ಮಲೆನಾಡಿನ ನೆಂಟರ ಮನೆಗೆ ೧೫ ವರ್ಷಗಳ ಹಿಂದೆ ರಾತ್ರಿ ವಸತಿಗೆ ಹೋದ ಸ್ನೇಹಿತರು  ಒಂದು ಘಟನೆ ಹೇಳುತ್ತಿದ್ದರು. ಸಾಯಂಕಾಲ ೭ ಗಂಟೆಗೆ ರಾತ್ರಿ ಊಟ! ಕವಳ ಜಗಿದು ಜಗುಲಿಯಲ್ಲಿ ಒಂದಿಷ್ಟು ಹೊತ್ತು ಮಾತುಕತೆ, ೮ ಗಂಟೆಗೆ ಹಾಸಿಗೆ ಹಾಸಿದರು. ಗಡದ್ದಾಗಿ ನಿದ್ದೆ  ಆವರಿಸಿತು. ಎಚ್ಚರಾದಾಗ ಜಗುಲಿಯಲ್ಲಿ ದೀಪ ಉರಿಯುತ್ತಿತ್ತು. ಸಮಯ ನೋಡಿದರೆ ಇನ್ನೂ ಮುಂಜಾನೆ ೪ ಗಂಟೆ, ಮೂತ್ರ ವಿಸರ್ಜನೆಗೆಂದು ಎದ್ದು ಹೊರಗೆ ಹೋದರು, ಮತ್ತೆ  ಮರಳಿ ಮಲಗಲು ಜಗುಲಿಯ ಹಾಸಿಗೆ ಬಳಿ ಬಂದರೆ ಅಲ್ಲಿ ಹಾಸಿಗೆಯೇ  ಇರಲಿಲ್ಲ! ಡಿಸೆಂಬರ್‌ನ ನಡುಗುವ ಚಳಿ, ಸ್ವೆಟರ್ ಇಲ್ಲ, ಬೆಚ್ಚಗೆ ಮಲಗಿಸಿದ ಹಾಸಿಗೆ ಎಲ್ಲಿ  ಹೋಯಿತೆಂದು ಯೋಚಿಸುತ್ತ ಗಡಿಯಾರದ ಕಟ ಕಟ ಸಪ್ಪಳ ಲೆಕ್ಕ  ಹಾಕುತ್ತ  ಗಡಗಡ ನಡುಗುತ್ತ  ಮುಡುಗಿ ಕುಳಿತರು.  ಒಳಗಡೆ ಮಜ್ಜಿಗೆ ಕಡೆಯುವ ಸರಪರ ಸಪ್ಪಳ, ಕತ್ತಲಲ್ಲಿ ಅಂಗಳ ಗುಡಿಸಿದ  ಪೊರಕೆ ಸದ್ದು, ತುಳಸಿಕಟ್ಟೆ ಎದುರು ಸಾರಿಸುವ ಹೆಂಗಸರ ಕಟಿಪಿಟಿ. ಮನೆಯ ಮಕ್ಕಳು, ಮುದುಕರು, ಹೆಂಗಸರೆಲ್ಲ ತಮ್ಮ ತಮ್ಮ ಕೆಲಸಗಳಲ್ಲಿ ತಲ್ಲೀನರಾಗಿದ್ದರು. ಅಂತೂ ೪.೩೦ ಕಳೆದಿರಲ್ಲಿಲ್ಲ , ಬೆಳಗಿನ ಉಪಹಾರಕ್ಕೆ ಅಡುಗೆ ಮನೆಯಿಂದ ಬುಲಾವ್ ಬಂತು, ಗಟ್ಟಿ ಬೆಳಗು ಹರಿಯುವದರೊಳಗೆ  ಎಲ್ಲರೂ  ಚಹ ಕುಡಿದು ಹೆಂಗಸರು ಪಾತ್ರೆ ತೊಳೆದು ಮುಗಿಸಿದ್ದರು!

ಆ ದಿನ  ಮುಂಜಾನೆ ಹಾಸಿಗೆ ಕಳಕೊಂಡ ನೋವು ಹಾಗೂ  ಕೊರೆವ ಚಳಿ ನೆನಪು ಇವತ್ತಿಗೂ ಅವರನ್ನು ನೆನಪಾಗಿ  ಕಾಡುತ್ತಿದೆ. ಅತಿವೇಗದಲ್ಲಿ  ಒತ್ತಾಯದ ಬೆಳಗು  ಏಕೆ? ಏನಾದರೂ ಹಬ್ಬ ವಿಶೇಷದ ದಿನವೇ ? ಹಾಗೇನಿಲ್ಲ ನಿತ್ಯ ಮುಂಜಾನೆ ಬೇಗ ಏಳುವದು ಮಮೂಲಿ ದಿನಚರಿ! ಮಳೆ, ಚಳಿಯ  ಪಾರವಿಲ್ಲದೇ  ಕೃಷಿ ತಪಸ್ವಿ ಹಳ್ಳಿಗರು  ಯಾವತ್ತೂ ಮುಂಜಾನೆ ಹಾಸಿಗೆ ಹಿಡಿದವರಲ್ಲ! ಚುರುಕು ಚಟುವಟಿಕೆಯಲ್ಲಿ ದಿನ ಆರಂಭಿಸುವವರು.

ನಾವು ಚಿಕ್ಕವರಿದಾಗ ಮನೆಗೆ ಬಂದಿದ್ದ ೫೦-೬೦ ವರ್ಷದ ಹಿರಿಯರು ನಮಗಿಂತ ಬೇಗ ಏಳುತ್ತಿದ್ದರು. ನಾವು ಹಾಸಿಗೆ ಮಡಚುವದರೊಳಗೆ ಕೃಷಿ ಭೂಮಿ ಸುತ್ತಾಡಿ ಬರುತ್ತಿದ್ದರು. ನೆಂಟರ ಮನೆಗೆ ಬಂದರೂ ಬೆಳಿಗ್ಗೆ ಬೇಗ ಎಳುವ ಪರಿಪಾಟ ಬಿಡುತ್ತಿರಲಿಲ್ಲ. ಕಾಡಿನ ಸೊಪ್ಪು, ತೆರಕು, ಹುಲ್ಲು ತರುವದು. ಆಡಿಕೆ ತೋಟದ ಸೋಗೆ  ಎತ್ತುವದು, ಅಡಿಕೆ ಹೆಕ್ಕುವದು, ದೊಡ್ಡಿಯ ಕೆಲಸ  ಸೇರಿದಂತೆ ಮುಂಜಾನೆ ಮಾಡಬಹುದಾದ ಕೆಲಸಗಳ ಉದ್ದನೆಯ  ಪಟ್ಟಿಯಿತ್ತು. ಬೆಳಗಿನ ಉಪಹಾರ ಸೇವನೆಗೆ ಮುಂಚೆ ಕನಿಷ್ಟ ೨ ತಾಸಿನ ಕೃಷಿ ಕೆಲಸ ಪೂರೈಸುತ್ತಿದ್ದರು. ನಂತರ ಕೂಲಿಗೆ ಬರುವವರ ಜತೆ ಮತ್ತೆ ಕೆಲಸಕ್ಕೆ ಹೊರಡಲು ಸಿದ್ದರಾಗುತ್ತಿದ್ದರು. ಕೂಲಿಕಾರರ ಅಗತ್ಯವಿಲ್ಲದೇ ಹೆಚ್ಚಿನ ಕೆಲಸ ಮುಗಿಯುತ್ತಿತ್ತು. ಮಕ್ಕಳಿಗೂ ಕೃಷಿ ಕೆಲಸದ ಅನುಭವ ಸಾದ್ಯವಾಗುತ್ತಿತ್ತು. ೨೦ ವರ್ಷಗಳ ಹಿಂದೆ ಅವಿಭಕ್ತ ಕುಟುಂಬಗಳು ಜಾಸ್ತಿಯಿದ್ದ  ಕಾಲಕ್ಕೆ  ಮನೆ ಮನೆಯಿಂದ ಹತ್ತಾರು ಜನ ಬೆಳಗಿನ ಕೆಲಸಕ್ಕೆ  ನಿಂತರೆ  ಸಮಯಕ್ಕೆ ಸರಿಯಾಗಿ  ಎಲ್ಲ ಕೆಲಸಗಳು ಮುಗಿಯುತ್ತಿದ್ದವು. ಕೃಷಿ ಇವರಂತೆ ಎದ್ದು ನಿಲ್ಲುತ್ತಿತ್ತು.

ಈಗ  ಇದ್ದಕ್ಕಿದ್ದಂತೆ  ರೈತರ ಗಡಿಯಾರ  ಬದಲಾಗಿದೆ. ಮನೆ ಜಗುಲಿಗೆ ಟಿವಿ ಬಂದ ಬಳಿಕ ತಡ ರಾತ್ರಿ  ಮಲಗುವದು  ಚಾಳಿಯಾಗಿದೆ, ಬೆಳಿಗ್ಗೆ  ೯ ಗಂಟೆಗೂ ಹಾಸಿಗೆ ಬಿಡದ ಕೃಷಿ ಕುಟುಂಬದ  ಯುವಕರು ಮನೆ ಮನೆಗಳಲ್ಲಿ  ಧಾರಾಳ ಸಿಗುತ್ತಾರೆ ! ಏಳುವದುಮಲಗುವದು, ಊಟ, ಕೆಲಸ ಎಲ್ಲವೂ  ಬದಲಾಗಿದೆ. ಶಾಲೆಗೆ ಹೋಗುವ ಮಕ್ಕಳಂತೂ ರಜಾ ದಿನವಾದರೆ  ಆರಾಮವಾಗಿ ೧೦ ಗಂಟೆಗೆ ಏಳುವದು ಮನೆಮಂದಿಗೆ ಅಭ್ಯಾಸವಾಗಿದೆ. ನಮ್ಮ ಹಳ್ಳಿಗಳಲ್ಲಿ ಹಿಂಂದೆ  ಬೆಳಿಗ್ಗೆ  ಯಾರನ್ನಾದರೂ ಎಬ್ಬಿಸಬೇಕು‘   ಎಂದರೆ ಅದು ನಾಚಿಕೆ ವಿಚಾರ. ಯಾರ ಮನೆಯ ಮಕ್ಕಳನ್ನಾದರೂ ಪರಿಚುಸುವಾಗ ಅವರು ೮ ಗಂಟೆಗೆ ಏಳುವವರು ಎಂದು ಹೇಳುತ್ತಿದ್ದರು! ಅದೊಂದು ಸಂಗತಿ ಅವರು ಹೇಗಿದ್ದಾರೆ ಎಂಬುದನ್ನು ಹೇಳುತ್ತಿತ್ತು, ಅವರ ಕೃಷಿ ಹೇಗಿರಬಹುದು ಎಂಬುದನ್ನು ಸಾರುತ್ತಿತ್ತು.

ಮುಂಜಾನೆ ಏಳಲು  ಸದಾ ನಮ್ಮ ಜೈವಿಕ ಗಡಿಯಾರ  ಜಾಗೃತವಾಗಿರ ಬೇಕು, ಅಂತಹ ಅಭ್ಯಾಸವಿದ್ದರೆ  ಬೇಕು ಬೇಕೆಂದರೂ ಮಲಗಲು  ಸುತರಾಂ ಮನಸ್ಸಿರುವದಿಲ್ಲ.  ಆದರೆ ಈಗ ನಮ್ಮ ಸುಖದ ಪರಿಕಲ್ಪನೆ, ಕೃಷಿ ನಿರ್ವಹಣೆ ಆದ್ಯತೆಗಳು ತೀರ ಬದಲಾಗಿವೆ. ಅದೇ ಕೆಲಸ, ಅದೇ ಭೂಮಿ, ಬದುಕು  ಆರಕ್ಕೆ ಏಳೋದಿಲ್ಲ, ಮೂರಕ್ಕೆ ಇಳಿಯೋದಿಲ್ಲ  ಎಂದು ಈಗ ಸಾರ್ವತ್ರಿಕ ಆಲಸ್ಯ ಮನೆ ಮಾಡಿದಂತಿದೆ. ಈಗ ಯಾರ ಮನೆಯಲ್ಲಾದರೂ ಮುಂಜಾನೆ ದೀಪ ಉರಿದರೆ  ಅವತ್ತು ಮನೆಯಲ್ಲಿ ಯಾರೋ ದೂರ ಪ್ರವಾಸಕ್ಕೆ ಹೊರಟಿದ್ದಾರೆ, ಬೆಳಗಿನ ಬಸ್ಸಿಗೆ ಹೊರಟಿದ್ದಾರೆ  ಎಂದು  ಊರು ಅರ್ಥೈಸಿಕೊಳ್ಳುತ್ತದೆ!  ಆಡುಗೆ ಮನೆಯ ದೋಸೆ ವಾಸನೆ ಬಳಿಕ ಏಳುವ ಜಾಣತನ ಅಭ್ಯಾಸವಾಗಿದೆ. ಬೆಳಗಿನ ತಿಂಡಿ ಸಿದ್ದವಾಗುವದೇ ಏಳು ಗಂಟೆಯ ನಂತರವಾಗಿರುವಾಗ ಮುಂಜಾನೆ ಎದ್ದು  ಏಳು ಮಾಡಬೇಕು? ಪ್ರಶ್ನಿಸುವವರನ್ನು  ಹಳ್ಳಿ ಮನೆಗಳಲ್ಲಿ  ಕಾಣುತ್ತೇವೆ. ಕೃಷಿ ಕೆಲಸ ಕಾಣದಷ್ಟು ಕೃಷಿಕ ತಲೆಮಾರು ಬೆಳ್ಳಂ ಬೆಳಗ್ಗೆ  ಕುರುಡರಾಗುತ್ತಿರುವದು  ಈ ಮಣ್ಣಿನ ದೊಡ್ಡ ದುರಂತ! ಯೋಗಾಸನ ಮಾಡುವವರು, ವಾಕಿಂಗ್ ಹೋಗುವವರು ಹಳ್ಳಿಯಲ್ಲೂ ಹೆಚ್ಚುತ್ತಿರುವದರಿಂದ ಕೆಲವರಿಗೆ ಬೇಗ ಬೆಳಗಾಗುತ್ತಿದೆ. ಬೆಳಿಗ್ಗೆ ಬೆಡ್ ಕಾಫಿ ಬಳಿಕವೇ ಹಾಸಿಗೆಯಿಂದ ಈಚೆ  ಬರುವವರ  ಸಂಖ್ಯೆಯೂ ಹೆಚ್ಚಿದೆ.

ಉತ್ತರ ಕನ್ನಡದ ಗೋಕರ್ಣದ ಹಾಲಕ್ಕಿ ಮಹಿಳೆಯರು ಬೇಸಿಗೆಯಲ್ಲಿ ತರಕಾರಿ ಬೆಳೆಯುತ್ತಾರೆ.  ಅತ್ಯಂತ ಸ್ವಾದಿಷ್ಟ ಆ ತರಕಾರಿ ಕೃಷಿಯ ಹಿಂದೆ ಮುಂಜಾನೆ ೪ಕ್ಕೆ ತರಕಾರಿಗೆ ನೀರು ಹಾಕುವ ಹೆಂಗಳೆಯರ ಶ್ರದ್ಧೆಯಿದೆ. ಚಳಿ, ನಿದ್ದೆ  ಬದಿಗಿಟ್ಟು  ಆಲಸ್ಯ ಕೊಡವಿ  ಕೆಲಸ ಶುರು ಮಾಡುವ ಇವರ ಜೀವನ ಕ್ರಮ. ಮುಂಜಾನೆ ನೀರು ಹಾಕಿದರೆ ಮಾತ್ರ ಗಿಡಗಳು ಆರೋಗ್ಯಯುತವಾಗಿ ಬೆಳೆಯುತ್ತವೆ ಎನ್ನುತ್ತಾರೆ. ಕೃಷಿ ಕೆಲಸಗಳಿಗೂ ಸಮಯ, ಸಂದರ್ಭಗಳಿವೆ. ನಮ್ಮ ಭೂಮಿ, ನಮ್ಮ ಕೃಷಿ, ನಮ್ಮ ನಿದ್ದೆ ಬಗೆಗೆ ಮಾತಾಡಲು ನಿಮಗೇನು ಹಕ್ಕಿದೆ? ಖಾಸಗಿ ವಿಚಾರಗಳನ್ನು ಸಾರ್ವತ್ರಿಕ  ಚರ್ಚಿಸುವ ಜರೂರತ್ತು  ಏನಿದೆ? ಪ್ರಶ್ನೆ  ಕಾಡಬಹುದು.  ಮಣ್ಣಿನ ಜತೆ ಬೆಳೆದು ಬಂದವರು  ಪರಂಪರೆಯಿಂದ ನಮ್ಮ ಕೈಗೆ ನೀಡಿದ  ರೈತ ಗಡಿಯಾರವನ್ನು ನಾವು  ಇದ್ದಕ್ಕಿದ್ದಂತೆಯೇ  ಬದಲಿಸಿದರೆ ಪರಿಣಾಮ ನಮ್ಮ ಆರೋಗ್ಯ, ಕೃಷಿಯಲ್ಲಾಗುತ್ತದೆ. ನಮ್ಮ ಮನಸ್ಸು ಮುಂಜಾನೆ ಪ್ರಸನ್ನವಾಗಿರುವ ಹೊತ್ತು  ಆರಂಭವಾದ ಕೆಲಸಗಳು ನಮ್ಮ ಜೀವನ ಪರಿಸರದಲ್ಲಿ ಪರಿವರ್ತನೆ ತರುತ್ತವೆ. ಕೃಷಿ ಬೆಳೆಗಳು  ಆ ಹೊತ್ತಿಗೆ ನಮ್ಮ ಜತೆ ಮಾತಾಡುತ್ತವೆ. ಎಲ್ಲಕ್ಕಿಂತ ಮುಖ್ಯವಾಗಿ ಮಣ್ಣಿನ ಬದುಕು ಗೆಲ್ಲಿಸಲು ನಾವು  ಸಕಾಲಕ್ಕೆ ಎಚ್ಚರವಾಗಿರ ಬೇಕಾದುದು ಇಂದಿನ ಅಗತ್ಯ. ನಮ್ಮ ಹಳ್ಳಿಗಳಲ್ಲಿ ಈಗ  ಕೂಲಿ ಬರ ಕಾಡುತ್ತಿದೆ. ಕೃಷಿ ಕೆಲಸಕ್ಕೆ ಜನರಿಲ್ಲ ಎಂಬ ಮಾತು ಮೊಳಗುತ್ತಿದೆ.  ಮುಂಜಾನೆ ಬೇಗ ಎದ್ದು ತಮ್ಮ ಕೃಷಿ ಕೆಲಸಗಳ ಮುಕ್ಕಾಲು ಭಾಗ ನಮ್ಮ ಹಿರಿಯರು  ತಾವೇ ನಿರ್ವಹಿಸುತ್ತಿದ್ದರು. ಆ ಹೊತ್ತಿಗೆ ಹೂವು ಎತ್ತಿಟ್ಟಂತೆ ಕೆಲಸಗಳು ಮುಗಿಯುತ್ತಿದ್ದವು.  ಈಗ  ಈ ದಾರಿ ಮರೆತು ನಾವು ಹಾಸಿಗೆ ಹಿಡಿದಿದ್ದೇವೆ. ನಮ್ಮ ಹಾಸಿಗೆಯಿಂದ ಎಬ್ಬಿಸಲು, ಸುತ್ತಿ ಆಚೆ ಇಡಲು ಬೇರೆ  ಆಳು ಬೇಕಾಗಿದೆ . ಹೋಗಿ ಹೋಗಿ ನಮ್ಮ ಜೈವಿಕ ಗಡಿಯಾರ ಬದಲಿಸಿಕೊಂಡು  ಕೃಷಿಕರ ಸಮಯ ಸರಿಯಿಲ್ಲ ಎಂದು ಬೊಬ್ಬೆ ಹೊಡೆದರೆ ಹೇಗೆ?