೨೦) ಹಿಪ್ಪುನೇರಳೆ ಬೇಸಾಯದಲ್ಲಿ ಪ್ರೆಸ್ಮಡ್ (ಕಬ್ಬಿನ ಹಿಂಡಿ) ಹಾಗೂ ಜಿಪ್ಸಂಗಳನ್ನು ಏಕೆ ಬಳಸಬೇಕು? ಅದರಿಂದಾಗುವ ಪ್ರಯೋಜನಗಳೇನು?

ಪ್ರೆಸ್ ಮಡ್ (ಕಬ್ಬಿನ ಹಿಂಡಿ)

 • ಕಬ್ಬಿನ ಹಿಂಡಿಯ ಸಕ್ಕರೆ ಉದ್ಯಮದ ಒಂದು ಉಪಉತ್ಪನ್ನ.
 • ಇದರಲ್ಲಿ ಶೇ.೧.೨ ಸಾರಜನಕ, ೨.೨ರಂಜಕ, ಮತ್ತು ೦.೪೨ ಪೊಟ್ಯಾಷ್ ಜೊತೆಗೆ ಹಲವು ಲಘುಪೋಷಕಾಂಶಗಳೂ ಇರುತ್ತವೆ.
 • ಇದನ್ನು ಬಳಸುವುದರಿಂದ ಮಣ್ಣಿನ ಸವಕಳಿ ತಡೆಯುತ್ತದೆ.
 • ರಸಸಾರವನ್ನು ಸರಿಹೊಂದಿಸುತ್ತದೆ.
 • ನೀರಿನ ಕೆಳಹರಿವನ್ನು ಮಣ್ಣಿನ ಪದರಗಳಲ್ಲಿ ಉತ್ತಮಗೊಳಿಸುತ್ತದೆ.
 • ಮಣ್ಣು ಹೆಪ್ಪುಕಟ್ಟುವುದು ಮತ್ತು ಬಿರುಕುಬಿಡುವುದು ತಡೆಯುತ್ತದೆ.
 • ಸ್ವಾಭಾವಿಕ ಬ್ಯಾಕ್ಟೀರಿಯಾಗಳ ಸಂತತಿ ವೃದ್ಧಿಯಾಗುತ್ತದೆ.
 • ಕ್ಷಾರೀಯ ಕೆಂಪು ಮಣ್ಣಿನಲ್ಲಿ ಬೇಸಾಯಮಾಡಲು ಕಬ್ಬಿನಹಿಂಡಿ ಒಂದು ಸುಲಭದ, ಕಡಿಮೆ ವೆಚ್ಚದ ವಿಧಾನ.
 • ಒಂದು ಹೆಕ್ಟೇರಿಗೆ ೪೦ಟನ್ ಹಿಂಡಿ ಹರಡಿ ಉಳುಮೆಮಾಡಿ ನೀರು ಹಾಯಿಸಬೇಕು.
 • ಪ್ರಾಯೋಗಿಕವಾಗಿ ರಸಸಾರ(ಪಿ.ಎಚ್.) ೮.೫೫ ರಿಂದ ೭.೬ಕ್ಕೆ ಸುಧಾರಿಸಿರುತ್ತದೆ; ಇದರಿಂದ ವರ್ಷಕ್ಕೆ ಹೆಕ್ಟೇರಿಗೆ ೭,೮೫೪ ಕಿ.ಗ್ರಾಂ ಗಳಷ್ಟು ಹೆಚ್ಚುವರಿ ಸೊಪ್ಪು ದೊರೆಯುತ್ತದೆ.

ಜಿಪ್ಸಂ

 • ಕ್ಷಾರ ಮಣ್ಣಿನ ರಸಸಾರವನ್ನು ಸರಿಪಡಿಸಿ ಕೃಷಿಯೋಗ್ಯವಾಗಿಸಲು ಬಳಸುವ ಸಾಮಾನ್ಯ ತಿದ್ದುಪಡಿ ಸರದೂಗಿಕ ಲವಣ.
 • ಬಳಸಬೇಕಾದ ಪ್ರಮಾಣವು, ಸರಿಪಡಿಸಬೇಕಿರುವ ಮಣ್ಣಿನ ರಸಸಾರ, ಮಣ್ಣು ಮತ್ತು ಉದ್ದೇಶಿತ ಬೆಳೆಗೆ ಅನುಗುಣವಾಗಿರುತ್ತದೆ.
 • ಜಿಪ್ಸಂ ಪುಡಿ ಪುಡಿಯಾಗಿರಬೇಕು. ಎರಡು ಮಿ.ಮೀ. ಕಣ್ಣಿನ ಅಳತೆಯ ಜರಡಿಯಲ್ಲಿ ಹಿಡಿದದ್ದು ಉತ್ತಮ.
 • ಮಣ್ಣಿನಲ್ಲಿ ನಿಗದಿತ ಪ್ರಮಾಣದ ಜಿಪ್ಸಂ ಹರಡಿ, ನೀರು ಹಾಯಿಸಬೇಕು. ೮,೫೫ ರಸಸಾರವಿದ್ದ ಕೆಂಪು ಮಣ್ಣಿಗೆ ಹೆಕ್ಟೇರಿಗೆ ೮ಟನ್ ಪ್ರಮಾಣದಲ್ಲಿ ಜಿಪ್ಸಂ ಅನ್ನು ಸೇರಿಸಿದಾಗ ರಸಸಾರ ೭.೪೫ಕ್ಕೆ ಸುಧಾರಿಸಿತು ಮತ್ತು ವರ್ಷಕ್ಕೆ ಹೆಕ್ಟೇರಿಗೆ ೧೦೪೩೬ ಕಿ.ಗ್ರಾಂ ಸೊಪ್ಪಿನ ಇಳುವರಿ ಹೆಚ್ಚಿದ್ದು ಕಂಡುಬಂದಿದೆ.

೨೧) ಹಸುರೆಲೆ ಗೊಬ್ಬರಗಳ ಬೇಸಾಯ ಮತ್ತು ಬಳಕೆಯಿಂದಾಗುವ ಅಕೂಲತೆಗಳೇನು?

ಜೂನ್-ಜುಲೈ ತಿಂಗಳಲ್ಲಿ ಮುಂಗಾರು ಆರಂಭವಾದಾಗ ಬುಡ ಕಟಾವು ಮಾಡಿ ಅಂತರ ಬೇಸಾಯ ಕ್ರಮಗಳನ್ನು ಕೈಗೊಂಡನಂತರ ಹಸುರು ಗೊಬ್ಬರದ ಬೀಜಗಳನ್ನು (ಹಲಸಂದೆ, ಹುರಳಿ) ಎರಚಿ ಬಿತ್ತಬೇಕು.

 • ಬಿತ್ತಿದ ೪೫ ರಿಂದ ೫೦ ದಿನಗಳಲ್ಲಿ(ಆಗಸ್ಟ್-ಸೆಪ್ಟೆಂಬರ್) ನಾಟಿ ನೇಗಿಲಿನಿಂದ ಆಳಕ್ಕೆ (೧೫ ರಿಂದ ೨೦ಸೆಂ.ಮೀ.) ಉತ್ತು ಭೂಮಿಗೆ ಸೇರಿಸಬೇಕು.

ಅನುಕೂಲತೆಗಳು

ಉಚಿತವಾಗಿ ಲಭ್ಯವಿರುವ ಗಾಳಿ, ಬೆಳಕು ಮತ್ತು ನೀರಿನ ಸೌಲಭ್ಯಗಳಿಂದಲೇ ಬೆಳೆಸಿ ಪೋಷಕಾಂಶಗಳನ್ನು ಒದಗಿಸಬಹುದು.

ಹಸುರೆಲೆ/ಹಸುರು ಗಿಡಗಳನ್ನು ಭೂಮಿಗೆ ಸೇರಿಸುವುದರಿಂದ ಭೂಮಿಯ ಫಲವತ್ತತೆ ಹೆಚ್ಚುತ್ತದೆ. ಆದುದರಿಂದ ಮಣ್ಣಿನ ತೇವಾಂಶ ಹಿಡಿದಿಟ್ಟುಕೊಳ್ಳುವ ಶಕ್ತಿ ಹೆಚ್ಚುತ್ತದೆ.

ಭೂಮಿಯ ರಸಸಾರ ಉತ್ತಮವಾಗುತ್ತದೆ. ಇದರಿಂದ ಸಸ್ಯಗಳಿಗೆ ಪೋಷಕಾಂಶಗಳು ಚೆನ್ನಾಗಿ ಸಿಗುತ್ತವೆ.

ಮಣ್ಣಿನ ರೂಪರಚನೆ (ಟೆಕ್ಷ್‌ಚರ್) ಕೂಡ ಉತ್ತಮಗೊಳ್ಳುತ್ತದೆ.

೨೨) ಹಿಪ್ಪುನೇರಳೆಯಲ್ಲಿ ಲಘು ಪೋಷಕಾಂಶಗಳ ಕೊರತೆಯನ್ನು ಹೇಗೆ ನಿವಾರಿಸಬೇಕು?

ಲಘುಪೋಷಕಾಂಶಗಳ ಕೊರತೆ ಇದ್ದಾಗ, ಹಿಪ್ಪು ನೇರಳೆ ಸೊಪ್ಪಿನ ಇಳುವರಿ ಮತ್ತು ಗುಣಮಟ್ಟದ ಮೇಲೆ ಪರಿಣಾಮವುಂಟಾಗುತ್ತದೆ. ಆದಕಾರಣ ಇವುಗಳ ಕೊರತೆಯನ್ನು ನಿವಾರಿಸಲು ಇತ್ತೀಚೆಗೆ ಮಾರುಕಟ್ಟೆಯಲ್ಲಿ ಕೆಲವು ಎಲೆ ಸಿಂಪರಕಗಳು ದೊರೆಯುತ್ತಿವೆ. ಇವುಗಳನ್ನು ಸಿಂಪರಿಸುವುದರಿಂದ ಸತು, ತಾಮ್ರ, ಕಬ್ಬಿಣ, ಮ್ಯಾಂಗನೀಸ್, ಮೆಗ್ನೇಷಿಯಂ, ಮಾಲಿಬ್ಡಿನಮ್ ಮತ್ತು ಬೋರಾನ್ ದೊರೆಯುತ್ತವೆ. ಇವುಗಳನ್ನು ನೇರವಾಗಿ ಎಲೆಯ ಮೇಲೆ ಸಿಂಪಡಿಸುವುದರಿಂದ:

 • ಗಿಡಗಳು ಲಘುಪೋಷಕಾಂಶಗಳ ಕೊರತೆಯಿಂದ ಚೇತರಿಸಿಕೊಳ್ಳುತ್ತವೆ.
 • ಕಡಿಮೆ ಖರ್ಚು ತಗಲುತ್ತದೆ.
 • ರಾಸಾಯನಿಕ ಗೊಬ್ಬರ/ದ್ರಾವಣ ಹೆಚ್ಚು ಪೋಲಾಗುವುದಿಲ್ಲ.
 • ಹೆಚ್ಚಿನ ಗುಣಮಟ್ಟದ ಎಲೆ ಇಳುವರಿ ದೊರೆಯುತ್ತದೆ.

ಲಘು ಪೋಷಕಾಂಶಗಳನ್ನು ಮಣ್ಣಿಗೂ ಸೇರಿಸಬಹುದು. ಮಣ್ಣಿಗೆ ಸೇರಿಸಬೇಕಾಗಿರುವ ಪೋಷಕಾಂಶಗಳು ಪುಡಿ ರೂಪದಲ್ಲಿರುತ್ತವೆ. ಇವುಗಳ ಬಳಕೆಯಿಂದ:

 • ಖರ್ಚು ಹೆಚ್ಚುತ್ತದೆ.
 • ಹಾಕಿದ ಗೊಬ್ಬರ/ಲಘುಪೋಷಕಾಂಶದ ಗೊಬ್ಬರ ಆವಿಯಾಗಬಹುದು ಅಥವಾ ಮಣ್ಣಿನಲ್ಲಿ ಕಣಗಳು ಹಿಡಿದಿಟ್ಟುಕೊಳ್ಳಬಹುದು. ಇದರಿಂದ ಶೇ.೫೦ರಷ್ಟು ಪೋಲಾಗುವ ಸಾಧ್ಯತೆ ಇರುತ್ತದೆ.
 • ಗಿಡಗಳು ಚೇತರಿಸಿಕೊಳ್ಳುವುದಕ್ಕೆ ಹೆಚ್ಚಿನ ಸಮಯ ಬೇಕಾಗುತ್ತದೆ.

ಇದೆಲ್ಲ ಕಾರಣಗಳಿಂದ ಎಲೆ ಸಿಂಪರಣೆ ಮಾಡುವುದೇ ಸೂಕ್ತ. ಮಾರುಕಟ್ಟೆಯಲ್ಲಿ ಈ ಎಲ್ಲಾ ಲಘು ಪೋಷಕಾಂಶಗಳನ್ನು ಒದಗಿಸಬಲ್ಲ ಕೆಲವು ರಾಸಾಯನಿಕಗಳು ದೊರೆಯುತ್ತವೆ. ಇವುಗಳನ್ನು ತಯಾರಕರು ಸೂಚಿಸಿರುವ ಕ್ರಮ/ರೀತಿಯಲ್ಲಿ ಸಿಂಪರಿಸಬೇಕು.

೨೩) ಹಿಪ್ಪುನೇರಳೆ ಬೆಳೆಯಲ್ಲಿ ಮಾಡಬೇಕಾದ ಕಳೆ ನಿಯಂತ್ರಣ ಕ್ರಮಗಳೇನು? ವಿವರಿಸಿ?

ಯಾವುದೇ ಬೆಳೆಯಲ್ಲೂ ಕಳೆ ನಿರ್ಮೂಲನೆ ಮಾಡದಿದ್ದಲ್ಲಿ ಇಳುವರಿಯು ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗುತ್ತದೆ. ಕಳೆಗಳು ಬೆಳೆಗೆ ಹಾಕಿದ ಪೋಷಕಾಂಶಗಳನ್ನೆಲ್ಲಾ ಹೀರಿಕೊಂಡು ಬೆಳೆಯ ಜೊತೆ ಪೈಪೋಟಿ ನಡೆಸುವುದರ ಜೊತೆಗೆ ಕೀಟಗಳಿಗೆ ಆಶ್ರಯತಾಣವಾಗುತ್ತವೆ. ಆದ್ದರಿಂದ ಹಿಪ್ಪುನೇರಳೆಯಲ್ಲಿ ಕಳೆ ತೆಗೆಯುವುದು ಅನಿವಾರ್ಯ. ಸಾಮಾನ್ಯವಾಗಿ ಗುದ್ದಲಿಯಿಂದ ಅಗೆದು ಕಳೆ ತೆಗೆಯುವುದು ಮತ್ತು ನೇಗಿಲಿನಿಂದ ಉಳುಮೆ ಮಾಡುವುದು ರೂಢಿಯಲ್ಲಿದ್ದು, ಇದರಿಂದ ಸ್ವಲ್ಪಮಟ್ಟಿನ ಕಳೆ ನಿಯಂತ್ರಣ ಮಾಡಬಹುದು. ಆದರೆ ತುಂಗೆ, ಗರಿಕೆ ಮತ್ತು ಕಾಡು ಈರುಳ್ಳಿಗಳಂಥ ಕಳೆಗಳನ್ನು ಸಂಪೂರ್ಣವಾಗಿ ತೆಗೆಯುವುದು ಕಷ್ಟಸಾಧ್ಯ. ಅಲ್ಲದೆ ಗಿಡಗಳ ಮಧ್ಯೆ ಅಂತರ ಕಡಿಮೆ ಇದ್ದು ಆಳವಾಗಿ ಉಳುವುದೂ ಕಷ್ಟ. ಆಳಿನ ಕೂಲಿ ಹೆಚ್ಚಿದ್ದು ಅಗೆದು ಕಳೆ ತೆಗೆಯುವುದಕ್ಕೂ ಹೆಚ್ಚು ಖರ್ಚಾಗುತ್ತದೆ. ಜೊತೆಗೆ ಕೆಲಸಗಾರರು ದೊರೆಯುವುದೂ ಕಷ್ಟ. ಆದ್ದರಿಂದ ಕಳೆ ನಿಯಂತ್ರಣಕ್ಕೆ ಗ್ಲೈಸಿಲ್/ರೌಂಡ್ ಆಫ್ ಎನ್ನುವ ರಾಸಾಯನಿಕ ಕಳೆನಾಶಕವನ್ನು ಉಪಯೋಗಿಸಬಹುದು.

ಹಿಪ್ಪುನೇರಳೆ ತೋಟದಲ್ಲಿ ಗ್ಲೈಸಿಲ್ ಕಳೆನಾಶಕವನ್ನು ಶೇ.೦.೭ರಷ್ಟು ಮಿಶ್ರಣ ಮಾಡಿ ಈ ಮಿಶ್ರಣಕ್ಕೆ ಪ್ರತಿ ಲೀ.ಗೆ ೫ಗ್ರಾಂ ಅಮೋನಿಯಂ ಸಲ್ಫೇಟ್ ಬೆರೆಸಿ ಸಿಂಪಡಿಸಿ ಕಳೆ ನಾಶಪಡಿಸಬಹುದು.

 • ಕಡ್ಡಿ ಕಟಾವು ಮಾಡಿದ ೨ ರಿಂದ ೩ ದಿನಗಳೊಳಗೆ ಅಲ್ಲಲ್ಲಿ ಉಳಿದುಹೋಗಿರುವ ಎಲೆಗಳನ್ನು ತೆಗೆದು ಸ್ವಚ್ಛಮಾಡಿ ಸಿಂಪರಣೆ ಪಂಪಿಗೆ ಆಸ್ಫೀ ಫ್ಯಾನ್ ನಾಜಲ್ ಅಳವಡಿಸಿ ಸಾಲುಗಳ ಮಧ್ಯೆ ಸಿಂಪರಣೆ ಮಾಡಬೇಕು.

೨೪) ತೋಟದಲ್ಲಿ ಸಾರಜನಕ, ರಂಜಕ, ಪೊಟ್ಯಾಷ್ ಪೋಷಕಾಂಶಗಳ ಕೊರತೆಯನ್ನು ಪತ್ತೆ ಹಚ್ಚುವುದು ಹೇಗೆ?

) ಸಾರಜನಕದ ಕೊರತೆ:ಎಲೆಗಳು ಹಳದಿ ಅಥವಾ ತಿಳಿಹಸುರು ಬಣ್ಣಕ್ಕೆ ತಿರುಗುತ್ತವೆ. ಇದರಿಂದ ಪ್ರೊಟೀನ್ ತಯಾರಿಕೆ ಕುಂಠಿತವಾಗುತ್ತದೆ.

) ರಂಜಕ : ಸಸ್ಯದ ಬೇರುಗಳ ಬೆಳವಣಿಗೆ ಕುಂಠಿತವಾಗಿ, ಇತರೆ ಎಲ್ಲಾ ಚಟುವಟಿಕೆಗಳೂ ಕುಸಿಯುತ್ತವೆ.

) ಪೊಟ್ಯಾಷಿಯಂ : ಎಲೆಗಳು ಹಳದಿ ಅಥವಾ ಕಂದು ಬಣ್ಣಕ್ಕೆ ತಿರುಗಿ, ಬೇಗ ಹಣ್ಣೆಲೆ ಕಾಣಿಸಿಕೊಂಡು, ಸಸ್ಯಗಳ ರೋಗನಿರೋಧಕ ಶಕ್ತಿ ಕುಂಠಿತಗೊಳ್ಳುವುದು.

೨೫) ಕೋಳಿಗೊಬ್ಬರ ಹಿಪ್ಪುನೇರಳೆ ತೋಟಕ್ಕೆ ಯೋಗ್ಯವೆ? ಅದನ್ನು ಹೇಗೆ ಬಳಸಿಕೊಳ್ಳಬೇಕು?

ಕೋಳಿಗೊಬ್ಬರದಲ್ಲಿ ಶೇ. ೦.೫ ರಿಂದ ೪.೦ರಷ್ಟು ಸಾರಜನಕ, ಶೇ.೦.೯ ರಿಂದ ೨.೦ರಷ್ಟು ರಂಜಕ ಮತ್ತು ಶೇ.೦.೩ರಿಂದ ೩.೦ರಷ್ಟು ಪೊಟ್ಯಾಷ್ ಇರುತ್ತದೆ. ಇದನ್ನು ಕಾಂಪೋಸ್ಟ್ ಮಾಡಿ ಬಳಸಬಹುದು. ಆದರೆ ಮುನ್ನೆಚ್ಚರಿಕೆಯಾಗಿ ಇದು ಸಂಪೂರ್ಣವಾಗಿ ಉಳಿಯಲು ಸಾಕಷ್ಟು ಕಾಲಾವಕಾಸ ನೀಡಬೇಕು. ಅನಂತರ ತೋಟಕ್ಕೆ ಹಾಕುವಾಗ ಕನಿಷ್ಠ ೧:೪ ಅನುಪಾತದಲ್ಲಿ ಕೋಳಿಗೊಬ್ಬರದ ಕಾಂಪೋಸ್ಟ್ ಮತ್ತು ಕೊಟ್ಟಿಗೆ ಗೊಬ್ಬರ ಮಿಶ್ರಣಮಾಡಿ ಮಣ್ಣಿಗೆ ಸೇರಿಸಬೇಕು.

೨೬) ರೇಷ್ಮೆ ಹುಳುವಿನ ಹಿಕ್ಕೆಮತ್ತು ತಿಂದು ಉಳಿದ ಎಲೆಗಳಿಂದ ಜೈವಿಕ ಅನಿಲ ಉತ್ಪಾದನೆ ಹಾಗೂ ಎರೆಗೊಬ್ಬರ ತಯಾರಿಸುವ ಬಗೆ ವಿವರಿಸಿ?

ಮೊದಲಿಗೆ ಗ್ರಾಮೋದ್ಯೋಗ ಸಂಸ್ಥೆಯವರು ರೂಪಿಸಿರುವ ತೇಲುವ ಗೋಳಾಕಾರದ ಜೈವಿಕ ಅನಿಲ ಘಟಕವನ್ನು ನಿರ್ಮಿಸಬೇಕು. ಪ್ರಾರಂಭದಲ್ಲಿ ದನಗಳ ಸಗಣಿಯನ್ನು ಸೇರಿಸಿ, ಒಂದು ತಿಂಗಳನಂತರ ದಿನವೊಂದಕ್ಕೆ ೩೦ರಿಂದ ೪೦ಕಿ.ಗ್ರಾಂ ರೇಷ್ಮೆಹುಳುವಿ ಹಿಕ್ಕೆ ಮತ್ತು ತಿಂದುಳಿದ ಎಲೆಗಳನ್ನು ೧ಕಿ.ಗ್ರಾಂ ಕಸಕ್ಕೆ ೨ಲೀ. ನೀರನ್ನು ಸೇರಿಸಿ ಚೆನ್ನಾಗಿ ಮಿಶ್ರಣಮಾಡಿ ಜೈವಿಕ ಅನಿಲದ ಕೊಳವೆ ಮೂಲಕ ಸೇರಿಸಬೇಕು. ೨೪ರಿಂದ ೩೦ಗಂಟೆಗಳ ಒಳಗೆ ಅನಿಲವು ಉತ್ಪತ್ತಿಯಗುತ್ತದೆ.

ಪ್ರಯೋಜನಗಳು

 • ೩೦ರಿಂದ ೪೦ಕಿ.ಗ್ರಾಂ ರೇಷ್ಮೆ ಹುಳುವಿನ ಹಿಕ್ಕೆ ಮತ್ತು ತಿಂದು ಉಳಿದ ಎಲೆಗಳಿಂದ ದಿನ ಒಂದಕ್ಕೆ ೧.೭ಘನ ಮೀಟರ್ ಅನಿಲ ಉತ್ಪತ್ತಿಯಾಗುತ್ತದೆ. ಇದು ೪ರಿಂದ ೫ಜನರಿರುವ ಕುಟುಂಬಕ್ಕೆ ಸಾಕಾಗುತ್ತದೆ. ಈ ಅನಿಲದಲ್ಲಿ ಅಡುಗೆ ಅನಿಲದಷ್ಟು ಶಕ್ತಿ ಇರುತ್ತದೆ.
 • ಜೈವಿಕ ಘಟಕದಿಂದ ಬರುವ ಮಡ್ಡಿಯಲ್ಲಿ ಕೊಟ್ಟಿಗೆ ಗೊಬ್ಬರಕ್ಕಿಂತ ೪ ರಿಂದ ೫ ಪಟ್ಟು ಹೆಚ್ಚು ಪೋಷಕಾಂಶಗಳಿರುತ್ತವೆ.
 • ೧೦೦ ಮೊಟ್ಟೆಗಳ ಹುಳುಸಾಕಣೆಯಿಂದ ೨೦ ಘನ ಮೀಟರ್ ಅನಿಲವನ್ನು ಉತ್ಪತ್ತಿ ಮಾಡಬಹುದು. ಎಂದರೆ, ಎಕರೆ ಒಂದಕ್ಕೆ ವರ್ಷಕ್ಕೆ ೨೦೦ಘನ ಮೀಟರ್ ಅನಿಲ ಉತ್ಪತ್ತಿಯಾಗುತ್ತದೆ. ಈ ಅನಿಲವನ್ನು ದೀಪಗಳನ್ನು ಬೆಳಗಿಸಲು ಬಳಸಬಹುದು.

ಎರೆಹುಳು ಗೊಬ್ಬರ ತಯಾರಿಕೆ

 • ಎರೆ ಹುಳುವನ್ನು ಪ್ರಾಕೃತಿಕ ನೇಗಿಲು ಮತ್ತು ಭೂಮಿಯ ಕರುಳು ಎಂದು ಬಣ್ಣಿಸಲಾಗಿದೆ.
 • ಮೊದಲು ರೇಷ್ಮೆ ಹುಳುವಿನ ಹಿಕ್ಕೆ. ಹುಳುವಿನ ಹಾಸಿಗೆಯಲ್ಲಿ ತಿಂದುಳಿದ ಎಲೆಗಳು ಮತ್ತಿತರ ಸಾವಯವ ವಸ್ತುಗಳನ್ನು ಗುಂಡಿಯಲ್ಲಿ ಹಾಕಿ ಚೆನ್ನಾಗಿ ನೀರು ಸುರಿದು ೧೦ರಿಂದ ೧೫ದಿನಗಳವರೆಗೆ ಕೊಳೆಸಬೇಕು. ಇದರ ಜೊತೆಗೆ ಸಗಣಿ ಅಥವಾ ಜೈವಿಕ ಅನಿಲದ ಮಡ್ಡಿ ಸಹ ಸೇರಿಸಬೇಕು. ಇದರಲ್ಲಿ ಯುಡ್ರಿಲಸ್ ಯೂಜಿನಿಯ, ಐಸೀನಿಯಾ ಪೀಟೆಡಾ ಜಾತಿ ಎರೆಹುಳುಗಳನ್ನು ಬಿಡಬೇಕು.
 • ಆ ಗುಂಡಿಯ ಸುತ್ತ ಇರುವೆಗಳು ಬಾರದಂತೆ ೩ ಅಡಿ ಅಂತರದಲ್ಲಿ ಡಿ.ಡಿ.ಟಿ. ಪುಡಿ ಹಾಕಬೇಕು. ಪ್ರತಿ ಒಂದು ಕಿ.ಗ್ರಾಂ. ಎರೆಹುಳು ೫ಕಿ.ಗ್ರಾಂ ಪದಾರ್ಥ ತಿಂದು ಜೀರ್ಣಿಸುತ್ತವೆ. ಹೀಗಾಗಿ ಒಂದು ಚದರ ಮೀಟರಿಗೆ ೧೦೦೦ದಿಂದ ೨೦೦೦ ಹುಳುಗಳನ್ನು ಬಿಡಬಹುದು.
 • ಹೀಗೆ ೪೦ರಿಂದ ೫೦ ದಿನಗಳೊಳಗೆ ಸಾವಯವ ಪದಾರ್ಥಗಳನ್ನು ತಿಂದು ಮರಳಿನಂತೆ ಗೋಚರಿಸುವ ಹಿಕ್ಕೆಗಳಾಗಿ ಪರಿವರ್ತಿಸುತ್ತವೆ. ಇದನ್ನು ನೆರಳಿನಲ್ಲಿ ರಾಶಿ ಹಾಕಿ ೨೪ ಗಂಟೆಗಳನಂತರ ಎರೆಹುಳುಗಳು ತಳ ಸೇರಿದನಂತರ ಮೇಲಿನ ಗೊಬ್ಬರ ತೆಗೆದುಕೊಳ್ಳಬಹುದು. ಅನಂತರ ಜರಡಿ ಹಿಡಿಯುವುದರಿಂದ ಹಿಕ್ಕೆ ಕೆಳಗೆ ಬರುತ್ತವೆ. ಸಣ್ಣ ಮರಿಗಳು ಮತ್ತು ಕೋಶಗಳು ಮಾತ್ರ ಜರಡಿಯಲ್ಲಿ ಉಳಿಯುತ್ತವೆ. ಅದನ್ನು ಮತ್ತೆ ಎರೆಹುಳು ಗೊಬ್ಬರ ತಯಾರಿಕೆಯಲ್ಲಿ ಉಪಯೋಗಿಸಬಹುದು.

೨೭) ಹಿಪ್ಪುನೇರಳೆ ಎಲೆಗಳ ಮೇಲೆ ಸತುವಿನ ದ್ರಾವಣದ ಸಿಂಪರಣೆ ಮಾಡುವುದರ ಪ್ರಾಮುಖ್ಯತೆಯೇನು?

ಹಿಪ್ಪುನೇರಳೆ ತೋಟದ ಮಣ್ಣಿನಲ್ಲಿ ಸತುವಿನ ಕೊರತೆಯಿದ್ದಾಗ ಎಲೆಗಳಲ್ಲಿ ಸಣ್ಣಕಪ್ಪು ಅಥವಾ ಕಂದು ಬಣ್ಣದ ಚುಕ್ಕೆಗಳು ಉಂಟಾಗುತ್ತವೆ. ಎಲೆಗಳು ಹರಿತ್ತಿನ ಅಭಾವದಿಂದ ಹಳದಿಯಾಗುತ್ತೆ ಹಾಗೂ ಎಲೆನರಗಳು ಕಂದುಬಣ್ಣಕ್ಕೆ ತಿರುಗುತ್ತವೆ. ಇದು ಸಾಮಾನ್ಯವಾಗಿ ತುಸು ಕ್ಷಾರ ಹಾಗೂ ಸೂಕ್ಷ್ಮಪೋಷಕಾಂಶಗಳ ಕೊರತೆಯಿರುವ ಮಣ್ಣಿನ ತೋಟದಲ್ಲಿ ಕಾಣಿಸಿಕೊಳ್ಳುತ್ತದೆ.

ನೀಡಿಕೆ ವಿಧಾನ: ೩.೫ ಕಿ.ಗ್ರಾಂ. (ಶೇ. ೩೬ರಷ್ಟು ಸತು ಇರುತ್ತದೆ) ಸತುವಿನ ಸಲ್ಫೇಟನ್ನು ೨೪೦ಲೀ. ನೀರಿನಲ್ಲಿ ಬೆರೆಸಿ ಎಲೆ ಬಿಡಿಸುವುದಕ್ಕೆ ೩೦ ದಿನಗಳ ಮುಂಚೆ ಒಮ್ಮೆ ಸಿಂಪಡಿಸಬೇಕು. ಇದರಿಂದ ಶೇ. ೪೪ರಷ್ಟು ಹೆಚ್ಚಿನ ಇಳುವರಿ ಪಡೆಯಬಹುದು.

೨೮) ಅಧಿಕ ಹಿಪ್ಪುನೇರಳೆ ಇಳುರಿಗೆ ಅನಸರಿಸಬಹುದಾದ ಕಸಿತಾಂತ್ರಿಕತೆ ಕುರಿತು ವಿವರಿಸಿ?

ಹಿಪ್ಪುನೇರಳೆ ತೋಟವನ್ನು ಬೇರುಸಹಿತ ಕೀಳತೆ, ಹೆಚ್ಚು ಇಳುವರಿ ತಳಿಗೆ ಬದಲಾಯಿಸುವ ತಂತ್ರಜ್ಞಾನವೇ ಕಸಿಕಟ್ಟುವಿಕೆ.

ವಿಧಾನ: ಹೆಚ್ಚು ಇಳುವರಿ ಕೊಡುವ ತಳಿಯ ಬಲಿತ ಕಣ್ಣನ್ನು ತೆಗೆದಿಟ್ಟುಕೊಂಡು, ಕಡಿವೆ ಇಳುವರಿ ಕೊಡುವ ಸ್ಥಳೀಯ ತಳಿಯ ಬೇರಿನ ಬುಡದ ಮೇಲ್ಭಾಗದಲ್ಲಿರುವ ಚೆನ್ನಾಗಿ ಬಲಿತ ಕಾಂಡದಲ್ಲಿರುವ ಮೊಗ್ಗನ್ನು ಬ್ಲೇಡಿನ ಸಹಾಯದಿಂದ ತೆಗೆದು, ಈ ಸುಧಾರಿತ ತಳಿಯ ಮೊಗ್ಗನ್ನು ಇರಿಸಿ ಪಾಲಿಥೀನ್ ಪಟ್ಟಿಯಿಂದ ಕಟ್ಟಬೇಕು. ಮೂರು ದಿನದನಂತರ ಕಸಿಮಾಡಿದ ಭಾಗದ ಮೇಲ್ಭಾಗದ ಕಡ್ಡಿಯನ್ನು ಕತ್ತರಿಸಬೇಕು. ಆಗಾಗ ತೋಟಕ್ಕೆ ನೀರು ಹಾಯಿಸಬೇಕು.

ಅನುಕೂಲ

ಒಂದು ಎಕರೆ ಹಿಪ್ಪುನೇರಳೆ ತೋಟದ ಶೇ.೫ರಷ್ಟು ಭಾಗವನ್ನು ಅಂದರೆ ೫೦೦ ಹಿಪ್ಪುನೇರಳೆ ಗಿಡಗಳನ್ನು ಹೊಸತಳಿಗೆ ಕಸಿ ತಂತ್ರಜ್ಞಾನದ ಮೂಲಕ ಬದಲಾಯಿಸಲು ಸುಮಾರು ೧.೨೫೦ರೂ. ವೆಚ್ಚವಾಗಬಹುದು. ಈ ರೀತಿ ಕಸಿಮಾಡಿದ ಗಿಡಗಳಿಂದ ದೊರೆಯುವ ಸೊಪ್ಪನ್ನು ಚಾಕೆ ಸಾಕಣೆಗೆ ಉಪಯೋಗಿಸಿದರೆ ಪ್ರತಿ ೧೦೦ಮೊಟ್ಟೆಗೆ ೩ಕಿ.ಗ್ರಾಂ ಅಧಿಕ ಗೂಡಿನ ಇಳುವರಿ ದೊರೆಯುತ್ತದೆ. ಅಂದರೆ, ಎಕರೆಗೆ ವರ್ಷಕ್ಕೆ ೧೦೦೦ ಮೊಟ್ಟೆಯಿಂದ ೩೦ಕಿ.ಗ್ರಾಂ ಹೆಚ್ಚಿನ ರೇಷ್ಮೆ ಗೂಡಿನ ಇಳುವರಿ ಪಡೆಯಬಹುದು.

೩೦ಕಿ.ಗ್ರಾಂ.ಗೂಡು x ಪ್ರತಿ ಕಿ.ಗ್ರಾಂ. ಗೆ ರೂ.೧೩೦/-ದರದಂತೆ ಒಟ್ಟು ಆದಾಯ ರೂ. ೩,೯೦೦/-

ಅಧಿಕ ಇಳುವರಿಯಿಂದ ಬರುವ ವಾರ್ಷಿಕ ಆದಾಯ ರೂ. ೩,೯೦೦/-ಕಸಿಕಟ್ಟಲು ತಗಲುವ ವೆಚ್ಚ ರೂ. ೧,೨೫೦/-

ಮೊದಲನೆ ವರ್ಷದಲ್ಲಿ ಆದಾಯ ರೂ.೨,೬೫೦/-

೨೯) ಹಿಪ್ಪುನೇರಳೆ ತೋಟವನ್ನು ಎಷ್ಟು ಕಾಲದವರೆಗೆ ಇಳುವರಿ ದೃಷ್ಟಿಯಿಂದ ಇಟ್ಟುಕೊಳ್ಳಬಹುದು?

ಸಾಮಾನ್ಯವಾಗಿ ೨೦ರಿಂದ ೨೫ವರ್ಷಗಳವರೆಗೆ ಉತ್ತಮ ಬೆಳೆಯನ್ನು ಪಡೆಯಬಹುದು. ಇದಕ್ಕೆ ತಕ್ಕಂತೆ ಪೋಷಕಾಂಶಗಳ ನಿರ್ವಹಣೆ ಸಹ ಮಾಡಬೇಕಾಗುತ್ತದೆ.

೩೦) ಹಿಪ್ಪುನೇರಳೆ ತೋಟದ ಫಲವತ್ತತೆ ಮತ್ತು ಆದಾಯವನ್ನು ಹೆಚ್ಚಿಸಲು ಜೊತೆಗೆ ಬೇರೆ ಯಾವ ಬೆಳೆಗಳನ್ನು ಬೆಳೆಯಬಹುದು ಹಾಗೂ ಹಿಪ್ಪುನೇರಳೆಯಲ್ಲಿ ಬೆಳೆಯಬಹುದಾದ ಮಿಶ್ರಬೆಳೆಗಳಾವುವು?

ಹಿಪ್ಪುನೇರಳೆಯಲ್ಲಿ ಮಿಶ್ರ ಬೆಳೆಯನ್ನು ಬೆಳೆಯುವದರಿಂದ ಹಿಪ್ಪುನೇರಳೆ ಇಳುವರಿ ಅಥವಾ ಗುಣಮಟ್ಟ ಹಾಗೂ ಇದನ್ನು ತಿಂದ ರೇಷ್ಮೆ ಹುಳುಗಳ ರೇಷ್ಮೆಗೂಡಿನ ಇಳುವರಿಯ ಮೇಲೆ ಯಾವ ದುಷ್ಪರಿಣಾಮವೂ ಆಗುವುದಿಲ್ಲ. ಈ ತಂತ್ರಜ್ಞಾನವನ್ನು ಸಣ್ಣ ಹಿಡುವಳಿದಾರರು ಅನುಸರಿಸಬಹುದು. ಇದರಿಂದ ರೇಷ್ಮೆ ಬೆಳೆ ರೋಗಕ್ಕೆ ತುತ್ತಾಗಿ ನಷ್ಟವಾದರೆ ಈ ಮಿಶ್ರ ಬೆಳೆಗಳು ತಕ್ಕಮಟ್ಟಿಗೆ ನಷ್ಟವನ್ನು ಸರಿದೂಗಿಸುತ್ತವೆ. ಮಣ್ಣಿನ ಫಲವತ್ತತೆ ಹೆಚ್ಚಿಸಲು ಅಲಸಂದೆ, ಉದ್ದು, ಹೆಸರುಕಾಳು,ನೆಲಗಡಲೆ ಮತ್ತು ಸೋಯಾ ಅವರೆ ಬೆಳೆಯಬಹುದಾಗಿದ್ದು ಇತರೆ ಬೆಳೆಗಳಾದ ರಾಗಿ ಮತ್ತು ತರಕರಿಗಳನ್ನೂ ಸಹ ಬೆಳೆಯಬಹುದು.

ಉಪಯೋಗಗಳು:

೧)    ಬೇರೆ ಬೇರೆ ಕಾಲದಲ್ಲಿ ಇಳುವರಿಯ ಸ್ಥಿರತೆ ಕಾಪಾಡುವುದಕ್ಕೆ ಸಹಾಯವಾಗುತ್ತದೆ.

೨) ಬೆಳೆ ಬೆಳವಣಿಗೆಗೆ ಮೂಲ ಅಂಶಗಳಾದ ಪೋಷಕಾಂಶ, ಬೆಳಕು ಮತ್ತು ಜಾಗ ಇವುಗಳನ್ನು ಪರಿಣಾಮಕಾರಿಯಾಗಿ ಬಳಸಬಹುದು.

೩)    ಹಿಪ್ಪುನೇರಳೆ ತೋಟದಲ್ಲಿ ಬರುವಂತಹ ಕಳೆ ರೋಗ ಹಾಗೂ ಕೀಟಗಳನ್ನು ತಡೆಗಟ್ಟುವುದಕ್ಕೆ ಸಹಾಯವಾಗುತ್ತದೆ.

೪)   ಒಂದು ಬೆಳೆಯ ಭೌತಿಕ ಸಹಾಯ ಇನ್ನೊಂದು ಬೆಳೆಗೆ ದೊರಕುತ್ತದೆ.

೫)   ಬೆಳೆಗಳು ಭೂಮಿಯನ್ನು ಮುಚ್ಚಿಕೊಂಡಿರುವುದರಿಂದ ಭೂಸವೆತ ತಡೆಯಬಹುದು.

೬)    ಒಂದು ವೇಳೆ ಇನ್ನೊಂದು ಬೆಳೆಗೆ ಆಶ್ರಯ ನೀಡುತ್ತದೆ.

೩೧) ಕಡಿಮೆ ಮಳೆಯಾಗುವ ಪ್ರದೇಶಗಳಲ್ಲಿ ಹಿಪ್ಪುನೇರಳೆ ಮರಗಳನ್ನು ಬೆಳೆಸಿ ಹುಳು ಸಾಕಣೆ ಮಾಡಬಹುದೆ?

ಹಿಪ್ಪುನೇರಳೆಯು ಬಹುವಾರ್ಷಿಕ ಬೆಳೆಯಾದ್ದರಿಂದ ಆಳವಾಗಿ ಬೇರು ಬಿಟ್ಟಲ್ಲಿ ನೀರು ಹೀರಬಲ್ಲುದು, ಆದ್ದರಿಂದ ಮಳೆ ಕಡಿಮೆ ಇರುವ ಜಾಗದಲ್ಲಿ ಹಿಪ್ಪುನೇರಳೆಯನ್ನು ಮರವಾಗಿ ಬೆಳೆಯುವುದರಿಂದ ದೊರೆಯುವ ಎಲೆ ಉಪಯೋಗಿಸಿ ರೇಷ್ಮೆಹುಳು ಸಾಕಣೆ ಮಾಡಬಹುದು

೩೨) ಜೌಗು ಹಿಡಿದಿರುವ ಪ್ರದೇಶಗಳಲ್ಲಿ ಹಿಪ್ಪುನೇರಳೆ ತೋಟಗಳನ್ನು ಹೇಗೆ ರಕ್ಷಿಸಿಕೊಳ್ಳಬೇಕು?

ಜೌಗು ಹಿಡಿದಿರುವ ಜಾಗದಲ್ಲಿ ಹೆಚ್ಚು ನೀರುನಿಲ್ಲದಂತೆ ಚರಂಡಿಗಳನ್ನು ತೆಗೆದು ನೀರು ಇಂಗಿಹೋಗುವಂತೆ ಮಾಡಬೇಕು.

ಜೌಗು ಪ್ರದೇಶದ ಮಣ್ಣಿನ ಮೇಲ್ಮೈನಲ್ಲಿ ಲವಣಾಂಶಗಳು ಹೆಚ್ಚಿದ್ದು ಸಾಮಾನ್ಯವಾಗಿ ಚೌಳಾಗಿರುತ್ತದೆ. ಇದರಿಂದಾಗಿ ರಸಸಾರವೂ ಹೆಚ್ಚಿರುತ್ತದೆ. ಇದರ ಸಮತೋಲನೆಗೆ ಹೆಚ್ಚು ಕೊಟ್ಟಿಗೆ ಗೊಬ್ಬರ ಹಾಕಬೇಕು. ಜೊತೆಗೆ ಅವಶ್ಯಕತೆಯಿರುವಷ್ಟು ರಾಸಾಯನಿಕ ಗೊಬ್ಬರ ಸಹ ಹಾಕಬೇಕಾಗುತ್ತದೆ.

೩೩) ಹಿಪ್ಪುನೇರಳೆ ಬೇಸಾಯದಲ್ಲಿ ಕೆರೆಗೋಡು ಮಣ್ಣನ್ನು ಹೇಗೆ ಬಳಸಿಕೊಳ್ಳಬೇಕು?

ಸಾಮಾನ್ಯವಾಗಿ ಭೂಮಿಯ ಸವೆತದಿಂದ ಮೇಲಿನ ಮಣ್ಣು ಕೊಚ್ಚಿಕೊಂಡು ಹೋಗಿ ಕೆರೆಯ ತಳದಲ್ಲಿ ನಿಂತಿರುವ ಮಣ್ಣೇ ಕೆರೆಗೋಡು. ಇದರಲ್ಲಿ ಕೆರೆಯಲ್ಲಿ ಬೆಳೆದ ಗಿಡಗಳು ಹಾಗೂ ಪ್ರಾಣಿಗಳು ಸತ್ತು ಕೊಳೆತು ಸೇರಿಕೊಂಡಿರುತ್ತವೆ. ಹೀಗಾಗಿ ಕೆರೆಗೋಡು ಪೋಷಕಾಂಶಗಳಿಂದಲೂ ಕೂಡಿರುತ್ತದೆ. ಇದರ ಬಳಕೆಯಿಂದ ಸಸ್ಯಗಳಿಗೆ ಪೋಷಕಾಂಶ ದೊರೆಯುತ್ತದೆ. ಇದರಿಂದ ನೀರನ್ನು ಹಿಡಿದಿಟ್ಟುಕೊಳ್ಳುವ ಮಣ್ಣಿನ ಸಾಮರ್ಥ್ಯವೂ ಹೆಚ್ಚುತ್ತದೆ.

೩೪) ಒಂದು ಎಕರೆ ತೋಟದ ಬೇಸಾಯಕ್ಕೆ ಮೊದಲ ವರ್ಷದಲ್ಲಿ ಎಷ್ಟು ವೆಚ್ಚ ಮಾಡಬೇಕಾಗುತ್ತದೆ? ಅನಂತರ ಎರಡನೆಯ ವರ್ಷದಿಂದ ಎಷ್ಟು ಖರ್ಚು ಮಾಡಬೇಕಾಗುತ್ತದೆ.?

) ಹಿಪ್ಪು ನೇರಳೆ ತೋಟವನ್ನು  ಬೆಳೆಸುವ ಪ್ರಥಮ ಹಂತಗಳಲ್ಲಿ ಆಗುವ ವೆಚ್ಚ (ರೂಪಾಯಿಗಳಲ್ಲಿ):

) ಭೂಮಿ ತಯಾರಿ:

ಎರಡು ಬಾರಿ ಆಳವಾಗಿ ಉಳುಮೆಮಾಡುವುದು
(೧೬ಜೋಡಿ, ಪ್ರತಿ ಜೋಡಿಗೆ ರೂ.೧೨೫-೦೦ರಂತೆ)

೨,೦೦೦-೦೦

ಎರಡು ಬಾರಿ ಹಗುರವಾದ ಉಳುಮೆಮಾಡುವುದು
(೮ಜೋಡಿ, ಪ್ರತಿ ಜೋಡಿಗೆ ರೂ.೧೨೫-೦೦ರಂತೆ)

೧,೦೦೦-೦೦

ಮಣ್ಣನ್ನು ಏರುಹಾಕಿ ಸಾಲುಗಳನ್ನು ಮಾಡಲು
(೧೨ಆಳುಗಳು, ಪ್ರತಿ ಆಳಿಗೆ ರೂ.೫೦-೦೦ರಂತೆ)

೬೦೦-೦೦

) ನರ್ಸರಿ ಬೆಳೆಸುವುದು ಮತ್ತು ನಾಟಿ ಮಾಡುವುದು:

ಎಕರೆಗೆ ಬೇಕಾದ ೭,೨೦೦ ಸಸಿಗಳು ೨’ x ೩’ ನರ್ಸರಿ ಮೂಲಕ ಬೆಳೆಸಲು ತಗಲುವ ವೆಚ್ಚ (ಪ್ರತಿ ಸಸಿಗೆ ರೂ.೦.೫೦ರಂತೆ)

೩,೬೦೦-೦೦

ಸಸಿಗಳನ್ನು ನರ್ಸರಿಯಿಂದ ಕಿತ್ತು ತೋಟದಲ್ಲಿ ನೆಡಲು (೨೦ ಆಳುಗಳು, ಪ್ರತಿ ಆಳಿಗೆ ರೂ.೫೦-೦೦ರಂತೆ)

೧,೦೦೦-೦೦

ಕೊಟ್ಟಿಗೆ ಗೊಬ್ಬರ ಹಾಕಲು ೬ ಆಳುಗಳು (ಪ್ರತಿ ಆಳಿಗೆ ರೂ.೫೦-೦೦ರಂತೆ)

೩೦೦-೦೦

ರಾಸಾಯನಿಕ ಗೊಬ್ಬರಕ್ಕೆ ತಗಲು ಅಂದಾಜು ವೆಚ್ಚ ೨,೫೨೪-೦೦
ತೋಟಕ್ಕೆ ರಾಸಾಯನಿಕ ಗೊಬ್ಬರ ಹಾಕಲು ೨ಆಳುಗಳು (ಪ್ರತಿ ಆಳಿಗೆ ರೂ.೫೦-೦೦ರಂತೆ-ಎರಡು ಬಾರಿ

೧೦೦-೦೦

ಅಂತರ ಬೇಸಾಯ ಮತ್ತು ಕಳೆ ತೆಗೆಯಲು (೧೨ ಆಳುಗಳು, ಪ್ರತಿ ಆಳಿಗೆ ರೂ.೫೦-೦೦ರಂತೆ ೨ ಬಾರಿ

೧,೨೦೦-೦೦

) ನೀರಾವರಿ

ಮೊದಲು ಆರು ತಿಂಗಳಲ್ಲಿ ೧೦ ಬಾರಿ ನೀರು ಹಾಯಿಸುವುದು, (ಪ್ರತಿ ಬಾರಿಗೆ ವೆಚ್ಚ ರೂ.೨೦೦-೦೦ರಂತೆ

೨,೦೦೦-೦೦

ನೀರಾವರಿಗೆ ಬೇಕಾದ ಆಳುಗಳು ೨(ಪ್ರತಿ ಆಳಿಗೆ ರೂ.೫೦-೦೦ರಂತೆ

೧,೦೦೦-೦೦

ಇತರೆ ವೆಚ್ಚಗಳು

೧,೦೦೦-೦೦

) ಹಿಪ್ಪುನೇರಳೆ ತೋಟ ನೆಟ್ಟು ಬೆಳೆಸಿದನಂತರ ಆಗುವ ವೆಚ್ಚ

ಪ್ರತಿ ಬಾರಿ (೫ ಬಾರಿ) ಕಟಾವಿನನಂತರ ಆಳವಾಗಿ ಉಳುಮೆ ಮಾಡುವುದು (೪ ಜೋಡಿ ಪ್ರತಿ ಜೋಡಿಗೆ ರೂ.೧೨೫-೦೦ರಂತೆ)

೨,೫೦೦-೦೦

ಗಿಡದ ಸುತ್ತ ಅಗೆದು ಕಳೆ ತೆಗೆಯುವುದು ಮತ್ತು ಸಾಲುಗಳನ್ನು ಮಾಡುವುದು (೧೦ಆಳುಗಳು, ಪ್ರತಿ ಆಳಿಗೆ ರೂ.೫೦-೦೦ರಂತೆ-೫ಬಾರಿ, ಪ್ರತಿ ಕಟಾವಿನನಂತರ)

೨,೫೦೦-೦೦

ಕೊಟ್ಟಿಗೆ ಗೊಬ್ಬರ ಹಾಕಲು ತಗಲುವ ವೆಚ್ಚ (೧ಟನ್ನಿಗೆ ರೂ.೨೦೦-೦೦ರಂತೆ ೧೦ಟನ್ನಿಗೆ

೨೦೦೦-೦೦

ಕೊಟ್ಟಿಗೆ ಗೊಬ್ಬರ ಹಾಕಲು(೬ ಜನ ಆಳುಗಳು, ಪ್ರತಿ ಆಳಿಗೆ ರೂ.೫೦-೦೦ರಂತೆ)

೩೦೦-೦೦

ರಾಸಾಯನಿಕ ಗೊಬ್ಬರಕ್ಕೆ ತಗಲುವ ವೆಚ್ಚ

೬,೭೦೭-೦೦

ರಾಸಾಯನಿಕ ಗೊಬ್ಬರ(೫ ಬಾರಿ ಹಾಕಲು ೨ ಆಳುಗಳು, ಪ್ರತಿ ಆಳಿಗೆ ರೂ.೫೦-೦೦ರಂತೆ)

೫೦೦-೦೦

ನೀರಾವರಿಗೆ ತಗಲುವ ವೆಚ್ಚ (೨೦ ಬಾರಿ, ಪ್ರತಿ ಬಾರಿಗೆ ರೂ.೨೦೦-೦೦ರಂತೆ)

೪,೦೦೦-೦೦

೨೦ ಬಾರಿ ನೀರು ಹಾಯಿಸುವುದಕ್ಕೆ ಬೇಕಾಗುವ ಆಳುಗಳು (೪೦ ಆಳುಗಳು, ಪ್ರತಿ ಆಳಿಗೆ ರೂ.೫೦-೦೦ರಂತೆ)

೨,೦೦೦-೦೦

೫ ಬಾರಿ ಅಂತರ ಬೇಸಾಯ ಮತ್ತು ಕಳೆ ತೆಗೆಯುವುದಕ್ಕೆ, (ಪ್ರತಿ ಬಾರಿಗೆ ೧೦ ಆಳುಗಳು, ಪ್ರತಿ ಆಳಿಗೆ ರೂ.೫೦-೦೦ರಂತೆ)

೨,೫೦೦-೦೦

೫ ಬಾರಿ ಕೊಯ್ಲಿಗೆ, ಪ್ರತಿ ಬಾರಿ ೫ ಆಳುಗಳು (ಪ್ರತಿ ಆಳಿಗೆ ರೂ.೫೦-೦೦ರಂತೆ)

೧,೨೫೦-೦೦

ಇತರೆ ವೆಚ್ಚಗಳು ೨೫೦-೦೦
ಹಿಪ್ಪುನೇರಳೆ ತೋಟವನ್ನು ವೃದ್ಧಿಪಡಿಸಿದ ವೆಚ್ಚ

೧,೨೨೨-೦೦

ಒಟ್ಟು

೪೨,೦೫೩-೦೦

೩೫) ಮಳೆ ಆಶ್ರಯದಲ್ಲಿ ಕಪ್ಪು ಮಣ್ಣಿನಲ್ಲಿ ಹಿಪ್ಪುನೇರಳೆ ಬೇಸಾಯ ಮಾಡಬಹುದೆ?

ಮಳೆ ಆಶ್ರಯದಲ್ಲಿ ಕಪ್ಪು ಮಣ್ಣಿನಲ್ಲಿ ಹಿಪ್ಪುನೇರಳೆ ಬೇಸಾಯ ಮಾಡಬಹುದು. ಆದರೆ ಎಲೆಯು ಉತ್ತಮ ಗುಣಮಟ್ಟದ್ದಾಗಿರುವುದಿಲ್ಲ. ಕಪ್ಪು ಮಣ್ಣಿನಲ್ಲಿ ನುಣುಪಾದ ಕಣಗಳಿರುವುದರಿಂದ, ಬೇರುಗಳು ಒಂದಕ್ಕೊಂದು ಅಂಟಿಕೊಂಡು ಹವಾಸಂಚರಣೆಗೆ ಹಾಗೂ ನೀರು ಸರಿಯಾಗಿ ಬೇರಿನಿಂದ ಕಾಂಡಕ್ಕೆ ಒದಗುವುದಕ್ಕೆ ಅಡಚಣೆಯಾಗುತ್ತದೆ. ಆದಕಾರಣ ಕಪ್ಪು ಮಣ್ಣಿನಲ್ಲಿ ಹಿಪ್ಪುನೇರಳೆ ಬೇಸಾಯ ಮಾಡುವುದರಿಂದ ಉತ್ತಮ ಗುಣಮಟ್ಟದ ಸೊಪ್ಪಿನ ಉತ್ಪಾದನೆ ಸಾಧ್ಯವಾಗುವುದಿಲ್ಲ. ಹಿಪ್ಪುನೇರಳೆ ಗಿಡಗಳನ್ನು ಕೆಂಪುಮಿಶ್ರಿತ ಮರಳು ಭೂಮಿಯಲ್ಲಿ ಬೆಳೆಯುವುದು ಹೆಚ್ಚು ಸೂಕ್ತ.