(ಕ್ರಿ. ಶ. ೧೭೮೧-೧೮೨೬) (ಸ್ಟೆಥಾಸ್ಕೋಪ್‌ನ ಜನಕ)

ಹೆಣ್ಣಿನ ಕೊರಳಲ್ಲಿ ಮಾಂಗಲ್ಯಸೂತ್ರ ಶೋಭಿಸುವಂತೆ ವೈದ್ಯನ ಕೊರಳಲ್ಲಿ ಸ್ಟೆಥಾಸ್ಕೋಪ್ ಶೋಭಿಸುತ್ತದೆ. ಇಂದು ಪ್ರತಿಯೊಬ್ಬ ವೈದ್ಯನ ಕೊರಳಿಗೆ ಭೂಷಣವಾಗಿರುವ ಸ್ಟೆಥಾಸ್ಕೋಪ್ ನ ಮೂಲ ರೂಪವನ್ನು ಕಂಡು ಹಿಡಿದ ವಿಜ್ಞಾನಿ, ರೆನೆ ಥಿಯೋಫಿಲ್ ಹಯಾಸಿಂಥ್ ಲೆನೆಕ್.

ಈತ ೧೭೮೧ರಲ್ಲಿ ಫ್ರಾನ್ಸಿನಲ್ಲಿ ಜನಿಸಿದರು. ಎಳೆಯ ವಯಸ್ಸಿನಲ್ಲೇ ತಾಯಿಯನ್ನು ಕಳೆದುಕೊಂಡಿದ್ದ ಈತ ಪ್ಯಾರಿಸಿನಲ್ಲಿ ವೈದ್ಯ ವೃತ್ತಿಯಲ್ಲಿ ತೊಡಗಿದ್ದ ತನ್ನ ಚಿಕ್ಕಪ್ಪನ ಬಳಿ ಇದ್ದು ವೈದ್ಯಕೀಯ ವ್ಯಾಸಂಗ ಮಾಡಿದರು. ಇನ್ನೂ ವಿದ್ಯಾರ್ಥಿಯಾಗಿದ್ದಾಗಲೇ ಆತ ಸುಮಾರು ನಾಲ್ಕು ನೂರು ರೋಗಿಗಳ ಸಂಪೂರ್ಣ ದಾಖಲೆಗಳನ್ನು ಬರೆದಿಟ್ಟಿದ್ದರೆಂದರೆ, ಆತ ಎಷ್ಟು ಪ್ರತಿಭಾವಂತನಾಗಿದ್ದರೆಂಬುದನ್ನು ಊಹಿಸಬಹುದು. ಅದಕ್ಕಾಗಿ ಅವರು ಪಾರಿತೋಷಕಗಳನ್ನೂ ಪಡೆದರು. ಮುಂದೆ ವೈದ್ಯ ಪದವಿ ಪಡೆದು ವೈದ್ಯ ವೃತ್ತಿಗೆ ತೊಡಗಿದರು.

ರೋಗಿಯ ಸ್ವಭಾವ ಲಕ್ಷಣಗಳನ್ನು ತಿಳಿಯುವುದು, ಆತನನ್ನು ಅಮೂಲಾಗ್ರ ವೀಕ್ಷಿಸಿ ಬೆರಳುಗಳಿಂದ ಬಡಿದು ಉಂಟಾಗುವ ಸದ್ದುಗಳಲ್ಲಿನ ವ್ಯತ್ಯಾಸ ಕಂಡು ಹಿಡಿಯುವುದು, ಕಿವಿ ಹಚ್ಚಿ ಹೃದಯ ಬಡಿತ, ಶ್ವಾಸನಾಳ ಮತ್ತು ಪುಪ್ಪುಸಗಳಲ್ಲಿನಲ್ಲಿನ ಶಬ್ದಗಳನ್ನು ಪರೀಕ್ಷಿಸುವುದು-ಇವು ಆಗ ರೋಗ ಪರೀಕ್ಷಿಸುವ ಕ್ರಮಗಳಾಗಿದ್ದವು. ಹೃದಯ ಬಡಿತ ಮತ್ತು ಉಸಿರಾಟದ ಸದ್ದುಗಳಲ್ಲಿನ ವ್ಯತ್ಯಾಸಗಳನ್ನು ಸುಲಭವಾಗಿ ಗುರುತಿಸಲು ಬೇರೆ ಉಪಾಯಗಳಿಲ್ಲವೇ ಎಂಬ ಚಿಂತೆ ಲೆನೆಕ್ ರ ತಲೆ ತಿನ್ನತೊಡಗಿತು. ಒಂದು ದಿನ ರಸ್ತೆಯಲ್ಲಿ ಆಟವಾಡುತ್ತಿದ್ದ ಮಕ್ಕಳು ಕೇಕೆ ಹಾಕುತ್ತ ಕುಣಿದಾಡುತ್ತಿದ್ದುದನ್ನು ಅವರು ಕಂಡರು. ಒಬ್ಬ ಹುಡುಗ ಉದ್ದಕೊಳವೆಯೊಂದರ ತುದಿಯನ್ನು ತನ್ನ ಕಿವಿಯಲ್ಲಿಟ್ಟುಕೊಂಡು ಇನ್ನೊಂದು ತುದಿಯಲ್ಲಿ ಮಗುವೊಂದು ಉಗುರಿನಿಂದ ಮಾಡುತ್ತಿದ್ದ ಸದ್ದನ್ನು ಆಲಿಸುತ್ತಿದ್ದ, ಸದ್ದು ಕೇಳಿ ಆನಂದದಿಂದ ಕುಣಿಯುತ್ತಿದ್ದ. ಅಲ್ಲಿಯೇ ಲೆನೆಕ್ ತಮ್ಮ ತಲೆ ತಿನ್ನುತ್ತಿದ್ದ ಸಮಸ್ಯೆಗೆ ಪರಿಹಾರ ಕಂಡು ಹಿಡಿದರು.

ಒಡನೆಯ ಆಸ್ಪತ್ರೆಗೆ ಹೋದ ಲೆನೆಕ್ ಕಾಗದದ ಹಾಳೆಗಳನ್ನು ಸುರುಳಿಯಾಗಿ ಸುತ್ತಿದರು. ಸುರುಳಿಯ ತುದಿಗಳನ್ನು ದುಂಡಗೆ ಮಡಿಸಿದರು. ರೋಗಿಯ ಹೃದಯವಿರುವ ಭಾಗದ ಮೇಲಿಟ್ಟು ಶಬ್ದ ಆಲಿಸಿದರು. ಶಬ್ದ ಜೋರಾಗಿಯೇ ಕೇಳಿಸಿತು. ಅದರ ಆಧಾರದ ಮೇಲೆ ಮೂಲ ರೂಪದ ಸ್ಟೆಥಾಸ್ಕೋಪನ್ನು ತಯಾರಿಸಿದರು.

ಈತ ಕ್ಷಯ ರೋಗದ ಬಗ್ಗೆ ಸಹ ಅಧ್ಯಯನ ಮಾಡಿ ಅಗತ್ಯ ವಿವರಗಳನ್ನು ವೈದ್ಯಶಾಸ್ತ್ರಕ್ಕೆ ಒದಗಿಸಿಕೊಟ್ಟರು. ಲೆನೆಕ್ ೧೮೨೬ ರಲ್ಲಿ ನಿಧನ ಹೊಂದಿದರು.