವರಿ: ಬಿತ್ತನೆ ಮಾಡಿದ ಹತ್ತು ವಾರಗಳಲ್ಲಿ ಕಾಯಿಗಳನ್ನು ಕಿತ್ತು ತರಕಾರಿಯಾಗಿ ಬಳಸಬಹುದು. ಪರಾಗಸ್ಪರ್ಶಗೊಂಡ ಎರಡು ವಾರಗಳಲ್ಲಿ ಕಾಯಿಗಳು ರಸವತ್ತಾಗಿದ್ದು ತಿನ್ನಲು ರುಚಿಯಾಗಿರುತ್ತವೆ. ಮೂರು ವಾರಗಳ ನಂತರ ಅವುಗಳಲ್ಲಿ ನಾರಿನ ಅಂಶ ಹೆಚ್ಚಾಗುತ್ತದೆ. ಅನಂತರ ತಿನ್ನಲು ಅಷ್ಟೊಂದು ರುಚಿಯಾಗಿರುವುದಿಲ್ಲ. ಆರು ವಾರಗಳಲ್ಲಿ ಕಾಳು ಬಲಿತು, ತಿನ್ನಲು ಸೂಕ್ತವಿರುತ್ತವೆ. ಹೂಬಿಡುವ ಹಾಗೂ ಕಾಯಿ ಕಚ್ಚುವ ಕಾರ್ಯ ಬಹು ದೀರ್ಘಕಾಲ ಇರುವುದಾದರೂ ಕೆಲವು ದಿನಗಳ ನಂತರ ಫಸಲು ಕಡಿಮೆಯಾಗುತ್ತಾ ಹೋಗುತ್ತದೆ. ಬಿತ್ತನೆಯಾದ ದಿನದಿಂದ ಕೊಯ್ಲು ಪೂರ್ಣಗೊಳ್ಳುವವರೆಗೆ ಸುಮಾರು ೨೧೦ ದಿನಗಳು ಹಿಡಿಸುತ್ತವೆ. ಗೆಡ್ಡೆಗಳಿಗಾದರೆ ೭ ರಿಂದ ೮ ತಿಂಗಳು ಬೇಕು. ದೊಡ್ಡ ಗಾತ್ರದ ಗೆಡ್ಡೆಗಳಾದಲ್ಲಿ ಉತ್ತಮ. ಅಂತಹ ಗೆಡ್ಡೆಗಳು ಹೆಚ್ಚು ರುಚಿಯಾಗಿರುತ್ತವೆ. ಅವು ೮ ರಿಂದ ೧೨ ಸೆಂ.ಮೀ. ಉದ್ದ ಮತ್ತು ೨ ರಿಂದ ೪ ಸೆಂ.ಮೀ. ದಪ್ಪ ಇದ್ದಾಗ ಅಗೆದು ತೆಗೆಯಬೇಕು.

ಎಳೆಯ ಕಾಯಿಗಳಾದರೆ ಹೆಕ್ಟೇರಿಗೆ ೪ ಟನ್ನು, ಕಾಳು ಆದಲ್ಲಿ ೨ ರಿಂದ ೫ ಟನ್ನು ಮತ್ತು ಗೆಡ್ಡೆಗಳಾದಲ್ಲಿ ೪ ಟನ್ನು ಸಿಗುತ್ತವೆ.

ಕೀಟ ಮತ್ತು ರೋಗಗಳು : ಈ ಬೆಳೆಗೆ ಹಾನಿ ಮಾಡುವ ಕೀಟ ಮತ್ತು ರೋಗಗಳಾವುವೂ ವರದಿಯಾಗಿಲ್ಲ. ಇತ್ತೀಚೆಗೆ ಈ ಗಿಡಗಳ ಬೇರುಗಳಿಗೆ ದುಂಡುಜಂತು ಹಾನಿ ಉಂಟು ಮಾಡಿದ್ದಾಗಿ ಬೆಂಗಳೂರಿನ ಹೆಸರಘಟ್ಟದಲ್ಲಿನ ಭಾರತೀಯ ತೋಟಗಾರಿಕೆ ಬೆಳೆಗಳ ಸಂಶೋಧನಾ ಸಂಸ್ಥೆ ವರದಿ ಮಾಡಿದೆ. ಅಂತಹ ಗಿಡಗಳ ಬೆಳವಣಿಗೆ ಕುಂಠಿತಗೊಳ್ಳುತ್ತದೆ. ಅವುಗಳನ್ನು ಬೇರು ಸಹಿತ ಕಿತ್ತು ನಾಶಗೊಳಿಸಬೇಕು.

* * *