ಕ್ರೌರ್ಯ ಹಿಂಸೆಗಳನ್ನು ಆನಂದಿಸುತ್ತಿದ್ದ ನಾದಿರ್ ಶಾ ಆಳದಲ್ಲಿ ಇದೆಲ್ಲದರ ನಿಷ್ಪಲತೆಯನ್ನು ಅರಿತವನು. ಎಲ್ಲರಲ್ಲಿಯೂ ಸ್ವಾರ್ಥ, ವಂಚನೆ, ಸುಳ್ಳುಗಳೇ ಅವನಿಗೆ ಅಧಿಕ ಪ್ರಮಾಣದಲ್ಲಿ ಕಾಣುತ್ತಿದ್ದವು. ತನ್ನ ವಂಶದ ಬಗೆಗಿನ ಕೀಳರಿಮೆ, ಹುಟ್ಟನಿಂದ ಚಕ್ರವರ್ತಿಗಳಾಗಿದ್ದವರ ಬಗೆಗಿನ ತಿರಸ್ಕಾರ ಈ ಎಲ್ಲ ತುಮುಲಗಳೂ ಇನ್ನೂ ಹೆಚ್ಚಿನ ಒರಟುತನಕ್ಕೆ, ಕ್ರೌರ್ಯಕ್ಕೆ ಅವನನ್ನು ಪ್ರೇರೇಪಿಸುತ್ತಿದ್ದವು. ಇಬ್ಬಗೆಯ ವ್ಯಕ್ತಿತ್ವದಿಂದಾಗಿ ದೈಹಿಕ ಅಸ್ವಸ್ಥತೆಗೆ ಗುರಿಯಾದ ನಾದಿರ್ ಷಾನ ಕಾಯಿಲೆ ಗುಣಪಡಿಸಲು ವೈದ್ಯರಿಗೆ ಸಾಧ್ಯವಾಗದ ಮಟ್ಟಿಗೆ ಅವನು ಜನಸಂಪರ್ಕದಿಂದ ವಂಚಿತನಾಗಿದ್ದ. ಅವನ ದೇಹ-ಮನ್ಸುಗಳ ಆಳವನ್ನು ಹೊಕ್ಕು ಚಿಕಿತ್ಸೆ ಮಾಡುವ ಅಲಾವಿಖಾನ್‌ ಒಬ್ಬ ವಿಶಿಷ್ಟ ಬಗೆಯ ಹಕೀಮ. ನಾಟಕದ ಮೂರನೆಯ ಅಂಕ ನಾದಿರ್ ಶಾ ಮತ್ತು ಅಲಾವಿಖಾನ್‌ರ ಮುಖಾಮುಖಿ ಮತ್ತು ವಾಗ್ವಾದಗಳಿಗೆ ಮೀಸಲಾಗಿದೆ. ನಾಟಕದ ತಾತ್ವಿಕತೆಯನ್ನು ಸ್ಪಷ್ಟವಾಗಿ ನಿರೂಪಿಸುವ ಈ ವಾಗ್ವಾದ ಅತಿಯಾದ ಮಾತುಗಾರಿಕೆಯ ನೀತಿ ಪಾಠದಂತೆ ಕಾಣಿಸಿದರೂ ಮನುಷ್ಯನ ಅಸ್ತಿತ್ವಕ್ಕೆ ಸಂಬಂಧಿಸಿದ ಮೂಲ ಪ್ರಶ್ನೆಗಳಿಗೆ ಉತ್ತರವನ್ನು ಹುಡುಕುವ ಪ್ರಯತ್ನವಾಗಿ ಗಾಢವಾಗಿ ಮನಸ್ಸನ್ನು ತಟ್ಟುತ್ತದೆ. ನಿರ್ದಿಷ್ಟ ದೇಶ ಕಾಲಗಳಿಗೆ ಬದ್ಧವಾದ ಚರಿತ್ರೆಯ ನೆಲೆಯಿಂದ ಹೊರಟ ನಾಟಕ, ಸಮಕಾಲೀನ ಸಮಾಜದ ಕೇಡು ಅನಿಷ್ಟಗಳನ್ನು ಪರೋಕ್ಷವಾಗಿ ಪರಿಶೀಲಿಸುತ್ತಾ ಮುಂದುವರಿದು ಎಲ್ಲ ಕಾಲದ ಬದುಕಿನ ದ್ವಂದ್ವವನ್ನು ಒಂಟಿತನವನ್ನು ವಿಶ್ಲೇಷಿಸಿ ಇದಕ್ಕೆ ಪರಿಹಾರವನ್ನು ಶೋಧಿಸುವಲ್ಲಿಗೆ ದ್ವಂದ್ವವನ್ನು ಒಂಟಿತನವನ್ನು ವಿಶ್ಲೇಷಿಸಿ ಇದಕ್ಕೆ ಪರಿಹಾರವನ್ನು ಶೋಧಿಸುವಲ್ಲಿಗೆ ಮುಕ್ತಾಯವಾಗುತ್ತದೆ. ನಾಟಕಕಾರರ ಅನ್ವೇಷಕ ಪ್ರವೃತ್ತಿ ನಾಟಕದ ರಚನಾ ಸೂತ್ರವನ್ನು ಬಿಗಿಯಾಗಿ ಹಿಡಿದಿಟ್ಟಿರುವುದನ್ನು ಗಮನಿಸಲೇಬೇಕು.

ಈ ನಾಟಕದಲ್ಲಿ ಲಂಕೇಶ್‌ ತಮ್ಮ ಹಿಂದಿನ ನಾಟಕಗಳಿಗಿಂತಲೂ ಭಿನ್ನ ಎನ್ನಬಹುದಾದ ಭಾಷೆಯನ್ನು ಬಳಸಿದ್ದಾರೆ. ಇದು ಉದ್ದೇಶ ಪೂರ್ವಕವಾಗಿ ಎಂಬಂತೆ ಕಂಡುಬಂದರೂ ನಿರ್ವಹಣೆ ಸುಲಲಿತವಾಗಿರುವುದಕ್ಕೂ ಕಾರಣವಾಗಿದೆ. ಒಂದು ರೀತಿಯ ನಿರ್ಲಿಪ್ತ ಇಲ್ಲವೇ ತಟಸ್ಥ ಎನ್ನಬಹುದಾದದ್ದು ಇಲ್ಲಿನ ಭಾಷೆ. ಇಂಥ ಭಾಷೆಗೆ ಒಂದು ವಿಶಿಷ್ಟ ಲಕ್ಷಣವಿರುತ್ತದೆ. ಅಂತಲ್ಲಿ ನಾಟಕಕಾರ ಭಾಷೆಯ ಅನ್ವೇಷಣೆಗಿಂತಲೂ ವಸ್ತುವಿನ ಅನ್ವೇಷಣೆಗೆ, ಪಾತ್ರಗಳ ವಿಶ್ಲೇಷಣೆಗೆ ಗಮನ ಕೊಡುತ್ತಾನೆ. ಭಾಷೆಯ ಮೂಲಕ ಪಾತ್ರವನ್ನು ಕಟ್ಟುವ ಬದಲು ಸಮಸ್ಯೆಯ ಮೂಲಕ ಪಾತ್ರಗಳನ್ನು ಕಟ್ಟುತ್ತಾ ಹೋಗುತ್ತಾನೆ. ಇಂಥ ಕಡೆ ವ್ಯಕ್ತಿ ವಿಶಿಷ್ಟ ಭಾಷೆಗಿಂತ ಶಿಷ್ಟ ಭಾಷೆಯೇ ಹೆಚ್ಚು ಪ್ರಯೋಜನಕಾರಿಯಾದ್ದು. ಈ ಶಿಷ್ಟ ಭಾಷೆ ಕೂಡ ಸಮಕಾಲೀನವಾದ ಆಧುನೀಕರಣಗೊಂಡ ಭಾಷೆಯಲ್ಲ. ಕಾಲ ಮತ್ತು ಸ್ಥಳಗಳಿಂದ ಕೊಂಛ ದೂರ ನಿಂತ ಭಾಷೆ. ನಾಟಕದ ಯಾವುದೇ ಹಂತದಲ್ಲೂ ಈ ದೂರಕ್ಕೆ ಧಕ್ಕೆ ಬಾರದ ಹಾಗೆ ಎಚ್ಚರಿಕೆಯಿಂದ ಭಾಷೆ ಬಳಕೆಗೊಂಡಿರುವುದು ಈ ನಾಟಕದ ವೈಶಿಷ್ಟ್ಯ. ಹಾಗಾಗಿ ಇಲ್ಲಿನ ಬಾಷೆ ಒಟ್ಟಾರೆ ಲಂಕೇಶರ ನಾಟಕಗಳ ಭಾಷೆ. ಶ್ರೀರಂಗ, ಕಾರ್ನಾಡ್‌, ಕಂಬಾರ ಮೊದಲಾದ ನಾಟಕಕಾರರಿಗಿಂತ ಭಿನ್ನವಾದ, ಹಾಸ್ಯ ಪೂರ್ಣವಾದ, ಕಾವ್ಯಮಯತೆ, ಕಟಕಿ, ಪೃಥಕ್ಕರಣೆ ಮತ್ತು ಅಚಾನಕತೆಯಿಂದ ಕೂಡಿರುವ ಭಾಷೆ ಇಲ್ಲಿದೆ. ನವ್ಯ ಮನೋಧರ್ಮ, ಭಿನ್ನ ಚಿಂತನೆ, ಪೂರಕ ಭಾಷೆ ಅಪೂರ್ವ ವ್ಯಂಗ್ಯ, ಚಿಕಿತ್ಸಕ ನೋಟ, ಸಮುದಾಯದ ತಲ್ಲಣ, ವ್ಯಕ್ತಿ ಒಳನೋಟಗಳಿಂದ ಕೂಡಿದ ಈ ನಾಟಕದ ಮೂಲಕ ಕನ್ನಡದ ಮಹತ್ವದ ನಾಟಕಕಾರರಾಗಿದ್ದಾರೆ ಲಂಕೇಶ್‌. ಕೇವಲ ಸಾಹಿತ್ಯ ಕೃತಿಗಳಿಗಾಗಿ ಅಲ್ಲದೆ ಪ್ರದರ್ಶನ ಕೃತಿಗಳಾಗಿಯೂ ಲಂಕೇಶರ ನಾಟಕಗಳು ಅಪಾರ ಯಶಸ್ಸು ಗಳಿಸಿವೆ ಹಾಗೂ ಮಹತ್ವದ ಪರಿಣಾಮಗಳನ್ನು ಬೀರಿವೆ.

ಇದು ಲಂಕೇಶರ ಕೊನೆಯ ನಾಟಕ. ‘ನವ್ಯ’ ಮನೋಧರ್ಮದ ಎಲ್ಲ ಸೆಳಕುಗಳನ್ನು ದಾಟಿ ಸಮಾಜವಾದಿ ನೋಟ ಮತ್ತು ನೆಲೆಗೆ ಬದ್ಧವಾಗಿ, ಗಾಂಧೀ, ಬಸವ, ಬುದ್ಧರ ಚಿಂತನೆಗಳಿಂದ ಗಟ್ಟಿಗೊಂಡು ಸಮಾಧಾನ ಚಿತ್ತರಾಗುತ್ತಿದ್ದ ತಿರುವಿನ ಹಂತದಲ್ಲಿ ಲಂಕೇಶರು ರಚಿಸಿದ್ದು ಈ ನಾಟಕ. ಹಾಗಾಗಿಯೇ ಇದು ಅವರ ಉಳಿದ ನಾಟಕಗಳಿಗಿಂತ ಹೆಸರು, ವಸ್ತು, ಒಳತೋಟಿ, ಪರಿಣಾಮ ಹಾಗೂ ಭಾಷೆಯ ನೆಯ್ಗೆಯಲ್ಲಿ ಭಿನ್ನವಾಗಿದೆ. ಇದರ ವಸ್ತು ಐತಿಹಾಸಿಕ; ಆದರೆ ಕಾಣ್ಕೆ ಸಾಮಾಜಿಕ, ಸಮಕಾಲೀನ ಮತ್ತು ಸಾರ್ವಕಾಲಿಕ. ಇಲ್ಲಿ ನಾಯಕ ‘ನಾದಿರ್’ನ ಕಾಯಿಲೆ ಗುಣಮುಖವಾಗುವುದು ಕುತೂಹಲ, ಆಶ್ಚರ್ಯ, ಸಮಾಧಾನ ತರುತ್ತದೆ. ಅವನ ಕಾಯಿಲೆಯ ಮೂಲ ಸ್ಪಷ್ಟವಾದಂತೆ, ನಾಟಕ ತನಗರಿವಿಲ್ಲದಂತೆ ಮತ್ತು ನೋಡುಗನಿಗೆ ತಟ್ಟನೆ ಅರಿವಾಗದಂತೆ ನೀಡುವ ಸಂದೇಶ ಅಥವಾ ವ್ಯಕ್ತಿತ್ವದಲ್ಲಿ ತರಬಹುದಾದ ಬದಲಾವಣೆ ಗಮನ ಸೆಳೆಯುತ್ತದೆ. ಅಧಿಕಾರ ಎಲ್ಲ ರೋಗಗಳ ಮೂಲ; ಮಾನವೀಯತೆ ಕಾಯಿಲೆಗೆ ಪರಿಹಾರ ಎಂಬ ಸರಳ ತಿಳುವಳಿಕೆ ಮಾರ್ಮಿಕವಾಗಿ, ಸಾಂಕೇತಿಕವಾಗಿ ಮತ್ತು ಅರ್ಥಪೂರ್ಣವಾಗಿ ಬಿಂಬಿತವಾಗುತ್ತದೆ. ‘ನಾದಿರ್’ನ ಅಧಿಕಾರ ಲಾಲಸೆ, ಅವನ ದಿವಾನರ ಲಂಚಗುಳಿತನ, ಧರ್ಮಬಾಹಿರ ನಡವಳಿಕೆ, ದೇಸೀ ಒಡೆಯರ ಲಾಲಸೆ, ನಾಯಿಪಾಡುಗಳು ತಟ್ಟನೆ ಕಾಡಲು ಸುರು ಮಾಡುತ್ತವೆ. ಕೊನೆಗೆ ‘ನಾದಿರ್’ ಪ್ರಬುದ್ಧನಾಗುತ್ತಾನೆ. ಮಗುವಾಗ ತೊಡಗಿದೊಡನೆ ಅವನು ಹಕ್ಕಿಯಾದಂತೆ ಸಂಭ್ರಮಿಸುತ್ತಾನೆ. ಅಲಾವಿಖಾನ್‌ನಂತ ವೈದ್ಯರು ಇಲ್ಲವಾಗುತ್ತಿರುವ ಬಗ್ಗೆ ಖೇದ ಉಂಟಾಗುತ್ತದೆ. ಈ ಸಮಾಜ ಚಲಿಸುತ್ತಿರುವ ನೆಲೆಗೆ ವಿರುದ್ಧವಾದ ಆದರೆ ಬದುಕಿಗೆ ಹತ್ತಿರವಾದ ಮತ್ತು ಬದ್ಧವಾದ ಜೀವನ ವಿಧಾನವನ್ನು ನಾಟಕ ನೋಡುಗನ ಮುಂದಿಡುತ್ತದೆ. ಲಂಕೇಶರ ಅರಿವಿನ ಪ್ರಬುದ್ಧತೆ ಇಂತಹ ಬದಲಾವಣೆಗೆ ಹಪಹಪಿಸಿ, ಅಭಿವ್ಯಕ್ತಗೊಂಡಿರುವುದು ಕುತೂಹಲ, ಸಂತೋಷಗಳಿಗೆ ಎಡೆನೀಡುತ್ತದೆ.

ತಮ್ಮ ಸಾಹಿತ್ಯ ಮತ್ತು ಪತ್ರಿಕೆಯ ಉತ್ತುಂಗದಲ್ಲಿ ನವ್ಯದ ಮಾರ್ಗದರ್ಶಿ ಲೇಖಕರಾಗಿದ್ದ ಲಂಕೇಶರು ೧೯೯೪ರ ನಂತರ ಹಿಡಿದ ಹಾದಿಯೇ ಬೇರೆ. ಆವರೆಗೆ ವ್ಯಕ್ತಿ ಮತ್ತು ವ್ಯಕ್ತಿತ್ವ ಮುಖ್ಯವಾಗಿದ್ದ ಅವರ ಬರವಣಿಗೆ ಬದುಕು, ಬದುಕಿನ ಮಾರ್ಗ ಮತ್ತು ಬದುಕುವ ಮಾರ್ಗದ ಶೋಧನೆಗೆ ಇಳಿದದ್ದು ಗಮನಾರ್ಹ. ಹಾಗೆಯೇ ವೈಯಕ್ತಿಕ ಏಳ್ಗೆಗಿಂತ ಸಾಮೂಹಿಕ ಮತ್ತು ಸಾಮುದಾಯಿಕ ಆರೋಗ್ಯ ಮುಖ್ಯ, ಆ ಮೂಲಕ ಸಮಾಜ ನೆಮ್ಮದಿಯಾಗಿರಬಲ್ಲದು ಎಂಬ ಚಿಂತನೆ ಅವರ ಈ ನಾಟಕ ಸೇರಿದಂತೆ ಇತ್ತೀಚಿನ ಕತೆ, ಲೇಖನಗಳಲ್ಲಿ ಕಂಡುಬರುತ್ತದೆ. ಆ ನೆಲೆಯಲ್ಲಿ ‘ಗುಣಮುಖ’ ನಾಟಕ ಒಂದು ಸಾಹಿತ್ಯ ಕೃತಿಯಾಗಿ ಹಾಗೂ ರಂಗಪ್ರದರ್ಶನವಾಗಿ ಬಹುವಾಗಿ ಕಾಡುತ್ತದೆ.

ರಂಗದಲ್ಲಿ: ಈ ನಾಟಕದ ಪ್ರದರ್ಶನದಲ್ಲಿ ನಿರ್ದೇಶಕರು ಮಾಡಿಕೊಂಡಿರುವ ಬದಲಾವಣೆಗಳು ಅಥವಾ ರಂಗತಂತ್ರಗಳ ಬಗ್ಗೆ ಎರಡು ಮಾತು. ಸಾಹಿತ್ಯ ಕೃತಿಯಾಗಿ ನಾಟಕವೊಂದು ಕಾಣುವ ರೀತಿಯೇ ಬೇರೆ; ಓದುವಾಗ ಇಲ್ಲವೇ ನಾಟಕವನ್ನು ಪಠ್ಯವಾಗಿ ಓದುವಾಗ, ಬೋಧಿಸುವಾಗ-ಅದು ಯಾವ ಪ್ರಕಾರಕ್ಕೆ ಸೇರಿದ ನಾಟಕವೇ ಆಗಿರಲಿ-ಪರಿಣಾಮದಲ್ಲಿ ಏರಿಗಿಂತಲೂ ‘ಪೇರು’ ಜಾಸ್ತಿ. ಆದರೆ ಅದೇ ನಾಟಕ ರಂಗದ ಮೇಲೆ ನೀಡುವ, ಬೀರುವ ಪರಿಣಾಮ, ಪ್ರಭಾವಗಳು-ಗರಿಷ್ಠಮಟ್ಟದಲ್ಲಿದ್ದು- ಸಾಹಿತ್ಯ ಕೃತಿಯೊಂದು ನೀಡಬಲ್ಲ ಪರಿಮಾಣದಷ್ಟೇ ಅದಕ್ಕಿಂತಲೂ ಹೆಚ್ಚಿನ ಧನಾತ್ಮಕ ರೂಪದಲ್ಲಿರುತ್ತವೆ.

ಈ ನಾಟಕವನ್ನು ಪ್ರದರ್ಶಿಸಲು ನಿರ್ದೇಶಕರು ಮಾಡಿಕೊಂಡಿರುವ ಬದಲಾವಣೆಗಳು ಹೀಗಿವೆ. ೧. ಕೆಲವು ಅಂಕಗಳನ್ನು ಬಿಟ್ಟಿರುವುದು, ೨. ಕೆಲವು ಸಂಭಾಷಣೆಗಳನ್ನು ಕೈ ಬಿಟ್ಟಿರುವುದು, ೩. ಹಾಗೆಯೇ ಕೆಲವು ಮಾತುಗಳನ್ನು ಮೊಟಕುಗೊಳಿಸಿರುವುದು, ೪. ಅತ್ಯಂತ ಮುಖ್ಯವಾದ ಪ್ರಯೋಗವೆಂದರೆ ಕೇವಲ ಐವರು ನಟರಿಂದ ಮುಖ್ಯ ಪಾತ್ರಗಳನ್ನು ಬಿಂಬಿಸಿರುವುದು, ೫. ವೇದಿಕೆಯ ಮೇಲೆಯೇ ರಂಗ ಸಜ್ಜುಗೊಳಿಸುವುದು, ೬. ಸರಳ, ಸಾಂಕೇತಿಕ ವೇಷಭೂಷಣ, ೭. ಸ್ತ್ರೀ ಪಾತ್ರವೇ ಇಲ್ಲದಿರುವುದು! (ಪ್ರೊಥಿಯೂ ಪ್ರಯೋಗ).

ಹಲವಾರು ಪಾತ್ರಗಳು ನಾಟಕದ ವೈಶಿಷ್ಟ್ಯ ಮತ್ತು ಸಾಮಾನ್ಯ ಲಕ್ಷಣ. ಆದರೆ ನಿರ್ದೇಶಕ ಕೆಲವೇ ಪಾತ್ರಧಾರಿಗಳ ಮೂಲಕ ಹಲವಾರು ಪಾತ್ರಗಳನ್ನು ಮೂಡಿಸಿದಾಗ ಒಬ್ಬ ನಟ ಕೆಲವೇ ಕ್ಷಣದಲ್ಲಿ ನೀಡಬಹುದಾದ ಭಿನ್ನ ಅಭಿನಯದ ಅವಕಾಶ, ಸಾಮರ್ಥ್ಯಗಳ ಗಣನೆಯನ್ನು ಬಿಟ್ಟರೆ ನೋಡುಗನಿಗೆ ಇದರಿಂದ ಲಾಭವೇನೂ ಇಲ್ಲ, ಹಾಗಾದ ಮೇಲೆ ಇದು ನಿರ್ದೇಶಕರಿಗೆ ಅನುಕೂಲವಾದ ಮಾರ್ಪಾಟು ಎಂದುಕೊಳ್ಳಬೇಕಾಗುತ್ತದೆ. ದೇಶೀ ಪ್ರಭುವೊಬ್ಬನ ಪಾತ್ರ ನಿರ್ವಹಿಸಿ ಅಪಹಾಸ್ಯಕ್ಕೆ ಗುರಿಯಾಗಿ, ಅವಹೇಳನಕ್ಕೆ ತುತ್ತಾದ ನಟನೊಬ್ಬ ನಂತರ ಅಲಾವಿಖಾನ್‌ ಪಾತ್ರ ಮಾಡಿ ‘ಸೈ’ ಎನಿಸಿಕೊಳ್ಳುತ್ತಾನೆ. ಆದರೆ ಅದು ‘ಅಭಿನಯ’ ವಿಭಾಗಕ್ಕೆ ಸಂದ ಹೊಗಳಿಕೆ ಮಾತ್ರವೇ ವಿನಃ ವಸ್ತು, ಅದರ ಪರಿಣಾಮ, ಅದರ ನಿರ್ವಹಣೆಗೆ ಸಂದಂತಲ್ಲ. ಮತ್ತೊಂದು ಮುಖ್ಯ ಸಂಗತಿಯೆಂದರೆ ನೋಡುಗನಿಗೆ ಕಾಣುವಂತೆಯೇ ರಂಗಸಜ್ಜಿಕೆಯನ್ನು ಅದೇ ನಟರು ಸಿದ್ಧಮಾಡುವುದು (ಪ್ರತೀ ಸನ್ನಿವೇಶದ ನಂತರ) ಕೂಡ ಕೇವಲ ಪ್ರಯತ್ನವೆನಿಸುತ್ತದೆ. ಪ್ರಯೋಗವಷ್ಟೇ ಎನಿಸುತ್ತದೆ. ಹಾಗಾಗಿ ಮೌಲ್ಯ ಪರಿಣಾಮ, ಪ್ರಭಾವಕ್ಕೆ ಯಾವ ಆಯಾಮವೂ ಇದರಿಂದ ದಕ್ಕದು ಎನಿಸುತ್ತದೆ.

ಇಷ್ಟರ ಹೊರತಾಗಿಯೂ ಈ ನಾಟಕವನ್ನು ರಂಗಕ್ಕೆ ತಂದ ಪ್ರಯತ್ನ ಗಮನಾರ್ಹ, ಮುಖ್ಯ-ಚಿಂತನಶೀಲ ವಸ್ತುವಿನ, ಲಂಕೇಶರಂಥ ಸಮಾಜಮುಖಿ, ಬಹುಮುಖಿ ಲೇಖಕರ ಸಾಹಿತ್ಯವನ್ನು ಜನರಿಗೆ ತಲುಪಿಸುವ ಈ ಪ್ರಯತ್ನ ಹೊಗಳಿಕೆಗೆ ಮೀರಿದ್ದು. ಮಾಡಬೇಕಾದ ಪ್ರಯತ್ನವಿದು.

ದೊರೆ ಈಡಿಪಸ್ಮತ್ತು ಅಂತಿಗೊನೆ

ಗ್ರೀಕ್‌ ರುದ್ರ ನಾಟಕಕಾರರಲ್ಲಿ ಒಬ್ಬನಾದ ಸಪೋಕ್ಲಿಸ್‌ ಮೂಲ ನಾಟಕಕಾರ. ವಿಧಿ ಹಾಗೂ ದೇವತೆಗಳ ಅಪರಿಮಿತ ಶಕ್ತಿ ಮತ್ತು ಮನುಷ್ಯನ ಸೀಮಿತ ಸಾಮರ್ಥ್ಯಗಳ ಸೆಣೆಸಾಟ ಈ ನಾಟಕದ ಕೇಂದ್ರ ವಸ್ತುವಾಗಿದೆ. ಥೀಬ್ಸ್‌ನ ರಾಜ ಲಾಯಿಸ್‌ ಮತ್ತು ರಾಣಿ ಯೆಕಾಸ್ತರ ಮಗ ಈಡಿಪಸ್‌. ಮುಂದೆ ಈ ಮಗು ತಂದೆಯನ್ನು ಕೊಂದು ತಾಯಿಯನ್ನು ಹೆಂಡತಿಯನ್ನಾಗಿಸಿಕೊಳ್ಳುತ್ತಾನೆ ಎಂಬ ದೇವವಾಣಿಯಿಂದ ತಂದೆ ತಾಯಿಯರಿಗೆ ಭಯವಾಗಿ ಆ ಮಗುವನ್ನು ತನ್ನ ಸೇವಕರಿಗೆ ಊರಾಚೆ ತೆಗೆದುಕೊಂಡು ಹೋಗಿ ಮುಗಿಸಬೇಕೆಂದು ರಾಜ ಅಪ್ಪಣೆ ಮಾಡುತ್ತಾನೆ. ಆದರೆ ಸೇವಕ ಆ ಮಗುವನ್ನು ಪಕ್ಕದ ರಾಜ್ಯದ ಕುರಿಗಾಯಿಗೆ ಒಪ್ಪಿಸುತ್ತಾನೆ. ಅಲ್ಲಿ ಅವನು ದೊಡ್ಡವನಾಗಿ ಒಮ್ಮೆ ದಾರಿಯಲ್ಲಿ ಬರುವಾಗ ಅಡ್ಡ ಸಿಕ್ಕಿದ ಮುದುಕನೊಬ್ಬ ಠೇಂಕಾರದಿಂದ ವರ್ತಿಸಿದನೆಂದು ಅವನನ್ನು ಕೊಂದು ಆ ರಾಜ್ಯದ ರಾಜನ ಸ್ಥಾನವನ್ನು ಜನರ ವಿಶ್ವಾಸದಿಂದ ಪಡೆದು, ರಾಣಿಯನ್ನು ಕೂಡಿ ಮಕ್ಕಳನ್ನು ಪಡೆಯುತ್ತಾನೆ. ಕೆಲವು ವರ್ಷಗಳ ನಂತರ ರಾಜ್ಯದಲ್ಲಿ ಕ್ಷಾಮ, ರೋಗರುಜಿನ ಹರಡಲು, ಇದಕ್ಕೆ ಕಾರಣವೇನೆಂದು ಅಪಲೋ ದೇವತೆಯನ್ನು ಕೇಳಲು, ತಾನು ತಂದೆಯನ್ನು ಕೊಂದು ತಾಯಿಯನ್ನು ಕೂಡಿದ್ದು ಅರಿವಾಗಿ ತಾನು ಮಾಡಿದ ಪಾಪಕ್ಕಾಗಿ ಆತ್ಮಹತ್ಯೆ ಮಾಡಿಕೊಳ್ಳುವ ಈಡಿಪಸ್‌ ದುರಂತ ನಾಯಕನಾಗಿ ಕೊನೆಗೊಳ್ಳುತ್ತಾನೆ.

‘ದೊರೆ ಈಡಿಪಸ್‌’ ನಾಟಕತ್ವದ ದೃಷ್ಟಿಯಿಂದ ಜಗತ್ತಿನ ಅತ್ಯುತ್ತಮ ನಾಟಕ. ಎಲ್ಲ ದೃಷ್ಟಿಯಿಂದ ಅತ್ಯುತ್ತಮ ನಾಟಕ ಎಂದು ಅರಿಸ್ಟಾಟಲ್‌ ಹೇಳಿದ್ದಾನೆ. ತಾತ್ವಿಕವಾಗಿ ಅಸ್ಪಷ್ಟ ಎನಿಸುವ ಸಾಪೋಕ್ಲಿಸ್‌ ನಾಟಕಗಳ ಸಂತೋಷ ಮುಖ್ಯವಾಗಿ ಬದುಕಿನ ಕ್ಲಿಷ್ಟತೆಯನ್ನು ಸ್ಪಷ್ಟಗೊಳಿಸಿಕೊಳ್ಳುವುದರಲ್ಲಿದೆ. ಒಂದು ಗೊತ್ತಾದ ಧಾರ್ಮಿಕ ಪರಿಸರದಲ್ಲಿ ಬರೆಯುವ ಸಾಪೋಕ್ಲಿಸ್‌ಗೆ ಸ್ಪಷ್ಟತೆ ಮತ್ತು ವಿನ್ಯಾಸ ಸೌಷ್ಠವ ಸಾಧ್ಯವಾಗಿದೆ.

ಈ ನಾಟಕ ಹಲವು ಬಗೆಯಲ್ಲಿ ವಿಸ್ಮಯಕರ ಕೃತಿಯಾಗಿದೆ. ಮೊದಲನೆಯದಾಗಿ ಈ ನಾಟಕದ ರಚನೆ; ಕೆಲವೇ ಗಂಟೆಗಳ ಘಟನೆಗಳನ್ನು ಇದು ನಮ್ಮ ಮುಂದಿಡುತ್ತದೆ. ನಾಟಕ ಸಾಗಿದಂತೆ ಈಡಿಪಸ್‌ನ ಹಿಂದಿನ ವರ್ಷಗಳು ನಮ್ಮೆದುರು ಬಿಚ್ಚಿಕೊಳ್ಳುತ್ತವೆ. ಆತನ ರುದ್ರ ಗಳಿಗೆಗಳು ಅತ್ಯಂತ ಸ್ಪಷ್ಟವಾಗುತ್ತಾ ಹೋಗುತ್ತವೆ. ಈ ವಿರೋಧಗಳನ್ನು ಗಮನಿಸಿದರೆ ಇಲ್ಲಿಯ ನಾಟಕತ್ವ ತಿಳಿಯುತ್ತದೆ. ಈಡಿಪಸ್‌ ರಾಜನಾದವನು; ಈತ ತನ್ನ ಅಸಂಖ್ಯ ಪ್ರಜೆಗಳೊಂದಿಗೆ ವ್ಯವಹರಿಸಬೇಕಾಗಿರುವಂತೆಯೇ ತನ್ನ ವೈಯಕ್ತಿಕ ಕಷ್ಟಗಳೊಂದಿಗೆ ಸೆಣಸಬೇಕಾಗಿದೆ. ಇದು ನಾಟಕದ ಧೋರಣೆಯ ವೈವಿಧ್ಯಕ್ಕೆ ಸಹಾಯ ಮಾಡುತ್ತದೆ. ಭಾಷಣ, ಸಂಭಾಷಣೆಯಿಂದ ಹಿಡಿದು ಅತ್ಯಂತ ಭಾವಗೀತಾತ್ಮಕ, ವೈಯಕ್ತಿಕ ಅಭಿವ್ಯಕ್ತಿಯವರೆಗೆ ಈ ವೈವಿಧ್ಯ ಹಬ್ಬಿದೆ. ಮೇಳ ನಾಟಕಕಾರನಿಗೆ ಕಾಲದ ಐಕ್ಯ ಸಾಧಿಸಲು ನೆರವಾಗುತ್ತದೆ. ಈಡಿಪಸ್‌ಗೆ ದೊರೆಯುವ ಶಿಕ್ಷೆ ಅನ್ಯಾಯವೆಂದಿದ್ದಾರೆ ಲಂಕೇಶರು. ಆತ ಚಿಕ್ಕ ಹುಡುಗನಾಗಿದ್ದಾಗ ಪಾಲಿಬಸ್‌ನಿಂದ ಓಡಿ ಹೋಗಿ ದೇವರ ನಿಯಮ ದಾಟಲೆತ್ನಿಸಿದ್ದರೂ ಪ್ರಬುದ್ಧನಾದ ಮೇಲೆ ಅವನನ್ನು ಶಿಕ್ಷಿಸುವುದು ತೀರಾ ಕ್ರೂರ. ಈಡಿಪಸ್‌ ತಾನು ತಿಳಿದು ತಪ್ಪು ಮಾಡಿಲ್ಲ. ತಪ್ಪು ಮಾಡಿದ್ದು ಅವನ ತಂದೆ ಲಾಯಿಸ್‌. ದೇವರ ಭವಿಷ್ಯವಾಣಿಯ ಪ್ರಕಾರ ತಂದೆಯನ್ನು ಕೊಂದು ತಾಯಿಯ ಜೊತೆಗೆ ಮಲಗುವ ಮಗನ ಬಗ್ಗೆ ಭಯಗೊಂಡು ಆ ದೇವವಾಣಿ ಸುಳ್ಳಾಗಲೆಂದು ಗುಡ್ಡಗಾಡಿಗೆ ಮಗುವನ್ನು ಸಾಗಿಸುವ ಕ್ರಿಯೆ(ಸಾಯಿಸುವ) ಲಾಯಿಸ್‌ ದೇವರಿಗೊಡ್ಡಿದ ಸವಾಲು; ಇದಕ್ಕೆ ಮುನಿದ ದೇವರು ತನ್ನ ನಿಯಮವನ್ನು ನೆರವೇರಿಸಿಯೇ ಬಿಟ್ಟ. ಈಡಿಪಸ್‌ ತನಗೆ ಗೊತ್ತಿಲ್ಲದೆಯೇ ತನ್ನ ತಂದೆಯನ್ನು ಕೊಂದು ಹೆತ್ತವಳ ಮದುವೆಯಾದ; ಸ್ಫಿಂಕ್ಸ್‌ನ ಒಗಟು ಬಿಡಿಸಿದ್ದು ಆತ ರಾಜನಾಗಲು ಮತ್ತು ಉಳಿದ ಭಾಗ್ಯ ಪಡೆಯಲು ನೆರವಾಯಿತು. ಈಡಿಪಸ್‌ ತನ್ನ ಪಾಪವನ್ನು ತನಗೆ ಗೊತ್ತಿಲ್ಲದೆ ಮಾಡಿದ್ದರೂ ದೇಶ ಕಷ್ಟಕೋಟಲೆಗಳಿಗೆ ಸಿಕ್ಕಿತು. ಇದಕ್ಕೆಲ್ಲ ಪರೋಕ್ಷವಾಗಿ ಮಾತ್ರ ಅವನು ಜವಾಬ್ದಾರ. ಈ ನಾಟಕದಲ್ಲಿ ದುಷ್ಟರನ್ನು ಶಿಕ್ಷಿಸುವ ಶಿಷ್ಟರನ್ನು ಪರಿಪಾಲಿಸುವ ನ್ಯಾಯವನ್ನು ಮೀರಿದ ತರ್ಕಾತೀತ ಶಕ್ತಿಯನ್ನು ತನ್ನ ಕೃತಿಯ ಕಟ್ಟಡದೊಳಗೆ ತಂದು ಸಾಪೋಕ್ಲಿಸ್‌ ಕವಿ ಆಧುನಿಕರಿಗೆ ಹತ್ತಿರವಾಗುತ್ತಾನೆ. ಸಾವಿಗೆ ಹೇಗೆ ಉತ್ತರವಿಲ್ಲವೋ ಹಾಗೆ ಮುಪ್ಪು, ನೋವುಗಳಿಗೆ ಉತ್ತರವಿಲ್ಲ; ಆಕಸ್ಮಿಕಗಳ ಮೇಲೆ ಕಟ್ಟಿದ್ದು ಬದುಕು. ಆಶಾವಾದ, ತರ್ಕ, ವೈಭವ, ಮಹಾತ್ವಾಕಾಂಕ್ಷೆಗಳಿಗೆ ವಿಧಿಯ ಕುಹಕದ ಉತ್ತರ ನೋಡಿ ಮನುಷ್ಯ ವಿಸ್ಮಿತನಾಗುತ್ತಾನೆ. ಈ ದೃಷ್ಟಿಯಲ್ಲಿ ಈಡಿಪಸ್‌ ಸಾರ್ವಕಾಲಿಕ ಸಂಕೇತ. ಆದ್ದರಿಂದಲೇ ಈಡಿಪಸ್‌ನದು ತ್ಯಾಗ ಕೂಡ. ತನ್ನ ರಾಜತ್ವ, ಅಧಿಕಾರ ಯಾವುದನ್ನೂ ಲೆಕ್ಕಿಸದೆ ತನ್ನ ಬಗೆಗಿನ ಸತ್ಯಕ್ಕಾಗಿ, ತನ್ನ ಮೂಲಕ್ಕಾಗಿ ಹುಡುಕುತ್ತಾನೆ. ಪಾಪದ ನೆಪದಲ್ಲಿ ಆತ ಗಳಿಸಿಕೊಳ್ಳುವುದು ಪುಣ್ಯ. ತನ್ನವರು, ತನ್ನದು ಎಲ್ಲವನ್ನು ತೊರೆದು ಕಣ್ಣು ಕಳೆದುಕೊಂಡು ನಿಜಕ್ಕೂ ತಪಸ್ವಿಯ ಸ್ಥಿತಿ ಹೊಕ್ಕಂದು ಅವನಿಗೆ ಇನ್ನೊಂದು ವೈಭವ ದಕ್ಕುತ್ತದೆ.

ದೈವಿಕತೆಯ ಹಿನ್ನೆಲೆ, ದೇವರ ನಿಯಮದ ಮಿತಿಯಲ್ಲಿ ನಾಟಕ ಕ್ರಿಯೆ ನಡೆಯುವಂತೆ ಕಂಡರೂ ‘ದೊರೆ ಈಡಪಸ್‌’ ಹೀಗೆ ಮನುಷ್ಯನ ಶೋಧನೆಯ ಜಯವೆನ್ನಿಸಿ, ಈ ಎಲ್ಲ ಶೋಧನೆಯ ದುರಂತದೊಂದಿಗೆ ಸಂವೇದಿಸುತ್ತದೆ. ಒಂದು ರೀತಿಯಲ್ಲಿ ನಿರಾಶೆ ಕವಿದ, ನಿರಪರಾಧಿಯನ್ನು ಶಿಕ್ಷಿಸುವ ಈ ನಾಟಕ ಇನ್ನೊಂದು ಕಾರಣಕ್ಕೆ ಮನುಷ್ಯತ್ವದ ಮತ್ತು ಮನುಷ್ಯ ಸಾಧ್ಯವಾದದ್ದರ ಆರಾಧನೆಯೆನ್ನಿಸುತ್ತದೆ. ಘರ್ಷಣೆಯಲ್ಲಿ ಶಕ್ತಿ ಇರುವಂತೆ ನಾಟಕ ಶೈಲಿಯಲ್ಲಿ ತೇಜಸ್ಸಿದೆ. ಈಡಿಪಸ್‌ ತನ್ನ ಬುಡಕ್ಕೆ ತಾನೇ ಕೊಡಲಿಯೇಟು ಹಾಕಿಕೊಳ್ಳುವಾಗ ಸಹ ಜೀವನೋತ್ಸಾಹದಿಂದ ವಿಜೃಂಭಿಸುತ್ತಾನೆ. ಇದನ್ನು ಈಡಿಪಸ್‌ನ ಹಠ ಅಥವಾ ಅಹಂಕಾರ ಎನ್ನಬಹುದು. ಇವನ ಅಹಂಕಾರ ಈತ ಟೈರೀಸಿಯಸ್‌, ಕ್ರೆಯಾನ್‌, ಕುರುಬ-ಇವರೊಂದಿಗೆ ಮಾತಾಡುವಾಗ ಗೊತ್ತಾಗುತ್ತದೆ. ರಾಜ್ಯದ ನ್ಯಾಯಕ್ಕಾಗಿ ದೇವರ ನ್ಯಾಯದ ಬಗ್ಗೆ ಕುರುಡಾದ ಈತ ಗಂಟಲೆತ್ತಿ, ಭಾಷೆಯ ಎಲ್ಲ ಶಕ್ತಿಯನ್ನು ಬಳಸಿಕೊಂಡು ಮಾತಾಡುತ್ತಾನೆ. ಕಣ್ಣಿದ್ದಾಗ ಈಡಿಪಸ್‌ ಮಾಡುವ ಪಾಪ ಮತ್ತು ಕಣ್ಣು ಕಳೆದುಕೊಂಡ ಮೇಲೆ ಆತ ಗಳಿಸುವ ತೇಜಸ್ಸು-ಇದನ್ನು ಒಗ್ಗೂಡಿಸುವುದು ಈ ನಾಟಕದ ಕಾವ್ಯ ಗುಣ.

ಲಂಕೇಶರಿಗಿಂತ ಮೊದಲು ಕ.ವೆಂ.ರಾಘವಾಚಾರ್ ಮೊದಲಾದವರು ಈ ನಾಟಕಗಳನ್ನು ಕನ್ನಡಕ್ಕೆ ಅನುವಾದಿಸಿದ್ದರು. ಆದರೆ ಜಡವೂ, ಗ್ರಾಂಥಿಕವೂ ಆದ ಭಾಷೆ ಮತ್ತು ಪ್ರದರ್ಶನ ಯೋಗ್ಯವಲ್ಲದ ಅನುವಾದದಿಂದ ಅವು ಪರಿಣಾಮಿಕಾರಿಯಾಗಿಲ್ಲ. ಹಾಗಾಗಿ ಲಂಕೇಶರು ಸಹಜ ನುಡಿಗಟ್ಟು, ಸಹಜಲಯ, ಕನ್ನಡ ಪರಿಸರದಿಂದ ಪುನರ್ ರೂಪಿಸಿ, ಅನುವಾದಿಸಿದ ಕಾರಣ ಈ ನಾಟಕಗಳು ಪ್ರಸಿದ್ಧಿಯಾದವು. ಅಲ್ಲಿನ ಭಾಷೆ-ಭಾವದ ನಿದರ್ಶನಕ್ಕೆ ಈ ಸಾಲು:

ಆದರೆ ಯಾವನಾದರೂ ವಿಷಯ ಬಚ್ಚಿಟ್ಟುಕೊಂಡರೆ
ಯಾವುದೇ ಕಾರಣದಿಂದ ನನ್ನ ಆಜ್ಞೆ ಉಲ್ಲಂಘಿಸಿದರೆ,
ನಾನೇನು ಮಾಡುವೆ ಕೇಳಿ;
ದೇಶದ, ನನ್ನ ಪ್ರಭುತ್ವದ ಪ್ರಜೆಗಳಲ್ಲಿ
ಯಾರೂ ಅಂಥವನ ಜೊತೆ ಸೇರಕೂಡದು
ಮಾತನಾಡಬಾರದು……. (ಈಡಿಪಸ್‌ ಮಾತು)

ಜಡಗೊಂಡಿದ್ದ ಕನ್ನಡ ರಂಗಭೂಮಿಗೆ ಚೇತನ ತಂದಂತ ಅನುವಾದ ಇದು. ಸಾಹಿತ್ಯ ಕೃತಿ, ರಂಗಕೃತಿಯಾಗಿ ಈ ಅನುವಾದ ಮೊದಲ ದರ್ಜೆಯದು.

ಅಂತಿಗೊನೆ

ಗ್ರೀಕ್‌ ನಾಟಕಗಳ ಅಪರೂಪದ, ಅಪೂರ್ವವಾದ ಸ್ತ್ರೀ ಪಾತ್ರ ಇದು. ‘ದೊರೆ ಈಡಿಪಸ್‌’ ನಾಟಕ ವಿಧಿಯ ಬಲೆಯಲ್ಲಿ ಸಿಕ್ಕ ಮನುಷ್ಯ ಅದರ ಆಟವನ್ನು ನಡೆಸಿಕೊಳ್ಳುತ್ತಲೇ ಮಾನವತೆಯನ್ನು ಉಜ್ವಲಗೊಳಿಸಿ ತೋರುವ ಮೂಲಕ ವಿಧಿಯನ್ನು ಗೆಲ್ಲುವ ಚಿತ್ರಣ ಕೊಟ್ಟರೆ, ‘ಅಂತಿಗೊನೆ’ ವ್ಯಕ್ತಿ ಮತ್ತು ವ್ಯವಸ್ಥೆಯ ನಡುವಿನ ಘರ್ಷಣೇ ಮಂಡಿಸುವುದರ ಮೂಲಕ ಮೂಲಭೂತ ಅನಿಸಿಕೆಯೊಂದನ್ನು ಮುಂದಿಡುತ್ತದೆ. ಅಂತಿಗೊನೆ ಮತ್ತು ಕ್ರೆಯಾನ್‌ ನಡುವಿನ ಜಗಳಕ್ಕೆ ಕಾರಣವೇನೆಂದು ನೋಡಿದರೆ ಇದು ಸ್ಪಷ್ಟವಾಗುತ್ತದೆ. ಅಂತಿಗೊನೆಯ ಅಣ್ಣಂದಿರಾದ ಪಾಲಿನೈಕಸ್‌ ಮತ್ತು ಎತೆಯೋ ಕ್ಲೇಸ್‌ ಯುದ್ಧದಲ್ಲಿ ಸತ್ತಿದ್ದಾರೆ. ಕಿರಿಯನಾದ ಎತೆಯೋಕ್ಲೇಸ್‌ ದೇಶಕ್ಕಾಗಿ ಹೋರಾಡಿದನೆಂಬ ಕಾರಣಕ್ಕೆ ಅವನಿಗೆ ಶವಸಂಸ್ಕಾರ ಮರ್ಯಾದೆ ದೊರೆತಾಗ, ದೇಶವನ್ನು ನಾಶಪಡಿಸಲು ದಂಡೆತ್ತಿ ಬಂದನೆಂಬ ಕಾರಣಕ್ಕೆ ಪಾಲಿನೈಕಸ್‌ನ ಶವ ಬಯಲಲ್ಲಿ ಬಿದ್ದು ನಾಯಿನರಿಗಳ ಪಾಲಾಗಿದೆ.

ಹಾಗೆ ಎಸೆಯುವುದರ ಮೂಲಕ ಕ್ರೆಯಾನ್‌ ತನ್ನ ಉದ್ದೇಶಕ್ಕೆ ವಿರುದ್ಧವಾದ ಕೃತ್ಯ ನಡೆಸಿದ್ದಾನೆ. ಮನುಷ್ಯನ ಮನಸ್ಸು ಮತ್ತು ದೇಹದ ಆರೋಗ್ಯಕ್ಕೆ ಒಳಿತಲ್ಲದ ಕೆಲಸ ಇದು. ಹೆಣ ಕೊಳೆತು ನೋಟಕ್ಕೆ ಭೀಕರವಾಗಿದೆ. ದೇಶದ ಪರಂಪರೆಗೆ ವಿರುದ್ಧವಾದ ಕೆಲಸ ಇದು-ಏಕೆಂದರೆ ಮನುಷ್ಯ ಜಗತ್ತಿನಲ್ಲಿ ದ್ರೋಹ ಅನಿಸಿಕೊಳ್ಳಬಲ್ಲ ಕೃತ್ಯ ದೇವರ ಜಗತ್ತಿನಲ್ಲಿ ಹಾಗಿರದೆ ಇರಲಿಕ್ಕೆ ಸಾಕು; ಸತ್ತವನನ್ನು ಕ್ಷಮಿಸಿ ‘ಶವಸಂಸ್ಕಾರ’ ನಡೆಸಿ ಹೇಡ್ಸ್‌ಗೆ ಕಳಿಸಿಕೊಡಬೇಕಾದ್ದು ಮನುಷ್ಯರ ಕರ್ತವ್ಯ. ವ್ಯವಸ್ಥೆ ಕಾಪಾಡುವ ನೆವದಲ್ಲಿ ದೇಶಪ್ರೇಮವೆಂದು ಕ್ರೆಯಾನ್‌ ಬಣ್ಣಿಸಿಕೊಳ್ಳುವ ಹುಂಬತನದಿಂದ, ಕೊಬ್ಬಿನಿಂದ ಹೆಣದ ಬಗ್ಗೆ ಕ್ರೌರ್ಯ ತೋರಿ ಪರಂಪರೆ ಮುರಿದಿದ್ದಾನೆ. ಗ್ರೀಕರು ಯಾವುದನ್ನು ದೇವರ ನಿಯಮವೆನ್ನುತ್ತಾರೋ ಅದನ್ನು ಉಲ್ಲಂಘಿಸಿದ್ದಾನೆ. ದೇಶಪ್ರೇಮ ಅತಿಯಾದರೆ ಅದು ಹೇಗೆ ಮಾನವರೆಲ್ಲರ, ದೇವತೆಗಳೆಲ್ಲರ ವಿರುದ್ಧ ಹೋಗಬಹುದು ಎಂಬುದು ಇದರಿಂದ ಗೊತ್ತಾಗುತ್ತದೆ.

ಕ್ರೆಯಾನನ ಆಜ್ಞೆ ಉಲ್ಲಂಘಿಸುವ ಅಂತಿಗೊನೆಗೆ ಕೂಡ ಹಲವು ಬಗೆಯ ಪ್ರೇರಣೆಗಳಿವೆ. ಅವಳ ಮನಸ್ಸಿನಲ್ಲಿ ತನ್ನ ತಂದೆ ಮಾಡಿದ ಪಾಪ ಮತ್ತು ಆತನಿಗೆ ಅದಕ್ಕಾಗಿ ದೊರೆತ ಶಿಕ್ಷೆ ಮತ್ತು ಪಾಪದ ರಕ್ತ ತನ್ನಲ್ಲಿ ಮತ್ತು ಇಡೀ ವಂಶದಲ್ಲಿ ಹರಿಯುತ್ತಿರುವುದು ಭಾರವಾದ ನೆನಪಾಗಿ ಉಳಿದಿದೆ. ತಂದೆಯ ಶಾಪದಿಂದಾಗಿ ಅಣ್ಣಂದಿರು ಸತ್ತ ಸಂಗತಿಯನ್ನು ಆಕೆ ಮರೆತಿಲ್ಲ; ಜನರ ಕಣ್ಣಿನಲ್ಲಿ ಮುಳ್ಳಾಗಿ, ಬದುಕಿನಲ್ಲಿ ಸುಖ ಕಾಣದೆ ಬೆಳೆದಿದ್ದಾಳೆ. ಈ ಎಲ್ಲ ಕಾರಣದಿಂದಾಗಿ ಜನರೆದುರು ಘನತೆಯುಳ್ಳ ಕೆಲಸವೊಂದನ್ನು ಮಾಡಬೇಕೆಂದು ಅವಳು ಪಾಲಿನೈಕಸ್‌ನನ್ನು ಹೂಳುವುದು ಸಾಮಾಜಿಕ ಮುಖವುಳ್ಳ ಪ್ರೇರಣೆ; ಆತ್ಮಹತ್ಯೆ ಮಾಡಿಕೊಳ್ಳುವುದು ಅನಿವಾರ್ಯವಾದಾಗ ಅದನ್ನು ಹುತಾತ್ಮ ಗುಣಕ್ಕೆ ತಿರುಗಿಸುವುದು ಅವಳ ಆತ್ಮವಂಚನೆ.

ಕ್ರೆಯಾನ್‌ ಕಾನೂನು, ದೇಶಪ್ರೇಮದ ಹೆಸರಲ್ಲಿ ತಪ್ಪು ಮಾಡುವಂತೆ, ಈಕೆ ದೇವರ ನಿಯಮದ ಹೆಸರಲ್ಲಿ ಅಹಂಕಾರಿಯಾಗಿದ್ದಾಳೆ. ಈ ಇಬ್ಬರ ಮುಖಾಮುಖಿಯ ಮೂಲಕ ಸಾಪೋಕ್ಲಿಸ್‌ ಮುಖ್ಯ ಸಮಸ್ಯೆಯೊಂದನ್ನು ಪೃಥಕ್ಕರಿಸುತ್ತಾನೆ; ದೇಶದ ವ್ಯವಸ್ಥೆ ಆರಿಸಿಕೊಂಡು ಕ್ರೆಯಾನ್‌ ದೇಶಕ್ಕೆ ವಿರುದ್ಧವಾದದ್ದು ಮಾಡಿದ್ದಾನೆ; ಸ್ವಂತ ಅಣ್ಣನ ಬಗ್ಗೆ ಪ್ರೇಮ ಮತ್ತು ಅಮೂರ್ತ ದೇವರಾಣತಿ ಆರಿಸಿಕೊಂಡ ಅಂತಿಗೊನೆ ತನ್ನ ಅಹಂಕಾರದಿಂದಾಗಿ ಸಾವನ್ನಪ್ಪುತ್ತಾಳೆ. ಇಲ್ಲಿ ದೇವರ ನಿಯಮದತ್ತ ಕಾಳಜಿಯುಳ್ಳ ವೈಯಕ್ತಿಕ ಪ್ರೇಮ ಮುಖ್ಯವೆಂದು ಸಾಪೋಕ್ಲಿಸ್‌ ಹೇಳುವಂತೆ ತೋರುತ್ತದೆ. ಇದನ್ನು ಕ್ರೆಯಾನನ ಸದ್ಯ ದೃಷ್ಟಿಯಾಗಲಿ, ಅಂತಿಗೊನೆಯ ಹಠಮಾರಿತನವಾಗಲಿ ಇಲ್ಲದ ಹಯ್‌ಮೋನನ ಮೂಲಕ ಕವಿ ಹೇಳಿದ್ದಾನೆ. ಮೇಲ್ನೊಟಕ್ಕೆ ಬಹಳ ಬುದ್ಧಿವಂತನಂತೆ ಕಾಣುವ ತನ್ನ ತಂದೆ, ಕ್ರೆಯಾನ್‌ ಮತ್ತು ಪ್ರೇಯಸಿ ಅಂತಿಗೊನೆ ಇಬ್ಬರ ದೋಷದಿಂದಲೂ ಮುಕ್ತನಾದವನು. ಈತ ಕ್ರೆಯಾನನೆದುರು ಧೈರ್ಯದಿಂದ ಮಾತಾಡಿ ಅವನ ಕ್ರಮಗಳನ್ನು ಅಲ್ಲಗೆಳೆಯುತ್ತಾನೆ. ಕ್ರೆಯಾನ್‌ ತಂದೆ ತನ್ನ ಮಾತಿಗೆ ಕಿವಿಗೊಡದಿದ್ದಾಗ ತಂದೆಯ ಭ್ರಷ್ಟ ವ್ಯವಸ್ಥೆಗಿಂತ ಪ್ರೇಯಸಿ ಅಂತಿಗೊನೆಯೊಂದಿಗೆ ಸಾಯುವುದು ಉತ್ತಮವೆಂದು ನಿರ್ಧರಿಸುತ್ತನೆ. ಅಂತಿಗೊನೆಯ ಮೌಲ್ಯಗಳನ್ನು ಆತ ಒಪ್ಪಿದರೂ ಅದಕ್ಕಿಂತ ಮುಖ್ಯವಾಗಿ ಅವಳ ಬಗೆಗಿನ ಪ್ರೇಮಕ್ಕಾಗಿ ಆತ ಸತ್ತಂತೆ ಭಾಸವಾಗುತ್ತದೆ. ಕಾರಣ ಅಂತಿಗೊನೆಯ ಮೌಲ್ಯಗಳು ಅವಳ ಸಾಕ್ಷಿ ಪ್ರಜ್ಞೆಯ ಬಣ್ಣದೊಂದಿಗೆ ಮಿಳಿತವಾಗಿವೆ.

ಸಾಕ್ಷಿ ಪ್ರಜ್ಞೆ ಕೂಡ ಒಂದು ರೀತಿಯಲ್ಲಿ ಪರಿಸರದ ಫಲ; ಯಾವುದು ಸರಿ, ಯಾವುದು ತಪ್ಪು, ಯಾವುದು ಮುಖ್ಯ, ಯಾವುದು ಅಮುಖ್ಯ ಎಂಬುದನ್ನು ವ್ಯಕ್ತಿ ಕೇಳಿಕೊಳ್ಳುವಂತೆ, ಆತ ಸಾರ್ವತ್ರಕವಾದದ್ದನ್ನು ಸಂದೇಹಿಸಿ ನೋಡುವಂತೆ ಈ ಪ್ರಜ್ಞೆ ಮಾಡುತ್ತದೆ. ಈ ಸಂದೇಹ ಹಠಕ್ಕೆ ತಿರುಗಿದಾಗ ವ್ಯಕ್ತಿಯ ಅಡಿ ತಪ್ಪುತ್ತದೆ; ಸಾಕ್ಷಿ ಪ್ರಜ್ಞೆಯ ಹೆಸರಿನಲ್ಲಿ ತಪ್ಪು ಆರಂಭವಾಗುತ್ತದೆ. ಅಂತಿಗೊನೆಯ ಸಾಕ್ಷಿಪ್ರಜ್ಞೆ ಈ ಬಗೆಯದು. ಆದರೆ ಹಯ್‌ಮೋನ್‌ ಬಗೆ ಬೇರೆ. ಎಲ್ಲವನ್ನೂ ತರ್ಕಬದ್ಧವಾಗಿ ಸಂಯಮದಿಂದ ಯೋಚಿಸಿ ಜಗತ್ತಿನ ತುಡಿತ ಮತ್ತು ಪರಮಾತ್ಮನ ನಿಯಮಕ್ಕೆ ವ್ಯಕ್ತಿಕಯ ಇಷ್ಟವನ್ನು ಹೊಂದಿಸಿಕೊಂಡು ಆತ್ಮತ್ಯಾಗಕ್ಕೆ ಸಿದ್ಧನಾಗುವ ಹಯ್‌ಮೋನನ ಸಾಕ್ಷಿ ಪ್ರಜ್ಞೆ ಸಾಪೋಕ್ಲಿಸ್‌ ಒಪ್ಪುವಂಥದು. ಈಡಿಪಸ್‌ ಮನಕರಗುವಂತೆ ವರ್ಣಿಸಿರುವ ಈ ಹಯ್‌ಮೋನನ ಬಲಿಗೆ ಪ್ರೇಕ್ಷಕರ ಮನಸ್ಸು ಒಲಿಯುತ್ತದೆ; ಇವನ ತ್ಯಾಗದಿಂದ ಅಂತಿಗೊನೆಯ ಸಾವಿಗೆ ಕೂಡ ಒಂದು ಬಗೆಯ ಅರ್ಥ ಬರುತ್ತದೆ.

ನಾಗರೀಕತೆ ನಡೆದು ಬಂದ ಬಗೆಯನ್ನು ಸೂಚಿಸುವ ಪರಂಪರೆ, ಆಧುನಿಕತೆಯ ಘರ್ಷಣೆ ಈ ಕೃತಿಯಲ್ಲಿದೆ; ಭೌತಿಕವಾದದೊಂದಿಗೆ ಆಧ್ಯಾತ್ಮಿಕ ಅಂಶ ಹೆಣೆದುಕೊಂಡಿದೆ. ನಾವು ಅರಿತು ಮಾಡುವುದರೊಂದಿಗೆ ಅರಿಯದ ಪ್ರೇರಣೆ ಘರ್ಷಿಸಿ ನಾಟಕ ಕಟ್ಟಿಕೊಳ್ಳುತ್ತದೆ. ಸಾಪೋಕ್ಲಿಸ್‌ ಇಲ್ಲಿ ಸರಳಗೊಳಿಸಿ ಹೇಳಲಾರ. ಅವನ ಪ್ರಕಾರ ಮಾನವನ ಜ್ಞಾನವೆಂದರೆ ನಮ್ಮ ಅರಿವಿಗೆ ನಿಲುಕುವಂಥ-ನಿಲುಕದಂಥ ಎಲ್ಲವನ್ನೂ ತಿಳಿಯುವ ಪ್ರಯತ್ನ. ಈ ಜ್ಞಾನ ಮಾತ್ರ ಅವನಿಗೆ ನೆಮ್ಮದಿ ತರಬಲ್ಲುದು. ಈಡಿಪಸ್‌ ನಾಟಕದಲ್ಲಿ ಈ ಜ್ಞಾನದಾಹ ಈಡಿಪಸ್‌ನ ಶೋಧನೆಯೊಂದಿಗೆ ಪ್ರೇಕ್ಷಕ ಒಂದಾಗುವುದರಲ್ಲಿ ಹಿಂಗುತ್ತದೆ, ಮನುಷ್ಯನ ಮಿತಿ ಮತ್ತು ವೈಭವಕ್ಕೆ ಪ್ರೇಕ್ಷಕನ ಮನಸ್ಸು ಹಿಗ್ಗುತ್ತದೆ. ಅಂತಿಗೊನೆಯಲ್ಲಿ ಯಾವ ಮುಖ್ಯ ಪಾತ್ರವೂ ಈ ಪರಿವೆಗೆ ವಾರಸುದಾರನಾಗುವುದಿಲ್ಲ; ಇದು ಒಟ್ಟು ನಾಟಕರೂಪ ನೋಡುಗನಲ್ಲಿ ಉಂಟುಮಾಡುವ ಅನುರಣನದಿಂದ ಸಾಧ್ಯವಾಗಬೇಕು; ಇದರಿಂದ ಅವನ ಭಾವನೆಗಳ ಶುದ್ಧೀಕರಣ ಆಗಬೇಕು. ಹಾಗೆ ಮಾಡುವುದು ‘ಅಂತಿಗೊನೆ’ಯ ವೈಶಿಷ್ಟ್ಯತೆಗಳಲ್ಲಿ ಒಂದು.

ಇಂಥ ಘನೀಕೃತ ನಾಟಕವನ್ನು ಲಂಕೇಶ್‌ ಅದ್ಭುತವಾಗಿ ಅನುವಾದಿಸಿದ್ದಾರೆ. ಭಿನ್ನ ಸಂಸ್ಕೃತಿ ಎನಿಸದಷ್ಟು ‘ವಸ್ತು’ ಭಾಷಿಕವಾಗಿ ರೂಪು ತಳೆದಿದ್ದೆ. ಪ್ರಕೃತಿ-ದೈವ-ಮನುಷ್ಯ ಸಂಘರ್ಷಗಳು ಲಂಕೇಶರ ಮೂಲ ಕುತೂಹಲ. ಅದನ್ನು ತಣಿಸಲೆಂಬಂತೆ ಈ ಅನುವಾದಗಳು ಮೂಡಿವೆ. ಲಂಕೇಶರ ತೀವ್ರತರ ಆಸಕ್ತಿ, ವಿಸ್ತಾರ ಓದು, ಮಾನವ ಸಂಸ್ಕೃತಿಯ ಅನ್ವೇಷಣೆಗೆ ನಿದರ್ಶನವಾಗಿವೆ ಈ ಅನುವಾದಿತ ನಾಟಕಗಳು.

ಇಲ್ಲ ಹಾಗಾದರೆ ನನಗೆ ನಿನ್ನ ಸಹಾಯ ಬೇಕಿಲ್ಲ,
ನೀನಿನ್ನು ಕೊಟ್ಟರೂ ಅದಕ್ಕೆ ನನ್ನ ಕೃತಜ್ಞತೆ ಇಲ್ಲ.
ನಿನ್ನ ದಾರಿ ನಿನಗೆ;ನಾನು ನಿನ್ನಣ್ಣನಿಗೆ ಸಮಾಧಿ ಮಾಡುತ್ತೇನೆ.
ಅದಕ್ಕಾಗಿ ಸಾಯುವುದೆಂದರೆ ಎಂಥ ಅದೃಷ್ಟವಂತೆ ನಾನು
(ಅಂತಿಗೊನೆ ಮಾತು)

“ಅಂತಿಗೊನೆ ಒಂದು ಶ್ರೇಷ್ಠ ನಾಟಕಿ. ಲಂಕೇಶ್‌ ಅದನ್ನು ಅದ್ವೀತಿಯಾಗಿ ಅನುವಾದಿಸಿದ್ದಾರೆ. ಇದು ಎಲ್ಲರಿಗೂ ಸಿದ್ದಿಸೋಕೆ ಸಾಧ್ಯವಿಲ್ಲ” ಎಂಬ ಮಾತು ಅದನ್ನು ಸಮರ್ಥಿಸುತ್ತದೆ.

“ಬಹುಶಃ ಅನುವಾದಿತ ನಾಟಕಗಳಲ್ಲಿ ಇವುಗಳನ್ನು ಸರಿಗಟ್ಟುವಂತಹ ನಾಟಕಗಳು ಕನ್ನಡದಲ್ಲಿ ಇಲ್ಲ. ಈ ಅನುವಾದಗಳನ್ನು ಮಾದರಿಯಾಗಿಟ್ಟುಕೊಂಡು ಅನೇಕ ಒಳ್ಳೆಯ ಅನುವಾದಗಳು ಬಂದವು. ಶೇಕ್ಸ್‌ಪಿಯರನ ನಾಟಕಗಳ, ಗ್ರೀಕ್‌ನ ಮುಖ್ಯ ನಾಟಕಗಳ ಒಳ್ಳೆಯ ಅನುವಾದಗಳು ಬಂದವು. ಇದಕ್ಕೆಲ್ಲ ಒಂದು ರೀತಿಯಲ್ಲಿ ಪ್ರೇರಣೇಯನ್ನು ಲಂಕೇಶರ ಈ ಅನುವಾದಗಳು ತಂದವು” ಎಂಬ ಡಾ.ಕೆ. ಮರುಳಸಿದ್ದಪ್ಪನವರ ಮಾತು ಲಂಕೇಶರ ಅನುವಾದದ ವಿಶಿಷ್ಟತೆಯನ್ನು ಗುರುತಿಸಿವೆ.

ಮುಕ್ತಾಯ

ಲಂಕೇಶರು ರಂಗಭೂಮಿಗೆ ನೀಡಿರುವ ಕೊಡುಗೆ ಅನನ್ಯ. ನಾಟಕಕಾರ, ನಟ, ನಿರ್ದೇಶಕನಾಗಿ ಅಲ್ಲದೆ ‘ಪ್ರತಿಮಾ ನಾಟಕರಂಗ’ ಎಂಬ ತಂಡ ಕಟ್ಟಿ, ತಮ್ಮ, ಉಳಿದವರ ನಾಟಕ ಆಡಿಸುವುದರ ಮೂಲಕ ‘ಸಂಸ್ಕೃತಿ’ಯ ಪುನರುಜ್ಜೀವನಕ್ಕೆ ಕಾರಣರಾದವರು ಲಂಕೇಶ್‌, ಲಂಕೇಶರ ‘ವ್ಯಕ್ತಿನಿಷ್ಟ’ದ ದೃಷ್ಟಿಕೋನದ ಮೂಲಕ ಕನ್ನಡ ಸಮಾಜ ಅಪರೂಪವೆಂಬಂತೆ, ಅಪರೂಪಕ್ಕೆಂಬಂತೆ ಕೃತಿಯಾಗಿ, ಪ್ರದರ್ಶನವಾಗಿ ನಾಟಕದಲ್ಲಿ ಪ್ರತಿಫಲಿಸಿತು.

ಸಮುದಾಯ, ಸಮಾಜಗಳು ‘ವ್ಯಕ್ತಿ’ಯ ಸ್ವಾತಂತ್ಯ್ರ, ಅಭಿವ್ಯಕ್ತಿ, ಪ್ರತಿಭೆಗಳನ್ನು ಹತ್ತಿಕ್ಕಲು, ಮರೆಮಾಚಲು ಯತ್ನಿಸುತ್ತವೆ. ಇದು ಅಪ್ರಜ್ಞಾಪೂರ್ವಕ ಪ್ರಜ್ಞಾವಂತಿಕೆ. ವ್ಯಕ್ತಿಧ್ವನಿ ಉಡುಗಿ, ಅದರ ವಿರೂಪ ಸಮುದಾಯ ಧ್ವನಿಯಾಗಿ ಅನುರಣಿಸುತ್ತದೆ. ಇದನ್ನು ಗಮನಿಸಿ, ತೀವ್ರವಾಗಿ ಸಂವೇದಿಸಿ ‘ವ್ಯಕ್ತಿ’ಯನ್ನು ಪೂರ್ಣಪ್ರಮಾಣದಲ್ಲಿ ತಮ್ಮ ಸಾಹಿತ್ಯದ ಮೂಲಕ ವ್ಯಂಜಿಸಿದವರು ಲಂಕೇಶ್‌. ಬಹುಶಃ ಪ್ರೆಂಚ್‌ ಬದುಕು ಇದಕ್ಕೆ ಪ್ರೇರಣೆ ನೀಡಿರಬಹುದು. ಅದೇನೇ ಇದ್ದರೂ ಲಂಕೇಶರಿಗೆ ‘ವ್ಯಕ್ತಿ’- ಆಶಯ, ಬದ್ಧತೆ, ಗ್ರಹಿಕೆ, ಅಭಿವ್ಯೊಕ್ತಿ, ಸಾಮರ್ಥ್ಯ, ಪ್ರತಿಭೆ, ಜ್ಞಾನ-ಮುರ್ಖಯ. ಆ ‘ವ್ಯಕ್ತಿ’ಯ ಆಯಾಮ ಮುಖ್ಯ. ಇದನ್ನು ಕೇಂದ್ರವಾಗಿಸಿಕೊಂಡು ಲಂಕೇಶ್‌ ತಮ್ಮ ಕತೆ, ಕಾದಂಬರಿ, ನಾಟಕ ರಚಿಸಿದರು.

ಕನ್ನಡ ನಾಟಕಕ್ಕೆ ವಸ್ತು ಮತ್ತು ಅಭಿವ್ಯಕ್ತಿಗಳಲ್ಲಿ ಹೊಸತನ ತಂದವರು ಲಂಕೇಶ್‌. ಒಂದೇ ಜಾತಿಯ ವಿವರಗಳ ಸುತ್ತ ‘ಗಿರಕಿ’ ಹೊಡೆಯುತ್ತಿದ್ದ ನಾಟಕದ ವಸ್ತು ‘ವ್ಯಕ್ತಿ ಕೇಂದ್ರಿತ’ ಆದದ್ದು ಲಂಕೇಶರಿಂದ. ಅನುಮಾನ, ಅಸಹನೆ, ನಟನೆ, ಸಣ್ಣತನ, ಅಸಹಾಯಕತೆ, ದೌರ್ಬಲ್ಯ, ದೋಷ ಮೊದಲಾದ ಹತ್ತಾರು ಮುಖಗಳ ‘ನಾಯಕ’ ಪಾತ್ರ ಲಂಕೇಶರಿಂದ ಸೃಷ್ಟಿಗೊಂಡವು. ಮನುಷ್ಯನ ಅಂತರಂಗ-ಬಹಿರಂಗಗಳ ಶೋಧನೆ ಲಂಕೇಶರ ಆಸಕ್ತಿ ಕೇಂದ್ರ. ‘ಮೌಲ್ಯ’ಗಳ ಬಣ್ಣ ಕಳಚಿ ನಿಜವಾದ ಮನುಷ್ಯನ ಕಾಳಜಿಗಳನ್ನು ಲಂಕೇಶ್‌ ನೀಡಿದರು. ವ್ಯಕ್ತಿ ‘ತಾತ್ವಿಕತೆ’ ಲಂಕೇಶರ ಕುತೂಹಲದ ಕೇಂದ್ರ.