ಕೃಷಿಯಲ್ಲಿ ಅಭಿವೃದ್ಧಿ ಎಂದರೆ ಹಣ ಹೆಚ್ಚು ಗಳಿಸುವುದು ಎಂದು ಅರ್ಥವೇ ಅಥವಾ ಜೀವನವನ್ನು ಸಮರ್ಥವಾಗಿ ನಿರ್ವಹಿಸುವುದೆಂಬ ಅರ್ಥವೇ? ಆಧುನಿಕ ಕೃಷಿಯಲ್ಲಿ ಹಣಕ್ಕೇ ಪ್ರಾಧಾನ್ಯ. ಐಟಿ ಉದ್ಯಮವಂತೂ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಸಣ್ಣರೈತರ ಪಾಲಿಗೆ ಸಮಸ್ಯೆಗಳ ಸರಮಾಲೆಯನ್ನೇ ಉಂಟುಮಾಡಿದೆ. ದೊಡ್ಡ ರೈತರು ಐಟಿಯನ್ನೇ ಬಳಸಿಕೊಂಡು ಇನ್ನಷ್ಟು ಶ್ರೀಮಂತರಾಗುತ್ತಿದ್ದಾರೆ. ಇದರ ಮಧ್ಯೆ ಬಹುರಾಷ್ಟ್ರೀಯ ಉದ್ಯಮಿಗಳ ಆಟ ೧೦-೫-೨೦೦೫ರಂದು ಡಾ.ಸ್ವಾಮಿನಾಥನ್‌ರಂಥವರೇ ಭಾರತದ ಕೃಷಿ ಉತ್ಪನ್ನಗಳು ಗುಣಮಟ್ಟ ಕಳೆದುಕೊಳ್ಳುತ್ತಿವೆ ಎನ್ನುವ ಹೇಳಿಕೆ ನೀಡಿದ್ದಾರೆ. ಹಾಗಿದ್ದರೆ ರೈತರ ಬದುಕು ಯಾರ ಕೈಯಲ್ಲಿದೆ? ನಿಜವಾಗಿಯೂ ನಮಗಾಗಿಯೇ ನಾವು ಕೃಷಿ ಮಾಡುತ್ತಿದ್ದೇವೋ? ಜೀವನಾಧಾರಿತ ಕೃಷಿಗೇಕೆ ಮಾನ್ಯತೆಯಿಲ್ಲ? ಕೃಷಿಯಲ್ಲಾಗುತ್ತಿರುವ ತಿರುವುಗಳು ರೈತರ ಪಾಲಿಗೆ ಹೇಗೆ ಮುಳ್ಳುಗಳಾಗುತ್ತಿವೆ… ಓದಿ.

ಲಾಭದ ಆಸೆ ಹಾಗೂ ಸ್ವಾರ್ಥ ಮನೋವೃತ್ತಿಗಳೇ ಮನುಷ್ಯರನ್ನು ಅಭಿವೃದ್ಧಿಯ ಪಥದಲ್ಲಿ ಸಾಗಿಸುತ್ತದೆ. ಬಹುರಾಷ್ಟ್ರೀಯ ಕಂಪೆನಿಗಳು ಮನುಷ್ಯರ ಈ ಮಾನಸಿಕ ಸ್ಥಿತಿಯ ಮೇಲೆ ತಮ್ಮ ವ್ಯಾಪಾರಿ ಮಹಲನ್ನು ಕಟ್ಟುತ್ತಿವೆ.

ಹುಬ್ಬಳ್ಳಿಗೆ ಅಂಟಿಕೊಂಡಿರುವ ಗಬ್ಬೂರು ಒಂದು ಸೆಮಿ ಅರ್ಬನ್ ಪ್ರದೇಶ. ಹುಬ್ಬಳ್ಳಿಗೆ ಬೇಕಾದ ಹಾಲು, ತರಕಾರಿಗಳ ಪೂರೈಕೆ ಮಾಡುವುದು ಈ ಊರಿನವರ ಮುಖ್ಯವೃತ್ತಿ. ಅದಕ್ಕೆ ಬದಲಾಗಿ ಹುಬ್ಬಳ್ಳಿಯು ತನ್ನೆಲ್ಲಾ ಕೊಳಚೆ ನೀರನ್ನು ಈ ಊರಿಗೆ ಕೊಡುತ್ತದೆ. ಎಮ್ಮೆ ಮೈತೊಳೆಯಲು, ಕೃಷಿ ಮಾಡಲು ಏನೆಲ್ಲಾ ಇತರೆ ಬಳಕೆಗೆ ಈ ವೈತರಣಿಯೇ ಆಧಾರ.

ಈಗ ಈ ಊರಿನವರ ಹೊಸ ಕೃಷಿ ಸೋಯಾ ಅವರೆ. ಇದ್ದಕ್ಕಿದ್ದಂತೆ ಈ ಸೋಯಾ ಈಗ ನಮ್ಮೆಲ್ಲರ ಆಹಾರಪದ್ಧತಿಯಲ್ಲಿ ಸೇರಿಬಿಟ್ಟಿದೆ. ಹೇಗಾಯಿತು ಇದೆಲ್ಲಾ? ನಿಮ್ಮ ಊಹೆ ನಿಜ ಸ್ವಾಮಿ.

ಅಮೇರಿಕಾ ಕುಲಾಂತರಿ ಸೋಯಾ ಅವರೆಯನ್ನು ವಿಪರೀತ ಬೆಳೆಯುತ್ತಿದೆ. ಅದರಲ್ಲಿ ಏಕಾಣುಜೀವಿಯೊಂದರ ಗುಣಾಣು ಸೇರಿಸಿರುವ ಪ್ರಯುಕ್ತ ಯುರೋಪ್ ದೇಶದವರು ಅದನ್ನು ಖರೀದಿಸುತ್ತಿಲ್ಲ. ಅದಕ್ಕಾಗಿ ಜಗತ್ತಿನಲ್ಲೇ ಅತೀ ಹೆಚ್ಚು ಹಸಿದ ಹೊಟ್ಟೆಗಳಿರುವ ನಮ್ಮ ದೇಶಕ್ಕೆ ಅದನ್ನೆಲ್ಲಾ ಸುರಿಯುವ ಯೋಜನೆ ಸಿದ್ಧವಾಯಿತು.

ಸೋಯಾವನ್ನು ಹಾಲಾಗಿ, ಗಿಣ್ಣವಾಗಿ, ಎಣ್ಣೆಯಾಗಿ, ಹಿಟ್ಟಾಗಿ, ಪಶುಆಹಾರವಾಗಿ ಎಷ್ಟೆಲ್ಲಾ ವಿಧಗಳಲ್ಲಿ ಬಳಸಬಹುದೆಂಬ ಪ್ರಚಾರ ಪ್ರಾರಂಭವಾಯಿತು. ಸಾಂಪ್ರದಾಯಿಕವಾಗಿ ಹಸು ಎಮ್ಮೆಗಳ ಹಾಲು-ಪದಾರ್ಥಗಳನ್ನು ಆಹಾರಪದ್ಧತಿ ಮಾಡಿಕೊಂಡಿರುವ ಭಾರತೀಯರ ದಾರಿ ತಪ್ಪಿಸುವ ಕೆಲಸ ೧೯೯೭ರಿಂದ ಪ್ರಾರಂಭವಾಯಿತು. ಹಸುವಿನ ಹಾಲಿನ ದೋಷಗಳು, ಅದರಲ್ಲಿ ಸೇರಿರುವ ರಾಸಾಯನಿಕಗಳು, ಕೀಟನಾಶಕಗಳು, ಅದರಿಂದಾಗುವ ದುಷ್ಪರಿಣಾಮಗಳು ಪ್ರಕಟವಾಗತೊಡಗಿತು. ಮಕ್ಕಳಿಂದ ವೃದ್ಧರವರೆಗೆ ಹಸುವಿನ ಹಾಲು ಏಕೆ ಯೋಗ್ಯವಲ್ಲ ಎನ್ನುವ ಬಗ್ಗೆ ಸೆಮಿನಾರುಗಳು ನಡೆದವು. ಆದರೂ ಕರ್ನಾಟಕದಲ್ಲಿ ಹಾಲು ಉತ್ಪಾದನೆ ನಿಲ್ಲಲಿಲ್ಲ. ಅವರ ಹುನ್ನಾರ ಫಲಿಸಲಿಲ್ಲ. ಅಮೇರಿಕಾ ಎರಡನೇ ಹೆಜ್ಜೆಯಿಟ್ಟಿತು.

೧೯೯೮ರಲ್ಲಿ ಭಾರತಕ್ಕೆ ೧೦ಲಕ್ಷ ಟನ್ ಸೊಯಾ ಅವರೆ ಬೀಜ ಬಂದಿತು. ಉದ್ದೇಶ ಖಾದ್ಯ ತೈಲ ತಯಾರಿಕೆ! ಅದಕ್ಕೆ ಉತ್ತರದಲ್ಲಿ ಸಾಸಿವೆ, ದಕ್ಷಿಣದಲ್ಲಿ ಶೇಂಗಾ ಹಾಗೂ ತೆಂಗಿನಕಾಯಿಗಳನ್ನು ಬಲಿ ನೀಡಲಾಯಿತು. ತೆಂಗಿನಕಾಯಿಗೆ ನುಸಿರೋಗ ಬಂದದ್ದು ಶೇಂಗಾ ಸೀಡ್‌ಲೆಸ್ ಆದದ್ದು ಒಂದು ರೀತಿಯ ಸುದ್ದಿಯಾದರೆ, ಸಾಸಿವೆ ದೆಹಲಿಯಲ್ಲಿ ೨೩೦೦ ಜನರನ್ನು ಬಲಿತೆಗೆದುಕೊಂಡಿತು. ಸಾಸಿವೆ ಎಣ್ಣೆಗೆ ಡೀಸೆಲ್, ಕೀಲೆಣ್ಣೆ, ಅರ್ಜ಼ಿಮೋನ ಎನ್ನುವ ಸಾಸಿವೆಯಂತೆಯೇ ಇರುವ ವಿಷಬೀಜದ ಎಣ್ಣೆಯನ್ನು ಕಲಬೆರಕೆ ಮಾಡಲಾಗಿತ್ತು. ಇದರಿಂದಾಗಿ ಸಾಸಿವೆ ಎಣ್ಣೆಯ ಚಿಲ್ಲರೆ ವ್ಯಾಪಾರವನ್ನು ನಿಷೇಧ ಮಾಡಲಾಯಿತು. ಬಡವರ ದಿನನಿತ್ಯದ ತೈಲ ಮಾರುಕಟ್ಟೆಯಿಂದಲೇ ಮಾಯವಾಯಿತು. ಸಾಸಿವೆಯ ಬೆಲೆ ಪಾತಾಳಕ್ಕಿಳಿಯಿತು. ಅದೇ ಜಾಗಕ್ಕೆ ಸೋಯಾ ಎಣ್ಣೆಯನ್ನು ತರಲಾಯಿತು!

ಸೋಯಾ ಅವರೆಯ ಬಗ್ಗೆ ವಿಜ್ಞಾನಿಗಳು, ವೈದ್ಯರು, ಪ್ರಗತಿಪರ ಕೃಷಿಕರು, ತಂತ್ರಜ್ಞರು ಎಲ್ಲರೂ ಮಾಧ್ಯಮಗಳಲ್ಲಿ ಹೊಗಳಿದರು, ಬರೆದರು. ಅಂತೂ ಸೋಯಾ ಭಾರತದಲ್ಲಿ ಶಾಶ್ವತ ನೆಲೆ ಕಂಡಿತು.

ಇದೇ ರೀತಿಯ ಕೆಲಸವೊಂದು ೨೫ ವರ್ಷಗಳ ಹಿಂದೆ ಕರ್ನಾಟಕದ ಕರಾವಳಿ ಹಾಗೂ ಕೇರಳದಲ್ಲಿ ಆಗಿತ್ತು. ಲಕ್ಷಾಂತರ ಎಕರೆಯಲ್ಲಿ ಜನ ಗೋಡಂಬಿ ಬೆಳೆದರು. ಸಕಾರವೂ ಸೇರಿತು. ಆಧುನಿಕ ಟೆಕ್ನಾಲಜಿಯಿಂದ ಗೇರುಗಿಡಗಳು ಅತ್ಯಧಿಕ ಇಳುವರಿ ನೀಡಿದವು. ಆಧುನಿಕತೆಯ ಪರಮಾವಧಿಯಾಗಿ ವಿಮಾನಗಳಲ್ಲೇ ಕೀಟನಾಶಕಗಳನ್ನು ಸಿಂಪಡಿಸಲಾಯಿತು. ಈಗ ಪರಿಣಾಮ ಕಾಣಿಸುತ್ತಿದೆ. ಸ್ವರ್ಗ ಗ್ರಾಮದಲ್ಲಿ ಸುತ್ತಮುತ್ತಲೂ ಅಂಗವೈಕಲ್ಯ ನರಕವನ್ನೇ ಸೃಷ್ಟಿಸಿದೆ. ನೆಲ, ಜಲ, ಅಂತರ್ಜಲ ಕೂಡಾ ವಿಷಮಯ.

ಕೃಷಿ ಬಿಸಿನೆಸ್‌ನಲ್ಲಿ ಸಣ್ಣ ರೈತರಿಗೆ, ಸೂಕ್ಷ್ಮಜೀವಿಗಳಿಗೆ ಜಾಗವಿಲ್ಲ. ತುಮಕೂರು ಜಿಲ್ಲೆಯ ತೋವಿನಕೆರೆಯ ಗೊಲ್ಲರಹಟ್ಟಿಯ ಗೊಲ್ಲರು ತಲೆತಲಾಂತರದಿಂದ ಕೊರಲೆ ಕಿರುಧಾನ್ಯವನ್ನು ಬೆಳೆಯುತ್ತಾ ಬಂದಿದ್ದಾರೆ. ಬಿತ್ತಿದ ಮೇಲೆ ಕೇವಲ ಮೂರು ಮಳೆ ಹೊಯ್ದರೆ ಸಾಕು. ಗಿಡ ಹುಟ್ಟಿ ಬೆಳೆದು ಫಸಲು ಕೊಡುತ್ತದೆ. ಈ ರೀತಿಯ ಕಿರುಧಾನ್ಯಗಳಾದ ಆರಕ, ನವಣೆ, ಸಜ್ಜೆಗಳ ಹೆಸರೇ ಅಳಿಸಿಹೋಗುತ್ತಿದೆ. ಇವು ದೇಶೀ ತಳಿಗಳೆಂಬ ನಿರ್ಲಕ್ಷ್ಯ. ನಮ್ಮದಲ್ಲದ ಗೋಧಿ, ಜೋಳ, ಬಟಾಟೆ, ಸೋಯಾ ಇವುಗಳ ಹಿಟ್ಟು, ಎಣ್ಣೆ, ರವೆ, ಚಿಪ್ಸ್ ಯಾವ ಉತ್ಪನ್ನ ಬೇಕೋ ಅದನ್ನು ತಯಾರಿಸುವ ಯಂತ್ರಗಳನ್ನು ನಮ್ಮ ದೇಶದ ವಿಜ್ಞಾನಿಗಳೇ ತಯಾರಿಸಿದ್ದಾರೆ. ಆದರೆ ಏಳು ಸಿಪ್ಪೆಗಳಿರುವ ಕೊರಲೆಯ ಸಿಪ್ಪೆ ತೆಗೆವ ಯಂತ್ರದ ಸಂಶೋಧನೆ ಆಗಲೇ ಇಲ್ಲ. ನವಣೆ, ಸಜ್ಜೆಯನ್ನು ರೈತರೇ ಕುಟ್ಟಿ ಹಿಟ್ಟು ಮಾಡಬೇಕು. [ಕ್ಷಮಿಸಿ ಓದುಗರೇ.. ಒರಳು-ಕಲ್ಲು ಯಂತ್ರ ಭಾರತೀಯರ ಹೆಮ್ಮೆಯ ಸಂಶೋಧನೆ. ಇನ್ನು ಕೆಲವೇ ದಿನಗಳಲ್ಲಿ ಅವನತಿಯಲ್ಲಿದೆ ಎಂದು ಉತ್ಸಾಹಿ ಯುವ ಲೇಖಕರ ಮೂಸೆಯಿಂದ ಲೇಖನ ಬರುತ್ತದೆ. ಕಾಯುತ್ತಿರಿ] ಕಿರುಧಾನ್ಯಗಳ ಮೌಲ್ಯವರ್ಧನೆ ಮಾಡಿ ಜನಪ್ರಿಯಗೊಳಿಸಲು ನಮ್ಮವರೇ ಸಿದ್ಧರಿಲ್ಲ. ಇವುಗಳ ಬೀಜಗಳೂ ಮರೆಯಾಗುತ್ತಿವೆ.

೨೦೦೨ರಲ್ಲಿ ಕೊಪ್ಪಳದ ಹಳ್ಳಿ ಹಳ್ಳಿಗಳು ೧೬ಕ್ಕೂ ಹೆಚ್ಚು ವಿಧದ ಹೂಗಳಿಂದ ತುಂಬಿ ತುಳುಕುತ್ತಿದ್ದವು. ಅಲ್ಲಿಯ ರೈತರಿಗೆ ಒಂದು ಹೂವಿನ ಹೆಸರೂ ಗೊತ್ತಿರಲಿಲ್ಲ. ಬಹುರಾಷ್ಟ್ರೀಯ ಕಂಪೆನಿಗಳು ಈ ಊರುಗಳನ್ನು ಸ್ವಿಸ್, ಪ್ಯಾರಿಸ್‌ಗಳ ಹೂವನಗಳನ್ನಾಗಿಸಿತ್ತು. ರೈತರು ತಮ್ಮ ಹೊಲದಲ್ಲೇ ಜೀತದಾಳುಗಳಾಗಿದ್ದರು. ಒಂದೇ ಒಂದು ಹೂವು ಸಹ ಹೊಲ ದಾಟಿ ಹೋಗಲು ಅಪ್ಪಣೆಯಿರಲಿಲ್ಲ. ಹಾಗಂತ ಕಂಪೆನಿಗಳಿಗೆ ಹೂಗಳು ಬೇಕಾಗಿಯೂ ಇರಲಿಲ್ಲ. ಒಂದು ಕಿಲೋಗ್ರಾಂ ಬೀಜಕ್ಕೆ ಕಂಪೆನಿಯವರು ಎರಡು ಸಾವಿರ ರೂಪಾಯಿಗಳನ್ನು ಕೊಡುತ್ತಾರೆ. ಸತ್ಯ… ಒಂದೇ ಎಕರೆಯಲ್ಲಿ ಎರಡು ಲಕ್ಷ ರೂಪಾಯಿಗಳ ಲಾಭ. ನಮಗಿನ್ಯಾವ ಬೆಳೆಯಿಂದಲೂ ಇಷ್ಟೆಲ್ಲಾ ಹಣ ಸಿಗೋಲ್ಲ, ಇದು ಸತ್ಯ ಎಂದು ಗಮಗೇರಿಯ ಹನುಮಂತಪ್ಪ ಹೇಳಿದರು. ಈ ಹೂಗಳಿಗಾಗಿ ತಮ್ಮ ಹೊಲಕ್ಕೆ ಕಾರ್ಬನ್ ಡೈಜಿಮ್, ಮೊನೋಕ್ರೋಟೋಪಾಸ್, ಡೈಕೋಫಾಲ್, ಡಿಪಿಎ, ಎಂಡೋಸಲ್ಫಾನ್, ಮೈಲಾಥಿಯನ್ ಹೀಗೆ ಹತ್ತಾರು ವಿಧದ ಘೋರ ವಿಷಗಳನ್ನು ಕೈಯಾರೆ ಸುರಿದರು. ಎರಡನೆಯ ಸಾರಿ ಬೀಜದ ಕಂಪೆನಿ ಹಣ ಕೊಡದೇ ಕೈಕೊಟ್ಟಿತು. ನೂರಾರು ರೈತರು ಬೀದಿಪಾಲು. ವಿಷಗಳು, ನೀರು ಹಾಗೂ ರಾಸಾಯನಿಕ ಗೊಬ್ಬರಗಳಿಗಾಗಿ ಮಾಡಿದ ಸಾಲ ಅಲುಗಿನಂತೆ ಚುಚ್ಚತೊಡಗಿತು. ಸಾಲು ಸಾಲು ಆತ್ಮಹತ್ಯೆಗಳೂ ನಡೆದವು. ಕೇವಲ ಕೊಪ್ಪಳ ಜಿಲ್ಲೆಯೊಂದರಲ್ಲೇ ಸಾವಿಗೆ ಕೊರಳೊಡಿದ್ದವರ ಸಂಖ್ಯೆ ೫೪೯ ರೈತರು. [ಅಂಕಿ ಸಂಖ್ಯೆ ಕಛೇರಿ ೨೦೦೩] ದೇಶೀ ಧಾನ್ಯಗಳ ತುಂಬುತೆನೆಯ ಉಡುಗೊರೆಯನ್ನು ನೀಡುತ್ತಿದ್ದ ಕಪ್ಪು ಮಸಾರಿ ನೆಲದ ಮಣ್ಣೆಲ್ಲಾ ಈಗ ವಿಷಮಯ.

ಇದೇ ರೀತಿ ಬಿಟಿ ಹತ್ತಿ, ಗರ್ಕಿನ್ ಸೌತೆ, ಬೇಬಿಕಾರ್ನ್, ಮೊನ್ನೆ ಮೊನ್ನೆ ಗಸಗಸೆ ಸುದ್ದಿ ದೇಶೀ ಧಾನ್ಯಗಳ ಮಾರುಕಟ್ಟೆಯ ಸೋಲು ರೈತರ ನಿರ್ಧಾರಗಳ ದಿಕ್ಕನ್ನೇ ತಪ್ಪಿಸಿದೆ. ಸುಸ್ಥಿರವಾಗಿದ್ದ ಸಣ್ಣ ರೈತ ಕೀಟನಾಶಕಗಳು, ಬೋರ್‌ವೆಲ್‌ಗಳ ಹಾವಳಿಯಿಂದ ಸೋತು ಸುಣ್ಣವಾಗಿ ದೊಡ್ಡರೈತರಿಗೆ ಜಮೀನು ಮಾರಿ ನಗರಗಳಿಗೆ ವಲಸೆ ಹೋಗುತ್ತಿದ್ದಾನೆ. ಇದನ್ನೇ ಡಾ. ವಂದನಾ ಶಿವರವರು ಡೆತ್ ಸೈನ್ಸ್ ಎನ್ನುತ್ತಾರೆ.

ತರಕಾರಿಗೆ ಅಡಿಕೆ ವಿನಿಮಯ, ಕಾಳುಗಳಿಗೆ ಸಾಂಬಾರ ಪದಾರ್ಥಗಳ ವಿನಿಮಯ. ಮೈಯಾಳು, ಕೈಗೆಲಸ ಮುಂತಾದ ವ್ಯವಸ್ಥೆಗಳು, ದೇಶೀ ತಳಿಗಳು, ಸಂಸ್ಕೃತಿ, ಸಂಪ್ರದಾಯ, ಆರ್ಥಿಕತೆ ಎಲ್ಲಾ ಒಡೆದು ಚೂರು ಚೂರಾಗಿದೆ. ನಮ್ಮದೇ ಬೇವು, ತೊಗರಿಗಳನ್ನು ವಿದೇಶಕ್ಕೆ ಮಾರಲು ಹೊರಟಿದ್ದೇವೆ.

ಇಷ್ಟಾದರೂ ಯೋಜನಾ ತಜ್ಞರುಗಳು ಕಂಪ್ಯೂಟರ್ ಮುಂದೆ ಕುಳಿತು ಮೌಸ್ ಆಡಿಸುತ್ತಾ ರೈತನಲ್ಲಿ ಕುಳಿತಲ್ಲೇ ಕೃಷಿ ಮಾಡುವ, ಫಸಲು ಕೊಯ್ಯುವ, ಮಾರಾಟ ಮಾಡುವ, ನಷ್ಟವಾದರೆ ವಿಮೆಯ ಹಣವನ್ನೂ ಸಹ ಪಡೆಯುವ ಕನಸುಗಳನ್ನು ಬಿತ್ತುತ್ತಿದ್ದಾರೆ. ಆಧುನಿಕ ಟೆಕ್ನಾಲಜಿ ಬಳಸಿ ಉತ್ಪಾದಕತೆ ಹೆಚ್ಚಿಸಲು ಹೇಳುತ್ತಿದ್ದಾರೆ.

ಇತ್ತ ಅದೇ ಟೆಕ್ನಾಲಜಿ ಕಂಪೆನಿಗಳ ಬಯಕೆಗಳನ್ನೆಲ್ಲಾ ಈಡೇರಿಸಲಾಗುತ್ತದೆ. ಇಸವಿ ೨೦೦೪ರಲ್ಲಿ ಶಿವಮೊಗ್ಗದ ಸವಳಂಗ ರಸ್ತೆಯ ಎರಡೂ ಬದಿಗಳಲ್ಲಿರುವ ೨೦೦ ವರ್ಷಗಳಷ್ಟು ಹಳೆಯದಾದ ೧೮೦ ಮರಗಳನ್ನು ರಸ್ತೆ ಅಗಲ ಮಾಡಲು ಅಂದರೆ ಟೆಕ್ನಾಲಜಿ ಕಂಪೆನಿಗಳಿಗೆ ಸರಕು ಸಾಗಿಸಲು ಸುಲಭ ಮಾಡಿಕೊಡುವ ಉದ್ದೇಶದಿಂದ ಕಡಿಸಿದರು. ಅದೇ ರಸ್ತೆಯಲ್ಲಿ ಬೇಸಿಗೆಯಲ್ಲಿ ಕರ್ಬೂಜ ಮಾರುತ್ತಿದ್ದ ರೈತರ ಲೋಡ್‌ಗಟ್ಟಲೆ ಹಣ್ಣುಗಳು ಒಂದೇ ದಿನದಲ್ಲಿ ಬಿಸಿಲಿಗೆ ಸುಟ್ಟುಹೋಯಿತು. ರೈತರಿಗೆ ಬೀದಿಬದಿಯೂ ಆಶ್ರಯ ನೀಡುತ್ತಿಲ್ಲ.

ರೈತನ ಹಾದಿಯ ಈ ಮುಳ್ಳುಗಳು ಇಡೀ ಸಮಾಜದ ಸ್ವಾಸ್ಥ್ಯವನ್ನೇ ಹಾಳು ಮಾಡುತ್ತಿವೆ. ಯಾವೊಬ್ಬ ವಿದ್ಯಾವಂತನೂ ಬೇಸಾಯದಿಂದ ದೂರವೇ ಇದ್ದಾನೆ. ರೈತನಿಗೆ ಹಣ್ಣು ಕೊಡುವವರಿಲ್ಲ. ಪಟ್ಟಣಿಗರಿಗೆ ಸಿಗುವ ಕನಿಷ್ಠ ಸೌಲಭ್ಯಗಳೂ ರೈತನಿಗೆ ಸಿಗುತ್ತಿಲ್ಲ.

ಈ ಅವನತಿಯ ಮಧ್ಯವೇ ಅಲ್ಲಲ್ಲಿ ಆಶಾಕಿರಣಗಳೂ ಇವೆ. ನೆಲದ ರಕ್ಷಣೆ, ಜಲ ಮರುಪೂರಣ, ಕೃಷಿ ಉದ್ದಿಮೆಗಳಿಗೆ ನೆರವು, ಉಪಬೆಳೆಗಳ ಪ್ರಯೋಜನ ಹೀಗೆಲ್ಲಾ ಹೇಳುತ್ತಾ ಹಳ್ಳಿಗಳನ್ನು ಪುನಃ ಒಗ್ಗೂಡಿಸುತ್ತಿರುವ ಬೈಫ್, ಗ್ರೀನ್ ಪ್ರತಿಷ್ಠಾನ, ಡೆಕ್ಕನ್ ಇಂಡಿಯಾ, ಅಣ್ಣಾ ಹಜಾರೆ, ರಾಜೇಂದ್ರಸಿಂಗ್ ಮುಂತಾದ ಶಕ್ತಿಗಳು ಹಗಲೂ ರಾತ್ರಿ ಹೋರಾಡುತ್ತಿವೆ. ಜನಬೆಂಬಲವೇ ಈ ಹೋರಾಟದ ಯಶಸ್ಸಿಗೆ ಕಾರಣವಾಗುತ್ತದೆ.