ಕೃಷಿ ಜ್ಞಾನ ಭಂಡಾರ ರೈತಜನಮನವನ್ನು ತಲುಪುವ ಉದ್ದೇಶದಿಂದ ಪ್ರಾರಂಭವಾದ ಒಂದು ಅಪೂರ್ವ ಜ್ಞಾನವಾಹಿನಿ. ‘ಕೃಷಿತೋ ನಾಸ್ತಿ ದುರ್ಭಿಕ್ಷಂ’- ಇದು ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಲಾಂಛನದ ಧ್ಯೇಯವಾಕ್ಯ. ಕೃಷಿ ವಿಜ್ಞಾನ ಪ್ರಗತಿಯಾದಂತೆ ನಾಡಿನಲ್ಲಿ ಸುಭಿಕ್ಷತೆ ನೆಲೆಯಾಗುತ್ತದೆ. ಕೃಷಿಜ್ಞಾನಭಂಡಾರ ತುಂಬಿ ಹರಿಯುತ್ತದೆ. ಇದರಲ್ಲಿ ಕೃಷಿ ವಿಜ್ಞಾನಿಗಳು, ಚಿಂತಕರ ಪಾತ್ರ ಅಪಾರ. ವಿಜ್ಞಾನದ ಹೊಸ ಹೊಸ ಚಿಂತನೆ/ಆವಿಷ್ಕಾರಗಳನ್ನೆಲ್ಲ ಕಾಲಿಕವಾಗಿ ಸಂಯೋಜಿಸಿ ಕಿರು ಪುಸ್ತಕಗಳ ರೂಪದಲ್ಲಿ ಸರಳ, ವಿಚಾರಪೂರ್ಣ ಶೈಲಿಯಲ್ಲಿ ರೈತರಿಗೆ ಒದಗಿಸುವ ವಿಶಿಷ್ಟ ಕಾರ್ಯವನ್ನು ಕೃಷಿ ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ವಿಭಾಗದಲ್ಲಿ ಕೈಗೊಳ್ಳಲಾಗಿದೆ.

ಶ್ರೀಗಂಧದ ಗುಡಿ, ರೇಷಿಮೆಯ ಸಿರಿ ಎಂದು ಖ್ಯಾತವಾದ ನಾಡು ಕರ್ನಾಟಕ ರಾಜ್ಯ. ರೇಷ್ಮೆ ಉದ್ಯಮ ಇಲ್ಲಿಯ ಬಹತೇಕ ಜನತೆಯ ಪ್ರಧಾನ/ಉಪಕಸುಬು ಆಗಿದ್ದು ಜೀವನಾಧಾರಿತ ಉದ್ಯಮವಾಗಿದೆ. ಈ ದಿಸೆಯಲ್ಲಿ ಹಿಪ್ಪು ನೇರಳೆ ಬೆಳೆ ಬೇಸಾಯ ಮತ್ತು ರೇಷ್ಮೆಹುಳು ಸಾಕಾಣೆ ಕ್ಷೇತ್ರಗಳಲ್ಲಿ ಸಾಕಷ್ಟು ಸಂಶೋಧನೆಗಳು/ಸುಧಾರಣೆಗಳು ನಡೆದಿದ್ದು ಉದ್ಯಮ ಪ್ರಗತಿಗೆ ನೆರವಾಗಿವೆ, ಪ್ರಸ್ತುತ ಕೃತಿಯಲ್ಲಿ ಆ ಸುಧಾರಿತ ಆಧುನಿಕ ವಿಚಾರಧಾರೆಗಳನ್ನು ಸರಳ ಪ್ರಶ್ನೋತ್ತರ ರೂಪದಲ್ಲಿ ರೈತರಿಗೆ ತಿಳಿಸಿಕೊಡಲಾಗಿದೆ.

ಹಸ್ತಪ್ರತಿಯನ್ನು ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಕೀಟಶಾಸ್ತ್ರ ವಿಭಾಗದಲ್ಲಿ ವಿಶ್ರಾಂತ ವಿಜ್ಞಾನಿಗಳಾಗಿರುವ ಡಾ.ಟಿ.ಕೆ. ನಾಗೇಶ್‌ಚಂದ್ರ ಅವರು ತಾಂತ್ರಿಕವಾಗಿ ಪರಿಶೀಲಿಸಿರುತ್ತಾರೆ. ಈ ಕೃತಿಯು ಹಿಪ್ಪು ನೇರಳೆ ಬೇಸಾಯ ಹಾಗೂ ರೇಷ್ಮೆಹುಳು ಸಾಕಣೆ ಮಾಡುವ ಎಲ್ಲ ರೈತರು ಮತ್ತು ಆಸಕ್ತರಿಗೆಲ್ಲ ಉಪಯುಕ್ತವಾಗುವುದಾಗಿ ಆಶಿಸಲಾಗಿದೆ.

ಸಿ.ಕೆ. ಕುಮುದಿನಿ
ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥರು
ಮತ್ತು ಕನ್ನಡ ಅಭಿವೃದ್ಧಿ ಸಮಿತಿ ಕಾರ್ಯದರ್ಶಿ
ಕನ್ನಡ ಅಧ್ಯಯನ ವಿಭಾಗ
ಕೃಷಿ ವಿಶ್ವವಿದ್ಯಾನಿಲಯ
ಹೆಬ್ಬಾಳ, ಬೆಂಗಳೂರು-೫೬೦ ೦೨೪.