ಲಂಕೇಶರು ೧೯೩೫ ಮಾರ್ಚ್ ೮ ರಂದು ಜನಿಸಿದರು. ತಂದೆ ನಂದಿಬಸಪ್ಪ, ತಾಯಿ ದೇವೀರಮ್ಮ,. ಪಾಳ್ಯದ ಲಂಕೇಶಪ್ಪ ಅವರ ಪೂರ್ಣ ಹೆಸರು. ತಮ್ಮ ಹೆಸರಿನ ವಿಶಿಷ್ಟತೆಯಿಂದಲೇ ಲಂಕೇಶ್‌ ನಾಗರಿಕ ಜಗತ್ತಿನ ಗಮನ ಸೆಳೆದವರು. ಲಂಕೇಶರಂತೆ ಸಮಕಾಲೀನ ಕನ್ನಡ ಸಂಸ್ಕೃತಿಯನ್ನು ಗಾಢವಾಗಿ ಪ್ರಭಾವಿಸಿದರು. ವಿರಳ: ಗುಣ, ಗಾತ್ರ, ವ್ಯಾಪ್ತಿಯ ದೃಷ್ಟಿಯಿಂದ ಲಂಕೇಶರು ಅಪಾರ ಸಾಹಿತ್ಯ ಸೃಷ್ಟಿಸಿ ಅಭೂತಪೂರ್ವ ಲೇಖಕ ಎನಿಸಿದ್ದಾರೆ. ಈ ಕಾಲದ ಬಹುಮುಖ್ಯ ಸಂಸ್ಕೃತಿ ಚಿಂತಕರಾಗಿದ್ದಾರೆ. ನೂರಾರು ಸಣ್ಣಕತೆ, ಮೂರು ಕಾದಂಬರಿ, ವಿಮರ್ಶೆ, ಕವಿತೆ, ಅನುವಾದಗಳ ಮೂಲಕ ಲಂಕೇಶ್‌ ಕನ್ನಡದ ಮಹತ್ವದ ಲೇಖಕರಾಗಿದ್ದಾರೆ.

ಲಂಕೇಶರ ನಾಟಕಗಳ ವಿಶ್ಲೇಷಣೆಗೆ ಮೊದಲು ನಾಟಕಕಾರರಾಗಿ ಅವರು ‘ನಾಟಕದ ಬಗ್ಗೆ ಹೊಂದಿದ್ದ ನಿಲುವು, ತಾತ್ವಿಕತೆ ತಿಳಿಯಲು ಅವರ ಈ ಮಾತು ಸಹಾಯಕವಾಗಬಹುದು.

ನಾಟಕವೆಂದರೆ ಮನಸ್ಸಿಗೆ ಹಿಡಿಯುವಂತೆ ಮಂಡಿಸುವ ಕಲೆ.

‘ನವ್ಯ’ ಎಂದು ನಾನು ಕರೆಯುವಾಗಲೂ ಇದು ಆಗಲೇ ಕಾಲಕ್ಕೆ ಬಂಧಿಯಾಗಿರುವಂತದು ಮತ್ತು ವರ್ತಮಾನದಿಂದ ತನ್ನ ಗುಣವನ್ನು ರೂಪಿಸಿಕೊಳ್ಳುವಂತದು ಎಂಬುದನ್ನು ನೆನಪಿಟ್ಟು ಕೊಂಡಿರುವೆ.

ನಾಟಕವೆಂಬುದು ಕಾವ್ಯದಷ್ಟೇ ಗಂಭೀರ ವಿವೇಚನೆಗೆ ಯೋಗ್ಯವಾದ ಮಾಧ್ಯಮ ಎಂಬುದು ನಮಗೆ ಇತ್ತೀಚೆಗೆ ಗೊತ್ತಾಗ ತೊಡಗಿದೆ.

ನಮ್ಮಲ್ಲಿ ಇತರ ಪ್ರಕಾರಗಳಲ್ಲಿ ಉತ್ತಮ ಕೃತಿಗಳನ್ನು ಕೊಟ್ಟವರು ಕೂಡ ಸಮಕಾಲೀನ ರಂಗಭೂಮಿಯ ಪರಿವೆಯಿಲ್ಲದೆ ಅಥವಾ ಸಮಕಾಲೀನ ಪ್ರಜ್ಞೆಗೆ ಬೇಕಾಗಬಹುದಾದ ರಂಗಭೂಮಿಯ ಕಲ್ಪನೆ ಇಲ್ಲದೆ ಬರೆಯುವುದರಿಂದ ನಾಟಕ ಬಡವಾಗಿರುವುದು ಕಂಡು ಬರುತ್ತದೆ.

ಕುವೆಂಪು ಅವರ ರಕ್ತಾಕ್ಷಿ ‘ಹ್ಯಾಮ್ಲೆಟ್‌’ ಯಾವುದನ್ನು ಮಾಡುತ್ತದೋ ಅದನ್ನು ಮಾಡುವುದರಲ್ಲಿ ಸೋಲುತ್ತದೆ.

ಮೂರ್ತಿರಾವ್‌, ಕುವೆಂಪು, ಪು.ತಿ.ನ.ರ ನಾಟಕಗಳು ಪದ್ಯಗಳಂತೆ ಅಥವಾ ಗ್ರಾಂಥಿಕ ವ್ಯಾಯಾಮಗಳಂತೆ ಕಂಡರೆ ಕೈಲಾಸಂ ಅವರ ಕೃತಿಗಳು ಕೇವಲ ಹಲವು ಘಟನೆಗಳ ದಾಖಲೆಗಳಾಗಿ ಕಾಣುತ್ತವೆ.

ನಾಟಕದಲ್ಲಿ ಸಿಗುವುದು ಬೇರೆಲ್ಲೂ ಸಿಕ್ಕಲಾರದು ಎಂಬುದನ್ನು ಸಿದ್ಧಪಡಿಸದೆ ಹೋದರೆ ರಂಗಭೂಮಿಯ ಬಾಗಿಲು ಮುಚ್ಚಿ ಬೀಗ ಜಡಿಯುವುದು ಉತ್ತಮ.

ನಾಟಕದಲ್ಲಿ ಕಾವ್ಯ ಮಾತುಗಳಲ್ಲಿ ಮಾತ್ರ ಇದ್ದರೆ ಅದು ಕೃತಕವಾದ ಪದ್ಯ ನಾಟಕವಾಗುತ್ತದೆ. ಅದು ಘಟನೆಯಲ್ಲಿ ಮತ್ತು ಒಟ್ಟಾರೆ ವಸ್ತುವಿನಲ್ಲಿದ್ದು ವ್ಯಕ್ತವಾದರೆ ಅದು ನಿಜವಾದ ತೀವ್ರ-ಕಾವ್ಯದ ಸೆಲೆಯುಳ್ಳ-ನಾಟಕವಾಗುತ್ತದೆ. ಶೇಕ್ಸ್‌ಪಿಯರ್ ದೊಡ್ಡ ನಾಟಕಕಾರನಾಗಲು ಕಾರಣ ಆತನ ನಾಟಕಗಳಲ್ಲಿನ ಅತ್ಯಂತ ನಾಟಕೀಯತೆ, ಸ್ವಾರಸ್ಯ ಮತ್ತು ಕಾವ್ಯ ಪೂರ್ಣ ಸನ್ನಿವೇಶಗಳು.

‘ಸಂಕೇತಮಾರ್ಗ’ ಸಂಭಾಷಣೆ ಅಥವಾ ವರ್ಣನೆಯ ಮಾರ್ಗಕ್ಕಿಂತ ಭಿನ್ನವಾದದ್ದು.

ನಿಜವಾದ ಸಾಹಿತ್ಯ ಕೃತಿ ಒಂದು ಹೊಸ ನೋಟ, ತಿಳಿವು ದೊರಕಿಸಿಕೊಡುತ್ತದೆಯೇ ವಿನಃ ಧರ್ಮ, ನೀತಿ, ಪಾಠ ಇತ್ಯಾದಿಗಳನ್ನಲ್ಲ.

ಇಷ್ಟಾದರೂ ಗಿರೀಶರ ನಾಟಕಗಳು ಪಶ್ಚಿಮದ ಪ್ರಭಾವವನ್ನು ಹನಿಹನಿಯಾಗಿ ತೋರುತ್ತವೆ.

ವಾಸ್ತವತೆ, ದುರಂತ, ತಮಾಷೆ, ರಮ್ಯತೆ, ಅಸಂಗತತೆಯಿಂದ ಕೂಡಿದ ನಾಟಕೀಯತೆಗಳು ಅತ್ಯುತ್ತಮ ನಾಟಕದ ಅಂಶಗಳು.

“ನಾಟಕ ಬರೆಯುವ ಆಸೆಯಾಗಿ ಎರಡು ದಿನ ಕೂತು ಬರೆದೆ. ನಾಟಕ ಬೇಸರ ತರಬಾರದೆಂದು ತಮಾಷೆ, ವ್ಯಂಗ್ಯ, ನಾಟಕೀಯತೆ ತುರುಕಿದೆ, ಮಾತುಗಳನ್ನು ಕತ್ತರಿಸಿದೆ; ಚೀರಾಡುವ ಮಾತುಗಳನ್ನು ಸೇರಿಸಿದೆ; ಮಾತುಗಳನ್ನು ಸುಂದರಗೊಳಿಸಿ, ಪಾಲಿಶ್‌ ಮಾಡಿದೆ’, ಜೋಕ್‌ ಸೇರಿಸಿದೆ”. (ತೆರೆಗಳು ನಾಟಕ ರಚನೆ ಕುರಿತು) ನಾಟಕದ ಭಾಷೆಗೆ ಪ್ರತ್ಯೇಕ ಅಸ್ತಿತ್ವವಿರದು; ಅದು ಕ್ರಿಯೆಯ ಅವಿಭಾಜ್ಯ ಅಂಗವಾಗಿರುತ್ತದೆ.

ಮೇಲಿನ ಉಲ್ಲೇಖಗಳು ಲಂಕೇಶರು ನಾಟಕ ಪ್ರಕಾರವನ್ನು ಕೃತಿ ಮತ್ತು ರಂಗರೂಪದಲ್ಲಿ ಗ್ರಹಿಸಿದ ಬಗೆಯನ್ನು ತೋರುತ್ತವೆ. ಅಂದರೆ ಸ್ಪಷ್ಟತೆ, ಬೌದ್ಧಿಕತೆ, ಸೃಜನಶೀಲತೆಗಳು ಲಂಕೇಶರ ನಾಟಕಗಳನ್ನು ರೂಪಿಸಿವೆ. ಮುಂದಿನ ವಿಶ್ಲೇಷಣೆಯಲ್ಲಿ ಇದು ಸ್ಪಷ್ಟವಾಗಿದೆ. ೧೯೭೦ರ ದಶಕದಲ್ಲಿ ‘ಪ್ರತಿಮಾ ನಾಟಕ ರಂಗ’ದ ಸೂತ್ರಧಾರಿಯಾಗಿ ಕನ್ನಡ ರಂಗಭೂಮಿಗೆ ಲಂಕೇಶ್‌ ನೀಡಿದ ಪುನಶ್ಚೇತನದ ವಿವರ ದಾಖಲಾರ್ಹ. ಆ ಮೂಲಕ ಅವರ ಸಾಂಸ್ಕೃತಿಕ ಕೊಡುಗೆ, ಅದರ ಕಾಣ್ಕೆ ಗಮನಾರ್ಹ.

ಸಾಹಿತ್ಯ ಎಲ್ಲ ಪ್ರಕಾರಗಳಲ್ಲಿ ತಮ್ಮ ಪ್ರತಿಭೆ ಮೆರೆದ ಲಂಕೇಶರು ಈ ಕೆಳಗಿನ ನಾಟಕಗಳನ್ನು ರಚಿಸಿದ್ದಾರೆ. ನನ್ನ ತಂಗಿಗೊಂದು ಗಂಡು ಕೊಡಿ, ಟಿ. ಪ್ರಸನ್ನನ ಗೃಹಸ್ಥಾಶ್ರಮ, ಪೋಲೀಸರಿದ್ದಾರೆ ಎಚ್ಚರಿಕೆ, ಗುಣಮುಖ, ಸಿದ್ಧತೆ, ಗಿಳಿಯು ಪಂಜರದೊಳಿಲ್ಲ, ಕ್ರಾಂತಿ ಬಂತು ಕ್ರಾಂತಿ ತೆರೆಗಳು, ಬಿರುಕು, ಸಂಕ್ರಾಂತಿ.

ನವ್ಯೋತ್ತರ ಪೀಳಿಗೆಗೆ ಹೊರಳಿದರೂ ಕೂಡ ಮತ್ತೆ ನವ್ಯದ ಗೀಳಿಗೆ ಆಳವಾಗಿ ಇಳಿಯುವ ಲಂಕೇಶ್‌ ಒಂದು ಕಾಲಮಾನದ ಮಹತ್ವದ ಲೇಖಕರ ಸಾಲಿನಲ್ಲಿ ನಿಲ್ಲುವ ನಾಟಕಕಾರ. ಲಂಕೇಶರದು ಬಹುಮುಖಿ ವ್ಯಕ್ತಿತ್ವ.

ಲಂಕೇಶ್‌ ಏಳು ಏಕಾಂಕಗಳನ್ನು ಬರೆದಿದ್ದಾರೆ. ಇವನ್ನು ಅವರು ಸಂಕ್ಷಿಪ್ತ ನಾಟಕಗಳು ಎಂದು ಕರೆದಿದ್ದಾರೆ. ಬಿರುಕು, ಸಂಕ್ರಾಂತಿ, ಗುಣಮುಖ ಅವರ ಮುಖ್ಯ ನಾಟಕಗಳು. ದೊರೆ ಈಡಿಪಸ್‌ ಮತ್ತು ಅಂತಿಗೊನೆ ಅವರು ಅನುವಾದಿಸಿದ ನಾಟಕ. ಇವು ಪ್ರದರ್ಶನ ಕೃತಿಗಳಾಗಿಯೂ ಯಶಸ್ಸುಗಳಿಸಿವೆ. ಕನ್ನಡ ರಂಗಭೂಮಿಯ ಮೇಲೆ ಮಹತ್ವದ ಪ್ರಭಾವ ಬೀರಿವೆ. ವೃತ್ತಿ ರಂಗಭೂಮಿ ಸೊರಗಿದ ಕಾಲದಲ್ಲಿ, ಹವ್ಯಾಸಿಗಳು ನಿಷ್ಕರಿಯವಾಗಿದ್ದ ಸಂದರ್ಭದಲ್ಲಿ, ಕಾಲೇಜು ವಿ.ವಿ.ಗಳ ಸಂಘಗಳೂ ಕೂಡ ಸೃಜನಶೀಲತೆಯಿಂದ ದೂರಾಗುತ್ತಿದ್ದ ಸನ್ನಿವೇಶದಲ್ಲಿ ಇಡೀ ರಂಗಭೂಮಿಯೇ (ಕನ್ನಡ) ಚಕಿತಗೊಳ್ಳುವಂತೆ, ಕ್ರಿಯಾಶೀಲವಾಗುವಂತೆ ಬಡಿದೆಬ್ಬಿಸಿದ ನಾಟಕಗಳಿವು. ನಾಟಕಕಾರರಾಗಿ ಅಲ್ಲದೆ ಲಂಕೇಶ್‌ ನಟ, ನಿರ್ದೇಶಕ, ತೀರ್ಪುಗಾರ-ಹೀಗೆ ಭಿನ್ನ ಪಾತ್ರ ನಿರ್ವಹಣೆಯ ಆಯಾಮಗಳನ್ನು ರಂಗಭೂಮಿಗೆ ನೀಡಿದರು.

ಟಿ.ಪ್ರಸನ್ನನ ಗೃಹಸ್ಥಾಶ್ರಮ, ನನ್ನ ತಂಗಿಗೊಂದು ಗಂಡು ಕೊಡಿ, ಕ್ರಾಂತಿ ಬಂತು ಕ್ರಾಂತಿ, ಗಿಳಿಯು ಪಂಜರದೊಳಿಲ್ಲ, ಪೋಲೀಸರಿದ್ದಾರೆ ಎಚ್ಚರಿಕೆ, ಸಿದ್ಧತೆ, ತೆರೆಗಳು ಇವು ಸಂಕ್ಷಿಪ್ತ ನಾಟಕಗಳು. ಕಡಿಮೆ ಪಾತ್ರಗಳು, ಚಿಕ್ಕ-ಹರಿತ ಸಂಭಾಷಣೆ, ಅಸಂಗತ ಸಂವಿಧಾನ, ವಿರುದ್ಧ ಪರಿಣಾಮ, ವಿಚಿತ್ರ ಆವರಣ, ಸರಳ ವೇದಿಕೆಗಳ ವಿಶಿಷ್ಟ ಗುಣಗಳಿಂದ ಕೂಡಿದ, ಪ್ರದರ್ಶನಕ್ಕಾಗಿಯೇ, ಅಭಿನಯಕ್ಕಾಗಿಯೇ ಬರೆದ ನಾಟಕಗಳಿವು. ೭೦-೮೦ರ ದಶಕದ ರಂಗಭೂಮಿ ಚಟುವಟಿಕೆಗಳಿಗೆ ಜೀವಂತಿಕೆ ತಂದ ರಚನೆಗಳಿವು.

ಟಿ. ಪ್ರಸನ್ನನ ಗೃಹಸ್ಥಾಶ್ರಮ

ಮೂಲತಃ ಬಂಡಾಯ ಪ್ರವೃತ್ತಿಯ ಲಂಕೇಶರಿಗೆ ಸಮಾಜದ ಅವನತಿಯನ್ನು ಕುರಿತು ಉಗ್ರ ಕೋಪವಿದ್ದು ಅದೆಲ್ಲವನ್ನು ಶಕ್ತಿಯುತವಾಗಿ ಅಭಿವ್ಯಕ್ತಗೊಳಿಸಲು ನಾಟಕ ಮಾಧ್ಯಮ ಅವರಿಗೆ ಹೇಳಿ ಮಾಡಿಸಿದಂತಿತ್ತು. ಆಧುನಿಕ ನಾಟಕ ಚಳುವಳಿಯ ಪರಿಚಯ-ಪ್ರಭಾವದಿಂದ ಸ್ಪೂರ್ತಿಗೊಂಡು ನಮ್ಮ ಪರಿಸರಕ್ಕೆ ಹೊಂದಿಕೊಳ್ಳುವ ಸಾಮಾಜಿಕ ನಾಟಕಗಳನ್ನು ರಚಿಸಿದ ಅವರು ತಮ್ಮ ನಾಟಕಗಳಲ್ಲಿ ಬಳಸಿರುವ ಹರಿತವಾದ ಬಳಕೆ ಮಾತಿನ ಗದ್ಯಕ್ಕೆ ಕಾವ್ಯದ ಆಯಾಮ ಇರುವುದರಿಂದ ರಂಗಭೂಮಿಯಲ್ಲಿ ಪರಿಣಾಮಕಾರಿಯಾಗಿ ಮೂಡಿಬರುತ್ತವೆ.

ಲಂಕೇಶರ ಏಳು ಪುಟ್ಟ ನಾಟಕಗಳಲ್ಲಿ ಮೊದಲಿನದಾಗಿ ಬರೆದ ನಾಟಕ ಟಿ.ಪ್ರಸನ್ನನ ಗೃಹಸ್ಥಾಶ್ರಮ. ಗೃಹಸ್ಥಾಶ್ರಮ-ಆಶ್ರಮ ವ್ಯವಸ್ಥೆಯಲ್ಲಿ ಒಂದು. ಲಂಕೇಶ್‌ ಅದನ್ನು ಒಂದು ಮೌಲ್ಯ ಎಂದು ಭಾವಿಸದೇ ‘ಸ್ಥಿತಿ’ ಎಂದು ವಿಶ್ಲೇಷಿಸಿದ್ದಾರೆ. ಮಧ್ಯಮ ವರ್ಗದ ಗಂಡ ಹೆಂಡಿರ ಸಂಬಂಧವನ್ನು ವಾಡಿಕೆಯ ದೃಷ್ಟಿಯಿಂದ ನೋಡದ ಲಂಕೇಶರು ‘ಟಿ.ಪ್ರಸನ್ನನ ಗೃಹಸ್ಥಾಶ್ರಮ’ದ ಮೂಲಕ ಎತ್ತುವ ಪ್ರಶ್ನೆಗಳು ಅವರು ಸೂಚಿಸುವ ಪರಿಹಾರಕ್ಕಿಂತ ಮಹತ್ವದವೆಂದು ಹೇಳಬಹುದು. ಬದುಕಿನ ಅಂತರಂಗ ಬಹಿರಂಗಗಳಲ್ಲಿರುವ ದ್ವಂದ್ವವನ್ನು, ಮುಚ್ಚು ಮರೆಯನ್ನು ಆಕ್ರೋಶದಿಂದ ಬಯಲಿಗೆಳೆಯುವ ಈ ನಾಟಕದ ನಾಯಕನ ಕ್ರೌರ್ಯ ಎಣೆಯಿಲ್ಲದ್ದು. ತಮಾಷೆ ವ್ಯಂಗ್ಯಗಳಿಂದ ಕೂಡಿದ ಚುರುಕು ಮಾತುಗಾರಿಕೆಯೇ ಈ ಚಿಕ್ಕ ನಾಟಕದ ಜೀವ ದ್ರವ್ಯವೆನಿಸಿದರೂ ಮಾತುಗಳನ್ನು ಮೀರಿದ ನಾಟಕೀಯ ಪ್ರಸಂಗ, ಸಂದರ್ಭಗಳು ಇನ್ನೂ ಪರಿಣಾಮಕಾರಿಯಾಗಿವೆ. ಸಮಾಜ ಜೀವನವನ್ನು ಪರಿಶುದ್ಧಗೊಳಿಸುವ ಏಕೈಕ ಮಾರ್ಗವೆಂದರೆ, ಎಲ್ಲವನ್ನೂ ನಿಷ್ಠುರ ವಿಮರ್ಶೆಗೆ ಗುರಿಪಡಿಸುವುದು ಎಂಬ ಈ ನಾಟಕದ ನಿಲುವು ಅವರ ಎಲ್ಲ ನಾಟಕಗಳಿಗೂ ಸಾಮಾನ್ಯವಾದದ್ದು.

ಈ ನಾಟಕ ಆರಂಭವಾಗುವುದು ಗೆಳೆಯರೂ, ತರುಣರೂ, ವಿವಾಹಿತರೂ ಆದ ಪ್ರಸನ್ನ, ರಂಗನಾಥರ ಪ್ರವೇಶದಿಂದ. ಪ್ರಸನ್ನ ಜೋರು, ರಂಗನಾಥ ಹಿಂಜರಿಯುವ. ಇಬ್ಬರದೂ ಹೆಂಗಸರ ಕುರಿತು ಸಂದೇಹ ಪ್ರಕೃತಿ. ಪ್ರಸನ್ನದ ದಾಂಪತ್ಯದ ಅತೃಪ್ತಿ, ಅದಕ್ಕೆ ಕಾರಣ. ಅವನು ಅದಕ್ಕೆ ಕಂಡುಕೊಂಡ ಪರಿಹಾರ, ಅವನ ಹೆಂಡತಿಯ ದಿಟ್ಟತನ-ಇವೆಲ್ಲವೂ ಅಪೂರ್ವ ನಾಟಕೀಯತೆ ಪಡೆದಿವೆ.

ಮೇಲ್ನೋಟಕ್ಕೆ ಬಂಡಾಯಗಾರನಂತೆ ಕಾಣುವ ಪ್ರಸನ್ನ ವಾಸ್ತವವಾಗಿ ಮಾನವ ದ್ವೇಶಿ ಸಿನಿಕ. ಲಕ್ಷ್ಮಿಯ ದಿಟ್ಟತನ ಅವಳ ವ್ಯಕ್ತಿತ್ವಕ್ಕೆ ಅರ್ಥ ನೀಡಿದೆ. ಇದು ಸ್ತ್ರೀ ಬದುಕಿನ ಸಾಧ್ಯತೆಯನ್ನು ಸೂಚಿಸುವಂತಿದೆ.

ತಮ್ಮ ಮೊದಲ ನಾಟಕದಲ್ಲಿಯೇ ಲಂಕೇಶರು ಸಾಮಾಜಿಕ ಜ್ವಲಂತ ಸಮಸ್ಯೆಯೊಂದರ ಆಯಾಮದ ಅನಾವರಣಕ್ಕೆ ಯತ್ನಿಸಿ ಸಫಲರಾಗಿದ್ದಾರೆ.

ಈ ನಾಟಕದಲ್ಲಿ ಕಂಡುಬರುವ ದೃಷ್ಟಿಕೋನ ಸಮಾಜ ಸುಧಾರಕನದಲ್ಲ; ಸಮಾಜವನ್ನು ತಟಸ್ಥವಾಗಿ ನೋಡುವ ಪ್ರೇಕ್ಷಕನಲ್ಲಿ ಸಮಾಜದ ವಿರುದ್ಧ ರೊಚ್ಚಿಗೆದ್ದ ದೃಷ್ಟಿಕೋನ. ಇಲ್ಲಿಯ ಮಾತು ಯಾವ ಮುಖವಾಡವನ್ನೂ ನಿರ್ಮಾಣ ಮಾಡುವುದಿಲ್ಲ. ಅದಕ್ಕೆ ವಿರುದ್ಧವಾಗಿ ಮಾತೆಂದರೆ ಮುಖವಾಡಗಳನ್ನು ಕಿತ್ತು ಹಾಕುವ ಶಸ್ತ್ರವಾಗಿದೆ. ವ್ಯಕ್ತಿ ಸಿನಿಕನಾಗಬಹುದು; ಆಕ್ರೋಶವೆಂಬುದು ಅವನ ಬಂಜೆತನವನ್ನು ಮುಚ್ಚುವ ವೇಷವಗಿರಬಹುದು ಎಂಬ ಅರಿವು ಲಂಕೇಶರಿಗಿದೆ.

ಈ ನಾಟಕದಲ್ಲಿ ವ್ಯಕ್ತಿಯನ್ನು ಸಮಾಜದಿಂದ ಬೇರ್ಪಡಿಸಿ ನೋಡುವ ಪ್ರವೃತ್ತಿಯಿದೆ. ವ್ಯಕ್ತಿ ಸಮಾಜ ಇವುಗಳ ಘರ್ಷಣೇಯೇ ಈ ನಾಟಕದ ಜೀವಾಳ. ‘ಟಿ.ಪ್ರಸನ್ನನ ಗೃಹಸ್ಥಾಶ್ರಮ’ವೆಂಬ ಶೀರ್ಷಿಕೆಯೇ ಸಾಂಪ್ರದಾಯಿಕತೆಯನ್ನು ಕೆಣಕುವಂತಿದೆ. ಈ ನಾಟಕದ ನಾಯಕ ಪ್ರಸನ್ನ ರೂಢಿಯ ಅರ್ಥದಲ್ಲಿ ಸದ್ಗೃಹಸ್ಥನೇ ಅಲ್ಲದಿರುವಾಗ ಅವನ ಕೌಟುಂಬಿಕ ಜೀವನವನ್ನು ಗೃಹಸ್ಥಾಶ್ರಮವೆಂದು ಕರೆದಿರುವುದರ ಔಚಿತ್ಯ ವ್ಯಂಗ್ಯದಲ್ಲಿದೆ. ಸಾಮಾಜಿಕ ಹಿನ್ನೆಲೆಯಲ್ಲಿರುವ ಅವರ ಬಹುಪಾಲು ನಾಟಕಗಳ ಕೇಂದ್ರ ವ್ಯಕ್ತಿಗಳೆಲ್ಲ ಕಣ್ಣಿಗೆ ಕಾಣಿಸದ ಗುಪತ್ತ ವೈರಿಯ ವಿರುದ್ಧ ಹೋರಾಡುವಂತವರು. ಇಲ್ಲಿನ ಪ್ರಸನ್ನ ಕೂಡ ಅದೇ ಮಾದರಿಯವನು.

ಈ ನಾಟಕದ ಮೂಲಕ ಅವರು ಅನಾವರಣಗೊಳಿಸುವ ಪಾತ್ರಗಳು ಕೌಟುಂಬಿಕ ಅಸ್ವಸ್ಥತೆಯ ನೆಲೆಯವು. ನಾಯಕ ಪ್ರಸನ್ನ ತನ್ನ ಗೃಹಸ್ಥಾಶ್ರಮದ ಕೊನೆ ದಿನವನ್ನು ಕಾಣಬೇಕೆಂದು ಹಂಬಲಿಸುತ್ತಿರುತ್ತಾನೆ. ತನ್ನ ಹೆಂಡತಿಯ ರೂಪು, ಮಾತು, ಸಂಗೀತ, ನೃತ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಲೇ ಆಕೆಯನ್ನು ಬಿಟ್ಟುಬಿಡಲು ಸೂಕ್ತವಾದ ಮುಹೂರ್ತಕ್ಕಾಗಿ ಕಾಯುತ್ತಿರುತ್ತಾನೆ. ಡಾ. ಶಿವಶಂಕರ್ ನನ್ನು, ಅವನ ಹೆಂಡತಿ ಸುಲೋಚನಳನ್ನು ಫೋನ್‌ ಮಾಡಿ ಕರೆಸಿಕೊಳ್ಳುತ್ತಾನೆ. ಡಾ. ಶಿವಶಂಕರ್ ಗೂ ಪ್ರಸನ್ನನ ಹೆಂಡತಿ ಲಕ್ಷ್ಮಿಗೂ ಪ್ರೇಮ ಬೆಳೆದಿರುವ ಬಗ್ಗೆ ಸೂಚನೆಗಳು ಕಂಡುಬರುತ್ತವೆ. ಪ್ರಸನ್ನನ ಅಸ್ವಸ್ಥತಗೆ ಇದೇ ಕಾರಣ ಎಂಬ ಅಭಿಪ್ರಾಯಕ್ಕೂ ಅವಕಾಶವಿದೆ. ವಿಚಿತ್ರವೆಂದರೆ ನಾಟಕದಲ್ಲಿ ಏನೆಲ್ಲ ಆಗಬಹುದು ಎಂದು ನಿರೀಕ್ಷಿಸಿದ್ದವರಿಗೆ ಏನೂ ಆಗದ ದಿಗ್ಬ್ರಮೆಯ ಅನುಭವ ಆಗುತ್ತದೆ; ಕೊನೆಗೆ; “ಸಾಧ್ಯವಾದಷ್ಟು ದಿನ ಸುಖವಾಗಿ ಸಂಸಾರ ಮಾಡಿ” ಎನ್ನುವ ವಾಕ್ಯದೊಂದಿಗೆ ನಾಟಕ ಮುಕ್ತಾಯವಾಗುತ್ತದೆ.

ಲಂಕೇಶರ ಇತರ ಏಕಾಂಕ ನಾಟಕಗಳಲ್ಲಿನ ನಾಯಕರು ತಮ್ಮ ಸ್ಥಿತಿಗತಿಗಳಿಗೆ ತಾವೇ ಬಂಡೇಳುವವರು. ಬದುಕಿನ ಟೊಳ್ಳುತನವನ್ನು ತಾವೇ ಬೆರಳುಮಾಡಿ ತೋರಿಸುತವವರು. ಇಲ್ಲಿನ ಪಾತ್ರಗಳಲ್ಲಿ ಕೋಪ-ತಾಪಗಳೇ ಪ್ರಧಾನ. ಆದರೆ ಇಲ್ಲಿನ ಪ್ರಸನ್ನನ ಪಾತ್ರ ಕೊಂಚ ಭಿನ್ನ.

ನನ್ನ ತಂಗಿಗೊಂದು ಗಂಡು ಕೊಡಿ

ಒಂದು ಸಾಮಾಜಿಕ ಸಮಸ್ಯೆ ಕ್ರಾಂತಿಯ ಸಾಧ್ಯತೆ ಆದರೆ ಹೇಗೆ ಎಂಬ ನಿಲುವಿನ ಈ ನಾಟಕದ ನಾಯಕ ಜಗನ್ನಾಥ ತನ್ನ ತಂಗಿಯ ಬದುಕನ್ನು ಉತ್ತಮೀಕರಿಸಲು ಹೋರಾಡುವವನಂತೆ ಕಾಣಿಸಿಕೊಂಡು, ತನ್ನ ತಂದೆ-ತಾಯಿ-ರಾಮಣ್ಣ ಮೊದಲಾದವರ ಮುಖವಾಡಗಳನ್ನು, ಟೊಳ್ಳುತನಗಳನ್ನು ಬಯಲಿಗೆಳೆಯುವ ಬಂಡಾಯಗಾರನಂತೆ ಕಂಡು, ಅನಂತರದಲ್ಲಿ ತಂಗಿ ಕಮಲಳ ಮನಸ್ಸಿನ ಧೋರಣೆಯನ್ನು ಗಮನಿಸದೆ, ಗೆಳೆಯ ರಂಗಣ್ಣನಿಗೆ ಅವಳನ್ನು ಮದುವೆ ಮಾಡಲು ಹೋಗಿ ತಂಗಿಯ ಪ್ರತಿಭಟನೆಯನ್ನು ಎದುರಿಸಬೇಕಾಗುತ್ತದೆ.

ಇಲ್ಲಿನ ಜಗನ್ನಾಥ ಮಂತ್ರಿಯ ಮಗ. ತನ್ನಪ್ಪ ಸರ್ವಾಧಿಕಾರಿ ಎಂಬ ಭಾವನೆ ಅವನದು. ತನ್ನ ತಂಗಿಯನ್ನು ವ್ಯವಸ್ಥೆ ವಿರುದ್ಧ ತಯಾರು ಮಾಡುತ್ತಾನೆ. ತಂಗಿಗೆ ಚುಚ್ಚಿಕೊಟ್ಟು, ಬೋಧಿಸಿ, ಬಂಡಾಯಕ್ಕೆ ಸಿದ್ಧಗೊಳಿಸುತ್ತಾನೆ. ತಂಗಿ ಒಪ್ಪುತ್ತಾಳೆ. ಅಪ್ಪ ಅಮ್ಮ ನೋಡಿದ ಗಂಡನ್ನು ಅವಳು ನಿರಾಕರಿಸುತ್ತಾಳೆ. ಕೊನೆಕೊನೆಗೆ ಎಲ್ಲರನ್ನೂ ತಿರಸ್ಕರಿಸುತ್ತಾಳೆ. ಇಲ್ಲಿನ ಜಗನ್ನಾಥ ನ್ಯಾಯದ ಪರ, ವ್ಯವಸ್ಥೆಯ ವಿರೋಧಿ. ಅವನ ವಿರುದ್ಧವೇ ತಂಗಿ ತಿರುಗಿ ಬೀಳುತ್ತಾಳೆ. ಅಣ್ಣ ತತ್ವ ಮಾತ್ರ ಕಲಿಸದೇ, ಮನುಷ್ಯ ಸಂಬಂಧಗಳನ್ನೇ ಕತ್ತರಿಸಿದ ಎಂದು ಆರೋಪಿಸುತ್ತಾಳೆ. ಆ ಮೂಲಕ ನಾಟಕ ಹೋರಾಟಗಾರರು ಹೇಗೆ ಮಾನವೀಯತೆಯ ವಿರೋಧಗಳಾಗಿರುತ್ತಾರೆ ಎಂಬುದನ್ನು ಸೂಚಿಸುತ್ತದೆ.

ಈ ನಾಟಕದಲ್ಲಿ ಆರಂಭದಲ್ಲಿ ಕ್ರಾಂತಿಕಾರಿಯಂತೆ ಕಂಡುಬರುವ ಜಗನ್ನಾಥ ಕ್ರಮೇಣ ತನ್ನ ಸಿನಿಕತನ, ಉಢಾಪೆ, ಹೊಣೆಗೇಡಿತನದತ್ತ ಜಾರುತ್ತಾನೆ. ಕಮಲ ತಿರುಗಿ ಬಿದ್ದಾಗ ಜಗನ್ನಾಥನಿಗೆ ಆಘಾತವಾದಂತೆ ನಾಟಕದ ಕ್ರಿಯೆಗೂ ತಿರುವು ದೊರೆತಿದೆ. ನಾಗರಿಕ ವಿದ್ಯಾವಂತ ಮಾಧ್ಯಮ ವರ್ಗದ ಬದುಕು ಈ ನಾಟಕ (ಲಂಕೇಶರ ಎಲ್ಲ ಏಕಾಂಕಗಳ) ದ ಭಿತ್ತಿ. ಇಲ್ಲಿನ ರಭಸದ, ಆಕ್ರೋಶದ, ಚುಚ್ಚುಮಾತು ಗಮನಾರ್ಹ.

ನಾಟಕದ ಆರಂಭದಲ್ಲಿ ‘ಸರಿ’ ಎನಿಸುವ ಜಗನ್ನಾಥನ ನಿಲುವು ಕೊನೆಕೊನೆಗೆ ‘ತಪ್ಪು’ ಎನಿಸುತ್ತದೆ. ಭಾಷೆ ಮತ್ತು ತಂತ್ರದ ದೃಷ್ಟಿಯಿಂದ ಈ ನಾಟಕ ‘ತೆರೆಗಳು’ ನಾಟಕವನ್ನು ಹೋಲುತ್ತದೆ. ಅಲ್ಲಿನ ‘ಬೇಟೆಯ ತಂತ್ರ’ ಇಲ್ಲಿ ಇನ್ನೊಂದು ರೂಪದಲ್ಲಿ ಸಂವೇದಿಸುತ್ತದೆ. ಭಾಷೆಯ ದೃಷ್ಟಿಯಿಂದಲೂ ಈ ನಾಟಕ ವಿಶಿಷ್ಟ ಎನಿಸುತ್ತದೆ.

ಕ್ರಾಂತಿ ಬಂತು ಕ್ರಾಂತಿ: ಬದಲಾವಣೆ ಪ್ರಗತಿಯ ಸಂಕೇತ. ಆದರೆ ಪ್ರಗತಿಯ ಸ್ವರೂಪ ಹೇಗಿರೆಬೇಕೆಂಬ ಹಿನ್ನೆಲೆಯಲ್ಲಿ ಈ ನಾಟಕವನ್ನು ಲಂಕೇಶ್‌ರು ಬರೆದಿದ್ದಾರೆ. ಅದು ಲಂಕೇಶರ ಬದುಕಿನ ಪರ್ವಕಾಲ. ಬದುಕುವ, ಬರೆಯುವ, ಚಡಪಡಿಸುವ ಕಾಲ. ಆಗಿನ ಅವರ ಮನಃಸ್ಥಿತಿ ಇಲ್ಲಿ ವ್ಯಕ್ತವಾಗಿದೆ. ಹಾಗೆಯೇ ಆಗಿನ ಅವಸರ, ಆಧುನಿಕತೆ, ಗೊಂದಲ ಕೂಡ.

‘ಶುಭ್ರವಾಗಿ ಬಟ್ಟೆ ಹಾಕಿದ, ಚೊಕ್ಕವಾಗಿ ಶೇವ್ ಮಾಡಿಕೊಂಡ ವ್ಯಕ್ತಿಯೊಬ್ಬ ಕುರ್ಚಿಯಿಂದ ಎದ್ದು ಭಾಷಣ ಮಾಡಲು ಮೈಕಿನ ಹತ್ತಿರ ಬರುತ್ತಾನೆ. ಅವನು ಎದ್ದೊಡನೆ ಶುರುವಾದ ರೆಕಾರ್ರೆ‍ಡ್‌ ಚಪ್ಪಾಳೆ ಮೈಕಿನೆದುರು ನಿಂತು ಮಾತಿಗೆ ಆರಂಭಿಸುವ ಹೊತ್ತಿಗೆ ನಿಲ್ಲುತ್ತದೆ. ಈತನ ಭಾಷಣದ ಸಂದರ್ಭದಲ್ಲಿ ಎಲ್ಲೆಲ್ಲಿ ಸೂಚಿತವಾಗಿದೆಯೋ ಅಲ್ಲೆಲ್ಲ ಭಯಂಕರ ರೆಕಾರ್ಡೆಡ್‌ ಚಪ್ಪಾಳೆ’ ಹೀಗೆ ನಾಟಕ ಆರಂಭವಾಗುತ್ತದೆ.

ಈ ನಾಟಕದ ಒಂದು ಉತ್ಕಟ ಕ್ಷಣದಲ್ಲಿ ಕಳ್ಳನಲ್ಲದಿದ್ದರೂ ಸನ್ನಿವೇಶದ ಮಾಯೆಯಿಂದ ಕಳ್ಳನಾಗಿ ಕಂಡ ದಿವಾಕರ ಸುಳ್ಳು ಕ್ರಾಂತಿಕಾರ ಭಗವಾನನಿಗೆ ಕೊಡುವ ಭಾಷಣ ಹೀಗಿದೆ: “ಕೇಳು, ನೀನು ದೊಡ್ಡವನೆಂದು ತಿಳಿದಿದ್ದೀ, ಎಲ್ಲರಿಗೂ ಮೋಸಮಾಡಬಹುದೆಂದು ಲೆಕ್ಕ ಹಾಕಿದ್ದೀ, ಎಲ್ಲ ಕಲ್ಯಾಣ ಗುಣಗಳನ್ನು ಕೂಡಿಸಿಕೊಂಡು ಗೆಲ್ಲಬಹುದಂತ ಮಾಡಿದ್ದಿ. ನೀನು ಆಸ್ಥಾನದಲ್ಲಿದ್ದೆ-ಬಡವರ ಕತೆ ಹೇಳುತ್ತ, ನೀನು ಬಡವರ ಹತ್ತಿರ ಇದ್ದೆ-ಕ್ರಾಂತಿಯ ಕತೆ ಹೇಳುತ್ತ, ಎಲ್ಲ ನಿನ್ನ ಮಾತಿಗೆ ವಸ್ತು. ಎಲ್ಲ ನಿನ್ನ ಪ್ರದರ್ಶನದ ಕತ್ತಲು, ಬೆಳಕು”.

ಅದೇ ಧ್ವನಿಯ, ಪರಿಣಾಮದ ಇನ್ನೊಂದು ರೀತಿ: ‘ನೀನು ಎಲ್ಲ ಕ್ರಾಂತಿಯ ಶತ್ರು. ಮನುಷ್ಯ ಕೋಟಿಯ ಆಜನ್ಮ ವೈರಿ ನೀನು’. ಈ ಭಾಷಣಕ್ಕೆ ಮೊದಲು ಸುಧಾಗೆ ಹೇಳುವ ಮಾತುಗಳು. ‘ಇಲ್ಲಿ ಕೇಳು, ನೀನು ಈತನ ಮೊದಲನೆ ಆಸ್ತಿ. ನಿನಗೆ ಬೇರೆ ಮೈ ಇಲ್ಲ. ಇವನ ಕೊಡೆಯ ಒಂದು ಭಾಗ ನೀನು. ಟೆಲಿಫೋನ್‌ ರಿಸೀವರ್ ಥರ. ಇವನೇ ನಿನ್ನ ದೇಹದ ಬಂಡವಾಳಗಾರ. ಈತ ಇಲ್ಲಿಯ ‘ಕಳ್ಳ’ ಈ ಮಾತುಗಳು ಅದುವರೆಗಿನ ಕ್ರಿಯೆಯಿಂದ ಉದ್ಭವಿಸಿ ಬಂದವಲ್ಲ. ಹಾಗಾಗಿ ಈ ಬಗೆಯ ‘ರಟರಿಕಲ್‌’ ಮಾತುಗಳು ಪಾತ್ರದ ನಿರೂಪಣೆಗೆ ಅರ್ಥಪೂರ್ಣ ಕೊಡುಗೆ ನೀಡಿವೆ.

ನಾಟಕದಲ್ಲಿ ಪ್ರೊ. ಭಗವಾನನ ಕ್ರಾಂತಿಕಾರಕ ಭಾಷಣದಿಂದ ಪ್ರಭಾವಿತನಾದ ನಕ್ಸಲೈಟ್‌ ದಿನಕರ ಭಗವಾನನ ಮನೆ ಪ್ರವೇಶಿಸುತ್ತಾನೆ. ಅದೇ ಸಂದರ್ಭಕ್ಕೆ ಕಳ್ಳ ಮನೆಗೆ ನುಗ್ಗುತ್ತಾನೆ. ಹೀಗಾಗಿ ಸತ್ಯ ಮರೆಮಾಚಿದ ಸ್ಥಿತಿ ಏರ್ಪಡುತ್ತದೆ. ಆಗ ಭಗವಾನನ ಕ್ರಾಂತಿಕಾರಕ ಭಾಷಣ ಹೇಗಿರುತ್ತದೆ ಎಂಬ ತೀಕ್ಷ್ಮ ವಿಮರ್ಶೆಗೆ ಭಗವಾನನನ್ನು ಒಳಪಡಿಸುವುದನ್ನು ಕಾಣುತ್ತೇವೆ.

ಲಂಕೇಶರು ಈ ಸಂದರ್ಭದ ಭಾಷಣದಲ್ಲಿ ಮೈಮರೆತು ಕರಗಿ ಹೋಗುವ, ವಾಸ್ತವವನ್ನು ರಂಜನೀಯವಾಗಿ ಜನರ ಮುಂದಿಟ್ಟು ಚಪ್ಪಾಳೆಗಿಟ್ಟಿಸುವ ಸಿನಿಕ, ಬೂಟಾಟಿಕೆಯ ಅಧ್ಯಾಪಕ ಪಾತ್ರವನ್ನು ಅತ್ಯಂತ ಸಹಜವಾಗಿ ಚಿತ್ರಿಸಿದ್ದಾರೆ. ಪ್ರಾಧ್ಯಾಪಕ ಭಗವಾನನ ಆದರ್ಶ, ಮಾನವೀಯತೆ, ಕ್ರಾಂತಿಕಾರಕ ಧೋರಣೆಗಳು ಭಾಷಣಗಳ ರಾಜ್ಯದಲ್ಲಿಯೇ ಮುಳುಗೇಳುತ್ತಿರುತ್ತವೆ. ದಿನಕರನಿಗೆ ಭಗವಾನ್‌ ಬೌದ್ಧಿಕ ಆಕ್ರಮಣಕಾರಿಯಾಗಿ, ದುರ್ಬಲನಾಗಿ ಕಾಣುತ್ತಾನೆ. “ನೀನು ಒಮ್ಮೆಗೆ ವ್ಯವಸ್ಥೆ ಮತ್ತು ಕ್ರಾಂತಿಕಾರಿ ಎರಡೂ ಆಗಬಲ್ಲೆ” ಎಂಬ ದಿನಕರನ ಮಾತು ಭಗವಾನನ ಭೋಳೆತನವನ್ನು ಬಿಂಬಿಸುತ್ತದೆ.

ಇಲ್ಲಿನ ಪಾತ್ರಗಳು ತಮ್ಮ ಸ್ವಾರ್ಥದಿಂದ ಮುಕ್ತವಾಗಿಲ್ಲ. ಭಗವಾನ್‌ ಆಕರ್ಷಕವಾಗಿ ಮಾತನಾಡಿ ವಿದ್ಯಾರ್ಥಿಗಳ ಮನಗೆದ್ದು ದೊಡ್ಡ ಕ್ರಾಂತಿಕಾರಿಯಂತೆ ಸೋಗುಹಾಕುವ ಸ್ವಾರ್ಥಿ. ಆತನ ಹೆಂಡತಿ ಸುಧಾ ತನ್ನ ಸುಖಭೋಗಾಕಾಂಕ್ಷೆಗಳಿಗೇ ಪ್ರಾಧಾನ್ಯ ನೀಡುವ ಸ್ವಾರ್ಥಿ. ನಕ್ಸಲೈಟ್‌ ದಿನಕರ ಕೊಲೆಮಾಡಿ ತಪ್ಪಿಸಿಕೊಳ್ಳಲು ಭಗವಾನನ ಸಹಾಯಪಡೆದು ಪ್ರಸಂಗವರಿತು ಆತನಿಗೇ ತಿರುಗಿಬೀಳುವ ಸ್ವಾರ್ಥಿ. ಪೋಲೀಸರು ದಿನಕರನ ಕೊಲೆಯನ್ನು ತಾವೇ ಕಂಡೆವೆಂದು ನಗದೀಕರಿಸಿಕೊಳ್ಳುವ ಸ್ವಾರ್ಥಿಗಳು. ಗೆಳೆಯರಾದ ಶಂಕರ, ರಾಮದಾಸರು ತಮ್ಮ ಬಿಯರ್ ಕುಡಿತದ ಒಲವು ಈಡೇರದ್ದಕ್ಕೆ ಬೇಸರಪಟ್ಟುಕೊಳ್ಳುವ ಸ್ವಾರ್ಥಿಗಳು. ಲಂಕೇಶರು ತಮ್ಮ ಸಾಹಿತ್ಯ-ಸಾಮಾಜಿಕ ಪರಿಸರದಲ್ಲಿ ಕಂಡಿರುವುದು; ಕಾಣಿಸಿರುವುದು ಮನಸ್ಸಿನಲ್ಲಿನ ಸ್ವಾರ್ಥ, ಸಣ್ಣತನಗಳನ್ನೇ. ಹೀಗಾಗಿ ಹೊರನೋಟಕ್ಕೆ ಕಾಣುವ ಕ್ರಾಂತಿಕಾರಕ ಆಚರಣೆಗಳೆಲ್ಲ ಕೇವಲ ಸೋಗಲಾಡಿತನದ ವೇಷಗಳು ಎಂಬುದನ್ನು ಅವರು ಧ್ವನಿಸಿದ್ದಾರೆ.

ಕ್ರಾಂತಿಗೆ ಕರೆಕೊಡುವ ಒಬ್ಬ ಜವಾಬ್ದಾರಿಯುತ ಅಧ್ಯಾಪಕನ ಭಾಷಣಕ್ಕೆ ಚಪ್ಪಾಳೆ ತಟ್ಟುವ ಜನ ದಿನಕರನ ಕೊಲೆಯ ಸತ್ಯವನ್ನು ಮರೆಮಾಚಿ, ಈ ದೇಶದಲ್ಲಿ ಯಾವ ಕ್ರಾಂತಿಗೂ ಉಳಿಗಾಲವಿಲ್ಲ, ಇದು ದರಿದ್ರ ದೇಶ ಎಂದು ಭಾಷಣ ಮಾಡಿದಾಗಲೂ ಚಪ್ಪಾಳೆ ತಟ್ಟಿ, ಶಿಳ್ಳು ಹಾಕಿ ಸಂಭ್ರಮಿಸುತ್ತಾರೆ. ನಾಟಕದಲ್ಲಿ ವಿಚಿತ್ರ ತೀರ್ಮಾನಕ್ಕೆ ಬರಲು ಅವಕಾಶವಿದೆ. ನಕ್ಸಲೈಟ್‌ ದಿನಕರ ತನ್ನ ಸಾಮಾಜಿಕ ಸಿಟ್ಟನ್ನು ಕೃತಿಗಿಳಿಸುವ ಪ್ರಯತ್ನದಲ್ಲಿಯೇ ಕೊಲೆಯಾಗುತ್ತಾನೆ. ಕ್ರಾಂತಿಯ ಬಗ್ಗೆ ಮಾತನಾಡುತ್ತಿದ್ದ ಭಗವಾನ್‌ ಬದುಕಿ ಜನಪ್ರಿಯನಾಗುತ್ತಾನೆ. ಭಾಷಣದಿಂದ ಸಮಾಜದಲ್ಲಿ ಬದಲಾವಣೆ ಅಸಾಧ್ಯ, ಒಳಿತೂ ಆಗುವುದಿಲ್ಲ ಎಂಬುದನ್ನು ನಾಟಕಾರರು ಹೇಳಿದಂತೆ ಭಾಸವಾಗುತ್ತದೆ.

ಭಗವಾನ್‌ ಆಗಲಿ, ಕಮಲ ಆಗಲಿ ನೋಡುಗರ ತಿರಸ್ಕಾರಕ್ಕೆ ಗುರಿಯಾಗುವುದಿಲ್ಲ. ಇದು ಕುತೂಹಲದ ಸಂಗತಿ. ಕ್ರಾಂತಿಕಾರರ ಧೈರ್ಯ-ಸ್ಥೈರ್ಯಗಳನ್ನು, ಉದಾತ್ತ ನಡವಳಿಕೆಗಳನ್ನು ಮೆಚ್ಚಿಕೊಳ್ಳುವ ಲಂಕೇಶರಿಗೆ ಕ್ರಾಂತಿ ಹೊಣೆಗೇಡಿತನದ ಸಾಹಸವಲ್ಲ. ಎಲ್ಲ ಕ್ರಾಂತಿಯನ್ನು ಘೋಷಣೆ ಮತ್ತು ತುತ್ತೂರಿಯ ಮಾತುಗಳಲ್ಲಿ ಪರ್ಯವಸಾನಗೊಳಿಸುವ ಅಪ್ರಾಮಾಣಿಕ ಸಾಮಾಜಿಕ ಪರಿಸರದಲ್ಲಿ ಕ್ರಾಂತಿಯ ಮಾತು ವಿಡಂಬನೆಯಂತೆ ತೋರಿಬರುತ್ತದೆ. ಈ ನಾಟಕದ ಕೇಂದ್ರವ್ಯಕ್ತಿಯಾದ ಭಗವಾನನ ವ್ಯಕ್ತಿತ್ವದಲ್ಲಿ ತೋರುವ ವಿರೋಧಾಬಾಸ ಸಮಕಾಲೀನ ಬುದ್ದಿಜೀವಿಗಳ ಹೊಯ್ದಾಟವನ್ನೂ, ನಕ್ಸಲೈಟ‌ ದಿನಕರನಂತವರ ಹುಂಬ ಸಾಹಸಗಳು ಹೊಣೆಗೇಡಿ ತರುಣರನ್ನೂ ಪ್ರತಿನಿಧಿಸುವಂತಿವೆ. ಕಳ್ಳ-ನಕ್ಸಲೈಟ್‌ರ ಮುಖಾಮುಖಿ ಈ ನಾಟಕದ ತರುಣರನ್ನೂ ಪ್ರತಿನಿಧಿಸುವಂತಿವೆ. ಕಳ್ಳ-ನಕ್ಸಲೈಟ್‌ರ ಮುಖಾಮುಖಿ ಈ ನಾಟಕದ ಉತ್ಕಟವಾದ ಭಾಗವಾಗಿದ್ದು, ನಾಟಕದ ತಾತ್ವಿಕತೆಯನ್ನು ವಿವರಿಸುವಲ್ಲಿ ಸಫಲವಾಗಿದೆ. ವ್ಯವಸ್ಥೆಯ ಆಧಾರಸ್ತಂಭವೇ ತಾನೆಂದು ಹೇಳಿಕೊಳ್ಳುವ ವ್ಯಕ್ತಿ ಕಳ್ಳ, ಸಮಾನತೆಯ ಹರಿಕಾರನಾದ ಕ್ರಾಂತಿಕಾರ ಹೊಣೆಗೇಡಿ. ಈ ಮುಖಾಮುಖಿಯ ಮೂಲಕ ಸತ್ಯದ ಅರಿವಾಗುತ್ತದೆ. ವಾಸ್ತವಿಕ ಮತ್ತು ಸಾಂಕೇತಿಕ ಸ್ತರಗಳೆರಡರಲ್ಲೂ ಈ ಪ್ರಸಂಗವನ್ನು ವಿವರಿಸಲು ಸಾಧ್ಯವಿದೆ. ವಿದ್ಯಾವಂತ ಮಧ್ಯಮ ವರ್ಗದ ಅಸಹಾಯಿಕತೆ ಅವರ ಸುಖಾಪೇಕ್ಷಿಯಾದ ಜೀವನ ವಿಧಾನದಲ್ಲಿದೆ ಎಂಬುದನ್ನು ವಿವರಿಸುವಂತಿದೆ. ಭಗವಾನನ ಮನೆಯ ಸುಸಜ್ಜಿತ ವಾತಾವರಣ, ವ್ಯಂಗ್ಯ ಮತ್ತು ವಿಡಂಬನೆಯಲ್ಲಿನ ವಾಚ್ಯತೆಯಿಂದಾಗಿ ಈ ನಾಟಕದ ಆರಂಭ ಮತ್ತು ಮುಕ್ತಾಯ ದೃಶ್ಯಗಳು ಕುತೂಹಲಕಾರಿಯಾಗಿವೆ. ತನ್ನಲ್ಲಿರುವ ಚಕಿತ ಗುಣ ಹಾಗೂ ಚಿಕಿತ್ಸಕ ದೃಷ್ಟಿಕೋನದಿಂದ ಗಮನ ಸೆಳೆದ ಈ ನಾಟಕ “ಚಂಡಶಾಸನ” ಎಂಬ ಹೆಸರಿನಲ್ಲಿ ಸಿನಿಮಾ ಆಗಿದೆ.

ಇದು ಲಂಕೇಶ್‌ ರಚಿಸಿದ ಅಂತಿಮ ಏಕಾಂಕ ನಾಟಕ. ರಾಜಕೀಯ. ಶಿಕ್ಷಣ, ಸಮಾಜ, ವ್ಯಕ್ತಿ, ಕ್ರಾಂತಿಗಳ ಬೆಸುಗೆ, ಬಿರುಕು ಇಲ್ಲಿವೆ. ಪ್ರಭುತ್ವ ಹಿಂಸೆಯನ್ನು ದಮನಿಸುವ ಕ್ರಿಯೆಯಲ್ಲಿ ಅತಿಹಿಂಸೆ ನೀಡುವ ಬಗೆ, ಆ ಪ್ರಕ್ರಿಯೆಯಲ್ಲಿ ಮಾನವ ಜೀವಕ್ಕೆ ಇಲ್ಲವಾಗುವ ಬೆಲೆ ನಾಟಕದಲ್ಲಿ ಧ್ವನಿಸಿವೆ. ವ್ಯಂಗ್ಯ, ಕ್ರೌರ್ಯ ಹದವಾಗಿ ಬೆರೆತ ನಾಟಕವಿದು.

ಗಿಳಿಯು ಪಂಜರದೊಳಿಲ್ಲ

ದಾಸರ ಈ ಸಾಲು ಧ್ವನಿಪೂರ್ಣವಾಗಿ ವಸ್ತುವಿನ ರೂಪದಲ್ಲಿ ವ್ಯಂಜಿತವಾಗಿರುವ ಈ ನಾಟಕದಲ್ಲಿ, ಹಜಾಮ ಸಹಾಯ ಕೇಳಲು ಬಂದಾಗ, ನಾಯಕ ತನ್ನ ಹೆಂಡತಿಯ ಮೂಲಕಲ ತಾನು ಮನೆಯಲ್ಲಿದ್ದೂ ಇಲ್ಲ ಎಂದು ಸುಳ್ಳು ಹೇಳಿಸುತ್ತಾನೆ. ಆದರೆ ಆತನ ಮಗಳೇ ಹೇಳುತ್ತಾಳೆ: “ಅಪ್ಪ ಒಳಗೇ ಇದ್ದಾನೆ” ಎಂದು. ಇದು ಹಜಾಮ ಮತ್ತು ನಾಯಕ ಇಬ್ಬರಿಗೂ ಕೇಳಿಸುತ್ತದೆ. ಈ ರೋಗ ಹಣದಿಂದ ಹುಟ್ಟಿದ್ದು. ಹಣ ಕೊಡಬೇಕೆನ್ನುವ ಯೋಚನೆ, ತನಗೇ ಖರ್ಚು ಮಾಡಿಕೊಳ್ಳುವ ಹಂಬಲ- ಈ ಎರಡರ ತಿಕ್ಕಾಟದಲ್ಲಿ ಅಂತಿಮವಾಗಿ ಹಣ ಕೊಡದಿರುವ ತೀರ್ಮಾನಕ್ಕೆ ಬರುತ್ತಾನೆ. ಈ ಚಿತ್ರಣ ಹಣ ಸರಿದೂಗಿಸುವ ಸ್ಥಿತಿಯಾಗಿ ಬಂದಿದ್ದರೂ, ನಾಯಕನ ನೈತಿಕ ಪ್ರಜ್ಞೆ ದ್ವಂದ್ವಕ್ಕೆ ಬಿದ್ದು ಅಸ್ವಸ್ಥಗೊಳ್ಳುವುದನ್ನೂ ಕಾಣುತ್ತೇವೆ. ಈ ಮೂಲಕ ಲಂಕೇಶರು ಹಣವುಳ್ಳವನೂ ಸಂತೋಷವಾಗಿರಲಾರನೆಂದು ಹೇಳುತ್ತಾರೆ.

ಸಮಾಜದಲ್ಲಿ ವ್ಯಕ್ತಿ ಸಂಬಂಧಗಳನ್ನು ನಿರ್ಣಯಿಸುವ ಆರ್ಥಿಕ ಕಾರಣಗಳನ್ನು ಈ ನಾಟಕದಲ್ಲಿ ವಸ್ತುನಿಷ್ಟವಾಗಿ ಅನ್ವೇಷಣೆಗೆ ಗುರಿಪಡಿಸಲಾಗಿದೆ. ಹಣದ ಕಾರಣದಿಂದಾಗಿ ಈ ಮಧ್ಯಮ ವರ್ಗದ ಜನ ಎಂತ ಅಪನಂಬಿಕೆಗಳಿಗೆ ಬಲಿಯಾಗಬಹುದು. ಸಣ್ಣವರಾಗಬಹುದು ಎಂಬ ಸಂಗತಿಯನ್ನು ಸರಳ ಸನ್ನಿವೇಶವೊಂದರ ಮೂಲಕ ದೃಷ್ಟಾಂತವೆಂಬಂತೆ ನಿರ್ವಚಿಸಲಾಗಿದೆ.

ಕೌಟುಂಬಿಕ ವ್ಯವಸ್ಥೆ ಮನುಷ್ಯನ ವರ್ತನೆಯನ್ನು ಕಟ್ಟಿಹಾಕಿರುವ ಬಗೆ ಈ ನಾಟಕದ ಸ್ಥಾಯಿ. ಉದಾರತೆ, ಮಾನವೀಯತೆ, ನಂಬಿಕೆಗಳ ಜಾಗದಲ್ಲಿ ಅನುಮಾನ, ಅಪನಂಬಿಕೆ, ಅಮಾನವೀಯತೆ, ಅಸಹಾಯಕತೆ ಸುಳಿದು ಮನುಷ್ಯ ತನ್ನ ವರ್ತುಲದಲ್ಲಿಯೇ ಸಣ್ಣವನಾಗಿಬಿಡುವ ಚಿತ್ರಣ. ದುಡ್ಡು ಮತ್ತು ಸಂಬಂಧಗಳ ಆಯಾಮ ಎಲ್ಲ ಕಾಲದ್ದು!

ಈ ಮತ್ತು ಇಂತ ನಾಟಕಗಳ ಮೂಲಕ ಜಡ್ಡುಗಟ್ಟಿದ್ದ ರಂಗಭೂಮಿಗೆ ಹೊಸತನದ ಲವಲವಿಕೆ ತುಂಬಿದವರು ಲಂಕೇಶ್‌. ಟಿ.ಪ್ರಸನ್ನನ ಗೃಹಸ್ಥಾಶ್ರಮ, ನನ್ನ ತಂಗಿಗೊಂದು ಗಂಡು ಕೊಡಿ ನಾಟಕಗಳ ಮೂಲಕ ಸೊರಗಿದ್ದ ರಂಗಭೂಮಿಗೆ ಹೊಸ ಚೈತನ್ಯ ತಂದದ್ದೇ ಅಲ್ಲದೆ ನಾಟಕಪ್ರಿಯರನ್ನು ಹೊಸ ಅಭಿರುಚಿಗೆ ಸಿದ್ದಗೊಳಿಸಿದವರು ಲಂಕೇಶ್‌.

ಪ್ರತಿಭಟನಾ ರಂಗಭೂಮಿಯನ್ನು ಅತ್ಯಂತ ಯಶಸ್ವಿಯಾಗಿ ಕನ್ನಡದಲ್ಲಿ ತಂದವರು ಲಂಕೇಶ್‌. ವರ್ತಮಾನದ ಕ್ಷಣಕ್ಕೆ ತೀವ್ರವಾಗಿ ಸ್ಪಂದಿಸುವ ಸಾಹಿತ್ಯ ಪ್ರಜ್ಞೆಯುಳ್ಳ ಲಂಕೇಶರಿಗೆ ನಾಗರಿಕ, ಸುಶಿಕ್ಷಿತ, ಮಧ್ಯಮ ವರ್ಗದವರ ಬದುಕಿನ ಸಮಕಾಲೀನ ವಾಸ್ತವತೆಗೆ, ಸಾಂಪ್ರದಾಯಿಕ-ಸಾಮಾಜಿಕ ಸಮಸ್ಯೆಗಳಿಗೆ, ವೈಯಕ್ತಿಕ ನೈತಿಕತೆಯ ವಿಶ್ಲೇಷಣೆಗೆ ಈ ಮಾದರಿಯ ನಾಟಕಗಳು ಹೆಚ್ಚು ಉಪಯುಕ್ತವಾಗಿ ಕಂಡವು. ಈ ಬಗೆಯ ನಾಟಕಗಳನ್ನು ಬರೆದದ್ದರಿಂದ ಲಂಕೇಶರಿಗೆ ಕುಪಿತ ಯುವಕನ ಇಮೇಜು ಪ್ರಾಪ್ತವಾಯಿತು.