ಕರ್ನಾಟಕ ರಾಜ್ಯ ರೈತ ಸಂಘದ ತತ್ತ್ವಸಿದ್ಧಾಂತ:ನಂಜುಂಡಸ್ವಾಮಿ

ಬುದ್ಧ, ಬಸವ, ಕಾರ್ಲ್‌ಮಾರ್ಕ್ಸ್, ಗಾಂಧಿ, ಹಾಗೂ ಲೋಹಿಯಾ ಅಂಥವರು ರೈತರ ಉದ್ಧಾರಕ್ಕಾಗಿ ಹಾಕಿಕೊಟ್ಟ ತತ್ತ್ವಗಳನ್ನು ನಂಜುಂಡಸ್ವಾಮಿ ಅವರು ಮುಂದುವರಿಸಿಕೊಂಡು ಬಂದಿರುವುದು ಗಮನಾರ್ಹವಾಗಿದೆ. “ಬುದ್ಧ ಅತ್ತಾಹಿ ಅತ್ತನೋ ನಾಥೋ, ಅತ್ತಾಹಿ ಅತ್ತನೋ ಗತಿ’ – ‘ನಿನಗೆ ನೀನೇ ಒಡೆಯ ನಿನಗೆ ನೀನೇ ಗತಿ” ಎಂದು ಘನತೆ, ಆತ್ಮಗೌರವದಲ್ಲಿ ಜನತೆಯನ್ನು ಎಚ್ಚರಿಸಿದನು. ನಂತರ ಬಸವಣ್ಣ ‘ಕಾಯಕವೇ ಕೈಲಾಸ’ವೆಂದು ಈ ನಾಡನ್ನು ಮತ್ತೊಮ್ಮ ಘನತೆ, ಸ್ವಾಭಿಮಾನಗಳ ಕಾಯಕದಲ್ಲಿ ಎಚ್ಚರಿಸಿದರು. ೨೦ನೇ ಶತಮಾನದಲ್ಲಿ ಪೆರಿಯಾರರು ‘ಸೂಯಮರಿಯಾದೈ’ ಅಂದರೆ ‘ಸ್ವ-ಮರ್ಯಾದೆ” ಸ್ವಾಭಿಮಾನವೆನ್ನುವ ಮಂತ್ರವನ್ನು ತಮಿಳರಿಗಿತ್ತ ಮಾದರಿಯಲ್ಲಿಯೇ, ಕನ್ನಡ ನಾಡಿನ ರೈತ ಕೋಟಿಗೆ ಹಸಿರು ರುಮಾಳಿನ ಸ್ವಾಭಿಮಾನದ ದೀಕ್ಷೆಯನ್ನು, ಬಾರುಕೋಲಿನ ಆತ್ಮರಕ್ಷೆಯನ್ನು ಕಾಯಕದ ನಿಲುವಿನಲ್ಲಿ ನಿಲ್ಲುವಂತೆ ಮಾಡಿದವರು ನಂಜುಂಡಸ್ವಮಿ ಅವರು. ಮಾರ್ಕ್ಸ್‌ವಾದದ ‘ವರ್ಗ ಸಂಘರ್ಷ’ದ ಮಾದರಿಯಲ್ಲಿಯೇ ರೈತರ ‘ವರ್ಗಕ್ಕಾಗಿ ವರ್ಗ’ ಪ್ರಜ್ಞೆಯನ್ನು, ವೈಚಾರಿಕ ಚಿಂತನೆಯನ್ನು ಹಾಗೂ ಹೋರಾಟಗಳನ್ನು ನಂಜುಂಡಸ್ವಾಮಿ ರೂಪಿಸಿದರು.

ಗಾಂಧಿ ರೂಪಿಸಿದ ‘ನಾಗರಿಕ ಅಸಹಕಾರ’, ‘ನಾಗರಿಕ ಅವಿಧೇಯತೆ’, ‘ಕರ ನಿರಾಕರಣೆ’, ಅಹಿಂಸೆ ಹಾಗೂ ಸತ್ಯಾಗ್ರಹದ ಅಸ್ತ್ರಗಳನ್ನು ನಂಜುಂಡಸ್ವಾಮಿ ಅವರು ಮರು ರೂಪಿಸಿ, ಅನುಸರಿಸಿ ಕರ್ನಾಟಕ ರಾಜ್ಯ ರೈತ ಸಂಘ ತನ್ನ ಹೋರಾಟದ ಹಾದಿಯನ್ನು ಹಿಡಿಯಲು ಪ್ರೇರಣೆಯನ್ನು ನೀಡಿದರು. ಇಂದಿಗೂ ಕೂಡ ರೈತ ಸಂಘಗಳು ಈ ತತ್ತ್ವಗಳ ಮಾರ್ಗದಲ್ಲಿ ಕ್ರಿಯಾಶೀಲವಾಗಿವೆ. ರೈತರಿಗೆ ‘ಪಂಪ್‌ಸೆಟ್‌ ತೆರಿಗೆ ಕಟ್ಟಬೇಡಿ’, ‘ವಿದ್ಯುಚ್ಛಕ್ತಿ ಬಿಲ್‌ ಕಟ್ಟಬೇಡಿ’ ಎಂದು ಎಂ.ಡಿ.ಎನ್‌. ಕೊಡುತ್ತಿದ್ದ ಕರೆ ಹಾಗೂ ರೂಪಿಸುತ್ತಿದ್ದ ಚಳವಳಿಗಳು ಸ್ವಾತಂತ್ರ್ಯ ಪೂರ್ವದಲ್ಲಿ ಗಾಂಧಿಯವರ ಕರ ನಿರಾಕರಣೆ ಚಳವಳಿಯನ್ನು ಸ್ವಾತಂತ್ಯ್ರೋತ್ತರದಲ್ಲಿ ಮತ್ತೊಮ್ಮೆ ರೂಪಿಸಿದಂತಿದ್ದವು. ಮಾರ್ಕ್ಸ್ ಅವರ ತತ್ತ್ವ ಸಿದ್ಧಾಂತಗಳಿಂದ ಸಮಾಜವಾದಿ ಹೆಜ್ಜೆಗಳನ್ನು ಸಮಾಜವಾದಿ ಹಾದಿಯಲ್ಲೇ ಮುಂದೆ ತೆಗೆದುಕೊಂಡು ಹೋಗಬೇಕು. ಅಂದರೆ ಮೊದಲನೆಯದು ಹೋರಾಟ, ಎರಡನೆಯದು ವೈಚಾರಿಕ ಸ್ಪಷ್ಟತೆ, ಮೂರನೆಯದು ಆ ಗುರಿಯನ್ನು ಸಾಧಿಸುವಂಥದು. ಇದಕ್ಕೆ ಪೂರಕವಾದ ಕಾರ್ಯಗಳನ್ನು ನಂಜುಂಡಸ್ವಾಮಿ ಅವರು ಮಾಡುತ್ತಿದ್ದರು. ರೈತರಲ್ಲಿ ಸ್ವಾಭಿಮಾನ ಜಾಗೃತಗೊಂಡು ಶೋಷಣೆಯ ವಿರುದ್ಧ ಹೋರಾಟ ಮಾಡುವ ಮೂಲಕ ಸಮಾನತೆ ಹಾಗೂ ಪರಿವರ್ತನೆಯನ್ನು ತಂದುಕೊಳ್ಳುತ್ತಾರೆ ಎಂಬುದನ್ನು ಮನಗಂಡಿದ್ದರು.

ರೈತ ಸಂಘವನ್ನು ಒಂದು ಬೇಡಿಕೆಯ ಸಂಘವನ್ನಾಗಿ ರೂಪಿಸದೇ, ಇಡೀ ಸಮಾಜದ ಸಮಗ್ರ ಬದಲಾವಣೆಗಾಗಿ ದುಡಿಯಲು ರೂಪಿಸಿದರು. ರೈತರು ಆರ್ಥಿಕವಾಗಿ, ರಾಜಕೀಯವಾಗಿ ಮತ್ತು ಸಾಮಾಜಿಕವಾಗಿ ಸಮಾನತೆಯನ್ನು ಗಳಿಸಬೇಕೆಂದು ನಂಜುಂಡಸ್ವಾಮಿ ಅವರು ಸಂಘಟನೆಯನ್ನು ಕಟ್ಟಿ ಬೆಳೆಸಿದರು. ರೈತರು ಯಾರಿಗೂ ಹೆದರದೆ, ಬಾಗದೆ ಯಾವತ್ತಿಗೂ ಸ್ವಾಭಿಮಾನದ ಉಸಿರಾಡುತ್ತಾ, ಅಧಿಕಾರಿ ವರ್ಗದವರ ಶೋಷಣೆಯ ಬಿರುದ್ಧ ಸೆಟೆದು ನಿಲ್ಲುವಂತೆ ಪ್ರೇರಣೆ ನೀಡಿದರು ಎಂದರೆ ತಪ್ಪಾಗಲಾರದು. ರೈತ ಸಂಘದಲ್ಲಿ ಎಲ್ಲರೂ ಸಮಾನರು. ಶ್ರೀಮಂತ-ಬಡವ, ಮೇಲು-ಕೀಳು ಎಂಬ ಭಾವನೆ ಬರಬಾರದು. ಸಂಘಟನೆಯಲ್ಲಿ ಬಲವಿದೆ ಎಂದು ನಂಜುಂಡಸ್ವಾಮಿ ನಂಬಿದವರು. ಸಂಘಟನೆಯಲ್ಲಿ ಯಾರೂ ದೊಡ್ಡವರಲ್ಲ, ಸಿದ್ಧಾಂತವೇ ದೊಡ್ಡದು. ಎಲ್ಲರೂ ಸಮಾನತೆಯ ಆಧಾರದ ಮೇಲೆ ದುಡಿಯಬೇಕು ಎಂಬ ತತ್ತ್ವ-ಸಿದ್ಧಾಂಥಗಳನ್ನು ರೂಪಿಸಿಕೊಂಡಿದ್ದರು.

ವಿಧಾನ ಸಭೆಯ ಶಾಸಕರಾಗಿ ಪ್ರೊ.ಎಂ.ಡಿ. ನಂಜುಂಡಸ್ವಾಮಿ

ರಾಜಕಾರಣರಹಿತವಾದ ಕರ್ನಾಟಕ ರಾಜ್ಯ ರೈತ ಸಂಘವನ್ನು ಕಟ್ಟಿದ್ದರೂ ಕೂಡ ಕಾಂಗ್ರೆಸ್‌ ಹಾಗೂ ಜನತಾ ಸರ್ಕಾರಗಳಿಂದ ರೈತರಿಗಾದ ತೊಂದರೆಗಳನ್ನು ಗಮನಿಸಿದ ನಂಜುಂಡಸ್ವಾಮಿ ಅವರು-

ಮೊದಲು ನಾವು ಹೊಸ ಕರ್ನಾಟಕವನ್ನು ಕಟ್ಟಲೇ ಬೇಕು. ನೀಚರ ಕೈಯಲ್ಲಿ ಕರ್ನಾಟಕವನ್ನು ಕೊಟ್ಟು ನಾವು ಸುಮ್ಮನೆ ಕೂರಲು ಆಗುವುದಿಲ್ಲ. ಪಕ್ಷ ಪಕ್ಷ ಯಾವುದೇ ಪಕ್ಷಗಳಿರಬಹುದು, ಹಲ್ಕಮುಂಡೇಗಂಡರ ಕೈಯಲ್ಲಿ ನಾವು ಸರ್ಕಾರ ಕೊಟ್ಟು ಸುಮ್ಮಕನೆ ಕೂರೋದೆ?”

-ಎಂಬ ಹೇಳಿಕೆಗಳು ಸಂಘದ ಕಾರ್ಯಕರ್ತರನ್ನು ಹುರಿದುಂಬಿಸಿದವು. ನಾಡಿನ ರಾಜಕಾರಣದ ಚುಕ್ಕಾಣಿ ಹಿಡಿದಿದ್ದ ಅಧಿಕಾರಶಾಹಿಗಳನ್ನು ಮಣಿಸಲು ರೈತರದೇ ಆದಂಥ ಸಂಘಟನೆ ಹಾಗೂ ರಾಜಕಾರಣದ ವೇದಿಕೆಗಳನ್ನು ನಿರ್ಮಿಸಲು ಪ್ರಯತ್ನಪಟ್ಟರು.

೧೯೮೩ರ ವಿಧಾನಸಭಾ ಚುನಾವಣೆಯ ಕರ್ನಾಟಕ ರಾಜ್ಯ ರೈತ ಸಂಘ ನೇರವಾಗಿ ಸ್ಪರ್ಧಿಸಲಿಲ್ಲ. ಮುಂದೆ ೧೯೮೫ರ ನಂತರದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಜನತಾ ಪಕ್ಷದ ಧೋರಣೆಗಳಿಗೆ ಬೇಸತ್ತು, ೧೯೮೯ರ ಚುನಾವಣೆಯಲ್ಲಿ ಸಕ್ರಿಯ ರಾಜಕಾರಣ ಪ್ರವೇಶ ಮಾಡುವುದಾಗಿ ತಿಳಿಸಿತು. ರೈತ ಸಂಘದ ಸಂಘಟನೆಯಲ್ಲಿ ಬೆನ್ನಲುಬಾಗಿದ್ದ ನಂಜುಂಡಸ್ವಾಮಿ ಅವರ ನೇತೃತ್ವದಲ್ಲಿ ‘ಕನ್ನಡ ದೇಶ’ ಪಕ್ಷ ಉದಯವಾಗಿ ಅವರು ಮುಂಬರುವ ವಿಧಾನ ಸಭೆಯ ಚುನಾವಣೆಯಲ್ಲಿ ರಾಜ್ಯದ ಎಲ್ಲಾ ಕ್ಷೇತ್ರಗಳಲ್ಲೂ ತನ್ನ ಅಭ್ಯರ್ಥಿಗಳನ್ನು ನಿಲ್ಲಿಸುವುದಾಗಿ ಹೇಳಿದರು. ಆದರೆ ಹಲವಾರು ಕಾರಣ ಹಾಗೂ ಭಿನ್ನಾಭಿಪ್ರಾಯಗಳಿಂದಾಗಿ ಕನ್ನಡ ದೇಶ ಪಕ್ಷ ತನ್ನ ಅಸ್ತಿತ್ವವನ್ನು ಕಳೆದುಕೊಂಡಿತು. ಅನಂತರದಲ್ಲಿ ೧೯೮೯ರಲ್ಲಿ ‘ರೈತ ಸಂಘ’ ಪಕ್ಷವನ್ನು ವಿಧಾನ ಸಭಾ ಚುನಾವಣೆಗೆ ಸ್ಪರ್ಧಿಸುವಂತೆ ಮಾಡಿದರು. ಚುನಾವಣೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ೧೧೧ ಸ್ಥಾನಗಳಿಗೆ ತನ್ನ ಅಭ್ಯರ್ಥಿಗಳನ್ನು ನಿಲ್ಲಿಸಿತ್ತು. ಅವರಲ್ಲಿ ೮೯ ಜನ ಅಭ್ಯರ್ಥಿಗಳು ಠೇವಣಿಯನ್ನು ಕಳೆದುಕೊಂಡರು. ಬೆಳಗಾವಿ ಹಾಗೂ ಧಾರವಾಡ ಜಿಲ್ಲೆಗಳು ಮಾತ್ರ ರೈತ ಸಂಘದ ಅಭ್ಯರ್ಥಿಗಳನ್ನು ಗೆಲ್ಲಿಸಿ ವಿಧಾನ ಸಭೆಗೆ ಕಳುಹಿಸಿದ ಕೀರ್ತಿಗೆ ಪಾತ್ರವಾದವು.

ಧಾರವಾಡ ಹಾಗೂ ಬೆಳಗಾವಿ ಕ್ಷೇತ್ರಗಳಿಂದ ಪಾಟೀಲ್‌ ಬಾಬಾಗೌಡ ರುದ್ರಗೌಡರು ಸ್ಪರ್ಧಿಸಿ ಆಯ್ಕೆಯಾಗಿದ್ದರು. ಆನಂತರ ಅವರು ಧಾರವಾಡ ಗ್ರಾಮಾಂತರ ಕ್ಷೇತ್ರಕ್ಕೆ ರಾಜೀನಾಮೆ ನೀಡಿದ್ದರಿಂದ ಆ ಸ್ಥಾನಕ್ಕೆ ನಡೆದ ಉಪಚುನಾವಣೇಯಲ್ಲಿ ನಂಜುಂಡಸ್ವಾಮಿ ಅವರು ಆಯ್ಕೆಯಾದರು. ಧಾರವಾಡ ಗ್ರಾಮಾಂತರ ಕ್ಷೇತ್ರದ ವಿಧಾನ ಸಭಾ ಶಾಸಕರಾಗಿ ಹಾಗೂ ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷರಾಗಿದ್ದುಕೊಂಡು ಸುಧಾರಣೆಗಳನ್ನು ತರಲು ಪ್ರಯತ್ನಿಸಿದರು. ಬರಗಾಲ, ರೈತರ ಲೂಟಿ, ಕೈಗಾರಿಕೆಗಳ ಖಾಸಗೀಕರಣ, ವಿದ್ಯುಚ್ಛಕ್ತಿ, ನಗರಗಳ ಬೆಳವಣಿಗೆ , ನೈಸರ್ಗಿಕ ಸಂಪತ್ತಿನ ರಾಷ್ಟ್ರೀಕರಣ, ಜಲವಿವಾದ, ನೀರಾವರಿ ಯೋಜನೆ, ಡಂಕಲ್‌ ಪ್ರಸ್ತಾವನೆಯ ಪರಿಣಾಮಗಳು ಹಾಗೂ ವೈಜ್ಞಾನಿಕ ಬೆಲೆಗೆ ಸಂಬಂಧಿಸಿದಂತೆ ವಿಧಾನ ಸಭೆಯ ಭಾಷಣಗಳಲ್ಲಿ ತಮ್ಮ ಚಿಂತನೆಗಳನ್ನು ಮಂಡಿಸಿದರು. ಹಲವು ಬಗೆಯ ಚಳವಳಿಗಳನ್ನು ನಡೆಸುವ ಮುಖೇನ ಬದಲಾವಣೆಗಳನ್ನು ತರಲು ಪ್ರಯತ್ನಿಸಿದರು.

ಅಲ್ಲದೆ ೧೯೮೯ರಿಂದ ೧೯೯೪ರವರೆಗೆ ಅಧಿಕಾರದಲ್ಲಿದ್ದ ಕಾಂಗ್ರೇಸ್‌ ಸರಕಾರ, ರೈತರ ಬಾಕಿಯ ಬಲವಂತ ವಸೂಲಿಯನ್ನು ಪೂರ್ಣವಾಗಿ ನಿಲ್ಲಿಸಿದ್ದು, ತುಂಡುಭೂಮಿ ಕಾಯಿದೆ ರದ್ದು ಮಾಡಿದ್ದು, ಬಗರ್ ಹುಕುಂ ಸಾಗುವಳಿ ಸಕ್ರಮ ಮಾಡುವ ಕಾನೂನು ರಚಿಸಿದ್ದು, ಆಶ್ರಯ ಯೋಜನೆ ಜಾರಿಗೆ ತಂದದ್ದು, ಉಚಿತ ವಿದ್ಯುಚ್ಛಕ್ತಿ ಸೌಲಭ್ಯ ಒದಗಿಸಿದ್ದು, ೧೦,೦೦೦ ರೂಪಾಯಿಗಳವರೆಗಿನ ಸಾಲ ರದ್ದು ಮಾಡಿದ್ದು, ಬಡ್ಡಿ, ಸುಸ್ತಿ ಬಡ್ಡಿ ರದ್ದು ಮಾಡಿದ್ದು, ಹಿಂದಿನ ಜನತಾದಳ ಸರ್ಕಾರ ಸಹಕಾರ ಕಾಯಿದೆಗೆ ತಂದಿದ್ದ ೧೦೧(ಸಿ) ತಿದ್ದುಪಡಿ ರದ್ದು ಮಾಡಿದ್ದು, ಇದರ ಜೊತೆಗೆ, ಯಾವುದೇ ಜಿಲ್ಲೆಯ, ಯಾವುದೇ ರೈತ ಕಾರ್ಯಕರ್ತನ ವೈಯಕ್ತಿಕ ಸಮಸ್ಯೆಗಳನ್ನು, ಜರೂರಾಗಿ ಬಗೆಹರಿಸುವ ಕೆಲಸವನ್ನು ಕಾಂಗ್ರೆಸ್‌ ಸರ್ಕಾರ ಮಾಡುವುದರ ಹಿಂದೆ ನಂಜುಂಡಸ್ವಾಮಿಯವರ ಪರಿಶ್ರಮವನ್ನು ಗಮನಿಸಬಹುದು.

ಹೋರಾಟಗಳು ಹಾಗೂ ನಂಜುಂಡಸ್ವಾಮಿ

ನಂಜುಂಡಸ್ವಾಮಿ ಅವರು ತಮ್ಮ ಸಂಪೂರ್ಣ ಜೀವನವನ್ನು ರೈತಪರ ಹೋರಾಟಗಳಿಗಾಗಿ ಮುಡುಪಾಗಿಟ್ಟರು. ರೈತರಿಗೆ ಆಗುತ್ತಿದ್ದ ಶೋಷಣೆಗಳ ವಿರುದ್ಧ ಸದಾ ಜಾಗೃತ ರಾಗಿರುತ್ತಿದ್ದರು. ಅವರು ನಡೆಸಿರುವ ಹೋರಾಟಗಳು ಗಾಂಧಿಯವರ ಹೋರಾಟದ ಮಾರ್ಗಗಳನ್ನೇ ನೆನಪಿಗೆ ತರುತ್ತವೆ. ಅಸಹಕಾರ, ಉಪವಾಸ, ಸತ್ಯಾಗ್ರಹ, ಮೌನ ಪ್ರತಿಭಟನೆ , ಸಪ್ಪಳ ಪ್ರತಿಭಟನೆಗಳಿಂದ ಹಿಡಿದು ತೀವ್ರತರವಾದ ಚಳವಳಿಗಳನ್ನು ನಡೆಸಿದರು. ಅವುಗಳಲ್ಲಿ ಕೆಲವನ್ನು ಇಲ್ಲಿ ಉದ್ಧರಿಸಬಹುದು.

ಲೆವಿ ವಿರೋಧಿ ಚಳವಳಿ

ನಂಜುಂಡಸ್ವಾಮಿ ಅವರು ಮೊದಲಿಗೆ ಕೈಗೆತ್ತುಕೊಂಡ ಚಳವಳಿ ಲೆವಿ ವಿರೋಧಿ ಚಳವಳಿಯಾಗಿತ್ತು. ಆಹಾರ ಧಾನ್ಯ ಸಂಗ್ರಹಣೆಯ ಕಾರ್ಯಕ್ರಮವಾಗಿ ಸರ್ಕಾರ ಪ್ರತಿ ಸುಗ್ಗಿಯಲ್ಲಿಯೂ ತಾಲ್ಲೂಕು ಜಿಲ್ಲೆಯಾದ್ಯಂತ ದಾರಿ-ದಾರಿಗಳಲ್ಲಿ ‘ಲೆವಿ’ಗೇಟುಗಳನ್ನು ನಿರ್ಮಿಸುತ್ತಿದ್ದರು. ರೈತರಿಗೆ ತಿಳಿಯದಂತೆ ಅದು ಅಧಿಕಾರಿಗಳಿಗೆ ಲಂಚದ ಸುಗ್ಗಿಯಾಗಿತ್ತು. ಸುಗ್ಗೀ ಕಾಲದಲ್ಲಿ ಈ ರೀತಿ ‘ಲೆವಿ’ ಗೇಟು ನಿರ್ಮಿಸುವುದರಿಂದ ರೈತರ ಧಾನ್ಯಕ್ಕೆ ಒಟ್ಟಾರೆ ಧಾರಣೆ ಕಡಿಮೆಯಾಗುತ್ತಿತ್ತು. ರೈತರು ಮಾರಾಟ ಮಾಡಲು ತೆಗೆದುಕೊಂಡು ಹೋಗುತ್ತಿದ್ದ ಬೆಳೆಯಲ್ಲಿ ಹತ್ತನೇ ಒಂದು ಭಾಗವನ್ನು ಮಾರುಕಟ್ಟೆ ಬೆಲೆಗಿಂತ ಕಡಿಮೆ ಬೆಲೆಗೆ ಸರ್ಕಾರಕ್ಕೆ ಮಾರಬೇಕಾಗಿತ್ತು.

ಲೆವಿ ಹಾಗೂ ಬೆಟರ್ ಮೆಂಟ್‌ ಚಾರ್ಜ್‌ಗೆ ವಿರುದ್ಧವಾಗಿ ಹಳ್ಳಿ ಹಳ್ಳಿಗಳಲ್ಲಿ ರೈತರನ್ನು ಸಂಘಟಿಸಿದರು. ಸಂವಿಧಾನದಲ್ಲಿ ರೈತ ತಾನು ಬೆಳೆದ ಬೆಳೆಯನ್ನು ಯಾರಿಗಾದರೂ ಮಾರಾಟ ಮಾಡಬಹುದು. ಲೆವಿ ಕಾನೂನಿಗೆ ವಿರುದ್ಧ ಎಂದು ಹೇಳಿ ಗೇಟ್‌ಗಳನ್ನು ನೂರಾರು ಜನರು ಸೇರಿ ಮುರಿದು ಹಾಕುವಂತೆ ಮಾಡಿದರು. ಲೆವಿ ಕೊಡಲು ನಿರಾಕರಿಸುವುದರ ಮೂಲಕ ಲೆವಿ ಚೀಟಿಗಳನ್ನು ಸುಡುವ ಕಾರ್ಯಕ್ರಮಗಳನ್ನು ಹಾಕಿಕೊಂಡರು. ಇದರಲ್ಲಿ ನಂಜುಂಡಸ್ವಾಮಿ ಅವರ ಜೊತೆಗೆ ತೇಜಸ್ವಿ, ಸುಂದರೇಶ್‌, ಕಡಿದಾಳು ಶಾಮಣ್ಣ ಎಲ್ಲರೂ ಭಾಗವಹಿಸಿದ್ದರು. ಲೆವಿ ಚೀಟಿ ಸುಡುವ ಕಾರ್ಯಕ್ರಮ ಪ್ರತಿಭಟನೆಯಾಗಿ ಮಾರ್ಪಟ್ಟು ಮೂಡಿಗೆರೆ, ತೀರ್ಥಹಳ್ಳಿ, ಆಗುಂಬೆ, ಹೊಳೆ ಹೊನ್ನೂರುಗಳಲ್ಲಿ ತೀವ್ರ ಪ್ರತಿರೋಧ ವ್ಯಕ್ತವಾಗಿ ನಂತರ ಕರ್ನಾಟಕದಾದ್ಯಂತ ಲೆವಿ ನೀತಿಗೆ ವಿರುದ್ಧವಾಗಿ ಹೋರಾಟಗಳು ಆರಂಭವಾದವು.

ರೈತರ ಮನೆ ಜಪ್ತಿ ವಿರುದ್ಧ ನಡೆಸಿದ ಚಳವಳಿ

ಕೃಷಿಗೆ ಕೊಟ್ಟ ಸಹಕಾರಿ ಹಾಗೂ ವಾಣಿಜ್ಯ ಬ್ಯಾಂಕ್‌ಗಳ ಸಾಲವನ್ನು ಮನ್ನಾ ಮಾಡುವುದಾಗಿ ಭರವಸೆ ನೀಡಿದ್ದ ಜನತಾ ಸರ್ಕಾರ, ಅನಂತರದಲ್ಲಿ ಸಾಲ ಕಟ್ಟದ ರೈತರ ಆಸ್ತಿ, ಮನೆ ಜಪ್ತಿ ಹಾಗೂ ಹರಾಜಿಗೆ ಮುಕ್ತ ಪರವಾನಗಿ ನೀಡಿತು. ಈ ಕ್ರಮವನ್ನು ವಿರೋಧಿಸಿ ರೈತರು ಅಧಿಕರಿಗಳ ವಿರುದ್ಧ ತಿರುಗಿ ಬಿದ್ದರು. ಅದೇನೇ ಆದರೂ ಸಾಲ ಕಟ್ಟಬಾರದು. ಜೊತೆಗೆ ಸಾಲಮನ್ನಾ ಇತ್ಯರ್ಥವಾಗುವವರೆಗೂ ಕಂದಾಯವನ್ನು ಕಟ್ಟಬಾರದು ಎಂದು ನಿಶ್ಚಯಿಸಿದರು. ಈ ಮಧ್ಯೆ ರೈತ ಸಂಘದ ವತಿಯಿಂದ ನಂಜುಂಡಸ್ವಾಮಿ ಅವರ ಸಲಹೆಯ ಮೇರೆಗೆ ರೈತರ ಮನೆ ಜಪ್ತಿ ತಡೆಗಾಗಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿ ತಡೆಯಾಜ್ಞೆ ತಂದರು. ಇಲ್ಲಿ ವಕೀಲರಾದ ಶಾಂತರಾಜ್‌, ರವಿವರ್ಮಕುಮಾರ್ ಹಾಗೂ ಎಸ್‌.ಆರ್.ನಾಯಕ್‌ ಅವರ ಪಾತ್ರ ಗಮನಾರ್ಹವಾದದ್ದು.

ರೈತರ ತೀವ್ರ ಪ್ರತಿರೋಧದ ನಡುವೆಯೂ ಜಪ್ತಿ ಕಾರ್ಯ ಹಾಗೆಯೇ ಮುಂದುವರೆಯಿತು. ಹೀಗೆ ಜನತಾ ಸರ್ಕಾರಕ್ಕೆ ವಿರುದ್ಧವಾಗಿ ರಾಜ್ಯದ ರೈತರು ಬೃಹತ್‌ ಪ್ರದರ್ಶನ ವೊಂದನ್ನು ಅಕ್ಟೋಬರ್ ೨, ೧೯೮೨ರ ಗಾಂಧಿ ಜಯಂತಿಯ ದಿನ ಬೆಂಗಳೂರಿನಲ್ಲಿ ಏರ್ಪಡಿಸಿದರು. ಅನಂತರದಲ್ಲಿ ಜಪ್ತಿ ನಿಲ್ಲದೆ ಇದ್ದಾಗ ರೈತರು ಪಿಕೆಟಿಂಗ್‌ ಮಾಡಲು ನಂಜುಂಡಸ್ವಾಮಿ ಅವರು ಕರೆಕೊಟ್ಟರು. ಎನ್‌.ಡಿ. ಸುಂದರೇಶ್‌ ಹಾಗೂ ಇತರೆ ಮೂವತ್ತು ಮಂದಿ ರೈತರನ್ನು ದಸ್ತಗಿರಿ ಮಾಡಿ ಶಿವಮೊಗ್ಗ ಜೈಲಿನಲ್ಲಿ ಇಡಲಾಗಿತ್ತು. ರೈತರ ಆಸ್ತಿ ಜಪ್ತಿ ಮಾಡುವಂಥ ೧೦೧ (ಸಿ) ಕಾನೂನನ್ನು ವಿರೋಧಿಸಿ ೧೯೮೫ ರ ಅಕ್ಟೋಬರ್ ೨ ರಿಂದ ನವೆಂಬರ್ ೧ ರವರೆಗೆ ರಾಜ್ಯದೆಲ್ಲೆಡೆಯಿಂದ ಲಕ್ಷಾಂತರ ರೈತರು ಪಾದಯಾತ್ರೆಯನ್ನು ಹಮ್ಮಿಕೊಂಡರು.

ಸರ್ಕಾರಿ ನೌಕರರ ಲಂಚದ ಅಸ್ತಿಯ ಮರುಜಪ್ತಿ ಚಳವಳಿ

ರೈತರ ಆಸ್ತಿಯ ಜಪ್ತಿಗೆ ಪ್ರತಿಕ್ರಿಯೆಆಗಿ ರೈತ ಸಂಘದವರು ಆರಂಭಿಸಿದ ಹೊಸ ಬಗೆಯ ಚಳವಳಿ ಇದಾಗಿದೆ. ನಂಜುಂಡಸ್ವಾಮಿ ಅವರು ರೈತರಿಗೆ ಸ್ಥೈರ್ಯ ತುಂಬುವ ಸಲುವಾಗಿ ಈ ಬಗೆಯ ಚಳವಳಿಯನ್ನು ಹಮ್ಮಿಕೊಂಡರು. ರೈತರ ಆಸ್ತಿಯ ಜಪ್ತಿಯನ್ನು ಅಮಾನವೀಯವಾಗಿ ಮಾಡುತ್ತಿದ್ದ ಅಧಿಕಾರಿಗಳ ವಿರುದ್ಧ ೧೯೮೨ ರಲ್ಲಿ ಹುಟ್ಟಿಕೊಂಡದ್ದೇ ‘ಮರುಜಪ್ತಿ ಚಳವಳಿ’. ಅಧಿಕಾರಿಗಳು ರೈತರ ಮನೆಯಿಂಧ ವಸ್ತುಗಳನ್ನು ಜಪ್ತಿ ಮಾಡಿಕೊಂಡು ಹೋಗಿದ್ದಕ್ಕೆ ವಿರುದ್ಧವಾಗಿ ಅವನ್ನು ಮರುಜಪ್ತಿ ಮಾಡಿ ಅದೇ ರೈತನ ಮನೆಗೆ ತಲುಪಿಸುವ ಕಾರ್ಯವನ್ನು ರೈತ ಸಂಘ ಹಮ್ಮಿಕೊಂಡಿತು. ಮೊಟ್ಟ ಮೊದಲ ಮರು ಜಪ್ತಿ ಕಾರ್ಯಕ್ರಮ ನಡೆದದ್ದು ಮಾರ್ಚ್ ೮, ೧೯೮೨ ರ ಭದ್ರಾವತಿ ತಾಲ್ಲೂಕಿನ ಮಲ್ಲಾಪುರ ಗ್ರಾಮದಲ್ಲಿ. ಈ ಕಾರ್ಯಕ್ರಮದಲ್ಲಿ ಎಚ್‌.ಎಸ್‌.ರುದ್ರಪ್ಪ, ಎನ್‌.ಡಿ. ಸುಂದರೇಶ್‌ ಹಾಗೂ ನಂಜುಂಡಸ್ವಾಮಿ ಅವರು ಭಾಗವಹಿಸಿದ್ದರು.

ಮದ್ಯಪಾನ ನಿಷೇಧ ಕುರಿತ ಹೋರಾಟ

ಎರಡು ವಿಭಿನ್ನ ಕಾಲಘಟ್ಟಗಳಲ್ಲಿ ಮದ್ಯಪಾನ ನಿಷೇಧ ಹೋರಾಟಗಳು ನಡೆದಿರುವುದನ್ನು ಕಾಣಬಹುದು. ಮೊದಲನೆಯ ಅವಧಿಯನ್ನು ೧೯೮೦-೮೬ ಎಂದು, ಹಾಗೂ ೧೯೯೦ರ ನಂತರದ ಅವಧಿಯನ್ನು ಎರಡನೆಯದಾಗಿ ಗುರುತಿಸಬಹುದು. ಶಿವಮೊಗ್ಗ ಹಾಗೂ ಹಾಸನ ಜಿಲ್ಲೆಗಳಲ್ಲಿ ಹೊಸ ಸಾರಾಯಿ ಅಂಗಡಿಗಳನ್ನು ತೆಗೆಯುವ ಸಂದರ್ಭದಲ್ಲಿ ಮಹಿಳೆಯರ ನೇತೃತ್ವದಲ್ಲಿ ಹೋರಾಟ ಕೈಗೊಂಡು ಕೊನೆಗೆ ಅವುಗಳನ್ನು ಮುಚ್ಚಿಸಿದ್ದರು. ೧೯೮೨ರಲ್ಲಿ ಹಾಸನದಲ್ಲಿಯೂ ಇಂಥ ಘಟನೆಗಳು ಸಂಭವಿಸಿದವು. ೧೯೮೨ ಹಾಗೂ ೧೯೮೩ರಲ್ಲಿ ಹಾಸನ ಜಿಲ್ಲೆಯ ಏಳುಮಾಲಹಳ್ಳಿ ಮತ್ತು ಏರಿಕೇರಿಗಳಲ್ಲಿ ಹೆಂಡದಂಗಡಿಗಳ ಹರಾಜನ್ನು ರೈತರು ತಡೆದರು. ೧೯೮೨ರಲ್ಲಿ ಶಿವಮೊಗ್ಗದಲ್ಲಿ ಮದ್ಯ ಉದ್ದಿಮೆಯೊಂದಕ್ಕೆ ಸರಬರಾಜು ಆಗುತ್ತಿದ್ದ ನೀರನ್ನು ನಿಲ್ಲಿಸಿದ ಘಟನೆಗಳೂ ಇವೆ.

೧೯೯೦ರ ನಂತರ ನಂಜುಂಡಸ್ವಾಮಿ ಅವರು ಸಂಪೂರ್ಣ ಮದ್ಯಪಾನ ನಿಷೇಧಕ್ಕೆ ಕರೆ ನೀಡಿದರು. ಈ ಹೋರಾಟ ಧಾರವಾಡ, ಶಿವಮೊಗ್ಗ ಹಾಗೂ ಬೆಳಗಾವಿ ಜಿಲ್ಲೆಗಳಿಗೆ ಹಬ್ಬಿತು. ಶಿವಮೊಗ್ಗದ ಅಲ್ಲಾಪುರ, ಉದಿಕೆರೆ, ಬಾಬಕೆರೆ ಮುಂತಾದ ೩೬ ಪ್ರದೇಶಗಳಲ್ಲಿ ಸಂಪೂರ್ಣವಾಗಿ ಮದ್ಯಪಾನ ನಿಷೇಧ ಜಾರಿಗೆ ತರುವಲ್ಲಿ ರೈತ ಸಂಘದ ಮೂಲಕ ಯಶಸ್ವಿಯಾಗಿದ್ದರು. ವಿವಿಧ ಹಳ್ಳಿಗಳಲ್ಲಿ ದೀರ್ಘ ಪಾದಯಾತ್ರೆ ಮೂಲಕ, ಹೆಂಡದಂಗಡಿಗಳನ್ನು ಮುಚ್ಚಿಸುವ ಮೂಲಕ ಪ್ರತಿಭಟನೆಗಳನ್ನು (ಉದಾಹರಣೆ:೧೯೯೩ರಲ್ಲಿ ತೀರ್ಥಹಳ್ಳಿ ಘಟನೆ) ನಡೆಸಿದರು. ಅದೇ ವರ್ಷ ಶಿವಮೊಗ್ಗ ಜಿಲ್ಲೆಯ ಮಲ್ಲಿಗೆಕಟ್ಟೆಯಲ್ಲಿ, ೧೯೯೪ರಲ್ಲಿ ನಾಗಸಮುದ್ರದಲ್ಲಿ ಸಾರಾಯಿ ವ್ಯಾಪಾರವನ್ನು ಹರಾಜು ಮಾಡುವುದನ್ನು ವಿರೋಧಿಸಲಾಯಿತು. ಹಾಗೆಯೇ ಅದರ ಮಾರಾಟವನ್ನು ನಿಲ್ಲಿಸಿ, ಅಲ್ಲಿದ್ದ ಹೆಂಡದ ಪಾತ್ರೆಗಳಿಗೆ ಬೆಂಕಿ ಹಚ್ಚಿದರು. ಹೆಂಡದ ವಾಹನಗಳೂ ಸುಟ್ಟುಹೋದವು. ಮಹಿಳೆಯರ ನೇತೃತ್ವದಲ್ಲಿ ನಡೆದ ಈ ಚಳವಳಿಯಲ್ಲಿ ಸ್ಥಳೀಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳೂ ಭಾಗವಹಿಸಿದ್ದರು ಎನ್ನುವುದು ಗಮನಾರ್ಹವಾದ ಸಂಗತಿಯಾಗಿದೆ.

ಪ್ರಾಕೃತಿಕ ಸಂಪನ್ಮೂಲಗಳನ್ನು ಆಯಾ ಗ್ರಾಮಗಳಲ್ಲೇ ಮೀಸಲಿಡುವ ಚಳವಳಿ

ಗ್ರಾಮ ಸ್ವರಾಜ್ಯಕ್ಕೆ ಸಂಬಂಧಿಸಿದಂತೆ ಪ್ರಾಕೃತಿಕ ಸಂಪನ್ಮೂಲಗಳನ್ನು ಆಯಾ ಗ್ರಾಮಗಳಲ್ಲೇ ಮೀಸಲಿಡುವ ಚಳವಳಿಯನ್ನು ರೈತಸಂಘದ ಮುಖೇನ ನಂಜುಂಡಸ್ವಾಮಿ ಆರಂಭಿಸಿದರು. ಗ್ರಾಮಗಳಲ್ಲಿರುವ ಸಂಪನ್ಮೂಲಗಳನ್ನು ಅಲ್ಲಿನ ಜನರಿಗಾಗಿಯೇ ಉಪಯೋಗಿಸಬೇಕು ಹಾಗೂ ಅದರಿಂದ ಬರುವ ಲಾಭಗಳನ್ನು ಆಯಾ ಹಳ್ಳಿಯ ಅಭ್ಯುದಯ , ಅಭಿವೃದ್ಧಿಗಾಗಿ ಬಳಸಿಕೊಳ್ಳಬೇಕೆಂದು ತಿಳಿಸಿದರು. ಈ ಚಳವಗಳಿಯು ಗ್ರಾನೈಟ್‌ಗೆ ಸಂಬಂಧಿಸಿದ ಪ್ರಕರಣಗಳಿಗೆ ಮಾತ್ರ ಮೀಸಲಾಗಿದ್ದವು. ಇದರ ಪರಿಣಾಮವಾಗಿ ೧೯೮೨ರಲ್ಲಿ ಮಳವಳ್ಳಿ, ಮದ್ದೂರು, ರಾಮನಗರ, ಚನ್ನಪಟ್ಟಣ, ದೊಡ್ಡ ಆಲಹಳ್ಳಿ, ಸಾತನೂರು, ಕೋಡಿಹಳ್ಳಿ, ಉಯ್ಯಂಬಳಿ ಹೋಬಳಿಗಳಲ್ಲಿ ಗ್ರಾನೈಟ್‌ ಕಲ್ಲು ಗಣಿಗಾರಿಕೆ ವಿರುದ್ಧದ ಹೋರಾಟಗಳು ಆರಂಭವಾದವು. ಸರ್ಕಾರಿ ಜಮೀನಿನಲ್ಲಿದ್ದರೂ ಗ್ರಾನೈಟ್‌ ನಿಕ್ಷೇಪ ಹಳ್ಳಿಗಳ ಒಡೆತನಕ್ಕೆ ಸೇರಿದ್ದೆಂದು ಜನರಲ್ಲಿ ಅರಿವು ಮೂಡಿಸಿದ ಪ್ರೊಫೆಸರ್ ಆ ಸಂಪನ್ಮೂಲದ ರಾಯಧನ ಹಳ್ಳಿಗಳಿಗೆ ಸೇರಬೇಕೆಂದು ಹೋರಾಟ ನಡೆಸಿದರು. ಗ್ರಾನೈಟ್‌ ತುಂಬಿದ ಲಾರಿಗಳನ್ನು ತಡೆಹಿಡಿದು, ಅವುಗಳನ್ನು ಸ್ಥಳದಲ್ಲೇ ರಾಶಿ ಹಾಕಿದ ಕಾರಣಕ್ಕಾಗಿ ಸುಮಾರು ೧,೩೦೦ ರೈತರು ನ್ಯಾಯಾಂಗ ಬಂಧನಕ್ಕೊಳಗಾದರು. ಈ ಹೋರಾಟದಲ್ಲಿ ಹೆಚ್ಚಾಗಿ ಯುವಕರೇ ಭಾಗವಹಿಸಿದ್ದರು. ಈ ಹಿನ್ನೆಲೆಯಲ್ಲಿ ೧೯೯೦ರ ದಶಕದಲ್ಲಿ ಸರ್ಕಾರ ತಜ್ಞರ ಸಮಿತಿಯೊಂದನ್ನು ನೇಮಕ ಮಾಡಿ ಆಕ್ರಮವಾಗಿ ಕಂಟ್ಯ್ರಾಕ್ಟರುಗಳಿಗೆ ಲೈಸೆನ್ಸ್‌ ನೀಡಿ ಪರಿಸರವನ್ನು ಹಾಗೂ ಪ್ರಾಕೃತಿಕ ಸಂಪನ್ಮೂಲಗಳನ್ನು ಲೂಟಿ ಮಾಡಿರುವ ಆಪಾದನೆಯನ್ನು ಪರಿಶೀಲಿಸಲು ಕೇಳಿಕೊಂಡಿತು. ೧೯೯೧ರ ‘ರಸ್ತೆ ರೋಕೋ’ ಸಂದರ್ಭದಲ್ಲಿ ಪ್ರಾಕೃತಿಕ ಸಂಪನ್ಮೂಲಗಳನ್ನು ಹಳ್ಳಿಗಳ ಆಸ್ತಿಯೆಂದು ನಂಜುಂಡಸ್ವಮಿ ಅವರು ಘೋಷಿಸಿದರು. ಈ ಮೂಲಕ ಗ್ರಾಮ ಸ್ವರಾಜ್ಯದ ಕಲ್ಪನೆಯನ್ನು ರೈತರ ಮುಂದಿಡಲು ನಂಜುಂಡಸ್ವಾಮಿ ಅವರು ಅವಿರತವಾಗಿ ಶ್ರಮಿಸಿದರು.

೧೯೮೨ರ ಕರ್ನಾಟಕದ ಮೊಟ್ಟ ಮೊದಲ ರೈತ ಸಮಾವೇಶ

ಕರ್ನಾಟಕ ರಾಜ್ಯ ರೈತ ಸಂಘದ ಹೋರಾಟ ಸಮಿತಿಯ ಸಂಚಾಲಕರಾಗಿ ನಂಜುಂಡಸ್ವಾಮಿ ಅವರು ರಾಜ್ಯದಾದ್ಯಂತ ರೈತರನ್ನು ಸಂಘಟನೆ ಮಾಡಲು ಪ್ರಯತ್ನಿಸಿದರು. ಈ ಬಗೆಯಲ್ಲಿ ಅದನ್ನು ಐತಿಹಾಸಿಕ ರ್ಯಾಲಿಯೆಂದೇ ಗುರುತಿಸಲಾಗಿದೆ. ಅದು ಕರ್ನಾಟಕದ ಮೊಟ್ಟ ಮೊದಲ ಬೃಹತ್‌ ರೈತ ಸಮಾವೇಶ ಆಗಿತ್ತು. ಸಮಾವೇಶದಲ್ಲಿ ರೈತ ಸಂಘದ ಆಶೋತ್ತರಗಳನ್ನು ಬಿಂಬಿಸಿ ಸುಮಾರು ಹತ್ತು ಲಕ್ಷಕ್ಕೂ ಹೆಚ್ಚು ಜನ ೧೯೮೨ ಅಕ್ಟೋಬರ್ ೨ ರಂದು ‘ಹೊಸ ಕರ್ನಾಟಕ ಕಟ್ಟಲು’ ಎಂಬ ಘೋಷಣೆಯೊಂದಿಗೆ ಪ್ರತಿಜ್ಞೆ ಮಾಡಿದರು. ೩೫,೦೦೦ ಜನರನ್ನು ಈ ಸಮಾವೇಶದಲ್ಲಿ ಬಂಧಿಸಲಾಗಿತ್ತು. ಕರ್ನಾಟಕದ ಎಲ್ಲಾ ಜೈಲುಗಳೂ ಭರ್ತಿಯಾಗಿ ೧೯೪೨ರ ‘ಕ್ವಿಟ್‌ ಇಂಡಿಯಾ ಚಳವಳಿ’ಯಲ್ಲೂ ಆಗದಂಥ ಹೋರಾಟದ ಕೀರ್ತಿ ಲಭಿಸಿತು. ಹೊಸ ಕರ್ನಾಟಕ ಕಟ್ಟಲು ಅಂದರೆ ಗ್ರಾಮೀಣ ಪ್ರದೇಶದ ಬಡವರ ಹಾಗೂ ರೈತರ ಆಶೋತ್ತರಗಳನ್ನು ಪ್ರತಿನಿಧಿಸುವ ಸರ್ಕಾರವನ್ನು ರಚಿಸುವುದು ಎಂದರ್ಥ. ಪರಿಣಾಮವಾಗಿ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಪಕ್ಷಾತೀತವಾದ ಮತದಾರರ ವೇದಿಕೆಯನ್ನು ಸ್ಥಾಪಿಸಬೇಕೆಂಬ ಉದ್ದೇಶವನ್ನಿಟ್ಟುಕೊಂಡು ಈ ಸಮಾವೇಶವನ್ನು ನಡೆಸಲಾಯಿತು.

೧೯೮೪ರ ರೈಲು ಮತ್ತು ರಸ್ತೆ ತಡೆ ಚಳವಳಿ

ಜನತಾ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ರೈತರ ಮೇಲಿನ ಚಳವಳಿ ಮೊಕದ್ದಮೆಗಳನ್ನು ಅಲ್ಲಲ್ಲಿ ವಾಪಸ್ಸು ತೆಗೆದುಕೊಂಡಿತು. ಬಡ್ಡಿ ಹಾಗೂ ಸುಸ್ತಿ ಬಡ್ಡಿಯನ್ನು ಮಾತ್ರ ರದ್ದು ಮಾಡಿತು. ರೈತರು ಈ ಆಮಿಷಕ್ಕೊಳಗಾಗಿ, ಜಮೀನು ವಿಲೇವಾರಿ ಮಾಡಿ ಇನ್ನೂ ಹೆಚ್ಚಿನ ಕಷ್ಟಕ್ಕೆ ಸಿಲುಕುವಂಥ ನಯವಂಚನೆಯ ಕೆಲಸವನ್ನು ಮಾಡಿತು. ಬೆಳೆಗಳಿಗೆ ಸೂಕ್ತ ಬೆಲೆಗಳನ್ನು ಗೊತ್ತು ಮಾಡುವಿಕೆಯಲ್ಲಿಯೂ ರೈತರಿಗೆ ವಂಚನೆ ಮಾಡುತ್ತಿತ್ತು. ರಾಜಕೀಯ ಉದ್ದೇಶಕ್ಕಾಗಿಯೇ ನಡೆದ ಚಳವಳಿ ಇದಾಗಿತ್ತು. ಈ ಚಳವಳಿಯಲ್ಲಿ ಮುಖ್ಯವಾಗಿ ಕೇಂದ್ರ ಸರ್ಕಾರ ಆರ್ಥಿಕ ಕೃಷಿ ನೀತಿಗಳನ್ನು ವಿರೋಧಿಸುವ ವಿಚಾರಗಳಿದ್ದರೂ, ಅಂತಿಮವಾಗಿ ರೈತ ಸಂಘವು ರಾಜ್ಯ ಸರ್ಕಾರದೊಡನೆಯೇ ಕಾದಾಡಲು ಆರಂಭಿಸಿದ್ದು ಗಮನಾರ್ಹ. ೧೯೮೪ ಜನವರಿ ೨೬ರ ಗಣರಾಜ್ಯೋತ್ಸವ ದಿನದಂದು ರಾಜ್ಯದ ವಿವಿಧೆಡೆಗಳಲ್ಲಿ ರಸ್ತೆ ಹಾಗೂ ರೈಲು ಮಾರ್ಗಗಳಲ್ಲಿ ಸಂಚಾರ ನಡೆಯದಂತೆ ತಡೆಯಲಾಯಿತು. ರೈತರ ಸಮಸ್ಯೆಗಳನ್ನು ಬಗೆಹರಿಸದ ಅನವಶ್ಯಕ ಕೆಲಸಗಳನ್ನು ಮಾಡುತ್ತಿದ್ದ ಸರ್ಕಾರವನ್ನು ಕೆಳಗಿಳಿಸುವ ಕಾರ್ಯಕ್ರಮ ಇದಾಗಿತ್ತು. ಈ ಅಸಹಕಾರ ಚಳವಳಿಯಲ್ಲಿ ೩೭,೭೨೫ ರೈತರು ಬಂಧನಕ್ಕೊಳಗಾದರು. ಬೆಂಗಳೂರು, ಮೈಸೂರು, ಅರಸೀಕೆರೆ, ಹುಬ್ಬಳ್ಳಿ, ಧಾರವಾಡ ಮುಂತಾದೆಡೆಗಳಲ್ಲಿ ರೈಲನ್ನು ನಿಲ್ಲಿಸಿದ ಘಟನೆಗಳು ಜರುಗಿದವು.

ಸೋಷಿಯಲ್ಫಾರೆಸ್ಟ್ರಿಯ ವಿರುದ್ಧ ಚಳವಳಿ

ಐದನೆಯ ಪಂಚವಾರ್ಷಿಕ ಯೋಜನೆಯಲ್ಲಿ ಸೋಷಿಯಲ್‌ ಫಾರೆಸ್ಟ್ರಿಯನ್ನು ಗ್ರಾಮೀಣ ಜನರ ಹಾಗೂ ಗ್ರಾಮೀಣ ಉದ್ದಿಮೆಗಳ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಕಾರ್ಯರೂಪಕ್ಕೆ ತರಲಾಯಿತು. ಏಕರೂಪದ ಸಸ್ಯ(ಮೋನೋಕಲ್ಚರ್)ಗಳನ್ನು ಗ್ರಾಮಗಳಲ್ಲಿ ಬೆಳೆಯುವ ಯೋಜನೆಯನ್ನು ಜಾಗತಿಕ ಬ್ಯಾಂಕ್‌ ಸಹಕಾರದಿಂದ ೧೯೮೦ರ ದಶಕದಲ್ಲಿ ಕಾರ್ಯರೂಪಕ್ಕೆ ತಂದಿತು. ಇದರ ಮುರ್ಖಯ ಉದ್ದೇಶ ನಗರ ಕೇಂದ್ರಿತ ಉದ್ದಿಮೆಗಳ ಬೆಳವಣಿಗೆಯನ್ನು ಗಮನದಲ್ಲಿಟ್ಟುಕೊಂಡು ತರುವುದಾಗಿತ್ತು. ಏಕರೂಪದ ಸಸ್ಯ ಎಂದರೆ ನೀಲಗಿರಿ ಮರಗಳು. ಅವುಗಳನ್ನು ರೇಯಾನ್‌ ಹಾಗೂ ಕಾಗದ ಕೈಗಾರಿಕೆಗಳಲ್ಲಿ ಬಳಸಲಾಗುತ್ತಿತ್ತು. ಆರಂಭದಲ್ಲಿ ನಂಜುಂಡಸ್ವಾಮಿ, ರೈತ ಸಂಘದ ಸದಸ್ಯರು ಹಾಗೂ ಪರಿಸರವಾದಿಗಳು ಪ್ರತಿಭಟಿಸಿದರು. ಕಾರಣವೆಂದರೆ ನೀಲಗಿರಿ ಗಿಡಗಳು ನೆಲದ ತೇವಾಂಶ ವನ್ನು ಕಡಿಮೆ ಮಾಡುತ್ತವೆ ಹಾಗೂ ಫಲವತ್ತತೆಯನ್ನು ನಾಶ ಮಾಡುತ್ತವೆ.

ರೈತ ಸಂಘ ಗ್ರಾಮ ಸ್ವರಾಜ್ಯಕ್ಕಾಗಿ ನಡೆಸಿದ ಹೋರಾಟಗಳಲ್ಲಿ ಇದೂ ಒಂದು. ಭೂಮಿಯ ಸತ್ತ್ವ ಹಾಗೂ ಫಲವತ್ತತೆಯನ್ನು ಹೀರುತ್ತಿದ್ದ ನೀಲಗಿರಿ ಬೇಸಾಯದ ವಿರುದ್ಧ ೧೯೮೭ರಲ್ಲಿ “ನೆಡದಿರಿ ನೀಲಗಿರಿ” ಎಂಬ ಆಂದೋಲನವನ್ನು ಹಮ್ಮಿಕೊಂಡರು. ಚಿಕ್ಕಮಗಳೂರು, ಹಾಸನ, ಶಿವಮೊಗ್ಗದಲ್ಲಿ ಈ ಪ್ಲಾಂಟೇಶನ್‌ ನಡೆಯುವ ಸಂದರ್ಭದಲ್ಲಿ ೧೯೮೨ರಲ್ಲಿ ನೀಲಗಿರಿ ಸಸಿಗಳನ್ನು ನಾಶಮಾಡಲಾಯಿತು. ೧೯೮೨ರಲ್ಲಿ ಹಾಸನದ ತಿರುಮಲ ದೇವರಬೆಟ್ಟ, ಏಳುಗುಂಡ, ರಾಮದೇವರಪುರಗಳಲ್ಲಿ , ೧೯೮೬ರ ಸುಮಾರಿಗೆ ಚಿಕ್ಕಮಗಳೂರು ಜಿಲ್ಲೆಯ ಕೋಗಿಲೆಹಳ್ಳಿ, ಚೆನ್ನಹಳ್ಳಿ ಮೊದಲಾದೆಡೆಗಳಲ್ಲಿ ಹಾಗೂ ಅದೇ ವರ್ಷ ಹಾಸನದ ಗೂಜಹಳ್ಳಿಗಳಲ್ಲಿ ಮೂರು ಲಕ್ಷಕ್ಕೂ ಹೆಚ್ಚಿನ ನೀಲಗಿರಿ ಸಸಿಗಳನ್ನು ನಾಶ ಮಾಡಲಾಯಿತು. ಈ ಎಲ್ಲಾ ಘಟನೆಗಳಲ್ಲಿ ೧೯೮೨ ರಿಂದ ೧೯೮೬ರವರೆಗೆ ೪೦೦ಕ್ಕೂ ಹೆಚ್ಚು ರೈತರು ಬಂಧಿತರಾದರು.

ಕರ್ನಾಟಕದ ಮೊಟ್ಟ ಮೊದಲ ಮಹಿಳಾ ಸಮಾವೇಶವನ್ನು ೧೯೮೭ ನವೆಂಬರ್ ೨೩ರಂದು ಧಾರವಾಡ ಜಿಲ್ಲೆಯ ಹಳಿಯಾಳದಲ್ಲಿ ಹಮ್ಮಿಕೊಳ್ಳಲಾಯಿತು. ರಾಜ್ಯದ ವಿವಿಧೆಡೆ ಯಿಂದ ಲಕ್ಷಾಂತರ ರೈತ ಮಹಿಳೆಯರು ಆಗಮಿಸಿದ್ದರು. ತಮಗಾಗುತ್ತಿರುವ ಶೋಷಣೆಯ ವಿರುದ್ಧ ಒಗ್ಗಟ್ಟಿನ ಧ್ವನಿ ಎತ್ತಿದರು.

೧೯೯೧ರಲ್ಲಿ ಕಾಂಗ್ರೇಸ್‌ ಸರ್ಕಾರದ ವಿರುದ್ಧ ವಿಧಾನಸೌಧದ ಮುಂದೆ ಐತಿಹಾಸಿಕ ನಗುವ ಚಳುವಳಿ ನಡೆಸಿದರು.

೧೯೯೨ರಲ್ಲಿ ಕರ್ನಾಟಕದಲ್ಲಿ ಬರಗಾಲವಿದ್ದರೂ ಕಾಂಗ್ರೇಸ್‌ ಸರ್ಕಾರವು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವನ್ನು ಹಮ್ಮಿಕೊಂಡಿದ್ದರ ವಿರುದ್ಧ ಉಗ್ರ ಹೋರಾಟ ನಡೆಸಿದರು.

ಗ್ಯಾಟ್‌ನ ನಿರ್ದೇಶಕರಾಗಿದ್ದ ಪೀಟರ್ ಸದರ್ ಲ್ಯಾಂಡ್‌ ಅವರ ಭಾರತ ಭೇಟಿಯ ವಿರುದ್ಧ “ಸದರ್ ಲ್ಯಾಂಡ ಗೋಬ್ಯಾಕ್‌” ಎಂಬ ಘೋಷಣೆಯಡಿ ದೆಹಲಿಯಲ್ಲಿ ತೀವ್ರತರವಾದ ಹೋರಾಟ ನಡೆಸಿದರು.

ಬೀಜ ಸತ್ಯಾಗ್ರಹ

ಗ್ಯಾಟ್‌ ಹಾಗೂ ಡಂಕಲ್‌ ಪ್ರಸ್ತಾವನೆಯ ವಿರುದ್ಧ ಎರಡನೇ ಸ್ವಾತಂತ್ರ್ಯ ಹೋರಾಟ ನಡೆಸಲು ವಿಶ್ವದಲ್ಲೇ ಪ್ರಥಮ ಬಾರಿಗೆ ಗಾಂಧಿಯವರ ಉಪ್ಪಿನ ಸತ್ಯಾಗ್ರಹದ ಮಾದರಿಯಲ್ಲಿ “ಬೀಜ ಸತ್ಯಾಗ್ರಹ”ವನ್ನು ಹಮ್ಮಿಕೊಂಡರು. ಬೀಜ ಸ್ವಾತಂತ್ರ್ಯಕ್ಕಾಗಿ ಬೀಜ ಸತ್ಯಾಗ್ರಹ ಭಾರತದ ರೈತರಿಗೆ ಅನಿವಾರ್ಯವಾಯಿತು. ಬೀಜ ಸ್ವಾತಂತ್ರ್ಯವೇ ದೇಶದ ಸ್ವಾತಂತ್ರ್ಯ. ಆದ್ದರಿಂದ ೧೯೯೩ರ ಮಾರ್ಚ್ ೩ ಹಾಗೂ ೪ ರಂದು ರೈತರಿಂದ ದೆಹಲಿ ಮುತ್ತಿಗೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಈ ಕಾರ್ಯಕ್ರಮದ ಹಿಂದಿನ ಉದ್ದೇಶವೆಂದರೆ ಬೀಜ ಸಂಪತ್ತು ರಾಷ್ಟ್ರದ ಸಂಪತ್ತು, ಬೀಜದ ಮೇಲಿನ ಸ್ವಾಮ್ಯ , ಬೀಜ ತಯಾರಿಕೆ ಹಾಗೂ ಬೀಜದ ಮಾರಾಟ ರೈತರ ಹಕ್ಕಾಗಿ ಉಳಿಸಲು, ಭಾರತದ ಸ್ವಾಮ್ಯ ಕಾನೂನು (ಪೇಟೆಂಟ್‌ ಲಾ) ತಿದ್ದುಪಡಿಗೆ ವಿರೋಧ ವ್ಯಕ್ತಪಡಿಸಲು, ಬೀಜ ಉತ್ಪಾದನೆ ಕ್ಷೇತ್ರಗಳಲ್ಲಿ ಬಹುರಾಷ್ಟ್ರೀಯ ಕಂಪೆನಿಗಳ ಪ್ರವೇಶ, ಆಹಾರ ಕ್ಷೇತ್ರದಲ್ಲಿ ವಿಶ್ವ ಮುಕ್ತ ಮಾರುಕಟ್ಟೆ ವ್ಯವಸ್ಥೆಯ ವಿರುದ್ಧ ಇತ್ಯಾದಿ ವಿಷಯಗಳಿಗೆ ಸಂಬಂಧಿಸಿದಂತೆ ದೆಹಲಿ ಮುತ್ತಿಗೆ ಕಾರ್ಯಕ್ರಮವನ್ನು ಆಯೋಜಿಸಿದರು. ಇದರ ಜೊತೆಗೆ ನವದೆಹಲಿಯ ಬೋಟ್‌ ಕ್ಲಬ್‌ನಲ್ಲಿ ಉತ್ತರ ಭಾರತದ ರೈತನಾಯಕ ಮಹೇಂದ್ರಸಿಂಗ್‌ ಟಿಕಾಯತ್‌ ಅವರ ಬೆಂಬಲದೊಂದಿಗೆ ಐತಿಹಾಸಿಕ ಸಮಾವೇಶ ಹಮ್ಮಿಕೊಂಡರು. ಆಮದಿನ ವಿಚಾರದಲ್ಲಿ ಭಾರತವು ತನ್ನ ಕೈಯಲ್ಲೇ ಪೂರ್ಣ ಅಧಿಕಾರವನ್ನು ಇಟ್ಟುಕೊಳ್ಳಬೇಕೆಂದು ರೈತರ ಈ ಸಮಾವೇಶ ಆಗ್ರಹಿಸಿತು. ಬೌದ್ಧಿಕ ಆಸ್ತಿಯ ಮೇಲಿನ ಹಕ್ಕು (ಇಂಟಲೆಕ್ಚುಯಲ್‌ ಪ್ರಾರ್ಪಟಿ ರೈಟ್‌) ಎನ್ನುವುದು “ಗ್ಯಾಟ್‌” ಒಪ್ಪಂದದ ಭಾಗವಾಗಬಾರದೆಂದು ಕೂಡ ಸಮಾವೇಶವು ಸರ್ಕಾರವನ್ನು ಒತ್ತಾಯಿಸಿತು.

ಕಾರ್ಗಿಲ್ಬೀಜ ಕಂಪೆನಿಗಳ ಮೇಲಿನ ದಾಳಿಗಳು

ಉದಾರವಾದದ ಪರಿಣಾಮ ಭಾರತದಲ್ಲಿ ಬಹುಸಂಖ್ಯೆಯ ವಿದೇಶಿ ಬಹುರಾಷ್ಟ್ರೀಯ ಬೀಜ ಕಂಪೆನಿಗಳು ನೆಲೆಸಿದವು. ಅವುಗಳಲ್ಲಿ ಕಾರ್ಗಿಲ್‌ ಹಾಗೂ ಮಾನ್ಸಾಂಟೋ ಬೀಜ ಕಂಪೆನಿಗಳು ಪ್ರಮುಖವಾದವು. ಕಾರ್ಗಿಲ್‌ ಬೀಜ ಕಂಪೆನಿ ಇಡೀ ವಿಶ್ವದಲ್ಲೇ ಆರನೇ ಬಹುದೊಡ್ಡ ಕಂಪೆನಿಗಳಲ್ಲೊಂದಾಗಿತ್ತು. ಕಾರ್ಗಿಲ್‌ ಸಂಸ್ಥೆ ತನ್ನ ಶಾಖೆಗಳನ್ನು ಉತ್ತರ ಕರ್ನಾಟಕದ ಭಾಗದಲ್ಲಿ, ಬೆಂಗಳೂರು, ಬಳ್ಳಾರಿ ಹಾಗೂ ರಾಜ್ಯದ ವಿವಿಧ ಕಡೆಗಳಲ್ಲಿ ಸ್ಥಾಪಿಸಲಾಗಿತ್ತು. ಸ್ವಾತಂತ್ರ್ಯ ರಕ್ಷಣೆಗಾಗಿ ಅವಶ್ಯಕವಾಗಿರುವ “ನೇರ ಕಾರ್ಯಕ್ರಮ” (DIRECT ACTION)ಗಳನ್ನು ನಂಜುಂಡಸ್ವಾಮಿ ಅವರು ಹಮ್ಮಿಕೊಂಡರು. ಸುಂದರೇಶ್‌ ಅವರ ಹೋರಾಟದ ನೆನಪಿಗಾಘಿ ಅವರು ಸತ್ತು ಒಂದು ವರ್ಷದ ಶ್ರದ್ಧಾಂಜಲಿ ನೆನಪಿಗಾಗಿ ೧೯೯೨ರ ಡಿಸೆಂಬರ್ ೨೧ರಂದು ಬೆಂಗಳೂರಿನ ಕಾರ್ಗಿಲ್‌ ಕಂಪೆನಿ ಮೇಲೆ ದಾಳಿ ನಡೆಸಿದರು.

೧೯೯೩ರ ಜುಲೈ ೧೨ರಂದು ಬಳ್ಳಾರಿ ಜಿಲ್ಲೆಯ ತೆಕ್ಕಲಕೋಟೆಯಲ್ಲಿನ ಕಾರ್ಗಿಲ್‌ ಕಂಪೆನಿಯ ಮೇಲೂ ದಾಳಿಯನ್ನು ನಡೆಸಿ ಸಂಪೂರ್ಣ ಧ್ವಂಸ ಮಾಡಿದರು. ಈ ಎಲ್ಲಾ ಹೋರಾಟಗಳ ಮಧ್ಯೆ ೧೯೯೩ರ ಅಕ್ಟೋಬರ್ ೨ ರಂದು ಬೆಂಗಳೂರಿನ ಕಬ್ಬನ್‌ ಪಾರ್ಕಿನಲ್ಲಿ ಅಂತರಾಷ್ಟ್ರೀಯ ರೈತ ಸಮಾವೇಶವನ್ನು ಸಂಘಟಿಸಿದರು. ಒಂದು ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿದ್ದ ರೈತರ ಈ ಸಮಾವೇಶಕ್ಕೆ ಮೂರನೇ ಜಗತ್ತಿನ ರಾಷ್ಟ್ರಗಳಾದ ಇಂಡೋನೇಷಿಯಾ, ಮಲೇಶೀಯಾ, ನಿಕಾರುಗುವ, ಜಿಂಬಾವ್ವೆ, ಶ್ರೀಲಂಕಾ ಹಾಗೂ ಫಿಲಿಫೈನ್ಸ್‌ಗಳಿಂದ ರೈತ ಪ್ರತಿನಿಧಿಗಳು ಭಾಗವಹಿಸಿದ್ದರು. ರೈತರು ತಮ್ಮಲ್ಲಿರುವ ಸಾಂಪ್ರದಾಯಿಕ ಅಥವಾ ಬದಲೀ ಕೃಷಿ ಬೀಜಗಳನ್ನು ವಿತರಿಸುವ ಅಥವಾ ಹಂಚಿಕೊಳ್ಳುವ ಸಂದರ್ಭದಲ್ಲಿ ಯಾವುದೇ ನಿರ್ಬಂಧಗಳು ಇರಬಾರದೆಂಬ ನಿರ್ಣಯವನ್ನು ಸಮಾವೇಶವು ತೆಗೆದುಕೊಂಡಿತು.