ಇದು ಖಗೋಲ ವಿಜ್ಞಾನದ ಒಂದು ಭಾಗ. ಇದರಲ್ಲಿ ಆಕಾಶಕಾಯಗಳ ಮತ್ತು ಖಭೌತ ಘಟನೆಗಳ ಅಧ್ಯಯನ ಸಾಗುತ್ತದೆ. ಹಾಗೆಯೇ ಬಾಹ್ಯಾಕಾಶದಿಂದ ಉತ್ಸರ್ಜನೆಯಾಗುವ (emission)ವಿದ್ಯುತ್ ಕಾಂತೀಯ ವಿಕಿರಣಗಳ ಬಗೆಗೂ ಮಾಹಿತಿ ಪಡೆದು ವಿಶ್ಲೇಷಿಸಲಾಗುತ್ತದೆ.

19ನೇ ಶತಮಾನದ ಉತ್ತರಾರ್ಧದಲ್ಲೇ ಬಾಹ್ಯಾಕಾಶದಿಂದ ಬರುವ ರೇಡಿಯೊ ಉತ್ಸರ್ಜನೆಗಳ ಅಧ್ಯಯನ ನಡೆದರೂ ಅದರಲ್ಲಿ ಅಷ್ಟಾಗಿ ಯಶಸ್ಸು ಲಭಿಸಲಿಲ್ಲ. 1932ರಲ್ಲಿ ಬೆಲ್ ಟೆಲಿಫೋನ್ ಲ್ಯಾಬೊರೇಟರೀಸ್ ಸಂಸ್ಥೆಯಲ್ಲಿ ರೇಡಿಯೊ ಎಂಜಿನಿಯರ್ ಆಗಿದ್ದ ಕಾರ್ಲ್‌ ಜಾನ್ಸ್ಕಿ (1905-1950)ಎಂಬುವನು ಆಕಾಶಗಂಗೆಯ ಕೇಂದ್ರದ ಸಮೀಪದಿಂದ ಬರುತ್ತಿದ್ದ ರೇಡಿಯೊ ಉತ್ಸರ್ಜನೆಯನ್ನು ಪತ್ತೆಹಚ್ಚಿದ. ದೂರವಾಣಿಯಲ್ಲಿ (ಟೆಲಿಫೋನ್) ಉಂಟಾಗುತ್ತಿದ್ದ ಗೊಂದಲಕಾರಿ ಶಬ್ದದ ಕಾರಣವನ್ನು ಶೋಧಿಸುವ ಪ್ರಯತ್ನದಲ್ಲಿ ಬಾಹ್ಯಾಕಾಶದಿಂದ ಹೊಮ್ಮುವ ರೇಡಿಯೋ ಅಲೆಗಳನ್ನು ಗುರುತಿಸಿದ. ಈ ಅಲೆಗಳು ಪ್ರತಿದಿನವೂ ಕೆಲವು ನಿಮಿಷಗಳಷ್ಟು ಮುಂಚಿತವಾಗಿ ಗರಿಷ್ಠ ಪ್ರಮಾಣ ಹೊಂದಿರುತ್ತವೆಂದು ಒಂದು ವರ್ಷ ಅವಧಿಯ ವೀಕ್ಷಣೆಯಿಂದ ಗುರುತಿಸಿದ. ಅವನು ಖಗೋಲ ವಿಜ್ಞಾನ ಅಧ್ಯಯಿಸಿರಲಿಲ್ಲ.  ಆದರೂ ಆ ಅಲೆಗಳು ಬಾಹ್ಯಾಕಾಶದಿಂದ ಬರುವವೆಂದು ನಿರ್ಧರಿಸಿದ. ಇದರ ಬಗ್ಗೆ, ಹೆಚ್ಚಿನ ಸಂಶೋಧನೆಗಾಗಿ 30ಮೀ. ವ್ಯಾಸದ ಆಂಟೆನಾ ಒದಗಿಸಲು ಬೆಲ್ ಕಂಪೆನಿಗೆ ಮನವಿ ಮಾಡಿದ. ಅವರು ನಿರಾಕರಿಸಿದರು. ಅವನು ತನ್ನ ಆವಿಷ್ಕಾರವನ್ನು 1932ರಲ್ಲಿ ಪ್ರಕಟಿಸಿದ. ಆದರೆ ಅಂದಿನ ಖಗೋಲ ವಿಜ್ಞಾನಿಗಳು ಇದನ್ನು ಗಮನಿಸಲಿಲ್ಲ.

ಈ ಆವಿಷ್ಕಾರವನ್ನು ತಿಳಿದ ಗ್ರೋಟ್ ರೆಬರ್ (1911-2002)ಎಂಬ ಮತ್ತೊಬ್ಬ ರೇಡಿಯೊ ಇಂಜಿನಿಯರ್ ಇದರ ಬಗ್ಗೆ ವಿಸ್ತಾರವಾದ ಅನೇಕ ಪ್ರಯೋಗಗಳನ್ನು ಮಾಡಿ, ರೇಡಿಯೊ ಆಕಾಶದ ಸ್ಪಷ್ಟವಾದ ನಕ್ಷೆಯನ್ನು 1940ರಲ್ಲಿ ತಯಾರಿಸಿದ. ಇವನು 9.5ಮೀ. ವ್ಯಾಸದ ಬೋಗುಣಿಯಾಕಾರದ ಆಂಟೆನಾವನ್ನು ಬಳಸಿದ. ಇಲಿನಾಯ್ ರಾಜ್ಯದ ವ್ಹೀಟನ್ ಎಂಬಲ್ಲಿ ತನ್ನ ಮನೆಯ ಹಿಂಭಾಗದ ಅಂಗಳದಲ್ಲಿ ಆಂಟೆನಾ ಸ್ಥಾಪಿಸಿದ. ಈ ಸಂಶೋಧನೆ ನಡೆಸಲು, ಪರಿಣತಿ ಹೊಂದಲು ಅವನು ಖಗೋಲ ವಿಜ್ಞಾನದ ತರಗತಿಗಳಿಗೆ ಹೋಗಿ ಅಧ್ಯಯನ ಮಾಡಿದ.  ಇವನ ಆವಿಷ್ಕಾರಕ್ಕೂ ಹೆಚ್ಚಿನ ಮಹತ್ವ ದೊರಕಲಿಲ್ಲ.

ದ್ವಿತೀಯ ಮಹಾಯುದ್ಧದ ಸಮಯದಲ್ಲಿ ಬ್ರಿಟನ್, ಅಮೆರಿಕನ್ ಮತ್ತು ಜರ್ಮನ್ ವಿಜ್ಞಾನಿಗಳು ಶತ್ರುವಿಮಾನಗಳನ್ನು ಪತ್ತೆ ಹಚ್ಚಬಲ್ಲ ರಾಡಾರ್‌ಗಳನ್ನು ನಿರ್ಮಿಸಿ ಬಳಸತೊಡಗಿದರು. ಈ ರಾಡಾರ್‌ಗಳ ನೆರವಿನಿಂದ ಸೂರ್ಯನಿಂದ ಉತ್ಸರ್ಜಿಸಲ್ಪಡುವ ಕಿರಣಗಳನ್ನು ಗುರುತಿಸಿದರು. ಈ ಜಾಗತಿಕ ಯುದ್ಧ ಅವಧಿಯಲ್ಲಿ ರೇಡಿಯೊ ಆಂಟೆನಾ ಮತ್ತು ಸೂಕ್ಷ್ಮಗ್ರಾಹಕಗಳ ನಿರ್ಮಾಣದಲ್ಲಿ ಜರುಗಿದ ಮಹತ್ತರ ಉತ್ತಮಿಕೆಯಿಂದಾಗಿ 50ರ ದಶಕದಲ್ಲಿ ರೇಡಿಯೊ ಖಗೋಲ ವಿಜ್ಞಾನವು ಅತಿ ವಿಶಾಲ ವ್ಯಾಪ್ತಿ ಪಡೆಯಿತು. ರೇಡಿಯೊ ಖಗೋಲ ವಿಜ್ಞಾನಿಗಳು ಯುದ್ಧಕಾಲದಲ್ಲಿ ಪ್ರಾಪ್ತವಾದ ರಾಡಾರ್ ತಂತ್ರವನ್ನು ಅನೇಕ ಬಗೆಯ ರೇಡಿಯೊ ದೂರದರ್ಶಕಗಳ ರಚನೆಯಲ್ಲಿ ಬಳಸಿದರು. ಆಸ್ಟ್ರೇಲಿಯ, ಇಂಗ್ಲೆಂಡ್, ಯುಎಸ್‌ಎ, ರಷ್ಯ, ನೆದರಲೆಂಡ್ ಮತ್ತು ಭಾರತ -ಹೀಗೆ ಹಲವಾರು ರಾಷ್ಟ್ರಗಳು ರೇಡಿಯೊ ದೂರದರ್ಶಕಗಳನ್ನು ನಿರ್ಮಿಸಿದುವು. ಈ ದೂರದರ್ಶಕಗಳಿಂದ ಒದಗಿದ ಅದ್ಭುತ ಶೋಧನೆಗಳಿಂದ ಖಗೋಲ ವಿಜ್ಞಾನಿಗಳ ಆಸಕ್ತಿ ಮಹತ್ತರವಾಗಿ ಕುದುರಿತು.

ಸಾಮಾನ್ಯ ರೇಡಿಯೊ ದೂರದರ್ಶಕದಲ್ಲಿ ಒಂದು ಅಗಲವಾದ ಬೋಗುಣಿಯಾಕಾರದ ಡಿಷ್ ಆಂಟೆನಾ ಇರುತ್ತದೆ. ಇದು ದ್ಯುತಿ ದೂರದರ್ಶಕದ ಪ್ರತಿಫಲಕದಂತೆ ಕೆಲಸ ಮಾಡುತ್ತದೆ.  ಇದರ ನಾಭಿಯಲ್ಲಿ (ಫೋಕಸ್) ಪತ್ತೆಕಾರಕವಾಗಿ ಕೆಲಸ ಮಾಡುವ ಒಂದು ರೇಡಿಯೊ ಗ್ರಾಹಕವಿರುತ್ತದೆ. ಈ ಗ್ರಾಹಕವು ಆಂಟೆನಾದಿಂದ ಪ್ರತಿಫಲಿತ ರೇಡಿಯೊ ಅಲೆಗಳನ್ನು ಏಕೀಕೃತಗೊಳಿಸಿ, ಮಾಪನ ಮಾಡಬಹುದಾದ ಮತ್ತು ದಾಖಲಿಸಬಹುದಾದ ವೊಲ್ಟೇಜ್ ಸಂಜ್ಞೆಗಳಾಗಿ ಮಾರ್ಪಡಿಸುತ್ತದೆ. ಇವುಗಳನ್ನು ವಿಶ್ಲೇಷಿಸಿ ಮೂಲದ ಬಗ್ಗೆ ಮಾಹಿತಿ ತಿಳಿಯಲಾಗುತ್ತದೆ.

ರೇಡಿಯೊ ದೂರದರ್ಶಕಗಳು ಹಗಲು, ರಾತ್ರಿ ಕೆಲಸ ಮಾಡಬಲ್ಲವು. ಮೋಡ ಮುಚ್ಚಿದ ದಿನಗಳಲ್ಲೂ ಉತ್ಸರ್ಜಿತ ವಿಕಿರಣಗಳನ್ನು ದಾಖಲಿಸಬಲ್ಲವು. ಬೃಹತ್ ಆಂಟೆನಾಗಳನ್ನು ದರ್ಪಣಗಳಿಗಿಂತ ಕಡಿಮೆ ವೆಚ್ಚದಲ್ಲಿ ನಿರ್ಮಿಸಲು ಸಾಧ್ಯ. ರೇಡಿಯೋ ಅಲೆಗಳನ್ನು ಗ್ರಹಿಸುವ ಕ್ಷೇತ್ರ ವಿಸ್ತಾರವಾದಷ್ಟೂ ದೂರದರ್ಶಕದ ಸಾಮರ್ಥ್ಯ ಹೆಚ್ಚುತ್ತದೆ.

ಆದರೆ ರೇಡಿಯೋ ದೂರದರ್ಶಕಗಳಲ್ಲಿ ಒಂದು ಮುಖ್ಯಕೊರತೆಯೂ ಇದೆ. ಇವುಗಳ ಪೃಥಕ್ಕರಣ (resolution)ಸಾಮರ್ಥ್ಯ ಕಡಿಮೆ. ಪೃಥಕ್ಕರಣ ಸಾಮರ್ಥ್ಯವು ವಸ್ತುಕ (objective)ದ ವಿಸ್ತಾರ ಮತ್ತು ವಸ್ತುಕವು ಸಂಗ್ರಹಿಸುವ ವಿಕಿರಣದ ತರಂಗ ದೂರವನ್ನು ಅವಲಂಬಿಸುತ್ತದೆ. ತರಂಗ ದೂರವು ಕಡಿಮೆ ಇದ್ದಷ್ಟೂ ಹೆಚ್ಚು ಪೃಥಕ್ಕರಣ ಇರುತ್ತದೆ.  ರೇಡಿಯೊ ಅಲೆಗಳು ಬೆಳಕಿನ ಅಲೆಗಳಿಗಿಂತ ಬಹುಪಾಲು ದೀರ್ಘವಾದುವು (ಸುಮಾರು 100000 ಪಾಲು ಅಧಿಕ). ಹಾಗಾಗಿ ಒಂದೇ ಅಳತೆಯ ದ್ಯುತಿ ದೂರದರ್ಶಕ ಮತ್ತು ರೇಡಿಯೊ ದೂರದರ್ಶಕಗಳ ಪೃಥಕ್ಕರಣ ಸಾಮರ್ಥ್ಯ ಹೋಲಿಸಿದಾಗ ರೇಡಿಯೊದೂರದರ್ಶಕದ ಸಾಮರ್ಥ್ಯವು ಇನ್ನೊಂದರ ಸಾಮರ್ಥ್ಯಕ್ಕಿಂತ ಒಂದು ಲಕ್ಷಪಾಲು ಕಡಿಮೆ ಇರುವುದು ಗೋಚರಿಸುತ್ತದೆ.

1946ರಲ್ಲಿ ಜೆಸಿ ಹೇ ಎಂಬ ಸಂಶೋಧಕ ಸಿಗ್ನಸ್ ನಕ್ಷತ್ರ ಪುಂಜದಿಂದ ಬರುತ್ತಿದ್ದ ರೇಡಿಯೊ ಅಲೆಗಳನ್ನು ಗುರುತಿಸಿದ. ಅವುಗಳು ಒಂದು ನಕ್ಷತ್ರದಿಂದ ಹೊಮ್ಮುತ್ತಿರುವುದಾಗಿ ಊಹಿಸಿದ. ಅವನ ಊಹೆ ಸರಿಯಾಗಿದ್ದಿತು. ಇದೇ ವೇಳೆ ಇಂಗ್ಲೆಂಡಿನ ಕೇಂಬ್ರಿಜ್‌ನಲ್ಲಿ ಸಂಶೋಧನೆ ಮಾಡುತ್ತಿದ್ದ ಮಾರ್ಟಿನ್ ರೈಲ್ ಎಂಬುವನು ಹೊಸ ಮಾದರಿಯ ವ್ಯತಿಕರಣ ಮಾಪಕ (ಇಂಟರ್‌ಫೆರಾಮೀಟರ್)ರಚಿಸಿದ. ಈತ ರಾಡಾರ್ ಪತ್ತೆಕಾರಕಗಳಲ್ಲಿ ಪರಿಣತನಾಗಿದ್ದ. ಇವನು ತನ್ನ ಹೊಸ ಉಪಕರಣದಲ್ಲಿ ‘ಕಿಂಡಿ ಸಂಶ್ಲೇಷಣೆ’ (aperture synthesis)ಅನುಸರಿಸಿದ್ದ. ಮೊದಲಿಗೆ ಒಂದು ಮೈಲಿ ದೂರದಷ್ಟು ಸ್ಥಳದಲ್ಲಿ ಅನೇಕ ಬೋಗುಣಿ ಆಂಟೆನಾಗಳನ್ನು ಜೋಡಿಸಿ, ಎಲ್ಲವನ್ನೂ ವ್ರೋಒಂದೇ ದಿಕ್ಕಿನಿಂದ ಉತ್ಸರ್ಜಿತ ವಿಕಿರಣಗಳನ್ನು ಗ್ರಹಿಸುವಂತೆ ಮಾಡಿದ. ಇದರಿಂದ ಒಂದು ಬೃಹತ್ ದೂರದರ್ಶಕದ ಪೃಥಕ್ಕರಣ ಪ್ರಾಪ್ತವಾಯಿತು. ನಂತರದ ದಿನಗಳಲ್ಲಿ 5ಕಿ.ಮೀ. ದೂರದ ಪ್ರದೇಶದಲ್ಲಿ ಅನೇಕ ಆಂಟೆನಾ ಜೋಡಿಸಿ ವೀಕ್ಷಣೆ ಮಾಡತೊಡಗಿದ. ಆಕಾಶಗಂಗೆಯಲ್ಲಿ ಹೊಸದಾಗಿ ಉಂಟಾದ ನಕ್ಷತ್ರಗಳು, ಕ್ವಾಸಾರ್‌ಗಳು ಮುಂತಾದ ಅನೇಕ ಆಕಾಶ ಕಾಯಗಳನ್ನು ಸಂಶೋಧಿಸಿದ. ಈತನಿಗೆ ಭೌತ ವಿಜ್ಞಾನದ ನೊಬೆಲ್ ಪ್ರಶಸ್ತಿಯು ಲಭಿಸಿತು.

ಈಚೆಗೆ ಗಣಕಯಂತ್ರಗಳ ಬಳಕೆ, ವಿಶೇಷ ಇಲೆಕ್ಟ್ರಾನಿಕ್ ಬಿಲ್ಲೆಗಳು (chips)ಮತ್ತು ಕೌಶಲಪೂರಿತ ಆಧುನಿಕ ಯಂತ್ರೋಪಕರಣಗಳ ಬಳಕೆಯಿಂದ ರೇಡಿಯೊ ದೂರದರ್ಶಕಗಳ ಸಾಮರ್ಥ್ಯ ಸಾವಿರಾರು ಪಾಲು ಹೆಚ್ಚಿದೆ. ಮಿಲಿಮೀಟರಿಗಿಂತಲೂ ಕಡಿಮೆ ತರಂಗದ ದೂರದ ಅಲೆಗಳನ್ನೂ ಅತಿ ದುರ್ಬಲ ಸಂಕೇತಗಳನ್ನೂ ಗ್ರಹಿಸಿ, ಅವುಗಳನ್ನು ಪೃಥಕ್ಕರಿಸಿ ಸ್ಪಷ್ಟ ಮಾಹಿತಿ ಒದಗಿಸುವ ಸೌಲಭ್ಯ ದೊರಕಿದೆ. ಇದರಿಂದಾಗಿ ಅತಿದೂರದ ಆಕಾಶಕಾಯಗಳ ಅಧ್ಯಯನ, ವ್ರೋಚದುರಿರುವ ಮೂಲವಸ್ತುಗಳ ಗುರುತಿಸುವಿಕೆ, ವಿಶ್ವದ ಉಗಮ -ಇವುಗಳ ಅಧ್ಯಯನಕ್ಕೆ ಪುಷ್ಟಿ ದೊರಕಿದೆ.

ಕೆಲವು ರೇಡಿಯೊ ದೂರದರ್ಶಕಗಳ ಕಿರುಪರಿಚಯವನ್ನು ಇಲ್ಲಿ ಕೊಡಲಾಗಿದೆ.

1) ಅರೆಸಿಬೊ ದೂರದರ್ಶಕ

ವೆಸ್ಟ್ ಇಂಡೀಸ್ ದ್ವೀಪ ಸಮೂಹಗಳ ಸಮೀಪದಲ್ಲಿರುವ  ಪೋರ್ಟೊ ರೀಕೋವು ಅಮೆರಿಕ ಸಂಯುಕ್ತ ಸಂಸ್ಥಾನಗಳಿಗೆ ಸೇರಿದ ದ್ವೀಪ ಪ್ರದೇಶ. ಪೋರ್ಟೊ ರೀಕೋ ನೈರುತ್ಯಕ್ಕೆ 14ಕಿ.ಮೀ. ದೂರದಲ್ಲಿ ನಿರ್ಮಿಸಲ್ಪಟ್ಟಿರುವ ‘ಅರೆಸಿಬೊ’ದೂರದರ್ಶಕವು ವಿಶ್ವದಲ್ಲಿಯೇ ಅತಿ ದೊಡ್ಡ ರೇಡಿಯೊ ದೂರದರ್ಶಕ. ಏಂಜಲ್ ರಾಮೋಸ್ ಪ್ರತಿಷ್ಠಾನದವರು ಈ ದೂರದರ್ಶಕದ ನಿರ್ಮಾಣ ವೆಚ್ಚವನ್ನು ಭರಿಸಿದ್ದಾರೆ. ಅಮೆರಿಕದ ಕಾರ್ಗೆಲ್ ವಿಶ್ವವಿದ್ಯಾನಿಲಯವು ಇದರ ಕಾರ್ಯನಿರ್ವಹಣೆಯ ಹೊಣೆ ಹೊತ್ತಿದೆ.

305ಮೀ. ವ್ಯಾಸದ ಬೋಗುಣಿಯಾಕಾರದ ಆಂಟೆನಾ ಹೊಂದಿರುವ ಈ ದೂರದರ್ಶಕ ಅತಿ ಸೂಕ್ಷ್ಮಗ್ರಾಹಿಯಾದುದೆಂಬ ಹೆಗ್ಗಳಿಕೆ ಪಡೆದಿದೆ. ಆಂಟೆನ್ನಾದ ಪ್ರತಿಫಲನ ಮೇಲ್ಮೈಯಲ್ಲಿ 38,778ಅಲ್ಯುಮಿನಿಯಮ್ ಫಲಕಗಳಿವೆ. ಪ್ರತಿಯೊಂದು ಫಲಕವೂ 1ಮೀ.ೊ× 2ಮೀ. ಅಳತೆಯದಾಗಿದ್ದು, ರಂಧ್ರಪೂರಿತವಾದ ಉಕ್ಕಿನ ಸರಳುಗಳ ಆಸರೆ ಹೊಂದಿವೆ. ಕ್ಷುದ್ರಗ್ರಹಗಳ -ಅದರಲ್ಲಿಯೂ ಭೂ ಸನಿಹ ಕ್ಷುದ್ರಗಹಗಳ -ಪಥ ಪರೀಕ್ಷಣೆಯಲ್ಲಿ ಈ ದೂರದರ್ಶಕವು ಹೆಚ್ಚಿನ ನೆರವು ನೀಡುತ್ತಿದೆ. ಭೂಮಿಗೆ ಡಿಕ್ಕಿ ಹೊಡೆಯಬಹುದಾದ ಕ್ಷುದ್ರಗ್ರಹಗಳನ್ನು ಗುರುತಿಸುವುದು ಇದರ ಆದ್ಯ ಕೆಲಸ. ಈ ದೂರದರ್ಶಕ 1.3.1997ರಿಂದ ಕಾರ್ಯನಿರತವಾಗಿದ್ದು ಬಹಳಷ್ಟು ಮಾಹಿತಿ ಒದಗಿಸಿದೆ.

2) ಅತಿ ವಿಶಾಲ ವ್ಯೆಹ ರೇಡಿಯೊ ದೂರದರ್ಶಕ (Very Large Array Radio Telescope)

ಇದೊಂದು ಬೃಹತ್ ರೇಡಿಯೊ ದೂರದರ್ಶಕ. ಅಮೆರಿಕ ಸಂಯುಕ್ತ ಸಂಸ್ಥಾನದ ನ್ಯೂ ಮೆಕ್ಸಿಕೊ ರಾಜ್ಯದಲ್ಲಿನ ಸ್ಯಾನ್ ಅಗಸ್ಟೀನ್ ಬಳಿ ಸೊಕ್ಕೂರೊ ಎಂಬಲ್ಲಿ ನಿರ್ಮಿಸಲ್ಪಟ್ಟಿದೆ.  ಪ್ರತಿಯೊಂದರಲ್ಲೂ 25ಮೀ. ವ್ಯಾಸವಿರುವ 27ಬೊಗುಣಿಯಾಕಾರದ ಪರವಲಯ (Parabolic) ಆಂಟೆನಾಗಳಿವೆ. ಆಂಟೆನ್ನಾಗಳನ್ನು ‘Y’ಆಕಾರದ ವ್ಯೆಹದಲ್ಲಿ ಜೋಡಿಸಲಾಗಿದೆ. ಪ್ರತಿ ಆಂಟೆನಾವನ್ನೂ ಚಲಿಸಬಹುದಾಗಿದೆ. ಇದರ ಗ್ರಾಹಕಗಳು ಅತಿ ಸೂಕ್ಷ್ಮಗ್ರಾಹಿಗಳಾಗಿದ್ದು, ವಿವಿಧ ತರಂಗದೂರದ ವಿಕಿರಣಗಳನ್ನು ಗುರುತಿಸಬಲ್ಲವು. ರೇಡಿಯೊ ಗೆಲಕ್ಸಿ, ಕ್ವಾಸಾರ್, ಪಲ್ಸಾರ್‌ಗಳ ಅಧ್ಯಯನಕ್ಕಾಗಿ ಇದನ್ನು ಬಳಸಲಾಗುತ್ತಿದೆ. ಇದರಲ್ಲಿರುವ ವ್ಯತಿಕರಣ ಮಾಪಕ (ಇಂಟರ್ ಫೆರೊಮೀಟರ್) ಬಹಳ ಶಕ್ತಿಶಾಲಿ. 1980ರಲ್ಲಿ ಇದನ್ನು ಲೋಕಾರ್ಪಣೆ ಮಾಡಲಾಯಿತು. ದಕ್ಷಿಣ ಕೆರೊಲೀನಾ ವಿಶ್ವವಿದ್ಯಾಲಯವು ಇದರ ನಿರ್ವಹಣೆ ಮಾಡುತ್ತಿದೆ.

3) ಬೃಹತ್ ಮೀಟರ್‌ವೇವ್ ರೇಡಿಯೊ ದೂರದರ್ಶಕ (Giant Metrewave Radio Telescope – GMRT)

1980ರ ದಶಕದಲ್ಲಿ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್ (TIFR)ಸಮೂಹವು ಒಂದು ವಿಶಿಷ್ಟ, ಅನನ್ಯ ರೇಡಿಯೊ ದೂರದರ್ಶಕವನ್ನು ವಿನ್ಯಾಸ ಮಾಡಿ ನಿರ್ಮಿಸಿತು. ಪುಣೆಯಿಂದ ಸುಮಾರು 90ಕಿ.ಮೀ. ಉತ್ತರ ದಿಕ್ಕಿನಲ್ಲಿ ನಾರಾಯಣಗಾಂವ್ ಸಮೀಪದ ಖೋದಾದ್ ಎಂಬಲ್ಲಿ ಈ ಜಿಎಮ್‌ಆರ್‌ಟಿ ನಿರ್ಮಾಣವಾಗಿದೆ.  ಇದರಲ್ಲಿ 30ಬೃಹತ್ ಆಂಟೆನಾಗಳಿವೆ. ಪ್ರತಿಯೊಂದೂ ಪರವಲಯೀ ಆಕಾರದಲ್ಲಿದ್ದು 45ಮೀ. ವ್ಯಾಸ ಹೊಂದಿದೆ. ಇವುಗಳಲ್ಲಿ 12ರ ಗುಂಪು 1ಚ.ಕಿ.ಮೀ. ಪ್ರದೇಶದಲ್ಲಿವೆ. ಉಳಿದ 18ನ್ನು Y ಆಕಾರದಲ್ಲಿ ಮೂರು ಬಾಹುಗಳಲ್ಲಿ ಇರಿಸಲಾಗಿದೆ. ಪ್ರತಿ ಆಂಟೆನಾವನ್ನೂ ಜೋಡಿ ದ್ಯುತಿ ತಂತುಗಳ ಮೂಲಕ ಕೇಂದ್ರ ಇಲೆಕ್ಟ್ರಾನಿಕ್ಸ್ ಕಟ್ಟಡಕ್ಕೆ ಸಂಪರ್ಕಿಸಲಾಗಿದೆ. ದೇಶೀಯ ವಸ್ತುಗಳಿಂದಲೇ ನಿರ್ಮಿಸಲ್ಪಟ್ಟಿರುವ ಈ ವ್ಯೆಹ ಅತಿ ಕಡಿಮೆ ವೆಚ್ಚದಲ್ಲಿ ರಚಿಸಲ್ಪಟ್ಟು ಜಾಗತಿಕ ಮೆಚ್ಚುಗೆಗೆ ಪಾತ್ರವಾಗಿದೆ. ಪ್ರತಿ ಆಂಟೆನಾವನ್ನೂ 15ಮೀ. ಎತ್ತರದ ಕಾಂಕ್ರೀಟ್ ಗೋಪುರದ ಮೇಲೆ ಹೊಂದಿಸಲಾಗಿದೆ. ಗೋಪುರದ ಮೇಲೆ 3.6ಮೀ. ಅಳತೆಯ ಹೊರಳು (ಬೇರಿಂಗ್)ಗಳ ಮೇಲೆ ಆಧಾರಿತವಾಗಿರುವ ತೊಟ್ಟಿಲಿಗೆ ಬೋಗುಣಿಗಳನ್ನು ಲಗತ್ತಿಸಲಾಗಿದೆ.  ಪ್ರತಿ ಬೋಗುಣಿ ಮತ್ತು ಅದರಲ್ಲಿರುವ ಗ್ರಾಹಕ ಇತ್ಯಾದಿಗಳ ತೂಕ 60ಟನ್‌ಗಳಷ್ಟು. ಎಲ್ಲ ಆಂಟೆನಾಗಳನ್ನೂ ದೂರ ನಿಯಂತ್ರಣದಿಂದ ಚಲಿಸುವಂತೆ ಮಾಡುವ ವ್ಯವಸ್ಥೆ ಇದೆ.

ಪಲ್ಸಾರ್‌ಗಳು, ನ್ಯೂಟ್ರಾನ್ ನಕ್ಷತ್ರಗಳು, ಗೆಲಕ್ಸಿ ಹಾಗೂ ಗೆಲಾಕ್ಸಿ ಅತೀತ ಬಾಹ್ಯ ಕ್ಷೇತ್ರಗಳಿಂದ ಹೊರ ಹೊಮ್ಮುವ ರೇಡಿಯೊ ಅಲೆಗಳ ಅಧ್ಯಯನ ಇದರ ಪ್ರಮುಖ ಕಾರ್ಯವಾಗಿದೆ. 1995ರಿಂದ ಇದು ಕಾರ್ಯನಿರತವಾಗಿದೆ.

ಜಿಎಮ್‌ಆರ್‌ಟಿ ಅಲ್ಲದೆ ಭಾರತದಲ್ಲಿ ಇನ್ನೂ ಕೆಲವು ರೇಡಿಯೊ ದೂರದರ್ಶಕಗಳಿವೆ. ತಮಿಳುನಾಡಿನ ನೀಲಗಿರಿಯಲ್ಲಿ – ಊಟಿಯಲ್ಲಿ – 1970ರಲ್ಲಿ ಸ್ಥಾಪಿತವಾದ ರೇಡಿಯೋ ದೂರದರ್ಶಕ ಇಂದಿಗೂ ಕಾರ್ಯನಿರತವಾಗಿದೆ. ಆಂಧ್ರ ಪ್ರದೇಶದ ತಿರುಪತಿ ಸಮೀಪದ MSTರಾಡಾರ್ ವ್ಯವಸ್ಥೆ, ಕರ್ನಾಟಕದ ಗೌರಿಬಿದನೂರಿನಲ್ಲಿ ರಾಮನ್ ಇನ್ಸ್‌ಟಿಟ್ಯೂಟ್‌ನವರು ನಿರ್ವಹಿಸುತ್ತಿರುವ ರೇಡಿಯೊ ವ್ಯೆಹ, ನೈನಿಟಾಲ್‌ನಲ್ಲಿರುವ ದೂರದರ್ಶಕ ವ್ಯವಸ್ಥೆ ಇವೆಲ್ಲ ಪರಸ್ಪರ ಪೂರಕವಾಗಿ ಕೆಲಸಮಾಡಿ ಗಣನೀಯ ಸಂಶೋಧನೆಗಳಿಗೆ ಕಾರಣವಾಗಿವೆ.

ವಿಶ್ವದ ಅನೇಕ ರಾಷ್ಟ್ರಗಳು ರೇಡಿಯೊ ದೂರದರ್ಶಕಗಳನ್ನು ಹೊಂದಿವೆ. ಇದರಲ್ಲಿ ಜರ್ಮನಿಯ ಎಫಲ್ಸ್‌ಬರ್ಗ್, ಆಸ್ಟ್ರೇಲಿಯಾದ ಪಾರ್ಕ್ಸ್, ಇಂಗ್ಲೆಂಡಿನ ಜೋಡ್ರೆಲ್ ಬ್ಯಾಂಕ್‌ಗಳಲ್ಲಿರುವುವು ಪ್ರಮುಖವಾದವು.

ಈಚೆಗೆ ಯೂರೋಪ್, ಪೂರ್ವ ಏಷ್ಯದ ಕೆಲ ರಾಷ್ಟ್ರಗಳು, ಅಮೆರಿಕ ಹಾಗೂ ಚಿಲಿ ಗಣರಾಜ್ಯ ಇವು ಒಗ್ಗೂಡಿ ಒಂದು ಬೃಹತ್ ರೇಡಿಯೊ ದೂರದರ್ಶಕ ನಿರ್ಮಿಸುತ್ತಿವೆ. 2003ರಲ್ಲಿ ನಿರ್ಮಾಣ ಕಾರ್ಯಪ್ರಾರಂಭವಾಗಿದ್ದು 2011ರ ವೇಳೆಗೆ ಮುಗಿಯುವ ಸಂಭವವಿದೆ. ಇದು ಸಮುದ್ರಮಟ್ಟದಿಂದ 5000ಮೀ. ಎತ್ತರದಲ್ಲಿದ್ದು, ಅತಿ ಎತ್ತರದಲ್ಲಿನ ರೇಡಿಯೊ ದೂರದರ್ಶಕವಾಗಿದೆ. ಇದರಲ್ಲಿ 12ಮೀ. ಮತ್ತು 7ಮೀ. ವ್ಯಾಸದ ಆಂಟೆನಾಗಳ ಸಮೂಹವೇ ಇರುತ್ತದೆ. ಇದು ಮಿ.ಮೀ./ಸಬ್ ಮಿಮೀ ತರಂಗದೂರದ ರೇಡಿಯೊ ಅಲೆಗಳನ್ನೂ ಗುರುತಿಸಬಲ್ಲದೆನ್ನಲಾಗಿದೆ. ಇದೇ ಆಲ್ಮಾ ALMA (Atacama Large mm/submm Array).