ಆಗತಾನೆ ಕೂಗುತ್ತಿದ್ದ ಕೋಳಿಗಳ ಇಂಚರದೊಂದಿಗೆ ಶ್ರೀಮಠದಿಂದ ಘಂಟಾನಾದ ಕೇಳಿಬರುತ್ತಿದೆ. ಹಕ್ಕಿಗಳ ಕಲರವಕ್ಕೆ ಎಚ್ಚೆತ್ತ ಒಕ್ಕಲು ಮಕ್ಕಳು ನಿತ್ಯ ಕೆಲಸಗಳನ್ನು ಮುಗಿಸಿ ಬೇಸಾಯದ ಕೆಲಸಗಳಿಗೆ ತೆರಳುತ್ತಿದ್ದಾರೆ.

ರೇವಾ ನದಿಯ ತೀರದ ಶ್ರೀಮಠದಲ್ಲಿಂದ ಮುಂಜಾನೆ ಕೇಳಿಬರುವ ಇಂಪಾದ ವೇದಾಧ್ಯಯನ ತಂಗಾಳಿಯಲ್ಲಿ ಬಹುದೂರದವರೆಗೆ ಹರಡಿ ಆ ಪ್ರಾಂತವನ್ನು ಪಾವನ ಮಾಡಿದೆ.

ಮಹದೇವ ದೇಶಿಕರು ಶ್ರೀಮಠದ ಒಡೆಯರು. ಬ್ರಹ್ಮಚಾರಿಗಳು, ಶಿವಪೂಜಾಲೋಲರು. ಬ್ರಾಹ್ಮಿ ಮುಹೂರ್ತದಲ್ಲೆದ್ದು ಅವರು ಅನುಷ್ಠಾನಕ್ಕೆ ತೊಡಗಿದರೆ ಹೊರಬರುವುದು ಸೂರ್ಯೋದಯದ ಅನಂತರವೇ!

ಅದುವರೆಗಾಗಲೇ ಎಷ್ಟೋ ಮಂದಿ ಭಕ್ತರು ಮಡಿಯಿಂದ ಬಂದು ಗುರುದರ್ಶನಕ್ಕಾಗಿ ಕಾಯುತ್ತಿರುತ್ತಾರೆ. ಭಕ್ತರ ಕುಶಲ ಪ್ರಶ್ನೆ ಮಾಡಿ ಅವರವರ ಸುಖದುಃಖಗಳಿಗೆ ಸೂಕ್ತ ಮಾತುಗಳನ್ನು ಹೇಳಿ ಹರಸುವುದು ದೇಶಿಕರ ದೈನಂದಿನ ಪದ್ಧತಿ.

ಊರಿನ ಮಕ್ಕಳಿಗೆ ಮಠವೇ ಗುರುಕುಲ. ಶ್ರೀಯವರೇ ಅಲ್ಲಿಯ ಕುಲಪತಿಗಳು ಅಕ್ಷರಾಭ್ಯಾಸದಿಂದ ಅಧ್ಯಾತ್ಮ ಅನುಭವದವರೆಗೆ ಅಲ್ಲಿ ಶಿಕ್ಷಣ ವ್ಯವಸ್ಥೆಯು ಉಂಟು.

ಸಾರಖಿಯ ಕನಸು

ಎಲ್ಲಗೊಂಡ, ವಿಂಧ್ಯಪರ್ವತ ಪ್ರಾಂತದಲ್ಲಿ ಹರಿಯುವ ರೇವ ನದಿಯ ತೀರದ ಒಂದು ಚಿಕ್ಕ ಹಳ್ಳಿ. ಅಲ್ಲಿ ಸಹನ ಮತ್ತು ಸಾರಖಿ ಎಂಬ ದಂಪತಿಗಳು ಸಚ್ಚರಿತೆಗೆ, ಶಿವಭಕ್ತಿಗೆ ಹೆಸರಾದವರು. ಮಕ್ಕಳಿಲ್ಲದ ಕೊರಗು ಒಂದನ್ನು ಬಿಟ್ಟರೆ ಅವರಿಗೆ ಮತ್ತೆ ಯಾವ ಕೊರತೆಯೂ ಇರಲಿಲ್ಲ.

ಇಂದು ಅವರು ಎಂದಿಗಿಂತ ಮುಂಚಿತವಾಗಿಯೇ ಗುರುದರ್ಶನಕ್ಕೆ ಬಂದಿದ್ದಾರೆ. ಗುರು ಪ್ರಸನ್ನರಾಗಿ ಅವರನ್ನು ಬರಮಾಡಿಕೊಂಡರು. ಅವರ ಇಂಗಿತವನ್ನು ಅರಿತ ಗುರು, “ಮಕ್ಕಳೆ! ಮಾನವನ ಬಯಕೆಗಳು ನೆರವೇರಬೇಕಾದರೂ ಶಿವಕೃಪೆ ಕೂಡಿಬರಬೇಕಲ್ಲವೆ?” ಎಂದು ಸಮಾಧಾನ ಹೇಳಿದರು.

“ನಿಜ ಗುರುದೇವ, ತಮ್ಮ ಮಾತು ಅಮೃತವಾಕ್ಯ! ಅವನ ಇಚ್ಛೆಯಿಲ್ಲದೆ ನಮ್ಮ ಬಯಕೆಯೆಲ್ಲ ಬಯಲ ಬಯಕೆಯೇ” ಎಂದ ಸಹನ ತಲೆಬಾಗಿ ಕೈಮುಗಿದು.

ಸಾರಖಿ ಆತನ ಮಡದಿ; ದೈವಕಳೆ ಮೂರ್ತಿವೆತ್ತ ವ್ಯಕ್ತಿತ್ವ ಅವಳದು. ಕೂಡಲೇ ಅವಳು, “ಸ್ವಾಮಿ, ರಾತ್ರಿ ನಾನೊಂದು ಕನಸು ಕಂಡೆ! ಬೆರೆ ಭಾವಿಸದಿದ್ದರೆ ಅರಿಕೆ ಮಾಡುತ್ತೇನೆ”  ಎಂದಳು ನಸುನಾಚಿ ತಲೆ ತಗ್ಗಿಸಿ ಕೈಜೋಡಿಸಿ. ಸಹನ ಕುತೂಹಲದಿಂದ ಅವಳನ್ನು ದಿಟ್ಟಿಸಿದ.

ಗುರುಗಳು, “ಅಗತ್ಯವಾಗಿ, ಹೇಳು ತಾಯಿ!” ಎಂದರು.

ಸಾರಖಿ ಮಾತು ಮುಂದುವರಿಸಿದಳು –

“ರಾತ್ರಿ ಸುಮಾರು ಮೂರನೆಯ ಜಾವ ಕಳೆದಿರಬಹುದು. ಒಂದು ಕಗ್ಗಾಡಿನಲ್ಲಿ ನಮ್ಮ ಪ್ರಯಾಣ ಸಾಗಿತ್ತು. ಎಲ್ಲಿಲ್ಲಿಯೂ ಮೌನ. ಕತ್ತಲೆ ಹೆಪ್ಪು ಕಟ್ಟಿದಂತಿತ್ತು. ದಿಕ್ಕು ತಿಳಿಯದೆ, ಗುರಿ ತೋರದೆ ನಡೆದಿತ್ತು ನಮ್ಮ ಪಯಣ!

“ಕಾಡನ್ನು ಸೀಳಿ ಹರಿದು ಬರುತ್ತಿದ್ದ ನದಿಯೊಂದು ನಮ್ಮ ನಡೆಗೆ ತಡೆಯೊಡ್ಡಿತ್ತು. ಇದ್ದಕ್ಕಿದ್ದಂತೆ ಕಣ್ಣುಕೋರೈಸುವ ಬೆಳಕಿನ ಪುಂಜ! ಅದರ ನಡುವೆ ಕೈಲಾಸದ ನೋಟ! ಶಿವ-ಪಾರ್ವತಿಯರು! ಕೈಯಲ್ಲಿ ಮಗು ಒಂದನ್ನು ಹಿಡಿದು ಕೊಡಬಂದರು. ನಾನು ಮಡಿಲೊಡ್ಡುವುದರಲ್ಲಿ ಕನಸು ಒಡೆಯಿತು; ಎಚ್ಚರವಾಯಿತು.

“ಕೂಡಲೇ ನಮ್ಮವರನ್ನು ಎಬ್ಬಿಸಿ ಕನಸಿನ ವಿಷಯ ಹೇಳಿದೆ. ಅವರು ಕೈಮುಗಿದು, ‘ಎಲ್ಲಾ ಶಿವನ ಇಚ್ಛೆ’ ಎಂದರು. ಅದರಿಂದ ಎಂದಿಗಿಂತ ಮುಂಚಿತವಾಗಿಯೇ ಮಿಂದು ಮಡಿಯುಟ್ಟು ಸನ್ನಿಧಿಗೆ ಬಂದೆವು” ಎಂದಳು ತಲೆಬಾಗಿ ಸಾರಖಿ.

ಗುರುವಿನ ಮುಖ ಅರಳಿತ್ತು. “ತಾಯಿ, ನಿಮ್ಮ ಬಯಕೆ ಕೈಗೂಡುವ ಕಾಲ ದೂರವಿಲ್ಲ!” ಎಂದರು ದೇಶಿಕರು.

ಕನಸು ನನಸಾಯಿತು

ಅಷ್ಟರಲ್ಲಿ ಕೆಲವರು ಸಾಧುಗಳಲು ಮಠಕ್ಕೆ ಬಂದರು. ಅವರಲ್ಲಿ ಒಬ್ಬ ಒಂದು ಎಳೆಮಗುವನ್ನು ಎತ್ತಿಕೊಂಡಿದ್ದ. ತಾವು ಮುಂಜಾನೆ ನದಿಯಲ್ಲಿ  ಮಿಂದು ಧ್ಯಾನ-ಪೂಜೆಗಳಲ್ಲಿ ತೊಡಗಿದ್ದಾಗ ಒಂದು ಮಗುವಿನ ಅಳು ಕೇಳಿಸಿತೆಂದೂ ಅಸಾಧಾರಣ ತೇಜಸ್ಸಿನ ಆ ಮಗು ತಮಗೆ ದೊರೆಯಿತೆಂದೂ ಅವರು ವಿನಂತಿ ಮಾಡಿದರು.

ಸಾಧುಗಳು ಗುರುವಿನ ಮುಂದೆ ಮಗುವನ್ನು ಮಲಗಿಸಿ ಅನುಮತಿ ಪಡೆದು ತೆರಳಿದರು.

ದೇಶಿಕರು ಪ್ರಸನ್ನರಾಗಿದ್ದರು. ಅವರು ಮಗುವಿನ ಹಣೆಗೆ ಭಸ್ಮಧರಿಸಿ ಅಂಗಾಂಗಳನ್ನು ಭಸ್ಮ ಹಸ್ತದಿಂದ ತಡವಿದರು.

“ತಾಯಿ, ನೀವೇ ಭಾಗ್ಯವಂತರು. ಶಿವಕೃಪೆ ಈ ರೂಪದಿಂದ ನಿಮಗೆ ಲಭಿಸಿದೆ. ಇಗೋ, ನಿಮ್ಮ ಕನಸು ನನಸಾಗಿದೆ. ನೀವು ಹೊಕ್ಕ ಕಾಡು ಸಂಸಾರವೆಂಬ ಕಗ್ಗಾಡು. ನಿಮಗೆ ಎದುರಾದ ನದಿ ಜ್ಞಾನದ ನದಿ. ಅಲ್ಲಿ ಕಂಡ ಬೆಳಕೇ ಈ ಶಿಶು” ಎಂದು ಹೇಳಿ ಮಗುವನ್ನು ಸಾರಖಿಗೆ ಒಪ್ಪಿಸಿದರು.

“ಈ ಶಿಶುವಿಗೆ ‘ರೇವ’ನೆಂದೇ ಹೆಸರಾಗಲಿ; ಶ್ರೇಯೋಸ್ತು”  ಎಂದು ಹರಸಿದರು.

ದಂಪತಿಗಳು ಭಕ್ತಿಯಿಂದ ಗುರುವಿಗೆ ವಂದಿಸಿ ಮಗುವಿನೊಂದಿಗೆ ಮನೆಗೆ ಹಿಂದಿರುಗಿದರು.

ಸಾಧುವಿನ ಶಿಷ್ಯ

ಈಗ ರೇವ ನಾಲ್ಕು ತುಂಬಿ ಐದನೆಯ ವರ್ಷದಲ್ಲಿ ಅಡಿಯಿಟ್ಟ. ಅವನಿಗೆ ಅಕ್ಷರಾಭ್ಯಾಸ ಮಾಡಿಸುವ ತವಕ ಸಹನನಿಗೆ. ಒಂದು ಶುಭದಿನದಲ್ಲಿ ದೇಶಿಕರು ವಿಧ್ಯುಕ್ತವಾಗಿ ಅಕ್ಷರಾಭ್ಯಾಸ ವಿಧಿಯನ್ನು ಮುಗಿಸಿದರು. ಗುರು ಒಮ್ಮೆ ಹೇಳಿದ ಪಾಠಗಳನ್ನು ರೇವ ಕೂಡಲೇ ಒಪ್ಪಿಸಿಬಿಡುತ್ತಿದ್ದುದು ಎಲ್ಲರಿಗೂ ಆಶ್ಚರ್ಯವನ್ನು ಉಂಟುಮಾಡುತ್ತಿತ್ತು.

ಅವನ ಬುದ್ಧಿಶಕ್ತಿಯನ್ನು ಕಂಡ ಗುರುಗುಳು, “ಏನಯ್ಯಾ, ನಿನ್ನ ಮಗ ಬೆರಳು ತೋರಿಸಿದರೆ ಹಸ್ತವನ್ನೇ ನುಂಗುತ್ತಾನೆ” ಎನ್ನುವರು. ಸಹನ ಕೃತಜ್ಞತೆಯಿಂದ “ಅದೆಲ್ಲ ತಮ್ಮ ಆಶೀರ್ವಾದ. ಸದ್ಯ ಅವನು ಪೂರ್ಣ ವಿದ್ಯಾವಂತನಾಗಿ, ಆಯುಷ್ಯವಂತನಾಗಿ ಬಾಳಿದರೆ ಸಾಕು” ಎಂದು ಕೈಮುಗಿಯುವನು.

“ಕೇವಲ ಬಾಳುವುದು ಮಾತ್ರವಲ್ಲ! ಅವನು ಜಗದ ಬೆಳಕಾಗಿ ಬೆಳಗುವನು. ಅವನೊಂದು ಜ್ಞಾನಜ್ಯೋತಿ! ಕತ್ತಲನ್ನು ಕಳೆಯಬಂದ ದಿವ್ಯಜ್ಯೋತಿ!” ಎಂದು ಹಾರೈಸುವರು ಗುರು.

ಕೆಲವೇ ದಿನಗಳಲ್ಲಿ ರೇವ ಗುರುವಿನ ಹತ್ತಿರ ಪ್ರಾಥಮಿಕ ವಿದ್ಯಾಭ್ಯಾಸವನ್ನು ಮುಗಿಸಿ ಕಾವ್ಯ, ನಾಟಕ ಮುಂತಾದ ಪ್ರೌಢ ಗ್ರಂಥಗಳನ್ನು ಮುಗಿಸಿದ್ದ. ಎಂಟನೆಯ ವರ್ಷದಲ್ಲಿ ಎಸಗುವ ಶಿವದೀಕ್ಷೆ ವೇದಾಧ್ಯಯನಗಳು ಸಾಂಗವಾಗಿದ್ದವು.

ಈಗೀಗ ಅವನಿಗೆ ಓದಿಗಿಂತ ಹೆಚ್ಚಾಗಿ ಗಿರಿವನಗಳಲ್ಲಿ ವಿಹರಿಸುವುದರಲ್ಲೇ ಒಲವು ಹೆಚ್ಚು ಊರಿನ ಹುಡುಗರೊಡನೆ ಮನೆಯ ದನಗಳನ್ನು ಕಾಡಿಗೆ ಅಟಿಕೊಂಡು ಹೋಗುವನು. ತಂದೆಯ ಜೊತೆ ಹೊಲ ಗದ್ದೆಗಳಲ್ಲಿ ಕೆಲಸಕ್ಕೆ ತೊಡಗುವನು. ಆಟ-ಪಾಠಗಳಲೆಲ್ಲ ಅವನದೇ ಮೇಲುಗೈ. ಗುರುಕುಲದ ಸಹಪಾಠಿಗಳು ಮತ್ತು ರೈತ ಮಕ್ಕಳಿಗೆಲ್ಲ ಅವನು ಈಗ ‘ರೇವಣ್ಣ’ನಾಗಿದ್ದ. ಕಾಡಿನಲ್ಲಿ ದನಗಳನ್ನು ಮೇಯಲು ಬಿಟ್ಟು ಜೊತೆಯವರಿಗೂ ತಿಳಿಯದಂತೆ ನಿರ್ಜನವಾದ ಗವಿಗಳನ್ನು ಸೇರಿ ಮೌನವಾಗಿ ಕುಳಿತುಬಿಡುವುದು ಅವನಿಗೆ ಸಾಧಾರಣವಾಗಿತ್ತು. ಜೊತೆಯ ಹುಡುಗರು ಸಂಜೆಯವರೆಗೆ ಹುಡುಕಿ ಎಚ್ಚರಿಸಿ ಅವನನ್ನು ಮನೆ ಸೇರಿಸಬೇಕಾಗುತ್ತಿತ್ತು.

ಒಮ್ಮೆ ರೇವಣ್ಣನಿಗೆ ಕಾಡಿನಲ್ಲಿ ಒಬ್ಬ ಸಾಧುವಿನ ದರ್ಶನವಾಯಿತು. ಸಾಧು ಹುಡುಗನ ಮುಖಲಕ್ಷಣಗಳನ್ನು ಗುರ್ತಿಸಿ ಅವನಿಗೆ ಅನೇಕ ಗಿಡಮೂಲಿಕೆಗಳ ಪರಿಚಯ ಮಾಡಿಕೊಟ್ಟ. ಒಂದು ಸಿದ್ಧಿಮಂತ್ರವನ್ನೂ ಉಪದೇಶಿಸಿದ. ರೇವಣ್ಣ ಅವನು ತಿಳಿಸಿದ ಕ್ರಮದಂತೆ ಮಂತ್ರಜಪದಲ್ಲಿ ಮಗ್ನನಾದ. ಮೂರು ದಿನವಾದರೂ ಅವನಿಗೆ ಹೊರಜಗತ್ತಿನ ಪರಿವೆಯಿರಲಿಲ್ಲ. ಅನ್ನ ನೀರುಗಳ ಅಗತ್ಯ ಕಾಣಲಿಲ್ಲ. ತಂದೆತಾಯಿಗಳು ಅವನ ಸ್ಥಿತಿಯನ್ನು ಕಂಡು ಹೆದರಿದರು. ಗುರುಗಳು, “ಅವನ ತಪಸ್ಸಿಗೆ ಭಂಗ ಮಾಡಬಾರದು” ಎಂದು ಎಚ್ಚರಿಸಿದರು. ಕಡೆಗೆ ಸಿದ್ಧಿದೇವತೆ ಕಾಣಿಸಿಕೊಂಡು, “ನೀನು ನೆನೆದಾಗ ನೆರವು ನೀಡುವೆ”  ಎಂದು ಅಭಯವಿತ್ತು ಮರೆಯಾಯಿತು.

ಕಾಡಿನಿಂದ ಮನೆಗೆ ಹಿಂದಿರುಗಿದ ರೇವಣ್ಣ ಈಗ ‘ರೇವಣ್ಣಸಿದ್ಧ’ ನಾಗಿದ್ದ. ಅವನಿಂದ ಮಂತ್ರರಹಸ್ಯಗಳನ್ನು  ಪಡೆಯಲು ಅನೇಕ ಸಾಧುಗಳು ರೇವಣಸಿದ್ಧನ ಶಿಷ್ಯರಾಗಿದ್ದರು. ತನಗೆ ವಶವಾದ ಸಿದ್ಧಿಯನ್ನೂ ರೇವಣಸಿದ್ಧ ಲೋಕಹಿತಕ್ಕಾಗಿ ಬಳಸಲು ನಿರ್ಧರಿಸಿದ.

ಜನರಿಗೆ ಬರುವ ರೋಗ-ರುಜಿನಗಳನ್ನು ಅವನು ಗಿಡಮೂಲಿಕೆಗಳಿಂದ, ನಾರು-ಬೇರುಗಳಿಂದ ಸಿದ್ಧಪಡಿಸಿದ ಒಂದೊಂದು ಚಿಟಿಕೆ ಭಸ್ಮದಿಂದಲೇ ಗುಣಪಡಿಸುತ್ತಿದ್ದ. ಆಯುರ್ವೇದ ಅವನಿಗೆ ಕರತಲಾಮಲಕವಾಗಿತ್ತು. ಮಂತ್ರಶಾಸ್ತ್ರ ಪ್ರವೀಣನೆನೆಸಿದ ರೇವಣಸಿದ್ಧನ ಚಿಕಿತ್ಸೆ ಜನರಿಗಿಂತ ಹೆಚ್ಚಾಗಿ ದನಗಳ ಕಾಯಿಲೆಗಳನ್ನು ಗುರ್ತಿಸಿ ಗುಣಪಡಿಸುವಲ್ಲಿ ರಾಮಬಾಣವಾಗಿತ್ತು.

ಹಠಯೋಗ

ಈಗ ರೇವಣ್ಣಸಿದ್ಧನಿಗೆ ಹನ್ನೆರಡನೆಯ ವರ್ಷ ನಡೆಯುತ್ತಿತ್ತು. ಅವನಿಗೆ ಇನ್ನೂ ಹೆಚ್ಚಿನ ಸಿದ್ಧಿಗಳನ್ನು ಸಾಧಿಸಿ ಲೋಕಕಲ್ಯಾಣ ಮಾಡಬೇಕು ಎಂಬ ತವಕ.

‘ಮನಸ್ಸು ಮತ್ತು ಆತ್ಮಗಳ ಮೇಲೆ ಹತೋಟಿಯನ್ನು ಪಡೆಯುವ ಯೋಗವನ್ನು ಸಾಧಿಸಬೇಕು.’

ಇದಕ್ಕಾಗಿ ಅವನು ತನ್ನ ಬಯಕೆಯನ್ನು ಗುರುವಿನಲ್ಲಿ ತೋಡಿಕೊಂಡ. ಗುರು ಯೋಚಿಸಿ ಹೇಳಿದರು. “ಕೇವಲ ದೇಹದ ಕಾಯಿಲೆಗಳನ್ನು ವಾಸಿ ಮಾಡುವುದಷ್ಟೇ ಮಾನವನ ಗುರಿ ಅಲ್ಲ; ದೇಹ ಮತ್ತು ಮನಸ್ಸುಗಳ ಮೇಲೆ ಹತೋಟಿಯನ್ನು ಪಡೆಯುವ ಯೋಗವನ್ನು ಸಾಧಿಸಬೇಕು.” ರೇವಣನ ಮುಖ ಅರಳಿತು, ಕೇಳಿದ; “ಗುರುಗಳೆ, ನನಗೆ ಯೋಗಾಭ್ಯಾಸ ಮಾಡುವ ಬಯಕೆ ಬಹಳವಾಗಿದೆ; ಕೃಪೆಯಾಗಬೇಕು.”

“ಮಗು, ಅದು ಅನುಭವಿ ಗುರುವಿನ ಮೂಲಕ ಆಗಬೇಕು. ನನಗೆ ಯೋಗಾಭ್ಯಾಸದ ಪರಿಚಯ ಕಡಿಮೆ. ನೀನು ಅದಕ್ಕೆ ಯೋಗ್ಯ ಗುರುವನ್ನು ಹುಡುಕಿಕೊಳ್ಳುವುದೇ ಒಳ್ಳೆಯದು” ಎಂದರು.

ಸಾಧನೆಸಿದ್ಧಿ

ರೇವಣಸಿದ್ಧ ಯೋಗ್ಯ ಗುರುವನ್ನು ಹುಡುಕಲು ಹೊರಟಿದ್ದ. ಕಾಡುಮೇಡುಗಳೆನ್ನದೆ ಅವನ ಪ್ರಯಾಣ ಸಾಗಿತ್ತು. ಅಲ್ಲಲ್ಲಿಯ ಆಶ್ರಮಗಳಲ್ಲಿ, ಪುಣ್ಯಕ್ಷೇತ್ರಗಳಲ್ಲಿ ಸಾಧು ಸಂತರನ್ನು ಸಂದರ್ಶಿಸುತ್ತಾ ಅವನು ಮಾರ್ತಾಂಡ ಪರ್ವತ ಸೇರಿದ.

ಕಾಡಿನ ಮಧ್ಯದಲ್ಲಿ ನದಿಯೊಂದು ಹರಿಯುತ್ತಿತ್ತು. ಅಲ್ಲಿ ಕೆಲವು ಸಾಧಕರು ಮೀಯುತ್ತಿದ್ದರು. ಕೆಲವರು ಬಟ್ಟೆ ಒಗೆಯುತ್ತಿದ್ದರು. ಕೆಲವರು ಸಮಿತ್ತು ಆರಿಸುತ್ತಿದ್ದರು. ಮತ್ತೆ ಕೆಲವರು ಅಲ್ಲಲ್ಲಿ ಯೋಗಾಸನಗಳನ್ನು ಹಾಕುತ್ತಿದ್ದರು. ವಿಚಾರಿಸಿದಾಗ ಅದು ಮತ್ಸ್ಯೇಂದ್ರನಾಥನ ಆಶ್ರಮವೆಂದು ತಿಳಿಯಿತು.

ರೇವಣಸಿದ್ಧನ ಮನಸ್ಸಿಗೆ ಈಗ ಎಷ್ಟೋ ನೆಮ್ಮದಿ. .ಅವರೆಗಾಗಲೇ ರೇವಣಸಿದ್ಧನಿಗೆ ಯೋಗಶಾಸ್ತ್ರ ಸಂಬಂಧವಾದ ಅನೇಕ ಗ್ರಂಥಗಳ ಪರಿಚಯವಾಗಿತ್ತು. ಅಷ್ಟಾಂಗ ಯೋಗಗಳು, ಹಠಯೋಗ ರಾಜಯೋಗಗಳು ಕೇವಲ ಗ್ರಂಥಾವಲೋಕನದಿಂದ ಕೈವಶವಾಗತಕ್ಕವಲ್ಲ ಎಂಬ ಅನುಭವ ರೇವಣಸಿದ್ಧನಿಗೆ ಆಗಿತ್ತು. ಅವನ್ನು ಹೇಳಿಕೊಡಬಲ್ಲ ಅನುಭವಿಯೇ ಈ ಮತ್ಸ್ಯೇಂದ್ರನೆಂಬ ಭರವಸೆ ಅವನಿಗೆ.

ರೇವಣಸಿದ್ಧ ಆಶ್ರಮವನ್ನು ಹೊಕ್ಕ ಸುದ್ದಿ ತಿಳಿದ ಮತ್ಸ್ಯೇಂದ್ರ ದೂರದಿಂದಲೇ ಸಿದ್ಧನ ಮುಖಲಕ್ಷಣಗಳನ್ನು ಗುರ್ತಿಸಿ ಅವನನ್ನು ಗೌರವದಿಂದ ಬರಮಾಡಿಕೊಂಡ.

ರೇವಣಸಿದ್ಧ ಮತ್ಸ್ಯೇಂದ್ರನಿಗೆ ವಂದಿಸಿ ತನ್ನ ಹಂಬಲ ಶ್ರುತಪಡಿಸಿದ. ಮತ್ಸ್ಯೇಂದ್ರ ಸಿದ್ಧನ ವಿನಯ ಗುಣಕ್ಕೆ ಬೆರಗಾದ. ಅವನನ್ನು ಶಿಷ್ಯನನ್ನಾಗಿ ಸ್ವೀಕರಿಸಿದ. ಕೆಲವೇ ದಿನಗಳಲ್ಲಿ ರೇವಣಸಿದ್ಧ ಅವನಿಂದ ಕಲಿಯಬಹುದಾದುದನ್ನು ಕಲಿತ. ಅಲ್ಲಿ ಕಲಿತುದನ್ನು ಹಠಯೋಗ ಎನ್ನುತ್ತಾರೆ.

ರಾಜಯೋಗ

ಹಠಯೋಗ ಪರಿಣತನಾದ ರೇವಣಸಿದ್ಧ ಆದರೆ ಅವನಿಗೆ ಇನ್ನೂ ತೃಪ್ತಿಯಾದಂತೆ ಕಾಣಲಿಲ್ಲ.

‘ಮತ್ತೇನನ್ನು ಬಯಸುತ್ತಿದ್ದೀಯೆ?” ಎಂದು ಪ್ರಶ್ನಿಸಿದ ಮತ್ಸ್ಯೇಂದ್ರ.

“ಸ್ವಾಮಿ, ರಾಜಯೋಗವೇ ಮುಂದೆ ಶಿವಯೋಗವೆನಿಸಿ ಆತ್ಮಸಾಕ್ಷಾತ್ಕಾರಕ್ಕೆ ದಾರಿಮಾಡಿಕೊಡುತ್ತದೆ ಎಂದು ಕೇಳಿದ್ದೇನೆ. ದಯಮಾಡಿ ನನಗೆ ರಾಜಯೋಗದ ಪರಿಚಯ ಮಾಡಿಕೊಡೋಣವಾಗಲಿ’ ಎಂದ ರೇವಣಸಿದ್ಧ. ವಿನಯದಿಂದ.

“ಮಗು, ಅದಿನ್ನೂ ನನಗೆ ಸಿದ್ಧಿಸಿಲ್ಲ; ಅದನ್ನು ಕಲಿಸಬಲ್ಲ ಗುರುವಿನ ಬಳಿಗೆ ಹೋಗು. ನಿನಗೆ ಮಂಗಳವಾಗಲಿ.” ಮತ್ಸ್ಯೇಂದ್ರ ರೇವಣಸಿದ್ಧನನ್ನು ಆಶೀರ್ವದಿಸಿ ಬೀಳ್ಕೊಟ್ಟ. ಮತ್ಸ್ಯೇಂದ್ರನ ಸುಸಂಸ್ಕಾರಕ್ಕೆ ಸಿದ್ಧ ಬೆರಗಾದ. ಅವನ ಔದಾರ್ಯಕ್ಕೆ ಕೃತಜ್ಞತೆ ಸೂಚಿಸಿ ಅಲ್ಲಿಂದ ಮುಂದೆ ಗಿರಿನಾರ್ ಪರ್ವತದ ಹಾದಿ ಹಿಡಿದ.

ದಾರಿಯಲ್ಲಿ ದತ್ತಾತ್ರೇಯರ ಆಶ್ರಮ. ದತ್ತರಿಂದ ಉಚಿತ ಸತ್ಕಾರ ಪಡೆದು ರೇವಣಸಿದ್ಧ ಅಲ್ಲಿ ಕೆಲಕಾಲ ಅನುಷ್ಠಾನ ಮಾಡಿದ. ಅವನಿಗೆ ಅಲ್ಲಿ ‘ಶಾಬರೀ ಮಂತ್ರ’ ಎಂಬ ಮಂತ್ರ ಸಿದ್ಧಿಸಿತು. ಇದರಿಂದ ಅನೇಕ ವಿಶಿಷ್ಟ ಶಕ್ತಿಗಳು ಅವನಿಗೆ ಲಭ್ಯವಾದವು ಎಂದು ಹೇಳುತ್ತಾರೆ. ಬೇಕಾದಂತೆ ಸಣ್ಣಗಾಗುವುದು, ದೊಡ್ಡದಾಗುವುದು, ಬಯಸಿದ್ದನ್ನು ಪಡೆಯುವುದು ಇಂತಹ ಶಕ್ತಿಗಳು ಬಂದವು ಎನ್ನುತ್ತಾರೆ.

ರೇವಣಸಿದ್ಧ ಅಲ್ಲಿಂದ ಮುಂದೆ ಹೊರಟ. ರೇಣಾವಿ ಎಂಬ ಗ್ರಾಮದಲ್ಲಿ (ಈಗ ಅದು ಮಹಾರಾಷ್ಟ್ರ ರಾಜ್ಯದ ಸತಾರಾ ಜಿಲ್ಲೆಯಲ್ಲಿದೆ) ಒಂದು ಸೋಜಿಗ ನಡೆಯಿತು. ಸತ್ತುಹೋಗಿದ್ದ ಮಗುವಿಗೆ ಅವನು ಸಿದ್ಧ ಕಲ್ಪವನ್ನು ಲೇಪಿಸಿದ, ಅದು ಬದುಕಿತು-ಎಂದು ಹೇಳುತ್ತಾರೆ.

ಶಿವಯೋಗಿ ಸಂದರ್ಶನ

ಹಠಯೋಗ, ಶಾಬರೀ ಮಂತ್ರ ಮತ್ತು ಅಷ್ಟಸಿದ್ಧಿಗಳು ಕೈವಶವಾಗಿದ್ದರೂ ರೇವಣಸಿದ್ಧನಿಗೆ ರಾಜಯೋಗವನ್ನು ಉಪದೇಶಮುಖದಿಂದ ನೀಡುವ ಸದ್ಗುರುವನ್ನು ಕಾಣುವ ತವಕ. ಹಗಲಿರುಗಳೂ ಅವನಿಗೆ ಸದ್ಗುರುವಿನ ಹಂಬಲವೇ ಆಗಿತ್ತು.

ಈಗಿನ ಆಂಧ್ರಪ್ರದೇಶದಲ್ಲಿರುವ ಕೊಲ್ಲಿಪಾಕಿಯು ಜಗದ್ಗುರು ರೇಣುಕಾಚಾರ್ಯರ ಅವತಾರಭೂಮಿ. ಸೋಮನಾಥನ ಪವಿತ್ರಕ್ಷೇತ್ರ. ಅದರ ಸುತ್ತ ತಪಸ್ಸಿಗೆ ಯೋಗ್ಯವಾದ ಸಣ್ಣಸಣ್ಣ ಮಟ್ಟಗಳು. ಅವುಗಳಲ್ಲಿ ರೇಣುಕಗಿರಿಯೂ ಒಂದು. ಅದು ಶಿವಯೋಗಿ ಶಾಂತಿಮಯ್ಯಗಳ ತಪೋಭೂಮಿ.

ಶಿವಯೋಗಿಗಳ ಪ್ರಭಾವವನ್ನು ರೇವಣಸಿದ್ಧ ಅಲ್ಲಲ್ಲಿ ಕೇಳಿದ್ದ. ಅವರ ದರ್ಶನ ಮಾಡಬೇಕೆಂಬ ಹಂಬಲದಿಂದಲೇ ಅವನು ಕೊಲ್ಲಿಪಾಕಿ ಹಾದಿ ಹಿಡಿದಿದ್ದ. ಅವನು ತಪೋವನವನ್ನು ಪ್ರವೇಶಿಸುತ್ತಿದ್ದಂತೆಯೇ ಇಬ್ಬರು ಸಾಧಕರು ಅಲ್ಲಿಗೆ ಬಂದು,

“ರೇವಣಸಿದ್ಧರು ತಾವೇ ಅಲ್ಲವೇ?” ಎಂದು ಕೇಳಿದರು.

“ನನ್ನ ಹೆಸರನ್ನು ನಿಮಗೆ ಯಾರು ಹೇಳಿದರು?” ಎಂದ ಚಕಿತನಾಗಿ ಸಿದ್ಧ.

“ಶಿವಯೋಗಿಗಳು ಸಮಾಧಿಯಲ್ಲಿ ನೀವು ಬರುತ್ತಿರುವುದನ್ನು ಕಂಡರಂತೆ. ಅವರ ಆದೇಶದಂತೆ ನಾವು ತಮ್ಮಲ್ಲಿಗೆ ಬಂದೆವು. ದಯಮಾಡಿಸಬೇಕು” ಎಂದು ಸಾಧಕರು ಕೈಮುಗಿದರು. ಸಿದ್ಧಮೂರ್ಕನಾದ. ವಂದಿಸಿ ಆತ ಅವರನ್ನು ಹಿಂಬಾಲಿಸಿದ.

ಆಶ್ರಮ ಅನೇಕ ಸಾಧಕರಿಗೆ ಕೇಂದ್ರವಾಗಿತ್ತು . ಅಲ್ಲಿಯ ಸನ್ನಿವೇಶವನ್ನು ಕಂಡ ಸಿದ್ಧನ ಮನಸ್ಸು ಅರಳಿತು. ಶಿವಯೋಗಿಗಳ ದರ್ಶನಕ್ಕಾಗಿ ಅವನ ಮನಸ್ಸು  ಹಾತೊರೆಯುತ್ತಿತ್ತು. ದೂರದಿಂದಲೇ ಸಿದ್ಧನನ್ನು ಕಂಡ ಶಿವಯೋಗಿಗಳಿಗೆ ಅವನಲ್ಲಿ ‘ಗುರುಪುತ್ರ’ ಭಾವ ಮೂಡಿತು. ಹಸನ್ಮುಖರಾಗಿ ಅವರು.

“ಎಲ್ಲಿಂದ ಬರುತ್ತಿದ್ದೀಯೆ?” ಎಂದರು ಅಭಯಹಸ್ತ ಚಾಚಿ.

“ತ್ರಿಕಾಲಜ್ಞರಾದ ತಮ್ಮ ಎದುರು ಹೇಳುವುದೇನಿದೆ?” ಎಂದು ಸಾಷ್ಟಾಂಗ ನಮಸ್ಕಾರ ಮಾಡಿದ. ನಿಸ್ಸಂಕೋಚವಾಗಿ ನಡೆದುದೆಲ್ಲವನ್ನೂ ಶಿವಯೋಗಿಗಳಿಗೆ ಬಿನ್ನೈಸಿದ. ಅವರು ಅವನನ್ನು ಶಿಷ್ಯನನ್ನಾಗಿ ಸ್ವೀಕರಿಸಿದರು.

ಶಿವಯೋಗಿಗಳು ಒಂದು ಪ್ರಶಾಂತವಾದ ಸಂಜೆ ಸಿದ್ಧನನ್ನು ಕೂಡಿಸಿಕೊಂಡು ಯೋಗಸಾಧನೆಯ ರಹಸ್ಯಗಳೆಲ್ಲವನ್ನೂ ಸಾಂಗವಾಗಿ ಬೋಧಿಸಿದರು. ರೇವಣಸಿದ್ಧನಿಗೆ ಶಿವಯೋಗದ ಐದು ಹಂತಗಳ ಗುಟ್ಟನ್ನು ಉಪದೇಶಿಸಿದರು.

ಸಿದ್ಧನ ಕಣ್ಣುಗಳು ಆನಂದಬಾಷ್ಪಗಳಿಂದ ತೊಯ್ದಿದ್ದವು. ಅವನು ಎದ್ದು ಶಿವಯೋಗಿಗಳಿಗೆ ದಂಡ ಪ್ರಣಾಮ ಮಾಡಿದ.

ರಾಜನು ಸಿದ್ಧೇಶ್ವರನಿಗೆ ಶರಣಾದ.

“ಗುರುದೇವ, ತಮ್ಮ ಸಾನ್ನಿಧ್ಯ ಸೇರಿ ಇಮದು ಕೃತಾರ್ಥನಾದೆ. ಶಿವಯೋಗ ಸಿದ್ಧಿಯ ಮಹಾದೀಕ್ಷೆಯನ್ನು  ಕರುಣಿಸಿ ಹರಸಬೇಕು” ಎಂದು ಬೇಡಿದ. ಶಿವಯೋಗಿಗಳು ಸಿದ್ಧನಿಗೆ ಅಭಯವನ್ನು ಕೊಟ್ಟು, “ಸೋಮನಾಥನ ಸನ್ನಿಧಿಯಲ್ಲಿ ಪೂರ್ಣಯೋಗದ ಈ ಮಹಾದೀಕ್ಷೆ ನಡೆಯಲಿ” ಎಂದು ನುಡಿದರು.

ರೇವಣಸಿದ್ಧನ ಹೃದಯ ಕೃತಜ್ಞತೆಯಿಂಧ ಬಾಗಿತು. ಗುರುಗಳಿಗೆ ನಮಿಸಿ ಅವರ ಆಶೀರ್ವಾದವನ್ನು  ಪಡೆದ.

ಮಹಾದೀಕ್ಷೆ

ರೇವಣಸಿದ್ಧನಿಗೆ ಇಂದಿಗೆ ಹದಿನೆಂಟು ವರ್ಷ ತುಂಬಿ ಹತ್ತೊಂಬತ್ತಕ್ಕೆ ಬಿದ್ದಿದೆ. ರೇಣುಕ ಜಯಂತಿಯ ಶುಭ ಸಮಯ. ಸಹಸ್ರಾರು ಜನರು ಕೊಲ್ಲಿಪಾಕಿ ಕ್ಷೇತ್ರದಲ್ಲಿ ನೆರೆದಿದ್ದಾರೆ. ಅದೇ ಸಮಯದಲ್ಲಿ ರೇವಣಸಿದ್ಧನಿಗೆ ಶಿವಯೋಗಿಗಳಿಂದ ಪೂರ್ಣಯೋಗದ ಮಹಾದೀಕ್ಷೆ ನೆರವೇರುವುದೆಂಬ ಸುದ್ಧಿ ಎಲ್ಲೆಡೆಯೂ ಹಬ್ಬಿತ್ತು. ಈ ಅಮೃತ ಸನ್ನಿವೇಶವನ್ನು ಕಣ್ಣಾರೆ ಕಂಡು ಅವರ ಕೃಪೆಗೆ ಪಾತ್ರರಾಗುವ ಹಂಬಲ ಭಕ್ತಕೋಟಿಗೆ.

ಸೋಮನಾಥಾಲಯದಲ್ಲಿ ನೆರೆದ ಜನರಿಗೆ ಗರ್ಭಗುಡಿ ಪರದೆಯಿಂದ ಮರೆಯಾಗಿದೆ. ಅಲ್ಲಿ ದೀಕ್ಷಾ ಕ್ರಮಗಳು ಸಾಂಗವಾಗಿ ಮುಗಿದಿವೆ. ಭಕ್ತರು, ಭಾವುಕರು, ಕವಿ, ಗಮಕಿ, ವಾಗ್ಮಿಗಳ ತಂಡ ಒಂದು ಕಡೆ. ಹೆಂಗಳೆಯರ ಸಮೂಹ ಇನ್ನೊಂದು ಕಡೆ. ಕಲಾವಿದರ ಪಂಕ್ತಿ ಮತ್ತೊಂದು ಕಡೆ.

ಶಿವಯೋಗಿಗಳಿಂದ ಶಿವಯೋಗ ಮಹಾದೀಕ್ಷೆ ಪಡೆದ ಸಿದ್ಧ. ‘ರೇವಣಸಿದ್ಧೇಶ್ವರ’ ನೆನೆಸಿ ಕಾಣಿಸಿಕೊಂಡ. ಯೋಗದಂಡ, ಕಮಂಡಲು, ವಜ್ರಕುಂಡಲಗಳಿಂದ ಬೆಳಗುವ ಶೀರೋಲಿಂಗಾರಿ ಮಹಾಸಿದ್ಧನನ್ನು ಕಂಡ ಜನ ಹರ್ಷದಿಂದ ಜಯಕಾರ ಮಾಡಿದರು. ‘ಅಭಿನವ ರೇವಣಸಿದ್ದೇಶ್ವರ ಜಯ ಜಯ’ ಎಂಬ ಮೊಳಗು ದಿಗಂತವನ್ನು ಮುಟ್ಟಿತು. ಸಿದ್ಧೇಶ್ವರ ಅಭಯಹಸ್ತವನ್ನು ಚಾಚಿ ಭಕ್ತಕೋಟಿಯ೬ನ್ನು ಹರಸಿದ. ಇದು ನಡೆದದ್ದು ಸುಮಾರು ೧೦೬೮ ರಲ್ಲಿ.

ಶಿವಕೇಶವರಿಗೆ ಭೇದವಿಲ್ಲ

ರೇವಣಸಿದ್ಧೇಶ್ವರ ಕೊಲ್ಲಿಪಾಕಿಯಿಂದ ನೇರವಾಗಿ ಮಲಯಾಚಲಕ್ಕೆ ಆಗಮಿಸಿದ. ಅದು ಹಿಂದೆ ಆದಿ ರೇಣುಕರು ಅಗಸ್ತ್ಯ ಮಹರ್ಷಿಗೆ ಶಿವತತ್ವೋಪದೇಶ ಮಾಡಿದ ಪವಿತ್ರ ಕ್ಷೇತ್ರ. ವೀರಪೀಠ ನೆಲೆಸಿರುವ ಪುಣ್ಯ ಭೂಮಿ. ಸಿದ್ಧೇಶ್ವರ ಅಲ್ಲಿ ಕೆಲವು ದಿನ ತಪಸ್ಸು ಮಾಡಿ ಭಕ್ತಕೋಟಿಯನ್ನು ಹರಸಿ ದಕ್ಷಿಣ ಅಭಿಮುಖವಾಗಿ ಪ್ರಯಾಣ ಬೆಳೆಸಿದ. ಪಿಣ್ಣಾಂಕ ಹೆಸರಿನಿಂದ ಸಂಚರಿಸುತ್ತ ಕಂಚೀ ನಗರಕ್ಕೆ ಬಂದ.

ರೇವಣಸಿದ್ಧೇಶ್ವರನ ಸಂಚಾರದಲ್ಲಿ ಅನೇಕ ಅದ್ಭುತ ಸಂಗತಿಗಳು ನಡೆದವು ಎಂದು ಭಕ್ತರು ನಂಬುತ್ತಾರೆ.

ವೀರರಾಜೇಂದ್ರ (ಸುಮಾರು ೧೦೬೨-೧೦೭೦) ರಾಜೇಂದ್ರ ಚೋಳನ ಮಗ. ಆತನ ಆಳ್ವಿಕೆಯಲ್ಲಿ ಕಂಚಿಯಲ್ಲಿ ಶೈವ-ವೈಷ್ಣವ ದ್ವೇಷ ಮಿತಿ ಮೀರಿತ್ತು. ಶೈವರು ಶಿವನೇ ಹೆಚ್ಚು ಎಂದು ವಾದಿಸಿದರೆ ವೈಷ್ಣವರು ಅಲ್ಲ ಎನ್ನುವರು. ವೈಷ್ಣವರು ವಿಷ್ಣುವೇ ಶ್ರೇಷ್ಠ ಎಂದರೆ ಶೈವರು ಒಪ್ಪರು.

ಈ ಸ್ಥಿತಿಯಲ್ಲಿ ಪಿಣ್ಣಾಂಕ ಕಂಚಿಗೆ ಬಂದಿದ್ದ. ಅಲ್ಲಿ ವೈಷ್ಣವರಿಗೂ ಅವನಿಗೂ ಬೆಳೆದ ವಾಗ್ವಾದ ಹಗರಣಕ್ಕಿಟ್ಟುಕೊಂಡಿತು. ಅದು ರಾಜನ ಆಸ್ಥಾನದವರೆಗೂ ಮುಟ್ಟಿತು. ಆಸ್ಥಾನದಲ್ಲಿ ವಿದ್ವಾಂಸರ ಸಭೆ ಏರ್ಪಟ್ಟಿತು. ಎರಡೂ ಕಡೆಯ ವಿದ್ವಾಂಸರು ಗ್ರಂಥಗಳ ರಾಶಿಯನ್ನೇ ಪ್ರದರ್ಶಿಸಿ ತಮ್ಮ ತಮ್ಮ ವಾದವನ್ನು ಸಮರ್ಥಿಸುತ್ತಿದ್ದರು.

ಪಿಣ್ಣಾಂಕ ಅಲ್ಲಿ ನಿಜಸ್ವರೂಪದಿಂದ ಕಾಣಿಸಿಕೊಂಡ. ಅವನ ದಿವ್ಯ ತೇಜಸ್ಸಿಗೆ ಸಭೆ ಮೂಕವಾಯಿತು.

“ಶಿವ-ಕೇಶವರಿಗೆ ಭೇದವಿಲ್ಲ. ‘ಶಂಕರ-ನಾರಾಯಣ’, ‘ಹರಿ-ಹರ’ ಮುಂತಾದ ಮೂರ್ತಿ ಶಿಲ್ಪಗಳಲ್ಲಿ ಶಿವ-ಕೇಶವರು ಕಾಣಿಸಿಕೊಂಡಿರುವಾಗ ಅವರಲ್ಲಿ ಭಿನ್ನತೆಯನ್ನು ಕಲ್ಪಿಸುವುದು ತಪ್ಪು” ಎಂದು ಬೋಧಿಸಿದ. ಸಿದ್ಧೇಶ್ವರನ ಉಪದೇಶ ಎರಡೂ ಪಕ್ಷದವರಿಗೆ ಒಪ್ಪಿಗೆಯಾಯಿತು. ಸಿದ್ಧೇಶ್ವರನನ್ನು ಪೂಜಿಸಿ ರಾಜ ಬೀಳ್ಕೊಟ್ಟ.

ಶಾಪಗ್ರಸ್ತ ಯಕ್ಷರು

ರೇವಣಸಿದ್ಧೇಶ್ವರ ರಾಮಸೇತುವಿಗೆ ಆಗಮಿಸಿದ. ಸುತ್ತಲೂ ಸಮುದ್ರದ ರಮ್ಯ ದೃಶ್ಯ;  ದೊಡ್ಡ ದೊಡ್ಡ ಅಲೆಗಳು ಮೇಲೆದ್ದು ಅಡಗುತ್ತಿದ್ದವು. ಕಡಲ ನಡುವೆ ದೂರದಲ್ಲಿ ಬಂಡೆಯೊಂದು ತಲೆ ಎತ್ತಿದ್ದಂತೆ ಕಾಣಿಸಿತು. ರೇವಣ ಸಿದ್ಧೇಶ್ವರ ಧ್ಯಾನಮಗ್ನನಾದ. ತನ್ನ ಪೂರ್ಣಯೋಗದ ನೆರವಿನಿಂದ ಜೀವಕೋಟಿಯನ್ನು ಉದ್ಧರಿಸಲು ದೃಢಸಂಕಲ್ಪ ಮಾಡಿ ಅಲ್ಲಿಂದ ಹೊರಟ.

ರೇವಣಸಿದ್ಧೇಶ್ವರ ರಾಮಸೇತುವಿನಿಂದ ಉತ್ತರಕ್ಕೆ ಅಭಿಮುಖವಾಗಿ ಹೊರಟು ಮಾಸನೂರಿಗೆ ಬಂದ. ಮಾಸನೂರು ಗ್ರಾಮದ ಇಂದು ಧಾರವಾಡ ಜಿಲ್ಲೆ ಹಿರೆಕೆರೂರು ತಾಲೂಕಿನಲ್ಲಿದೆ. ಊರ ನೆರೆಯಲ್ಲಿ ಬೊಪ್ಪೇಶ್ವರ ದೇವಾಲಯ. ಸಿದ್ಧೇಶ್ವರ ಅಲ್ಲಿಗೆ ಬಂದಾಗ ಸಂಜೆಯಾಗಿತ್ತು. ದೇವಾಲಯದ ಮುಂದಿನ ಬನ್ನಿಕಟ್ಟೆಯ ಮೇಲೆ ಸಿದ್ಧ ಬಿಡಾರ ಮಾಡಿದ. ಕತ್ತಲು ಕವಿಯುತ್ತಿತ್ತು. ಅರ್ಚಕ ಸಿದ್ಧನ ಬಳಿಗೆ ಬಂದು,

“ಸ್ವಾಮಿ, ರಾತ್ರಿ ಇಲ್ಲಿರಬೇಡಿ. ಶಾಪದಿಂದ ರಾಕ್ಷಸರಾಗಿರುವ ಯಕ್ಷದಂಪತಿಗಳು ಇಲ್ಲಿದ್ದಾರೆ; ರಾತ್ರಿ ಇಲ್ಲಿ ನಿಲ್ಲುವವರನ್ನು ಆ ರಾಕ್ಷಸರು ತಿನ್ನುತ್ತಾರೆ” ಎಂದ.

ರೇವಣಸಿದ್ಧ, “ಆಗಲಿ, ಪರೀಕ್ಷಿಸುತ್ತೇನೆ” ಎಂದ.

ರಾತ್ರಿ ರಾಕ್ಷಸರು ಬಂದಾಗ ಒಂದು ಅಸಾಧಾರಣ ಘಟನೆ ನಡೆಯಿತು ಎಂದು ಭಕ್ತರು ಹೇಳುತ್ತಾರೆ. ರೇವಣಸಿದ್ಧನ ಉರಿಯಿಂದ ಅವರು ಕರಗಿ ಎರಡು ಉಕ್ಕಿನ ಗುಂಡುಗಳಾದರಂತೆ. ಬೆಳಗ್ಗೆ ಸಿದ್ಧ ಅವುಗಳನ್ನು ಒಬ್ಬ ಕಮ್ಮಾರನಲ್ಲಿಗೆ ಒಯ್ದು ಎರಡು ಖಡ್ಗಗಳನ್ನು ಮಾಡಿಸಿದ. ಅವು ತುಂಬಾ ಕ್ರೂರವಾಗಿದ್ದವು. ಅವುಗಳಿಂದ ಲೋಕಪೀಡೆ ಆಗಬಾರದೆಂದು ಬಗೆದ ಸಿದ್ಧ ಅವುಗಳಲ್ಲಿ ಒಂದನ್ನು ಮಾಸನೂರು ತೊರೆಯ ಮಡುವಿನಲ್ಲಿ ಕೆಳಮುಖವಾಗಿ ಹೂಳಿದ. ಇನ್ನೊಂದು ಖಡ್ಗವನ್ನು ಬನವಾಸಿಯ ರಾಜ ವಿಕ್ರಮಾದಿತ್ಯನಿಗೆ, “ಇದನ್ನು ಧರ್ಮದ ರಕ್ಷಣೆಗಾಗಿ ಉಪಯೋಗಿಸು” ಎಂದು ಹೇಳಿ ಕೊಟ್ಟನಂತೆ.

ಅಹಂಕಾರಿಗಳುಸಜ್ಜನರು

ಅಲ್ಲಿಂದ ಮುನ್ನಡೆದ ಸಿದ್ಧೇಶ್ವರ ಮಂಗಳವಾಡಕ್ಕೆ ಬಂದ. ಆಗ ಅಲ್ಲಿಯ ಪ್ರಭು ಮೊದಲನೆಯ ವೀರ ಬಿಜ್ಜಳ (ಸುಮಾರು ೧೦೬೭-೧-೭೮). ಅವನು ತುಂಬಾ ಗರ್ವಿಷ್ಠ. ಅವನ ಗರ್ವಕ್ಕೆ ಶಿಕ್ಷೆಯಾಯಿತು ಎಂದು ಭಕ್ತರು ಒಂದು ಸ್ವಾರಸ್ಯವಾದ ಪ್ರಸಂಗದ ಕತೆ ಹೇಳುತ್ತಾರೆ.

ರೇವಣಸಿದ್ಧೇಶ್ವರ ರಾಜಸಭೆಯ ಮುಂದೆ ನಿಂತು ಭಿಕ್ಷೆ ಬೇಡಿದ. ಸಿದ್ಧನ ಮರುಳು ರೂಪ ಕಂಡ ರಾಜ ಉರಿದೆದ್ದ. ಅವನು ಕುದಿದ ಓಗರವನ್ನು ಹಾಕಲು ಆಜ್ಞಾಪಿಸಿದ. ಸಿದ್ಧ ನಸುನಕ್ಕು ಬೊಗಸೆಗೆ ಸುರಿದ ಕುದಿದ ಓಗರವನ್ನು ಸಭೆಯ ಕಂಭವೊಂದಕ್ಕೆ ಸವರಿದ. ಕೂಡಲೆ ಧಗ್‌ ಎಂದು ಉರಿದು ಸಭಾಭವನವನ್ನು ವ್ಯಾಪಿಸಿತು. ಭವನ ಭಸ್ಮವಾಯಿತು. ಬಿಜ್ಜಳ ತನ್ನ ಅಪರಾಧಕ್ಕೆ ಕ್ಷಮೆ ಬೇಡಿದ. ಅರಮನೆಯಲ್ಲಿ ಆರೋಗಿಸಬೇಕೆಂದು ರಾಜ ಬಿನ್ನೈಸಿದ.

“ನಾನೊಬ್ಬನೇ ಉಂಬುವನಲ್ಲ; ಉಣ ಬಡಿಸಿದರೆ ನನಗೆ ತೃಪ್ತಿ” ಎಂದ ಸಿದ್ಧ. ಆದರೆ ರಾಜ ಸಿದ್ಧನಿಗೆ ಶರಣಾಗಿ ತನ್ನ ಅಶಕ್ತಿಯನ್ನು ನಿವೇದಿಸಿದ.

ಕೂಡಲೇ ಸಿದ್ಧೇಶ್ವರ ಅರಮನೆಯಿಂದ ಐದು ಮಾನ ಅಕ್ಕಿ ಮತ್ತು ಐಸು ಸೊಲಿಗೆ ತುಪ್ಪ ತರಿಸಿ ಪಾಕ ಮಾಡಿಸಿ ರಾಜಸೈನ್ಯಕ್ಕೆಲ್ಲ ಮೃಷ್ಟಾನ್ನವನ್ನು ಉಣಬಡಿಸಿ ತಣಿಸಿದ. ಹೃತ್ಪೂರ್ವಕವಾದ ಭಕ್ತಿ-ಪ್ರೀತಿಗಳಿಂದ ನೀಡಿದ ಅಂಬಲಿಯೂ ಆಪ್ಯಾಯಮಾನವಾಗುವುದೆಂಬ ತತ್ತ್ವವನ್ನು ಸಿದ್ಧಮಾಡಿ ತೋರಿದ. ರಾಜನ ಗರ್ವ ಇಳಿಯಿತು. ಆತ ಸಿದ್ಧೇಶ್ವರನಿಗೆ ಶರಣಾದ.

ಕೊಲ್ಲಾಪುರದಲ್ಲಿ ಗೋರಖನಾಥ ಎಂಬವನಿದ್ದ. ಅವನೂ ಅವನ ಶಿಷ್ಯರೂ ಮಾಟಮಂತ್ರಗಳಲ್ಲಿ ಗಟ್ಟಿಗರು. ಜನರಿಗೆ ಬಹಳ ತೊಂದರೆ ಕೊಡುತ್ತಿದ್ದರು. ರೇವಣಸಿದ್ಧನಿಗೆ ತೊಂದರೆ ಕೊಡಲು ಹೋದ ಗೋರಖನಾಥ ತಾನೇ ಸಂಕಟಕ್ಕೆ ಒಳಗಾದ, ರೇವಣಸಿದ್ಧನಿಗೆ ಶರಣಾಗಿ ಶಿವದೀಕ್ಷೆ ಪಡೆದ ಎಂದು ಭಕ್ತರು ನಂಬುತ್ತಾರೆ.

ಕೊಲ್ಲಾಪುರದ ಹತ್ತಿರದ ಸಿದ್ಧಗಿರಿ ಒಂದು ತಪೋ ಭೂಮಿ. ಅದು ಸಿದ್ಧರ ನಿವಾಸ. ಅಲ್ಲಿ ಸಿದ್ಧೇಶ್ವರ ಕೆಲಕಾಲ ತಪಸ್ಸು ಮಾಡಿದ. ಒಂದು ದಿನ ಪವಾಡ ಪುರುಷನೆಂದು ಹೆಸರಾಂತಿದ್ದ ಮರುಳಸಿದ್ಧ ಅಲ್ಲಿಗೆ ಬಂದ. ಚಿಕ್ಕಂದಿನಲ್ಲಿಯೇ ಅವನಲ್ಲಿ ಮೂಡಿ ಬಂದಿದ್ದ ಸುಸಂಸ್ಕಾರವನ್ನು ಕಂಡು ರೇವಣಸಿದ್ಧ ಅವನಿಗೆ ಶಿವದೀಕ್ಷೆ ನೀಡಿ ಹರಸಿದ.

ಅಲ್ಲಿಂದ ಉತ್ತರ ಭಾರತದ ಯಾತ್ರೆಯನ್ನು ಕೈಗೊಂಡ ರೇವಣಸಿದ್ಧೇಶ್ವರ ಉಜ್ಜಯಿನಿ, ವಾರಾಣಸಿ, ಹಿಮವತ್‌ ಕೇದಾರ ಮುಂತಾದ ಪವಿತ್ರ ಕ್ಷೇತ್ರಗಳಲ್ಲಿ ಹಲವು ಕಾಲ ಅನುಷ್ಠಾನವನ್ನು ಮಾಡುತ್ತಾ ದೀನದಲಿತರನ್ನು ಉದ್ಧರಿಸುತ್ತಾ ಮತ್ತೆ ಮಂಗಳವಾಡಕ್ಕೆ ಆಗಮಿಸಿದ. ಜನರ ಭಕ್ತಿಯನ್ನು ಪರೀಕ್ಷಿಸಲು ಆತ ಮರುಳನಂತೆ ಕಾಣುತ್ತಿದ್ದ. ಮಾಸಿದ ಬಟ್ಟೆ ಧರಿಸಿದ್ದರೂ ಅವನ ತೇಜಸ್ಸು ಸ್ವಲ್ಪವೂ ಕುಂದಿರಲಿಲ್ಲ.

ರೇವಣಸಿದ್ಧ ಮತ್ತೆ ಮಂಗಳವಾಡಕ್ಕೆ ಬಂದ. ಗಾಣಿಗರ ಬೀದಿಗೆ ಬಂದ. ಕಲ್ಲಿಶೆಟ್ಟಿ ಗಾಣ ಹೂಡಿದ್ದ. ಬಡ ಎತ್ತು ಬಳಲಿ ಮಲಗುತ್ತಿತ್ತು. ಶೆಟ್ಟಿ, ಅವನ ಹೆಂಡತಿ ಮತ್ತು ಗಾಣದ ಎತ್ತು ಮೂರಕ್ಕೂ ಒಂದೊಂದೇ ಕಣ್ಣು! ರೇವಣಸಿದ್ಧನನ್ನು ಕಂಡ ಶೆಟ್ಟಿ,

“ಅಯ್ಯಾ ಗಾಣದೆತ್ತನ್ನು ಎಬ್ಬಿಸಿ ಗಾಣ ಆಡಿಸಿದರೆ ಹಿಂಡಿಯ ಮೆಲಲಿಕ್ಕುವೆ’’ ಎಂದ.

ಸಿದ್ಧನಿಗೆ ಅವನಲ್ಲಿ ಮರುಕ ಹುಟ್ಟಿತು. ಅವನನ್ನು ಉದ್ಧರಿಸಲೋ ಎಂಬಂತೆ ಸಿದ್ಧ ಗಾಣ ಹೊಡೆಯತೊಡಗಿದ. ಸಿದ್ಧನ ಸಾನ್ನಿಧ್ಯದಿಂದ ಶೆಟ್ಟಿಯ ಬಡತನ ಹಿಂಗಿತು. ಅವರ ಬತ್ತಿದ್ದ ಕಣ್ಣುಗಳು ಕಾಣತೊಡಗಿದವು. ಇವೆಲ್ಲ ಸಿದ್ಧನ ಮಹಿಮೆ ಎಂದು ಅವರಿಗೆ ಅರಿವಾಗಲು ತಡವಾಗಲಿಲ್ಲ. ಅವರು ಭಕ್ತಿಯಿಂದ ಸಿದ್ಧನು ಮಲಗಿದ್ದ ಕೋಣೆಗೆ ಬಂದರು. ಎಣ್ಣೆ ಬತ್ತಿಯಿಲ್ಲದೆ ಅಲ್ಲಿ ಬೆಳಕು ಬೀರಿತ್ತು. ಅವರನ್ನು ಅನುಗ್ರಹಿಸಿ ಸಿದ್ಧ ಮಾಯವಾದ.

ಮಾಯಾದೇವಿ ಮಂಗಳವಾಡದ ಶ್ರೇಷ್ಠ ಸುಂದರಿಯರಲ್ಲಿ ಒಬ್ಬಳು. ಅವಳ ಕಾಯಕ ವೇಶ್ಯಾವೃತ್ತಿ. ನಿಯಮ ಸಂಪನ್ನೆ. ಇದರ ಫಲವಾಗಿಯೇ ಅವಳು ಬಡವೆ, ಆದರೂ ಗುಣದಲ್ಲಿ ಸಿರಿವಂತೆ. ಸಿದ್ಧ ಬಳಲಿದವನಂತೆ ಒಂದು ಕಿರು ಓಣಿಯಲ್ಲಿ ಬರುತ್ತಿದ್ದುದನ್ನು ಅವಳು ಕಂಡಳು. ಅವಳಿಗೆ ಭಕ್ತಿಭಾವ ತುಂಬಿ ಬಂತು. ಅವಳು ಅಕ್ಕರೆಯಿಂದ, “ಎಲೆ ಅಯ್ಯ! ಅಕ್ಕಟ! ಎಲೆ ಮರುಳಯ್ಯ, ಅನ್ನವನುಣ್ಣದೆ ಬಡವಾಗಿರುವೆ! ಬಾ, ನಮ್ಮ ಮನೆಯಲ್ಲಿ ಉಣಲಿಕ್ಕುವೆ!” ಎಂದು ಸಿದ್ಧನನ್ನು ಮನೆಗೆ ಕರೆದೊಯ್ದು ಉಪಚರಿಸಿದಳು. ಸಿದ್ಧ ಅವಳ ಮನೆಗೆ ಕಂಬಿಯ ನೀರು ಹೊತ್ತು ತರುತ್ತಿದ್ದ. ಮಾಯಾದೇವಿಯನ್ನು ಪಾವನ ಮಾಡಿ ಸಿದ್ಧ ಮುನ್ನಡೆದ.

ನಾಯಚಾಕೂರು ನಾಯನಾಡಿನ ರಾಜಧಾನಿ. ಅದು ಮಂಗಳವಾಡದ ಆಧಿಪತ್ಯಕ್ಕೆ ಒಳಪಟ್ಟಿತ್ತು. ಮಹಾಬಲನೆಂಬವನು ಅದನ್ನು ಆಳುತ್ತಿದ್ದ. ಆತನ ಹೆಂಡತಿ ಚಾಕಲೆ ಅಥವಾ ಚಾಕಬ್ಬೆ. ಮಹಾಸುಂದರಿ. ಮಕ್ಕಳಿಲ್ಲ. ಸಿದ್ಧೇಶ್ವರ ಅರಮನೆಯ ಮುಂದೆ ನಿಂತು ‘ಭಿಕ್ಷಾ’ ಎಂದ. ತಾನು ಬಂಜೆ, ಸಾಧು ಭಿಕ್ಷೆ ಹಿಡಿವನೋ ಇಲ್ಲವೋ ಎಂಬ ಕಳವಳ ಅವಳಿಗೆ. ಆದರೂ ಚಾಕಬ್ಬೆ ಸಿದ್ಧನಿಗೆ ವಂದಿಸಿ ಭಕ್ತಿಯಿಂದ ಭಿಕ್ಷೆ ನೀಡಿದಳು. ಅವಳ ಅಳಲು ಸಿದ್ಧನಿಗೆ ಅರಿವಾಯಿತು. ಮರುಕಗೊಂಡ ಸಿದ್ಧ ಅವಳ ಹಣೆಗೆ ಭಸ್ಮ ಧರಿಸಿ ‘ಸತ್ಸಂತಾನಾಭಿವೃದ್ಧಿರಸ್ತು;’ ಎಂದು ಹರಸಿದ. ರಾಜದಂಪತಿಗಳು ಸಿದ್ಧನನ್ನು ಭಕ್ತಿಯಿಂದ ಪೂಜಿಸಿ ಬೀಳ್ಕೊಟ್ಟರು. ಇದರ ಫಲವಾಗಿ ಚಾಕಲೆ ಹೆಣ್ಣು ಮಗುವೊಂದಕ್ಕೆ ಜನ್ಮವಿತ್ತಳು. ರೇವಣಸಿದ್ಧೇಶ್ವರನ ಆಶೀರ್ವಾದದಿಂದ ಜನಿಸಿದ ಶಿಶು ‘ರೇವಾಂಬೆ’ ಎಂಬ ಹೆಸರು ತಳೆದು ಬೆಳೆಯುತ್ತಿತ್ತು.

ಗೃಹಸ್ಥಾಶ್ರಮ

ತಂಜಾವೂರಿನ ವಿಕ್ರಮಚೋಳ (ಸುಮಾರು ೧೧೧೮-೧೧೩೫) ಮಹಾ ಶಿವಭಕ್ತ. ಅವನ ಮಗಳು ಸೌಂದರಿ. ವೈರಾಗ್ಯವೇ ಮೂರ್ತಿವೆತ್ತ ವ್ಯಕ್ತಿತ್ವ ಅವಳದು. ಮಹಾಮಹಿಮನಾದ ರೇವಣಸಿದ್ಧೇಶ್ವರನ ದಿವ್ಯ ವ್ಯಕ್ತಿತ್ವಕ್ಕೆ ಒಲಿದ ಸೌಂದರಿ ಅವನನ್ನೇ ಮದುವೆಯಾಗಲು ನಿರ್ಧರಿಸಿದ್ದಳು. ಗೃಹಸ್ಥಾಶ್ರಮ ಉತ್ತಮವಾದದ್ದು ಎಂದು ರೇವಣಸಿದ್ಧೇಶ್ವರನೂ ಒಪ್ಪಿದ.

ಅವರ ಮದುವೆ ವಿಜೃಂಭಣೆಯಿಂದ ನೆರವೇರಿತು.
ಸಿದ್ಧೇರ್ಶವರ ರಾಜನು ಕೊಟ್ಟ ಬಳುವಳಿಯ ಚದುರಂಗ ಬಲದೊಡನೆ ಅನೇಕ ದೇಶಗಳಲ್ಲಿ ಸಂಚರಿಸುತ್ತಾ ಅಲ್ಲಲ್ಲಿ ಕೆರೆಗಳನ್ನು ಕಟ್ಟಿಸುತ್ತಾ ಛತ್ರಗಳನ್ನು ಶಿವಪುರಗಳನ್ನು ನಿರ್ಮಿಸುತ್ತಾ ಲೋಕಹಿತಾರ್ಥವಾಗಿ ಸಂಚರಿಸುತ್ತಾ ಶ್ರೀಶೈಲಕ್ಕೆ ಆಗಮಿಸಿದ.

ಅಂದು ಶ್ರೀಶೈಲ ಶಿವಾನುಭವಕ್ಕೆ  ಮೊದಲ ಕೇಂದ್ರವಾಗಿತ್ತು. ಸುಪ್ರಸಿದ್ಧರಾಗಿ ದೇವರ ದಾಸಿಮಾರ್ಯರ ಗುರು ಚಂದ್ರಗುಂಡ ಶಿವಾಚಾರ್ಯರು ಅಲ್ಲಿಯ ಪೀಠವನ್ನು ಅಲಂಕರಿಸಿದ್ದರು. ಅವರ ಆತಿಥ್ಯವನ್ನು ಪಡೆದು, ಸಿದ್ಧೇಶ್ವರ ಹಂಪೆ, ಸಿದ್ಧರಬೆಟ್ಟ, ರೇವಣಸಿದ್ಧೇಶ್ವರ ಬೆಟ್ಟ ಮುಂತಾದ ಕಡೆಗಳಲ್ಲಿ ಅನುಷ್ಠಾನ ಮಾಡುತ್ತಾ ಶಿವಗಂಗೆಗೆ ಆಗಮಿಸಿದ. ಶಿವಗಂಗೆಯ ಮೇಲಣ ಗವಿ ರೇವಣಸಿದ್ಧೇಶ್ವರನ ಅನುಷ್ಠಾನ ಭೂಮಿ ಆಯಿತು. ಬೆಟ್ಟದ ಮೇಲಿನ ಜಲಸ್ತಂಭ ಮತ್ತು ಅಗ್ನಿಸ್ತಂಭಗಳು ರೇವಣಸಿದ್ಧನು ಸ್ಥಾಪಿಸಿದವು ಎಂಬ ಪ್ರತೀತಿ ಇದೆ.

ಅಪಾಯದಲ್ಲಿ ರಕ್ಷೆ

ಇತ್ತ ಮಂಗಳವಾಡದ ಯುವರಾಜ ಕಲಚೂರ್ಯ ಎರಡನೆಯ ಬಿಜ್ಜಳ ರೇವಣಸಿದ್ಧೇಶ್ವರನು ಹಿಂದೆ ಜಯಂತಿಯ ವಿಕ್ರಮಾದಿತ್ಯನಿಗೆ ಅನುಗ್ರಹಿಸಿದ್ದ ಖಡ್ಗದ ಪ್ರಭಾವವನ್ನು ಕೇಳಿದ್ದ. ಆ ಖಡ್ಗಕ್ಕೆ ಅಸಾಧಾರಣ ಶಕ್ತಿಗಳು ಉಂಟು ಎಂದೂ ಕೇಳಿದ್ದ. ಆ ಖಡ್ಗದ ಜೊತೆಯ ಮತ್ತೊಂದು ಖಡ್ಗವು ಮಾಸನೂರು ಮಡುವಿನಲ್ಲಿದೆಯೆಂದೂ ಅದನ್ನು ಪಡೆದು ತಾನೂ ದಿಗ್ವಿಜಯ ಸಾಧಿಸಬೇಕೆಂದೂ ಅವನು ಹಂಬಲಿಸಿದ. ಆ ಸುರಗಿಯನ್ನು ತೆಗೆದುಕೊಟ್ಟವರಿಗೆ ಹತ್ತುಸಾವಿರ ಹೊನ್ನು ಕೊಡುವುದಾಗಿ ಪ್ರಕಟಿಸಿದ.

ಅದನ್ನು ಕೇಳಿದ ಖರ್ಪರನೆಂಬ ಜೋಗಿ ಮುಂದೆ ಬಂದು, ಆತ ಬಿಜ್ಜಳನ ಆಸ್ಥಾನಕ್ಕೆ ಬಂದು, “ಒಂದು ಸಾವಿರ ಕನ್ಯೆಯರನ್ನು ಬಲಿ ಕೊಟ್ಟರೆ ಸುರಗಿಯನ್ನು ತೆಗೆದುಕೊಡುವೆ!” ಎಂದು ವೀಳ್ಯ ಹಿಡಿದ. ಮಹತ್ವಾಕಾಂಕ್ಷೆ ಹೊಂದಿದ್ದ ಬಿಜ್ಜಳ ಅದಕ್ಕೂ ಒಪ್ಪಿದ. ಕನ್ಯೆಯರನ್ನು ಕೂಡಿಸಲು ರಾಜಾಜ್ಞೆ ಹೊರಟಿತು. ತನ್ನ ರಾಜ್ಯದಲ್ಲಿನ ಕನ್ಯೆಯರೆಲ್ಲರನ್ನೂ ರಾಜಧಾನಿಗೆ ಕರೆತರಲಾಯಿತು. ಆದರೂ ಸಾವಿರಕ್ಕೆ ಇನ್ನೂ ಒಬ್ಬಳು ಬೇಕಾಗಿತ್ತು.

ಬಿಜ್ಜಳನ ಆಶ್ರಿತ ನಾಯಚಾಕೂರಿನ ಮಹಾಬಲ ಅವನ ಮಗಳು ರೇವಾಂಬೆ. ಅವಳು ರೇವಣಸಿದ್ಧನ ಪ್ರಸಾದದಿಂದ ಹುಟ್ಟಿದವಳು. ಮಹಾಸುಂದರಿ. ಅವಳನ್ನು ತಂದರೆ ಸಾವಿರ ಸಂಖ್ಯೆ ಪೂರ್ಣವಾಗುವುದೆಂದು ಖರ್ಪರ ಸೂಚಿಸಿದ. ಮಹಾಬಲ ರಾಜಾಜ್ಞೆ ಮೀರುವಂತಿರಲಿಲ್ಲ.

ರಾಜಭಟರು ರೇವಾಂಬೆಯನ್ನು ಕೊಂಡೊಯ್ದರು. ಚಾಕಲೆ ಚಿಂತಾಕ್ರಾಂತಳಾಗಿ ಗುರು ರೇವಣಸಿದ್ಧೇಶ್ವರನನ್ನು ಅನನ್ಯ ಭಕ್ತಿಯಿಂದ ಪ್ರಾರ್ಥಿಸಿದಳು. ಅವಳ ಮೊರೆ ಶಿವಗಂಗೆಯಲ್ಲಿ ತಪೋಮಗ್ನನಾಗಿದ್ದ ರೇವಣಸಿದ್ಧನಿಗೆ ಮುಟ್ಟಿತು. ಅವನು ನಾಲ್ಕೈದು ದಿವಸಗಳಲ್ಲಿ ಮಾಸನೂರು ತಲುಪಿದ.

ಅಷ್ಟು ಹೊತ್ತಿಗೆ ಸಾವಿರ ಕನ್ಯೆಯರಿಗೂ ಕೆಂಪು ಸೀರೆ ಉಡಿಸಿ, ಹಣೆಗೆ ಗಂಧಾಕ್ಷತೆಯಿಟ್ಟು, ಕೆಂಪುಹೂವಿನ ಮಾಲೆಗಳನ್ನು ಧರಿಸಲಾಗಿತ್ತು. ಹುಡುಗಿಯರು ತಮ್ಮ ದುರದೃಷ್ಟಕ್ಕೆ ಸಂಕಟಪಟ್ಟು ಬಿಕ್ಕಿಬಿಕ್ಕಿ ಅಳುತ್ತಿದ್ದರು.

ರೇವಣಸಿದ್ಧನು ಬಿಜ್ಜಳನಿಗೆ, “ಕನ್ಯೆಯರ ಬಲಿಯನ್ನು ನಿಲ್ಲಿಸು; ಖರ್ಪರನನ್ನು ಬಂಧಿಸು. ಸುರಗಿಯನ್ನು ತೆಗೆದುಕೊಡುವೆ” ಎಂದು ಅಭಯವಿತ್ತ.

ರಾಜಾಜ್ಞೆಯಂತೆ ಕನ್ಯೆಯರ ಬಿಡುಗಡೆಯಾಯಿತು. ಖಡ್ಗಗಳು ಯಕ್ಷದಂಪತಿಗಳಾದವು. ಸಿದ್ಧೇಶ್ವರನ ಅಪ್ಪಣೆಯಂತೆ ಬಿಜ್ಜಳ ರೇವಾಂಬೆಯ ಕೈಹಿಡಿದ. ಖರ್ಪರ ಕ್ಷಮೆ ಬೇಡಿದ. ಸಿದ್ಧೇಶ್ವರನ ಸೂಚನೆಯಂತೆ ಕುಟಿಲಸಿದ್ಧರು ಶಿವಭಕ್ತರಾದರು.

ರುದ್ರಮುನಿ

ರೇವಣಸಿದ್ಧೇಶ್ವರ ಸುಕೃತಶಾಲಿ. ಲೋಕಕಲ್ಯಾಣವೇ ಅವನ ಮುಖ್ಯ ಧ್ಯೇಯ. ಆತನಿಗೆ ಮಂಗಳವಾಡದ ಹೊರವಲಯದಲ್ಲಿ ಎಲ್ಲ ಪ್ರಾಣಿಗಳಿಗೆ ಹಿತಕರವಾದ ಒಂದು ಕೆರೆಯನ್ನು ಕಟ್ಟಿಸುವ ಬಯಕೆ ಆಯಿತು. ಸಿದ್ಧನ ಪವಿತ್ರ ಸಂಕಲ್ಪವನ್ನು ಈಡೇರಿಸಲು ಭಕ್ತಕೋಟಿ ಸಿದ್ಧವಾಗಿತ್ತು. ಧನ-ಧಾನ್ಯಗಳು ಯಥೇಚ್ಛವಾಗಿ ಶೇಖರಿಸಲ್ಪಟ್ಟವು.

ರೇವಣಸಿದ್ಧೇಶ್ವರ ಗುದ್ದಲಿ ಹಿಡಿದು ಅಗೆಯ ತೊಡಗಿದ. ಅವನ ದೃಷ್ಟಿಯಲ್ಲಿ ಗುರುವೂ ಕಷ್ಟಪಟ್ಟು ಕೆಲಸ ಮಾಡಬೇಕು. ಗುರುವಾದರೂ ಕಾಯಕ ಮಾಡಬೇಕು. ಹೆಣ್ಣುಮಕ್ಕಳಿಗೂ ಇಲ್ಲಿ ವಿನಾಯಿತಿ ಇಲ್ಲ. ಅವರು ಮಣ್ಣನ್ನು ಹೊತ್ತುಹಾಕುತ್ತಿದ್ದರು. ಅವರಲ್ಲಿ ಸಿದ್ಧೇಶ್ವರನ ಪುಣ್ಯಾಂಗನೆ ಸೌಂದರಿಯೂ ಒಬ್ಬಳು. ಅವಳು ಗರ್ಭಿಣಿ. ಆದರೂ ಅವಳು ಉಳಿದವರಂತೆ ಕಾಯಕದಲ್ಲಿ ತೊಡಗಿ ದಣಿದಿದ್ದಳು. ಅವಳು ಕೈಲಾಸ ಸೇರಿದಳು. ಅವಳ ಹೊಟ್ಟೆಯಲ್ಲಿನ ಮಗುವನ್ನು ಸಿದ್ಧೇಶ್ವರ ಕೃಪೆಯಿಂದ ರಕ್ಷಿಸಿದ . ಪುಣ್ಯಾಂಗನೆಯೊಬ್ಬಳು ಶಿಶುವನ್ನು ಪೋಷಿಸುವ ಹೊಣೆ ಹೊತ್ತಳು. ‘ರುದ್ರಮುನಿದೇವ’ ಎಂದು ಶಿಶುವಿಗೆ ಹೆಸರಿಟ್ಟರು.

ರೇವಣಸಿದ್ಧೇಶ್ವರ ಗುದ್ದಲಿ ಹಿಡಿದು ಅಗೆಯತೊಡಗಿದ.

 ದೇಶಾಟನೆ

 

ವೈರಾಗ್ಯವೇ ಮೂರ್ತಿವೆತ್ತಂತಿದ್ದ ವ್ಯಕ್ತಿತ್ವ ರುದ್ರಮುನಿಯಾದ. ಸಿದ್ಧೇಶ್ವರ ಮಗನಿಗೆ ಎಂಟನೆಯ ವರ್ಷಕ್ಕೇ ವೀರಶೈವ ದೀಕ್ಷೆಯನ್ನು ಅನುಗ್ರಹಿಸಿ, ಅವನೊಡನೆ ದೇಶಸಂಚಾರ ಹೊರಟ.

ಸಿದ್ಧೇಶ್ವರ ಮುಂದೆ ಸೊನ್ನಲಿಗೆಯ ಹಾದಿ ಹಿಡಿದ. ಅಲ್ಲಿ ಮಹಾ ಶಿವಭಕ್ತೆ ಚಾಮಲಾದೇವಿ. ಆಕೆ ಎಷ್ಟೋ ದಿನಗಳಿಂದ ರೇವಣಸಿದ್ಧೇಶ್ವರನ ಬರವಿಗಾಗಿ ಕಾಯುತ್ತಿದ್ದಾಳೆ. ಸಿದ್ಧ ಊರ ಹೊರಗೆ ಮಗನೊಂದಿಗೆ ಆನೆಯಿಂದ ಇಳಿದು ಕಾಲ್ನಡಿಗೆಯಲ್ಲಿ ಮುನ್ನಡೆದ. ಇದು ಎಲ್ಲರಿಗೂ ಸೋಜಿಗವಾಗಿತ್ತು. ಅದಕ್ಕೆ ಕಾರಣವನ್ನೂ ಸಿದ್ಧೇಶ್ವರ ಹೀಗೆ ಸೂಚಿಸಿದ.

“ಮುಂದೆ, ಇಲ್ಲಿ ಶಿವಯೋಗಿಯೊಬ್ಬನು ಉದಯಿಸುವನು. ಇಲ್ಲಿರುವ ಮುದ್ದುಗೌಡನ ಪತ್ನಿ ಸುಗ್ಗವ್ವೆ; ಆಕೆಯ ಪುಣ್ಯಗರ್ಭದಲ್ಲಿ ಅವನು ಹುಟ್ಟುವನು. ಆ ಕಾರಣಿಕ ಶಿಶುವನ್ನು ನಾನೆಂದೇ ಭಾವಿಸಿ ನಡೆವುದು” ಎಂದು ರೇವಣಸಿದ್ಧೇಶ್ವರ ಸುಗ್ಗವ್ವೆಯ ಮನೆಗೆ ಭೇಟಿಯಿತ್ತು ಅವಳನ್ನು ಹರಸಿದ.

ರೇವಣಸಿದ್ಧೇಶ್ವರ ಸಕಲ ಜೀವಾವಳಿಗೆ ಹಿತಬಯಸಿದ. ತನ್ನ ಜೀವನವನ್ನು ಅದಕ್ಕಾಗಿ ಬೆಳಗಿಸಿ, ಕೊಲ್ಲಿ ಪಾಕಿಯ ರೇಣುಕಾಶ್ರಮದಲ್ಲಿ ಶಿವಯೋಗ ಸಮಾಧಿ ಸೇರಿ ಅಲ್ಲಿಯೇ ಲಿಂಗೈಕ್ಯನಾದ.

ಮಹಾಚೇತನ

ರೇವಣಸಿದ್ಧೇಶ್ವರ ಒಂದುನೂರಾ ಏಳು ವರ್ಷಗಳ ಕಾಲ (೧೦೫೦-೧೧೫೭) ಬದುಕಿದ್ದಂತೆ ಕಾಣುತ್ತದೆ. ಅವರ ವಿಷಯವಾಗಿ ಚಾರಿತ್ರಿಕ ವಿವರಗಳನ್ನು ತಿಳಿಯುವುದು ಕಷ್ಟ. ಅವು ಪವಾಡಗಳ ಹೊದಿಕೆಯಲ್ಲಿ ಅಡಗಿದೆ. ಆದರೆ ವಿಷಯದ ಕಥೆಗಳನ್ನು ಗಮನಿಸಿದರೂ ಕೆಲವು ಅಂಶಗಳು ಎದ್ದುಕಾಣುತ್ತವೆ. ಅವರು ಸಣ್ಣಪುಟ್ಟ ಶಕ್ತಿಗಳನ್ನು ವಶಮಾಡಿಕೊಂಡು ಜನರನ್ನು ಬೆರಗು ಮಾಡಲು ಪ್ರಯತ್ನಿಸಲಿಲ್ಲ. ತಮ್ಮ ಶಕ್ತಿಯನ್ನು ತಮಗಾಗಿ ಬಳಸಲಿಲ್ಲ. ದುಷ್ಟರಿಗೆ, ಅಹಂಕಾರಿಗಳಿಗೆ ಬುದ್ಧಿ ಕಲಿಸಿದರು. ಸಜ್ಜನರಾದ ಬಡವರ ಮನೆಗಳಲ್ಲಿ ನಿಂತು ಅವರು ಕೊಟ್ಟ ಅಂಬಲಿಯನ್ನು ಸ್ವೀಕರಿಸಿ ಅವರನ್ನು ಹರಸಿದರು. ಗಾಣಿಗರನ್ನು ಕಡೆಗಣಿಸಲಿಲ್ಲ. ರಾಜರಿಗೆ ಕೈಮುಗಿಯಲಿಲ್ಲ. ಒಳ್ಳೆಯತನಕ್ಕೆ ರಕ್ಷೆಯಾದರು.