ಪ್ರವೇಶ

ಸ್ವಾತಂತ್ಯ್ರೋತ್ತರ ಭಾರತದಲ್ಲಿ ಮೊದಲಿಗೆ ಕಂಡುಬಂದದ್ದು ಆಹಾರ ಸಮಸ್ಯೆ. ಹೀಗಾಗಿ ಹೊರದೇಶಗಳಿಂದ ಧಾನ್ಯಗಳನ್ನು ಆಮದು ಮಾಡಿಕೊಳ್ಳುವುದರ ಮುಖೇನ ದೇಶದ ಜನರನ್ನು ಬದುಕಿಸುವ ಪರಿಸ್ಥಿತಿ ಇತ್ತು. ಆಗ ಸರ್ಕಾರ ‘ಹಸಿರುಕ್ರಾಂತಿ’ ಘೋಷಣೆಯೊಂದಿಗೆ ಹೆಚ್ಚು ಗೊಬ್ಬರ ಹಾಗೂ ಕೀಟನಾಶಕಗಳನ್ನು ಉಪಯೋಗಿಸಿ ಹೆಚ್ಚು ಇಳುವರಿ ಕೊಡುವ ತಳಿಗಳನ್ನು ಬೆಳೆಯಲು ರೈತರಿಗೆ ಪ್ರೋತ್ಸಾಹ ನೀಡಿತು. ರೈತರು ಶ್ರಮವಹಿಸಿ ದೇಶಕ್ಕೆ ಬೇಕಾಗುವಷ್ಟು ಮತ್ತು ಹೊರದೇಶಕ್ಕೆ ಕಳುಹಿಸುವಷ್ಟು ಆಹಾರ ಪದಾರ್ಥಗಳನ್ನು ಬೆಳೆದರು. ಇಂಥ ಸಂದರ್ಭದಲ್ಲಿ ದೇಶದಲ್ಲಿ ಇನ್ನೂರು ವರ್ಷಗಳ ಕಾಲ ಆಳ್ವಿಕೆ ನಡೆಸಿ ಜನರನ್ನು, ದೇಶವನ್ನು ಲೂಟಿ ಮಾಡಿದ್ದವರು ಸುಮ್ಮನಾಗದೇ ಹೊಸ ಹುನ್ನಾರ, ತಂತ್ರಗಳನ್ನು ಹೂಡಿದ್ದರು. ಇಂಥ ಹುನ್ನಾರಗಳಿಗೆ ಅವಕಾಶ ಮಾಡಿಕೊಡುವಂಥ ರೀತಿಯಲ್ಲಿ ಬ್ರಿಟಿಷರ ಆಡಳಿತಾವಧಿಯಲ್ಲಿದ್ದ ಕೆಲವೊಂದು ನೀತಿಗಳು ಹಾಗೆಯೇ ಮುಂದುವರೆದಿದ್ದವು. ಹೀಗೆ ಮುಂದುವರಿದ ನೀತಿಗಳು ರೈತರನ್ನು ಶೋಷಣೆಗೆ ಒಳಪಡಿಸಿದ್ದವು. ಇಂಥ ಶೋಷಣೆಗಳ ವಿರುದ್ಧ ನಾಡಿನಾದ್ಯಂತ ರೈತರು ಸ್ವಾತಂತ್ಯ್ರೋತ್ತರ ಹಾಗೂ ಸಮಕಾಲೀನ ಸಂದರ್ಭದಲ್ಲಿಯೂ ವಿಭಿನ್ನ ಮಜಲಗಳಲ್ಲಿ ಹೋರಾಟಗಳನ್ನು ನಡೆಸುತ್ತಲೇ ಬಂದಿದ್ದಾರೆ. ೧೯೮೦ರವರೆಗೂ ಭೂಮಿಯ ಹಂಚಿಕೆ, ಭೂಮಿಯ ಒಡೆತನ ಹಾಗೂ ಭೂಕಂದಾಯಕ್ಕೆ ಸಂಬಂಧಿಸಿದ ಪ್ರಶ್ನೆಗಳು ಎದುರಾದರೆ, ೧೯೮೦ರಂದೀಚೆಗೆ ಬೆಲೆಯ ಅಸ್ಥಿರತೆ, ಕೃಷಿ ಸಾಲ, ನೀರಾವರಿ, ವಿದ್ಯುಚ್ಛಕ್ತಿ, ಸಮಸ್ಯೆಗಳು, ನಕಲಿ ಬೀಜಗಳ ಮಾರಾಟ ಜಾಲಗಳು, ಮಾರುಕಟ್ಟೆಯ ವೈಪರೀತ್ಯಗಳು ರೈತರನ್ನು ನಲುಗುವಂತೆ ಮಾಡಿದವು. ಜಾಗತೀಕರಣಂದ ಭರಾಟೆ, ಬಹುರಾಷ್ಟ್ರೀಯ ಕಂಪೆನಿಗಳ ಗೋಸುಂಬೆತನಗಳು ರೈತರ ಹಕ್ಕುಗಳನ್ನು ನಿಷ್ಕ್ರಿಯಗೊಳಿಸಿ ತಮ್ಮ ಲೂಟಿಯನ್ನು ಹೆಚ್ಚಿಸಿಕೊಳ್ಳಲು ಮುಂದಾದವು. ಈ ಬಗೆಯ ಸಮಸ್ಯೆಗಳನ್ನು ಬಗೆಹರಿಸುವ ಸಲುವಾಗಿ ಹುಟ್ಟಿಕೊಂಡಿದ್ದೇ ‘ರೈತ ಚಳವಳಿ’. ರೈತ ಚಳವಳಿಯು ಅನಕ್ಷರಸ್ಥ ರೈತರಿಗೆ ಸರ್ಕಾರದ ದಬ್ಬಾಳಿಕೆ, ಪ್ರಜಾಪ್ರಭುತ್ವ ಹಾಗೂ ಸಂವಿಧಾನದ ತಿರುಚುವಿಕೆ, ಕೃಷಿ ಹಾಗೂ ತಂತ್ರಜ್ಞಾನ, ಬಿತ್ತನೆ ಬೀಜಗಳ ಸ್ವಾಮ್ಯ, ಕೃಷಿ ಹಾಗೂ ರೈತರ ಸಂಬಂಧಗಳು ಮೊದಲಾದವುಗಳ ಬಗೆಗೆ ರೈತರಲ್ಲಿ ಎಚ್ಚರವನ್ನುಂಟು ಮಾಡಿತು. ಈ ಬಗೆಯ ಆಶಯಗಳನ್ನು ಸಾಕಾರಗೊಳಿಸಲು ಪ್ರಯತ್ನಪಟ್ಟವರು ಕೆಲವೇ’ಮಂದಿ, ಅವರಲ್ಲಿ ಶಾಂತವೇರಿ ಗೋಪಾಲಗೌಡ, ವೈ.ಆರ್. ಪರಮೇಶ್ವರಪ್ಪ, ಬಿ.ಎಸ್‌. ಚಂದ್ರಶೇಖರ್, ಕೆ.ಜಿ.ಮಹೇಶ್ವರಪ್ಪ, ಎಚ್‌.ಎಸ್‌.ರುದ್ರಪ್ಪ, ಎಂ.ಡಿ.ನಂಜುಂಡಸ್ವಾಮಿ ಹಾಗೂ ಎನ್‌.ಡಿ.ಸುಂದರೇಶ್‌ ಅವರು ಪ್ರಮುಖರು, ಎಂ.ಡಿ.ನಂಜುಂಡಸ್ವಾಮಿ ಅವರು ‘ಕರ್ನಾಟಕ ರಾಜ್ಯ ರೈತ ಸಂಘ’ದ ಸಂಚಾಲಕರಾಗಿ, ಕಾರ್ಯಾಧ್ಯಕ್ಷರಾಗಿ ಹಾಗೂ ಅಧ್ಯಕ್ಷರಾಗಿ ರೈತ ಚಳವಳಿಯ ನೇತೃತ್ವವನ್ನು ವಹಿಸಿಕೊಂಡ ಮೇಲೆ ರೈತರ ಬದುಕಿನಲ್ಲಿ ಹಲವಾರು ಬದಲಾವಣೆಗಳು ಆದವು. ಈ ದಿಸೆಯಲ್ಲಿ ಅವರ ಜೀವನ, ಚಳವಳಿಗಳನ್ನು ಅರಿಯುವ ಕಿರುಪ್ರಯತ್ನವೇ ಪ್ರಸ್ತುತ ಕೃತಿ.

ನಂಜುಂಡಸ್ವಾಮಿ: ಕೌಟುಂಬಿಕ ಪರಿಸರ

ನಂಜುಂಡಸ್ವಾಮಿ ಅವರು ಹುಟ್ಟಿದ್ದು ಒಂದು ಸಂಪ್ರದಾಯವಾದಿ ಲಿಂಗಾಯಿತ ಕುಟುಂಬದಲ್ಲಿ. ಆದರೆ ಅವರು ಬೆಳೆದದ್ದು ಮಾತ್ರ ಭಿನ್ನವಾಗಿ. ಇವರ ತಂದೆಯಾದ ಎಂ.ಎನ್‌. ಮಹಂತದೇವರು ಮೈಸೂರು ಜಿಲ್ಲೆಯ ಟಿ.ನರಸೀಪುರ ತಾಲ್ಲೂಕು ಮಾಡ್ರಹಳ್ಳಿ ಮೂಲದಿಂದ ಬಂದು ಮೈಸೂರು ನಗರದಲ್ಲಿ ನೆಲೆಸಿದ್ದರು. ತಂದೆ ಇಡೀ ಮೈಸೂರಿನಲ್ಲೇ ಮೊದಲು ಎಂ.ಎ. ಪದವಿ ಪಡೆದು, ಖ್ಯಾತ ವಕೀಲರು ಸಹ ಆಗಿದ್ದರು. ಮಹಂತದೇವರು ಪ್ರಾಮಾಣಿಕ ನ್ಯಾಯವಾದಿ ಹಾಗೂ ರಾಜಕಾರಣಿ. ಆಗಿನ ಮೈಸೂರು ವಿಧಾನಸಭೆಯಲ್ಲಿ ಇಪ್ಪತ್ತಾರು ವರ್ಷ ಶಾಸಕರಾಗಿದ್ದರು. ತಂದೆಯ ವರ್ಚಸ್ಸು, ಧ್ವನಿ, ದಿಟ್ಟ ನಿಲುವು, ಘನತೆ, ಗಾಂಭೀರ್ಯ ಇತ್ಯಾದಿ ಗುಣಗಳು ಮಗನ ಮೇಲೆ ಪ್ರಭಾವ ಬೀರಿದವು. ನಂಜುಂಡ ಸ್ವಾಮಿ ಅವರ ತಾತ ಸಾವಿರಾರು ಎಕರೆ ಜಮೀನಿನ ಒಡೆಯರಾಗಿದ್ದರು. ಆ ಕಾರಣದಿಂದಲೇ ಒಬ್ಬ ಶಾಸಕನ ಮಗನಾಗಿ ಹಾಗೂ ಜಮೀನ್ದಾರನ ಮೊಮ್ಮಗನಾಗಿ ಬೆಳೆದಿದ್ದರಿಂದ ಅವರಿಬ್ಬರ ನಡೆ, ನುಡಿ, ವಿಚಾರಗಳು ಸಹಜವಾಗಿ ನಂಜುಂಡಸ್ವಾಮಿ ಅವರ ಮೇಲೆ ಪ್ರಭಾವ ಬೀರದ ಇರಲಿಲ್ಲ.

ನಂಜುಂಡಸ್ವಾಮಿ ಅವರು ೧೯೩೬ರ ಫೆಬ್ರವರಿ ೧೩ ರಂದು ಮೈಸೂರಿನ ಸರಸ್ವತಿಪುರಂನಲ್ಲಿ ಎಂ.ಎನ್‌. ಮಹಂತದೇವರು ಹಾಗೂ ರಾಜಮ್ಮಣ್ಣಿ ದಂಪತಿಗಳಿಗೆ ಐದನೇ ಮಗನಾಗಿ ಜನಿಸಿದರು. ಅವರು ಪ್ರಾಥಮಿಕ ವಿದ್ಯಾಭ್ಯಾಸವನ್ನು ಮೈಸೂರಿನ ಹಾರ್ಡ್‌ವಿಕ್‌ ಹೈಸ್ಕೂಲಿನಲ್ಲಿ ಮುಗಿಸಿದರು. ಅಲ್ಲಿಯ ಯುವರಾಜ ಕಾಲೇಜಿನಲ್ಲಿ ಇಂಟರ್ ಮೀಡಿಯೆಟ್‌ ಪರೀಕ್ಷೆಯಲ್ಲಿ ತೇರ್ಗಡೆಯಾಗಿ, ನಂತರ ಮೈಸೂರು ಮೆಡಿಕಲ್‌ ಕಾಲೇಜಿಗೆ ಅರ್ಜಿ ಹಾಕಿದ್ದರು. ಪ್ರವೇಶಕ್ಕೆ ಎಲ್ಲಾ ಅರ್ಹತೆಗಳಿದ್ದರೂ ಅಲ್ಲಿನ ಒಳರಾಜಕೀಯದಿಂದ ಅರ್ಜಿ ತಿರಸ್ಕೃತವಾಯಿತು. ನಂತರ ಮೈಸೂರು ವಿಶ್ವವಿದ್ಯಾಲಯದಿಂದ ೧೯೫೪ರ‍ಲ್ಲಿ ಬಿ.ಎಸ್ಸಿ. ಪದವಿ ಪಡೆದರು. ಬಿ.ಎಸ್ಸಿ ಪದವಿ ಪಡೆದ ನಂತರವೂ ವೈದ್ಯನಾಗಬೇಕೆಂಬ ಹಂಬಲದಿಂದ ಮತ್ತೆ ಮೈಸೂರು ಮೆಡಿಕಲ್‌ ಕಾಲೇಜಿಗೆ ಎರಡನೆ ಬಾರಿಗೆ ಅರ್ಜಿ ಸಲ್ಲಿಸಿದರು. ಉತ್ತಮ ಅಂಕಗಳನ್ನು ಗಳಿಸಿ ಉನ್ನತ ಶ್ರೇಣಿಯಲ್ಲಿದ್ದರೂ ಮತ್ತೆ ಅದೇ ಒಳರಾಜಕೀಯದಿಂದ ಅರ್ಜಿ ಎರಡನೆಯ ಬಾರಿಯೂ ತಿರಸ್ಕೃತಗೊಂಡಿತು. ಧೃತಿಗೆಡದ ನಂಜುಂಡಸ್ವಾಮಿ ಅವರು ತಂದೆಯ ಒತ್ತಾಯ ಹಾಗೂ ಆಸೆಗೆ ಬೆಲೆಕೊಟ್ಟು ಮೈಸೂರು ವಿಶ್ವವಿದ್ಯಾಲಯದ ಕಾನೂನು ಪದವಿಗಾಗಿ ಪ್ರವೇಶ ಪಡೆದು, ೧೯೫೬ರಲ್ಲಿ ಬಿ.ಎಲ್‌. ಪದವಿ ಪಡೆದರು. ನಂತರ ಕರ್ನಾಟಕ ವಿಶ್ವವಿದ್ಯಾಲಯದಿಂದ ೧೯೬೧ರಲ್ಲಿ ಪ್ರಥಮ ದರ್ಜೆಯಲ್ಲಿ ಎಲ್‌.ಎಲ್‌.ಎಂ. ಪದವಿ ಪಡೆದದ್ದು ಉಂಟು.

ಉನ್ನತ ವ್ಯಾಸಂಗಕ್ಕಾಗಿ ನೆದರ್ ಲ್ಯಾಂಡಿನ ‘ಹೇಗ್‌ ಅಕಾಡೆಮಿ ಆಫ್‌ ಇಂಟರ್ ನ್ಯಾಷನಲ್‌ ಲಾ’ ಸಂಸ್ಥೆಗೆ ೧೯೬೧ರಲ್ಲಿ ತೆರಳಿದರು. ಅಲ್ಲಿ ಫೋಡರ್ಸ್ ಫೌಂಡೇಶನ್‌ನ ಶಿಷ್ಯವೇತನದ ಸಹಾಯದಿಂದ ೧೯೬೧-೬೨ನೇ ವರ್ಷದಲ್ಲಿ ಸ್ನಾತಕೋತ್ತರ ಸಂಶೋಧನೆಯನ್ನು ಪೂರ್ಣಗೊಳಿಸಿದರು. ೧೯೬೧-೬೨೪ ವರೆಗೆ ಜರ್ಮನಿಯ ಸಾರ್ ವಿಶ್ವವಿದ್ಯಾಲಯದಲ್ಲಿ ‘ಡಾಕ್ಟೋರಲ್‌ ವರ್ಕ್ ಇನ್‌ ಇಂಟರ್ ನ್ಯಾಷನಲ್‌ ಲಾ’ ಪೂರ್ಣಗೊಳಿಸಿದರೂ ತಾವು ತಯಾರಿಸಿದ್ದ ಪ್ರಬಂಧದಲ್ಲಿ ತಮ್ಮ ತಾಯ್ನಾಡಿನ ಘನತೆ, ಆತ್ಮಗೌರವಗಳಿಗೆ ಧಕ್ಕೆ ತರುವ ಸಾಮ್ರಾಜ್ಯಶಾಹಿ ಕಾನೂನುಗಳನ್ನು ವಿರೋಧಿಸಿ ಬರೆದಿದ್ದರು. ಅಂದಿನ ಜಗದ್ವಿಖ್ಯಾತ ನ್ಯಾಯಶಾಸ್ತ್ರ ಪ್ರವೀಣ ಹಾಗೂ ವಿಶ್ವವಿದ್ಯಾಲಯದ ಡೀನ್‌ ಆಗಿದ್ದ ಸೈಡಲ್‌ ಹೊಯೆನ ವೆಲ್ಡರ್ನ್‌ ಹಾಗೂ ಅಲ್ಲಿನ ಇನ್ನೊಬ್ಬ ಲಾ ವಿದ್ವಾಂಸ ಮೇರ್ ಹಾಫರ್ ಅವರು ನಂಜುಂಡ ಸ್ವಾಮಿ ಅವರ ವಾದವನ್ನು ಒಪ್ಪದ ಕಾರಣ ಪಿಎಚ್‌.ಡಿ. ಪದವಿಯನ್ನು ತಿರಿಸ್ಕರಿಸಿದರು. ಆತ್ಮಾಭಿಮಾನ ಹಾಗೂ ದೇಶಾಭಿಮಾನಕ್ಕೆ ಧಕ್ಕೆಯುಂಟುಮಾಡುವ ಶಿಕ್ಷಣ ಅವರಿಗೆ ತೃಣಕ್ಕೆ ಸಮಾನವಾಗಿತ್ತು. ಆದ್ದರಿಂದ ಶಿಕ್ಷಣವನ್ನು ಅಲ್ಲಿಗೆ ಮೊಟಕುಗೊಳಿಸಿ ಭಾರತಕ್ಕೆ ವಾಪಸ್ಸಾದರು.

ಜಾತ್ಯತೀತ ತತ್ವವನ್ನು ಜಾರಿಗೆ ತರಲು ಮತ್ತು ಜಾತಿ ಪದ್ಧತಿಯನ್ನು ತಮ್ಮ ಬದುಕಿನಲ್ಲಿ ಸಂಪೂರ್ಣ ನಿಷೇಧಿಸಲು ಕ್ಷತ್ರಿಯ ಮರಾಠಾ ಜನಾಂಗಕ್ಕೆ ಸೇರಿದ ಪ್ರತಿಮಾ ಅವರನ್ನು ಏಪ್ರಿಲ್‌ ೨೬, ೧೯೮೦ರಂದು ಮದುವೆಯಾಗುವುದರ ಮುಖೇನ ಅಂತರ್ ಜಾತಿ ವಿವಾಹಕ್ಕೆ ಪ್ರೋತ್ಸಾಹ ನೀಡಿದರು. ೧೯೮೧ ಏಪ್ರಿಲ್‌ ೨೬ ರಂದು ‘ಚುಕ್ಕಿ’ ಎಂಬ ಹೆಣ್ಣು ಮಗುವಿಗೆ ಹಾಗೂ ಸೆಪ್ಟೆಂಬರ್ ೧೨, ೧೯೮೩ರಂದು ‘ಪಚ್ಚೆ’ ಎಂಬ ಗಂಡು ಮಗುವಿಗೆ ಜನ್ಮ ಕೊಟ್ಟರು. ಯಾವ ಜಾತಿ ಹಾಗೂ ಧರ್ಮಗಳ ನೆರಳು ಬೀಳದಂಥ ಹೆಸರುಗಳನ್ನು ತಮ್ಮ ಮಕ್ಕಳಿಗೆ ಇಟ್ಟು ಜಾತ್ಯತೀತ ತತ್ವವನ್ನು ಬದುಕಿನ ಉದ್ದಕ್ಕೂ ಪ್ರತಿಪಾದಿಸಿದರು. ವೃತ್ತಿ ಜೀವನದ ಜೊತೆ ಜೊತೆಗೆ ಅಪಾರ ಸಮಾಜ ಸೇವೆಯನ್ನು ಮಾಡಿದರು. ಅವರು ತಮ್ಮ ಜೀವನದಲ್ಲಿ ಶಿಸ್ತಿಗೆ ಹೆಚ್ಚಿನ ಮಹತ್ತ್ವಕೊಟ್ಟ ವ್ಯಕ್ತಿಯಾಗಿದ್ದರು. ಅವರ ನಿರರ್ಗಳ ಮಾತಿನ ಶೈಲಿ, ಸೌಮ್ಯ ಸ್ವಭಾವ, ವೈಚಾರಿಕ ಚಿಂತನೆ, ಅಪಾರ ಪಾಂಡಿತ್ಯಗಳಿಂದಾಗಿ ಸ್ವಾತಂತ್ಯ್ರೋತ್ತರ ಕರ್ನಾಟಕದಲ್ಲಿ ಕಾಂಗ್ರೆಸ್ಸೇತರ ಜನತಾ ಸರ್ಕಾರದ ರಚನೆಗೆ ಮುಖ್ಯ ಪ್ರೇರಕರ ಲ್ಲೊಬ್ಬರಾದರು. ರೈತರನ್ನು ಸಂಘಟಿಸುವ ದೃಷ್ಟಿಯಿಂದ ‘ನಮ್ಮ ನಾಡು’ ಪತ್ರಿಕೆಯನ್ನು ಆರಂಭಿಸಿದರು.

ಸೈದ್ಧಾಂತಿಕ ಪ್ರಭಾವಗಳು

ಮಹಂತದೇವರು ನ್ಯಾಯವಾದಿಯಾಗಿ ತನ್ನ ಕಕ್ಷಿದಾರನನ್ನು ನಡೆಸಿಕೊಳ್ಳುತ್ತಿದ್ದ ರೀತಿಯೂ ನಂಜುಂಡಸ್ವಾಮಿ ಅವರ ಮೇಲೆ ಪ್ರಭಾವ ಬೀರಿತ್ತು. ತಮ್ಮ ವಿದ್ಯಾಭ್ಯಾಸದ ಅವಧಿಯಿಂದಲೂ ಬಿಳಿಯ ವಸಾಹತುಶಾಹಿ ದೇಶಗಳು ಬಡ ರಾಷ್ಟ್ರಗಳನ್ನು ಶೋಷಣೆಗೆ ಒಳಪಡಿಸುತ್ತಿದ್ದ ತಂತ್ರಗಳನ್ನು ನೋಡಿ ಅರಿತಿದ್ದರು. ಶಾಲಾ-ಕಾಲೇಜು ದಿನಗಳಲ್ಲಿ ಗಾಂಧಿ, ಲೋಹಿಯಾ ಹಾಗೂ ಶಾಂತವೇರಿ ಗೋಪಾಲಗೌಡರಂಥ ಸಮಾಜ ಸುಧಾರಕರ ಮತ್ತು ಮಾನವತಾವಾದಿಗಳ ಚಿಂತನೆಗಳಿಂದ, ಸಮಾನತೆಯ ಸಿದ್ಧಾಂತಗಳಿಂದ ಪ್ರಭಾವಿತರಾಗಿದ್ದರು. ರಾಮಮನೋಹರ ಲೋಹಿಯಾ ಅವರು ಬರೆದಿದ್ದ ‘ಮಾರ್ಕ್ಸ್, ಗಾಂಧಿ ಅಂಡ್‌ ಸೋಶಿಯಲಿಸಂ’ ಎಂಬ ಗ್ರಂಥದಿಂದ ಹೆಚ್ಚು ಪ್ರಭಾವಿತರಾದ್ದುದೂ ಉಂಟು. ಹಾಗಾಯೇ ಸಮಾನತೆಯಲ್ಲಿ ನಂಬಿಕೆ ಇಟ್ಟಿದ್ದ ಇವರು ರೈತ, ಕೂಲಿಕಾರ್ಮಿಕ ಹಾಗೂ ದಲಿತರ ಏಳಿಗೆಗೆ ಹಲವಾರು ಚಳವಳಿ, ಹೋರಾಟ ಹಾಗೂ ಸಂಘರ್ಷಗಳನ್ನು ರೂಪಿಸಿ ಅಸಮಾನತೆಯನ್ನು ಹೋಗಲಾಡಿಸಲು ಶ್ರಮಿಸಿದರು. ಸ್ವಾತಂತ್ರ್ಯ ಚಳವಳಿಯಲ್ಲಿ ಗಾಂಧಿಯವರು ಬ್ರಿಟಿಷರ ವಿರುದ್ಧ ನಡೆಸಿದ ಹೋರಾಟಗಳು ಹಾಗೂ ಪ್ರಯೋಗಗಳು, ರೂಪಿಸುತ್ತಿದ್ದ ತಂತ್ರಗಳಿಂದ ಪ್ರಭಾವಿತರಾಗಿ, ಅವುಗಳನ್ನು ಪ್ರೊಫೆಸರ್ ಅವರು ರೈತ ಚಳವಳಿಯಲ್ಲಿ ಅಳವಡಿಸಿಕೊಳ್ಳುವಂತೆ ಆಗಿತ್ತು.

ಅಹಿಂಸಾ ಚಳವಳಿಗಳ ಮೂಲಕ ಹೋರಾಟ ನಡೆಸಿ ನ್ಯಾಯ ಪಡೆದುಕೊಳ್ಳಬೇಕೆಂಬುದು ನಂಜುಂಡಸ್ವಾಮಿ ಅವರ ಗುರಿಯೂ ಆಗಿತ್ತು. ಗಾಂಧಿ ತತ್ವವನ್ನು ಅದರಲ್ಲೂ ಪ್ರಮುಖವಾಗಿ ಅಹಿಂಸೆ ಹಾಗೂ ಉಪವಾಸವನ್ನೇ ತನ್ನ ಅಸ್ತ್ರವಾಗಿ ಮಾಡಿಕೊಂಡ ರೈತ ಸಂಘ, ಅದನ್ನೇ ನಂಬಿಕೊಂಡು ಹೋರಾಟ ಮಾಡಿದ್ದು ಒಂದು ಮರೆಯಲಾಗದ ಅಧ್ಯಾಯ. ನಂಜುಂಡಸ್ವಾಮಿ ಅವರು ಲೋಹಿಯಾ ಪ್ರತಿಪಾದಿಸುತ್ತಿದ್ದ ಸಮಾಜವಾದಿ ಸಿದ್ಧಾಂತಗಳಿಂದ ಪ್ರಭಾವಿತರಾಗಿದ್ದರು. ಲೋಹಿಯಾ ಅವರು ಹೇಳುವಂತೆ-

ರಾಜಕೀಯದಲ್ಲಿ ಸಾಮಾನ್ಯವರ್ಗ ಮುಂದಾಳುಗಳಾಗಬೇಕು. ಸಾರ್ವಜನಿಕ ವ್ಯವಹಾರದಲ್ಲಿ ಇಂಗ್ಲಿಷ್ಕೈಬಿಡಬೇಕು, ಮಹಿಳೆಯರು ಸ್ವತಂತ್ರರಾಗಬೇಕು, ಆರ್ಥಿಕ ವ್ಯವಸ್ಥೆ ವಿಕೇಂದ್ರೀಕೃತವಾಗಬೇಕು, ರಾಜ್ಯ ವ್ಯವಸ್ಥೆ ಚತುಸ್ತಂಭ ವ್ಯವಸ್ಥೆ
ಆಗಬೇಕು

-ಇತ್ಯಾದಿ ವಿಚಾರಗಳು ನಂಜುಂಡಸ್ವಾಮಿ ಅವರ ಮೇಲೆ ಪ್ರಭಾವ ಬೀರಿದ್ದವು. ಹಾಗೆಯೇ ಅವುಗಳ ಪ್ರತಿಪಾದನೆಗಾಗಿ ತಮ್ಮ ಸಂಪೂರ್ಣ ಜೀವನವನ್ನೇ ಸವೆಸಿದರು. ಲೋಹಿಯಾ ಅವರು ಅನ್ಯಾಯದ ವಿರುದ್ಧ ಬೀದಿಗಿಳಿದು ಹೋರಾಟ ಮಾಡಬೇಕೆಂದು ಬಯಸಿದ್ದರು. ಅದೇ ಬಗೆಯ ತಂತ್ರಗಳನ್ನು ಎಂ.ಡಿ.ಎನ್‌ ಅವರು ಕೂಡ ತಮ್ಮ ಹೋರಾಟದ ಉದ್ದಗಲಕ್ಕೂ ಅಳವಡಿಸಿಕೊಂಡಿದ್ದರು. ಅಪಾರ ಅನುಭವ, ಗ್ರಹಿಕೆಗಳನ್ನು ಸಮುದಾಯದ ಕ್ರಿಯಾಶೀಲತೆಯನ್ನಾಗಿ ಅವಸ್ಥಾಂತರಿಸುವುದು ಹೇಗೆ ಎಂಬುದನ್ನು ಗಾಂಧಿ, ಲೋಹಿಯಾ, ಶಾಂತವೇರಿ ಹಾಗೂ ಇನ್ನಿತರರ ವಿಚಾರಧಾರೆಗಳಿಂದ ತಿಳಿದಿದ್ದರು. ಹಾಗೆಯೇ ವರ್ತಮಾನದ ಆತಂಕ ಪಲ್ಲಟಗಳಿಗೆ ಮುಖಾಮುಖಿಯಾಗಿಸಿದ ಪ್ರಯೋಗಶೀಲತೆಯನ್ನು ಎಂ.ಡಿ.ಎನ್‌ ರೂಪಿಸಿದ್ದು ದಾಖಲಾರ್ಹ.

ವೃತ್ತಿ ಜೀವನ

ಪಿಎಚ್‌.ಡಿ. ಅಧ್ಯಯನದ ಸಮಯದಲ್ಲಿ ತಮ್ಮ ಬಿಡುವಿನ ವೇಳೆಯಲ್ಲಿ ಜರ್ಮನಿಯಲ್ಲಿದ್ದ ಏರ್ ಫೋರ್ಸ್ ಬೇಸ್‌ನಲ್ಲಿ ರಿಸೆಪ್ಷನಿಸ್ಟ್‌ ಆಗಿ ಕೆಲಸ ಮಾಡುತ್ತಿದ್ದರು. ಅದೇ ಸಂದರ್ಭದಲ್ಲಿ ಪ್ರಧಾನಮಂತ್ರಿಯಾಗಿದ್ದ ಜವಾಹರ್ ಲಾಲ್‌ ನೆಹರೂ ಅವರು ನಿಧನರಾಗಿದ್ದ ಸುದ್ದಿ ಕೇಳಿ ತಮಗೆ ತಾವೇ ರಜೆ ಪೋಷಿಸಿಕೊಂಡು ಶೋಕಾಚರಣೆ ಮಾಡಿದರು. ಈ ಬಗೆಯ ಆಚರಣೆ ಅವರ ದೇಶಾಭಿಮಾನಕ್ಕೆ ಸಾಕ್ಷಿಯಾಗಿದೆ. ಅದಕ್ಕೆ ಅಲ್ಲಿನ ಅಧಿಕಾರಿಗಳು ಇವರನ್ನು ಹಗುರವಾಗಿ, ನಿಷ್ಟುರವಾಗಿ ಮಾತನಾಡಿದ್ದರಿಂದ ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ೧೯೬೫ರಲ್ಲಿ ಭಾರತಕ್ಕೆ ಹಿಂದಿರುಗಿದರು. ಭಾರತಕ್ಕೆ ವಾಪಸ್ಸಾಗುತ್ತಿದ್ದಂತೆಯೇ ನೇರವಾಗಿ ತಮ್ಮ ತಾತ ಪಟೇಲ್‌ ನಂಜಪ್ಪನವರು ಕೊಟ್ಟಿದ್ದಂಥ ಜಮೀನಿನಲ್ಲಿ ವ್ಯವಸಾಯ ಮಾಡಲು ಆರಂಭಿಸಿದರು. ಅದೇ ಸಂದರ್ಭದಲ್ಲಿ ಕರ್ನಾಟಕದಲ್ಲಿ ಮೊಟ್ಟ ಮೊದಲ ಬಾರಿಗೆ ಲೆವಿ ಪದ್ಧತಿಯ ವಿರುದ್ಧ ಮೈಸೂರಿನಲ್ಲಿ ಹೋರಾಡುವ ಮೂಲಕ ನಂಜುಂಡಸ್ವಾಮಿ ಅವರು ರೈತರ ಹೋರಾಟಕ್ಕೆ ಚಾಲನೆ ನೀಡಿದರು. ೧೯೬೫ರಿಂದ ೧೯೭೮ರವರೆಗೆ ಕಾನೂನು ಪ್ರಾಧ್ಯಾಪಕರಾಗಿ ವೃತ್ತಿ ಜೀವನ ಪ್ರಾರಂಭಿಸಿದರು. ಮೈಸೂರಿನ ಶಾರದಾ ವಿಲಾಸ ಲಾ ಕಾಲೇಜು, ಬೆಂಗಳೂರಿನ ಬಿ.ಎಂ.ಎಸ್‌. ಹಾಗೂ ರೇಣುಕಾಚಾರ್ಯ ಕಾನೂನು ಕಾಲೇಜುಗಳಲ್ಲಿ ಸೇವೆ ಸಲ್ಲಿಸಿದರು. ೧೯೭೩ರ‍ಲ್ಲಿ ದಕ್ಷಿಣ ಭಾರತ ಸಣ್ಣ ಬೆಳೆಗಾರರ ಒಕ್ಕೂಟದ ಕಾನೂನು ಸಲಹೆಗಾರರಾಗಿ ಕಾರ್ಯನಿರ್ವಹಿಸಿದರು. ೧೯೭೯-೮೫ರ ವರೆಗೆ ಸ್ವತಂತ್ರವಾಗಿ ‘ಸೋಶಿಯೋ ಲೀಗಲ್‌ ಸರ್ವೀಸ್‌ ಅಂಡ್‌ ರಿಸರ್ಚ್ ಸೆಂಟರ್’ (ಎಸ್‌.ಎಲ್‌.ಎಸ್‌.ಆರ್.ಸಿ) ಎಂಬ ಕಾನೂನು ಕಾಲೇಜನ್ನು ಸ್ಥಾಪಿಸಿ ಅದರ ಪ್ರಾಂಶುಪಾಲರಾದರು. ೧೯೮೫-೮೯ರವರೆಗೆ ‘ರಾಮಮನೋಹರ ಲೋಹಿಯಾ ಕಾನೂನು ಕಾಲೇಜ’ನ್ನು ಸ್ಥಾಪಿಸಿ ಅದರ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದರು.

ಸಮಾಜವಾದಿ ಪಕ್ಷ ಹಾಗೂ ಸಮಾಜವಾದಿ ಯುವಜನ ಸಭಾ

ಕಾನೂನು ಕಾಲೇಜುಗಳಲ್ಲಿ ಬೋಧನಾ ವೃತ್ತಿಯ ಜೊತೆಗೆ ಸಮಾಜ ಸುಧಾರಣೆಯ ಕಡೆಗೂ ಗಮನಹರಿಸಿದರು. ಸಮಾಜವಾದಿ ಚಳವಳಿಯ ಹರಿಕಾರ ರಾಮಮನೋಹರ ಲೋಹಿಯಾ ಅವರು ಬರೆದಿದ್ದ “ಮಾರ್ಕ್ಸ್, ಗಾಂಧಿ ಅಂಡ್‌ ಸೋಶಿಯಲಿಸಂ” ಎಂಬ ಪುಸ್ತಕದಿಂದ ಪ್ರಭಾವಗೊಂಡು “ಸಮಾಜವಾದಿ ಪಕ್ಷ”ವನ್ನು ಸೇರಿದರು. ಸಮಾಜವಾದಿ ಪಕ್ಷದಲ್ಲಿ ಆಗ ಶಾಂತವೇರಿ ಗೋಪಾಲಗೌಡ, ಜೆ.ಎಚ್‌. ಪಟೇಲ, ಕೆ.ಜಿ. ಮಹೇಶ್ವರಪ್ಪ ಮುಂತಾದವರಿದ್ದರು. ಅವರ ಮೇಲುಸ್ತುವಾರಿಯಲ್ಲಿ ಕೆಲಸ ಮಾಡಲು ಒಪ್ಪದೆ ೧೯೬೮ರಲ್ಲಿ ‘ಸಮಾಜವಾದಿ ಯುವಜನ ಸಭಾ’ ಎಂಬ ಒಂದು ತರುಣರ ಉಪ ಸಂಘಟನೆಯನ್ನು ಕಟ್ಟಿಕೊಂಡರು. ೧೯೬೮ ರಿಂದ ೧೯೭೨ರ ವರೆಗೆ ಸಮಾಜವಾದಿ ಯುವಜನ ಸಭಾದ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ನಂಜುಂಡಸ್ವಾಮಿ ಅವರು ದುಡಿದರು. ನಂಜುಂಡಸ್ವಾಮಿ ಅವರ ಜೊತೆ ಪೂರ್ಣಚಂದ್ರ ತೇಜಸ್ವಿ, ಬಿ.ಎನ್‌. ಶ್ರೀರಾಮ್‌, ಪಿ. ಲಂಕೇಶ್‌, ಕೆ.ರಾಮದಾಸ್‌, ಎನ್‌.ಡಿ. ಸುಂದರೇಶ್‌, ಕಡಿದಾಳು ಶಾಮಣ್ಣ, ಪ್ರಭುಶಂಕರ್, ಜಿ.ಎಸ್‌. ಶಿವರುದ್ರಪ್ಪ ಹಾಗೂ ನಂಜುಂಡಸ್ವಾಮಿ ಅವರಿಂದ ಪ್ರೇರೇಪಿತರಾಗಿದ್ದ ಸಿದ್ಧರಾಮಯ್ಯ, ಎಂ.ಪಿ. ಪ್ರಕಾಶ್‌, ರವಿವರ್ಮಕುಮಾರ್, ಟಿ.ಎನ್‌. ಸೀತಾರಾಮ್‌, ಶೂದ್ರ ಶ್ರೀನಿವಾಸ್‌, ಕಿ.ರಂ. ನಾಗರಾಜ್‌, ಸಿದ್ಧಲಿಂಗಯ್ಯ, ಅಗ್ರಹಾರ ಕೃಷ್ಣಮೂರ್ತಿ, ಚಂದ್ರಶೇಖರ ಪಾಟೀಲ ಹಾಗೂ ಇನ್ನೂ ಅನೇಕ ಪ್ರತಿಭಾವಂತರ ಪಡೆ ಸೇರಿಕೊಂಡಿತ್ತು. ನಂಜುಂಡಸ್ವಾಮಿ ಹಾಗೂ ಪೂರ್ಣಚಂದ್ರ ತೇಜಸ್ವಿ ಇವರಿಬ್ಬರೂ ಸೇರಿ ಪ್ರಕಟಿಸಿದ “ಲೋಹಿಯಾ ಕೆಂಪು ಪುಸ್ತಕ” ಹಲವಾರು ನಾಯಕರುಗಳನ್ನು ಪ್ರೇರೇಪಿಸಿ ರಾಜಕೀಯ ಮುಂಚೂಣಿಗೆ ತರುವಲ್ಲಿ ಯಶಸ್ವಿಯಾಗಿದೆ.

೧೯೭೨ರಲ್ಲಿ ರಾಮಮನೋಹರ ಲೋಹಿಯಾ ಅವರು ಮುನ್ನಡೆಸುತ್ತಿದ್ದ “ಸಮಾಜವಾದಿ ಪಕ್ಷ”ದ ರಾಷ್ಟ್ರೀಯ ಕಾರ್ಯಕಾರಿಣಿಯ ಸದಸ್ಯರಾಗಿ ನಂಜುಂಡಸ್ವಾಮಿ ಅವರು ಕೆಲಸ ನಿರ್ವಹಿಸಿದರು. ಕರ್ನಾಟಕದಲ್ಲಿ ವೈಜ್ಞಾನಿಕ ಚಿಂತನೆಗಳನ್ನು ಜಾರಿಗೆ ತರಲು, ‘ಕರ್ನಾಟಕ ವಿಚಾರವಾದಿ ಒಕ್ಕೂಟ’ವನ್ನು ಹುಟ್ಟು ಹಾಕಿ ಅದರ ಸಂಸ್ಥಾಪಕ ಅಧ್ಯಕ್ಷರಾಗಿ ೧೯೭೨-೭೪ರ ವರೆಗೆ ಸೇವೆ ಸಲ್ಲಿಸಿದರು. ಶ್ರೀಲಂಕಾ ಮೂಲಕದ ಅಂತಾರಾಷ್ಟ್ರೀಯ ಖ್ಯಾತಿಯ ವಿಚಾರವಾದಿ ಡಾ. ಎ.ಟಿ. ಕೊವೂರ್ ಅವರ ಜೊತೆಗೂಡಿ ವಂಚಕ ದೈವ ಮಾನವರುಗಳ ಪವಾಡಗಳನ್ನು ಬಯಲಿಗೆಳೆಯರು ಪವಾಡ ರಹಸ್ಯ ಬಯಲು ಆಂದೋಲನಗಳನ್ನು ಹಮ್ಮಿಕೊಂಡರು. ಮೂಢನಂಬಿಕೆಗಳಾದ ಜಾತಿಪದ್ಧತಿ, ಧರ್ಮ ಮತ್ತು ದೇವರ ವಿರುದ್ಧ ತಮಿಳುನಾಡಿನ ವಿಚಾರವಾದಿ ಪೆರಿಯಾರ್ ಇ.ವಿ. ರಾಮಸ್ವಾಮಿ ನಾಯ್ಕರ್ ಅವರ ‘ಸ್ವಾಭಿಮಾನಿ ಚಳವಳಿ’ಯನ್ನು ನಾಡಿನಾದ್ಯಂತ ಪ್ರಾರಂಭಿಸಿದರು. ಮೊಟ್ಟ ಮೊದಲ ಬಾರಿಗೆ ಪೆರಿಯಾರ್ ಅವರ ಸಭೆಗಳನ್ನು ಕರ್ನಾಟಕದಲ್ಲಿ ಆಯೋಜಿಸುವುದರ ಮೂಲಕ ೧೯೭೪ ರಿಂದ ೧೯೭೮ರವರೆಗೆ ಹೋರಾಟಗಳನ್ನು ಹಮ್ಮಿಕೊಂಡರು. ಜಯಪ್ರಕಾಶ್‌ ನಾರಾಯಣರು ರೂಪಿಸಿದ್ದ ಪ್ರಜಾಪ್ರಭುತ್ವ ಚಳವಳಿಯಲ್ಲಿ ಭಾಗವಹಿಸಿ ೧೯೭೪ ರಿಂದ ೧೯೭೮ರವರೆಗೆ ಹೋರಾಟಗಳನ್ನು ಹಮ್ಮಿಕೊಂಡರು. ಜಯಪ್ರಕಾಶ್‌ ನಾರಾಯಣರು ರೂಪಿಸಿದ್ದ ಪ್ರಜಾಪ್ರಭುತ್ವ ಚಳವಳಿಯಲ್ಲಿ ಭಾಗವಹಿಸಿ ೧೯೭೪ರಿಂದ ೧೯೭೮ರ ವರೆಗೆ ಕರ್ನಾಟಕದಲ್ಲಿ ‘ನವ ನಿರ್ಮಾಣ ಕ್ರಾಂತಿ’ಯನ್ನೂ ಆರಂಭಿಸಿದ್ದರು. ಇದೇ ಸಮಯದಲ್ಲಿ ವೀರಶೈವ ಸಮ್ಮೇಳನ ಹಾಗೂ ಬ್ರಾಹ್ಮಣ ಸಮ್ಮೇಳನಗಳ ವಿರುದ್ಧ ಪ್ರತಿಭಟನೆ ಹಮ್ಮಿಕೊಂಡರು. ಕನ್ನಡ ಸಾಹಿತ್ಯದಲ್ಲಿನ ಸಾಮಾಜಿಕ ವಿಕೃತ ರೂಪವನ್ನು ಜನತೆಗೆ ತಿಳಿಸಲು ೧೯೭೪-೭೬ರವರೆಗೆ ‘ಕರ್ನಾಟಕ ಕಲಾವಿದರ ಹಾಗೂ ಬರಹಗಾರರ ಒಕ್ಕೂಟ’ವನ್ನು ಮೈಸೂರಿನಲ್ಲಿ ರಾಷ್ಟ್ರಕವಿ ಕುವೆಂಪು ಅವರಿಂದ ಉದ್ಘಾಟಿಸುವುದರ ಮೂಲಕ ಪ್ರಾರಂಭಿಸಿ, ಅದರ ಸಂಚಾಲಕರಾಗಿ ಕಾರ್ಯ ನಿರ್ವಹಿಸಿದರು. ೭೦ರ ದಶಕದಲ್ಲಿ ಕರ್ನಾಟಕದ ಪ್ರಪ್ರಥಮ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿದ್ದ ಎಲ್‌.ಜಿ. ಹಾವನೂರ ಅವರ ವರದಿಗೆ ಎಲೆ ಮರೆಯ ಕಾಯಿಯಂತೆ ಶ್ರಮವಹಿಸಿ ದುಡಿದರು.

ದಕ್ಷಿಣ ಭಾರತದ ಸಣ್ಣ ಬೆಳೆಗಾರರ ಒಕ್ಕೂಟ

೧೯೭೨ರಲ್ಲಿ ನಂಜುಂಡಸ್ವಾಮಿ ಹಾಗೂ ಪೂರ್ಣಚಂದ್ರತೇಜಸ್ವಿ ಅವರು ಜೊತೆಗೂಡಿ ‘ದಕ್ಷಿಣ ಭಾರತ ಸಣ್ಣ ಬೆಳೆಗಾರರ ಒಕ್ಕೂಟ’ವನ್ನು ಚಿಕ್ಕಮಗಳೂರಿನ ಮೂಡಿಗೆರೆಯಲ್ಲಿ ಹುಟ್ಟು ಹಾಕಿ ಅದರ ಸಂಘಟನೆಯಲ್ಲಿ ತೊಡಗಿದರು. ಈ ಸಂಘಟನೆಯಲ್ಲಿದ್ದ ಹೆಚ್ಚಿನವರೆಲ್ಲ ‘ಸಮಾಜವಾದಿ ಯುವಜನ ಸಭಾ’ದ ಸದಸ್ಯರು. ನಂಜುಂಡಸ್ವಾಮಿ ಅವರು ಒಕ್ಕೂಟದ ಅಧ್ಯಕ್ಷರಾದರು. ತೇಜಸ್ವಿ ಅವರು ಸಂಘದ ಸಂಚಾಲಕತ್ವ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಉಸ್ತುವಾರಿಯನ್ನು ಹೊತ್ತರು. ದೇಶದ ಬೆನ್ನೆಲುಬಾಗಿರುವ ರೈತರ ಹಿತಕ್ಕೆ ಧಕ್ಕೆ ತರುವ ಯಾವುದೇ ಪಕ್ಷ ಮತ್ತು ಸರ್ಕಾರಗಳ ವಿರುದ್ಧ ಹೋರಾಡುವುದೇ ಈ ಸಂಘಟನೆಯ ಮುಖ್ಯ ಉದ್ದೇಶ. ಈವರೆವಿಗೂ ದೇಶದಲ್ಲಿ ರೈತರ ಸಂಘಟನೆ ಇಲ್ಲದೇ ಹೋದುದೇ ರೈತರ ಈಗಿನ ಹೀನ ಸ್ಥಿತಿಗೆ ಕಾರಣ. ಅಷ್ಟಲ್ಲದೆ ಆಯಾಯ ಕೃಷಿಗೆ ಸಂಬಂಧಿಸಿದಂತೆ ರೈತರೆಲ್ಲಾ ವಿಭಜನೆಗೊಂಡು ಕಾಫಿ, ಏಲಕ್ಕಿ, ಭತ್ತ, ಕಬ್ಬು, ಅಡಿಕೆ ಇತ್ಯಾದಿಗಳನ್ನು ಬೆಳೆಯುವವರ ಬೇರೆ ಬೇರೆ ಸಂಘಗಳಾಗಿ ರೂಪುಗೊಂಡವು. ಈ ಎಲ್ಲಾ ರೈತರನ್ನೂ ಸಣ್ಣ ಬೆಳಗಾರರನ್ನಾಗಿ ಒಂದುಗೂಡಿಸಿ ರಾಜ್ಯದಾದ್ಯಂತ ಸಶಕ್ತ ರೈತ ವಿಮೋಚನೆ ಆಂದೋಳವನ್ನು ರೂಪುಗೊಳಿಸುವುದು ಈ ಸಂಘಟನೆಯ ಉದ್ದೇಶ .

ಈ ಸಂಘದ ಬೇಡಿಕೆಗಳು ಕಾಫಿ, ಏಲಕ್ಕಿ ಹಾಗೂ ಭತ್ತಕ್ಕೆ ಸೀಮಿತವಾಗಿದ್ದವು. ಅದರ ವ್ಯಾಪ್ತಗಿಯೂ ಕೂಡ ಸೀಮಿತವಾಗಿದ್ದರಿಂದ ಈ ಸಂಘಟನೆಯಲ್ಲಿಯೂ ಕೃಷಿ ಕಾರ್ಮಿಕರ ಬೇಡಿಕೆಗಳು ಪ್ರಮುಖವಾದ ಬೇಡಿಕೆಗಳಾಗಿ ಬರಲಿಲ್ಲ. ದಕ್ಷಿಣ ಭಾರತ ಸಣ್ಣ ಬೆಳೆಗಾರರ ಒಕ್ಕೂಟದಿಂದ ಲೆವಿ ಸಮಸ್ಯೆ ಹಾಗೂ ಬೆಟರ್ ಮೆಂಟ್‌ ಜಾರ್ಜ್‌ಗೆ ಸಂಬಂಧಿಸಿದ ಹೋರಾಟಗಳು ನಡೆದವು. ಕರ್ನಾಟಕದ ಮಟ್ಟದಲ್ಲೂ ಕಬ್ಬು ಬೆಳೆಗಾರರ ಸಂಘಟನೆ ಯೊಂದಿತ್ತು. ೧೯೭೭ರಲ್ಲಿ ಇದರ ಬೇಡಿಕೆಗಳು ಕಂದಾಯದಲ್ಲಿ ಏಕರೂಪತೆ, ಕೃಷಿ ಹಾಗೂ ಕೈಗಾರಿಕೆಗಳ ಬೆಲೆಗಳ ನಡುವೆ ತಾರತಮ್ಯ ಸಾಮ್ಯತೆ, ವಿದ್ಯುಚ್ಛಕ್ತಿಗೆ ನ್ಯಾಯವಾದ ದರ, ಖಾಸಗೀ ಕಬ್ಬು ಕಾರ್ಖಾನೆಗಳ ರಾಷ್ಟ್ರೀಕರಣ, ಸಾಲಕ್ಕೆ ಸಮರ್ಪಕ ವ್ಯವಸ್ಥೆ ಇತ್ಯಾದಿಗಳು. ಈ ಸಂಘಟನೆಯು ಬೃಹತ್‌ ಚಳವಳಿಗಳನ್ನು ನಡೆಸಿದ್ದು ಕಂಡುಬರುವುದಿಲ್ಲ.

ಕರ್ನಾಟಕ ರಾಜ್ಯ ರೈ ಸಂಘ ಸ್ಥಾಪನೆಯ ಹಿನ್ನೆಲೆ
ಕರ್ನಾಟಕದಲ್ಲಿ ರೈತ ಆಂದೋಲನದ ಮೂಲ ನೆಲೆ ಶಿವಮೊಗ್ಗ ಜಿಲ್ಲೆ ಎಂದರೆ ತಪ್ಪಾಗಲಾರದು. ಆದರೆ ಇಂದು ರೈತ ಚಳವಳಿಯು ಕೇವಲ ಶಿವಮೊಗ್ಗಕ್ಕೆ ಅಷ್ಟೇ ಸೀಮಿತವಾಗಿಲ್ಲ; ಇಡೀ ಕರ್ನಾಟಕದಲ್ಲೇ ಬಹಳ ಸಂಘಟಿತವಾದ ಬೃಹತ್‌ ಹೋರಾಟವಾಗಿದೆ. ೧೯೭೦ರ ದಶಕದಲ್ಲಿ ಶಿವಮೊಗ್ಗ ಜಿಲ್ಲೆಯ ‘ಕಬ್ಬು ಬೆಳೆಗಾರರ ಸಂಘ’ವನ್ನು ಮಾಜಿ ವಿಧಾನಸಭಾ ಸಭಾಪತಿ, ಮಾಜಿ ಸಚಿವ ಹಾಗೂ ಹಿರಿಯ ಗಾಂಧೀವಾದಿ ಹೆಚ್‌.ಎಸ್‌. ರುದ್ರಪ್ಪ ಅವರು ಹಾಗೂ ಎನ್‌.ಡಿ. ಸುಂದರೇಶ್‌ ಜೊತೆಗೂಡಿ ಹುಟ್ಟು ಹಾಕಿದರು. ಇದು ಅಸಮರ್ಪಕ ಬೆಲೆ, ಸಾಲ ಬಾಕಿ, ಕಡಿಮೆ ಬೆಲೆ ಇತ್ಯಾದಿ ವಿಷಯಗಳನ್ನು ವಿರೋಧಿಸುವಷ್ಟು ಪ್ರಬಲವಾಗಿತ್ತು.

ಇದೇ ಅವಧಿಯಲ್ಲಿ ಬಳ್ಳಾರಿ ಜಿಲ್ಲೆಯ ಕಬ್ಬು ಬೆಳಗಾರರು ಶಿವಮೊಗ್ಗ ರೈತರಿಗೆ ಸಮನಾದ ಬೇಡಿಕೆಗಳನ್ನು ಮುಂದಿಟ್ಟರು. ಈ ಸಂಘದ ಬೇಡಿಕೆಗಳು ಕೃಷಿ ಸಾಲ ರದ್ದು ಪಡಿಸುವುದು, ಕೃಷಿಯನ್ನು ಕೈಗಾರಿಕೆಯೆಂದು ಘೋಷಿಸುವುದು, ಗೃಹ ಕೈಗಾರಿಕೆಗಳ ಸ್ಥಾಪನೆ, ಕೃಷಿ ಉತ್ಪಾದನೆಗಳಿಗೆ ತುಲನಾತ್ಮಕ ಬೆಲೆ , ಬಡ್ಡಿಯ ದರವನ್ನು ಕಡಿಮೆ ಮಾಡುವುದು , ಕೃಷಿ ಯಂತ್ರೋಪಕರಣಗಳಿಗೆ ಕರದಿಂದ ವಿನಾಯಿತಿ, ಭೂನ್ಯಾಯ ಮಂಡಳಿಗಳ ವಿಸರ್ಜನೆ, ಕೃಷಿ ಭೂ ಮಿತಿ ಹೆಚ್ಚಳ, ವಿದ್ಯುತ್‌ ದರದಲ್ಲಿ ಕಡಿತ , ಕಡಿಮೆ ಬಡ್ಡಿಯಲ್ಲಿ ಸಾಲ ಮಂಜೂರು ಇತ್ಯಾದಿ ಬೇಡಿಕೆಗಳಿದ್ದವು. ಬಳ್ಳಾರಿ ರೈತ ವರ್ಗವಗು ತಮ್ಮ ಬಹುಮುಖ ಕಾರ್ಯಸೂಚಿಯಲ್ಲಿ ಕೃಷಿ ಕಾರ್ಮಿಕರ ಸಮಗ್ರ ಬೇಡಿಕೆಯನ್ನು ಮುಂದಿಡಲು ಸಫಲವಾಗಲಿಲ್ಲ.

೧೯೮೦ರ ದಶಕದಲ್ಲಿ ಬಹಳ ದೊಡ್ಡ ಶಕ್ತಿಯಾಗಿ ಬೆಳೆದು ನಿಂತ ಕರ್ನಾಟಕ ರಾಜ್ಯ ರೈತ ಸಂಘದ ಹುಟ್ಟಿಗೆ ಮುಖ್ಯವಾಗಿ ಒಂದು ರೀತಿಯಲ್ಲಿ ಮಲಪ್ರಭಾ ರೈತ ಚಳವಳಿ ಕಾರಣವಾಗಿದೆ.

ಮಲಪ್ರಭಾ ಅಚ್ಚುಕಟ್ಟು ಪ್ರದೇಶವನ್ನು ಸುರಕ್ಷಿತ ನೀರಾವರಿ ಪ್ರದೇಶವೆಂದು ಘೋಷಿಸಿದ್ದು ಕೂಡ ಒಂದು ಕಾರಣವೆಂದು ವಾದಿಸಬಹುದು. ಈ ಯೋಜನೆಯಡಿಯಲ್ಲಿ ಹತ್ತಿಯ ಹೊರತಾಗಿ ಬೇರೆ ಬಳೆಗಳಾದ ಕಬ್ಬು ಮೊದಲಾದ ಬೆಳೆಗಳನ್ನು ಬೆಳೆಸಲು ಅವಕಾಶ ನೀಡಲಿಲ್ಲ. ಹಾಗೂ ಬೆಟರ್ ಮೆಂಟ್‌ ಲೆವಿ (ಅಭಿವೃದ್ಧಿ ತೆರಿಗೆ) ಹಾಗೂ ನೀರಿನ ಕಿಂದಾಯ ಮುಖ್ಯವಾಗಿದ್ದವು. ಇವು ಹಲವಾರು ಸಮಸ್ಯೆಗಳಿಗೆ ದಾರಿ ಮಾಡಿಕೊಟ್ಟವು. ರೈತರು ಸಾಲದಲ್ಲಿ ಸಿಲುಕುವಂತೆ ಮಾಡಿತು. ಗ್ರಾಮೀಣ ಪ್ರದೇಶದಲ್ಲಿ ವರ್ಗಗಳ ನಡುವೆ ಸಂಘರ್ಷದ ತೀವ್ರತೆಯನ್ನು ಹೆಚ್ಚಿಸಿತು ಹಾಗೂ ರೈತರ ಬಡತನವನ್ನು ಇನ್ನಷ್ಟು ಹೆಚ್ಚಿಸಿತು . ಇವೆಲ್ಲ ಪರಿಸ್ಥಿತಿಗಳು ರೈತ ಹೋರಾಟಕ್ಕೆ ದಾರಿ ಮಾಡಿಕೊಟ್ಟವು.

ನರಗುಂದ ತಾಲ್ಲೂಕು ಕಛೇರಿ ಎದುರು ರೈತರು ೨೦ ದಿನಗಳ ಸತ್ಯಾಗ್ರಹ ಮಾಡಿದರೂ ಏನೂ ಪ್ರಯೋಜನವಾಗಲಿಲ್ಲ. ಆಗ ರೈತರು ಅರೆಬೆತ್ತಲೆಯಾಗಿ ಬಾರ್ ಕೋಲು ಹಿಡಿದು ಚಳವಳಿ ಮಾಡಿದರೂ ರೈತರಿಗೆ ಸೂಕ್ತ ಉತ್ತರ ನೀಡುವಲ್ಲಿ ಸರ್ಕಾರ ವಿಫಲವಾಯಿತು. ಈ ಮಧ್ಯೆ ರೈತರು ೧೯೮೦ರ ಏಪ್ರಿಲ್‌ನಲ್ಲಿ ಹೊಸದಾಗಿ ಆಯ್ಕೆಯಾಗಿದ್ದ ಮುಖ್ಯಮಂತ್ರಿ ಗುಂಡೂರಾವ್‌ ಅವರನ್ನು ಭೇಟಿಯಾಗಿ ಪರಿಹಾರಕ್ಕಾಗಿ ಒತ್ತಾಯಿಸಿದರು. ಆದರೆ ಸರ್ಕಾರ ರೈತರನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ನಂತರ ಸರಕಾರಿ ಕಛೇರಿ ಎದುರು ಸರದಿ ಉಪವಾಸವನ್ನು ರೈತರು ಪ್ರಾರಂಭಿಸಿದರು. ೧೯೮೦ರ ಜೂನ್‌ ೩೦ ರಂದು ನರಗುಂದದ ೧೦,೦೦೦ಕ್ಕೂ ಹೆಚ್ಚಿನ ರೈತರು ಒಟ್ಟು ಸೇರಿ ಬೃಹತ್ ಸಮಾವೇಶ ಮಾಡಿದರು. ಜುಲೈ ೮ರಂದು ಮುಖ್ಯಮಂತ್ರಿಗೆ ನೀಡಿದ್ದ ಮನವಿ ನೆನೆಗುದಿಗೆ ಬಿದ್ದಿದ್ದರಿಂದ ರೈತರು ಸಹನೆ ಕಳೆದುಕೊಂಡರು. ಪರಿಣಾಮವಾಗಿಯೇ, ನರಗುಂದ, ನವಲಗುಂದ, ಸವದತ್ತಿಯಲ್ಲಿ ಬಂದ್‌ಗೆ ಕರೆ ಕೊಡಲಾಯಿತು.

ಸಾವಿರಾರು ಜನರು ತಹಶೀಲ್ದಾರರ ಕಛೇರಿಯನ್ನು ಜುಲೈ ೨೧ ರಂದು ಮುಚ್ಚಲು ಒತ್ತಾಯಿಸುತ್ತಿದ್ದರೂ ತಹಶೀಲ್ದಾರ ರೈತರ ಮಾತಿಗೆ ಕಿವಿಗೊಡಲಿಲ್ಲ. ನರಗುಂದ ಮತ್ತು ನವಲಗುಂದದ ರೈತರು ತಹಶೀಲ್ದಾರರಿಗೆ ಮನವಿ ಸಲ್ಲಿಸಲು ಹೋಗಿದ್ದ ಸಮಯದಲ್ಲಿ ಪೊಲೀಸರು ದೌರ್ಜನ್ಯ ನಡೆಸಿದರು. ಅಂತಿಮವಾಗಿ ಪರಿಸ್ಥಿತಿ ವಿಕೋಪಕ್ಕೆ ತಲುಪಿ ಗೋಲಿಬಾರ್ ಮಾಡಿದ ಪ್ರಯುಕ್ತ ಸುಮಾರು ಇಪ್ಪತ್ತು ರೈತರು ಪ್ರಾಣಕಳೆದುಕೊಂಡರು. ಹೀಗೆ ದೌರ್ಜನ್ಯ ಹಾಗೂ ಗೋಲಿಬಾರ್ ನೊಂದಿಗೆ ರೈತ ಹೋರಾಟ ಅಂಕುರಿಸಿತು. ಇದೇ ಕಾಲದಲ್ಲಿ ನರಗುಂದ ರೈತರು ರೈತ ಹಾಗೂ ರೈತಕೂಲಿಕಾರರ ಸಂಘವನ್ನು ರಾಜಶೇಖರಪ್ಪ ಹೊಸಕೇರಿ ಅವರ ನೇತೃತ್ವದಲ್ಲಿ ರಚಿಸಿಕೊಂಡು ಹೋರಾಟಕ್ಕಿಳಿದರು. ನರಗುಂದ ರೈತರು ನವಲಗುಂದದ ರೈತರ ಪರವಾಗಿ ಉಪವಾಸ ಸತ್ಯಾಗ್ರಹ, ಮೆರವಣಿಗೆ, ಬಂದ್‌, ಪಾದಯಾತ್ರೆ, ರಸ್ತೆತಡೆ ಮೊದಲಾದವುಗಳ ಮೂಲಕ ಚಳವಳಿ ಉಗ್ರರೂಪ ಪಡೆಯಿತು. ಈ ಚಳವಳಿಯು ಕರ್ನಾಟಕದ ಉಳಿದ ಮೂಲೆಗಳಲ್ಲಿಯೂ ಪ್ರತಿಧ್ವನಿಸಿತು. ಇದು ವಿಭಿನ್ನ ಪ್ರಾದೇಶಿಕ ಬೇಡಿಕೆಗಳನ್ನು ಸದೃಶ ರೀತಿಯಲ್ಲಿ ಒಟ್ಟುಗೂಡಿಸಿ ನಿರಂತರ ಪ್ರತಿಕ್ರಿಯೆಯನ್ನುಂಟು ಮಾಡಿತು. ಗದಗ, ಬೆಟಗೇರಿ, ಬಿಜಾಪುರ, ಕೊಪ್ಪಳ, ದಾವಣಗೆರೆ, ಚಿತ್ರದುರ್ಗ, ಅಂಕೋಲ, ಕುಮಟಾ, ಸಿರಸಿ ಮತ್ತು ರಾಯಚೂರುಗಳಿಗೆ ಚಳವಳಿ ಹರಡಿತು. ಏರುತ್ತಿರುವ ಬೆಲೆಗಳ ವಿರುದ್ಧ ಧ್ವನಿ ಎತ್ತುವುದರೊಂದಿಗೆ ಮಲಪ್ರಭಾ ರೈತರಿಗೆ ಉಳಿದ ರೈತರು ಬೆಂಬಲ ನೀಡಿರುವುದು ಕಂಡುಬರುತ್ತದೆ.

ಕೊನೆಗೆ ರೈತರ ತೀವ್ರ ಪ್ರತಿಭಟನೆಯ ನಂತರ ಗುಂಡೂರಾವ್‌ ನೇತೃತ್ವದ ಸರಕಾರ ೧೯೮೦ ಜುಲೈ ೩೦ರಂದು ೮೫ ಕೋಟಿ ರೂಪಾಯಿಗಳನ್ನು ಮಧ್ಯಂತರ ಪರಿಹಾರವಾಗಿ ನೀಡಲು ಒಪ್ಪಿತು. ಆದರೆ ಘಟನೆಗೆ ಸಂಬಂಧಿಸಿದ ವರದಿ ಬರುವವರೆಗೂ ಅಭಿವೃದ್ಧಿ ಕಂದಾಯ (ಬೆಟರ್ ಮೆಂಟ್‌ ಲೆವಿ) ಹಾಗೂ ನೀರು ಕಂದಾಯಗಳನ್ನು ತಾತ್ಕಾಲಿಕವಾಗಿ ಮನ್ನಾ ಮಾಡಬೇಕೆಂದು ಆದೇಶ ನೀಡಿತು. ಹೀಗೆ ಚಳವಳಿ ಆರಂಭಗೊಂಡ ಕೆಲವೇ ದಿನ ಗಳಲ್ಲಿ ಶಿವಮೊಗ್ಗದ ರೈತರು “ಶಿವಮೊಗ್ಗ ರೈತ ಸಂಘ”ದ ಅಡಿಯಲ್ಲಿ ಚಳವಳಿಗೆ ಧುಮುಕಿದರು. ಈ ಸಂಘಕ್ಕೆ ಇನ್ನಷ್ಟು ಇಂಬು ದೊರೆತದ್ದು ಸಮನ್ವಯ ಸಮಿತಿಯ ರಚನೆಯಿಂದ. ಅದರ ಬೇಡಿಕೆಗಳು ಹಾಗೂ ಸಮನ್ವಯ ಸಮಿತಿಯ ಬೇಡಿಕೆಗಳು ಹೆಚ್ಚು ಕಡಿಮೆ ಒಂದೇ ಅಥವಾ ಸಮನಾಗಿದ್ದವು. ಮುಂದೆ ಶಿವಮೊಗ್ಗ ರೈತ ಸಂಘ ವಿಭಿನ್ನ ರೈತ ಸಂಘಟನೆಗಳ ಹಿತಾಸಕ್ತಿಯನ್ನು ತನ್ನ ಕಕ್ಷೆಗೆ ತೆಗೆದುಕೊಳ್ಳುವಲ್ಲಿ ಸಫಲ ಮತ್ತು ಸಮರ್ಥವಾಯಿತಲ್ಲದೆ ಚಳವಳಿಯಲ್ಲಿ ಭಾಗವಹಿಸಿದ ವಿಭಿನ್ನ ಸಂಘಟನೆಗಳನ್ನು ನಿಯಂತ್ರಿಸುವುದರಲ್ಲಿಯೂ ಯಶಸ್ವಿಯಾಯಿತು.

ಶಿವಮೊಗ್ಗದಲ್ಲಿ ರೈತ ಚಳವಳಿಯ, ೧೯ ಬೇಡಿಕೆಗಳನ್ನು ರೂಪಿಸುವುದರ ಮುಖಾಂತರ ಪ್ರಾರಂಭವಾಯಿತು. ಅದರೊಂದಿಗೆ ಸ್ಥಳೀಯ ಮತ್ತು ವಿಭಿನ್ನ ರೈತ ಸಂಘಟನೆಗಳ ಬೇಡಿಕೆಗಳನ್ನು ಒಟ್ಟುಗೂಡಿಸಲಾಯಿತು. ಹೋರಾಟದ ಆರಂಭದ ದಿನಗಳಲ್ಲಿ ಬೇಡಿಕೆಗಳು ಹೀಗಿದ್ದವು. ನೀರಿನ ತೆರಿಗೆ, ಅಭಿವೃದ್ಧಿ ತೆರಿಗೆ, ಕಂದಾಯದ ರದ್ಧತಿ ಮತ್ತು ಮಾಫಿ, ತುಲನಾತ್ಮಕ ಬೆಲೆ ಹಾಗೂ ಗೊಬ್ಬರ ಬೆಲೆಗಳಲ್ಲಿ ಕಡಿತ. ಕೆಲವೇ ದಿನಗಳಲ್ಲಿ ವೃದ್ಧಾಪ್ಯ ವೇತನ, ಭತ್ತಕ್ಕೆ ತುಲನಾತ್ಮಕ ಬೆಲೆ ಹಾಗೂ ಇನ್ನೆರಡು ಬೇಡಿಕೆಗಳನ್ನು ಸೇರಿಸಲಾಯಿತು. ವಾಸ್ತವವಾಗಿ ನೋಡುವುದಾದರೆ ‘ರೈತ ಸಂಘ’ವು ಆಗಸ್ಟ್‌ ೧೧, ೧೯೮೦ರ ಉಪವಾಸ ಸತ್ಯಾಗ್ರಹ, ಜಿಲ್ಲಾಧಿಕಾರಿಯ ಕಛೇರಿ ಮುತ್ತಿಗೆ ಮುಖಾಂತರ ಅಸ್ತಿತ್ವಕ್ಕೆ ಬಂದಿತು. ಶಿವಮೊಗ್ಗದ ಈ ಹೋರಾಟ ವಿಭಿನ್ನ ಪ್ರದೇಶಗಳಲ್ಲಿ ಪರಿಣಾಮ ಬೀರಿತು. ಚಿತ್ರದುರ್ಗ ರೈತರು ನೈತಿಕ ಬೆಂಬಲ ಹಾಗೂ ಅಸಹಕಾರ ಚಳವಳಿಯನ್ನು ತಮ್ಮ ಜಿಲ್ಲೆಯಲ್ಲಿ ನಡೆಸಲು ಶಿವಮೊಗ್ಗ ರೈತರ ಬೆಂಬಲ ಕೇಳಿದರು.ಹಾಸನದ ರೈತರು ಅಸಹಕಾರ ಚಳವಳಿ, ಉಪವಾಸ ಸತ್ಯಾಗ್ರಹ, ರಸ್ತೆತಡೆ, “ಜೈಲ್‌ ಭರೋ” ಮುಖಾಂತರ ಶಿವಮೊಗ್ಗ ರೈತರಿಗೆ ನೈತಿಕ ಬೆಂಬಲ ನೀಡಿದರು.

ಅನಿಶ್ಚಿತ ದಿನ ರೈತರಿಗೆ ಸಂಬಂಧಿಸಿದ ವಿಭಿನ್ನ ವಿಷಯಗಳನ್ನು ಚರ್ಚಿಸುವುದಕ್ಕಾಗಿ ರಾಜ್ಯದ ವಿವಿಧೆಡೆಯಿಂದ ರೈತ ಪ್ರತಿನಿಧಿಗಳು ಬೆಂಗಳೂರಿನಲ್ಲಿ ಸಮಾವೇಶಗೊಂಡು ಅಂತಿಮವಾಗಿ ಶಿವಮೊಗ್ಗ ರೈತರ ೧೯ ಬೇಡಿಕೆಗಳನ್ನು ಚರ್ಚಿಸುವುದರ ಜೊತೆಗೆ ಉಳಿದ ಜಿಲ್ಲೆಗಳ ರೈತರಿಗೆ ಈ ಬೇಡಿಕೆಗಳು ಅನ್ವಯವಾಗಬಹುದೆ ಎಂಬುದು ಮುಖ್ಯವಾಗಿ ಪರಿಗಣನೆಯಾಯಿತು. ಇದು ಅಕ್ಟೋಬರ್ ೧೭ರಂದು ಬೇಡಿಕೆಯನ್ನು ಸಲ್ಲಿಸಿತ್ತು.

ನಂತರ ೧೯ ಬೇಡಿಕೆಗಳ ಪಟ್ಟಿಯನ್ನು ಸಲ್ಲಿಸುವುದರ ಮುಖಾಂತರ ‘ಕರ್ನಾಟಕ ರಾಜ್ಯ ರೈತ ಸಂಘ’ ಅಕ್ಟೋಬರ್ ೧೭, ೧೯೮೦ರಂದು ಅಧಿಕೃತವಾಗಿ ಅಸ್ತಿತ್ವಕ್ಕೆ ಬಂದಿತು. ಇದರ ಸಂಸ್ಥಾಪಕ ಅಧ್ಯಕ್ಷರಾಗಿದ್ದವರು ಹಿಂದಿನ ಕೃಷಿ ಮಂತ್ರಿ ಹಾಗೂ ಸ್ಪೀಕರ್ ಆಗಿದ್ದ ಹೆಚ್‌.ಎಸ್‌. ರುದ್ರಪ್ಪ ಅವರು, ಪ್ರೊ. ಎಂ.ಡಿ. ನಂಜುಂಡಸ್ವಾಮಿ ಹೋರಾಟ ಸಮಿತಿಯ ಸಂಚಾಲಕರಾಗಿ, ಸುಂದರೇಶ್‌ ಅವರು ಪ್ರಧಾನ ಕಾರ್ಯದರ್ಶಿಗಳಾಗಿ ನೇಮಕಗೊಂಡರು. ಕಡಿದಾಳು ಶಾಮಣ್ಣ, ರೇವಣ್ಣಸಿದ್ದಯ್ಯ ಮುಂತಾದ ಅನೇಕರು ಇದರ ನೇತೃತ್ವ ವಹಿಸಿದ್ದರು.