ಅತ್ಯುತ್ತಮ ನೃತ್ಯಗುರು ಎಂದು ಖ್ಯಾತಿ ಪಡೆದಿರುವ ಶ್ರೀಮತಿ ರೇವತಿ ನರಸಿಂಹನ್ ತಮ್ಮ ಕ್ರಮ ಬದ್ದ ಶಿಕ್ಷಣದಿಂದ ಬೆಂಗಳೂರಿನಲ್ಲಿ ಹೆಸರು ಮಾಡಿದವರು.

ಚೆನ್ನೈನ ಶ್ರೀಮತಿ ಕೌಸಲ್ಯಾ ಅವರ ಬಳಿ ವಳವೂರ್ ರಾಮಯ್ಯಪಿಳ್ಳೈ ನಾಟ್ಯ ಶೈಲಿಯಲ್ಲಿ ತರಬೇತಿ ಪಡೆದು ತಮ್ಮ ಒಂಭತ್ತನೇ ವಯಸ್ಸಿನಲ್ಲೇ ರಂಗಪ್ರವೇಶ ಮಾಡಿದವರು ಶ್ರೀಮತಿ ರೇವತಿ.

ಕಳೆದ ಇಪ್ಪತ್ತೆರಡು ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿರುವ ಶ್ರೀಮತಿ ರೇವತಿ ನರಸಿಂಹನ್ ಅತ್ಯುತ್ತಮ ನಾಟ್ಯ ಗುರು, ನೃತ್ಯ ಸಂಯೋಜಕಿ, ನಿರ್ದೇಶಕಿ ಎಂದು ಹೆಸರು ಗಳಿಸುತ್ತಲೇ ಅನೇಕಾನೇಕ ಪ್ರತಿಭಾನ್ವಿತ ಯುವ ನೃತ್ಯ ಕಲಾವಿದರನ್ನು ತಯಾರು ಮಾಡಿದ್ದಾರೆ. ಇವರ ಶಿಷ್ಯರುಗಳಲ್ಲಿ ಹಲವರು ಕರ್ನಾಟಕ ಸರ್ಕಾರದ ಪರೀಕ್ಷೆಗಳಲ್ಲಿ ಶ್ರೇಣಿ ಗಳಿಸಿದ್ದಾರೆ. ಸ್ಪರ್ಧೆಗಳಲ್ಲೆಲ್ಲಾ ಬಹುಮಾನ ಪಡೆಯುತ್ತಿರುತ್ತಾರೆ. ದೂರದರ್ಶನ ಕಲಾವಿದರಾಗಿ ಹೆಸರು ಮಾಡಿದ್ದಾರೆ, ವಿಮರ್ಶಕರ ಮೆಚ್ಚುಗೆ ಗಳಿಸುವ ಹಾಗೆ ರಂಗ ಪ್ರವೇಶಗಳನ್ನು ಮಾಡಿದ್ದಾರೆ.

ಸೀತಾ ಸ್ವಯಂವರಂ, ಕೃಷ್ಣವೈಭವಂ, ಭಾವಯಾಮಿ ರಘುರಾಮಂ, ನವರಸಂ, ದಶಾವತಾರ, ಕ್ರಿಸ್ತನ ಕಿರಣ, ನಾಚಿಯಾರ್ ತಿರುಮೋಳಿ, ವಿಜಯನಗರ ವೈಭವ, ಮುಂತಾದ ರೇವತಿಯವರ ನೃತ್ಯ ನಾಟಕಗಳು ಕ್ಷೇತ್ರದಲ್ಲಿ ಬಹಳ ಹೆಸರು ಮಾಡಿವೆ.

ಈಚೆಗೆ ಶ್ರೀಮತಿ ರೇವತಿ ನರಸಿಂಹನ್ ಅಮೇರಿಕಾ ಪ್ರವಾಸ ಮಾಡಿ ಅಲ್ಲಿ ಅನೇಕ ಕಾರ್ಯಾಗಾರಗಳನ್ನು ಮತ್ತು ಅಲ್ಲಿನ ನೃತ್ಯ ಕಲಾವಿದರಿಗೆ ಅಭಿನಯ ತರಬೇತಿಯನ್ನೂ ನೀಡುತ್ತಿರುವ ಇವರಿಗೆ ೧೯೯೯-೨೦೦೦ನೇ ಸಾಲಿನ ರಾಜ್ಯ ಸಂಗೀತ-ನೃತ್ಯ ಅಕಾಡೆಮಿಯ ಪ್ರಶಸ್ತಿ ಸಂದಿದೆ.