ಕಾರ್ಯಕಾರಣದ ನಿಮಿತ್ತ ಒಮ್ಮೆ ಮುಂಬಯಿಗೆ ತೆರಳಲು ಹೊರಟಾಗ ಮಂಗಳೂರಿನಿಂದ ಮುಂಬಯಿಗೆ ನೇರ ಟಿಕೆಟ್ ಸಿಕ್ಕದ ಕಾರಣ ಅನಿವಾರ್ಯವಾಗಿ ಸುರತ್ಕಲ್ ರೈಲು ನಿಲ್ದಾಣದಿಂದ ಟಿಕೆಟ್ ಪಡೆದಿದ್ದೆ. ಹಾಗಾಗಿ ಮತ್ಸ್ಯಗಂಧ ರೈಲನ್ನೇರಲು ಸುರತ್ಕಲ್ ರೈಲು ನಿಲ್ದಾಣಕ್ಕೆ ಹೋಗುವ ಅನಿವಾರ್ಯತೆ ಬಂದಿತ್ತು. ಆದರೆ ಮಂಗಳೂರಿನಿಂದ ಟಿಕೆಟ್ ಸಿಕ್ಕದೆ ಸುರತ್ಕಲ್‌ನಿಂದ ಟಿಕೆಟ್ ಸಿಕ್ಕಿದ್ದು ಒಳ್ಳೆಯದೇ ಆಗಿತ್ತು. ಅಲ್ಲಿ ಕೊಂಕಣ ರೈಲ್ವೇಯವರ ಒಂದು ಕ್ರಾಂತಿಕಾರೀ ಸರಕು ಸಾಗಾಟ ಪದ್ಧತಿಯ ಪರಿಚಯವಾದಂತಾಯಿತು. ಮಂಗಳೂರಿನಿಂದಲೇ ರಿಸರ್ವೇಶನ್ ಸಿಕ್ಕಿಬಿಟ್ಟಿದ್ದರೆ ರೈಲ್ವೇಯ ಇದೊಂದು ಸರಕು ಸಾಗಾಟ ಪದ್ದತಿಯನ್ನು ಸಮೀಪದಿಂದ ನೋಡುವ ಅವಕಾಶವಾಗುತ್ತಿರಲಿಲ್ಲ.

ರೈಲು ತಪ್ಪಿಸಿಕೊಳ್ಳಬಾರದೆಂಬ ಉದ್ದೇಶದಿಂದ ಅಂದು ತುಂಬಾ ಮೊದಲೇ ಸುರತ್ಕಲ್ ರೈಲು ನಿಲ್ದಾಣ ಸಲುಪಿದ್ದೆ. ರೈಲು ಬರಲು ಇನ್ನೂ ಸಾಕಷ್ಟು ಸಮಯಾವಕಾಶವಿದ್ದುದರಿಂದ ಅಲ್ಲೇ ಇದ್ದ ಸಿಮೆಂಟ್ ಚೇರ್ ಮೇಲೆ ಕುಳಿತು ನಿಲ್ದಾಣದ ತುಂಬಾ ಕಣ್ಣಾಡಿಸುತ್ತಿದ್ದಾಗ ಅಲ್ಲಿ ಮತ್ತೊಂದು ರೈಲ್ವೇ ಟ್ರಾಕ್‌ನಲ್ಲಿ ಸಾಲಾಗಿ ಲಾರಿಗಳನ್ನು ನಿಲ್ಲಿಸಿದಂತೆ ಕಾಣಿಸಿತು. ರೈಲು ನಿಲ್ದಾಣದಲ್ಲಿ ಲಾರಿಗಳಿಗೇನು ಕೆಲಸ ಎಂದು ಕುತೂಹಲದಿಂದ ಕೂಲಂಕುಶವಾಗಿ ನೋಡಿದಾಗ ಅದು ಲಾರಿಗಳ ಸಾಲಷ್ಟೇ ಅಲ್ಲದೆ ಅವುಗಳನ್ನು ರೈಲು ಟ್ರೇಲರ್‌ಗಳ ಮೇಲೆ ಹತ್ತಿಸಿ ನಿಲ್ಲಿಸಿದ್ದು ಕಾಣಿಸಿತು. ಲಾರಿಯನ್ನು ರೈಲಿನಲ್ಲಿ ಕೊಂಡೊಯ್ಯುತ್ತಿರಬಹುದೆಂದು ಸಹಜವಾಗಿ ಅನ್ನಿಸಿದರೂ ಹೀಗೆ ಐವತ್ತರವತ್ತು ಲಾರಿಗಳನ್ನು ಏಕಾದರೂ ರೈಲಿನಲ್ಲಿ ಒಟ್ಟಿಗೆ ಕೊಂಡೊಯ್ಯುತ್ತಾರೆ ಎಂದು ಕುತೂಹಲವಾಯಿತು. ಅಲ್ಲೇ ಓಡಾಡಿಕೊಂಡಿದ್ದ ಪೋರ್ಟರ್‌ನನ್ನು ಕೇಳಿದಾಗ ಆತ ತೀರಾ ನಿರ್ಭಾವುಕತೆಯಿಂದ ಅದು “ರೋ-ರೋ” ಅಂದು ತನ್ನಪಾಡಿಗೆ ತಾನು ಹೋಗಿಬಿಟ್ಟ. ಕೂಡಲೇ ಬಹಳ ಹಿಂದೆ ಪತ್ರಿಕೆಗಳಲ್ಲಿ ಕೊಂಕಣ ರೈಲ್ವೇಯಿಂದ ಸರಕು ಸಾಗಿಸಲು ರೋ-ರೋ ಸೇವೆ ಆರಂಭಿಸಿರುವುದಾಗಿಯೂ, ಅದೊಂದು ಕ್ರಾಂತಿಕಾರಿ ಚಿಂತನೆ ಎಂದೂ ಬಂದಿದ್ದ ಸುದ್ಧಿಯ ನೆನಪಾಯಿತು. ಆದರೂ ರೋ-ರೋ ಎಂದರೆ ಸರಕು ಸಾಗಣೆ ರೈಲಿನಲ್ಲಿ ನಡುನಡುವೆ, ಅಲ್ಲೊಂದು ಇಲ್ಲೊಂದು ಎಂಬಂತೆ ಲಾರಿಗಳನ್ನು ಸಾಗಿಸುವ ವ್ಯವಸ್ಥೆ ಇದ್ದಿರಬಹುದು ಎಂದುಕೊಂಡಿದ್ದ ನನಗೆ ರೈಲು ಹಳಿಗಳ ಮೇಲೆಈ ರೀತಿ ಲಾರಿಗಳ ಮೆರವಣಿಗೆಯೇ ಸಾಗುತ್ತದೆಂಬ ಕಲ್ಪನೆ ಬಂದಿರಲೇ ಇಲ್ಲ!!

ಯಾವುದೇ ರೈಲು ಇಲ್ಲದ್ದರಿಂದ ಯಾವುದೇ ರೀತಿಯ ಜೀವಂತಿಕೆಯೇ ಇಲ್ಲದಂತಿದ್ದ ನಿಲ್ದಾಣದಲ್ಲಿ ಬಹಳ ಬಿಡುವಿನಿಂದ ಹೊರಬಂದು ನಿಂತಿದ್ದ ಸ್ಟೇಶನ್ ಮಾಸ್ಟರ್‌ನನ್ನು ಮತ್ಸ್ಯಗಂಧ ಬರಲು ಇನ್ನೂ ಎಷ್ಟು ಸಮಯ ಇದೆ ಎಂದು ಕೇಳಿದೆ. ಇನ್ನೂ ಅರ್ಧ ಘಂಟೆ ಇದೆ ಎಂಬ ಉತ್ತರ ಬಂದಿತು. ಆ ಅರ್ಧ ಘಂಟೆಯ ಸದುಪಯೋಗ ಮಾಡಿಕೊಳ್ಳೋಣವೆನ್ನಿಸಿತು. ಬರಲಿರುವ ಮತ್ಸ್ಯಗಂಧ ರೈಲಿನಲ್ಲಿ ತಿಂಡಿ ತಿನಿಸುಗಳ ಮಾರಾಟ ಮಾಡುವ ಹುಡುಗರು ಲಾರಿಗಳ ಸಾಲಿನ ಹಿಂದೆ ಕಾಣುತ್ತಿದ್ದ ವಸತಿ ಪ್ರದೇಶದಿಂದ ತಿಂಡಿಯ ಡಬ್ಬಗಳನ್ನು ಹೊತ್ತುಕೊಂಡು ಆ ಕಡೆ ಈ ಕಡೆ ಓಡಾಡುತ್ತಿದ್ದರು. ನಾನೂ ಅವರ ಜೊತೆಯಲ್ಲಿ ಹಳಿಗಳನ್ನು ದಾಟಿಕೊಳ್ಳುತ್ತಾ ಲಾರಿಯ ಸಾಲನ್ನು ತಲುಪಿದೆ. ಲಾರಿಯ ಡ್ರೈವರ್ ಕ್ಲೀನರ್‌ಗಳೆಲ್ಲ ಆರಾಮದಲ್ಲಿ ಮೊಬೈಲಿಂದ ಸಂಗೀತ ಸುಧೆಯನ್ನು ಹರಿಸುತ್ತಾ ಲಾರಿಯೊಳಗೆ ವಿಶ್ರಮಿಸುತ್ತಿದ್ದರು.  ಅವರ ಪೈಕಿ ಯಾರನ್ನಾದರೂ ಅರ್ಧ ಘಂಟೆ ಮಾತಾಡಿಸಿದರೆ ‘ರೋ-ರೋ’ ಬಗ್ಗೆ ಅವರ ಅನುಭವ ತಿಳಿಯಬಹುದೆನ್ನಿಸಿತು. ಯಾರನ್ನು ಮಾತಾಡಿಸುವುದೆಂದು ಪರಿಶೀಲಿಸುತ್ತಿದ್ದಾಗ ಲಾರಿಯ ಅಡಿಯಲ್ಲಿ ಮಲಗಿದ್ದವನೊಬ್ಬ ನನ್ನನ್ನೇ ಕುತೂಹಲದಿಂದ ನೋಡಿದ.

“ಲಾರಿಯನ್ನು ತೆಗೆದುಕೊಂಡು ಎಲ್ಲಿಯವರೆಗೆ ಹೋಗ್ತೀರಿ?” ಎಂದೆ.

ಆತ “ಕೊಲಾಡ್‌ವರೆಗೆ” ಎಂದು ಚುಟುಕಾಗಿ ಉತ್ತರಿಸಿದ.

ನಂತರ ಆತನೊಡನೆ ಮಾತನಾಡುವ ಉಮೇದಿನಲ್ಲಿ ನಾನೂ ಸಹಾ ಲಾರಿ ನಿಂತಿದ್ದ ಟ್ರೈಲರ್ ಮೇಲೆ, ಅವನ ಸಹಾಯದಿಂದಲೇ ಹತ್ತಿ ಮಾತಿಗಿಳಿದೆ. ಮಾತಿಗೊಂದು ಜನ ಸಿಕ್ಕಿತೆಂಬ ಸಂತಸದಲ್ಲಿ ಆತನೂ ಚುರುಕಾದ!!

“ಲಾರಿಯನ್ನು ರೈಲಿನಲ್ಲಿ ಇಟ್ಕೊಂಡು ಹೋಗೋದು ಹೇಗನ್ನಿಸುತ್ತೆ?” ಎಂದೆ.

ಆತ “ಅಯ್ಯೋ ಅದಕ್ಕೇನ್ರಿ? ಹಾಡುಕೇಳ್ಕೋಂತ, ನಿದ್ದೆ ಮಾಡ್ಕೋಂತ ಆರಾಮಾಗಿ ಹೋಗಬಹುದು.” ಎಂದ.

ಹೈವೇಗಳಲ್ಲಿ ಜೀವದಾಸೆ ಬಿಟ್ಟು ರಾತ್ರೆ ಹಗಲು ವಾಹನ ಚಲಾಯಿಸಬೇಕಾದ ರಗಳೆ ತಪ್ಪಿದ್ದಕ್ಕೆ ಅವನಿಗೆ ಬಹಳವೇ ಸಂತಸವಾದಂತಿತ್ತು. ಅದೂ ನಿಜವೇ. ಲಾರಿ ಚಾಲಕರ ಕೆಲಸವೆಂದರೆ ಅದೊಂದು ಬಹಳ ಯಾತನಾಮಯವಾದ ವೃತ್ತಿ. ಸಮಯಕ್ಕೆ ಸರಿಯಾಗಿ ನಿಗದಿತ ಸ್ಥಳ ಮುಟ್ಟಬೇಕೆಂದರೆ ದೈಹಿಕ ಯಾತನೆಯನ್ನೂ ಸಹಿಸಿಕೊಂಡು, ವಿಶ್ರಾಂತಿಯನ್ನು ಮರೆತು ಲಾರಿಯನ್ನು ಓಡಿಸಬೇಕು. ನಿಧಾನಕ್ಕೆ, ಎಚ್ಚರಿಕೆಯಿಂದ ಹೋದರೆ ಯಜಮಾನನ ಬೈಗುಳ, ವೇಗವಾಗಿ ಹೋದರೆ ಅಫಘಾತದ ಭಯ. ಇದೆಲ್ಲವನ್ನೂ ತಪ್ಪಿಸಿದ ‘ರೋ-ರೋ’ ಸೇವೆಯ ಬಗ್ಗೆ ಆತನ ಮುಖದಲ್ಲಿ ಕೃತಜ್ಞತೆ ಎದ್ದು ಕಾಣುತ್ತಿತ್ತು.

“ಈ ರೋ-ರೋ ಪದ್ಧತಿ ನಿಮ್ಮ ಯಜಮಾನರಿಗೆ ಸಹಾ ಇಷ್ಟವಾಗಿದೆಯಾ?” ಎಂದು ಕೇಳಿದೆ

“ಆಗದೇ ಇರುತ್ತೇನ್ರಿ? ಅವರಿಗೆ ಡೀಸೆಲ್ ಖರ್ಚು, ಟೈರ್-ಟ್ಯೂಬ್ ಖರ್ಚು, ಸ್ಪೇರ್ಪಾರ್ಟ್ ಖರ್ಚು ಎಲ್ಲಾ ಉಳಿಯೋದಿಲ್ವಾ? ಜೊತೆಗೆ ಆಕ್ಸಿಡೆಂಟ್ ಆದ್ರೆ ಕೋರ್ಟಿಗೆ ಅಲೆದಾಡೋದು ಎಲ್ಲಾ ಉಳಿತಾಯ ಆಗೋದಿಲ್ವ? ಟೈಮಿಗೆ ಸರಿಯಾಗಿ ಮಾಲು ಬಂದ್ರೆ ಅವ್ರದ್ದೇ ತಾನೇ ವ್ಯಾಪಾರ ಬರ್ಕತ್ತಾಗೋದು?” ಎಂದು ನನ್ನನ್ನೇ ಪ್ರಶ್ನಿಸಿದ.

ಆತ ಸಹಜವಾಗಿ ಹೇಳಿದ ಆ ಮಾತುಗಳೇ “ರೋ-ರೋ” ಯಶಸ್ಸಿನ ಬಗ್ಗೆ ಬರೆದ ವಿಮರ್ಷೆಯಂತೆ ನನಗೆ ಕಾಣಿಸಿತು!!.

ಏನಿದು ರೋರೋ?

ಕೊಂಕಣ ರೈಲ್ವೇ ನಿಗಮ ತನ್ನ ಆದಾಯವನ್ನು ಹೆಚ್ಚಿಸಿಕೊಳ್ಳುವ ಸಲುವಾಗಿ ಮತ್ತು ಸರಕು ಸಾಗಣೆಯ ವಿಧಾನದಲ್ಲಿ ಬದಲಾವಣೆ ತರುವ ಉದ್ದೇಶದಿಂದ ಆರಂಭಿಸಿದ ಸರಕು ಸಾಗಾಣಿಕೆಯ ಹೊಸ ಪದ್ಧತಿಯೇ “ರೋಲ್ ಆನ್-ರೋಲ್ ಆಫ಼್”. ಅಥವ ಹ್ರಸ್ವದಲ್ಲಿ ಹೇಳಬೇಕೆಂದರೆ “ರೋ-ರೋ”  ಸರಕು ತುಂಬಿದ ಲಾರಿಗಳನ್ನು ರಸ್ತೆಯಲ್ಲಿ ಓಡಿಸದೆ ಹೊರಡುವ ಬಿಂದುವಿನಲ್ಲಿ ರೈಲಿಗೆ ಹತ್ತಿಸಿ (ರೋಲ್ ಆನ್), ಅಂತಿಮ ಬಿಂದುವಿನಲ್ಲಿ ಕೆಳಗಿಳಿಸುವ (ರೋಲ್ ಆಫ಼್) ವಿಧಾನವೇ ‘ರೋಲ್ ಆನ್-ರೋಲ್ ಆಫ಼್’.

ಮಂಗಳೂರು, ಗೋವಾ ಮತ್ತು ಮಹಾರಾಷ್ಟ್ರದ ಭಾಗಗಳನ್ನೊಳಗೊಂಡ ಕೊಂಕಣ ಪ್ರದೇಶವನ್ನು ಬೆಸೆಯುವ ಕೊಂಕಣ ರೈಲು ನಿಗಮ ಮಾತ್ರವೇ ಭಾರತದಲ್ಲಿ ಈ ಅದ್ಭುತವಾದ ಸೇವೆಯನ್ನು ಲಾರಿ ಮಾಲಕರುಗಳಿಗೆ ಒದಗಿಸುತ್ತಿದೆ. ಕರ್ನಾಟಕದ ಸುರತ್ಕಲ್‌ನಿಂದ ಮಹಾರಾಷ್ಟ್ರದ ಕೊಲಾಡ್‌ವರೆಗೆ ಕೊಂಕಣ ರೈಲ್ವೇ ಈ ಸೌಲಭ್ಯ ಒದಗಿಸಿದೆ. ಮೊದಲಾದರೆ ಮಂಗಳೂರಿನಿಂದ ಹೊರಟ ಲಾರಿಗಳು ಮುಂಬಯಿ ಸೇರಬೇಕಾದರೆ, ಅಥವಾ ಮುಂಬಯಿಯಿಂದ ಸರಕು ತುಂಬಿಸಿಕೊಂಡು ಹೊರಟ ಲಾರಿಗಳು ಮಂಗಳೂರು ತಲಪಬೇಕಾದರೆ ಆ ಲಾರಿಗಳ ಮತ್ತು ಚಾಲಕರ ಪರಿಸ್ಥಿತಿ ದೇವರಿಗೇ ಪ್ರೀತಿ ಎಂಬಂತಿತ್ತು. ಅಷ್ಟೇನೂ ಉತ್ತಮವಾಗಿಲ್ಲದ ರಾಷ್ಟ್ರೀಯ ಹೆದ್ದಾರಿಯಲ್ಲಿ ಅದೂ ಉದ್ದಕ್ಕೂ ಸಿಕ್ಕುವ ಶ್ರಮದಾಯಕ ಘಾಟಿ ರಸ್ತೆಗಳಲ್ಲಿ ಸರಕು ತುಂಬಿದ ಯಮಭಾರದ ಲಾರಿಗಳನ್ನು ಚಲಾಯಿಸುವುದೆಂದರೆ ಅದೆಂತಹ ಯಾತನೆ ಎನ್ನುವುದು ಅ ಚಾಲಕರಿಗಷ್ಟೇ ಗೊತ್ತು. ಸಮಯಕ್ಕೆ ಸರಿಯಾಗಿ ಗುರಿ ಮುಟ್ಟಲಾರದೆ ಯಜಮಾನನಿಂದ ಬೈಗುಳ ತಿನ್ನುತ್ತಾ, ಸ್ವಲ್ಪ ಏಮಾರಿದರೆ ರಸ್ತೆ ಅಫಘಾತದಲ್ಲಿ ಜೀವವನ್ನೇ ಬಲಿಗೊಡಬೇಕಾದ ಭಯಾನಕತೆಯನ್ನು ಎದುರಿಸುತ್ತಾ ಚಾಲನೆ ಮಾಡಬೇಕಿತ್ತು. ಜೊತೆಗೆ ಅಂತಹ ಒಂದು ಪ್ರಯಾಣಕ್ಕೆ ಬೇಕಾದ ಡೀಸೆಲ್ ಖರ್ಚು, ಪ್ರತೀ ಪ್ರಯಾಣದ ನಂತರದ ರಿಪೇರಿಯ ಮತ್ತು ಪದೇಪದೇ ಸವೆಯುವ ಟೈರುಗಳು ಮತ್ತು ಬಿಡಿಭಾಗಗಳ ಖರ್ಚುಗಳು ಮಾಲಕರನ್ನೂ ಹೈರಾಣಾಗಿಸುತ್ತಿದ್ದವು. ಕೊಂಕಣ ರೈಲ್ವೇಯ ‘ರೊ-ರೋ’ ಅದಕ್ಕೆಲ್ಲಾ ಇತಿಶ್ರೀ ಹಾಡಿಬಿಟ್ಟಿತು.

ಸುರತ್ಕಲ್‌ನಿಂದ ಕೊಲಾಡ್‌ವರೆಗಿನ ಸುಮಾರು ೭೫೦ ಕಿಲೋಮೀಟರ್‌ಗೂ ಸ್ವಲ್ಪ ಹೆಚ್ಚಿನ ದೂರಕ್ಕೆ ಲಾರಿ ಮಾಲಕರಿಗೆ ತಗಲುವ ಖರ್ಚೆಂದರೆ ಲಾರಿಯಲ್ಲಿನ ಸರಕಿನ ತೂಕವನ್ನವಲಂಬಿಸಿ ಸುಮಾರು ೮-೯ ಸಾವಿರ ರೂಪಾಯಿ!! ಮೊದಲಾದರೆ ಸರಿಸುಮಾರು ಅದರ ಎರಡು ಪಟ್ಟು!! ಜೊತೆಗೆ ಬಿಡಿಭಾಗಗಳ ಹಾಗೂ ಟೈರ್ ಸವಕಳಿ ಇಲ್ಲ. ರಸ್ತೆಯಲ್ಲಿ ಅಡ್ಡಕ್ಕೆ ಗೇಟ್ ಹಾಕಿಕೊಂಡು ಕೂರುವ ಸುಂಕದವರ ಮುಂದೆ ಸುಖ-ದುಃಖ ಹೇಳಿಕೊಳ್ಳಬೇಕಾಗಿಲ್ಲ!!. ಮೊದಲಾದರೆ ರಸ್ತೆಯಲ್ಲಿ ಸುಮಾರು ೩೮-೪೦ ಘಂಟೆಗಳಷ್ಟು ಧೀರ್ಘ ಕಾಲವನ್ನು ಬೇಡುತ್ತಿದ್ದ ಪ್ರಯಾಣದ ಅವಧಿ ಈಗ (ಕ್ರಾಸಿಂಗ್ ಇದ್ದಲ್ಲಿ ತಡವಾಗದಿದ್ದರೆ) ಕೇವಲ ೧೧-೧೨ ಘಂಟೆಗೆ ಇಳಿದಿದೆಯಂತೆ! ನಿಗದಿತ ಸಮಯದಲ್ಲಿ ವ್ಯವಹಾರ ಚುಕ್ತಾ ಆಗುವುದರಿಂದ ಲಾಭವೂ ಹೆಚ್ಚು. ಯಜಮಾನನೂ ಖುಶ್, ನೌಕರರೂ ಖುಶ್! ಇದರ ಜೊತೆಗೆ ಲಾರಿಗಳು ರೈಲಿನಲ್ಲಿ ಮೆರವಣಿಗೆ ಹೋಗುವುದರಿಂದ ಪರಿಸರಕ್ಕೆ ಎಷ್ಟು ಪ್ರಯೋಜನವಾಗುತ್ತದೊ ನೋಡಿ. ಒಮ್ಮೆಗೇ ಸುಮಾರು ಐವತ್ತರಷ್ಟು ಲಾರಿಗಳು ರೈಲಿನಲ್ಲಿ ಹೊರಡುತ್ತವೆಂದರೆ ಅವೆಲ್ಲ ಸೇರಿ ವಾರ್ಷಿಕವಾಗಿ ಅದೆಷ್ಟು ಲಕ್ಷ ಲೀಟರ್ ಡೀಸೆಲ್ಲನ್ನು ಸುಟ್ಷು ಅದೆಷ್ಟು ಟನ್ ಇಂಗಾಲದ ಡೈ ಆಕ್ಸೈಡ್ ಮತ್ತು ಅದಕ್ಕೂ ಅಪಾಯಕಾರಿಯಾದ ಇಂಗಾಲದ ಮಾನಾಕ್ಸೈಡನ್ನೂ, ಇನ್ನಿತರ ವಿಷವಾಯುವನ್ನೂ ಪರಿಸರಕ್ಕೆ ಸೆರಿಸಬಹುದು? ಈಗ ಅದು ತಪ್ಪಿದ ಕಾರಣ ಅಷ್ಟರ ಮಟ್ಟಿಗೆ ಪರಿಸರ ಕೂಡಾ ಖುಶ್!! ಮತ್ತು ಅರೋಗ್ಯಪೂರ್ಣ. ಜೊತೆಗೆ ಹೆದ್ದಾರಿಗಳ ಮೇಲೆ ಯಮಕಿಂಕರರಂತೆ ಓಡುತ್ತಿದ್ದ ಲಾರಿಗಳು ಮಾರ್ಗ ಬದಲಿಸಿದ್ದರಿಂದ ಹೆದ್ದಾರಿಯ ಮೇಲಿನ ಒತ್ತಡ ತಂತಾನೆ ಕಡಿಮೆಯಾಗಿ ಪ್ರಯಾಣಿಕ ವಾಹನಗಳೂ ಸುರಕ್ಷಿತ. ಸುಮಾರು ಹತ್ತು ವರ್ಷಗಳ ಹಿಂದೆ ನಮ್ಮಲ್ಲಿ ಆರಂಭಗೊಂಡ ಈ ಸೇವೆ ಸರಕು ಸಾಗಣೆ ಕ್ಷೇತ್ರದಲ್ಲಿ ಒಂದು ಕ್ರಾಂತಿ ಎಂದೇ ಹೇಳಬಹುದು. ಇದಕ್ಕಾಗಿ ಕೊಂಕಣ ರೈಲ್ವೇಯವರನ್ನು ಅಭಿನಂದಿಸಬೇಕು.

ರೋರೋಗೆ ಮೊದಲು ಲೋಲೋ!

ಭಾರತದಲ್ಲಿ ಈ ಪದ್ಧತಿ ಜಾರಿಗೆ ತಂದದ್ದು ಕೊಂಕಣ ರೈಲ್ವೆ ಎಂಬುದು ಸರಿ. ಆದರೆ ಇಂತಹುದೊಂದು ಪದ್ಧತಿ ಆರಂಭವಾದದ್ದು ಎಲ್ಲಿ? ಯಾವಾಗ? ಇದು ಆರಂಭವಾದದ್ದು ಮಹಾಯುದ್ಧಗಳ ಸಮಯದಲ್ಲಂತೆ.

ಪ್ರಪಂಚವನ್ನು ಕಂಗಾಲಾಗಿಸಿದ್ದ ಮಹಾಯುದ್ಧಗಳು ಅಪಾರ ಸಾವು ನೋವಿಗೆ ಕಾರಣವಾದಂತೆ ಹಲವಾರು ಆವಿಷ್ಕಾರಗಳಿಗೂ, ಅನೇಕ ಸುಧಾರಣೆಗಳಿಗೂ ಪ್ರೇರಕವಾಗಿವೆ. ಅಂತಹ ಎಲ್ಲಾ ಸಂಶೋಧನೆ ಮತ್ತು ಸುಧಾರಣೆಗಳು ಯುದ್ಧೋಪಯೋಗಕ್ಕಾಗಿಯೇ ಆಗಿದ್ದು ನಿಜವಾದರೂ ಯುದ್ಧಾನಂತರದ ಶಾಂತಿಕಾಲದಲ್ಲಿ ಅವೆಲ್ಲವೂ ನಾಗರೀಕ ಸಮಾಜಕ್ಕೆ ತುಂಬಾ ಉಪಯುಕ್ತವಾಗಿವೆ. ಅಂತಹ ಹಲವಾರು ಸುಧಾರಣೆಗಳಲ್ಲಿ ಸರಕು ಸಾಗಣೆಯ ಹೊಸ ವಿಧಾನಗಳೂ ಸೇರಿವೆ.

ಮಹಾಯುದ್ಧಕಾಲದಲ್ಲಿ ಕೆಲವು ಮಿತ್ರ ದೇಶಗಳಾಗಿದ್ದರೆ ಕೆಲವು ಶತ್ರು ದೇಶಗಳಾಗಿರುತ್ತಿದ್ದವು. ಮಿತ್ರದೇಶಗಳಿಗೆ ಸಹಾಯವನ್ನೂ, ಶತ್ರು ದೇಶಗಳ ಗಡಿಗೆ ಯುದ್ಧ ಸಾಮಾಗ್ರಿಗಳನ್ನೂ ತಲುಪಿಸುವ ಧಾವಂತದಲ್ಲಿ ಹುಟ್ಟಿಕೊಂಡದ್ದೇ ರೋ-ರೋ ಆದರೆ ಆಗ ಅದಕ್ಕೆ ಇದ್ದ ಹೆಸರು ಮಾತ್ರಾ “ಲೋ-ಲೋ” ಅಂದರೆ “ಲಿಫ಼್ಟ್ ಆನ್-ಲಿಫ಼್ಟ್ ಆಫ಼್” ಎಂದು. ಕಾರಣವೇನೆಂದರೆ  ಆಗ ದೇಶದಿಂದ ದೇಶಕ್ಕೆ ಸರಕು ಸಾಗಣೆಗೆ ಉಪಯೋಗಿಸುತ್ತಿದ್ದುದು ಹಡಗುಗಳನ್ನು. ಆಗ ಹಡಗುಗಳಿಗೆ ಸರಕು ತುಂಬಿದ ವಾಹನಗಳನ್ನು ಏರಿಸಲು ಮತ್ತು ಇಳಿಸಲು ಕ್ರೇನ್‌ಗಳನ್ನು ಉಪಯೋಗಿಸಲಾಗುತ್ತಿತ್ತು. ಹಾಗಾಗಿ ಅದು “ಲಿಫ಼್ಟ್ ಆನ್-ಲಿಫ಼್ಟ್ ಆಫ಼್”. ಅದರಲ್ಲೇ ಸ್ವಲ್ಪ ಬದಲಾವಣೆಗೊಂಡು ಕೆಲವೆಡೆ ಆದು ‘ರೋ-ಲೋ’ (ರೋಲ್ ಆನ್-ಲಿಫ಼್ಟ್ ಆಫ಼್) ಆಯಿತು. ಯುದ್ಧಾನಂತರ ಎಲ್ಲ ದೇಶಗಳೂ ಮಿತ್ರರೇ ಆಗಿ, ಎಲ್ಲರೊಡನೆ ವ್ಯಾಪಾರ ಸಂಬಂಧದ ಅವಕಾಶಗಳು ಉಜ್ವಲಗೊಂಡಾಗ ಲೋ-ಲೋ ಅಥವಾ ರೋ-ಲೋ ಪದ್ಧತಿಗಳು ಬಹಳ ಉಪಯುಕ್ತ ಎನ್ನಿಸಿದವು. ನಂತರ ರೈಲ್ವೆ ಮಾರ್ಗದಲ್ಲಿ ಬಹಳ ಮುಂದುವರೆದಿದ್ದ  ಆಸ್ಟ್ರಿಯಾ ಮತ್ತು ಸ್ವಿಟ್ಜರ್ಲೆಂಡ್ ಅದನ್ನೇ ರೋ-ರೋ ಆಗಿ ಮಾರ್ಪಡಿಸಿದ್ದವು. ಅಲ್ಲಿ ಮೊದಲಿನಿಂದಲೆ ವಿದ್ಯುತ್ ಚಾಲಿತ ರೈಲುಗಳಿರುವುದರಿಂದ ರೋ-ರೋ ಕ್ಷಿಪ್ರದಲ್ಲೇ ಯಶಸ್ವಿಯೂ ಜನಪ್ರಿಯವೂ ಆಯಿತು.

ನಮ್ಮಲ್ಲಿ ರಸ್ತೆಗಳಲ್ಲಿ ವಾಹನ ಸಾಂದ್ರತೆ ಬಹಳ ಹೆಚ್ಚೇ ಇರುವುದರಿಂದ ರೋಲ್ ಆನ್-ರೋಲ್ ಆಫ಼್‌ನ ಅವಶ್ಯಕಥೆ ಬೇರೆ ದೇಶಗಳಿಗಿಂತ  ನಮಗೇ ಹೆಚ್ಚಾಗಿದೆ. ಭಾರತದ ಎಲ್ಲೆಡೆ ಇದೇ ಪದ್ಧತಿ ಅನುಷ್ಠಾನಗೊಂಡರೆ ರಸ್ತೆಯ ಮೇಲಿನ ಒತ್ತಡ ಕಡಿಮೆಯಾಗುವುದಲ್ಲದೆ ಡೀಸೆಲ್ ಮಿಗತೆಯಿಂದ ನಮ್ಮ ವಿದೇಶೀ ವಿನಿಮಯದ ಸಂಗ್ರಹ ಕರಗುವುದು ಸಹಾ ಕಡಿಮೆಯಾಗುತ್ತದೆ. ಪರಿಸರ ಮಾಲಿನ್ಯವೂ ಕಡಿಮೆಯಾಗಿ ಪ್ರಕೃತಿ ನಳನಳಿಸುತ್ತದೆ. ಸರಕು ಸಾಗಣೆಯಲ್ಲಿ ಈಗಾಗಲೇ ಬಹಳ ಅಭಿವೃದ್ಧಿ ಸಾಧಿಸಿರುವ ಭಾರತೀಯ ರೈಲ್ವೇ ಕೊಂಕಣ ರೈಲ್ವೇ ಮಾದರಿಯಲ್ಲಿ ಈ ಪದ್ಧತಿಯನ್ನು ಜಾರಿಗೆ ತಂದರೆ ಅದೆಂತಹಾ ಕ್ರಾಂತಿಕಾರೀ ಸರಕು ಸಾಗಾಟ ಪದ್ಧತಿ ಎಂಬುದನ್ನು ಸಾಬೀತುಪಡಿಸಬಹುದು. ಅದು ಭವಿಷ್ಯದ ಅಪೇಕ್ಷೆಯಾದರೂ ಸಧ್ಯಕ್ಕೆ  “ರೋ-ರೋ” ಕೊಂಕಣ ಮಾರ್ಗದಲ್ಲಿಯಾದರೂ ಜಾರಿಯಲ್ಲಿರುವುದಕ್ಕೆ ಹರ್ಷಿಸೋಣ.