ಸಿನಿಮಾಗಳಲ್ಲಿ ವಿಜ್ಞಾನಿಯ ಚಿತ್ರಣ ಹೇಗಿರುತ್ತದೆ ಗೊತ್ತಲ್ಲ?! ಸುತ್ತಲಿನ ಆಗುಹೋಗುಗಳಿಗೆ ಪ್ರತಿಸ್ಪಂದಿಸದ, ತನ್ನದೇ ಆದ ತರ್ಕ, ಕಲ್ಪನೆ ಹಾಗೂ ಪ್ರಯೋಗಗಳಲ್ಲಿ ಮುಳುಗಿ ಹೋದ ಮರೆಗುಳಿ ವ್ಯಕ್ತಿ — ಬಹುತೇಕ ನರೆತ ತಲೆಗೂದಲಿನ ಮುದಿಯ ಗ ಯನ್ನೇ ನಾವು ಸಾಕಷ್ಟು ಚಿತ್ರಗಳಲ್ಲಿ ನೋಡಿದ್ದೇವೆ. ನಾನೀಗ ಹೇಳಲು ಹೊರಟಿರುವ ಸುದ್ದಿ ಇಂತಹ ವ್ಯಕ್ತಿಯದಲ್ಲ. ಯಂತ್ರವೇ ವಿಜ್ಞಾನಿಯಾಗಿ ಸಂಶೋಧನೆ ನಡೆಸುತ್ತಿರುವ ಕಥೆ. ನಂಬಿಕೆಯಾಗಲಿಲ್ಲವೇ? ಸುಪ್ರಸಿದ್ಧ ವಿಜ್ಞಾನ ಪತ್ರಿಕೆ ಸೈನ್ಸ್ನಲ್ಲಿ ಪ್ರಕಟವಾಗಿರುವ ಎರಡು ಸಂಶೋಧನೆಗಳ ಬಗ್ಗೆ ಕೇಳಿ.  ನಾಳಿನ ಸಂಶೋಧನೆಗಳು ಹೇಗಿರಬಹುದು ಎನ್ನುವ ಕಲ್ಪನೆಯ ಜೊತೆಗೇ ಭೀತಿಯೂ ನಿಮಗೆ ಉಂಟಾದರೆ ಅದಕ್ಕೆ ಈ ಲೇಖಕ ಜವಾಬುದಾರನಲ್ಲ.

ಕೆಲವು ವರ್ಷಗಳ ಹಿಂದೆ ವರ್ಚುವಲ್ ಸುದ್ದಿವಾಚಕಿಯ ಸುದ್ದಿ ಬಂದಿತ್ತು. ಇಂಟರ್ನೆಟ್ನಲ್ಲಿ ಹಸಿ, ಬಿಸಿ ಸುದ್ದಿಯನ್ನು ಜೀವಂತ ವಾಚಕಿಯ ರೀತಿಯಲ್ಲಿಯೇ ನೀವೇ ಜೋಡಿಸಬಹುದಾದ ಈ ಚಿತ್ರರೂಪ ಓದಿ ಹೇಳುವುದನ್ನು ಕೇಳಿ ಬೆರಗಾದವರಿದ್ದರು. ಅನಿಮೇಷನ್ ಹಾಗೂ ಶಬ್ದಜನಕ ತಂತ್ರಾಂಶಗಳನ್ನು ಬಳಸಿ ಕಲೈವ್ಕಿ ವರದಿಗಳನ್ನು ಓದುವ ಈ ಬೊಂಬೆ ಈಗ ಸುದ್ದಿಯಲ್ಲ. ಎರಡು ವರ್ಷಗಳ ಹಿಂದೆ ನಿಂಟಿನಲ್ಲಿರುವ ಪದಗಳನ್ನೆಲ್ಲ ತರ್ಕಬದ್ಧವಾಗಿ ಜೋಡಿಸಿ, ಅರ್ಥಬದ್ಧವಾದ ವಾಕ್ಯಗಳನ್ನು ರಚಿಸಿ, ಕಾದಂಬರಿಯೊಂದನ್ನು ಬರೆದ ಕಕಂಪ್ಯೂಟರ್ ಸಾಹಿತಿಕಿಯ ಬಗ್ಗೆಯೂ ನೀವು ಓದಿದ್ದಿರಬಹುದು. ತರ್ಕ, ಮಾತು, ಪದ, ವಾಕ್ಯ, ಸಂಗೀತ, ಕಲ್ಪನಾ ಚಾತುರ್ಯ ತನ್ನದಷ್ಟೆ ಸ್ವತ್ತು ಎನ್ನುವ ಮಾನವನ ಗತ್ತಿಗೆ ಕುತ್ತಾಗಿ ಬಂದ ಈ ಸುದ್ದಿಗಳ ಸಾಲಿಗೆ ಇನ್ನೊಂದು ಕೂಡಿಕೊಂಡಿದೆ. ತರ್ಕಬದ್ಧ ವಿಜ್ಞಾನ, ಸಂಶೋಧನೆಯನ್ನೂ ಯಂತ್ರಗಳು ಸಲೀಸಾಗಿ ಮಾಡಬಲ್ಲುವಂತೆ.

ವಿಜ್ಞಾನ ಎಂದರೆ ತಮಗಿರಿವಿರುವ ಮಾಹಿತಿಯ ವಿಶ್ಲೇಷಣೆ. ಒಂದಕ್ಕೊಂದು ಸಂಬಂಧವಿಲ್ಲದ ಸಂಗತಿಗಳ ನಡುವೆಯೂ ಸಂಬಂಧಗಳನ್ನು ಗುರುತಿಸುವ ಹಾಗೂ ಹೀಗೆ ಗುರುತಿಸಿದ ಸಂಬಂಧಗಳು ಸತ್ಯವೇ ಎಂದು ಪ್ರಾಯೋಗಿಕವಾಗಿ ಪರಿಶೀಲಿಸುವ ಪ್ರಕ್ರಿಯೆಯಷ್ಟೆ. ಇದು ಮಾನವನ ಮಿದುಳಿಗಷ್ಟೆ ಸಾಧ್ಯ ಎಂದು ಇದುವರೆವಿಗೂ ನಂಬಲಾಗಿತ್ತು. ನಿಜವೇ! ಸಾಮಾನ್ಯವಾಗಿ ಉಳಿದವರ ಕಲ್ಪನೆಗೆ ನಿಲುಕದ ಸಂಗತಿಗಳನ್ನೂ ಕಲ್ಪಿಸಿಕೊಂಡು, ತನ್ನಲ್ಲಿರುವ ವಿವಿಧ ಮಾಹಿತಿಗಳು ಅದಕ್ಕೆ ತಾಳೆಯಾಗುತ್ತವೆಯೋ ಎಂದು ನೋಡಿ, ಜ್ಞಾನದ ಜಗತ್ತಿಗೆ ಹೊಸದೊಂದು ಬಾಗಿಲನ್ನು ತೆರೆವವನೇ ವಿಜ್ಞಾನಿ. ನಮ್ಮೆದುರಿಗೇ ಇರುವ ಕಲ್ಲು ನಮ್ಮನ್ನು ಆಕರ್ಷಿಸುತ್ತಿದೆ ಎಂದು ಕಲ್ಪಿಸಿಕೊಳ್ಳುವುದೂ ಕಷ್ಟವೇ! ಆದರೆ ಇಂತಹುದೊಂದು ಕಲ್ಪನೆಯನ್ನು ಕಂಡು, ಗುರುತ್ವಾಕರ್ಷಣೆಯ ನಿಯಮಗಳನ್ನು, ಅದಕ್ಕೆ ಪೂರಕವಾದ ಗಣಿತ ಸೂತ್ರಗಳನ್ನು ಐಸಾಕ್ ನ್ಯೂಟನ್ ರೂಪಿಸದೇ ಇದ್ದಿದ್ದರೆ ಬಹುಶಃ ಇಂದು ಚಂದ್ರಯಾನದ ಕನಸನ್ನು ಯಾರೂ ಕಾಣಲಾಗುತ್ತಿರಲಿಲ್ಲ. ಶಕ್ತಿ ಬೇರೆಯಲ್ಲ, ವಸ್ತು (ದ್ರವ್ಯರಾಶಿ) ಬೇರೆಯಲ್ಲ ಎಂದು ಒಂದು ಸಮೀಕರಣದ ಮೂಲಕ ಆಲ್ಬರ್ಟ್ ಐನ್ಸ್ಟೀನ್ ನಿರೂಪಿಸಿದ ಫಲ, ಇಡೀ ಜಗತ್ತಿನ ರಾಜಕೀಯವೇ ಬದಲಾಯಿತು ಎನ್ನಬಹುದು. ಇವರಿಲ್ಲದಿದ್ದರೆ ಈ ದಿನದ ಜಗತ್ತು ಸಾಧ್ಯವಿತ್ತೇ?

ಯಾಕೆ ಸ್ವಾಮಿ? ಇನ್ಯಾರಾದರೂ ಆ ಶೋಧಗಳನ್ನು ಮಾಡುತ್ತಿದ್ದರು ಎಂದು ಹೇಳಿದಿರಾ? ಬೇರೊಬ್ಬರು ಯಾಕೆ ಯಂತ್ರಗಳೇ ಆ ಕೆಲಸವನ್ನೂ ಮಾಡಬಲ್ಲುವು ಎನ್ನುತ್ತವೆ ಸೈನ್ಸ್ನಲ್ಲಿ ಪ್ರಕಟವಾಗಿರುವ ಸಂಶೋಧನೆಗಳು. ಉದಾಹರಣೆಗೆ ಅಮೆರಿಕೆಯ ಕಾರ್ನೆಲ್ ವಿವಿಯ ಕಂಪ್ಯುಟೇಶನಲ್ ಬಯಾಲಜಿಯ ಪ್ರೊಫೆಸರ್ ಮೈಖೇಲ್ ಶ್ಮಿಟ್ ಮತ್ತು ಹಾಡ್ ಲಿಪ್ಸನ್ ಒಂದು ಕಂಪ್ಯೂಟರ್ ತಂತ್ರಾಂಶವನ್ನು ರೂಪಿಸಿದ್ದಾರೆ. ಕಂಪ್ಯೂಟರ್ಗೆ ಜೋಡಿಸಿದ ಲೋಲಕವೊಂದರ ತುಯ್ದಾಟದ ವೇಗ, ಅವಧಿ ಇತ್ಯಾದಿ ವಿವರಗಳನ್ನು ಈ ತಂತ್ರಾಂಶ ವಿಶ್ಲೇಷಿಸುತ್ತದೆ. ಕಾಲಾನುಕ್ರಮದಲ್ಲಿ ಸಂಗ್ರಹವಾದ ಮಾಹಿತಿಯಲ್ಲಿ ಪ್ರಮುಖವೆನ್ನಿಸಿದ ಅಂಶಗಳನ್ನು ಇದು ಹೆಕ್ಕುವಂತೆ ರೂಪಿಸಿದ್ದಾರೆ.  ಲೋಲಕ ಏಕೆ ತುಯ್ದಾಡುತ್ತದೆ? ಅದರ ತುಯ್ದಾಟದ ಮೇಲೆ ಪ್ರಭಾವ ಬೀರುವ ಅಂಶಗಳು ಯಾವುವು? ಇತ್ಯಾದಿಗಳ ಬಗ್ಗೆ ಸುಳಿವು ಇಲ್ಲದಿದ್ದಾಗ್ಯೂ, ಈ ತಂತ್ರಾಂಶ ಲೋಲಕದ ತುಯ್ದಾಟವನ್ನು ಅರ್ಥೈಸಲು ಭೌತವಿಜ್ಞಾನಿಗಳು ಬಳಸುವ ಸೂತ್ರಗಳನ್ನು ಸ್ವಯಂ ರೂಪಿಸಿದೆ. ಅರ್ಥಾತ್, ತನಗಿತ್ತ ಮಾಹಿತಿಯಲ್ಲಿರುವ ವೈಜ್ಞಾನಿಕ ಅಂಶವನ್ನು ತಾನೇ ಶೋಧಿಸಿದೆ. ಅಂದ ಮೇಲೆ ನ್ಯೂಟನ್ ಯಾಕೆ ಬೇಕು ಅಲ್ಲವೇ? ಎರಡು ಪ್ಲಸ್ ಎರಡು ಎಂದರೆ ಎಷ್ಟು ಎನ್ನುವ ಪ್ರಶ್ನೆಗಷ್ಟೆ ಕಂಪ್ಯೂಟರುಗಳು ಇದುವರೆವಿಗೂ ಉತ್ತರ ಹೇಳಲು ಸಾಧ್ಯವಿತ್ತು.  ಆದರೆ ಎರಡು, ಎರಡು ಮತ್ತು ನಾಲ್ಕು ಎಂಬ ಅಂಕೆಗಳ ಜೊತೆಗೆ ಕೂಡುವ, ಕಳೆಯುವ, ಗುಣಿಸುವ ಮತ್ತು ಭಾಗಿಸುವ ಚಿಹ್ನೆಗಳನ್ನು ನೀಡಿ, ಅಂಕೆಗಳ ನಡುವಿರುವ ಸಂಬಂಧವನ್ನು ಥಟ್ಟಂತ ಹೇಳುವ ಒಂದೇ ಪ್ರಾಣಿ ಮನುಷ್ಯ ಎನ್ನುವ ಮಾತು ಹೀಗೆ ಕೊನೆಗೊಳ್ಳಲಿದೆ.

ಕಂಪ್ಯೂಟರ್ ಏನಿದ್ದರೂ ಲೆಕ್ಕಾಚಾರದ ಯಂತ್ರ. ಸೂತ್ರಗಳನ್ನು ಅದು ಸುಲಭವಾಗಿ ರಚಿಸುತ್ತದೆ. ಕೊಟ್ಟ ಮಾಹಿತಿಯನ್ನು ವಿಶ್ಲೇಷಿಸಬಲ್ಲುದು. ಆದರೆ ತಾವೇ ಪ್ರಯೋಗಗಳನ್ನು ಹಮ್ಮಿಕೊಳ್ಳಲಾರದು ಎಂದು ಸಮಾಧಾನ ಮಾಡಿಕೊಳ್ಳೋಣ ಎಂದರೆ ಅದಕ್ಕೂ ಕಲ್ಲು ಹಾಕಿದ್ದಾರೆ ಬ್ರಿಟನ್ನಿನ ಕೇಂಬ್ರಿಜ್ ವಿವಿಯ ಸಿಸ್ಟಮ್ಸ್ ಬಯಾಲಜಿ ವಿಜ್ಞಾನಿಗಳು.  ಜೀವಿ ಚಟುವಟಿಕೆಗಳ ಅಧ್ಯಯನದಲ್ಲಿ ಕಂಪ್ಯೂಟರನ್ನು ಇದುವರೆವಿಗೂ ಒಂದು ಸಾಧನವನ್ನಾಗಿಯಷ್ಟೆ ಬಳಸಲಾಗುತ್ತಿತ್ತು. ಆದರೆ ಕೇಂಬ್ರಿಜ್ನ ವಿಜ್ಞಾನಿ ರಾಸ್ ಕಿಂಗ್ರವರ ತಂಡ ಕಂಪ್ಯೂಟರನ್ನೇ ವಿಜ್ಞಾನಿಯನ್ನಾಗಿಸಲು ಹೊರಟಿದೆ. ಇವರು ನಿರ್ಮಿಸಿರುವ ಕಅಡಾಮ್ಕಿ ಎನ್ನುವ ಯಂತ್ರ, ಯೀಸ್ಟ್ ಸೂಕ್ಷ್ಮ ಜೀವಿಯನ್ನು ಕೃಷಿ ಮಾಡುತ್ತದೆ. ಯೀಸ್ಟ್ನ ಬೆಳೆವಣಿಗೆಯ ಗತಿ, ಅದು ಬೆಳೆಯುತ್ತಿರುವ ಮಾಧ್ಯಮದಲ್ಲಿನ ಬದಲಾವಣೆಗಳು, ಯೀಸ್ಟ್ನ ಆನುವಂಶೀಯ ಗುಣಗಳು ಇತ್ಯಾದಿಗಳೆಲ್ಲವನ್ನೂ ವಿಜ್ಞಾನಿಗಳಂತೆಯೇ ಸೂಕ್ಷ್ಮವಾಗಿ ಪರಿಶೀಲಿಸಿ, ಪ್ರಯೋಗ ಮಧ್ಯದಲ್ಲಿ ಅವಶ್ಯಕವಾದ ಬದಲಾವಣೆಗಳನ್ನು ಮಾಡಿಕೊಳ್ಳುತ್ತದೆ. ಯೀಸ್ಟ್ನ ಬೆಳೆವಣಿಗೆಯಲ್ಲಿ ಬದಲಾವಣೆಗಳು ಏಕಾದುವು ಎಂಬುದನ್ನು ತರ್ಕಿಸದೆ ಹೀಗೆ ಪ್ರಯೋಗದ ಮಧ್ಯದಲ್ಲಿ ತಿದ್ದಿಕೊಳ್ಳುವುದು ಸಾಧ್ಯವಿಲ್ಲ. ಇವೆಲ್ಲವನ್ನೂ ಅಡಾಮ್ ಯಾರ ನೆರವಿಲ್ಲದೆ ಮಾಡಬಲ್ಲುದು. ಹೀಗೆ ಒಂದಿಷ್ಟು ಯೀಸ್ಟ್, ಅದರ ಕೃಷಿಗೆ ಅವಶ್ಯಕವಿದ್ದಷ್ಟು ಆಹಾರವನ್ನು ಒದಗಿಸಿದರೆ ಸಾಕು, ತಾನೇ ಪ್ರಯೋಗಗಳನ್ನು ಇದು ಹಮ್ಮಿಕೊಳ್ಳಬಲ್ಲುದಂತೆ. ಅಂದ ಮೇಲೆ ಲೂಯಿ ಪ್ಯಾಶ್ಚರ್ ಇನ್ನೇಕೆ ಬೇಕು ಹೇಳಿ?

ಆಕ ಕುಸಿತದ ಪ್ರಭಾವ ವಿಜ್ಞಾನ ಲೋಕದ ಮೇಲೂ ಕವಿದುಕೊಂಡಿರುವ ಫಲವಾಗಿ ಹೊಸ ಪ್ರಯೋಗಗಳಿಗೆಳಸದೆ ವಿಜ್ಞಾನಿಗಳೇ ನಿತ್ಯ ರೋಬೋಗಳಾಗುತ್ರಿರುವ ಈ ಸಂದರ್ಭದಲ್ಲಿ, ರೋಬೋಗಳನ್ನೇ ವಿಜ್ಞಾನಿಗಳನ್ನಾಗಿಸುವ ಈ ಪ್ರಯತ್ನ ವಿಚಿತ್ರವೆನ್ನಿಸೀತು. ಈ ರೋಬೋಗಳ ಪ್ರಯೋಗಗಳ ಫಲಿತಾಂಶಗಳು ಹಾಗೂ ತೀರ್ಮಾನಗಳು ನಮ್ಮ ಪ್ರಯೋಗಗಳ ಫಲಿತಾಂಶಗಳು ಹಾಗೂ ತೀರ್ಮಾನಗಳಷ್ಟೇ ನಿಷ್ಪಕ್ಷಪಾತವಾಗಿದ್ದಾವೇ? ಕಾದು ನೋಡೋಣ.

 

1 David Waltz and Bruce G. Buchanan, Automating Science,  Science, Vol. 324,  Pp 43-44 (DOI: 10.1126/science.1172393)  2009, (published online 3.4.2009)

2. Michael Schmidt et al, Distilling Free-Form Natural Laws from Experimental Data,  Science, Vol. 324,  Pp 81-85 (DOI: 10.1126/science.1165893)  2009, (published online 3.4.2009)

3. Ross D. King et al,  The Automation of Science,  Science, Vol. 324,  Pp 85-89 (DOI: 10.1126/science.1165620)  2009, (published online 3.4.2009)