ಉಷಾಳ ರೂಪಕ್ಕಿಂತ ಅವಳ ವೈದಿಕ ಜಾಣತನವನ್ನು ಮೆಚ್ಚಿದ ರುದ್ರ ತಮ್ಮಿಬ್ಬರ ಪ್ರಣಯವನ್ನು ಒಂದು ಸಾಮಾಜಿಕ ಪ್ರತಿಷ್ಠೆಯೆಂದು ಭಾವಿಸಿದರೆ, ಉಷಾ, ರುದ್ರನ ಒರಟುತನವನ್ನು ಮೆಚ್ಚಿಕೊಳ್ಳುತ್ತಾಳೆ; ತನ್ನ ದುರ್ಬಲವಾದ ಸಾತ್ವಿಕ ಹಿನ್ನೆಲೆಗೆ ಮುಜುಗರ ಪಟ್ಟುಕೊಳ್ಳುತ್ತಾಳೆ. ಇಬ್ಬರೂ ಪರಸ್ಪರ ಆಕರ್ಷಿತವಾದದ್ದು ತಮ್ಮಲ್ಲಿಲ್ಲದ ಕಾರಣ ವಿಶೇಷವನ್ನು ಅರಸಿ ತುಂಬಿಕೊಳ್ಳಲಿಕ್ಕೆ. ಇಬ್ಬರ ವ್ಯಕ್ತಿತ್ವವೂ ಅವರವರ ಮಟ್ಟಿಗೆ ಅಪರಿಪೂರ್ಣವೆನಿಸಿದ್ದು ಅದನ್ನು ಪೂರ್ಣವಾಗಿಸಲು ಪರಸ್ಪರ ಪ್ರೇಮಿಸುತ್ತಾರೆ. ತಮ್ಮ ಭೂತವನ್ನು ಮರೆತು ಇನ್ನೊಬ್ಬರ ಮೂಲಕ ಭವಿಷ್ಯವನ್ನು ಕಟ್ಟಿಕೊಳ್ಳುವ ಇಬ್ಬರ ಅಭೀಪ್ಸೆಯೂ ಪರಸ್ಪರ ಪೂರಕವಾಗಿರದೆ ವಿರುದ್ಧ ದಿಕ್ಕಿನಲ್ಲಿದ್ದುದರಿಂದ ಅವರ ಪ್ರೇಮವು ದುರಂತದಲ್ಲಿ ಕೊನೆಗೊಳ್ಳುವುದು ಅನಿವಾರ್ಯವಾಗುತ್ತದೆ. ಉಷಾ… ರುದ್ರರ ಪ್ರೇಮ ಪ್ರಕರಣ ಕೇವಲ ವೈಯಕ್ತಿಕ ನೆಲೆಯಲ್ಲಿ ನಿಲ್ಲದೆ ಅವರವರ ಜಾತಿಗಳನ್ನೂ ವ್ಯಾಪಿಸುವಂತಿದೆ. ರುದ್ರ ಮತ್ತು ಆತನ ಬಂಧುಗಳಾದ ಹೊಲೆಯರು ಯಾವುದೇ ಪರಿವರ್ತನೆಗೆ ಒಳಗಾಗದೆ ರೂಕ್ಷವಾಗಿ, ಮುಗ್ಧವಾಗಿ ಉಳಿಯಬೇಕೆನ್ನುವ ಉಷಾ, ತನಗರಿವಿಲ್ಲದಂತೆ ಪ್ರತಿಷ್ಠಿತ ಬ್ರಾಹ್ಮಣರ ಆಲೋಚನೆಯನ್ನೇ ಸಮರ್ಥಿಸುತ್ತಿರುವುದು ನಾಟಕದ ದುರಂತ ವ್ಯಂಗ್ಯವಾಗಿದೆ.

‘ಸಂಕ್ರಾಂತಿ’ಯ ಬಸವಣ್ಣನ ಪಾತ್ರ ಕಲ್ಪನೆ ಸಂಕೀರ್ಣವಾಗಿದ್ದು, ಹನ್ನೆರಡನೆ ಶತಮಾನದ ಶರಣ ಚಳುವಳಿ ಮತ್ತು ಇಪ್ಪತ್ತನೆ ಶತಮಾನದ ಗಾಂಧೀವಾದವೆರಡೂ ಅದರಲ್ಲಿ ಅಡಕವಾಗಿವೆ. ಮಹತ್ವಾಕಾಂಕ್ಷೆಯ ಸಾಮಾಜಿಕ ಸುಧಾರಣೆಗಳಿಗೆ ವರ್ಗ ಸ್ವರೂಪದ ಸಂಪೂರ್ಣ ಅರಿವಿಲ್ಲದಿದ್ದಾಗ ಘಟಿಸುವ ದುರಂತವನ್ನೇ ‘ಸಂಕ್ರಾಂತಿ’ಯ ಶರಣ ಚಳುವಳಿ ಸಂಕೇತಿಸುತ್ತದೆ. ಬಸವಣ್ಣ ಅಥವಾ ಗಾಂಧೀಜಿಯ ಸದುದ್ದೇಶಗಳನ್ನು ಯಾರೂ ಸಂದೇಹಿಸುವಂತಿಲ್ಲವಾದರೂ ಅವರ ಕೆಲವು ನಂಬಿಕೆಗಳು ಶೋಷಕರಿಗೆ ಅನುಕೂಲವಾಗುವಂತಿದ್ದವೆಂಬುದು ಘೋರ ಸತ್ಯ. ಕೆಳಜಾತಿಯ ಜನರನ್ನು ಸುಸಂಸ್ಕೃತಗೊಳಿಸುವ ಭರದಲ್ಲಿ ಅವರನ್ನು ನಯಗೊಳಿಸದ್ದರಿಂದ ಆದ ಲಾಭಕ್ಕಿಂತ ಹಾನಿಯೇ ದೊಡ್ಡದೆಂಬುನ್ನು ಮರೆಯುವಂತಿಲ್ಲ. ಹೊಲೆಯರ ಆಹಾರ ಪಾನೀಯಗಳನ್ನೂ ಒಳಗೊಂಡಂತೆ ಅವರ ಬದುಕನ್ನು ಸುಸಂಸ್ಕೃತಗೊಳಿಸುವುದರಿಂದ ‘ಸಂಕ್ರಾಂತಿ’ಯ ರುದ್ರನಂತಹ ನವ ಬ್ರಾಹ್ಮಣರು ಹುಟ್ಟುತ್ತಾರೆ. ರಾಜಕೀಯ, ಆರ್ಥಿಕ ಸವಲತ್ತುಗಳನ್ನು ಅಧಿಕಾರ, ಸಂಪನ್ಮೂಲಗಳನ್ನು ಸಾಧಿಸದೆ ಅವರು ಬಹಿರಂಗವಾಗಿ ಸುಸಂಸ್ಕೃತವಾಗುವುದರಿಂದ ಮೂಲಭೂತ ಬದಲಾವಣೆಗಳಾಗುವುದಿಲ್ಲ. ಈ ಸುಧಾರಣೆಗಳಿಗೆ ಕಾರಣವಾದ ಬಸವಣ್ಣ, ಗಾಂಧೀಜಿಯವರ ಪ್ರಾಮಾಣಿಕ ಕಳಕಳಿ ಪ್ರಶ್ನಾತೀತವಾದದ್ದು, ಆದರೆ ಎಲ್ಲ ವರ್ಗದ ಮೇಲೆಯೂ ಹಿಡಿತವನ್ನಿರಿಸಿಕೊಂಡಿರುವ ರಾಜಕಾರಣಿಯ ಚಾಣಾಕ್ಷತೆ ಗಾಂಧೀಜಿ ಮತ್ತು ಬಸವಣ್ಣನ ಕನಸುಗಳನ್ನು ಮೀರಿದ್ದು. ಬಸವಣ್ಣ, ಗಾಂಧೀಜಿಯನ್ನೂ ಬಳಸಿಕೊಂಡು ತನ್ನ ಅಧಿಕಾರದ ಮೂಲವನ್ನು ಭದ್ರಪಡಿಸಿಕೊಳ್ಳುವ ಜಾಣತನ ರಾಜಕಾರಣಕ್ಕೆ ಇದೆಯೆಂಬುದೇ ಇಲ್ಲಿನ ಧ್ವನಿ. ಬಿಜ್ಜಳನು ರುದ್ರನನ್ನು ‘ಸಂಕ್ರಾಂತಿ’ಗೆ ಬಲಿಯೆಂದು ಸಾರಿದಾಗ ಬಸವಣ್ಣನ ಅಸಹಾಯಕ ಸ್ಥಿತಿ ಮರುಕ ತರುವಂತಿದೆ. ತನ್ನ ಜಾಣ್ಮೆಯಾಗಲಿ ಅಥವಾ ಬಿಜ್ಜಳನೊಡಗಿದ್ದ ತನ್ನ ಸ್ನೇಹವಾಗಲಿ ಬಸವಣ್ಣನಿಗೆ ಆಗ ಸಹಾಯ ಮಾಡದೆ ರುದ್ರನ ಕೊಲೆಗೆ ಅಪರೋಕ್ಷವಾಗಿ ತಾನೂ ಕಾರಣವಾಗುವ ಬಸವಣ್ಣನ ದುರಂತ ಧ್ವನಿಪೂರ್ಣವಾಗಿದೆ.

ಯಾವುದೇ ಆದರ್ಶ ಸಮಾಜದ ಕಲ್ಪನೆಯನ್ನಾಗಲಿ, ರಾಜಕೀಯ ಸಿದ್ಧಾಂತವನ್ನಾಗಲಿ ಲಂಕೇಶರು ಈ ನಾಟಕದಲ್ಲಿ ಮಂಡಿಸುವುದಿಲ್ಲವಾದರೂ ವ್ಯವಸ್ಥೆಯ ಉದ್ದೇಶಗಳನ್ನು, ರಾಜಕಾರಣಿಗಳ-ರಾಜಸತ್ತೆಯ ನಿಜವಾದ ಬಣ್ಣವನ್ನು ಅತ್ಯಂತ ಸಮರ್ಥವಾಗಿ ಬಯಲಿಗೆಳೆದಿದ್ದಾರೆ. ಬಿಜ್ಜಳ ಮತ್ತು ಅವನ ಪರಿಸರದ ಚಿತ್ರಣ ಯಾವುದೇ ಕಾಲದ ರಾಜ ಅಥವಾ ಪ್ರಧಾನಿಯ ಪರಿಸರವನ್ನು ಯಶಸ್ವಿಯಾಗಿ ವಿಶ್ಲೇಷಿಸುತ್ತದೆ. ನಾಲ್ಕನೆಯ ದೃಶ್ಯದಲ್ಲಿ ಬರುವ ಬಸವಣ್ಣ-ಬಿಜ್ಜಳರ ಸಂವಾದ, ನಾಟಕದ ಶಿಖರದಂತಿದ್ದು, ವ್ಯವಸ್ಥೆಯ ಘೋರ ಸ್ವರೂಪವನ್ನು ಇಲ್ಲಿ ಚರ್ಚಿಸಲಾಗಿದೆ. ಇಲ್ಲಿನ ಶೋಷಣೆಯ ಸ್ವರೂಪ ಎಷ್ಟು ಸಂಕೀರ್ಣವಾಗಿದೆಯೆಂದರೆ ಸಾಮಾನ್ಯ ಜನತೆಗೆ ಶೋಷಕನೇ ಒಬ್ಬ ಹೀರೋನಂತೆ ಕಂಡುಬರುತ್ತಾನೆ. ಬಿಜ್ಜಳನ ಕಿರೀಟದ ಒಂದು ವಜ್ರ, ಆತನ ಪಟ್ಟದ ಕುದುರೆ, ಚನ್ನಕೇಶವನ ವಿಗ್ರಹ, ಒಂದೊಂದು ರಾಜ್ಯದ ಅರ್ಧ ಹೊಟ್ಟೆಗೆ ಅನ್ನ ಕಾಣಿಸಬಲ್ಲುವೆಂದು ಬಸವಣ್ಣ ನಿರ್ಭಯವಾಗಿ ರಾಜನೆದುರು ವಾದಿಸುತ್ತಾನೆ. ತಮ್ಮ ರಾಜನ ಕುದುರೆಯ ಬೆಲೆ ಲಕ್ಷ ವರಹವೆಂದೂ, ಆತನ ಕಿರೀಟದ ಪಚ್ಚೆಗೆ ಲಕ್ಷ ವರಹವೆಂದೂ ಬೀಗಿ ಮೆರೆಯುವ ಬಡ ಜನತೆಯ ಮೌಢ್ಯವೂ ಬಸವಣ್ಣನಿಗೆ ಗೊತ್ತಿದೆ. ಇಂತ ಅನಿವಾರ್ಯ ಸಂದರ್ಭದಲ್ಲಿ ವ್ಯವಸ್ಥೆಯೆದುರು ಜನರನ್ನು ಕ್ರಾಂತಿಗೆಬ್ಬಿಸುವುದು ಕನಸಿನ ಮಾತಾದುದರಿಂದ ವ್ಯವಸ್ಥೆಯನ್ನು ಬಳಸಿಕೊಂಡೇ ಬಡ ಜನತೆಯ ಸಂಕಷ್ಟ ನಿವಾರಣೆ ಬಸವಣ್ಣನ ಆದರ್ಶವಾಗಿತ್ತು. ಈ ಗುರಿ ಸಾಧನೆಗಾಗಿ ಅಧಿಕಾರವನ್ನು ತ್ಯಜಿಸದೆ ಮುಂದುವರಿದ ಬಸವಣ್ಣನಿಗಿಂತ ವ್ಯವಸ್ಥೆಯ ಪ್ರತಿನಿಧಿಯಾದ ಬಿಜ್ಜಳನ ಬುದ್ಧಿವಂತಿಕೆ ಮಿಗಿಲಾದುದು. ಬಸವಣ್ಣನು ಅಧಿಕಾರದಲ್ಲಿರುವುದರಿಂದ ಜನಪ್ರಿಯ ಆದರ್ಶವಾದಿಯೊಬ್ಬನ ಬೆಂಬಲ ಅವನಿಗೆ ದೊರೆತಂತಾಯಿತು. ಇದು ಅವನ ರಾಜತ್ವವನ್ನು ಭದ್ರಪಡಿಸಿಕೊಳ್ಳಲು ಸಹಾಯಕವಾಯಿತು. ವ್ಯವಸ್ಥೆಯನ್ನು ಕಾಪಾಡುವುದರಲ್ಲಿ ಬಿಜ್ಜಳನಿಗಿರುವ ಆಸಕ್ತಿ ಅವನ ಮಿಕ್ಕೆಲ್ಲ ಪ್ರವೃತ್ತಿಗಳಿಗಿಂತ ಬಲವತ್ತರವಾದುದು. ಬಸವಣ್ಣನನ್ನು ನೇರವಾಗಿ ವಿರೋಧಿಸಿ ಗೆಲ್ಲುವುದಕ್ಕಿಂತ ನಯದ ಮಾತಿನಿಂದ, ಸ್ನೇಹದ ಸೋಗಿನಿಂದ ಗೆಲ್ಲುವುದು ಬಿಜ್ಜಳನಿಗೆ ಸುಲಭವಾಗುತ್ತದೆ. ಖಾಸಗಿಯಾಗಿ ಬಸವಣ್ಣನನ್ನು ಬಿಜ್ಜಳ ಪ್ರೀತಿಸಿದರೂ ಸಾರ್ವಜನಿಕವಾಗಿ ಅವನು ಎಚ್ಚರಿಕೆಯಿಂದ ವ್ಯವಸ್ಥೆಯ ಹಿತಾಸಕ್ತಿಗಳನ್ನೇ ಕಾಪಾಡುತ್ತಾನೆ. ಬಿಜ್ಜಳನಿಂದ ಬಸವಣ್ಣನ ನಂಬಿಕೆಗಳಿಗೆ ಒದಗುವ ಸೋಲು ರುದ್ರನ ಬದುಕಿನ ಮೂಲಕ ದೃಷ್ಟಾಂತಗೊಳ್ಳುತ್ತದೆ.

ಬಸವಣ್ಣ ಮತ್ತು ಉಷಾ ಇಬ್ಬರೂ ತಮ್ಮ ಗಾಢವಾದ ಪ್ರಭಾವದಿಂದ ರುದ್ರನನ್ನು ಹೊಸ ವ್ಯಕ್ತಿಯಾಗಿ ರೂಪಿಸಿದವರು. ಭೌತಿಕವಾಗಿ ಮತ್ತು ಮಾನಸಿಕವಾಗಿ ಅವನನ್ನು ಅರಳಿಸಿದವರು. ಆದರೆ ಬಿಜ್ಜಳನೆದುರು ಬಸವಣ್ಣ ಅಸಹಾಯಕನಂತೆ ಉಳಿದು, ಉಷಾ ಪ್ರತಿಷ್ಠಿತ ಬ್ರಾಹ್ಮಣರಂತೆ ಆಲೋಚಿಸಿದ್ದರಿಂದ ರುದ್ರನ ಕನಸು ನುಚ್ಚು ನೂರಾಗಿ ಹೊಲೆಯರ ಬದುಕು ಕರಾಳವಾಗುತ್ತದೆ. ಬಿಜ್ಜಳನೊಬ್ಬನ ಹೊರತು ಯಾರೂ ಪರಿಸ್ಥಿತಿಯ ಮೇಲೆ ಸಂಪೂರ್ಣ ಹತೋಟಿ ತೆಗೆದುಕೊಳ್ಳಲು ಸಾಧ್ಯವಾಗುದಂತೆ ಏರ್ಪಡುವ ಸನ್ನಿವೇಶ ಕಲ್ಪನೆ ನಾಟಕದ ಅಂತ್ಯವನ್ನು ಅರ್ಥಪೂರ್ಣವಾಗಿಸಿದೆ, ತರ್ಕಬದ್ಧವಾಗಿಸಿದೆ. ಕ್ರಮಕ್ರಮವಾಗಿ ಬಿಜ್ಜಳನು ಪರಿಸ್ಥಿತಿಯನ್ನು ಹತೋಟಿಗೆ ತೆಗೆದುಕೊಳ್ಳುವುದು, ಬಸವಣ್ಣ ದುರ್ಬಲನಾಗುತ್ತಾ ಹೋಗುವುದು ಕಣ್ಣಿಗೆ ಕಟ್ಟಿದಂತೆ ರಚಿತವಾಗಿದೆ.

ಸಂಕ್ರಾಂತಿಯಂತ ಸಂಕೀರ್ಣ ಮಾದರಿಯ ಕೃತಿ ಎಲ್ಲ ವ್ಯಾಖ್ಯಾನಗಳನ್ನೂ ಮೀರಿ ಅರ್ಥಪೂರ್ಣವಾಗಿ ನಿಲ್ಲುತ್ತದೆ. ಸಾಂಸ್ಕೃತಿಕವಾಗಿ ಮಹತ್ವ ಪಡೆಯುವ ಅಪೂರ್ವ ಬಗೆಯ ಕನ್ನಡ ನಾಟಕಗಳಲ್ಲಿ ‘ಸಂಕ್ರಾಂತಿ’ ಅಗ್ರಗಣ್ಯವಾದುದು.

ನಾಟಕವಾಗಿ: ಇದು ಲಂಕೇಶರ ಮೊದಲ ಪೂರ್ಣ ಪ್ರಮಾಣದ ನಾಟಕ. ಆವರೆಗೆ ಲಂಕೇಶರು ಕೌಟುಂಬಿಕ ಮತ್ತು ಸಾಮಾಜಿಕ ಹಿನ್ನೆಲೆಯ ವಸ್ತುವನ್ನು ಮಾತ್ರ ತಮ್ಮ ನಾಟಕಗಳ ಭಿತ್ತಿಯಾಗಿಸಿಕೊಂಡಿದ್ದರು. ಇದರಲ್ಲಿ ಐತಿಹಾಸಿಕ ಮತ್ತು ಸಮಕಾಲೀನ ಸಾಮಾಜಿಕ ವಸ್ತುವನ್ನು ಆಧರಿಸಿ ನಾಟಕವನ್ನು ರಚಿಸಿದ್ದಾರೆ.

ಹನ್ನೆರಡನೆ ಶತಮಾನದ ಸಾಂಸ್ಕೃತಿಕ ಸಂಘರ್ಷವನ್ನು ವಸ್ತುವಾಗಿಸಿಕೊಂಡು, ಸಮಕಾಲೀನ ನೆಲೆಯಲ್ಲಿ ವಿವೇಚನೆ ನಡೆಸಿ ಹಲವರು ನಾಟಕಗಳನ್ನು ಬರೆದಿದ್ದಾರೆ. ಸಂಕ್ರಾಂತಿ, ತಲೆದಂಡ ಮತ್ತು ಮಹಾಚೈತ್ರ ಈ ಮೂರು ನಾಟಕಗಳೂ ಶರಣಕ್ರಾಂತಿಯನ್ನು ಪಾಶ್ಚಾತ್ಯ ಮಾದರಿಯಲ್ಲಿ ನಿರೂಪಿಸಿರುವ ನಾಟಕಗಳು. ಮೂರು ನಾಟಕಗಳಲ್ಲಿಯೂ ಬಿಜ್ಜಳ ಬಸವಣ್ಣರ ಸಂವಾದ ಪರಸ್ಪರ ಪ್ರೀತಿಯ ಸಂಬಂಧದಿಂದ ಕೂಡಿದೆ. ನೀವಿಲ್ಲದೆ ನನಗೆ ಬದುಕಿಲ್ಲ ಎನ್ನುವ ಬಸವ, ನನ್ನ ವ್ಯವಸ್ಥೆ, ನಿಮ್ಮ ಕ್ರಾಂತಿ, ಎರಡಕ್ಕೂ ಮೀರಿದ್ದು ಇನ್ನೊಂದಿದೆ ಎನ್ನುವ ಬಿಜ್ಜಳ ಗಮನ ಸೆಳೆಯುತ್ತಾರೆ. ಸಂಕ್ರಾಂತಿಯ ಜೀವಪರ ತತ್ವವೆಂದರೆ ಉಷಾ ರುದ್ರರ ಪ್ರಣಯ. ರುದ್ರ ತನ್ನ ಮೂಲ ಗುಣಗಳನ್ನು ಕಳೆದುಕೊಂಡು ತನ್ನ ಪರಸರದಿಂದ ಅನ್ಯಗೊಂಡಾಗ ಉಷೆಗೆ ಬೇಡವಾಗುತ್ತಾನೆ. ಇದು ಸಂಘರ್ಷಕ್ಕೆ ಎಡೆಮಾಡಿಕೊಡುತ್ತದೆ.

ಜಾತಿ ಮೌಢ್ಯವನ್ನು ಹೋಗಲಾಡಿಸಲು ಬಸವಣ್ಣ ತಂದ ಪರಿವರ್ತನೆ ಜನರನ್ನು ಶರಣರನ್ನಾಗಿಸುವುದು. ಈ ಕಾರ್ಯ ಬಹಿರಂಗದಲ್ಲಿ ಆದರ್ಶವಾಗಿ, ಕ್ರಾಂತಿಯಾಗಿ ಕಂಡರೂ, ಅಂತರಂಗದ ಭಾವನೆಗಳು ಏನು ಎಂಬುದನ್ನು ನಾಟಕ ಮುಖ್ಯವಾಗಿ ಚಿತ್ರಿಸಿದೆ. ಬಸವಣ್ಣನ ಕುಡಿಯಬಾರದು, ಕೊಲ್ಲಬಾರದು, ಮಾಂಸ ತಿನ್ನಬಾರದು ಎಂಬ ಉಪದೇಶ ದಲಿತ ಸಮುದಾಯಕ್ಕೆ ಆಚರಣೆಗೆ ತರಲು ಅತ್ಯಂತ ಕಷ್ಟ. ತನ್ನ ಮಗ ರುದ್ರ ಮತ್ತು ಬ್ರಾಹ್ಮಣ ಹುಡುಗಿ ಉಷಾ ಅವರ ಸರಸ-ಸಲ್ಲಾಪವನ್ನು ಸಂಭ್ರಮದಲ್ಲಿ ಹೇಳಿಕೊಳ್ಳುತ್ತಾನೆ ಉಜ್ಜ. ಆದರೆ ಬಸವಣ್ಣನ ಉಪದೇಶ ಅವನ ಜೀವಸೆಲೆಯನ್ನೇ ಬತ್ತಿಸಿಬಿಡುತ್ತದೆ. ಈ ಬಿಡುವ ಮತ್ತು ಪಡೆಯುವ (ಶರಣನಾಗುವುದು) ಸಂಕಟವನ್ನು ನಾಟಕ ಹೇಳುತ್ತದೆ. ನಾಟಕದಲ್ಲಿ ಬರುವ “ಹ್ಯಂಗಲಾ ಬಿಡ್ತಿ? ಬಿಟ್ಟೇನ್ಲಾ ಮಾಡ್ತಿ? ಹೆಂಡ ಬಿಡು, ಕಂಡ ಬಿಡು, ಹೆಂಗಸು ಬಿಡು-ಏನೇನಲಾ ಬಿಡೋದು? ಆ?” (ಸಂಕ್ರಾಂತಿ, ಪುಟ ೬) ಎಂಬ ಉಜ್ಜನ ಮಾತು ಒಂದು ಸಮುದಾಯದ ತಲ್ಲಣಗಳನ್ನು ದಾಖಲಿಸುತ್ತವೆ.

ಉಷಾ-ರುದ್ರರ ಪ್ರಣಯ, ಉಷಾಳ ಕುಟುಂಬದಲ್ಲಿ ಮತ್ತು ರುದ್ರನ ಕುಟುಂಬದಲ್ಲಿ ಉಂಟಾಗುವ ತಲ್ಲಣಗಳು ಇಡೀ ಸಮಾಜದ ತಲ್ಲಣಗಳೇ ಆಗಿವೆ. ಮುಗ್ಧತೆ, ಒರಟುತನ, ನೇರ ನಡವಳಿಕೆಗಳಿಗೆ ಕೋಮಲತೆ, ಸ್ನಾನ, ಮಡಿ, ಜಪ-ತಪಾದಿಗಳು ಮುಖಾಮುಖಿಯಾಗುತ್ತವೆ. ರುದ್ರ ‘ಉಸಾ’ ಅನ್ನುವುದನ್ನು ಉಷಾ ತಿದ್ದುತ್ತಾಳೆ, ಗೇಲಿ ಮಾಡುತ್ತಾಳೆ. ಆದರೆ ಮೂಲ ಭಾವನೆಗಳನ್ನು ಕಳೆದುಕೊಂಡು ಶರಣನಾಗುವುದನ್ನು ಸಹಿಸುವುದಿಲ್ಲ. ಈ ಮನಸ್ಥಿತಿ ರುದ್ರನಿಗೆ ತಿಳಿಯುವುದಿಲ್ಲ. ರುದ್ರನ ಮೌಢ್ಯ ಉಷಾಳಿಗೆ ಅರ್ಥವಾಗುವುದಿಲ್ಲ. ಬಸವಣ್ಣ ಜಾತಿ, ಮತ, ಧರ್ಮಾದಿಗಳಿಂದ ಏರ್ಪಟ್ಟಿರುವ ಬಿರುಕನ್ನು ಅಳಿಸಲು ಪ್ರತಿಲೋಮ ವಿವಾಹಕ್ಕೆ ಮುಂದಾಗುತ್ತಾನೆ. ಆದರೆ ಇದರಿಂದ ಏರ್ಪಡುವ ಬಿಕ್ಕಟ್ಟುಗಳನ್ನು ನಿರ್ಲಕ್ಷಿಸುತ್ತಾನೆ. ಪರಿಣಾಮವಾಗಿ ಅವನು ಕಾಣಬಯಸಿದ ಕನಸಿನ ಸಮಾಜ ಅವನ ಕಣ್ಣೆದುರೇ ವ್ಯವಸ್ಥೆಯ ಕುತಂತ್ರಕ್ಕೆ ಬಲಿಯಾಗಿ ನುಚ್ಚು ನೂರಾಗುತ್ತದೆ. ಈ ಬಗೆಯ ಅವನತಿಗೆ ಮಡಿವಂತರ ರೊಚ್ಚು, ಮೈಲಿಗೆಯವರ ಸಂಕಟ ಎರಡೂ ಕೈ ಜೋಡಿಸುತ್ತವೆ. ಉಷಾ-ರುದ್ರ ಸಮಾಗಮ ಉಷಾಳ ದೃಷ್ಟಿಯಲ್ಲಿ ಅತ್ಯಚಾರವೆನಿಸಿಕೊಳ್ಳುತ್ತದೆ. ವ್ಯವಸ್ಥೆ ರುದ್ರನ ದೃಷ್ಟಿ-ಧೋರಣೆಗಳನ್ನು ಲೆಕ್ಕಕ್ಕೆ ತೆಗೆದುಕೊಳ್ಳುವುದಿಲ್ಲ. ಹೀಗಾಗಿ ಮೇಲ್ಜಾತಿಯವರ ಆಶೋತ್ತರಗಳಿಗೆ ಹೆಚ್ಚಿನ ಪ್ರಾಮುಖ್ಯ ದೊರೆಯುತ್ತದೆ.

ಬಿಜ್ಜಳ ನಡೆಸುವ ನ್ಯಾಯವಿಚಾರಣೆ ನಿಷ್ಪಕ್ಷಪತವಾದದ್ದಲ್ಲ. ಏಕೆಂದರೆ ದೂರು ಕೊಡಲು ಬಂದ ಬ್ರಾಹ್ಮಣರನ್ನು ಬಿಜ್ಜಳ ವಿಚಾರಮಾಡಿ, ಅವರ ಮನೋಭಾವನೆಯನ್ನು ಅರ್ಥ ಮಾಡಿಕೊಂಡು “ನಿಮಗೆ ಬೇಕಾದದ್ದು ರುದ್ರನ ತಲೆದಂಡ ತಾನೆ? ಆ ಜವಾಬ್ದಾರಿ ನನಗಿರಲಿ” ಎಂಬ ಸರಳ ತೀರ್ಮಾನಕ್ಕೆ ಬರುತ್ತಾನೆ. ಅದಕ್ಕೆ ಸಂಕ್ರಾಂತಿಯ ಬಲಿ ಒಂದು ನೆಪವಾಗುತ್ತದೆ.

ಒರಟುತನವನ್ನು ಇಷ್ಟಪಡುವ ಉಷಾ ರುದ್ರನನ್ನು ಕೆರಳಿಸಿ ಋಷಿಪಡುತ್ತಾಳೆ. “ಕೆಲವರಿಂದ ಕೆಲವು ರೀತಿಯ ಪ್ರಮಾಣ ಮಾತ್ರ ಸಾಧ್ಯ, ಅದು ಗೊತ್ತಾಗದ ನೀನೆಂಥ ಶರಣ” ಎಂಬ ಉಷಾಳ ಮಾತುಗಳು ಅವಳ ಸಾಮಾಜಿಕ ತಿಳುವಳಿಕೆಯನ್ನು ಪ್ರತಿನಿಧಿಸುತ್ತವೆ.

“ನನ್ನ ಬಳಿ ಇದ್ದವ ಬೇರೆ, ಆತ ನನಗೆ ಬೇಕಾದವನು. ಆದರೆ ನಾನು ಎದ್ದು ನೋಡಿದಾಗ ಆತನಿರಲಿಲ್ಲ. ಅಲ್ಲಿದ್ದವನು ಶರಣ ರುದ್ರ. ಇದು ಅತ್ಯಾಚಾರವಲ್ಲದೆ ಮತ್ತೇನು?” ಎನ್ನುವ ದಿಟ್ಟತನ ಮೆರೆಯುವ ಉಷಾಳ ಪಾತ್ರ ನೈಜವಾಗಿದೆ. ಆ ಮೂಲಕ, ಬಸವಣ್ಣನಿಗಿರುವುದು ಬ್ರಾಹ್ಮಣ ಸಂಸ್ಕಾರವೇ ವಿನಾ ಶೂದ್ರ ಸಂಸ್ಕಾರವಲ್ಲ ಎಂಬುದು ಸ್ಪಷ್ಟವಾಗುತ್ತದೆ. ಬಿಜ್ಜಳನ ಮೂಲಕ ಅದು ವ್ಯಕ್ತವಾಗುತ್ತದೆ: “ಇದು ನಿನ್ನ ಪಿತೂರಿ. ಬ್ರಾಹ್ಮಣನಾದ ನೀನು ಹಿಂದೆ ಸಂಸ್ಕೃತದಿಂದ ರಾಜಮಹಾರಾಜರನ್ನು ಹತೋಟಿಯಲ್ಲಿಡುತ್ತಿದ್ದೆ. ಈಗ ಕನ್ನಡದಿಂದ ಶೂದ್ರರನ್ನು ಶರಣರನ್ನಾಗಿಸಿ ಹತೋಟಿಯಲ್ಲಿಡುತ್ತಿದ್ದೀಯ. ಎಲ್ಲರೂ ಶರಣರಾಗುವುದು ಹೇಗೆ ಸಾಧ್ಯ? ಕುಡಿಯುವುದು, ಕೊಲ್ಲುವುದನ್ನು ನಿನ್ನ ಮಾತುಗಳು ಹತ್ತಿಕ್ಕಲಾರವು”.

ಈ ದಿನ ರುದ್ರನನ್ನು ಕೊಲ್ಲದಿದ್ದರೆ ಈ ಜನ ನನ್ನನ್ನು ಬಲಿಕೊಡುತ್ತಾರೆ ಎಂಬ ಹುಸಿವಾದವನ್ನು ಬಿಜ್ಜಳ ಮುಂದಿಡುತ್ತಾನೆ. ಪ್ರತಿಭಟನೆಗಳನ್ನು ನೇರವಾಗಿ ಎದುರಿಸಲಾಗದ ಅಧಿಪತಿ ನಡೆದುಕೊಳ್ಳುವ ಬಗೆಯನ್ನು ‘ಅಗ್ನಿರಾಜ’ನ ಕತೆಯ ಮೂಲಕ ಸಾಂಕೇತಿಕವಾಗಿ ನಾಟಕ ಧ್ವನಿಸಿದೆ. ಇದು ಮುಗ್ಧರನ್ನು,ಅಸಹಾಯಕರನ್ನು ಹತೋಟಿಗೆ ತಂದುಕೊಳ್ಳುವ ಉಪಮಾರ್ಗವೇ ಸರಿ. ಬಿಜ್ಜಳನ ನಿರ್ಣಯ ನಾಟಕದಲ್ಲಿ ಪ್ರಧಾನ ಪಾತ್ರವಹಿಸುತ್ತದೆ.

ಈ ಹಂತದ ಮುಖ್ಯ ಸಂಗತಿಯೆಂದರೆ ಬ್ರಾಹ್ಮಣ, ಜೈನ, ಶೈವ, ಶೂದ್ರ, ದಲಿತ ಇತ್ಯಾದಿ ಇಡೀ ಸಮುದಾಯ ಅತೃಪ್ತಿಯಲ್ಲಿದೆ. ಈ ಅತೃಪ್ತಿ ರಾಜ್ಯದ ಸುಖ ಶಾಂತಿಗಳಿಗೆ ಭಂಗ ತಂದಿದೆ. ಆದ್ದರಿಂದ ಅತೃಪ್ತಗೊಂಡ ಜನರೇ ದಂಗೆಯೆದ್ದಾಗ ಸಂಭವಿಸುವುದು ದಲಿತನ ಕೊಲೆ. ಉಷಾ-ರುದ್ರರದು ಪ್ರೇಮವೋ, ಬಲತ್ಕಾರವೋ; ರುದ್ರನಿಗೆ ಪ್ರೇಮವಾದದ್ದು, ಉಷಾಳಿಗೆ ಬಲಾತ್ಕಾರವಾಗುತ್ತದೆ. ಇಂಥ ಸಂಕೀರ್ಣ ಸನ್ನಿವೇಶದಲ್ಲಿ ಬಿಜ್ಜಳ ತನ್ನ ಪ್ರಭುತ್ವ ಉಳಿಸಿಕೊಳ್ಳಬೇಕಾಗಿದೆ. ಆದ್ದರಿಂದ ಇತ್ತ ಬಸವಣ್ಣನ ಬಾಯಿ ಮುಚ್ಚಿಸುವುದು, ಅತ್ತ ಬ್ರಾಹ್ಮಣರನ್ನು ಸಮಾಧಾನಪಡಿಸುವುದು ಎರಡೂ ಆಗಬೇಕಾಗಿದೆ. ಬಿಜ್ಜಳ ವ್ಯವಸ್ಥೆಯ ಸಂಕೇತ, ಬಸವಣ್ಣ ಕ್ರಾಂತಿಯ ಸಂಕೇತ. ಬಸವಣ್ಣನಿಗೆ ಕ್ರಾಂತಿಯನ್ನು ಪ್ರತಿನಿಧಿಸುವುದು ಸುಲಭ. ಆದರೆ ಬಿಜ್ಜಳನಿಗೆ ವ್ಯವಸ್ಥೆಯನ್ನು ಹಿಡಿತದಲ್ಲಿಟ್ಟುಕೊಳ್ಳುವುದು ಕಷ್ಟ.

ಬ್ರಾಹ್ಮಣ ಹುಡುಗಿಯನ್ನು ಪ್ರೀತಿಸುವ ರುದ್ರ, ಎಲ್ಲರನ್ನೂ ಶರಣರನ್ನಾಗಿಸುವ ಬಸವಣ್ಣ, ಎಲ್ಲರ ಮೆಚ್ಚುಗೆ-ವಿಶ್ವಾಸ ಗಳಿಸಲಿಚ್ಛಿಸುವ ಬಿಜ್ಜಳ, ಅಪಾರವಾಗಿ ಪ್ರೀತಿಸುತ್ತಿದ್ದ ಶರಣ ರುದ್ರನ ಅವಸಾನಕ್ಕೆ ತಾವೇ ಕಾರಣನಾದೆನಲ್ಲ ಎಂಬ ಬಸವಣ್ಣನನ ವಿಷಾದ ನಾಟಕದಲ್ಲಿ ಎದ್ದು ಕಾಣುವ ಸಂಗತಿಗಳು. ಉಷಾಳಿಗೆ ಶೂದ್ರ ಬೇಕು, ಶರಣ ಬೇಡ; ಬಸವಣ್ಣನಿಗೆ ಶೂದ್ರರು ಶರಣರಾಗುವುದು ಬೇಕು. ಶೂದ್ರರು ಶೂದ್ರರಾಗಿಯೇ ಉಳಿಯುವುದು, ಶೂದ್ರರು ಶರಣರಾಗಬೇಕೆಂಬುದು- ಈ ಎರಡೂ ತತ್ವ ಪರಸ್ಪರ ವಿರುದ್ಧ. ಬಸವಣ್ಣ ಹೇಳಿದನೆಂದು ಶರಣನಾಗುವುದು ಹಾಗೂ ಕುಡಿಯುವುದು, ತಿನ್ನುವುದು, ಕೊಲ್ಲುವುದನ್ನು ಬಿಡುವುದು ಮತ್ತೆ ಮೌಢ್ಯವನ್ನು ಹುಟ್ಟುಹಾಕಿದಂತೆಯೇ. ಆದರೆ ಇದಾವುದನ್ನೂ ಲೆಕ್ಕಿಸದೆ, ಸಮುದಾಯವನ್ನು ಹತೋಟಿಯಲ್ಲಿಡಲು ಬಿಜ್ಜಳ ರುದ್ರನ ತಲೆದಂಡಕ್ಕೆ ಮುಂದಾಗುತ್ತಾನೆ.

ಪ್ರಭುತ್ವವನ್ನು ಪ್ರಶ್ನಿಸುವ ಮತ್ತು ಸಾಮಾಜಿಕ ನೆಲೆಯಲ್ಲಿ ನಿಂತು ಒಬ್ಬ ಸಾಮಾನ್ಯನಂತೆ ಬಸವಣ್ಣನು ಬಿಜ್ಜಳನಿಗೆ ಹೇಳುವ ಈ ಮಾತುಗಳು ತುಂಬಾ ಮಾರ್ಮಿಕವಾಗಿವೆ: “ಅರಮನೆಯ ಪಲ್ಲಂಗದ ಮೇಲೆ ಒರಗಿ ಸುಂದರ ಕಂಠಗಳ ಧ್ವನಿ ಕೇಳುವವರಿಗೆ ಬೀದಿಯ ಗೋಳು ತಟ್ಟುವುದು ಕಷ್ಟ. ತಮ್ಮ ಕಿರೀಟದ ಒಂದು ವಜ್ರ ಈ ದೇಶದ ಅರ್ಧ ಹೊಟ್ಟೆಗಳಿಗೆ ಅನ್ನ ಕೊಡಬಲ್ಲದು. ಚನ್ನಕೇಶವನ ಮುತ್ತಿನ ಹಾರ ಅನೇಕರ ಕಂಬನಿ ಒರೆಸಬಲ್ಲದು. ಇದನ್ನು ಹಲವೊಮ್ಮೆ ಹೇಳಿದ್ದೇನೆ. ಮತ್ತೆ ಹೇಳುತ್ತಿದ್ದೇನೆ.” ಆದರೂ ವ್ಯವಸ್ಥೆಯ ಎದುರು ಕ್ರಾಂತಿ ತಣ್ಣಗಾಗುತ್ತದೆ.

ತಮ್ಮ ಪರಂಪರೆಗೆ ‘ಸಂಕ್ರಾಂತಿ’ಯಲ್ಲಿ ಅದ್ಭುತವಾಗಿ ಪ್ರತಿಕ್ರಿಯಿಸಿದ್ದಾರೆ ಲಂಕೇಶ್‌. ಸಂಕ್ರಾಂತಿ ‘ಹನ್ನೆರಡನೆ ಶತಮಾನದ ವಚನ ಚಳುವಳಿಯನ್ನು’ ತೀವ್ರವಾಗಿ ಪರೀಕ್ಷೆಗೆ ಗುರಿಪಡಿಸಿದ ನಾಟಕ. ಆ ಮೂಲಕ ವಚನ ಚಳುವಳಿಯ ಬಗೆಗೆ ತಮ್ಮ ಸಂದೇಹ ಸೂಚಿಸುತ್ತ ಚಿಕಿತ್ಸಕ ನೋಟ ಬೀರಿದ್ದಾರೆ. ಮತಾಂತರ ಕುರಿತಂತೆಯೂ ಮಾತನಾಡಿದ್ದಾರೆ. ಜಾತಿ ಬದಲಾವಣೆಯಿಂದ ಆಗಬಹುದಾದ ಲಾಭವೇನು ಎಂದು ಕೇಳುವ ಪ್ರಶ್ನೆ ಗಮನಾರ್ಹ ಹಾಗೂ ಸಾರ್ವಕಾಲಿಕ.

ಬಿರುಕು

ತಮ್ಮ ‘ಬಿರುಕು’ ಕಾದಂಬರಿಯನ್ನು ಲಂಕೇಶರು ನಾಟಕವಾಗಿ ರೂಪಾಂತರಿಸಿದ್ದಾರೆ. ‘ವಸ್ತು’ವನ್ನು ಕಾದಂಬರಿ ಬಂಧ ದಿಂದ ಬಿಡಿಸಿ ‘ನಾಕ’ ಬಂಧಕ್ಕೆ ಅಳವಡಿಸಿರುವ ಬಗೆ ಗಮನಾರ್ಹ. ಕಾದಂಬರಿಯ ಅಂತರ್ಮುಖತೆ ನಾಟಕದಲ್ಲಿ ‘ದೃಶ್ಯ’ರೂಪ ಪಡೆಯುವಲ್ಲಿ ಸಫಲವಾಗಿದೆ. ಒಂದೊಂದೇ ವಾಕ್ಯದ ಸಂಭಾಷಣೇ ತೀವ್ರ ನಾಟಕೀಯತೆಗೆ ಕಾರಣವಾಗಿದೆ. ೧೯೭೦ರಲ್ಲಿ ‘ಪ್ರತಿಮಾ ನಾಟಕರಂಗ’ ಇದನ್ನು ರಂಗ ಪ್ರಯೋಗವಾಗಿಸಿದೆ.

ಗಾತ್ರದಲ್ಲಿ ಸದೃಢವಾಗಿರುವ ಈ ನಾಟಕ ಸೂತ್ರದಲ್ಲಿ ‘ಯುವ ಪ್ರಜ್ಞೆ’ಯ ಪರಕೀಯತೆ, ಅಸಹಾಯಕತೆ, ಅನಾಥತೆ ಹಾಗೂ ಪ್ರತಿಭಟನೆಯನ್ನು ಒಳಗೊಂಡಿದೆ. ನಗರ-ವ್ಯಕ್ತಿ, ಶ್ರೀಮಂತಿಕೆ-ವ್ಯಕ್ತಿ, ಗ್ರಾಮ್ಯ-ನಗರ, ಗಂಡು-ಹೆಣ್ಣು, ಸಹಜತೆ-ಆಧುನಿಕತೆಗಳ ಮುಖಾಮುಖಿ ಈ ನಾಟಕದ ವೈಶಿಷ್ಟ್ಯ. ಇದು ಲಂಕೇಶರಿಗೆ ಇಷ್ಟವಾದ ‘ವಸ್ತು’. ವ್ಯಕ್ತಿ ಸ್ವಾತಂತ್ಯ್ರ, ಜಾತಿ, ವೈಯಕ್ತಿಕತೆ, ಸಾಮಾಜಿಕ ವರ್ತನೆ, ಸಾಮಾಜಿಕ ಸಂಬಂಧಗಳ ವಿವಿಧ ಆಯಾಮ, ಪರಿಣಾಮ-ಪ್ರಭಾವಗಳನ್ನು ಈ ನಾಟಕ ನಿರ್ವಚಿಸಿದೆ.

ಸಂಕ್ರಮಣದ ಅವಸ್ಥೆಯಲ್ಲಿರುವ ಬಸವರಾಜು, ಅವನ ಬದುಕಿನ ತಲ್ಲಣದ ಚಿತ್ರಣ ಈ ನಾಟಕದ ಕೇಂದ್ರ. ನಾಟಕ ವಾಸ್ತವ, ಭ್ರಮೆ, ಕಲ್ಪನೆ, ಪರಕೀಯತೆ, ಅಸ್ಪಷ್ಟತೆಗಳನ್ನು ಅದ್ಭುತವಾಗಿ ಬಳಸಿಕೊಂಡಿದೆ; ವ್ಯಂಜಿಸಿದೆ. ನಗರ, ಗ್ರಾಮ ಎಂದು ಇಬ್ಬಾಗವಾಗಿರುವ ಈ ದೇಶದ ಹೊಸ ಪೀಳಿಗೆಯ ವ್ಯಕ್ತಿತ್ವದಲ್ಲಿನ ‘ಬಿರುಕು’ಗಳನ್ನು ಪ್ರತಿಫಲಿಸುವಲ್ಲಿ ಈ ನಾಟಕ ಸಫಲವಾಗಿದೆ. ಸಮಾಜ, ಶಿಕ್ಷಣ, ಕುಟುಂಬ, ಸಂಬಂಧಗಳನ್ನು ನಾಟಕ ತೀವ್ರವಾಗಿ ವಿಶ್ಲೇಷಿಸುತ್ತದೆ. ಇಲ್ಲಿನ ವ್ಯಂಗ್ಯ, ವಿಡಂಬನೆ, ಅಸಂಗತತೆ ಗಮನ ಸೆಳೆಯುತ್ತವೆ. ಒಟ್ಟಾರೆ ತಮ್ಮ ನಾಟಕಗಳ ಕುಪಿತ ಯುವಕರನ್ನು ಕುರಿತ ಲಂಕೇಶರ ದೃಷ್ಟಿ ವ್ಯಂಗ್ಯ ಪೂರಿತ, ಚಿಕಿತ್ಸಕ ಮತ್ತು ವಿಶ್ಲೇಷಕವಾದುದು.

೧೯೭೩ರಲ್ಲಿ ಪ್ರಕಟಗೊಂಡ ಈ ನಾಟಕದ ‘ಸಂಭಾಷಣೆ’ ಲಂಕೇಶರ ಉಳಿದ ನಾಟಕಗಳಂತೆಯೇ, ಚುಟುಕು, ಗ್ರಾಮ್ಯ, ಧ್ವನಿಪೂರ್ಣ. ಸಹಜ ಸಂಭಾಷಣೆಯಿಂದಾಗಿ ನಾಟಕ ಸರಾಗ ಓದಿಗೆ ದಕ್ಕುತ್ತದೆ. ಸರಳತೆ ಮತ್ತು ಧ್ವನಿಶಕ್ತಿಯಿಂದಾಗಿ ನಾಟಕ ಅರ್ಥಪೂರ್ಣವೆನಿಸುತ್ತದೆ. ವ್ಯಂಗ್ಯ, ವಿಡಂಬನೆ, ಹಾಸ್ಯ, ಕ್ರೌರ್ಯ, ಹಿಂಸೆ ಈ ಎಲ್ಲವನ್ನೂ ಒಂದೇ ಸಂದರ್ಭದಲ್ಲಿ ಭಿನ್ನ ಪಾತ್ರಗಳ ಮೂಲಕ ಹೊಮ್ಮಿಸಿರುವ ನಾಟಕಕಾರರ ಕೌಶಲ್ಯ ಕುತೂಹಲಕರವಾಗಿದೆ. ಇಲ್ಲಿನ ‘ಓಡುವಿಕೆ’ ರೂಪಕವಾಗಿದೆ. ತಾವೇ ಸೃಷ್ಟಿಸಿಕೊಂಡ ಒಳಸುಳಿಗಳಲ್ಲಿ ಸಿಲುಕಿ ಒದ್ದಾಡುವ, ವಿಷಾದ ಪಡುವ ಪಾತ್ರಗಳು ಸಾಂಕೇತಿಕತೆ ಪಡೆದಿವೆ. ಬದುಕಿನ ಮೌಲ್ಯಗಳ ಅರ್ಥಪೂರ್ಣತೆಯನ್ನು ವಿಶ್ಲೇಷಿಸುತ್ತ, ಒಳ ಹೊರಗಿನ ‘ವ್ಯಕ್ತಿತ್ವ’ಗಳನ್ನು ಬಯಲು ಮಾಡುತ್ತ ಸಾಗುವ ನಾಟಕ ಮೇಲ್ನೋಟಕ್ಕೆ ‘ಲಘು’ ಎನಿಸಿದರೂ ಅಂತಿಮವಾಗಿ ಬೀರುವ ಘನೀಕೃತ ಪರಿಣಾಮ ಗಮನಾರ್ಹ.

ಸಮಾಜವನ್ನು ಅತ್ಯಂತ ಕುತೂಹಲದಿಂದ, ಬೆರಗಿನಿಂದ ನೋಡಿ, ಅದನ್ನು ನಾಟಕದಲ್ಲಿ ಪ್ರತಿಫಲಿಸಿರುವ ‘ರೀತಿ’ ಲಂಕೇಶರ ವೈಶಿಷ್ಟ್ಯತೆಯನ್ನು ತೋರಿಸುತ್ತದೆ. ಗೆಳೆಯರು, ಪ್ರೇಮ, ದುಡ್ಡು, ಶಿಕ್ಷಣ, ಪರಿಸರ ಇವುಗಳನ್ನು ‘ಭೂತಕನ್ನಡಿ’ಯಲ್ಲಿ ತೋರಿಸಿದಂತೆ ನಿರೂಪಿಸಿರುವ ಬಗೆ ಆಹ್ಲಾದಕರವಾಗಿದೆ. ಜೀವನದ ಸಾದಾ-ಸೀದಾ ಅನುಭವಗಳೂ ಭಿನ್ನವೂ, ವಿಶಿಷ್ಟವೂ, ವ್ಯಕ್ತಿನಿಷ್ಟವೂ ಆಗಬಲ್ಲವು; ಧ್ವನಿಪೂರ್ಣತೆಯನ್ನು ಪಡೆಯಬಲ್ಲವು ಎಂಬುದನ್ನು ಈ ನಾಟಕದ ವಸ್ತು, ಅಭಿವ್ಯಕ್ತಿಯ ಮೂಲಕ ಗ್ರಹಿಸಬಹುದು. ದುರಂತವೆಂದರೆ ವ್ಯಕ್ತಿಪ್ರಜ್ಞೆಯ ಬಿರುಕು ಹೇಗೋ ಮುಚ್ಚಲ್ಪಡುತ್ತದೆ! ಆದರೆ ಭಾರತದ ಸಾಮಾಜಿಕ ಬಿರುಕು?

ಗುಣಮುಖ

ಲಂಕೇಶ್‌ ಸಂಕ್ರಾಂತಿ ಬರೆದ ಇಪ್ಪತ್ತೆರಡು ವರ್ಷಗಳ ನಂತರ ಗುಣಮುಖ ನಾಟಕ ಬರೆದರು. ಕ್ರಿ.ಶ. ೧೬೮೮ರಿಂದ ೧೭೪೭ರವರೆಗೆ ಬದುಕಿದ್ದ ನಾದಿರ್ ಷಾನ ಚರಿತ್ರೆಯ ಘಟನಾವಳಿಯ ಕಣ್ಣಲ್ಲಿ ಸಮಕಾಲೀನ ಸಮಾಜದ ನಿರ್ವೀರ್ಯ ಸ್ಥಿತಿಯನ್ನು ಈ ನಾಟಕದಲ್ಲಿ ಚಿತ್ರಿಸಿದ್ದಾರೆ. ಈ ನಾಟಕದ ಕಾಲ “ಆತ್ಮನಿರೀಕ್ಷೆಯ ಆಕ್ರಮಣದ ಆಧುನಿಕ ಕಾಲ” ಎಂದು ನಾಟಕಕಾರರೇ ಹೇಳಿಕೊಂಡಿದ್ದಾರೆ. ಆದ್ದರಿಂದ ಸಮಕಾಲೀನ ತುಡಿತಗಳ ಅನಾವರಣವೇ ನಾಟಕಕಾರರ ಉದ್ದೇಶ ಎಂಬುದು ಸ್ಪಷ್ಟವಾಗುತ್ತದೆ.

ನಾಟಕ ಆರಂಭವಾಗುವುದು ನಾದಿರ್ ಷಾ ಅಸ್ವಸ್ಥನಾಗಿ, ಸಿಡಿಮಿಡಿಗೊಂಡು ಕಾಯಿಲೆಯಲ್ಲಿ ನರಳುತ್ತಿರುವ ಸ್ಥಿತಿಯಿಂದ. ಸುಳ್ಳು, ವಂಚನೆ, ಮೋಸ, ಸೋಗಲಾಡಿತನ, ಅಪ್ರಾಮಾಣಿಕತೆಗಳನ್ನು ಸಹಿಸದ ನಾದಿರ್ ಷಾ ಯುದ್ಧ, ಗೆಲುವು, ರಾಜ್ಯ, ಸಿಂಹಾಸನ, ಚಿನ್ನ, ವಜ್ರ, ಕೀರ್ತಿಗಳಿಗೆ ಮನಸೋತವನು. ಅವನು ಭಾರತವನ್ನು ಗೆಲ್ಲಲು ಬಂದ ವೇಳೆಯಲ್ಲಿ ಭಾರತ ಅರಾಜಕತೆಯಿಂದ ಕೂಡಿತ್ತು. ಇಲ್ಲಿನ ರಾಜರು ವಿವೇಕಶೂನ್ಯರಾಗಿ, ಬುದ್ಧಿ ಕೆಟ್ಟವರಂತೆ ಕಾಣುತ್ತಿದ್ದರು. ಪ್ರಜೆಗಳ ಹಿತರಕ್ಷಣೆಯನ್ನಾಗಲೀ, ಸಾಮಾಜಿಕ ಸೇವಾಕಾಂಕ್ಷೆಯನ್ನಾಗಲಿ ಹೊಂದಿರದ ಇವರು ತಮ್ಮ ಸ್ಥಾನಮಾನಗಳನ್ನು ಭದ್ರಪಡಿಸಿಕೊಳ್ಳುವಲ್ಲಿ, ಆಧಿಪತ್ಯಕ್ಕೆ ಸಂಚಕಾರ ಬಂದಾಗ ಮೇಲಿನವರನ್ನು ಯಾವುದೇ ವಾಮಮಾರ್ಗದಿಂದ ಸರಿಪಡಿಸಿಕೊಂಡು ತಾವು ಸುಖವಾಗಿದ್ದು ಹೆಣ್ಣು, ಹೆಂಡ, ಅರಮನೆಯ ಸುಖಭೋಗಗಳ ಲೋಲುಪದಲ್ಲಿ ಬದುಕುತ್ತಿದ್ದರು. ನಾದಿರ್ ಷಾ ಇಲ್ಲಿನ ಸ್ಥಿತಿ ಕಂಡು ಸಿಡಿಮಿಡಿಗೊಳ್ಳುತ್ತಾನೆ, ಅಸ್ವಸ್ಥನಾಗುತ್ತಾನೆ. ಮೊಗಲ್‌ ದೊರೆಯ ನಿಷ್ಕ್ರಿಯತೆ, ಜಡತೆ, ಹೊಲಸು ರಾಜಕಾರಣ, ಆಡಳಿತ ವ್ಯವಸ್ಥೆಯ ನಿಧಾನ ದ್ರೋಹ-ಎಲ್ಲವೂ ಅವನ ರೋಗವನ್ನು ಉಲ್ಬಣಗೊಳಿಸಿತ್ತವೆ.

ನಾಟಕ ಮನುಷ್ಯನ ಮೂಲಭೂತ ಸಂಗತಿಗಳನ್ನು ಹೆಚ್ಚು ಚರ್ಚಿಸುತ್ತದೆ. ಮನುಷ್ಯನ ಅಧಿಕಾರ ತಂದುಕೊಡುವ ಸಂತೋಷ, ಏರುವ ಎತ್ತರ, ಸಾಮಾಜಿಕ ಪ್ರತಿಷ್ಠ, ದುರಹಂಕಾರ, ಮೌಲ್ಯಗಳ ಪತನ, ಮನುಷ್ಯನ ನೀಚತನಗಳು ನಾದಿರ್ ಷಾನ ಪಾತ್ರ ಮುಖೇನ ಚಿತ್ರಿತವಾಗಿವೆ. ನಾದಿರ್ ಷಾ ಒಂದೆಡೆ ಕೂರಲಾರ, ಮಲಗಲಾರ, ವಿಶ್ವಾಸದಿಂದಿರಲಾರ. ಎಲ್ಲರ ವಿಷಯದಲ್ಲಿಯೂ ಸಂಶಯ, ಅನುಮಾನ, ದ್ವೇಷ, ರೊಚ್ಚು. ಅಹಂ, ಸ್ವಪ್ರತಿಷ್ಠೆ, ಈರ್ಷ್ಯೆಯಂತಹ ವಿಕೃತ ವ್ಯಾಧಿಯಲ್ಲಿ ಬಳಲುತ್ತಿದ್ದಾನೆ. ಇದಕ್ಕೆ ಭಾರತದ ರಾಜಕಾರಣ ಮತ್ತು ಆತನ ಮೂಲಭೂತ ಗೊಂದಲಗಳು ಕಾರಣವಾಗಿವೆ. ನಾದಿರ್ ಷಾನ ಈ ರೋಗ ದೇಹಕ್ಕೆ ಮೀರಿದ್ದು, ಮನಸ್ಸಿಗೆ ಸಂಬಂಧಿಸಿದ್ದು.

ಕೊಲ್ಲುವ, ಕೊಚ್ಚುವ, ರಾಜ್ಯ ವಿಸ್ತರಿಸುವ, ಭೋಗಿಸುವ, ಆ ಮೂಲಕವೆ ಜಗದ್ವಿಖ್ಯಾತನಾಗಿ ಮೆರೆಯಬಯಸುವ ನಾದಿರ್ ಷಾನಿಗೆ ಕಿವಿ ಕಿವುಡಾಗಿದೆ, ಕಣ್ಣು ಕಾಣದಾಗಿದೆ. ಇಂಥ ರೋಗವನ್ನು ವಾಸಿಮಾಡಬಲ್ಲ ವೈದ್ಯನಾಗಿ ಅಲಾವಿ ಖಾನ್‌ ಬರುತ್ತಾನೆ.

ಅಲಾವಿ ಖಾನ್‌ ಶ್ರೇಷ್ಠ ರಾಜವೈದ್ಯ. ಮೊಗಲ್‌ ದೊರೆಗೆ ಆಪ್ತ ಹಕೀಮ. ಸಾತ್ವಿಕ ಮನಸ್ಸಿನ ಈತನಿಗೆ ಸಮಾಜದ ಒಳಿತು ಮುಖ್ಯ. ದಿಲ್ಲಿಯ ಮೊಗಲ್‌ ರಾಜ್ಯದಲ್ಲಿ ರಾಜಕಾರಣಿಗಳ ಸೂಚನೆಯ ಮೇರೆಗೆ ಔಷಧಿ ಕೊಡಬೇಕಾಗಿ ಬಂದಾಗ, ಅಲ್ಲಿಂದ ಬಿಡುಗಡೆ ಪಡೆದು ಕಾಡುಮೇಡುಗಳಲ್ಲಿ ಅಲೆದಾಡಿಕೊಂಡು, ಬಡವರಿಗೆ ಚಿಕಿತ್ಸೆ ನೀಡುತ್ತಿದ್ದ ವಿವೇಕಸಂಪನ್ನ ಈ ವೈದ್ಯ. ಇನ್ನೊಬ್ಬ ಹಕೀಮ ಸಂಶುದ್ದೀನ್‌ ಖಾನ್‌ ಆಡಂಬರದ ವೈದ್ಯ. ತನ್ನ ಚಿಕಿತ್ಸೆಗೂ ಮೀರಿ ದೊರೆಯನ್ನು ಮೆಚ್ಚಿಸುವ ಹಂಬಲವುಳ್ಳವನ್ನು. ತನ್ನ ಅರ್ಹತೆಯನ್ನು, ಕರ್ತವ್ಯ ಪ್ರಜ್ಞೆಯನ್ನು ಹೇಳಿಕೊಂಡು ದೊರೆಯ ಮೆಚ್ಚುಗೆಗೆ ಹಾತೊರೆಯುವವನು. ಆದರೆ ಅಲಾವಿ ಖಾನ್‌ನಿಗೆ ಹಣ, ಮೆಚ್ಚುಗೆ, ಪದವಿ, ಅವಕಾಶ ಯಾವುದೂ ಬೇಕಿಲ್ಲ. ಆತನಿಗೆ ನಾದಿರ್ ಷಾ ಚಕ್ರವರ್ತಿಯೂ ಒಂದೆ, ಸಾಮಾನ್ಯ ರೋಗಿಯೂ ಒಂದೆ.

ಲಂಕೇಶ್‌ ತನ್ವೀರ್ ನಂತ ಸಾಮಾನ್ಯ ಅಡುಗೆಭಟ್ಟನ ಪಾತ್ರದ ಮೂಲಕ ಭಾರತದ ದೊರೆಗಳ ನಿರ್ವೀರ್ಯ ಸ್ಥಿತಿಯನ್ನು ಚಿತ್ರಿಸಿದ್ದಾರೆ. ತನ್ವೀರ್ ನ ಜುಜುಬಿ ಬೇಟೆಯನ್ನು ಕೊಂಡಾಡುವ ಹೊಗಳುಭಟ್ಟರ ಗುಂಪು ಮತ್ತು ಭಾರತದ ರಾಜರ ಕ್ರಿಮಿಗಳ ರೂಪದ ಬದುಕು ಒಬ್ಬ ಅಡುಗೆಭಟ್ಟ ಕೂಡ ವೀರಾಧಿವೀರನಂತೆ ರೂಪುಗೊಳ್ಳಲು ಕಾರಣವಾಗಿವೆ. ಇಲ್ಲಿನ ದೊರೆಗಳಾರೂ ನೇರ ಹೋರಾಟ ಮಾಡಿ ಜಯಸಾಧಿಸುವ ಹಟ, ಕೆಚ್ಚು, ಹಂಬಲ ಉಳ್ಳವರಾಗಿಲ್ಲ. ಮೊಗಲ್‌ ದೊರೆ ಮಹಮ್ಮದ್‌ ನಜೀರುದ್ದಿನ್‌ ಷಾ, ದಿವಾನರಾದ ಸಾದತ್‌ ಖಾನ್‌, ನಿಜಾಮ ಉಲ್‌ಮುಲ್ಕ್‌ಇವರದೆಲ್ಲ ಸ್ವಾಮಿ ದ್ರೋಹದ ಪಿತೂರಿ ರಾಜಕಾರಣ. ಆದ್ದರಿಂದಲೇ ಅಡಿಗೆಭಟ್ಟ ಸಹ ಬಾರತದ ಅರಾಜಕತೆಯಲ್ಲಿ ವೀರಾಧಿವೀರನಂತೆ ಕೊಲ್ಲುತ್ತಿದ್ದಾನೆ, ಸಿಡಿಮದ್ದಾಗಿದ್ದಾನೆ. ಇಂಥ ಸಂದರ್ಭದಲ್ಲಿ ಅಲಾವಿ ಖಾನ್‌ ತೋರಿಸಿಕೊಡುವ ಒಂದು ಪರಿಹಾರ ಪ್ರೇಮ. ಪ್ರೇಮದಿಂದ ಮಾತ್ರ ಆರೋಗ್ಯಕರ ಸಹಬಾಳ್ವೆಯ ಸಮಾಜ ನಿರ್ಮಾಣ ಸಾಧ್ಯ ಎಂದು ಅವನು ತೋರಿಸಿಕೊಡುತ್ತಾನೆ.

ನಾದಿರ್ ಷಾನ ರೋಗ ಕೇವಲ ಅವನದು ಮಾತ್ರವಲ್ಲ: ಅದೊಂದು ಸಾಮಾಜಿಕ ರೋಗ. ಈ ರೋಗ ಇಡೀ ಸಮಾಜವನ್ನೇ ನಾಶಮಾಡುತ್ತಿದೆ; ವ್ಯವಸ್ಥೆಯ ರೋಗವಾಗಿ ಪರಿಣಮಿಸಿದೆ. ಅದನ್ನು ಶಮನ ಮಾಡದಿದ್ದಲ್ಲಿ ಇಡೀ ಸಮಾಜಕ್ಕೆ ಉಳಿಗಾಲವಿಲ್ಲ. ಆದ್ದರಿಂದ ರೋಗದ ನಿಧಾನ, ಉಲ್ಬಣ-ಶಮನ ಪ್ರಕ್ರಿಯೆಗಳು ನಾಟಕದುದ್ದಕ್ಕೂ ನಡೆಯುತ್ತವೆ. ಇದರ ಏಕೈಕ ಪರಿಹಾರಕಾರ ಅಲಾವಿ ಖಾನ್‌. ದುರಹಂಕಾರಿ ದೊರೆಯ ಮನೋರೋಗಗಳನ್ನು ರೋಗಿಯ ಬಾಯಿಂದಲೇ ಕೇಳಿ ಚಿಕಿತ್ಸೆ ನೀಡುತ್ತಾನೆ. ಇಂಥ ಚಿಕಿತ್ಸೆ ಕ್ಲಿಷ್ವವೆನಿಸಿದಾಗಲೆಲ್ಲ ಅಲಾವಿ ಅಲ್ಲಾನನ್ನು ಪ್ರಾರ್ಥಿಸುತ್ತಾನೆ. ಇಡೀ ಮನುಕುಲದ ಕ್ಲಿಷ್ಟತೆಯ ಬಗ್ಗೆ ಮಾತನಾಡುತ್ತಾನೆ. “ದೇವರೇ, ದೇವರೇ, ಮನುಷ್ಯನನ್ನು ಕ್ಲಿಷ್ಟ ವಸ್ತುವಾಗಿ ಸೃಷ್ಟಿಸಿದೆ; ಅವನ ಸೆರೆಮನೆಗಳೇ ಅವನಿಗೆ ಗೊತ್ತಿಲ್ಲ” ಎಂದು ಮೊರೆ ಇಡುತ್ತಾನೆ.

ಕೊಲ್ಲುವ, ಕೊಚ್ಚುವ, ರಾಜ್ಯ ವಿಸ್ತರಿಸುವ, ಭೋಗಿಸುವ ಮೂಲಕವೇ ಜಗದ್ವಿಖ್ಯಾತನಾಗಿ ಮೆರೆಯುವ ನಾದಿರ್ ಷಾ ಬೌದ್ಧಿಕ ದಾರಿದ್ಯ್ರದಿಂದ ಹೃದಯಶೂನ್ಯವಾಗಿ ಮನುಷ್ಯ ಪ್ರೀತಿಯನ್ನೇ ಮರೆತವನಾಗಿ ವರ್ತಿಸುತ್ತಾನೆ.

ಅಲಾವಿಖಾನ್ ನಾದಿರ್ ಷಾನ ಮನೋರೋಗಗಳನ್ನೆಲ್ಲ ಕರಗಿಸಿ, ಮನುಷ್ಯನ ಉದಾತ್ತ ಭಾವನೆಗಳನ್ನು ಮೊಳೆಯಿಸಲು ಯತ್ನಿಸುತ್ತಾನೆ. ನಾದಿರ್ ಷಾ ದಿಗ್ವಜಯಿಯಾಗಿ, ಜಗದ್ವಿಖ್ಯಾತ ಚಕ್ರವರ್ತಿಯಾಗಿ ರಾರಾಜಿಸುತ್ತಾ ಮೇಲೇರುತ್ತಿರುವಾಗಲೇ ಕಗ್ಗತ್ತಲಿನಲ್ಲಿ, ನೋವಿನಲ್ಲಿ, ನೆನಪುಗಳಲ್ಲಿ, ಐಂದ್ರಿಯ ದಾಸ್ಯದಲ್ಲಿ, ಅಹಂಕಾರದಲ್ಲಿ, ಕೊಲ್ಲುವ, ಆಳುವ, ಹತ್ತಿಕ್ಕುವ ದಿಮಾಕಿನಲ್ಲಿ ಪ್ರಪಾತಕ್ಕಿಳಿಯುತ್ತಾನೆ. ಅವನ ಪಾಪಕೃತ್ಯಗಳು ಅವನಿಗೇ ತಿಳಿಯುತ್ತಿಲ್ಲ. ಅದನ್ನು ತಿಳಿಸಿಕೊಟ್ಟು ಸದ್ವರ್ತನೆಯತ್ತ ಷಾ ಮುಖ ಮಾಡುವಂತೆ ಅಲಾವಿ ಚಿಕಿತ್ಸೆ ನೀಡುತ್ತಾನೆ. ಅವನ ಚಿಕಿತ್ಸೆ ನಾದಿರ್ ಷಾನ ರೋಗವನ್ನು ಉಪಶಮನಕ್ಕೆ ತಂದು ‘ಗುಣಮುಖ’ನಾಗಲು ಅವಕಾಶ ಮಾಡಿಕೊಡುತ್ತದೆ. ಹೀಗೆ ಗುಣಮುಖ ನಾಟಕ ಒಂದು ಮಾನಸಿಕ ವಿಷಮತೆಯ ಶಮನದ ಸಾಧ್ಯತೆಯನ್ನು ಎತ್ತಿ ತೋರುತ್ತದೆ.

ಗುಣಮುಖ ಮತ್ತು ಸಂಕ್ರಾಂತಿ ನಡುವೆ ೨೨ ವರ್ಷಗಳ ಅಂತರವಿದೆ! ಈ ಸುಧೀರ್ಘ ಅವಧಿ ಲೇಖಕರ ಮೌನ, ಚಿಂತನೆ, ಅಭಿವ್ಯಕ್ತಿ ವಿಧಾನದ ಪರಿಕರಗಳನ್ನು ಗಮನಿಸುವಂತೆ ಮಾಡಿದೆ. ೧೭೪೦ರಲ್ಲಿ ಭಾರತವನ್ನಾಳಿದ ಪರ್ಶಿಯನ್‌ ದೊರೆ ‘ನಾದಿರ್ ಶಾ’. ಮೊಗಲರನ್ನು ಹಿಂದಿಕ್ಕಿ, ಇಲ್ಲಿ ಆಳ್ವಿಕೆ ಶುರು ಮಾಡಿ ದಿಗ್ವಿಜಯ ಸಾಧಿಸಿದ ನಂತರದ ಹಂತದಲ್ಲಿ ಬೇರೆ ವ್ಯಕ್ತಿಯಾಗತೊಡಗುತ್ತಾನೆ. ವ್ಯಕ್ತಿಗಳ ಸೋಗಲಾಡಿತನ, ಆಂತರಿಕ ಮತ್ತು ಬಾಹ್ಯ ಅರಾಜಕತ್ವ, ನಿರ್ವೀಯತೆ, ಗೋಸುಂಬೆತನದ ಎಲ್ಲ ದೌರ್ಬಲ್ಯ, ವ್ಯಕ್ತಿಹೀನತೆಯ ಲಕ್ಷಣಗಳನ್ನು ಅಂದಿನ ಭಾರತದ ಪ್ರಜೆಗಳಲ್ಲಿ, ಸಮಾಜದಲ್ಲಿ ಕಂಡ ನಾದಿರ್, ಮೇಲೆ ರೋಗಿಯಂತೆ ಭಾಸವಾದರೂ ಆಳದಲ್ಲಿ ತಲ್ಲಣಕ್ಕೀಡಾಗುತ್ತಾನೆ. “ನಾದಿರ್ ನ ಈ ವಿಚಿತ್ರ ದಿಗ್ವಿಜಯದ ಸೋಲಲಿನ ಜೀವನದಲ್ಲಿ ನನ್ನ ಮನಸ್ಸು ಸೆಳೆದದ್ದು ಆತನ ಅನುಮಾನ, ನಿಷ್ಠುರತೆ ಮತ್ತು ಕಾಯಿಲೆ ಘಟನಾವಳಿಗಳು ಮತ್ತು ಮನುಷ್ಯನ ದ್ವಂದ್ವಗಳು. ನಾದಿರ್ ನನ್ನು ರಸಾತಳಕ್ಕೆ ತಳ್ಳಿದರೂ ಆತ ಎದ್ದು ಬರುವ ರೀತಿ; ಮತ್ತು ಸತ್ಯ ಮತ್ತು ಸುಳ್ಳು ಒಬ್ಬ ಪ್ರತಿಷ್ಠನನ್ನು ಸ್ಪರ್ಶಿಸುವ ಬಗ್ಗೆ” ಎನ್ನುತ್ತಾರೆ ಲಂಕೇಶ್‌ ಈ ನಾಟಕದ ಮುನ್ನುಡಿಯಲ್ಲಿ.

‘ನಾದಿರ್’ ನ ರೋಗ ಪತ್ತೆ ಹಚ್ಚಿ ಚಿಕಿತ್ಸೆ ನೀಡುವ ಅಲಾವಿಖಾನ್‌ ಇಲ್ಲಿನ ಮತ್ತೊಂದು ಮುಖ್ಯ ಪಾತ್ರ ನಾದಿರ್ ರೋಗಗ್ರಸ್ತ ಸಮಾಜದ ಸಂಕೇತವಾದರೆ; ಅಲಾವಿಖಾನ್‌ ಪ್ರಬುದ್ಧತೆ, ಮುಗ್ಧತೆ, ಧರ್ಮನಿರಪೇಕ್ಷತೆಗಳ ಪ್ರತೀಕ. ಅಧಿಕಾರ, ಅಹಂಕಾರಗಳನ್ನು ತೊರೆದಾಗ ನೀನು ಮಗುವಾಗುವೆ, ಗುಣವಾಗುವೆ ಎಂದು ಹೇಳುವ ಅಲಾವಿಖಾನ್‌ ಮಾತು ವ್ಯಕ್ತಿ-ಸಮಾಜಕ್ಕೆ ಒಟ್ಟಿಗೆ ಹೇಳಿದಂತ ಮಾತು. ಆಧುನಿಕ ಭಾರತದ ಬರ್ಬರ ಬದುಕು, ಹುಸಿ ರಾಷ್ಟ್ರೀಯತೆ, ಅಂಧ ದೇಶಾಭಿಮಾನ, ಒಣಪ್ರತಿಷ್ಠೆ, ಅರಾಜಕತೆ, ಅನೈತಿಕ ಮಿಲನ, ವ್ಯಕ್ತಿಗಳ ಸೋಗಲಾಡಿತನ ಈ ಎಲ್ಲವನ್ನೂ ನಾಟಕ ಕೆಳಪದರಿನಲ್ಲಿ ಬಿಂಬಿಸುತ್ತದೆ. ಹಾಗೆ ನೋಡಿದರೆ ಸಂಕ್ರಾಂತಿಯ ಬಸವಣ್ಣನಿಗಿಂತಲೂ ಇಲ್ಲಿನ ಅಲಾವಿಖಾನ್‌ ಪಾತ್ರ ಹೆಚ್ಚು ಗಮನಾರ್ಹ. ಆ ಕಾರಣಕ್ಕೆ ಈ ನಾಟಕ ಹಿಂಸೆ ಮತ್ತು ಅಧಿಕಾರಗಳ ನಿರರ್ಥಕತೆಯನ್ನು ಸೂಚಿಸುತ್ತಲೇ ಗಾಂಧೀವಾದದ, ಸಮಾಜವಾದದ ಪ್ರಸ್ತುತತೆಯನ್ನು ತನಗರಿವಿಲ್ಲದೇ ತಿಳಿಸುತ್ತದೆ. ಚರಿತ್ರೆ ವರ್ತಮಾನದ ನೆನಪುಗಳಲ್ಲಿ ಪದರುಗಟ್ಟಿರುತ್ತದೆ ಮತ್ತು ಹಿಂಸಾಮೂಲದಿಂದಲೇ ವರ್ತಮಾನವಾಗುತ್ತಿದೆ. ಈ ಅನುಭವ ನಮಗೆ ಜಾತ್ಯತೀತ ಭಾರತದ ಕೋಮುವಾದಿ ಅಧಿಕಾರದ ಹಿನ್ನೆಲೆಯಲ್ಲಿ ವೇದ್ಯವಾಗುತ್ತದೆ. ಅಧಿಕಾರಿ ‘ವ್ಯಕ್ತಿ’ಗಿಂತಲೂ ಮಾನವ ‘ವ್ಯಕ್ತಿ’ ಬಲುಬೇಗ ಗುಣವಾಗುತ್ತಾನೆ. ವ್ಯಕ್ತಿ ಮಗುವಾಗುತ್ತಲೇ ಅವನ ರೋಗ ಮರೆಯಾಗತೊಡುತ್ತದೆ ಎಂಬ ಸಾಮಾಜಿಕ ಅರಿವು ನಾಟಕದ ಕೊನೆಯ ದೃಶ್ಯದಲ್ಲಿ ಸಂವೇದಿಸುತ್ತದೆ.

ಈ ನಾಟಕದ ಮೊದಲ ಎರಡು ಅಂಕಗಳಲ್ಲಿ ಮೊಗಲ್‌ ಚಕ್ರಾಧಿಪತ್ಯದ ಅವನತಿಯನ್ನು ನಾದಿರ್ ಶಾ ಮತ್ತು ಅವನ ಸಂಗಡಿಗರ ಕ್ರೌರ್ಯ ಮತ್ತು ಶೋಷಣೆಯನ್ನು ಮನಮುಟ್ಟುವಂತೆ ನಿರೂಪಿಸುವ ನಾಟಕಕಾರರು ಸಾಂಕೇತಿಕವಾಗಿ ಸಮಕಾಲೀನ ಭಾರತದ ಭ್ರಷ್ಟ ಪರಿಸರದ ಅಂತರಂಗವನ್ನು ತೆರೆದು ತೋರಿಸುತ್ತಾರೆ. ಮಾತುಗಾರಿಕೆಯಲ್ಲಿ ಒಂದು ಬಗೆಯ ವಿನೋದಪರತೆ ಮತ್ತು ವ್ಯಂಗ್ಯ ಉದ್ದೇಶಪೂರ್ವಕವಾಗಿದೆ. ಚರಿತ್ರೆಯ ಕಾಲದೇಶಗಳ ಪರಿಮಿತಿಯನ್ನು ಮೀರಿ ಸಮಕಾಲೀನ ಸಮಾಜದ ಇಣುಕುನೋಟವನ್ನು ಈ ಮೂಲಕ ಸಾಧಿಸಿದ್ದಾರೆ. ಸಾಮಾಜಿಕ ನೆಲೆಯಿಂದ ವ್ಯಕ್ತಯ ಅಂತರಂಗ ವಿಶ್ಲೇಷಣೆಗೆ ನಾಟಕ ಮುಂದುವರಿಯುವುದು ಮೂರನೇ ಅಂಕದಲ್ಲಿ; ಈ ಅಂಶವೇ ನಾಟಕದ ಶಿಖರದಂತಿದ್ದು, ಉಳಿದೆರಡು ಅಂಕಗಳು ಇದಕ್ಕೆ ಪೂರ್ವಾಭಾವಿಯಾಗಿಯೇ ರಚನೆಯಾದಂತಿವೆ. ಹಾಗೆ ನೋಡಿದರೆ ಇದೊಂದು ವ್ಯಕ್ತಿ ಪ್ರಧಾನ ನಾಟಕವೆಂದರೂ ಸರಿ. ನಾದಿರ್ ಷಾ ಪಾತ್ರ ರಚನೆಯ ಮೂಲಕವೇ ನಾಟಕದ ತಾತ್ವಿಕತೆ ನಿರೂಪಿತವಾಗುವುದು ಗಮನಾರ್ಹ.