೧೩) ಉತ್ತಮ ಗುಣಮಟ್ಟದ ಹಿಪ್ಪುನೇರಳೆ ಸೊಪ್ಪು ಪಡೆಯಲು ಸೂಕ್ತ ತಳಿಗಳಾವುವು?

ಇತ್ತೀಚೆಗೆ ಬಿಡುಗಡೆಯಾಗಿದ್ದು ಹೆಚ್ಚು ಜನಪ್ರಿಯವಾಗಿರುವ ವಿ೧೯ (ವಿಕ್ಟರಿ-೧) ತಳಿಯನ್ನು ಬೆಳೆಯಬೇಕು. ಅದರ ಜೊತೆಗೆ ಎಮ್-೫(ಕಣ್ವ-೨) ಸಹ ಉತ್ತಮವಾಗಿದೆ. ಚಾಕಿ ಸಾಕಣೆಗೆ ಎಸ್೩೬ ತಳಿ ಸೂಕ್ತ. ಇವುಗಳ ಜೊತೆಗೆ ಎಸ್-೩೦, ಎಸ್-೫೪, ಮತ್ತು ವಿಶ್ವ ತಳಿಗಳನ್ನು ಸಹ ಬೆಳೆಯಬಹುದು. ಮಳೆಯಾಶ್ರಿತ ಹಿಪ್ಪುನೇರಳೆ ಬೆಳೆಗೆ ಎಸ್-೧೩, ಎಸ್-೩೪ ಮತ್ತು ಆರ್.ಎಫ್.ಎಸ್.-೧೭೫ ತಳಿಗಳನ್ನು ಬೆಳೆಯಬೇಕು.

೧೪) ರೇಷ್ಮೆಹುಳು ಸಾಕಣೆಗೆ ಮೊದಲು ಚಾಕಿ ಮತ್ತು ಪ್ರೌಢಹುಳುಗಳಿಗಾಗಿ ಮನೆ ಸಿದ್ಧಗೊಳಿಸುವುದು ಹೇಗೆ?

ಛಾಕಿಹುಳು ಸಾಕಣೆ ಶುರುಮಾಡುವುದಕ್ಕಿಂತ ಮೊದಲು ಚಾಕಿ ಮನೆಯನ್ನು ಶೇ.೨ರ ಬ್ಲೀಚಿಂಗ್ ಮತ್ತು ಶೇ.೦.೩ರ ಸುಣ್ಣದ ದ್ರಾವಣದಿಂದ ಶುಚಿಗೊಳಿಸಬೆಕು. ಅನಂತರ ೫೦೦ಪಿ.ಪಿ.ಎಂ. (ಶೇ.೨.೫) ಕ್ಲೋರಿನ್‌ಡೈಯಾಕ್ಸೈಡ್ (ಕ್ಲಿನಿಟಾಲ್‌ಪ್ಲಸ್) ಮತ್ತು ಶೇ.೦.೫ರ ಸುಣ್ಣದ ದ್ರಾವಣದಲ್ಲಿ ರೇಷ್ಮೆ ಹುಳುಮನೆ ಮತ್ತು ಸಲಕರಣೆಗಳ ಸೋಂಕುನಿವಾರಣೆ ಮಾಡಬೇಕು. ಇದಾದನಂತರ ಸಲಕರಣೆಗಳನ್ನು ಬಸಿಲಿನಲ್ಲಿ ಒಣಗಿಸಬೇಕು. ಚಾಕಿ ಪ್ರಾರಂಭಿಸುವ ಒಂದು ದಿನ ಮೊದಲು ಎರಡನೇ ಬಾರಿಗೆ ೫೦೦ ಪಿ.ಪಿ.ಎಂ. (ಶೇ.೨.೫) ಕ್ಲೋರಿನ್ ಡೈಯಾಕ್ಸೈಡ್ ಕ್ಲಿನಿಟಾಲ್‌ಪ್ಲಸ್) ಮತ್ತು ಶೇ.೦.೫ರ ಸು‌ಣ್ಣದ ದ್ರಾವಣದಲ್ಲಿ ಸೋಂಕುನಿವಾರಣೆ ಮಾಡಬೇಕು. ಅದೇ ದಿವಸ ಉಷ್ಣಾಂಶ ಮತ್ತು ಶೈತ್ಯಾಂಶಗಳನ್ನು ಕಾಪಾಡುವ ಸಾಧನ/ವಿಧಾನಗಳನ್ನು ಅಳವಡಿಸಿ ಎಲ್ಲವೂ ಸರಿಯಾದನಂತರ ಒಂದು ದಿನ ಬಿಟ್ಟು ಚಾಕಿಕಟ್ಟಬೇಕು.

ಪ್ರೌಢ ಹುಳುಗಳನ್ನು ಸಾಕುವ ಮನೆಯನ್ನು ಗೂಡುಬಿಡಿಸಿದನಂತರ ಶೇ.೨ರ ಬ್ಲೀಚಿಂಗ್ ಮತ್ತು ಶೇ. ೦,೩ರ ಸುಣ್ಣದ ದ್ರಾವಣದಲ್ಲಿ ತೊಳೆಯಬೇಕು. ಅನಂತರ ೫೦೦ಪಿ.ಪಿ.ಎಂ.(ಶೇ.೨.೫) ಕ್ಲೋರಿನ್ ಡೈಯಾಕ್ಸೈಡ್ (ಕ್ಲಿನಿಟಾಲ್‌ಪ್ಲಸ್) ಮತ್ತು ಶೇ.೦.೫ರ ಸುಣ್ಣದ ದ್ರಾವಣದಿಂದ ಮನೆ ಮತ್ತು ಸಲಕರಣೆಗಳನ್ನು ಸೋಂಕು ನಿವಾರಿಸಬೇಕು. ಅನಂತರ ಸಲಕರಣೆಗಳನ್ನು ಶೇ.೫ರ ಬ್ಲೀಚಿಂಗ್ ದ್ರಾವಣದಲ್ಲಿ ಅದ್ದಿ ೨೪ ಗಂಟೆಗಳ ಕಾಲ ಬಿಸಿಲಿನಲ್ಲಿ ಬಿಡಬೇಕು. ಅನಂತರ ಸಲಕರಣೆಗಳನ್ನು ಒಳಗೆ ಜೋಡಿಸಿ ಮತ್ತೆ ಎರಡನೇ ಬಾರಿಗೆ ಕ್ಲೋರಿನ್‌ಡೈಯಾಕ್ಸೈಡ್‌ನಿಂದ ಸೋಂಕು ನಿವಾರಿಸಬೇಕು. ಮಾರನೇ ದಿನ ಚಾಕಿ ಹುಳುಗಳನ್ನು ಪ್ರೌಢ ಹುಳುಸಾಕಣೆ ಮನೆಗೆ ತರಬೇಕು. ಪಾದ ತೊಳತಯುವುದಕ್ಕೆ ಶೇ.೨ರ ಬ್ಲೀಚಿಂಗ್ ದ್ರಾವಣ ಬಾಗಿಲ ಹತ್ತಿರ ಇಡಬೇಕು. ಹಾಗೆಯೇ ಕೈಸೋಂಕು ನಿವಾರಿಸಲು ೫೦೦ ಪಿ.ಪಿ.ಎಂ. ಕ್ಲೋರಿನ್ ಡೈಯಾಕ್ಸೈಡ್ (ಕ್ಲಿನಿಟಾಲ್ ಪ್ಲಸ್) ಮತ್ತು ಶೇ.೦.೦೫ರ ಸುಣ್ಣದ ದ್ರಾವಣವನ್ನು ಬೋಗುಣಿಯಲ್ಲಿ ಇಡಬೇಕು.

೧೫) ರೇಷ್ಮೆ ಮೊಟ್ಟೆಸಾಕಣೆ ಮತ್ತು ಪರಿಹಾಕಿಸುವ ವಿವರಗಳನ್ನು ತಿಳಿಸಿಕೊಡಿ?

ರೇಷ್ಮೆಹುಳುವಿನ ಜೀವನ ಕ್ರಮದಲ್ಲಿ ಮೊಟ್ಟೆ ಹಂತವು ಬಹು ಮುಖ್ಯ. ರೇಷ್ಮೆ ಮೊಟ್ಟೆಗಳನ್ನು ರೇಷ್ಮೆ ಬಿತ್ತನೆ ಕೋಠಿ ಅಥವಾ ತಾಂತ್ರಿಕ ಕೇಂದ್ರಗಳಿಂದ ಸಾಗಿಸುವಾಗ ಮೊಟ್ಟೆಗಳು ನೀರಿನಾಂಶವನ್ನು ಕಳೆದುಕೊಂಡು ಕುಂದಿಹೋಗದಂತೆ ನೋಡಿಕೊಳ್ಳುವುದು ಮುಖ್ಯ. ಇದಕ್ಕೆಂದು ನೈಲಾನ್ ಬಲೆ ಮತ್ತು ರಬ್ಬರ್ ಸ್ಪಂಜಿನ ಹಾಳೆಯನ್ನು ಉಪಯೋಗಿಸಿ ರೇಷ್ಮೆ ಮೊಟ್ಟೆ ಸಾಕಣೆಯ ಕೈಚೀಲಗಳನ್ನು ತಯಾರಿಸಲಾಗಿದೆ. ಮೊಟ್ಟೆಗಳನ್ನು ಈ ಚೀಲಗಳಲ್ಲಿ ಹಾಕಿ ತಂಪಾದ ಸಮಯದಲ್ಲಿ ಸಾಗಿಸಬೇಕು. ಯಾವುದೇ ಕಾರಣಕ್ಕೂ ಬಿಸಿ ತಾಗಬಾರದು ಹಾಗೆಯೇ ಮೊಟ್ಟೆಯ ಮೇಲೆ ಒತ್ತಡವೂ ಬೀಳಬಾರದು. ಮೊಟ್ಟೆಗಳನ್ನು ೨.೫(೦)ಸೆ.ಉಷ್ಣಾಂಶ ಮತ್ತು ೭೫ರ ಶೈತ್ಯಾಂಶದಲ್ಲಿ ಇಡಬೇಕು.

 • ಬಿತ್ತನೆಕೋಠಿಯಿಂದ ತಂದ ಮೊಟ್ಟೆಗಳನ್ನು ಶೇ.೨ರ ಫಾರ್ಮಲಿನ್ ದ್ರಾವಣದಲ್ಲಿ ೫ ನಿಮಿಷ ಅದ್ದಿ ನೀರಿನಿಂದ ತೊಳೆದು, ನೆರಳಿನಲ್ಲಿ ಒಣಗಿಸಿದರೆ ಮೊಟ್ಟೆ ಕಾಗದದ ಮೇಲೆ ಇರಬಹುದಾದ ಸೋಂಕು ನಿವಾರಣೆಯಾಗುತ್ತದೆ.
 • ಮೊಟ್ಟೆಗಳನ್ನು ತಟ್ಟೆಗಳಲ್ಲಿ ಹರಡಿರಬೇಕು. ಬೇಸಿಗೆಯಲ್ಲಿ ತಟ್ಟೆಗಳ ಸುತ್ತಲೂ ಒದ್ದೆ ಸ್ಪಂಜಿನ ತುಂಡುಗಳನ್ನಿಟ್ಟು ಪ್ಯಾರಾಫಿನ್ ಕಾಗದದಿಂದ ಮುಚ್ಚಬೇಕು.
 • ಬೇಸಿಗೆಯಲ್ಲಿ ತಟ್ಟೆಗಳು ಮತ್ತು ಮೊಟ್ಟೆ ಹಾಳೆಗಳ ಕೆಳಗೆ ಬಾಳೆ ಎಲೆ ಹರಡುವುದು ಉತ್ತಮ.
 • ಮೊಟ್ಟೆಗಳು ಕಂದು ಬಣ್ಣಕ್ಕೆ ತಿರುಗಿದಾಗ ಕಪ್ಪು ಪೆಟ್ಟಿಗೆಯಲ್ಲಿಟ್ಟು, ಚಾಕಿಯಾಗುವ ದಿನ ಬೆಳಿಗ್ಗೆ ೮ ರಿಂದ ೯ ಗಂಟೆಯ ಒಳಗೆ ಹೊರತೆಗೆದು ಕೊಠಡಿಯ ಬೆಳಕಿನಲ್ಲಿಡಬೇಕು.
 • ಬೇಸಿಗೆಯಲ್ಲಿ ನೀರು ಹಾಕುತ್ತಿರುವ ಮರಳಿನಲ್ಲಿ ಹೂತಿಟ್ಟ ಮಡಕೆಯಲ್ಲಿ ಇಟ್ಟು ಮೊಟ್ಟೆಗಳನ್ನು ಪರಿಪಾಕಿಸಬೇಕು.
 • ಹೀಗೆ ಮಾಡುವ ಮಡಕೆ ಒಳಭಾಗಕ್ಕೆ ಮೊಟ್ಟೆ ಹಾಳೆಗಳು ತಗಲದಂತೆ ಎಚ್ಚರಿಕೆ ವಹಿಸಬೇಕು.
 • ಮೊಟ್ಟೆಗಳು ಕಂದು ಬಣ್ಣಕ್ಕೆ ತಿರುಗಿದಾಗ ಒಳಗೆ ಬೆಳಕು ಹೋಗದಂತೆ ಮಡಕೆಯ ಮೇಲ್ಭಾಗವನ್ನು ಕಪ್ಪುಕಾಗದದಿಂದ ಮುಚ್ಚಿ ಚಾಕಿಯಾಗುವ ದಿನ ಮೊಟ್ಟೆ ಹಾಳೆಗಳನ್ನು ಹೊರತೆಗೆಯಬೇಕು.

೧೬) ರೇಷ್ಮೆಹುಳು ಸಾಕಣೆಯಲ್ಲಿ ಹಿಪ್ಪುನೇರಳೆ ಸೊಪ್ಪಿನ ಕೊಯ್ಲು, ಸಾಗಾಣಿಕೆ ಮತ್ತು ಸಂಗ್ರಹಣೆ ಮಾಡುವ ವಿಶಿಷ್ಟ ಕ್ರಮಗಳಾವುವು?

ರೇಷ್ಮೆಗೂಡಿನ ಬೆಳೆ ಮತ್ತು ಇಳುವರಿ ಹಿಪ್ಪುನೇರಳೆ ಸೊಪ್ಪಿನ ಗುಣಮಟ್ಟಕ್ಕೆ ಅನುಗುಣವಾಗಿರುತ್ತದೆ. ಚಾಕಿಹುಳುಗಳಿಗೆ ಸ್ವಲ್ಪ ಮೆದುವಾದ ರಸಭರಿತ ಎಲೆ ಬೇಕಾಗುತ್ತದೆ. ಅದೇ ಬಲಿತ ಹುಳುಗಳಿಗೆ ಮಧ್ಯಮದಿಂದ ಸ್ವಲ್ಪ ಬಲಿತ ಸೊಪ್ಪು ಕೊಡಬೇಕಾಗುತ್ತದೆ. ಸಾಮಾನ್ಯವಾಗಿ ಪ್ರೌಢ ಹುಳುಗಳಿಗೆ ೫೦ರಿಂದ ೬೦ದಿನದ ಸೊಪ್ಪು ಸೂಕ್ತ. ಸೊಪ್ಪನ್ನು ತಂಪಾದ ಸಮಯದಲ್ಲಿ ಕೊಯ್ದರೆ ಒಳ್ಳೆಯದು. ಇದನ್ನು ಒಂದೊಂದು ಎಲೆಯಾಗಿ ಅಥವಾ ರೆಂಬೆಯನ್ನು ಕತ್ತರಿಸಿ ಹಾಕಿ ಹುಳು ಸಾಕಬಹುದು. ಕೊಯ್ದನಂತರ ರೇಷ್ಮೆ ಹುಳು ಸಾಕಣೆ ಮನೆಗೆ ಸಾಗಿಸುವಾಗ ತೇವವಾದ ಚೀಲ ಅಥವಾ ಬಿದಿರಿ ಪುಟ್ಟಿಗೆಯಲ್ಲಿ (ಬ್ಯಾಸ್ಕೆಟ್) ಹಗುರವಾಗಿ ತುಂಬಿ, ಮತ್ತೆ ತೇವದ ಚೀಲದಿಂದ ಮುಚ್ಚಿ ಸಾಗಿಸಬೇಕು. ಮನೆಯಲ್ಲಿ ಸೊಪ್ಪು ಶೇಖರಣಾ ಪೆಟ್ಟಿಗೆಯಲ್ಲಿ ಹಾಕಿ ಅದನ್ನು ತೇವದ ಚೀಲದಿಂದ ಮುಚ್ಚಬೇಕು. ಹಾಗೆಯೇ ಬೇಸಿಗೆಯಲ್ಲಿ ಚೀಲ ಒಣಗದ ಹಾಗೆ ನೀರನ್ನು ಚಿಮುಕಿಸುತ್ತಿರಬೇಕು. ಇದರಿಂದ ಎಲೆಯಲ್ಲಿರುವ ತೇವಾಂಶ ಆವಿಯಾಗುವುದಿಲ್ಲ. ಹೀಗಾಗಿ, ಸ್ವಲ್ಪಮಟ್ಟಿಗೆ ಎಲೆಯ ತಾಜಾತನ ಕಾಪಾಡಬಹುದು. ರೆಂಬೆಯನ್ನು ಕತ್ತರಿಸಿದರೆ ರೆಂಬೆಗಳನ್ನು ನಿಲ್ಲಿಸಿ ತೇವದ ಚೀಲದಿಂದ ಮುಚ್ಚಬೇಕು. ಈ ಎಲೆ ಶೇಖರಣೆಯ ಕೊಠಡಿಯಲ್ಲಿ ಮಂದ ಬೆಳಕಿದ್ದು, ಉಷ್ಣಾಂಶ ಕಡಿಮೆ ಇರುವುದು ಒಳ್ಳೆಯದು. ಇದರಿಂದ ಹುಳುಗಳು ಚೆನ್ನಾಗಿ ಸೊಪ್ಪು ತಿಂದು, ಆರೋಗ್ಯವಾಗಿ ಬೆಳೆದು ಉತ್ತಮ ಗೂಡು ಇಳುವರಿ ನೀಡುತ್ತವೆ.

೧೭) ಚಾಕಿ ಸಾಕಣೆ ವಿಧಾನಗಳ ಬಗ್ಗೆ ಸಂಕ್ಷಿಪ್ತವಾಗಿ ತಿಳಿಸಿ?

ಚಾಕಿ ಸಾಕಣೆ

ತಟ್ಟೆಗಳಲ್ಲಿ

 • ಚಾಕಿಸಾಕಣೆಗೆ ೨೭(೦) ಯಿಂದ ೨೮೯(೦)ಸೆ. ಉಷ್ಣಾಂಶ ಮತ್ತು ಶೇ.೮೦ರಿಂದ ೯೦ರಷ್ಟು ತೇವಾಂಶ ಬೇಕು.
 • ಬೆಳಿಗ್ಗೆ ೬ರಿಂದ ೮ಗಂಟೆಯಲ್ಲಿ ಚಾಕಿಯಾಗಿರುವ ಮೊಟ್ಟೆಗಳನ್ನು ಹೊರತೆಗೆದು, ಮೊಟ್ಟೆಗಳು ಪೂರ್ತಿಯಾಗಿ ಒಡೆದನಂತರ ಚಾಕಿಕಟ್ಟಬೇಕು.
 • ಚಾಕಿಹುಳುಗಳನ್ನು ತಟ್ಟೆಗಳಿಗೆ ಉದುರಿಸುವಾಗ ಸೊಪ್ಪನ್ನು ಸಣ್ಣದಾಗಿ ಕತ್ತರಿಸಿ ಹಾಕಬೇಕು.
 • ತಟ್ಟೆಗಳಿಗೆ ನೀಲಿ ಪಾಲಿಥೀನ್ ಅಥವಾ ಪ್ಯಾರಫಿನ್ ಪೇಪರ್ ಬಳಸಬೇಕು. ತೇವಾಂಶ ಹೆಚ್ಚಿಸಲು ನೀರಿನಲ್ಲಿ ನೆನೆಸಿದ ಫೋಂ ರಬ್ಬರ್ ಉಪಯೋಗಿಸಬೇಕು. ದಿನಕ್ಕೆ ೩ರಿಂದ ೪ಬಾರಿ ಸೊಪ್ಪು ಕೊಡಬೇಕು.
 • ತೋಟದಲ್ಲಿ ಅತಿ ಉತ್ತಮವಾದ ಎಳೆ ಎಲೆಗಳನ್ನು ಉಪಯೋಗಿಸಬೇಕು. ಜ್ವರದಲ್ಲಿ ಹುಳುಗಳ ಹಾಸುಗೆ ತೆಳುವಾಗಿರಲಿ.
 • ಹುಳುಗಳು ಜ್ವರದಲ್ಲಿದ್ದಾಗ ಪ್ಯಾರಫಿನ್ ಪೇಪರನ್ನು ತೆಗೆದು ಸುಣ್ಣದ ಧೂಳು ಉದುರಿಸಬೇಕು.
 • ಜ್ವರದಿಂದ ಎದ್ದನಂತರ ಸೊಪ್ಪು ಕೊಡುವುದಕ್ಕೆ ಮೊದಲು ಹಾಸುಗೆ ಸೋಂಕು ನಿವಾರಕವನ್ನು ಧೂಳಿಸಬೇಕು.
 • ಬಿದಿರು ತಟ್ಟೆಗಳಿಗಿಂತ ಮರದ ತಟ್ಟೆಗಳನ್ನು ಉಪಯೋಗಿಸುವುದು ಸೂಕ್ತ.
 • ಎಲೆಗಳನ್ನು ತೇವದ ಬಟ್ಟೆಯಿಂದ ಮುಚ್ಚಿಡಬೇಕು.
 • ಜ್ವರಕ್ಕೆ ಹೋಗುವ ಮೊದಲು ಹಾಸುಗೆ ಬದಲಾಯಿಸಬೇಕು.
 • ಚಿಕ್ಕದಾದ ಕೊಠಡಿ ಚಾಕಿ ಸಾಕಣೆಗೆ ಸೂಕ್ತ.
 • ಉಷ್ಣಾಂಶ ಮತ್ತು ತೇವಾಂಶಗಳ ಹೆಚ್ಚಿನ ಏರುಪೇರು ತಡೆಗಟ್ಟಲು ಗಾಳಿ ಸಂಚಾರದ ತೀವ್ರತೆ ಕಡಿಮೆಮಾಡಬೇಕು.

ಐಸೋಲೇಶನ್ ಚೇಂಬರ್ನಲ್ಲಿ (ಚಾಕಿ ಪೆಟ್ಟಿಗೆ)

 • ೬ x ೪ x ೫ ಚದರಡಿ ಅಳತೆಯ ಮರದ ಪೆಟ್ಟಿಗೆಯಲ್ಲಿ ದಡೇವನ್ನಿಟ್ಟು ಮರದ ತಟ್ಟೆಗಳಲ್ಲಿ ಹುಳುಸಾಕುವ ಪದ್ಧತಿ.
 • ತಟ್ಟೆಯೊಂದರಲ್ಲಿ ೨೫ ಮೊಟ್ಟೆಗಳಂತೆ ೨ನೇ ಜ್ವರದವರೆಗೆ ೧೨ ತಟ್ಟೆಗಳಲ್ಲಿ ೩೦೦ಮೊಟ್ಟೆಗಳನ್ನು ಸಾಕಬಹುದು. ೩ನೇ ಜ್ವರದವರೆಗೆ ೧೫೦ ಮೊಟ್ಟೆಗಳನ್ನು ಸಾಕಬಹುದು.
 • ಹೊರಗಿನಿಂದ ನೇರವಾಗಿ ಹುಳುಗಳಿಗೆ ಸೋಂಕು ತಗಲುವುದನ್ನು ತಡೆಗಟ್ಟಿದಂತಾಗುತ್ತದೆ.
 • ಬೇಕಾದ ಉಷ್ಣಾಂಶ, ಶೈತ್ಯಾಂಶ ದೊರಕುವ ಸೌಲಭ್ಯ ಇರುವುದರಿಂದ ಹುಳುಗಳ ಬೆಳವಣಿಗೆ ಸಮವಾಗಿರುತ್ತದೆ ಹಾಗೂ ಆರೋಗ್ಯಕರವಾಗಿ ಬೆಳೆಯುವ ಅವಕಾಶವಿರುತ್ತದೆ.

ರೆಂಬೆ ವಿಧಾನ

 • ದಿನಕ್ಕೆ ಒಂದು ಬಾರಿ ಬಿದಿರಿನ ಅಥವಾ ಮರದ ತಟ್ಟೆಗಳಲ್ಲಿ ಹಿಪ್ಪುನೇರಳೆ ಸೊಪ್ಪಿನ ರೆಂಬೆಯನ್ನು ನೀಡಿ ಸಾಕುವ ಪದ್ಧತಿ.
 • ಬಿದಿರಿನ ಅಥವಾ ಮರದ ತಟ್ಟೆಗಳ ತಳಭಾಗಕ್ಕೆ ನೀಲಿ ಪಾಲಿಥೀನ್ ಅಥವಾ ಪ್ಯಾರಫಿನ್ ಪೇಪರನ್ನು ಹರಡಿ ತಟ್ಟೆಯೊಂದಕ್ಕೆ ೧೦೦ ಮೊಟ್ಟೆಗಳನ್ನು ಚಾಕಿ ಕಟ್ಟುವುದು.
 • ಚೆನ್ನಾಗಿ ಕೊಟ್ಟಿಗೆ ಗೊಬ್ಬರ ಹಾಕಿದ ತೋಟದ ಸೊಪ್ಪಿನಲ್ಲಿ ೪ರಿಂದ ೫ ಎಲೆಗಳವರೆಗಿನ ರೆಂಬೆಯನ್ನು ಕತ್ತರಿಸಿ ಉಪಯೋಗಿಸಬಹುದು.
 • ಚಾಕಿಯಾಗುವ ದಿನ ಕಪ್ಪುಪೆಟ್ಟಿಗೆಯಿಂದ ಮೊಟ್ಟೆಗಳನ್ನು ಬೆಳಿಗ್ಗೆ ಸುಮಾರು ೬ ರಿಂದ ೮ ಗಂಟೆಗೆ ಹೊರತೆಗೆದು ಕೊಠಡಿ ಬೆಳಕಿಗೆ ಇಡಬೇಕು.
 • ಪೂರ್ತಿಯಾಗಿ ಮೊಟ್ಟೆಗಳು ಒಡೆದನಂತರ ಅದರ ಮೇಲೆ ಸಣ್ಣದಾಗಿ ಸೊಪ್ಪನ್ನು ಕತ್ತರಿಸಿ ಹಾಕಿ, ಅರ್ಧ ಗಂಟೆಯನಂತರ ೧*೩ ಅಡಿ ಅಳತೆಯ ಹುಳದ ಹಾಸುಗೆ ತಯಾರಿಸಬೇಕು.
 • ೪ ರಿಂದ ೫ ಎಲೆಗಳಿರುವ ಆಗತಾನೆ  ಕೊಯ್ದುತಂದ ರೆಂಬೆಗಳನ್ನು ಹಾಸುಗೆ ಮೇಲೆ ಇಡಬೇಕು.
 • ರೆಂಬೆಗಳ ತುದಿಗಳು ಒಂದಕ್ಕೊಂದು ವಿರುದ್ಧ ದಿಕ್ಕಿನಲ್ಲಿರುವಂತೆ ಇಟ್ಟರೆ ತುದಿಭಾಗದ ಮತ್ತು ಬುಡಭಾಗದ ಸೊಪ್ಪಿನ ಮಿಶ್ರಣ ಆದಂತಾಗುತ್ತದೆ.
 • ಆನಂತರ ಹಾಸುಗೆ ಸುತ್ತ ಒದ್ದೆ  ಮಾಡಿದ ಫೋಂ ರಬ್ಬರನ್ನು ಇಟ್ಟು ಪ್ಯಾರಫಿನ್ ಕಾಗದದಿಂದ ಒಳಗೆ ಗಾಳಿಯಾಡುವಂತೆ ಮುಚ್ಚಬೇಕು.
 • ರಾತ್ರಿ  ೯ ಗಂಟೆಗೆ ಒಂದು ಸಲ ಪ್ಯಾರಾಫಿನ್ ಕಾಗದ ತೆಗೆದು ನೋಡಿ ಸೊಪ್ಪು ತಿಂದಿರುವುದನ್ನು ಗಮನಿಸಿ. ಹುಳದ ಸಾಂದ್ರತೆ ಪ್ರಕಾರ ಅವಶ್ಯಕತೆ ಇದ್ದಲ್ಲಿ, ಆ ಕಡೆ ಈ ಕಡೆ ಅದಲುಬದಲು ಮಾಡಿ ಸೊಪ್ಪು ಕೊಡುವುದು.
 • ಮಾರನೇ ದಿನ ಬೆಳಿಗ್ಗೆ ಸೊಪ್ಪು ಕೊಡುವುದಕ್ಕಿಂತ ಅರ್ಧಗಂಟೆ ಮುಂಚಿತವಾಗಿ ಪ್ಯಾರಾಫಿನ್ ಕಾಗದ ಮತ್ತು ಫೋಂ ರಬ್ಬರ್ ತೆಗೆದು ಹಾಸುಗೆಯಲ್ಲಿನ ರೆಂಬೆಗಳನ್ನು ಅಗಲವಾಗಿಟ್ಟು ಸುಣ್ಣದ ಧೂಳು ಉದುರಿಸಿ.
 • ಅನಂತರ ತಾಜಾ ಸೊಪ್ಪನ್ನು ಹಾಕಿ ನೆನೆಸಿದ ಫೋಂ ರಬ್ಬರ್ ಸುತ್ತ ಇಟ್ಟು ಪ್ಯಾರಾಫಿನ್ ಕಾಗದಿಂದ ಮುಚ್ಚಬೇಕು.
 • ಹುಳುಗಳು ಜ್ವರಕ್ಕೆ ಕುಳಿತಾಗ ಪ್ಯಾರಾಫಿನ್ ಕಾಗದ ತೆಗೆದು ಹಾಸುಗೆಯನ್ನು ಅಗಲವಾಗಿಟ್ಟು ಸುಣ್ಣ ಧೂಳಿಸಬೇಕು.
 • ಜ್ವರದಿಂದ ಎದ್ದನಂತರ ಸೋಂಕು ನಿವಾರಕದಿಂದ ಧೂಳಿಸಬೇಕು. ಎರಡನೇ ಜ್ವರದವರೆಗೆ ಇದೇ ರೀತಿಯಾಗಿ ದಿನಕ್ಕೆ ಒಂದು ಸಲ ಸೊಪ್ಪು ಕೊಡುವ ಮೂಲಕ ಸಾಕಬಹುದು.

೧೮) ಚಾಕಿ ಹುಳು ಸಾಕಾಣೆಯಲ್ಲಿ ಉಷ್ಣಾಂಶ, ಶೈತ್ಯಾಂಶ, ಬೆಳಕು ಮತ್ತು ಗಾಳಿ ಸಂಚಾರ ವ್ಯವಸ್ಥೆ ಕುರಿತು ತಿಳಿಸಿ?

ಎರಡನೇ ಹಂತದವರೆಗಿನ ಹುಳುಗಳನ್ನು ಚಾಕಿಹುಳು ಎನ್ನುತ್ತೇವೆ. ಈ ಹಂತದಲ್ಲಿ ಉತ್ತಮ ಗುಣಮಟ್ಟದ ಹೆಚ್ಚು ಪೋಷಕಾಂಶಯುಕ್ತ ರಸಭರಿತ ಎಲೆಗಳನ್ನು ಕೊಡುವುದರಿಂದ ಆರೋಗ್ಯಕರವಾಗಿ ಬೆಳೆಯುತ್ತವೆ.

ಉಷ್ಣಾಂಶ

ಸಾಮಾನ್ಯವಾಗಿ ರೇಷ್ಮೆ ಹುಳುಗಳ ದೇಹದಲ್ಲಿ ಹೊರಗಿನ ವಾತಾವರಣಕ್ಕಿಂತ ೧(೦)ಸೆ. ಉಷ್ಣಾಂಶ ಹೆಚ್ಚಿರುತ್ತದೆ. ರೇಷ್ಮೆ ಹುಳುಗಳಿಗೆ ಬೇಕಾಗುವ ಉಷ್ಣಾಂಶ ವಿವಿಧ ಬೆಳವಣಿಗೆಗಳಲ್ಲಿ ವಿವಿಧವಾಗಿರುತ್ತದೆ. ೩೦(೦)ಸೆ.ವರೆಗೆ ಉಷ್ಣಾಂಶ ಹೆಚ್ಚಿಸಿದಂತೆ ಹುಳುಗಳ ಬೆಳವಣಿಗೆಯು ಹೆಚ್ಚುತ್ತದೆ. ಆದರೆ ಅದಕ್ಕಿಂತ ಹೆಚ್ಚಾದಾಗ ಅವು ಅನಾರೋಗ್ಯಕ್ಕೆ ತುತ್ತಾಗುತ್ತವೆ. ಉಷ್ಣಾಂಶ ಹೆಚ್ಚಾಗಿ ಸಹಜವಾಗಿಯೇ ಹಿಪ್ಪುನೇರಳೆ ಸೊಪ್ಪು ಬೇಗ ಒಣಗುತ್ತದೆ. ಹಾಗೆಯೇ ೨೦(೦)ಸೆ.ಗಿಂತ ಕಡಿಮೆಯಾದರೆ ಹುಳುಗಳ ಶಾರೀರಕ ಪ್ರಕ್ರಿಯೆಗಳು ನಿಧಾನವಾಗಿ ಅವುಗಳ ಜೀವನಾವಧಿ ಹೆಚ್ಚುತ್ತದೆ. ಆದ್ದರಿಂದ ಚಾಕಿಹಂತದಲ್ಲಿ ೨೭(೦)ಯಿಂದ ೨೮೦)ಸೆ. ಉಷ್ಣಾಂಶ ಇರುವುದು ಸೂಕ್ತವಾಗಿರುತ್ತದೆ.

ಶೈತ್ಯಾಂಶ

ವಾತಾವರಣದ ಶೈತ್ಯಾಂಶವು ರೇಷ್ಮೆಹುಳುಗಳ ಬೆಳವಣಿಗೆಯ ಮೇಲೆ ಪರಿಣಾಮ ಬೀರುತ್ತದೆ. ಶೈತ್ಯಾಂಶ ಕಡಿಮೆಯಿದ್ದರೆ ರೋಗಕಾರಕ ಸೂಕ್ಷ್ಮಜೀವಿಗಳ ಬೆಳವಣಿಗೆ ಕಡಿಮೆ ಇರುತ್ತದೆ. ಆದರೆ ಹಾಕಿದ ಸೊಪ್ಪು ಒಣಗುತ್ತದೆ. ಹಾಗಾಗಿ ಹುಳುಗಳಿಗೆ ಸರಿಯಾಗಿ ಸೊಪ್ಪು ಸಿಗುವುದಿಲ್ಲ. ಬೆಳವಣಿಗೆಯು ಸುಗಮವಾಗಿರುವುದಿಲ್ಲ. ಇನ್ನೊಂದೆಡೆ ಶೈತ್ಯಾಂಶ ಹೆಚ್ಚಿದಲ್ಲಿ ಸೊಪ್ಪು ಸಿಗುವುದಿಲ್ಲ. ಬೆಳವಣಿಗೆಯು ಸುಗಮವಾಗಿರುವುದಿಲ್ಲ. ಇನ್ನೊಂದೆಡೆ ಶೈತ್ಯಾಂಶ ಹೆಚ್ಚಿದಲ್ಲಿ ಸೊಪ್ಪು ಹೆಚ್ಚು ಸಮಯ ತಾಜಾ ಆಗಿರುತ್ತದೆ. ಹುಳುಗಳೂ ಸಹ ಚೆನ್ನಾಗಿ ಬೆಳೆಯುತ್ತವೆ. ಆದರೆ ಬೇಗ ರೋಗಕ್ಕೆ ತುತ್ತಾಗುತ್ತವೆ. ಆದ್ದರಿಂದ ಮೊದಲ ಹಂತದಲ್ಲಿ ಶೇ.೮೫-೯೦ ಹಾಗೂ ಎರಡನೆ ಹಂತದಲ್ಲಿ ಶೇ.೮೦-೮೫ರಷ್ಟು ಶೈತ್ಯಾಂಶವಿರುವಂತೆ ನೊಡಿಕೊಳ್ಳಬೇಕು.

ಬೆಳಕು

ಸಾಮಾನ್ಯವಾಗಿ ರೇಷ್ಮೆಹುಳುಗಳು ೨೦ ರಿಂದ ೩೦ ಲಕ್ಸ್‌ನಷ್ಟು ಮಂದಬೆಳಕನ್ನು ಇಷ್ಟಪಡುತ್ತವೆ. ಈ ಮಂದಬೆಳಕು ಕೊಠಡಿಯಲ್ಲಿ ಸಮನಾಗಿರಬೇಕು. ದಿನದಲ್ಲಿ ೧೬ಗಂಟೆಗಳು ಮಂದಬೆಳಕು ಹಾಗೂ ೮ ಗಂಟೆ ಕತ್ತಲು ಇರಬೇಕಾಗುತ್ತದೆ.

ಗಾಳಿ

ರೇಷ್ಮೆಹುಳು ಸಾಕಣೆಮನೆಯಲ್ಲಿ ಕಾರ್ಬನ್‌ಡೈಯಾಕ್ಸೈಡ್, ಕಾರ್ಬನ್ ಮೊನಾಕ್ಸೈಡ್, ಸಲ್ಫರ್‌ಡೈಯಾಕ್ಸೈಡ್ ಮತ್ತು ಅಮೋನಿಯ ತುಂಬಿರುತ್ತವೆ. ಇವೆಲ್ಲ ಹೊರಗೆ ಹೋಗಬೇಕು. ಇದಕ್ಕಾಗಿ ರೇಷ್ಮೆಹುಳು ಮನೆಯೊಳಗೆ ಒಳ್ಳೆಗಾಳಿ ಬರುವಂತಿರಬೇಕು.

೧೯) ಚಾಕಿಸಾಕಣೆಯಲ್ಲಿ ನೀಲಿ ಪಾಲಿಥೀನ್ ಹಾಳೆಯ ಬಳಕೆಯ ವಿವರ ನೀಡಿ?

ನಮ್ಮ ಹವಾಗುಣದಲ್ಲಿ ಚಾಕಿ ರೇಷ್ಮೆಹುಳುವಿನ ಹಾಸುಗೆಯಲ್ಲಿ ಶೈತ್ಯಾಂಶ ಕಾಪಾಡಲು ಚಾಕಿ ಕಾಗದ ಅಥವಾ ಪ್ಯಾರಾಫಿನ್ ಕಾಗದ ಬಳಸುವುದು ಸಾಮಾನ್ಯ. ಈ ಪ್ಯಾರಾಫಿನ್ ಕಾಗದವನ್ನು ಪ್ರತಿ ಬೆಳೆಗೂ ಬದಲಾಯಿಸಬೇಕಾಗಿರುವುದರಿಂದ ಹೆಚ್ಚಿನ ಹಣ ಖರ್ಚಾಗುತ್ತದೆ. ಇದಕ್ಕೆ ಬದಲಾಗಿ ಇತ್ತೀಚೆಗೆ ನೀಲಿ ಪಾಲಿಥೀನ್ ಹಾಳೆ ಬಳಸುವಂತೆ ಶೀಫಾರಸ್ಸು ಮಾಡಲಾಗಿದೆ.

ನೀಲಿ ಪಾಲಿಥೀನ್ ಹಾಳೆಯ ಉಪಯೋಗಗಳು

 • ಚಾಕಿರೇಷ್ಮೆಹುಳು ಹಾಸುಗೆಯಲ್ಲಿ ಬೇಕಾಗುವಷ್ಟು ಶೈತ್ಯಾಂಶ ಕಾಪಾಡಿಕೊಳ್ಳಬಹದು.
 • ಹಾಸುಗೆಯಲ್ಲಿರುವ ಎಲೆ/ಸೊಪ್ಪಿನ ತಾಜಾತನ ಹೆಚ್ಚು ಸಮಯ ಉಳಿಯುತ್ತದೆ.
 • ಗೂಡಿನ ಇಳುವರಿ ಮತ್ತು ಗುಣಮಟ್ಟ ಹೆಚ್ಚುವುದು
 • ಪಾಲಿಥೀನ್ ಹಾಳೆಯು ಸುಲಭವಾಗಿ ದೊರೆಯುತ್ತದೆ.
 • ಪಾಲಿಥೀನ್ ಹಾಳೆಯು ಸುಲಭವಾಗಿ ದೊರೆಯುತ್ತದೆ.
 • ಪಾಲಿಥೀನ್ ಹಾಳೆಯನ್ನು ತೊಳೆದು ಸೋಂಕುನಿವಾರಣೆ ಮಾಡಿಕೊಂಡು ಹಲವು ಬೆಳೆಗಳಿಗೆ ಬಳಸಬಹುದು.
 • ರೇಷ್ಮೆ ಬೆಳೆಯ ವೆಚ್ಚ ಕಡಿಮೆಯಾಗುತ್ತದೆ.

೨೦) ಚಾಕಿಹುಳು ಸಾಕಣೆಯಲ್ಲಿ ಸೊಪ್ಪು ಕೊಡುವುದು. ಹಾಸುಗೆ ಬದಲಾವಣೆ, ಸ್ಥಳಾವಕಾಶ ನಿರ್ವಹಣೆ ಕುರಿತು ಮಾಹಿತಿ ಕೊಡಿ?

ಸಾಮಾನ್ಯವಾಗಿ ಕತ್ತರಿಸಿದ ರಸಭರಿತ ಸೊಪ್ಪನ್ನು ದಿನಕ್ಕೆ ೩ ರಿಂದ ೪ ಬಾರಿ ಕೊಡಬೇಕು. ಪ್ರತಿದಿನ ೧೦ ಗಂಟೆಗೆ ಸೊಪ್ಪು ಕೊಡುವಾಗ ತಟ್ಟೆಯಲ್ಲಿ ಹುಳುಗಳನ್ನು ಚೆದರಿಸಿ ಅನಂತರ ಸೊಪ್ಪು ಕೊಡಬೇಕು. ಇದರಿಂದ ಉಳಿದ ಸೊಪ್ಪು ಒಣಗುತ್ತದೆ ಮತ್ತು ಹುಳುಗಳು, ಮೇಲೆ ಹರಿದುಬರುತ್ತವೆ, ಗಾಳಿ ಸಂಚಾರ ಚೆನ್ನಾಗಿರುತ್ತದೆ. ಸೊಪ್ಪು ಕೊಡುವಾಗ ಹೆಚ್ಚುಕೊಟ್ಟು ಹಾಸುಗೆಯಲ್ಲಿ ಒಣಗುವಂತೆ ಮಾಡಬಾರದು. ಪ್ರತಿ ಹುಳುವಿಗೂ ತಾಜಾ ಸೊಪ್ಪು ಸಿಗುವಂತಿರಬೇಕು. ಹುಳುಗಳು ಬೆಳೆದ ಹಾಗೆ ಹೆಚ್ಚು ಸ್ಥಳವಕಾಶ ಬೇಕಾಗುತ್ತದೆ. ಅದಕ್ಕೆ ತಕ್ಕ ಹಾಗೆ ಅವುಗಳಿಗೆ ಸ್ಥಳವಕಾಶ ನೀಡಬೇಕು. ಇಲ್ಲದಿದ್ದರೆ ಸ್ಥಳ ಮತ್ತು ಆಹಾರಗಳಿಗೆ ಸ್ಪರ್ಧೆ ಏರ್ಪಟ್ಟು, ಹುಳುಗಳು ಸಮನಾಗಿ ಬೆಳೆಯುವುದಿಲ್ಲ. ಪ್ರತಿ ಸಾರಿ ಹಾಸುಗೆ ಶುಚಿಗೊಳಿಸಿ ವಿಸ್ತರಿಸಬೇಕು. ಹಾಗೆ ಹಾಸುಗೆಯಲ್ಲಿ ಹುಳುಗಳು ಸಮನಾಗಿ ವಿತರಣೆಯಾಗಿರಬೇಕು. ಬೆಳಿಗ್ಗೆ ಸೊಪ್ಪು ಕೊಡುವಾಗ ಪ್ಯಾರಾಫಿನ್ ಕಾಗದ ತೆಗೆಯಬೇಕು. ಕಡ್ಡಿಗಳನ್ನು ಉಪಯೋಗಿಸಿ ಹಾಸುಗೆ ದೊಡ್ಡದು ಮಾಡಬೇಕು. ಹುಳುಗಳು ಬೆಳೆದಂತೆ ಹಾಸುಗೆಯಲ್ಲಿ ತಿನ್ನದೇ ಬಿಟ್ಟ ಸೊಪ್ಪು, ಹಿಕ್ಕೆ ಹೆಚ್ಚಾಗಿ, ದುವಾಸನೆಯಾಗುತ್ತದೆ. ಇದರಿಂದ ರೊಗಕಾರಕ ಸೂಕ್ಷ್ಮಜೀವಿಗಳ ಬೆಳವಣಿಗೆ ಹೆಚ್ಚಾಗುತ್ತದೆ. ಆದ್ದರಿಂದ ಮೊದಲ ಮತ್ತು ಎರಡನೇ ಜ್ವರದಿಂದ ಎದ್ದನಂತರ ಹಾಗೂ ಮೂರನೆ ಹಂತದಲ್ಲಿ ಪ್ರತಿದಿನ ಹಾಸುಗೆಯನ್ನು ಶುಚಿಗೊಳಿಸಬೇಕು. ೩ನೇ ಹಂತದಲ್ಲಿ ೦.೫ಸೆಂ.ಮೀ. ಗಾತ್ರದ ಬಲೆಯನ್ನು ಬಳಸಿ, ಹಾಸುಗೆ ಶುಚಿಗೊಳಿಸಬೇಕು.

೨೧) ಚಾಕಿ ಹುಳುಗಳು ಜ್ವರಕ್ಕೆ ಹೋಗುವಾಗ ಮತ್ತು ಜ್ವರದಲ್ಲಿದ್ದಾಗ ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳಾವುವು?

ರೇಷ್ಮೆಹುಳು ೧ ಮತ್ತು ೩ನೇ ಹಂತಗಳನ್ನು ಪೂರ್ಣಗೊಳಿಸುವುದಕ್ಕೆ ೩ ರಿಂದ ೩(೧/೨) ಹಾಗೂ ೨ನೇ ಹಂತ ಪೂರ್ಣಗೊಳಿಸಲು ೨ ರಿಂದ ೨ (೧/೨) ದಿನ ತೆಗೆದುಕೊಳ್ಳುತ್ತದೆ. ಜ್ವರದಲ್ಲಿ ೧೮ರಿಂದ ೨೪ ಗಂಟೆಗಳ ಕಾಲ ಇರುತ್ತವೆ. ಜ್ವರಕ್ಕೆ ಹೋಗುವ ಸೂಚನೆಕಂಡಾಗ ಸೊಪ್ಪು ಕಡಿಮೆಕೊಡಬೇಕು. ಮು‌ಚ್ಚಿದ ಚಾಕಿ ಕಾಗದ ತೆಗೆದು, ಹೆಚ್ಚು ಸ್ಥಳವಕಾಶ ಮಾಡಬೇಕು ಹಾಗೂ ಹಾಸುಗೆಯ ಗಾತ್ರ ಕಡಿಮೆಮಾಡಿ ಅಗಲಮಾಡುವುದರಿಂದ ಉಳಿದ ಎಲೆ ಮತ್ತು ಹಿಕ್ಕೆಗಳು ಕೆಳಹೋಗುತ್ತವೆ. ಎಲ್ಲಾ ಹುಳುಗಳು ಜ್ವರಕ್ಕೆ ಕುಳಿತನಂತರ ಪ್ರತಿ ಚದರಡಿಗೆ ೪ ರಿಂದ ೫ಗ್ರಾಂ ಸುಣ್ಣವನ್ನು ಧೂಳಿಸಬೇಕು. ಶೇ.೫ರಷ್ಟು ಹುಳುಗಳು ಜ್ವರದಿಂದ ಹೊರಬಂದನಂತರ ಹಾಸುಗೆ ಸೋಂಕು ನಿವಾರಕ ಧೂಳಿಸಬೇಕು.

೨೨) ಚಾಕಿಸಾಕಣೆ ಕೇಂದ್ರಗಳೆಂದರೇನು? ಅವುಗಳಿಂದಾಗುವ ಪ್ರಯೋಜನಗಳೇನು?

ಚಾಕಿಹುಳುಗಳನ್ನು ಬೆಳೆಸಬೇಕಾದರೆ ಸೂಕ್ತ ತಂತ್ತಜ್ಞಾನ ತಿಳಿದಿರಬೇಕಗುತ್ತದೆ. ಆದರೆ ಬಹುತೇಕ ಕೃಷಿಕರಿಗೆ ಆ ಬಗ್ಗೆ ಅಷ್ಟೊಂದು ತಿಳಿವಳಿಕೆ ಇರುವುದಿಲ್ಲ.ಜೊತೆಗೆ ಸಾಕಣೆಗೆ ಬೇಕಾದ ಸಲಕರಣೆಗಳೂ ಸಹ ಇರುವುದಿಲ್ಲ. ಇದರಿಂದಾಗಿ ಚೆನ್ನಾಗಿ ಚಾಕಿಹುಳು ಸಾಕಲು ಆಗದಿರಬಹುದು. ಆದ್ದರಿಂದ ಬಹುವಾಗಿ ಚಾಕಿಯನ್ನು ಚಾಕಿ ಕೇಂದ್ರಗಳಲ್ಲಿ ಬೆಳೆಸುವುದೇ ಸೂಕ್ತ. ಅಲ್ಲಿ ಅವಶ್ಯ ಸಲಕರಣೆಗಳಿರುತ್ತವೆ; ಉಷ್ಣಾಂಶ(೨೮(೦)ಸೆ. ಮತ್ತು ಶೈತ್ಯಾಂಶ ಶೇ.೮೫ ರಿಂದ ೯೦) ಕಾಪಾಡಲು ಸೂಕ್ತ ವ್ಯವಸ್ಥೆಗಳಿರುತ್ತವೆ. ಜೊತೆಗೆ ಅವಶ್ಯ ತಾಂತ್ರಿಕತೆ ತಿಳಿದಿರುವ ನಿರ್ವಾಹಕರಿರುತ್ತಾರೆ. ಅಲ್ಲದೆ, ಅಂತಹ ಕೇಂದ್ರಗಳಲ್ಲಿ ಚಾಕಿ ತೋಟವನ್ನು ಚೆನ್ನಾಗಿ ಬೆಳೆಸಿದ್ದು ಎಲೆಗಳು ರಸಭರಿತವಾಗಿರುತ್ತವೆ. ಅಂಥಲ್ಲಿ ಸಾಕಣೆಮಾಡುವುದರಿಂದ ಹುಳುಗಳು ಆರೋಗ್ಯವಾಗಿರುತ್ತವಲ್ಲದೆ ರೈತರಿಗೆ ಸಮಯದ ಜೊತೆಗೆ ವೆಚ್ಚದಲ್ಲಿಯೂ ಉಳಿತಾಯವಾಗುತ್ತದೆ.

೨೩) ಪ್ರೌಢ ರೇಷ್ಮೆಹುಳುಗಳ ಸಾಕಣೆಗಾಗಿ ಇರಬೇಕಾದ ಸಾಕಣೆಮನೆ, ಸೊಪ್ಪಿನ ಗುಣಮಟ್ಟ ಮತ್ತು ವಾತಾವರಣಗಳನ್ನು ಕುರಿತು ವಿವರಿಸಿ?

ಹುಳು ಸಾಕಣೆ ಮನೆ

ಪ್ರೌಢಹುಳು ಸಾಕಣೆಗಾಗಿಯೇ ಪ್ರತ್ಯೇಕ ಹುಳುಮನೆ, ಅವಶ್ಯ ಸ್ಥಳಾವಕಾಶ ಮತ್ತು ಒಳ್ಳೆಯ ಗಾಳಿಬೆಳಕು ವ್ಯವಸ್ಥೆ ಇರಬೇಕು. ಹೀಗಿದ್ದಲ್ಲಿ ಸರಿಯಾಗಿ ಸೋಂಕು ನಿವಾರಣೆ ಮಾಡಬಹುದಲ್ಲದೆ ಸೂಕ್ತ ಉಷ್ಣಾಂಶ, ಶೈತ್ಯಾಂಶ ಕಾಪಾಡುವುದು ಸಾಧ್ಯವಾಗುತ್ತದೆ. ಹುಳು ಸಾಕಣೆ ಮನೆ ವಿಸ್ತೀರ್ಣ ಅವಶ್ಯಕತೆಗೆ ತಕ್ಕಂತಿದ್ದು, ಎತ್ತರ ೧೨ ಅಡಿ ಇರಬೇಕು. ಇಲಿ ಮತ್ತು ಇತರ ಪ್ರಾಣಿಗಳು ಒಳಗೆ ಬಾರದಂತೆ ರಕ್ಷಣೆಯಿರಬೇಕು. ಒಂದು ದೊಡ್ಡ ಕೋಣೆಯಿದ್ದು ಇದರ ಜೊತೆಗೆ ಸೊಪ್ಪು ಶೇಖರಿಸಲು ಮತ್ತೊಂದು ಕೊಠಡಿ ಹಾಗೂ ಮುಂಗೋಣೆ ಇರಬೇಕು. ಕಟ್ಟಡ ಸ್ವಲ್ಪ ಎತ್ತರದಲ್ಲಿದ್ದು ಸುತ್ತ ಮರಗಿಡಗಳಿರಬೇಕು.

ಗುಣಮಟ್ಟದ ಎಲೆ

ಪ್ರೌಢ ಹುಳುಗಳಿಗೆ ಬಲಿತ ಸೊಪ್ಪು ಬೇಕು. ಅದರಲ್ಲಿ ನೀರಿನಂಶ ಕಡಮೆಯಿದ್ದು ಪೋಷಕಾಂಶಗಳು ಸಮೃದ್ಧವಾಗಬೇಕು. ತಂಪಾದ ಸಮಯದಲ್ಲಿ ಕೊಯ್ಲು ಮಾಡಿ, ತೇವಮಾಡಿದ ಚೀಲದಿಂದ ಸುತ್ತಿ ಸಾಗಿಸಬೇಕು. ಹುಳುಸಾಕಣೆ ಮನೆಯಲ್ಲೂ ಸಹ ತೇವದ ಚೀಲದಿಂದ ಸುತ್ತಿ ಆಗಾಗ್ಗೆ ನೀರು ಚಿಮುಕಿಸುತ್ತಿರಬೇಕು. ಎಲೆಯು ತಾಜಾ ಸ್ಥಿತಿಯಲ್ಲಿರುವುದು ಮುಖ್ಯ. ಸೊಪ್ಪು ಶೇಖರಿಸುವ ಕೊಠಡಿಯಲ್ಲಿ ಕತ್ತಲಿದ್ದು ಕಡಿಮೆ ಉಷ್ಣಾಂಶವಿರಬೇಕು.

ವಾತಾವರಣ

ಉಷ್ಣಾಂಶ ೨೪ ರಿಂದ ೨೬(೦) ಸೆ. ಮತ್ತು ಶೈತ್ಯಾಂಶ ಶೇ. ೭೫ ರಿಂದ ೮೦ ಇರಬೇಕು. ಕೆಲವು ಸಮಯ ವಾತಾವರದ ಉಷ್ಣಾಂಶ ಹೆಚ್ಚಿದ್ದರೂ ಕೆಲವು ಸಾಧನಗಳನ್ನು ಉಪಯೋಗಿಸಿ ಉಷ್ಣಾಂಶ ಕಡಿಮೆ ಮಾಡಿ, ಗಾಳಿ ಸಂಚಾರ ಸುಗಮಗೊಳಿಸಿ ಉತ್ತಮ ರೇಷ್ಮೆ ಬೆಳೆಯನ್ನು ಪಡೆಯಬಹುದು.

೨೪) ಪ್ರೌಢಹುಳುಗಳು ಜ್ವರದಲ್ಲಿದ್ದಾಗ ಅಉಸರಿಸಬೇಕಾದ ಮುಂಜಾಗ್ರತಾ ಕ್ರಮಗಳಾವುವು?

ರೇಷ್ಮೆಹುಳು ನಾಲ್ಕನೆ ಹಂತದಲ್ಲಿ ೪ ರಿಂದ ೪.೫ ದಿನಗಳನ್ನು  ತೆಗೆದುಕೊಳ್ಳುತ್ತವೆ. ಹಾಗೆ ಜ್ವರದಲ್ಲಿ ೩೦ ರಿಂದ ೩೬ ಗಂಟೆಗಳಿರುತ್ತವೆ. ಈ ಸಂದರ್ಭದಲ್ಲಿ ಹಾಸುಗೆಯಲ್ಲಿ ಹೆಚ್ಚು ತೇವಾಂಶವಿರಬಾರದು. ಇದಕ್ಕಾಗಿ ಸುಣ್ಣ ಧೂಳಿಸಬೇಕು. ಹಾಗೆಯೇ ಹಾಸುಗೆ ಅಗಲ ಮಾಡಬೇಕು. ಇದರಿಂದ ಹಾಸುಗೆಯ ದಪ್ಪ ಕಡಮೆಯಾಗಿ ಗಾಳಿ ಸಂಚಾರ ಸುಗಮವಾಗುತ್ತದೆ. ಹುಳುಗಳು ಜ್ವರಕ್ಕೆ ಹೋಗುವಾಗ ಸೊಪ್ಪು ಕೊಡುವುದನ್ನು ಕಡಿಮೆ ಮಾಡಬೇಕು. ಶೇ.೯೦ರಿಂದ ೯೫ರಷ್ಟು ಹುಳುಗಳು ಜ್ವರಕ್ಕೆ ಹೋದನಂತರ, ಜ್ವರಕ್ಕೆ ಹೋಗದ ಹುಳುಗಳನ್ನು ಬೇರ್ಪಡಿಸಿ ಜ್ವರಕ್ಕೆ ಕುಳಿತಿರುವ ಹುಳುಗಳ ಹಾಸುಗೆಯ ಮೇಲೆ ಸುಣ್ಣದ ಪುಡಿ ಧೂಳಿಸಬೇಕು. ಶೇ. ೯೫ರಷ್ಟು ಹುಳು ಜ್ವರದಿಂದ ಹೊರಬಂದ ಮೇಲೆ ಹಾಸುಗೆಸೋಂಕು ನಿವಾರಕದಿಂದ ಧೂಳಿಸಿ ೩೦ ನಿಮಿಷಗಳನಂತರ ಸೊಪ್ಪು ಕೊಡಬೇಕು.

೨೫) ಪ್ರೌಢರೇಷ್ಮೆ ಹುಳುಗಳಿಗೆ ಒದಗಿಸಬೇಕಾದ ಸ್ಥಳಾವಕಾಶ ಮತ್ತು ಸೊಪ್ಪು ನೀಡುವ ವಿವರಗಳನ್ನು ತಿಳಿಸಿ?

ರೇಷ್ಮೆ ಹುಳುಗಳು ಹಾಸುಗೆಯಲ್ಲಿ ಹೆಚ್ಚು ಒತ್ತಾಗಿದ್ದು ಸಾಕಣೆ ಕೊಠಡಿಯಲ್ಲಿ ಸರಿಯಾಗಿ ಗಾಳಿಸಂಚಾರ ಆಗದಿದ್ದರೆ ಕೊಠಡಿಯಲ್ಲಿ ವಿಷಗಾಳಿ ಹೆಚ್ಚಾಗುತ್ತದೆ. ಹುಳುಗಳ ಆರೋಗ್ಯ ದೃಷ್ಟಿಯಿಂದ ಈ ಬಗ್ಗೆ ಸರಿಯಾಗಿ ಎಚ್ಚರಿಕೆ ವಹಿಸಬೇಕು. ಶಿಫಾರಸ್ಸು ಮಾಡಿದ ಪ್ರಮಾಣದಲ್ಲಿ ಸೊಪ್ಪು ಮತ್ತು ಸ್ಥಳಾವಕಾಶ ಕೊಡಬೇಕು. ಇಲ್ಲದ್ದಿದ್ದಲ್ಲಿ ಹುಳುಗಳ ಅನಾರೋಗ್ಯದಿಂದಾಗಿ ರೇಷ್ಮೆಗೂಡಿನ ಇಳುವರಿ ಮತ್ತು ಗುಣಮಟ್ಟ ಕಡಿಮೆಯಾಗುತ್ತದೆ.

೧೦೦ ಮೊಟ್ಟೆ ರೇಷ್ಮೆಹುಳುಗಳಿಗೆ ಸೂಕ್ತ ಪ್ರಮಾಣದ ಸ್ಥಳಾವಕಾಶ ಮತ್ತು ಸೊಪ್ಪು ಕೊಡುವ ವಿಧಾನ ಕೆಳಕಂಡಂತಿರಬೇಕು:

ಹುಳುವಿನ ಹಂತ

ಉಷ್ಣಾಂಶ (ಸೆ.)

ಶೈತ್ಯಾಂಶ (ಶೇ.)

ಸೊಪ್ಪಿನ ಗುಣಮಟ್ಟ

ಸ್ಥಳಾವಕಾಶ
(ಚ.ಅಡಿಗಳಲ್ಲಿ)

ಸೊಪ್ಪು ಪ್ರಮಾಣ (ಕಿ.ಗ್ರಾಂಗಳಲ್ಲಿ)

ದ್ವಿ ಸಂತತಿ ಬಹುಸಂತತಿ ದ್ವಿ. ಸಂತತಿ ಬಹುಸಂತತಿ
IV ೨೫-೨೬ ೭೦-೭೫ ಮಧ್ಯಮ ೯-೨೦ ೮-೧೬ ೧೯೫ ೧೬
V ೨೪-೨೫ ೭೦-೭೫ ಸಾಧಾರಣದಿಂದ ಬಲಿತ ೨೦-೨೪ ೧೬-೩೨ ೧೧೨೦ ೯೬೦

೨೬) ಹುಳುಹಾಸುಗೆ ಸ್ವಚ್ಛಗೊಳಿಸಿ ಸಂರಕ್ಷಣೆ ಮಾಡುವುದು ಹೇಗೆ?

ತಟ್ಟೆಯಲ್ಲಿ ಹುಳುಸಾಕಣೆ ಮಾಡಿದರೆ ಕೊನೆ ಹಂತಗಳಲ್ಲಿ ಪ್ರತಿದಿನ ಹಾಸುಗೆ ಶುಚಿಗೊಳಿಸಬೇಕಾಗುತ್ತದೆ. ಇದಕ್ಕಾಗಿ ೨ಸೆಂ.ಮೀ. ನೈಲಾನ್ ಹತ್ತಿ ಬಲೆ ಮೇಲೆ ಸೊಪ್ಪು ಹಾಕಬೇಕು. ಹುಳುಗಳು ಬಲೆಯ ಮೇಲೆ ಹರಿದುಬಂದ ಮೇಲೆ ಬಲೆಯನ್ನು ಎಲೆಸಮೇತ ಎತ್ತಿ ಇನ್ನೊಂದಕ್ಕೆ ಸ್ಥಳಾಂತರ ಮಾಡಬೇಕು. ಹೀಗೆ ಮಾಡುವುದರಿಂದ ಹುಳುಗಳಿಗೆ ಸೋಂಕು ತಗಲುವುದು ಕಡಮೆಯಾಗುತ್ತದೆ. ಹುಳುಗಳನ್ನು ರೆಂಬೆ ಪದ್ಧತಿಯಲ್ಲಿ ಸಾಕುತ್ತಿದ್ದರೆ ಪದೇ ಪದೇ ಹಾಸುಗೆ ಶುಚಿಗೊಳಿಸುವ ಅವಶ್ಯಕತೆ ಇರುವುದಿಲ್ಲ. ಆದರೆ ಸುಣ್ಣ ಮತ್ತು ಹಾಸುಗೆ ಸೋಂಕು ನಿವಾರಕಗಳನ್ನು ಸರಿಯಾಗಿ ಧೂಳಿಸಬೇಕಾಗುತ್ತದೆ.