ಪೋಲೀಸರಿದ್ದಾರೆ ಎಚ್ಚರಿಕೆ

‘ಅಸ್ವಸ್ಥತೆ’ಯ ಬಹುಮುಖತೆಯನ್ನು ತಮ್ಮ ಸಾಹಿತ್ಯದಲ್ಲಿ ರೂಪಕದಂತೆ ಬಳಸಿದ ಲಂಕೇಶರು ಈ ನಾಟಕದಲ್ಲಿ ವ್ಯಕ್ತಿಯ ಅಸಹಾಯಕತೆಯ ಆಕ್ರಂದನವನ್ನು ತೀವ್ರವಾಗಿ ಚಿತ್ರಿಸಿದ್ದಾರೆ. “ನಮ್ಮ ಉತ್ತಮ ನಾಟಕಕಾರರಲ್ಲಿ ಒಬ್ಬರಾದ ಸಂಸಾರ ಬದುಕು ವಿಚಿತ್ರವಾದದ್ದು. ಅವರಿಗೆ ಇತ್ತೆಂದು ಹೇಳುವ Persecution complexನ ಒಂದು ರೀತಿಯ ಶೋಧನೆ ಈ ನಾಟಕದ್ದು. ಆದರೆ ವಸ್ತು ಪೂರ್ಣಪ್ರಮಾಣದ ನಾಟಕವನ್ನು ತುಂಬಿ ಹೊರಚೆಲ್ಲುವಷ್ಟು ದೊಡ್ಡದು. ಎಂದಿನಂತೆ ನನ್ನ ಆತುರ ಅವರ ಕೊನೆಯ ದಿನಗಳ ಬಗ್ಗೆ ಮಾತ್ರ ಯೋಚಿಸಲು ನನ್ನನ್ನು ಬಿಟ್ಟಿದೆ. ಇದು ಸಂಸ ಅವರ ಮನಸ್ಥಿತಿ ಎಂಬುದಕ್ಕೆ ಮಾತ್ರ ನನ್ನ ಕುತೂಹಲವಲ್ಲ. ಎಲ್ಲರ ಆಳದ ನೋವು ಎಂಬ ಕಾರಣಕ್ಕೆ ಇವರ ಆಶ್ಚರ್ಯ”. (4). ಎಂಬ ಲಂಕೇಶರ ಮಾತು ನಾಟಕದ ಭೂಮಿಕೆಯನ್ನು ಸೂಚಿಸುತ್ತವೆ.

“ನಾಟಕ ಕತ್ತಲು ಬೆಳಕಿನಲ್ಲಿ ಮನವು ಆಳಕ್ಕೆ ಕೊರೆದು ಹೋದ ಹಾಗೆ, ನಮ್ಮೊಳಗಿನ ಸಂಭಾಷಣೆಯ ಹಾಗೆ ನಡೆದರೆ ಒಳ್ಳೆಯದು. ಅಂದರೆ ಇಲ್ಲಿ ಇರಬಹುದಾದ ಹಾಸ್ಯ ಕೆಡಬೇಕಾಗಿಲ್ಲ, ಜಡವಾಗಬೇಕಾಗಿಲ್ಲ. ದುರಂತವನ್ನು, ರುದ್ರಮೂರ್ತಿಯ ಪ್ರಶ್ನೆಗಳನ್ನು ಆ ಹಾಸ್ಯ ಹೆಚ್ಚು ಖಚಿತಗೊಳಿಸಬೇಕು. ಸಂಭಾವ್ಯಗೊಳಿಸಬೇಕು.” ಎಂಬ ನಾಟಕಕಾರರ ಟಿಪ್ಪಣಿ ಗಮನಾರ್ಹ.

ನಾಟಕ ಆರಂಭಗೊಳ್ಳುವುದು ಸರಳವಾದ ಕೊಠಡಿಯ ‘ನಾಲ್ಕು ಸ್ಟೂಲು’ ದೃಶ್ಯದಿಂದ. ನಾಲ್ಕಾರು ಬಟ್ಟೆಗಳನ್ನು ಒಂದು ಕಡೆ ನೇತು ಹಾಕಿದೆ. ರಂಗದ ಹಿಂಬದಿಗೆ ಮಧ್ಯದಲ್ಲಿ ಬಂದು ಬರೆಯುವ ಮಣೆ, ನಾಲ್ಕಾರು ಪುಸ್ತಕಗಳು. ಅದರಿಂದ ಬಲಕ್ಕೆ ಒಂದು ಸರಳವಾದ ಚಿಕ್ಕ ಮೇಜು. ಅದರ ಮೇಲೆ ನೀರಿನ ಹೂಜಿ. ರೂಮಿನ ಬೆಳಕು ಮಂದವಾಗಿದೆ. ಉಸಿರು ಕಟ್ಟಿಸುವ ವಾತಾವರಣ. ರಂಗದ ಎಡಕ್ಕೆ ಒಂದೇ ಬಾಗಿಲಿದ್ದು ಅದು ಪ್ರೇಕ್ಷಕರಿಗೆ ಕಾಣುವಂತಿರಬೇಕು ಎಂಬ ಈ ಪರಿಸರ ನಾಟಕದ ಪ್ರವೇಶಕ್ಕೆ ಸೂಕ್ತ ವೇದಿಕೆ ಕಲ್ಪಿಸಿದೆ.

ತೆರೆ ಎದ್ದಾಗ ವ್ಯಕ್ತಿಯೊಬ್ಬ ನಿಶ್ಚಲನಾಗಿ ಗಲ್ಲಕ್ಕೆ ಕೈಕೊಟ್ಟು ಕೂತಿದ್ದಾನೆ. ಬಾಗಿಲು ತಟ್ಟುವ ಸದ್ದು.. ಮತ್ತೆ ಮತ್ತೆ ಕ್ರಮೇಣ ಜೋರಾಗುವ ಬಾಗಿಲು ಕುಟ್ಟುವ ಸದ್ದು. ವ್ಯಕ್ತಿ ಮೆಲ್ಲಗೆ ಕತ್ತೆತ್ತಿ ಬಾಗಿಲನ್ನು ನೋಡುತ್ತಾನೆ; ಹೀಗೆ ನಾಟಕ ಆರಂಭಗೊಳ್ಳುತ್ತದೆ.

ಈ ನಾಟಕದ ರುದ್ರಮೂರ್ತಿಗೆ ಪೋಲೀಸರೊಂದಿಗೆ ಎಂದೂ ಮುಖಾಮುಖಿಯಾಗಿಲ್ಲವಾದರೂ ಅವರು ತನ್ನ ವೈರಿಗಳೆಂದು ತಿಳಿದಿದ್ದಾನೆ. ಹೀಗೆ ಕಾಣದ ಕೈಯೊಂದು ಮನುಷ್ಯನ ಬದುಕನ್ನು ನಿರರ್ಥಕಗೊಳಿಸಿ ಅವನ ಹೋರಾಟವನ್ನು ನಗೆ ಪಾಟಲಾಗಿಸುವ ಅಸಂಬದ್ಧ ಚಿತ್ರವೊಂದು ಇಲ್ಲಿ ಗೋಚರಿಸುತ್ತದೆ. ಹೀಗೆ ತಪ್ಪಿಸಿ ಕೊಳ್ಳಲಾರದ ಕ್ರೂರ ಪರಿಸರವೊಂದರಲ್ಲಿ ಬಂಧನಕ್ಕೊಳಗಾಗಿರುವ ವ್ಯಕ್ತಿಯ ಏಕಾಕಿತನವನ್ನು ಲಂಕೇಶರ ಅನೇಕ ನಾಟಕಗಳಲ್ಲಿ ಕಾಣಬಹುದು.

ಈ ನಾಟಕದಲ್ಲಿ ವ್ಯವಸ್ಥೆಯ ಕ್ರೂರ ಹಿಡಿತಕ್ಕೆ ಸಿಕ್ಕಿ, ವ್ಯಕ್ತಿ ಸ್ವಾತಂತ್ಯ್ರವನ್ನು ಕಳೆದುಕೊಂಡ ದಾರುಣ ಸ್ಥಿತಿಯೊಂದನ್ನು ಕಾಣಬಹುದು. ವ್ಯಕ್ತಿಯ ಅಂತರಂಗವನ್ನು ತನ್ನ ಹಿಡಿತಕ್ಕೆ ತೆಗೆದುಕೊಳ್ಳಬಯಸುವ ವ್ಯವಸ್ಥೆಯ ಕ್ರೌರ್ಯದಿಂದಾಗಿ ನೆಲೆ ತಪ್ಪಿದ ಮನುಷ್ಯನ ತೊಳಲಾಟವನ್ನೇ ಇಲ್ಲಿನ ರುದ್ರಮೂರ್ತಿ ಪ್ರತಿನಿಧಿಸುತ್ತಾನೆ.

ಏಕ ಪ್ರಕಾರತಾವಾದಿಗಳಾದ ನಮ್ಮ ಸಮಾಜದ ಜನ, ಭಿನ್ನ ರೀತಿಯವರನ್ನು ಸಹಿಸುವುದಿಲ್ಲ. ತನ್ನ ಪಾಡಿಗೆ ಅವರನ್ನು ಬಿಡದೆ, ನಿರಂತರವಾಗಿ ಪೀಡಿಸುವ ಹಿತ ಶತ್ರುಗಳು ನಿಜವಾಗಿಯೂ ಭಯಂಕರವಾಗಿರುತ್ತಾರೆ.

ಈ ನಾಟಕದಲ್ಲಿ ಒಂದು ವಿಚಿತ್ರ ಮಾನಸಿಕ ಸಮಸ್ಯೆಯನ್ನು ಲಂಕೇಶರು ಚಿತ್ರಿಸಿದ್ದಾರೆ. ನಾಟಕದ ನಾಯಕನನ್ನು ಪೋಲೀಸರು ಬೆನ್ನಟ್ಟಿದ್ದಾರೆ ಎಂಬ ಕಲ್ಪಿತ ಅಸ್ವಸ್ಥತೆ ಇಲ್ಲಿ ಏರ್ಪಟ್ಟಿದೆ. ರುದ್ರಮೂರ್ತಿ ಸಮಾಜದ ಹುಳುಕುಗಳನ್ನು ಬರವಣಿಗೆಯಲ್ಲಿ ಮೂಡಿಸಿ, ಸರ್ಕಾರ, ವ್ಯವಸ್ಥೆ, ಸಮಾಜಗಳ ಅಂತರಾವಲೋಕನ ಮಾಡಿ, ತನ್ನ ಸೃಜನ ಕ್ರಿಯೆಯಲ್ಲಿ ಪರಿಣಾಮಕಾರಿಯಾಗಿ ಚಿತ್ರಿಸಬಲ್ಲ ಪ್ರತಿಭಾವಂತ ನಾಟಕಕಾರ. ವ್ಯವಸ್ಥೆಯ ಕರಾಳ ಮುಖದ ದರ್ಶನದಿಂದಾಗಿ ಸಮಾಜದಿಂದ ದೂರ ಉಳಿಯಲು ಆತ ಪ್ರಯತ್ನ ಪೂರ್ವಕ ಕಸರತ್ತು ನಡೆಸುತ್ತಾನೆ. ಇಂಥ ಸಂದರ್ಭದಲ್ಲಿ ಪೊಲೀಸರು ಆತನ ಬೆನ್ನು ಹತ್ತಿದ್ದಾರೆ. ಇವನಿರುವ ಕಡೆಯಲ್ಲಿ ಶೋಧನೆ ನಡೆಸಿದ್ದಾರೆ. ಅವರಿಗೆ ರುದ್ರಮೂರ್ತಿ ಆತ್ಮಹತ್ಯೆಗೆ ಪ್ರಯತ್ನಪಟ್ಟಿದ್ದು ತಿಳಿದಿದೆ. ಆತನ ಶಕ್ತಿ-ದೌರ್ಬಲ್ಯಗಳೆರಡನ್ನೂ ಅರಿತಿರುವ ರಂಗಣ್ಣ ಮತ್ತು ಚಂದ್ರಶೇಖರ್ ಆತನ ದೌರ್ಬಲ್ಯ ಕಳೆಯಲು ಯತ್ನಿಸುವುದೇ ಹಿಂಸೆಗಿಳಿದಂತೆ ಭಾಸವಾಗುತ್ತದೆ. ರುದ್ರಮೂರ್ತಿಯಂತ ಒಡೆದ ವ್ಯಕ್ತಿತ್ವದ ಮನೋರೋಗಿಗಳು ಹುಟ್ಟಲು ಕಾರಣ ಸಾಮಾಜಿಕ ಪರಿಸರದಲ್ಲಿದೆ.

ವ್ಯಕ್ತಿಯ ಆಲೋಚನೆಗಳ ಮೇಲಿನ ಧಾಳಿ, ವ್ಯವಸ್ಥೆಯ ಅಮಾನುಷ ಕ್ರೌರ್ಯ, ಮನುಷ್ಯನ ತೊಳಲಾಟ ಇಲ್ಲಿದೆ. ಲಂಕೇಶರು ಹೇಳುವಂತೆ ‘ಇದು ಎಲ್ಲರ ಆಳದ ನೋವು’. ಮೂರೇ ಮೂರು ಪಾತ್ರ ಈ ನಾಟಕದ ವೈಶಿಷ್ಟ. ರುದ್ರಮುನಿ, ಅವನ ಅಣ್ಣ, ಹಿತೈಷಿ.

ಪ್ರತಿಭಾವಂತ ನಾಟಕಕಾರರಾಗಿದ್ದ ಸಂಸರ ಬದುಕಿನ ಸ್ಥೂಲ ಹಿನ್ನೆಲೆ, ಕನ್ನಡನಾಡಿನ ಸಂಸ್ಕೃತಿಯಲ್ಲಿ ಸಂಸರ ನಾಟಕತಗಳ ವಸ್ತುವಿಗಿರುವ ಮಹತ್ವ ಮುಂತಾದವನ್ನು ವೈಚಾರಿಕವಾಗಿ ಈ ನಾಟಕದ ಮೂಲಕ ಚರ್ಚಿಸಲಾಗಿದೆ.

ವ್ಯಕ್ತಿಯ ಮನದಾಳದ ಪಾತಳಿಗೆ ಪಾತಾಳಗರಡಿ ಬಿಟ್ಟು ಶೋಧಿಸುವ ಕಾರ್ಯವನ್ನು ವ್ಯವಸ್ಥೆ ನಿರಂತರವಾಗಿ ಮಾಡುತ್ತಿರುತ್ತದೆ. ಆ ಶೋಧನೆ ವಿಕೃತವೂ, ವಿಧ್ವಂಸಕವೂ ಆಗಿದ್ದು ಸಾವಿಗೆ ಶರಣಾಗಿಸುವಷ್ಟು ಕರಾಳವಾಗಿರುತ್ತದೆ. ಅದರ ವಿರುದ್ಧ ನಾವು ಸದಾ ಎಚ್ಚರವಾಗಿರಬೇಕು. ಎಚ್ಚರ ತಪ್ಪಿದರೆ ರುದ್ರಮೂರ್ತಿಯಂತೆ ಸ್ವಧ್ವಂಸಕ ಕಾರ್ಯಕ್ಕಿಳಿಯಬೇಕಾಗುತ್ತದೆ. ಬಾಹ್ಯ ಒತ್ತಡ ಹೆಚ್ಚಿದಷ್ಟೂ ವ್ಯಕ್ತಿ ಅಂತರ್ ಮುಖಿಯಾಗಿ ಹೋಗುತ್ತ ಕೊನೆಗೆ ವ್ಯಕ್ತಿಸ್ವಾತಂತ್ಯ್ರವೇ ಬಿಕ್ಕಟ್ಟಿನಲ್ಲಿ ಉಳಿಯುತ್ತದೆ ಎಂಬ ಲಂಕೇಶರ ಚಿಂತನೆ ಈ ನಾಟಕದಲ್ಲಿ ಕಲಾತ್ಮಕವಾಗಿ, ಪರಿಣಾಮಕಾರಿಯಾಗಿ, ಅಪೂರ್ವ ನಾಟಕೀಯತೆಯಲ್ಲಿ ಮಂಡಿತವಾಗಿದೆ.

ಸಿದ್ಧತೆ

ಪಯಣ ಅನೇಕ ಸಾಹಿತಿಗಳನ್ನು ಕಾಡಿದೆ. ಅಂತ ಪಯಣದ ಸಿದ್ಧತೆಯ ಆಯಾಮ ಈ ನಾಟಕದಲ್ಲಿದೆ. ಸಿದ್ಧತೆ ನಾಟಕದ ನಾಯಕ ಅಮೆರಿಕಾಕ್ಕೆ ಹೋಗಬೇಕೆನ್ನುವ ಆಶಯದಿಂದ ಪರಿತಪಿಸುತ್ತಾನೆ. ಈ ಆಶೆ ಅವನ ಅಸ್ವಸ್ಥತೆಗೆ ಕಾರಣವಾಗುತ್ತದೆ. ಆದರೆ ಅವನು ಕೊನೆಗೂ ಹೋಗುವುದೇ ಇಲ್ಲ. ಅವನು ಹೊರಡುವುದಕ್ಕೆ ಅನೇಕ ಸಣ್ಣ-ಪುಟ್ಟ ತೊಂದರೆಗಳು ಇದ್ದ ಹಾಗೆ ಕಂಡುಬರುತ್ತದೆ. ಆತ ಪಯಣಕ್ಕೆ ‘ಸಿದ್ಧತ ಎ’ ಮಾಡಿಕೊಂಡವನಂತೆ ಕಾಣುತ್ತಾನೆ. ಆದರೆ ವೆಯ್ಟಿಂಗ್‌ ಫಾರ್ ಗೋಡೋ ನಾಟಕದಂತೆ ಕೊನೆಯವರೆಗೂ ಹೋಗುವುದೇ ಇಲ್ಲ. ಯಾರೋ ಬರುತ್ತಾರೆ ಅನ್ನುತ್ತಾನೆ, ಅವರು ಬರುವುದೇ ಇಲ್ಲ. ಗಂಡ-ಹೆಂಡತಿ ಮತ್ತು ಮಗನ ನಡುವೆ ವಿಚಿತ್ರ ಕ್ರೌರ್ಯ ತಲೆ ಎತ್ತಿದೆ. ಕೊನೆಗೆ ನಾಯಕ ಸಾಯುತ್ತಾನೆ. ಇದು ಮಧ್ಯಮ ವರ್ಗದ ಆಕಾಂಕ್ಷೆಗಳನ್ನು, ಕೈಗೆಟುಕದ ಆಸೆಗಳನ್ನು, ತಲೆಬಿಸಿಗಳನ್ನು ಹೇಳುತ್ತದೆ.

ರಂಗಣ್ಣ ಕಲಾವಿದ, ಕನಸುಗಾರ. ಅವನ ನಿರಾಸೆ, ದುರಂತ ನಾಟಕದ ಕೇಂದ್ರ ಸ್ವಹಿಂಸಾ ಪೀಡನೆಗೆ ಬಲಿಯಾಗಿರುವ ರಂಗಣ್ಣ ವಾಸ್ತವದ ಕ್ರೂರ ಹಿಡಿತನಕ್ಕೆ ಬಲಿಯಾಗುತ್ತಾನೆ. ಕಳೆದುಕೊಳ್ಳುವುದು, ನಿರರ್ಥಕ ಹೋರಾಟ, ಬದುಕಿನ ಬೇಸರ, ಇಲ್ಲವಾದ ಸಂವೇದನೆ, ಮುರಿದ ಸಂಬಂಧ, ದೂರಾದ ಸಂಪರ್ಕ ಒಟ್ಟಾರೆ ರಂಗಣ್ಣನ ದುರಂತ ನೋವಿಗೆ ಕಾರಣವಾಗುತ್ತವೆ.

ನಾಟಕದ ನಾಯಕ ರಂಗಣ್ಣ ಮಾಡಿಕೊಳ್ಳುವ ಪಯಣದ ‘ಸಿದ್ಧತೆ’- ಆತನ ದುಗುಡ, ಆತುರ, ನಿರೀಕ್ಷೆ, ನೆನಪು, ನಿರಾಶೆ, ಕನಸು, ತುರ್ತು, ತೀವ್ರತೆಗಳೆಲ್ಲವೂ- ಸಾವಿನ ಸಿದ್ಧತೆಗಳಾಗಿ, ವಿಷಾದದ ನೆಲೆಯಲ್ಲಿ ನಿಲ್ಲುತ್ತವೆ. ರಂಗಣ್ಣನ ಭೂತದ ಅನುಭವವೆಲ್ಲ ವರ್ತಮಾನವನ್ನು ತಿಂದು ಹಾಕುತ್ತದೆ. ಹೋಗಬೇಕಾದ ಕಡೆ ಹೋಗಲಾರದೆ, ಮಾಡಬೇಕಾದ್ದನ್ನು ಮಾಡಲಾಗದೆ, ತನ್ನ ಕುಟುಂಬದಲ್ಲಿ ಯಾರೊಂದಿಗೂ ಪ್ರೀತಿಯಿಂದಿರಲು ಸಾಧ್ಯವಾಗದೆ, ಎಲ್ಲಿಗೋ ಹೋಗಬೇಕು ಎಂದು ಯಾರನ್ನೋ ಕಾಯುತ್ತಿದ್ದಾನೆ. ಎಲ್ಲವೂ ನಿರರ್ಥಕ ಕಾಯುವಿಕೆಯಾಗುತ್ತದೆ.

ರಂಗಪ್ಪ ತೋರುವ ಅಸಹನೆ-ಅಸಮಾಧಾನಗಳು ನಾಟಕದುದ್ದಕ್ಕೂ ಇವೆ. ಅವನ ಕುಟುಂಬದ ಸದಸ್ಯರು (ಹೆಂಡತಿ, ಮಗ) ಪರಸ್ಪರ ಅರ್ಥಮಾಡಿಕೊಂಡು ಬದುಕುವಷ್ಟು ಆತ್ಮೀಯ ಸಂಬಂಧವನ್ನೂ ಹೊಂದಿದವರಾಗಿಲ್ಲ. ಅವರ ಸಾಂಸರಿಕ ಮತ್ತು ಸಾಮಾಜಿಕ ಸಂಬಂಧಗಳಲ್ಲಿ ಒಂದು ಆರೋಗ್ಯಕರ ಮನೋಧರ್ಮ ಇಲ್ಲ. ಒಂದು ಅಸ್ವಸ್ಥ ಕುಟುಂಬದ ಚಿತ್ರಣ ಇಲ್ಲಿದೆ. ಈ ಅಸ್ವಸ್ಥತೆ ಎಷ್ಟೊಂದು ಅಸ್ವಾಭಾವಿಕ ಎಂದರೆ ನಾಲ್ಕು ಪೆಟ್ಟಿಗೆಗಳ ಜೊತೆಯಲ್ಲಿ ಐದನೆಯ ಜಡವಸ್ತು ರಂಗಣ್ಣನಾಗುತ್ತಾನೆ. ಆ ಪೆಟ್ಟಿಗೆಯಲ್ಲಿ ತುಂಬಿರುವುದು ಸಾಮಾನ್ಯ ವಸ್ತುಗಳ ಜೊತೆಗೆ ಕತ್ತಿ, ಕಿರೀಟ, ಡ್ಯಾನ್ಸ್‌ ಬಟ್ಟೆ ಇತ್ಯಾದಿಗಳು. ಆತನ ಸ್ಥಿತಿಗತಿಗಳು ಈ ಬಗೆಯವೆ. ಎಲ್ಲವೂ ಅವ್ಯವಸ್ಥೆ. ಹೀಗಾಗತಿ ಎಲ್ಲ ಸಿದ್ಧತೆಗಳೂ ಕೊನೆ ಮುಟ್ಟುವುದು ರಂಗಣ್ಣನ ಸಾವಿನೊಂದಿಗೆ. ಕೊನೆಗೆ ಇವೆಲ್ಲ ರಂಗಣ್ಣ ಸಾವಿಗೆ ಮಾಡಿಕೊಂಡ ಸಿದ್ಧತೆಗಳಂತೆ ಕಾಣಿಸತೊಡಗುತ್ತವೆ.

ತೆರೆಗಳು

ಇದು ಉಳಿದ ಆರು ಚಿಕ್ಕ ನಾಟಕಗಳಿಗೆ ಹೋಲಿಸಿದಲ್ಲಿ ಗಾತ್ರ, ಸೂತ್ರಗಳಲ್ಲಿ ಕೊಂಚ ದೊಡ್ಡದು. ಸಾಹಿತ್ಯದ ಉದ್ದೇಶ ವ್ಯಕ್ತಿ ಮತ್ತು ಸಮಾಜದ ಅಂತರಂಗ ಮತ್ತು ಬಹಿರಂಗಗಳ ಶೋಧನೆ; ಮನುಷ್ಯನ ಬದುಕನ್ನು ಕೇಂದ್ರವಾಗಿರಿಸಿಕೊಂಡು, ಬದುಕಿನ ಆಳ-ವಿಸ್ತಾರಗಳನ್ನು ಅಭಿವ್ಯಕ್ತಿಸುವುದು. ಪ್ರಜ್ಞಾಪ್ರವಾಹ ಮತ್ತು ಫ್ಯಾಂಟಿಸಿ ತಂತ್ರಗಳ ಮೂಲಕ ಈ ನಾಟಕದಲ್ಲಿ ಲಂಕೇಶರು ಅಸ್ಥಿರ, ಅಸಮತೋಲನದ ಅತಾರ್ಕಿಕ ನೆಲೆಯ ಮನುಷ್ಯನ ಅಂತರಂಗದ ಶೋಧನೆಯನ್ನು ಪರಿಣಾಮಕಾರಿಯಾಗಿ ಮಾಡಿದ್ದಾರೆ. ನೆನಪು, ಮನೋಲಹರಿಗಳು ಪ್ರಜ್ಞೆಯ ಅನುಭವಗಳೇ. ಆದ್ದರಿಂದ ಲಂಕೇಶರಿಗೆ ಈ ತಂತ್ರ-ವಿಧಾನಗಳು ಅಂತರಂಗದ ಶೋಧನಾಸೃಷ್ಟಿಗೆ ಸಹಾಯಕವಾಗಿವೆ.

ಪಾಶ್ಚಾತ್ಯ ಅಸಂಗತ ತತ್ವಾಧಾರಿತ ನಾಟಕಗಳು ಕನ್ನಡದ ನಾಟಕಕಾರನ್ನು ಬಹುಬೇಗ ಆಕರ್ಷಿಸಿದವು. ಜೀವನದಲ್ಲಿನ ಸೌಂದರ್ಯವನ್ನಷ್ಟೇ ಹೀರಿಕೊಂಡು, ಅದನ್ನೇ ಕೀರ್ತಿಸುತ್ತ ಹೋಗುವ ನವೋದಯದ ಲೇಖಕರಿಗಿಂತ ಜೀವನದ ಕುರೂಪ, ಅಸ್ತವ್ಯಸ್ತತೆ, ವಿಘಟನೆ, ಅಸಂಬದ್ಧ ಬದುಕನ್ನು ಚಿತ್ರಿಸುವ ಧೋರಣೆಯನ್ನುಳ್ಳ ನವ್ಯ ಲೇಖಕರಿಗೆ ಅಸಂಗತ ನಾಟಕಗಳನ್ನು ಬರೆಯುವುದು ಸುಲಭವಾಯಿತು. ಹಾಗಾಗಿ ಲಂಕೇಶರು ಆ ವಿಧಾನವನ್ನು ಸಮರ್ಪಕವಾಗಿ ಈ ನಾಟಕದಲ್ಲಿ ಬಳಸಿಕೊಂಡಿದ್ದಾರೆ.

ನ. ರತ್ನ, ಚಂಪಾ, ಕಂಬಾರ, ಗಿರೀಶ್‌ ಕಾರ್ನಾಡ್‌, ಚಂದ್ರಕಾಂತ ಕುಸನೂರು ಮೊದಲಾದವರು ಅಸಂಗತ ವಿಚಾರಗಳನ್ನಿಟ್ಟುಕೊಂಡೇ ನಾಟಕಗಳನ್ನು ಬರೆದರು. ನವ್ಯರಲ್ಲಿ ಪ್ರಮುಖರಾಗಿದ್ದ ಲಂಕೇಶರೂ ಕೂಡ ತಮ್ಮ ಏಕಾಂಕ ರಚನೆಗಳ ಮೂಲಕ ಬಹುಬೇಗನೆ ನವ್ಯ ಮತ್ತು ಅಸಂಗತ ರಂಗಭೂಮಿ ಕಡೆಗೆ ನಡೆದರು. ಇವರ ‘ಟಿ.ಪ್ರಸನ್ನನ ಗೃಹಸ್ಥಾಶ್ರಮ’ದ ಪ್ರಸನ್ನ, ‘ನನ್ನ ತಂಗಿಗೊಂದು ಗಂಡು ಕೊಡಿ’ ನಾಟಕದ ಜಗನ್ನಾಥರು ಕುಪಿತ ಯುವಕರು; ತಮ್ಮ ಮೊನಚು ಮಾತುಗಳಿಂದ, ನಿರ್ಭೀತ ಹರಿತ ವ್ಯಂಗ್ಯದಿಂದ ತಮ್ಮೆಲ್ಲ ಕೋಪ, ಕ್ರೋಧ, ಆವೇಶದಿಂದ ವ್ಯವಸ್ಥೆಯನ್ನು ಚುಚ್ಚಿದವರು.

ಆ ದೃಷ್ಟಿಯಿಂದ ‘ತೆರೆಗಳು’ ಲಂಕೇಶರ ಏಕಾಂಕಗಳಲ್ಲಿಯೇ ಅತ್ಯಂತ ಮಹತ್ವಪೂರ್ಣ ನಾಟಕ. ಇದನ್ನು ಅಸಂಗತ ನಾಟಕ ಎಂದು ಕರೆದದ್ದೂ ಉಂಟು. ಹೆರಾಲ್ಡ್‌ ಪಿಂಟರ್ ನ ‘ಬರ್ತಡೇ ಪಾರ್ಟಿ’ಪ್ರಭಾವ ಇದರ ಮೇಲಿದೆ. ಆದರೆ ತಂತ್ರದ ದೃಷ್ಟಿಯಿಂದ ಇದು ಭಿನ್ನವಾಗಿದೆ. ಸಾಂಕೇತಿಕ ಶೈಲಿ, ತುಂಡು-ತುಂಡು ಸಂಭಾಷಣೆ, ಮೂವರು ಅಪರಿಚಿತರು ಮೆಲ್ಲಗೆ ವ್ಯಕ್ತಿಯ ಬದುಕಿನಲ್ಲಿ ಪ್ರವೇಶ ಮಾಡಿ ಪರಿಚಿತರಂತೆ ನಟಿಸಿ ಕೊನೆಗೆ ನಾಯಕನ ಮೇಲೆ ಹಿಡಿತ ಸಾಧಿಸಿ, ಅವನನ್ನು ಶೋಧಿಸಿ, ನಿಜತ್ವವನ್ನೂ ಹೊರಗೆಡಹಿ ಅಪರಾಧಿ ಸ್ಥಾನಕ್ಕೆ ತರುತ್ತಾರೆ. ಇಲ್ಲಿನ ತಂತ್ರ-ಸಂಭಾಷಣೆ ದೃಷ್ಟಿಯಿಂದದಲ್ಲಿ ಅಸಂಗತದ ಛಾಯೆ ಕಂಡುಬರುತ್ತದೆ. ಆದರೆ ಇಲ್ಲಿ ಮನುಷ್ಯನ ಅಸ್ತಿತ್ವದ ಅಸಂಗತತೆ ಕಂಡುಬರುವುದಿಲ್ಲ. ಇದರಿಂದಾಗಿ ‘ತೆರೆಗಳು’ ಅಸಂಗತ ನಾಟಕವೆಂದು ಪರಿಗಣಿತವಾಗಲಿಲ್ಲ.

‘ತೆರೆಗಳು’ ನಾಟಕದಲ್ಲಿ ಮೇಲಿನ ಅಂಶಗಳು ಒಂದು ವೈಯಕ್ತಿಕ ಅನಿವಾರ್ಯತೆಯಿಂದ ಚಿತ್ರಿತವಾಗುತ್ತವೆ. ಈ ನಾಟಕ ವ್ಯಕ್ತಿ ವ್ಯಕ್ತಿಗಳ ನಡುವಿನ ಅಂತರಂಗ-ಬಹಿರಂಗಗಳ ಘರ್ಷಣೆಯ ವಿಶ್ಲೇಷಣೆಯನ್ನು ಮಾಡುತ್ತದೆ. ಈ ಆಸಕ್ತಿ ಲಂಕೇಶರ ಬಹುಮಟ್ಟಿನ ನಾಟಕಗಳಲ್ಲಿ ಸಾಮಾನ್ಯವಾಗಿ ಕಂಡುಬರುತ್ತದೆ. ಒಬ್ಬನೇ ವ್ಯಕ್ತಿ ಬೇರೆ ಬೇರೆಯಾಗುತ್ತಾ ಹೋಗಿ ಅವನ ಸುತ್ತ ನಿಂತ ವ್ಯಕ್ತಿಗಳ ಅನುಭವವೂ ಬೇರೆ ಬೇರೆಯಾಗುತ್ತಾ ಹೋಗಿ ಇವರ ನಡುವಿನ ಘರ್ಷಣೆ ನಾಟಕೀಯವಾಗಿ ಬಿಡುತ್ತದೆ. ಈ ವಿಶ್ಲೇಷಣೆಯೇ ನಾಟಕಕಾರರ ಉದ್ದೇಶ. “ದರಲ್ಲಿ ನಾನು ಒಂದು ಘಟನೆ, The fall of the two parties in different senses ಕೊಡಲು ಪ್ರಯತ್ನಿಸಿದ್ದೆ. ಅದಕ್ಕೆ ಪೂರಕವಾಗಿ ಬೇಟೆಯ ತಂತ್ರ ಬಳಸಿದ್ದೆ. ಜನಪ್ರಿಯವಾಗಬಲ್ಲ ಕಥೆ, ಪಾತ್ರಪೋಷಣೆ, ಸುಂದರ ಮಾತುಗಳನ್ನು ಕೈಬಿಟ್ಟಿದ್ದೆ. ಒಬ್ಬನ ಮಾತು ಮತ್ತು ಧೈರ್ಯ ಕಡಿದು ಬೀಳುವುದನ್ನು, ಇನ್ನಿತರರ ಮಾತು ನಾಜೂಕಾಗಿ ಧೈರ್ಯ ಹೆಚ್ಚಾಗಿ ಪಶುಗಳಾಗುವುದನ್ನು ತೋರಿಸಲು ಹವಣಿಸಿದ್ದೆ. ನ್ಯಾಯದ ಬಗ್ಗೆ ಪರೋಕ್ಷವಾಗಿ ಹೇಳಲು ಪ್ರಯತ್ನಿಸಿದ್ದೆ” ಎಂಬ ಲಂಕೇಶರ ಮಾತು ಯಥಾರ್ಥವಾಗಿವೆ. ಈ ನಾಟಕ ವ್ಯಕ್ತಿಯ ಆತ್ಮವಂಚನೆಯ ಚಿತ್ರಣವಾಗಿದೆ. ಭಾಷೆ, ರಚನೆ, ಶೈಲಿ, ಅಭಿನಯಸಾಧ್ಯತೆ ಮೊದಲಾದ ಅನೇಕ ದೃಷ್ಟಿಗಳಿಂದ ‘ತೆರೆಗಳು’ ಲಂಕೇಶರ ನಾಟಕಗಳಲ್ಲಿ ತುಂಬಾ ಮುಖ್ಯವಾದುದ್ದಾಗಿದೆ.

ವರ್ಗ ಸಮರದ ಮುನ್ಸೂಚನೆಯಂತಿರುವ ‘ತೆರೆಗಳು’ ಕನ್ನಡ ರಂಗಭೂಮಿಯಲ್ಲಿ ತಾಂತ್ರಿಕ ಪ್ರಯೋಗಶೀಲತೆಯಿಂದಾಗಿ ಹೊಸ ನುಡಿಗಟ್ಟನ್ನು ಸೃಷ್ಟಿಸಿತು. ಈ ನಾಟಕದಲ್ಲಿ ಜನಪ್ರಿಯ ಕತೆ, ಪಾತ್ರ ಪೋಷಣೆಗಳಿಲ್ಲ, ಸಾಂಪ್ರದಾಯಿಕ ಮಾದರಿಯ ಸಂಭಾಷಣೆಯಿಲ್ಲ. ಉಸಿರುಗಟ್ಟಿಸುವಂತ ಸನ್ನಿವೇಶವೊಂದರಲ್ಲಿ ವ್ಯಕ್ತಿಯೊಬ್ಬನನ್ನು ಸಿಲುಕಿಸಿ ಅವನ ಬದುಕನ್ನು ವಿಚಾರಣೆ ನಡೆಸುವ ಮೂಲಕ ಶೋಷಣೆಯ ಸ್ವರೂಪ, ಇತಿಹಾಸ ಮತ್ತು ಪರಿಣಾಮವನ್ನು ತೀಕ್ಷ್ಣವಾಗಿ ಚಿತ್ರಿಸಲಾಗಿದೆ.

‘ತೆರೆಗಳು’ ಮೂವರು ಸಾಮಾನ್ಯರು ಮತ್ತು ನಾಲ್ಕನೆಯ ಅಸಾಮಾನ್ಯನೊಬ್ಬನ ನಡುವಿನ ಘರ್ಷಣೆಗೆ ಸಂಬಂಧಿಸಿದ್ದು. ಇಲ್ಲಿ ಬರುವ ವ್ಯಕ್ತಿಯೊಬ್ಬನ ದುರಾಸೆ, ಮಹತ್ವಾಕಾಂಕ್ಷೆ ಅವನನ್ನು ಎತ್ತರಕ್ಕೆ ಒಯ್ಯುವಂತೆ ಕೆಳಕ್ಕೂ ಸೆಳೆಯುತ್ತದೆ. ಈತನನ್ನು ಒಂದು ಘಟ್ಟದಲ್ಲಿ ಇದ್ದಕ್ಕಿದ್ದಂತೆ ಪ್ರಶ್ನೆಗೆ ಗುರಿಮಾಡುವ ಮೂವರು, ಅದೇ ರೀತಿಯಲ್ಲಿ ಎತ್ತರ ಮತ್ತು ಆಳಕ್ಕೆ ಹೋಗುತ್ತಾರೆ. ಈ ನಾಲ್ವರ ಸಂಬಂಧ ಮತ್ತು ಅವರ ದುರಂತವನ್ನು ಮುಂದಿಡುವುದು ನಾಟಕದ ಗುರಿಯಾಗಿದೆ.

ಈ ನಾಟಕದ ಮುಖ್ಯ ಪಾತ್ರಕ್ಕೆ ಹೆಸರೇ ಇಲ್ಲ! ‘ವ್ಯಕ್ತಿ’ ಎಂದು ಕರೆದಿದ್ದಾರೆ. ಇಲ್ಲಿನ ಅಸಂಗತತೆಗೆ ಈ ದೇಶದ ಸಾಮಾಜಿಕ ಸಂದರ್ಭ ನೆಲೆಯಾಗಿದೆ. ಇಡೀ ನಾಟಕ ತಾನು ಒಳಗೊಂಡಿರುವ ಹಲವು ಸಂಕೇತಗಳ ಮೂಲಕ ಒಂದು ಪ್ರತಿಮೆ ಎನಿಸುತ್ತದೆ. ಧ್ವನಿಶಕ್ತಿ, ಫ್ಯಾಂಟಿಸಿ, ಅಸ್ಪಷ್ಟತೆಗಳು ನಾಟಕಕ್ಕೆ ಅಪರಿಮಿತ ಅರ್ಥ ಸಾಧ್ಯತೆ ನೀಡಿವೆ. ಇಲ್ಲಿನ ಸ್ಥಾಯೀ’ ಕ್ರೌರ್ಯ’; ಹಿಂಸೆಯ ಭಿನ್ನ ಪದರು ಇಲ್ಲಿವೆ. ವರ್ಗ ಸಮರ, ಅಧಿಕಾರ ಹಸ್ತಾಂತರ, ಶೋಷಣೆಯ ‘ಗತಿ ಚಲನೆ’ ಕುರಿತ ನಾಟಕಕಾರರ ಚಿಂತನೆ ಗಮನಾರ್ಹ.

ಭ್ರಮೆ ಮತ್ತು ವಾಸ್ತವಗಳ ನಡುವೆ ನಾಟಕದ ಕ್ರಿಯೆ ಸಾಗುತ್ತದೆ. ನಿಷ್ಕ್ರಮಣವಿಲ್ಲದೆ ಸವೇಗವಾಗಿ ಮುಂದುವರಿಯುವ ನಾಟಕ, ಕ್ರೌರ್ಯದ ತುತ್ತ ತುದಿಯಲ್ಲಿ ಅಂತ್ಯಗೊಳ್ಳುತ್ತದೆ. ಆರಂಭದಲ್ಲಿ ರಂಗದ ಮೇಲಿದ್ದ ಮಧ್ಯವಯಸ್ಕ ಬಳಿಕ ಪ್ರವೇಶಿಸಿ ಅವನನ್ನು ವಿಚಾರಣೆಗೆ ಗುರಿಪಡಿಸಿದ ಮೂವರು ಹೊರಗೆ ಹೋಗಲು ದಾರಿಯಿಲ್ಲದೆ ಪರಿತಪಿಸುತ್ತಾ ಪರಸ್ಪರ ಹಿಂಸಿಸುತ್ತಾರೆ. ಕ್ರೋಧದಿಂದ ಕುದಿಯುತ್ತಾರೆ. ಕೊನೆಗೆ ವ್ಯಕ್ತಿಯ ತಪ್ಪನ್ನು-ಅವನ ಅಹವಾಲನ್ನು ಕೇಳಿಸಿಕೊಳ್ಳದೆ-ಸಾಬೀತುಗೊಳಿಸಿ ನೇಣುಹಾಕುವ ಮೂವರೂ ವಿಧಿ ಕಳಿಸಿದ ಕ್ರೂರ ಬೇಟೆಗಾರರಂತೆ ಅವನನ್ನು ಬೇಟೆಯಾಡಿ ಕೊಲ್ಲುವ ಸನ್ನಿವೇಶ ಉತ್ಕಟವಾಗಿದೆ. ಇತಿಹಾಸದುದ್ದಕ್ಕೂ ವಂಚನೆಗೆ, ಶೋಷಣೆಗೆ ತುತ್ತಾದವರ ಪ್ರತಿನಿಧಿಗಳಂತೆ ಬಂದ ಈ ಮೂವರೂ ವ್ಯಕ್ತಿಯ ನೆನಪನ್ನು ಕೆದಕಿ ಬಿಚ್ಚುತ್ತಾ ಹೋಗುವ ತಂತ್ರ ಅಸದೃಶವಾಗಿದೆ.

ಸಮಾಜದ ನೆನಪುಗಳು ಘೋರವಾಗಿರುತ್ತವೆ: ಅಸಹ್ಯವಾಗಿರುತ್ತವೆ. ಪ್ರತಿಷ್ಠಿತರ ಸುಖಕ್ಕಾಗಿ ಸಾಮಾನ್ಯರ ಬಲಿ ನಡೆದಿರುತ್ತದೆ. ಈ ನಾಟಕದಲ್ಲಿ ಬರುವ ಆಗಂತುಕರು ವ್ಯಕ್ತಿಯ ನೆನಪುಗಳನ್ನು ಭೂತ ಕಾಲದ ಗೋರಿಯಿಂದ ಅಗೆದು ತೆಗೆಯುವ ಶೋಧಕರಂತಿದ್ದಾರೆ. ಹಿಂದೆ ಅವನಿಂದ ಅವನ ಕಡೆಯವರಿಂದ ವಂಚಿತರಾದವರು; ಇತಿಹಾಸದುದ್ದಕ್ಕೂ ವಂಚನೆಗೆ ಗುರಿಯಾದವರೆಲ್ಲರ ಪರವಾಗಿ ನ್ಯಾಯವನ್ನು ಪಡೆಯಲು ನಿಶ್ಚಯ ಮಾಡಿ ಬಂದವರು; ಪ್ರತೀಕಾರದ ಛಲದಿಂದಲೇ ಬಂದು ಅವನನ್ನು ಮುತ್ತಿದವರು. ನಿರ್ದಯವಾದ ಕ್ರೂರ ವಿಧಿಯಂತೆ ಅವರ ವರ್ತನೆ ಮತ್ತು ಮಾತುಗಳಿವೆ. ಅವರ ಮಾತುಗಳ ಚೆಲ್ಲಾಟದಲ್ಲಿ ವ್ಯಕ್ತಿ ಹಣ್ಣಾಗುತ್ತಾನೆ; ತಮ್ಮ ಮಾತುಗಳ ಮೂಲಕ ಅವನನ್ನು ನಿಧಾನವಾಗಿ ವ್ಯಾಪಿಸಿ, ಧೈರ್ಯಗುಂದಿಸಿ ಜರ್ಝರಿತಗೊಳಿಸುತ್ತಾರೆ. ಅವರ ಕಠೋರ ಶಾಸನಕ್ಕೆ ಮೂಕವಾಗಿ ಪ್ರತಿಭಟನೆಯಿಲ್ಲದೆ ವ್ಯಕ್ತಿ ತನ್ನನ್ನು ಒಡ್ಡುತ್ತಾನೆ. ಈ ನಾಟಕದಲ್ಲಿ ದರ್ಪದ ಎದುರು ಕಾನೂನು ಎಷ್ಟು ನಿಶ್ಯಕ್ತವಾದದ್ದು ಎಂದು ತೋರಿಸುವುದರ ಜತೆಗೆ, ಸಮಾಜ ನ್ಯಾಯಬಾಹಿರವಾದರೆ ಕಾನೂನು ಮುರಿದುಬಿದ್ದರೆ, ಜನಗಳೇ ವೈಯಕ್ತಿಕವಾಗಿ ಅನ್ಯಾಯಗಳಿಗೆ ಶಿಕ್ಷೆ ವಿಧಿಸುವಂತ ಅರಾಜಕ ಪರಿಸ್ಥಿತಿ ಉದ್ಭವಿಸಬಹುದು ಎಂಬ ಉಗ್ರವಾದ ಚಿತ್ರವಿದೆ. ಇಂತ ಅರಾಜಕ ಸ್ಥಿತಿಯಲ್ಲಿ ಹುಟ್ಟುವ ನಾಯಕರ ಪಶುಪ್ರವೃತ್ತಿ ಅಮಾನವೀಯವಾಗಿ ಇರುತ್ತದೆಂಬುದನ್ನೂ ಕಂಠಿ, ಕಿಟ್ಟಿ, ವಿಟ್ಟಿಯರ ಪಾತ್ರಗಳು ಸೂಚಿಸುವಂತಿವೆ.

‘ತೆರೆಗಳು’ ಒಂದು ಕ್ರೂರ ಸ್ವಪ್ನದಂತಿದೆ. ಈ ನಾಟಕದ ವ್ಯಕ್ತಿಯನ್ನು ಇದ್ದಕ್ಕಿದ್ದಂತೆ ಬಂದು ಆಕ್ರಮಿಸುವ ಮೂವರು ಅಪರಿಚಿತರು ಒಂದೇ ಕ್ರಿಯೆಯ ಮೂರು ಪ್ರತಿಬಿಂಬಗಳಂತಿದ್ದಾರೆ. ವಸ್ತು ಮತ್ತು ಪಾತ್ರ ನಿರೂಪಣೆಗೆ ಸಂಕೇತಗಳನ್ನು ಆಶ್ರಯಿಸಿರುವ ನಾಟಕಕಾರರು ಇಲ್ಲಿ ತಮ್ಮ ಹಿಂದಿನ ನಾಟಕಗಳಿಂದ ಸಂಪೂರ್ಣ ಭಿನ್ನ ಶೈಲಿಯನ್ನು ರೂಢಿಸಿಕೊಂಡಿರುವುದನ್ನು ಗುರುತಿಸಬಹುದಾಗಿದೆ. ವ್ಯಕ್ತಿಯ ಭೂತಕಾಲದ ಅವಶೇಷಗಳೋ, ಪಾಪ ಕರ್ಮಗಳೋ ಅಥವಾ ಅವನ ಅಪರಾಧಿ ಪ್ರಜ್ಞೆಯೋ ಹೀಗೆ ಯಾವುದನ್ನೂ ಪ್ರತಿನಿಧಿಸಬಲ್ಲ ಈ ಮೂವರು ಅಪರಿಚಿರು ಅವನನ್ನು ಕ್ರೂರವಾಗಿ ಕಾಡುವ ಪರಿ ತಲ್ಲಣಗೊಳಿಸುವಂತಿದೆ; ಅವನ ಅಹವಾಲುಗಳಿಗೆ ಕಿವುಡಾಗಿ ಪ್ರಾಣಿಯೊಂದರಂತೆ ಬೇಟೆಯಾಡಿ ಕೊಲ್ಲುವ ಅವರ ಕ್ರೌರ್ಯ ಎಣೆಯಿಲ್ಲದ್ದು. ಸಂವಾದವು ಕಡಿದು ಬಿದ್ದ ಕ್ರೂರ ಪರಿಸರದ ದುರಂತವನ್ನು ಪರಿಣಾಮಕಾರಿಯಾಗಿ ಮನಮುಟ್ಟಿಸುವ ಈ ನಾಟಕ, ಅಸಂಗತ ಮಾದರಿಗೆ ಹತ್ತಿರವಾಗಿಯೂ ತನ್ನ ವಿಶಿಷ್ಟತೆಯನ್ನು ಕಾಪಾಡಿಕೊಂಡಿದೆ. ಇಲ್ಲಿ ಸುಸ್ಪಷ್ಟವಾಗಿಯೇ ಗೋಚರವಾಗುವ ಸಾಮಾಜಿಕ ಕಳಕಳಿ, ವಸ್ತುವಿನ ಸುಸಂಬದ್ಧ ಬೆಳವಣಿಗೆ, ದುರಂತಮಯವಾದ ಮುಕ್ತಾಯ-ಇದೆಲ್ಲಾ ಅಸಂಗತ ನಾಟಕಗಳಿಗಿಂತ ಭಿನ್ನವಾದ ಲಕ್ಷಣಗಳು. ಸನ್ನಿವೇಶದಲ್ಲಿ ತುಂಬಿರುವ ಕ್ರೌರ್ಯದ ಚಿತ್ರಣ ಮತ್ತು ಸಂಕೇತಗಳ ಬಳಕೆಯಲ್ಲಿ ಅಸಂಗತ ಗುಣವಿದೆ.

ಕನ್ನಡದಲ್ಲೇ ಅತ್ಯಂತ ವಿಶಿಷ್ಟವಾದ ಅಸಂಗತ ಲಕ್ಷಣಗಳುಳ್ಳ ನಾಟಕವಾಗಿದ್ದರೂ ಇದು ಪೂರ್ಣಪ್ರಮಾಣದ ಅಸಂಗತ ನಾಟಕ ಅಲ್ಲ. ವಿಶಿಷ್ಟ ತಾಂತ್ರಿಕತೆ, ಸೀಮಿತಭಾಷೆಯ ಬಳಕೆ, ತೀರಾ ಚಿಕ್ಕ ಸಂಭಾಷಣೆ ಇದರ ಮುಖ್ಯ ಗುಣಗಳು. ಕೊಂಚ ಶಿಷ್ಟವೆನಿಸಿದರೂ ಆಡುಭಾಷೆಯ ಲಯ ಇಲ್ಲಿನ ಸಂಭಾಷಣೆಗಳಲ್ಲಿದ್ದು, ಅಪೂರ್ವ ಲವಲವಿಕೆ ಕಂಡುಬರುತ್ತದೆ. ಗಾಂಧಿ-ನೆಹರು ಯುಗದ ನಂತರದ ರಾಜಕೀಯ ವ್ಯವಸ್ಥೆಯನ್ನು ವಿಡಂಬಿಸಿರುವುದು ಈ ನಾಟಕದ ವಿಶಿಷ್ಟತೆ.

ಸುಸಂಬದ್ಧ, ಒಳ್ಳೆಯ ಕತೆಯಿರುವ, ಅತ್ಯಂತ ನಾಟಕೀಯತೆ ಇರುವ ನಾಟಕವಿದು; ಮತ್ತು ಕತೆ ಇಲ್ಲದೆ, ನಿರ್ದಿಷ್ಟ ಪಾತ್ರಗಳಿಲ್ಲದ, ನಾಟಕದ ತರ ಅನ್ನಿಸದ ನಾಟಕ ಇದು. ರಂಗದಲ್ಲಿ ತನ್ನ ನಾಟಕೀಯ ಕಾಂತಿಯಿಂದ ಅದ್ಭುತ ಪರಿಣಾಮ ಬೀರುತ್ತದೆ. ವ್ಯಕ್ತಿಯ ಪಾಪದ ನಿಗೂಢದ ಭೂತಕಾಲದ ತನಿಖೆ ಮಾಡಿ, ವ್ಯಕ್ತಿಗೆ ಮರಣದಂಡನೆ ವಿಧಿಸುವ ಕ್ರಿಯೆಯಲ್ಲಿ ಸಮಾಜವಾದಿ ನೆಲೆ ಮತ್ತು ವರ್ಗ ಹೋರಾಟವೂ ಧ್ವನಿಸುತ್ತದೆ. ಹಾಗಾಗಿ ವರ್ಗ ವ್ಯವಸ್ಥೆಯ ಸಂಘರ್ಷ ನಾಟಕದಲ್ಲಿ ತೆರೆದುಕೊಳ್ಳುತ್ತದೆ.

ತನ್ನ ಕಾವ್ಯಾತ್ಮಕತೆ, ಸಂಭಾಷಣೆಗಳಿಂದಾಗಿ ಇದು ವಿಶಿಷ್ಟ ನಾಟಕ. ರಂಗಪ್ರಜ್ಞೆಯ ಅಧಿಕೃತತೆ, ಸೂಕ್ತ ತಂತ್ರ, ಭಯದ ಪರಿಸರ, ಅನುಮಾನಗಳು ನಾಟಕವನ್ನು ಸಫಲಗೊಳಿಸಿವೆ. ಇಲ್ಲಿನ ಭಾಷೆ ಮೊನಚಾಗಿದೆ. ಹರಿತವಾಗಿದೆ. ಟೆಲಿಗ್ರಾಫ್‌ನ ಸಂಕ್ಷಿಪ್ತೆ ಪಡೆದಿದೆ. ಕನ್ನಡ ರಂಗಭೂಮಿ ಕಂಡ ಅತ್ಯಂತ ಶುದ್ಧ ಭಾಷೆ ಈ ನಾಟಕದ್ದು.

ನವ್ಯದಲ್ಲಿನ ಅಸಂಗತ ತಂತ್ರವನ್ನು ಬಹುಮಟ್ಟಿಗೆ ಅನುಸರಿಸಿ ಬರೆದ ಕಾರಣಕ್ಕೆ ಈ ನಾಟಕ ತುಂಬಾ ಸಾಂಕೇತಿಕವಾಗಿದೆ. ಒಬ್ಬ ವ್ಯಕ್ತಿ, ಅವನೆದುರು ನಿಲ್ಲುವ ಮೂವರು ವ್ಯಕ್ತಿಗಳು ಅಪರಿಚಿತರಾಗಿ ಪ್ರವೇಶಿಸಿ, ಆ ವ್ಯಕ್ತಿಯೊಂದಿಗೆ ಅನ್ಯೋನ್ಯತೆ ಸಾಧಿಸಿ, ಅವನನ್ನೇ ಬೇಟೆಯಾಡಲು ಆರಂಭಿಸಿ, ಕೊನೆಗೆ ಅವನನ್ನು ಅಸಹಾಯಕನನ್ನಾಗಿ ಮಾಡಿ, ಆ ಮೂವರೇ ನ್ಯಾಯಾಧೀಶರ ಸ್ಥಾನದಲ್ಲಿ ನಿಂತು ವ್ಯಕ್ತಿಯನ್ನು ಗಲ್ಲಿಗೇರಿಸುವ ಮೂಲಕ ಮನುಷ್ಯ ಮುಖವಾಡದಲ್ಲಿ ಲೋಲುಪ ಬದುಕನ್ನು ಬದುಕುತ್ತಿರುತ್ತಾನೆ; ಸ್ವಾರ್ಥಿಯಾಗಿರುತ್ತಾನೆ. ಅವನ ಮುಖವಾಡಗಳನ್ನು ಎಳೆ-ಎಳೆಯಾಗಿ ಬಿಡಿಸಿ ಅವನ ಸ್ವಭಾವವನ್ನು ಮತ್ತು ಮರೆಮಾಚಿದ ಬದುಕನ್ನು ನೈಜವಾಗಿ ಬಿಚ್ಚಿಡುವುದು ಸಾಹಿತ್ಯದ ಕೆಲಸ ಎಂಬುದನ್ನು ನಾಟಕ ಧ್ವನಿಸಿದೆ.

ಮನುಷ್ಯನ ಅಸ್ತಿತ್ವದ ಅಸಂಗತತೆಯನ್ನು ಚಿತ್ರಿಸುವ ಆಶಯ ಈ ನಾಟಕದಲ್ಲಿ ಕಂಡು ಬರುತ್ತದೆ. ಇಲ್ಲಿನ ಭಾಷೆ, ಸಂಭಾಷಣೆ, ವಸ್ತು, ಪಾತ್ರ ರಚನೆಗಳಲ್ಲಿ ಅತಾರ್ಕಿಕತೆ ಕಂಡುಬರುವುದಿಲ್ಲ. ಲಂಕೇಶರು ಈ ಬಗೆಯ ತಂತ್ರವಿಧಾನದಿಂದ ನೈತಿಕವಾಗಿ ಆಧೋಗತಿಗಿಳಿಯುತ್ತಿರುವ ವ್ಯಕ್ತಿಗಳ ಸ್ಥಿತಿಯ ಶೋಧನೆ ನಡೆಸಿದ್ದಾರೆ. ಈ ಶೋಧನೆಯ ಹಾದಿಯಲ್ಲಿ ವಿಶಿಷ್ಟ ತಿರುವುಗಳಿವೆ, ವೈಯಕ್ತಿಕ ತೀವ್ರತೆಗಳಿವೆ.

ಲಂಕೇಶರ ನಾಟಕಗಳು ಹೆಚ್ಚಾಗಿ ನೈತಿಕ ಸಂದಿಗ್ಧತೆಯನ್ನು ಹೇಳುತ್ತವೆ. ನೈತಿಕವಾಗಿ ಸುಲಭವಾಗಿ ಆಯ್ದುಕೊಳ್ಳಲಾಗದ ಸನ್ನಿವೇಶಗಳಲ್ಲಿ ಸಿಲುಕಿಕೊಂಡ ವ್ಯಕ್ತಿಗಳ ಸ್ಥಿತಿಯ ಶೋಧನೆ ಅವುಗಳ ಮುಖ್ಯ ಗುರಿಯಾಗಿದೆ. ಆದರೆ ಈ ಸನ್ನಿವೇಶಗಳು ಹಾಗೂ ನಾಟಕದ ಶಿಖರಗಳಲ್ಲಿ ಸಣ್ಣ ಕಥೆಗಳಂತೆ ಸನ್ನಿವೇಶಗಳು ತೆಗೆದುಕೊಳ್ಳುವ ಅನಿರೀಕ್ಷಿತ ತಿರುವುಗಳು ಎಷ್ಟು ಸೂಕ್ಷ್ಮವಾಗಿವೆ ಎಂದರೆ ಅವು ತಮ್ಮ ಸಾಮಾಜಿಕ ಸಾರ್ವತ್ರಿಕತೆಯನ್ನು ಕಳೆದುಕೊಳ್ಳುತ್ತವೆ.

ವಾಸ್ತವಾಗಿ ಗಿರೀಶ್‌ ಕಾರ್ನಾಡ್‌, ಚಂಪಾ, ಚಂದ್ರಶೇಖರ ಕಂಬಾರ, ಚಂದ್ರಕಾಂತ ಕುಸನೂರು ಮೊದಲಾದ ನವ್ಯ ನಾಟಕಕಾರರಿಗಿಂತ ಹೆಚ್ಚು ಸಮರ್ಥವಾಗಿ ತಮ್ಮ ಏಕಾಂಕಗಳಲ್ಲಿ ಸಾಮಾಜಿಕ ವಸ್ತುವನ್ನು ನವ್ಯ ಮಾದರಿಯ ವ್ಯಕ್ತಿ ಪ್ರಜ್ಞೆಯ ನೆಲೆಯಲ್ಲಿ ಅನಾವರಣಗೊಳಿಸಿದವರು ಲಂಕೇಶ್‌. ಸಮಕಾಲೀನ ಅಸ್ವಸ್ಥ ಕೌಟುಂಬಿಕ ಬಿಕ್ಕಟ್ಟನ್ನು,ವ್ಯಕ್ತಿಯ ಆಷಾಢಭೂತಿತನದ ಆಳ-ಪಾತಳಿಗಳನ್ನು ಯಾವ ಕಾಲಕ್ಕೂ ಸಲ್ಲುವಂತೆ ಅವರು ಬಿಚ್ಚಿಟ್ಟಿದ್ದಾರೆ. ಅವರ ಸೃಜನಶೀಲ ಗುಣ ವ್ಯಕ್ತಿಯನ್ನು ಸಮಾಜದಿಂದ ಬೇರ್ಪಡಿಸಿ ನೋಡಬಲ್ಲದು; ವ್ಯಕ್ತಿ-ಸಮಾಜಗಳ ನಡುವಿನ ಘರ್ಷಣೆಯತ್ತ ತನ್ನ ದೃಷ್ಟಿಯನ್ನು ಕೇಂದ್ರೀಕರಿಸಬಲ್ಲದು. ವಾಸ್ತವವಾಗಿ ಅವರ ಎಲ್ಲ ಏಕಾಂಕಗಳ ವಸ್ತು ಸಾಮಾಜಿಕ ಭಿತ್ತಿಯದಾಗಿದ್ದು, ಅವು ಸಾರ್ವತ್ರಿಕ ಮೌಲ್ಯವನ್ನು ಸಾಧಿಸಿವೆ. ಆದರೆ ತಂತ್ರವಿನ್ಯಾಸವನ್ನು ಹೊರತುಪಡಿಸಿದರೆ, ‘ತೆರೆಗಳು’ ಸೇರಿದಂತೆ ಅವರ ಯಾವ ನಾಟಕಗಳೂ ಅಸಂಗತ ನಾಟಕಗಳಾಗಿಲ್ಲ.

ಸಂಕ್ರಾಂತಿ

ಇದು ಕನ್ನಡದ ನಾಟಕಗಳಲ್ಲಿ ಅತ್ಯಂತ ಶ್ರೇಷ್ಠವಾದುದು. ನವ್ಯ ಲೇಖಕನೊಬ್ಬ ಚರಿತ್ರೆಗೆ ಮುಖಾಮುಖಿಯಾದದ್ದು ಈ ನಾಟಕದಲ್ಲಿ ಮಾತ್ರ. ಸಂಕ್ರಾಂತಿ ವಿಶಿಷ್ಟ ಆಶಯಗಳುಳ್ಳ ನಾಟಕ. ಕೃತಿಯಾಗಿ, ಅಭಿನಯ ಯೋಗ್ಯ ನಾಟಕವಾಗಿ ಇದು ಅಪಾರ ಹೆಸರುಗಳಿಸಿದೆ. ತಮ್ಮ ಮೊದಲ ನಾಟಕಗಳಿಗಿಂತ ಭಿನ್ನವಾದ ಭಾಷೆಯನ್ನು ಲಂಕೇಶ್‌ ಇಲ್ಲಿ ಬಳಸಿದ್ದಾರೆ. ಹಾಗಾಗಿಯೇ ಈ ಮೊದಲ ಹ್ರಸ್ವ ಸಂಭಾಷಣೆಗಳು ಇಲ್ಲಿ ವಾಗ್ವಾದಕ್ಕೆ ತಿರುಗಿವೆ. ಉಷೆ-ರುದ್ರರ, ಬಿಜ್ಜಳ ಬಸವರ ನ್ಯಾಯ ತೀರ್ಮಾನದ ಸನ್ನಿವೇಶದಲ್ಲಿ ಇದನ್ನು ಗಮನಿಸಬಹುದು. ಮತ್ತೊಂದು ವಿಶೇಷವೆಂದರೆ ಚರಿತ್ರೆಯಾಗಲಿ, ಬಸವಣ್ಣನ ವೈಭವೀಕರಣವಾಗಲಿ, ಬಿಜ್ಜಳನ ರಾಜಕೀಯವಾಗಲಿ ಇಲ್ಲಿ ಮುಖ್ಯವಾಗದೆ ಮೊದಲ ಬಾರಿಗೆಂಬಂತೆ ಪ್ರೇಮ ಪ್ರಸಂಗವೊಂದರ ಮೂಲಕ ಜಾತಿ-ಸಮಾಜ-ವ್ಯಕ್ತಿಗಳ ನಡುವಿನ ಸ್ವಭಾವ, ವರ್ತನೆ, ಸ್ಥಿತಿಗಳನ್ನು ಲಂಕೇಶ್‌ ಇಲ್ಲಿ ಗ್ರಹಿಸಲು ಯತ್ನಿಸಿದ್ದಾರೆ. ಆ ಕಾರಣಕ್ಕಾಗಿಯೇ ಉಷೆಯ ವಿಫಲ ಪ್ರೇಮ, ಬೆರಗು, ಆಘಾತ, ಚಿಂತನೆಗೆ ಕಾರಣವಾಗುತ್ತದೆ. “ನೀನು ಬ್ರಾಹ್ಮಣ! ಸಂಸ್ಕೃತದಿಂದ ರಾಜ ಮಹಾರಾಜರನ್ನು ಹತೋಟಿಯಲ್ಲಿಡುತ್ತಿದ್ದ ನೀನು, ಈಗ ಕನ್ನಡದಿಂದ ಶೂದ್ರರನ್ನು ಶರಣರನ್ನಾಗಿಸಿ ಹತೋಟಿಯಲ್ಲಿಡುತ್ತಿದ್ದೀ”, “ಭೂಮಿಯ ವಾಸನೆ ನೋಡಿ ಎಷ್ಟು ದಿನವಾಯಿತು! ಹುಡುಗಿಯೊಬ್ಬಳು ಈ ವಾಸನೆಗೆ ಮರುಳಾಗಬಹುದೆಂಬ ಸಂದೇಹ ಕೂಡ ನಿಮಗೆ ಬರುತ್ತಿಲ್ಲ” ಎಂಬ ಬಿಜ್ಜಳನ ಮಾತುಗಳು ಇತಿಹಾಸ, ಪ್ರೀತಿ-ಮನುಷ್ಯನನ್ನು ಒಟ್ಟಿಗೆ ಬೆಸೆಯುತ್ತವೆ. ವ್ಯಂಗ್ಯ ಇಲ್ಲಿನ ಮುಖ್ಯ ಸ್ಥಾಯಿ. ಭಾರತೀಯ ರಂಗಭೂಮಿಯ ಸಂದರ್ಭದಲ್ಲಿ ಇದು ಬಹು ಮಹತ್ವಾಕಾಂಕ್ಷಿ ನಾಟಕ. ಇಡೀ ಕನ್ನಡ ಸಾಹಿತ್ಯ ಬಸವಣ್ಣನ ಸುತ್ತ ಸುತ್ತುತ್ತಿರುವಾಗ “ಬಸವಣ್ಣ ತನ್ನ ವೈದಿಕ ನೆನಪುಗಳಿಂದ ಪೂರ್ಣ ತಪ್ಪಿಸಿಕೊಳ್ಳದಿರುವುದನ್ನು, ವೈದಿಕ ಪರಂಪರೆಯನ್ನು ಮಾನವೀಕರಣಗೊಳಿಸಿ ಸುಧಾರಿಸಿದ್ದನ್ನು ಬಿಟ್ಟರೆ ಮತ್ತೇನೂ ಆಗಲಿಲ್ಲ” ಎಂಬುದನ್ನು ಲಂಕೇಶ್‌ ಸೂಕ್ಷ್ಮವಾಗಿ ಹೇಳಿರುವಂತೆ ಭಾಸವಾಗುತ್ತದೆ. ಒಟ್ಟಾರೆ ‘ಸಂಕ್ರಾಂತಿ’ ಹನ್ನೆರಡನೇ ಶತಮಾನದ ವಸ್ತುವನ್ನು ಭಿತ್ತಿಯಾಗಿ ಹೊಂದಿಯೂ ಸ್ವಾತಂತ್ಯ್ರೋತ್ತರ ಭಾರತದ ಜಾತಿ-ಪ್ರೇಮ ಮನುಷ್ಯ-ರಾಜಕೀಯ ಇವುಗಳ ಹದ ತಪ್ಪಿದ ಬೆಸುಗೆಯ ಚಿತ್ರಣದ ರೂಪಕವಾಗಿದೆ. ವಚನ ಚಳುವಳಿಯ ಹಿನ್ನೆಲೆಯಲ್ಲಿ ಬಂದ ತಲೆದಂಡ, ಮಹಾಚೈತ್ರ ನಾಟಕಗಳಿಗೆ ಹೋಲಿಸಿದಾಗ “ಸಂಕ್ರಾಂತಿ”ಯ ವಿಶಿಷ್ಟತೆ, ಶ್ರೇಷ್ಟತೆ ಎದ್ದು ಕಾಣುತ್ತದೆ.

ಕೃತಿಯಾಗಿ: ‘ಸಂಕ್ರಾಂತಿ’ ವಿಶಿಷ್ಟ ಮಾದರಿಯ ನಾಟಕ. ಇದನ್ನು ಐತಿಹಾಸಿಕವೆಂದು ಸರಳೀಕರಿಸುವಂತಿಲ್ಲವಾದರೂ ವಸ್ತುವಿನ ಚಾರಿತ್ರಿಕ ಹಿನ್ನೆಲೆಯನ್ನು ಗಮನಿಸದಿರುವಂತಿಲ್ಲ. ಚಾರಿತ್ರಿಕ ವ್ಯಕ್ತಿಗಳಾದ ಬಸವಣ್ಣ, ಬಿಜ್ಜಳರು ಪಾತ್ರವರ್ಗದಲ್ಲಿರುವುದು, ಹನ್ನೆರಡನೇ ಶತಮಾನದ ವೀರಶೈವ ಚಳುವಳಿಯ ಪ್ರಭಾವ ಪರಿಣಾಮಗಳು ನಾಟಕದಲ್ಲಿ ಚರ್ಚೆಗೆ ಗುರಿಯಾಗಿರುವುದು, ಹರಳಯ್ಯ ಮಧುವರಸರ ಮಕ್ಕಳಲ್ಲಿ ಅಂದು ನಡೆದ ವಿವಾಹದ ಮಾದರಿಯ ಪ್ರಣಯ ಕತೆಯೊಂದು ನಾಟಕದ ಬೆನ್ನೆಲುಬಾಗಿರುವುದು-ಇವಿಷ್ಟೂ ಈ ನಾಟಕಕ್ಕೆ ಚಾರಿತ್ರಿಕ ಹಿನ್ನೆಲೆ ಕಲ್ಪಿಸಿವೆ. ಆದರೆ ಈ ಐತಿಹಾಸಿಕ ಸಂಗತಿ, ಸತ್ಯಗಳನ್ನು ನಾಟಕಕಾರರು ಸಾಂಕೇತಿಕವಾಗಿ ಬಳಸಿಕೊಂಡಿರುವುದರಿಂದ ನಾಟಕದ ವಸ್ತು ಸಮಕಾಲೀನವಾಗಿಯೂ ಪ್ರಸಕ್ತವಾಗುತ್ತದೆ. ಉಷಾ-ರುದ್ರ ಪ್ರೇಮ ಪ್ರಕರಣದ ಮೂಲಕ ಹನ್ನೆರಡನೆ ಶತಮಾನದ ಶರಣ ಚಳುವಳಿಯನ್ನು ಸಮಕಾಲೀನ ನೆಲೆಯಲ್ಲಿ ವಿವರಿಸುವ ಈ ನಾಟಕ ಪಾತ್ರ ರಚನೆಗಿಂತ ಸನ್ನಿವೇಶ, ಕಲ್ಪನೆಗಳ ಮೂಲಕ ತನ್ನ ಗುರಿಯನ್ನು ಮುಟ್ಟುತ್ತದೆ. ‘ಸಂಕ್ರಾಂತಿ’ಯ ದೃಶ್ಯ ಗುಣ ಅದ್ಭುತವಾಗಿದ್ದು, ಸಂಭಾಷಣೆಯ ಲವಲವಿಕೆ ಬದುಕಿಗೆ ಹತ್ತಿರವಾಗಿದೆ.

‘ಸಂಕ್ರಾಂತಿ’ಯ ಕೇಂದ್ರ ಪಾತ್ರವೆಂದು ರುದ್ರನನ್ನಾಗಲಿ ಬಸವಣ್ಣನನ್ನಾಗಲಿ ಗುರುತಿಸುವಂತಿಲ್ಲ. ಪರಿವರ್ತನೆಯ ಘಟ್ಟದಲ್ಲಿದ್ದ ಕೆಳ ಸಂಸ್ಕೃತಿ ಮತ್ತು ಈ ಪರಿವರ್ತನೆಯನ್ನು ತಡೆಯಲು ಬದ್ಧ ಕಂಕಣವಾಗಿದ್ದ ಪ್ರತಿಷ್ಠಿತ ಸಂಸ್ಕೃತಿಯ ನಡುವೆ ನಡೆಯುವ ಹೋರಾಟವೇ ಇಲ್ಲಿ ಕೇಂದ್ರವಾಗಿದ್ದು, ರುದ್ರನ ಪ್ರಣಯಕತೆ ಅದಕ್ಕೊಂದು ದೃಷ್ಟಾಂತವಾಗಿದೆ. ಉಷಾ-ರುದ್ರ ಪ್ರೇಮ ಪ್ರಕರಣ, ಪ್ರತಿಷ್ಠಿತ ಬ್ರಾಹ್ಮಣರು ಮತ್ತು ಸುಧಾರಣಾವಾದಿ ಬಸವಣ್ಣನ ಹೋರಾಟಕ್ಕೆ ಒಂದು ನಿರ್ಣಾಯಕ ಸ್ಪರ್ಧೆಯಾಗಿ ಪರಿಣಮಿಸುತ್ತದೆ. ರುದ್ರನನ್ನು ಭೌತಿಕವಾಗಿ ಪ್ರೇಮಿಸಿದ ಉಷಾ ಆತನ ಶರಣತ್ವವನ್ನು ನಿರಾಕರಿಸುವುದು, ತನ್ಮೂಲಕ ಅವನ ಬಲಿಗೆ ಕಾರಣವಾಗುವುದು ನಾಟಕದ ದುರಂತವಾಗಿದೆ. ರುದ್ರನನ್ನು ಶರಣನನ್ನಾಗಿ ಮಾಡುವ ಮೂಲಕ-ಆತ್ಮ ರಕ್ಷಣೆಗೆ ತಕ್ಕ ಸತ್ವವನ್ನೂ ಕಳೆದುಕೊಂಡು ದುರ್ಬಲ ಸಾತ್ವಿಕ ಸಜ್ಜನನ್ನಾಗಿ ಪರಿವರ್ತಿಸಿದ ಬಸವಣ್ಣನೂ ಈ ಪರಿಗೆ ಪರೋಕ್ಷವಾಗಿ ಕಾರಣನಾಗುತ್ತಾನೆ.