) ಹಿಪ್ಪುನೇರಳೆ ಬೇಸಾಯಕ್ಕೆ ಮಣ್ಣು ಯೋಗ್ಯವಾಗಿದೆಯೋ ಅಥವಾ ಇಲ್ಲವೋ ಎಂಬುದನ್ನು ತಿಳಿದುಕೊಳ್ಳಲು ಮಣ್ಣು ಪರೀಕ್ಷೆ ಮಾಡಿಸಬೇಕು ಎಂದು ಹೇಳುತ್ತಾರೆ. ಮಣ್ಣುಪರೀಕ್ಷೆ ಹೇಗೆ ಮಾಡಿಸಬೇಕು? ಯಾವ ಕ್ರಮ ಅನುಸರಿಸಬೇಕು? ವಿವರವಾಗಿ ತಿಳಿಸಿ?

ಕೃಷಿ ಜಮೀನಿನಲ್ಲಿರುವ ಒಟ್ಟಾರೆ ಮಣ್ಣಿನಲ್ಲಿ ಸ್ವಲ್ಪ ಮಣ್ಣನ್ನು ಈ ಪರೀಕ್ಷೆಗಾಗಿ ತೆಗೆದುಕೊಳ್ಳಬೇಕು. ಹೀಗೆ ತೆಗೆದುಕೊಳ್ಳುವ ಸ್ವಲ್ಪ ಪ್ರಮಾಣದ ಮಣ್ಣು ಬೇಸಾಯ ಮಾಡಲಿರುವ ಜಮೀನಿನ ಎಲ್ಲಾ ಉಪವಿಭಾಗಗಳನ್ನು ಪ್ರತಿನಿಧಿಸುವಂತಿರಬೇಕು. ಈ ರೀತಿ ಪರೀಕ್ಷೆಗಾಗಿ ತೆಗೆದುಕೊಂಡ ಮಣ್ಣನ್ನು ಮಣ್ಣಿನ ಮಾದರಿ ಎನ್ನುತ್ತೇವೆ.

) ಮಣ್ಣಿನ ಮಾದರಿಯನ್ನು ತೆಗೆಯುವುದು ಹೇಗೆ ಮತ್ತು ಮಾದರಿ ತೆಗೆಯುವಾಗ ಅನುಸರಿಸಬೇಕಾದ ಎಚ್ಚರಿಕೆ ಕ್ರಮಗಳಾವವು?

ಮಣ್ಣುಮಾದರಿಯನ್ನು ಪ್ರತಿ ಉಪ. ವಿಭಾಗದ ೯-೧೦ ಜಾಗಗಳಿಂದ ಸಂಗ್ರಹಿಸಬೇಕು. ಇದಕ್ಕಾಗಿ ೩೦ ಸೆಂ.ಮೀ. ಆಳದ ಗುಂಡಿ ತೋಡಿ ಮೇಲಿನಿಂದ ಮಣ್ಣನ್ನು ಕೆರೆದು ತೆಗೆಯಬೇಕು. ಈ ರೀತಿ ೯-೧೦ ಜಾಗಗಳಿಂದ ಕೆರೆದು ತೆಗೆದ ಮಣ್ಣನ್ನು ಶುದ್ಧವಾದ ಬಾಂಡ್ಲಿಯಲ್ಲಿ ತೆಗೆದುಕೊಂಡು ಮಿಶ್ರಣವನ್ನು ಸಿದ್ಧಪಡಿಸಬೇಕು.

ಮುನ್ನಚ್ಚರಿಕೆ ಕ್ರಮಗಳು

 • ಮಣ್ಣು ಮಾದರಿ ತೆಗೆಯುವಾಗ ಕೊಟ್ಟಿಗೆ ಗೊಬ್ಬರ, ರಾಸಾಯನಿಕ ಗೊಬ್ಬರ ಹಾಕಿರುವ ಜಾಗ, ದಿಣ್ಣೆಗಳು, ಕಾಲುವೆ ಸಮೀಪ, ನೀರು ನಿಂತಿರುವ ಜಾಗ ಅಥವಾ ಬದುಗಳ ಹತ್ತಿರ ಮಾದರಿ ಮಣ್ಣು ತೆಗೆಯಬಾರದು.
 • ಮಣ್ಣಿಗೆ ಕೊಟ್ಟಿಗೆ ಗೊಬ್ಬರ ಇಲ್ಲವೇ ರಾಸಾಯನಿಕ ಗೊಬ್ಬರ ಹಾಕುವುದಕ್ಕಿಂತ ಮೊದಲು ಮತ್ತು ನೀರು ಹಾಯಿಸುವುದಕ್ಕಿಂತ ಮೊದಲೇ ಮಣ್ಣಿನ ಮಾದರಿ ತೆಗೆಯಬೇಕು.
 • ಮಣ್ಣಿನ ಮಾದರಿಯನ್ನು ಗೊಬ್ಬರ ಚೀಲದಲ್ಲಿ ಸಂಗ್ರಹಿಸಬಾರದು.
 • ಪರಿಕ್ಷೆಗೆ ಬೇಕಾದಷ್ಟು ಪ್ರಮಾಣದಲ್ಲಿ ಮಾತ್ರ  ಮಣ್ಣಿನ ಮಾದರಿ ತೆಗೆದು ಆ ಬಗ್ಗೆ ಸರಿಯಾದ ಮಾಹಿತಿ ಕೊಡಬೇಕು.

) ಮಣ್ಣಿನ ಮಾದರಿ ಯಾವಾಗ ಮತ್ತು ಹೇಗೆ ಶೇಖರಿಸಿಕೊಳ್ಳಬೇಕು?

ತೋಟದಲ್ಲಿ ಬೆಳೆ ನಾಟಿಮಾಡುವ ಮೊದಲು ಮತ್ತು ಆ ನಂತರವೂ ಸಹ ಕಾಲಕಾಲಕ್ಕೆ ಮಣ್ಣು ಪರೀಕ್ಷೆ ಮಾಡಿದಬೇಕು. ತೋಟದಲ್ಲಿ ಬೆಳೆ ಕೊಯ್ಲಿಗೆ ಇಲ್ಲದಿರುವಾಗ, ಕೊಟ್ಟಿಗೆ ಗೊಬ್ಬರ ಅಥವಾ ರಾಸಾಯನಿಕ ಗೊಬ್ಬರ ಹಾಕುವುದಕ್ಕಿಂತ ಮೊದಲು ಮಣ್ಣಿನ ಮಾದರಿ ತೆಗೆಯಬೇಕು. ಮಳೆಗಾಲದಲ್ಲಿ ಅಥವಾ ನೀರು ಹಾಯಿಸಿದ ನಂತರ ಅಥವಾ ತ್ಯಾಜ್ಯ ವಸ್ತುಗಳನ್ನು ಸುಟ್ಟಜಾಗದಲ್ಲಿ ಮಾದರಿ ಮಣ್ಣು ತೆಗೆಯಬಾರದು. ಹಿಪ್ಪುನೇರಳೆ ತೋಟದ ಮಣ್ಣಿನ ಪರೀಕ್ಷೆಯಿಂದ ಮಣ್ಣಿನ ಫಲವತ್ತತೆ ಮತ್ತು ಗುಣಲಕ್ಷಣಗಳನ್ನು ತಿಳಿಯಬಹುದು. ಮಣ್ಣಿನ ಮಾದರಿಗಳನ್ನು ಚೀಟಿಗಳೊಂದಿಗೆ ಶುದ್ಧವಾದ ಒಣಗಿದ ಬಟ್ಟೆ ಅಥವಾ ಪ್ಲಾಸ್ಟಿಕ್ ಚೀಲದಲ್ಲಿ ತುಂಬಿ, ಮಣ್ಣು ಪರೀಕ್ಷೆ ಮಾಡಲಿರುವ ಪ್ರಯೋಗಾಲಯದ ಹೆಸರು ಮತ್ತು ವಿಳಾಸವನ್ನು ಸ್ಪಷ್ಟವಾಗಿ ಬರೆಯಬೇಕು. ಮಣ್ಣಿನ ಮಾದರಿ ತೆಗೆಯಲು ಗೊಬ್ಬರ ತುಂಬುವುದಕ್ಕೆ ಬಳಸುವ ಚೀಲಗಳನ್ನು ಬಳಸಬಾರದು.

) ಮಣ್ಣಿನ ಮಿಶ್ರಣ (ಸಂಯುಕ್ತ) ಮಾದರಿ ಸಿದ್ಧಪಡಿಸಿ ಮಾಹಿತಿ ಒದಗಿಸುವುದು ಹೇಗೆ?

ರೈತರು ಹಾಗೂ ಮಣ್ಣು ಸಂಗ್ರಹಗಾರರು ಸಂಗ್ರಹಿಸಿದ ಮಣ್ಣಿನಿಂದ ಬೇರು, ಕಲ್ಲು ಮತ್ತಿತರ ತ್ಯಾಜ್ಯ ವಸ್ತುಗಳನ್ನು ತೆಗೆದುಹಾಕಿ, ಸರಿಯಾಗಿ ಪುಡಿಮಾಡಿ ಅಗಲವಾಗಿ ತಟ್ಟೆಯಾಕಾರದಲ್ಲಿ ಹರಡಬೇಕು. ಹೀಗೆ ಹರಡಿದ ಮಣ್ಣನ್ನು ೪ ಭಾಗ ಮಾಡಿ ಎದುರುಬದುರು ಭಾಗಗಳನ್ನು ಬಿಟ್ಟು, ಉಳಿದ ಎರಡು ಭಾಗಗಳನ್ನು ಮಿಶ್ರಮಾಡಿ ಸುಮಾರು ೫೦೦ಗ್ರಾಂ ಮಾದರಿ ಮಣ್ಣು ಸಿಗುವವರೆಗೂ ಪುನರಾವರ್ತಿಸಬೇಕು. ಅನಂತರ ಈ ಮಾದರಿ ಮಣ್ಣಿನ ಮಾದರಿಯ ಜೊತೆಗೆ ಒಂದು ಚೀಟಿಯಲ್ಲಿ ರೈತನ ಹೆಸರು, ತೋಟದ ಗುರುತಿನ ಸಂಖ್ಯೆ, ಮಣ್ಣಿನ ಆಳ, ಮಾದರಿ ತೆಗೆದ ದಿನಾಂಕ, ಮಾದರಿ ಸಂಗ್ರಹಿಸಿದವರ ಸಹಿ, ಮಣ್ಣಿನ ಬಣ್ಣ, ಜಮೀನಿನ ವಿಧ, ನೀರಾವರಿ ಮೂಲ, ಸ್ಘಳದ ವರ್ಣನೆ, ಹಿಂದಿನ ಬೆಳೆಯ ವಿವರ, ಈ ಹಿಂದೆ ಬಳಸಿದ ಕೊಟ್ಟಿಗೆ/ ರಾಸಾಯನಿಕ ಗೊಬ್ಬರ ಮುಂತಾದ ಮಾಹಿತಿ ಬರೆದುಕೊಡಬೇಕು.

) ಕೆಲವೊಂದು ಸಂದರ್ಭಗಳಲ್ಲಿ ಮಣ್ಣಿನಲ್ಲಿ ಆಮ್ಲೀಯ, ಕ್ಷಾರೀಯ ಹಾಗೂ ಚೌಳು ಗುಣಗಳಿರಬಹುದು. ಇಂತಹ ಮಣ್ಣುಗಳನ್ನು ಹೇಗೆ ಸರಿಪಡಿಸಬೇಕು?

ಹೆಚ್ಚು ಆಮ್ಲೀಯತೆಯ ಮಣ್ಣು ಹಿಪ್ಪುನೇರಳೆ ಬೆಳವಣಿಗೆಗೆ ಉತ್ತಮವಲ್ಲ. ಇಂತಹ ಮಣ್ಣನ್ನು ಸರಿಪಡಿಸಲು ಸುಣ್ಣದ ಅಂಶವಿರುವ ವಸ್ತುಗಳಾದ ಡೊಲಮೈಟ್, ಕ್ಲಾಲಿಸ್ಟಿಕ್ ಸುಣ್ಣ, ಸುಟ್ಟ ಸುಣ್ಣ ಮುಂತಾದವುಗಳನ್ನು ಪರೀಕ್ಷೆಯ ಆಧಾರದ ಮೇಲೆ ಆಮ್ಲೀಯತೆಯನ್ನು ಸರಿಪಡಿಸಲು ಬೇಕಾದ ಪ್ರಮಾಣದಲ್ಲಿ ಮಣ್ಣಿಗೆ ಸೇರಿಸಬೇಕಾಗುತ್ತದೆ. ಸುಣ್ಣದ ಕಲ್ಲನ್ನು ನುಣ್ಣಗೆ ಪುಡಿಮಾಡಿ(೧ಮಿ.ಮೀ ಗಾತ್ರ) ಅದನ್ನು ಮಣ್ಣಿಗೆ ಸೇರಿಸಿದರೆ ಅದರ ಬಳಕೆ ಅತ್ಯುತ್ತಮವಾಗಿರುತ್ತದೆ.

ಕ್ಷಾರ ಮಣ್ಣಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ವಿನಿಮಯಗೊಳ್ಳುವ ಸೋಡಿಯಂ (ಶೇ.೧೫), ಕಡಿಮೆ ವಿದ್ಯುತ್ ಸಂವಹನೆ ಮತ್ತು ಹೆಚ್ಚು ರಸಸಾರ(೮.೫)ಗಳಿರುತ್ತವೆ. ಇಂತಹ ಮಣ್ಣನ್ನು ಸರಿಯಾದ ಪ್ರಮಾಣದಲ್ಲಿ ಪ್ರೆಸ್‌ಮಡ್ (ಕಬ್ಬಿನ ಹಿಂಡಿ), ಕಾಂಪೋಸ್ಟ್, ಗಂಧಕ, ಹಸುರೆಲೆ ಗೊಬ್ಬರ ಅಥವಾ ಜಿಪ್ಸಂ ಸೇರಿಸುವ ಮೂಲಕ ಸರಿಪಡಿಸಬಹುದು. ಜಿಪ್ಸಂ ಬಳಸುವಾಗ ಪುಡಿಮಾಡಿ, ಆ ಪುಡಿಯ ಗಾತ್ರ ೨ಮಿ.ಮೀ. ಎಂದು ಖಚಿತಪಡಿಸಿಕೊಂಡು ಹಾಕಿದಲ್ಲಿ ಸೂಕ್ತ ರೀತಿಯಲ್ಲಿ ಬಳಕೆಯಾಗುತ್ತದೆ. ಮತ್ತು ಪರಿಣಾಮಕಾರಿಯಾಗಿರುತ್ತದೆ.

ಸರಿಪಡಿಸುವ ವಿಧಾನ

 • ತೋಟವನ್ನು ಸಮತಟ್ಟು ಮಾಡಿ ಅವಶ್ಯವಿರುವಷ್ಟು ಉಪಭಾಗಗಳನ್ನಾಗಿ ವಿಂಗಡಿಸಬೇಕು.
 • ತೋಟದ ಇಳಿಜಾರಿಗೆ ಅಡ್ಡಲಾಗಿ ೮೦ಸೆಂ. ಮೀ. ಆಳದ ಕಾಲುವೆಯನ್ನು ತೋಡಬೇಕು.
 • ಮಳೆಯ ನೀರನ್ನು ಹಿಡಿದಿಡಲು ತೋಟದ ಉಪವಿಭಾಗಗಳ ಸುತ್ತ ೩೦ರಿಂದ ೪೫ಸೆಂ.ಮೀ. ಎತ್ತರದ ಬದುಗಳನ್ನು ನಿರ್ಮಿಸಬೇಕು.

ಅಗತ್ಯ ಪ್ರಮಾಣದ ಜಿಪ್ಸಂ ಲವಣಹಾಕಿ ಮೇಲ್ಮೈ ಮಣ್ಣಿನೊಂದಿಗೆ ಚೆನ್ನಾಗಿ ಬೆರೆಯಲು ಭೂಮಿಯನ್ನು ಉಳುಮೆ ಮಾಡಬೇಕು. ಹೆಚ್ಚು ಆಮ್ಲೀಯತೆಯ ಮಣ್ಣಿನಲ್ಲಿ ಇಡೀ ಹಿಪ್ಪುನೇರಳೆ ತೋಟದ ಮಣ್ಣು ಒದ್ದೆಯಾಗುವಂತೆ ಉತ್ತಮ ಗುಣಮಟ್ಟದ ನೀರನ್ನು ಸಾಕಷ್ಟು ಪ್ರಮಾಣದಲ್ಲಿ ಹಾಯಿಸಬೇಕು.

 • ಜಿಪ್ಸಂ ಲವಣವು ಮಣ್ಣಿನಲ್ಲಿ ಚೆನ್ನಾಗಿ ಬೆರೆತು ಪ್ರತಿಕ್ರಿಯಿಸಲು ೧೫ರಿಂದ ೨೦ದಿನಗಳ ಕಾಲಾವಕಾಶ ನೀಡಬೇಕು.
 • ತೋಟಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಉತ್ತಮ ಗುಣಮಟ್ಟದ ನೀರು ಹಾಯಿಸಬೇಕು.
 • ಕೆಲವು ದಿನಗಳ ಮಟ್ಟಿಗೆ ತೋಟದಲ್ಲಿ ನೀರು ನಿಲ್ಲುವಂತೆ ಮಾಡಬೇಕು.
 • ತೋಟದಲ್ಲಿ ನಿಂತಿರುವ ನೀರು, ಕಾಲುವೆಗಳ ಮೂಲಕ ಬಸಿದು ಹೋಗುವಂತೆ ಮಾಡಬೇಕು.
 • ಹೊಸ ಜಮೀನಿನಲ್ಲಿ ಒಂದೆರಡು ಬಾರಿ ಹಸುರುಒಬ್ಬರದ ಡಯಾಂಚ ಸಸಿಗಳನ್ನು ಬೆಳೆಸಿ, ಹೂಬಿಡುವ ಮೊದಲು ಉಳುಮೆ ಮಾಡಿ ಭೂಮಿಗೆ ಸೇರಿಸಬೇಕು. ಅಧಿಕ ಲವಣಾಂಶಗಳುಳ್ಳ ಹೆಚ್ಚಿನ ಅಂತರ್ಜಲಮಟ್ಟ, ಕಡಿಮೆ ಪ್ರಮಾಣದ ಮಳೆ ಮತ್ತು ಹೆಚ್ಚಿನ ಪ್ರಮಾಣದಲ್ಲಿ ನೀರು ಆವಿಯಾಗುವಿಕೆ, ಲವಣಾಂಶ ಹೆಚ್ಚಾಗಿರುವ ನೀರಿನಿಂದ ನೀರಾವರಿ ಮಾಡುವುದು, ಲವಣಾಂಶ ಹೆಚ್ಚಿಸುವ ರಸಗೊಬ್ಬರಗಳ ಬಳಕೆ ಇತ್ಯಾದಿಗಳಿಂದಾಗಿ ಮಣ್ಣು ಲವಣಯುಕ್ತವಾಗುತ್ತದೆ. ಇದನ್ನು ಸರಿಪಡಿಸಲು ಮಣ್ಣಿನಲ್ಲಿ ಲವಣಸಾಂದ್ರತೆ ಕಡಿಮೆಯಾಗದಂತೆ ಮಾಡಬೇಕು. ಮಣ್ಣಿನಲ್ಲಿರುವ ನೀರಿನ ಅಂಶ ಆವಿಯಾಗುವುದನ್ನು ತಡೆಡಟ್ಟುವುದರಿಂದ ಅಥವಾ ಹೆ‌ಚ್ಚು ನೀರು ಭೂಮಿಯಲ್ಲಿ ಇಂಗುವಂತೆ ಮಾಡುವುದರಿಂದ ಇಂಥ ಮಣ್ಣನ್ನು ಸರಿಪಡಿಸಬಹದು. ಇದಕ್ಕಾಗಿ ಉತ್ತಮ ಗುಣಮಟ್ಟದ ನೀರಾವರಿ ನೀರು ಹೆಚ್ಚಿನ ಪ್ರಮಾಣದಲ್ಲಿ ಇಂಗುವಂತೆ ಮಾಡುವುದರ ಜೊತೆಗೆ ಹಸುರೆಲೆ ಗೊಬ್ಬರಗಳ ಬಳಕೆಮಾಡಿ, ಅವುಗಳ ಕಡ್ಡಿಯನ್ನು ಮಣ್ಣಿಗೆ ಮೇಲುಹೊದಿಕೆಯಾಗಿ ಉಪಯೋಗಿಸಬಹುದು.

) ನೀರಾವರಿಯಲ್ಲಿ ಬೆಳೆಯಲು ಸೂಕ್ತವಾದ ಅಧಿಕ ಇಳುವರಿದಾಯದ ಹಿಪ್ಪುನೇರಳೆ ತಳಿಗಳಾವುವು?

ನೀರಾವರಿ ಹಿಪ್ಪುನೇರಳೆ ಬೇಸಾಯಕ್ಕೆ ಈ ಮುಂದೆ ಕಾಣಿಸಿದ ತಳಿಗಳು ಸೂಕ್ತವಾಗಿದ್ದು, ಬೆಳೆಯಬಹುದಾಗಿದೆ.:

 • ವಿ-೧(ವಿಕ್ಟರಿ-೧)
 • ಕಣ್ವ-೨(ಎಂ-೫)
 • ಎಂ.ಆ‌ರ್-೨(ತಮಿಳುನಾಡು ವಾತಾವರಣಕ್ಕೆ ಸೂಕ್ತ)
 • ಎಸ್-೩೬
 • ಎಸ್-೩೦
 • ಎಸ್-೫೪
 • ವಿಶ್ವ (ಡಿ.ಡಿ)

) ಮಳೆಯಾಶ್ರಿತ ಹಿಪ್ಪುನೇರಳೆ ಬೇಸಾಯಕ್ಕೆ ಸೂಕ್ತವಾದ ತಳಿಗಳಾವುವು?

ಮಳೆಯಾಶ್ರಿತ ಹಿಪ್ಪು ನೇರಳೆ ಬೇಸಾಯಕ್ಕೆ ಈ ಮುಂದೆ ಕಾಣಿಸಿದ ತಳಿಗಳು ಸೂಕ್ತವಾಗಿದ್ದು, ಬೆಳೆಯಬಹುದಾಗಿದೆ:

 • ಎಸ್-೧೩
 • ಎಸ್-೩೪
 • ಆರ್.ಎಫ್.ಎಸ್-೧೩೫ ಮತ್ತು ಆರ್.ಎಫ್.ಎಸ್-೧೭೫ ಮೈಸೂರು ಲೋಕಲ್

) ಬಿತ್ತನೆ ಕಡ್ಡಿಗಳನ್ನು ಸಿದ್ಧಪಡಿಸುವುದು, ಸಾಗಿಸುವುದು ಮತ್ತು ಶೇಖರಿಸುವುದು ಹೇಗೆ?

ಸಿದ್ಧಪಡಿಸುವಿಕೆ

ರೆಂಬೆಗಳು ೬ ರಿಂದ  ತಿಂಗಳು ಬೆಳೆದಿರಬೇಕು ಹಾಗೂ ೧೦ ರಿಂದ ೧೫ ಮಿ.ಮೀ. ಸುತ್ತಳತೆಯಿರಬೇಕು. ರೆಂಬೆಯ ದಪ್ಪನಾದ ಕೆಳಭಾಗ ಮತ್ತು ಹಸುರಾದ ಮೇಲ್ಭಾಗ ಹೊರತುಪಡಿಸಿ ಉಳಿದ ಭಾಗವನ್ನು ಕಡ್ಡಿ ಸಿದ್ಧಪಡಿಸಲು ಬಳಸಬಹುದು. ರೆಂಬೆ ಶುದ್ಧ ತಳಿಯಾಗಿದ್ದು ಇದಕ್ಕೆ ಶಲ್ಕ ಕೀಟ, ತುಪ್ಪಳದ ತಗಣೆ, ಸುರುಳಿ ಕೀಟ ಮುಂತಾದ ಕೀಟ ಬಾಧೆಯಿರಬಾರದು. ೩ ರಿಂದ ೪ ತಿಂಗಳ ಸಸಿ ಬೆಳೆಸಲು ೧೫ರಿಂದ೨೦ಸೆಂ.ಮೀ. ಉದ್ದದ, ೩ ರಿಂದ ೪ ಕಣ್ಣುಗಳನ್ನು ಹೊಂದಿರುವ ಅಥವಾ ೬ ರಿಂದ ೯ ತಿಂಗಳ ಸಸಿ ಬೆಳೆಸಲು ೨೩ರಿಮದ ೨೫ ಸೆಂ.ಮೀ. ಉದ್ದದ ಕಡ್ಡಿಗಳನ್ನು ಸಿದ್ಧಪಡಿಸಬೇಕು. ಹಾಗೆ ಸಿದ್ಧಪಡಿಸುವಾಗ ಕಡ್ಡಿಗಳು ಒಡೆಯದಂತೆ ಅಥವಾ ತೊಗಟೆ ಸೀಳದಂತೆ ಹರಿತವಾದ ಮಚ್ಚಿನಿಂದ ಕತ್ತರಿಸಬೇಕು.

ಸಾಗಣೆ ಮತ್ತು ಶೇಖರಣೆ

ಕತ್ತರಿಸಿದ ಕಡ್ಡಿಗಳು ಬೇಗನೆ ಒಣಗುವುದರಿಂದ ಸಿದ್ಧಪಡಿಸಿದ ಇಡೀ ರೆಂಬೆಗಳನ್ನು ಸಾಗಣೆ ಮಾಡುವುದು ಒಳ್ಳೆಯದು. ಕತ್ತರಿಸಿದ ಕಡ್ಡಿಗಳನ್ನು ಸಾಗಿಸುವಾಗ ಮೊದಲು ತೇವಮಾಡಿದ ಗೋಣಿಚೀಲದಲ್ಲಿ ಸುತ್ತಬೇಕಾಗುತ್ತದೆ. ಹೆಚ್ಚು ದೂರ ಸಾಗಣೆ ಮಾಡಬೇಕಾದಲ್ಲಿ ರಾತ್ರಿ ವೇಳೆ ಸಾಗಿಸುವುದೇ ಉತ್ತಮ. ಕತ್ತರಿಸಿದ ಕಡ್ಡಿಗಳನ್ನು ಶೇಖರಿಸಬೇಕಾದಲ್ಲಿ ಅವುಗಳ ಮೊಗ್ಗುಗಳು ಒಂದೇ ದಿಕ್ಕಿನಲ್ಲಿರುವಂತೆ ಮೇಲ್ಮುಖವಾಗಿ ಜೋಡಿಸಿ, ಸಣ್ಣಕಟ್ಟುಗಳಾಗಿ ಕಟ್ಟಿ ತೇವಾಂಶವಿಲ್ಲದ ಒಣ ಮರಳಿನಲ್ಲಿ ಅವುಗಳ ಬುಡಗಳನ್ನು ಇಡಬೇಕು. ಕಟ್ಟುಗಳ ಮೇಲೆ ಹುಲ್ಲಿನಿಂದ ತೆಳುವಾಗಿ ಮುಚ್ಚಬೇಕು. ಕಣ್ಣಗಳು ಒಣಗದಂತಿರಲು ನೀರು ಚಿಮುಕಿಸಬೇಕು. ಹೀಗೆ ೨ ರಿಂದ ೩ ದಿನಗಳವರೆಗೆ ಶೇಖರಿಸಿಡಬಹುದು.

) ಸಸಿಮಡಿಗಳಲ್ಲಿ ಸಸಿಗಳನ್ನು ಬೆಳೆಸಲು ಎಷ್ಟು ಖರ್ಚಾಗುತ್ತದೆ?

ಈಗಿನ ಲಭ್ಯವಿರುವ ತಾಂತ್ರಿಕತೆಯ ಪ್ರಕಾರ ಹೆಚ್ಚಿನ ಸಂಖ್ಯೆಯಲ್ಲಿ ಸಸಿಗಳನ್ನು ತಯಾರಿಸಬಹುದಾಗಿದೆ. ಈಗ ರೆಂಬೆ ಪದ್ಧತಿಯಿಂದ ಹುಳು ಸಾಕಣೆ ಮಾಡುತ್ತಿರುವುದರಿಂದ, ಸರಿಯಾಗಿ ಬಲಿತ ಬಿತ್ತನೆ ಕಡ್ಡಿಗಳ ಅಭಾವವಿರುವುದು ಸಾಮಾನ್ಯವಾಗಿದೆ. ಹೀಗಾಗಿ ಸಸಿಗಳನ್ನು ಬೆಳೆದು ಮಾರಾಟ ಮಾಡುವುದು ಒಂದು ಆದಾಯ ತರುವಂತಹ ಕಸುಬು. ಒಂದು ಎಕರೆ ಜಾಗದಲ್ಲಿ ೧.೮ ಲಕ್ಷ ಸಸಿಗಳನ್ನು ಬೆಳೆಯಬಹುದಾಗಿದ್ದು ಇದಕ್ಕೆ ಪ್ರತಿ ಸಸಿಗೆ ೩೦ ಪೈಸೆಗಳಷ್ಟು ಖರ್ಚು ತಗಲುತ್ತದೆ.

೧೦) ಸಸಿಮಡಿಗಳನ್ನು ಸಿದ್ಧಪಡಿಸುವ ಹಾಗೂ ನಾಟಿಮಾಡುವ ವಿಧಾನಗಳನ್ನು ತಿಳಿಸಿ?

ನೀರಿನ ಸೌಲಭ್ಯವಿರುವ ಸಮತಟ್ಟಾದ ಗೋಡೆಮಣ್ಣಿನ ಭೂಮಿ ಸಸಿಮಡಿಗೆ ಸೂಕ್ತ. ಸಸಿಮಡಿ ತಯಾರಿಸುವ ಭೂಮಿಯನ್ನು ಚೆನ್ನಾಗಿ ಆಳವಾಗಿ ಉಳುಮೆ ಮಾಡಿ, ಅನಂತರ ಬಿಸಿಲಿನಲ್ಲಿ ಒಣಗಲು ಬಿಡಬೇಕು. ತದನಂತರ ಇನ್ನೆರಡು ಬಾರಿ ಉಳುಮೆ ಮಾಡಿ ಕಲ್ಲು, ಕಳೆಗಳನ್ನು ತೆಗೆದು ಚೆನ್ನಾಗಿ ಪುಡಿಮಾಡಬೇಕು. ನಾಲ್ಕು ತಿಂಗಳು ಸಸಿಗಳನ್ನು ಬೆಳೆಸಲು ೨೪೦ x ೧೨೦ ಸೆಂ.ಮೀ. ಅಳತೆಯ ಮಡಿಗಳನ್ನು ತಯಾರಿಸಬೇಕು. ಈ ಅಳತೆಯ ಸಸಿಮಡಿಗಳಲ್ಲಿ ೪ ತಿಂಗಳು ಬೆಳೆಸುವುದಾದರೆ ಸಾಲುಗಳ ನಡುವೆ ೨೦ಸೆಂ.ಮೀ. ಮತ್ತು ಕಡ್ಡಿಗಳ ನಡುವೆ ೧೦ಸೆಂ.ಮೀ. ಅಂತರ ಹಾಗೂ ಎಂಟು ತಿಂಗಳು ಸಸಿಗಳನ್ನು ಬೆಳೆಸುವುದಾದರೆ ಸಾಲುಗಳ ನಡುವೆ ೩೦ ಸೆಂ.ಮೀ. ಮತ್ತು ಕಡ್ಡಿಗಳ ನಡುವೆ ೧೦ ಸೆಂ.ಮೀ. ಅಂತರವಿಡಬೇಕು. ಪ್ರತಿ ಸಸಿಮಡಿಯ ಸುತ್ತಲೂ ಸೂಕ್ತ ರೀತಿಯಲ್ಲಿ ಅಂದರೆ ಸಾಮಾನ್ಯವಾಗಿ ೨೫ ರಿಂದ ೩೦ ಸೆಂ.ಮೀ. ಅಗಲ ಮತ್ತು ೧೫ರಿಂದ ೨೦ಸೆಂ.ಮೀ. ಆಳವಿರುವ ನೀರ್ಗಾಲುವೆಗಳನ್ನು ಮಾಡಬೇಕು. ಸಸಿಮಡಿಗಳಲ್ಲಿ ಕಡ್ಡಿ ನೆಡುವುದಕ್ಕಿಂತ ಮೊದಲು-

 • ಪ್ರತಿ ಸಸಿಮಡಿಗೆ ೫ ಮಂಕರಿ ಸಾವಯುವ ಕೊಟ್ಟಿಗೆ ಗೊಬ್ಬರ ಹಾಕಬೇಕು.
 • ಕಪ್ಪು ಅಥವಾ ಜೇಡಿ ಮಣ್ಣಾದಲ್ಲಿ ಪ್ರತಿ ಸಸಿಮಡಿಗೆ ೫ ಮಂಕರಿ ಕೆರೆಮಣ್ಣು ಅಥವಾ ಮರಳನ್ನು ಸೇರಿಸಬೇಕು.
 • ಕೆಂಪುಮಣ್ಣು ಅಥವಾ ಮರಳುಮಿಶ್ರಿತ ಗೋಡುಮಣ್ಣು ಇದ್ದಲ್ಲಿ ಗೆದ್ದಲು ಹುಳುವಿನ ತೊಂದರೆ ತಪ್ಪಿಸಲು ಶೇ.೦.೧೫ ಕ್ಲೋರೋಪೈರಿಫಾಸ್ ದ್ರಾವಣದಿಂದ ಸಸಿಮಡಿಯ ಮಣ್ಣು ನೆನೆಯುವಂತೆ ಸಿಂಪರಣೆ ಮಾಡಬೇಕು(ಪ್ರತಿ ಸಸಿಮಡಿಗೆ ೨.೩ಲೀ. ದ್ರಾವಣ ಬೇಕಾಗುತ್ತದೆ.)

ಕಡ್ಡಿ ನೆಡುವುದಕ್ಕಿಂತ ಮೊದಲು ಸಸಿಮಡಿಗಳಲ್ಲಿ ಚೆನ್ನಾಗಿ ನೀರು ಹಾಯಿಸಬೇಕು. ಅನಂತರ ದಾರದ ಸಹಾಯದಿಂದ ಸಾಲುಗಳನ್ನು ಗುರುತುಮಾಡಿ ಚೂಪಾದ ಕೋಲಿ ಸಹಾಯದಿಂದ ರಂಧ್ರಮಾಡಿಕೊಳ್ಳಬೇಕು. ತಯಾರಿಸಿದ ಕಡ್ಡಿಗಳನ್ನು ೦.೨ರ ಕರ್ಬಂಡೆಜಿಂ ದ್ರಾವಣದಲ್ಲಿ ೩೦ ನಿಮಿಷ ನೆನೆಸಬೇಕು. ಇದರಿಂದ ಕಡ್ಡಿಗಳಿಗೆ ತಗಲಬಹುದಾದ ಶಿಲೀಂಧ್ರ ರೋಗಗಳನ್ನು ತಡೆಯಬಹುದು. ಸಸಿಮಡಿಗಳಲ್ಲಿ ಕಡ್ಡಿಗಳನ್ನು ಮೊಗ್ಗುಗಳು ಮೇಲ್ಮುಖವಾಗಿರುವಂತೆ ೨ ಮೊಗ್ಗುಗಳು ಭೂಮಿ ಒಳಗೆ, ಒಂದು ಮೊಗ್ಗು ಭೂಮಿಯ ಮೇಲಿರುವಂತೆ ನಾಟಿಮಾಡಿ ಕಡ್ಡಿಯ ಸುತ್ತಲೂ ಮಣ್ಣು ಬಿಗಿಗೊಳಿಸಬೇಕು. ಕೆಲವು ತಳಿಗಳಲ್ಲಿ ಬೇರು ಮಾಡುವ ಸಮಸ್ಯೆ ಇದ್ದಲ್ಲಿ ಶೇ.೯೦ರ ಈಥೈಲ್ ಆಲ್ಕೋಹಾಲ್‌ನಲ್ಲಿ ಕರಗಿಸುವ ಎನ್.ಎ.ಎ. ಅಥವಾ ಬಿ.ಎ. ದ್ರಾವಣದಲ್ಲಿ ಅಂತಹ ಕಡ್ಡಿಗಳನ್ನು ೬ ಗಂಟೆಗಳ ಕಾಲ ನೆನೆಸಿದನಂತರ ನಾಟಿಮಾಡಬೇಕು. ರಂಜಕ ಗೊಬ್ಬರದ ಉಳಿತಾಯಕ್ಕೆ ಅಥವಾಲ ಪರಿಣಾಮಕಾರಿಯಾಗಿ ಬಳಸಲು ಸಹಾಯಮಾಡುವ ವ್ಯಾಮ್‌ಶಿಲೀಂಧ್ರವನ್ನು ಪ್ರತಿ ಮಡಿಗೆ ೧ಕಿ.ಗ್ರಾಂನಂತೆ ಕಡ್ಡಿ ನೆಡಲು ಮಾಡಿರುವ ಹಳ್ಳಗಳಲ್ಲಿ ಹಾಕಿ ನೆಡಬೇಕು.

೧೧) ಸಸಿಮಡಿಗಳಲ್ಲಿ ನೀರಾವರಿ ಮಾಡುವುದು, ಕಳೆ ತೆಗೆಯುವುದು ಮತ್ತು ರಾಸಾಯನಿಕ ಗೊಬ್ಬರಗಳನ್ನು ಹೇಗೆ ಬಳಸಬೇಕೆಂಬ ವಿಚಾರ ಕುರಿತು ಸರಿಯಾದ ಮಾಹಿತಿ ಕೊಡಿ?

ಸಸಿಮಡಿಗಳಲ್ಲಿ ಕಡ್ಡಿ ನಾಟಿಮಾಡಿದ ತಕ್ಷಣ ನೀರು ಹಾಯಿಸಬೇಕು. ಸಸಿ ಮಡಿಯ ಮಣ್ಣು ಮರಳುಮಿಶ್ರಿತ ಗೋಡುಮಣ್ಣು ಅಥವಾ ಕೆಂಪುಗೋಡು ಮಣ್ಣಾದಲ್ಲಿ ೪ರಿಂದ ೫ದಿನಗಳಿಗೊಮ್ಮೆ, ಕಪ್ಪು ಮತ್ತು ಜೇಡಿ ಮಣ್ಣಾದಲ್ಲಿ ೭ ರಿಂದ ೮ ದಿನಗಳಿಗೊಮ್ಮೆ ನೀರು ಹಾಯಿಸಬೇಕು. ಕಡ್ಡಿಗಳನ್ನು ನೆಟ್ಟ ೩೫ ರಿಂದ ೪೦ ದಿನಗಳನಂತರ ಮೊದಲನೇ ಸಾರಿ, ೬೦ ದಿನಗಳನಂತರ ಎರಡನೆ ಬಾರಿ ಚಿಗುರುತ್ತಿರುವ ಕಡ್ಡಿಗಳಿಗೆ ಹಾನಿಯಾಗದ ಕಳೆ ತೆಗೆಯಬೇಕು. ನಾಟಿ ಮಾಡಿದ ೫೫ ರಿಂದ ೬೦ ದಿನಗಳಲ್ಲಿ ಪ್ರತಿ ಸಸಿಮಡಿಗೆ ರಾಸಾಯನಿಕ ಗೊಬ್ಬರಗಳಾದ ಅಮೋನಿಯಂ ಸಲ್ಫೇಟ್ ೫೦೦ಗ್ರಾಂ ಹಾಕಿ ಅನಂತರ ತೆಳುವಾಗಿ ನೀರು ಹಾಯಿಸಬೇಕು.

೧೨) ಸಸಿಗಳನ್ನು ಕೀಳುವುದು. ಸಾಗಿಸುವುದು ಮತ್ತು ನಾಟಿಮಾಡುವುದು ಹೇಗೆ?

ಸಾಮಾನ್ಯವಾಗಿ ೩ ರಿಂದ ೪ ತಿಂಗಳ ಸಸಿಗಳನ್ನು ನಾಟಿಮಾಡುವುದು ಸೂಕ್ತ. ಹಿಪ್ಪು ನೇರಳೆಯನ್ನು ಮರಗಳ ರೀತಿ ಬೆಳೆಸಬೇಕಾದರೆ ೫ ರಿಂದ  ತಿಂಗಳ ಸಸಿಗಳನ್ನು ನೆಡಬೇಕು. ನಾಟಿಮಾಡುವ ಜಮೀನಿನಲ್ಲಿ  ಬೇಸಾಯ ಕ್ರಮಗಳನ್ನು ನಿರ್ವಹಿಸಿ ಸಸಿಗಳನ್ನು ಕೀಳಬೇಕು. ಸುಲಭವಾಗಿ ಸಸಿಗಳನ್ನು ಕೀಳಲು ಸಹಾಯವಾಗುವಂತೆ ಚೆನ್ನಾಗಿ ನೀರು ಹಾಯಿಸಿ, ಗುದ್ದಲಿ, ಪಿಕಾಸಿ ಅಥವಾ ಹಾರೆಯ ಸಹಾಯದಿಂದ ಬೇರು ಮತ್ತು ಕಾಂಡಕ್ಕೆ ಹಾನಿಯಾಗದಂತೆ ಒಂದು ಕಡೆಯಿಂದ ಆರಂಭಿಸಿ ಸುಮಾರು ೩೦ ಸೆಂ.ಮೀ. ಆಳಕ್ಕೆ ಅಗೆದು ಸಸಿಗಳನ್ನು ಒಂದಾದ ಮೇಲೊಂದರಂತೆ ತೆಗೆಯಬೇಕು. ಹಾಗೆ ಸಸಿಗಳನ್ನು ಆದಷ್ಟು ಬೇಗ ನಾಟಿಮಾಡುವ ಜಮೀನಿಗೆ ಸಾಗಿಸಬೇಕು. ದೂರ ಸಾಗಿಸುವುದಾದರೆ ಹಸುರು ಸೊಪ್ಪಿನಿಂದ ಮುಚ್ಚಿರಬೇಕು. ಇತ್ತೀಚಿನ ಸಂಶೋಧನಾ ಫಲಿತಾಂಶಗಳ ಆಧಾರದ ಮೇಲೆ ಹೇಳುವುದಾದರೆ ಸಸಿನೆಡುವ ಸಾಲನ್ನು ೨ ಅಡಿ ಆಳವಾಗಿ ಅಗೆದು ಒಂದು ಅಡಿಯಷ್ಟು ಕೊಟ್ಟಿಗೆ ಗೊಬ್ಬರವನ್ನು ತುಂಬಿ ಇನ್ನುಳಿದ ಒಂದು ಅಡಿಯಲ್ಲಿ ಕೆಂಪು ಮಣ್ಣು ತುಂಬಿ ಅನಂತರ ಸಸಿಗಳನ್ನು ನೆಡುವುದರಿಂದ ಹಿಪ್ಪು ನೇರಳೆ ಗಿಡಗಳು ಚೆನ್ನಾಗಿ ಬೆಳೆಯುತ್ತವೆ. ನಾಟಿಮಾಡುವಾಗ ಸರಿಯಾದ ಸ್ಥಳಾವಕಾಶ ಅಂದರೆ ಸಾಲಿನಿಂದ ಸಾಲಿಗೆ ೩ ಅಡಿ, ಗಿಡದಿಂದ ಗಿಡಕ್ಕೆ ೨ ಅಡಿ ಅಥವಾ ಸೂಕ್ತ ಸ್ಥಳಾವಕಾಶವನ್ನು ಕೊಟ್ಟು ನಾಟಿ ಮಾಡಬೇಕು.

೧೩) ಮೃದು ಅಥವಾ ಅತಿಮೃದು ಕಡ್ಡಿಗಳಿಂದ ಸಸಿಗಳನ್ನು ಹೇಗೆ ಬಳಸಬೇಕು?

ಮೃದು ಅಥವಾ ಅತಿಮೃದು ಕಡ್ಡಿಗಳನ್ನು ಮೇಲೆ ಎರಡು ಎಲೆಗಳಿರುವಂತೆ ಸಮತಟ್ಟಾಗಿ ಕತ್ತರಿಸಬೇಕು. ಕಡ್ಡಿಯ ಕೆಳಭಾಗವನ್ನು ಓರೆಯಾಗಿ ಕತ್ತರಿಸಿ, ಸಣ್ಣದಾಗಿ ಕಟ್ಟುಗಳನ್ನು ಕಟ್ಟಿ ಕೆಳಭಾಗದ ೨ ರಿಂದ ೩ ಸೆಂ.ಮೀ. ಭಾಗವನ್ನು ೨೫೦ಪಿ.ಪಿ.ಎಮ್.ಎನ್.ಎ.ಎ. ದ್ರಾವಣದಲ್ಲಿ ೨೪ಗಂಟೆಗಳ ಕಾಲ ಅದ್ದಬೇಕು. ಅನಂತರ ನೀರಿನಿಂದ ತೊಳೆದು ೨೪೦ x ೧೨೦ x ೫ ಅಳತೆಯ ಸಸಿಮಡಿಗಳಲ್ಲಿ ನೆಡಬೇಕು. ಈ ಸಸಿಮಡಿಯು ಫಲವತ್ತಾಗಿದ್ದು, ಅದಕ್ಕೆ ಕೊಟ್ಟಿಗೆ ಗೊಬ್ಬರ ಅಥವಾ ಕಾಂಪೋಸ್ಟ್ ಗೊಬ್ಬರ ಹಾಕಬೇಕು. ಸರಿಯಾದ ಸಮಯಕ್ಕೆ ನೀರು ಹಾಯಿಸಬೇಕು. ಸಾಮಾನ್ಯವಾಗಿ ಸಂಜೆಯ ವೇಳೆ ನಾಟಿಮಾಡಬೇಕು. ಕಡ್ಡಿ ನಾಟಿಮಾಡುವಾಗ ಪ್ರತಿಯೊಂದು ಸಾಲಿನಲ್ಲಿ ೮ ರಿಂದ ೧೦ ಸೆಂ.ಮೀ. ಸ್ಥಳವಾಕಾಶ ಕೊಟ್ಟು ೫ಸೆಂ.ಮೀ. ಆಳಕ್ಕೆ ಹೂಳಬೇಕು. ಸುತ್ತಲೂ ಮಣ್ಣನ್ನು ಏರಿಸಿ ಮಣ್ಣು ಚೆನ್ನಾಗಿ ನೆನೆಯುವಂತೆ ನೀರು ಚಿಮುಕಿಸಬೇಕು. ಬಿದಿರುಕಡ್ಡಿಯ ಸಹಾಯದಿಂದ ಪಾರದರ್ಶಕ ಪಾಲಿಥೀನ್ ಹಾಳೆಯನ್ನು ಗುಡಾರದಂತೆ ಹೊದಿಸಬೇಕು. ಸಸಿಮಡಿಯಿಂದ ಗುಡಾರದ ಛಾವಣಿ ಎತ್ತರ ೫೦ ರಿಂದ ೬೦ ಸೆಂ.ಮೀ. ಇರಬೇಕು. ಇದರಿಂದ ಗಾಳಿ ಹಾಗೂ ಉಷ್ಣಾಂಶ ನಿಯಂತ್ರಿಸಿ, ತೇವಾಂಶವನ್ನು ಕಾಪಾಡಬಹುದು. ಸಾಮಾನ್ಯವಾಗಿ ಸಸಿ ಚೆನ್ನಾಗಿ ಬೆಳೆಯಲು ೨೫ಡಿಗ್ರಿ ಯಿಂದ ೩೦ಡಿಗ್ರಿ ಸೆ.ಗ್ರೇ. ಉಷ್ಣಾಂಶ ಮತ್ತು ೨೦೦೦ ಲಕ್ಸ್ ಬೆಳಕು ಬೇಕಾಗುತ್ತದೆ. ಸಸಿಮಡಿಗೆ ಹೆಚ್ಚು ನೀರು ಹಾಕಬಾರದು, ಆದರೆ, ಸಸಿಮಡಿ ಒಣಗದಂತೆ ನೋಡಿಕೊಳ್ಳಬೇಕು. ಪ್ರತಿ ಕಡ್ಡಿಯಲ್ಲಿ ಸುಮಾರು ೧೦ಕ್ಕಿಂತ ಹೆಚ್ಚು ಬೇರುಗಳು ಕಾಣಿಸಿಕೊಂಡನಂತರ ಅಂದರೆ ೩೦ರಿಂದ ೪೦ದಿನಗಳ ನಂತರ ಪ್ಲಾಸ್ಟಿಕ್ ಹೊದಿಕೆಯನ್ನು ತೆಗೆಯಬೇಕು. ಹೊದಿಕೆತೆಗೆದ ೨ರಿಂದ ೩ವಾರಗಳ ನಂತರ ರಸಗೊಬ್ಬರ ಕೊಡಬೇಕು. ಹೀಗೆ ಬೆಳೆಸಿದ ಸಸಿಗಳನ್ನು ೩ರಿಂದ ೪ ತಿಂಗಳನಂತರ ನಾಟಿಮಾಡಬೇಕು.

೧೪) ಮಳೆಯಾಶ್ರಿತ ಹಿಪ್ಪುನೇರಳೆ ಬೇಸಾಯಕ್ಕಾಗಿ ಭೂಮಿಯ ಆಯ್ಕೆ ಹಾಗೂ ಭೂಮಿಯ ಸಿದ್ಧತೆ, ಕಡ್ಡಿಗಳ ನಾಟಿ, ಗೊಬ್ಬರ ನಿರ್ವಹಣೆ, ಸೊಪ್ಪು ಇಳುವರಿ ಇತ್ಯಾದಿ ಬಗ್ಗೆ ತಿಳಿಸಿ?

ಮಳೆಯಾಶ್ರಿತ ಪ್ರದೇಶದಲ್ಲಿಯೂ ಹಿಪ್ಪುನೇರಳೆ ಬೇಸಾಯ ಮಾಡಬಹುದು. ಇಂಥಲ್ಲಿ ನೀರಿನ ಅಭಾವವಿರುವುದರಿಂದ ನೀರುಸಂರಕ್ಷಣೆ, ಸಸ್ಯಸಂರಕ್ಷಣೆ ಮತ್ತು ಸುಧಾರಿತ ಬೇಸಾಯ ಕ್ರಮಗಳಿಂದ ಎಸ್-೧೩ ತಳಿಯನ್ನು ಕೆಂಪು ಮಿಶ್ರಿತ ಜೇಡಿಮಣ್ಣಿನಲ್ಲೂ ಹಾಗೂ ಎಸ್-೩೪ ತಳಿಯನ್ನು ಕಪ್ಪು ಮಣ್ಣಿನಲ್ಲೂ ಉತ್ತಮವಾಗಿ ಬೆಳೆಯಬಹುದು. ಸಮತಟ್ಟಾದ ಭೂಮಿ ಅಥವಾ ಸ್ವಲ್ಪಮಟ್ಟಿನ ಇಳಿಜಾರು ಭೂಮಿ ಉತ್ತಮ. ತೀರಾ ಇಳಿಜಾರು ಭೂಮಿಯಾದಲ್ಲಿ ಸೂಕ್ತ ರೀತಿಯಲ್ಲಿ ಬದುಗಳನ್ನು ಹಾಕಿ ನೀರಿನ ಸಂರಕ್ಷಣೆ ಮಾಡಬೇಕು.

ಭೂಮಿ ಹದಮಾಡುವಿಕೆ

ಮುಂಗಾರಿಗೆ ಮೊದಲು ಭೂಮಿಯನ್ನು ೩೦-೩೫ ಸೆಂ.ಮೀ. ಆಳವಾಗಿ ಉಳುಮೆಮಾಡಿ ಮಣ್ಣಿನಲ್ಲಿರುವ ಕ್ರಮಿಗಳನ್ನು ನಾಶಪಡಿಸಬೇಕು. ಇದಕ್ಕಾಗಿ ಬೇಸಿಗೆ ಪ್ರಾರಂಭವಾಗುವುದಕ್ಕೆ ಮೊದಲು ಮಣ್ಣಿನಲ್ಲಿರುವ ಸ್ವಲ್ಪ ತೇವಾಂಶವನ್ನೇ ಉಪಯೋಗಿಸಿಕೊಂಡು ಉಳುಮೆಮಾಡಬೇಕು. ಇದರಿಂದ ಬೇಸಿಗೆಯ ಬಿಸಿಲಿನ ತಾಪಕ್ಕೆ ಕೀಟಗಳು ಸಾಯುತ್ತವೆ. ಅನಂತರ ಮುಂಗಾರು ಪ್ರಾರಂಭವಾದಾಗ ಉಳುಮೆಮಾಡಿ ಹೆಂಟೆಗಳನ್ನು ಒಡೆದು, ಸಮತಟ್ಟುಮಾಡಿ ಬೇಕಾದ ವಸ್ತೀರ್ಣಕ್ಕೆ ತಾಕುಗಳನ್ನು ಮಾಡಿಕೊಳ್ಳಬೇಕು. ನಾಟಿಗೆ ಮುನ್ನ ೩೫ ಸೆಂ.ಮೀ. ಘನ ಅಳತೆಯ ೩೫ ಸೆಂ.ಮೀ. ವಿಸ್ತೀರ್ಣದ ಗುಂಡಿಗಳನ್ನು ೯೦ x ೯೦ ಸೆಂ.ಮೀ.ಅಂತರದಲ್ಲಿ ತೆಗೆದು ೨ಕಿ.ಗ್ರಾಂ ಕೊಟ್ಟಿಗೆ ಗೊಬ್ಬರ ಮತ್ತು ಕೆಂಪು ಮಣ್ಣನ್ನು ಹಾಕಿ ಅನಂತರ ನಾಟಿಮಾಡಬೇಕು.

ಹಿಪ್ಪುನೇರಳೆ ತಳಿ ಮತ್ತು ಕಡ್ಡಿಗಳ ನಾಟಿ :

ಸಾಮಾನ್ಯವಾಗಿ ೧೦ ರಿಂದ ೧೫ಮಿ.ಮೀ.ಗಾತ್ರ,  ೨೦ರಿಂದ ೨೨ಸೆ.ಮೀ. ಉದ್ದ ಹಾಗೂ ೩ರಿಂದ ೪ಕಣ್ಣುಗಳಿರುವ ೬ರಿಂದ ೮ತಿಂಗಳ ರೆಂಬೆಕಡ್ಡಿಗಳನ್ನು ನಾಟಿಮಾಡಬೇಕು. ಒಂದು ಗುಂಡಿಗೆ ೩ ಕಡ್ಡಿಯಂತೆ ೧೫ಸೆಂ.ಮೀ. ಅಂತರದಲ್ಲಿ ತ್ರಿಕೋನಾಕಾರದಲ್ಲಿ ನೆಡಬೇಕು. ನೆಡುವಾಗ ಒಂದು ಕಣ್ಣು ಭೂಮಿಯ ಮೇಲೆ ಎರಡು ಕಣ್ಣು ಭೂಮಿಯ ಒಳಗಿರಬೇಕು. ಮಳೆಯಾಧಾರಿತ ಬೇಸಾಯದಲ್ಲಿ ೪ ತಿಂಗಳು ಬೆಳೆದ ಸಸಿಯನ್ನು ಒಂದು ಗುಂಡಿಗೆ ಒಂದರಂತೆ ನೆಡುವುದು ಉತ್ತಮ. ನೆಟ್ಟ ಸ್ವಲ್ಪ ದಿನ ತೇವಾಂಶ ಕಡಿಮೆ ಇದ್ದಲ್ಲಿ ನೀರು ಹಾಕಬೇಕು.

ಗೊಬ್ಬರ ನಿರ್ವಹಣೆ :  ನಾಟಿಮಡಿದ ೨ ರಿಂದ ೩ ತಿಂಗಳ ನಂತರ ಕಳೆ ತೆಗೆಯಬೇಕು. ಅನಂತರ ಪ್ರತಿ ಹೆಕ್ಟೇರಿಗೆ ೨೫ ಕಿ.ಗ್ರಾಂ ಸಂಕೀರ್ಣ ರಸಗೊಬ್ಬರ ಕೊಡಬೇಕು. ಮೂರು ತಿಂಗಳ ನಂತರ ಮತ್ತೆ ಕಳೆ ತೆಗೆದು, ಪ್ರತಿ ಹೆಕ್ಟೇರಿಗೆ ೨೫ಕಿ.ಗ್ರಾಂ ಯೂರಿಯಾ ಅಥವಾ ಅಮೋನಿಯಂ ಸಲ್ಫೇಟ್ ಕೊಡಬೇಕು. ಗಿಡ ಚೆನ್ನಾಗಿ ಬೆಳೆದು ೮ರಿಂದ ೧೦ಸೆಂ.ಮೀ. ಎತ್ತರಕ್ಕೆ ಕಟಾವು ಮಾಡಬೇಕು.

ಹಿಪ್ಪು ನೇರಳೆ ಸೊಪ್ಪಿನ ಇಳುವರಿ : ಮೊದಲ ಎರಡು ವರ್ಷಗಳಲ್ಲಿ ಪ್ರತಿ ಹೆಕ್ಟೇರಿಗೆ ವರ್ಷಕ್ಕೆ ೭ರಿಂದ ೮ಮೆ.ಟನ್, ೩ನೇ ವರ್ಷದನಂತರ ಪ್ರತಿ ಹೆಕ್ಟೇರಿಗೆ ವರ್ಷಕ್ಕೆ ೧೦ರಿಂದ ೧೨ಮೆ.ಟನ್. ಸೊಪ್ಪಿನ ಇಳುವರಿ ದೊರೆಯುತ್ತದೆ.

೧೫) ನೀರಾವರಿ ಹಿಪ್ಪುನೇರಳೆ ಬೇಸಾಯದಲ್ಲಿ ಭೂಮಿಯ ಆಯ್ಕೆ ಹಾಗೂ ಸಿದ್ಧತೆ, ತಳಿಗಳು, ಕಡ್ಡಿಗಳ ನಾಟಿ, ನೀರಾವರಿ, ಗೊಬ್ಬರ ನಿರ್ವಹಣೆ, ಕೊಯ್ಲು, ಎಲೆ ಇಳುವರಿ, ಇತ್ಯಾದಿ ಬಗ್ಗೆ ತಿಳಿಸಿ?

ಹಿಪ್ಪುನೇರಳೆ ಬಹುವಾರ್ಷಿಕ ಬೆಳೆ. ಸೂಕ್ತ ಪ್ರಮಾಣದಲ್ಲಿ ರಸಗೊಬ್ಬರ ಮತ್ತು ನೀರಾವರಿ ಇದ್ದಲ್ಲಿ ವರ್ಷಕ್ಕೆ ಹೆಕ್ಟೇರಿಗೆ ೩೫ ಮೆ.ಟನ್ (೩೫,೦೦೦ಕಿ.ಗ್ರಾಂ) ಹಿಪ್ಪು ನೇರಳೆ ಸೊಪ್ಪನ್ನು ಪಡೆಯಬಹುದು. ಹಿಪ್ಪುನೇರಳೆ ಗಿಡ ನೆಟ್ಟ ಎರಡನೇ ವರ್ಷದಲ್ಲಿ ಸೊಪ್ಪಿನ ಇಳುವರಿ ಪ್ರಾರಂಭವಾಗಿ ೧೫ ರಿಂದ ೨೦ ವರ್ಷಗಳವರೆಗೆ ಸೊಪ್ಪು ಪಡೆಯಬಹುದು. ಆದ್ದರಿಂದ ಗಿಡನೆಡುವ ಸಮಯದಲ್ಲಿ ಕೆಲವು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬಹುದು.

ಭೂಮಿಯ ಆಯ್ಕೆ ಹಾಗೂ ಸಿದ್ಧತೆ: ಸಮತಟ್ಟಾದ ಮರಳುಮಿಶ್ರಿತ ಗೋಡುಮಣ್ಣು ಸೂಕ್ತ. ಮುಂಗಾರು ಮಳೆಗೆ ಮೊದಲು ೨-೩ ಬಾರಿ ಚೆನ್ನಾಗಿ ಹೆಂಟೆಗಳನ್ನು ಒಡೆದು ಮಣ್ಣನ್ನು ಹದಗೊಳಿಸಬೇಕು. ಗುಣಿಪದ್ಧತಿಯಲ್ಲಿ ನಾಟಿಮಾಡುವುದು ಸೂಕ್ತ. ೩೫ಸೆಂ.ಮೀ. ಘನ ಅಳತೆಯ ಗುಂಡಿ ತೋಡಿ ೧:೨ ಪ್ರಮಾಣದಲ್ಲಿ ಕೊಟ್ಟಿಗೆ ಗೊಬ್ಬರ ಮತ್ತು ಮಣ್ಣನ್ನು ಹಾಕಬೇಕು. ಇದಕ್ಕೆ ಮೊದಲು ಸ್ಥಳವಾಕಾಶಕ್ಕನುಗುಣವಾಗಿ ಗುಂಡಿ ತೋಡಬೇಕು. ಸಾಮಾನ್ಯವಾಗಿ ೬೦ x ೬೦ಸೆಂ.ಮೀ., ೯೦ x ೯೦ಸೆಂ.ಮೀ. ಅಥವಾ ಜೋಡಿ ಸಾಲುಪದ್ಧತಿ ಸಾಲುಗಳ ಮಧ್ಯೆ ೯೦ಸೆಂ.ಮೀ ಸಾಲಿನ ಗಿಡಗಳ ಮಧ್ಯೆ ೬೦ಸೆಂ.ಮೀ. ಹಾಗೂ ಎರಡು ಜೋಡು ಸಾಲುಗಳ ಮಧ್ಯೆ ೧೨೦ಸೆಂ.ಮೀ. ಅಥವಾ ಇತರ ಸೂಕ್ತ ಸ್ಥಳಾವಕಾಶ ನಿರ್ಧರಿಸಿಬಹುದು.

ಇತ್ತೀಚೆಗೆ ಶಿಫಾರಸು ಮಾಡಿರುವ ಎಂ-೫, ಎಸ್-೩೬, ಎಸ್-೫೪, ವಿಶ್ವ ಮತ್ತು ವಿ-೧ ನೆಡಬಹುದಾಗಿದೆ.

ಕಡ್ಡಿಗಳ ನಾಟಿ: ೩ ರಿಂದ ೪ ತಿಂಗಳು ಬೆಳೆದ ಸಸಿಗಳನ್ನು ನಾಟಿಮಾಡುವುದು ಸೂಕ್ತ. ನೇರವಾಗಿ ಕಡ್ಡಿಗಳನ್ನೂ ಸಹ ನೆಡಬಹುದು. ಈ ಕಡ್ಡಿಯು ೬ ರಿಂದ ೮ ತಿಂಗಳಷ್ಟು ಬಲಿತಿರಬೇಕು. ೧೫ ರಿಂದ ೨೦ಸೆಂ.ಮೀ. ಉದ್ದ ಮತ್ತು ೧.೫ ಸೆಂ.ಮೀ. ಸುತ್ತಳತೆಯಿದ್ದು ೪ ರಿಂದ ೫ ಕಣ್ಣುಗಳಿರಬೇಕು. ಕಡ್ಡಿ ನೆಡುವಾಗ ೩ ಕಡ್ಡಿಗಳನ್ನು ೧೫ ಸೆಂ.ಮೀ. ಅಂತರದಲ್ಲಿ ತ್ರಿಕೋನಾಕೃತಿಯಲ್ಲಿ ಒಂದು ಕಣ್ಣು ಮಣ್ಣಿನಿಂದ ಮೇಲೆ ಉಳಿದ ಕಣ್ಣು ಮಣ್ಣಿನೊಳಗಿರುವಂತೆ ನೆಟ್ಟು ಸರಿಯಾಗಿ ನೀರು ಹಾಯಿಸಬೇಕು. ನೆಟ್ಟ ೨ ರಿಂದ ೩ ತಿಂಗಳಲ್ಲಿ ಚಿಗುರದೇ ಹೋದರೆ ಬೇರೆ ಕಡ್ಡಿಗಳನ್ನು ನೆಡಬೇಕಾಗುತ್ತದೆ.

ನೀರಾವರಿ, ಗೊಬ್ಬರ ನಿರ್ವಹಣೆ, ಕೊಯ್ಲು: ಸಸಿಗಳನ್ನು ನೆಟ್ಟನಂತರ ೮ ರಿಂದ ೧೦ ದಿನಗಳಿಗೊಮ್ಮೆ ನೀರು ಹಾಯಿಸಬೇಕು. ೨ ತಿಂಗಳನಂತರ ಕಳೆ ತೆಗೆಯಬೇಕು ಅಥವಾ ಕುಂಟೆ ಹೊಡೆಯಬೇಕು. ೩ ತಿಂಗಳನಂತರ ಕಳೆ ತೆಗೆದು, ಸಾರಜನಕ, ರಂಜಕ ಮತ್ತು ಪೊಟ್ಯಾಷ್‌ಗಳನ್ನು ಹೆಕ್ಟೇರಿಗೆ ೫೦:೫೦:೫೦ ಪ್ರಮಾಣದಲ್ಲಿ ಹಾಗೂ ಆರು ತಿಂಗಳನಂತರ ಮೊದಲ ಕೊಯ್ಲು ಮಾಡಬೇಕು. ಅನಂತರ ಕಳೆ ತೆಗೆದು ಹೆಕ್ಟೇರಿಗೆ ೫೦ಕಿ.ಗ್ರಾಂ ಯೂರಿಯ ಹಾಕಬೇಕು. ಇದರಿಂದ ೩ ತಿಂಗಳಿಗೊಮ್ಮೆ ಕೊಯ್ಲು ಪಡೆಯಬಹುದು. ಒಂದು ವರ್ಷದ ನಂತರ ಭೂಮಿಯಿಂದ ೨೦ಸೆಂ.ಮೀ. ಮೇಲೆ ಕಟಾವು ಮಾಡಬೇಕು. ಎರಡನೇ ವರ್ಷ ಮತ್ತು ಅನಂತರದ ವವರ್ಷಗಳಲ್ಲಿ ಪ್ರತಿ ಹೆಕ್ಟೇರಿಗೆ ೨೦ ಟನ್ ಕೊಟ್ಟಿಗೆ ಗೊಬ್ಬರ, ಜೊತೆಗೆ, ಶಿಫಾರಸು ಮಾಡಿದಂತೆ ೩೦೦:೧೨೦:೧೨೦ ಸಾರಜನಕ, ರಂಜಕ ಮತ್ತು ಪೊಟ್ಯಾಷ್ (ಪ್ರತಿ ಹೆಕ್ಟೇರಿಗೆ ವರ್ಷಕ್ಕೆ ೫ ರಿಂದ ೬ ಕಂತುಗಳಲ್ಲಿ) ಹಾಕಬೇಕು. ಪ್ರತಿಸಾರಿ ಕೊಯ್ಲಾದ ೨೦ ರಿಂದ ೨೫ ದಿನಗಳೊಳಗೆ ರಸಗೊಬ್ಬರವನ್ನು ೫ ರಿಂದ ೮ಸೆಂ.ಮೀ. ಆಳದಲ್ಲಿ ಹಾಕಿ ಮಣ್ಣಿನಿಂದ ಮುಚ್ಚಬೇಕು. ಇದರ ಜೊತೆಗೆ ಸಾರಜನಕ, ರಂಜಕ ಗೊಬ್ಬರಗಳನ್ನು ಪರಿಣಾಮಕಾರಿಯಾಗಿ ಬಳಸಲು ಮತ್ತು ಉಳಿಸಲು ಜೈವಿಕಗೊಬ್ಬರಗಳಾದ ವ್ಯಾಮ್ (V) ಅಜಟೋಬ್ಯಾಕ್ಟರ್‌ಗಳನ್ನು ಸಹ ಉಪಯೋಗಿಸಬಹುದು.

ಲಘು ಪೋಷಕಾಂಶಗಳ ಕೊರತೆ ಇದ್ದಲ್ಲಿ, ಮೆಕ್ರೋಲಿಕ್ಸ್, ಸಿರಿಬೂಸ್ಟ್, ಹರಿತ್‌ನಂತಹ ರಾಸಾಯನಿಕಗಳನ್ನು ಸಿಂಪರಿಸಬಹುದು ಅಥವಾ ಲಘು ಪೋಷಕಾಂಶಗಳಿರುವ ಗೊಬ್ಬರಗಳನ್ನು ಮಣ್ಣಿಗೂ ಸೇರಿಸಬಹುದು.

ಪ್ರತಿ ಕೊಯ್ಲಿನನಂತರ ಉಳುಮೆಮಾಡಿ ಮಣ್ಣನ್ನು ಸಡಿಲಗೊಳಿಸಬೇಕು, ಕಳೆ ತೆಗೆಯಬೇಕು. ಕಳೆ ತೆಗೆಯಲು ಗ್ಲೈಸಿಲ್ ಕಳೆನಾಶಕವನ್ನು ಉಪಯೋಗಿಸಬಹುದು.

ಕೊಯ್ಲಿನಲ್ಲಿ ಎರಡು ವಿಧಾನಗಳಿದ್ದು (ಎಲೆ ಬಿಸಿಸುವುದು, ರೆಂಬೆ ಕಟಾವು) ಇದರಲ್ಲಿ ರೆಂಬೆ ಪದ್ಧತಿಯಿಂದ ಹುಳುಸಾಕಣೆಮಾಡುವುದರಿಂದ ಕೆಲಸಗಾರರ ವೆಚ್ಚ ಕಡಿಮೆಯಾಗುತ್ತದೆ. ಜೊತೆಗೆ ಪ್ರತಿ ಹೆಕ್ಟೇರಿಗೆ ವರ್ಷಕ್ಕೆ ೨೫,೦೦೦ ರಿಂದ ೭೫,೦೦೦ಕಿ.ಗ್ರಾಂ. ಇಳುವರಿ ಪಡೆಯಬಹುದು.

೧೬) ಹಿಪ್ಪುನೇರಳೆಯಲ್ಲಿ ಅಂತರ ಬೇಸಾಯ ಕುರಿತು ವಿವರಿಸಿ?

 • ಸೊಪ್ಪು ಬಿಡಿಸುವ ಪದ್ಧತಿಯಲ್ಲಿ ಗುಣಿಕಡ್ಡಿ ತೋಟವನ್ನು ವರ್ಷಕ್ಕೆ ಒಂದು ಅಥವಾ ಎರಡು ಬಾರಿ ಕಟಾವು ಮಾಡಬಹುದು.
 • ಸೊಪ್ಪು ಬಿಡಿಸುವ ಪದ್ಧತಿಯಲ್ಲಿ ಕಟಾವು ಮಾಡಿದನಂತರ ಅಥವಾ ರೆಂಬೆ ಪದ್ಧತಿಯಲ್ಲಿ ಬೆಳೆ ಮುಗಿದನಂತರ ನೇಗಿಲಿನಿಂದ ಉಳುಮೆಮಾಡಿ ಮಣ್ಣು ಸಡಿಲಗೊಳಿಸಬೇಕು.
 • ಕಳೆಗಿಡಗಳನ್ನು ಆರಿಸಿ, ಸಂಗ್ರಹಿಸಿ ಕಾಂಪೋಸ್ಟ್ ತಯಾರಿಸಲು ಉಪಯೋಗಿಸಬಹುದು. ಪಾರ್ಥೇನಿಯಂ ಕಳೆಯನ್ನು ಸುಡಬೇಕು. ಸೊಪ್ಪು ಬಿಡಿಸಿದನಂತರ ಅಥವಾ ಪ್ರತಿ ಬಾರಿಯೂ ಮಣ್ಣನ್ನು ಸಡಿಲಗೊಳಿಸುವುದು ಸೂಕ್ತ.
 • ಗುಣಿ ಪದ್ಧತಿಯಲ್ಲಿ ಗಿಡಗಳನ್ನು ಭೂಮಿಮಟ್ಟದಿಂದ ೧೨ ರಿಂದ ೧೫ ಅಂಗುಲ ಬಿಟ್ಟು ಕತ್ತರಿಸಬೇಕು.
 • ಮಣ್ಣಿನಲ್ಲಿ ತೇವಾಂಶ ಸಂರಕ್ಷಿಸಲು ಕತ್ತರಿಸಿದ ಹಸುರು ಕಡ್ಡಿಗಳ ಹಸುರು ಭಾಗವನ್ನು ಅಡ್ಡಡ್ಡವಾಗಿ ಹರಡಿ ಮಣ್ಣು ಮುಚ್ಚಿದರೆ ಉತ್ತಮ.
 • ಗರಿಕೆ, ತುಂಗೆ(ಕೊನ್ನಾರಿ) ಮುಂತಾದ ಕಳೆಗಳನ್ನು ಶೇ.೦.೭ರ ಗ್ಲೈಸೆಲ್ ಸಿಂಪಡಿಸಿ ನಾಶಪಡಿಸಬೇಕು.
 • ಭೂಮಿಯ ತೇವಾಂಶ ನೋಡಿಕೊಂಡು ವಾರಕ್ಕೊಮ್ಮೆ ಅಥವಾ ಹತ್ತು ದಿನಗಳಿಗೊಮ್ಮೆ ನೀರು ಹಾಯಿಸಬೇಕು.
 • ನೀರಿನ ಆಸರೆ ಕಡಿಮೆ ಇರುವ ರೈರತು ನೀರಿನ ಉಳಿತಾಯ ಮಾಡಲು ಹನಿ ನೀರಾವರಿ ಪದ್ಧತಿಯನ್ನು ಅಳವಡಿಸಿದರೆ ಉತ್ತಮ.
 • ತೋಟಕ್ಕೆ ರಸಗೊಬ್ಬರ ಹಾಕಿದ ಕೂಡಲೇ ಮುಚ್ಚಿ, ಯುಕ್ತ ರೀತಿಯಲ್ಲಿ ಬಳಕೆಯಾಗಲು ಭೂಮಿಯಲ್ಲಿ ತೇವಾಂಶ ಇರುವಂತೆ ಎಚ್ಚರವಹಿಸಬೇಕು.
 • ಭೂಮಿಗೆ ಯಥೇಚ್ಚವಾಗಿ ಕಾಂಪೋಸ್ಟ್ ಅಥವಾ ಕೊಟ್ಟಿಗೆ ಗೊಬ್ಬರ ಒದಗಿಸಿದರೆ ಭೂಮಿಯಲ್ಲಿ ಹೆಚ್ಚುಕಾಲ ನೀರು/ತೇವಾಂಶ ಉಳಿದಿರುತ್ತದೆ.
 • ವರ್ಷಕ್ಕೊಮ್ಮೆಯಾದರೂ ಹುರುಳಿ, ಸೆಣಬನ್ನು ಬಿತ್ತನೆ ಮಾಡಿ, ಅದು ಹೂಬಿಡುವ ಕಾಲಕ್ಕೆ ಕಟಾವುಮಾಡಿ ಭೂಮಿಗೆ ಸೇರಿಸಬೇಕು.

೧೭) ಚಾಕಿಹುಳು ಸಾಕಣೆಗಾಗಿಯೇ ಹಿಪ್ಪುನೇರಳೆ ತೋಟವನ್ನು ಬೆಳೆಸುವ ಬಗೆ ಹೇಗೆ?

 • ಆರೋಗ್ಯಕರವಾದ ಚಾಕಿ ಹುಳುವಿನ ಬೆಳವಣಿಗೆಗೆ ರಸಭರಿತ ಸೊಪ್ಪು ನೀಡುವುದು ಅತ್ಯಗತ್ಯ.
 • ಅದಕ್ಕಾಗಿ ಗುಣಿಕಡ್ಡಿ ಪದ್ಧತಿಯ ತೋಟದಲ್ಲಿ ಒಂದು ಭಾಗವನ್ನು ಪ್ರತ್ಯೇಕವಾಗಿ ಮೀಸಲಿರಿಸಬೇಕು.
 • ಇದಕ್ಕೆ ಒಂದು ಎಕರೆಗೆ ಸುಮರು ಎರಡರಿಂದ ಮೂರುಗುಂಟೆ ಪ್ರದೇಶ ಸಾಕು.
 • ಸಾಲುಕಡ್ಡಿ ಇರುವವರು ಚಾಕಿ ಸಾಕಣೆಗೆಂದು ಪ್ರತ್ಯೇಕವಾಗಿ ಬೇಕಾಗಿರುವಷ್ಟು ಗುಣಿಕಡ್ಡಿ ತೋಟದ ನಿರ್ವಹಣೆ ಮಾಡಿಕೊಳ್ಳಬೇಕು. ಕನಿಷ್ಠಪಕ್ಷ ಒಂದು ಎಕರೆಗೆ ೨೪ಟನ್ ಕೊಟ್ಟಿಗೆ ಗೊಬ್ಬರವನ್ನು ಎರಡು ಸಮಕಂತುಗಳಲ್ಲಿ ಹಾಕಬೇಕು.
 • ೮ ಸಮ ಕಂತುಗಳಲ್ಲಿ ಒಂದು ಎಕರೆಗೆ ೯೦:೬೦:೬೦ ಸಾರಜನಕ:ರಂಜಕ:ಪೊಟ್ಯಾಷ್ ರಾಸಾಯನಿಕ ಗೊಬ್ಬರಗಳನ್ನು ನೀಡಬೇಕು.
 • ೪ ರಿಂದ ೭ ದಿನಗಳಿಗೊಮ್ಮೆ ನೀರು ಹಾಯಿಸಬೇಕು.
 • ಬುಡ ಕತ್ತರಿಸಿದಂದಿನಿಂದ ೩೫ ದಿನಗಳನಂತರ ಸೊಪ್ಪನ್ನು ಕೀಳಬೇಕು. ಅನಂತರ ಮುಂದಿನ ೧೦ ದಿನಗಳ ನಂತರ ರೆಂಬೆ ತುದಿ ಭಾಗ ಕತ್ತರಿಸಬೇಕು.

೧೮) ಹಿಪ್ಪುನೇರಳೆ ವ್ಯವಸಾಯದಲ್ಲಿ ಹನಿ ನೀರಾವರಿ ಎಷ್ಟು ಸಮಂಜಸ?

 • ಸಕಾಲದಲ್ಲಿ ಅವಶಯಕತೆಗೆ ತಕ್ಕಂತೆ ಮಳೆ ಆಗದೇ ಇರುವುದರಿಂದ ಭೂಮಿಯ ಅಂತರ್ಜಲ ಮಟ್ಟ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ.
 • ಕೊಳವೆ  ಬಾವಿಗಳ ಜಲವೂ ಕಡಿಮೆಯಾಗುತ್ತಿದ್ದು ಆತಂಕಕ್ಕೆ ಎಡೆಮಾಡಿಕೊಟ್ಟಿದೆ.
 • ಕಾಲುವೆಗಳಲ್ಲಿ ನೀರು ಹಾಯಿಸ ಇಡೀ ತೋಟಕ್ಕೆ ನೀರನ್ನು ಹಾಯಿಸುವುದು ಸರಿಯಾದ ನಿರ್ವಹಣಾ ವಿಧಾನವಾಗಿ ಉಳಿದಿಲ್ಲ.
 • ಈ ಕಾರಣಗಳಿಂದಾಗಿ ಅತ್ಯಾಧುನಿಕವಾದ ಹನಿ ನೀರಾವರಿ ಪದ್ಧತಿ ಅತ್ಯಂತ ಉಪಯುಕ್ತ ಹಾಗೂ  ಸಮಂಜಸ ನೀರಾವರಿಯಾಗಿದೆ.
 • ಈ ವಿಧಾನದಲ್ಲಿ ಗಿಡಕ್ಕೆ ಬೇಕಾಗುವ ನೀರನ್ನು ಬೇರಿನ ಸಮೂಹದ ಸಮೀಪದಲ್ಲಿ ಪ್ಲಾಸ್ಟಿಕ್ ಕೊಳವೆಗಳು ಹಾಗೂ ಜಿನುಗುವ ಸಲಕರಣೆಗಳಿಂದ ಒದಗಿಸಲಾಗುತ್ತದೆ. ಇದರಿಂದಾಗಿ ನೀರಿನ ಸಮರ್ಪಕ ನಿರ್ವಹಣೆಯಾಗುವುದಲ್ಲದೆ, ಲಾಭದಾಯಕ ಇಳುವರಿಯೂ ಸಾಧ್ಯ.

ಉಪಯೋಗಗಳು

 • ರಸಗೊಬ್ಬರ ಬಳಕೆಯಲ್ಲಿಯೂ ಶೇ. ೨೫ ರಿಂದ ೫೦ ಭಾಗ ಉಳಿತಾಯ ಮಾಡಬಹುದು.
 • ಕಳೆಯ ಬೆಳವಣಿಗೆ ಕಡಮೆಯಾಗುತ್ತದೆ.
 • ಕೂಲಿ ವೆಚ್ಚದಲ್ಲಿಯೂ ಉಳಿತಾಯ ಸಾಧ್ಯವಾಗುತ್ತದೆ.
 • ಮಣ್ಣಿನ ಸವೆತ ಕಡಿಮೆಯಾಗುತ್ತದೆ.
 • ಅಧಿಕ ಪ್ರದೇಶವನ್ನು ನೀರಾವರಿಗೆ ಅಳವಡಿಸಲು ಸಾಧ್ಯ.

೧೯) ಜೈವಿಕ ಗೊಬ್ಬರವೆಂದರೇನು? ಹಿಪ್ಪುನೇರಳೆ ಬೇಸಾಯದಲ್ಲಿ ಅವುಗಳನ್ನು ಹೇಗೆ ಬಳಸಬೇಕು? ಇದರಿಂದಾಗುವ ಪ್ರಯೋಜನಗಳೇನು?

 • ಜೈವಿಕ ಗೊಬ್ಬರ ಎಂದರೆ ಗಾಳಿ ಮತ್ತು ಭೂಮಿಯಿಂದ ಬೆಳೆಗಳಿಗೆ ಬೇಕಾದ ಹಲವು ಪೋಷಕಾಂಶಗಳನ್ನು (ಸಾರಜನಕ, ಪೊಟ್ಯಾಶ್, ರಂಜಕ ಇತ್ಯಾದಿ) ಪಡೆದು ಬೇರುಗಳಿಗೆ ನೀಡುವಂತಹ ಸಜೀವವಾದ ಕಣ್ಣಿಗೆ ಕಾಣದಂತಹ ಸೂಕ್ಷ್ಮ ಜೀವಿಗಳು.
 • ಇದನ್ನು ಸಂಶೋಧನಾ ಕೇಂದ್ರಗಳಲ್ಲಿ ಕೃತಕ ಮಾಧ್ಯಮ ಅಥವಾ ಸಸ್ಯಗಳ ಸಹಜೀವನದಿಂದ ಅಭಿವೃದ್ಧಿಪಡಿಸಲಾಗುತ್ತದೆ.
 • ಅನಂತರ ಇವುಗಳನ್ನು ಬೀಜ, ಮಣ್ಣು ಮತ್ತು ಗೊಬ್ಬರದ ಮೂಲಕ ಉಪಯೋಗಿಸುವುದರಿಂದ ಹೆಚ್ಚಿನ  ರಾಸಾಯನಿಕ ಗೊಬ್ಬರಗಳ ಸಹಾಯವಿಲ್ಲದೆ ಉತ್ತಮ ಇಳುವರಿ ಪಡೆಯಬಹುದು.

ಸಾರಜನಕ ಒದಗಿಸಬಲ್ಲ ಸೂಕ್ಷ್ಮಜೀವಿಗಳು(ಅಜಟೋಬ್ಯಾಕ್ಟರ್ ಅಸೋಸ್ಪೈರಿಲಂ)

 • ಇವು ಬ್ಯಾಕ್ಟೀರಿಯಾ ಜಾತಿಗೆ ಸೇರಿದ ಅಣುಜೀವಿಗಳು
 • ಒಂದು ಎಕರೆಗೆ ೮ಕಿ.ಗ್ರಾಂ. ಅಜಟೋಬ್ಯಾಕ್ಟರ್ ಅಥವಾ ಅಸೋಸ್ಪೈರಿಲಂ ಅಣಜೀವಿಗಳನ್ನು ೨ ಸಮ ಕಂತುಗಳಲ್ಲಿ ಕೊಟ್ಟಿಗೆ ಗೊಬ್ಬರ ಅಥವಾ ಕಾಂಪೋಸ್ಟ್ ಮೂಲಕ ಮಣ್ಣಿಗೆ ಸೇರಿಸಬೇಕು. ಸಸ್ಯಬೇರುಗಳ ಸಮೀಪ ಹಾಕುವುದರಿಂದ ಬೇರಿನ ಒಳಸೇರಲು ಅನುಕೂಲವಾಗುತ್ತದೆ.

ರಂಜಕ ಕರಗಿಸುವ ಸೂಕ್ಷ್ಮಜೀವಿಗಳು(ಬೆಸಿಲಸ್ ಬೆಗತೀರಿಯಂ,ಆಸ್ಪರ್ಜಿಲ್ಲಸ್ ಅವಮೋರಿ)

 • ಒಂದು ಎಕರೆಗೆ ೮ಕಿ.ಗ್ರಾಂ. ೨೦ಲೀ.ನೀರಿನಲ್ಲಿ ಬೆರೆಸಿ, ಈ ದ್ರಾವಣವನ್ನು ಕೊಟ್ಟಿಗೆ ಗೊಬ್ಬರದ ಜೊತೆ ಸೇರಿಸಿ ತೋಟಕ್ಕೆ ಹಾಕಬೇಕು. ಹೊಸದಾಗಿ ನಾಟಿಮಾಡುವ ಕಡ್ಡಿಯನ್ನೂ ಸಹ ದ್ರಾವಣದಲ್ಲಿ ಅದ್ದಿ ನಾಟಿಮಾಡಬೇಕು.

ಉಪಯೋಗಗಳು : ನಾವು ತೋಟಗಳಿಗೆ ಬಳಸುವ ರಂಜಕ ಗೊಬ್ಬರದಲ್ಲಿ ಶೇ.೭ ರಿಂದ ೮ರಷ್ಟು ಭಾಗ ಮಣ್ಣಿನಲ್ಲಿ ಬೆರೆತೊಡನೆ, ಸ್ಥಿರೀಕರಣಗೊಂಡ ರಂಜಕವನ್ನು ಕರಗಿಸಿ ಬೆಳೆಗೆ ಲಭ್ಯವಾಗುವ ಹಾಗೆ ಮಾಡುತ್ತವೆ.

 • ಜೈವಿಕ ಗೊಬ್ಬರಗಳನ್ನು ಬಳಸುವುದರಿಂದ ರಂಜಕದ ಜೊತೆ ಇತರೆ ಪೋಷಕಾಂಶಗಳೂ ಸಹ ಹೆಚ್ಚಿನ ಪ್ರಮಾಣದಲ್ಲಿ ಸಸ್ಯಗಳಿಗೆ ದೊರೆತು ಸೊಪ್ಪಿನ ಇಳುವರಿ ಹಾಗೂ ಗುಣಮಟ್ಟ ಹೆಚ್ಚುತ್ತದೆ.
 • ನೀರಾವರಿ ಆಶ್ರಯದಲ್ಲಿ ಬೆಳೆಯುವ ತೋಟಕ್ಕೆ ಹೆಚ್ಚಿನ ಸೊಪ್ಪಿನ ಇಳುವರಿಗಾಗಿ ಶಿಫಾರಸ್ಸು ಮಾಡಿರುವ ರಂಜಕದ ಪ್ರಮಾಣ ಹೆಕ್ಟೇರಿಗೆ ವರ್ಷಕ್ಕೆ ೧೨೦ಕಿ.ಗ್ರಾಂ. ಆದರೆ, ಈ ರೀತಿ ಮಣ್ಣಿಗೆ ಬೆರೆಸಿದ ರಂಜಕವೂ ಮಣ್ಣಿನ ಕಣಗಳೊಂದಿಗೆ ಸ್ಥಿರೀಕೃತವಾಗಿ, ಸಸ್ಯದ ಬೆಳವಣಿಗೆ ತಕ್ಷಣ ಒದಗುವುದಿಲ್ಲ.
 • ಶಿಲೀಂಧ್ರ ಬೇರು ಎನ್ನುವುದು ಮೈಕೋರೈಜಾ ಶಬ್ದಕ್ಕಿರುವ ಅಕ್ಷರಶಃ ಅರ್ಥ. ಕೆಲವು ಉಪಯುಕ್ತ ಶಿಲೀಂಧ್ರಗಳು ಮತ್ತು ಸಸ್ಯಗಳ ಬೇರಿನ ನಡುವಣ ಪರಸ್ಪರ ಉಪಯುಕ್ತ ಶಿಲೀಂಧ್ರಗಳು ಮತ್ತು ಸಸ್ಯಗಳ ಬೇರಿನ ನಡುವಣ ಪರಸ್ಪರ ಉಪಯುಕ್ತತೆಯ ರೂಪವೇ ವ್ಯಾಮ್ ಶಿಲೀಂಧ್ರ ಬೇರು (ವಿ.ಎ.ಎಂ.+ವೆಸಿಕ್ಯಲಾರ್ ಆರ್ಬಿಸ್ಕ್ಯುಲಾರ್ ಮೈಕೋರೈಜಾ).
 • ಇವು ರಂಜಕದ ಕೊರತೆ ಇರುವ ಮಣ್ಣಿನಲ್ಲಿ ಬೆಳೆಯುವ ಮೇಲು ವರ್ಗದ ಸಸ್ಯಗಳ ಬೇರಿನಲ್ಲಿ ನೆಲಸಿ, ವಸಾಹತು ಸ್ಥಾಪಿಸುವ ಮೂಲಕ ಬೇರಿನ ಹೀರಿಕೆಯ ಮೇಲ್ಮೈ ಹೆಚ್ಚಿಸಿ ಕೊರತೆಯಿರುವ ರಂಜಕ ಮತ್ತು ಇತರ ಲಘು ಪೋಷಕಾಂಶಗಳನ್ನು ಒದಗಿಸುತ್ತವೆ.
 • ವ್ಯಾಮ್ ನೀಡಿರುವ ಸಸಿಗಳನ್ನು ನಾಟಿಮಾಡಿದ ತೋಟಕ್ಕೆ ವರ್ಷಕ್ಕೆ ಹೆಕ್ಟೇರಿಗೆ ೧೨೦ಕಿ.ಗ್ರಾಂ ಬದಲಿಗೆ ೩೦ಕಿ.ಗ್ರಾಂ. ರಂಜಕ ಬಳಸಿದರೆ ಸಾಕು.
 • ಇದರಿಂದ ಸೊಪ್ಪಿನ ಉತ್ಪಾದನೆಯ ಮೇಲೆ ಯಾವುದೇ ಪ್ರತಿಕೂಲ ಪರಿಣಾಮಿವಿಲ್ಲದಂತೆ ಶಿಫಾರಸುಮಾಡಿರುವ ರಂಜಕದ ಪ್ರಮಾಣದಲ್ಲಿ ಶೇ.೭೫ರಷ್ಟು ಉಳಿತಾಯವಾಗುತ್ತದೆ.
 • ಇದು ಹಣ ಉಳಿತಾಯದ ಜೊತೆಗೆ ಪರಿಸರ ಸ್ನೇಹಿಕ್ರಮವಾಗಿರುತ್ತದೆ.