“ಜಗತ್ತಿನಲ್ಲಿಯ ಎಲ್ಲ ವಾಡಿಕೆಗಳಲ್ಲಿ ಅತ್ಯುತ್ತಮವಾದದ್ದನ್ನು ಆರಿಸಿತೋರಿಸಿರೆಂದು ಯಾರನ್ನಾದರೂ ಕೇಳಿದರೆ ಅವರು ಎಲ್ಲ ಪದ್ಧತಿಗಳನ್ನೂ ಪರೀಕ್ಷಿಸಿ ಕೊನೆಗೆ ತಮ್ಮ ವಾಡಿಕೆಯೇ ಎಲ್ಲಕ್ಕಿಂತ ಮಿಗಿಲಾದದ್ದು ಎಂದು ತೀರ್ಮಾನಿಸಿ ತಮ್ಮ ವಾಡಿಕೆಯೇ ಶ್ರೇಷ್ಠವೆಂದು ಹೇಳುವರು” ಸರ್ವಸಾಮಾನ್ಯವಾದ ಈ ಸ್ವಜನ ಪ್ರೀತಿವಾದವನ್ನು (Ethmo centrism) ಗ್ರೀಕ್ ಇತಿಹಾಸಕಾರ ಹಿರೋಡೋಟಸ್ ತನ್ನ ಪರ್ಶಿಯನ್ ಯುದ್ಧಗಳು (B.K.III) ಎಂಬ ಪುಸ್ತಕದಲ್ಲಿ ಉಲ್ಲೇಖಿಸಿದ್ದಾನೆ. ಆದರೆ ಇತ್ತೀಚೆಗೆ ಮಾನವ ಶಾಸ್ತ್ರವು ಈ ಸ್ವಜನ ಮೇಲ್ಮೆಯ ನಿಲುವನ್ನು ದಾಟಿ ಎಲ್ಲ ಸಂಸ್ಕೃತಿಗಳನ್ನೂ ವಸ್ತುನಿಷ್ಠಮನೋಭಾವದಿಂದ. ತುಲನಾತ್ಮಕವಾಗಿ ಅಭ್ಯಿಸಿಸುತ್ತದೆ. ಈ ದೃಷ್ಟಿಕೋನದಿಂದ ನೋಡಿದರೆ ಸರಳ-ಕ್ಲಿಷ್ಟ ಮತ್ತು ಹಿಂದುಳಿದ-ಮುಂದುವರೆದ ಸಂಸ್ಕೃತಿಗಳು ಗೋಚರಿಸುತ್ತವೆಯೇ ವಿನಃ ಮೇಲು ಮತ್ತು ಕೀಳು ಎಂಬ ವಿಚಾರಕ್ಕೆ ಆಸ್ಪದವಿಲ್ಲ. ಪ್ರತಿಯೊಂದು ಸಂಸ್ಕೃತಿಯು ತನ್ನ ಪರಿಸರ, ಕಾಲಮಾನ ಮತ್ತು ತಂತ್ರಜ್ಞಾನದ ಮಟ್ಟ ಮುಂತಾದ ಇತಿಮಿತಿಗಳಿಂದ ಬದ್ಧವಾಗಿ ಗರಿಷ್ಠ ಮಿತಿಯವರೆಗೆ ಹೊಂದಾಣಿಕೆಯನ್ನೂ ಸಾಧಿಸಿ ತನ್ನ ಸದಸ್ಯ ಜನರಿಗೆ ತೃಪ್ತಿಕರವಾದ ಜೀವನವನ್ನು ಒದಗಿಸಲು ಪ್ರಯತ್ನಿಸುತ್ತದೆ.

ಜೀವನದಲ್ಲಿ ಮಹತ್ವದ ಒಂದು ಅಂಶವಾದ ಧರ್ಮದ ಅಭ್ಯಾಸದ ಬಗ್ಗೆ ವಿಫುಲವಾಗಿ ಮಾನವಶಾಸ್ತ್ರೀಯ ಸಂಶೋಧನೆಯಾಗಿದ್ದರೂ, ಜಗತ್ತಿನ ವಿವಿಧ ಜನಗಳಲ್ಲಿ ಪ್ರಚಲಿತವಿರುವ ನೈತಿಕ ಮತ್ತು ತಾತ್ವಿಕ ಪದ್ಧತಿಗಳ ತಿಳುವಳಿಕೆ ಅಷ್ಟಕ್ಕಷ್ಟೆ. ಧರ್ಮಗಳ ವಿಧಿಯುಕ್ತವಾದ ಲಕ್ಷಣಗಳಾದ ಪೂಜಾವಿಧಾನಗಳು ಅಥವಾ ಸರ್ವಸಾಮಾನ್ಯ ನಿಸರ್ಗದ ಬಗ್ಗೆ ಸಹಜವಾಗಿ ಕಾಣದ. ಸೂಚಿತ ನಿಲುವಿನ ಬಗ್ಗೆ ಅಷ್ಟು ನಿಖರವಾದ ಪರಿಶೋಧನೆ ಆಗಿಲ್ಲ. ಆದಾಗ್ಯೂ ಯಾವುದೇ ಸಮಾಜವನ್ನು ಅರಿಯಬೇಕೆಂಬ ಅಭಿಲಾಷೆ ಇದ್ದರೆ ಆ ಸಮಾಜದ ಮೌಲ್ಯಗಳನ್ನು ಅರಿತುಕೊಳ್ಳುವುದು ಅತ್ಯವಶ್ಯಕ. ಒಂದು ಸಮಾಜದ ಬಂಧುಬಳಗ, ಸಂಬೋಧಕ ಪದ (Kinship term) ಗಳೆಲ್ಲವನ್ನೂ ಉಲ್ಲೇಖ ಮಾಡಬಹುದು. ಆದರೆ ಈ ಸಂಬಂಧಿಕರಲ್ಲಿ ಯಾರಿಗೆ ಪ್ರಾಧಾನ್ಯತೆ ಹೆಚ್ಚು ಅಥವಾ ಯಾರು ಹೆಚ್ಚು ಪ್ರಿಯರು ಎಂಬುದನ್ನು ಹುಡುಕುವದು ಹೆಚ್ಚು ಮಹತ್ವದ ವಿಷಯ ಜನರ ಜಾನಪದ ಗೀತೆಗಳನ್ನೆಲ್ಲಾ ಬರೆದಿಡಬಹುದು. ಆದರೆ ಅವುಗಳಲ್ಲಿ ಉಚ್ಚತರವಾದವು ಯಾವವು ಮತ್ತು ಯಾವ ಅರ್ಥದಲ್ಲಿ ಉಚ್ಛತರವಾದವು ಎಂಬುದನ್ನು ಗುರುತಿಸುವುದು ಇನ್ನೂ ಮಹತ್ವದ ಕೆಲಸ. ಸೌಂದರ್ಯಶಾಸ್ತ್ರದ ಯಾವ ಒರೆಗಲ್ಲಿನ ಸಹಾಯದಿಂದ ಈ ಸಮಸ್ಯೆಯನ್ನು ತೀರ್ಮಾನಿಸಬೇಕು? ಈ ಸಂದರ್ಭದಲ್ಲಿ ಯಾವುದೇ ಜನಾಂಗದ ಸಂಸ್ಕೃತಿ ಹೇಗೆ ಇದೆಯೆಂದು ಕೇವಲ ವರ್ಣನಾತ್ಮಕವಾಗಿ ಹೇಳದೆ. ಈ ಜನ ತಮ್ಮ ಸಂಸ್ಕೃತಿಯ ಅಂಶಗಳನ್ನು ಹೇಗೆ ಅರ್ಥೈಸುತ್ತಾರೆ (interpret) ಎನ್ನುವುದು ಅತ್ಯವಶ್ಯಕವಾದ ಪ್ರಶ್ನೆ. ಇದೇ ರೀತಿಯಲ್ಲಿ ಬಹಳಷ್ಟು ಜನರು ಪರಕೀಯ ಸಂಸ್ಕೃತಿಯ ಯಾವುದೇ ವಸ್ತುವಿನ ಅಥವಾ ಕಲೆಯ ರಸಗ್ರಹಣ ಮಾಡುವಾಗ ಆ ಸುಸ್ಕೃತಿಯ ಸಂಪೂರ್ಣ ಅರಿವನ್ನು ಹೊಂದಿರುವುದಿಲ್ಲ. ಬಹು ಜನರು ಸ್ವಸಂಸ್ಕೃತಿಯ ಅರಿವಿನ ಬೆಳಕಿನಲ್ಲಿ ಪರಸಂಸ್ಕೃತಿಯ ಕೃತಿ, ಘಟನೆ, ರೀತಿ ನಡಾವಳಿಗಳ ಅಥವಾ ಕಲಾಕೃತಿಗಳನ್ನು ಅರ್ಥ ಮಾಡಿಕೊಳ್ಳುತ್ತಾರೆ. ಇದರಲ್ಲಿ ತಪ್ಪೇನೂ ಇಲ್ಲ. ಆದರೆ ನಾವು ಗಮನಿಸಬೇಕಾದ ಮಹತ್ವದ ಅಂಶವೆಂದರೆ ಪರಸಂಸ್ಕೃತಿಯ ಪ್ರತಿಯೊಂದು ಕಲಾವಸ್ತುವಿನ ಹಿಂದೆ ಅದರ ಜನಮನೋಭಾವಗಳು (ETHOS) ಮತ್ತು ಜಗತ್ತಿನ ಬಗೆಗಿನ ಆ ಜನರ ದೃಷ್ಟಿಕೋನ ಅಡಕವಾಗಿರುತ್ತವೆ. ನಮಗೆ ಪರಜನರ ದೃಷ್ಟಿಕೋನಗಳನ್ನು, ಸಮಗ್ರವಾಗಿ ಅರಿತುಕೊಳ್ಳುವ ಇಷ್ಟ ಇದ್ದರೆ ಇಂಥ ಸಂದಿಗ್ಥವಾಗಿ ವ್ಯಾಖ್ಯಾಯಿಸಿದ, ಆದಾಗ್ಯೂ ಅತಿ ಮಹತ್ವದ ಸಂಸ್ಕೃತಿಯ ಅಂಶಗಳಾದ ಸಾಮಾಜಿಕ ಮೌಲ್ಯ ಮತ್ತು ಜಗದೃಷ್ಟಿ ಕೋನಗಳನ್ನು ಶೋಧಿಸಲು ಪ್ರಯತ್ನಿಸಬೇಕು. ಆಗ ಮಾತ್ರ ಯಾವುದೇ ಜನಾಂಗದ ವಿಶ್ವೋತ್ಪತ್ತಿಯ ಕಲ್ಪನೆಗಳು ಮತ್ತು ಅದರ ಸಾಮಾಜಿಕ ಮೌಲ್ಯಗಳ ನಡುವಿನ ಸಂಬಂಧವೇನೆಂಬುದು ತಿಳಿಯುತ್ತದೆ.

ಇತ್ತೀಚಿನ ಮಾನವ ಶಾಸ್ತ್ರೀಯ ಚರ್ಚೆಗಳಲ್ಲಿ ಯಾವುದೇ ಒಂದು ಸಂಸ್ಕೃತಿಯ ನೈತಿಕ ಮತ್ತು ಸೌಂದರ್ಯಶಾಸ್ತ್ರೀಯ ಅಂಶಗಳನ್ನು ಹಾಗೂ ಮೌಲ್ಯಮಾಪನ ಅಂಶಗಳನ್ನೂ ಜನಮನೋಭಾವ (ETHOS) ಎಂಬ ಪದದಲ್ಲಿ ಸಂಕ್ಷೇಪವಾಗಿ ಬಳಸಲಾಗಿದೆ. ಪಂಚೇಂದ್ರಿಯಗಳಿಗೆ ನಿಲುಕುವ (cognitive) ಬಾಹ್ಯ ಅಸ್ತಿತ್ವವುಳ; ಅಂಶಗಳನ್ನು ಲೌಕಿಕ ದೃಷ್ಟಿಕೋನ (world veiw) ವೆಂಬ ಪದದಿಂದ ಹೆಸರಿಸಲಾಗಿದೆ. ಒಂದು ಜನಾಂಗದ ಮೌಲ್ಯಗುಚ್ಛವು ಅವರ ಜೀವನದ ನಾದ, ಸ್ವಭಾವ, ಗುಣಗಳಿದ್ದಂತೆ. ಅದರ ನೈತಿಕ ಮತ್ತು ಸೌಂದರ್ಯ ಶಾಸ್ತ್ರೀಯ ಶೈಲಿ, ಭಾವವಿದ್ದಂತೆ ಅದು ಅವರ ಜೀವನವು ಪ್ರತಿಬಿಂಬಿಸುವ ತಮ್ಮ ಬಗ್ಗೆ ಮತ್ತು ತಮ್ಮ ಜಗತ್ತಿನ ಬಗೆಗಿನ ನಿಲವು, ಅವರ ಸುವ್ಯವಸ್ಥೆಯ ಬಗೆಗಿನ ಅತೀವ ಪರಿಪೂರ್ಣವಾದ ವಿಚಾರಗಳು-ಧರ್ಮ, ನಂಬುಗೆ ಮತ್ತು ವಿಧಿಕರ್ಮಗಳು-ಪರಸ್ಪರ ಎದುರಾಗಿದ್ದರೂ ಒಂದೆಕ್ಕೊಂದು ಪೂರಕವಾದವುಗಳು. ಈ ಮೌಲ್ಯಗುಚ್ಛವು ಗಾಢ ಚಿಂತನೆ ಮಾಡಿದಾಗ ಜಗದೃಷ್ಟಿಕೋನವು ವಿವರಿಸುವ ಪ್ರತ್ಯಕ್ಷ ಪರಿಸ್ಥಿತಿಯನ್ನು ಪ್ರತಿನಿಧಿಸುತ್ತದೆ ಎಂದು ತೋರುತ್ತದೆ. ಮತ್ತು ಈ ಲೌಕಿಕ ದೃಷ್ಟಿಕೋನವು ಬಾಹ್ಯ ಜಗತ್ತಿನಲ್ಲಿರುವ ವಸ್ತುಸ್ಥಿತಿಯ ಪ್ರತಿಮೆಯಾಗಿದ್ದು, ಭಾವನಾತ್ಮಕವಾಗಿ ಜನರಿಗೆ ಸ್ವೀಕಾರಾರ್ಹವಾದದ್ದಾಗಿರುತ್ತದೆ. ವಸ್ತು ಸ್ಥಿತಿಯ ಮತ್ತು ಮೌಲ್ಯಗಳ ನಡುವಿನ ಈ ಪ್ರಕಾರದ ಅರ್ಥಪೂರ್ಣ ಸಂಬಂಧವು ಎಲ್ಲ ಧರ್ಮಗಳಲ್ಲಿಯ ಒಂದು ಅಂಶ. ಧರ್ಮವು ಮತ್ತೇನಾದರೂ ಇರಲಿ, ಅದು ಆಂಶಿಕವಾಗಿಯಾದರೂ ಸಾರ್ವತ್ರಿಕ ಅರ್ಥದ ಒಂದು ಆಗರವಾಗಿದ್ದು ಇದನ್ನೂ ಯಾವುದೇ ಸಮಾಜದ ವ್ಯಕ್ತಿಯಾಗಲಿ ತನ್ನ ಅನುಭವಗಳಿಗೆ ಅರ್ಥ ಕೊಡುವುದಕ್ಕೂ ಮತ್ತು ತನ್ನ ನಡುವಳಿಕೆಯನ್ನು ಸಂಘಟಿಸಲಿಕ್ಕೂ ಉಪಯೋಗಿಸುತ್ತಾನೆ.

ಆದರೆ ಇಂಗಿತಾರ್ಥಗಳನ್ನು (meaning) ಸಂಕೇತಗಳಲ್ಲಿ ಮಾತ್ರ ಸಂಗ್ರಹಿಸಿಡಬಹುದಾಗಿದೆ. ಉದಾ:-ಕ್ರಿಶ್ಚಿಯನ್ನರ “ಕ್ರಾಸ್”, ಮುಸಲ್ಮಾನರ ಬಿದಿಗೆಯ ಚಂದ್ರ, ಅಥವಾ ಗರಿಗಳುಳ್ಳ ಸರ್ಪ ಮುಂತಾದವು. ಇಂಥ ಧಾರ್ಮಿಕ ಸಂಕೇತಗಳನ್ನು ವಿಧಿಕರ್ಮಗಳಲ್ಲಿ ಪ್ರಬಲವಾಗಿ ಪ್ರಕಟಗೊಳಿಸಲಾಗುತ್ತದೆ. ಅಥವಾ ಪುರಾಣ ಕಥೆಗಳಲ್ಲಿ (myth)ಪೋಣಿಸಲಾಗುತ್ತದೆ. ಅವು ಭಾವನಾತ್ಮಕ ಜೀವನಕ್ಕೆ ಬೆಂಬಲ ನೀಡುತ್ತವೆ. ಜಗತ್ತು ಹೇಗಿರಬೇಕೆಂದು ಸೂಚಿಸುತ್ತವೆ. ಹೀಗೆ ಪವಿತ್ರ ಸಂಕೇತಗಳು ಸತ್ಯವಿದ್ಯೆ (ontalogy) ಮತ್ತು ವಿಶ್ವಸೃಷ್ಟಿವಿದ್ಯೆ (cosmology) ಗಳ ಹಾಗೂ ಸೌಂದರ್ಯಶಾಸ್ತ್ರ ಮತ್ತು ನೈತಿಕೆಗಳ ನಡುವೆ ಸಂಬಂಧ ಕಲ್ಪಿಸುತ್ತವೆ. ಯಾವುದೇ ಸಂಸ್ಕೃತಿಯಲ್ಲಾಗಲೀ ಇಂಥ ಐಕ್ಯತೆಯ ಸಂಕೇತಗಳ ಸಂಖ್ಯೆ ಸೀಮಿತವಾಗಿರುತ್ತದೆ. ಒಂದಿಲ್ಲೊಂದು ಹಂತದಲ್ಲಿ ಲೌಕಿಕ ದೃಷ್ಟಿಕೋನ ಮತ್ತು ಮೌಲ್ಯಗಳು ಒಗ್ಗೂಡುವ ಪ್ರವೃತ್ತಿಯು ತರ್ಕಬದ್ಧವಾಗಿ ಅವಶ್ಯವಿಲ್ಲದಿದ್ದರೂ ವಾಸ್ತುವಿಕವಾಗಿ ಸರ್ವಸಾಮಾನ್ಯವಾಗಿದೆ.

ಒಗ್ಗಾಲಾ (ಸಿಯೌ) ಜನಾಂಗದ ಮಾಹಿತಿಗಾರನೊಬ್ಬನ ಈ ಕೆಳಗಿನ ಹೇಳಿಕೆಯು ವಾಸ್ತವಿಕತೆ ಮತ್ತು ಭಾವನಾತ್ಮಕತೆಗಳ ಸಂಯೋಗವನ್ನು ಉದಾಹರಿಸುತ್ತದೆ. (Paul Radin:- Primitive Manasa Philosopher.)

“ಬೃಹದಾತ್ಮವು (Great soul) ಕಲ್ಲೊಂದನ್ನು ಬಿಟ್ಟು ನಿಸರ್ಗದ ಎಲ್ಲ ವಸ್ತುಗಳನ್ನು ದುಂಡಗೆ ಸೃಷ್ಟಿಸಿರುವುದರಿಂದ ಒಗ್ಲಾಲಾ  ಜನರಿಗೆ ವರ್ತುಳವು ಪವಿತ್ರವೆನಿಸುತ್ತದೆ. ಕಲ್ಲು ವಿನಾಶದ ಉಪಕರಣ. ಸೂರ್ಯ, ಆಕಾಶ, ಭೂಮಿ ಮತ್ತು ಚಂದ್ರು ಡಾಲಿನಂತೆ ದುಂಡಗೆ. ಇವುಗಳಲ್ಲಿ ಆಕಾಶ ಒಂದು ಮಾತ್ರ ಗಂಗಾಳದಂತೆ ತಗ್ಗುಳ್ಳದ್ದು. ವನಸ್ಪತಿಯ ಕಾಂಡವನ್ನೊಳಗೊಂಡ ಸಕಲ ಜೀವರಾಶಿಗಳೂ ದುಂಡಗೆ ಇವೆ. ಕಲ್ಲನ್ನು ಮಾತ್ರ ಹೊರತು ಪಡಿಸಿ, ಉಳಿದೆಲ್ಲ ವಸ್ತುಗಳ ಸಂಕೇತವಾದ್ದರಿಂದ ಮತ್ತು ಅದನ್ನು ಬೃಹದಾತ್ಮವು ಸೃಷ್ಟಿಸಿರುವುದರಿಂದ ಮನುಕುಲವು ವರ್ತುಳವನ್ನು ಪವಿತ್ರವೆಂದು ಕಾಣಬೇಕು. ವರ್ತುಳವು ದುಂಡಗಿನ ಕ್ಷಿತಿಜ  ಮತ್ತು ಅಲ್ಲಿ ಬೀಸುವ ನಾಲ್ಕು ಮರುತ್(ಗಾಳಿ)ಗಳ ಪ್ರತೀಕ. ಆದ್ದರಿಂದ ಅದು ವರುಷದ ಪ್ರತೀಕವೂ ಹೌದು. ಹಗಲು, ರಾತ್ರಿ ಮತ್ತು ಚಂದ್ರವ, ಆಕಾಶದಲ್ಲಿ ವರ್ತುಳಾಕಾರವಾಗಿ ಚಲಿಸುತ್ತವೆ. ವರ್ತುಳವು ಈ ಎಲ್ಲ ಕಾಲಮಾನಗಳ ವಿಭಜನೆಯ ಸಂಕೇತವಾದ್ದರಿಂದ ಅದು ಮಹಾಕಾಲದ ಪ್ರತೀಕವಾಗಿರುತ್ತದೆ.

“ಈ ಕಾರಣಗಳಿಂದಾಗಿ ಓಗ್ಲಾಲಾ ಜನರು ತಮ್ಮ ಮನೆಗಳನ್ನು (Tipis)  ಬಿಡಾರಗಳನ್ನು ವರ್ತುಳಾಕಾರವಾಗಿ ರಚಿಸುತ್ತಾರೆ. ಧಾರ್ಮಿಕ ಸಮಾರಂಭಗಳಲ್ಲಿ ಅವರು ಕುಳಿತುಕೊಳ್ಳುವುದು ಸಹ ವರ್ತುಳಾಕಾರವಾಗಿ. ವಿಭಾಜಿತವಾಗಿರದ ಆಭರಣವನ್ನು ಮಾಡಿದರೆ ಅದು ವಿಶ್ವದ ಮತ್ತು ಮಹಾಕಾಲದ ಸಂಕೇತವೆಂದು ತಿಳಿದು ಕೊಳ್ಳಬೇಕು.”

ಇಲ್ಲಿ ಒಳಿತು-ಕೆಡುಕುಗಳ ನಡುವಿನ ಸಂಬಂಧದ ಸೂಕ್ಷ್ಮವಾದ ವಾದಸರಣಿ ಇದ್ದು ಅದು ವಾಸ್ತವಿಕತೆಯ ಮೇಲೆ ಆಧರಿಸಿದೆ. ವರ್ತುಗಳಗಳ, ಅವರ್ತುಗಳ ರೂಪ, ಸೂರ‍್ಯ ಕಲ್ಲು, ಆಸರ (shelter) ಮತ್ತು ಯುದ್ಧ ಇವು ವಿರೋಧಾತ್ಮಕ ವರ್ಗಗಳ ಜೋಡಿಗಳಾಗಿದ್ದು ಪ್ರತ್ಯೇಕಿಸಲ್ಪಟ್ಟಿದ್ದು ಇದರ ತಾತ್ಪರ್ಯವು ಸುಂದರವೂ, ನೈತಿಕವೂ ಸತ್ವಪೂರ್ಣವೂ ಆಗಿದೆ. ವಿಚಾರಪೂರ್ಣ ಹಾಗೂ ವಿಶದವಾದ ಈ ಹೇಳಿಕೆಯು ಪ್ರತಿಯೊಬ್ಬ ಓಗ್ಲಾಲಾನಿಂದ ಸಿಗುವಂಥದಲ್ಲ. ಯಾಕಂದರೆ ಸಾಮಾನ್ಯ ಓಗ್ಲಾಲಾನಿಗೆ ನಿಸರ್ಗದಲ್ಲಿ ಗೋಚರಿಸಿದ ಅಥವಾ ಕೋಣವ ಚರ್ಮದ ಮೇಲೆ ಚಿತ್ರಿಸಿದ ಅಥವಾ ಸೂರ್ಯ ನೃತ್ಯದಲ್ಲಿ ಕಂಡುಬರುವ ವರ್ತುಳವು ಕೇವಲ ಪರೀಕ್ಷಿಸಲ್ಪಡದ ಒಂದು ಹೊಳಪುಳ್ಳ, ಸಂಕೇತವಾಗಿದ್ದು ಅದರ ಅರ್ಥವನ್ನು ಅಂತರ್ದೃಷ್ಟಿಯಿಂದ (intuitively) ಅರ್ಥಮಾಡಿ ಕೊಳ್ಳಲಾಗುವುದು; ಬೌದ್ಧಿಕವಾಗಿ ಅರ್ಥ ಮಾಡಿಕೊಂಡದ್ದಲ್ಲ. ಆದರೆ ಸಂಕೇತದ ಶಕ್ತಿಯು ಅದರ ಪರಿಪೂರ್ಣತೆಯ ಮೇಲೆ ಅದು ಅನುಭವಗಳನ್ನು ವ್ಯವಸ್ಥಿತಗೊಳಿಸುವಲ್ಲಿ ಸಾಧಿಸುವ ಸಾಫಲ್ಯದ ಮೇಲೆ ಅವಲಂಬಿತವಾಗದೆ, ನೈತಿಕ ಅರ್ಥವುಳ್ಳ ಸ್ವಾಭಾವಿಕ ರೂಪದ ಪವಿತ್ರ ವರ್ತುಳದ ಕಲ್ಪನೆ ಪುನಃ ಪುನಃ ಕಂಡು ಬರುತ್ತದೆ. ಅದು ಓಗ್ಲಾಲಾ ಜನರ ಅನುಭವಗಳನ್ನು ಒಂದಕ್ಕೊಂದು ಜೋಡಿಸಿ ಅರ್ಥವಾಗುವಂತೆ ಮಾಡುತ್ತದೆ.

ಮನುಷ್ಯ ಶರೀರದ, ವನಸ್ಪತಿಯ ಕಾಂಡದ, ಚಂದ್ರನ, ಡಾಲಿನ, ಮನೆಯ ಮತ್ತು ಬಿಡಾರಿನ ಸಾಮಾನ್ಯ ದುಂಡುತನವು ಆ ಜನರಿಗೆ ಅಸ್ಪಷ್ಟವಾಗಿ ಅರ್ಥವಾಗಿದ್ದರೂ ಆಳವಾದ ಅನುಭವದ ಮಹತ್ವವನ್ನು ಒದಗಿಸುತ್ತದೆ. ಈ ಅರ್ಥಪೂರ್ಣ ಸಾಮಾನ್ಯ ಅಂಶವನ್ನು ಹೀಗೆ ಬೇರ್ಪಡಿಸಿ ತಿಳಿದುಕೊಂಡಾಗ ಅದನ್ನು ಧಾರ್ಮಿಕ ವಿಧಿಕರ್ಮದಲ್ಲಿ ಉಪಯೋಗಿಸಿಕೊಳ್ಳಲು ಬರುತ್ತದೆ. ಉದಾ:- ಶಾಂತಿ ಸಮಾರಂಭದಲ್ಲಿ ಸಾಮಾಜಿಕ ಒಕ್ಕಟ್ಟಿನ ಕುರುಹಾದ ಚಿಲುಮೆಯು ಒಬ್ಬ ಸೇದುಗನಿಂದ ಇನ್ನೊಬ್ಬನಿಗೆ ವ್ಯವಸ್ಥಿತವಾಗಿ ವರ್ತುಳಾಕಾರವಾಗಿ ಹಸ್ತಾಂತರವಾಗುತ್ತದೆ. ವರ್ತುಳದ ರೂಪದ ಅಚ್ಚುಕಟ್ಟುತನವು ಭೂತಾತ್ಮಗಳ ಹಿತಾಶಯವನ್ನು ಅವರಲ್ಲಿ ಮೂಡಿಸುತ್ತದೆ. ಕಲ್ಲಾಗಿದ್ದರೂ ಒಂದು ದುಂಡಗಿನ ಕಲ್ಲನ್ನು ಕಂಡಾಗ ಅಸತ್‌ನ್ನು ಒಳಿತಾಗಿಸುವ ಸತ್‌ದ ಶಕ್ತಿಯನ್ನು ಗುರುತಿಸಬಹುದು. ಈ ದುಷ್ಟ-ಶಿಷ್ಟ ಶಕ್ತಿಗಳ ದ್ವಂದ್ವಗಳ ಹೋರಾಟವನ್ನು ಓಗ್ಲಾಲಾ ಜನರ ಪುರಾಣ ಕಥೆಗಳಲ್ಲಿಯೂ ಕಾಣಬಹುದು. ಮಾನವನ ಕೃತಿಗಳು ಬ್ರಹ್ಮಾಂಡದ ಸ್ಥಿತಿಗತಿಗಳೊಡನೆ ತಾದಾತ್ಮ್ಯ ಹೊಂದಿದಾಗ ಮಾತ್ರ ಜೀವನವು ನಿಜವಾದ ಸಾರ್ಥಕತೆಯನ್ನು ಹೊಂದಿದಂತೆ, ಎಂಬ ವಿಚಾರವು ಬಹಳಷ್ಟು ಸಂಸ್ಕೃತಿಗಳಲ್ಲಿ ಪ್ರಚಲಿತವಿದೆ.

ಜೀವನದ ರೀತಿ ಮತ್ತು ಪವಿತ್ರ ಸಂಕೇತಗಳು ಸೂಚಿಸುವ ಮೂಲಭೂತ ವಾಸ್ತವ್ಯಗಳ ನಡುವಿನ ಈ ಪ್ರಕಾರದ ಸಂವಾದತ್ವ ಒಂದು ಸಂಸ್ಕೃತಿಯಿಂದ ಇನ್ನೊಂದಕ್ಕೆ ಬದಲಾಗುತ್ತ ಹೋಗುತ್ತದೆ. ನೇವಾಹೋ (Navaho) ಜನರಿಗೆ ಶಾಂತವಿಚಾರ, ಅವಿರತ ಪ್ರಯತ್ನ ಮತ್ತು ಗೌರವಯುಕ್ತ ಜಾಗರೂಕತೆಗಳನ್ನು ಎತ್ತಿ ಹಿಡಿಯುವ ನಡಾವಳಿ ನಿಯಮವು, ನಿಸರ್ಗವು ಮೂಲಭೂತವಾಗಿ ಸುಶಕ್ತವೂ, ಅತಿನಿಯಮಿತವೂ ಮತ್ತು ಬಹಳ ಗಂಡಾಂತರಕಾರಿಯಾದುದೆಂಬ ಪ್ರತಿಮೆಯೊಂದಿಗೆ ಪೂರಕವಾಗಿದೆ. ಅಂದರೆ ಸಾಮಾಜಿಕ ಮೌಲ್ಯಗಳನ್ನು ಎತ್ತಿ ಹಿಡಿಯುವ ಧರ್ಮದ ಶಕ್ತಿಯು ಸಾಮಾಜಿಕ ಮೌಲ್ಯಗಳನ್ನು ವಿರೋಧಿಸುವ ಹಾಗೂ ಎತ್ತಿ ಹಿಡಿಯುವ ಅದರ ಸಂಕೇತಗಳನ್ನು ಅವಲಂಬಿಸುತ್ತದೆ. ಧಾರ್ಮಿಕ ಕರ್ಮ ವಿಧಿಗಳಲ್ಲಿ ಹಾಗೂ ಪುರಾಣಗಳಲ್ಲಿ ಈ ಮೌಲ್ಯಗಳನ್ನು ಚಿತ್ರಿಸಲಾಗುತ್ತದೆ.

ಕುಲಚಿನ್ಹವಾದ ಅಥವಾ ಲಾಂಛನವಾದ (Totemism):

ಅನೇಕ ಬುಡಕಟ್ಟು ಜನಾಂಗದ ಸಂಸ್ಕೃತಿಗಳಲ್ಲಿ ಧಾರ್ಮಿಕ ಮತ್ತು ಸಾಮಾಜಿಕ ಸಂಘಟನೆಯ ಲಕ್ಷಣಗಳನ್ನು ವಿಚಿತ್ರವಾದ ರೀತಿಯಲ್ಲಿ ಜೋಡಿಸಲಾಗಿರುತ್ತದೆ. ಅಂಥ ಬುಡಕಟ್ಟುಗಳನ್ನು ಮಾನವಶಾಸ್ತ್ರಜ್ಞರು ಟೋಟೆಮ್‌ಮಯ ಎಂದುಕರೆಯುತ್ತಾರೆ. ಧಾರ್ಮಿಕ ಕರ್ಮ ವಿಧಾನ, ಸಾಮಾಜಿಕ ಅಥವಾ ಕಲಾತ್ಮಕ ಅಂಶಗಳನು ಒಟ್ಟೂ ಗುಚ್ಛಕ್ಕೆ ಟೋಟೆಮ್‌ವಾದ (ಲಾಂಛನವಾದ) ಎನ್ನುತ್ತಾರೆ.

ಟೋಟೆಮ್‌ವಾದವು ಬುಡಕಟ್ಟು ಜನಾಂಗಗಳಲ್ಲಿ ಅತಿ ಪ್ರಚಲಿತವಾದ ಸಂಸ್ಥೆ. ಅವರ ಜೀವನ ಮತ್ತು ವಿಚಾರಗಳನ್ನು ಅರಿತುಕೊಳ್ಳಬೇಕಾದರೆ ಟೋಟೆಮ್ ವಾದವನ್ನು ತಿಳಿದುಕೊಳ್ಳಬೇಕಾದುದು ಅವಶ್ಯಕ. ಎ.ಸಿ. ಹ್ಯಾಡನ್‌ರು ಟೋಟೆಮ್‌ವಾದವನ್ನು ಈ ರೀತಿ ವ್ಯಾಖ್ಯಾಯಿಸಿದ್ದಾರೆ:

“ಟೋಟೆಮ್ ವಾದವು ಒಂದು ಜನಾಂಗವನ್ನು ಅನೇಕ ಟೋಟೆಮ್ ಸಂಬಂಧಿಕರ (ಅಥವಾ ಟೋಟೆಮ್ ಗೋತ್ರಗಳ) ಗುಂಪುಗಳಲ್ಲಿ ವಿಂಗಡಿಸುವುದು. ಪ್ರತಿಯೊಂದು ಗುಂಪು ಒಂದು ಅಥವಾ ಒಮ್ಮೊಮ್ಮೆ ಒಂದಕ್ಕಿಂತ ಹೆಚ್ಚು ಟೋಟೆಮ್‌ನ್ನು ಹೊಂದಿರಬಹುದು. ಒಂದು ಟೋಟೆಮ್‌ವು ಸಾಮಾನ್ಯವಾಗಿ ಒಂದು ವರ್ಗದ ಪ್ರಾಣಿಯಾಗಲೀ, ವನಸ್ಪತಿಯಾಗಲೀ, ನಿಸರ್ಗದಲ್ಲಿಯ ವಸ್ತುವಾಗಲೀ ಅಥವಾ ನಿಸರ್ಗದ ಗೋಚರ ವಸ್ತುಗಳಾದ ಸೂರ‍್ಯ, ಚಂದ್ರ, ಗಾಳಿ, ಆಕಾಶ, ಮೊದಲಾದವು ಆಗಿದ್ದು, ವಿರಳವಾಗಿ ಮನುಷ್ಯ ನಿಯಮಿತ ವಸ್ತುವಾದರೂ ಆಗಬಹುದು. ಈ ವಾದವು ವಿವಾಹದ ಕಟ್ಟಳೆಗಳಿಗೂ ಸಂಬಂಧಪಟ್ಟಿದ್ದು, ಟೋಟೆಮ್‌ಗಳನ್ನೂ ಕೂಡ ಸಂಬಂಧಿಕರೆಂದೂ, ರಕ್ಷಕರೆಂದೂ ಪರಿಗಣಿಸಲಾಗುತ್ತದೆ. ಆದ್ದರಿಂದ ಒಂದು ಟೋಟೆಮ್‌ದ ಸಂಬಂಧಿಕರು ಅವರ ಟೋಟೆಮ್‌ಕ್ಕೆ ಅದರ ಭಾವನೆಯನ್ನು ತೋರಿಸುವುದಲ್ಲದೇ ಅದನ್ನು ಕೊಲ್ಲುವುದಾಗಲಿ, ತಿನ್ನುವುದನಾಗಲಿ ಮಾಡಕೂಡದು. ಹೀಗೆ ಗೋತ್ರದ ಸದಸ್ಯರು ಮತ್ತು ಅವರ ಟೋಟೆಮ್ ನಡುವೆ ಪರಸ್ಪರ ಹಕ್ಕು ಬಾಧ್ಯತೆಗಳನ್ನು ಗುರುತಿಸಲಾಗುತ್ತದೆ. ಹೀಗೆ ಟೋಟೆಮ್‌ವು ಸಂಬಂಧಿಕರ ಗುಂಪಿನ ತುರಾಯ ಅಥವಾ ಸಂಕೇತ ಚಿನ್ಹೆಯಾಗಿರುತ್ತದೆ. ಟೋಟೆಮ್ ಮತ್ತು ಅದನ್ನು ಹೊಂದಿದ ಸಂಬಂಧಿಕರ ಗುಂಪಿನ ನಡುವೆ ಅತೀಂದ್ರಿಯ (mystic) ಸಂಬಂಧವಿರುತ್ತದೆ.

ಹೋಪಿ ರೆಡ್ ಇಂಡಿಯನ್‌ರಲ್ಲಿ ಜೀವನದ ಉಳಿದ ಕ್ಷೇತ್ರಗಳಲ್ಲಿ ಇಡೀ ಹಳ್ಳಿ, ಪಾಲುಗೊಳ್ಳದಿದ್ದರೂ ಧಾರ್ಮಿಕ ಸಮಾರಂಭಗಳಲ್ಲಿ ಇಡೀ ಹಳ್ಳಿಗಳು ಪಾಲುಗೊಳ್ಳುತ್ತವೆ. ಈ ಸಮಾರಂಭಗಳಲ್ಲಿ ಕೆಲವನ್ನು ಬಹಳ ಅವಶ್ಯಕವಾದುವೆಂದು ಅವರು ಪರಿಗಣಿಸುತ್ತಾರೆ. ಈ ಕರ್ಮವಿಧಿಗಳ ಮಹತ್ವವನ್ನು ಅರಿತ ಅವರು ಅವುಗಳನ್ನು ಕಾರ‍್ಯರೂಪಕ್ಕೆ ತರುವಾಗ ಆಕಸ್ಮಿಕತೆಗೆ ಎಡೆಗೊಡುವುದಿಲ್ಲ. ಮತ್ತು ಅವುಗಳನ್ನು ಆಚರಿಸಲು ಅರ್ಚಕರನ್ನು, ಸಹಾಯಕರನ್ನು ತರಬೇತಿಗೊಳಿಸುತ್ತಾರೆ. ಉದಾ:-ಹಳೆಯ ಓರೈಬಿ ಎಂಬ ಹೋಪಿ ಹಳ್ಳಿಗಳಲ್ಲಿ ಇನ್ನುಳಿದ ಹೋಪಿ ಹಳ್ಳಿಗಳಲ್ಲಿಯ ಹಾಗೆ ಅರ್ಚಕತನವನ್ನೇ ಜೀವನೋಪಾಯವಾಗಿ ಮಾಡಿಕೊಂಡು ಪೂರ್ಣಾವಧಿಯ ಅರ್ಚಕರಿಲ್ಲ. ಪ್ರತಿಯೊಬ್ಬ ಪ್ರೌಢ ಹೋಪಿಯು ಒಂದು ಅಥವಾ ಒಂದಕ್ಕಿಂತ ಹೆಚ್ಚು ಗೌಪ್ಯ ಸಂಘದ (Secret Soviety) ಸದಸ್ಯನಾಗುತ್ತಾನೆ. ಈ ಸಮಾರಂಭಗಳನ್ನು ಆಚರಿಸುವುದು ಈ ಗೌಪ್ಯ ಸಂಘಗಳ ಆದ್ಯ ಕರ್ತವ್ಯ. ಅವುಗಳಲ್ಲಿ ಕೆಲವು ಪುರುಷರಿಗೂ ಇನ್ನುಳಿದವು ಸ್ತ್ರೀಯರಿಗೂ ಪ್ರವೇಶ ನೀಡುತ್ತವೆ. ಯಾವುದೇ ಹಳ್ಳಿಯ ವಂಶ ಮತ್ತು ಗೋತ್ರ ಮುಂತಾದ ಏಕಶಾಖೀಯ ವಂಶಾನುಕ್ರಮದ ಸಂಬಂಧಿಕರ ಗುಂಪುಗಳೊಡನೆ ಆಂಶಿಕವಾಗಿಯಾದರೂ ಒಂದರಲ್ಲೊಂದು ಮಿಳಿತವಾಗುತ್ತವೆ. ಒಂದು ಮಾತೃ ವಂಶೀಯ ಗೋತರ‍್ರವು, ಅದರ ಸಮಾರಂಭದ ಭಕ್ತ ಗೋತ್ರಗಳ ಸದಸ್ಯರು ಪ್ರತಿಯೊಂದು ಸಮಾರಂಭದ ಭಕ್ತರ ಗುಂಪಿಗೆ ಸಂಬಂಧ ಹೊಂದಿರುತ್ತಾರೆ. ಆದ್ದರಿಂದ ಸದಸ್ಯರು ಗುಂಪು ವಿವಿಧ ಗೋತ್ರಗಳನ್ನು ಸಹಕರಿಸುವಂತೆ ಮಾಡಿ, ಕೊನೆಗೆ ಇಡೀ ಹಳ್ಳಿಗೇ ಹಿತ ಮಾಡುವ ಒಂದು ಸಾಮಾಜಿಕ ಸಾಧನವಾಗಿ ರೂಪುಗೊಳ್ಳುತ್ತದೆ. ವಾರ್ಷಿಕ ಚಕ್ರದ ಈ ಮುಖ್ಯ ಸಮಾರಂಭಗಳನ್ನು ಆಚರಿಸುವ ಪುರುಷರ ಸಮಾರಂಭದ ಗುಂಪು ಗಳ ಮಹತ್ವದ ಕಾರ್ಯವೆಂದರೆ ಈ ವಿಧಿಗಳ ಮುಖಾಂತರ “ಕಾಚಿನಾ” ಎಂದು ಕರೆಯಲ್ಪಡುವ ತಮ್ಮ ಪೂರ್ವಜ (ancestor) ರನ್ನು ಮೋಡ ಮತ್ತು ಮಳೆಯ ರೂಪದಲ್ಲಿ ತಮ್ಮಲ್ಲಿಗೆ ಬರಮಾಡಿಕೊಂಡು ಮರುಭೂಮಿಯ ಪರಿಸರದಲ್ಲಿ ಜೀವನವನ್ನು ಪೋಷಿಸಿಕೊಂಡು ಹೋಗುವುದು. ಈ ಸಮಾರಂಭಗಳ ಗೌಪ್ಯ ಭಾಗವು ಸಾಮಾನ್ಯವಾಗಿ ಏಳು ದಿನಗಳವರೆಗೆ ಚೌಕೋನಾಕೃತಿಯ ಸಮಾರಂಭದ ನೆಲಮನೆ (Kiva) ಗಳಲ್ಲಿ ನಡೆಯುತ್ತದೆ. ಅಲ್ಲಿ ವಿಧಿವತ್ತಾದ ಧೂಮ್ರಪಾನ, ಶಂಖ ಮತ್ತು ಇತರ ವಾದ್ಯಗಳ ಮೇಳದೊಂದಿಗೆ ಪ್ರಾರ್ಥಿಸುತ್ತ, ಉಸುಕಿನಿಂದ ಚಿತ್ರ ಬರೆಯುತ್ತ ಪುರುಷರು ಸಮಾರಂಭವನ್ನು ಸ್ಥಾಪಿಸುತ್ತಾರೆ. ಅವರು ಒಂದು ಜಗುಲಿ (ವೇದಿಕೆ)ಯನ್ನು ನಿರ್ಮಿಸಿ, ಧಾರ್ಮಿಕ ದ್ರವಗಳನ್ನು ತಯಾರಿಸಿ ಒಮ್ಮೊಮ್ಮೆ ಈ ಕೀವಾಗಳಿಂದ ಹೊರಬಂದು ಹಳ್ಳಿಯಲ್ಲಿದ್ದ ದೈವಕ್ಷೇತ್ರಗಳಿಗೆ ಪ್ರಾರ್ಥನಾ ಪೂರ್ವಕವಾಗಿ ನೈವೇದ್ಯ ಮಾಡಿಸುತ್ತಾರೆ. ಎಂಟನೆಯ ದಿವಸ ಗೌಪ್ಯ ಮತ್ತು ಸಾರ್ವತ್ರಿಕ ವಿಧಿ ವಿಧಾನಗಳನ್ನು ಜೋಡಿಸಲಾಗುತ್ತದೆ. ಒಂಭತ್ತನೆಯ ದಿವಸ ಮುಖ್ಯ ನೃತ್ಯವನ್ನು ಆಚರಿಸುವುದನ್ನು ನೋಡಲು ಸುತ್ತಮುತ್ತಲಿನ ಹಳ್ಳಿಗರನ್ನು ಸಹ ಆಮಂತ್ರಿಸಲಾಗುವುದು. ಹೀಗೆ ಈ ಪೂಜಾ ವಿಧಾನಗಳು ಸ್ವಾಯಗೋತ್ರಗಳನ್ನು ಪೋಣೀಸಿ ಇಡೀ ಹಳ್ಳಿಗೆ ಹಿತವನ್ನು ಉಂಟುಮಾಡುವ ಸಾರ್ವಜನಿಕ ಕಾರ್ಯಗಳನ್ನು ಮಾಡಲು ಪ್ರಚೋದಿಸುತ್ತವೆ. ಈ ಸಮಾರಮಭಗಳು ಇಡೀ ಹಳ್ಳಿಯನ್ನು ಸಂಘಟಿಸುವ ಮೂಲಕ ಹಳ್ಳಿಯ ವ್ಯವಸ್ಥಿತ ಮುಂದುವರೆಯುವಿಕೆಗೆ ಕಾರಣೀಭೂತವಾಗುತ್ತವೆ. ನಿಜಕ್ಕೂ ಹೋಪಿಗಳಿಗೆ ಧರ್ಮವು ಸಾಮಾಜಿಕ ಜೀವನದ ಅಡಿಗಲ್ಲು, ಧರ್ಮವು ಅದರ ಸಂಸ್ಕೃತಿಯ ಅತ್ಯವಶ್ಯಕವಾದ ಮುಖ್ಯವಸ್ತುವೂ ಹೌದು.

ಹೋಪಿಗಳ ಸರ್ಪ ನೃತ್ಯ (Snake Dance)

ಪ್ರತಿಯೊಂದು ಗೋತ್ರಕ್ಕೂ ಒಂದು ವಿಶಿಷ್ಟ ಹೆಸರಿದ್ದಂತೆ ಆ ಗೋತ್ರದ ಭಕ್ತರ ಭ್ರಾತೃತ್ವಗುಂಪಿಗೂ ಅದೇ ಹೆಸರಿಡುತ್ತಾರೆ. ಆದರೆ ಈ ಭ್ರಾತೃತ್ವದ ಸದಶ್ಯತ್ವವು ಆ ಗೋತ್ರದ ಸದಸ್ಯರಿಗೆ ಮಾತ್ರ ಸೀಮಿತವಾಗಿರದೆ ಉಳಿದ ಗೋತ್ರಗಳ ಕೆಲವು ಸದಸ್ಯರನ್ನೂ ಹೊಂದಿರಬಹುದು.

ಉದಾ:- ಸರ್ಪಗೋತ್ರವು ಸರ್ಪನೃತ್ಯದ ಮೇಲೆ ಸಂಪೂರ್ಣ ಸಾಮ್ಯವನ್ನು ಪಡೆದಿರುತ್ತದೆ. ಬೇಸಿಗೆ ಕಾಲದಲ್ಲಿ ಆಚರಿಸಲ್ಪಡುವ ಈ ಸಮಾರಂಭವು ಬೆಳೆಯುತ್ತಿರುವ ಬೆಳೆಗಳಿಗೆ ಮಳೆಯನ್ನು ತುವರ ಉದ್ದೇಶದಿಂದ ರಚಿಸಲ್ಪಟ್ಟಿದೆ. ಸರ್ಪ ಭ್ರಾತೃತ್ವವು ಪ್ರಮುಖನನ್ನು ಮುಖ್ಯ ಅರ್ಚಕನನ್ನಾಗಿ ಗಣಿಸಿ ಆ ಗೋತ್ರದ ಬಹಳಷ್ಟು ಭಕ್ತರನ್ನು ಮತ್ತು ಇತರ ಗೋತ್ರಗಳ ಕೆಲವು ಭಕ್ತರನ್ನು ಸೇರಿಸಿಕೊಂಡು ಈ ಸಮಾರಂಭವನ್ನು ಆಚರಿಸುತ್ತದೆ.

ಒಣನಾಡಿನಲ್ಲಿ ಜೀವಿಸುವ ಹೋಪಿ ಜನರ ಧರ್ಮ ಮತ್ತು ಸಮಾರಂಭದ ಆಚರಣೆಗಳು ಆರಂಭ ಮಟ್ಟದ ಒಕ್ಕುಲುತನವನ್ನು (Horticulture) ಮಾಡುವ ಅವರಿಗೆ ಅತ್ಯವಶ್ಯವಿರುವ ಮಳೆಯ ಅವಶ್ಯಕತೆಯ ಮೇಲೆ ಕೇಂದ್ರಿತವಾಗಿವೆ. ಇವು ಜನರ ಕಲ್ಪನೆಯಲ್ಲಿ ಸರ್ವಜನರ ಭೌತಿಕ ಮತ್ತು ಆಧ್ಯಾತ್ಮಿಕ ಕ್ಷೇಮದೊಂದಿಗೆ ಸೇರ್ಪಡೆಯಾಗಿವೆ. ಪ್ರತಿ ತಿಂಗಳು ಬರುವ ಚಳಿಗಾಲದ ಸಮಾರಂಭಗಳು, ಹೋಪಿಗಳಿಗೆ ಅವಶ್ಯವಿದ್ದ ತಯಾರಿಕೆಯಾಗಿ ಮೂಡಿ ಬರುವ ವಿಧಿವತ್ತಾಗಿ ಬೆಳಸನ್ನು ರೇವಾದಲ್ಲಿ ಬೆಳೆಸುವ ವಿಧಿ ಕರ್ಮವಾಗಿ ಪ್ರತಿನಿಧಿಸುತ್ತದೆ. ಇದು ಬೇಸಿಗೆಯ ಒಕ್ಕಲುತನಕ್ಕೆ ಹರಿಕಾರ, ಬೇಸಿಗೆಯ ಸಮಾರಂಭಗಳು ಕಡಿಮೆ ವಿಶದವಾಗಿದ್ದು ಕೆಲವೇ ಮಾತ್ರ. ಯಾಕೆಂದರೆ ಆಗ ಹೊಲಗಳಲ್ಲಿ ಕೆಲಸಬಹಳ. ಇವು ಹೆಚ್ಚಾಗಿ ವಿಸ್ತೃತವಾದ ಪ್ರಾರ್ಥನೆಗಳಾಗಿದ್ದು ಅವು ಬೆಳೆಯುವ ಪೈರಿಗೆ ಬೇಕಾದ ಮಳೆಯನ್ನು ಬೇಡುತ್ತವೆ. ಹೀಗೆ ಪ್ರತಿಯೊಂದು ಸಮಾರಂಭವು ಮುಖ್ಯ ಆರ್ಥಿಕ ಚಟುವಟಿಕೆಗಳಿಗೆ ಹೆಚ್ಚು ಕಡಿಮೆ ನೇರವಾಗಿ ಸಹಾಯಕವಾಗುವಂತೆಯೂ ಮತ್ತು ಅದೇ ಸಮಯಕ್ಕೆ ಚೆನ್ನಾದ ಫಲಕಾರಿಯಾದ ಜೀವನವು ಲಭ್ಯವಾಗಲೆಂಬ ಉದ್ದೇಶದಿಂದ ಹೊಂದಿದ್ದೆಂದು ಕಲ್ಪಿಸಲಾಗಿದೆ.

ಈ ಆರ್ಥಿಕ ಮತ್ತು ಸಮಾರಂಭದ ಸುತ್ತಿನಲ್ಲಿ ಗೋತ್ರದ ಪಾತ್ರವು ಬಹಳ ಮಹತ್ವದ್ದು. ಪ್ರತಿಯೊಂದು ಗೋತ್ರವು ಎಲ್ಲ ಜೀವಂತ ಸಂಬಂಧಿಗಳನ್ನು ಒಳಗೊಂಡಿರುವುದಲ್ಲದೆ ಗೋತ್ರದ ಮೃತ ಸದಸ್ಯರ ರೂಪಾಂತರ ಹೊಂದಿದ ಆತ್ಮ ಅಥವಾ ಭೂತ (spirit) ಗಳನ್ನು “ಕಾಚಿನಾ” ಎಂಬ ಹೆಸರಿನಿಂದ ಕೂಡಿಸಿಕೊಳ್ಳುತ್ತಿತ್ತು. ಇವು ಯಾವುದೇ ವಿಶಿಷ್ಟ ವ್ಯಕ್ತಿಗಳನ್ನು ಪ್ರತಿನಿಧಿಸದೆ ಸಾಮಾನ್ಯವಾಗಿ ಗೋತ್ರದ ಪೂರ್ವಜರ ಸರ್ವಸಾಮಾನ್ಯ ವರ್ಗಗಳಾಗಿವೆ. ಜೀವಂತ ಗೋತ್ರ ಭ್ರಾತೃಗಳು ಮತ್ತು ಮೃತ ಪೂರ್ವಜರ ಕಾಚಿನಾಗಳಂತೆ, ಗೋತ್ರದಲ್ಲಿ ಕುಲಸಂಕೇತ ಚಿನ್ಹದ ಪ್ರಾಣಿವರ್ಗ ಅಥವಾ ವನಸ್ಪತಿ ವರ್ಗವನ್ನು ಕೂಡಿಸಲಾಗುತ್ತದೆ. ಇದೂ ಅಲ್ಲದೇ ಈ ಟೋಟೆಮ್ ವರ್ಗಕ್ಕೆ ಸಂಬಂಧಿಸಿದ ಗೋತ್ರ ಮತ್ತು ಕಾಚಿನಾಗಳಿಂದ ಪೂಜಿಸಲ್ಪಟ್ಟ ದೈವಗಳನ್ನು ಮತ್ತು ಮನುಷ್ಯ ರೂಪ ಧರಿಸಿದ ನಿಸರ್ಗದ ಯಾವುದೇ ಗೋಚರ ವಸ್ತುಗಳನ್ನು ಸಹ ಗೋತ್ರದಲ್ಲಿ ಸೇರಿಸಲಾಗುತ್ತದೆ. ಕಾಚಿನಾಗಳು ಪಾತಾಳಲೋಕದಲ್ಲಿ ವಾಸ್ತವ್ಯ ಮಾಡುತ್ತಿದ್ದು ಅವು ಮನುಷ್ಯರ ಹಾಗೆಯೇ ಜೀವನ ಸಾಗಿಸುತ್ತವೆ ಎಂಬ ನಂಬುಗೆ, ಆದರೆ ಈ ಮಾತಿಗೆ ಒಂದೇ ಒಂದು ಅಪವಾದವೆಂದರೆ ಕಾಚಿನಾಗಳ ಋತುಗಳು ತಿರುವು ಮುರುವಾಗಿವೆ. ಹೋಪಿಗಳ ಬೇಸಿಗೆ ಕಾಲ ಕಾಚಿನಾಗಳಿಗೆ ಚಳಿಗಾಲ, ಕಾಚಿನಾಗಳ ಬೇಸಿಗೆ ಕಾಲ ಹೋಪಿಗಳಿಗೆ ಚಳಿಗಾಲ. ವರ್ಷಕ್ಕೊಂದು ಬಾರಿ ಹೋಪಿಗಳ ಚಳಿಗಾಲದಲ್ಲಿ ಕಾಚಿನಾಗಳು ಮುಖವಾಡ ಧರಿಸಿದ ನೃತ್ಯಗಾರರ ರೂಪದಲ್ಲಿ ಹೋಪಿ ಹಳ್ಳಿಗಳಿಗೆ ಬಂದು,ಲ ಸವಿಸ್ತಾರ ಸಂಸ್ಕಾರ(rite) ಗಳಲ್ಲಿ ಪಾಲುಗೊಳ್ಳುತ್ತವೆ. ಆಗ ಹೋಪಿಗಳು ತಮ್ಮ ಅಲೌಕಿಕ ಶಕ್ತಿ ಮತ್ತು ವರ್ಚಸ್ಸನ್ನು ಉಪಯೋಗಿಸಿ ದೇವತೆಗಳಿಂದ ಮಳೆ ಮತ್ತು ಇತರ ಸಹಾಯಗಳನ್ನು ಪಡೆಯಲು ಕಾಚಿನಾಗಳಿಗೆ ಬಿನ್ನವಿಸಿಕೊಳ್ಳುತ್ತಾರೆ. ಈ ರೀತಿಯಾಗಿ ಮೃತರೊಂದಿಗಿನ ಸಂಬಂಧದ ಮುಖಾಂತರ ಗೋತ್ರಗಳು ಅಲೌಕಿಕ ಶಕ್ತಿಗಳ ಜಗತ್ತಿನೊಂದಿಗೆ ಸೇತುವೆಯನ್ನೊದಗಿಸಿ ಯಶಸ್ವಿಯಾದ ಜೀವನಕ್ಕೆ ಅವಶ್ಯವಾದ, ವಿಶ್ವ ಮತ್ತು ಅದರಲ್ಲಿ ವಸ್ತುಗಳೊಡನೆ ಸಮರಸವನ್ನು ಸ್ಥಾಪಿಸಿ ಪೋಷಿಸುತ್ತವೆ.

ನಾವು ಒಂದು ಸಂಸ್ಕೃತಿಯನ್ನು ಆಳವಾಗಿ ಅರ್ಥಮಾಡಿಕೊಂಡಾಗ ಜೀವನದ ಹೋರಾಟ ಮತ್ತು ನಂಬುಗೆಯ ಪದ್ಧತಿಗಳು ಹಾಸುಹೊಕ್ಕಾಗಿ ಕಾಣಿಸುವ ದೃಷ್ಟಿಯು, ಸಮಾಜದ ಸರಳ ರಚನೆಗಿಂತ ಹೆಚ್ಚು ಪ್ರೌಢವಾದದ್ದಾಗಿರುತ್ತದೆ. ಅವರ ಜಗತ್ತಿನ ಕಲ್ಪನೆಯಲ್ಲಿ, ಹೋಪಿ ಜನರು ಬಹಳ ಸ್ಪಷ್ಟವಾಗಿದ್ದಾರೆ. ಅವರು ಅಸಕ್ತ ಭೂತ ಜಗತ್ತು, ಜಾಗರೂಕ ಭೂತಜಗತ್ತಿನ ಕೂಡ ಸಹ ಅಸ್ತಿತ್ವವನ್ನು ಪಡೆದಿದೆ ಎಂದು ನಂಬುತ್ತಾರೆ. ಈ ಮೊದಲು ಹೇಳಿರುವಂತೆ ಈ ಆತ್ಮ ಅಥವಾ ಭೂತಜಗತ್ತು ದೇವರುಗಳಲ್ಲದೆ ಎಲ್ಲಾ ಮನುಷ್ಯರನ್ನೂ, ಮನುಷ್ಯನಿಗಿಂತ ಕಡಿಮೆ ದರ್ಜೆಯ ಪ್ರಾಣಿ, ವನಸ್ಪತಿ ಮತ್ತು ಕೆಲವು ಸಗೋಚರ ನಿಸರ್ಗ ವಸ್ತುಗಳಾದ ಸೂರ‍್ಯ, ಮೋಡ, ಮುಂತಾದವನ್ನು ಒಳಗೊಂಡಿರುತ್ತದೆ. ಇವೆಲ್ಲವುಗಳಲ್ಲಿ ಆತ್ಮದ ಅಂಶವಿದೆ. ಮಾನವನ ಪ್ರಾರ್ಥನೆಯು ಸಹಜವಾಗಿ ಕಾಣುವ ನಿಸರ್ಗದ ಮುಖದ ಹಿಂದೆ ಅಡಗಿದ ಈ ಆತ್ಮದ ಅಂಶವನ್ನು ತಲುಪುತ್ತದೆ. ಈ ಅರ್ಥದಲ್ಲಿ ಹೋಪಿಗಳು ಸರ‍್ಯನನ್ನು ಪ್ರಾರ್ಥಿಸದೆ ಅವನ ಆತ್ಮದ ಸಾರವನ್ನು ಪ್ರಾರ್ಥಿಸಿದಂತೆ. ಎಲ್ಲ ವಸ್ತುಗಳು ಈ ಆತ್ಮ ಜಗತ್ತಿಗೆ ಸಂಬಂಧ ಪಟ್ಟಿದ್ದರ ಮೂಲಕ ಅವು ಮನಷ್ಯರೊಂದಿಗೆ ಸಂಬಂಧ ಪಟ್ಟಿವೆ. ಆದ್ದರಿಂದ ಅವು ಮನುಷ್ಯನ ಇಚ್ಛೆಗಳನ್ನು ತಿಳಿದುಕೊಳ್ಳಬಲ್ಲವು.ಇಂಥ ಸತತ, ವ್ಯವಸ್ಥಿತವಾದ ಆತ್ಮ ಜಗತ್ತಿನ ಅಸ್ತಿತ್ವವನ್ನು ಸಹಜವಾಗಿ ಗ್ರಹಿಸಲಾಗುತ್ತದೆ. ಬಿಳಿ ಅಮೇರಿಕನ್ನರಿಗೆ ಪ್ರಜಾಸತ್ತೆ ಮತ್ತು ಜ್ಯೂರಿ ಪದ್ಧತಿಗಳ ಸಫಲತೆಯನ್ನು ಸಿದ್ಧಮಾಡುವದು ಹೇಗೆ ಅವಶ್ಯವಿಲ್ಲವೋ ಹಾಗೆ ಹೋಪಿ ಜನರಿಗೆ ಆತ್ಮಜಗತ್ತು ಒಂದು ಮೂಲ ಗ್ರಹಿಕೆಯಾಗಿದ್ದು ಅದನ್ನು ಸಮರ್ಥಿಸುವ ನಿದರ್ಶನ ಅವಶ್ಯವಿಲ್ಲ. ನಿತ್ಯಜೀವನದ ಹೋರಾಟದಲ್ಲಿ ಹೋಪಿಗಳು ಈ ನಂಬುಗೆಯನ್ನು ಹೇಗೆ ಉಪಯೋಗಿಸುತ್ತಾರೆ. ಎಂಬುದನ್ನು ನೋಡೋಣ. ಹೋಪಿ ಜನರಪ್ರಾರ್ಥನೆ ಕ್ರಿಶ್ಚಿಯನ್ ಪ್ರಾರ್ಥನೆಯನ್ನು ಹೋಲುವುದಿಲ್ಲ. ಅದು ಮನುವಿಯನ್ನು ಪ್ರದರ್ಶಿಸದೆ, ಕೆಲವು ಕೆಲಸಗಳಾಗಬೇಕೆಂಬ ಆಶಯ ಅಥವಾ ಇಚ್ಛೆಯನ್ನು ವ್ಯಕ್ತ ಪಡಿಸುತ್ತದೆ, ಅವರಲ್ಲಿ ಪ್ರಾರ್ಥನೆಯು ಕಡ್ಡಾಯ ಶಬ್ದಗಳ ಒಂದು ಸರವಿದ್ದಂತೆ. ಈ ಕಡ್ಡಾಯ ಅಂಶದಿಂದಾಗಿ ಪ್ರಾರ್ಥನೆಯು ಮೋಡ, ವನಸ್ಪತಿ ಅಥವಾ ಪ್ರಾಣಿಗಳ ಆತ್ಮ ಅಂಶದ ಮೇಲೆ ಪ್ರಭಾವ ಬೀರುತ್ತದೆ. ಆದ್ದರಿಂದ ಹೋಪಿ ಸಮಾರಂಭಗಳ ಅವಶ್ಯಕ ಘಟಕವೆಂದರೆ ಪ್ರಾರ್ಥನೆ. ಅವರ ಸಮಾರಂಭವೆಂದರೆ ಒಂದು ಹಳ್ಳಿಯು ಇಚ್ಛಿಸುವ ಫಲವತ್ತತೆ, ದೀರ್ಘ ಆಯುಷ್ಯ ಅಥವಾ ಆರೋಗ್ಯ ಮುಂತಾದವನ್ನು ಬೇಡುವ ಸಾಮೂಹಿಕ ಪ್ರಾರ್ಥನೆಗಳು. ಬಹಳ ಜನರು ಕೂಡಿಕೊಂಡು ಪ್ರಾರ್ಥನೆ  ಮಾಡುವುದರಿಂದ ಇಚ್ಛೆಯ ಶಕ್ತಿಯು ಪ್ರಬಲವಾಗುತ್ತದೆ. ಆದರೆ ಕೇವಲ ಶಾಂತ ಚಿತ್ತ, ವೈರ ವಿಚಾರಗಳಿಂದ ಮುಕ್ತವಾದ ಶುದ್ಧ ಮನಸ್ಸಿನಿಂದ ಮಾಡಿದ ಪ್ರಾರ್ಥನೆ ಮಾತ್ರ ಪರಿಣಾಮಕಾರಿಯಾಗಬಲ್ಲದು.

ಹೋಪಿಗಳು ಕೇವಲ ಶಬ್ದಗಳಿಂದ ಮಾತ್ರವಲ್ಲದೇ ವಸ್ತುಗಳ ಹಾಗೂ ಕೃತಿಗಳ ಮುಖಾಂತರ ವಾಗಿಯೂ ಪ್ರಾರ್ಥಿಸುತ್ತಾರೆ. ಗಿಡಗಗಳ ಎದೆಗಳ ಮೇಲಿನ ಗರಿಗಳನ್ನು ಪಡೆಯಲು ಪ್ರಯಾಸದಾಯಕ ಬೇಟೆಯಾತ್ರೆಗಳನ್ನು ಕೈಕೊಳ್ಳುತ್ತಾರೆ. ಈ ಗರಿಗಳು ಪ್ರಾರ್ಥನೆಗಳನ್ನು ಸಫಲಗೊಳಿಸುವ ಸಾಮರ್ಥ್ಯ ಪಡೆದಿವೆ ಎಂಬ ನಂಬುಗೆ ಇದೆ. ಈ ಗರಿಗಳನ್ನು ಪ್ರಾರ್ಥನೆಯಲ್ಲಿ ನೈವೇದ್ಯ ರೂಪವಾಗಿ ಯೋಗ್ಯ ಸ್ಥಳದಲ್ಲಿ ಇಟ್ಟಾಗ ಅವು ಆತ್ಮಗಳ ಜಗತ್ತನ್ನು ತಲುಪುತ್ತವೆಂದು ನಂಬುಗೆ. ನೃತ್ಯ ಮತ್ತು ಓಟಗಳಂಥ ಕ್ರಿಯೆಗಳೂ ಸಹ ಪ್ರಾರ್ಥನೆಗಳೆಂದು ಪರಿಗಣಿಸಲ್ಪಡುತ್ತವೆ. ಊರ ಪ್ರಮುಖನು ನಿಯಮಿಸಿದ ಓಟಗಾರನು ಮೃತ್ಯದೇವತೆಯೂ, ಜಗತ್ತಿನ ಮಾಲಿಕನೂ ಮತ್ತು ಫಲವತ್ತತೆಯ ನಿಯಂತ್ರಕನೂ ಆದ “ಮಸಾವುವು”ನ ಹಾಗೆ ವೇಷ ಧರಿಸುತ್ತಾನೆ. ಅವನು ಕ್ರಮಾಗತ ರಾತ್ರಿಗಳಲ್ಲಿ ಬಲದಿಂದ ಎಡಕ್ಕೆ ಪ್ರತಿರಾತ್ರಿ ಕ್ರಮೇಣ ಕಿರಿದಾಗುವ ವರ್ತುಳಾಕಾರದಲ್ಲಿ ಓಡುತ್ತಾನೆ. ವರ್ತುಳ ಸಣ್ಣದಾದಂತೆ ಅವನು ಮಳೆಯ ಮೋಡಗಳನ್ನು ಆಕರ್ಷಿಸಿ ಧಾನ್ಯದವಸ ಬೆಳೆಯಲು ಪ್ರಚೋದನೆ ಕೋರುತ್ತಾನೆ.

ಈ ಒಂದೇ ಒಂದು ಉದಾಹರಣೆಯಿಂದ ಸಂಸ್ಕೃತಿ ಮತ್ತು ಸಮಾರಂಭಗಳು ಗೋತ್ರಗಳ ಅವಶ್ಯಕ ಕಾರ್ಯವೆಂದು ತಿಳಿಯಬಾರದು. ಯಾಕೆಂದರೆ ಧಾರ್ಮಿಕ ಜೀವನದಲ್ಲಿ ಏನೂ ಪಾತ್ರವಿರುವ ಗೋತ್ರಗಳ-ಉದಾ:- ಕ್ರೋ ಇಂಡಿನ್ನರು-ಉದಾಹರಣೆಗಳು ಅನೇಕ. ಆದರೆ ಸಾಮಾಜಿಕ ನಿಯಂತ್ರಣದಲ್ಲಿ ಪ್ರಮುಖ ಪಾತ್ರವಿರುವ ಗೋತ್ರಗಳಲ್ಲಿ ಸಂಸ್ಕಾರ ಹಾಗೂ ಸಮಾರಂಭಗಳು ಸಮಗ್ರ ಸಂಸ್ಕೃತಿಯೊಂದಿಗೆ ಏಕೀಕರಣಗೊಂಡಿರುತ್ತವೆ. ಆದರೆ ಕೆಲವು ಹೋಪಿ ಹಳ್ಳಿಗಳಲ್ಲಿ ಸಾಂಸ್ಕೃತಿಕ ಬದಲಾಣೆಯು ಈ ಸಾಂಪ್ರದಾಯಕ, ಸ್ಥಾನಿಕ ಏಕೀಕರಣದ ಧಾರ್ಮಿಕ ಅಡಿಪಾಯವನ್ನು ನಾಶಮಾಡಿದೆ. ಉದಾ:-ಹಳೇ ಓರೈಬೀ ಹಳ್ಳಿಯಿಂದ ಜನರು ವಲಸೆ ಹೋಗುವುದರಿಂದಾಗಿ ಸಮಾರಂಭವನ್ನು ಆಚರಿಸುವ ಗುಂಪುಗಳ ಸದಸ್ಯತ್ವವು ಬಹಳಷ್ಟಾಗಿ ಕಡಿಮೆಯಾಗಿದೆ. ಹಳ್ಳಿಗಳಲ್ಲಿ ಉಳಿದ ಜನರು ಈ ಕಾರಣದಿಂದಾಗಿ ತಮ್ಮಮೊದಲಿನ ಸೃಜನಶೀಲತೆಯ ಅಭಿವ್ಯಕ್ತಿಯನ್ನು ಕಳೆದುಕೊಂಡಿದ್ದು ಹಳ್ಳಿಗಳ ಐಕ್ಯತೆ ಮತ್ತಿಷ್ಟು ಕ್ಷೀಣವಾಗಿದೆ. ಮೊದಲು ಸಮಾರಂಭದ ಪಾತ್ರಗಳು ಒದಗಿಸಿದೆ ಅಭಿವ್ಯಕ್ತಿಯ ಅವಕಾಶವನ್ನು ಕಳೆದುಕೊಂಡ ಕೆಲವು ಓರೈಬೀ ಪುರುಷರು ಮೆನೋನೈಟ್ ಧರ್ಮ ಪ್ರಚಾರಕರ ಪ್ರವಚನಗಳನ್ನು ಆಸ್ಥೆಯಿಂದ ಕೇಳಲು ಉದ್ಯುಕ್ತರಾಗಿದ್ದಾರೆ. ಇದರಿಂದಾಗ ಅವರು ತಮ್ಮ ಸಾಂಪ್ರದಾಯಕ ಪದ್ಧತಿಗಳಿಂದ ಇನ್ನಷ್ಟು ದೂರವಾಗುತ್ತಿದ್ದಾರೆ.

ಅಗಾಧ ಸರ್ವವ್ಯಾಪ್ತಿ ಶಕ್ತಿ

ಕೆಲವು ಚಿಕ್ಕಗಾತ್ರದ ಸಮುದಾಯಗಳು ಮನುಷ್ಯ ಮತ್ತು ನಿಸರ್ಗದ ಉಳಿದ ಭಾಗಗಳ ನಡುವಿನ ಸಂಬಂಧವನ್ನು ಸ್ಪಷ್ಟವಾಗಿ ವಿವರಿಸುವ ಕಲ್ಪನೆಗಳನ್ನು ಹೊಂದಿವೆ. ಈ ಸಮುದಾಯಗಳು ಅಕ್ಷರ ಪೂರ್ವದ ಸಂಸ್ಕೃತಿಗಳಾದರೂ ಜಾನಪದ ಸಾಹಿತ್ಯ ಮತ್ತು ನಿಪುಣ ಮಾಹಿತಿಗಾರರ ಮುಖಾಂತರ ಅಂಥ ಸಮುದಾಯಗಳ ತಾತ್ವಿಕತೆಯ ಬಗ್ಗೆ ಸಾಕಷ್ಟು ಮಾಹಿತಿ ಸಂಗ್ರಹವಾಗಿದೆ.

ಡಾಕೋಟದಂಥ ಸಿಯೌ-ಭಾಷೆ ಮಾತನಾಡುವ ಉತ್ತರ ಅಮೇರಿಕೆಯ ರೆಡ್ ಇಂಡಿಯನ್ನರು “ವಾಕೊಂಡ” ಎಂಬ ಕಲ್ಪನೆಯ ಆಧಾರದ ಮೇಲೆ ತಮ್ಮ ಸಿದ್ದಾಂತವನ್ನು ಸ್ಥಾಪಿಸಿದ್ದಾರೆ. ಅಗಾಧ ವಾದ ಈ ಶಕ್ತಿಯು ಗಿಡ, ಮರ, ಪ್ರಾಣಿಗಳು, ನದಿಗಳು, ಪರ್ವತಗಳು ಮತ್ತು ಜನರನ್ನೊಳಗೊಂಡು ಇಡೀ ನಿಸರ್ಗದ ತುಂಬೆಲ್ಲ ಆವರಿಸಿಕೊಂಡಿದೆ. ಹೀಗಾಗಿ ಅದು ಮನುಷ್ಯನನ್ನು ಅವನ ಜಗತ್ತಿನ ಉಳಿದೆಲ್ಲ. ಅಂಶಗಳಿಗೆ ಕಟ್ಟಿ ಹಾಕಿದೆ, ಈ ಸಂಬಂಧವನ್ನು ಲೆವಿಬ್ರುಹಲ್ ಎಂಬ ಫ್ರೆಂಚ್ ತತ್ವಜ್ಞಾನಿ ಅತೀಂದ್ರಿಯ (mystic) ಸಂಬಂಧವೆಂದು ಕರೆದಿದ್ದಾನೆ. ವಾಕೊಂಡಾವು ಸೃಷ್ಟಿಯನ್ನು ವ್ಯವಸ್ಥಿತಗೊಳಿಸಿ ಆಂಶಿಕವಾಗಿ ನೈತಿಕ ಆಧಾರದ ಮೇಲೆ ಮನುಷ್ಯನ ಕರ್ಮಗತಿ(Destiny)ಯನ್ನೂ ನಿರ್ದೇಶಿಸುತ್ತಾರೆ. ಇದೇ ಶಕ್ತಿಯು ತನ್ನ ಸಹಾಯಕರ ಮುಖಾಂತರ ಅಯೋಗ್ಯ ನಡುವಳಿಕೆಗೆ ದೈವೀ ಪ್ರಕೋಪ ಶಿಕ್ಷೆಯನ್ನು ವಿಧಿಸುತ್ತದೆ. ಉದಾ:-ಮೃತ್ಯು ತರುವ ಸಿಡಿಲಿನ ಶಲಾಕೆ. ಆದರೆ ಸಿಯೌ ಜನರು ವಾಕೊಂಡಾನು ಕೊಡುವ ಹೊಡೆತ ಅಥವಾ ಆರ್ಶಿವಾದಗಳನ್ನು ಅಂಧಶೃದ್ಠೆ ಅಥವಾ ಅಸಹಾಯಕತೆಯಿಂದ ಸ್ವೀಕರಿಸುವುದಿಲ್ಲ. ಪ್ರಾರ್ಥನೆ, ವಿಧಿಯುಕ್ತ ಧ್ರೂಮಪಾನ ಮತ್ತು ಇತರ ಪೂಜಾ ವಿಧಾನಗಳ ಮುಖಾಂತರ ಈ ಅಗಾಧ ಶಕ್ತಿಯನ್ನು ತಲುಪಿ ಬಗ್ಗಿಸಿ, ಅದು ಮಾನವನ ಕಲ್ಯಾಣ ಮಾಡುವಂತೆ ಮಾಡುವರು.

ಉತ್ತರ ಅಮೆರಿಕೆಯ ಉತ್ತರ ಪೂರ್ವದ ಅಲಗೊಂಕಿಯನ್ ಇಂಡಿಯನ್ನರು ನೈತಿಕಾರ್ಥದ, ಸರ್ವವ್ಯಾಪಿಗುಣವನ್ನು- “ಮ್ಯಾನಿಟು”-ಗುರ್ತಿಸಿದ್ದು ಅದೂ ಕೂಡ ಅಗಾಧ ಶಕ್ತಿಯ ವರ್ಗಕ್ಕೆ ಸೇರಿರುತ್ತದೆ. ಅದು ಅನೇಕ ವಸ್ತುಗಳಲ್ಲಿ ವಾಸ್ತವ ಮಾಡುತ್ತದ.ಎ ಆದರೆ ಬೆವರು-ಲಾಜ್‌ಗಳಂಥ ಸ್ಥಿತಿಯಲ್ಲಿ ಅದು ಹೆಚ್ಚು ಪ್ರಖರವಾಗಿ ಕಂಡು ಬರುತ್ತದೆ. ಈ ನಂಬುಗೆಯಿಂದಾಗಿ ಫೋಕ್ಸ ಇಂಡಿಯನ್ನರು ಬೆವರು ಬರುವ ಹಾಗೆ ಜಳಕ ಮಾಡುವಾಗ ಮ್ಯಾನಿಟುವನ್ನು ತಮ್ಮ ಮೈಸೇರುವಂತೆ ಮಾಡಲು ತಮ್ಮ ಚರ್ಮದಲ್ಲಿ ತೂತು ಮಾಡಿಕೊಳ್ಳುತ್ತಿದ್ದರು. ಆಗ ಅದು ದಪ್ಪನೆಯ, ಬಿಸಿ ಆವಿಯ ರೂಪದಲ್ಲಿ ಏನೂ ತೊಂದರೆ ಇಲ್ಲದೆ ಅವರ ಶರೀರ ಪ್ರವೇಶಿಸುವದೆಂದು ನಂಬುತ್ತಿದ್ದರು.

ಅಲೌಕಿಕ ಶಕ್ತಿಗಳಲ್ಲಿಯ ನಂಬುಗೆಯು ಬಯಲು ಸೀಮೆಯ ಇಂಡಿಯನ್ನರ ಇಡೀ ಜೀವನವನ್ನು ಆವರಿಸಿತ್ತು. ಪ್ರಾರ್ಥನೆ, ಉಪವಾಸ ಮತ್ತು ಸ್ವಹಿಂಸೆಗಳ ಮುಖಾಂತರ ತಾವು ದೇವರುಗಳೊಡನೆ ಸಂಪರ್ಕ ಬೆಳೆಸಬಹುದೆಂದು ಅವರಿಗೆ ಗಾಢವಾದ ಧಾರ್ಮಿಕ ಮನವರಿಕೆಯಾಗಿತ್ತು. ಅವುಗಳ ಸಹಾಯ  ಮತ್ತು ರಕ್ಷಣೆಗಳು ಅವರಿಗೆ ಅವಶ್ಯವಾಗಿದ್ದವು. ಆದರೆ ಈ ಜನಾಂಗಗಳ ಮತ್ತು ಉತ್ತರ-ಪಶ್ಚಿಮದ ಕರಾವಳಿ ಇಂಡಿಯನ್ನರ ಧಾರ್ಮಿಕ ಜೀವನಗಳ ತುಲನೆಯು ಅವರ ಸಾಮಾಜಿಕ ಮತ್ತು ಭೌತಿಕ ಜೀವನಕ್ಕಿಂತ ಗಾಢವಾದ ಅಂತರವನ್ನು ಬೆಳಕಿಗೆ ತರುತ್ತದೆ.

ಉತ್ತರ ಶಾಂತಿ ಸಾಗರದ ಇಂಡಿಯನ್ನರಲ್ಲಿಯ ಸಮಾರಂಭಗಳು ಗೋತ್ರ-ಪುರಾಣಗಳಲ್ಲಿಯ ಘಟನೆಗಳ ಪುನರ್‌ಕ್ರಿಯೆಗಳು. ಅದರಲ್ಲಿ ಭಾಗವಹಿಸುವವರು ಎಲ್ಲ ಪ್ರಕಾರದ ಅಲೌಕಿಕ ಜೀವಿಗಳ ಮುಖವಾಡಗಳನ್ನು ಧರಿಸುವುದು ಕಂಡು ಬರುತ್ತದೆ. ಆದರೆ ಬಯಲು ಸೀಮೆಯ ಇಂಡಿಯನ್ನರು ದೇವರುಗಳ ಬಾಹ್ಯ ಉಡಿಗೆಗಳನ್ನು ಹಾಕಿಕೊಳ್ಳಲು ಧೈರ‍್ಯ ಮಾಡಲಾರರು. ಕಾಡುಕೋಣ ನೃತ್ಯದಲ್ಲಿ ಉಪಯೋಗಿಸುವ ಮುಖವಾಡಗಳನ್ನು ಬಿಟ್ಟರೆ ಅವರಿಗೆ ಬೇರೆ ಮುಖವಾಡಗಳು ಗೊತ್ತಿರಲಿಲ್ಲ. ಉತ್ತರ-ಪಶ್ಚಿಮ ಕರಾವಳಿಯಲ್ಲಿ ಕ್ಲಿಷ್ಟ ಸಮಾರಂಭಗಳು ಬಹಳ ಮಟ್ಟಿಗೆ ಆನಂದಕ್ಕಾಗಿ ಮತ್ತು ಸಾಮಾಜಿಕ ಸ್ಥಾನವನ್ನು ಎತ್ತರಿಸುವ ಮೊದಲಾದ ವೈಯಕ್ತಿಕವಾದ ಮತ್ತು ತನ್ನ ಸಂಬಂಧಿಕರ ಲಾಭಕ್ಕಾಗಿ ಆಚರಿಸಲ್ಪಡುತ್ತಿದ್ದವು. ಬಯಲು ಸೀಮೆಯಲ್ಲಿ ಅವುಗಳ ಉದ್ದೇಶವು ಇಡೀ ಜನಾಂಗದ ಕಲ್ಯಾಣವಾಗಿದ್ದು ಅವು ಪ್ರಾಧಾನ್ಯವಾಗಿ ಧಾರ್ಮಿಕ ರೂಪವನ್ನು ತಳೆದಿದ್ದವು.

ಇಂಡಿಯನ್ನರು ಅನೇಕ ಕಥೆಗಳಲ್ಲಿ ಮಹಾಭೂತವೆಂದು ಪರಿಗಣಿಸಲ್ಪಟ್ಟ ಸರ್ವೋತ್ತಮ ದೈವವನ್ನು ಪೂಜಿಸುತ್ತಿದ್ದರು. ಕ್ರಿಶ್ಚಿಯನ್ ಮಿಶನರಿಗಳ ವಿರೋಧ ವರ್ಚಸ್ಸಿನ ಸಮ್ಮುಖದಲ್ಲಿಯೂ ಕೂಡ ಈ ಮೂಲ ಸರ್ವೋತ್ತಮ ಜೀವಿಯಲ್ಲಿಯ ನಂಬುಗೆಯ ಕೆಚ್ಚು ಹಾಗೆ ಉಳಿದಿದೆ. ಕಟ್ಟುನಿಟ್ಟಾಗಿ ವ್ಯಾಖ್ಯಾಯಿಸಿದ ಗುಣಗಳನ್ನು ಮತ್ತು ನಿಗದಿ ಪಡಿಸಿದ ಕರ್ತವ್ಯಗಳನ್ನುಳ್ಳ ವೈಯಕ್ತಿಕ ದೇವರ ಕಲ್ಪನೆಯನ್ನು ಸಹ ಇಂಡಿಯನ್ನರು ಹೊಂದಿದ್ದಾರೆ. ಅವರ ಸರ್ವವ್ಯಾಪಿ, ಉಚ್ಚ ಮತ್ತು ಪವಿತ್ರ ಶಕ್ತಿಯ ಕಲ್ಪನೆಯು ನಾಗರೀಕ ಮನುಷ್ಯನ ಕಲ್ಪನೆಯಿಂದ ಭಿನ್ನವಾಗಿದೆ. ಇದನ್ನು ವಿವಿಧ ಬುಡಕಟ್ಟುಗಳು ವಾಕನ್ ಟಾಂಕಾ, ವಾಕೊಂಡಾ, ಕೋವಾಹಾರು ಮುಂತಾಗಿ ವಿವಿಧವಾಗಿ ಹೆಸರಿಸಿವೆ ಜೀವನ ಹಾಗೂ ತಿಳಿಯಲಸದಳವಾದದ್ದನ್ನೆಲ್ಲಾ ಅವರಿಗೆ ಪವಿತ್ರ ಅಥವಾ “ಏಕಾನ್” ಅದಕ್ಕೆ ತನ್ನದೇ ಆದ ಸ್ವತಂತ್ರ ಅಸ್ತಿತ್ವವಿರದೆ ಅಸ್ತಿತ್ವದಲ್ಲಿರುವ ಯಾವುದೇ ವಸ್ತುವಿನ ಗುಣವಾಗಿದೆ. ಇಂಥ ಶಕ್ತಿಯು ಪರಿಕಲ್ಪನೆಯಿಂದ ಆರಂಭಿಸಿ, ವೈಯಕ್ತಿಕ ದೇವರಲ್ಲಿ ನಂಬುಗೆ ಮಹಾಭೂತದ ಕಲ್ಪನೆ ಅಷ್ಟೇನೂ ಕಠಿಣವಲ್ಲ. ಓಮಾಹಾ ಮತ್ತು ಪೊಂಕಾ ಜನಾಂಗಗಳು ಈ ದೈವವನ್ನು ಗುಡುಗಿನಲ್ಲಿ ಗುರುತಿಸಿದರು. ಡಕೋಟಾ ಜನರು ಅದನ್ನು ಸೂರ‍್ಯನಲ್ಲಿ ಕಂಡರು. ಈ ದೈವೀ ಶಕ್ತಿಯು ಅಸ್ತಿತ್ವದಲ್ಲಿದ್ದದ್ದನ್ನೆಲ್ಲ ಆವರಿಸಿದ್ದು. ಹೆಚ್ಚು ಕಡಿಮೆ ಎಲ್ಲೆಡೆಗೂ ಇರುವಂಥದ್ದು. ಆದ್ದರಿಂದ ಇಂಡಿಯನ್ನರ ಧರ್ಮವನ್ನು ನಿಸರ್ಗ ಪೂಜೆಯೆಂದೂ ಕರೆಯಬಹುದು. ಒಬ್ಬ ವೃದ್ಧ ಡಕೋಟನು ಇದೇ ವಿಚಾರವನ್ನು ಮಾರ್ಮಿಕವಾಗಿ ಹೇಳುತ್ತಾನೆ. “ಒಮ್ಮಲೊಮ್ಮೆ ಗತಿಶೀಲವಾದದ್ದೆಲ್ಲ ನಿಲ್ಲುತ್ತದೆ. ಆಕಾಶದಲ್ಲಿ ಹಾರುವ ಹಕ್ಕಿ ಗೂಡುಕಟ್ಟಲು ಒಂದು ಸ್ಥಳದಲ್ಲಿ ವಿಶ್ರಮಿಸಲು ಮತ್ತೊಂದು ಸ್ಥಳದಲ್ಲಿ ನಿಲ್ಲುತ್ತದೆ. ತಿರುಗಾಡುವವನು ತನಗೆ ಬೇಕೆನಿಸಿದಾಗ ನಡೆಯುವದನ್ನು ನಿಲ್ಲಿಸುತ್ತಾನೆ. ಅದರಂತೆ ದೇವರು ಸಹ ವಿಶ್ರಾಂತಿಗೆ ಸಾಗುತ್ತಾನೆ. ಇಷ್ಟೊಂದು ನಿಚ್ಛಳವಾಗಿ ಮತ್ತು ಸ್ವಚ್ಛವಾಗಿ ಬೆಳಗುವ ಸೂರ‍್ಯನು, ದೇವನು ವಿಶ್ರಮಿಸಿದ ಸ್ಥಾನದಲ್ಲೊಂದು. ಉಳಿದ ಸ್ಥಾನಗಳೆಂದರೆ ಚಂದ್ರ, ನಕ್ಷತ್ರಗಳು, ಗಾಳಿ, ಅದರಂತೆ ಗಿಡಗಳು ಮತ್ತು ಪ್ರಾಣಿಗಳು, ಇಂಡಿಯನ್ನರು ಸಹಾಯ ಮತ್ತು ಆಶೀರ್ವಾದಗಳನ್ನು ಪಡೆಯಲು, ಈ ಸ್ಥಾನಗಳನ್ನು ಸ್ಮರಿಸಿ, ದೇವರು ವಿಶ್ರಮಿಸಿದ ಸ್ಥಾನಗಳಿಗೆ ಪ್ರಾರ್ಥನೆ ಸಲ್ಲಿಸುತ್ತಾರೆ”.

ನಿಸರ್ಗದಲ್ಲಿಯ ದೇವತೆಗಳಿಗಾಗಿ ಡಕೋಟಾ ಇಂಡಿಯನ್ನರಲ್ಲಿ ಧೃಢಿಕರಿಸಿದ ಪ್ರಾಧಾನ್ಯ ಶ್ರೇಣಿಯೂ ಇದೆ. ಪ್ರಥಮವಾಗಿ ಸೂರ್ಯನಿಗೆ ಪ್ರಾಧಾನ್ಯವಿದೆ. ಅವನೊಂದಿಗೆ ಆಕಾಶ, ಭೂಮಿ ಮತ್ತು ಘನ ವಸ್ತುವಾದ ಶಿಲೆ, ಎರಡನೆಯದಾಗಿ ವಿವಿಧ ಭೂತ(ಆತ್ಮ)ಗಳು ನಾಲ್ಕರ ಗುಂಪುಗಳಲ್ಲಿ ಪರಿಗಣಿಸಲ್ಪಡುತ್ತದೆ. ಚಂದ್ರ-ಗಾಳಿಗಳನ್ನು ಕಾಡುಕೋಣ ಮುಂತಾದವು. ತಮ್ಮ ರೆಕ್ಕೆಗಳ ಬಡಿಯುವಿಕೆಯಿಂದ ಹವೆಯನು, ನಡುಗಿಸುವ ಗುಡುಗಿನ ಪಕ್ಷಿಗಳು (thunder birds) ಪಶ್ಚಿಮ ದಿಕ್ಕಿನ ದೂರದ ಪರ್ವತದಲ್ಲಿ ವಾಸಿಸುತ್ತವೆ ಎಂದು ಭಾವಿಸುತ್ತಾರೆ. ಅವು ಯುದ್ಧದ ದೇವತೆಗಳಾಗಿದ್ದು ಒಂದಾನೊಂದು ಕಾಲದಲ್ಲಿ ಡಕೋಟಾ ಜನರಿಗೆ ಭರ್ಚಿ ಮತ್ತು ಟೋಮಾಹಾಂಕ ಆಯುಧಗಳನ್ನು ಒದಗಿಸಿದ್ದವು. ದೊಡ್ಡ ಪ್ರಾಣಿಯಾದ ನೀರು-ಕಾಡುಕೋಣದ ಕೋಡುಗಳು ಆಕಾಶವನ್ನು ಮುಟ್ಟುತ್ತಿದ್ದವು. ಅವು ಡಕೋಟಾ ಜನರಿಗೆ ಪವಿತ್ರ ಗುಚ್ಛವನ್ನು ಕೊಟ್ಟು ಅವರ ಪವಿತ್ರ ನೃತ್ಯಗಳಲ್ಲೊಂದನ್ನು (ಕಾಡುಕೋಣ ನೃತ್ಯ) ಪ್ರಾರಂಭಿಸಿದವು.

‘ಪಾವ್‌ನೀ ಇಂಡಿಯನ್‌ರಿಗೆ ಸರ್ವೋತ್ತಮ ಜೀವಿಯು “ತಿರಾವಾ” ಎಂದು ಕರೆಯಲ್ಪಟ್ಟು ಕೆಲಮಟ್ಟಿಗೆ ಅವನು ಡಕೋಟ ದೇವರಿಗಿಂತ ಭಿನ್ನವಾಗಿದ್ದನು. ಅವನು ಪವಿತ್ರ ಶಕ್ತಿಯ ಮೂರ್ತಿಸ್ವರೂಪವಾಗಿರದೆ ದೇವತೆಗಳ ಪ್ರಮುಖವಾಗಿದ್ದು ಜಗತ್ತಿನ ನಾಲ್ಕು ದಿಕ್ಕುಗಳಿಗೆ ನಾಲ್ಕು ವಾಯು ದೇವರುಗಳಿದ್ದ ಹಾಗೆ “ತಿರಾವಾ”ನು ಸ್ವರ್ಗಕ್ಕೆ ಅಧಿಪತಿಯಾಗಿದ್ದನು. “ಅತಿರಾ” ಎಂಬ ಧಾನ್ಯದ ಮಾತೃದೇವತೆಯು ಭೂಮಿಯ ಅಧಿದೇವತೆಯಾಗಿದ್ದಳು. ಪಾವ್‌ನೀ ಜನರಿಗೆ ವಿಶ್ವವು ಒಂದು ಅವಿಭಾಜ್ಯ ಅಖಂಡ ವಸ್ತು. ಭೂಮಿಯ ಮೇಲಿನ ಸಗೋಚರ ವಸ್ತುಗಳೆಲ್ಲ ಆಕಾಶದ ವಸ್ತುಗಳ ಪ್ರತೀಕಗಳು. ಈ ಎಲ್ಲ ವಿಚಾರಗಳಲ್ಲಿ ಮೆಕ್ಸಿಕೋದ ಅಂಶಗಳ ವರ್ಚಸ್ಸಿದೆ.

ಬಯಲು ಸೀಮೆಯನ್ನು ಇಂಡಿಯನ್ನರಲ್ಲಿ ಒಬ್ಬ ಶೂರ ಸಂಸ್ಕೃತಿ-ವೀರನ ಬಗೆಗಿನ, (Culture hero) ನಂಬುಗೆಯು ಬಹಳ ವಿಸ್ತ್ರುತವಾಗಿತ್ತು. ಅವನು ಜಗತ್ತನ್ನು ಸೃಷ್ಟಿಸಿದನೆಂದು ಅಥವಾ ಮಾರ್ಪಾಡು ಮಾಡಿದನೆಂದು ನಂಬುಗೆ. ಆದರೆ ಅವನ ಕೃತಿಗಳ ನೈತಿಕತೆಯು ಸಂಶಯಾಸ್ಪದ. ಪಶ್ಚಿಮರ ಕೆಲವು ಬುಡಕಟ್ಟು ಜನಾಂಗಗಳಿಗೆ ಅವನು ಸಣ್ಣ ತಓಳದ ರೂಪದಲ್ಲಿ ಕಾಣಿಸಿಕೊಂಡನು. ಪೂರ್ವದ ಇಂಡಿಯನ್ನರಿಗೆ ಅವನು ಹೆಚ್ಚಾಗಿ ಜೇಡುಹುಳದಂತೆ ಕಂಡನು. ಉಳಿದ ಜನಾಂಗಗಳಿಗೆ ಅವನು ಉಷಃ ಕಾಲ ಮತ್ತು ಪೂರ್ವದಿಕ್ಕಿನ ವಿಚಾರಗಳೊಡನೆ ಸಂಬಂಧಪಟ್ಟಿದ್ದನು.

ಉಪವಾಸ ಮತ್ತು ಭ್ರಮೆಗಳ ಮುಖಾಂತರ ಮಾನವನು ಸಹ ಈ ಪವಿತ್ರ ಶಕ್ತಿಯಲ್ಲಿ ಪಾಲ್ಗೊಳ್ಳಬಲ್ಲನೆಂದು ನಂಬುಗೆ ಇದೆ. ಅದರಲ್ಲಿಯೂ ಡಕೋಟಾ ಮತ್ತು ಪಾವ್‌ನೀ ಜನರಲ್ಲಿ ಪಾಮರರಿಂದ ಭಿನ್ನವಾದ ಮಾಂತ್ರಿಕರು ಹೆಚ್ಚು ಅರ್ಹರು. ಪಾವ್‌ನೀ ಜನರು ಇವರನ್ನು ಎರಡು ವರ್ಗಗಳಲ್ಲಿ ವಿಂಗಡಿಸಿದ್ದರು. ಮೇಲಿನ ವರ್ಗದವರು ಬುಡಕಟ್ಟಿನ ಪ್ರಮುಖರಿಗಿಂತ ಹೆಚ್ಚಿನ ವರ್ಚಸ್ಸನ್ನು ಪಡೆದಿದ್ದರು. ಇವರು ನಕ್ಷತ್ರಗಳಿಂದ ತಮ್ಮ ಶಕ್ತಿಯನ್ನು ಪಡೆದುಕೊಂಡಿದ್ದರು. ಕೆಳಗಿನ ವರ್ಗದವರು ತಮ್ಮ ಅಧಿಕಾರವನ್ನು ಪ್ರಾಣಿದೇವರುಗಳಿಂದ ಪಡೆದು ತೃಪ್ತಿ ಪಡಬೇಕಾಯಿತು. ಆದರೆ ಈ ಮಂತ್ರವೈದ್ಯರು ಪ್ರತಿಯೊಂದು ಜನಾಂಗದಲ್ಲಿಯೂ ವಿಶಿಷ್ಟ ವರ್ಗವಾಗಿ ಬೇರ್ಪಟ್ಟಿರಲಿಲ್ಲ. ಅರಪಾಹೋ, ಅಶಿನಿಬೋಯನ್ ಜನರಲ್ಲಿ ಪ್ರತಿಯೊಬ್ಬ ವ್ಯಕ್ತಿಯು ಅಲೌಕಿಕ ಶಕ್ತಿಯೊಡನೆ ಸಂಪರ್ಕ ಸಾಧಿಸಲು ಪ್ರಯತ್ನಿಸುತ್ತಿದ್ದರಿಂದ ಮೇಲಿನ ವರ್ಗದ ಮಂತ್ರವಾದಿಗಳೇ ಇರಲಿಲ್ಲ.

ನಿತ್ಯ ಜೀವನದ ಗಡಿಬಿಡಿಯಿಂದಾಚೆಗೆ, ಉಪವಾಸ ಮತ್ತು ಪ್ರಾರ್ಥನೆ ಮಾಡುತ್ತ ತಮ್ಮ ಪ್ರಾರ್ಥನೆ ತಲುಪಿದೆ ಎಂದು ಘೋಷಿಸುವ ಅಲೌಕಿಕ ಶಕ್ತಿಯ ಸಾಕ್ಷಾತ್ಕಾರವನ್ನು ಕಾದು ಕುಳಿತುಕೊಳ್ಳುತ್ತಿದ್ದರು. ಆದರೆ ಕೇವಲ ಉಪವಾಸ ಮತ್ತು ಏಕಾಂತಗಳಷ್ಟೇ ಸಾಕಾಗುತ್ತಿದ್ದಿಲ್ಲ. ಸೂರ‍್ಯ ನೃತ್ಯದಲ್ಲಿ ಕಂಡಬರುವ ಸ್ವ-ಹಿಂಸೆಯನ್ನು ಡಕೋಟಾ-ಜನರು ಆಚರಿಸುತ್ತಿದ್ದರು. ಸಾಕ್ಷಾತ್ಕಾರವು ಪ್ರಾಣಿಯ ಅಥವಾ ಸೂರ‍್ಯನ ಅಥವಾ ಆಕಾಶವಾಣಿಯ ರೂಪದಲ್ಲಿ ಕಾಣಿಸಿಕೊಳ್ಳುತ್ತಿತ್ತು. ಮನುಷ್ಯನ ಅಸಹಾಯಕ ಸ್ಥಿತಿಯಲ್ಲಿ ಇವೇ ಶಕ್ತಿಗಳು ಅನುಕಂಪ ತೋರಿಸುತ್ತಿದ್ದವು. ಸಂರಕ್ಷಣೆಯ ಭೂತ ಮತ್ತು ಮನುಷ್ಯನ ನಡುವಿನ ಇಂಥ ಸಂಬಂಧವನ್ನು ದತ್ತಕ ಸಂಬಂಧಕ್ಕೆ ಹೋಲಿಸಲಾಗುತ್ತಿತ್ತು. ದೈವೀಶಕ್ತಿಗಳೊಡನೆ ಸ್ಥಾಪಿಸಲ್ಪಟ್ಟ ಸಂಬಂಧವು ಸಾಕ್ಷಾತ್ಕಾರದ ಅನುಭವ ಮತ್ತು ಮಂತ್ರ ವರದಾನಗಳಲ್ಲದೆ ಬೇರೆ ವಿಧವಾಗಿಯೂ ಲಭ್ಯವಾಗುತ್ತಿತ್ತು. ಈ ಶಕ್ತಿಗಳ ವರ್ಚಸ್ಸು ಜನರ ಜೀವನದ ಮೇಲೆ ಅಪರಿಮಿತವಾಗಿತ್ತು. ಅವುಗಳ ಸಹಾಯವು ಎಲ್ಲ ಮಹತ್ವದ ಪ್ರಸಂಗಗಳಲ್ಲಿ ಬೇಕಿತ್ತು.

ಒಮ್ಮೆ ಮಾತ್ರ ಸ್ವಪ್ನ ಮತ್ತು ಸಾಕ್ಷಾತ್ಕಾರಗಳ ಮುಖಾಂತರ ಅಲೌಕಿಕ ಶಕ್ತಿಗಳೊಡನೆ ಸಂಪರ್ಕ ಸ್ಥಾಪಿಸಿದರೆ ಸಾಕಾಗುತ್ತಿರಲಿಲ್ಲ. ಯಾವುದೇ ಮಹತ್ವದ ಘಟನೆ ಒದಗಿ ಬಂದಾಗ, ದೈವೀ ಶಕ್ತಿಯ ಇಚ್ಛೆಯನ್ನು ಅರಿತುಕೊಳ್ಳುವ ಅವಶ್ಯವಿತ್ತು. ಆಗ ಸ್ವ-ಹಿಂಸೆ ಮಾಡಿಕೊಳ್ಳುವದು ಒಂದು ಶಕ್ತಿಶಾಲಿ ಸಾಧನ ಉದಾ:-ಬೆರಳು ಕೀಲನ್ನು ಕೆತ್ತಿಹಾಕುವದು, ಎದೆ ಮತ್ತು ಬೆನ್ನಿನ ಸ್ನಾಯುಗಳನ್ನು ಕಡಿಯುವುದು, ಕಾಲಿನ ಸ್ನಾಯುಗಳಲ್ಲಿ ಕಟ್ಟಿಗೆಯ ಗುಣಿಕೆಗಳನ್ನು ಸೇರಿಸುವುದು. ಮುಂತಾಗಿ ಹೀಗೆ ಅವರು ಕ್ರಮಾಗತವಾಗಿ ಎರಡರಿಂದ ನಾಲ್ಕದಿನಗಳವರೆಗೆ ಆಹಾರ, ನೀರು ಇಲ್ಲದೇ ಜೋತಾಡುತ್ತಿದ್ದರು. ಹೀಗೆ ತಮ್ಮ ವೇದನೆ ಹಾಗೂ ಮೂರ್ಛಾವಸ್ಥೆಗಳು ಫಲದಾಯಕವಾಗಿ ಇಚ್ಛಿತ ದರ್ಶನವನ್ನು ಕೊಡುವವರೆಗೆ ಸೂರ‍್ಯನ ಕಡೆಗೆ ಅಥವಾ ಆಕಾಶದ ಕಡೆಗೆ ನೇರದೃಷ್ಟಿಯಿಂದ ನೋಡುತ್ತಿದ್ದರು.

ಇದೇ ಪ್ರಕಾರದ ಹಿಂಸೆಯನ್ನು ಮಂದಾನ ಜನರಲ್ಲಿಯ ವಾರ್ಷಿಕ ಹಬ್ಬವಾದ “ಅಕಿಪಾ” ದಲ್ಲಿಯೂ ಮತ್ತು ಅದಕ್ಕಿಂತ ಹೆಚ್ಚು ಪ್ರಚಲಿತವಿದ್ದ ಸೂರ‍್ಯನೃತ್ಯದಲ್ಲಿಯೂ ನೋಡುತ್ತೇವೆ. ಆದರೆ ಸೂರ‍್ಯನೃತ್ಯವೆಂಬುದು ಮಿಥ್ಯಾನಾಮ. ಯಾಕೆಂದರೆ ಅದು ಕೇವಲ ಸೂರ‍್ಯನಿಗಷ್ಟೇ ಸೀಮಿತವಾಗಿರಲಿಲ್ಲ. ಈ ಸಮಾರಂಭವು ಬಯಲು ಸೀಮೆಯ ಅನೇಕ ಇಂಡಿಯನ್ ಬುಡಕಟ್ಟುಗಳಲ್ಲಿ ಲಭ್ಯವಿದ್ದು, ಬೇಟೆಯಿಂದ ಜೀವನ ಸಾಗಿಸುವ ಜನಾಂಗಗಳಲ್ಲಿ ಸಹ ಕಂಡುಬರುತ್ತದೆ. ಉಳಿದ ಜನಾಂಗಗಳಲ್ಲಿ ಅದಕ್ಕೆ ತೀರ ಹತ್ತಿರವಾದ ಇನ್ನಿತರ ಸಮಾರಂಭಗಳಿದ್ದವು. ಈ ಎಲ್ಲ ಸಮಾರಂಭಗಳಲ್ಲಿ ಕೆಲವು ಅಂಶಗಳು ಸಾಮಾನ್ಯವಾಗಿರುವುದರಿಂದ ಸೂರ್ಯನೃತ್ಯದ ಅನೇಕ ರೂಪಗಳು ಒಂದು ಮೂಲದಿಂದ ಉಗಮಿಸಿದಂಥವು ಎಂದು ಊಹಿಸಬಹುದು. ಈ ನೃತ್ಯದಲ್ಲಿ ಸುಮಾರು ಎಂಭತ್ತು ಬೇರೆ ಬೇರೆ ಅಂಶಗಳಿದ್ದು (ಅವುಗಳಲ್ಲಿ ೧೪ ಮಹತ್ವದವು) ದರಿಂದ ಇದನ್ನು ಆಚರಿಸುವುದರಲ್ಲಿ ಅಸಂಖ್ಯ ಭಿನ್ನತೆಗಳು ಕಂಡುಬರುತ್ತವೆ. ಈ ನೃತ್ಯದ ಅತಿ ಪಳಗಿದ ರೂಪವನ್ನು “ಅತ್ಸಿನಾ” ಜನರು ಆಚರಿಸುತ್ತಾರೆ. ಗಡಿಪ್ರದೇಶದ ಜನರು ಅದರ ಸರಳ ರೂಪದ ಆಚರಣೆಯಿಂದ ತೃಪ್ತರಾಗುತ್ತಾರೆ.

ಜನರು ಕಾಡುಕೋಣಗಳ ಬೇಟೆಗಾಗಿ ಕಲೆತಾಗ ಯಾವಾಗಲೂ ಬೇಸಿಗೆ ಕಾಲದಲ್ಲಿ ಆಚರಿಸಲ್ಪಡುವ ಈ ಸಮಾರಂಭವನ್ನು ಎಲ್ಲ ತಯಾರಿಯನ್ನೊಳಗೊಂಡು ಒಂದು ವಾರದವರೆಗೆ ಆಚರಿಸುತ್ತಿದ್ದರು. ವ್ಯಕ್ತಿಯ ಜೀವನವು ಗಂಡಾಂತರದಲ್ಲಿದ್ದಾಗ ಅಥವಾ ಅಪಘಾತದ ಗಂಡಾಂತರದಲ್ಲಿದ್ದಾಗ ಅವರು ಹರಕೆಯ ರೂಪದಲ್ಲಿ ಇದನ್ನು ಆಚರಿಸುತ್ತಿದ್ದರು. ಆದರೆ ಇದು ಇಡೀ ಬುಡಕಟ್ಟಿನ ಜವಾಬ್ದಾರಿಯಾಗಿದ್ದು, ಅನೇಕ ಭಕ್ತಾದಿಗಳ ಭ್ರಾತೃತ್ವಗಳು ಸರತಿಯ ಪ್ರಕಾರ ಚರಿಸುತ್ತಿದ್ದವು.

ವರ್ತುಳಾಕಾರದ ಬಿಡಾರದ ಮಧ್ಯದಲ್ಲಿ ಒಂದು ಡೇರೆ ಹೊಡೆದು ಅದರಲ್ಲಿ ಈ ಸಮಾರಮಭದ ತಯಾರಿಯನ್ನು ಆರಂಭಿಸುತ್ತಿದ್ದರು. ಅಲ್ಲಿ ಸಮಾರಂಭಕ್ಕೆ ಕಾರಣೀ ಭೂತನಾದವನು ಮತ್ತು ಅವನ ಸಂಗಡಿಗರು ಹೇಗೆ ಕುಣಿಯಬೇಕು. ಹೇಗೆ ಮೈಗೆ ಬಣ್ಣ ಬಳೆದು ಕೊಳ್ಳಬೇಕು ಎಂಬ ಬಗ್ಗೆ ತರಬೇತಿ ಹೊಂದಲು ಮತ್ತು ಪವಿತ್ರ ಹಾಡುಗಳ ಪೂರ್ಣತಯಾರಿ (ರಿಹರ್ಸಲ್) ಮಾಡಲು ಕಲೆಯುತ್ತಾರೆ. ಅದೇ ಸಮಯಕ್ಕೆ ಉಳಿದವರು ವಿಶೇಷ ಭೋಜನಕ್ಕಾಗಿ ಸಾಕಷ್ಟು ಕಾಡುಕೋಣಗಳ ನಾಲಿಗೆಗಳನು ಕೂಡಿಸುತ್ತಿದ್ದರು. ಇದಲ್ಲದೇ ಬೇಟೆಗಾರರು ಬೀಜದ ಕಾಡುಕೋಣದ ಚರ್ಮವನ್ನು ತರಲು ಹೊರಡುತ್ತಿದ್ದರು. ಬಿಡಾರ ವರ್ತುಳದ ಮಧ್ಯದಲ್ಲಿ ಒಂದು ನೃತ್ಯಕಣವನ್ನು ಮಾಡುತ್ತಿದ್ದರು. ಡೇರೆಯೊಳಗೆ ಹಸಿರು ತಳಿರುಗಳಿಂದ ಆವೃತವಾದ ಒಂದು ದೈವ ಕ್ಷೇತ್ರವನ್ನು ಸ್ಥಾಪಿಸಿ ಅದರ ಮಧ್ಯದಲ್ಲಿ ಕಾಡುಕೊಣದ ಒಂದು ತಲೆಬುರುಡೆಯನ್ನು ಇಡುತ್ತಿದ್ದರು.

ಇಷ್ಟಾದ ಮೇಲೆ ನೃತ್ಯವನ್ನು ಆರಂಭಿಸಬಹುದು. ಬೆವರು ಬರುವ ಹಾಗೆ ಸ್ನಾನ ಮಾಡಿ ಮತ್ತು ಅನೇಕ ದಿನಗಳವರೆಗೆ ಉಪವಾಸ ಮಾಡಿ ವಿಧಿವತ್ತಾದ ಶುದ್ಧೀಕರಣ ಹೊಂದಿದ ಹರಕೆಗಾರ ಮತ್ತು ಅವನ ಸಂಗಡಿಗರು ಸಮಾರಂಭದ ಸ್ತಂಭದ ಸುತ್ತ ಮುತ್ತಲು ಕಲೆಯುತ್ತಿದ್ದರು. ಆ ಮೇಲೆ ತಮ್ಮ ಮೈಯನ್ನು ರಚ್ಚುಬಣ್ಣದಿಂದ ಬಳಿದು ಕೊಂಡು ಸೈನಿಕರ ವಿಚಿತ್ರ ಶಿರಸ್ತ್ರಾಣಗಳನ್ನು ಧರಿಸಿಕೊಂಡು ಹಾಗೂ ಗಿಡಗದ ಎಲುಬಿನ ಸೀಟಿಗಳನ್ನು ಊದುತ್ತ, ನೃತ್ಯವನ್ನು ಆರಂಭಿಸುತ್ತಿದ್ದರು. ಈ ನೃತ್ಯವು ಮುಖ್ಯವಾಗಿ ಒಂದೇ ಸ್ಥಾನದಲ್ಲಿ ತಮ್ಮ ಕಾಲ ಹೆಬ್ಬೆರಳುಗಳ ಮೇಲೆ ನಿಂತು ಸೂರ‍್ಯನಕಡೆಗೆ ನೆಟ್ಟ ದೃಷ್ಟಿಯಿಂದ ನೋಡುವುದನ್ನು ಒಳಗೊಂಡಿತ್ತು. ಈ ರೀತಿಯಲ್ಲಿ ಅವರು ಭೂಮಿಯು ಆಶೀರ್ವದಿಸಲ್ಪಡಲಿ ಹಾಗೂ ಸಕಲ ಜೀವಿಗಳು ಅಭಿವೃದ್ಧಿಸಲಿ ಎಂಬ ಆಶಯವನ್ನು ವ್ಯಕ್ತಪಡಿಸುತ್ತಿದ್ದರು. ನೃತ್ಯದ ಈ ರೂಪಿಕೆಗೆ ಡಕೋಟಾ ಮತ್ತು ಇತರ ಜನಾಂಗಗಳು ಸ್ವಹಿಂಸೆಯನ್ನು ಸೇರಿಸುತ್ತಿದ್ದರು. ಧರ್ಮನಿಷ್ಠೆಯ ವಿಶೇಷ ಸಂಕೇತವಾಗಿ ಅವರು ತಮ್ಮ ಚರ್ಮದಲ್ಲಿ ಕಟ್ಟಿಗೆಯ ಗುಣಿಕೆಗಳನ್ನು ಸೇರಿಸಿ ಅವುಗಳಿಗೆ ಕಟ್ಟಿದ ಹಗ್ಗಗಳನ್ನು ಸಮಾರಂಭದ ಸ್ತಂಭಕ್ಕೆ ಕಟ್ಟುತ್ತಿದ್ದರು. ಆಮೇಲೆ ತಮ್ಮ ರಕ್ತಸಿಂಚಿತ ಮಾಂಸವನ್ನು ಗುಣಿಕೆಗಳು ಹರಿದು ಬರುವವರೆಗೆ ಕುಣಿಯುತ್ತಿದ್ದರು.

ಇಷ್ಟಾದ ಮೇಲೆ ನೃತ್ಯವನ್ನು ಆರಂಭಿಸಬಹುದು. ಬೆವರು ಬರುವ ಹಾಗೆ ಸ್ನಾನ ಮಾಡಿ ಮತ್ತು ಅನೇಕ ದಿನಗಳವರೆಗೆ ಉಪವಾಸ ಮಾಡಿ ವಿಧಿವತ್ತಾದ ಶುದ್ಧೀಕರಣ ಹೊಂದಿದ ಹರಕೆಗಾರ ಮತ್ತು ಅವನ ಸಂಗಡಿಗರು ಸಮಾರಂಭದ ಸ್ತಂಭದ ಸುತ್ತ ಮುತ್ತಲು ಕಲೆಯುತ್ತಿದ್ದರು. ಆ ಮೇಲೆ ತಮ್ಮ ಮೈಯನ್ನು ರಚ್ಚುಬಣ್ಣದಿಂದ ಬಳಿದು ಕೊಂಡು ಸೈನಿಕರ ವಿಚಿತ್ರ ಶಿರಸ್ತ್ರಾಣಗಳನ್ನು ಧರಿಸಿಕೊಂಡು ಹಾಗೂ ಗಿಡಗದ ಎಲುಬಿನ ಸೀಟಿಗಳನ್ನು ಊದುತ್ತ, ನೃತ್ಯವನ್ನು ಆರಂಭಿಸುತ್ತಿದ್ದರು. ಈ ನೃತ್ಯವು ಮುಖ್ಯವಾಗಿ ಒಂದೇ ಸ್ಥಾನದಲ್ಲಿ ತಮ್ಮ ಕಾಲ ಹೆಬ್ಬೆರಳುಗಳ ಮೇಲೆ ನಿಂತು ಸೂರ‍್ಯನ ಕಡೆಗೆ ನೆಟ್ಟ ದೃಷ್ಟಿಯಿಂದ ನೋಡುವುದನ್ನು ಒಳಗೊಂಡಿತ್ತು. ಈ ರೀತಿಯಲ್ಲಿ ಅವರು ಭೂಮಿಯು ಆಶೀರ್ವದಿಸಲ್ಪಡಲಿ ಹಾಗೂ ಸಕಲ ಜೀವಿಗಳು ಅಭಿವೃದ್ಧಿಸಲಿ ಎಂಬ ಆಶಯವನ್ನು ವ್ಯಕ್ತಪಡಿಸುತ್ತಿದ್ದರು. ನೃತ್ಯದ ಈ ರೂಪಿಕೆಗೆ ಡಕೋಟಾ ಮತ್ತು ಇತರ ಜನಾಂಗಗಳು ಸ್ವಹಿಂಸೆಯನ್ನು ಸೇರಿಸುತ್ತಿದ್ದರು. ಧರ್ಮನಿಷ್ಠೆಯ ವಿಶೇಷ ಸಂಕೇತವಾಗಿ ಅವರು ತಮ್ಮ ಚರ್ಮದಲ್ಲಿ ಕಟ್ಟಿಗೆಯ ಗುಣಿಕೆಗಳನ್ನು ಸೇರಿಸಿ ಅವುಗಳಿಗೆ ಕಟ್ಟಿದ ಹಗ್ಗಗಳನ್ನು ಸಮಾರಂಭದ ಸ್ತಂಭಕ್ಕೆ ಕಟ್ಟುತ್ತಿದ್ದರು. ಆಮೇಲೆ ತಮ್ಮ ರಕ್ತಸಿಂಚಿತ ಮಾಂಸವನ್ನು ಗುಣಿಕೆಗಳು ಹರಿದು ಬರುವವರೆಗೆ ಕುಣಿಯುತ್ತಿದ್ದರು.

ಸೂರ್ಯನೃತ್ಯದ ಈ ವಿವರಣೆಯು ಈ ಸಮಾರಂಭದ ಕೇವಲ ಅಲ್ಪನಕ್ಷೆಯನ್ನು ಮಾತ್ರ ನೀಡುತ್ತದೆ. ಸ್ವಲ್ಪ ಕಲ್ಪನಾ ವಿನ್ಯಾಸದ ಸಹಾಯದಿಂದ ಯಾರಾದರೂ, ಆ ದೃಶ್ಯವನ್ನೂ ಪಾಲ್ಗೊಂಡವರ ಉತ್ಸಾಹವನ್ನು, ಉರಿಯುವ ಸೂರ‍್ಯನ ಬಿಸಿಲಿನಲ್ಲಿಯ ಕೂಡಿದ ಪ್ರೇಕ್ಷಕರನ್ನೂ ಕೂಗು ಮತ್ತು ಹಾಡುಗಾರಿಕೆಗಳನ್ನು, ಚಿತ್ರಮಯ ಮೆರವಣಿಗೆಯನ್ನೂ ಪ್ರತಿಬಣ್ಣದಲ್ಲಿ ಹಾಗೂ ಇಂಗಿತಾರ್ಥವನ್ನೂ, ಚಲನೆಯಲ್ಲಿ ವ್ಯಕ್ತ ಮಾಡುವ ಗಂಭೀರ ಸಂಕೇತವನ್ನೂ ಡೊಳ್ಳು, ಮತ್ತು ಸೀಟಿಗಳ ಕಿವಿಗಡಚಿಕ್ಕುವ ಸಂಗೀತವನ್ನೂ, ಧರ್ಮನಿಷ್ಠ ಭಕ್ತಿಯನ್ನೂ ಹಾಗೂ ಹುಚ್ಚು ಉದ್ರೇಕವನ್ನೂ, ಚಿತ್ರಿಸಿಕೊಳ್ಳಬಹುದು. ಸಂಕ್ಷೇಪ್ತವಾಗಿ ಹೇಳುವುದಾದರೆ ಎಲ್ಲವೂ ಇಂಡಿಯನ್ನರ ಆಳವಾದ ಆತ್ಮವನ್ನು ಸ್ಪರ್ಶಿಸಿ ಕರಾಳ ಮತ್ತು ವಿಚಿತ್ರವಾದ ಈ ಪೂಜಾ ವಿಧಾನವನ್ನು ಗಾಢ ಧಾರ್ಮಿಕ ಸಮಾರಂಭವನ್ನಾಗಿ ಮಾರ್ಪಾಡು ಮಾಡುತ್ತಿತ್ತು. ಈ ರೀತಿಯಾಗಿ ಸಮುದಾಯದ ಒಕ್ಕಟ್ಟು ಸಾಮೂಹಿಕ ನಿರ್ಣಯಗಳಿಗೆ ಅದು ಎಡೆ ಮಾಡಿಕೊಡುತ್ತಿತ್ತು.

ಅಮೇರಿಕೆಯ ಸರಕಾರವು ಅನಾಗರಿಕ ಸಮಾರಂಭವೆಂದು ಪರಿಗಣಿಸಿ ಇದನ್ನು ಪ್ರತಿ ಬಂಧಿಸಿತು. ಇದರಿಂದಾಗಿ ತಮ್ಮ ಪೂರ್ವದ ಪರಂಪರೆಯನ್ನು ಪುನರುತ್ಥಾನಗೊಳಿಸುವ ಪ್ರತಿಕ್ರಿಯೆಯ ರೂಪವಾಗಿ ಭೂತನೃತ್ಯ ಮತ್ತು “ಪಯೋಟ” ಪಂಥ ಮುಂತಾದ ಹೊಸ ಧರ್ಮಪಂಥಗಳು ಉಗಮವಾದವು. ಇಲ್ಲಿ ಒಂದು ಮಹತ್ವದ ಅಂಶವೆಂದರೆ ಈ ಹೊಸ ಪಂಥಗಳು ಆಂಶಿಕವಾಗಿ ಹೊರಗಿನ ವಿಚಾರ ಪ್ರಸರಣಗಳಿಂದ ಬೆಳೆದುಬಂದವು.

ಸಮಾರೋಪವಾಗಿ ಹೇಳಬೇಕೆಂದರೆ ಮನುಷ್ಯ-ನಿಸರ್ಗ ಮತ್ತು ಅಲೌಕಿಕ ಶಕ್ತಿಗಳಲ್ಲಿ ನಿಕಟ ಸಂಬಂಧವಿದ್ದು ಅವು ಪರಸ್ಪರ ಪರಿಣಾಮ ಬೀರುತ್ತವೆ. ಬೇರೆ ಬೇರೆ ಕಾಲದಲ್ಲಿ, ಬೇರೆ ಬೇರೆ ಪರಿಸರದಲ್ಲಿ ಮತ್ತು ಬೇರೆ ಬೇರೆ ಸಂಸ್ಕೃತಿಗಳಲ್ಲಿ ಅವು ಹೊಂದಾಣಿಕೆ ತಳೆದು, ಬೆಳೆದು ಬಂದ ರೀತಿ ಬೇರೆ ಬೇರೆ. ಆದರೆ ಈ ಎಲ್ಲ ವೈವಿಧ್ಯಗಳ ಹಿಂದೆ ಸಾಮಾನ್ಯವಾದ ಕೆಲವೇ ಮಾನಸಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಕಾರಣಗಳನ್ನು ಗುರುತಿಸಬಹುದು. ಈ ವಿಷಯವನ್ನು ಕೂಲಂಕಷವಾಗಿ ಚರ್ಚಿಸುವುದು ಇಲ್ಲಿ ಅಪ್ರಸ್ತುತ, ಈ ವಿಷಯವನ್ನು ಕೂಲಂಕಷವಾಗಿ ಚರ್ಚಿಸುವುದು ಇಲ್ಲಿ ಅಪ್ರಸ್ತುತ. ಈ ದಿಶೆಯಲ್ಲಿ ಮಾನವ ಶಾಸ್ತ್ರಜ್ಞರ ಕ್ಷೇತ್ರಾಧ್ಯಯನ ಮತ್ತು ಅದರ ಮೇಲೆ ಆಧಾರಿತವಾದ ನರಕುಲ ವರ್ಣನೆ (ethnography) ಗಳು ಸಂಸ್ಕೃತಿ, ಸಮಾಜಗಳ ಬಗ್ಗೆ ಸಿದ್ಧಾಂತಗಳನ್ನು ಮಂಡಿಸಲು ಅಡಿಪಾಯವಿದ್ದ ಹಾಗೆ.

1. Beals, Ralph and Harry Hoijer (1966) An Introduction to Antehropology, New York : Macmillan Company, Third edn.
2. Birket-Smith, K (1960) Primitive Man and His Ways, London : Odhams Press English translation edn., (Danish original edn. 1957)
3. Calverton. C.F. Ed. (1930) The making man (An Outline of Anthropology) New York : The Modern Library
4. Geertz, Clifford, 1968 “Ethos, World-View and the analysis of Sacred Symbols” in Alan Dundes ed. Every Man His Way (Reading in cultural Anthropology) Engle – Wood cliffs (New Jersey) : Prentice-Hall.
6. Honigmann, J.J. (1967) Understanding Culture, New – Delhi : Oxford and IBH, Pub. Company