(ಕ್ರಿ. ಶ. ೧೮೫೭-೧೯೩೨) (ಮಲೇರಿಯ ಹರಡುವ ವಿಧಾನ)

ಮಲೇರಿಯಾ ಬಂದರೆ “ಡಾಕ್ಟರರ ಬಳಿ ಹೋಗಿ, ಕಮ್ಮಿಯಾಗುತ್ತದೆ” ಎಂದು ಇಂದು ನಾವು ಸರಳವಾಗಿ ಹೇಳಿ ಬಿಡುತ್ತೇವೆ. ಅದೇನೂ ಅಂತ ಗುಣವಾಗದ ರೋಗವೇನಲ್ಲ ಎಂಬ ಖಾತರಿ ಇರುವುದರಿಂದ ಗಾಬರಿಯೂ ಉಂಟಾಗುವುದಿಲ್ಲ. ಆದರೆ ಹಿಂದೆ ಈ ರೋಗಕ್ಕೆ ಸರಿಯಾದ ಚಿಕಿತ್ಸೆ ಇರಲಿಲ್ಲ. ರೋಗಿ ಸಾಯುವ ಸಾಧ್ಯತೆಯೂ ಇರುತ್ತಿತ್ತು. ಮೇಲಾಗಿ ಈ ರೋಗ ಹರಡುವ ಪ್ರಮಾಣವೂ ಸಾಕಷ್ಟು ದೊಡ್ಡದೇ ಆಗಿತ್ತು. ಇಂದು ಈ ರೋಗ ಹರಡುವ ಪ್ರಮಾಣ ಕಮ್ಮಿ ಆಗಿದ್ದರೆ, ಅದಕ್ಕೆ ಸರಿಯಾದ ಚಿಕಿತ್ಸೆ ಕಂಡು ಹಿಡಿದಿದ್ದರೆ ಅದರ ಖ್ಯಾತಿ ಸರ್ ರೊನಾಲ್ಡ್ ರಾಸ್ ಗೆ ಸಲ್ಲುತ್ತದೆ. ಈತ ಬ್ರಿಟಿಷ್ ರಾಷ್ಟ್ರೀಯ, ಆದರೆ ಹುಟ್ಟಿದ್ದು ಭಾರತದಲ್ಲಿ (ರೊನಾಲ್ಡ್ ರಾಸ್ ೧೮೫೭ರಲ್ಲಿ ಹಿಮಾಲಯದ ತಪ್ಪಲಿನ ಆಲ್ಮೋರಾದಲ್ಲಿ ಜನಿಸಿದರು.) ಈತನ ತಂದೆಯ ಹೆಸರು ಸರ್ ಕ್ಯಾಂಪ್ ಬೆಲ್ ಕ್ಲೇ ಗ್ಯ್ರಾಂಟ್ ರಾಸ್. ಬ್ರಿಟಿಷ್ ಸೈನ್ಯಾಧಿಕಾರಿಯಾಗಿದ್ದ ಆತ ರೊನಾಲ್ಡ್ ನನ್ನು ವಿದ್ಯಾಭ್ಯಾಸಕ್ಕಾಗಿ ಲಂಡನಿಗೆ ಕಳಿಸಿಕೊಟ್ಟರು.

ರೊನಾಲ್ಡ್ ರಾಸ್ ಲಂಡನಿನ ಸೇಂಟ್ ಬಾರ್ಥೆಲೋಮ್ಯ ಮೆಡಿಕಲ್ ಸ್ಕೂಲಿನಲ್ಲಿ ವೈದ್ಯಕೀಯ ವ್ಯಾಸಂಗ ಮಾಡಿದರು. ೧೮೭೯ರಲ್ಲಿ ಕಾಲೇಜ್ ಆಫ್ ಸರ್ಜನ್ಸ್ ಸದಸ್ಯತ್ವದ ಪರೀಕ್ಷೆಯಲ್ಲಿ ತೇರ್ಗಡೆಯಾದರು, ಆದರೆ ಅಪಾಥೆಕರೀಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಲಿಲ್ಲ. ಪಟ್ಟು ಬಿಡದೆ ಪುನಃ ಆ ಪರೀಕ್ಷೆಗೆ ಕುಳಿತು ಪಾಸಾದರು. ಮುಂದೆ ಇಂಡಿಯನ್ ಮೆಡಿಕಲ್ ಸರ್ವೀಸ್ ಪರೀಕ್ಷೆಗೆ ಕುಳಿತು ಅದರಲ್ಲೂ ತೇರ್ಗಡೆಯಾದರು.

ಭಾರತಕ್ಕೆ ಬಂದ ನಂತರ ಸೊಳ್ಳೆಗಳ ಬಗ್ಗೆ ವಿಶೇಷ ಆಸಕ್ತಿವಹಿಸಿ ಅಧ್ಯಯನ ಮಾಡತೊಡಗಿದರು. ನಿರಂತರ ಪ್ರಯತ್ನ, ಪರಿಶ್ರಮದ ಮೂಲಕ ಆತ ಮಲೇರಿಯ ರೋಗದ ಸೂಕ್ಷ್ಮಜೀವಿಗಳನ್ನು ಒಬ್ಬರ ರಕ್ತದಿಂದ ಇನ್ನೊಬ್ಬರ ರಕ್ತಕ್ಕೆ ಕಚ್ಚಿ ಸೇರಿಸುವ ಅನಾಫಿಲಿಸ್ ಎಂಬ ನಿರ್ದಿಷ್ಟ ಜಾತಿಯ ಸೊಳ್ಳೆಯನ್ನು ಕಂಡು ಹಿಡಿದರು. ಮನುಷ್ಯರಿಗೆ ಮಾರಕವಾಗಿದ್ದ ಮಲೇರಿಯ ಹರಡುವ ವಿಧಾನವನ್ನು ಕಂಡು ಹಿಡಿದಿದ್ದಕ್ಕಾಗಿ ಅವರನ್ನು ೧೯೦೧ ರಲ್ಲಿ ರಾಯಲ್ ಸೊಸೈಟಿಯ ಫೆಲೋ ಆಗಿ ಆಯ್ಕೆ ಮಾಡಲಾಯಿತು. ಅವರು ಮರುವರ್ಷವೇ ನೊಬೆಲ್ ಪಾರಿತೋಷಕವನ್ನೂ ಪಡೆದರು. ಇವರು ಮಾಡಿದ ಸಂಶೋಧನೆ ಮಲೇರಿಯ ರೋಗ ಹರಡುವುದನ್ನು ತಡೆಯಲು, ಅದಕ್ಕೆ ಸೂಕ್ತವಾದೆ ಚಿಕಿತ್ಸಾ ಕ್ರಮಗಳನ್ನು ಕಂಡು ಹಿಡಿಯಲು ನಾಂದಿಯಾಯಿತು.

ರೊನಾಲ್ಡ್ ರಾಸ್ ೧೯೩೨ರಲ್ಲಿ ನಿಧನ ಹೊಂದಿದರು.