ರೊದ್ದ ಶ್ರೀನಿವಾಸರಾವ್ —ಹಿಂದಿನ ಮುಂಬಯಿ ಕರ್ನಾಟಕ ಪ್ರದೇಶದಲ್ಲಿ ಕನ್ನಡದ ಅಭಿವೃದ್ಧಿಗಾಗಿ ದುಡಿದ ಹಿರಿಯರು. ಅಧ್ಯಾಪಕರಾಗಿ, ಇನ್‌ಸ್ಪೆಕ್ಟರಾಗಿ ಅವರು ಶಿಕ್ಷಣ ಕ್ಷೇತ್ರಕ್ಕೆ ಅಪಾರ ಸೇವೆ ಸಲ್ಲಿಸಿದರು. ಶಾಸನಸಭೆಯ ಸದಸ್ಯರಾಗಿ ಜನತೆಯ ಒಳಿತಿಗಾಗಿ ದುಡಿದರು.

 

ರೊದ್ದ ಶ್ರೀನಿವಾಸರಾವ್

ಧಾರವಾಡದಲ್ಲಿರುವ ಕರ್ನಾಟಕ ಕಾಲೇಜಿನ ಮುಂಭಾಗದಲ್ಲಿ ಒಂದು ಕಲ್ಲುಕಂಬದ ಮೇಲೆ ಎದೆಮಟ್ಟದ ಒಂದು ಶಿಲ್ಪವಿದೆ. ಆ ಪ್ರತಿಮೆಯನ್ನು ಹತ್ತಿರದಿಂದ ನೋಡಿದರೆ ಆ ವ್ಯಕ್ತಿಯ ಕಲ್ಪನೆ ನಮ್ಮ ಮನಸ್ಸಿನಲ್ಲಿ ಮೂಡಿ ನಿಲ್ಲುತ್ತದೆ. ತುಂಬು ಮುಖ, ಮುಖಕ್ಕೆ ಪುರುಷತ್ವದ ಕಾಂತಿ ಕೊಡುವ ಹೊರಸಾದ ಮೀಸೆ, ತಲೆಯ ಮೇಲೆ ಧಾರವಾಡ ಸಂಪ್ರದಾಯದ ದಪ್ಪ ಪೇಟ. ಪ್ರತಿಮೆಯನ್ನು ಏಕಾಗ್ರತೆಯಿಂದ ನೋಡುತ್ತಾ ನಿಂತರೆ ಮನಸ್ಸನ್ನು  ತನ್ನ ಕಡೆಗೆ ಸೆಳೆದುಕೊಳ್ಳುವ ಆಕರ್ಷಕ ಮುಖಭಾವ. ನಿಂತವರನ್ನು  ಅಂತಃಕರಣದಿಂದ ಪರೀಕ್ಷಿಸುತ್ತಿರುವಂತೆ ಕಾಣುವ ನೋಟ. ಎಪ್ಪತ್ತೊಂಬತ್ತು ವರ್ಷಗಳ ಸಾರ್ಥಕ ದುಡಿಮೆಯಿಂದ  ಸಾರ್ಥಕ ಜೀವನ ನಡೆಸಿದ ತೃಪ್ತಭಾವ ಮುಖದಲ್ಲಿ ಹೊಮ್ಮಿ ನಿಂತಿರುವುದನ್ನು ಕಾಣಬಹುದು.

ಆ ಶಿರೋಭಾಗದ ಹಿಂದೆ ನಿಂತಿರುವ ಹಳೆಯ ಕಾಲದ ಭವ್ಯ ಕಟ್ಟಡವೇ ಅವರ ಕಾಯಕದ ಸಜೀವ ಸ್ವರೂಪ. ಅದೇ ಕರ್ಣಾಟಕ ಕಾಲೇಜು.

ಪೂರ್ವ ಇತಿಹಾಸ

ಕೋನೇರರಾವ್ ರೊದ್ದ ಶ್ರೀನಿವಾಸರಾವ್ ಎಂಬುವರ ಪ್ರತಿಮೆಯೇ ಅದು.ಕೋನೇರರಾವ್ ಅವರ ತಂದೆಯ ಹೆಸರು. ರೊದ್ದ ಅವರ ಹಿರಿಯರ ಊರು. ಅದು ಮದರಾಸ್ ಪ್ರಾಂತ್ಯದ ಅನಂತಪುರ ಜಿಲ್ಲೆಯ ಪೆನಗೊಂಡ ತಾಲ್ಲೂಕಿನ ಒಂದು ಗ್ರಾಮ. ಅಲ್ಲಿ ಶಾನುಭೋಗ ವೃತ್ತಿಯಲ್ಲಿದ್ದ ಮನೆತನವೊಂದು  ವಾಸವಾಗಿತ್ತು.

ಆ ಮನೆತನದ ತಿಮ್ಮಪ್ಪ ಎಂಬವರ ಮಗ ಕೋನೇರ ರಾಯ. ಅಪ್ಪ ದುಷ್ಟ ಎನ್ನಿಸಿಕೊಂಡಿದ್ದ, ಮಗ ಅಷ್ಟೂ ಸಾಧು. ಜೊತೆಗೆ ಧರ್ಮಭೀರು. ಅಪ್ಪನ ಯಾವ ಉಡಾಳತನವೂ ಮಗನಲ್ಲಿ ಮೈಗೂಡಿರಲಿಲ್ಲ. ತಂದೆಯ ದುಂದು ವೆಚ್ಚ ಮಗನನ್ನು ಬಡತನಕ್ಕೆ ನೂಕಿತ್ತು. ತಂದೆಗೆ ಸಂಸಾರದ ಚಿಂತೆಯೇ ಇರಲಿಲ್ಲ. ಆ ಕಾರಣ ಈ ಮಗ ಪರಪುಟ್ಟನಾಗಿ ಬೆಳೆಯಬೇಕಾಯಿತು.

ಕೋನೇರ ರಾಯನ ತಾತ ಭಾಸ್ಕರಪ್ಪನಿಗೆ ಶ್ರೀನಿವಾಸ ರಾಯನೆಂಬ ತಮ್ಮನೊಬ್ಬನಿದ್ದನು. ಅವನು ಶಿಕ್ಷಕ. ಅವನು ಕೋನೇರ ರಾಯನನ್ನು ರೊದ್ದದಿಂದ ಧಾರವಾಡಕ್ಕೆ ಕರೆತಂದು ತನ್ನ ಮಗನ ಜೊತೆಯಲ್ಲಿ ಅವನನ್ನೂ ಮಗನಂತೆಯೇ ಕಂಡು ಅವನಿಗೆ ವಿದ್ಯಾಭ್ಯಾಸ ಕೊಡಿಸಿದನು. ಆದರೆ ಶ್ರೀನಿವಾಸರಾಯ ತನ್ನ ಮೂವತ್ತೆರಡನೆಯ ವಯಸ್ಸಿನಲ್ಲಿ ತೀರಿಕೊಂಡ. ಕೋನೇರ ರಾಯ ಬಡತನ ದಲ್ಲಿಯೇ ವಿದ್ಯಾಭ್ಯಾಸವನ್ನು ಮುಂದು ವರಿಸಿದನು. ಬಡತನವೇ ಬಂದರೂ ಚಿಕ್ಕಮ್ಮನ ಮತ್ತು ಅವಳ ಮಕ್ಕಳ ವಾತ್ಸಲ್ಯ ಸ್ನೇಹ ಪ್ರೀತಿಗಳಿಂದ ಅವನು ಬೆಳೆದನು. ಅವನ ಓದು ತಡವರಿಸುತ್ತಾ ಮುಂದುವರಿಯುತ್ತಿತ್ತು.

ಕೋನೇರರಾಯ ಮನೆಯ ಪರಿಸ್ಥಿತಿಯ ಕಾರಣದಿಂದ ಹೆಚ್ಚು ಓದಲಾಗಲಿಲ್ಲ. ಸ್ವಲ್ಪ ಮಟ್ಟಿನ ಕನ್ನಡ ಮರಾಠಿ ಕಲಿತು ಸರ್ವೆ ಖಾತೆಯಲ್ಲಿ ಒಂದು ಸಣ್ಣ ನೌಕರಿಗೆ ಸೇರಿಕೊಂಡನು. ಮನೆಯ ಹಿರಿಯರು ಅವನಿಗೆ ಮದುವೆಯನ್ನೂ ಮಾಡಿದರು. ಅವನ ಕೈ ಹಿಡಿದ ಹೆಣ್ಣು ಸುಬ್ಬಮ್ಮ. ಹೊಸ ಸಂಸಾರ ಪರಾಧೀನದಲ್ಲಿಯೇ ಬೆಳೆಯಿತು.

ಜನನ – ಬಾಲ್ಯ

ಈ ಒಟ್ಟು ಕುಟುಂಬದಲ್ಲಿದ್ದಾಗಲೇ ಕೋನೇರ ರಾಯನಿಗೆ ಒಬ್ಬ ಮಗ ಹುಟ್ಟಿದನು. ಅವನು ಹುಟ್ಟಿದ್ದು ೧೮೫೦ನೆಯ ಸೆಪ್ಟೆಂಬರ್ ೧೭ ರಂದು ಮಗು ತಾಯಿ ತಂದೆಗಳ ಅಕ್ಕರೆಯಲ್ಲಿ ಬಂಧುಗಳ ಆಶ್ರಯದಲ್ಲಿ ಬೆಳೆಯತೊಡಗಿತು. ಮಗು ದಷ್ಟಪುಷ್ಟವಾಗಿತ್ತು. ನೆರೆಹೊರೆಯವರ ಪ್ರೀತಿ ವಾತ್ಸಲ್ಯಕ್ಕೆ ಒಳಗಾಗಿತ್ತು. ಕೋನೇರ ರಾಯರ ಸಂಸಾರ, ಮಡಿ, ಶ್ರೀನಿವಾಸ ರಾಯನ ಕುಟುಂಬದೊಡನೆ ಸಾಗುತ್ತಿದ್ದಾಗ ಅವನಿಗೆ ರೋಣಕ್ಕೆ ವರ್ಗವಾಯಿತು. ಕೋನೇರ ರಾಯ ಮದಿಹಾಳಿನಲ್ಲೇ ಸ್ವತಂತ್ರವಾಗಿ ಕುಟುಂಬ ನಿರ್ವಹಣೆ ಮಾಡಬೇಕಾಯಿತು. ಅಷ್ಟರಲ್ಲಿ ಅವನಿಗೆ ಇನ್ನಿಬ್ಬರು ಹೆಣ್ಣುಮಕ್ಕಳಾಗಿದ್ದರು. ಮೂರು ಮಕ್ಕಳು, ಗಂಡ ಹೆಂಡತಿ. ಯಜಮಾನನಿಗೆ ೧೪ ವರ್ಷದ ಸೇವೆಗೆ ಫಲವಾಗಿ ಬರುತ್ತಿದ್ದ ೧೪ ರೂಪಾಯಿ ಸಂಬಳದಲ್ಲಿ ಕುಟುಂಬ ನಿರ್ವಹಣೆಯಾಗಬೇಕಾಗಿತ್ತು. ಆದರೆ ಕೋನೇರ ರಾಯ ಹಳೆಯ ಸಂಪ್ರದಾಯಸ್ಥ. ಧರ್ಮಭೀರು. ಅಲ್ಪತೃಪ್ತ. ಅವರ ಅಜ್ಜನ ಉಡಾಳತನ ವಾಗಲಿ, ಅಪ್ಪನ ಅನಾಚಾರ ನಡುವಳಿಕೆಯಾಗಲಿ ಅವನಲ್ಲಿ ಬೆಳೆದು ಬರಲಿಲ್ಲ. ಸದ್ವಂಶದಲ್ಲಿ ಹುಟ್ಟಿಬಂದ ಹೆಂಡತಿಯ ಸಹಜೀವನ ಅವನನ್ನು ಸನಡತೆಯವನ್ನಾಗಿ ಮಾಡಿತ್ತು.

ವಿದ್ಯಾಭ್ಯಾಸ

ಶ್ರೀನಿವಾಸರಾಯ ಪ್ರಾಥಮಿಕ ವಿದ್ಯಾಭ್ಯಾಸವನ್ನು ಮದಿಹಾಳದ ಒಂದು ಗಾಂವಠಿ ಶಾಲೆಯಲ್ಲಿ ಕೈಕೊಂಡನು. ಆಗಿನ ಶಾಲೆಗಳೆಂದರೆ ಮಾಸ್ತರರ ಮನೆಗಳೇ ಶಾಲೆಗಳಾಗಿದ್ದುವು. ಶ್ರೀನಿವಾಸರಾಯ ಕನ್ನಡ ಮತ್ತು ಮರಾಠಿ ಭಾಷೆಗಳನ್ನು ಕಲಿತನು. ಅನಂತರ ಬಾಸೆಲ್ ಮಿಷನ್ ಹೈಸ್ಕೂಲಿನಲ್ಲಿ ಇಂಗ್ಲಿಷ್ ಕಲಿತನು. ಅವನ ಜೊತೆಗಿದ್ದ ಐವರು ವಿದ್ಯಾರ್ಥಿಗಳಲ್ಲಿ ಇವನೇ ಯಾವಾಗಲೂ ಮೊದಲನೆ ಯವನು. ಹುಡುಗನ ಮೇಧಾಶಕ್ತಿ ಆಶ್ಚರ್ಯಕರವಾದದ್ದು. ಆತನ ಸ್ಮರಣಶಕ್ತಿ ಅದ್ಭುತವಾದದ್ದು.

ಮನೆಯ ಬಡತನ, ಚಿಕ್ಕ ವಯಸ್ಸಿನಲ್ಲೇ ಆದ ಮದುವೆ, ಆಗಲೆ ಸಂಭವಿಸಿದ ತಂದೆಯ ಮರಣ ಶ್ರೀನಿವಾಸರಾಯನ ವಿದ್ಯಾಭ್ಯಾಸವನ್ನು ಕುಂಠಿತಗೊಳಿಸಿತು. ಚಿಕ್ಕ ವಯಸ್ಸಿನಲ್ಲಿಯೇ ಹೆಣ್ಣು ಮಕ್ಕಳಿಗೆ ಗಂಡು ಮಕ್ಕಳಿಗೆ ಮದುವೆ ಮಾಡಿಬಿಡುವ ಸಂಪ್ರದಾಯದ ಕಾಲ ಅದು. ಶ್ರೀನಿವಾಸರಾಯನಿಗೂ ಅವನ ಹದಿನಾರನೆಯ ವಯಸ್ಸಿನಲ್ಲಿಯೇ ವಿವಾಹವಾಯಿತು. ಗಂಗಸಮುದ್ರದ ರಾಘವೇಂದ್ರರಾಯನ ಮಗಳು ವೆಂಕೂಬಾಯಿಯೇ ಅವನು ಮನೆ ತುಂಬಿಸಿಕೊಂಡ ಹೆಣ್ಣು. ಈ ಮದುವೆ ಅನೇಕ ವಿಘ್ನಗಳನ್ನು ದಾಟಿಯೇ ನಡೆಯಿತು. ವಿವಾಹಕ್ಕಾಗಿ ಹೊರಟಾಗ ತಂದೆ ಮರಣ ಹೊಂದಿದರು. ಮದುವೆಗಾಗಿ ಸಂಗ್ರಹಿಸಿದ ಸಾಮಾಗ್ರಿಗಗಳು ಅಪರ ಕರ್ಮಗಳಿಗೆ ಬಳಕೆ ಯಾದವು. ಎರಡನೆಯ ಸಲ ತಂಗಿ ಕಾಲವಾದಳು. ಇವುಗಳನ್ನೆಲ್ಲ ಅಪಶಕುನಗಳೆಂದು ಭಾವಿಸದೆ ಶ್ರೀನಿವಾಸ ರಾಯ ಆ ಹೆಣ್ಣನ್ನೇ ಮದುವೆಯಾದನು.

ಚಿಕ್ಕಂದಿನಲ್ಲಿನ ಹೊಣೆ

ಆಶ್ರಯ ಕೊಟ್ಟಿದ್ದ ಬಂಧುಗಳು ಬೇರೆ ಊರಿಗೆ ಹೋದದ್ದು, ತಂದೆಯ ಮರಣ, ಮದುವೆಯ ಬಂಧನ ಇವೆಲ್ಲ ಶ್ರೀನಿವಾಸನ ಸಂಸಾರದ ಹೊಣೆಯನ್ನು ಹೆಚ್ಚು ಮಾಡಿದವು. ಅದರಿಂದ ಅವನು ಕುಟುಂಬ ನಿರ್ವಹಣೆಗೆ ಸಂಪಾದಿಸಲೇ ಬೇಕಾಗಿತ್ತು. ಆದರೆ ಉದ್ಯೋಗಕ್ಕೆ ತಕ್ಕ ವಯಸ್ಸೂ ಆಗಿರಲಿಲ್ಲ. ಆಗ ಮನೆಯಲ್ಲಿ ಕೆಲವು ಹುಡುಗರಿಗೆ ಪಾಠ ಹೇಳಲು ಆರಂಭಿಸಿದನು. ಅದೇ ಒಂದು ರೀತಿಯ ಉಪಾಧ್ಯಾಯನ ವೃತ್ತಿ ಆಯಿತು. ಎಂಟು ಜನ ವಿದ್ಯಾರ್ಥಿಗಳು ಬರುತ್ತಿದ್ದರು. ಪ್ರತಿ ವಿದ್ಯಾರ್ಥಿಗೆ ಎಂಟು ಆಣೆ ಶುಲ್ಕ. ತಿಂಗಳ ಸಂಪಾದನೆ ನಾಲ್ಕು ರೂಪಾಯಿಗಳು. ಇದೇ ಸಂಸಾರ ನಿರ್ವಹಣೆಗೆ ಆಧಾರ. ಸ್ವಲ್ಪ ಕಾಲಾನಂತರ ಹುಬ್ಬಳ್ಳಿಯ ಬಾಸೆಲ್ ಮಿಷನ್ ಅವರ ಆಂಗ್ಲ ವರ್ನಾಕ್ಯುಲರ್ ಶಾಲೆಯಲ್ಲಿ ೧೫ ರೂಪಾಯಿ ಸಂಬಳದ ಮಾಸ್ತರಿಕೆ ದೊರಕಿತು. ಈ ಕೆಲಸಕ್ಕಾಗಿ ಅವರು ಪ್ರತಿದಿನವೂ ಧಾರವಾಡದಿಂದ ಹುಬ್ಬಳ್ಳಿಗೆ, ಹುಬ್ಬಳ್ಳಿಯಿಂದ ಧಾರವಾಡಕ್ಕೆ ಒಟ್ಟು ೨೪ ಮೈಲಿಗಳ ದೂರ ನಡೆದು ಹೋಗಿ ಬರಬೇಕಾಗಿತ್ತು. ಅವರ ಸಂಬಳ ದಿನದ ನಡಿಗೆಗೆ ಎಂಟು ಆಣೆ ಕೂಲಿಯಂತೆ ಮಾತ್ರ ಆಗಿತ್ತು. ಆದರೆ ಮಕ್ಕಳಿಗೆ ಕಲಿಸುವ ಅವರ ಆಸಕ್ತಿ, ಕಾರ್ಯದಲ್ಲಿ ದಕ್ಷತೆ, ಅವರ ತೀಕ್ಷ್ಣ ಬುದ್ಧಿವಂತಿಕೆ ಅಧಿಕಾರಿಗಳ, ವಿದ್ಯಾರ್ಥಿಗಳ ಮೆಚ್ಚಿಕೆಯನ್ನು ಸಂಪಾದಿಸಿಕೊಟ್ಟವು.

ಮುಂದರಿದ ವಿದ್ಯಾಭ್ಯಾಸ

ಶ್ರೀನಿವಾಸರಾಯರ ವಿದ್ಯಾರ್ಜನೆಯ ಆಸೆ ಬತ್ತಿ ಹೋಗಲಿಲ್ಲ. ಕುಟುಂಬದ ಭಾರದಿಂದ ಅದು ಕುಸಿಯಲಿಲ್ಲ. ಶಿಕ್ಷಣವೃತ್ತಿಗೆ ಬೇಕಾದ ಟ್ರೈನಿಂಗ್ ಪಡೆಯಬೇಕೆಂದು ಬೆಳಗಾವಿ ಟ್ರೈನಿಂಗ್ ಕಾಲೇಜನ್ನು ಸೇರಿದರು. ಮೊದಲ ವರ್ಷದ ಪರೀಕ್ಷೆಯಲ್ಲಿ ಪ್ರಥಮ ತರಗತಿಯಲ್ಲಿ ತೇರ್ಗಡೆಯಾಗಿ ಅಗ್ರಸ್ಥಾನವನ್ನು ಪಡೆದರು. ಆಗ ಅವರಿಗೆ ಮೆಟ್ರಿಕ್ಯುಲೇಷನ್ ಪರೀಕ್ಷೆಯನ್ನೂ ಏಕೆ ಮಾಡಬಾರದು ಎನ್ನಿಸಿತು. ಪರೀಕ್ಷೆಗೆ ಮುಂಬಯಿಗೆ ಹೋಗಬೇಕಾಗಿದ್ದಿತು. ಒಂದಲ್ಲ, ಎರಡು ಸಲ ಪ್ರಯತ್ನಿಸಿ ೧೮೭೦ ರಲ್ಲಿ ಆ ಪರೀಕ್ಷೆಯನ್ನು ಮಾಡಿದರು. ಆಗ ಅವರು ತಾಯಿಯೊಡನೆ ಪುಣೆಯಲ್ಲೇ ನಿಂತರು. ಟ್ರೈನಿಂಗ್ ಕಾಲೇಜಿನ ಪ್ರಿನ್ಸಿಪಾಲರಾಗಿದ್ದ, ಇವರ ಬುದ್ಧಿಮತ್ತೆಯನ್ನು ಮೆಚ್ಚಿಕೊಂಡಿದ್ದ ಹುಯಿಲಗೋಳ ಭುಜಂಗರಾಯರ ನೆರವಿನಿಂದ ಅವರ ಓದು ಹೀಗೆ ಮುಂದುವರಿಯಿತು. ಡೆಕ್ಕನ್ ಕಾಲೇಜಿಗೆ ಸೇರಿ ಬಿ. ಎ. ಪದವಿ ಪಡೆಯಲು ತುಂಬ ಶ್ರಮಿಸಿದರು. ಆದರೆ ಕೌಟುಂಬಿಕ ಅಡಚಣೆಗಳಿಂದ ಅಭ್ಯಾಸ ಮಧ್ಯದಲ್ಲಿಯೇ ನಿಂತಿತು.

ಶ್ರೀನಿವಾಸರಾಯರಿಗೆ ಉದ್ಯೋಗವನ್ನು ಹುಡುಕದೆ ಬೇರೆ ಮಾರ್ಗವೇ ಇರಲಿಲ್ಲ. ಆಗ ಮುಲಕಿ ಖಾತೆಯಲ್ಲಿ ಉದ್ಯೋಗಕ್ಕಾಗಿ ಒಂದು ಪರೀಕ್ಷೆ ನಡೆಯಿತು. ಅದರಲ್ಲಿ ಇವರು ಎರಡನೆಯವರಾಗಿ ಬಂದರು. ಆದರೂ ಹೆಚ್ಚಿನ ಪ್ರಭಾವವನ್ನು ಪಡೆದಿದ್ದ ಮೂರನೆಯ ವರ್ಗದಲ್ಲಿ ತೇರ್ಗಡೆಯಾದವನಿಗೆ  ಕೆಲಸ ದೊರಕಿ ಶ್ರೀನಿವಾಸ ರಾಯರಿಗೆ ಆ ಕೆಲಸ ಸಿಗಲಿಲ್ಲ. ಆದರೂ ರಾಯರ ಬುದ್ಧಿವಂತಿಕೆ ಯನ್ನು ಮೆಚ್ಚಿದ್ದ ಮಿಡಲ್‌ಟನ್ನಿನ ಶಿಫಾರಸಿನ ಮೇಲೆ ಇವರಿಗೆ ೨೦ ರೂಪಾಯಿಗಳ ಕಾರಕೂನ ಕೆಲಸ ದೊರಕಿತು. ಆದರೆ ಶ್ರೀನಿವಾಸರಾಯರು ಆ ಕೆಲಸವನ್ನು ಬಹಳ ದಿನ ಮಾಡಲಿಲ್ಲ. ಕಛೇರಿಯ ಲಂಚದ ವಾತಾವರಣ ಅವರ ಮನಸ್ಸಿಗೆ ಅಸಹ್ಯವನ್ನು ತಂದು ಕೊಟ್ಟಿದ್ದರಿಂದ ಅದನ್ನು ಬಿಟ್ಟು ತಮಗೆ ಪ್ರಿಯವಾದ ಶಿಕ್ಷಕವೃತ್ತಿಯನ್ನೇ ಕೈ ಕೊಂಡರು.

ಶ್ರೀನಿವಾಸರಾಯರು ಕಾರವಾರದಲ್ಲಿ ೪೫ ರೂಪಾಯಿ ಸಂಬಳದ ಉಪಾಧ್ಯಾಯರಾದರು. ಅವರು ಹೇಳುತ್ತಿದ್ದ ಪಾಠದ ವಿಷಯಗಳೆಂದರೆ ಗಣಿತ ಮತ್ತು ಇತಿಹಾಸ. ಈ ಶಿಕ್ಷಣವೃತ್ತಿಯಲ್ಲಿ ಅವರಿಗೆ ಎಷ್ಟು ಆಸಕ್ತಿಯಿದ್ದಿತೆಂದರೆ, ತಿಳಿಯದ, ಕಲಿಯಲು ಆಸಕ್ತಿಯುಳ್ಳ ವಿದ್ಯಾರ್ಥಿಗಳಿಗೆ ರಾತ್ರಿ ೮ ಗಂಟೆಯಿಂದ ೧೦ ಗಂಟೆಯವರೆಗೆ ಉಚಿತವಾಗಿ ಪಾಠ ಹೇಳಿಕೊಡುತ್ತಿದ್ದರು. ಹೆಣ್ಣು ಮಕ್ಕಳಿಗೂ ಇಂಗ್ಲಿಷ್ ಕಲಿಸುವ ಅವರ ಮನೋವೃತ್ತಿ ಹೆಂಗಸು ವಿದ್ಯಾವಂತಳಾಗಬೇಕೆಂಬ ಅವರ ಸುಧಾರಣೆಯ ಸ್ವಭಾವವೇ ಆಗಿತ್ತು. ಕಾರವಾರದ ಹುಡುಗಿಯರ ಶಾಲೆಯಲ್ಲಿ ಇಂಗ್ಲಿಷ್ ಕಲಿಸುತ್ತಿದ್ದ ಅವರು ಶಾಲೆಯಿಂದ ಯಾವ ಸಂಭಾವನೆಯನ್ನೂ ವೇತನವನ್ನೂ ಸ್ವೀಕರಿಸುತ್ತಿರಲಿಲ್ಲ. ಹಲವು ಶಾಲೆಗಳಲ್ಲಿ ಕೆಲಸ ಮಾಡಿದ ನಂತರ ೧೮೭೬ ರಲ್ಲಿ ಸಹಾಯಕ ಡೆಪ್ಯುಟಿ ಶಿಕ್ಷಣ ತನಿಖಾಧಿಕಾರಿಗಳಾಗಿ ನೇಮಕ ರಾದರು.

ಉದ್ಯೋಗದಲ್ಲಿ ನಿಷ್ಠೆ

ಶ್ರೀನಿವಾಸರಾಯ ಮಾಸ್ತರ ಕೆಲಸ ಮತ್ತು ತನಿಖಾಧಿಕಾರಿಯ ಕೆಲಸ ತುಂಬ ಶಿಸ್ತಿನಿಂದ ಕೂಡಿತ್ತು. ವಿದ್ಯಾರ್ಥಿಗಳ ಬಗ್ಗೆ ಅವರು ವಹಿಸುತ್ತಿದ್ದ ಕಾಳಜಿ ಮೆಚ್ಚುವಂಥದು. ಪ್ರತಿಯೊಬ್ಬ ವಿದ್ಯಾರ್ಥಿಯೂ ಕಲಿಯುವ ವಯಸ್ಸಿನಲ್ಲಿ ಆದಷ್ಟು ಚೆನ್ನಾಗಿ ಕಲಿಯಬೇಕೆಂದು ಅವರ ಆಸೆ. ಅದಕ್ಕಾಗಿ ಶಾಲೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ ಮನೆಯಲ್ಲಿ ಪ್ರತ್ಯೇಕವಾಗಿ ಪಾಠ ಹೇಳಿಕೊಡುತ್ತಿದ್ದರು. ಅವರು ಕಲಿಸುತ್ತಿದ್ದ ಪಾಠಗಳೆಂದರೆ ಕನ್ನಡ, ಇಂಗ್ಲಿಷ್, ಹಾಗೂ ಇಂಗ್ಲೆಂಡ್ ಮತ್ತು ಗ್ರೀಸ್ ದೇಶಗಳ ಚರಿತ್ರೆ, ಅವರ ಪಾಠವೆಂದರೆ ಹುಡುಗರಿಗೆ  ಹೆಚ್ಚು ಆಸಕ್ತಿ. ಈ ಕಾರಣ ವನ್ನು ಉಪಯೋಗಿಸಿಕೊಂಡು ಶ್ರೀನಿವಾಸರಾಯರು ವಿದ್ಯಾರ್ಥಿಯ ನಡವಳಿಕೆಯನ್ನು ಗಮನಿಸುತ್ತಿದ್ದರು. ಶಿಷ್ಯವರ್ಗದಲ್ಲಿ ಒಬ್ಬ ಕಳ್ಳ ಹುಡುಗ ಸೇರಿಕೊಂಡಿದ್ದು ಒಮ್ಮೆ ಅವರ ಗಮನಕ್ಕೆ ಬಂದಿತು. ಅವನು ಮಾಡುತ್ತಿದ್ದುದು ಶಾಲೆಯ ಮಸಿಕುಡಿಕೆ ಗಳನ್ನು ಕದಿಯುವುದು. ಪರೀಕ್ಷೆಯ ಸಮಯದಲ್ಲೋ ಮತ್ತಾವ ಕಾಲದಲ್ಲೋ ಹುಡುಗರಿಗೆ ಬರೆಯಲು ಕೊಡುತ್ತಿದ್ದ (ಅಥವಾ ಹುಡುಗರೇ ಬರೆಯಲು ತರುತ್ತಿದ್ದ) ಮಸಿಸೀಸೆಗಳಲ್ಲಿ ಕೆಲವು ಮಂಗಮಾಯ. ಇದನ್ನು ರಾಯರು ಎಚ್ಚರಿಕೆ ವಹಿಸಿ ಕಂಡುಕೊಂಡು ಕಳ್ಳನನ್ನು ಪತ್ತೆ ಮಾಡಿದರು. ಅವರ ಮನೆಗೆ ಹೋಗಿ ಕಳ್ಳಮಾಲನ್ನು  ಹಿಡಿದರು. ಹುಡುಗನ ಮನೆಯಲ್ಲಿ ನೂರಾರು ಶಾಯಿದೌತಿಗಳು ಪತ್ತೆಯಾದವು. ಅನಂತರ ಹುಡುಗನನ್ನು ಬೆದರಿಸಿ, ಬುದ್ಧಿ ಹೇಳಿ, ಆತನ ತಂದೆ ತಾಯಿಗಳಿಗೆ ಅವನ ಜವಾಬ್ದಾರಿಯನ್ನು ತಿಳಿಸಿಕೊಟ್ಟು ಅವನನ್ನು ಸನ್ಮಾರ್ಗದಲ್ಲಿ ನಡೆಯುವಂತೆ ಮಾಡಿದರು.

ಶಾಲೆಯ ಹುಡುಗರಲ್ಲಿ ಕೆಟ್ಟ ಚಟ ಬೆಳೆಯದಂತೆ ಹೇಗೆ ನೋಡಿಕೊಳ್ಳುತ್ತಿದ್ದರೋ ಹಾಗೆಯೇ ತಾವು ನಿಂತ ಊರಿನ ಬಗ್ಗೆಯೂ, ಊರಿನ ಜನರ ಯೋಗಕ್ಷೇಮದ ಬಗ್ಗೆಯೂ ಆಸ್ಥೆ ವಹಿಸುತ್ತಿದ್ದರು.

ಸವಣೂರಿನಲ್ಲಿ ರಾಯರು ಕೆಲಸಮಾಡುತ್ತಿದ್ದಾಗ ಅಲ್ಲಿನ ನಾಮಾವಳಿ ಎಂಬುವರ ಮನೆಯಲ್ಲಿ ಒಮ್ಮೆ ಎರಡು ಮೂರು ಸಾವಿರ ರೂಪಾಯಿಗಳ ಬಂಗಾರದ ಒಡವೆಗಳು ಕಳುವಾದವು. ರಾಯರ ಮನಸ್ಸು ಅದನ್ನು ಮೆಲುಕು ಹಾಕತೊಡಗಿತು. ಅವರ ದೈನಿಕ ಸಂಪರ್ಕಗಳಲ್ಲೆಲ್ಲ ಈ ವಿಚಾರವನ್ನೇ  ಗಮನಿಸುತ್ತ, ಜನರು ಆಡುವ ಮಾತಿನಿಂದ ರಹಸ್ಯವನ್ನು ಭೇದಿಸತೊಡಗಿದರು. ಅವರ ಸೂಕ್ಷ್ಮ ಬುದ್ಧಿ ಅಪರಾಧಿಗಳನ್ನು ಗುರುತಿಸಿತು. ಶಿವರುದ್ರ, ನರಸಿಂಹ ಎಂಬ ಕಳ್ಳರು ಮಾಲನ್ನು ಅಪಹರಿಸಿದ್ದರು. ರಾಯರು ಪೊಲೀಸರ ಸಹಾಯ ಪಡೆದು ಕಳ್ಳರಿಬ್ಬರನ್ನೂ ಆಭರಣಗಳ ಸಮೇತ ಬಂಧಿಸಿದರು.

ಸಾರ್ವಜನಿಕ ಹಿತ ದೃಷ್ಟಿ

ರಾಯರು ಶಾಲೆಯಲ್ಲಿ ಮಕ್ಕಳ ವಿಷಯಕ್ಕೆ ಊರಿನಲ್ಲಿ ಜನರ ವಿಷಯಕ್ಕೆ ತೋರಿಸುತ್ತಿದ್ದ ವಿಶ್ವಾಸ, ಆಸಕ್ತಿ ಅವರನ್ನು   ಜನ ಪ್ರೀತಿ, ಗೌರವಗಳಿಂದ ಕಾಣುವಂತೆ ಮಾಡಿತು. ಈ ಸಾರ್ವಜನಿಕ ಹಿತಾಸಕ್ತಿಯ ಜೊತೆಗೆ ರಾಯರು ಮತ್ತೊಂದು ಬಹು ಉಪಯುಕ್ತವೂ ಸಹೃದಯ ಪೂರ್ಣವೂ ಆದ ಕಾರ್ಯಕ್ರಮವನ್ನು ಏರ್ಪಡಿಸಿ ಕೊಂಡರು. ಅದೊಂದು ರೀತಿಯ ‘ಮಿತ್ರ ಸಮಾಜ’ ಸ್ಥಾಪನೆ. ಶ್ರೀನಿವಾಸರಾಯರು ಸ್ನೇಹಪರರು. ಅವರಿಗೆ ಸ್ನೇಹಿತರನ್ನು ಕೂಡಿಸಿಕೊಳ್ಳುವ ಪರಿಪಾಠವೂ ಗೊತ್ತಿತ್ತು. ಒಮ್ಮೆ ಅವರು ತಮ್ಮ ಶಾಲೆಯ ಶಿಕ್ಷಕರನ್ನೆಲ್ಲ ತಮ್ಮ ಮನೆಗೆ ಬಂದು ಭಾನುವಾರ ಔತಣಕ್ಕೆ ಆಹ್ವಾನಿಸಿದರು. ಭೋಜನಾನಂತರ ಆ ಈ ವಿಷಯ ಹರಟೆ ಹೊಡೆಯುತ್ತಾ ಶಾಲೆಯ ಪಾಠಕ್ರಮದ ವಿಚಾರವನ್ನು ಕುರಿತು ಮಾತನಾಡಿದರು. ಶಾಲೆಯ ಅಭಿವೃದ್ಧಿಯ ವಿಚಾರವಾಗಿ ಸಣ್ಣ ಚರ್ಚೆ ನಡೆಸಿದರು. ಮಾತು ಅಪೂರ್ಣವಾಯಿತು.  ಆಗ ರಾಯರಿಗೆ ಅನ್ನಿಸಿತು-ಚರ್ಚೆಯನ್ನು ಮುಂದಿನ ಭಾನುವಾರ ತೆಗೆದುಕೊಳ್ಳೋಣ ಎಂದು. ಹಾಗಾದರೆ ಎಲ್ಲಿ ಯಾವಾಗ ಎಂಬ ಪ್ರಶ್ನೆ ಬಂತು. ಮತ್ತೊಬ್ಬ ಸಹ ಶಿಕ್ಷಕರು ತಮ್ಮ ಮನೆಯಲ್ಲೆ ಆಗಲಿ ಎಂದರು. ಈ ಕ್ರಮ ನಡೆಯುತ್ತಲೇ ಹೋಯಿತು. ಪ್ರತಿ ಭಾನುವಾರ ಒಬ್ಬೊಬ್ಬರ ಮನೆಯಲ್ಲಿ  ಒಂದು ಸಂತೋಷಕೂಟ,  ವಿಚಾರ ವಿಮರ್ಶೆ. ಈ ಕೂಟಕ್ಕೆ ಕ್ರಮೇಣ ಉಪಾಧ್ಯಾಯರಲ್ಲದ, ಆದರೆ ಸ್ನೇಹಜೀವಿಗಳಾದ ಊರಿನ ಇತರ ಗಣ್ಯರೂ ಬರಲು ತೊಡಗಿದರು. ಇದರಿಂದ ಶಿಕ್ಷಕರಲ್ಲಿ ಐಕಮತ್ಯವೂ, ಸಮಾಜದಲ್ಲಿ ಶಿಕ್ಷಕರಿಗೆ ಗಣ್ಯ ಸ್ಥಾನವೂ ದೊರಕಲು ಅವಕಾಶವುಂಟಾಗಿ ಶಾಲೆಯ ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚಿನ ಸೌಕರ್ಯ ಒದಗಿಬಂತು. ಇದೇ ಸಂಪ್ರದಾಯವನ್ನು ಅವರು ಧಾರವಾಡದ ಶಾಲೆಯಲ್ಲಿದ್ದಾಗಲೂ ನಡೆಸಿ ಕೊಂಡು ಬಂದರು. ಈ ಗೋಷ್ಠಿಗಳಲ್ಲಿ ಕೆಲವೊಮ್ಮೆ ವಿದ್ವಾಂಸರಿಂದ ಉಪನ್ಯಾಸ, ವ್ಯಾಖ್ಯಾನಗಳೂ ನಡೆಯುತ್ತಿದ್ದವು. ರಾಯರ ಪ್ರಯತ್ನಗಳು ಸಾರ್ವಜನಿಕ ಕಾರ್ಯಗಳಿಗೂ ಬುನಾದಿಯಾದುವು.

ಅದು ಭಾರತಕ್ಕೆ ಸ್ವಾತಂತ್ರ್ಯವಿಲ್ಲದೆ ಬ್ರಿಟಿಷರ ಮುಷ್ಠಿಗೆ ಸೇರಿದ್ದ ಕಾಲ. ೧೮೭೬ ರಲ್ಲಿ ಸ್ವದೇಶಿ ಆಂದೋಳನ ಆರಂಭವಾಯಿತು. ಜನರು ಸ್ವದೇಶಾಭಿ ಮಾನಿಗಳಾಗ ಬೇಕಿತ್ತು. ಈ ದಿಸೆಯಲ್ಲಿ ಮೊದಲ ಹೆಜ್ಜೆ ಸ್ವದೇಶಿ ವಸ್ತ್ರಧಾರಣೆ. ಶ್ರೀನಿವಾಸರಾಯರು ಈ ಕೆಲಸದ ನೇತಾರರಾದರು. ಜನಕ್ಕೆ  ಈ ಸ್ವದೇಶಿ ಬಟ್ಟೆ ದೊರಕಲು ಅನುಕೂಲವಾಗುವಂತೆ ಅನೇಕ ಶ್ರೀಮಂತ ದೇಶಭಕ್ತರ ಸಹಾಯದಿಂದ ಒಂದು ವ್ಯಾಪಾರೋತ್ತೇಜಕ ಕಂಪನಿ ಯನ್ನು ಆರಂಭಿಸಿದರು. ಅದು ಮರುವರುಷ ‘ಜಾಯಿಂಟ್ ಸ್ಟಾಕ್ ಕಂಪನಿ’ ಯಾಗಿ ಮಾರ್ಪಟ್ಟಿತು.

ತನಿಖಾಧಿಕಾರಿಯಾಗಿ

ಮಾಸ್ತರಿಕೆ ಕೆಲಸದಿಂದ ರಾಯರು ತನಿಖಾಧಿಕಾರಿ (ಇನ್‌ಸ್ಪೆಕ್ಟರ್)ಗಳಾದರೆಂದು ಹಿಂದೆಯೇ ಹೇಳಿತಷ್ಟೇ. ಈ ಹುದ್ದೆಯಲ್ಲೂ ಅವರು ತೋರಿಸಿದ ಆಸಕ್ತಿ, ದುಡಿದ ಕ್ರಮ ಆಶ್ಚರ್ಯವನ್ನುಂಟುಮಾಡತಕ್ಕಂಥದು.

ಪ್ರಾಥಮಿಕ ಶಾಲೆಗಳ ಪರೀಕ್ಷೆಗಳನ್ನು ತನಿಖಾಧಿ ಕಾರಿಗಳು ನಡೆಸಬೇಕಾಗಿತ್ತು. ಅವರೊಬ್ಬರಿಂದಲೇ ಜಿಲ್ಲೆಯ ಎಲ್ಲ ಶಾಲೆಗಳೂ ತನಿಖೆಯಾಗುತ್ತಿದ್ದವು.  ಈಗಿನಷ್ಟು ಆಗ ಶಾಲೆಗಳಿಲ್ಲದಿದ್ದರೂ ಇರುವಷ್ಟು ಶಾಲೆಗಳನ್ನು ತನಿಖೆ ಮಾಡಿ ಮುಗಿಸುವುದೂ ಹೆಚ್ಚು ಕಷ್ಟದಾಯಕವೇ ಆಗಿತ್ತು. ಅನೇಕ ಸ್ಥಳಗಳಿಗೆ ಎತ್ತಿನ ಗಾಡಿನಲ್ಲಿ ಹೋಗಬೇಕಿತ್ತು. ಕೆಲವು ಹಳ್ಳಿಗಳಿಗೆ ನಡೆಯಬೇಕಾಗಿತ್ತು. ಶಾಲೆಯ ಮುಂದುವರಿಕೆ ಶಾಲೆಯ ವಿದ್ಯಾರ್ಥಿಗಳ ತೇರ್ಗಡೆಯ ಶೇಕಡಾ ಪ್ರಮಾಣವನ್ನು ಅನುಸರಿಸುತ್ತಿತ್ತು. ಆದ್ದರಿಂದ ಶಿಕ್ಷಕರು ಒಂದು ರೀತಿಯ  ಸ್ಪರ್ಧೆಯಿಂದ ತಾವು ಹೇಳಿ ಕೊಡುವ ಪಾಠ ವಿಧಾನದಲ್ಲಿ ವಿಚಕ್ಷಣೆಯನ್ನು ಅಭ್ಯಾಸ ಮಾಡಿಕೊಳ್ಳ ಬೇಕಾಗುತ್ತಿತ್ತು. ಕೆಲವೊಮ್ಮೆ ಅವರ ಬಡ್ತಿಯೂ ಅವರ ಈ ವಿಚಕ್ಷಣತೆಯನ್ನೇ ಅವಲಂಬಿಸುತ್ತಿತ್ತು. ಅವರು ಸುಮ್ಮಸುಮ್ಮನೇ ರಜ ಹಾಕಿಯೋ ಸೋಮಾರಿಗಳಾಗಿಯೋ ಹುಡುಗರಿಗೆ  ಸರಿಯಾಗಿ ವಿದ್ಯೆ ಕಲಿಸದಿದ್ದರೆ ಅವರ ವೇತನದ  ವಾರ್ಷಿಕ ಹೆಚ್ಚುವರಿ ಖೋತಾ ಬೀಳುತ್ತಿದ್ದುದೂ ಅಲ್ಲದೆ ಮತ್ತಿತರ ಶಿಕ್ಷೆಗೂ ಅವರು ಒಳಗಾಗಬೇಕಾಗುತ್ತಿತ್ತು. ಈ ತನಿಖೆ ರೊದ್ದ ಶ್ರೀನಿವಾಸರಾಯರ ಕಾಲದಲ್ಲಿ ತೀವ್ರತರ ವಾಗಿತ್ತು. ಅಧಿಕಾರಿಗಳು ಊರಿಂದ ಊರಿಗೆ ನಡೆದು ಹೋಗುವುದರಲ್ಲೇ ಪರಿಣತರಿದ್ದರು. ಅವರು ಯಾವ ಕಾಲಕ್ಕೆ ಯಾವ ಊರಿಗೆ ಬರುತ್ತಾರೆ ಎಂಬ ಮುನ್‌ಸೂಚನೆಯೇ ಇರುತ್ತಿರಲಿಲ್ಲ. ಅಲ್ಲದೆ ಅವರಿಗೆ ಶಿಕ್ಷಕರೆಲ್ಲರ ಪರಿಚಯ ಇರುತ್ತಿತ್ತು. ಒಬ್ಬರನ್ನು ಒಮ್ಮೆ ನೋಡಿಬಿಟ್ಟರೆ ಅವರನ್ನು ರಾಯರು ಜೀವಾವಧಿ ಮರೆಯುತ್ತಲೇ ಇರಲಿಲ್ಲ. ಇನ್ನು ಹುಡುಗರಿಗೆ ಪರೀಕ್ಷೆ ಮಾಡುವ ಅವರ ಕ್ರಮವೂ ಇನ್ನೊಬ್ಬ ರಿಂದ ಸಾಧ್ಯವಾಗುತ್ತಿರಲಿಲ್ಲ. ಒಂದು ದೃಷ್ಟಿಯಲ್ಲಿ ಅವರು ಶತಾವಧಾನಿಗಳು. ಶಾಲೆಯ ಹುಡುಗರನ್ನು ಪ್ರಶ್ನಿಸುವಾಗ ಯಾವ ಹುಡುಗನನ್ನು ಅಥವಾ ಯಾವ ತರಗತಿಯನ್ನು ಯಾವ ವಿಷಯದಲ್ಲಿ ಪರೀಕ್ಷಿಸುತ್ತಿದ್ದರು ಎಂದು ಮೊದಲಾಗಿ ಊಹಿಸುವುದೇ ಕಷ್ಟವಾಗುತ್ತಿತ್ತು. ಅವರ ಈ ನಡುವಳಿಕೆ ಶಿಕ್ಷಕರಿಗೂ ವಿದ್ಯಾರ್ಥಿಗಳಿಗೂ ಏಕಕಾಲದಲ್ಲಿ ಭಯ ವನ್ನುಂಟುಮಾಡುತ್ತಿತ್ತು. ಒಂದೇ ವರಾಂಡದಲ್ಲಿ ಅಥವಾ ಅಂಗಳದಲ್ಲಿ ಎಲ್ಲ ವರ್ಗಗಳ ಹುಡುಗರನ್ನು ಕೂಡಿಸಿ ಒಂದು ವರ್ಗಕ್ಕೆ ಗಣಿತ, ಇನ್ನೊಂದು  ವರ್ಗಕ್ಕೆ ಭೊಗೋಳ, ಇನ್ನೊಂದಕ್ಕೆ ಬರಹ, ಮತ್ತೊಂದಕ್ಕೆ ವಾಚನ ಹೀಗೆ ತಾವೇ ನಿಂತು ‘ಚಕಚಕ’ ಪರೀಕ್ಷೆ ನಡೆಸುತ್ತಿದ್ದರು. ಇಂಥ ತನಿಖೆ ವಿದ್ಯಾರ್ಥಿಗಳ ಅಭ್ಯಾಸಕ್ಕೆ ಹೆಚ್ಚಿನ ಅಸ್ತಿಭಾರವನ್ನು ಹಾಕಿತು. ರೊದ್ದ ಅವರು ಜಿಲ್ಲೆಯ ಯಾವ ಶಾಲೆಯ ಪರೀಕ್ಷೆಯನ್ನೂ ಮುಂದೂಡುತ್ತಿರಲಿಲ್ಲ. ನಿಷ್ಠಾವಂತರಾಗಿ, ಚಟುವಟಿಕೆಯಿಂದ, ಬುದ್ಧಿತೀಕ್ಷ್ಣತೆ ಯಿಂದ ಕೆಲಸ ಮಾಡುತ್ತಾ ವಿದ್ಯಾರ್ಥಿಗಳ ಕಲಿಕೆಗೆ ಶಿಕ್ಷಕರ ಕರ್ತವ್ಯಕ್ಕೆ ಶಾಲೆಯ ಅಭಿವೃದ್ಧಿಗೆ ದುಡಿದರು. ಅವರ ದುಡಿಮೆ ಶಿಕ್ಷಣ ಇಲಾಖೆಯ ಮೇಲಾಧಿಕಾರಿಗಳನ್ನು ಮಾತ್ರವಲ್ಲದೆ, ಕಂದಾಯ ಮತ್ತಿತರ ಸರ್ಕಾರಿ ಇಲಾಖೆಗಳ ಅಧಿಕಾರಿಗಳ ಮೆಚ್ಚಿಕೆಯನ್ನು ಆಕರ್ಷಿಸಿತು. ಆ ಅಧಿಕಾರಿಗಳು ಪ್ರಮುಖವಾಗಿ ಆಂಗ್ಲರಾಗಿದ್ದರು. ಆಗ ಕಲೆಕ್ಟರ್ ಆಗಿದ್ದ ಎಲ್‌ಫಿನ್‌ಸ್ಟನ್ ಎಂಬುವರು ಇವರ ಸೇವೆಯನ್ನು ಮುಲಕಿ ಖಾತೆಗೆ ಬಯಸಿದರು. ಅವರು ‘ರಾಯರ ಪರೀಕ್ಷಾವಿಧಾನ, ಊರಿನ ಪ್ರಮುಖರನ್ನು ಹಿಡಿದು ಅವರಿಂದ ಉತ್ತಮದರ್ಜೆಯಲ್ಲಿ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳಿಗೆ ಬಹುಮಾನ ಕೊಡಿಸುವ ಕ್ರಮ, ಸ್ತ್ರೀಶಿಕ್ಷಣಕ್ಕೆ ಕೊಟ್ಟ ಪ್ರೋತ್ಸಾಹ, ಶಾಲೆಗಳ ಕೆಟ್ಟ ಕಟ್ಟಡಗಳ ಬಗ್ಗೆ ತೀಕ್ಷ್ಣ ಖಂಡನೆ- ಸರ್ಕಾರದ ಕಟ್ಟಡವೇ ಆದರೂ- ಇವೆಲ್ಲ ಅವರು ತಮ್ಮ ಕರ್ತವ್ಯದಲ್ಲಿ ತೋರಿಸುವ ಗುಣಾಂಶಗಳು. ಅವರಂಥ ಕೆಲಸಗಾರರು ಮುಲಕಿ (ಕಂದಾಯ) ಖಾತೆಗೆ ದೊರೆತರೆ ಖಾತೆಯ ಕೀರ್ತಿಯೂ ಸರ್ಕಾರದ ಘನತೆಯೂ ಹೆಚ್ಚುತ್ತವೆ. ವಿದ್ಯಾಭ್ಯಾಸ ಇಲಾಖೆಗೆ ನಷ್ಟವಾದರೂ, ಅಲ್ಲಿ ಅವರಿಗೆ ಹೆಚ್ಚಿನ ಬಡ್ತಿಯ ಅವಕಾಶವಿಲ್ಲದಿರುವುದರಿಂದ ಅವರ ಯೋಗಕ್ಷೇಮ ಕ್ಕಾಗಿಯೂ ಅವರ ಸೇವೆಯನ್ನು ಕಂದಾಯ ಇಲಾಖೆ ಪಡೆಯುವುದು ಅಗತ್ಯ’ಎಂದು ವಿವರಿಸಿದರು.

ಲೋಕಹಿತ

ರಾಯರು ಅಗತ್ಯ ಬಿದ್ದಾಗಲೆಲ್ಲ ಸಾರ್ವಜನಿಕ ಸೇವಾ ಕಾರ್ಯಗಳಿಗೂ ಮನಸ್ಸಿಟ್ಟು ಸೇವೆ ಸಲ್ಲಿಸುತ್ತಿದ್ದರು. ೧೮೭೬-೭೭ರಲ್ಲಿ ಹಿಂದೂಸ್ತಾನದ ‘ಕ್ಷಾಮ’ ಮರೆಯ ಲಾಗದ ಪೀಡೆ. ಮಳೆಯಿಲ್ಲದೆ ಜನ ಒಂದು ಕಡೆಯಿಂದ ಇನ್ನೊಂದು ಕಡೆಗೆ ವಲಸೆ ಹೋಗಲು ತೊಡಗಿದರು. ವಿಜಾಪುರ ಮೊದಲಾದ ಕಡೆಗಳಿಂದ ಲಕ್ಷಾಂತರ ಜನ ಧಾರವಾಡಕ್ಕೆ ಬಂದರು. ರೊದ್ದ ಶ್ರೀನಿವಾಸರಾಯರು ಕ್ಷಾಮ ನಿವಾರಕ ಸಂಘವನ್ನು ಸ್ಥಾಪಿಸಿ ಅತ್ಯಂತ ಶ್ರಮವಹಿಸಿ ಕ್ಷಾಮಪೀಡಿತ ರಿಗೆ ನೆರವು ನೀಡಿದರು.

ರಾಯರ ಬಹುಮುಖ ಸೇವೆ

೧೮೭೮ ರಲ್ಲಿ ರಾಯರು ಧಾರವಾಡದ ಡೆಪ್ಯುಟಿ ಎಜ್ಯುಕೇಷನಲ್ ಇನ್ಸ್‌ಸ್ಪೆಕ್ಟರಾಗಿ ನೇಮಿತರಾದರು. ಶ್ರೀನಿವಾಸರಾಯರು ತಮ್ಮ ಮುಂಚಿನ ಕೆಲಸವನ್ನೂ ಗಮನಿಸುತ್ತ ಈ ಹುದ್ದೆಯಲ್ಲಿಯೂ ತೃಪ್ತಿಕರವಾಗಿ ಕೆಲಸ ಮಾಡಬೇಕಿತ್ತು. ರೊದ್ದ ಅವರು ಚುರುಕಿನ ವ್ಯಕ್ತಿಗಳು. ಅವರ ಕೆಲಸದಲ್ಲಿ ಅಲಕ್ಷ್ಯವಾಗಲಿ, ಅಸಡ್ಡೆಯಾಗಲಿ, ಸೋಮಾರಿತನ ವಾಗಲಿ ಕಂಡು ಬರುತ್ತಿರಲಿಲ್ಲ. ಆರೋಗ್ಯವಂತರೂ ದೃಢಾಂಗರೂ ಕರ್ತವ್ಯನಿಷ್ಠರೂ ತಮ್ಮ ಕೆಲಸದಲ್ಲಿ ಆಸಕ್ತಿಯುಳ್ಳವರೂ ಆಗಿದ್ದರು. ಅವರು ತಮ್ಮ ಈ ಅಧಿಕಾರದ ಅವಧಿಯಲ್ಲಿ ಹಿಂದೆ ಯಾರೂ ಮಾಡದಷ್ಟು ಕೆಲಸವನ್ನು ಮಾಡಿದರು. ನಿಷ್ಪಕ್ಷವಾಗಿ ದುಡಿಯುತ್ತ, ಉಪಾಧ್ಯಾಯರನ್ನು ಪ್ರೀತಿ ವಿಶ್ವಾಸ ಗೌರವಗಳಿಂದ ಕಾಣುತ್ತ, ತನಿಖೆಯಲ್ಲಿ ಎಚ್ಚರದಿಂದಿದ್ದು ಗ್ರಾಮಾಂತರ ಶಾಲೆಗಳಲ್ಲಿ ಅನೇಕ ಸುಧಾರಣೆಗಳನ್ನು ಆಚರಣೆಗೆ ತಂದರು. ಶಾಲೆಗಳಲ್ಲಿ ವಾರ್ಷಿಕ ಪರೀಕ್ಷೆಗಳು ಮುಗಿದ ಮೇಲೆ ಆ ವಿದ್ಯಾರ್ಥಿಗಳಿಗೆ ಅವರ ಸಂಖ್ಯೆ ಎಷ್ಟೇ ಇರಲಿ, ಸಾಮೂಹಿಕ ವನಭೋಜನ ವನ್ನು ಊರಿನ ವಿದ್ಯಾಭಿಮಾನಿಗಳಿಂದ ಏರ್ಪಡಿಸಿ ಬಾಲಕರಲ್ಲಿ ಹುಮ್ಮಸ್ಸನ್ನೂ ಶಿಕ್ಷಕರಲ್ಲಿ ಆತ್ಮೀಯತೆಯನ್ನೂ ಊರಿನ ಪ್ರಮುಖರಲ್ಲಿ ತಮ್ಮ ಗ್ರಾಮದ ಮಕ್ಕಳ ಬಗ್ಗೆ ಅಭಿಮಾನವನ್ನೂ, ಬೆಳೆಸುತ್ತಿದ್ದರು.

ರಾಯರು ವಯಸ್ಕರಿಗೆ ಓದುಬರಹ ಕಲಿಸಲು ರಾತ್ರಿ ಶಾಖೆಗಳನ್ನು ನಡೆಸಲು ಉತ್ತೇಜನ ಕೊಟ್ಟರು; ಸ್ತ್ರೀ ಶಿಕ್ಷಣಕ್ಕೆ ಪ್ರೋತ್ಸಾಹ ಕೊಡುವಾಗ ಉತ್ತಮ ವಿದ್ಯಾರ್ಥಿನಿ ಯರಿಗೆ ಬಹುಮಾನ ಕೊಡಲು ಪುದುವಟ್ಟುಗಳನ್ನು ಏರ್ಪಡಿಸಿದರು. ಅವರು ಅಂಥ ದತ್ತಿಗಳನ್ನು ಸಂಗ್ರಹಿಸುತ್ತಿದ್ದುದೇ ಅವರ ಜಾಣತನವನ್ನೂ ಚಾಣಾಕ್ಷತೆಯನ್ನೂ ತೋರಿಸುತ್ತದೆ. ರಾಯರು ಎಂದಿನಂತೆ ತಮ್ಮ ಸಾರ್ವಜನಿಕ ಸೇವಾಕಾರ್ಯ ಗಳನ್ನು ನಡೆಸಿಕೊಂಡೇ ಬರುತ್ತಿದ್ದರು. ೧೮೯೬ ರಲ್ಲಿ ದೇಶದ್ಯಾಂತ ವ್ಯಾಪಿಸಿದ ‘ಪ್ಲೇಗ್‌ರೋಗ’ ವನ್ನು ತಡೆಗಟ್ಟಲು ಮತ್ತು ಪರಿಹಾರ ನೀಡಲು ರಾಯರು ಶಿಕ್ಷಕರ ಸೇವೆಯನ್ನು ಬಳಸಿಕೊಂಡು ಉತ್ತಮ ಸೇವೆಯನ್ನು ಸಲ್ಲಿಸಿದರು.

ಉಪತನಿಖಾಧಿಕಾರಿಗಳಾದರೂ ಅವರ ಕಛೇರಿ ಯ ಸಿಬ್ಬಂದಿವರ್ಗ ಅಲ್ಪ ಪ್ರಮಾಣದಲ್ಲಿತ್ತು. ಆದರೂ ಅವರು ದಿನಕ್ಕೆ ೧೮ ಗಂಟೆಗಳಿಗೆ ಕಡಿಮೆಯಿಲ್ಲದೆ ಕೆಲಸ ಮಾಡುತ್ತಿದ್ದರು. ಅವರ ಬಹುತೇಕ ಕೆಲಸ ಪ್ರವಾಸದ ಮೂಲಕವೇ ನಡೆಯುತ್ತಿದ್ದು, ಕೆಲವೊಮ್ಮೆ ಎತ್ತಿಗಾಡಿಗಳಲ್ಲಿ ಪ್ರಯಾಣ ಮಾಡುತ್ತ, ಕೆಲವೊಮ್ಮೆ ನಡೆದು ಹೋಗುತ್ತ ತಮ್ಮ ತನಿಖಾಯಾತ್ರೆಯನ್ನು ತೀರ್ಥಯಾತ್ರೆಯಂತೆ ಪವಿತ್ರ ಭಾವನೆಯಿಂದ ಮುಗಿಸುತ್ತಿದ್ದರು. ಅವರ ಕಾರ್ಯಾವಧಿ ಯಲ್ಲಿ ಧಾರವಾಡದಲ್ಲಿ ಶಾಲೆಗಳ ಸಂಖ್ಯೆ ೧೬೭ ರಿಂದ ೬೬೮ಕ್ಕೆ ಏರಿತು. ಅವರ ಆಶ್ರಯದಲ್ಲಿದ್ದ ಶಿಕ್ಷಕರು ಅವರಷ್ಟೇ ಚಾಕಚಕ್ಯತೆಯಿಂದ ಕೆಲಸ ಮಾಡುತ್ತಿದ್ದರು.

ಪ್ರಿನ್ಸಿಪಾಲರು

ಶ್ರೀನಿವಾಸರಾಯರಿಗೆ ೧೮೯೮ರಲ್ಲಿ ಟ್ರೈನಿಂಗ್ ಕಾಲೇಜಿನ ಪ್ರಿನ್ಸಿಪಾಲರ ಸ್ಥಾನ ದೊರಕಿತು.

ಟ್ರೈನಿಂಗ್ ಕಾಲೇಜಿನ ಪ್ರಿನ್ಸಿಪಾಲರಾಗಿ ಅವರು ಶಾಶ್ವತವಾದ ಮತ್ತು ಅವರ ಹೆಸರನ್ನು ಬಹುಕಾಲ ನೆನಸಿ ಕೊಳ್ಳುವಂಥ ಕೆಲಸಗಳನ್ನು ಮಾಡಿದರು. ಅವರು, ಅವರ ಸಹೋದ್ಯೋಗಿಗಳು ತಮ್ಮ ಶಿಕ್ಷಣ ಕಾರ್ಯದ ಉದ್ದೇಶ ನಿರ್ವಹಣೆಯಲ್ಲಿ  ಯಾವ ರೀತಿಯ ಲೋಪವೂ ಬರದಂತೆ ಕರ್ತವ್ಯಪ್ರಜ್ಞೆಯಿಂದ ಶ್ರಮಿಸಿದರು. ವಿದ್ಯಾರ್ಥಿ ಗಳ ಮನಸ್ಸು ನಾನಾ ಮುಖವಾಗಿ ಬೆಳೆಯುವಂತೆ ವಿವಿಧ ಪಠ್ಯಗಳನ್ನು ಎಂದರೆ, ಸಂಗೀತ, ಕೃಷಿ, ಬಡಗಿತನ, ಕಮ್ಮಾರಿಕೆ ಮೊದಲಾದವುಗಳ ಬಗ್ಗೆ ಅಭ್ಯಾಸಕ್ರಮ, ಕಾಲೇಜಿಗೆ ವಿದ್ಯಾರ್ಥಿಗಳ ಸಂಖ್ಯೆಯನ್ನು ಹೆಚ್ಚಿಸಲು ಪ್ರಾಕ್ಟೀಸಿಂಗ್ ಶಾಲೆಯ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡರು. ವಿದ್ಯಾರ್ಥಿಗಳಿಗೆ ವರ್ಷದ ಕೊನೆ ಯಲ್ಲಿ ಪ್ರವಾಸಗಳನ್ನು ಏರ್ಪಡಿಸಿ ಮುಂದೆ ಉಪಾಧ್ಯಾಯ ರಾಗುವ ವಿದ್ಯಾರ್ಥಿಗಳ ಮನಸ್ಸು ಜ್ಞಾನಪೂರ್ಣ ವಾಗಿರುವಂತೆ  ನೋಡಿಕೊಂಡರು. ವಿದ್ಯಾರ್ಥಿಗಳ  ಅಭ್ಯಾಸಕ್ಕೆ  ಅನುಕೂಲವಾಗುವಂತೆ ಪ್ರೋತ್ಸಾಹ ನೀಡುವಂತೆ ವಿದ್ಯಾರ್ಥಿ ಪಾರಿತೋಷಕಗಳನ್ನು ಏರ್ಪಡಿಸುವುದಕ್ಕಾಗಿ ನಿಧಿಗಳನ್ನು ಕೊಡಿಸಿದರು. ಟ್ರೈನಿಂಗ್ ಕಾಲೇಜಿಗೆ ಪ್ರತ್ಯೇಕವಾದ ಕಟ್ಟಡಕ್ಕೂ ವಿದ್ಯಾರ್ಥಿನಿಲಯಕ್ಕೂ ಹುಡುಗರ ಊಟ ತಿಂಡಿಗಳಿಗೆ ಭದ್ರ ತಳಪಾಯವನ್ನು ಹಾಕಿದರು. ಇಂದಿಗೂ ಧಾರವಾಡದಲ್ಲಿ ನೋಡಬಹುದಾದ ಒಂದು ಸುವ್ಯವಸ್ಥಿತ, ಸುಭದ್ರ ಮತ್ತು ಪ್ರಸಿದ್ಧ ಕಾಲೇಜು ಎಂದರೆ ಟ್ರೈನಿಂಗ್ ಕಾಲೇಜು ಎಂದು ಕೀರ್ತಿ ಬಂದಿದೆ.

ಶಾಸನಸಭಾ ಸದಸ್ಯರಾಗಿ

ಸಮಾಜಸೇವೆ ಮಾಡಬೇಕೆಂಬುದು ರಾಯರ ಮನೋಗತವಾಗಿದ್ದುದರಲ್ಲಿ ಸಂದೇಹವೇ ಇಲ್ಲ. ಉಪಾಧ್ಯಾಯರಾಗಿದ್ದಾಗಲೂ ಅವರು ತಮ್ಮ ಉದ್ಯೋಗದ ವ್ಯಾಪ್ತಿಯ ಎಲ್ಲೆಯನ್ನು ಮೀರದೆ ಸಾರ್ವಜನಿಕ ಸೇವಾ ಕಾರ್ಯಗಳಲ್ಲಿ ಪಾಲುಗೊಳ್ಳುತ್ತಿದ್ದರು. ಕಾಲೇಜಿನ ಪ್ರಿನ್ಸಿಪಾಲ್ ಹುದ್ದೆಯಿಂದ ೧೯೦೮ರಲ್ಲಿ ತಾವಾಗಿಯೇ ನಿವೃತ್ತಿ ಪಡೆದು ಕೂಡಲೇ ಮುಂಬಯಿ ಶಾಸನಸಭೆಯ ಸದಸ್ಯರಾಗಲು ಪ್ರಯತ್ನಿಸಿದರು. ರೊದ್ದ ಅವರು ತಮ್ಮ ಶಿಕ್ಷಣ ಕ್ಷೇತ್ರದ ಸೇವೆಯಿಂದ, ಸಾರ್ವಜನಿಕ ಸಂಪರ್ಕದಿಂದ ಆ ಪ್ರಾಂತದ ಜನರ ಪ್ರೀತಿ ವಿಶ್ವಾಸಗಳನ್ನು ಗಳಿಸಿಕೊಂಡಿದ್ದರು. ಒಂದೆರಡು ಅಡ್ಡಿಗಳು ಬಂದರೂ ಅವರ ಆಯ್ಕೆ ಬಹುಮತದಿಂದಲೇ ಆಯಿತು. ಈ ಆಯ್ಕೆ  ಬಹುಕಾಲ ಉಳಿಯಲಿಲ್ಲ. ೧೯೦೯ ರ ನವೆಂಬರ್‌ನಲ್ಲಿ  ಮಾರ್ಲೆ ಮಿಂಟೋ ಸುಧಾರಣೆಯ ಜಾರಿಯಿಂದ ಮತ್ತೆ ಚುನಾವಣೆ ಆಯಿತು. ರಾಯರು ಮತ್ತೇ ಚುನಾವಣೆಗೆ ನಿಂತರು. ಅವರಿಗೆ ಆಗ ಪ್ರತಿಸ್ಪರ್ಧಿಯಾಗಿ ನಿಂತವರು ದಾಜೀ ಆಬಾಜೀ ಖರೆ ಎಂಬುವರು. ಇವರು ಈ ಕ್ಷೇತ್ರದಲ್ಲಿ ಪಳಗಿದವರು ಮತ್ತು ಮರಾಠಿಗರು. ಅವರ ಕ್ಷೇತ್ರವೂ ಮರಾಠಿಗರದೇ. ತಮ್ಮ ಜಯವನ್ನು ಅವರು ಕಂಡುಕೊಂಡೇ ಇದ್ದರು. ಶ್ರೀನಿವಾಸರಾಯರು ಚುನಾವಣೆಗೆ ನಿಂತು ಏಕೆ ಸೋಲಬೇಕು ಎಂಬ ಕನಿಕರದಿಂದ ಅವರು ಶ್ರೀನಿವಾಸ ರಾಯರಿಗೆ ಸೂಚನೆ ಕೊಟ್ಟರು, ‘ನಿಮ್ಮ ಉಮೇದುವಾರಿಕೆ ಯನ್ನು ಹಿಂತೆಗೆದು ಕೊಳ್ಳಿ’ ಎಂದು. ರಾಯರು ಅವರಿಗೆ ಕೊಟ್ಟ ಉತ್ತರ ಉಲ್ಲೇಖಾರ್ಹವಾದುದು: ‘ಯಾವಾಗಲೂ ಯುದ್ಧ ಶಕ್ತಿವಂತರಿಗೆ ಮಾತ್ರವಲ್ಲ.ಓಟದ ಸ್ಪರ್ಧೆ ವೇಗವಾಗಿ ಓಡುವವನಿಗೆ ಮಾತ್ರವಲ್ಲ ನನಗೆ ಶಕ್ತಿ ಮತ್ತು ನಿಷ್ಠೆಯಿದ್ದರೆ ‘ರತ್ನಗಿರಿ ಮತ್ತು ಕೊಲಾಬ’ ಕೋಟೆಯನ್ನು ಭೇದಿಸುತ್ತೇನೆ” ರಾಯರು ಜಯಶಾಳಿಗಳಾದರು ಎಂದು ಬೇರೆ ಹೇಳಬೇಕಾದದ್ದಿಲ್ಲ. ರಾಯರು ಮೂರನೆಯ ಸಾರಿಯೂ ೧೯೧೨ರಲ್ಲಿ ಬಹುಮತದಿಂದ ಮೂವರನ್ನು ಸೋಲಿಸಿ ಬಂದರು. ಹೀಗೆ ಆರು ವರ್ಷಗಳ ಕಾಲ ಶಾಸನಸಭಾ ಸದಸ್ಯ ರಾಗಿ ಕರ್ನಾಟಕಕ್ಕೆ, ತಾವು ಆರಿಸಿ ಬಂದ ಚುನಾವಣಾ ಕ್ಷೇತ್ರಕ್ಕೆ ರಾಯರು ಸೇವೆ ಸಲ್ಲಿಸಿದರು.

ರಾಯರು ಕಾರ್ಯನಿಷ್ಠರಾಗಿದ್ದಂತೆಯೇ ಲೋಕ ವ್ಯವಹಾರವನ್ನೂ ಬಲ್ಲವರಾಗಿದ್ದರು. ಬಡತನದಲ್ಲಿ ಬೆಳೆದು, ಮಕ್ಕಳ ಜ್ಞಾನವನ್ನು  ಬೆಳೆಸುವುದರಲ್ಲಿ ನಿಷ್ಠಾತರಾಗಿ, ಸಾರ್ವಜನಿಕ ಸೇವಾತತ್ಪರರಾಗಿ, ಕನ್ನಡಾಭಿಮಾನಿಗಳಾಗಿ  ತಮ್ಮ ಜೀವನದ ಮೂಲೋದ್ದೇಶವನ್ನು ಅರಿತ ವರಾಗಿದ್ದರು. ಶಾಸನಸಭಾ ಸದಸ್ಯನಿಗೆ ಇರಬೇಕಾದ ಸ್ಥಳದ ಪರಿಚಯ, ವಿಷಯಜ್ಞಾನ, ಲೋಕಾನುಭವ, ಮಾತುಗಾರಿಕೆ, ಸರ್ಕಾರದ ಮನೋವೃತ್ತಿಯ ಅರಿವು, ವಾಗ್ಮಿತೆ ಮೊದಲಾದ ಅರ್ಹತೆಗಳನ್ನು ಹೊಂದಿದವರಾಗಿದ್ದರು. ಅವರು ವಿಷಯವನ್ನು ಮಂಡಿಸುವಾಗ ಅಥವಾ ವಿರೋಧಿಗಳನ್ನು ಎದುರಿಸುವಾಗ ಅವರ ಮಾತಿನ ಬಾಣಗಳು, ವಿಷಯದ ಶ್ರೀಮಂತಿಕೆ ಎದುರಾಳಿಗಳನ್ನು ಸ್ಥಂಭೀಭೂತರನ್ನಾಗಿ ಮಾಡುತ್ತಿದ್ದವು.

ಈಗೀಗ ನಮ್ಮಲ್ಲಿ, ವಿದ್ಯಾರ್ಥಿಗಳಿಗೆ ಅವರ ಮಾತೃಭಾಷೆಯಲ್ಲಿ ಪಾಠ ಕಲಿಸುವುದು ಒಳ್ಳೆಯದು ಎಂಬ ಅಭಿಪ್ರಾಯ ಬೆಳೆಯುತ್ತಿದೆ. ಅರವತ್ತು ಎಪ್ಪತ್ತು ವರ್ಷಗಳ ಹಿಂದೆಯೇ ಈ ಅಗತ್ಯವನ್ನು ಗುರುತಿಸಿ ಅದಕ್ಕಾಗಿ ಕೆಲಸ ಮಾಡಿದರು ಶ್ರೀನಿವಾಸರಾಯರು. ‘ದೇಶಭಾಷೆಯಿಂದ ನಾನೇ ಒಂದು  ವರ್ಷದಲ್ಲಿ ಅಂಕಗಣಿತ, ಬೀಜಗಣಿತ ಚೆನ್ನಾಗಿ ಕಲಿತೆ. ಮಕ್ಕಳಿಗೆ ಭಾರತದ ಭಾಷೆಗಳಲ್ಲೇ ಶಿಕ್ಷಣ ಕೊಡಬೇಕು’ ಎನ್ನುತ್ತಿದ್ದರು. ಸಮಾಜದಲ್ಲಿ ಹಿಂದುಳಿದವ ರಿಗೆ ಸರ್ಕಾರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕೆಲಸ ಕೊಡಬೇಕು ಎಂದು ಸೂಚಿಸಿದರು. ಏನಾದರೂ ತಪ್ಪು ಮಾಡಿ ಜೈಲಿಗೆ ಹೋಗಿ ಬಿಡುಗಡೆಯಾಗಿ ಬಂದವರಿಗೆ ಕೆಲಸ ಕೊಟ್ಟು, ಅವರು ಗೌರವದಿಂದ ಬಾಳಲು ಅವಕಾಶ ಮಾಡಿಕೊಡ ಬೇಕು. ಇಲ್ಲವಾದರೆ ಅವರು ಮತ್ತೇ ಕಳ್ಳತನ ಮೊದಲಾದವನ್ನು ಮಾಡಿ ಎಂದೆಂದೂ ಸಮಾಜಕ್ಕೆ ತೊಂದರೆ ಮಾಡುವವರಾಗಿಯೇ ಉಳಿಯುತ್ತಾರೆ. ಅವರ ಜೀವನವೂ ಕೆಡುತ್ತದೆ. ಇದನ್ನು ವಿವರಿಸಿ ಕಾರ್ಯಗತ ಮಾಡಲು ಶ್ರೀನಿವಾಸರಾಯರು ಶ್ರಮಿಸಿದರು. ಹುಬ್ಬಳ್ಳಿ ಕಾರವಾರಗಳ ನಡುವೆ ಒಳ್ಳೆಯ ರಸ್ತೆಯ ನಿರ್ಮಾಣಕ್ಕಾಗಿ ಹೋರಾಡಿದರು. ಸಮಾಜಕ್ಕೆ ಒಳ್ಳೆಯದಾಗುವ ರೀತಿಯನ್ನು ಯೋಚಿಸುತ್ತಿದ್ದ ಶ್ರೀನಿವಾಸರಾಯರು ತಮಗೆ ದೊರೆತ ಪ್ರಭಾವವನ್ನು ಸಮಾಜಕ್ಕಾಗಿ ಬಳಸಿದರು.

ಕರ್ನಾಟಕ ಕಾಲೇಜು

ಶಾಸನಸಭಾ ಸದಸ್ಯರಾಗಿದ್ದ ಶ್ರೀನಿವಾಸರಾಯರು ತಮ್ಮ ಕನಸಾಗಿದ್ದ ಕರ್ನಾಟಕ ಕಾಲೇಜಿನ ಸ್ಥಾಪನೆಯನ್ನು ನನಸಾಗಿ ಮಾಡಲು ಬಹುವಾಗಿ ಯತ್ನಿಸಿದರು. ಕರ್ನಾಟಕದಲ್ಲೇ ಕಾಲೇಜು ವಿದ್ಯಾಭ್ಯಾಸಕ್ಕೆ ಹೆಚ್ಚಿನ ಅನುಕೂಲ ವಿರಲಿಲ್ಲ. ಮೈಸೂರಿನವರು ಮದರಾಸಿಗೆ ಹೋಗಬೇಕಿತ್ತು. ಉತ್ತರ ಕರ್ನಾಟಕದವರು ಪೂನಾ ಬೊಂಬಾಯಿಗಳಿಗೆ ಹೋಗಬೇಕಿತ್ತು. ಕನ್ನಡಿಗರಿಗೆ ಕನ್ನಡ ರಾಜ್ಯದಲ್ಲಿ ಪ್ರೌಢ ವಿದ್ಯಾಭ್ಯಾಸಕ್ಕೆ ಸೌಲಭ್ಯವಿಲ್ಲ ದಿದ್ದುದರಿಂದ ಅದನ್ನು ಆಗುಮಾಡಿಸಲು ರೊದ್ದರು ಮಾಡಿದ ಸಾಹಸ ಆಶ್ಚರ್ಯಕರವಾದದ್ದು. ಮೈಸೂರಿ ಗದಾರೋ ಅಂಥ ಕಾಲೇಜನ್ನು ವಿಶ್ವವಿದ್ಯಾನಿಲಯವನ್ನು ಸ್ಥಾಪಿಸಲು ಮಹಾರಾಜರ ಪ್ರೋತ್ಸಾಹ ಬೆಂಬಲ ದೊರಕುತ್ತಿತ್ತು. ಆದರೆ ಆಂಗ್ಲರ ಆಡಳಿತಕ್ಕೆ ಒಳಪಟ್ಟಿದ್ದ ಧಾರವಾಡ ಜಿಲ್ಲೆಯಲ್ಲಿ ಕಾಲೇಜು ಸ್ಥಾಪಿಸುವುದು ತುಂಬ ಪ್ರಯಾಸದ ಕೆಲಸವಾಗಿತ್ತು. ಈ ಕಾಲೇಜಿನ ಸ್ಥಾಪನೆಯ ಕಲ್ಪನೆ ೧೮೭೭ ರಿಂದಲೇ ಆರಂಭವಾಯಿತು ಎನ್ನ ಬಹುದು. ೧೮೯೬-೯೭ ರಲ್ಲಿ ಈ ಮಾತು ಮತ್ತೆ ಕೇಳಿಸಿತು, ವಿದ್ಯಾಖಾತೆಯ ವರದಿಯಲ್ಲಿ. ೧೯೦೨ರಲ್ಲಿ ವಿದ್ಯಾ ಇಲಾಖೆಯ ನಿರ್ದೇಶಕರಾಗಿದ್ದ ಜಾಯಿಲ್ಸ್ ಅವರು ವಿಶ್ವವಿದ್ಯಾಲಯದ ಕಮೀಷನ್ ಸದಸ್ಯರ  ಗಮನಕ್ಕೆ ಈ ಅವಶ್ಯಕತೆಯನ್ನು ಮನದಟ್ಟು ಮಾಡಿ ಕೊಟ್ಟರು. ಧಾರವಾಡದ ಮುನಿಸಿಪಾಲಿಟಿಯವರು ೧೯೦೪ ರಲ್ಲಿ ಲಾರ್ಡ್ ಲ್ಯಾಮಿಂಗ್ಟನ್ ಅವರಿಗೆ ಮನವಿ ಒಪ್ಪಿಸುವಾಗ ಧಾರವಾಡದಲ್ಲಿ ಕಾಲೇಜಿನ ಅವಶ್ಯಕತೆ ಇರುವುದನ್ನು ಸೂಚಿಸಿದರು. ಆದರೆ ಈ ಸೂಚನೆಗಳು ಯಾವುವೂ ಒಂದು ರೂಪಕ್ಕೆ ಬರಲಿಲ್ಲ.  ಆ ಸೂಚನೆ ಕೊಟ್ಟಾಗ ರಾಯರೂ ಮುನಿಸಿಪಾಲಿಟಿಯ ಸರ್ಕಾರ ನಿಯುಕ್ತ ಸದಸ್ಯರೇ ಆಗಿದ್ದರು. ಆದರೆ ರೊದ್ದ ಅವರು ಶಾಸನಸಭಾ ಸದಸ್ಯರಾದ  ಮೇಲೆ ತಮ್ಮ ಸದಸ್ಯತ್ವದ ಅವಧಿಯಲ್ಲಿ ಕಾಲೇಜನ್ನು ಸ್ಥಾಪಿಸಿಯೇ ತೀರುತ್ತೇನೆಂಬ ಹಠ ಹಿಡಿದಂತೆ ಕಾಣಿಸುತ್ತದೆ. ೧೯೦೪ರಲ್ಲಿ ಅವರು ಶಾಸನಸಭೆಯ ಸ್ವತಂತ್ರ ಸದಸ್ಯರಾಗಿ ಪ್ರಜೆಗಳಿಗಾಗಿ ಅನುಕೂಲ ಕಲ್ಪಿಸುವ  ಹೊಣೆ ಹೊತ್ತ ಮೇಲೆ ಕಾಲೇಜಿನ ಬಗ್ಗೆ ತೀವ್ರವಾಗಿ ಕೆಲಸ ಮಾಡಲು ಆರಂಭಿಸಿದರು. ೧೯೦೯ ನೆಯ ಫೆಬ್ರವರಿ ೨೭ ರಲ್ಲಿ ಸರ್ಕಾರಕ್ಕೆ ಮನವಿ ಒಪ್ಪಿಸಿದರು. ಸಂಬಂಧಪಟ್ಟವರ ಮೇಲೆ ಒತ್ತಡ ತಂದರು. ಶಾಸನಸಭೆಯಲ್ಲಿ ಪ್ರಸಂಗ ಬಂದಾಗ ತಮ್ಮ ವಾದವನ್ನು ಮಂಡಿಸುತ್ತ, ನಿರ್ಣಯ ಮಾಡುತ್ತಾ ಈ ಪ್ರಶ್ನೆ ಎಷ್ಟು ಮುಖ್ಯವಾದುದೆಂಬುದನ್ನು ಸರ್ಕಾರಕ್ಕೆ ಮನಗಾಣಿಸಿದರು. ರಾಯರ ವಾದದ ತೀವ್ರತೆ ಯನ್ನೂ ಧಾರವಾಡದಲ್ಲಿ ಒಂದು ಕಾಲೇಜು ಅವಶ್ಯಕ ಎಂಬ ಅಂಶವನ್ನೂ ಅರ್ಥಮಾಡಿಕೊಂಡ ಸರ್ಕಾರದವರು ರಾಯರ ಬಯಕೆಯನ್ನು ಈಡೇರಿಸಲು ಆಶಿಸಿದ್ದರೂ, ಸರ್ಕಾರದಲ್ಲಿ ಕಾಲೇಜನ್ನು ಆರಂಭಿಸಲು ಸಾಕಷ್ಟು ಹಣವಿಲ್ಲ ವೆಂದೂ ಮೂಲಧನವನ್ನೂ ವಾರ್ಷಿಕ ವೆಚ್ಚದ ಮೊಬಲಗನ್ನೂ ಕೊಡಿಸಿಕೊಟ್ಟರೆ, ಕಾಲೇಜನ್ನು  ಸ್ಥಾಪಿಸ ಬಹುದೆಂದೂ ರಾಯರಿಗೆ ತಿಳಿಸಿದರು. ಶ್ರೀನಿವಾಸ ರಾಯರು ಸರಕಾರದ ತಿಳುವಳಿಕೆ ಯನ್ನು ಕಂಡು ಅಂಜಲಿಲ್ಲ. ಕಾಲೇಜಿನ ಸ್ಥಾಪನೆ ಈಗ ತಮ್ಮ ಕೈಲಿದೆ ಎಂದು ಅರಿತರು. ಅದಕ್ಕಾಗಿ ಪ್ರಯತ್ನಿಸಿದರು. ಒಂದು ಶಿಷ್ಟ ಮಂಡಲವನ್ನು ರಚಿಸಿಕೊಂಡರು. ಹಲವಾರು ಪ್ರತಿಷ್ಠಿತರ ಒಂದು ಸಂಘ ರೂಪುಗೊಂಡಿತು. ಸರ್ ನಾರಾಯಣ ರಾವ್ ಚಂದಾವರ್‌ಕರ್ ಅವರು ಅದರ ಅಧ್ಯಕ್ಷರಾದರು. ರಾಯರು ಚೇರಮನ್ ಆದರು. ೧೯೧೧ರಲ್ಲಿ ಧಾರವಾಡದ ಜನರಲ್ಲಿ ಆಗ್ರಹಪೂರ್ವಕ ವಿನಂತಿ ಸಲ್ಲಿಸಿ ಹಣ ಕೊಡಿಸಲು ಆರಂಭ ಮಾಡಿದರು. ಆದರೆ ಧನಸಂಗ್ರಹಕಾರ್ಯ ಅಷ್ಟು ಸುಲಭವಾಗಲಿಲ್ಲ. ಶ್ರೀಮಂತರು-ಬಡವರು, ಆ ಜಾತಿ ಈ ಜಾತಿ, ಪಟ್ಟಣಿಗರು-ಹಳ್ಳಿಗರು ಆರ್ಟ್ಸ್ ಕಾಲೇಜೇ ಸೈನ್ಸ್ ಕಾಲೇಜೇ ಈ ಬೇಧಗಳು ತೊಡಕುಗಳಾಗಿ ಪರಿಣಮಿಸಿದುವು. ರೊದ್ದ ರಾಯರು ಇಟ್ಟ ಹೆಜ್ಜೆಯನ್ನು ಹಿಂದಕ್ಕೆ ತೆಗೆದು ಕೊಳ್ಳುವವರಲ್ಲ. ಶಾಸನಸಭೆಯಲ್ಲಿ ತಮ್ಮ ಸ್ನೇಹಿತರೆಲ್ಲರಿಂದ ಬೆಂಬಲ ದೊರಕಿಸಿಕೊಂಡರು. ಊರಿನ ಪ್ರಮುಖರಿಂದ ಆಶ್ವಾಸನೆ ಯನ್ನು ಪಡೆದುಕೊಂಡರು. ಆಗ ರಾವ್ ಬಹದ್ದೂರ್ ಅರಟಾಳ ಅವರು ಒಂದು ಲಕ್ಷ ರೂಪಾಯಿ ಕೂಡಿಸಿಕೊಡಲು ಭರವಸೆಯಿತ್ತರು. ಲಿಂಗಾಯಿತ ಸಮಾಜ ದವರು ಕಾಲೇಜಿಗಾಗಿ ಒಂದು ಲಕ್ಷ ರೂಪಾಯಿ ಕೊಡಲು ಒಪ್ಪಿಕೊಂಡರು. ಇನ್ನು ಕಾಲೇಜು ಸ್ಥಾಪನೆ ಆದಂತೆಯೇ ಎಂದು ಕೊಂಡಿದ್ದಾಗ ೧೯೧೪ ರ ಮೊದಲನೇ ಮಹಾ ಯುದ್ಧ ಅದಕ್ಕೆ ಅಡ್ಡಿಯಾಗಿ ಬಂದಿತು.

ಆದರೆ ರಾಯರು ಆ ಅಡಚಣೆಯ ನಿವಾರಣೆಗೆ ಅತಿಶಯವಾಗಿ ಹೋರಾಟ ನಡೆಸಿದರು. ಹೊರಗಿನ ಯುದ್ಧಕ್ಕಿಂತ ರಾಯರ ಯುದ್ಧವೇ ಬಲಯುತವಾಗಿತ್ತು. ೧೯೧೭ ನೆಯ ಜೂನ್ ತಿಂಗಳ ೨೦ ನೆಯ ತಾರೀಖು ಬುಧವಾರ ಸಂಜೆ ೫ ಗಂಟೆಗೆ ಕಾಲೇಜಿನ ಆರಂಭೋತ್ಸವ ನಾಲ್ಕು ಸಾವಿರ ಜನರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು. ರಾಯರು ಆಗ ಒಪ್ಪಿಸಿದ ವರದಿ ಅವರ ಪ್ರಯತ್ನದ ಸಾಹಸದ ದಾಖಲೆಯಾಗಿ ಇಂದಿಗೂ ಆಕರ್ಷಣೀಯವಾಗಿ ಉಳಿದಿದೆ

ಪೌರಸಭೆಯ ಸದಸ್ಯ ಅಧ್ಯಕ್ಷ

ರೊದ್ದ ಶ್ರೀನಿವಾಸರಾಯರು ಉಪಾಧ್ಯಾಯರಾಗಿ ಮಾತ್ರ ಕೆಲಸಮಾಡಲಿಲ್ಲ ಎಂದು ಆಗಲೇ ಹೇಳಿದೆ. ಅವರ ಸಾರ್ವಜನಿಕ ಸೇವಾದೃಷ್ಟಿ ಮತ್ತು ತತ್ಪರತೆಯನ್ನು ಮನಗಂಡ ಸರ್ಕಾರ ಅವರನ್ನು ಧಾರವಾಡದ ಮುನಿಸಿ ಪಾಲಿಟಿಯ ಸದಸ್ಯರನ್ನಾಗಿ ನಾಮಕರಣ ಮಾಡುತ್ತಲೇ ಬಂದಿತ್ತು. ಅವರು ಶಾಸನಸಭಾ ಸದಸ್ಯರಾಗಿದ್ದಾಗಲೇ ೧೯೧೨ ರಲ್ಲಿ  ಲೋಕನಿಯುಕ್ತ ಅಧ್ಯಕ್ಷರೂ (ಪ್ರೆಸಿಡೆಂಟ್) ಆದರು. ಅವರ ಆಯ್ಕೆ ಸರ್ವಾನುಮತವಾದದ್ದು. ಅವರು ೧೯೧೭ರವರೆಗೆ ಅಧ್ಯಕ್ಷರಾಗಿದ್ದು ಅನೇಕ ಉಪಯುಕ್ತ ಸುಧಾರಣೆಗಳನ್ನು ಧಾರವಾಡ ನಗರಾಭಿವೃದ್ಧಿಯ ದೃಷ್ಟಿಯಿಂದ ಜಾರಿಗೆ ತಂದರು. ಸರ್. ಎಂ. ವಿಶ್ವೇಶ್ವರಯ್ಯ ನವರ ಸಲಹೆ ಪಡೆದು ನೀರಿನ ಸರಬರಾಜು ವ್ಯವಸ್ಥೆಯನ್ನು ಕೈಗೊಂಡರು. ಮಾರ್ಗಗಳ ಸುಧಾರಣೆಗೆ ಗಮನ ಕೊಟ್ಟರು. ಹೀಗೆ ಅವರ ಕಾರ್ಯಗಳು ಒಂದೊಂದೂ ಒಂದು ಉಪಯುಕ್ತವೇ. ೧೯೧೨ ರಲ್ಲಿ ಜಿಲ್ಲಾ ಲೋಕಲ್ ಬೋರ್ಡಿನ ಅಧ್ಯಕ್ಷರಾಗಿ, ಶಾಲೆಗಳ ಸ್ಥಾಪನೆ, ತಾಂತ್ರಿಕ  ಅಥವಾ ಔದ್ಯೋಗಿಕ ಶಾಲೆಯ ಆರಂಭ ಮೊದಲಾದ ಅಗತ್ಯಗಳನ್ನು ಪೂರೈಸುವುದರಲ್ಲಿ ಅವರು ಶ್ರಮ ವಹಿಸಿದರು. ಡಿಸ್ಟ್ರಿಕ್ಟ್ ಲೋಕಲ್ ಬೋರ್ಡಿಗೆ ಇಂಥ ಅಧ್ಯಕ್ಷರು ದೊರಕಿದ್ದು ಧಾರವಾಡ ಡಿಸ್ಟ್ರಿಕ್ಟ್  ಬೋರ್ಡಿನ ಸುದೈವ ಎಂದು ಗವರ್ನರ್ ಅವರೇ ಅಭಿಪ್ರಾಯ ಪಟ್ಟಿದ್ದಾರೆ. ಅವರ ಲೋಕೋಪಯೋಗ ಮತ್ತು ಸಾರ್ವಜನಿಕ ಸೇವಾಕಾರ್ಯಗಳನ್ನೂ ಅವರ ಶಿಕ್ಷಣ ಚಾತುರ್ಯವನ್ನೂ ಅರಿತ ಸರ್ಕಾರದವರು ಬ್ರಿಟಿಷ್ ಸಾರ್ವಭೌಮರಿಗೆ ಶಿಫಾರಸು ಮಾಡಿ ಸಿ.ಐ.ಇ. ಪದವಿಯನ್ನು ಕೊಡಿಸಿದರು. ಈ ಪ್ರಶಸ್ತಿ ಪಡೆದವರಲ್ಲಿ ಕರ್ನಾಟಕದಲ್ಲಿ ಇವರೇ ಮೊದಲಿಗರು.

ಸಾಹಿತ್ಯ ಸೇವೆ

ಶ್ರೀನಿವಾಸರಾಯರು ಬಾಲ್ಯದಲ್ಲಿ ಕಲಿತಿದ್ದು ಮರಾಠಿ, ಇಂಗ್ಲಿಷ್ ಮತ್ತು ಕನ್ನಡ ವಿಶೇಷವಾಗಿ ಬೆಳೆಸಿ ಕೊಂಡದ್ದು ಇಂಗ್ಲಿಷ್. ಆದರೆ ಕನ್ನಡವನ್ನು ಅವರು ಮರೆಯಲೂ ಇಲ್ಲ, ಅಲಕ್ಷ್ಯಮಾಡಲೂ ಇಲ್ಲ. ಇಂಗ್ಲಿಷಿನಲ್ಲಿ ಬರೆದಂತೆ ಕನ್ನಡದಲ್ಲೂ ಕವಿತೆಗಳನ್ನು ಬರೆದಿದ್ದಾರೆ. ಮಾರ್ಸಡನ್ ಅವರ ಇತಿಹಾಸದ ಪುಸ್ತಕಗಳನ್ನು ಕನ್ನಡಕ್ಕೆ ಅನುವಾದಿಸಿ ಕೊಟ್ಟಿದ್ದಾರೆ. ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ಆಜೀವ ಸದಸ್ಯರಾಗಿದ್ದು ಕೊಂಡು ಸಂಘದ ಆರ್ಥಿಕ ಅಭಿವೃದ್ಧಿಗೆ ಸಹಾಯ ಮಾಡಿದರು. ಹೊಸಪೇಟೆಯಲ್ಲಿ ೧೯೨೦ ರಲ್ಲಿ ನಡೆದ ೬ನೆಯ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಸಾಹಿತ್ಯದ ಮತ್ತು ನಾಡಿನ ಏಕೀಕರಣಕ್ಕಾಗಿ ತಮ್ಮ ಕಳಕಳಿಯನ್ನು ವ್ಯಕ್ತಪಡಿಸಿದರು. ‘ಕರ್ನಾಟಕವು ಛಿನ್ನವಿಚ್ಛಿನ್ನವಾಗಿ ಪರಭಾಷೆಯವರ ಅಧಿಕಾರಕ್ಕೆ ಒಳಪಟ್ಟಿರುವುದು ನಮ್ಮ ಭಾಷೆಯ ಅಧಃ ಪತನಕ್ಕೆ ವಿಶೇಷ ಕಾರಣವಾಗಿದೆ’ ಎಂದು ಕರ್ನಾಟಕದ ಅಂದಿನ ಸ್ಥಿತಿಯನ್ನು ವರ್ಣಿಸಿದರು. ಕನ್ನಡಿಗರಲ್ಲಿ ಕನ್ನಡದ ಬಗ್ಗೆ ಅಭಿಮಾನ ಮೂಡುವಂತೆ ಶ್ರಮಿಸಿದರು.

ಕುಟುಂಬ

ಸಾರ್ವಜನಿಕ ಸೇವೆಯನ್ನು ಬದುಕಿನ ತುಂಬ ಹರಡಿಕೊಂಡು ಜನರ, ಸರ್ಕಾರದ ಮನ್ನಣೆಯನ್ನು ಪಡೆದ ಶ್ರೀನಿವಾಸರಾಯರ ಕುಟುಂಬ ಜೀವನದಲ್ಲಿ ಏರಿಳಿತ ಗಳಿದ್ದವು, ಆದರೆ ಪ್ರೀತಿವಿಶ್ವಾಸಗಳನ್ನು ಸವಿದರು. ಚಿಕ್ಕಂದಿನಲ್ಲೇ ತಂದೆಯನ್ನು ಕಳೆದುಕೊಂಡ ಅವರು ತಾಯಿಯ ಪೂರ್ಣ ವಾತ್ಸಲ್ಯದಲ್ಲಿ ಬೆಳೆದರು. ಅವರ ಮಾತೃಭಕ್ತಿ ಅಚಲವಾದದ್ದು ಮತ್ತು ಆದರ್ಶನೀಯ ವಾದದ್ದು. ತಾಯಿಯ ಅಪ್ಪಣೆ ಪಡೆದೇ ಅವರು ತಮ್ಮ ಕೆಲಸಗಳಲ್ಲಿ ಮಗ್ನರಾಗುತ್ತಿದ್ದರು. ಈ ತಾಯಿ ಸಂಪ್ರದಾಯ ಸ್ಥಳಾದರೂ ರಾಯರ ಸುಧಾರಣಾ ಯೋಜನೆಗಳಿಗೆ ವ್ಯವಹಾರ ದೃಷ್ಟಿಯಿಂದ ಉತ್ತೇಜನ  ಕೊಡುತ್ತಿದ್ದರು. ರಾಯರ ಕುಟುಂಬ ವೆಂಕೂಬಾಯಿ. ಈಕೆಯೂ ಸಂಪ್ರದಾಯಸ್ಥ ಕುಟುಂಬಕ್ಕೆ ಸೇರಿದವರೇ. ಆದರೂ ಸಂಸಾರ ನಿರ್ವಹಣೆಯಲ್ಲಿ ಅತ್ತೆಗೆ, ಗಂಡನಿಗೆ ಬೇಕಾದವಳಾಗಿ ನಡೆದುಕೊಂಡರು .ಆಕೆ ಹದಿಮೂರು ಜನ ಮಕ್ಕಳನ್ನು ಹೆತ್ತರು. ಎಲ್ಲ ಮಕ್ಕಳೂ ಬಾಲಾರಿಷ್ಟರಿಂದಲೇ ಸಾವನ್ನಪ್ಪಿದರು. ಈಕೆಯೂ ೧೮೯೦ರಲ್ಲಿ ತೀರಿಕೊಂಡರು. ರಾಯರು ಹಿರಿಯರ ಬಲವಂತಕ್ಕೆ ಬಗ್ಗೆ ಎರಡನೆಯ ಮದುವೆ ಮಾಡಿಕೊಂಡರು. ಆಗ ರಾಯರ ವಯಸ್ಸು ೩೮. ದ್ವಿತೀಯ ಪತ್ನಿಯ ಹೆಸರು ಲಕ್ಷ್ಮೀಬಾಯಿ. ಲಕ್ಷ್ಮೀಬಾಯಿಗೆ ಕನ್ಯಾ ಜನನವೇನೋ ಆಯಿತು. ಕನ್ಯೆಗೆ ವಿವಾಹವೂ ಆಯಿತು. ೧೩ ವರ್ಷ ಸಂಸಾರ ಮಾಡಿ ೧೯೦೨ರಲ್ಲಿ ಆಕೆಯೂ ತೀರಿಕೊಂಡಳು. ರಾಯರಿಗೆ ಮಕ್ಕಳ ವಾತ್ಸಲ್ಯದ ಅನುಭವ ವಿಶೇಷವಾಗಿ ದೊರಕಲಿಲ್ಲ. ಆದ್ದರಿಂದ ಶಾಲಾ ವಿದ್ಯಾರ್ಥಿಗಳೇ ಅವರ ಮಕ್ಕಳಾದರು. ಅವರ ಅಭಿವೃದ್ಧಿಗಾಗಿ ಶಿಶು ವಾತ್ಸಲ್ಯ ಭಾವದಿಂದ ದುಡಿದರು.

ಕಷ್ಟಜೀವಿ

ರಾಯರು ಶ್ರಮಜೀವಿಗಳು. ಬಡತನದಲ್ಲಿ ಹುಟ್ಟಿ ಬೆಳೆದರು. ತಮ್ಮ ತಂದೆ ಸತ್ತಾಗ, ಬಂಧುಗಳ ಆಶ್ರಯ ತಪ್ಪಿದಾಗ ತಮ್ಮೊಬ್ಬರ ಸಂಸಾರಕ್ಕಾಗಿಯಾದರೂ ದುಡಿಯಬೇಕಿತ್ತು. ಆ ದುಡಿತದ ಫಲ ಅಲ್ಪ. ಆದರೆ ಶ್ರಮ ಅಪಾರ. ಎಂಟು ರೂಪಾಯಿಗಳ ಕೆಲಸಕ್ಕಾಗಿ ದಿನ ದಿನವೂ ೨೪ ಮೈಲುಗಳು ನಡೆಯುವ ಕಷ್ಟವನ್ನು ಅಭ್ಯಾಸವನ್ನಾಗಿ ಮಾಡಿಕೊಂಡರು. ಒಮ್ಮೆ ಹಿರಿಯರ ಆಸ್ತಿಯನ್ನು ಪಡೆಯುವ ಆಸೆಯಿಂದ ಮಳೆಗಾಳಿಗೆ ಹೆದರದೇ ನೂರಾರು ಮೈಲುಗಳನ್ನು ಬರಿಕಾಲಿನಿಂದ ಸುತ್ತಿದರು. ಪುಣೆಗೆ ಓದಲಿಕ್ಕೆ ಹೋದಾಗ, ತನಿಖಾಧಿಕಾರಿಗಳಾಗಿ ತನಿಖೆಗೆ ಹೋಗುವ ಸಂದರ್ಭಗಳಲ್ಲಿ ಅವರ ಓಡಾಟ ಸಾಮಾನ್ಯ ರಿಗಿಂತ  ಅಸಾಧ್ಯವಾದುದು, ಬಹುಶಃ ಈ ಶ್ರಮವೇ ಅವರ ಯೋಗಾಭ್ಯಾಸವಾಗಿ ಅವರನ್ನು ದೃಢ ಶರೀರಗಳಾಗುವಂತೆ, ಆರೋಗ್ಯವಾಗಿರುವಂತೆ ಮಾಡಿದ್ದಿರ ಬಹುದು. ರಾಯರು ಕರ್ತವ್ಯ ನಿರ್ವಹಣೆಯಲ್ಲಿ ಎಷ್ಟು ನಿಷ್ಠುರರೋ ಅಂತಃ ಕರಣದಲ್ಲಿ ಅಷ್ಟೇ ಉದಾರಿಗಳು. ಶಿಕ್ಷಕರು ತೃಪ್ತಿಕರವಾಗಿ ಕೆಲಸ ಮಾಡದಿದ್ದರೆ ಶಿಕ್ಷಿಸುವ ಮನೋ ಭಾವವುಳ್ಳ ಅವರು ಅದೇ ಶಿಕ್ಷಕರ ಕಷ್ಟದಲ್ಲಿ ಸಹಾನುಭೂತಿಯಿಂದ ಉದಾರವಾಗಿ ಸಹಾಯ ಮಾಡುತ್ತಿದ್ದರು. ರಾಯರು ತಮ್ಮ ಕೈಕೆಳಗಿನ ಅಧಿಕಾರಿಗಳನ್ನು ಗೌರವದಿಂದ ಕಾಣುತ್ತಿದ್ದರು. ಸಹಾಯ ಬಯಸಿ ಬಂದಂಥ  ಉಪಾಧ್ಯಾಯರನ್ನು ವಿಶ್ವಾಸದಿಂದ ಮಾತನಾಡಿಸಿ, ತಮ್ಮ ಜೊತೆಯಲ್ಲೇ ಗಾಡಿಯಲ್ಲಿ ಕೂಡಿಸಿ ಕರೆದುಕೊಂಡು ಹೋಗಿ, ಊಟ ತಿಂಡಿ ಕೊಡಿಸಿ ಅವರ ಕೆಲಸ ಮಾಡಿಕೊಡುತ್ತಿದ್ದರು. ಶಿಕ್ಷಕರಿಗೆ ರಾಯರನ್ನು ಕಂಡರೆ ಭಯವೂ ಇತ್ತು, ಪ್ರೀತಿಗೌರವಗಳೂ ಇದ್ದುವು. ಅವರ ದೇಶಾಭಿಮಾನ, ದೈವಭಕ್ತಿ, ಧರ್ಮಭೀರುತ್ವ, ಲೋಕ ಸೇವಾನಿಷ್ಠೆ ಮೆಚ್ಚತಕ್ಕವು. ಕರ್ನಾಟಕ ಸ್ವತಂತ್ರ ಸಂಯುಕ್ತ ಪ್ರಾಂತವಾಗಿರಬೇಕೆಂಬುದು ಅವರ ಆಕಾಂಕ್ಷೆ. ನಮ್ಮ ತರುಣರಿಗೆ ಸೈನಿಕ ಶಿಕ್ಷಣ ಅಗತ್ಯ ಅನ್ನುವುದು ಅವರ ಅಭಿಪ್ರಾಯ. ‘ಶಿಕ್ಷಣ’ ವಿಷಯದಲ್ಲಿ ಅವರದು ಅತ್ಯಂತ ಶ್ರೇಷ್ಠ ಭಾವನೆ. ವಿದ್ಯಾರ್ಥಿಯ ಬುದ್ಧಿಶಕ್ತಿ, ಶರೀರ ಸಾಮರ್ಥ್ಯಗಳ ವಿಕಾಸಗೊಳಿಸುವುದರಲ್ಲಿ ಅವರ ಆಶಯ ಅತಿಶಯ ವಾದದ್ದು. ಇನ್ನು ಉಪಾಧ್ಯಾಯರ ವಿಷಯಕ್ಕೆ ಸಂಬಂಧಿಸಿದಂತೆ ರಾಯರ ಭಾವನೆಗಳು ಅತ್ಯುಚ್ಚ ಮಟ್ಟದವು. ಅವರೂ ‘ಜ್ಞಾನ’ದ ವಿಷಯಗಳಲ್ಲಿ ವಿದ್ಯಾರ್ಥಿ ಗಳೇ ಎಂಬುದು ರಾಯರ ಕಲ್ಪನೆ. ಈ ಶಿಕ್ಷಣದ ಕ್ಷೇತ್ರದಲ್ಲಿ ಮತೀಯತೆ ತಲೆಹಾಕಬಾರದೆಂದು ಅವರು ಹೇಳುತ್ತಲೇ ಇದ್ದರು. ಬಡ ಮುಸ್ಮಿಂ ವಿದ್ಯಾರ್ಥಿಗಳಿಗಾಗಿ ಏಳು ಸಾವಿರ ರೂಪಾಯಿಯನ್ನು ಸಂಗ್ರಹಿಸಿ ಕೊಟ್ಟರು. ಕರ್ನಾಟಕ ಕಾಲೇಜಿಗೆ ಎಲ್ಲ ಮತಗಳವರಿಂದ ಹಣ ಸಂಗ್ರಹಿಸಿದ್ದುಂಟು. ಇಂಥ ವಿಶಾಲ ಮನೋಭಾವದ ರಾಯರು ನಿರಾಡಂಬರ ಜೀವಿಗಳು. ಅವರ ಉಡುಗೆ ತೊಡುಗೆಗಳೂ ದೇಶೀಯ ವಾದುವೇ. ಅವರ ಜೀವನದ ಗುರಿಯೇನೆಂಬುದನ್ನು ಅವರು ಮೇಲ್ಪಂಕ್ತಿಯಾಗಿಟ್ಟು ಕೊಂಡಿದ್ದ ಸೂತ್ರಗಳಿಂದ ಗುರುತಿಸಬಹುದು. ‘ದೇವರಿಗೆ ಅಂಜಿ ನಡೆ’ ‘ಕರ್ತವ್ಯದಲ್ಲಿ ತಪ್ಪುವುದು ಪಾಪ’ ದೊರೆತ ಅವಕಾಶವನ್ನು ಕಳೆದುಕೊಳ್ಳುವುದು ಅಪರಾಧ’ ಈ ಮಾತುಗಳು ಮಾನವನ ಬದುಕಿಗೆ ತಲೆಬರಹಗಳಾಗುವುದರಲ್ಲಿ ಸಂದೇಹವಿಲ್ಲ.

ರೊದ್ದ ಶ್ರೀನಿವಾಸರಾಯರು ೭೯ ವರ್ಷಗಳವರೆಗೆ ಬದುಕಿದ್ದರು. ೧೯೨೬ರ ಆಗಸ್ಟ್ ೪ ರಂದು ದೈವಾಧೀನರಾದರು. ಅವರ ಅಂತಿಮ ಯಾತ್ರೆಗೆ ಸೇರಿದ್ದ ವಿವಿಧ ಮತದ ಜನದ ಗುಂಪು ಅವರ ಮಹಿಮೆಯನ್ನು ಸಾರುತ್ತಿತ್ತು.