ರೋಗಗಳು

)ಹಿಪ್ಪುನೇರಳೆ ಎಲೆ ಕೆಂಪುಚುಕ್ಕೆ ರೋಗದ ಲಕ್ಷಣಗಳೇನು? ರೋಗವನ್ನು ಹೇಗೆ ಹತೋಟಿ ಮಾಡಬೇಕು?

ಕೆಂಪು ಚುಕ್ಕೆ ರೋಗವು ಶಿಲೀಂಧ್ರದಿಂದ ಬರುತ್ತದೆ. ಪ್ರಾರಂಭದಲ್ಲಿ ತಿಳಿ ಕಂದುಬಣ್ಣದ ಸಣ್ಣ ಚುಕ್ಕೆಗಳು ಕಾಣಿಸಿಕೊಂಡು, ಅನಂತರ ಗುಂಡಗಿನ, ಗಾಢವಾವ ಬಣ್ಣದ ಚುಕ್ಕೆಗಳಾಗುತ್ತವೆ. ಈ ಚುಕ್ಕೆಗಳ ಸುತ್ತಲೂ ಎಲೆಯ ಹಸುರು ಬಣ್ಣ ಹೋಗಿ ಹಳದಿಯಾಗುತ್ತದೆ. ಎಳೆಯ ಎಲೆಗಳು ಅಂದರೆ ಹದಿನೆಂಟು ದಿನಗಳಿಗಿಂತ ಕಡಿಮೆ ವಯಸ್ಸಿನ ಎಲೆಗಳು ರೋಗಕ್ಕೆ ತುತ್ತಾಗುತ್ತವೆ.

ಹತೋಟಿ ಕ್ರಮಗಳು

ಪ್ರತಿ ಬಾರಿ ಮಳೆಬರುವ ಮೊದಲು ತೋಟದಲ್ಲಿರುವ ರೋಗಪೀಡಿತ ಎಲೆಗಳನ್ನು ಆರಿಸಿ ತೆಗೆದು, ಸುಟ್ಟು ನಾಶಗೊಳಿಸಬೇಕು. ಇದರಿಂದ ತೋಟದಲ್ಲಿ ಮಳೆಯಿಂದ ಹರಡಲು ಸಾಧ್ಯವಿಲ್ಲದಂತೆ ರೋಗಾಣುವಿನ ಬೀಜಾಣುಗಳು ನಾಶವಾಗಿ, ರೋಗದ ತೀವ್ರತೆ ಗಮನಾರ್ಹವಾಗಿ ಕಡಿಮೆಯಾಗುತ್ತದೆ. ಇದರ ಜೊತೆಗೆ ಅವಶ್ಯಬಿದ್ದಲ್ಲಿ ಶೇ.೦.೧ರ ಬೆನಾಮಿಲ್ ಶಿಲೀಂಧ್ರನಾಶಕವನ್ನು ಎರಡು ಬಾರಿ ಸಿಂಪಡಿಸಬೇಕು.

) ಬೂದಿ ರೋಗದ ಲಕ್ಷಣಗಳೇನು ಮತ್ತು ಹತೋಟಿ ಮಾಡುವ ಕ್ರಮಗಳಾವುವು?

ಬೂದಿರೋಗಪೀಡಿತ ಎಲೆಗಳ ತಳಭಾಗದಲ್ಲಿ ಬೂದಿ ಸಿಂಪಡಿಸಿದಂತೆ ಕಾಣುವ ಚುಕ್ಕೆಗಳೇ ಈ ರೋಗದ ಪ್ರಮುಖ ಲಕ್ಷಣ. ಇಂತಹ ಚುಕ್ಕೆಗಳಿಡುವೆಡೆಯಲ್ಲಿಯ ಎಲೆಯ ಮೇಲ್ಭಾಗದಲ್ಲಿ ಹಸುರು ಬಣ್ಣ ಹೋಗಿ ಹಳದಿ ಬಣ್ಣ ಕಂಡುಬರುತ್ತದೆ. ಕ್ರಮೇಣ ಎಲೆಗಳ ತಳಭಾಗದಲ್ಲಿ ಕಪ್ಪು ಬಣ್ಣದ ಮಚ್ಚೆಗಳು ಕಾಣಿಸಿಕೊಳ್ಳಬಹುದು. ಇದಕ್ಕೆ ಕಾರಣವೆಂದರೆ ಬೂದಿರೋಗದ ಶಿಲೀಂಧ್ರ ವಸ್ತುವಿನ ಮೇಲೆ ಕಪ್ಪು ಬಣ್ಣದ ಮತ್ತೊಂದು ಶಿಲೀಂಧ್ರ ಪರೋಪಜೀವಿಯಂತೆ ಬೆಳೆಯುವುದೇ ಆಗಿರುತ್ತದೆ. ಇದರಿಂದ ಸಾಮಾನ್ಯ ಅವಧಿಗಿಂತ ಮೊದಲೇ ಅಂಥ ಎಲೆ ಹಳದಿ ಬಣ್ಣಕ್ಕೆ ತಿರುಗಿ ಉದುರಿಹೋಗುತ್ತದೆ.

ಹತೋಟಿ ಕ್ರಮಗಳು

ಬೂದಿರೋಗ ತಡೆಗಟ್ಟಲು ಮುಖ್ಯವಾಗಿ ರೋಗಕ್ಕೆ ಅನುಕೂಲ ಮಾಡಿಕೊಡುವ ತೇವಾಂಶ ಮತ್ತು ನೆರಳನ್ನು ಕಡಿಮೆ ಮಾಡಬೇಕು. ಸಾಲುಗಳು ಮತ್ತು ಸಸ್ಯಗಳ ನಡುವೆ ಸೂಕ್ತ ಅಂತರವಿರುವಂತೆ ಗಿಡಗಳನ್ನು ನಾಟಿಮಾಡಿರಬೇಕು. ಇದರಿಂದ ತೋಟದಲ್ಲಿ ಗಾಳಿಯಾಡಲು ಅನುಕೂಲವಾಗಿ ತೇವಾಂಶ ಕಡಿಮೆಯಾಗುತ್ತದೆ. ಸಾಲುಗಳು ಮತ್ತು ಸಸ್ಯಗಳ ನಡುವೆ ೩ x ೩ ಅಥವಾ ೪ x ೨ ಅಡಿ ಅಂತರ ಉಪಯುಕ್ತ. ಜೋಡಿ ಪದ್ಧತಿಯೂ ಇಲ್ಲಿ ಸೂಕ್ತ. ಬಲಹೀನವಾಗಿ ನೆಲದ ಮೇಲೆ ಬಿದ್ದಿರುವ ರೆಂಬೆಗಳನ್ನು ಕತ್ತರಿಸಿ ತೆಗೆದು ಕಳೆಗಿಡಗಳನ್ನು ನಿಯಂತ್ರಿಸುವುದರಿಂದ ತೋಟದಲ್ಲಿನ ತೇವಾಂಶ ನಿಯಂತ್ರಿಸಬಹುದು. ನೆರಳಿನ ಜಾಗದಲ್ಲಿ ಹಿಪ್ಪು ನೇರಳೆಯನ್ನು ಬೆಳೆಸಬಾರದು. ನೆರಳಿನಿಂದ ಎಲೆ ತೆಳುವಾಗುವುದಲ್ಲದೆ ಬೂದಿರೋಗದ ಹಾವಳಿಯು ಹೆಚ್ಚಾಗುತ್ತದೆ. ಇದರ ಜೊತೆಗೆ ಈ ಕೆಳಗಿನ ರಾಸಾಯನಿಕಗಳನ್ನು ಉಪಯೋಗಿಸಬೇಕು:

೧. ಶೇ.೦.೧ ಅಥವಾ ೦.೨ ರ ಕಾರ್ಬೆಂಡೆಜಿಮ್

೨. ಶೇ.೦.೧ ಅಥವಾ ೦.೨ರ ಕ್ಯಾಪ್ಟಾ‌ನ್

೩. ಶೇ.೦.೧ ಅಥವಾ ೦.೨ ರ ಡೈನೋಕ್ಯಾಪ್

ಈ ದ್ರಾವಣವನ್ನು ಸಿಂಪಡಿಸುವಾಗ ದ್ರಾವಣವು ಎಲೆಯ ಕೆಳಗೆ ಚೆನ್ನಾಗಿ ಬೀಳುವಂತೆ ಸಿಂಪಡಿಸಬೇಕು.

) ಎಲೆ ತುಕ್ಕುರೋಗದ ಚಿಹ್ನೆ ಮತ್ತು ಹತೋಟಿ ಕ್ರಮಗಳನ್ನು ತಿಳಿಸಿ?

ತುಕ್ಕುರೋಗದ ಪ್ರಾರಂಭದಲ್ಲಿ ಎಲೆಯ ತಳಭಾಗದಲ್ಲಿ ತಿಳಿಕಂದುಬಣ್ಣದ ಸಣ್ಣ ಸಣ್ಣ ಚುಕ್ಕೆಗಳು ಕಾಣಿಸಿಕೊಂಡು ಕ್ರಮೇಣ ಗಾಢ ಕಂದು ಬಣ್ಣಕ್ಕೆ ತಿರುಗುತ್ತವೆ. ತೀವ್ರ ಹಾನಿಗೊಳಗಾದ ಎಲೆಗಳು ತುಕ್ಕು ಹಿಡಿಯುವಂತೆ ಕಂಡುಬಂದು ಸುರುಳಿ ಸುತ್ತಿಕೊಂಡು ಒಣಗಿ ಉದುರಿಹೋಗುತ್ತವೆ. ಸಾಮಾನ್ಯವಾಗಿ ೨೪ ದಿನ ವಯಸ್ಸಿನ ಎಲೆಗಳಲ್ಲಿ ಈ ರೋಗವು ಕಾಣಿಸಿಕೊಂಡು ಎಲೆಯ ವಯಸ್ಸು ಹೆಚ್ಚಾದಂತೆಲ್ಲಾ ತೀವ್ರತೆಯೂ ಸಹ ಹೆಚ್ಚಾಗುತ್ತದೆ.

ಹತೋಟಿ ಕ್ರಮಗಳು

ನಿಗದಿತ ಅವಧಿಯಲ್ಲಿ ಎಲೆಗಳನ್ನು ಉಪಯೋಗಿಸುವುದು ಈ ರೋಗದ ಹತೋಟಿಯಲ್ಲಿ ಮುಖ್ಯವಾಗಿ ಪಾಲಿಸಬೇಕಾದ ಕ್ರಮ. ಇದರಿಂದಾಗಿ ರೋಗಾಣುವಿನ ಅಧಿಕ ಅಭಿವೃದ್ಧಿಯನ್ನು ತಡೆಗಟ್ಟಿ ರೋಗದ ತೀವ್ರತೆಯನ್ನು ಕಡಿಮೆ ಮಾಡಬಹುದು. ಸಸ್ಯಗಳ ನಡುವಣ ಅಂತರವನ್ನು ಹೆಚ್ಚಿಸಿ ಗಾಳಿ ಬೆಳಕಾಡಲು ಅವಕಾಶ ಮಾಡಿಕೊಡುವುದರಿಂದಲೂ ರೋಗವನ್ನು ಸ್ವಲ್ಪ ಮಟ್ಟಿಗೆ ತಡೆಗಟ್ಟಬಹುದು. ಅವಶ್ಯವಿದ್ದಲ್ಲಿ ಶೇ. ೦.೨ರ ಕಾರ್ಬೆಂಡೆಜಿಮ್ ಅಥವಾ ಡೈಥೇನ್-ಜಡ್ ೭೮ ಶಿಲೀಂಧ್ರನಾಶಕವನ್ನು ಸಿಂಪಡಿಸಬೇಕು.

) ಬ್ಯಾಕ್ಟೀರಿಯಾದಿಂದ ಬರುವ ಎಲೆ ಕಪ್ಪು ಚುಕ್ಕೆರೋಗದ ಚಿಹ್ನೆ ಮತ್ತು ಹತೋಟಿ ಕ್ರಮಗಳನ್ನು ತಿಳಿಸಿ?

ಕಪ್ಪುಚುಕ್ಕೆ ರೋಗದ ಪ್ರಾರಂಭದಲ್ಲಿ ಎಲೆಯ ತಳಭಾಗದಲ್ಲಿ ಎಣ್ಣೆ ನೀರು ಸಿಂಪಡಿಸಿದಂತೆ ಚುಕ್ಕೆಗಳು ಕಂಡುಬರುತ್ತವೆ. ಈ ಚುಕ್ಕೆಗಳು ಕ್ರಮೇಣ ದೊಡ್ಡವಾಗಿ ಕಪ್ಪುಬಣ್ಣಕ್ಕೆ ತಿರುಗುತ್ತವೆ. ಹೆಚ್ಚು ತೇವಾಂಶಿವಿರುವ ವಾತಾವರಣದಲ್ಲಿ ಚುಕ್ಕೆಗಳಿಂದ ಅಸಂಖ್ಯ ದಂಡಾಣುಗಳನ್ನೊಳಗೊಂಡ ದ್ರವ ಉತ್ಪತ್ತಿಯಾಗುತ್ತದೆ. ಎಳೆಯ ಮತ್ತು ಮಧ್ಯಮ ವಯಸ್ಸಿನ ಎಲೆಗಳು ಈ ರೋಗಕ್ಕೆ ಹೆಚ್ಚಾಗಿ ತುತ್ತಾಗುತ್ತವೆ. ಸೋಂಕು ಎಳೆಯ ಎಲೆಗಳಿಗೆ ತಗುಲಿದಾಗ ಅಂತಹ ಎಲೆಗಳು ವಕ್ರವಾಗಿ ತಿರುಚಿಕೊಳ್ಳುತ್ತವೆ. ಮಧ್ಯವಯಸ್ಸಿನ ಎಲೆಗಳಿಗೆ ರೋಗ ತಗುಲಿದಾಗ ಎಲೆಗಳು ಹಳದಿಯಾಗಿ ಉದುರುತ್ತವೆ. ಎಳೆಯ ಕಾಂಡದ ಮೇಲೂ ಸಹ ಕೆಲವೊಮ್ಮೆ ಈ ರೋಗಚಿಹ್ನೆಗಳು ಕಂಡುಬರುತ್ತವೆ. ಕೆಲವೊಮ್ಮೆ ಈ ರೋಗ ಎಲೆ ಮತ್ತು ಕಾಂಡದ ಅಂಗಮಾರಿಯಾಗಿಯೂ ಪರಿಣಮಿಸಬಹುದು.

ಹತೋಟಿ ಕ್ರಮಗಳು

ರೋಗಗ್ರಸ್ತ ಎಲೆಗಳನ್ನು ಆರಿಸಿ ತೆಗೆದು, ಸವರುವುದರ ಮೂಲಕ ರೋಗಾಣುವಿನ ಸಂಖ್ಯೆ ಮತ್ತು ಅಭಿವೃದ್ಧಿಯನ್ನು ಹತೋಟಿಯಲ್ಲಿಡಬಹುದು. ರೋಗವು ಗಮನಾರ್ಹ ಮಟಟದಲ್ಲಿರುವುದು ಕಂಡುಬಂದಲ್ಲಿ ಮಾತ್ರ ೧೦೦ ಪಿ.ಪಿ.ಎಂ. ಸ್ಟ್ರೆಪ್ಟೋಸೈಕ್ಲಿನ್ ಅನ್ನು ನಾಲ್ಕು ದಿನಗಳ ಅಂತರದಲ್ಲಿ ಎರಡು ಬಾರಿ ಸಿಮಪಡಿಸಬೇಕು.

) ಕಾಂಡಕೊಳೆರೋಗದ ಲಕ್ಷಣಗಳೇನು? ಇದನ್ನು ನಿಯಂತ್ರಿಸಲು ಯಾವ ಕ್ರಮ ಕೈಗೊಳ್ಳಬೇಕು?

ಕಾಂಡಕೊಳೆರೋಗವು ಸಸಿಮಡಿಗಳಲ್ಲಿ ಹೆಚ್ಚಾಗಿರುತ್ತದೆ. ನೆಟ್ಟ ಕಡ್ಡಿ ಚಿಗುರೊಡೆಯದಿರುವುದು ಅಥವಾ ಚಿಗುರು ಇದ್ದಕ್ಕಿದ್ದಂತೆ ಹಳದಿ ಬಣ್ಣಕ್ಕೆ ತಿರುಗಿ ಬಾಡಿ, ಒಣಗಿ ಹೋಗುವುದು ಇದರ ಪ್ರಮುಖ ಲಕ್ಷಣ. ಈ ರೋಗಕ್ಕೊಳಗಾದ ಸಸಿಗಳನ್ನು ಕೂಲಂಕಷವಾಗಿ ಪರೀಕ್ಷಿಸಿದಾಗ ಕಡ್ಡಿಗಳ ಮೇಲ್ತುದಿಗಳು ಬಣ್ಣವನ್ನು ಕಳೆದುಕೊಂಡು, ಸತತು ಒಣಗಿರುವುದು ಕಂಡುಬರುತ್ತದೆ.

ರೋಗಗ್ರಸ್ತ ತೊಗಟೆಯ ಮೇಲೆ ಅನೇಕ ಕಪ್ಪಾದ, ಉಬ್ಬು ಭಾಗಗಳು ಕಂಡುಬರುತ್ತವೆ. ಇವನ್ನು ಪಿಕ್ನಿಡಿಯ ಅಥವಾ ಬೀಜಕೋಶಗಳು ಎನ್ನುತ್ತಾರೆ. ಸೋಂಕು ತಗುಲಿದ ಭಾಗವು ಕೆಳಮುಖವಾಗಿ ಹರಡಲು ಪ್ರಾರಂಭಿಸಿ ಚಿಗುರಿದ ಎಲೆ, ರೆಂಬೆಯ ಸುತ್ತಲಿರುವ ಊತಕಗಳು ಸಾಯುತ್ತವೆ. ಇದರಿಂದಾಗಿ ಚಿಗುರುತ್ತಿರುವ ಎಳೆ ರೆಂಬೆಗೆ ಮಣ್ಣಿನಿಂದ ನೀರು ಮತ್ತು ಲವಣಗಳು ಸರಬರಾಜಾಗದೆ ಒಣಗಿ ಸಾಯುತ್ತದೆ. ಬಹಳಷ್ಟು ಸಂರ್ಭದಲ್ಲಿ ನೆಟ್ಟ ಕಡ್ಡಿಗಳು ಚಿಗುರದೆಯೇ ಒಣಗುತ್ತವೆ. ಇಂತಹ ರೋಗಭಾದಿತ ಕಡ್ಡಿಗಳನ್ನು ಮಣ್ಣಿನಿಂದ ಹೊರತೆಗೆದು ಪರೀಕ್ಷಿಸಿದಾಗ ಕಡ್ಡಿ ತೊಗಟೆ ಕೊಳೆತು ಕಾಂಡದಿಂದ ಸುಲಭವಾಗಿ ಬೇರ್ಪಡುವುದನ್ನು ಮತ್ತು ತೊಗಟೆಯ ಕೆಳಗೆ ರೋಗಾಣುವಿನ ಕಪ್ಪನೆ ಎಳೆಗಳನ್ನು ಕಾಣಬಹುದು. ಈ ರೋಗವು ಕೇವಲ ಸಸಿಗಳಿಗೆ ಮಾತ್ರವಲ್ಲದೆ ಬೆಳೆದುನಿಂತ ಗಿಡಗಳಿಗೂ ಬರುತ್ತದೆ. ಇದನ್ನು ಕಟಾವು ಮಾಡಿದ ಸಸ್ಯಗಳಲ್ಲಿ ಸಾಮಾನ್ಯವಾಗಿ ಕಾಣಬಹುದು. ಎಲೆಯ ಮೊಗ್ಗುಗಳು ಸಾಯುವುದು ಅಥವಾ ಚಿಗುರು ಬಾಡುವುದು ಅತಿ ಸಾಮಾನ್ಯ ಲಕ್ಷಣಗಳು.

ಹತೋಟಿ ಕ್ರಮಗಳು

ಸಸಿಮಡಿಗಳಲ್ಲಿ ರೋಗಪೀಡಿತ ಸಸಿಗಳನ್ನು ಮತ್ತು ಕಡ್ಡಿಗಳನ್ನು ಆರಿಸಿ ತೆಗೆದು ಸುಟ್ಟುಹಾಕಬೇಕು. ಇದರಿಂದ ಮಣ್ಣಿನಲ್ಲಿ ರೊಗಾಣು ಅಧಿಕ ಸಂಖ್ಯೆಯಲ್ಲಿ ವೃದ್ಧಿ ಹೊಂದುವುದನ್ನು ತಪ್ಪಿಸಬಹುದು. ತೋಟದ ಬದಿಯಲ್ಲಿ ಕಟಾವು ಮಾಡಿದ ಕಾಂಡಗಳ ಶೇಖರಣೆ ಮಾಡಬಾರದು. ಇದರಿಂದ ರೋಗ ಹರಡುವುದನ್ನು ತಪ್ಪಿಸಬಹುದು. ಪ್ರತಿ ಬಾರಿಯೂ ಒಂದೇ ಸಸಿಮಡಿಯಲ್ಲಿ ಸತತವಾಗಿ ಸಸಿ ಬೆಳೆಯಬಾರದು. ಕತ್ತರಿಸಿದ ಕಾಂಡಗಳನ್ನು ನಾಟಿಮಾಡುವ ಮೊದಲು ಶೇ.೦.೨ರ ಕಾರ್ಬೆಂಡೆಜಿಮ್ ಶಿಲೀಂಧ್ರನಾಶಕ ದ್ರಾವಣದಲ್ಲಿ ೩೦ ನಿಮಿಷಗಳ ಕಾಲ ನೆನೆಸಿ ಅನಂತರ ನಾಟಿಮಾಡಬೇಕು. ನಾಟಿಯಾದ ೧೫ ದಿನಗಳನಂತರ ಮತ್ತೊಮ್ಮೆ ಶಿಲೀಂಧ್ರನಾಶಕ ಸಿಂಪಡಿಸುವುದು ಒಳ್ಳೆಯದು. ರೋಗದ ತೀವ್ರತೆ ಹೆಚ್ಚಿರುವ ಸಸಿಮಡಿಗಳಲ್ಲಿ ನಾಟಿಗೆಮೊದಲು ಮಣ್ಣನ್ನು ಎಕರೆಗೆ ೮ ಕಿ.ಗ್ರಾಂ ಪ್ರಮಾಣದಲ್ಲಿ ಕ್ಯಾಪ್ಟಾನ್ ಅಥವಾ ಕರ್ಬೆಂಡಿಜಮ್ ಶಿಲೀಂಧ್ರನಾಶಕದಿಂದ ಉಪಚರಿಸಿ ಹತ್ತರಿಂದ ಹನ್ನೆರಡು ದಿನಗಳ ಅನಂತರ ಗೊಬ್ಬರ ಹಾಕಿ ಸಸಿಗಳನ್ನು ನಾಟಿಮಾಡಬೇಕು. ರೆಂಬೆಗಳನ್ನು ಕಟಾವುಮಾಡಿದನಂತರ ಕತ್ತರಿಸಿದ ಭಾಗಕ್ಕೆ ೦.೨ರ ಕಾರ್ಬೆಂಡಿಜೆಮ್ ಅಥವಾ ಕ್ಯಾಪ್ಟಾನ್ ಸಿಂಪಡಿಸುವುದು ಸೂಕ್ತ.

) ಬೇರುಕೊಳೆರೋಗವನ್ನು ಪತ್ತೆಮಾಡಿ ನಿಯಂತ್ರಿಸುವದು ಹೇಗೆ?

ಬೇರಿನ ಕೊಳೆರೋಗ ಇದ್ದರೆ,

೧) ಬೇರುಗಳ ತೊಗಟೆ ಮೆದುವಾಗಿ, ಕೊಳೆತು, ಊತಕಗಳು ನಿಶ್ಚೇತನಗೊಂಡು ಬೇರಿನ ಗಟ್ಟಿಭಾಗದಿಂದ ಸುಲಭವಾಗಿ ಬೇರ್ಪಡುತ್ತವೆ.

೨) ತೊಗಟೆಯ ಕೆಳಗೆ ಶಿಲೀಂಧ್ರದ ಕಪ್ಪನೆಯ ಎಳೆಗಳು ಗೋಚರಿಸುತ್ತವೆ. ತೊಗಟೆಯಿಂದ ಬೇರ್ಪಟ್ಟ ಬೇರಿನ ಗಡಸು ಭಾಗದ ಮೇಲೂ ಶಿಲೀಂಧ್ರದ ಎಳೆಗಳು ಆವರಿಸಿದ್ದು ಇದೂ ಸಹ ಕಪ್ಪಗೆ ಕಾಣುತ್ತದೆ.

ಹತೋಟಿ ಕ್ರಮಗಳು

 • ಕತ್ತರಿಸಿದ ಕಾಂಡದ ತುಂಡುಗಳನ್ನು ಮತ್ತು ರೆಂಬೆಗಳನ್ನು ತೋಟಗಳ ಬದಿಯಲ್ಲಿ ಸಂಗ್ರಹಿಸಿದ ತಕ್ಷಣವೇ ದೂರ ಸಾಗಿಸಬೇಕು. ಏಕೆಂದರೆ, ಅಂಥ ಕಾಂಡದ ತುಂಡುಗಳ ಮೇಲೆ ರೋಗಾಣು ಬೆಳೆಯುವುವು. ಇದಕ್ಕೆ ತೋಟದ ಮಣ್ಣೂ ಸೇರಿ ರೋಗವುಂಟಾಗುತ್ತದೆ.
 • ರೋಗಪೀಡಿತ ಸಸ್ಯಗಳನ್ನು ಬೇರು ಸಹಿತ ಕಿತ್ತು, ಉಳಿದುಕೊಂಡಿರುವ ಎಲ್ಲ ಬೇರುಗಳನ್ನು ಆಯ್ದು ತೆಗೆದು ಸುಟ್ಟು ಹಾಕಬೇಕು.
 • ಸಸ್ಯವನ್ನು ಕಿತ್ತ ಜಾಗದಲ್ಲಿ ೪ರಿಂದ ೫ಚದರಡಿಗಳಷ್ಟು ಮಣ್ಣನ್ನು ಸಡಿಲಗೊಳಿಸಿ ಶೇ.೦.೨ರ ಕಾರ್ಬೆಂಡೆಜಿಮ್ ಅಥವಾ ಕ್ಯಾಪ್ಟಾನ್ ಶಿಲೀಂಧ್ರನಾಶಕದಿಂದ ಚೆನ್ನಾಗಿ ನೆನೆಸಬೇಕು. ಹತ್ತು ದಿನಗಳನಂತರವೂ ಕಳಿತ ಕೊಟ್ಟಿಗೆ ಗೊಬ್ಬರ ಹಾಕಿ, ಮಣ್ಣಿನೊಂದಿಗೆ ಬೆರೆಸಿ, ಸಸ್ಯಗಳನ್ನು ನೆಡಬೇಕು. ನೆಡುವುದಕ್ಕೆ ಮುನ್ನ ಸಸಿಗಳ ಬೇರನ್ನು ಶೇ.೦.೨ರ ಕಾರ್ಬೆಂಡೆಜಿಮ್ ದ್ರಾವಣದಲ್ಲಿ ೩೦ ನಿಮಿಷ ನೆನೆನಸಿ ನಾಟಿಮಾಡಬೇಕು.
 • ಹಿಪ್ಪುನೇರಳೆ ಗಿಡಗಳನ್ನು ಕಟಾವುಮಾಡಿದ ಕೂಡಲೇ ಶೇ.೦.೨ರ ಕಾರ್ಬೆಂಡೆಜಿಮ್ ಶಿಲೀಂಧ್ರನಾಶಕ ದ್ರಾವಣವನ್ನು ಕತ್ತರಿಸಿದ ಕಾಂಡದ ತುದಿಗಳೂ ಸೇರಿದಂತೆ ಇಡೀ ಕಾಂಡದ ಭಾಗಕ್ಕೆ ಸಿಂಪರಿಸಬೇಕು.
 • ಬೇರು ಕೊಳೆಯ ಹತೋಟಿಗೆ ಜೈವಿಕ ನಿಯಂತ್ರಣವೂ ಸ್ವಲ್ಪಮಟ್ಟಿಗೆ ಸಹಾಯಕ. ಇದಕ್ಕೆ ಟ್ರೈಕೊಡರ್ಮ ವಿರಿಡಿ ಮತ್ತು ಟ್ರೈಕೊಡರ್ಮ ಕೊನಿನ್ ಎಂಬ ಶಿಲೀಂಧ್ರಗಳನ್ನು ಉಪಯೋಗಿಸಬಹುದು.

) ಗಂಟುಬೇರು ರೋಗ ಬಂದಿರುವುದನ್ನು ಹೇಗೆ ಕಂಡುಕೊಳ್ಳಬೇಕು? ಇದನ್ನು ಹತೋಟಿ ಮಾಡುವುದು ಹೇಗೆ?

ಗಂಟುಬೇರು ರೋಗಪೀಡಿತ ಸಸ್ಯಗಳಲ್ಲಿ ಸುಲಭವಾಗಿ ಗುರುತಿಸಬಲ್ಲ ಲಕ್ಷಣಗಳನ್ನು ಭೂಮಿಯ ಮೇಲೆ ಮತ್ತು ಭೂಮಿಯ ಒಳಗೆ ಬೆಳೆಯುವ ಸಸ್ಯಭಾಗಗಳಲ್ಲಿ ಕಾಣಬಹುದು:

 • ಕುಂಠಿತ ಬೆಳವಣಿಗೆ
 • ಹದಕ್ಕೆ ಬರುವ ಮುನ್ನ ಎಲೆ ಹಳದಿಯಾಗುವುದು
 • ತಡವಾಗಿ ಚಿಗುರೊಡೆಯುವುದು
 • ಚಿಕ್ಕದಾದ ಎಲೆ
 • ಎಲೆ ಬಾಡುವಿಕೆ
 • ಕುಗ್ಗಿದ ಇಳುವರಿ

ಹತೋಟಿ ಕ್ರಮಗಳು

ವ್ಯಾವಸಾಯಿಕ ಪ್ರಬುದ್ಧ ತಳಿಗಳು ಮತ್ತು ಬೇಸಾಯ ಪದ್ಧತಿಗಳ ಮೂಲಕ ತೋಟ ಮತ್ತು ಸಸ್ಯನೈರ್ಮಲ್ಯತೆಯನ್ನು ಕಾಪಾಡಿಕೊಂಡು ಬರುವುದರಿಂದ ಕಡಿಮೆ ಖರ್ಚಿನಲ್ಲಿ ಜಂತುವಿನ ಹಾವಳಿಯನ್ನು ಸ್ವಲ್ಪಮಟ್ಟಿಗೆ ಮಿಗೊಳಿಸಬಹುದು:

 • ಆಸರೆ ಸಸಿಗಳ ನಾಶ
 • ಹರುಡುವಿಕೆಯನ್ನು ತಡೆಗಟ್ಟುವಕೆ
 • ಉತ್ತು, ಪಾಳುಬಿಡುವಿಕೆ
 • ರೋಗಪೀಡಿತ ಸಸಿಗಳನ್ನು ನಾಶಪಡಿಸುವುದು
 • ಮಣ್ಣನ್ನು ನೀರಿನಲ್ಲಿ ಮುಳುಗಡೆಮಾಡುವುದು
 • ಇತರೆ ಸಸ್ಯಪಾಶಗಳನ್ನೊಡ್ಡಿ ನಾಶಪಡಿಸುವಿಕೆ
 • ಶತ್ರುಸಸ್ಯಗಳ ಬಳಕೆ
 • ಸಾವಯವ ವಸ್ತುಗಳಾದ ಕೊಟ್ಟಿಗೆ ಗೊಬ್ಬರ, ಹಸುರೆಲೆಗೊಬ್ಬರ ಮತ್ತು ಬೇವಿನ ಹಿಂಡಿಗಳನ್ನು ಹಾಕುವ ಮೂಲಕ ಹತೋಟಿ ಮಾಡುವುದು.

ಜೈವಿಕ ನಿಯಂತ್ರಣ

ಜಂತುನಾಶಕ/ಭಕ್ಷಕ ಶಿಲೀಂಧ್ರಗಳಾದ ಪೆಸಿಲೋಮೈಸಿಸ್ ಲಿಲಿಯೇಸಿನಸ್ ಅಥವಾ ವರ್ಟಿಲಿಸಿಯಂ ಕ್ಲಾಮೈಡೋಸ್ಪೋರಿಯಂ ಮೂಲ ತಯಾರಿಕಾ ಸಾಂದ್ರತೆಯಲ್ಲಿ ಒಂದು ಕಿ.ಗ್ರಾಂ ಅನ್ನು ೨೦೦ಕಿ.ಗ್ರಾಂ ಕೊಟ್ಟಿಗೆ ಗೊಬ್ಬರ ಮತ್ತು ೨೪ಕಿ.ಗ್ರಾಂ ಬೇವಿನ ಹಿಂಡಿಯೊಂದಿಗೆ ಬೆರೆಸಿ ಒದ್ದೆಮಾಡಿದ ಗೋಣಿತಾಟಿನಿಂದ ಒಂದು ವಾರ ಮುಚ್ಚಿಡಬೇಕು. ಈ ರೀತಿ ಸಿದ್ಧಪಡಿಸಿದ ಮಿಶ್ರಣ ೧೦೦೦ಗಿಡಗಳಿಗೆ ಸಾಕಾಗುತ್ತದೆ. ಒಂದು ಗಿಡಕ್ಕೆ ೨೦೦ ಗ್ರಾಂ ಮಿಶ್ರಣವನ್ನು ಬೇರಿನ ಸಮೀಪ ಹಾಕಿ ಮಣ್ಣು ಮುಚ್ಚಬೇಕು. ಪ್ರತಿ ೪ ತಿಂಗಳಿಗೊಮ್ಮೆಯಂತೆ ಎರಡು ವರ್ಷಗಳವರೆಗೆ ಈ ವಿಧಾನ ಅನುಸರಿಸಬೇಕು.

ರಾಸಾಯನಿಕ ವಿಧಾನ

ವಿಷ ಆವಿ ರಾಸಾಯನಿಕಗಳು : ೧, ೨ – ಡೈಕ್ಲೋರೊಪ್ರೋಪೆನ್ – ೧, ೩ ಡೈಕ್ಲೋರೋಪ್ರೊಪಿನ್ (ಡಿ.ಡಿ), ೧, ೨ ಡೈಬ್ರೋಮೋ – ೩ ಕ್ಲೋರೊಪೊಪಿನ್ (ಡಿ.ಬಿ.ಸಿ.ಸಿ) ಟ್ರೈಕ್ಲೋರೋನೈಟ್ರೊ ಈಥೇನ್, ೧, ೨ ಡೈಬ್ರೊಮೋ ಈಥೇನ್, (ಇ.ಡಿ.ಬಿ.) ಇವುಗಳನ್ನು ತಯಾರಕರ ಸೂಚನೆಗಳಿಗನುಗುಣವಾಗಿ ನಾಟಿಮಾಡುವ ಮೊದಲೇ ಉಪಯೋಗಿಸಬೇಕು. ಈ ರಾಸಾಯನಿಕಗಳನ್ನು ನಾಟಿಗೆ ಮೊದಲು ಪಿಚಕಾರಿಯಂತಹ ಸಾಧನದಿಂದ ಭೂಮಿಯ ೧೫ಸೆಂ.ಮೀ. ಆಳದಲ್ಲಿ ೩೦ಸೆಂ.ಮೀ. ಅಂತರದಲ್ಲಿ ಮಣ್ಣನೊಳಕ್ಕೆ ಸೇರಿಸಿ, ಪ್ಲಾಸ್ಟಿಕ್ ಹಾಳೆಯಿಂದ ಮುಚ್ಚಬೇಕು. ಅನಂತರ ಪ್ಲಾಸ್ಟಿಕ್ ಹೊದಿಕೆ ತೆಗೆದು ೪ ರಿಂದ ೫ ದಿನಗಳನಂತರ ಚೆನ್ನಾಗಿ ಅಗೆದು ಅನಂತರ ನಾಟಿಮಾಡಬೇಕು.

) ಕಡ್ಡಿ ನಾಟಿಮಾಡಿದಾಗ ತೋಟದಲ್ಲಿ ಗೆದ್ದಲಿನ ಹಾವಳಿಯನ್ನು ಹೇಗೆ ತಡೆಯಬೇಕು?

ಗೆದ್ದಲು ಸಾಮಾನ್ಯವಾಗಿ ಕೆಂಪುಮರಳು ಮಿಶ್ರಿತ ಹಾಗೂ ಕಪ್ಪುಮರಳು ಮಿಶ್ರಿತ ಮಣ್ಣಿನ, ಮಳೆಯಾಶ್ರಿತ ಹಿಪ್ಪುನೇರಳೆ ತೋಟಗಳಲ್ಲಿ ತೀವ್ರವಾಗಿ ಕಾಣಿಸಿಕೊಳ್ಳುತ್ತದೆ. ಇದರ ನಿಯಂತ್ರಣಕ್ಕೆ ಮೊದಲು ಗೆದ್ದಲು ಹತ್ತಿದ ಗಿಡಗಳನ್ನು ಗುರುತಿಸಿ ಕಾಂಡದಲ್ಲಿರುವ ರಾಣಿ ಕೀಟವನ್ನು ನಾಶಪಡಿಸಬೇಕು. ಗೆದ್ದಲು ಮಾಡಿದ ರಂಧ್ರಗಳನ್ನು ಶೇ.೨೦ಕ್ಲೊರೋಪೈರಿಫಾಸ್ ದ್ರಾವಣದಲ್ಲಿ ತೋಯಿಸಬೇಕು. ಅಂಥ ಗಿಡಗಳ ಸೊಪ್ಪನ್ನು ೨೫ ದಿನಗಳನಂತರ ಹುಳುಗಳಿಗೆ ಕೊಡವುದು ಸೂಕ್ತ.

) ನರ್ಸರಿಯಲ್ಲಿ ಕಡ್ಡಿಗಳು ಕೊಳೆತುಹೋಗುತ್ತವೆ. ಇದಕ್ಕೆ ಕಾರಣವೇನು? ಇದನ್ನು ತಡೆಯುವುದು ಹೇಗೆ?

ನರ್ಸರಿ ಮಾಡಿದ ಜಾಗದಲ್ಲಿ ನೀರು ನಿಲ್ಲುವುದರಿಂದ ಶಿಲೀಂಧ್ರಗಳು ಭಾರಿ ಪರಿಣಾಮಕಾರಿಯಾಗಿ ರೋಗ ತರುತ್ತವೆ.

ಪರಿಹಾರ

ಈ ರೋಗ ಕಂಡ ತಕ್ಷಣ ಗಿಡಗಳನ್ನು ಕಿತ್ತುಹಾಕಬೇಕು ಮತ್ತು ಎಲ್ಲವನ್ನೂ ಆರಿಸಿ, ಎಲ್ಲವನ್ನು ಒಟ್ಟಿಗೆ ಸೇರಿಸಿ ಸುಡಬೇಕು. ಅನಂತರ ಆ ಭೂಮಿಯನ್ನು ಉಳುಮೆಮಾಡಿ ಕ್ಲೊರೋಪಿಕ್ರಿನ್‌ನಿಂದ ಸೋಂಕು ನಿವಾರಣೆ ಮಾಡಬೇಕು. ಇದಕ್ಕಾಗಿ ೩ ರಿಂದ ೪ ಅಡಿ ಆಳ ಗುಂಡಿ ತೆಗೆದು ಚದರ ಅಡಿಗೆ ಅರ್ಧ ಕಿ.ಗ್ರಾಂ. ಕ್ಲೊರೋಪಿಕ್ರಿನ್ ಹಾಕಿ ಗುಂಡಿಯನ್ನು ಮಣ್ಣಿನಿಂದ ಮುಚ್ಚಬೇಕು.

ಕ್ಯಾಲ್ಸಿಯಂ ಸೈನಮೈಡ್ ಸಹ ಹಾಕಬಹುದು. ಇದನ್ನು ೩೬ ಚದರಡಿಗೆ ೭೫.೨ ಗ್ರಾಂ ಪ್ರಮಾಣದಲ್ಲಿ ಹಾಕಿ ಮಣ್ಣಿನಲ್ಲಿ ಸೇರಿಸಬೇಕು. ಇದು ಮೇಲ್ಪದರದ ಸಾಗುವಳಿ ಭೂಮಿಯಲ್ಲಿ ತುಂಬ ಪರಿಣಾಮಕಾರಿಯಾಗುತ್ತದೆ.

ಕೀಟಗಳು

) ಎಲೆಸುರುಳಿಕೀಟದ ಹಾವಳಿ ಕಾಲ, ಲಕ್ಷಣಗಳು, ನಿರ್ವಹಣೆ ಮತ್ತು ಮುಂಜಾಗ್ರತ ಕ್ರಮಗಳಾವುವು?

ಇತ್ತೀಚೆಗೆ ಹಿಪ್ಪುನೇರಳೆ ತೋಟಕ್ಕೆ ಡಯಾಪ್ರಿನಿಯ ಕೀಟಗಳ ಹಾವಳಿ ಹೆಚ್ಚಾಗಿದ್ದು, ಈ ಕೀಟದ ಮರಿಗಳು ಪ್ರಮುಖವಾಗಿ ಕುಡಿ ಭಾಗದಲ್ಲಿ ಸೇರಿಕೊಂಡು ಚಿಗುರೆಲೆಗಳನ್ನು ಬೆಳಿಬಣ್ಣದ ಸೂಕ್ಷ್ಮ ಎಳೆಗಳಿಂದ ಸುರುಳಿಯಾಕಾರದಲ್ಲಿ ಹೆಣೆದು ಕುಡಿಯ ಹರಿತ್ತು ಹಾಗೂ ಹಸುರು ಭಾಗವನ್ನು ಕೆರೆದು ತಿನ್ನುತ್ತವೆ. ಇದರಿಂದ ಸಸ್ಯಕುಡಿಗಳು ಹಾಳಾಗಿ ಬೆಳವಣಿಗೆ ಕುಂಠಿತಗೊಳ್ಳುತ್ತದೆ. ಎಲೆಗಳು ಸುರುಳಿಯಾಕಾರವನ್ನು ಹೊಂದಿರುವುದರಿಂದ ಇದನ್ನು ಸುರುಳಿ ಕೀಟವೆನ್ನುವರು.

ಈ ಕೀಟ ಬಾಧೆಯು ಜೂನ್ ತಿಂಗಳಿನಿಂದ ಫೆಬ್ರವರಿ ತಿಂಗಳವರೆಗೆ ತೋಟದಲ್ಲಿ ಕಾಣಿಸಿಕೊಳ್ಳುತ್ತದೆ. ಇತರೆ ಕಾಲಗಳಲ್ಲಿ ಮಣ್ಣು ಹಾಗೂ ತರಗೆಲೆಗಳಲ್ಲಿ ಕೋಶಾವಸ್ಥೆಯಲ್ಲಿರುತ್ತದೆ. ಈ ಕೀಟದ ಚಿಟ್ಟೆ ಬೂದುಮಿಶ್ರಿತ ಕೆಂಪು ಬಣ್ಣ. ರೆಕ್ಕೆಗಳ ಮೇಲೆ ದಟ್ಟ ಕಂದುಬಣ್ಣದ ಅಂಕುಡೊಂಕಾದ ಪಟ್ಟೆಗಳಿರುತ್ತವೆ. ಹೆಣ್ಣು ಚಿಟ್ಟೆಯು ಸುಮಾರು ೧೦೦ರಿಂದ ೧೫೦ ಮೊಟ್ಟೆಗಳನ್ನು ಪ್ರತಿ ಕುಡಿಗಳಲ್ಲಿ ೧ರಿಂದ ೨ರಂತೆ ಇಡುತ್ತದೆ. ೫-೬ ದಿನಗಳಲ್ಲಿ ಮರಿಗಳು ಮೊಟ್ಟೆಯಿಂದ ಹೊರಬಂದು ೧೮ರಿಂದ ೨೦ದಿನಗಳವರೆಗೆ ಕುಡಿಯ ಭಾಗದ ಎಲೆಗಳನ್ನು ತಿಂದು ಜೀವಿಸಿ ಕೋಶಾವಸ್ಥೆಯನ್ನು ತಲುಪುತ್ತವೆ. ಕೋಶಾವಸ್ಥೆಯಲ್ಲಿ ೧೦ರಿಂದ ೧೨ದಿನಗಳಿದ್ದು ಚಿಟ್ಟೆಯಾಗಿ ರೂಪಾಂತರ ಹೊಂದುತ್ತವೆ.

ನಿಯಂತ್ರಣ

ಈ ಕೀಟಬಾಧೆಯ ನಿಯಂತ್ರಣ ಸಾಮಾನ್ಯವಾಗಿ ಒಂದೇ ವಿಧಾನದಿಂದ ಸಾಧ್ಯವಿಲ್ಲ. ಇದಕ್ಕೆ ‘ಸಮಗ್ರ ನಿರ್ವಹಣಾ ಕ್ರಮ’ ಅನುಸರಿಸಬೇಕು. ಮೊದಲು ಕೀಟಬಾಧೆಗೊಳಗಾದ ತೋಟಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿ ಬಾಧಿತ ಭಾಗಗಳನ್ನು ಮರಿಸಹಿತ ಕಿತ್ತು ಶೇ.೦.೫ ಸೋಪಿನ ದ್ರಾವಣದಲ್ಲಿ ಮುಳುಗಿಸಿ ನಾಶಪಡಿಸಬೇಕು. ಹಿಪ್ಪುನೇರಳೆ ತೋಟಗಳನ್ನು ತರಗೆಲೆ, ಒಣಕಡ್ಡಿ ಮತ್ತು ಕಳೆಗಳಿಂದ ಮುಕ್ತಗೊಳಿಸಿ, ಅವುಗಳನ್ನು ಸುಟ್ಟುಹಾಕುವುದರಿಂದ ಕೋಶಗಳನ್ನು ನಾಶಪಡಿಸಬಹುದು.

 • ಈ ಕೀಟಬಾಧೆಯಿರುವ ತೋಟಕ್ಕೆ ಶೇ.೦.೭ರ ಡಿ.ಡಿ.ವಿ.ಪಿ(ನುವಾನ್)ಯನ್ನು ಪ್ರತಿ ಲೀಟರ್ ನೀರಿಗೆ ೧ಮಿ.ಲೀ. ಪ್ರಮಾಣದಲ್ಲಿ ಬೆರೆಸಿ ೧೦ದಿನಗಳ ಅಂತರದಲ್ಲಿ ೨ಬಾರಿ ಸಿಂಪಡಿಸಬೇಕು.
 • ಜೊತೆಗೆ ಜೈವಿಕ ನಿಯಂತ್ರಣ ಕ್ರಮವಾಗಿ ಟಿಹವಾರ್ಡಿ ಎಂಬ ವೈರಿ ಕೀಟಗಳನ್ನು ಎಕರೆಗೆ ಒಂದು ಲಕ್ಷ ಪ್ರಮಾಣದಲ್ಲಿ ಬಿಡುಗಡೆ ಮಾಡಬೇಕು. ಈ ಕೀಟಗಳು ಎಲೆ ಸುರುಳಿ ಕೀಟದ ಕೋಶಗಳನ್ನು ಹೊಕ್ಕು ಅವುಗಳನ್ನು ನಾಶಪಡಿಸುತ್ತವೆ. ಇದರ ಜೊತೆಗೆ ಟಿ.ಕೆಲೋನಿಸ್ ಎಂಬ ಮೊಟ್ಟೆ ಪರಾವಲಂಬಿಯನ್ನು ತೋಟದಲ್ಲಿ ಸೂಕ್ತ ಸಮಯದಲ್ಲಿ ಬಿಡುಗಡೆ ಮಾಡುವುದರಿಂದ ಈ ಕೀಟದ ಹಾವಳಿಯನ್ನು ನಿಯಂತ್ರಿಸಬಹುದು.

) ಬೂಷ್ಟು ತಗಣೆ ರೋಗದ ಲಕ್ಷಣಗಳು, ಹಾನಿ ಹಾಗೂ ಅದರ ನಿರ್ವಹಣೆ ಮಾಡುವ ಬಗೆ ಹೇಗೆ?

ಬೂಷ್ಟು ತಗಣೆ (ಮೀಲಿಬಗ್) ಹಾವಳಿ ಕಾಣಿಸಿಕೊಂಡಾಗ ಸಸ್ಯದ ಕುಡಿಭಾಗವು ವಿಕೃತಗೊಂಡು ಕಾಂಡವು ಚಪ್ಪಟೆಯಾಗುವುದು. ಇದನ್ನೇ ‘ತುಕ್ರ ರೋಗ’ ಎನ್ನುತ್ತಾರೆ. ಇದರಿಂದ ಸೊಪ್ಪಿನ ಗುಣಮಟ್ಟ ಹಾಗೂ ಇಳುವರಿ ಗಣನೀಯವಾಗಿ ಕುಂಠಿತವಾಗುತ್ತದೆ.

ನಿಯಂತ್ರಣ

ಈ ಬೂಷ್ಟು ತಗಣೆಯನ್ನು ನಿಯಂತ್ರಿಸಲು ಸಮಗ್ರ ನಿರ್ವಹಣಾ ವಿಧಾನಗಳನ್ನು ಅನುಸರಿಸಬೇಕು:

 • ಪೀಡೆ ಹಾವಳಿಗೆ ತುತ್ತಾದ ಸಸ್ಯಭಾಗಗಳನ್ನು ಜಾಗ್ರತೆಯಿಂದ ತೆಗೆದು ಸಂಗ್ರಹಿಸಿ ನಾಶಪಡಿಸಬೇಕು.
 • ಹಿಪ್ಪುನೇರಳೆ ತೋಟದ ಸಮೀಪ ಬೆಂಡೆ, ಸೀಬೆ, ಮಾವು, ಸೀತಾಫಲ ಗಿಡಗಳನ್ನು ಬೆಳೆಸದಂತೆ ಎಚ್ಚರಿಕೆ ವಹಿಸುವುದು.
 • ಬಾಧೆ ತೀವ್ರತರವಾಗಿದ್ದರೆ ಶೇ.೦.೨ ಡಿ.ಡಿ.ವಿ.ಪಿ(ನುವಾನ್) ಕೀಟನಾಶಕವನ್ನು ಶೇ.೦.೫ರ ಸಾಬೂನು ದ್ರಾವಣದಲ್ಲಿ ಹತ್ತು ದಿನಗಳ ಅಂತರದಲ್ಲಿ ೨ ಬಾರಿ ಸಿಂಪಡಿಸಬೇಕು.
 • ಜೈವಿಕ ನಿಯಂತ್ರಣಕ್ಕೆ ಕ್ರಿಪ್ಟೊಲಿಮಸ್ ಮಾಂಟಜರಿ ಎಂಬ ಗುಲಗಂಜಿ ಕೀಟವನ್ನು ಸೂಕ್ತ ಸಮಯದಲ್ಲಿ ಎಕರೆಗೆ ೨೦೦ರಂತೆ ವರ್ಷಕ್ಕೆ ೨ ಬಾರಿ (ಜೂನ್/ಜುಲೈ ಹಾಗೂ ನವೆಂಬರ್/ಡಿಸೆಂಬರ್) ತೋಟದಲ್ಲಿ ಬಿಡಬೇಕು. ಇವು ಬೂಷ್ಟು ತಗಣೆಗಳ ಪರಾವಲಂಬಿಯಾಗಿರುವುದರಿಂದ ರೋಗವನ್ನು ಹತೋಟಿಯಲ್ಲಿಡಬಹುದು.

) ಬಿಹಾರದ ಕಂಬಳಿಹುಳು ಹಾವಳಿಯ ಸಮಯ, ಲಕ್ಷಣ ಹಾಗೂ ನಿರ್ವಹಣಾ ಕ್ರಮಗಳಾವುವು?

ಈ ಕೀಟದ ಚಿಟ್ಟೆಗೆ ಬೂದುಬಣ್ಣ, ಇಟ್ಟಿಗೆ ಕೆಂಪು ಬಣ್ಣದ ಹೊಟ್ಟೆ, ಪಕ್ಕದಲ್ಲಿ ಮತ್ತು ಮೇಲ್ಭಾಗದಲ್ಲಿ ಕಪ್ಪಾದ ಚುಕ್ಕೆಗಳು, ಹೆಣ್ಣು ಚಿಟ್ಟೆ ಸುಮಾರು ೧೦೦೦ರಿಂದ ೨೦೦೦ ಮೊಟ್ಟೆಗಳನ್ನು ಸರದಿಯಂತೆ ಎಲೆಗಳ ತಳಭಾಗದಲ್ಲಿಡುತ್ತದೆ. ೫ ರಿಂದ ೭ ದಿನಗಳಲ್ಲಿ ಮರಿಗಳು ಮೊಟ್ಟೆಯಿಂದ ಹೊರಬಂದು ಎಲೆಗಳನ್ನು ಕವರಲು ಪ್ರಾರಂಭಿಸಿ, ಇಡೀ ಗಿಡದ ಸೊಪ್ಪನ್ನು ಹಾಳುಮಾಡುತ್ತದೆ. ಪೂರ್ಣ ಬೆಳೆದ ಕಂಬಳಿಹುಳುಗಳು ಕೆಂಪು ಮಿಶ್ರಿತ ಬೂದುಬಣ್ಣವಿದ್ದು, ೪ಸೆಂ.ಮೀ. ಉದ್ದವಿರುತ್ತವೆ.

ನಿಯಂತ್ರಣ

ಪ್ರಾರಂಭದಲ್ಲೇ ಮೊಟ್ಟೆಯಿಟ್ಟ ಎಲೆಗಳನ್ನು ಗಮನಿಸಿ, ತೆಗೆದು ನಾಶಪಡಿಸಬೇಕು. ರಾತ್ರಿ ವೇಳೆ ಪ್ರಕಾಶಮಾನವಾದ ದೀಪದಡಿಯಲ್ಲಿ ಶೇ.೧ರ ಸೋಪಿನ ದ್ರಾವಣವಿಟ್ಟು ಚಿಟ್ಟೆಗಳನ್ನೆಲ್ಲಾ ಆಕರ್ಷಿಸಿ ನಾಶಪಡಿಸಬೇಕು. ಇವುಗಳ ಬಾಧೆಗೊಳಗಾದ ತೋಟಕ್ಕೆ ಶೇ.೦.೦೭೬ಡಿ.ಡಿ.ವಿ.ಪಿ.(ಸುವಾನ್) ಸಿಂಪಡಿಸಿ, ೭ ರಿಂದ ೮ ತಿಂಗಳುಗಳ ತರುವಾಯ ಸೊಪ್ಪನ್ನು ಹುಳುಸಾಕಣೆಗೆ ಉಪಯೋಗಿಸಬಹುದು. ತೋಟಗಳನ್ನು ಆಳವಾಗಿ ಉಳುಮೆಮಾಡಿ ಬದುಗಳಲ್ಲಿ ಕಳೆಗಳನ್ನು ನಾಶಪಡಿಸಿ ಸ್ವಚ್ಛವಾಗಿಡಬೇಕು.

) ರೆಕ್ಕೆ ಇಲ್ಲದ ಮಿಡತೆ ಹಾವಳಿಯ ಕಾಲ, ಲಕ್ಷಣಗಳು ಹಾನಿ ಹಾಗೂ ನಿರ್ವಹಣಾ ಕ್ರಮಗಳನ್ನು ತಿಳಿಸಿ?

ಈ ಮಿಡತೆಗಳ ಹಾವಳಿ ಸಾಮಾನ್ಯವಾಗಿ ಮೇ, ಜೂನ್ ತಿಂಗಳಿನಲ್ಲಿ ಕೆಲ ಮಳೆ ಆಶ್ರಿತ ಪ್ರದೇಶಗಳಲ್ಲಿ ಕಂಡುಬಂದಿದೆ. ಈ ಮಿಡತೆ ಹಾಗೂ ಅದರ ಮರಿಗಳು ಎಲೆಗಳನ್ನು ತಿಂದು ತೋಟವನ್ನು ಸಂಪೂರ್ಣವಾಗಿ ನಾಶಪಡಿಸುತ್ತವೆ.

ಮಿಡತೆಯ ಹಾವಳಿಯನ್ನು ನಿಯಂತ್ರಿಸಲು:

 • ಹಿಪ್ಪುನೇರಳೆ ತೋಟಗಳನ್ನು ಆಳವಾಗಿ ಉಳುಮೆ ಮಾಡಬೇಕು. ಇದರಿಂದ ಭೂಮಿಯಲ್ಲಿದ್ದ ಮೊಟ್ಟೆಗಳು ಬಿಸಿಲಿಗೆ ಒಣಗಿ ಸಾಯುತ್ತವೆ.
 • ತೋಟದಲ್ಲಿ ಹಾವಳಿ ಹೆಚ್ಚಾದಾಗ ಶೇ.೦.೨ರ ಡಿ.ಡಿ.ವಿ.ಪಿ(ನುವಾನ್) ಸಿಂಪಡಿಸಿ ೧೦ ರಿಂದ ೧೨ ದಿನಗಳನಂತರ ಸೊಪ್ಪನ್ನು ಉಪಯೋಗಿಸಬೇಕು.

) ರೆಂಬೆ ಕತ್ತರಿಸುವ ಹುಳುವಿನ ಹಾವಳಿಯ ಲಕ್ಷಣಗಳು, ಹಾನಿ ಮತ್ತು ಹತೋಟಿಗೆ ಕೈಗೊಳ್ಳಬೇಕಾದ ನಿರ್ವಹಣಾ ಕ್ರಮಗಳಾವುವು?

ರೆಂಬೆ ಕತ್ತರಿಸುವ ಹುಳು ಹಲವು ಬೆಳೆಗಳನ್ನು ತಿಂದು ಬದುಕಬಲ್ಲದು. ಹಾಗೆ ಹಿಪ್ಪುನೇರಳೆ ಸೊಪ್ಪನ್ನೂ ಸಹ ತಿನ್ನುತ್ತದೆ. ಸಾಮಾನ್ಯವಾಗಿ ತರಕಾರಿ ಬೆಳೆಯುವ ಸ್ಥಳಗಳಲ್ಲಿ ಹೆಚ್ಚಾಗಿರುತ್ತದೆ. ಹಿಪ್ಪುನೇರಳೆ ಗಿಡದ ರೆಂಬೆಗಳನ್ನು ಆಕ್ರಮಣಮಾಡಿ ಕತ್ತರಿಸುವುದರಿಂದ ರೆಂಬೆಗಳು ಒಣಗಿಹೋಗುತ್ತವೆ.

ನಿಯಂತ್ರಣ

 • ಮೊಟ್ಟೆ ಮತ್ತು ಮರಿಗಳನ್ನು ಸೇರಿಸಿ ಒಟ್ಟಿಗೆ ನಾಶಪಡಿಸಬೇಕು.
 • ಆಳವಾಗಿ ಉಳುಮೆಮಾಡಬೇಕು. ಇದರಿಂದ ಈ ಕೀಟಗಳು ಹೊರಬರುವಂತಾಗಿ ಶತ್ರುಕೀಟಗಳು/ಪಕ್ಷಿಗಳು ತಿಂದು ಹಾಕಿ ನಾಶವಾಗುತ್ತವೆ.
 • ಪ್ರಕಾಶಮಾನವಾದ ಬೆಳಕಿನಲ್ಲಿ ರಾತ್ರಿ ಸಮಯದಲ್ಲಿ ಆಕರ್ಷಿಸಿ ಕೊಂದುಹಾಕಬಹುದು.
 • ಶೇ.೦.೧೫ರ ಡಿ.ಡಿ.ವಿ.ಪಿ ಕೀಟನಾಶಕವನ್ನು ಸಿಂಪಡಿಸಿ ನಾಶಪಡಿಸಬಹುದು.
 • ಇವುಗಳ ಜೊತೆಗೆ ಸ್ಪೊಡೊಲೂರ್ ಎಂಬ ಪೆರಮೋನ್ ಉಪಯೋಗದಿಂದ ಆಕರ್ಷಿಸಿ ಕೊಲ್ಲಬಹುದು.

) ವಿವಿಧ ಕೀಟನಾಶಕ ಸಿಂಪರಣೆಯನಂತರ ಸೊಪ್ಪು ಕೊಯ್ಲುಮಾಡಲು ಎಷ್ಟು ದಿನಗಳ ಅಂತರ/ಬಿಡುವು ಬೇಕಾಗುತ್ತದೆ?

ವಿವಿಧ ಸಿಂಪರಣೆ ಹಾಗೂ ಹಿಪ್ಪುನೇರಳೆ ಸೊಪ್ಪಿನ ಕೊಯ್ಲಿಗೂ ನಡುವಣ ಬಿಡುವಿನ ಅಂತರದ ವಿವರ ಈ ಕೆಳಗಿನಂತಿರುತ್ತದೆ:

ಸಿಂಪರಣವಸ್ತುಗಳ
ಹೆಸರು

ಸಿಂಪರಣ ದ್ರಾವಣದ ಸಾಂದ್ರತೆ

ಕಾಯಬೇಕಾದ ಅವಧಿ (ದಿನಗಳಲ್ಲಿ)

ಡೆಮಿಟಾನ್

೦.೦೧

೧೧

(ಮೆಟಸಿಸ್ಟಾಕ್ಸ್)

೦.೦೫

೧೩

ಆಲ್‌ಡ್ರಿನ್

೦.೦೧

೧೧

(ಆಲ್‌ಡ್ರೆಕ್ಸ್)

೦.೦೫

೧೩

ಫಾಸ್ಫೊಮಿಡಾನ್

೦.೦೧

೧೧

(ಡಿಮೊಕ್ರಾನ್)

೦.೦೫

೧೩

ಡಿ.ಡಿ.ವಿ.ಪಿ

೦.೦೧

(ಡೈಕ್ಲೊರೋವಾಸ್, ನುವಾನ್)

೦.೦೫

೧೩

ಮೀಥೈಲ್ ಪ್ಯಾರಾಥಿಯಾನ್

೦.೦೧

(ಮೆಟಾಸಿಡ್)

೦.೦೫

೧೩

ಕಾಬೊರಿಲ್

೦.೦೫

(ಸೆವಿಮೊಲ್)

೦.೧೦

೧೧

ಡೈಮಿಥೊಯೇಟ್

೦.೦೫

(ರೋಗರ್)

೦.೧೦

೧೧

ಎಂಡೊಸಲ್ಫಾನ್

೦.೦೫

(ಥಿಯೋಥಾನ್)

೦.೧೦

೧೧

ಬಿ.ಎಚ್.ಸಿ.

೦.೦೫

(ಬಿ.ಎಚ್.ಸಿ)

೦.೧೦

೧೧

ಮೆಲಾಥಿಯಾನ್

೦.೦೫

೧೩

(ಸೈಥಿಯಾನ್)

೦.೧೦

೧೭

(ಆವರಣದಲ್ಲಿರುವುದು ಔಷಧಗಳ ವ್ಯಾಪಾರೀ ಹೆಸರು)

) ಮಾರುಕಟ್ಟೆಯಲ್ಲಿ ದೊರೆಯುವ ಕೀಟನಾಶಕಗಳನ್ನು ಹೇಗೆ ಸಿಂಪರಣೆ ಮಾಡಬೇಕು?

ಮಾರುಕಟ್ಟೆಯಲ್ಲಿ ದೊರೆಯುವ ಔಷಧಗಳನ್ನು ನೇರವಾಗಿ ಸಿಂಪರಣೆ ಮಾಡಲಾಗುವುದಿಲ್ಲ. ಅವು ಹೆ‌ಚ್ಚು ಸಾರವರ್ಧಿತವಾಗಿರುತ್ತವೆ. ಅವುಗಳನ್ನು ಹೆಚ್ಚಿನ ವಿಸ್ತೀರ್ಣಕ್ಕೆ ಸಿಂಪರಣೆ ಮಾಡಬೇಕಾಗಿರುವುದರಿಂದ ಹಾಗೂ ಅಷ್ಟೊಂದು ತೀಕ್ಷ್ಣ ಸಾರಪ್ರಮಾಣ ಬೇಕಾಗಿಲ್ಲದಿರುವುದರಿಂದ ಸಾಮಾನ್ಯವಾಗಿ ನಿಗದಿತ ಪ್ರಮಾಣದಲ್ಲಿ ಮಿಶ್ರಣ ಮಾಡಿಕೊಳ್ಳಬೇಕು. ಅದಕ್ಕಾಗಿ ಈ ಕೆಳಗಿನ ಸೂತ್ರವನ್ನು ಬಳಸಬಹುದು:

)     ಡಿ = x ಬಿ / ಸಿ

ಎ = ಶಿಫಾರಸ್ಸು ಮಾಡಿದ ಶೇಕಡಾವಾರು ವಿಷಕಾರಿ ಘಟಕ

ಬಿ = ಸಿಂಪರಣೆಗೆ ಬೇಕಾದ ಧೂಳು ಅಥವಾ ದ್ರಾವಣದ ತೂಕ

ಸಿ = ಮಾರುಕಟ್ಟೆಯಲ್ಲಿ ದೊರೆಯುವ ಔಷಧಿಗಳಲ್ಲಿರುವ ಶೇ.ವಿಷಕಾರಿ ಅಂಶ

ಡಿ = ಬೇಕಾದ ಔಷಧ (ಮಾರುಕಟ್ಟೆಯಲ್ಲಿ ದೊರೆಯುವ ತೂಕ ಅಥವಾ ಗಾತ್ರ)

ಆ) ಲೆಕ್ಕಾಚಾರದಲ್ಲಿ ಸಾರವರ್ಧಿತ ಔಷಧಿ ಎಷ್ಟು ಬೇಕೆಂದು ತಿಳಿದುಕೊಂಡ ಮೇಲೆ ಇದರ ಜೊತೆ ಮಿಶ್ರಣಮಡಿಕೊಳ್ಳಬೇಕಾದ ಧೂಳು ಅಥವಾ ದ್ರವ (ಸಿ), ತಿಳಿಯಲು ಈ ಕೆಳಗಿನ ರೀತಿ ಲೆಕ್ಕಹಾಕಬೇಕು.

        ಬಿಡಿ = ಸಿ

ಹೀಗೆ ಡಿ ಇಂದ ಬಂದ ಸಾರವರ್ಧಿತ ಔಷಧ ಮತ್ತು ಸಿ ಇಂದ ಬಂದ ಧೂಳು ಅಥವಾ ದ್ರವದ ಮಿಶ್ರಣಮಾಡಿ ಧೂಳಿಸಬಹುದು/ಸಿಂಪರಣೆ ಮಾಡಬಹುದು.

ಉದಾಹರಣೆ

ಶೇ.೩೦ ಸಿ ಇರುವ ಡೈಮಿಥೋಯೇಟ್ ಅನ್ನು ಶೇ.೦.೨ರಂತೆ ೧೫೦ಲೀ. ತಯಾರಿಸುವ ಬಗೆ-

ಎ = ಶೇ.೦.೨ಡೈಮಿಥೋಯೇಟ್

ಬಿ = ೧೫೦ಲೀಟರ್

ಸಿ = ಶೇ.೩೦

ಡಿ = ೦.೨ x ೧೫೦ / ೩೦ = ೧.೦ಲೀ.(ಡಿ)

೧೫೦-೧ = ೧೪ಲೀ.

ಶೇ.೦.೨ರ ೧೫೦ಲೀ. ದ್ರಾವಣ ಪಡೆಯಲು ೧ಲೀ. ಸೈಮಿಥೋಯೇಟ್ ಅನ್ನು ೧೪೯ಲೀ. ಸೇರಿಸಿ ಮಿಶ್ರಣ ಮಾಡಿಕೊಳ್ಳಬೇಕು.

ಮಾರುಕಟ್ಟೆಯಲ್ಲಿ ದೊರೆಯುವ ಔಷಧವು ಪುಡಿರೂಪದಲ್ಲಿದ್ದರೆ ಕೆಳಗಿನಂತೆ ಹಾಕಬೇಕು:

ಉದಾ: ಶೇ.೫೦ರ ಬಿ.ಎಚ್.ಸಿ ಔಷಧಿಯನ್ನು ಶೇ.೦.೫ರಂತೆ ೨೦೦ಲೀ. ತಯಾರಿಸಲು ಈ ಮುಂದಿನಂತೆ ಮಾಡಬೇಕು:

೦.೫ x ೨೦೦(ಡಿ) / ೫೦ = ೨.೦೦ ಕಿ.ಗ್ರಾಂ

ಶೇ.೫೦ರ ೨ಕಿ.ಗ್ರಾಂ ಬಿ.ಎಚ್.ಸಿಯನ್ನು ೨೦೦ಲೀ. ನೀರಿಗೆ ಸೇರಿಸಿ ಮಿಶ್ರಣ ಮಾಡಿಕೊಳ್ಳಬೇಕು.