ಕಾಡಿದ್ದರೆ ಕಾಕರ್ಮೋಡ ಮತ್ತು ಕಾಡಿದ್ದರೆ ನಾಡು’ ಎಂಬ ಗಾದೆಯು ಪರಿಸರ ಮತ್ತು ಒಂದು ಜನಸಮುದಾಯದ ಅಸ್ತಿತ್ವ ಮತ್ತು ಏಳಿಗೆಗಳಿಗೆ ಮರಗಳ ಕೊಡುಗೆಯನ್ನು ತಿಳಿಸುತ್ತದೆ. ರೈತರ ಮತ್ತು ಮರಗಳ ನಡುವಿನ ಸಂಬಂಧ ಸಾಂಸ್ಕೃತಿಕವಾಗಿ ಮುಖ್ಯವಾಗಿರುವುದಲ್ಲದೆ ಆರ್ಥಿಕವಾಗಿಯೂ ಅಷ್ಟೇ ಪ್ರಮುಖ ಪಾತ್ರ ವಹಿಸುತ್ತದೆ. ರೈತರಿಗೆ ವಸತಿ ನಿರ್ಮಾಣಕ್ಕೆ, ಪೀಠೋಪಕರಣಗಳಿಗೆ ಹಾಗೂ ಕೃಷಿ ಉಪಕರಣಗಳಿಗೆ ಮರಮುಟ್ಟು ಒದಗಿಸುವುದರ ಜೊತೆಗೆ, ಉರುವಲು, ಹಸಿರು ಗೊಬ್ಬರ ಮತ್ತು ಹಣ್ಣು ಹಂಪಲು ನೀಡಿ ಅವರ ಆದಾಯವನ್ನು ಹೆಚ್ಚಿಸಿ ಅವರ ಆಪತ್ಕಾಲಕ್ಕೆ ನೆರವಾಗುತ್ತವೆ. ಆದರೆ ಇಂದು ಕಾಡುಗಳು ನಾಶವಾಗುತ್ತಿರುವಂತೆ ಗ್ರಾಮಗಳಲ್ಲಿನ ತೋಪುಗಳು ಹಾಗೂ ರೈತರ ಹೊಲಗದ್ದೆಗಳಲ್ಲಿನ ಮರಗಳೂ ನಾಶವಾಗುತ್ತಿವೆ. ರೈತರಿಗೆ ಹಾಗೂ ಇತರ ಗ್ರಾಮಸ್ಥರಿಗೆ ಮರಗಳ ಬಗೆಗಿನ ಅರಿವನ್ನು ಹೆಚ್ಚಿಸಿ ತಮ್ಮ ದೈನಂದಿನ ಕೃಷಿಯ ಜೊತೆಗೆ ತಮ್ಮ ಹೊಲಗದ್ದೆಗಳಲ್ಲಿ ಸಾಧ್ಯವಿರುವೆಡೆಯಲ್ಲೆಲ್ಲಾ ಮರಗಳನ್ನು ಬೆಳೆಸಿ ಸಂರಕ್ಷಿಸುವಂತೆ ಮಾಡಬೇಕಾಗಿದೆ. ಈ ದಿಸೆಯಲ್ಲಿ ಪ್ರೊ. ಬಿ.ಕೆ.ಸಿ. ರಾಜನ್‌ಮತ್ತು ಪ್ರೊ. ದಾಸಪ್ಪರವರ ಈ ಕೃತಿ ಸಹಕಾರಿಯಾಗಬಲ್ಲದು.

ಈ ಕೃತಿಯಲ್ಲಿ ೪೩ ವಿವಿಧ ಉಪಯುಕ್ತ ಮರಗಳ ಬಗೆಗೆ ಹಾಗೂ ೧೧ ಪೊದರುಗಳ ಬಗೆಗೆ ಮಾಹಿತಿ ನೀಡಲಾಗಿದೆ. ಈ ಕೃತಿಯ ತಾಂತ್ರಿಕ ಪರಿಶೀಲನೆಯನ್ನು ಡಾ. ಕೆ.ಟಿ. ಪ್ರಸನ್ನ, ಪ್ರಾಧ್ಯಾಪಕರು, ಅರಣ್ಯ ಶಾಸ್ತ್ರ ಮತ್ತು ಪರಿಸರ ವಿಜ್ಞಾನ ವಿಭಾಗ, ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು ಇವರು ನಿರ್ವಹಿಸಿದ್ದಾರೆ.

ಈ ಕೃತಿ ಯ ಉಪಯುಕ್ತತೆಯಿಂದಾಗಿ ಮೊದಲ ಮುದ್ರಣದ ಪ್ರತಿಗಳು ಮುಗಿದು ಹೋಗಿದ್ದು ಈಗ ದ್ವಿತೀಯ ಮು೭ದ್ರಣ ಹೊರಬರುತ್ತಿದೆ. ಈ ಕೃತಿಯು ರೈತರಿಗೆ, ವಿದ್ಯಾರ್ಥಿಗಳಿಗೆ, ಬೋಧಕರಿಗೆ, ವಿಸ್ತರಣಾ ಕಾರ್ಯಕರ್ತರಿಗೆ ಹಾಗೂ ಇತರರಿಗೆ ಪ್ರಯೋಜನವಾಗುವುದೆಂದು ಆಶಿಸಲಾಗಿದೆ.

ಡಾ. ಉಷಾಕಿರಣ್‌
ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು
ಹಾಗೂ
ಕನ್ನಡ ಅಭಿವೃದ್ಧಿ ಸಮಿತಿ ಕಾರ್ಯದರ್ಶಿ
ಕನ್ನಡ ಅಧ್ಯಯನ ವಿಭಾಗ
ವಿಸ್ತರಣಾ ನಿರ್ದೇಶನಾಲಯ
ಕೃಷಿ ವಿಶ್ವವಿದ್ಯಾನಿಲಯ, ಹೆಬ್ಬಾಳ
ಬೆಂಗಳೂರು-೫೬೦೦೨೪