) ರೇಷ್ಮೆ ಹುಳುಗಳಿಗೆ ಗಂಟುರೋಗ ಕಂಡುಬರುವ ಕಾಲ, ಚಿಹ್ನೆಗಳು ಮತ್ತು ರೋಗ ತಡೆಗಟ್ಟುವ ವಿಧಾನ ಕುರಿತು ವಿವರ ಮಾಹಿತಿ ಕೊಡಿ?

ಗಂಟು ರೋಗವು ನೋಸಿಮಾ ಬಾಂಬಿಸಿಸ್ ಎಂಬ ಪರೋಪಜೀವಿಯಿಂದ ಬರುತ್ತದೆ. ಈ ರೋಗವು ಎಲ್ಲಾ ಕಾಲದಲ್ಲಿಯೂ ಕಂಡುಬರುತ್ತದೆ.

ಚಿಹ್ನೆಗಳು:

 • ಎಲ್ಲ ಹುಳುಗಳು ಏಕಕಾಲದಲ್ಲಿ ಸಮರ್ಪಕವಾಗಿ ಜ್ವರಕ್ಕೆ ಹೋಗುವುದಿಲ್ಲ.
 • ಹುಳುಗಳು ಚಟುವಟಿಕೆ ಕಳೆದುಕೊಳ್ಳುತ್ತವೆ.
 • ರೋಗ ತಗುಲಿದ ಹುಳದ ಮೈ ಕಾಂತಿಹೀನವಾಗಿ ಚರ್ಮಸುಕ್ಕಾಗುತ್ತದೆ.
 • ರೋಗ ಹೆಚ್ಚಾದಾಗ ಕೆಲವೊಂದು ಸಲ ಮೆಣಸಿನ ಕಾಳಾಕಾರದ ಕಪ್ಪು ಚುಕ್ಕೆಗಳು ಹುಳದ ಮೇಲೆ ಕಾಣಿಸಿಕೊಳ್ಳಬಹುದು.

ರೋಗ ತಡೆಗಟ್ಟಲು ಕೈಗೊಳ್ಳಬೇಕಾದ ಮುಂಜಾಗರೂಕತೆಗಳು

 • ತಾಯಿ ಚಿಟ್ಟೆ ಪರೀಕ್ಷಿಸಿ ರೋಗ ತಡೆಗಟ್ಟಬಹುದು.
 • ಮೊಟ್ಟೆಗಳನ್ನು ಶೇ.೨ರ ಫಾರ್ಮಲಿನ ದ್ರಾವಣದಲ್ಲಿ ೫ ನಿಮಿಷಗಳ ಕಾಲ ಅಥವಾ ೫೦೦ ಪಿ.ಪಿ.ಎಂ. ಕ್ಲೋರಿನ್ ಡೈಆಕ್ಸೈಡ್(ಕ್ಲಿನಿಟಾಲ್ ಪ್ಲಸ್)ನಲ್ಲಿ ಒಂದು ನಿಮಿಷ ಅದ್ದಿ ಒಣಗಿಸಬೇಕು.
 • ಪ್ರತಿ ಬೆಳೆಯನಂತರ ಸೋಂಕುನಿವಾರಣೆ ಮಾಡಬೇಕು.
 • ಹುಳುವಿನ ಕಸ ಅಥವಾ ಹಿಕ್ಕೆಯ್ನು ನಡೆದಾಡುವ ಜಾಗದ್ಲಿ ಹಾಕಬಾರದು, ನೇರವಾಗಿ ತೋಟಕ್ಕೆ ಹಾಕಬಾರದು ಮತ್ತು ದನಗಳಿಗೆ ಮೇವಾಗಿ ನೀಡಬಾರದು.
 • ರೋಗಗ್ರಸ್ಥ ಹುಳುಗಳನ್ನು ಆಯ್ದು ಶೇ.೨ರ ಫಾರ್ಮಲಿನ್ ದ್ರಾವಣ ಅಥವಾ ಶೇ.೫ರ ಬ್ಲೀಚಿಂಗ್ ಇಲ್ಲವೇ ೫೦೦ ಪಿ.ಪಿ.ಎಂ. ಕ್ಲೋರಿನ್ ಡೈಆಕ್ಸೈಡ್ (ಕ್ಲಿನಿಟಾಲ್ ಪ್ಲಸ್) ದ್ರಾವಣದಲ್ಲಿ ಹಾಕಿ ಮಣ್ಣಿನಲ್ಲಿ ಮುಚ್ಚಬೇಕು.
 • ರೇಷ್ಮೆ ಹುಳು ಜ್ವರದಲ್ಲಿದ್ದಾಗ ಪ್ರತಿ ಚದರ ಅಡಿಗೆ ೩ಗ್ರಾಂನಂತೆ ಸುಣ್ಣವನ್ನು ಧೂಳಿಸಬೇಕು.
 • ಜ್ವರದಿಂದ ಎದ್ದನಂತರ ಸೆರಿನೊವಜಯ ಪವರ್/ರೇಷಮ್ ಜ್ಯೋತಿ/ವಿಜೇತ ಅಥವಾ ಇತರೆ ಹಾಸುಗೆ ಸೋಂಕು ನಿವಾರಕಗಳನ್ನು ಪ್ರತಿ ಚದರ ಅಡಿಗೆ ೫ಗ್ರಾಂನಂತೆ ಧೂಳಿಸಬೇಕು.

) ರೇಷ್ಮೆ ಹುಳುವಿಗೆ ತಗಲುವ ಹಾಲುತೊಂಡೆರೋಗ ಹರಡುವಿಕೆ, ಚಿಹ್ನೆಗಳು ಮತ್ತು ಹತೋಟಿ ಕ್ರಮಗಳಾವುವು?

ಹಾಲು ತೊಂಡೆ ರೋಗವು ಎಲ್ಲಾ ಕಾಲದಲ್ಲೂ ಕಂಡುಬರುತ್ತದೆ. ಸಾಮಾನ್ಯವಾಗಿ ಬೇಸಿಗೆ ಮತ್ತು ಮಳೆಗಾಲದಲ್ಲಿ ಹೆಚ್ಚಾಗಿರುತ್ತದೆ.

ಲಕ್ಷಣಗಳು

 • ರೋಗ ಹೆಚ್ಚಾದಾಗ ಜೀರ್ಣಶಕ್ತಿಕಡಿಮೆಯಾಗುತ್ತದೆ. ಅದರಿಂದಾಗಿ ಸರಿಯಾಇ ಸೊಪ್ಪು ತಿನ್ನುವುದಿಲ್ಲ.
 • ಶರೀರದ ಉಂಗುರಗಳ ಮಧ್ಯಭಾಗ ಊದಿಕೊಂಡಿರುತ್ತದೆ.
 • ಚರ್ಮ ಬಿಳುಪಾಗಿ ಹೊಳೆಯುತ್ತಿರುತ್ತದೆ.
 • ರೋಗದ ಹುಳುಗಳು ತಟ್ಟೆ/ದಡೇವುಗಳ ಮೇಲೆ ಸೊಪ್ಪು ತಿನ್ನದೆ, ಹರಿದಾಡುತ್ತಾ ಕೆಳಗೆ ಬೀಳುತ್ತವೆ.
 • ಚರ್ಮ ಬಿರುಕು ಬಿಟ್ಟು, ಬಿಳಿಯ ಬಣ್ಣದ ದ್ರವ ಹೊರಬರುತ್ತದೆ.
 • ಹುಳುಗಳು ಸರಿಯಾಗಿ ಜ್ರರಕ್ಕೆ ಕೂರುವುದಿಲ್ಲ.

ಹತೋಟಿ/ಮುಂಜಾಗ್ರತಾ ಕ್ರಮಗಳು

 • ಹುಳು ಸಾಕಣೆ ಮನೆಯಲ್ಲಿ ಸರಿಯಾದ ಗಾಳಿ ಸಂಚಾರಕ್ಕೆ ಅವಕಾಶವಿರಬೇಕು.
 • ಹುಳುಗಳನ್ನು ಒತ್ತಾಗಿ ಇಡಬಾರದು. ಸರಿಯಾದ ಸ್ಥಳಾವಕಾಶ ಇರಬೇಕು.
 • ಹುಳುಗಳ ಮೈಮೇಲೆ ಗಾಯ ಅಥವಾ ಗೀರುಗಳಾಗದಂತೆ ನೋಡಿಕೊಳ್ಳಬೇಕು.
 • ಬಲಿತ ಅಥವಾ ಎಳಸು ಸೊಪ್ಪಿನ ಮೇವು ನೀಡಬಾರದು.
 • ಬಲಿತ ಹುಳುಗಳಿಗೆ ತೇವದ ಅಥವಾ ಕುಡಿಸೊಪ್ಪು ಕೊಡಬಾರದು.
 • ಹುಳುಸಾಕಣೆ ಮನೆಯಲ್ಲಿ ಉಷ್ಣಾಂಶ ಏರುಪೇರಾಗದಂತೆ ನೋಡಿಕೊಳ್ಳಬೇಕು. ರೋಗಗ್ರಸ್ಥ ಹುಳುಗಳನ್ನು ಆರಿಸಿ ಶೇ.೨ರ ಫಾರ್ಮಲಿನ್ ದ್ರಾವಣದಲ್ಲಿ ಅಥವಾ ಶೇ.೫ರ ಬ್ಲೀಚಿಂಗ್ ಅಥವಾ ೫೦೦ಪಿ.ಪಿ.ಎಂ. ಕ್ಲೋರಿನ್ಡ್‌ಡೈಆಕ್ಸೈಡ್‌(ಕ್ಲಿನಿಟಾಲ್ ಪ್ಲಸ್) ದ್ರಾವಣದಲ್ಲಿ ಹಾಕಿ ಮಣ್ಣಿನಲ್ಲಿ ಹೂಳಬೇಕು ಅಥವಾ ಸುಡಬೇಕು.
 • ಹುಳುಗಳ ಹಿಕ್ಕೆಯನ್ನು ನೇರವಾಗಿ ತೋಟಕ್ಕೆ ಹಾಕಬಾರದು. ಅದನ್ನು ಗುಂಡಿಯಲ್ಲಿ ಮುಚ್ಚಿ ಕೊಳೆಸಿ ಅನಂತರ ಉಪಯೋಗಿಸಬೇಕು.
 • ಮೂರನೇ ಹಂತದವರೆಗೆ ನೈಲಾನ್ ಬಲೆಯನ್ನು ಉಪಯೋಗಿಸಿ ಹಾಸಿಗೆ ಬದಲಾಯಿಸಬೇಕು.
 • ಪ್ರತಿ ಜ್ವರದಲ್ಲಿ ಪ್ರತಿ ಚದರ ಅಡಿಗೆ ೩‌ಗ್ರಾಂನಂತೆ ಸುಣ್ಣ ಧೂಳಿಸಬೇಕು.
 • ಜ್ವರದಿಂದ ಎದ್ದನಂತರ ಸೊಪ್ಪು ಕೊಡುವ ಮೊದಲು ಹಾಸುಗೆ ಸೋಂಕು ನಿವಾರಕ (ಉದಾ: ಜಯ ಪವರ್/ವಿಜೇತ/ರೇಷಮ್ ಜ್ಯೋತಿ)ವನ್ನು ಧೂಳಿಸಬೇಕು.
 • ಪ್ರತಿ ಬೆಳೆನಂತರ ಮತ್ತು ರೇಷ್ಮೆ ಹುಳುಸಾಕಣೆ ಪ್ರಾರಂಭದಲ್ಲಿ ಕ್ಲಿನಿಟಾಲ್ ಪ್ಲಸ್ ಅಥವಾ ಸ್ಯಾನಿಟೆಕ್ ಇಲ್ಲವೇ ಇನ್ನಾವುದೇ ಸೋಂಕು ನಿವಾರಕವನ್ನು ಶಿಫಾರಸ್ಸು ಮಾಡಿದ ಪ್ರಮಾಣದಲ್ಲಿ ಬಳಸಿ ಸೋಂಕು ನಿವಾರಣೆ ಮಾಡಬೇಕು.

) ರೇಷ್ಮೆ ಹುಳುವಿಗೆ ತಗಲುವ ಸಪ್ಪೆರೋಗ ಕಂಡುಬರುವ ಕಾಲ, ಲಕ್ಷಣಗಳು ಮತ್ತು ಹತೋಟಿ ಕ್ರಮಗಳಾವುವು?

ಸಪ್ಪೆರೋಗವು ವರ್ಷದ ಎಲ್ಲಾ ಋತುಮಾನಗಳಲ್ಲಿ ಕಂಡುಬರುತ್ತದೆ. ಆದರೆ ಬೇಸಿಗೆ ಮತ್ತು ಮಳೆಗಾಲದಲ್ಲಿ ಹೆಚ್ಚಾಗಿರುತ್ತದೆ. ಈ ರೋಗ ವೈರಸ್ ಮತ್ತು ಬ್ಯಾಕ್ಟೀರಿಯಾಗಳಿಂದ ಬರುತ್ತದೆ.

ಲಕ್ಷಣಗಳು

 • ಹುಳುಗಳು ಚಟುವಟಿಕೆಯಿಂದ ಇಲ್ಲದಿರುವುದು.
 • ಸೊಪ್ಪು ತಿನ್ನಲು ಇಚ್ಛಿಸದಿರುವುದು.
 • ಬೆಳವಣಿಗೆಯಲ್ಲಿ ವ್ಯತ್ಯಾಸ.
 • ‌ಜ್ವರಕ್ಕೆ ಕೂರುವಾಗ ಏರುಪೇರು.
 • ದಿನಕಳೆದಂತೆ ಸಣ್ಣ/ದಪ್ಪ ಹುಳುಗಳ ಸಂಖ್ಯೆ ಹೆಚ್ಚಾಗುವುದು.
 • ಮಣಿಸರದಂತೆ ಹಿಕ್ಕೆ
 • ಮೃದುವಾದ ಅಥವಾ ದ್ರವ ರೂಪದ ಹಿಕ್ಕೆ
 • ಹುಳುಗಳು ಬಣ್ಣದ ದ್ರವವನ್ನು ವಾಂತಿ ಮಾಡುವುದು. ಶರೀರ ಕುಗ್ಗುವುದು, ಚರ್ಮ ಸ್ಥಿತಿಸ್ಥಾಪಕತೆಯನ್ನು ಕಳೆದುಕೊಳ್ಳುವುದು.
 • ಶರೀರ ಕೆಂಪು ಅಥವಾ ಕಂದು ಬಣ್ಣಕ್ಕೆ ತಿರುಗುವುದು. ಚಂದ್ರಿಕೆಗಳ ಮೇಲೆ ಗೂಡುಕಟ್ಟದೆ ಹುಳುವು ಜೋತುಬೀಳುವುದು.
 • ಸತ್ತ ಹುಳುಗಳು ಮೃದುವಾಗಿದ್ದು ಕಪ್ಪುಬಣ್ಣಕ್ಕೆ ತಿರುಗಿ ದುರ್ನಾತ ಉಂಟಾಗುತ್ತದೆ.
 • ೫ ಹಂತದಲ್ಲಿ ಕೆಲವೊಂದು ತಟ್ಟೆಗಳಲ್ಲಿ ಮಾತ್ರ ಹುಳುಗಳು ಸಾಯುವುದನ್ನು ಗುರುತಿಸಲಾಗಿದೆ. ಇದನ್ನು ಗ್ರಾಮ್ಯ ಭಾಷೆಯಲ್ಲಿ ತಟ್ಟೆರೋಗ ಎನ್ನುತ್ತಾರೆ.

ಹತೋಟಿ/ಮುಂಜಾಗ್ರತಾ ಕ್ರಮಗಳು

 • ಮೊಟ್ಟೆಗಳನ್ನು ಪರಿಪಾಕಿಸಿ ಚಾಕಿಕಟ್ಟಬೇಕು.
 • ಆಯಾ ಹಂತಕ್ಕೆ ತಕ್ಕಂತೆ ಉಷ್ಣಾಂಶ ಮತ್ತು ಶೈತ್ಯಾಂಶಗಳನ್ನು ಒದಗಿಸಬೇಕು.
 • ಸಾಕಣೆ ಮನೆಯ ಉಷ್ಣಾಂಶದಲ್ಲಿ ಹೆಚ್ಚಿನ ಏರುಪೇರಾಗುವುದನ್ನು ತಡೆಗಟ್ಟಬೇಕು.
 • ಬಲಿತ ಹುಳುಗಳ ಕೊಠಡಿಯಲ್ಲಿ ಸರಾಗ ಗಾಳಿ ಸಂಚಾರಕ್ಕೆ ಅನುವು ಮಾಡಬೇಕು.
 • ಮೇವಿಗೆ ಒಳ್ಳೆಯ ಗುಣಮಟ್ಟದ ಪುಷ್ಟಿಕರವಾದ ಸೊಪ್ಪನ್ನು ನೀಡಬೇಕು.
 • ಹುಳುವಿನ ಹಂತಕ್ಕೆ ಯುಕ್ತವಾದ ಸೊಪ್ಪನ್ನು ನೀಡಬೇಕು.
 • ಬಾಡಿದ, ಮಣ್ಣುಮೆತ್ತಿದ, ಹೆಚ್ಚು ಬಲಿತ ಇಲ್ಲವೇ ಹಳದಿ ಬಣ್ಣಕ್ಕೆ ತಿರುಗಿದ ಸೊಪ್ಪನ್ನು ನೀಡಬಾರದು.
 • ಕಸ ತೆಗೆಯುವಾಗ ನೈಲಾನ್ ಬಲೆ ಉಪಯೋಗಿಸಬೇಕು.
 • ಹುಳುವಿನ ಮೈಮೇಲೆ ಗಾಯ ಅಥವಾ ಗೀರುಗಳಾಗದಂತೆ ಎಚ್ಚರವಹಿಸಬೇಕು.
 • ಜ್ವರದಿಂದ ಎದ್ದನಂತರ ಸೊಪ್ಪು ಕೊಡುವ ಮೊದಲು ಜಯಪವರ್ / ವಿಜೇತ / ರೇಷಮ್ ಜ್ಯೋತಿ / ಸಂಜೀವಿನಿಯಂತಹ ಹಾಸುಗೆ ಸೋಂಕು ನಿವಾರಕಗಳನ್ನು ಪ್ರತಿ ಚದರ ಅಡಿಗೆ ೫ಗ್ರಾಂನಂತೆ ಧೂಳಿಸಬೇಕು.
 • ಪ್ರತಿ ಬೆಳೆಯ ಪ್ರಾರಂಭದಲ್ಲಿ ಮತ್ತು ಬೆಳೆಯನಂತರ ಕ್ಲಿನಟಾಲ್ ಪ್ಲಸ್ ಅಥವಾ ಸ್ಯಾನಿಟೆಕ್ ಉಪಯೋಗಿಸಿ ಸೋಂಕು ನಿವಾರಣೆ ಮಾಡಬೇಕು. ಅವಶ್ಯಕತೆ ಇದ್ದಲ್ಲಿ ಇನ್ನೊಂದು ಬಾರಿ ಸೋಂಕು ನಿವಾರಣೆ ಮಾಡಬಹುದು.

) ರೇಷ್ಮೆ ಹುಳುವಿಗೆ ತಗಲುವ ಸುಣ್ಣಕಟ್ಟು ರೋಗ ಮತ್ತು ಆಸ್ಪರ್ಜಿಲ್ಲೋಸಿಸ್ ಕಂಡುಬರುವ ಕಾಲ, ಲಕ್ಷಣಗಳು, ಚಿಹ್ನೆಗಳು ಮತ್ತು ನಿಯಂತ್ರಣದ ವಿಧಾನಗಳಾವುವು?

ಸುಣ್ಣಕಟ್ಟು ರೋಗವು ಬೆವೇರಿಯಾ ಬ್ಯಾಸಿಯಾನ ಎಂಬ ಸೂಕ್ಷ್ಮಜೀವಿಯಿಂದ ಬರುತ್ತದೆ. ಈ ರೋಗವು ಮಳೆಗಾಲ ಮತ್ತು ಚಳಿಗಾಲದಲ್ಲಿ ಹೆಚ್ಚಾಗಿರುತ್ತದೆ.

ಲಕ್ಷಣಗಳು

 • ರೋಗಗ್ರಸ್ಥ ಹುಳುಗಳಲ್ಲಿ ಲವಲವಿಕೆ ಕಡಿಮೆಯಾಗುತ್ತದೆ. ಚಲನೆ ಮಂದವಾಗಿ ಮಂಕಾಗಿರುತ್ತವೆ.
 • ಆಹಾರ ಸೇವನೆಯಲ್ಲಿ ಆಸಕ್ತಿ ಇರುವುದಿಲ್ಲ.
 • ಚರ್ಮದಲ್ಲಿ ಸ್ಥಿತಿಸ್ಥಾಪಕಶಕ್ತಿ ಇರುವುದಿಲ್ಲ.
 • ರೋಗ ಉಲ್ಬಣಗೊಂಡಾಗ ಚರ್ಮದ ಮೇಲೆ ಎಣ್ಣೆಯಂತಹ ಚುಕ್ಕೆಗಳು ಕಾಣಿಸಿಕೊಳ್ಳುತ್ತವೆ.
 • ಹುಳುಗಳು ಸೋಂಕಾದ ೩ ಅಥವಾ೪ ದಿನಗಳಲ್ಲಿ ಸಾಯುತ್ತವೆ. ಸತ್ತ ಹುಳುಗಳ ದೇಹದ ಮೆಲೆ ಒಂದೆರಡು ದಿನಗಳಲ್ಲಿ ಶಿಲೀಂಧ್ರದ ಬಣ್ಣ ಕಂಡುಬರುತ್ತವೆ. ಬಿವೇರಿಯಾ ಶಿಲೀಂಧ್ರ ಸೋಂಕಾಗಿದ್ದಲ್ಲಿ ಬೆಳ್ಳಗೂ, ಆಸ್ಟರ್ಜಿಲೋಸಿಸ್ ಸೋಂಕಾಗಿದ್ದಲ್ಲಿ ಕಂದು ಬಣ್ಣ ಇರುತ್ತದೆ.

ಹತೋಟಿ ಕ್ರಮಗಳು

 • ಮೊಟ್ಟೆ ಕಪ್ಪು ಬಣ್ಣಕ್ಕೆ ತಿರುಗಿದಾಗ ಶೇ.೨ ಫಾರ್ಮಲಿನ್ ದ್ರಾವಣದಲ್ಲಿ ಅದ್ದಿ ನೆರಳಿನಲ್ಲಿ ಒಣಗಿಸಬೇಕು.
 • ಸಾಕಣೆ ಮನೆಯಲ್ಲಿ ಉಷ್ಣಾಂಶ ಹೆಚ್ಚಿಸಬೇಕಾದಾಗ ಹೀಟರ್ ಮತ್ತು ಹೊಗೆಯಾಡದ ಕೆಂಡವನ್ನು ಉಪಯೋಗಿಸಬೇಕು.
 • ಸಾಕಣೆ ಮನೆಯಲ್ಲಿ ಗಾಳಿ ಸಂಚಾರವಾಗುವಂತೆ ಕಿಟಕಿ ಬಾಗಿಲುಗಳನ್ನು ತೆಗೆದಿಡಬೇಕು.
 • ಹುಳುವಿ ಹಾಸುಗೆ ದಪ್ಪವಾಗದಂತೆ, ತೆಳುವಾಗಿಡಬೇಕು.
 • ಪ್ರತಿದಿ ಕಸತೆಗೆದನಂತರ ತಟ್ಟೆಗಳಿಗೆ ಸುಣ್ಣದ ಪುಡಿಯನ್ನು ಸಿಂಪಡಿಸಬೇಕು.
 • ರೋಗಗ್ರಸ್ಥ ಹುಳುಗಳನ್ನು ಆರಿಸಿ ಶೇ.೨ರ ಫಾರ್ಮಲಿನ್ ಅಥವಾ ಬ್ಲೀಚಿಂಗ್ ಅಥವಾ ೫೦ ಪಿ.ಪಿ.ಎಂ. ಕ್ಲೋರಿನ್ ಡೈಯಾಕ್ಸೈಡ್(ಕ್ಲಿನಿಟಾಲ್ ಪ್ಲಸ್) ದ್ರಾವಣದಲ್ಲಿ ಹಾಕಿ ಸುಡಬೇಕು. ಅಥವಾ ಮಣ್ಣಿನಲ್ಲಿ ಮುಚ್ಚಬೇಕು.
 • ಹುಳುವಿನ ಕಸವನ್ನು ನೇರವಾಗಿ ತೋಟಕ್ಕೆ ಉಪಯೋಗಿಸಬಾರದು. ಕಸ ತೆಗೆಯುವಾಗ ನೈಲಾನ್ ಬಲೆ ಉಪಯೋಗಿಸಬೇಕು ಮತ್ತು ಕಸ ಹಿಕ್ಕೆಯನ್ನು ದನಕರುಗಳಿಗೆ ಮೇವಾಗಿ ನೀಡಬಾರದು.
 • ಹುಳುಗಳು ಜ್ವರದಲ್ಲಿದ್ದಾಗ ಅಥವಾ ಜ್ವರ‍್ಕೆ ಹೋಗುವಾಗ ಹಾಸುಗೆಯನ್ನು ತೆಳುವಾಗಿಟ್ಟು ಹುಳುಗಳ ಮೇಲೆ ಸುಣ್ಣದ ಪುಡಿಯನ್ನು ಧೂಳಿಸಬೇಕು.
 • ವಿಜಯಪವರ್/ವಿಜೇತ/ರೇಶಮ್‌ಜ್ಯೋತಿ/ಸುರಕ್ಷದಂತಹ ಹಾಸುಗೆ ಸೋಂಕು ನಿವಾರಕಗಳನ್ನು ಪ್ರತಿ ಜ್ವರದ ನಂತರವೂ ಧೂಳಿಸಬೇಕು.
 • ಸಾಕಣೆಯ ಮೊದಲು ಮತ್ತು ಅನಂತರ ಕ್ಲಿನಿಟಾಲ್ ಪ್ಲಸ್ ಅಥವಾ ಸ್ಯಾನಿಟೆಕ್‌ಗಳಿಂದ ರೇಷ್ಮೆ ಹುಳುಮನೆ ಮತ್ತು ಸಲಕರಣೆಗಳ ಸೋಂಕುನಿವಾರಣೆ ಮಾಡಬೇಕು. ಅವಶ್ಯಕತೆಯಿದ್ದಲ್ಲಿ ಮಧ್ಯೆ ಒಂದು ಸಾರಿ ಶೇ.೨ರ ಬ್ಲೀಚಿಂಗ್ ದ್ರಾವಣದಲ್ಲಿ ಸೋಂಕು ನಿವಾರಣೆ ಮಾಡಬೇಕು.

) ಊಜಿ ನೊಣ ಹೆಚ್ಚಾಗಿ ಕಂಡುಬರುವ ಕಾಲ, ಲಕ್ಷಣ, ಹಾನಿಯ ಸ್ವರೂಪ ಮತ್ತು ನಿರ್ವಹಣಾ ಕ್ರಮಗಳಾವುವು?

ಊಜಿನೊಣದ ಹಾವಳಿ ಹೆಚ್ಚಾಗಿ ಮಳೆಗಾಲ ಮತ್ತು ಚಳಿಗಾಲದಲ್ಲಿ ಕಂಡುಬರುತ್ತವೆ. ಬೇಸಿಗೆಯಲ್ಲಿ ಹಾವಳಿ ಕಡಿಮೆಯಿರುತ್ತದೆ. ಊಜಿನೊಣ ರೇಷ್ಮೆಹುಳುವಿನ ಮೇಲೆ ಮೊಟ್ಟೆಯಿಟ್ಟ ೩ರಿಂದ ೪ದಿನಗಳಲ್ಲಿ ಮೊಟ್ಟೆಯೊಡೆದು ಹೊರಬರುವ ಊಜಿಮರಿ (ಮೆಗ್ಗಾಟ್) ರೇಷ್ಮೆ ಹುಳುವಿನ ಚರ್ಮ ಕೊರೆದು ದೇಹದೊಳಕ್ಕೆ ಪ್ರವೇಶಿಸುತ್ತದೆ. ಇದರ ಪರಿಣಾಮವಾಗಿ ಚರ್ಮದ ಆ ಭಾಗದಲ್ಲಿ ಕಪ್ಪು ಚುಕ್ಕೆ ಅಥವಾ ಮಚ್ಚೆ ಉಂಟಾಗುತ್ತದೆ. ಈ ಕೀಟದ ಹಾವಳಿಯಿಂದ ಶೇ. ೧೫ರಿಂದ ೨೦ರಷ್ಟು ಬೆಳೆ ನಾಶವಾಗುತ್ತದೆ.

ನಿರ್ವಹಣಾ ಕ್ರಮಗಳು

 • ಸಾಕಣೆ ಮನೆಯ ನೆಲದಲ್ಲಿರುವ ಸಂದುಗೊಂದುಗಳನ್ನು ಮುಚ್ಚಿ, ಅಲ್ಲಿ ಮೆಗಾಟ್‌ಗಳು (ಊಜಿಮರಿ) ಸೇರಿಕೊಂಡು ಕೋಶಗಳಾಗಿ ಮಾರ್ಪಾಡಾಗುವುದನ್ನು ತಡೆಗಟ್ಟಬೇಕು.
 • ೫ನೇ ಹಂತದಲ್ಲಿ ಊಜಿ ಬಾಧೆಗೊಳಗಾದ ರೇಷ್ಮೆ ಹುಳುಗಳು ಇತರ ಹುಳುಗಳಿಗಿಂತ ಬೇಗನೆ ಗೂಡುಕಟ್ಟುವವು, ಇಂತಹ ಗೂಡುಗಳನ್ನು ಆಯ್ದು ಹಬೆಗೆ ಒಡ್ಡಿ ಊಜಿಮರಿಗಳನ್ನು ಸಾಯಿಸಬೇಕು.
 • ರೇಷ್ಮೆ ಗೂಡುಗಳನ್ನು ಮಾರುಕಟ್ಟೆಗೆ ಸಾಗಿಸುವಾಗ ಊಜಿಪೀಡಿತ ಗೂಡುಗಳಿಂದ ಊಜಿಮರಿಗಳು ದಾರಿಯಲ್ಲಿ ಬೇಳದಂತೆ ಎಚ್ಚರಿಕೆವಹಿಸಬೇಕು. ಇದರಿಂದ ಊಜಿನೊಣವು ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಹರಡುವುದನ್ನು ತಡೆಗಟ್ಟಬಹುದು.
 • ಸಾಕಣೆಮನೆ, ಮೊಟ್ಟೆ ತಯಾರಿಕಾ ಕೇಂದ್ರ, ನೂಲು ಬಿಚ್ಚುವ ಘಟಕ ಹಾಗೂ ರೇಷ್ಮೆಗೂಡಿನ ಮಾರುಕಟ್ಟೆಗಳಲ್ಲಿ ಕಾಣಬರುವ ಊಜಿಮರಿಗಳು ಮತ್ತು ಕೋಶಗಳನ್ನು ಬಿಸಿನೀರಿನಲ್ಲಿ ಹಾಕಿ ಸಾಯಿಸಬೇಕು.
 • ರೇಷ್ಮೆಹುಳು ಸಾಕಣೆ ಸಮಯದಲ್ಲಿ ಊಜಿನೊಣದ ಹತೋಟಿಗೆ; (ಅ) ನೈಲಾನ್ ಬಲೆ ಬಳಸಬೇಕು., (ಆ) ಊಜಿ ಪುಡಿ, (ಇ) ಊಜಿ ಟ್ರ‍್ಯಾಪ್ ಬಲೆ ಬಳಸಬೇಕು.
 • ಜೈವಿಕ ನಿಯಂತ್ರಣಕ್ಕೆ ನಿಸೋಲಿಂಗ್ ಥೈಮಸ್ ಎಂಬ ಇರುವೆ ಜಾತಿಯ ಪರೋಪ ಕೀಟವನ್ನು ಬಳಸಿ ಊಜಿಕೋಶಗಳನ್ನು ನಾಶಪಡಿಸಬೇಕು.

) ರೇಷ್ಮೆಹುಳು ಬಿತ್ತನೆ ಕೋಠಿಯಲ್ಲಿ ಕಂಡುಬರುವ ಉಪದ್ರವಕಾರಿ ಕೀಟಗಳು, ಹಾನಿಯ ಸ್ವರೂಪ ಮತ್ತು ನಿರ್ವಹಣಾ ಕ್ರಮಗಳಾವುವು?

ಬಿತ್ತನೆಗೂಡಿನ ಉಪದ್ರವ ಕೀಟಗಳು ವರ್ಷದ ಎಲ್ಲಾ ಋತುಮಾನಗಳಲ್ಲಿ ಕಂಡುಬರುತ್ತವೆ ಇವುಗಳಲ್ಲಿ ಮುಖ್ಯವಾದವುಗಳೆಂದರೆ ಡರ್ಮೆಸ್ಟಿಡ್ ದುಂಬಿಗಳು ಮತ್ತು ಕರ್ಣಕೀಟ.

ಚಿಹ್ನೆ ಮತ್ತು ಹಾನಿಯ ಸ್ವರೂಪ

ಡರ್ಮೆಸ್ಟಿಡ್ ದುಂಬಿಗಳು ಪ್ರಾಣಿ ಸಂಬಂಧಿ ಪದಾರ್ಥಗಳನ್ನು ತಿನ್ನುವವಾಗಿಗದ್ದು ರೇಷ್ಮೆ ಮೊಟ್ಟೆ ಮತ್ತು ಚಿಟ್ಟೆಯನ್ನು ತಿನ್ನುತ್ತವೆ. ಜೊತೆಗೆ ಗೂಡನ್ನು ಕೊರೆದು ಕೋಶವನ್ನು ಸಹ ತಿನ್ನುತ್ತವೆ. ಕರ್ಣಕೀಟಗಳು ಮೊಟ್ಟೆಯಿಡುವ ಚಿಟ್ಟೆಗಳ ಹೊಟ್ಟೆಯಿಂದ ರಕ್ತ ಹೊರಬಂದು, ಮೊಟ್ಟೆಯನ್ನು ಪೂರ್ತಿಯಾಗಿ ಇಡುವ ಮೊದಲೇ ಸಾಯುತ್ತವೆ.

ನಿಯಂತ್ರಣ ಕ್ರಮಗಳು

 • ಬಿತ್ತನೆ ಕೋಠಿಗಳಲ್ಲಿ ಈ ಉಪದ್ರವ ಕೀಟಗಳನ್ನು ಸೇರಿಸಿ ಸುಡುವುದರ ಮೂಲಕ ನಾಶಪಡಿಸಬಹುದು.
 • ಕೊರೆದ ಗೂಡುಗಳ ಶೇಖರಣೆಗೆ ಮೊದಲು ಬಿಸಿಲಿನಲ್ಲಿ ಒಣಗಿಸುವುದರಿಂದ ಗೂಡುಗಳಲ್ಲಿರುವ ಉಪದ್ರವಕಾರಿ ಕೀಟಗಳ ಮೊಟ್ಟೆ ಮತ್ತು ಮರಿಗಳು ಸಾಯುತ್ತವೆ, ತದನಂತರ ಗೂಡುಗಳನ್ನು ಶೇಖರಿಸಿಡಬೇಕು.
 • ಚಿ‌ಟ್ಟೆ ಕೊರೆದ ಗೂಡುಗಳನ್ನು ೪ ದಿನಗಳೊಳಗೆ ಮಾರಾಟ ಮಾಡಬೇಕು.
 • ಚಿಟ್ಟೆಕೊರೆದ ಗೂಡುಗಳಿಂದ ಹೊರಬಂದ ಕೀಟಗಳು ಶೇಖರಣೆ ಕೊಠಡಿಯಿಂದ ಹೊರಬಾರದಹಾಗೆ ತಂತಿಯ ಬಲೆಯನ್ನು ಅಳವಡಿಸಬೇಕು.
 • ಬಿತ್ತನೆಕೋಠಿಗಳಲ್ಲಿ ಮರದ ಅಥವಾ ಬಿದಿರಿನ ತಟ್ಟೆಗಳಿಗಿಂತ ಪ್ಲಾಸ್ಟಿಕ್ ತಟ್ಟೆಗಳನ್ನು ಉಪಯೋಗಿಸುವುದು ಸೂಕ್ತ.
 • ಮಾರುಕಟ್ಟೆಯಲ್ಲಿ ದೊರೆಯುವ ಬ್ಲೀಚಿಂಗ್‌ಪುಡಿ(ಶೇ.೩೦)ಯನ್ನು ಗೋಡೆಯ ಬುಡಗಳಿಗೆ ಧೂಳಿಸುವುದರಿಂದ ಡರ್ಮೆಸ್ಟಿಡ್ ಕೀಟಗಳನ್ನು ಸಾಯಿಸಬಹುದು.
 • ಬಿತ್ತನೆ ಕೋಠಿಗಳಲ್ಲಿ ಉಪಯೋಗಿಸುವ ಗೋಣಿಚೀಲ ಅಥವಾ ಹತ್ತಿ ಚೀಲಗಳನ್ನು ಶೇ.೦.೦೨೮ರ ಡೆಲ್ಟಾಮೆಥ್ರಿನ್‌ನಲ್ಲಿ ಅದ್ದಬೇಕು.
 • ಚಿಟ್ಟೆಕೊರೆದ ಗೂಡುಗಳ ಮೇಲೆ ಶೇ.೫ರ ಮೆಲಾಥಿಯಾನ್ ಸಿಂಪಡಿಸಿ ಅನಂತರ ಶೇಖರಿಸಬೇಕು. ಬಿತ್ತನೆ ಕೋಠಿ ಮತ್ತು ಉಪಯೋಗಿಸುವ ದಡೇವು ಅಥವಾ ಸಾಧನಗಳಿಗೆ ಶೇ.೦.೦೭೬ರ ಡಿ.ಡಿ.ವಿ.ಪಿ.ದ್ರಾವಣ ಸಿಂಪಡಿಸಬೇಕು.

) ಹುಳುವಿನ ಹಿಕ್ಕೆಯನ್ನು ಒಂದೇ ಒಂದು ಬಾರಿ ಹಿಪ್ಪುನೇರಳೆ ತೋಟಕ್ಕೆ ಹಾಕಿದಾಗಲೂ ಹುಳುಸಾಕಣೆಯಲ್ಲಿ ಸಪ್ಪೆರೋಗ ಬರತ್ತಲೇ ಇರುತ್ತದೆ. ಇದರ ಕಾರಣವೇನು?

ಸಪ್ಪೆರೋಗ ತಗುಲಿದ ಹುಳುಗಳಿದ್ದ ಬೆಳೆಯಲ್ಲಿನ ಹಿಕ್ಕೆಯನ್ನು ತಿಪ್ಪೆಗೆ ಹಾಕಿದ್ದು, ಅದು ಚೆನ್ನಾಗಿ ಪೂರ್ಣ ಕೊಳೆತಿರುವುದಿಲ್ಲ. ಅಂಥ ಗೊಬ್ಬರವನ್ನು ತೋಟಕ್ಕೆ ಹಾಕುವುದರಿಂದ ರೋಗಾಣುಗಳು ತೋಟದಲ್ಲಿದ್ದು ಸೋಂಕು ಹರಡುತ್ತಿರುತ್ತವೆ. ಆದ್ದರಿಂದ ಪದೇ ಪದೇ ಸಪ್ಪೆರೋಗ ಬರುತ್ತಲೇ ಇರುತ್ತದೆ.

) ಕಡಿಮೆ ಪ್ರಬಲತೆಯ ಫಾರ್ಮಲಿನ್ ಉಪಯೋಗಿಸುವುದರಿಂದಾಗುವ ಅನಾನುಕೂಲತೆಗಳೇನು?

ಇದರಿಂದ ರೋಗಾಣುಗಳಲ್ಲಿ ರೋಗನಿರೋಧಕ ಶಕ್ತಿ ಬೆಳೆಯುತ್ತದೆ, ಕೊಠಡಿಯಲ್ಲಿರುವ ರೋಗಾಣುಗಳು ಪೂರ್ತಿ ನಾಶವಾಗುವುದಿಲ್ಲ. ಆದ್ದರಿಂದ ಅಲ್ಲಿ ಸಾಕುವ ಹುಳುಗಳಿಗೆ ರೋಗ ಬಂದೇ ಬರುತ್ತದೆ. ಅಲ್ಲದೆ ಮುಂದಿನ ಬೆಳೆಗಳಿಗೆ ರೋಗನಿರೋಧಕ ಶಕ್ತಿ ಬೆಳಸಿಕೊಂಡ ರೋಗಾಣುಗಳು ಆಕ್ರಮಣ ಮಾಡುತ್ತವೆ.

) ಫಾರ್ಮಲಿನ್ ಘಾಟು ವಾಸನೆಯಿಂದ ಸಿಂಪರಣೆ ಮಾಡುವರಿಗೇ ಕೊಠಡಿಗೆ ಸಿಂಪರಣೆಮಾಡಲು ಸಾಧ್ಯವಾಗುವುದಿಲ್ಲ. ಹೀಗಿರುವಾಗ ರೋಗಾಣುಗಳು ಪೂರ್ಣ ನಾಶಹೊಂದಿರುವುದಿಲ್ಲವೆ?

ಕೊಠಡಿಯ ಪ್ರತಿಯೊಂದು ಭಾಗಗಳಲ್ಲೂ ರೋಗಾಣುಗಳಿರುವುದರಿಂದ, ಪ್ರತಿಯೊಂದು ಕಡೆಗೂ ಸಿಂಪರಣೆ ಮಾಡುವುದು ಅವಶ್ಯಕ. ಕೊಠಡಿಗೆ ಸಂಪೂರ್ಣ ಸಿಂಪರಣೆ ಮಾಡದಿದ್ದರೆ, ಸಿಂಪರಣೆ ಮಾಡದೆ ಇರುವ ಸ್ಥಳಗಳಲ್ಲಿರುವ ರೋಗಾಣುಗಳು ಮತ್ತೆ ಎಲ್ಲಾ ಕಡೆ ಹರಡುತ್ತವೆ. ಆಗ ಮುಂದಿನ ಸಾಕಣೆಯಲ್ಲಿ ಹುಳುಗಳಿಗೆ ರೋಗಗಳು ಬರುವುದು ಖಂಡಿತ. ಆದಕಾರಣ ಫಾರ್ಮಲಿನ್ ಸಿಂಪರಣೆ ಮಾಡುವವರ ಜೊತೆಗೆ ಇನ್ನೂ ಒಬ್ಬಿಬ್ಬರಿರುವುದು ಒಳ್ಳೆಯದು.

೧೦) ಸಾಕಣೆಯಾದನಂತರ ಸೋಂಕುನಿವಾರಣೆಮಾಡಿದ್ದರೂ ಪುನಃ ಸಾಕಣೆ ಶುರುಮಾಡುವುದಕ್ಕೆ ಮುನ್ನ ಏಕೆ ಕೊಠಡಿಗೆ ಸೋಂಕುನಿವಾರಣೆ ಮಾಡಬೇಕು?

ರೇಷ್ಮೆ ಹುಳುಗಳು ಹಲವು ವಿಧವಾದ ರೋಗಗಳಿಗೆ ತುತ್ತಾಗುತ್ತವೆ. ಬ್ಯಾಕ್ಟೀರಿಯಾ, ಶಿಲೀಂಧ್ರಗಳು ಮತ್ತು ಕೆಲವು ಏಕಕೋಶಜೀವಿ (ಪ್ರೊಟೊಜೊವಾ)ಗಳು ರೇಷ್ಮೆ ಹುಳುಗಳಿಗೆ ರೋಗ ಉಂಟಮಾಡುತ್ತವೆ. ಒಂದು ಸಲ ಈ ರೋಗಗಳು ರೇಷ್ಮೆ ಹುಳುಗಳಿಗೆ ರೋಗ ಉಂಟುಮಾಡುತ್ತವೆ. ಒಂದು ಸಲ ಈ ರೋಗಗಳು ರೇಷ್ಮೆ ಹುಳುಗಳಿಗೆ ಅಂಟಿದರೆ ಅದು ವ್ಯಾಪಕವಾಗಿ ಹರಡಿ, ಪೂಣ ಬೆಳೆಯೇ ನಷ್ಟವಾಗುತ್ತದೆ. ರೇಷ್ಮೆ ಬೆಳೆಗೆ ರೋಗತಗುಲಿದಮೇಲೆ ಪರಿಹಾರ ಹುಡುಕುವುದರ ಬದಲು ರೋಗ ಬಾರದಂತೆ ಮುಂಜಾಗರೂಕತೆ ವಹಿಸಿ, ಸೋಂಕು ನಿವಾರಣಾ ಕ್ರಮಗಳನ್ನು ಅನುಸರಿಸುವುದೇ ಉತ್ತಮ ಮಾರ್ಗ, ಆದಕಾರಣ ಪ್ರತಿ ಬೆಳೆ ಇಡುವುದಕ್ಕೆ ಮುಂಚೆ ಪುನಃ ಸೋಂಕು ನಿವಾರಣಾ ಕ್ಮಮಗಳನ್ನು ಅನುಸರಿಸುವುದೇ ಉತ್ತಮ ಮಾರ್ಗ. ಆದಕಾರಣ ಪ್ತತಿ ಬೆಳೆ ಇಡುವುದಕ್ಕೆ ಮುಂಚೆ ಪುನಃ ಸೋಂಕು ನಿವಾರಣೆ ಮಾಡುವುದು ಎಲ್ಲ ರೀತಿಯಿಂದಲೂ ಮುಖ್ಯ. ಇದರಿಂದ ಹುಳುಗಳು ಸಪ್ಪೆ, ಸುಣ್ಣಕಟ್ಟು ಮತ್ತು ಗಂಟುರೋಗಗಳಿಗೆ ತುತ್ತಾಗದೆ ಸುರಕ್ಷಿತವಾಗಿದ್ದು ಉತ್ತಮ ಬೆಳೆ ಪಡೆಯಲು ಸಾಧ್ಯಾಗುತ್ತದೆ.

೧೧) ರಾಸಾಯನಿಕ ವಸ್ತುಗಳನ್ನು ವಿವಿಧ ಉಪಚಾರಗಳಲ್ಲಿ ಬಳಸುವಾಗ ಶಿಫಾರಸು ಮಾಡಿರುವ ಪ್ರಬಲತೆಯಲ್ಲಿಯೇ ಏಕೆ ಉಪಯೋಗಿಸಬೇಕು?

ಯಾವುದೇ ರಾಸಾಯನಿಕ ವಸ್ತುವಾಗಲಿ ಅದರ ಪರಿಣಾಮ ಒಂದರಿಂದ ಮತ್ತೊಂದಕ್ಕೆ ವ್ಯತ್ಯಾಸವಿರುತ್ತದೆ. ಒಂದೇ ರಾಸಾಯನಿಕವನ್ನು ವಿವಿಧ ಪ್ರಬಲತೆಗಳಲ್ಲಿ ವಿವಿಧ ಕಾರ್ಯಗಳಿಗೆ ಉಪಯೋಗಿಸಲಾಗುತ್ತದೆ. ಆದ್ದರಿಂದ ಆ ಕಾರ್ಯಗಳಲ್ಲಿ ಗೊತ್ತುಪಡಿಸಿದ ಪ್ತಬಲತೆಯಲ್ಲಿಯೇ ರಾಸಾಯನಿಕ ವಸ್ತುಗಳನ್ನು ಬಳಸಬೇಕು. ಶಿಫಾರಸ್ಸು ಮಾಡಿರುವ ಪ್ರಬಲತೆಯಲ್ಲಿಯೇ ಬಳಸುವದರಿಂದ ರೋಗವನ್ನು ತಡೆಗಟ್ಟುವ ಕಾರ್ಯಸುಲಭವಾಗಿದ್ದು ಪರಿಣಾಮಕಾರಿಯಾಗಿ ಇರುತ್ತದೆ. ಶಿಫಾರಸ್ಸು ಮಾಡಿದ ಪ್ರಬಲತೆಗಿಂತ ಹೆಚ್ಚಿನ ಪರಬಲತೆಯಲ್ಲಿ ಉಪಯೋಗಿಸಿದ್ದೇ ಆದಲ್ಲಿ ಅದು ಹುಳುಗಳ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಿ ಹುಳುಗಳು ಸಾಯಬಹುದು. ಶಿಫಾರಸ್ಸು ಮಾಡಿದ ಪ್ರಬಲತೆಗಿಂತ ಕಡಿಮೆ ಪ್ರಬಲತೆಯನ್ನು ಉಪಯೋಗಿಸಿದರೆ, ಅದು ಯಾವುದೇ ಪರಿಣಾಮವನ್ನು ಬೀರದೆ, ಹುಳುಗಳು ಇನ್ನೂ ಹೆಚ್ಚು ರೋಗಕ್ಕೆ ತುತ್ತಾಗಿ ಸಾಯಬಹುದು. ಆದ್ದರಿಂದ ರಾಸಾಯನಿಕ ವಸ್ತುಗಳನ್ನು ವಿವಿಧ ಉಪಚಾರಗಳಲ್ಲಿ ಬಳಸುವಾಗ ಶಿಫಾರಸ್ಸು ಮಾಡಿರುವ ಪ್ರಬಲತೆಯಲ್ಲಿಯೇ ಉಪಯೋಗಿಸಬೇಕು.

೧೨) ರೇಷ್ಮೆ ಕಸುಬಿಗಾಗಿ ಸಿಗುವ ಸಾಲ ಸೌಲಭ್ಯಗಳ ಬಗ್ಗೆ ತಿಳಿಸಿ?

 • ಹೆಚ್ಚು ಇಳುವರಿ ಕೊಡುವ ಹಿಪ್ಪುನೇರಳೆ ತಳಿಗಳನ್ನು ನರ್ಸರಿ ಮೂಲಕ ಬೆಳೆಸಿದರೆ ರಾಜ್ಯ ರೇಷ್ಮೆ ಇಲಾಖೆ ಪ್ರತಿ ಸಿಸಿಗೆ ರೂ.೦.೫೦ ರಂತೆ ಕೊಂಡುಕೊಳ್ಳುತ್ತದೆ.
 • ರೇಷ್ಮೆ ಕೃಷಿ ಮಾಡುವುದಕ್ಕೆ ತರಬೇತಿ ಮತ್ತು ಪ್ರತಿ ಎಕರೆಗೆ ರೂ.೧,೭೫೦/- ಬೆಲೆ ಬಾಳುವ ಉಪಕರಣಗಳನ್ನು ನೀಡಲಾಗುವುದು.
 • ದ್ವಿಸಂತತಿತಳಿ ರೇಷ್ಮೆಗೂಡು ಬೆಳೆಯುವವರಿಗೆ ಆಧುನಿಕ ಸಲಕರಣೆಗಳನ್ನು ಕೊಳ್ಳಲು ಶೇ.೫೦ರಷ್ಟು ಸಹಾಯಧನ ನೀಡಲಾಗುವುದು.
 • ಕೇಂದ್ರ ರೇಷ್ಮೆ ಮಂಡಳಿ ಮತ್ತು ರಾಜ್ಯ ರೇಷ್ಮೆ ಇಲಾಖೆಗಳು ಹಿಪ್ಪುನೆರಳೆ ತೋಟಕ್ಕೆ ಹನಿ ನೀರಾವರಿ ಅಳವಡಿಸಲು ಶೇ.೫೦ರಷ್ಟು ಸಹಾಯಧನ ನೀಡುತ್ತವೆ.
 • ರೈತರಿಗೆ ಶೇ.೫೦ರ ಸಹಾಯಧನ ನೀಡಿ ಸೋಂಕುನಿವಾರಕಗಳನ್ನು ಸರಬರಾಜು ಮಾಡಲಾಗುವುದು. ದ್ವಿಸಂತತಿತಳಿ ರೇಷ್ಮೆ ಗೂಡು ಬೆಳೆಯುವ ರೈತರಿಗೆ ಉಚಿತವಾಗಿಯೇ ಸೋಂಕುನಿವಾರಕಗಳನ್ನು ಕೊಡಲಾಗುವುದು.
 • ರಾಜ್ಯ ರೇಷ್ಮೆ ಇಲಾಖೆ ಮತ್ತು ಕೇಂದ್ರ ರೇಷ್ಮೆ ಮಂಡಳಿಗಳು ರೇಷ್ಮೆ ಹುಳು ಸಾಕಣೆ ಮನೆಕಟ್ಟಲು ಶೇ.೫೦ರಷ್ಟು ಸಹಾಯಧನ (ಹೆಚ್ಚು ಅಂದರೆ ೧ ಲಕ್ಷದವರೆಗೆ ಮಾತ್ರ)ವನ್ನು ನೀಡುತ್ತವೆ.
 • ಹಿಪ್ಪುನೇರಳೆ ರೇಷ್ಮೆ ಬೆಳೆಗೆ ಬೆಳೆ ವಿಮೆ ಪಾಲಿಸಿ ಮತ್ತು ರೈತರಿಗೆ ಅಪಘಾತ ವಿಮೆ ಪಾಲಿಸಿ ಸೌಲಭ್ಯವೂ ಸಹ ಇದೆ. ಇದಕ್ಕೆ ರಾಜ್ಯ ರೇಷ್ಮೆ ಇಲಾಖೆ ಮತ್ತು ಕೇಂದ್ರ ರೇಷ್ಮೆ ಮಂಡಳಿಗಳನ್ನು ಸಂಪರ್ಕಿಸಬೇಕು.