‘ಛುಕ್ಕು ಛುಕ್ಕು ಛುಕ್ಕು ಛುಕ್ಕು’
ಎಂಥ ತಾಳ ಬಯಲೊಳು !
ಮೌನದಲ್ಲಿ ಮಲಗಿದ ಮನ
ಬೆರಗುಗೊಂಡು ನಿಲುವುದು !

ರೈಲು ಬರುವ ಮೊದಲೆ ಅದೋ
ಅದರ ತಾಳದಬ್ಬರ !
ಮಲಗಿದೆರಡು ಕಂಬಿಗಳೂ
ನಡುಗುತಿಹವು ಥರ ಥರ.

ಭಯಭಕ್ತಿಯ ವಿನಯದಲ್ಲಿ
ಕೈಮರ ತಲೆಬಾಗಿಸಿ
ನಿಂತುಕೊಳಲು, ಸಿಳ್ಳು ಹಾಕಿ
ರೈಲ್ ಬರುವುದು ಧಾವಿಸಿ !

ಮಕ್ಕಳೆಲ್ಲ ಗೇಟಿನ ಬಳಿ
ಒಂದೇ ಓಟ ಓಡುತ,
ಭಯ-ಬೆರಗಿನ ಕಣ್ಣರಳಿಸಿ
ನಿಂತಿರುವರು ನೋಡುತ.

ಮೇಯುತಿದ್ದ ಕತ್ತೆಯೂ
ಕಿವಿಯರಳಿಸಿ ನಿಂತಿತು.
ಎಂಜಿನ್ನಿನ ಹಿಂದೆ ಡಬ್ಬಿ
ಸಾಲು ಸಾಲು ಓಡಿತು !

ಬಂತು ರೈಲು, ಹೋಯ್ತು ರೈಲು,
ಒಂದೆ ಒಂದು ಚಣದೊಳು !
ಏನೊ ಬಂತು, ಏನೊ ಹೋಯ್ತು ;
ರೈಲೆ ? ಅದೂ ತಿಳಿಯದು !

ಭವಿಷತ್ತಿನ ಕಂಬಿ ಮತ್ತೆ
ಎಂದಿನಂತೆ ಹಾಸಿವೆ.
ಭೂತಕಾಲವನ್ನು ಎಳೆದು
ವರ್ತಮಾನ ಸಾಗಿದೆ !