ಜನನ : ೧೫-೧೦-೧೯೬೧ ಮೈಸೂರಿನಲ್ಲಿ

ಮನೆತನ : ಕಲಾವಿದರ ಮನೆತನ. ತಾತ ಅಮಲ್ದಾರ್ ಪುಟ್ಟಸ್ವಾಮಯ್ಯನವರು ಮೈಸೂರು ಆಸ್ಥಾನ ವಿದ್ವಾಂಸರಾಗಿದ್ದವರು.

ಗುರುಪರಂಪರೆ : ಮೊದಲಿಗೆ ಮೈಸೂರಿನಲ್ಲಿ ಎನ್.ಲಕ್ಷ್ಮೀ ಅವರಲ್ಲಿ ಪ್ರಾಥಮಿಕ ಶಿಕ್ಷಣ ಪಡೆದು ಮುಂದೆ ಬಳ್ಳಾರಿ ಎಂ. ವೆಂಕಟೇಶಾಚಾರ್ ಅವರಲ್ಲಿ ಕರ್ನಾಟಕ ಸಂಗೀತದಲ್ಲಿ ಉನ್ನತ ಶಿಕ್ಷಣ. ಹೆಚ್. ಆರ್.ಲೀಲಾವತಿ ಅವರಲ್ಲಿ ಸುಗಮ ಸಂಗೀತದಲ್ಲಿ ಉನ್ನತ ಶಿಕ್ಷಣ ಪಡೆದಿದ್ದಾರೆ. ವೃತ್ತಿಯಲ್ಲಿ ವೈದ್ಯರು.

ಸಾಧನೆ : ತಮ್ಮ ಆರನೆಯ ವಯಸ್ಸಿನಲ್ಲೆ ಮೈಸೂರು ಆಕಾಶವಾಣಿಯ ಮಕ್ಕಳ ಕಾರ್ಯಕ್ರಮದಲ್ಲಿ ಹಾಡಿ ಪ್ರಶಂಸೆಗೆ ಪಾತ್ರರಾದವರು. ೧೯೭೬ ರಲ್ಲಿ ಮೊದಲ ಕಾರ್ಯಕ್ರಮ. ಮೈಸೂರು, ನಂಜನಗೂಡು, ಗುಂಡ್ಲುಪೇಟೆ, ಮಂಡ್ಯ, ಹಾಸನ, ಬೆಂಗಳೂರು ಮುಂತಾದ ಕಡೆ ಕಾರ್ಯಕ್ರಮಗಳು ನಡೆದಿವೆ. ಕನ್ನಡ ಮತ್ತು ಸಂಸ್ಕೃತಿ ಇಲಾಖಾ ವತಿಯಿಂದ ಸಹ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಆಕಾಶವಾಣಿ ’ಎ’ ದರ್ಜೆ ಕಲಾವಿದೆ. ಅಲ್ಲದೆ ದೆಹಲಿ ಕನ್ನಡ ರಾಜ್ಯೋತ್ಸವ, ಮ್ಯಾಂಚೆಸ್ಟರ್‌ನಲ್ಲಿ ನಡೆದ ವಿಶ್ವಕನ್ನಡ ಸಮ್ಮೇಳನಗಳಲ್ಲಿ ಭಾಗವಹಿಸಿ ಭಾವಗೀತಗಳ ಸೊಗಡನ್ನು ಪಸರಿಸಿದ್ದಾರೆ. ರಾಷ್ಟ್ರಕವಿ ಕುವೆಂಪುರವರು ಇವರ ಧ್ವನಿಯನ್ನು ಕೇಳಿ ಮೆಚ್ಚಿ ಯಾವುದೇ ವಾದ್ಯವಿಲ್ಲದೆ ಅವರ ಗೀತೆಗಳನ್ನು ಧ್ವನಿ ಸುರುಳಿ ಮಾಡಿಸಿಕೊಂಡಿದ್ದಾರೆ. ಕನಸು ಮುಂತಾದ ಧ್ವನಿ ಸುರುಳಿಗಳನ್ನು ಹೊರ ತಂದಿದ್ದಾರೆ. ೨೦೦೧-೦೪ ರ ಅವಧಿಯಲ್ಲಿ ಸಂಗೀತ ನೃತ್ಯ ಅಕಾಡೆಮಿ ಸದಸ್ಯರಾಗಿ ಕಾರ್ಯನಿರ್ವಹಿಸಿರುತ್ತಾರೆ.

ಪ್ರಶಸ್ತಿ – ಸನ್ಮಾನ : ಇವರಿಗೆ ಅನೇಕ ಗೌರವ ಸನ್ಮಾನಗಳು ಸಂದಿವೆ. ೧೯೯೯-೨೦೦೦ರ ಸಾಲಿನ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಪ್ರಶಸ್ತಿ ಕರ್ನಾಟಕ ಕಲಾಶ್ರೀ ಗೌರವಕ್ಕೆ ಪಾತ್ರರಾದ ರೋಹಿಣಿ ಮೋಹನ್ ೨೦೦೦ದ ಆರ್ಯಭಟ ಪ್ರಶಸ್ತಿಗೂ ಭಾಜನರಾಗಿದ್ದಾರೆ.