ಕೆಂಟಕಿ ಫ್ರೈಡ್‌ ಕೋಳಿ ಮಳಿಗೆಗಳ ಮೇಲೆ ದಾಳಿ

೧೯೯೫ರಲ್ಲಿ ವಿಶ್ವದಲ್ಲೇ ಮೊಟ್ಟ ಮೊದಲ ಬಾರಿಗೆ ಆರೋಗ್ಯಕ್ಕೆ ಹಾನಿಕಾರಕವಾದ ಬಹುರಾಷ್ಟ್ರೀಯ ಕಂಪೆನಿಯ ಕೋಳಿ ಉಪಹಾರ ಮಳಿಗೆಗಳಾದ ಕೆಂಟಕಿ ಫ್ರೈಡ್‌ ಚಿಕನ್‌, ಪಿಜ್ಜಾಹಟ್‌, ಮ್ಯಾಕ್ಡೋನಾಲ್ಡ್ಸ್‌ ಹಾಗೂ ಇನ್ನಿತರ ವಿಷಪೂರತ ಆಹಾರ ಮಳಿಗೆಗಳ ವಿರುದ್ಧ ಆಂದೋಲನ ಹಮ್ಮಿಕೊಂಡರು. ಇದಕ್ಕೆ ಪರಿಸರವಾದಿ ಹಾಗೂ ಮಾಜಿ ಕೇಂದ್ರ ಸಚಿವೆ ಮೇನಕಾ ಗಾಂಧಿಯವರೂ ಸಹ ಬೆಂಬಲ ಸೂಚಿಸಿದರು. ಕೆಂಟಕಿ ಫ್ರೈಡ್‌ ಚಿಕನ್‌ ಆಹಾರ ತರುವ ದುಷ್ಪರಿಣಾಮಗಳಲ್ಲಿ ಬೊಜ್ಜು, ರಕ್ತದಲ್ಲಿ ಕೊಲಸ್ಟರಾಲ್‌ ಹೆಚ್ಚಳ ಹಾಗೂ ಕರುಳಿನ ಕ್ಯಾನ್ಸರ್ ಸೇರಿದಂತೆ ಅನೇಕ ಬಗೆಯ ಕ್ಯಾನ್ಸರ್ ಗಳಿಗೆ ಜನರು ತುತ್ತಾಗುವ ಭೀತಿ ಇತ್ತು. ಅಲ್ಲದೆ ಪೆಪ್ಸಿ ಸಂಸ್ಥೆಗೆ ಸರಬರಾಜು ಮಾಡುವ ಕೋಳಿಗಳನ್ನು ಸಾಕುವ ಕೇಂದ್ರವನ್ನು ಭಾರತದಲ್ಲಿಯೇ ಸ್ಥಾಪಿಸಿಕೊಂಡು, ಇಲ್ಲಿಯ ಜೋಳ, ಆಹಾರ, ನೀರು, ಶಕ್ತಿ, ವಿದ್ಯುತ್‌ ಹಾಗೂ ಕೃಷಿ ಭೂಮಿಯನ್ನು ಅನಗತ್ಯವಾಗಿ ಬಳಸಿಕೊಂಡು ದುಂದು ಮಾಡುತ್ತಿದ್ದವು.

೧೯೯೬ರ ಜನವರಿ ೩೦ರಂದು ಬೆಂಗಳೂರಿನ ಬ್ರಿಗೇಡ್‌ ರಸ್ತೆಯಲ್ಲಿದ್ದ ಕೆಂಟಕಿ ಫ್ರೈಡ್‌ ಚಿಕನ್‌ (ಕೆ.ಎಫ್‌.ಸಿ) ಮೇಲೆ ರೈತ ಸಂಘದವರು ದಾಳಿ ನಡೆಸಿ ಮಳಿಗೆಯನ್ನು ಸಂಪೂರ್ಣ ಧ್ವಂಸ ಮಾಡಿದರು. ನೂರಾರು ಜನ ರೈತ ಹೋರಾಟಗಾರರನ್ನು ಪೊಲೀಸರು ಬಂಧಿಸಿದರು. ದಾಳಿಯಾದ ಒಂದು ವಾರದ ನಂತರ ನಂಜುಂಡಸ್ವಾಮಿ ಅವರನ್ನೂ ಸಹ ಬಂಧಿಸಿ ಸುಮಾರು ಒಂದು ತಿಂಗಳ ಸೆರೆವಾಸದ ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಿದರು.

ವಿದ್ಯುಚ್ಛಕ್ತಿ ಕರ ನಿರಾಕರಣೆ ಚಳವಳಿ

ಗ್ರಾಮಾಂತರ ವಿದ್ಯುಚ್ಛಕ್ತಿ ಕರೆ ಹಾಗೂ ನೀರಾವರಿ ಪಂಪುಸೆಟ್ಟುಗಳಿಗೆ ಕರ ವಿಧಿಸುವ ಹಾಗೂ ಒಟ್ಟಾರೆ ಬೆಲೆ ಏರಿಕೆ ಬಗ್ಗೆ ಸರ್ಕಾರ ಕಾನೂನು ಬಾಹಿರ ಕ್ರಮಗಳನ್ನು ಅನುಸರಿಸಿತ್ತು. ಗ್ರಾಮಾಂತರ ವಿದ್ಯುಚ್ಛಕ್ತಿ ಸರಬರಾಜಿನ ಆಧುನೀಕರಣಕ್ಕೆ ಹಣಬೇಕೆಂದು, ಭವಿಷ್ಯದಲ್ಲಿ ಸಮರ್ಪಕ ಸರಬರಾಜಿನ ಆಶ್ವಾಸನೆ ಆಧಾರದ ಮೇಲೆ ಮಾಡುವ ಕರ ಆಕರಣೆ ಅವೈಜ್ಞಾನಿಕವಲ್ಲದೆ ಕಾನೂನು ಬಾಹಿರ ಸೇವಾ ತೆರಿಗೆಯೂ ಆಗಿತ್ತು. ಮೊದಲು ಸಮರ್ಪಕ ಸರಬರಾಜಿನ ವ್ಯವಸ್ಥೆ ಮಾಡಿ ರೈತರ ಪಂಪುಸೆಟ್ಟುಗಳು ಸುಟ್ಟು ಹೋಗದಂತೆ ಹಾಗೂ ರೈತರ ಬೆಳೆಗಳು ಹಾಳಾಗದಂತೆ ವಿದ್ಯುಚ್ಛಕ್ತಿ ಸರಬರಾಜು ಮಾಡುವವರೆಗೂ ಕರ ಪಾವತಿ ಮಾಡಬಾರದು. ಅದಕ್ಕೆ ಸಂಬಂಧಿಸಿದಂತೆ ಸರ್ಕಾರ ರೈತರೊಂದಿಗೆ ಕರಾರನ್ನು ಮಾಡಿಕೊಳ್ಳುವವರೆಗೂ ಸಾಧ್ಯವಿಲ್ಲವೆಂಬುದು ಕರನಿರಾಕರಣೆ ಚಳವಳಿಯ ಉದ್ದೇಶವಾಗಿತ್ತು. ವಿದ್ಯುಚ್ಛಕ್ತಿ ಚಳವಳಿ ವಿಸ್ತರಣೆಯನ್ನು ೧೯೯೬ರಿಂದ ೨೦೦೧ರವರೆಗೂ ಮುಂದುವರಿಸಿಕೊಂಡು ಬಂದರು.

ಬೆಂಗಳೂರಿನಲ್ಲಿ ರೈತರ ಬೃಹತ್ಸಮಾವೇಶ

ರೈತರೊಂದಿಗೆ ಸಮಾಲೋಚಿಸದೆ ಕೃಷಿ ನೀತಿಗಳನ್ನು ರೂಪಿಸುವ ಸರ್ಕಾರಗಳು, ರೈತ ಸಂಘಟನೆಗಳನ್ನು ದೂರ ಇಟ್ಟು ಆಹಾರ ನೀತಿ, ಬಿತ್ತನೆ ಬೀಜ, ಸಂಪತ್ತಿನ ನೀತಿ ಹಾಗೂ ಜೈವಿಕ ವೈವಿಧ್ಯತೆ ನೀತಿಯನ್ನು ರೂಪಿಸಲು ಪ್ರಯತ್ನಿಸುತ್ತಿರುವ ‘ಅಂತರಾಷ್ಟ್ರೀ ಯ ಕೃಷಿ ಮತ್ತು ಆಹಾರ ಸಂಸ್ಥೆ’ (FAO) ಹಾಗೂ ‘ವಿಶ್ವಸಂಸ್ಥೆ’ ಈ ಕ್ಷೇತ್ರಗಳಲ್ಲಿ ಅವಶ್ಯಕವಾಗಿ ಗುರುತಿಸಬೇಕಾದ ರೈತರ ಹಕ್ಕುಗಳ ಬಗ್ಗೆ ನಿರ್ಲಕ್ಷ್ಯ ತೋರಿದವು. ಈ ಕಾರಣದಿಂದಾಗಿ ೧೯೯೭ರ ಜನವರಿ ೩೦ರಂದು ರೈತರ ಹಕ್ಕುಗಳನ್ನು ಪ್ರತಿಪಾದಿಸಲು ಬೆಂಗಳೂರಿನ ನ್ಯಾಷನಲ್‌ ಕಾಲೇಜು ಮೈದಾನದಲ್ಲಿ ರಾಷ್ಟ್ರಮಟ್ಟದ ರೈತರ ಬೃಹತ್‌ ಸಮಾವೇಶವನ್ನು ಹಮ್ಮಿಕೊಳ್ಳಲಾಯಿತು. ಈ ಸಮಾವೇಶದಲ್ಲಿ ಭಾರತದ ರೈತರಿಂದ ಹಕ್ಕುಗಳ ಘೋಷಣೆಗಳನ್ನು ಹಾಗೂ ಸಮಾವೇಶದ ಒತ್ತಾಯಗಳನ್ನು ಮುಂದಿಟ್ಟರು.

೧೯೯೭ರಲ್ಲಿ ಬೆಂಗಳೂರಿನಲ್ಲಿ ಜರುಗಿದ ವಿಶ್ವಸುಂದರಿ ಸ್ಪರ್ಧೆಯ ವಿರುದ್ಧ ತೀವ್ರವಾದ ವಿರೋಧವನ್ನು ವ್ಯಕ್ತಪಡಿಸಿದರು. ಕೋಜೆಂಟ್ರಿಕ್ಸ್‌ ಹಾಗೂ ಎನ್ರಾನ್‌ನ ವಿರುದ್ಧ ಚಿಕ್ಕಮಗಳೂರಿನಲ್ಲಿ ಮೇನಕಾಗಾಂಧಿ ಅವರೊಡನೆ ನಂಜುಂಡಸ್ವಾಮಿ ಅವರು ಒಡಗೂಡಿ ೧೯೯೭ರಲ್ಲಿ ಉಗ್ರ ಹೋರಾಟವನ್ನೇ ನಡೆಸಿದರು.

ಮಾನ್ಸಾಂಟೋ ಬೀಜದ ಕಂಪೆನಿಯ ಮೇಲೆ ದಾಳಿ

ಮಾನ್ಸಾಂಟೋ ಬಹುರಾಷ್ಟ್ರೀಯ ಬೀಜ ಕಂಪೆನಿಯು ಬಿ.ಟಿ. ಹತ್ತಿ ಬೀಜ ಮಾರುವ ಮಳಿಗೆಗಳನ್ನು ಕರ್ನಾಟಕದಾದ್ಯಂತ ತೆರೆದಿತ್ತು. ಬಿ.ಟಿ. ತಂತ್ರಜ್ಞಾನದಿಂದ ಮಾನವ ಹಾಗೂ ನಿಸರ್ಗದ ಮೇಲಾಗುವ ಪರಿಣಾಮಗಳನ್ನು ಗಮನದಲ್ಲಿಟ್ಟುಕೊಂಡು, ರಾಯಚೂರು, ದಾವಣಗೆರೆ ಹಾಗೂ ಬಳ್ಳಾರಿ ಜಿಲ್ಲೆಯ ಹಡಗಲಿ ತಾಲ್ಲೂಕಿನಲ್ಲಿ ಬಿ.ಟಿ.ಹತ್ತಿ ಗಿಡಗಳನ್ನು ಕಿತ್ತು ಸುಡುವುದರ ಮುಖೇನ ನಂಜುಂಡಸ್ವಾಮಿ ನೇತೃತ್ವದ ಕರ್ನಾಟಕ ರಾಜ್ಯ ರೈತ ಸಂಘದವರು ವಿರೋಧ ವ್ಯಕ್ತಪಡಿಸಿದರು. ೧೯೯೮ರಲ್ಲಿ ಮಾನ್ಸಾಂಟೋ ಬೀಜದ ಕಂಪೆನಿಯ ಟರ್ಮಿನೇಟರ್ ತಂತ್ರಜ್ಞಾನದ ವಿರುದ್ಧ ಹಮ್ಮಿಕೊಂಡಿದ್ದ ಆಂದೋಲನಕ್ಕೆ ‘ಆಪರೇಷನ್‌ ಕ್ರಿಮೇಶನ್‌ ಮಾನ್ಸಾಂಟೋ’ ಎಂದು ಹೆಸರಿಟ್ಟರು.

೨೦೦೨ರಲ್ಲಿ ದಾವಣಗೆರೆಯಲ್ಲಿ ಮಾನ್ಸಾಂಟೋ ಕಂಪೆನಿ ಬಿ.ಟಿ.ಹತ್ತಿಯ ಪರೀಕ್ಷೆ ಹಾಗೂ ಸಂಶೋಧನೆ ನಡೆಸುತ್ತಿದ್ದ ಜಮೀನಿನ ಮೇಲೆ ದಾಳಿ ನಡೆಸಿ ಬೆಳೆ ಸುಟ್ಟು ಹಾಕುವ ಮೂಲಕ ಚಳವಳಿ ನಡೆಸಿದರು. ಬೆಂಗಳೂರಿನಲ್ಲಿ ಬಿ.ಟಿ. ಹತ್ತಿ ವಿರುದ್ಧ ಬೃಹತ್‌ ಪ್ರತಿಭಟನೆ ನಡೆಸಿ ೨೦೦೨ರ ಏಪ್ರಿಲ್‌ ೧೭ರ ‘ವಿಶ್ವ ರೈತ ಹುತಾತ್ಮರ ದಿನ’ದಂದು ಧಾರವಾಡದಲ್ಲಿ ಮಾನ್ಸಾಂಟೋ ಕಂಪೆನಿಯ ವಿರುದ್ಧ ರಾಷ್ಟ್ರಮಟ್ಟದ ಬೃಹತ್‌ ಸಮಾವೇಶ ಹಮ್ಮಿಕೊಳ್ಳಲಾಯಿತು. ಚೌಧರಿ ಮಹೇಂದ್ರಸಿಂಗ್‌ ಟಿಕಾಯತ್‌ ಹಾಗೂ ತಮಿಳುನಾಡಿನ ರೈತ ನಾಯಕ ಸೆಲ್ವಮುತ್ತು ಈ ಸಮಾವೇಶದಲ್ಲಿ ಭಾಗವಹಿಸಿ ತಮ್ಮ ಬೆಂಬಲ ಸೂಚಿಸಿದ್ದರು. ೨೦೦೩ರ ಸೆಪ್ಟೆಂಬರ್ ೧೧ರಂಧು ಬೆಂಗಳೂರಿನ ‘ಭಾರತೀಯ ವಿಜ್ಞಾನ ಸಂಸ್ಥೆ’ಯಲ್ಲಿದ್ದ ಪರಿಸರಕ್ಕೆ ಮಾರಕವಾದ ಮಾನ್ಸಾಂಟೋ ಬೀಜದ ಕಂಪೆನಿಯ ಮೇಲೆ ರೈತ ಕಾರ್ಯಕರ್ತರಿಂದ ನೇರ ಕಾರ್ಯಕ್ರಮವನ್ನು ನಡೆಸಿ ಕಛೇರಿ ಹಾಗೂ ಪ್ರಯೋಗಶಾಲೆಯನ್ನು ಧ್ವಂಸ ಮಾಡಿದ್ದನ್ನು ಉಲ್ಲೇಖಿಸಬಹುದು.

ರೈತರಿಂದ ಬೆಂಗಳೂರು ಮುತ್ತಿಗೆ

ರೈತರ ಜೀವನವನ್ನು ಸದಾ ಸಾಲದಲ್ಲಿಟ್ಟು ಹಾಳುಗೆಡುವುತ್ತಿರುವ ಸರ್ಕಾರವನ್ನು ಎಚ್ಚರಿಸಲು, ‘ಕೃಪಾಂಕ’ ಹಾಗೂ ‘ಆಶ್ರಯ’ ಯೋಜನೆಗಳನ್ನು ರದ್ದು ಮಾಡಿದ ನ್ಯಾಯಾಂಗ ವನ್ನು ಹಳ್ಳಿಗಳಿಗೆ ಆಹ್ವಾನಿಸಲು ಮೇ ೩, ೨೦೦೦ರಂದು ರೈತರಿಂದ ‘ಬೆಂಗಳೂರು ಮುತ್ತಿಗೆ’ ಕಾರ್ಯಕ್ರಮ ಹಮ್ಮಿಕೊಂಡರು. ಮುಖ್ಯವಾಗಿ ಕೃಷಿ ಉತ್ಪಾದನೆ (ನೀರಾವರಿ ಕರ, ವಿದ್ಯುಚ್ಛಕ್ತಿ ಕರ, ಎಲ್ಲ ಸಬ್ಸಿಡಿಗಳ ರದ್ದು) ಶಿಕ್ಷಣ ಹಾಗೂ ಸರ್ಕಾರಿ ಉದ್ಯೋಗಗಳ ವಂಚನೆ (ಶಿಕ್ಷಣಕ್ಕೆ ಬಜೆಟ್‌ ಕಡಿತ, ಕೃಪಾಂಕ ರದ್ದು), ಕೃಷಿ ಮಾರುಕಟ್ಟೆಗಳ ಪೂರ್ಣ ನಿಷ್ಕ್ರಿಯತೆ (ಕೃಷಿ ಆಮದು ನೀತಿಯಿಂದ ಎಲ್ಲ ಬೆಳೆಗಳ ಬೆಲೆ ನಷ್ಟ). ಇದರ ಪರಿಣಾಮವಾಗಿ ಉದ್ಭವವಾಗುತ್ತಿದ್ದ ಸಾಲದ ಸಮಸ್ಯೆ ಮತ್ತು ರೈತರ ಆತ್ಮಹತ್ಯೆಗಳ ಹೆಚ್ಚಳದಿಂದಾಗಿ ಸರ್ಕಾರವನ್ನು ಎಚ್ಚರಿಸಲು ಈ ಕಾರ್ಯಕ್ರಮ ಹಮ್ಮಿಕೊಂಡರು.

ಕೇಂದ್ರ ಸರ್ಕಾರದ ಪರಿಮಾಣದ ಮಿತಿಯಿಲ್ಲದೇ ಆಮದು ಮಾಡಿಕೊಳ್ಳಬಹುದು ಎಂದು ಜಾರಿಗೊಳಿಸಿದ್ದ ಮುಕ್ತ ಆಮದು ನೀತಿಯ ವಿರುದ್ಧ ಪ್ರತಿಭಟನೆ ಆರಂಭಿಸಿದರು. ಈ ಕಾರ್ಯಗಳಿಂದಾಗಿ ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷರಾಗಿದ್ದ ನಂಜುಂಡಸ್ವಾಮಿ ಅವರು ರಾಷ್ಟ್ರವ್ಯಾಪಿಯಾಗಿ ಜನರನ್ನು ಜಾಗೃತ ಗೊಳಿಸಲು ‘ಬಂಡೀಯಾತ್ರೆ’ ಎಂಬ ಮಹತ್ವದ ಪ್ರತಿಭಟನೆಯ ಕಾರ್ಯಕ್ರಮವನ್ನು ಆಯೋಜಿಸಿದರು. ಕನ್ಯಾಕುಮಾರಿ ಹಾಗೂ ಕಾಶ್ಮೀರದಿಂದ ಏಕಕಾಲಕ್ಕೆ ಫೆಬ್ರವರಿ ೧೯, ೨೦೦೧ ರಂದು ರೈತರ ‘ಬಂಡೀಯಾತ್ರೆ’ಯನ್ನು ಹಮ್ಮಿಕೊಳ್ಳಲಾಗಿತ್ತು. ಉತ್ತರ ಹಾಗೂ ದಕ್ಷಿಣದ ರಾಜ್ಯಗಳಿಂದ ಸಾವಿರಾರು ಸಂಖ್ಯೆಯಲ್ಲಿ ರೈತರು ಮುಂಬೈ ಬಂದರಿನಲ್ಲಿ ಸೇರಿ ಆಮದುಗಳ ವಿರುದ್ಧ ನೇರ ಕಾರ್ಯಕ್ರಮವನ್ನು ಹಮ್ಮಿಕೊಂಡು ವಿದೇಶದಿಂದ ಬರುವ ಎಲ್ಲಾ ವಸ್ತುಗಳನ್ನು ಸಮುದ್ರಕ್ಕೆ ಚೆಲ್ಲುವ ಮೂಲಕ ಪ್ರತಿಭಟನೆ ನಡೆಸಿದರು.

ನೀರಾ ಚಳವಳಿ

ವಿದೇಶ ಶಕ್ತಿಗಳ ಹುನ್ನಾರದಲ್ಲಿ ತೆಂಗಿನ ಮರಗಳಿಗೆ ಬಂದಿರುವ ನುಸಿ ಪೀಡೆ ರೋಗವು ಒಂದಾಗಿದೆ. ಕರ್ನಾಟಕದಲ್ಲಿ ತೆಂಗಿನ ಬೆಳೆ ‘ನುಸಿಪೀಡೆ’ ಎಂಬ ರೋಗದಿಂದ ವಿನಾಶದ ಅಂಚಿಗೆ ಸಿಲುಕಿ, ತೆಂಗು ಬೆಳೆಗಾರರ ಆರ್ಥಿಕ ಪರಿಸ್ಥಿತಿ ಅಧೋಗತಿಗೆ ತಲುಪಿತು. ಈ ವೇಳೆಯಲ್ಲಿ ಸರ್ಕಾರ ವೈಮಾನಿಕ ರಾಸಾಯನಿಕ ಸಿಂಪಡಣೆಯನ್ನು ತೆಂಗು ಪ್ರದೇಶದ ಮೇಲೆ ಮಾಡಲು ಮುಂದಾದಾಗ ಅದನ್ನು ವಿರೋಧಿಸಿದರು. ತೆಂಗಿನ ಮರದಿಂದ ನೀರಾ ಇಳಿಸುವ ಚಳವಳಿ ಆರಂಭಿಸಿದರು. ಹಾಸನದ ಅರಸೀಕೆರೆಯಲ್ಲಿ ರೈತ ನಾಯಕ ಕೋಡಿಹಳ್ಳಿ ಚಂದ್ರಶೇಖರ್ ಅವರ ತೋಟದಿಂದ ಚಾಲನೆ ಕೊಟ್ಟರು. ಆನಂತರದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕಿನ ವಿಠಲೇನಹಳ್ಳಿ ತೆಂಗು ಬೆಳೆಗಾರರು ಅಕ್ಟೋಬರ್ ೯, ೨೦೦೧ರಂದು ತೆಂಗಿನ ಮರಗಳಿಂದ ನೀರಾ ಇಳಿಸುವ ಚಳವಳಿ ಆರಂಭಿಸಿದರು. ಈ ರೀತಿ ತೆಂಗಿನ ಮರಗಳಿಂದ ಇಳಿಸುತ್ತಿದ್ದ ನೀರಾ ಮಾರಾಟಕ್ಕೆ ಸರ್ಕಾರ ವಿರೋಧ ವ್ಯಕ್ತಪಡಿಸಿತು. ಆದರೂ ನೀರಾ ಇಳಿಸಲು ರೈತರು ಮುಂದಾದಾಗ, ಅವರ ಮೇಲೆ ಗೋಲಿಬಾರ್ ನಡೆಸಿ ಇಬ್ಬರು ರೈತರು ಮೃತಪಟ್ಟು ಹೋರಾಟ ಉಗ್ರ ಸ್ವರೂಪ ಪಡೆಯಿತು. ಸರ್ಕಾರ ರೈತರ ಹೋರಾಟಕ್ಕೆ ಮಣಿದು ನೀರಾ ಇಳಿಸಲು ಪರವಾನಗಿ ಕೊಟ್ಟಿತು.

ನೀರಾ ಪಾನೀಯ ಕೆಡದಂತೆ ಸಂರಕ್ಷಿಸುವ ತಂತ್ರಜ್ಞಾನದ ಬಗೆಗೆ ಅರಿವಿಲ್ಲದಂತೆ ನಟಿಸುತ್ತಿದ್ದ ಸರ್ಕಾರದ ಅಧಿಕಾರಿಗಳಿಗೆ ೧೯೭೪ರಿಂದಲೇ ಲಭ್ಯವಿರುವ ಈ ತಂತ್ರಜ್ಞಾನವನ್ನು ಹಾಗೂ ಪರಿಷ್ಕೃತ ನೀರಾ ಪಾನೀಯವನ್ನು ಒದಗಿಸಲು ನಂಜುಂಡಸ್ವಾಮಿ ಅವರು ತೀರ್ಮಾನಿಸಿ ಅದಕ್ಕೆ ಮುಖ್ಯಮಂತ್ರಿಯನ್ನು ಆಹ್ವಾನಿಸಿದ ನಿದರ್ಶನಗಳು ಇವೆ.

ನಂಜುಂಡಸ್ವಾಮಿ ಹಾಗೂ ಕೃಷಿ ಚಿಂತನೆ

ನೀರಾವರಿಗೆ ಸಂಬಂಧಿಸಿದಂತೆ, “ಸ್ವಾತಂತ್ರ್ಯ ಬಂದು ಅರವತ್ತು ವರ್ಷಗಳು ಕಳೆದರೂ ಕೂಡ ಬರಗಾಲ ಇಲ್ಲದೆ ಇರುವಂಥ ಕರ್ನಾಟಕ ನಿರ್ಮಾಣ ಮಾಡಲು ಸಾಧ್ಯವಾಗಿಲ್ಲ. ರಾಜ್ಯ ಸರ್ಕಾರ ಒಂದು ಸಮಗ್ರವಾದ ಜಲನೀತಿಯನ್ನು ರೂಪಿಸಿಲ್ಲ. ನೀರಾವರಿ ಎಂದರೆ ಕೇವಲ ಜಲಾನಯನ ಪ್ರದೇಶಗಳು ಮಾತ್ರ ಸರ್ಕಾರಕ್ಕೆ ನೆನಪಿಗೆ ಬರುತ್ತವೆ. ಕೇವಲ ದೊಡ್ಡ ನೀರಾವರಿಗೆ ಮಾತ್ರ ಹೆಚ್ಚಿನ ಪ್ರಾಧಾನ್ಯತೆಯನ್ನು ನೀಡುತ್ತಿದೆ” ಎಂಬುದು ನಂಜುಂಡಸ್ವಾಮಿ ಅವರ ವಾದ. “ದೊಡ್ಡ ನೀರಾವರಿಯಿಂದ ಶೇಕಡಾ ೨೦ ಭಾಗಕ್ಕೆ ನೀರಾವರಿ ಒದಗಿಸಲು ಸಾಧ್ಯ. ಉಳಿದ ಶೇಕಡಾ ೮೦ ಭಾಗದ ನೀರಾವರಿ ಸಮಸ್ಯೆ ಹಾಗೆಯೇ ಉಳಿಯುತ್ತದೆ. ಶೇಕಡಾ ೮೦ ಭಾಗ ವ್ಯವಸಾಯಕ್ಕೆ ಯೋಗ್ಯ ಭೂ ಪ್ರದೇಶ ಆಗಿದ್ದರೂ, ಅದು ಖಾಯಂ ಬರಗಾಲದ ಸ್ಥಿತಿಯನ್ನು ಎದುರಿಸುತ್ತಿದೆ. ಇದಕ್ಕೆ ಪರ್ಯಾಯವಾಗಿ ಸಹಕಾರ ಮಂತ್ರಿ, ನೀರಾವರಿ ಮಂತ್ತಿ, ವಿದ್ಯುಚ್ಛಕ್ತಿ ಮಂತ್ರಿ, ಕೈಗಾರಿಕಾ ಮಂತ್ರಿ, ಕಂದಾಯ ಮಂತ್ರಿಗಳೆಲ್ಲರೂ ಒಟ್ಟಾಗಿ ಸೇರಿ ಒಂದು ಸಮಗ್ರವಾದ ಕಾರ್ಯಕ್ರಮವನ್ನು ರೂಪಿಸಬೇಕು.”

ಬರಗಾಲ ನಿರ್ಮೂಲನೆಗೆ ಸಂಬಂಧಿಸಿದಂತೆ “ಬೀಳುವ ಮಳೆಯ ನೀರಿನಲ್ಲಿ ಶೇಕಡಾ ೧೦ ಭಾಗ ಕೂಡ ಸರಿಯಾಗಿ ಬಳಕೆ ಮಾಡುತ್ತಿಲ್ಲ. ಹೀಗೆ ಮಳೆ ನೀರು ಪೋಲಾಗಿ ಸಮುದ್ರ ಸೇರುತ್ತಿರುವುದನ್ನು ನಿಲ್ಲಿಸುವಂಥ ಕೆಲಸವನ್ನು ಮಾಡಬೇಕು.” ನಂಜುಂಡಸ್ವಾಮಿ ಅವರ ಆಲೋಚನಾ ಕ್ರಮದಂತೆ, ಪ್ರಸ್ತುತ ಸರ್ಕಾರ ಕನಿಷ್ಟ ಒಂದು ವರ್ಷ ದೊಡ್ಡ ನೀರಾವರಿ ಕಾರ್ಯಕ್ರಮವನ್ನು ಮುಂದೂಡಿ, ಸಣ್ಣ ಹಾಗೂ ಅತಿ ಸಣ್ಣ ನೀರಾವರಿಗೆ ಆದ್ಯತೆ ಕೊಡಬೇಕು. ಅದರಲ್ಲಿ ಕೆರೆ-ಕಟ್ಟೆಗಳನ್ನು ದುರಸ್ತಿ ಮಾಡುವುದು, ಕೆರೆಯ ಹೂಳೆತ್ತುವ ಕೆಲಸ ಮಾಡಿದರೆ ಸುಮಾರು ಕಾಲು ಭಾಗ ಬರಗಾಲ ಪರಿಹಾರ ಮಾಡಿದಂತಾಗುತ್ತದೆ.

ಶೇಕಡಾ ೭೫ರಷ್ಟು ಜನರು ಇರುವ ಹಳ್ಳಿಗಳಿಗೆ ಅಷ್ಟೇ ಪ್ರಮಾಣದ ವಿದ್ಯುಚ್ಛಕ್ತಿ ಪೂರೈಕೆ ಮಾಡಬೇಕು. ಇದಕ್ಕೆ ತದ್ವಿರುದ್ಧವಾಗಿ ನಗರಗಳಿಗೆ ಹೆಚ್ಚಿನ ಪ್ರಮಾಣದ ವಿದ್ಯುಚ್ಛಕ್ತಿ ಪೂರೈಕೆ ಮಾಡಿ ಹಳ್ಳಿಗಳಿಗೆ ಕಡಿಮೆ ಪೂರೈಕೆ ಮಾಡುತ್ತಿದೆ. ಎಲ್ಲಿಯವರೆಗೆ ಹೀಗೆ ಶೇಕಡಾ ೭೫ರಷ್ಟು ವಿದ್ಯುಚ್ಛಕ್ತಿ ಪೂರೈಸಲು ಸಾಧ್ಯವಾಗುವುದಿಲ್ಲವೋ ಅಲ್ಲಿಯವರೆಗೂ ಹಳ್ಳಿಗಳ ಅಭಿವೃದ್ಧಿ ಸಾಧ್ಯವಿಲ್ಲ. ಬರಗಾಲ ನಿರ್ಮೂಲನವೂ ಸಾಧ್ಯವಿಲ್ಲ ಎಂಬುದು ಅವರ ಅಭಿಮತ.

ಮಳೆಯನ್ನೇ ಎದುರು ನೋಡುತ್ತಾ ಕೂರುವ ಬೇಸಾಯವನ್ನು ಎಲ್ಲಿಯವರೆಗೆ ನಾವು ಮುಂದುವರಿಸುತ್ತೇವೆಯೋ ಅಲ್ಲಿಯವರೆಗೆ ಬರಗಾಲ ಶಾಶ್ವತವಾಗಿ ಉಳಿಯುತ್ತದೆ. ಆದ್ದರಿಂದ ಬೇರೆ ರೀತಿಯ ನೀರಾವರಿಯನ್ನು ಕೂಡಲೇ ಜಾರಿಗೆ ತರಬೇಕು. ಭೂ ತಳದಲ್ಲಿರುವ ನೀರನ್ನು ಸಾಮೂಹಿಕ ಕೊಳವೆ ಬಾವಿಗಳ ಮೂಲಕ ಒದಗಿಸಿ, ಮಿತವಾಗಿ ಉಪಯೋಗಿಸಿ ವಿಶಾಲ ಪ್ರದೇಶಗಳನ್ನು ನೀರಾವರಿಗೊಳಪಡಿಸುವಂತೆ ಸ್ಪ್ರಿಂಕ್ಲರ್ ಮತ್ತು ಡ್ರಿಪ್‌ ನೀರಾವರಿಗೆ ಆದ್ಯತೆ ಕೊಡುವ ಮೂಲಕ ವರ್ಷಕ್ಕೆ ಎರಡು ಬೆಳೆಯನ್ನು ಖಾತ್ರಿಗೊಳಿಸುವುದು ಸಾಧ್ಯ ಎಂಬ ಚಿಂತನೆ ಅವರದಾಗಿತ್ತು.

ಜೊತೆಗೆ ಮಳೆ ಆಧಾರಿತ ಪ್ರದೇಶಗಳಲ್ಲಿ ಬೇಸಾಯ ಮೊದಲನೇ ಉದ್ಯೋಗ ಆಗಬಾರದು. ಕೃಷಿಯೇತರ ಚಟುವಟಿಕೆಗಳು ರೈತರಿಗೆ ಮೊದಲನೇ ಉದ್ಯೋಗವಾಗಬೇಕು. ಬೇಸಾಯ ರೈತರಿಗೆ ಎರಡನೇ ಉದ್ಯೋಗವಾಗಬೇಕು. ಗ್ರಾಮ ಕೈಗಾರಿಕೆಗಳು ಮತ್ತು ಸಣ್ಣ ಕೈಗಾರಿಕೆಗಳು ಮಳೆ ಆಧಾರಿತ ಪ್ರದೇಶಗಳಲ್ಲಿ ಆದಷ್ಟು ಬೇಗ ಸ್ಥಾಪನೆಗೊಳ್ಳುವುದರ ಮೂಲಕ ಮಾತ್ರ ಇದು ಸಾಧ್ಯ ಎಂದು ಅವರು ಆಲೋಚಿಸಿದ್ದರು. ದೊಡ್ಡ ನೀರಾವರಿ ಯೋಜನೆಗಳನ್ನು ತಾತ್ಕಾಲಿಕವಾಗಿ ನಿಲ್ಲಿಸಿ ಸಣ್ಣ ನೀರಾವರಿಗೆ ಸಂಬಂಧಿಸಿದಂತೆ ಸಮಗ್ರ ನೀರಾವರಿ ನೀತಿಯನ್ನು ರೂಪಿಸಬೇಕೆಂಬ ಸಲಹೆಯನ್ನು ನಂಜುಂಡಸ್ವಾಮಿ ಅವರು ನೀಡಿದ್ದಾರೆ.

“ಅಂತರ್ಜಲದ ಸಂರಕ್ಷಣೆ ಕುರಿತಂತೆ ಸರ್ ಫೇಸ್‌ ವಾಟರ್ ಮ್ಯಾನೇಜ್‌ಮೆಂಟ್‌ (ಮಳೆನೀರು)ಗೂ ಹೆಚ್ಚಿನ ಪ್ರಾಧಾನ್ಯತೆ ನೀಡಬೇಕು. ಮಳೆನೀರು ಹಾಗೂ ಅಂತರ್ಜಲದ ಮರುಪೂರಣಕ್ಕೆ ಸರ್ಕಾರ ಕಾರ್ಯಕ್ರಮ ಹಾಕಿಕೊಳ್ಳದೇ ಇದ್ದರೆ ತೋಡಿದ ಕೊಳವೆ ಬಾವಿಗಳೆಲ್ಲ ಖಾಲಿಯಾಗುತ್ತಾ ಹೋಗುತ್ತವೆ. ನೀರಿನ ನೀತಿಯ ಬಗೆಗೆ ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸದೆ ಹೋದರೆ ಈ ನಾಗರೀಕತೆ ಅಂದರೆ ಕರ್ನಾಟಕ ಮಾತ್ರವಲ್ಲ ಇಡೀ ಭಾರತ ದೇಶದ ನಾಗರೀಕತೆ ನೀರು ಇಲ್ಲದೆ ನಾಶವಾಗುವಂಥ ಸಾಧ್ಯತೆ ಇದೆ” ಎಂದು ಭವಿಷ್ಯದ ಬಗೆಗೆ ಎಚ್ಚರಿಕೆಯನ್ನು ನೀಡಿದ್ದಾರೆ. ಆದ್ದರಿಂದ ಮಳೆನೀರು ಹಾಗೂ ಅಂತರ್ಜಲದ ಹೆಚ್ಚಳಕ್ಕೆ ಸಂಬಂಧಪಟ್ಟ ಎಲ್ಲಾ ತಜ್ಞರನ್ನು ಸೇರಿಸಿ ವಿಶೇಷ ತಜ್ಞರ ಸಮಿತಿಯನ್ನು ರಚಿಸಿ, ರಾಜ್ಯ ನೀರಾವರಿ ನೀತಿಯನ್ನು ರೂಪಿಸುವ ಪ್ರಯತ್ನವನ್ನು ಸರ್ಕಾರ ಮಾಡಬೇಕು ಅನ್ನಿಸುತ್ತದೆ.

“ಕೃಷಿ ಕಾರ್ಮಿಕರ ಕನಿಷ್ಟ ಕೂಲಿ ನಿಗದಿ ಮಾಡುವಾಗಲೂ ಸರ್ಕಾರ ಮೋಸ ಮಾಡುತ್ತಿದೆ. ಕೃಷಿ ವಸ್ತುಗಳ ಬೆಲೆಗಳನ್ನು ನಿಗದಿ ಮಾಡುವಾಗಲಂತೂ ಇದು ಮತ್ತಷ್ಟು ವ್ಯವಸ್ಥಿತವಾಗಿ ನಡೆಯುತ್ತದೆ. ಕೃಷಿ ಕಾರ್ಮಿಕರ ಕನಿಷ್ಟ ಕೂಲಿ ನಿಗದಿ ಮಾಡಿದ ಮೇಲೆ ಉತ್ಪಾದನೆ ಬೆಲೆ ನಿಗದಿ ಮಾಡುವಾಗ ಅದನ್ನು ಗಣನೆಗೆ ತೆಗೆದುಕೊಂಡು ಗುಣಿಸಬೇಕು. ಆದರೆ ಈ ಕಾರ್ಯವನ್ನು ಸರ್ಕಾರ ಮಾಡುತ್ತಿಲ್ಲ. ಅನಕ್ಷರಸ್ಥ ಮುಗ್ಧ ಜನರನ್ನು ಮೋಸ ಮಾಡುತ್ತಿದ್ದಾರೆ. ಹಾಗೆಯೇ ಕೂಲಿ ನಿಗದಿ ವೇಳೆಯಲ್ಲಿ ಕುಟುಂಬ ಶ್ರಮವನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ.” ಜೊತೆಗೆ ಜೀತದಾಳುಗಳ ಕೂಲಿಯ ಆಧಾರದ ಮೇಲೆ-

“Since not all the farmers have attached servents, the average per day rate has been estimated for the cluster as a whole by relating total wages of the attached servants to their employment than use for evaluation of family lobour”.

– ಎಂದು ಪರಿಗಣಿಸಬೇಕೆಂದು ಚಿಂತಿಸಿದರು.

ಗ್ರಾಮೀಣಾಭಿವೃದ್ಧಿಗೆ ಸಂಬಂಧಿಸಿದಂತೆ ಸಂಪತ್ತಿನ ವಿಕೇಂದ್ರೀಕರಣವಾಗಬೇಕಾಗಿದೆ. ಕೆಲವು ಮೂಲಭೂತವಾದ ಬದಲಾವಣೆಗಳನ್ನು ಮಾಡಿಕೊಳ್ಳುವ ಕೃಷಿ ಸಂಪತ್ತು ಹಾಗೂ ನೈಸರ್ಗಿಕ ಸಂಪತ್ತು ಕನಿಷ್ಟ ಆಯಾ ಜಿಲ್ಲೆಗಳ ಸ್ವತ್ತು ಎನ್ನುವ ಕಾನೂನು ತರಬೇಕು. ಕೆಲವು ಜನರ ಮನೆಯ ಸ್ವತ್ತಾಗುವ ನೈಸರ್ಗಿಕ ಸಂಪತ್ತನ್ನು ತಡೆಯಬೇಕು. ಇಂಥ ಕಾನೂನು ಮಾಡುವ ಮೂಲಕ ಕನಿಷ್ಟ ಬದಲಾವಣೆ ಮಾಡಿದರೆ ಶಾಶ್ವತವಾಗಿ ಬರಗಾಲ ಪರಿಹಾರ ಮಾಡಬಹುದು. ಹಳ್ಳಿಗಾಡಿನ ಜನರ ಜೀವನ ಉತ್ತಮಗೊಳ್ಳಬೇಕಾದರೆ ಕೃಷಿ ಆಧಾರಿತ ಕೈಗಾರಿಕೆಗಳನ್ನು ಸ್ಥಾಪಿಸಲಾಗುತ್ತದೆ ಎಂದು ಚಿಂತಿಸಿದ್ದರು.

“ಗ್ರಾಮಗಳ ಅವಶ್ಯಕತೆಗಳನ್ನು ಗಮನಿಸಿದಾಗ ಸಣ್ಣ ಕೈಗಾರಿಕೆಗಳ ಮೂಲಕ ಗ್ರಾಮಾಂತರ ಪ್ರದೇಶದಲ್ಲಿ ಉದ್ಯೋಗ ಸೃಷ್ಟಿ ಮಾಡಬೇಕು. ದೊಡ್ಡ ಕೈಗಾರಿಕೆಗಳು ರೈತರನ್ನು ಯಾವ ಪ್ರದೇಶಗಳಲ್ಲಿ ಮೋಸ ಮಾಡುತ್ತಿವೆಯೋ, ಆ ಮೋಸವನ್ನು ನಿಲ್ಲಿಸಬೇಕಾದರೆ ಗ್ರಾಮಾಂತರ ಪ್ರದೇಶಗಳಿಂದ ಹೊರಗಡೆಗೆ ಸಿದ್ಧ ವಸ್ತುಗಳು ಹೋಗುವ ವ್ಯವಸ್ಥೆ ಆಗಬೇಕು. ಕಚ್ಛಾವಸ್ತುವಿನ ಲೂಟಿ ನಿಲ್ಲಬೇಕು. ಸಿದ್ಧವಸ್ತುಗಳು ತಯಾರಾಗಿ ಗ್ರಾಮಾಂತರ ಪ್ರದೇಶದಿಂದ ಹೊರಗೆ ಹೋಗುವ ವ್ಯವಸ್ಥೆ ಮಾಡಿದಾಗ ಗ್ರಾಮಗಳಲ್ಲಿನ ಬಡತನ ನಿವಾರಣೆ ಮಾಡಲು ಸಾಧ್ಯ. ಈ ಕಾರ್ಯವನ್ನು ಯಾವುದಾದರೂ ಒಂದು ತಾಲ್ಲೂಕಿನಲ್ಲಿ ಪ್ರಾರಂಭ ಮಾಡಿ ಅನಂತರ ಬೇರೆ ಜಿಲ್ಲೆ, ತಾಲ್ಲೂಕು ಹಾಗೂ ರಾಜ್ಯಾದ್ಯಂತ ಅಳವಡಿಸಿಕೊಳ್ಳುವಂತೆ ಸರ್ಕಾರದ ನೀತಿ ಬದಲಾಗಬೇಕು” ಎಂಬುದು ನಂಜುಂಡಸ್ವಾಮಿ ಅವರ ಆಶಯವಾಗಿತ್ತು. ಕೆರೆಗಳ ದುರಸ್ತಿ, ಏತ ನೀರಾವರಿ, ಐ.ಪಿ.ಸೆಟ್ಟುಗಳಿಗೆ ವಿದ್ಯುಚ್ಛಕ್ತಿ, ಇವುಗಳ ಜೊತೆಗೆ ಸಣ್ಣ ಕೈಗಾರಿಕೆಗಳ ಸ್ಥಾಪನೆ ಇವು ಒಂದಕ್ಕೊಂದು ಅಂಟಿಕೊಂಡಿರತಕ್ಕಂತ ಈ ಕಾರ್ಯಕ್ರಮಗಳನ್ನು ಹಾಕಿಕೊಳ್ಳುವವರೆಗೂ ಹಳ್ಳಿಗಳಿಂದ ಬಡತನವಗಲಿ, ಬರಗಾಲವಾಗಲಿ ಹೋಗುವುದಿಲ್ಲ. ಇದರ ನಿವಾರಣೆಗೆ ಸೂಕ್ತ ಕಾರ್ಯಕ್ರಮ ಹಾಕಿಕೊಳ್ಳಬೇಕೆಂಬುದು ಎಂ.ಡಿ.ಎನ್‌ ಅವರ ಅಭಿಪ್ರಾಯವಾಗಿತ್ತು.

ಕೃಷಿ ಕ್ಷೇತ್ರದಲ್ಲಿ ಬಿತ್ತನೆ ಬೀಜಕ್ಕೆ ಸಂಬಂಧಿಸಿದಂತೆ ಗಮನಿಸಿದಾಗ ಬೀಜವೆಂಬುದು ಬೆಳೆಯ ಮೂಲ ಮಾತ್ರವಲ್ಲ. ಅದು ಭವಿಷ್ಯದ ಬೆಳಕು. ಇಂಥ ಬೀಜಗಳ ಮೇಲಿನ ಸ್ವಾಮ್ಯವನ್ನು ಪಡೆದುಕೊಳ್ಳುವಲ್ಲಿ ಬಹುರಾಷ್ಟ್ರೀಯ ಕಂಪೆನಿಗಳು ಭಾರತದಂಥ ದೇಶಗಳ ಮೇಲೆ ಅತ್ಯಂತ ಕರಾಳವಾದ ಬೀಜ ಕಾಯಿದೆಗಳನ್ನು ಕೇಂದ್ರ ಸರ್ಕಾರದ ನೆರವಿನೊಂದಿಗೆ ತರುತ್ತಿವೆ. ಇದರಿಂದ ಬೀಜ ದುಬಾರಿಯಾಗುತ್ತದೆ. ಅಲ್ಲದೆ ದೇಶಿ ಸಂಶೋಧನೆಯ ಕೆಳಮಟ್ಟವನ್ನು ತಲುಪಿ, ಜೀಔ ವೈವಿಧ್ಯಗಳ ಕಳವಿಗೆ ಅನುಕೂಲ ಮಾಡಿಕೊಡುತ್ತಿವೆ. ವಂದನಾಶಿವ ಅವರ ನೇತೃತ್ವದಲ್ಲಿ ದೇಶಿ ಬೀಜ ಸಂರಕ್ಷಿಸಲು ‘ನವಧಾನ್ಯ’ ಸಂಘಟನೆಗೆ ನಂಜುಂಡಸ್ವಾಮಿ ಅವರ ಬೆಂಬಲ ಸೂಚಿಸಿದ್ದರು. ಬಿ.ಟಿ. ತಂತ್ರಜ್ಞಾನದಿಂದ ತಯಾರಿಸಲಾಗಿದ್ದ ಹತ್ತಿ ಬೀಜಗಳ ವಿರುದ್ಧ ನೇರ ಕ್ರಮವನ್ನು ಕೈಗೊಂಡಿದ್ದರು.

ರೈತರು ಬೆಳೆಯುವ ಎಲ್ಲ ಬೆಳೆಗಳಿಗೂ ನ್ಯಾಯವಾದ ಬೆಲೆ ಇದ್ದೇ ಇದೆ. ಆದರೆ ಬೇರೆಲ್ಲ ಮಧ್ಯವರ್ತಿಗಳು ಸೇರಿ ವಂಚಿಸುತ್ತಿದ್ದಾರೆ. ಇದನ್ನು ಗಮನಿಸಿದ ನಂಜುಂಡಸ್ವಾಮಿ ಅವರು “ಕೃಷಿ ಉತ್ಪನ್ನಗಳಿಗೆ ‘ನಮ್ದು’ ಎಂಬ ಬ್ರಾಂಡಿನಡಿ ಮಾರಾಟ ಮಾಡಲು ಸಲಹೆ ನೀಡಿದರು. ಭಾರತದಲ್ಲಿ ಸಣ್ಣ ರೈತರೇ ಬಹುಸಂಖ್ಯಾತ ಮುಕ್ಕಾಲು ಭಾಗ ಇರುವುದರಿಂದ ಇವರೇ ಅತ್ಯಂತ ಹೆಚ್ಚಿನ ಪ್ರಮಾಣದ ಆಹಾರ ಉತ್ಪಾದಕರು. ಇದರಿಂದ ಸರ್ಕಾರಕ್ಕೆ ಅಧಿಕ ಆದಾಯ ಇರುವುದು. ಈ ಕಾರಣ ಸರ್ಕಾರವನ್ನು ಮಣಿಸುವುದು ಹಾಗೂ ಸಣ್ಣ ರೈತರ ಬೆಳೆಗಳಿಗೆ ನ್ಯಾಯವಾದ ‘ಬೆಲೆ’ ದೊರಕಿಸುವುದು ಎರಡೂ ಕೆಲಸವನ್ನು “ರೊಕ್ಕವಿಲ್ಲದ ಕೃಷಿ ಮಾರುಕಟ್ಟೆ” ಸೃಷ್ಟಿಸುವ ಮೂಲಕ ಮಾಡಬೇಕು. ಬೆಳೆಯುವ ಎಲ್ಲ ಬೆಳೆಗಳಿಗೆ ರೈತರೇ ಪ್ರಾಮಾಣಿಕವಾಗಿ ವೈಜ್ಞಾನಿಕ ಬೆಲೆಗಳನ್ನು ನಿಗದಿಪಡಿಸಿ, ಈ ಬೆಲೆಗಳ ಪ್ರಮಾಣಕ್ಕನುಗುಣವಾಗಿ ರೈತರು ಪರಸ್ಪರ ದಾಸ್ತಾನುಗಳನ್ನು ವಿನಿಮಯ ಮಾಡಿಕೊಳ್ಳುವ ಸಂತೆ ನಿರ್ಮಾಣದ ಮೂಲಕ ರೊಕ್ಕದ ಬೆಲೆಯಿಂದ ತಪ್ಪಿಸಬಹುದು” ಎಂದು ಅರಿತಿದ್ದರು.

ನಂಜುಂಡಸ್ವಮಿ ಅವರ ಚಿಂತನೆಗಳಲ್ಲಿ ಅನೇಕವು ದೇಶೀಯ ಕೃಷಿ, ಮಾರುಕಟ್ಟೆ, ಬೀಜಗಳಿಗೆ ಸಂಬಂಧಿಸಿದ್ದಾಗಿವೆ. “ಕೃಷಿಗೆ ಸಂಬಂಧಿಸಿದ ಚಿಂತನೆಗಳನ್ನು ಅನುಷ್ಠಾನಕ್ಕೆ ತರುವಲ್ಲಿ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳದೇ ಇದ್ದರೆ, ಅದಕ್ಕೆ ಪ್ರತಿಯಾಗಿ ರೈತರು ಸಂಘಟಿತರಾಗಿ ಈ ಕಾರ್ಯಕ್ರಮಗಳನ್ನು ಹಾಕಿಕೊಳ್ಳಬೇಕು. ಈ ಕಾರ್ಯಕ್ರಮಗಳನ್ನು ಚಳವಳಿ ರೂಪದಲ್ಲಿ ನಡೆಸಿದರೆ ಇಡೀ ದೇಶವನ್ನೇ ಹತೋಟಿಗೆ ತೆಗೆದುಕೊಳ್ಳಬಹುದು ಎನ್ನುವುದರಲ್ಲಿ ಸಂಶಯವಿಲ್ಲ ಎಂದಿದ್ದಾರೆ. ಈ ಚಳವಳಿಯನ್ನು ಹಂತ ಹಂತವಾಗಿ ಆದರೂ ಪ್ರಯೋಗ ಮಾಡಬೇಕಾದ ಅವಶ್ಯಕತೆ ಇದೆ . ಸರ್ಕಾರ ಮಾಡಬೇಕಾದ ಕೆಲಸ ಮಾಡದಿದ್ದಾಗ ಅದನ್ನು ರೈತರೇ ನೆರವೇರಿಸಬೇಕು” ಎಂಬುದು ನಂಜುಂಡಸ್ವಾಮಿ ಅವರ ಚಿಂತನೆಗಳಲ್ಲಿ ಮಹತ್ವವಾದವುಗಳು.

ಜಾಗತೀಕರಣ ಹಾಗೂ ಬಹುರಾಷ್ಟ್ರೀಯ ಕಂಪನಿಗಳನ್ನು ಕುರಿತ ಚಿಂತನೆ

ದೇಶದ ರೈತರ ಭವಿಷ್ಯವನ್ನೇ ಅಳಿಸಿ ಹಾಕುತ್ತಿರುವ ಭೂತ ಜಾಗತೀಕರಣ. ಜಾಗತೀಕರಣವು ಈ ದೇಶವನ್ನು ಪ್ರವೇಶ ಮಾಡಿದ ಕೇವಲ ಇಪ್ಪತ್ತು ವರ್ಷಗಳಲ್ಲಿ ಐದು ಲಕ್ಷಕ್ಕೂ ಅಧಿಕ ರೈತರನ್ನು ಸಮಾಧಿ ಮಾಡಿದೆ. ಇದು ನಮ್ಮ ಸಂಸ್ಕೃತಿಯ ಮೇಲೆ ಆಕ್ರಮಣ ಮಾಡಿ ನಮ್ಮ ಕಲೆ, ಭಾಷೆ ಸಂಸ್ಕೃತಿಯನ್ನು ನಾಶ ಮಾಡುತ್ತ ತನ್ನದೇ ಆದ ಕೊಳ್ಳುಬಾಕ ಪರಂಪರೆಯೊಂದನ್ನು ಸೃಷ್ಟಿಸುತ್ತಿದೆ. ಇದಕ್ಕೆ ಕಾರಣ ಸರ್ಕಾರಗಳು ಜಾರಿಗೆ ತರುವ ರೈತ ವಿರೋಧಿ ಯೋಜನೆಗಳು ಹಾಗೂ ಮಾರ್ಗದರ್ಶನವಿಲ್ಲದ ಕೃಷಿ ನೀತಿಗಳು. ಅಂಥವುಗಳೆಂದರೆ ಅತ್ಯಂತ ಹೆಚ್ಚಿನ ಸಾಂಸ್ಥಿಕ ಹಾಗೂ ಅನೌಪಚಾರಿಕ ಮೂಲಸ ಸಾಲಗಳು, ಮಾರುಕಟ್ಟೆ ಶಕ್ತಿಗಳ ಕಾರಣದಿಂದ ಬೆಲೆ ಕುಸಿತ, ಕನಿಷ್ಟ ಬೆಂಬಲ ಬೆಲೆಯನ್ನೂ ನೀಡದ ಸರ್ಕಾರ, ನೀಡಿದರೂ ಸರಕನ್ನು ಕೊಳ್ಳದ ಸಂದರ್ಭ, ಅಂತರ್ಜಲದ ಇಳಿಕೆ ಮತ್ತು ಬೋರ್ ಬೆಲ್‌ಗಳ ವೈಫಲ್ಯ, ಜಾಗತೀಕರಣದಿಂದ ಹೆಚ್ಚು ಮಾರುಕಟ್ಟೆ ವಿಕೃತಿಗಳು ಅಂದರೆ ಬೆಲೆ ಕುಸಿತ , ಹೂಡಿಕಾ ವೆಚ್ಚ ಹೆಚ್ಚಳ, ರಯತರ ಅಸ್ತಿತ್ತ್ವದ ಕುರುಹಾದ ಭೂಮಿಯನ್ನು ಕಳೆದುಕೊಳ್ಳುವ ಭಯ, ಕಳಪೆ ಬೀಜ, ಕೀಟನಾಶಕ ಹಾಗೂ ರಾಸಾಯನಿಕಗಳ ಬಳಕೆ ರೈತರ ಆತ್ಮಹತ್ಯೆಗಳು ಗಣನೀಯವಾಗಿ ಹೆಚ್ಚಲು ಕಾರಣವಾಗಿವೆ.

ಮಾರುಕಟ್ಟೆಯ ಬೇಡಿಕೆ ಹಾಗೂ ಪೂರೈಕೆಗಳಿಂದಾಗಿ ಸರಕುಗಳ ಬೆಲೆಗಳಲ್ಲಿ ಬಾರೀ ವೈಪರೀತ್ಯವನ್ನು ರೈತ ಅನುಭವಿಸುತ್ತಾನೆ. ಆದ್ದರಿಂದಲೇ-

ರೈತರಿಗೆ ಸಾಲ ಬೇಡ; ಬೆಳೆಗೆ ನ್ಯಾಯವಾದ ಬೆಲೆ ಬೇಕು

-ಎಂದು ನಂಜುಂಡಸ್ವಾಮಿ ಅವರು ರೂಪಿಸಿದ ರೈತ ಹೋರಾಟದ ಘೋಷಣೆಗಳಲ್ಲಿ ಕಾಣಬಹುದು. ಬೆಳೆದ ಬೆಳೆಗೆ ವೈಜ್ಞಾನಿಕ ಬೆಲೆ ಸಿಗದೆ ಇದ್ದಾಗ, ಸಾಲವನ್ನು ಮಾಡಲು ರೈತ ಮುಂದಾಗುತ್ತಾನೆ. ಬೆಳೆಗಳ ಬೆಲೆಯಲ್ಲಿ ಕುಸಿತ ಕಂಡಾಗ ರೈತ ಸಾಲ ತೀರಿಸಲಾಗದೆ ಹತಾಶನಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ.

ಭಾರತದ ಕೃಷಿ ಇಂದು ಬಹುರಾಷ್ಟ್ರೀಯ ಕಂಪೆನಿಗಳ ಹಿಡಿತಕ್ಕೆ ಸಿಕ್ಕಿದೆ. ಈ ಕಂಪೆನಿಗಳು ನೀಡುವ ‘ಕುಲಾಂತರಿ ಬೀಜ’ ಅಥವಾ ತಳಿಗಳನ್ನು ರೈತರು ಉಪಯೋಗಿಸಬೇಕಾಗಿದೆ. ಅವುಗಳ ವಿಪರೀತವೆನ್ನಿಸುವ ಬೆಲೆ, ಕಳಪೆ ಗುಣಮಟ್ಟ, ಮೊಳಕೆಯೊಡೆಯದಿರುವುದು ಹಾಗೂ ಬೆಳೆಗಳಿಗೆ ಕೀಟ ಬಾಧೆ, ಕಳಪೆ ಗುಣಮಟ್ಟದ ಕೀಟನಾಶಕಗಳ ಪೂರೈಕೆ ಇಂಥ ನೂರಾರು ಕರಾಳ ಮುಖಗಳು ಇದರ ಅಂತರಂಗದಲ್ಲಿವೆ. ಉದಾಹರಣೆಗೆ ‘ಬಿ.ಟಿ. ಹತ್ತಿ’. ಇಂಥ ಬಹುರಾಷ್ಟ್ರೀಯ ಕಂಪೆನಿಗಳ ವಂಚನೆಯ ಜಾಡನ್ನು ಬಹಳ ಮೊದಲೇ ಅರ್ಥ ಮಾಡಿಕೊಂಡಿದ್ದ ನಂಜುಂಡಸ್ವಾಮಿ ಅವರು ರೈತರು ಬಿ.ಟಿ. ಹತ್ತಿ ಬೆಳೆಯದಂತೆ, ಬಹುರಾಷ್ಟ್ರೀಯ ಕಂಪೆನಿಗಳ ಬಣ್ಣದ ಮಾತಿಗೆ ಮರುಳಾಗದಂತೆ ರೈತರಿಗೆ ಮನವಿ ಮಾಡಿದ್ದರು.

ರೈತರನ್ನು ಎಚ್ಚರಿಸುವ ಕ್ರಮ

“ರೈತರು ಸಾಲಗಾರರಲ್ಲ. ಸರ್ಕಾರವೇ ಬಾಕಿದಾರ”, ರೈತರು ಸಾಲಗಾರರಲ್ಲ. ಅವರು ಸಾಲ ಕೊಡಬೇಕಾಗಿಲ್ಲ. ಅವರಿಗೆ ಸರ್ಕಾರದಿಂದಲೇ ಬಾಕಿ ಬರಬೇಕು. ಆ ಕಾರಣದಿಂದ ‘ರೈತ ಸಂಘ’ ಸ್ಥಾಪನೆಯಾಗಿರುವುದೇ ಹೊರತು ಸಾಲವನ್ನು ರದ್ದು ಮಾಡಿಸುವುದಕ್ಕಲ್ಲ. ರೈತರಿಗೆ ಬಾಕಿ ಬರಬೇಕಾದುದನ್ನು ವಸೂಲು ಮಾಡುವ ಉದ್ದೇಶದಿಂದ ರೈತ ಸಂಘ ಸ್ಥಾಪಿಸಲಾಗಿದೆ ಎಂದು ಎಂ.ಡಿ.ಎನ್‌ ಹೇಳುತ್ತಿದ್ದುದುಂಟು.

“ರೈತರು ವಿದ್ಯುಚ್ಛಕ್ತಿ ತೆರಿಗೆ, ಕಂದಾಯ, ನೀರಿನ ತೆರಿಗೆ ಹೀಗೆ ಅನೇಕ ಬಗೆಯ ತೆರಿಗೆಗಳನ್ನು ಸರ್ಕಾರಕ್ಕೆ ಕಟ್ಟುತ್ತಾರೆ. ಇದರಿಂದ ಸರ್ಕಾರಕ್ಕೆ ಸಂಗ್ರಹ ಆಗುವ ಹಣ ರೈತರಿಂದ ಸರ್ಕಾರಕ್ಕೆ ಸಿಗುವ ಆದಾಯವಾಗಿದೆ. ರೈತರು ಬೆಳೆದ ಬೆಳೆಗೆ ವೈಜ್ಞಾನಿಕ ಬೆಲೆ ಸಿಗುವಂತೆ ಮಾಡಬೇಕಾಗಿರುವುದು ಸರ್ಕಾರದ ಕೆಲಸ. ಯಾವಾಗ ರೈತನಿಗೆ ವೈಜ್ಞಾನಿಕ ಬೆಲೆ ಸಿಗುವುದಿಲ್ಲವೋ ಆಗ ರೈತನು ಆರ್ಥಿಕವಾಗಿ ದುರ್ಬಲನಾಗುತ್ತಾನೆ. ಈ ಪರಿಸ್ಥಿತಿ ರೈತರನ್ನು ಸಾಲ ಮಾಡಲು ಸರ್ಕಾರ ಪ್ರೇರಣೆ ನೀಡಿದಂತೆ ಆಗುತ್ತದೆ. ಆದ್ದರಿಂದ ಸರ್ಕಾರ ವೈಜ್ಞಾನಿಕ ಬೆಲೆ ಕೊಡುವವರೆಗೂ ಸರ್ಕಾರವೇ ಬಾಕಿದಾರ” ಎಂದು ಹೇಳಿರುವುದು ನಂಜುಂಡಸ್ವಾಮಿ ಅವರ ಚಿಂತನಾಕ್ರಮ ಎಂಥದು ಎಂಬುದನ್ನು ತಿಳಿಸಿಕೊಡುತ್ತದೆ.

ಕೃಷಿ ಸಮುದಾಯವನ್ನು ಕುರಿತಂತೆ ನಂಜುಂಡಸ್ವಾಮಿ ಅವರು-

ನಮಗೆ ಜಾತಿ ಬೇಕಿಲ್ಲ, ಮತ ಬೇಕಿಲ್ಲ. ನಮ್ಮದು ಒಂದೇ ಜಾತಿ. ನಮ್ಮದು ಒಂದೇ ಮತ, ಅದು ರೈತ ಮತ. ಆದ್ದರಿಂದ ನಮ್ಮ ಆಲೋಚನೆಗಳು ರೈತಪರ ಹಾಗೂ ಭ್ರಷ್ಟ ಸರ್ಕಾರದ ವಿರುದ್ಧ ಇರಬೇಕು. ಹಾಗಿದ್ದಾಗ ಮಾತ್ರ ಜಾಗೃತ ರೈತ ಸಮುದಾಯದ ಸೃಷ್ಟಿ

– ಆದುದರಿಂದ ರೈತರೆಲ್ಲರೂ ಒಂದುಗೂಡಿ ಹೋರಾಟ ಮಾಡಬೇಕೆಂದು ಹೇಳಿದ್ದಾರೆ.

ಬೇಸಾಯಗಾರರ ಬೆಳೆಯ ಸಮಸ್ಯೆಗಳೇ ಅಲ್ಲದೆ ಬೇಸಾಯಗಾರರು ನಿತ್ಯ ಜೀವನದಲ್ಲಿ ಎದುರಿಸುವ ಸಾಮಾನ್ಯ ಸಂಗತಿಗಳೂ ಕೂಡ ಎಷ್ಟು ಮಹತ್ತ್ವದ್ದು ಎಂಬುದನ್ನು ಅವರು ಗ್ರಹಿಸಿ ವಿವರಿಸುತ್ತಿದ್ದ ರೀತಿ ತುಂಬ ಖಚಿತವಾಗಿರುತ್ತಿತ್ತು. ರೈತರು ಶಾಶ್ವತ ಬರಗಾಲದಿಂದ ತಪ್ಪಿಸಿಕೊಳ್ಳಬೇಕಾದರೆ ಅವರು ಎಲ್ಲ ರಾಜಕೀಯ ಪಕ್ಷಗಳಿಂದ ತಪ್ಪಿಸಿಕೊಳ್ಳಬೇಕು ಎಂಬುದು ಅವರ ಅಭಿಮತ. ರಾಜಕಾರಣವನ್ನು ಕುರಿತಂತೆ-

ರಾಜಕೀಯ ಗುಂಪುಗಳು ದೇಶದ ಯಾವುದೇ ಸಮಸ್ಯೆಗಳಿಗೆ ಸ್ಪಷ್ಟ ಪರಿಹಾರ ಸಿದ್ಧಪಡಿಸಿಕೊಂಡಿಲ್ಲ. ರೈತ ಸಮಸ್ಯೆಗಳ ಬಗ್ಗೆ ಯಾವುದೇ ಸ್ಪಷ್ಟ ನಿಲುವನ್ನು ಪ್ರಕಟಿಸಿಲ್ಲ. ಯಾವುದೇ ಸ್ಪಷ್ಟ ವಿಚಾರಗಳ ಮೇಲೆ ಸಂಘಟಿತವಾಗಿಲ್ಲ ಹಾಗೂ ಸ್ಪಷ್ಟ ಕಾರ್ಯಕ್ರಮಗಳನ್ನು ಹಾಕಿಕೊಂಡಿಲ್ಲ. ಆದ ಕಾರಣ ರೈತರಿಗೆ ಇರುವ ಮಾರ್ಗ ಒಂದೇರೈತರು ತಮ್ಮ ಅಮೂಲ್ಯವಾದ ಓಟನ್ನು ಯಾರಿಗೂ ಕೊಡದೆ ಕಾಯ್ದಿರಿಸಿಕೊಳ್ಳುವುದುಎಲ್ಲಾ ರಾಜಕೀಯ ಗುಂಪುಗಳೂ ಖಾಲಿ ಡಬ್ಬದ ಪಾಠ ಕಲಿಯಬೇಕು

– ಎಂದು ರೈತರಲ್ಲಿ ಜಾಗೃತಿ ಮೂಡಿಸಲು ಪ್ರಯತ್ನಪಟ್ಟರು. ಎಲ್ಲ ರಾಜಕೀಯ ಪಕ್ಷಗಳನ್ನು ಶಾಶ್ವತವಾಗಿ ರೈತರು ನಿರ್ಣಾಮ ಮಾಡಿದಾಗ ಮಾತ್ರ ರಾಜ್ಯದಲ್ಲಿ ಶಾಶ್ವತ ಬರಗಾಲವೂ ನಾಶವಾಗುತ್ತದೆ ಎಂಬ ಗಹನವಾದ ವಿಚಾರಗಳನ್ನು ರೈತರಿಗೆ ತಿಳಿಸಿಕೊಟ್ಟರು.

ಗ್ಯಾಟ್‌ ಒಪ್ಪಂದ, ವಿಶ್ವ ವ್ಯಾಪಾರ ಸಂಘಟನೆ ರೂಪುಗೊಂಡು ರೈತರಿಗೆ ಹಾನಿಯುಂಟು ಮಾಡುವುದೆಂದು ಎಚ್ಚರಿಸಿದರು. ಬಹುರಾಷ್ಟ್ರೀಯ ಬೀಜ ಕಂಪೆನಿಗಳ ಪ್ರವೇಶದಿಂದ ಬೀಜೋತ್ಪಾದನೆ ಭಾರತೀಯರ ಕೈ ತಪ್ಪುತ್ತದೆ. ನಮ್ಮ ಪಾರಂಪರಿಕ ಬೀಜಗಳು ಕಣ್ಮರೆಯಾಗುವ ಸಂಭವ ತಲೆದೋರುತ್ತದೆ. ಆದ್ದರಿಂದ ಜಾಗತೀಕರಣ, ಔದ್ಯಮೀಕರಣ, ಖಾಸಗೀಕರಣದ ವಿರುದ್ಧ ಹೋರಾಡುತ್ತ ಇವೆಲ್ಲ ಒಪ್ಪಂದಗಳ ಹಿಡಿತದಿಂದ ಪಾರಾಗಿ ರೈತರು ಸ್ವಾವಲಂಬಿಗಳಾಗಬೇಕು.

ನಂಜುಂಡಸ್ವಾಮಿ ಅವರ ಕೃಷಿ ಚಿಂತನೆಗಳಲ್ಲಿ ಪ್ರಮುಖವಾದವುಗಳಾಗಿ ನೀರಾವರಿ, ಗ್ರಾಮೀಣಾಭಿವೃದ್ಧಿ, ಬಡತನ, ಬರಗಾಲದ ನಿರ್ಮೂಲನೆ, ಕೃಷಿಕಾರ್ಮಿಕರ ಕೂಲಿ ನಿಗದಿ, ಬಿತ್ತನೆ, ಕೃಷಿ ಮಾರುಕಟ್ಟೆಗೆ ಸಂಬಂಧಿಸಿದ ಕೆಲವೊಂದು ಚಿಂತನೆಗಳ ಬಗೆಗೆ ಇಲ್ಲಿ ಉದ್ಧರಿಸಲಾಗಿದೆ. “ಇಡೀ ದೇಶದ ಜನತೆಯ ಹೊಟ್ಟೆಗೆ ಅನ್ನವನ್ನು ನೀಡುವ ರೈತ ಸ್ವಾಭಿಮಾನದಿಂದ, ಆತ್ಮಗೌರವದಿಂದ ಬದುಕಿ ಅಧಿಕಾರಶಾಹಿಯ ವಿರುದ್ಧ ಸೆಟೆದು ನಿಲ್ಲುವಂತೆ ಆಗಬೇಕು” ಎಂದು ರೈತರನ್ನು ಎಚ್ಚರಿಸಿದರು.

ರೈತರು ತೀವ್ರಗತಿಯಲ್ಲಿ ಜಾಗೃತರಾಗುವಂತೆ, ಯಾವ ರಾಜಕೀಯ ಪಕ್ಷಗಳ ನಾಯಕರೂ ಚಿಂತಿಸಲಾರದ ಯೂರೋಪ್‌ ಪ್ರವಾಸ ಕೈಗೊಂಡದ್ದು, ಯೂರೋಪ್‌ ರಾಷ್ಟ್ರಗಳಲ್ಲಿ ಅಲ್ಲಿಯ ಒಕ್ಕಲುತನದ ರೀತಿ-ನೀತಿ, ಅಲ್ಲಿಯ ಒಕ್ಕಲುತನದ ರೀತಿ-ನೀತಿ, ಅಲ್ಲಿಯ ರೈತರ ಸ್ಥಿತಿಗಳನ್ನು ಕಣ್ಣಾರೆ ಕಂಡು ಭಾರತಕ್ಕೂ, ಯೂರೋಪ್‌ ದೇಶಗಳಿಗೂ ಇರುವ ವ್ಯತ್ಯಾಸವನ್ನು ಕಂಡುಕೊಳ್ಳುವಂಥೆ ಮಾಡಿದ್ದು ಎಂ.ಡಿ.ಎನ್‌. ಅವರ ಸಾಧನೆಗಳಲ್ಲಿ ಒಂದು ಮಹತ್ವದ ಮೈಲಿಗಲ್ಲು. ರಾಜ್ಯದಿಂದ ಹಳ್ಳಿಯ ಜನ ಗುಳೇ ಹೋಗದಂತೆ ತಡೆಯಲು ಪೂರ್ಣ ಉದ್ಯೋಗ ನೀಡುವ ಕಾರ್ಯಕ್ರಮಗಳನ್ನು ರೂಪಿಸುವುದು, ರಾಜ್ಯದ ಎಲ್ಲ ಮಕ್ಕಳಿಕಗೂ ಔದ್ಯೋಗಿಕ ಶಿಕ್ಷಣ ಸಿಗುವಂತೆ ಪೂರ್ಣ ಶಿಕ್ಷಣದ ಯೋಜನೆ ರೂಪಿಸುವುದು, ಹಳ್ಳಿಯ ಹೆಣ್ಣು ಮಕ್ಕಳ ನೀರಿನ ಬವಣೆ, ಉರುವಲು ಪಾಯಿಖಾನೆ ಮುಂತಾದ ಮೂಲಭೂತ ಸಮಸ್ಯೆಗಳನ್ನು ಬಗೆಹರಿಸುವ ಕಡೆಗೆ ಸರ್ಕಾರ ಗಮನಹರಿಸುವಂತೆ ಮಾಡಿದ್ದು ಇವರ ಸಾಧನೆ.

ಪೂರ್ಣ ಸ್ವಾತಂತ್ರ್ಯವಿರುವ ಸಾಲವಿಲ್ಲದ ಹಳ್ಳಿಗಳ ನಿರ್ಮಾಣ, ಲಂಚಿಲ್ಲದ ಆಡಳಿತ ವ್ಯವಸ್ಥೆ, ಮಹಿಳೆಯರಿಗೆ ವ್ಯವಸ್ಥಿತ ಜೀವನ, ಪೂರ್ಣ ಶಿಕ್ಷಣ, ಪೂರ್ಣ ಉದ್ಯೋಗ ಇವುಗಳನ್ನೊಳಗೊಂಡ ಹೊಸ ಕರ್ನಾಟಕ ಕಟ್ಟುವ ಬಹಳ ದೊಡ್ಡ ಕನಸನ್ನು ಪ್ರೊಫೆಸರ್ ಕಂಡಿದ್ದರು. ಇಂಥ ಕನಸುಗಳನ್ನು ಸಾಕಾರಗೊಳಿಸಲು ಹಾಗೂ ರೈತರ ಉದ್ಧಾರಕ್ಕಗಿ ಅವರು ನಿರಂತರವಾಗಿ ಶ್ರಮಿಸಿದರು.

ನಂಜುಂಡಸ್ವಾಮಿ ಅವರ ಕೊನೆಯ ದಿನಗಳು

ನಂಜುಂಡಸ್ವಾಮಿ ಅವರ ಕ್ರಿಯಾಶೀಲತೆ, ಭವಿಷ್ಯತ್ತಿನ ರೈತರ ಬಗೆಗಿನ ಕಾಳಜಿ, ಕರ್ನಾಟಕದಲ್ಲಿ ನಡೆಸಿದ ಹೋರಾಟಗಳಿಂದ ರೈತ ಚಳವಳಿ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿತು. ನಂಜುಂಡಸ್ವಾಮಿ ಅವರಿಗೆ ಅಂತರಾಷ್ಟ್ರೀಯ ಮಟ್ಟದಿಂದ ಅನೇಕ ಆಹ್ವಾನಗಳು ಬಂದವು. ಅವು ರೈತರ ಸಮಸ್ಯೆಗಳಿಗೆ ಸಂಬಂಧಿಸಿದ ವಿಷಯಗಳಾಗಿದ್ದರಿಂದ ಅಂತರಾಷ್ಟ್ರೀಯ ವಿಚಾರ ಸಂಕಿರಣಗಳಿಗೆ ತಕ್ಕಂತ ವೈಚಾರಿಕ ಜ್ಞಾನ ಇದ್ದುದರಿಂದ ನಂಜುಂಡಸ್ವಾಮಿ ಅವರೇ ಭಾಗವಹಿಸುತ್ತಿದ್ದರು. ಇದು ರೈತ ಸಂಘದ ಹಲವಾರು ಸದಸ್ಯರಲ್ಲಿ ಅಸೂಯೆಯ ಭಾವನೆಯನ್ನು ಹುಟ್ಟುಹಾಕಿತು. ಹಾಗೆಯೇ ರೈತ ಸಂಘದ ಹೆಸರಿನಲ್ಲಿ ನೂರಾರು ಎಕರೆ ಭೂಮಿಯನ್ನು ಖರೀದಿಸಿದ್ದಾರೆ ಎಂಬ ಆರೋಪಗಳನ್ನು ಅವರ ಮೇಲೆ ಮಾಡಲಾಯಿತು. ಇಂಥ ಆರೋಪಗಳು ಮುಂದೆ ‘ಕರ್ನಾಟಕ ರಾಜ್ಯ ರೈತ ಸಂಘ’ದ ಪ್ರಭಾವ ಕಡಿಮೆ ಆಗುವುದಕ್ಕೂ, ಜನರು ಹಗುರವಾಗಿ ಮಾತನಾಡಿಕೊಳ್ಳುವುದಕ್ಕೂ ಕಾರಣವಾದವು. ಇದರಿಂದಾಗಿ ನಂಜುಂಡಸ್ವಾಮಿ ಅವರು ೧೯೯೯ರಿಂದೀಚಿಗೆ ‘ರೈತ ಸಂಘ’ವನ್ನು ಮರು ಸ್ಥಾಪಿಸಲು ಶ್ರಮಿಸಿದರು. ಹೀಗೆ ನಂಜುಂಡಸ್ವಾಮಿ ಅವರು ಕಟ್ಟಿದ ಒಂದು ಸಂಘ ತಮ್ಮ ಕಣ್ಣೆದುರೇ ಒಡೆದು ಹೋಗಿದ್ದು ಅವರಿಗೆ ಅಪಾರ ನೋವನ್ನು ಉಂಟುಮಾಡಿತ್ತು. ಪತ್ನಿ ಪ್ರತಿಮಾ ಅವರೂ ಕ್ಯಾನ್ಸರ್ ನಿಂದ ಬಳಲುತ್ತಿದ್ದದು ನಂಜುಂಡಸ್ವಾಮಿ ಅವರ ಮನಸ್ಸನ್ನು ಮತ್ತಷ್ಟು ಘಾಸಿಗೊಳಿಸಿತ್ತು. ಕೆಲವೇ ದಿನಗಳ ಅಂತರದಲ್ಲಿ ಅವರೂ ಸಹ ಶ್ವಾಸಕೋಶ ಕ್ಯಾನ್ಸರ್ ರೋಗಕ್ಕೆ ತುತ್ತಾದರು.

ನಂಜುಂಡಸ್ವಾಮಿ ಅವರು ಶ್ವಾಸಕೋಶ ಕ್ಯಾನ್ಸರ್ ನಿಂದ ದೈಹಿಕವಾಗಿ ಬಳಲಿ ಹೋದರು. ಅನಾರೋಗ್ಯದಿಂದ ನರಳುತ್ತಿದ್ದಾಗಲೂ ಅಲೋಪಥಿಕ್‌ ಚಿಕಿತ್ಸೆ ತೆಗೆದುಕೊಳ್ಳಲು ನಿರಾಕರಿಸಿ ಆಯುರ್ವೇದದ ಚಿಕಿತ್ಸೆಯನ್ನು ಅವಲಂಭಿಸಿದರು. ಇದು ಅವರ ಹಠ ಹಾಗೂ ಸ್ವದೇಶಿಯತೆಯ ಪ್ರಜ್ಞೆಗೆ ಸಾಕ್ಷಿ ಯಾಗಿದೆ. ಕಾಯಿಲೆ ಗುಣಮುಖವಾಗದೆ ಇದ್ದ ಕಾರಣ ಕೊನೆಯ ದಿನಕಗಳಲ್ಲಿ ನಂಜುಂಡಸ್ವಾಮಿ ಅವರನ್ನು ಬಲವಂತವಾಗಿ ಕಿದ್ವಾಯಿ ಆಸ್ಪತ್ರೆಗೆ ಸೇರಿಸಲಾಯಿತು. ಅವರು ಆಸ್ಪತ್ರೆಯಲ್ಲಿ ಮಲಗಿದ್ದ ವೇಳೆಯಲ್ಲಿ ಯೂ ರೈತ ಹೋರಾಟದ ಮುಂದಿನ ರೂಪು-ರೇಶೆಗಳ ಬಗೆಗೇ ಮಾತನಾಡುತ್ತಿದ್ದರು. ಕ್ಯಾನ್ಸರ್ ನಿಂದ ಬಳಲುತ್ತಿದ್ದರೂ ಸಹ ಆಸ್ಪತ್ರೆಯಲ್ಲಿದ್ದುಕೊಂಡೇ ಮುಂಬೈಯಲ್ಲಿ ಜರುಗಿದ ವಿಶ್ವ ಸಾಮಾಜಿಕ ವೇದಿಕೆ (world social Forum) ಯ ಸಮ್ಮೇಳನಕ್ಕೆ ಪರ್ಯಾಯವಾಗಿ “ಮುಂಬೈ ರೆಸಿಸ್ಟನ್ಸ್‌” ಎಂಬ ವೇದಿಕೆಯನ್ನು ಹುಟ್ಟು ಹಾಕಿ ಮುಂಬೈ ನಗರದಲ್ಲಿ ಬೃಹತ್‌ ಸಮಾವೇಶವನ್ನು ನಡೆಸಿ, ದೆಹಲಿಯಲ್ಲಿಯೂ ಸಹ ಬೃಹತ್‌ ಪ್ರದರ್ಶನವನ್ನು ನಡೆಸಿದರು. ಸಂಘಟನೆಯ ಬಗೆಗೆ ಹೇಳುತ್ತಾ-

ರಾಜಕಾರಣಿಗಳ ಸಖ್ಯ ಹೊಂದಿರದ ನೈಜ ಕಾರ್ಯಕರ್ತರಿಗೆ ಸಂಘಟನೆಯಲ್ಲಿ ಹೆಚ್ಚು ಬೆಳೆಯಲು ಅವಕಾಶ ನೀಡಿ. ಒಂದು ಕಡೆ ರಾಜಕಾರಣ ಮತ್ತೊಂದು ಕಡೆ ಸಂಘಟನೆ ಎನ್ನುವವರನ್ನು ಆದಷ್ಟು ದೂರವಿರಿಸಿ. ಅವರನ್ನು ಸೇರಿಸಿಕೊಳ್ಳದಿದ್ದರೇ ಒಳಿತು

– ಎಂದು ಸಲಹೆ ನೀಡುತ್ತಿದ್ದರು. ಅಂತಿಮವಾಗಿ ನಂಜುಂಡಸ್ವಾಮಿ ಅವರ ದೇಹ ಸ್ಥಿತಿ ಸುಧಾರಿಸಿದೆ, ಅವರು ಮಾತನಾಡುವ ಸ್ಥಿತಿಯಲ್ಲಿಯೂ ಇರಲಿಲ್ಲ. ಹತಾಶೆಗೆ ಸಿಕ್ಕ ಮನೆ ಮಂದಿ ಎಲ್ಲ ತೆರನಾದ ವೈದ್ಯಕೀಯ ಚಿಕಿತ್ಸೆಗೆ ಮೊರೆಹೋಗಿದ್ದರು. ಕೊನೆಯ ದಿನಗಳಲ್ಲಿ ಕೃತಕ ಆಮ್ಲಜನಕದ ನೆರವಿನಿಂದ ಬದುಕಿದ್ದ ಅವರು ಹದಿನೆಂಟು ದಿನಗಳನ್ನು ಸಾವು ಬದುಕಿನ ಹೋರಾಟದಲ್ಲಿ ಕಳೆದರು. ಹೀಗೆ ರೈತ ಹೋರಾಟಕ್ಕೊಂದು ಹೊಸ ಪರಿಭಾಷೆ ಬರೆದ ನಂಜುಂಡಸ್ವಾಮಿ ಅವರು ‘ರೈತರ ರಾಜ್ಯ ನಿರ್ಮಾಣ’ದ ಬಹಳ ದೊಡ್ಡ ಕನಸು ಕಂಡದ್ದು ಹಾಗೇ ಉಳಿಯಿತು.

ತಮ್ಮ ಇಡೀ ಜೀವನದುದ್ದಕ್ಕೂ ನಾಡಿನ ಹಾಗೂ ರೈತರ ದಿಕ್ಕು-ದೆಸೆಗಳ ಕುರಿತು ಅಧ್ಯಯನ ಮಾಡಿ , ಆ ಬಗೆಗೆ ಚಿಂತಿಸಿ ಅವರ ಏಳಿಗೆಗಾಗಿ ಶ್ರಮಿಸಿದ ನಂಜುಂಡಸ್ವಾಮಿ ಅವರು ಫೆಬ್ರವರಿ ೩, ೨೦೦೪ರಂದು ತಮ್ಮ ೬೮ನೇ ವಯಸ್ಸಿನಲ್ಲಿ ಮರಣ ಹೊಂದಿದರು. ಅವರ ಅಗಲಿಕೆಯನ್ನು ಕುರಿತಂತೆ ಬುದ್ಧಿಜೀವಿಗಳು, ವಿದ್ವಾಂಸರು “ಮಣ್ಣಿನಲ್ಲಿ ಮೊಳಕೆ ಯೊಡೆದು ಪಲ್ಲವಿಸಿ ಗಿಡವಾಗಿ, ಮರವಾಗಿ, ಹೂವಾಗಿ ಅರಳಿದ ಜೀವ ಮತ್ತೆ ಮಣ್ಣಿಗೆ ಮರಳಿತ್ತು. ಆ ಹೂವಿನ ಮೊಗದ ತುಂಬ ಕನಸುಗಳು ತುಂಬಿದ್ದವು” ಎಂದಿದ್ದಾರೆ. ರೈತರೆಲ್ಲರೂ ಒಂದೇ ಕುಟುಂಬದ ಸದಸ್ಯರು ಎಂಬ ಭಾವನೆಯಿಂದ ಕೆಲಸ ಮಾಡಿದ್ದ ಕರ್ನಾಟಕ ರಾಜ್ಯ ರೈತ ಸಂಘದ ಸದಸ್ಯರಲ್ಲಿ ಎಂ.ಡಿ.ಎನ್‌ ಅವರ ಮರಣ ಅಪಾರ ನೋವನ್ನುಂಟು ಮಾಡಿತು.

ನಂಜುಂಡಸ್ವಾಮಿ ಅವರ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವಗಳೊಂದಿಗೆ ಲಕ್ಷಾಂತರ ರೈತರ ಸಮ್ಮುಖದಲ್ಲಿ ಹಾಗೂ ವಿದೇಶದಿಂದ ಆಗಮಿಸಿದ್ದ ಹೋರಾಟಗಾರರ ಸಮ್ಮುಖದಲ್ಲಿ ಅವರ ಕನಸಿನ ‘ಅಮೃತ ಭೂಮಿ’ಯಲ್ಲಿ ಜರುಗಿತು. ದೇಶದ ಹಾಗೂ ರಾಜ್ಯದ ಹಲವೆಡೆ ಭಾವಪೂರ್ವಕ ಶ್ರದ್ಧಾಂಜಲಿ ಸಭೆಗಳನ್ನು ರೈತರು ಹಮ್ಮಿಕೊಂಡರು. ೨೦೦೪ರಲ್ಲಿ ಎಂ.ಡಿ. ನಂಜುಂಡಸ್ವಾಮಿ ಅವರು ಮಣ್ಣಿಗೆ ಮರಳಿದ ದಿನವನ್ನು ಅಮೇರಿಕಾದಲ್ಲಿ ಕೆಸಿಂಗ್‌ಟನ್‌, ವೆಲ್‌ಫೇರ್ ರೈಟ್ಸ್‌ ಯೂನಿಯನ್‌ ಎಂಬ ಬಡಜನರ ಚಳವಳಿಯ ಸದಸ್ಯರುಗಳು ಹಸಿರು ಶಾಲು ಹೊದ್ದು ತಮ್ಮ ನೆಚ್ಚಿನ ನಾಯಕನಿಗೆ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಿದರು. ಜೂನ್‌ ೨೦೦೪ರಲ್ಲಿ ಬ್ರೆಜಿಲ್‌ನಲ್ಲಿ ಜರುಗಿದ ವಿಶ್ವರೈತ ಸಂಘಟನೆ ‘ಲಾವಿಯಾ ಕ್ಯಾಂಪೆಸಿನಾ’ದ ನಾಲ್ಕನೆಯ ಅಂತರಾಷ್ಟ್ರೀಯತ ಸಮಾವೇಶವನ್ನು ನಂಜುಂಡಸ್ವಾಮಿ ಅವರ ನೆನಪಿಗೆ ಅರ್ಪಿಸಲಾಯಿತು. ಅವರ ಅರವತ್ತೊಂಭತ್ತನೆಯ ಜನ್ಮದಿನವನ್ನು “ಗ್ರಾಮ ಸ್ವರಾಜ್ಯ ಪ್ರತಿಜ್ಞಾ ದಿನ” ಎಂದು ಮೈಸೂರಿನಲ್ಲಿ ರಾಜ್ಯದ ರೈತರು ಬೃಹತ್‌ ಸಮಾವೇಶ ನಡೆಸುವ ಮೂಲಕ ಎಂ.ಡಿ. ನಂಜುಂಡಸ್ವಾಮಿ ಅವರಿಗೆ ಶ್ರದ್ಧಾಂಜಲಿ ಅರ್ಪಿಸಿದರು. ನಂಜುಂಡಸ್ವಾಮಿ ಅವರ ನೇತೃತ್ವದಲ್ಲಿದ್ದ ‘ಕರ್ನಾಟಕ ರಾಜ್ಯ ರೈತ ಸಂಘ’, ಚಳವಳಿಯ ವಿಚಾರಗಳು ಅವರ ಮರಣಾನಂತರ ಕೆ.ಎಸ್‌.ಪುಟ್ಟಣ್ಣಯ್ಯ ಹಾಗೂ ಕೋಡಿಹಳ್ಳಿ ಚಂದ್ರಶೇಖರ್ ಮುಂದಾಳತ್ವದಲ್ಲಿ ಯೋಜಿತವಾದವು. ಆದರೆ ‘ಹಸಿರು ಸೇನಾನಿ’, ‘ವಿಶ್ವ ರೈತ ಚೇತನ’ ಅನ್ನಿಸಿದ್ದ ಪ್ರೊ.ಎಂ.ಡಿ. ನಂಜುಂಡಸ್ವಾಮಿ ಅವರ ಚಳವಳಿಯ ಛಾಪು ಇಂದಿಗೂ ಮೂಡಿ ಬಂದಿಲ್ಲ.