ಐತಿಹಾಸಿಕ ಹಿನ್ನೆಲೆ :

ರೋಣ ತಾಲೂಕು ಪ್ರಾಚೀನ ಕಾಲದಿಂದಲೂ ಪ್ರಸಿದ್ಧ ಅರಸು ಮನೆತನಗಳ ಆಡುಂಬೋಲವಾಗಿದ್ದಿತು, ಸುಖಸಮೃದ್ಧಿಗಳ ತೌರಾಗಿದ್ದಿತು. ರೋಣ ತಾಲೂಕಿನ ಇತಿಹಾಸದ ಮೇಲೆ ಬೆಳಕು ಚೆಲ್ಲುವ ಬದಾಮಿ ಚಾಲುಕ್ಯರ, ರಾಷ್ಟ್ರಕೂಟರ, ಕಲ್ಯಾಣದ ಚಾಲುಕ್ಯರ, ಕಳಚೂರ್ಯರ, ಯಾದವರ, ಹೊಯ್ಸಳರ ಮತ್ತು ವಿಜಯನಗರ ಅರಸರ ಕಾಲಕ್ಕೆ ಸೇರಿದ ಸುಮಾರು ೨೦೦- ೨೫೦ ಕ್ಕೂ ಹೆಚ್ಚು ಶಿಲಾಶಾಸನಗಳು ಹಾಗೂ ವೀರಗಲ್ಲುಗಳು ಗರುಡಗಲ್ಲುಗಳು ಮಹಾಸತಿಕಲ್ಲುಗಳು, ಕೀಳ್ಗುಂಟಿಗಳು ಕಂಡು ಬರುತ್ತವೆ. ಶಾಸನಗಳ ಪ್ರಕಾರ ರೋಣ ತಾಲೂಕು ಹಿಂದೆ ಬೆಳ್ವೊಲ-೩೦೦ ಮತ್ತು ಕಿಸುಕಾಡು-೭೦ (ಸುಳ್ಳಾಟಿವಿ- ೭೦) ರ ಹಲವು ಭಾಗಗಳನ್ನು ಒಳಗೊಂಡಿದ್ದಿತು. “ಬೆಳ್ವೊಲ” ಎಂದರೆ ಬೆಳೆವ ಹೊಲ ಅಥವಾ ಫಲವತ್ತಾದ ಭೂಮಿ ಎಂದರ್ಥ. ಬೆಳ್ವಲನಾಡಲ್ಲಿ ರೋಣ, ಕೌಜಗೇರಿ, ಬೆಳ್ವಣಕಿ-೧೨, ನರೆಯಂಗಲ್ಲು-೧೨, ಜಕ್ಕಲಿ, ಸವಡಿ, ಅಬ್ಬಿಗೇರಿ, ಮೊದಲಾದ ಗ್ರಾಮಗಳು ಸೇರಿದ್ದವು. “ಕಿಸುಕಾಡು” ಎಂದರೆ ಕೆಂಪು ಭೂಮಿ ಎಂದರ್ಥ. ಕಿಸುನಾಡಲ್ಲಿ ಇಟ್ಟಿಗೆ, ಕಳ್ಳಮನಪಳ್ಳಿ, ನಿಡಗುಂದಿ, ಅಲಂಗೆರೆ, ಕಿರಿಯ ನರೆಯಂಗಲ್ಲು (ಕೋಡಿಕೊಪ್ಪ) ಮೊದಲಾದ ಗ್ರಾಮಗಳು ಸೇರಿದ್ದವು.

ಸಾಹಿತ್ಯ ಸಂಸ್ಕೃತಿಯ ಪರಂಪರೆ :

ರೋಣ ತಾಲೂಕು ನಾಡು, ನುಡಿ, ಸ್ವಾತಂತ್ರ್ಯ ಹೋರಾಟ, ಮತಧರ್ಮ, ಶಿಕ್ಷಣ, ಸಾಹಿತ್ಯ, ಶಿಲ್ಪಕಲೆ, ಸಂಸ್ಕೃತಿ, ಕ್ರೀಡೆ, ಹೀಗೆ ಹತ್ತು ಹಲವು ರಂಗಗಳಲ್ಲಿ ತನ್ನ ಶ್ರೀಮಂತಿಕೆಯನ್ನು ಮೆರೆದಿದೆ. ಕ್ರಿ.ಶ. ೧೧೧೧ರ ಶಾಸನದಲ್ಲಿನ “ವಾಕ್‌ಶ್ರೀ ರಮಣೀ ರಮಣರಿರ್ಪ _________ ಧರಣೀ ವನಿತೆಯ ಹಾರಂ ರೋಣಾಗ್ರಹಾರಂ” ಎಂಬ ಉಲ್ಲೇಖವು ನಮ್ಮ ಪೂರ್ವಿಕರ ಸಾಹಿತ್ಯ, ಸಂಸ್ಕೃತಿಯ, ಶ್ರೀಮಂತಿಕೆಗೆ ಹಿಡಿದ ಕನ್ನಡಿಯಾಗಿದೆ.

೧೧ನೇ ಶತಮಾನದ ಕರ್ನಾಟಕ ಪಂಚತಂತ್ರದ ಕವಿ ದುರ್ಗಸಿಂಹನಿಂದ ಹಿಡಿದು ಇಲ್ಲಿಯವರೆಗೆ ‘ಪಂಡಿತ’ ‘ವಿದ್ಯಾರತ್ನ’ ‘ವಿದ್ಯಾಭೂಷಣ‘ಪಂಪಪ್ರಶಸ್ತಿ’,‘ರಾಜ್ಯ ಮತ್ತು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ‘ಪಡೆದ ಹಲವು ವಿದ್ವಾಂಸರ ನೆಲೆಬೀಡಾಗಿದ್ದು’.

ನರೇಗಲ್‌ನ ಶಿವಬಸಪ್ಪಶಾಸ್ತಿ, ದಿವಂಗತ ರಾಮಭಟ್ಟ ಪುರೋಹಿತ ‘ಭವ್ಯಮಾನವ’ ಆಧುನಿಕ ಮಹಾಕಾವ್ಯದ ಕವಿ ದಿ. ಸಂ. ಶಿ. ಭೂಸನೂರಮಠ, ಶಾಂತಕವಿಗಳು, ‘ವಿದ್ಯಾರತ್ನ’ – ‘ವಿದ್ಯಾಭೂಷಣ’ ದಿ.ಎಸ್.ಪಂಚಮುಖಿ, ದಿ.ಪಂಡಿತ ಬಸವರಾಜ ಶಾಸ್ತ್ರಿ ಕೋಡಿ ಕೊಪ್ಪಮಠ, ‘ಕನ್ನಡ ಸಾಹಿತ್ಯ ಚರಿತ್ರೆ’ ಬರೆದ ರಸಿಕರಂಗ ಕಾವ್ಯನಾಮದ ರಂ. ಶ್ರೀ ಮುಗಳಿ, ಕರ್ನಾಟಕದ ಏಕೀಕರಣದ ರೂವಾರಿ ಜಕ್ಕಲಿಯ ದಿ. ಅಂದಾನಪ್ಪ ದೊಡ್ಡಮೇಟಿ, ಕರ್ನಾಟಕ ಕುಲಪುರೋಹಿತ ದಿ ಆಲೂರು ವೆಂಕಟರಾಯರು, ಪ್ರಖ್ಯಾತ ಭಾಷಾ ಶಾಸ್ತ್ರಜ್ಞ  ಅರ‍್. ಸಿ. ಹಿರೇಮಠ,ಜನಪದ ಸಾಹಿತಿ ಡಾ|| ಸೋಮಶೇಖರ ಇಮ್ರಾಪುರ ಪ್ರಖ್ಯಾತ ಡಾ|| ಗಿರಡ್ಡಿ ಗೋವಿಂದರಾಜ, ಡಾ. ಬಿ.ವಿ.ಮಲ್ಲಾಪೂರ, ಶ್ರೀ ಎ.ಎಸ್.ಹಿರೇಮಠ, ಶಿಶುಸಾಹಿತಿ ಎಂ. ಡಿ. ಗೋಗೇರಿ ಚುಟುಕು ಕವಿ ಜಿ.ಎಸ್ ಅನ್ನದಾನಿ, ಉತ್ತರ ಕರ್ನಾಟಕದ ಪ್ರಥಮ ಕಾದಂಬರಿಕಾರ ಗೂಳಪ್ಪ ಕೊಟ್ರಪ್ಪ ಅರಳಿ ಜಾನಪದ, ಲಾವಣೀ, ಗೀಗೀ ಪದ ಹಾಡುವ ಮಾಳವಾಡದ ಮಲ್ಲಯ್ಯ ರಾಚಯ್ಯ ತೋಟಗಂಟಿ ಇನ್ನೂ ಮುಂತಾದ ಸಾರಸ್ವತ ಪುತ್ರರತ್ನರ ಪುಣ್ಯ ಭೂಮಿಯಾಗಿದೆ.

 

ರೋಣ
ಜಿಲ್ಲೆ ೪೫ ಕಿ.ಮೀ.

ಪುರಾಣ ಇತಿಹಾಸ :

ಪ್ರಾಚೀನ ಕಾಲದಲ್ಲಿ ಪುಲಿಗೆರೆ-೩೦೦ ಕ್ಕೆ ಸೇರಿದ್ದ ರೋಣವು ೧೦೪ ಮಹಾಜನರನ್ನೊಳ ಗೊಂಡ ಅಗ್ರಹಾರವಾಗಿತ್ತು. ಹಿಂದೆ ಮಹಾಭಾರತದ ದ್ರೋಣಾಚಾರ‍್ಯರು ಇಲ್ಲಿ ಗುರುಕುಲ ನಡೆಸುತ್ತಿದ್ದರಿಂದಾಗಿ ಈ ಊರಿಗೆ ‘ದ್ರೋಣಪುರವೆಂದು ಹೆಸರು ಬಂತೆಂದು ಐತಿಹ್ಯ. ಇಲ್ಲಿಯ ಕಂಚಿಯವರ ಓಣಿಯಲ್ಲಿರುವ ಗುಡಿಯನ್ನು ಸ್ಥಳೀಕರು ಇಂದಿಗೂ ದ್ರೋಣಾಚಾರ್ಯ ಗುಡಿಯೆಂದು ಕರೆಯುತ್ತಾರೆ. ಆದರೆ ಶಾಸನಗಳಲ್ಲಿ ಮಾತ್ರ ರೋಣವನ್ನು ‘ರೋಣ’ ‘ಮಹಾ ಅಗ್ರಹಾರ ರೋಣ’ ಉಖಿಸಲಾಗಿದೆ. ಈ ಊರಿಂದ ಈ ವರೆಗೆ ರಾಷ್ಟ್ರಕೂಟರ, ಕಲ್ಯಾಣದ ಚಾಲುಕ್ಯ, ಕಲಚೂರಿಗಳ ಕಾಲಕ್ಕೆ ಸೇರಿದ ೧೭ ಶಾಸನಗಳು ವರದಿಯಾಗಿವೆ.

 

ಅನಂತಶಯನ ಗುಡಿ ಹಾಗೂ ಪಾರ್ಶ್ವನಾರ್ಥ ಬಸದಿ:

ಅನಂತಶಯನ ಗುಡಿ ಗರ್ಭಗೃಹ ಹಾಗೂ ಸಭಾಮಂಟಪವನ್ನು ಹೊಂದಿದ್ದು, ಇಲ್ಲಿ ಅನಂತಶಯನನ ಸುಂದರ ಮೂರ್ತಿ ಇದೆ. ಈ ಗುಡಿಯ ಪ್ರವೇಶದ್ವಾರದಲ್ಲಿ ಗಜಲಕ್ಷ್ಮಿಯಿದೆ. ಇದು ಕೂಡಾ ಕ್ರಿ.ಶ. ೧೨ನೇ ಶತಮಾನದಲ್ಲಿ ರಚನೆ ಯಾಗಿದೆ. ಪಾರ್ಶ್ವನಾಥ ಬಸದಿ ಕಲ್ಯಾಣ ಚಾಲುಕ್ಯರ ಕಾಲದ್ದು, ಚಾಲುಕ್ಯ ಶೈಲಿಯ ಬಾಗಿಲುವಾಡಗಳು ಹಾಗೂ ಸ್ಥಂಭಗಳನ್ನಿಲ್ಲಿ ಕಾಣಬಹುದು. ಗರ್ಭಗೃಹದಲ್ಲಿ ಪಾರ್ಶ್ವನಾಧ ತೀರ್ಥಂಕರನ ಶಿಲ್ಪವಿದ್ದು ಅದರ ಪಾದಪೀಠದ ಮೇಲೆ “ಮೂಲ ಸಂಘದ ದೇವಗಣ” ಎಂದು ಆರಂಭವಾಗುವ ಕಿರು ಶಾಸನವಿದೆ.

 

ಪ್ರೇಕ್ಷಣೀಯ ಬಾವಿಗಳು::

ರೋಣದ ಗೌಡರ ಬಾವಿ ಹಾಗೂ ಶೆಟ್ಟರ ಭಾವಿಗಳು ಆಕರ್ಷಕವಾಗಿದೆ. ಈ ಬಾವಿಗಳಲ್ಲಿ ಚಿಕ್ಕ ಈಶ್ವರ, ನಂದಿ, ಗಣಪತಿ ಕೆತ್ತನೆಗಳಿದ್ದು, ಕೆಳಗಿಳಿಯಲು ಸೋಪಾನಗಳಿ.. ಶೆಟ್ಟರ ಬಾವಿಯಲ್ಲಿರುವ ಶಾಸನದಿಂದ ಇದು ಕ್ರಿ.ಶ. ೧೨ ನೇ ಶತಮಾನದ್ದು ಎಂದು ಗೊತ್ತಾಗುತ್ತದೆ. ಶೆಟ್ಟರ ಬಾವಿಯಲ್ಲಿ ಉಗ್ರ ನರಸಿಂಹ, ಗಣಪತಿ, ನಂದಿ, ಮಹಿμಂಮರ್ದಿನಿ ಹಾಗೂ ಮಿಥುನ ಉಬ್ಬುಶಿಲ್ಪಗಳ ಕೆತ್ತನೆಗಳಿವೆ.

ಜಲಶುದಾಗಾರ:

ರೋಣ-ಬದಾಮಿ ರಸ್ತೆಯಲ್ಲಿರುವ ಜಲಶುದ್ಧಾಗಾರವು ಕಲುಷಿತ ನೀರನ್ನು ಕುಡಿಯುವ ನೀರಾಗಿ ಶುದ್ಧೀಕರಿಸುವ ಜಲಾಗಾರವಾಗಿದೆ. ಇದು ಆಧುನಿಕ ತಂತ್ರಜ್ಞಾನ ಬಳಸಿ ನೀರನ್ನು ಶುದ್ಧೀಕರಿಸುವ ಮಾಹಿತಿಯನ್ನು ಪರಿಚಯಿಸುವ ಮೂಲಕ ವಿದ್ಯಾರ್ಥಿಗಳ ಜ್ಞಾನ ತೃಷೆಯನ್ನು ತಣಿಸಬಲ್ಲ ಸ್ಥಳವಾಗಿದೆ.

 

ಸೂಡಿ
ಜಿಲ್ಲೆ: ೫೮ ಕಿ.ಮೀ.
ತಾಲೂಕ: ೧೯ ಕಿ.ಮೀ.

ಸೂಡಿಯು ರೋಣದಿಂದ ಈಶಾನ್ಯಕ್ಕೆ ಗಜೇಂದ್ರಗಡ ರಸ್ತೆಯ ಮಾರ್ಗದಲ್ಲಿ ಬರುತ್ತದೆ. ಪ್ರಾಚೀನ ಶಾಸನಗಳಲ್ಲಿ “ಸೂಂಡಿ” ಎಂದೇ ಉಲ್ಲೇಖಿತಗೊಂಡ ಈ ಐತಿಹಾಸಿಕ ಪ್ರಸಿದ್ಧಿಯ ಊರನ್ನು ಪ್ರವೇಶಿಸುವಾಗ ದೂರದಿಂದಲೇ ಕಾಣುವ ಸುಂದರವಾದ ಪುರಾತನ ದೇವಾಲಯಗಳು ಮತ್ತು ಎತ್ತರವಾದ ಹುಡೆ ನಿಮ್ಮನ್ನು ಆಕರ್ಷಿಸುತ್ತವೆ.

೧೧ನೇಯ ಶತಮಾನದಲ್ಲಿ ಸೂಡಿಯು ಕಲ್ಯಾಣ ಚಾಲುಕ್ಯ ಅರಸರ ಮಗಳಾದ ಹಾಗೂ ೫ನೇ ವಿಕ್ರಮಾದಿತ್ಯನ ತಂಗಿಯೂ ಇಮ್ಮಡಿ ಜಯಸಿಂಹನ ಅಕ್ಕನೂ, “ರಣಭೈರವಿ” ಎಂಬ ಬಿರುದನ್ನು ಹೊಂದಿದ ‘ಅಪ್ರತಿಮ ಮಹಿಳೆ’ ಅಕ್ಕಾದೇವಿಯು ಕ್ರಿ.ಶ. ೧೦೫೦ ರಲ್ಲಿ ಕಿಸುನಾಡು-೭೦, ಅಮಾಸವಾಡಿ-೧೪೦ ರ ಭಾಗಗಳನ್ನು ಆಳುತ್ತಿದ್ದಳೆಂದು ಶಾಸನಗಳಿಂದ ತಿಳದುಬರುತ್ತದೆ. ಇವಳ ಆಡಳಿತಕಾಲದಲ್ಲಿ ಸೂಡಿ ವಿದ್ಯಾಬ್ಯಾಸಕ್ಕೆ ಪ್ರಸಿದ್ದಿ ಪಡೆದಿತ್ತು. ರಾಷ್ಟ್ರಕೂಟರ ಕಾಲದ ಶಾಸನವೊಂದರಿಂದ ಪುಲಿಗೆರೆಯ ಬದ್ದೆಗನು ಮೂರ್ತಿ ಶಿವಾಚಾರ್ಯ ಹಾಗೂ ೭೦ ಮಹಾಜನರ ಸನ್ನಿಧಿಯಲ್ಲಿ ಸೂಡಿಯ ಬ್ರಾಹ್ಮಣಕೇರಿಗೆ ‘ಬ್ರಹ್ಮಪುರಿ’ ಎಂದು ನಾಮಕರಣ ಮಾಡಿದನೆಂದು ತಿಳಿದುಬರುತ್ತದೆ. ಇಲ್ಲಿಯ ವಿಶ್ವವಿದ್ಯಾನಿಲಯದಲ್ಲಿ ಶಿಲ್ಪಕಲೆ, ಲಲಿತಕಲೆ, ಅಚಾರಸಂಹಿತೆ, ನಾಟ್ಯಶಾಸ್ತ್ರ, ಭಾಷಾ ಅಧ್ಯಯನ ಕಲಿಸಲಾಗುತ್ತಿತ್ತೆಂದು ತಿಳಿದು ಬಂದಿದೆ. ಅಲ್ಲದೇ ೬ ನೇ ವಿಕ್ರಮಾದಿತ್ಯನ ಕಾಲದಲ್ಲಿ ಇಲ್ಲಿ ಪ್ರಸಿದ ಟಂಕಶಾಲೆ (ಕಮ್ಮಟ) ಇದ್ದು, ಇದರ ಅಧಿಕಾರಿ ಇವನೇ ಆಗಿದ್ದನೆಂದು ತಿಳಿದುಬಂದಿದೆ. ಈ ವರೆಗೆ ಇಲ್ಲಿಂದ ೧೬ ಶಾಸನಗಳು ವರದಿಯಾಗಿವೆ.

 

ಜೋಡುಕಳಸದ ಗುಡಿ (ನಾಗೇಶ್ವರ ದೇವಸ್ಥಾನ)

ಈ ಊರ ಹೊರ ವಲಯದಲ್ಲಿ ಗಜೇಂದ್ರಗಡ ರಸ್ತೆಯಲ್ಲಿ ಕಾಣುವ ಕೆಂಪು ಕಲ್ಲಿನಿಂದ ಕೆತ್ತಿದ ಗುಡಿಯೇ ಜೋಡು ಕಳಸದೇವರ ಗುಡಿ, ಹೆಸರೇ ಸೂಚಿಸುವಂತೆ ಎರಡು ಕಳಶಗಳನ್ನುಳ್ಳ ದ್ವಿಕೂಟವಾಗಿದ್ದು ಇದನ್ನು ಒಂದನೆಯ ಸೋಮೇಶ್ವರನ ದಂಡನಾಯಕ ನಾಗದೇವರು ಕ್ರಿ.ಶ. ೧೦೬೧ ರಲ್ಲಿ ನಿರ್ಮಿಸಿ ಭೂದಾನ ಮಾಡಿದ ಅಂಶವನ್ನು ಅಲ್ಲೇ ಇರುವ ಶಾಸನ ಹೇಳುತ್ತಿದೆ. ಇದನ್ನು ನಾಗೇಶ್ವರ ದೇವಾಲಯವೆಂದು ಕರೆದಿದೆ.

 

ಚತುರ್ಭಜಾಧಾರಿ ಗಣೇಶ

ಊರ ಪ್ರದೇಶದ ಇರುವ ಗಣೇಶಗುಡಿ ಗರ್ಭಗೃಹವನ್ನಷ್ಟೇ ಹೊಂದಿದ್ದು ಉಳಿದ ಭಾಗಗಳು ಹಾಳಾಗಿವೆ. ಸುಮಾರು ಒಂಬತ್ತು ಅಡಿ ಎತ್ತರವಿರುವ ಆಸೀನ ಗಣೇಶ ಮೂರ್ತಿಯು ಚತುರ್ಭುಜಾಧಾರಿಯಾಗಿದ್ದು ವಿನೂತನವೂ, ಬಹು ಸುಂದರವೂ ಆಗಿದೆ. ಇದು ಹಂಪೆಯ ಕಡಲೆಕಾಳು, ಸಾಸಿವೆಕಾಳು ನೆನಪಿಸುವಂತಿದೆ.

 

ಕಲಾತ್ಮಕ ನಾಗರಕುಂಡಬಾವಿ (ರಸದ ಬಾವಿ)

ಗಣೇಶ ಗುಡಿಯ ಬಳಿಯಲ್ಲೇ ೮೦ ಅಡಿ ಆಳದ ಭವ್ಯವಾದ ನಾಗರಭಾವಿ (ರಸದ ಭಾವಿ) ಇದೆ. ಮೂರು ಹಂತದಲ್ಲಿರುವ ಈ ಚೌಕಾಕಾರದ ಹೊಂಡಕ್ಕೆ ಪಶ್ಚಿಮದಲ್ಲಿ ಇಳಿಯಲು ಸೋಪಾನವಿದೆ. ಈ ಭಾವಿಯ ಮೂರು ಪಾರ್ಶ್ವದ ಭಿತ್ತಿಯ ಒಳಮುಖದ ಮೇಲೆ ಇರುವ ಕಿರು ಶಿಖರ ಮಾದರಿಗಳ ರಚನೆ ಹಾಗೂ ಅಲಂಕಾರಿಕ ಕಂಬಗಳ ಕೆತ್ತನೆಗಳು ಕಲಾತ್ಮಕತೆಯ ಆಗರವಾಗಿವೆ. ಬಾವಿಯ ಪಾರ್ಶ್ವ ಭಿತ್ತಿಯ ಒಳಮೈಮೇಲಿನ ಈ ಕೆತ್ತನೆಗಳು, ದೇವಾಲಯದ ಭಿತ್ತಿಯನ್ನು ಹೋಲುವಷ್ಟು ಮೀರಿಸುವಷ್ಟು ಸುಂದರವಾಗಿವೆ. ಇದೇ ಆವರಣದಲ್ಲಿದ್ವಾರ ಪಾಲಕ, ನಂದಿ ಶಿವಲಿಂಗ ಮೂರ್ತಿಗಳಿವೆ.

 

ಮಲ್ಲಿಕಾರ್ಜನ ಗುಡಿ:

ಊರ ನಡುವೆ ಪೂರ್ವಾಭಿಮುಖವಾಗಿರುವ ಮಲ್ಲಿಕಾರ್ಜುನ ದೇವಾಲಯವಿದೆ. ತ್ರಿಕೂಟಾಚಲವಾದ ಈ ಗುಡಿಯ ಅಷ್ಟಕೋನಾಕಾರದ ಗರ್ಭಗೃಹದಲ್ಲಿ ಶಿವಲಿಂಗವಿದೆ.  ಅರ್ಧಮಂಟಪದಲ್ಲಿ ನಂದಿಯಿದ್ದು, ತ್ರಿಮೂರ್ತಿ ಕೆತ್ತನೆಯಿರುವ ಆಕರ್ಷಕವಾದ ಮಕರ ತೋರಣವಿದೆ. ದಕ್ಷಿಣದ ಗರ್ಭಗೃಹದಲ್ಲಿ ಆಭರಣಾಲಂಕೃತ ಶೇಷಶಯನ ಪದ್ಮನಾಭನ ಸುಂದರ ಶಿಲ್ಪವಿದ್ದು, ಇದರ ಪ್ರಭಾವಳಿಯಲ್ಲಿ ದಶಾವತಾರದ ಕೆತ್ತನೆಗಳಿವೆ. ಉತ್ತರದ ಗರ್ಭಗೃಹದಲ್ಲಿ ಸ್ಥಾನಿಕ ಉಮಾ ಮಹೇಶ್ವರ ಶಿಲ್ಪವಿದೆ. ನಂದಿಯನ್ನು ಬಲಕ್ಕೂ ಕಾರ್ತಿಕೇಯ, ಗಣಪತಿಗಳನ್ನು ಎಡಬದಿಯಲ್ಲೂ ಕೆತ್ತಲಾಗಿದ್ದು, ಇವು ಕೂಡಾ ಸುಂದರವಾದ ಶಿಲ್ಪವಾಗಿವೆ. ಈ ಗುಡಿಯು ಎತ್ತರವಾದ ವೇದಿಕೆ ಮೇಲಿದ್ದು ಇದರ ಎಡಬದಿಯಲ್ಲಿ ಗಣಪತಿಯ ಚಿಕ್ಕಗುಡಿಯಿದೆ. ಇದರ ಶಿಖರ ದ್ರಾವಿಡಶೈಲಿಯಲ್ಲಿದ್ದು ಹೊರಭಿತ್ತಿಯಲ್ಲಿ ಅಲ್ಪ ಅಲಂಕಾರವಿದೆ.

ಹುಡೆ (ಬತೇರಿ)

ಊರ ಮಧ್ಯದಲ್ಲಿ ದೀರ್ಘ ವ್ಯಾಸವುಳ್ಳ ವೃತ್ತಾಕಾರದ ಅತೀ ಎತ್ತರವಾದ ಒಂದು ಹುಡೆ ಇದೆ. ಇದರ ಮೇಲಿನಿಂದ ಸುತ್ತಲಿನ ಹತ್ತಿಪ್ಪತ್ತು ಮೈಲು ದೂರದವರೆಗೆ ನೋಡಬಹುದು. ಇವುಗಳೊಂದಿಗೆ ಊರಲ್ಲಿ ನಗರೇಶ್ವರ, ಲಕ್ಷ್ಮೀನರಸಿಂಹ, ನಾರಾಯಣ, ಬಸವಣ್ಣ ಮುಂತಾದ ಪ್ರಾಚೀನ ಗುಡಿಗಳಿದ್ದು ಶಿಥಿಲಾವಸ್ಥೆಯಲ್ಲಿವೆ.

 

ಇಟಗಿ
ಜಿಲ್ಲೆ : ೫೮ ಕಿ.ಮೀ.
ತಾಲೂಕ : ೧೩ ಕಿ.ಮೀ.

ರೋಣ ತಾಲೂಕಿನ ಇಟಗಿ ರೋಣದಿಂದ ಈಶಾನ್ಯಕ್ಕೆ ೧೩ ಕಿ.ಮೀ. ದೂರದಲ್ಲಿದೆ. ಈ ಊರು ಪ್ರಾಚೀನ ಶಾಸನಗಳಲ್ಲಿ ‘ಯಿಟ್ಟಿಗೆ’ ‘ಇಟ್ಟಿಗೆ’ ಎಂದೇ ಉಲ್ಲೇಖಗೊಂಡಿದ್ದು, ಹಿಂದೆ ಕಿಸುಕಾಡು-೭೦ ಕ್ಕೆ ಸೇರಿದ ಮಹಾ ಅಗ್ರಹಾರವಾಗಿತ್ತು. ಈ ಊರಿಂದ ಈ ವರೆಗೆ ಎರಡು ಶಾಸನಗಳು ವರದಿಯಾಗಿವೆ. ನಿಷಿಧಿ ಶಾಸನದಿಂದ, ಇದೊಂದು ಜೈನಕೇಂದ್ರವೂ ಆಗಿತ್ತೆಂಬ ಅಂಶ ಮೊದಲ ಬಾರಿಗೆ ಬೆಳಕಿಗೆ ಬಂದಂತಾಗಿದೆ. ಶಾಸನಗಳಿಂದ ಇಟಗಿಯಲ್ಲಿ ಸ್ವಯಂಭು ಸಿದ್ಧೇಶ್ವರ, ಮತ್ತು ರಾಜೇಶ್ವರಿ ದೇವಾಲಯಗಳಿದ್ದವೆಂಬ ಅಂಶ ಗೊತ್ತಾದರೂ ಇಂದು ಉಳಿದಿರುವದು ಶಂಭುಲಿಂಗ ದೇವಾಲಯ ಒಂದೇ.

 

ಶಂಭುಲಿಂಗ ದೇವಾಲಯ:

ಶಾಸನದಲ್ಲಿ ಸ್ವಯಂಭು ದೇವಾಲಯವೆಂದೇ ಕರೆದಿರುವ ಇಂದಿನೆ ಶಂಭುಲಿಂಗ ದೇವಾಲಯ ಕ್ರಿ.ಶ. ೧೦೫೪ ರಲ್ಲಿ ಶ್ರೀಧರ ದಂಡನಾಯಕನಿಂದ ನಿರ್ಮಾಣಗೊಂಡಿದ್ದು ಚಾಲುಕ್ಯ ಶೈಲಿಯ ಸುಂದರ ದೇವಾಲಯವಾಗಿದೆ. ಕೆರೆಯ ದಂಡೆಯ ಮೇಲಿರುವ ಈ ಗುಡಿ ಪೂರ್ವಾಭಿಮುಖವಾಗಿದ್ದು ಗರ್ಭಗೃಹ, ಅಂತರಾಳ ನವರಂಗ ಹಾಗೂ ಸಭಾಮಂಟಪವನ್ನು ಹೊಂದಿದೆ. ಗರ್ಭಗೃಹದಲ್ಲಿ ಸ್ವಯಂಭು ಲಿಂಗವಿದೆ. ಇದರ ಬಾಗಿಲವಾಡವು ತ್ರೀಶಾಲಂಕೃತವಾಗಿದ್ದು, ಲಲಾಟದಲ್ಲಿ ಗಜಲಕ್ಷ್ಮಿಯಿದೆ. ಅಂತರಾಳದ ದ್ವಾರ ಬಂಧ ಪಂಚಶಾಖಾಲಂಕಾರವನ್ನು ಹೊಂದಿದ್ದು, ಇಕ್ಕೆಲದಲ್ಲಿ ಜಾಲಂದ್ರವಿದೆ. ನವರಂಗದಲ್ಲಿರುವ ದೇವಕೋಷ್ಟಗಳಲ್ಲಿ ಶಿವಪಾರ್ವತಿ, ಮಹಿಷಾಸುರಮರ್ದಿನಿ, ಕಾರ್ತಿಕೇಯ ಮತ್ತು ಆದಿತ್ಯನ ಸುಂದರ ಬಿಡಿ ಶಿಲ್ಪಗಳಿವೆ. ನವರಂಗದ ಪ್ರವೇಶದ್ವಾರವು ಪಂಚಶಾಖಾಲಂಕೃತವಾಗಿದ್ದು. ಆಕರ್ಷಕವಾಗಿದೆ. ನಕ್ಷತ್ರಾಕಾರವಾಗಿರುವ ಈ ಗುಡಿಯ ಸಭಾಮಂಟಪವನ್ನು ಆರು ಮಾದರಿಯ ಸ್ತಂಭಗಳು ಹೊತ್ತುನಿಂತಿದ್ದು ಇಳಿಜಾರಾದ ಛಾವಣಿಯನ್ನು ಹೊಂದಿದೆ. ಸಭಾಮಂಟಪದ ಅಂಚಿನುದ್ದಕ್ಕೂ ಕಕ್ಷಾಸನವನ್ನು ರಚಿಸಲಾಗಿದೆ. ಸಭಾಮಂಟಪಕ್ಕೆ ಮೂರು ದಿಕ್ಕಿನಿಂದಲೂ ಮುಖಮಂಟಪವಿರುವ ಪ್ರವೇಶದ್ವಾರಗಳಿವೆ. ಗುಡಿಯ ಹೊರಭಿತ್ತಿ ನಿರಾಡಂಬರವಾಗಿದ್ದು, ಗರ್ಭಗೃಹಕ್ಕೆ ಸುಂದರವಾದ ಕದಂಬನಾಗರ ಶಿಖರವಿದೆ.

 

ಭೀಮಾಂಬಿಕೆಯ ಪೂರ್ವಾಶ್ರಮ : ಪವಾಡ ಮಹಿಮೆಗಳು

೧೮ ನೇ ಶತಮಾನದ ಕೊನೆಯಲ್ಲಿ, ಹಲವಾರು ಪವಾಡ ಮೆರೆದು ಕಲಿಯುಗದ “ಧರ್ಮದೇವತೆ” ಎಂದು ಖ್ಯಾತಳಾಗಿದ್ದಾಳೆ, ಭವರೋಗ ವೈದ್ಯಳೂ, ಸಕಲರ ಸಂಕಟ ಪರಿಹಾರಣಿಯೂ ಆಗಿದ್ದ ಭೀಮಮ್ಮಳ ಕರ್ತೃತ್ವ ಗದ್ದಗೆಯ ದರ್ಶನಕ್ಕಾಗಿ ಪ್ರತಿ ಅಮವಾಸ್ಯೆಗೆ ಭಕ್ತ ಮಹಾಪೂರವೇ ಹರಿದು ಬರುತ್ತದೆ. “ನೆನೆದವರ ಮನದಾಗಿರುತೀನಿ, ಅವರ ಮನಿ ಕರ ಕಟ್ಟುವ ಗೂಟದಾಗಿರತೀನ”, “ಸಂಗಟಿ ಉಂಡು ಸಂಕಟ ಕಳಕೋ” “ಪಥ್ಯೆ ಮಾಡಿದರ ಧರ್ಮನ ಸತ್ಯ ಏನುಳಿತು” ಇವು ಭೀಮಾಂಬಿಕೆಯ ಅಭಯ ವಾಕ್ಯಗಳು.

 

ಗಜೇಂದ್ರಗಡ

ಜಿಲ್ಲೆ : ೫೧ ಕಿಮೀ.
ತಾಲೂಕ : ೨೭ ಕಿಮೀ.

ರೋಣ ತಾಲೂಕಿನ ಗಜೇಂದ್ರಗಡವು ಜಿಲ್ಲೆಯ ಪ್ರಮುಖ ಗಡಿ ಪ್ರದೇಶವಾಗಿದೆ. ಈ ಪುರಾಣ ಐತಿಹಾಸಿಕ ಊರಿನ ಉಗಮದ ಬಗ್ಗೆ ರೋಚಕ ಪುರಾಣ ಕಥೆ ಇದೆ. ಮಹಿಷಾಸುರನ ಮಗ ಗಜಾಸುರನು ಕಾಲಕಾಲೇಶ್ವರನಿಂದ ಹತನಾಗಿ ಮೋಕ್ಷ ಕಾಲದಲ್ಲಿ ಬೇಡಿದ ವರದಫಲವಾಗಿ ‘ನಿನ್ನ ಹೆಸರು ಚಿರಸ್ಥಾಯಿಯಾಗಿ ಉಳಿಯುವಂತೆ ನಿನ್ನ ಹೆಸರಿನ ಪುರವು ಇಲ್ಲಿ ನೆಲೆ ನಿಲ್ಲುತ್ತದೆ’ ಎಂದು ಶಿವನು ಹರಸಿದ, ಮುಂದೆ ಗಜಾಸುರನ ಹೆಸರಿನಿಂದ “ಗಜೇಂದ್ರಪುರ” ವು ಬೆಳೆದು ಬಂತೆಂದು, ನಂತರ ಮರಾಠರ ಆಳ್ವಿಕೆ ಕಾಲದಲ್ಲಿ ಈ ಊರು ಗುಡ್ಡದ ಹತ್ತಿರ ಎತ್ತರದ ಪ್ರದೇಶದಲ್ಲಿ ಇರುವದರಿಂದ ‘ಘಡ’ ಎಂಬ ಮರಾಠಿ ಪದ ಸೇರಿ ‘ಗಜೇಂದ್ರಗಡ’ ವೆಂದು ಹೆಸರಾಯಿತೆಂದು ಪೌರಾಣಿಕ ಮತ್ತು ಐತಿಹಾಸಿಕ ಘಟನೆಗಳನ್ನು ತಳಕು ಹಾಕಿ ಅರ್ಥೈಸುತ್ತಾರೆ. ಈ ಊರಿನಲ್ಲಿ ನಮ್ಮ ಭವ್ಯಪರಂಪರೆಗೆ ಜೀವಂತಸಾಕ್ಷಿಗಳೆಂಬಂತೆ ಸರ್ವಧರ್ಮಸಮನ್ವಯತೆಯ ಕುರುಹುಗಳಾಗಿ ಸಾಮರಸ್ಯದ ಸಂದೇಶ ಸಾರುತ್ತಿರುವ ೧೮ ಮಠಗಳು, ೧೮ ಮಸೀದಿಗಳು ೧೮ ಬಾವಿಗಳಿರುವುದು ಒಂದು ವೈಶಿಷ್ಟ್ಯ.

 

ಗಜೇಂದ್ರಗಡ ಕೋಟೆ:

ಈ ಕೋಟೆಯನ್ನು ಛತ್ರಪತಿ ಶಿವಾಜಿ ಕಟ್ಟಿಸಿದನೆಂದು ಪ್ರತೀತಿಯಿದೆ. ಕ್ರಿ.ಶ. ೧೭ ನೇ ಶತಮಾನದ ಶಾಸನವು ಈ ಕೋಟೆಯ ನಿರ್ಮಾಣದ ಬಗೆಗೆ ಉಲ್ಲೇಖಿಸುತ್ತದೆ. ಕ್ರಿ.ಶ. ೧೭ನೇ ಶತಮಾನದಿಂದ ೧೯೪೭ರ ವರೆಗೆ ಈ ಪ್ರದೇಶದ ಅಧಿಕಾರವು ಘೋರ್ಪಡೆ ಮನೆತನಕ್ಕೆ ಇನಾಂ ಆಗಿತ್ತು. ಈ ಕೋಟೆಯ ಮಹಾದ್ವಾರವು ತಕ್ಷಣ ಕಾಣದಂತೆ ನಿರ್ಮಾಣ ಮಾಡಿದ್ದರಿಂದ ಇದನ್ನು ‘ಗುಹ್ಯಗಿರಿದುರ್ಗ’ದ ಸಾಲಿಗೆ ಸೇರಿಸಲಾಗಿದೆ. ಬೆಟ್ಟದ ಮೇಲಿನ ವಿಶಾಲ ಕೋಟೆಯೊಳಗೆ ಮದ್ದಿನ ಕೋಣೆ, ಹಾಲು ಮೊಸರಿನ ಹೊಂಡ, ಅಕ್ಕ-ತಂಗಿಯರ ಹೊಂಡ, ಹುಲಿ-ಆಕಳ ಹೊಂಡ, ಮಂಗ್ಯಾನ ಹೊಂಡ, ಅಕ್ಕ-ತಂಗಿಯರ ಕಲ್ಲು, ಒಂದು ತೊಲೆಯ ಮೇಲೆ ಒಂಭತ್ತು ತೊಲೆಗಳಿರುವ ಸ್ಮಾರಕ, ತೊಟ್ಟಿಲ ಹುಡೇವು, ಹನಮಂತ ದೇವರ ಗುಡಿ, ಹಜರತ್ ಮೆಹಬೂಬ ಸುಭಾನಿ ದರ್ಗಾ ಮುಂತಾದವು ಕಂಡು ಬರುತ್ತವೆ.

 

ಸೂಫಿಸಂತರ ಭ್ರಾತೃತ್ವವ ತವರೂರು

ಹಿಂದೂ-ಮುಸ್ಲಿಂ ಭ್ರಾತೃತ್ವವನ್ನು ಬೆಸೆದ ಐತಿಹಾಸಿಕ ಪ್ರಸಿದ್ಧಿ ಪಡೆದ ಸೂಫಿ ಸಂತರಾದ ಹಜರತ್ ಸೈಯ್ಯದ್ ಮಾಸೂಮ್‌ಅಲಿಶಾಹ್ ಪೀರಾಂ (ರ-ಅ) ಹಜರತ್ ಸೈಯ್ಯದ ನಿಶಾರ್‌ಅಲಿಶಾಹ್ ಪಿರಾಂ (ಹೊರಗಿನ ಟಕ್ಕೆ) ಮುಂತಾದವರು ಆಗಿ ಹೋಗಿದ್ದು ಸರ್ವಧರ್ಮ ಸಮನ್ವಯತೆ ಸಾರಿದ್ದಾರೆ.

 

ಪವನ ವಿದ್ಯುತ್ ಘಟಕ:

ಇತ್ತೀಚಿಗೆ ಗಜೇಂದ್ರಗಡ, ಕುಂಟೋಜಿ, ವದೇಗೋಳ, ಗುಡ್ಡದ ಮೇಲೆ ಸ್ಥಾಪಿತವಾಗಿರುವ ಯಾವ ಕಾಲಕ್ಕೂ ತುಕ್ಕು ಹಿಡಿಯದ ಜಿ.ಆಯ್ ಲೋಹದಿಂದ ನಿರ್ಮಿತವಾದ ಸಂಪೂರ್ಣ ಕಂಪ್ಯೂಟರ್ ನಿಯಂತ್ರಣ ಹೊಂದಿದ ಒಟ್ಟು ೪೮ ಅತ್ಯಾಧುನಿಕ ಬೃಹತ್ ಗಾಳಿ ವಿದ್ಯುತ್ ಯಂತ್ರಗಳಿರುವ ‘ಪವನ ವಿದ್ಯುತ್’ ಘಟಕವು ದಿನಾಂಕ ೦೧-೦೪-೨೦೦೭ ರಿಂದಾ ಕಾರ‍್ಯಾರಂಭ ಮಾಡಿದೆ ಮಿಂಚುನಿರೋಧಕ ೧೮೦ ಅಡಿ ಎತ್ತರದ ಠ್ದಿವರ್‌ನ ಶಿರೋಭಾಗದಲ್ಲಿರುವ ಜನರೇಟರ್‌ನ ಕೋಣೆಗೆ ಅಳವಡಿಸಿದ ೮೦ ಅಡಿ ಉದ್ದದ ೩ ಪೈಬರ್ ರೆಕ್ಕೆ (ಬ್ಲೇಡ್) ಗಳು ೧೫೦೦ ಆರ‍್.ಪಿ.ಎಂ ವೇಗದಲ್ಲಿ ತಿರುಗಿದಾಗ ಜನರೇಟರ್ ಮೂಲಕ ವಿದ್ಯುತ್ ಉತ್ಪಾದನೆ ಆಗುತ್ತದೆ. ಪ್ರತಿ ಯಂತ್ರವೂ ೬೦೦ ಕಿಲೋವ್ಯಾಟ ವಿದ್ಯುತ್ ಉತ್ಪಾದನಾ ಸಾಮರ್ಥ್ಯ ಹೊಂದಿದ್ದು, ವಾರ್ಷಿಕ ಸರಾಸರಿ ಉತ್ಪಾದನೆ ೨ ಲಕ್ಷದಿಂದ ೨.೫ ಲಕ್ಷ ಯುನಿಟ್ ವರೆಗೆ ಇದೆ. ಪ್ರತಿ ಯಂತ್ರದ ಸ್ಥಾಪನಾ ವೆಚ್ಚ ಅಂದಾಜು ೩.೫ ಕೋಟಿಗೂ ಅಧಿಕ.

ಗುಡ್ಡದ ಮೇಲೆ ಬಾನತ್ತರಕ್ಕೆ ತಲೆಯತ್ತಿ ನಿಂತು ಕೈಬೀಸಿ ಕರೆಯುತ್ತಿರುವಂತೆ ಭಾಸವಾಗುವ ಈ ಗಿರಿಗಿಠ್ರಿಗಳ ಅಭೂತ ಪೂರ್ವ ದೃಶ್ಯ ನೋಡುಗರ ಕಣ್ಮನಗಳನ್ನು ಸೆಳೆದು ಮೂಕವಿಸ್ಮಿತರನ್ನಾಗಿಸುತ್ತವೆ. ಅಲ್ಲದೇ ಇವು ನವೀಕರಿಸಬದುದಾದ ಸಂಪನ್ಮೂಲ ‘ಗಾಳಿ’ ಯನ್ನು ಬಳಸಿ ವಿದ್ಯುತ್ ಉತ್ಪಾದಿಸುವ ಹೊಸ ತಂತ್ರಜ್ಞಾನವು ವಿದ್ಯುತ್ ಕೊರತೆ ನೀಗಿಸಬಲ್ಲ, ಇಂಧನ ವೆಚ್ಚ ರಹಿತ ವಾಯುನೈರ್ಮಲ್ಯ ರಹಿತ ತಂತ್ರೋಪಾಯವಾಗಿದೆ ಎಂಬ ಸಂದೇಶವನ್ನು ಸಾರುವ ‘ಸದಾಕಾರ‍್ಯತತ್ಪರರಾದ ಆಧುನಿಕ ವಿಜ್ಞಾನದ ಮನುಕುಲ ಸೇವಕರಂತೆ’ ಕಂಡು ಬರುತ್ತವೆ.

 

ಕಾಲಕಾಲೇಶ್ವರ : ಸ್ಥಳ ಪುರಾಣ ಇತಿಹಾಸ

ಗಜೇಂದ್ರಗಡದಿಂದ ೫ ಕಿ.ಮೀ. ದೂರದಲ್ಲಿ ೩೦೦ ಅಡಿ ಎತ್ತರದ ಗುಡ್ಡದ ಮಧ್ಯದಲ್ಲಿ ಕಂಗೊಳಿಸುವ, ಕಾಶಿಯಷ್ಟೇ ಪವಿತ್ರವೂ, ನಿಸರ್ಗ ನಿರ್ಮಿತವೂ ಆಗಿರುವ “ದಕ್ಷಿಣ ಕಾಶಿ” ಅಭಿದಾನದ ಬಹುಪುರಾತನ ಪುಣ್ಯಕ್ಷೇತ್ರವೇ ಶ್ರೀ ಕಾಲಕಾಲೇಶ್ವರ ಗವಿ ದೇವಸ್ಥಾನ. ಕಾಲಕಾಲೇಶ್ವರದ ವಿಸ್ತಾರದ ವರ್ಣನೆಯು ಸ್ಕಂದ ಪುರಾಣದಲ್ಲಿ ವಿವರಿಸಲ್ಪಟ್ಟಿದೆ. ಪ್ರಾಚೀನ ಕಾಲದಲ್ಲಿ ಗಜೇಂದ್ರಗಡ ಸುತ್ತಲಿನ ಗುಡ್ಡ ಪ್ರದೇಶವು ‘ ಜಾಳಿಂದ್ರಗಿರಿ’ ಎಂಬ ಹೆಸರಿನಿಂದ ಗುರ್ತಿಸಲ್ಪಡುತ್ತಿತ್ತು. ದಟ್ಟ ಕಾನನದ ಈ ಗಿರಿ ಪ್ರದೇಶದ ವ್ಯಾಪ್ತಿಯಲ್ಲಿ ನೆಲೆಸಿ ಪೂಜೆ, ಜಪ-ತಪ ಗೈಯುತ್ತಿದ್ದ ಸಾಧು-ಸಂತ, ಭಕ್ತ-ಜನರನ್ನು ಹಿಂಸಿಸಿ ಭಕ್ಷಿಸುತ್ತಿದ್ದ ಗಜಾಸುರ, ಮಲಯಾವತಿಯರೆಂಬ ರಾಕ್ಷಸರು ಈ ಗಿರಿಶ್ರೇಣಿಯಲ್ಲಿ ನೆಲೆಸಿದ್ದರು, ಇವರ ಹಿಂಸೆ ತಾಳದೇ ಭಕ್ತ ಜನ ಶಿವನಲ್ಲಿ ಮೊರೆ ಇಟ್ಟಾಗ, ಶಿವನು ‘ ಕಾಳಕಾಳೇಶ್ವರ ’ ಅವತಾರ ತಾಳಿ ‘ರುದ್ರಪಾದ’ ಎಂಬ ಗುಡ್ಡದ ತುದಿಯಿಂದ ಲಂಘಿಸಿ ಈ ರಾಕ್ಷಸರನ್ನು ಸಂಹರಿಸಿದ. ಅವರ ಆಸೆಯಂತೆ ಕಾಲಾಂತರದಲ್ಲಿ ಗಜಾಸುರನ ಹೆಸರು ‘ಗಜೇಂದ್ರಗಡ’ ನಗರವಾಗಿ ಮಲಯಾವತಿ ಹೆಸರು ‘ಮಲಿಯಮ್ಮನ ಕೊಳ್ಳ’ ವಾಗಿ ಹೆಸರು ಪಡೆದು ಇಂದಿಗೂ ಶಿವನ ಅವತಾರ ಮಹಿಮೆ ಸಾರುತ್ತಿವೆ. ಸಾಧು-ಸಂತರ ಪ್ರಾರ್ಥನೆ ಮನ್ನಿಸಿ, ಕಾಲಕಾಲೇಶ್ವರ ಶಿವನು ‘ಗಗನಾವತಿ’ ಎಂಬ ಗುಹೆಯಲ್ಲಿ ಪಾರ್ವತಿ (ಬೋರಾದೇವಿ), ಗಂಗೆ (ಅಂತರಗಂಗೆ), ನಂದಿ (ಗೋ ಬಸವ), ವೀರಭದ್ರ (ಉದ್ದಾನ ವೀರಭದ್ರ) ಸಮೇತನಾಗಿ ಕಾಲಕಾಲಾಂತರದಲ್ಲೂ ಭಕ್ತರನ್ನು ಪೊರೆಯುವ ಅಭಯ ನೀಡಿ ಸ್ವಯಂಭು ಲಿಂಗವಾಗಿ ನೆಲೆ ನಿಂತ. ಈ ಗವಿಯನ್ನೇ ಪರಿವರ್ತಿಸಿ ದೇವಾಲಯವನ್ನಾಗಿ ಮಾರ್ಪಡಿಸಿದ್ದಾರೆ.

ಶ್ರೀ ಕ್ಷೇತ್ರ ಮಹಿಮೆ

ಕಾಲಾಂತರದಲ್ಲಿ ನಡೆದು ಹೋದ-ನಡೆಯುತ್ತಿರುವ ಮಹಿಮೆಗಳಾದ ಆನೆಗುಂದಿ ಅರಸರ ಆನೆಯ ಕೊರಳಲ್ಲಿರುವ ಎರಡು ಚೀಲ ಅಂಬರಿ ಕಾಳು ಹಿಡಿಯುವಷ್ಟು ದೊಡ್ಡದಾದ ಘಂಟೆಯು ಕಳುವಾಗಿ ಸುಣ್ಣ ಹಚ್ಚಿಕೊಳ್ಳುವ ಎತ್ತರದ ಪಡೆಯಲ್ಲಿ ಕಟ್ಟಿದ್ದ ಘಟನೆ, ಮುಂದೆ ಇದೇ ಘಂಟೆ ಸುಮಾರು ೨೦೦-೩೦೦ ವರ್ಷಗಳ ಹಿಂದೆ ಒಂದು ರಾತ್ರಿ ಜೋರಾಗಿ ಭಾರಿಸುತ್ತಾ ಕಾಣೆಯಾದ ಆಕಾಶ ಘಂಟೆ ಘಟನೆ. ಇಂದು ಈ ಘಂಟೆ ಸಿಂಧೂ ನದಿ ಮೂಲದ ಕಂಕಾಳೇಶ್ವರ ದೇವಾಲಯದಲ್ಲಿರುವದಾಗಿ ಸುಪ್ರಸಿದ್ದ ಜ್ಯೋತಿಷ್ಯ ಕೋಡಿಮಠದವರು ಹೇಳುವಂಥ ವಿಚಾರ. ಇಂದಿಗೂ ಸಹ ಕಣ್ಣಾರೆ ಕಾಣಬಹುದಾದ ಕುರುಹುಗಳಾದ ಕ್ಷೇತ್ರ ಪ್ರವೇಶವಾದ ಕೂಡಲೇ ಬೆಟ್ಟದ ಮಧ್ಯದಲ್ಲಿ ಬಣ್ಣದಿಂದ ಬರೆದಂತೆ ಕಾಣುವ ಈಶ್ವರ, ನಂದಿ, ಸೂರ್ಯ, ಚಂದ್ರ, ಲಾಂಛನಗಳು, ಗಗನಾವತಿ ಗುಹೆಯಲ್ಲಿ ಎಂದೂ ಬತ್ತದ ಏಳು ನೀರಿನ ಹೊಂಡಗಳು, ಪುಟ್ಟಗುಡಿಯಲ್ಲಿ ಬೆಳೆಯುತ್ತಿರುವ ಗೋಬಸವ. ಎತ್ತರದ ಪಡೆಯಿಂದ ಶಿವನ ಜಡೆಯನ್ನು ಹೋಲುವ ಬೇರುಗಳನ್ನು ಬಳಸಿ ಸದಾಕಾಲ ಜಿನಗುವ ಪಾವನ ತೀರ್ಥ ಅಂತರಗಂಗೆ, ಪ್ರತಿ ವರ್ಷ ಯುಗಾದಿ ಪಾಡ್ಯಾದ ರಾತ್ರಿ ಅತೀ ಎತ್ತರದ ಪಡೆಗೆ ತಾನೆ ಸುಣ್ಣ-ಸುರಮ, ಬಳಿದುಕೊಳ್ಳುವ ಪವಾಡ, ಪ್ರತಿ ದವನದ ಹುಣ್ಣಿಮೆ ರಥೋತ್ಸವದ ಮುನ್ನ ಸಂಜೆ ಪಶ್ಚಿಮದಲ್ಲಿ ಕಾಣುವ ಒಂದೇ ನಕ್ಷತ್ರ ದಂತಹ ಪವಾಡ ಮಹಿಮೆಗಳು ಇಂದಿಗೂ ಈ ಕ್ಷೇತ್ರವು ಶಿವನ ಅವತಾರದ ಜಾಗೃತ ಶಕ್ತಿ ಕೇಂದ್ರವೆಂದು ಸಾರಿಹೇಳುತ್ತ

 

ಶ್ರೀ ಮೊರಾರ್ಜಿ ದೇಸಾಯಿ ಮಾದರಿ ವಸತಿ ಶಾಲೆ  ಕಾಲ ಕಾಲೇಶ್ವರ:

೧೯೯೭-೯೮ ಶೈಕ್ಷಣಿಕ ಸಾಲಿನಲ್ಲಿ ಪ.ಜಾತಿ/ಪ.ಪಂ. ಇತರೆ ಹಿಂದುಳಿದ ೨೫೦ ವಿದ್ಯಾರ್ಥಿಗಳಿಗೆ ವಸತಿಯುತ ಶಿಕ್ಷಣ ಸೌಲಭ್ಯ ಕಲ್ಪಿಸಬಲ್ಲ ಕರ್ನಾಟಕ ಸರ್ಕಾರದ ರೋಣ ತಾಲೂಕಿನ ಈ ವಸಯುತ ಶಾಲೆಯು ಶ್ರೀ ಕಾಲಕಾಲೇಶ್ವರ ಪುಣ್ಯಕ್ಷೇತ್ರದ ರಮ್ಯಪ್ರಕೃತಿಯ ಮಡಿಲಲ್ಲಿ ‘ಜ್ಞಾನ ಸುಮ’ ದಂತೆ ಅರಳಿ ನಿಂತಿದೆ ಸಹ ಶಿಕ್ಷಣ ಪದ್ದತಿಯ ಕನ್ನಡ ಮಾಧ್ಯಮ ಬೋಧನೆಯ ಈ ವಸತಿ ಶಾಲೆಯು ಇಂದು ಅತ್ಯಾಕರ್ಷಕ ಸ್ವಂತ ಸುಸಜ್ಜಿತ ಕಟ್ಟಡವನ್ನು ಹೊಂದಿದೆ. ೬ ಜನ ಬೋಧಕ ಶಿಕ್ಷಕರು, ಒಬ್ಬ ದೈಹಿಕ ಶಿಕ್ಷಣ ಶಿಕ್ಷಕರು ಹಾಗೂ ಮುಖ್ಯೋಪಾಧ್ಯಾಯರಿದ್ದು ಸುಸಜ್ಜಿತ ಬೋಧನಾ ಕೊಠಡಿಗಳಿವೆ, ವಿಶಾಲ ಸಂಕೀರ್ಣದಲ್ಲಿ ವಿದ್ಯಾರ್ಥಿ/ನಿಯರಿಗೆ ಪ್ರತ್ಯೇಕ ವಸತಿ ನಿಲಯಗಳಿದ್ದು, ವಾರ್ಡನ್ ಅಡುಗೆ ಸಿಬ್ಬಂದಿ ಇರುತ್ತಾರೆ.

ಪ್ರತಿ ವರ್ಷ ೫ ನೇ ತರಗತಿಯಲ್ಲಿ ಉತ್ತಿರ್ಣರಾದ ಮಕ್ಕಳಿಗೆ ತಾಲೂಕಾ ಮಟ್ಟದಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ನಡೆಸಿ ಹೆಚ್ಚಿನ ಅಂಕಗಳಿಸಿದ ೫೦ ಜನ ಪ.ಜಾತಿ/ ಪ.ಪಂ. ಮತ್ತು ಇತರ ಹಿಂದುಳಿದ ವಿದ್ಯಾರ್ಥಿ/ನಿಯರಿಗೆ ಶೇಕಡಾ ೩೭% ಶೇ ೧೩% ರ ತಲಾ ಮೀಸಲಾತಿ ಆಧಾರದ ಮೇಲೆ ಕೌನ್ಸಲಿಂಗ ಮೂಲಕ ೬ ನೇ ತರಗತಿಗೆ ಪ್ರವೇಶ ನೀಡಿ ೧೦ ನೇ ತರಗತಿ ವರೆಗೆ ಉತ್ತಮ ಶಿಕ್ಷಣ ನೀಡಲಾಗುತ್ತದೆ. ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ಶಾಲಾ ಅವಧಿಯ ನಂತರ ವಿಷಯ ಬೋಧನಾ ತರಗತಿಗಳನ್ನು ಸಹ ನಡೆಸಲಾಗುತ್ತದೆ. ಇದುವರೆಗೂ ೬ ಬಾರಿ ಎಸ್. ಎಸ್.ಎಲ್.ಸಿ ಪರೀಕ್ಷೆಯನ್ನು ಎದುರಿಸಿರುವ ಈ ಶಾಲೆಯ ಮಕ್ಕಳು ಸತತ ಐದು ವರ್ಷವು ೧೦೦% ರ ಫಲಿತಾಂಶ ಸಾಧನೆ ಮಾಡಿರುವುದು ಹೆಮ್ಮೆಯ ಸಂಗತಿ.

 

ಸವಡಿ
ಜಿಲ್ಲೆ : ೩೧ ಕಿ.ಮೀ.
ತಾಲೂಕ : ೧೮ ಕಿ.ಮೀ

ಪ್ರಾಚೀನ ಶಾಸನಗಳಲ್ಲಿ ‘ಸಯ್ಯಡಿ’, ‘ಸೈವಿಡಿ’ ಎಂದೆಲ್ಲಾ ಉಲ್ಲೇಖಿತಗೊಂಡಿದೆ. ಇದೊಂದು ವಿದ್ಯಾಕೇಂದ್ರವಾಗಿದ್ದು ಇಲ್ಲಿಯ ಬ್ರಹ್ಮೇಶ್ವರ ಗುಡಿಯು ರಾಷ್ಟ್ರಕೂಟರ ರಚನೆಯಾಗಿದ್ದು, ವಿಜಯನಗರದರಸರು ಜೀರ್ಣೋದ್ಧಾರ ಮಾಡಿದ್ದಾರೆ. ಗರ್ಭಗೃಹ, ತೆರೆದ ಮಂಟಪ ಮತ್ತು ಸಭಾಮಂಟಪಗಳನ್ನು ಹೊಂದಿರುವ ಗರ್ಭಗೃಹದಲ್ಲಿ ಒಂದೇ ಪೀಠದಲ್ಲಿ ಹಂಸಪೀಠದ ಚತುರ್ಮುಖ ಬ್ರಹ್ಮ, ನಂದಿಪೀಠದ ಶಿವಲಿಂಗ, ಗರುಡಪೀಠದ ಚತುರ್ಭುಜ ವಿಷ್ಣು ಮೂರ್ತಿಗಳಿವೆ. ಗರ್ಭಗೃಹದ ಬಾಗಿಲವಾಡ ಪಂಚಾಶಾ ಖಾಲಂಕೃತವಾಗಿದ್ದು ಹಂಸಾವಳಿಯ ಸಾಲನ್ನು ಹೊಂದಿದೆ. ಲಲಾಟದಲ್ಲಿ ಗಜಲಕ್ಷ್ಮಿ ಕೆತ್ತನೆಯಿದೆ. ಇದರ ಹಿಂಬದಿಯಲ್ಲಿರುವ ನಾರಾಯಣ ಗುಡಿಯು ಎರಡು ಗರ್ಭಗೃಹ ತೆರೆದ ಅಂತರಾಳ ಹಾಗೂ ನವರಂಗವನ್ನು ಹೊಂದಿದೆ. ಪ್ರಧಾನ ಗರ್ಭಗೃಹದಲ್ಲಿರುವ ನಾರಾಯಣನ ಮೂರ್ತಿಯ ಪ್ರಭಾವಳಿಯಲ್ಲಿ ದಶಾವತಾರ ಕೆತ್ತನೆಯಿದೆ. ಗರ್ಭಗೃಹದ ಪಂಚಶಾಲಾಂಕೃತ ಬಾಗಿಲವಾಡವು ಹಂಸಾವಳಿಯನ್ನು ಹೊಂದಿದೆ. ಲಲಾಟದಲ್ಲಿ ಗಜಲಕ್ಷ್ಮಿಯಿದೆ. ತೆರೆದ ಅಂತರಾಳದ ಸ್ತಂಭದಲ್ಲಿ ರತಿ-ಮನ್ಮಥರ ಶಿಲ್ಪಗಳಿವೆ. ಹೊರಭಿತ್ತಿಯು ಕಿರುಶಿಖರ ಮಾದರಿ ಹಾಗೂ ಚಿಕಣಿ ಶಿಲ್ಪಗಳಿಂದ ಅಲಂಕೃತವಾಗಿದೆ.

 

ಹೊಳೆ – ಆಲೂರು

ಜಿಲ್ಲೆ : ೫೯ ಕಿ.ಮೀ.
ತಾಲೂಕ : ೧೮ ಕಿ.ಮೀ

ಕಾಷ್ಠಶಿಲ್ಪದ ಕಲಾ ತವರೂರು

ಕರ್ನಾಟಕದ ಕಾಷ್ಠಶಿಲ್ಪ ಪರಂಪರೆಯಲ್ಲಿ ಹೊಳೆ-ಆಲೂರಿನ ಸೂಕ್ಷ್ಮ ಕುಸುರಿ ಕೆತ್ತನೆಯುಳ್ಳ ಬಾಗಿಲು ವಾಡಗಳಿಗೆ ದೇಶಾದ್ಯಂತ ಬೇಡಿಕೆ ಯಿದೆ. ರಾಮಾಯಣ ಮಹಾ ಭಾರತಗಳ ಕಥಾಸಂದರ್ಭಗಳನ್ನು ಒಳಗೊಂಡ ಕೆತ್ತನೆಯಿರುವ ಬಾಗಿಲುಗಳು ಹೂ-ಬಳ್ಳಿಗಳ ಸುಳುಹುಗಳನ್ನು ಹೊಂದಿ ಚಿತ್ತಾಕರ್ಷಕವಾಗಿವೆ

ರೋಣ ತಾಲಕಿನ ಇತರ ಪ್ರಾಚೀಣ ದೇವಾಲಯಗಳು :

ಮೆಣಸಗಿಯ ಕಲ್ಲೇಶ್ವರ ದೇವಾಲಯ, ನರೇಗಲ್ಲಿನ ತ್ರಿಪುರಾಂತಕ ದೇವಾಲಯ, ಕಲ್ಮೇಶ್ವರ ದೇವಾಲಯ, ನಿಡಗುಂದಿಯ ನಾರಾಯಣದೇವರ ಗುಡಿ, ದಾಸಿಮೇಶ್ವರ ದೇವಾಲಯಗಳು, ಅಬ್ಬಿಗೇರಿಯ ಜ್ಯೋತಿರ್ಲಿಂಗ ಗುಡಿ, ಕರಮುಡಿಯ ಕಲ್ಮೇಶ್ವರ ಗುಡಿ, ಕೋಡಿಕೊಪ್ಪದ (ಮಲ್ಲಿಕಾರ್ಜುನ) ಮೂಲ ಬ್ರಹ್ಮೇಶ್ವರ ಗುಡಿ, ಜಕ್ಕಲಿಯ ಕಲ್ಮೇಶ್ವರ ಹಾಗೂ ಸಂಗಮೇಶ್ವರ ದೇವಾಲಯಗಳು, ಹಿರೇಹಾಳದ ರಾಮೇಶ್ವರ ದೇವಾಲಯ, ಯಾವಗಲ್ಲಿನ ಹೇಮಲಿಂಗೇಶ್ವರ ಅಸೂಟಿಯ ಮಹಿಷ ಮರ್ದಿನಿ ಶಿಲ್ಪ, ಬೆಳವಣಿಕೆಯ ವೀರಭದ್ರ ದೇವಸ್ಥಾನ ಮತ್ತು ರಾಜೂರಿನ ಕಲ್ಮೇಶ್ವರ ದೇವಾಲಯಗಳೂ ಉಲ್ಲೇಖಾರ್ಹವಾಗಿವೆ.