ಝಗಝಗಿಸುವೀ ಸ್ಟೇಷನ್ನಿನಲ್ಲಿ
ನಡುರಾತ್ರಿ, ರೆಪ್ಪೆಯ ಮೇಲೆ ನಿದ್ರೆ-
ಯೊಳಸಂಚು. ಸುತ್ತ ಅಸ್ತವ್ಯಸ್ತ :
ಜನ, ಸಾಮಾನು, ಚಿಳ್ಳೆ-ಪಿಳ್ಳೆ. ಕೂತ-
ಲ್ಲಿಯೇ ಕೂತು ಆಕಳಿಸಿ ಚಿಟಿಕೇ ಹೊಡೆವ,
ಮೈ ಮುದುರಿ ಹೊದ್ದು ಬಿದ್ದಿರುವ, ನಿಂತಲ್ಲೇ
ನಿಂತು ನಿಟ್ಟುಸಿರಿಡುವ ಭಾವದ ತುಮುಲ ;
ರೈಲು ಬರಲಿಲ್ಲವೋ ರೈಲು ಬರಲಿಲ್ಲ.

ಎಲ್ಲಿ ಏನಾಗಿದೆಯೋ : ಕಂಬಿಗಳ ಒಳಸಂಚೋ,
ಸೇತುವೆಯ ಪಿತೂರಿಯೋ, ಗಾಡಿಗಳ ಸತ್ಯಾ-
ಗ್ರಹವೋ, ಸುದ್ದಿಯೇ ಇಲ್ಲ. ಎಲ್ಲೂ
ಯಾರಲ್ಲಿಯೂ ಚಟುವಟಿಕೆಯೇ ಇಲ್ಲ ;
ಕಾತರದ ಗಡಿದಾಟಿ ಕಾದೂ ಕಾದೂ ಕಾದೂ
ಸೀದು ಹೋಗಿದೆ ಜೀವ.

ಏನೇನೂ ಆಗಿಲ್ಲವೆಂಬಂತೆ ತಣ್ಣಗೆ ಉರಿವ
ನಿಯಾನ್ ದೀಪಗಳ ಸುತ್ತ ಲಕ್ಷೋಪಲಕ್ಷ
ಹುಳು ಹುಪ್ಪಟೆಯ ಪರಿವಾರ. ರಪ್ಪನೆ ಬಡಿದು
ಮುರಿದ ಕನಸುಗಳಂತೆ ಕೆಳಗುದುರಿ ಬಿದ್ದಿರುವ
ಮಳೆಚಿಟ್ಟೆಗಳ ರೆಕ್ಕೆಯನ್ನೆಣಿಸಿ ಮುಗಿಸಬಹುದೇ
ನಾನು ಈ ನನ್ನ ದಾರಿಯುದ್ದಕ್ಕೂ !

ಇದು ದೊಡ್ಡ ಜಂಕ್ಷನ್ನು. ಹತ್ತೂ ಕಡೆಯಿಂದ
ಬಂದು ಹಾದು ಹೋಗುವುವಿಲ್ಲಿ ನೂರು ನೆನಪಿನ
ಕಂಬಿ. ಆ ಮೂರನೆಯ ಕಂಬಿಯ ಮೇಲೆ ಹೆಣ
ಭಾರವಾಗಿ ಮಲಗಿದೆ ಗೂಡ್ಸುಗಾಡಿಯ ಸಾಲು
ಬೆಳಕಿರದ, ಚಲನೆಯೇ ಇರದ, ಮರೆಯ-
ಲೆತ್ನಿಸಿದರೂ ಹೊರೆಯಾಗಿ ಬಿದ್ದಿರುವ ಅನಿ-
ವಾರ‍್ಯ ಭಾರದ ಹಾಗೆ.

ರೈಲು ಬರಲಿಲ್ಲವೋ ರೈಲು ಬರಲಿಲ್ಲ.
ಆಗಲೇ ಉರುಳಿ ಬಂದಿದ್ದೇನೆ ಅರ್ಧ ದಾರಿ.
ದಾರಿಯುದ್ದಕ್ಕೂ ಜಡಿಮಳೆ ಬಡಿದು
ಹೊಳೆ-ಹಳ್ಳ ಕೊಳ್ಳಗಳಾಗಿ ಮುಸುಗುಟ್ಟಿ
ಹಾಯ್ದ ಕೆಂಪು ನೀರಿನ ಗೂಳಿಗಳನ್ನು ಹೇಗೋ
ದಾಟಿ, ತಡವಾದರೂ ಬಂದು ತಲುಪಿದ್ದೇನೆ
ಈ ಜಂಕ್ಷನ್ನಿನಲ್ಲಿ ; ಜೇಬಿನಲ್ಲಿದೆ ಹೊರಟಾಗ
ಕೊಂಡ ಟಿಕೇಟು. ಇನ್ನರ್ಧದಾರಿ ಸಾಗಿಸುವ
ರೈಲು ಬರಲಿಲ್ಲವೋ, ಬರಲಿಲ್ಲ.

“Less luggage more comfort”
ಹೌದು less luggage more comfort.
ತದ್ವಿರುದ್ಧವಾಗಿದೆ ನನ್ನ ಈ ಪರಿಸ್ಥಿತಿ,
ನನಗೋ ಎರಡು ಹೋಲ್ಡಾಲು ; ಮೂರು ಕಿಟ್,
ನಾಲ್ಕು ಸೂಟ್‌ಕೇಸು. ಅನಿಸುತ್ತದೆ
less luggage ಇದ್ದರೇ ಚೆನ್ನಾಗಿತ್ತು.
ಈಗ ಮಾಡುವುದೇನು? ಕಟ್ಟಿಕೊಂಡಿರುವಾಗ
ಹೊತ್ತು ಸಾಗಿಸಬೇಕು. ಈಗಾಗಲೇ
ಬಂದದ್ದಾಯ್ತು ಅರ್ಧ ದಾರಿ ; ಚರ್ಚಿಸಿ
ಉಪಯೋಗವಿಲ್ಲ ಈ ಎಲ್ಲದರ ತಪ್ಪು ಸರಿ.

ಥತ್ ಬರಲಿಲ್ಲ. ರೈಲು ಬರಲೇ ಇಲ್ಲ.
ರೈಲು ಬರುವುದೇ ಇಲ್ಲವೆ? ಕಗ್ಗತ್ತಲೆಯ
ದಂಡಕಾರಣ್ಯದಲ್ಲಿ ಹೀಗೆ ಕಾಯುವುದಕ್ಕೆ
ಕೊನೆಯಿಲ್ಲವೆ? ಅಗೊ, ಅಶರೀರವಾಣಿ
ಲೌಡ್‌ಸ್ಪೀಕರಿನಲ್ಲಿ ! ಏನದು? ಇನ್ನು
ಹದಿನೈದು ನಿಮಿಷಗಳಲ್ಲಿ ರೈಲು
ಬರಲಿದೆಯಂತೆ. ಇನ್ನೂ ಹದಿನೈದು
ನಿಮಿಷ. ಸದ್ಯ, ರೈಲು ಬರುತ್ತದಂತೆ.
ದೂರದಲ್ಲಿ ಹಸಿರು ದೀಪಗಳ ಭರವಸೆ.
ಘಂಟೆಯನುರಣನಕ್ಕೆ ಗಡಿಬಿಡಿ. ಸುತ್ತ
ಪ್ಲಾಟ್‌ಫಾರಂನಲ್ಲಿ ಮುದುರಿ ಬಿದ್ದದ್ದೆಲ್ಲ
ಮೈ ಮುರಿದು ಏಳತೊಡಗಿದೆ. ರೈಲು
ಬರುತ್ತದೆ ; ಕವಿದ ಕತ್ತಲಿನಾಚೆ ನಾಳೆ ಬೆಳಗಿನ
ಕೆಳಗೆ ಹೊಳೆವ ಊರಿನ ಕನಸು ತೆರೆಯುತ್ತದೆ.
ಏಳಯ್ಯ ಓ ಮನುಷ್ಯ ಇನ್ನು ಕೆಲವೇ ನಿಮಿಷ.