ರೋಜರ್ ಫೆಡರರ್ (ಜನನ: 8 ಆಗಸ್ಟ್‌ 1981) ಸ್ವಿಟ್ಜರ್ಲೆಂಡ್‌ನ ವೃತ್ತಿಪರ ಟೆನಿಸ್‌ ಆಟಗಾರ. 2೦೦9ನೇ ಋತುವನ್ನು ಅವರು ಟೆನಿಸ್‌ ವೃತ್ತಿಪರರ ಸಂಸ್ಥೆಯ (ಎಟಿಪಿ) “ವಿಶ್ವ ಶ್ರೇಯಾಂಕಪಟ್ಟಿಯಲ್ಲಿ ನಂ.1 ಸ್ಥಾನದೊಂದಿಗೆ ಮುಗಿಸಿದ್ದಾರೆ. ಸತತ 237 ವಾರ ಕಾಲ “ವಿಶ್ವ ನಂ.1 ಪಟ್ಟ ಕಾಪಾಡಿಕೊಂಡ “ವಿಶ್ವದಾಖಲೆ ಅವರ ಹೆಸರಲ್ಲಿದೆ.
ಫೆಡರರ್ 15 ಗ್ರಾಂಡ್‌ಸ್ಲಾಂ ಸಿಂಗಲ್ಸ್‌ ಪ್ರಶಸ್ತಿಗಳನ್ನು ಗೆದ್ದಿರುವುದು ಸಾರ್ವಕಾಲಿಕ ಗರಿಷ್ಠ ದಾಖಲೆ. 2೦೦9ರ ಜುಲೈನಲ್ಲಿ 6ನೇ ಬಾರಿ ವಿಂಬಲ್ಡನ್‌ ಗೆಲ್ಲುವ ಮೂಲಕ ಅವರು ಅಮೆರಿಕದ ಪೀಟ್‌ ಸಾಂಪ್ರಾಸ್‌ ಹೆಸರಲ್ಲಿದ್ದ 14 ಗ್ರಾಂಡ್‌ಸ್ಲಾಂಗಳ ದಾಖಲೆ ಮುರಿದರು. ಸ್ವಿಸ್‌ ಆಟಗಾರ 2೦೦3ರಿಂದೀಚೆಗೆ ಒಟ್ಟು 21 ಗ್ರಾಂಡ್‌ಸ್ಲಾಂ ಫೈನಲ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ ಹಾಗೂ ಹಾಲಿ ಋತುವಿನ ಯುಎಎಸ್‌ ಓಪನ್‌ವರೆಗೆ ಸತತ 22 ಗ್ರಾಂಡ್‌ಸ್ಲಾಂಗಳಲ್ಲಿ ಕನಿಷ್ಠ ಸೆಮಿಫೈನಲ್‌ ಅಥವಾ ಅದಕ್ಕಿಂತ ಹೆಚ್ಚಿನ ಸಾಧನೆ ಮಾಡಿದ್ದಾರೆ. ಸತತ 1೦ ಗ್ರಾಂಡ್‌ಸ್ಲಾಂ ಫೈನಲ್‌ಗಳಲ್ಲಿ ಹಾಗೂ ಇತ್ತೀಚಿನ 18ರಲ್ಲಿ 17 ಗ್ರಾಂಡ್‌ಸ್ಲಾಂ ಫೈನಲ್‌ಗಳಲ್ಲಿ ಆಡಿದ ದಾಖಲೆಯೂ ಅವರ ಹೆಸರಲ್ಲಿದೆ. ತಮ್ಮೀ ಟೆನಿಸ್‌ ಯಶಸ್ಸಿಗಾಗಿ ಅವರು ಸತತ ನಾಲ್ಕು ವರ್ಷ (2೦೦5-2೦೦8) ಲೌರೆಸ್‌ ವರ್ಷದ “ವಿಶ್ವ ಕ್ರೀಡಾ ವ್ಯಕ್ತಿ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

ಬಾಲ್ಯ ಮತ್ತು ವೈಯಕ್ತಿಕ ಜೀವನ:
ಫೆಡರರ್ ಬಾಸೆಲ್‌ ಹತ್ತಿರದ ಬಿನ್ನಿಂಗೆನ್‌ನಲ್ಲಿ ಸ್ವಿಸ್‌ ಪೌರ ರಾಬರ್ಟ್‌ ಫೆಡರರ್ ಮತ್ತು ದಕ್ಷಿಣ ಆಫ್ರಿಕಾ ಸಂಜಾತೆ ಲಿನೆಟ್‌ ಡು ದಂಪತಿಗೆ ಜನಿಸಿದರು. ಅದರ ಫಲವಾಗಿ ಫೆಡೆಕ್ಸ್‌ ಸ್ವಿಸ್‌ ಹಾಗೂ ದಕ್ಷಿಣ ಆಫ್ರಿಕಾ ಪೌರತ್ವಗಳೆರಡನ್ನೂ ಹೊಂದಿದ್ದಾರೆ. ಅವರು ಫ್ರೆಂಚ್‌ ಮತ್ತು ಜರ್ಮನಿ ಗಡಿಗೆ ಹತ್ತಿರದಲ್ಲಿರುವ ಬಾಸೆಲ್‌ನ ಉಪನಗರ ಮುಂಚೆನ್‌ಸ್ಟೈನ್‌ನಲ್ಲಿ ಬೆಳೆದರು. ಹಾಗಾಗಿ ಅವರು ಸ್ವಿಸ್‌ ಜರ್ಮನ್‌, ಜರ್ಮನ್‌, ಫ್ರೆಂಚ್‌ ಮತ್ತು ಇಂಗ್ಲಿಷ್‌ ಭಾಷೆಗಳಲ್ಲಿ ಪಾಂಡಿತ್ಯ ಹೊಂದಿದ್ದಾರೆ. ಕ್ಯಾಥೊಲಿಕ್‌ ಸಂಪ್ರದಾಯದಲ್ಲಿ ಬೆಳೆದವರಾದ ಫೆಡರರ್ 2೦೦6ರಲ್ಲಿ ರೋಮ್‌ನಲ್ಲಿ ಟೂರ್ನಿ ಆಡುವ ಸಂದರ್ಭದಲ್ಲಿ ಪೋಪ್‌ ಬೆನೆಡಿಕ್ಟ್‌ -16 ಅವರನ್ನು ಭೇಟಿ ಮಾಡಿದ್ದರು. ಎಲ್ಲಾ ಸ್ವಿಸ್‌ ನಾಗರಿಕರಂತೆ ಫೆಡರರ್ ಸಹ ಸ್ವಿಸ್‌ ಸಶಸ್ತ್ರ ಪಡೆಯಲ್ಲಿ ಕಡ್ಡಾಯ ಸೈನಿಕ ಸೇವೆ ಸಲ್ಲಿಸಬೇಕಾಗಿತ್ತಾದರೂ, ದೀರ್ಘ ಕಾಲದಿಂದ ಕಾಡುತ್ತಿದ್ದ ಬೆನ್ನು ನೋವಿನಿಂದಾಗಿ ಅವರಿಗೆ ವಿನಾಯತಿ ದೊರೆಯಿತು.

ವಿವಾಹ ಜೀವನ:
ಫೆಡರರ್ 2೦೦9, ಏಪ್ರಿಲ್‌ 11ರಂದು ಮಾಜಿ ಟೆನಿಸ್‌ ಆಟಗಾರ್ತಿ ಮಿರ್ಕಾ ವಾವ್ರಿನೆಕ್‌ರನ್ನು ವಿವಾಹವಾದರು. ಇವರಿಬ್ಬರು 2೦೦೦ದ ಸಿಡ್ನಿ ಒಲಿಂಪಿಕ್ಸ್‌ ಸಂದರ್ಭದಲ್ಲಿ ಪರಿಚಯವಾಗಿದ್ದರು. ಪಾದದ ಗಾಯದಿಂದಾಗಿ 2೦೦2ರಲ್ಲಿ ಟೆನಿಸ್‌ನಿಂದ ದೂರ ಸರಿದ ಮಿರ್ಕಾ, ಅಂದಿನಿಂದ ಫೆಡರರ್ಗೆ ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿದ್ದಾರೆ. ದಂಪತಿ ಮೈಲಾ ರೋಸ್‌ ಮತ್ತು ಚಾರ್ಲೀನ್‌ ರಿವಾ ಹೆಸರಿನ ಅವಳಿ ಹೆಣ್ಣು ಮಕ್ಕಳನ್ನು (ಜನನ: ಜುಲೈ 23) ಪಡೆದಿದ್ದಾರೆ.

ದತ್ತಿ ಕಾರ್ಯಗಳು:
ಅವಕಾಶವಂಚಿತರಿಗೆ ನೆರವು ಹಾಗೂ ಕ್ರೀಡಾ ಉತ್ತೇಜನ ನೀಡುವ ಸಲುವಾಗಿ ಅವರು 2೦೦3ರಲ್ಲಿ ರೋಜರ್ ಫೆಡರರ್ ಪ್ರತಿಷ್ಠಾನ ಹುಟ್ಟುಹಾಕಿದ್ದಾರೆ. 2೦೦5ರಲ್ಲಿ ಕಟ್ರಿನಾ ಚಂಡಮಾರುತದ ಸಂತ್ರಸ್ತರಿಗೆ ನೆರವು ನೀಡುವ ಉದ್ದೇಶದಿಂದ ಅವರು ತಮ್ಮ ರಾಕೆಟ್‌ಗಳನ್ನು ಹರಾಜು ಹಾಕಿದ್ದರು. 2೦೦6ರಲ್ಲಿ ಯುನಿಸೆಫ್‌ನ ರಾಯಭಾರಿಯಾಗಿ ನೇಮಕಗೊಂಡಿರುವ ಫೆಡರರ್ ಸುನಾಮಿಂದ ಅಪಾರ ಹಾನಿಗೊಳಗಾದ ದಕ್ಷಿಣ ಆಫ್ರಿಕಾ ಮತ್ತು ತಮಿಳುನಾಡಿಗೆ ಭೇಟಿ ನೀಡಿದ್ದಾರೆ. ಕಿರಿಯರಲ್ಲಿ ಏಡ್ಸ್‌ ಜಾಗೃತಿ ಮೂಡಿಸುವ ಸಲುವಾಗಿ ಯುನಿಸೆಫ್‌ನ ಸಾರ್ವಜನಿಕ ಸಂದೇಶಗಳಲ್ಲೂ ಅವರು ಕಾಣಿಸಿಕೊಂಡಿದ್ದಾರೆ.

ಸ್ಫೂರ್ತಿ:
ಜರ್ಮನಿಯ ಬೋರಿಸ್‌ ಬೆಕ್ಕರ್ 1985ರಲ್ಲಿ ಚೊಚ್ಚಲ ವಿಂಬಲ್ಡನ್‌ ಗೆದ್ದಾಗ ಫೆಡರರ್ 4 ವರ್ಷದ ಬಾಲಕ. ಅಂದಿನಿಂದ ಅವರು ಟಿವಿಯಲ್ಲಿ ಟೆನಿಸ್‌ ಪಂದ್ಯಗಳನ್ನು ಗಂಟೆಗಟ್ಟಲೆ ವಿಕ್ಷಿಸುತ್ತಿದ್ದರು. 1೦ನೇ ವಯಸ್ಸಿನಲ್ಲಿ ಟೆನಿಸ್‌ ಕಲಿಕೆ ಆರಂಭಿಸಿದ ಅವರು ಆಗಿನಿಂದಲೇ ವಿಶ್ವದ ಅತ್ಯುತ್ತಮ ಆಟಗಾರನಾಗುವ ಕನಸು ಕಾಣುತ್ತಿದ್ದರು. 12ನೇ ವಯಸ್ಸಿನವರೆಗೂ ಫುಟ್‌ಬಾಲ್‌ ಆಡುತ್ತಿದ್ದ ಅವರು ಆ ನಂತರ ಟೆನಿಸ್‌ನತ್ತ ಪೂರ್ಣ ಗಮನ ಕೇಂದ್ರೀಕರಿಸಿದರು. 14ನೇ ವಯಸ್ಸಿನಲ್ಲಿ ಸ್ವಿಟ್ಜರ್ಲೆಂಡ್‌ನಲ್ಲಿ ಎಲ್ಲಾ ವಯೋಮಿತಿ ವಿಭಾಗಗಳಲ್ಲಿ ರಾಷ್ಟ್ರೀಯ ಚಾಂಪಿಯನ್‌ ಎನಿಸಿದ್ದರು. 1998ರಲ್ಲಿ ಕಿರಿಯರ ವಿಂಬಲ್ಡನ್‌ ಗೆದ್ದ ಅವರು ವರ್ಷದ ಐಟಿಎಫ್‌ ವಿಶ್ವ ಜೂನಿಯರ್ ಚಾಂಪಿಯನ್‌ ಎನಿಸಿದರು.

ವೃತ್ತಿಜೀವನ:
1998ರಲ್ಲಿ ಜಿಸ್ಟಾಡ್‌ ಎಟಿಪಿ ಟೂರ್ನಿ ಮೂಲಕ ವೃತ್ತಿಪರರಾದರು. 2೦೦2ರ ವಿಂಬಲ್ಡನ್‌ ಕ್ವಾರ್ಟರ್ ಫೈನಲ್‌ನಲ್ಲಿ 7 ಬಾರಿಯ ವಿಂಬಲ್ಡನ್‌ ಚಾಂಪಿಯನ್‌ ಪೀಟ್‌ ಸಾಂಪ್ರಾಸ್‌ ವಿರುದ್ಧ 5 ಸೆಟ್‌ಗಳ ಮ್ಯಾರಥಾನ್‌ ಸೆಣಸಾಟದಲ್ಲಿ ಆವರೆಗಿನ ಅತೀ ದೊಡ್ಡ ಗೆಲುವು ಸಾಧಿಸಿದರು. ಅದರೊಂದಿಗೆ ವಿಂಬಲ್ಡನ್‌ನಲ್ಲಿ ಸಾಂಪ್ರಾಸ್‌ರ ಸತತ 31 ಗೆಲುವುಗಳ ಸರಪಳಿ ತುಂಡಾಯಿತು.
2೦೦3ರಲ್ಲಿ ಆಸ್ಟ್ರೇಲಿಯಾದ ಮಾರ್ಕ್‌ ಫಿಲಿಪ್ಪೋಸಿಸ್‌ರನ್ನು ಸೋಲಿಸಿ ಚೊಚ್ಚಲ ವಿಂಬಲ್ಡನ್‌ ಗೆದ್ದರು. ಹೋಸ್ಟನ್‌ನಲ್ಲಿ ಚೊಚ್ಚಲ ವರ್ಷಾಂತ್ಯದ ಮಾಸ್ಟರ್ಸ್‌ ಟೂರ್ನಿಯೊಂದಿಗೆ ಆ ವರ್ಷ ಮುಗಿಸಿದರು.
2೦೦4ರಲ್ಲಿ ನಾಲ್ಕರಲ್ಲಿ 3 ಗ್ರಾಂಡ್‌ಸ್ಲಾಂ (ಆಸ್ಟ್ರೇಲಿಯನ್‌ ಓಪನ್‌, ವಿಂಬಲ್ಡನ್‌ ಯುಎಸ್‌ ಓಪನ್‌) ಗೆದ್ದುಕೊಂಡರು. ಅಥೆನ್ಸ್‌ ಒಲಿಂಪಿಕ್ಸ್‌ನಲ್ಲಿ 2ನೇ ಸುತ್ತಿನಲ್ಲಿ ನಿರಾಸೆ ಅನುಭವಿಸಿದರು.
2೦೦5ರಲ್ಲಿ ಸತತ 3ನೇ ವರ್ಷ ವಿಂಬಲ್ಡನ್‌, ಸತತ 2ನೇ ಬಾರಿ ಯುಎಸ್‌ ಓಪನ್‌ ಗೆದ್ದುಕೊಂಡರು.
2೦೦6ರಲ್ಲಿ 2ನೇ ಬಾರಿ ಆಸ್ಟ್ರೇಲಿುನ್‌ ಓಪನ್‌ ಗೆದ್ದಿದ್ದಲ್ಲದೆ, ಸತತ 4ನೇ ಬಾರಿ ವಿಂಬಲ್ಡನ್‌ ಹಾಗೂ ಸತತ 3ನೇ ಬಾರಿ ಯುಎಸ್‌ ಓಪನ್‌ ಗೆದ್ದರು.
2೦೦7ರಲ್ಲಿ 3ನೇ ಬಾರಿ ಆಸ್ಟ್ರೇಲಿಯನ್‌ ಓಪನ್‌, ಸತತ 5ನೇ ಬಾರಿ ವಿಂಬಲ್ಡನ್‌ ಹಾಗೂ ಸತತ 4ನೇ ಬಾರಿ ಯುಎಸ್‌ ಓಪನ್‌ ಜಯಿಸಿದರು. ತನ್ಮೂಲಕ ಒಂದೇ ಋತುವಿನಲ್ಲಿ 3 ಗ್ರಾಂಡ್‌ಸ್ಲಾಂಗಳನ್ನು ಗೆದ್ದ (2೦೦4, 2೦೦6, 2೦೦7) ದಾಖಲೆಯನ್ನು ಮೂರು ಬಾರಿ ಪುನರಾವರ್ತಿಸಿದ ಏಕೈಕ ಆಟಗಾರ ಎನಿಸಿದರು.
2೦೦8ರ ಫ್ರೆಂಚ್‌ ಓಪನ್‌ ಫೈನಲ್‌ನಲ್ಲಿ ಸತತ 3ನೇ ವರ್ಷ ರಾಫೆಲ್‌ ನಡಾಲ್‌ ವಿರುದ್ಧ ಸೋತ ಫೆಡರರ್, ವಿಂಬಲ್ಡನ್‌ ಫೈನಲ್‌ನಲ್ಲೂ ನಡಾಲ್‌ ವಿರುದ್ಧ 4 ಗಂಟೆ 48 ನಿಮಿಷಗಳ ಹೋರಾಟದ ಬಳಿಕ 4ನೇ ಸೆಟ್‌ ಟೈಬ್ರೇಕರ‍್ನಲ್ಲಿ ನಡಾಲ್‌ ವಿರುದ್ಧ ಸೋಲುವ ಮೂಲಕ ಸತತ 6ನೇ ಗೆಲುವಿನ ದಾಖಲೆ ಮಾಡಲು ವಿಫಲರಾದರು. ಅದೇ ವರ್ಷ ಬೀಜಿಂಗ್‌ ಒಲಿಂಪಿಕ್ಸ್‌ನಲ್ಲಿ ಸಿಂಗಲ್ಸ್‌ನಲ್ಲಿ ಕ್ವಾರ್ಟರ್ ಫೈನಲ್ಸ್‌ನಲ್ಲಿ ಸೋತರೂ, ಡಬಲ್ಸ್‌ನಲ್ಲಿ ದೇಶಬಾಂಧವ ಸ್ಟ್ಯಾನಿಸ್ಲಾಸ್‌ ವಾವ್ರಿಕ ಜೊತೆ ಸ್ವರ್ಣ ಗೆದ್ದರು. ಆದರೆ, ಸಿಂಗಲ್ಸ್‌ ವಿಶ್ವ ನಂ.1 ಶ್ರೇಯಾಂಕವನ್ನು ಸತತ 237 ವಾರಗಳ ಬಳಿಕ ನಡಾಲ್‌ಗೆ ಬಿಟ್ಟುಕೊಟ್ಟರು. ಯುಎಸ್‌ ಓಪನ್‌ನಲ್ಲಿ ಸತತ 5ನೇ ವರ್ಷ ಪ್ರಶಸ್ತಿ ಗೆದ್ದು ದಾಖಲೆ ಮಾಡಿದರು. ಇದೇ ವರ್ಷ ಅವರು ಪುರುಷರ ಟೆನಿಸ್‌ನಲ್ಲಿ ಅತೀ ಹೆಚ್ಚು ಹಣವನ್ನು ಬಹುಮಾನ ಧನದ ರೂಪದಲ್ಲಿ ಗೆದ್ದ (43.3 ದಶಲಕ್ಷ ಯುಎಸ್‌ ಡಾಲರ್) ಸಾರ್ವಕಾಲಿಕ ದಾಖಲೆ ಮಾಡಿದರು.
2೦೦9ರ ಆಸ್ಟ್ರೇಲಿಯನ್‌ ಓಪನ್‌ ಫೈನಲ್‌ನಲ್ಲಿ ನಡಾಲ್‌ ವಿರುದ್ಧ ಸೋತು ಕಣ್ಣೀರು ಹಾಕಿದ ಫೆಡರರ್, ಫ್ರೆಂಚ್‌ ಓಪನ್‌ನಲ್ಲಿ ಚೊಚ್ಚಲ ಪ್ರಶಸ್ತಿ ಗೆದ್ದು ಪೀಟ್‌ ಸಾಂಪ್ರಾಸ್‌ರ 14 ಗ್ರಾಂಡ್‌ಸ್ಲಾಂ ದಾಖಲೆ ಸರಿಗಟ್ಟಿದರು. ಇಲ್ಲಿ ಕಳೆದ ಮೂರು ಫೈನಲ್‌ಗಳಲ್ಲಿ ಫೆಡರರ್ ರನ್ನು ಸೋಲಿಸಿದ್ದ ನಡಾಲ್‌ ಈ ಬಾರಿ ಗಾಯದಿಂದಾಗಿ 4 ವರ್ಷಗಳಲ್ಲಿ ಮೊದಲ ಬಾರಿ ಫೈನಲ್‌ ತಲುಪಲು ವಿಫಲರಾಗಿದ್ದರು.
ವಿಂಬಲ್ಡನ್‌ನಲ್ಲಿ 7 ವರ್ಷಗಳಲ್ಲಿ 6ನೇ ಬಾರಿ ಚಾಂಪಿಯನ್‌ ಪಟ್ಟಕ್ಕೇರುವ ಮೂಲಕ ಒಟ್ಟು 15 ಗ್ರಾಂಡ್‌ಸ್ಲಾಂ ಗೆಲುವಿನ ನೂತನ ದಾಖಲೆ ಬರೆದರು. ಅದರೊಂದಿಗೆ ನಡಾಲ್‌ರಿಂದ ವಿಶ್ವ ನಂ.1 ಶ್ರೇಯಾಂಕವನ್ನು ಮರಳಿ ಕಸಿದುಕೊಂಡರು.
ಯುಎಸ್‌ ಓಪನ್‌ ಫೈನಲ್‌ನಲ್ಲಿ ಜುವಾನ್‌ ಮಾರ್ಟಿನ್‌ ಡೆಲ್‌ಪೊಟ್ರೊ ವಿರುದ್ಧ ಸೋತ ಅವರು ಸತತ 6ನೇ ಪ್ರಶಸ್ತಿ ಗೆಲ್ಲಲು ವಿಫಲರಾದರು.
ಲಂಡನ್‌ನಲ್ಲಿ ನವೆಂಬರ್ ನಲ್ಲಿ ನಡೆದ ವರ್ಷಾಂತ್ಯದ ಎಟಿಪಿ ಮಾಸ್ಟರ್ಸ್‌ ಟೂರ್ನಿಯಲ್ಲಿ ಬ್ರಿಟನ್‌ನ ಆಂಡಿ ಮರ್ರೆಯನ್ನು ಸೋಲಿಸುವ ಮೂಲಕ ನಂ.1 ಪಟ್ಟದೊಂದಿಗೆ ಋತು ಮುಗಿಸುವುದನ್ನು ಖಚಿತ ಪಡಿಸಿಕೊಂಡರು. ಆದರೆ, ಸೆಮಿಫೈನಲ್‌ನಲ್ಲಿ ರಷ್ಯಾದ ನಿಕೊಲಾಯ್‌ ಡೇವಿಡೆಂಕೊ ವಿರುದ್ಧ 13 ಮುಖಾಮುಖಿಗಳಲ್ಲಿ ಮೊದಲ ಬಾರಿ ಸೋಲುವ ಮೂಲಕ ಸೋಲಿನೊಂದಿಗೆ ವರ್ಷ ಮುಗಿಸಿದರು.

ಎದುರಾಳಿಗಳು:
2೦೦3ರಿಂದೀಚೆಗಿನ ಫೆಡರರ್ ಆಳ್ವಿಕೆಯಲ್ಲಿ ಅವರಿಗೆ ಸೆಡ್ಡು ಹೊಡೆದವರು ಸ್ಪೇನ್‌ನ ರಾಫೆಲ್‌ ನಡಾಲ್‌ ಮಾತ್ರ. 2೦೦9ರಲ್ಲಿ ಅರ್ಜೆಂಟೀನಾದ ಡೆಲ್‌ಪೊಟ್ರೊ ವಿರುದ್ಧ ಸ್ವಿಸ್‌ ಆಟಗಾರ ಪರದಾಡಿದರು.

ಜಾಹೀರಾತುಗಳು, ಪ್ರಾಯೋಜಕರು:
ಫೆಡರರ್ ವಿಲ್ಸನ್‌ ಟೆನಿಸ್‌ ರ್ಯಾಕೆಟ್‌ಗಳು ಮತ್ತು ಪರಿಕರಗಳ ರಾಯಭಾರಿಯಾಗಿದ್ದಾರೆ. ನೈಕಿ ಜೊತೆ ಅವರು ಜೀವಮಾನ ಅವಧಿಯ ಒಪ್ಪಂದ ಹೊಂದಿದ್ದಾರೆ. ಇದಲ್ಲದೆ, ಜಿಲ್ಲೆಟ್‌, ಸ್ವಿಸ್‌ ಮೂಲದ ಕಾಫಿ ಯಂತ್ರ ಸಂಸ್ಥೆ ಜುರಾ, ಮರ್ಸಿಡೀಸ್‌ ಬೆಂಜ್‌, ನೆಟ್‌ಜೆಟ್ಸ್‌ ಹಾಗೂ ರೋಲೆಕ್ಸ್‌ ಕೈಗಡಿಯಾರಗಳ ಪ್ರಚಾರ ರಾಯಭಾರಿಯಾಗಿದ್ದಾರೆ.

ಮಹತ್ವಾಕಾಂಕ್ಷೆ: ಒಲಿಂಪಿಕ್ಸ್‌ನಲ್ಲಿ ಸಿಂಗಲ್ಸ್‌ ಸ್ವರ್ಣ ಹಾಗೂ ಸ್ವಿಟ್ಜರ್ಲೆಂಡ್‌ಗೆ ಡೇವಿಸ್‌ ಕಪ್‌ ಗೆದ್ದುಕೊಡುವ ಅವರ ಕನಸು ಇನ್ನಷ್ಟೇ ಕೈಗೂಡಬೇಕಿದೆ.