ಲಂಡನ್ ನಗರದ ಒಂದು ಮಹಾವಿಸ್ಮಯವೆಂದರೆ, ಈ ನಗರದ ಪಾತಾಳ ಪ್ರಪಂಚದಾಳಗಳಲ್ಲಿ ಹಗಲೂ ಇರುಳೂ ಮಿಂಚಿನ ವೇಗದ ಘಟಸರ್ಪಗಳಂತೆ ಸಂಚರಿಸುವ ‘ಟ್ಯೂಬು’ಗಳೆಂಬ ಹೆಸರಿನ ಸುರಂಗ ರೈಲುಗಳು. ಹಲವು ಹಂತಗಳಲ್ಲಿ ಹಾಗೂ ಅಕ್ಕಪಕ್ಕಗಳಲ್ಲಿ ಏಕಕಾಲಕ್ಕೆ ಧಾವಿಸುವ ಈ ರೈಲುಗಳಲ್ಲಿ ಇಡೀ ದಿನ ಪಯಣಿಸಲನುಕೂಲವಾದ ಟಿಕೆಟ್ ಒಂದನ್ನು ಕೊಂಡುಕೊಂಡು ಹೊರಟೆವೆಂದರೆ, ಕೈಯೊಳಗೆ ಈ ಕುರಿತ ಪುಟ್ಟ ಮ್ಯಾಪೊಂದರ ನೆರವಿನಿಂದ ನಾವು ಲಂಡನ್ ನಗರದಲ್ಲಿ ನೋಡಬೇಕೆಂದಿರುವ ಸ್ಥಳಗಳೆಡೆಗೆ, ನೆಲದಾಳದ ಯಾವ ಯಾವ ನಿಲ್ದಾಣಗಳಲ್ಲಿ ಇಳಿಯಬೇಕೆಂಬುದನ್ನು ಮೊದಲೇ ಗುರುತಿಸಿಟ್ಟುಕೊಂಡರೆ, ತೀರಾ ಸಲೀಸಾಗಿ ನಾವು ಸಂಚರಿಸಬಹುದು. ಜತೆಗೆ ಈ ರೈಲಿನ ಒಳಗೇ ಕಣ್ಣಿಗೆ ಕಾಣುವಂತೆ ಆಯಾ ರೈಲಿನ ಸಂಚಾರದ ನಕ್ಷೆಯಿರುತ್ತದೆ. ರೈಲು ನಿಲ್ದಾಣದಲ್ಲೇ ನಾಲ್ಕಾರು ಕಡೆ ಜಗಜಗ ಬೆಳಕಿನಲ್ಲಿ ಎದ್ದು ಕಾಣುವ ಹಾಗೆ ಆಯಾ ಸ್ಟೇಷನ್‌ಗಳ ಹೆಸರು ರಾರಾಜಿಸುತ್ತದೆ. ಹೀಗಾಗಿ ಎಂಥ ಹೊಸ ಪ್ರಯಾಣಿಕನೂ ಬೇರಾರನ್ನೂ ಅವಲಂಬಿಸದೆ ನಿರಾತಂಕವಾಗಿ ಸಂಚಾರ ಮಾಡಬಹುದು. ಕೆಲವೆಡೆ ತನ್ನ ದಾರಿಯನ್ನು ಬದಲಿಸಬೇಕಾದರೂ, ನಿಲ್ದಾಣದ ಹೊರದಾರಿಯ ಭಿತ್ತಿಗಳ ಮೇಲೆ, ಯಾವ ಒಂದು ಲೈನಿನಿಂದ, ಬೇರೊಂದು ಲೈನಿಗೆ ಹೋಗಬಹುದೆಂಬ ಮಾಹಿತಿ ಅತ್ಯಂತ ಸ್ಪಷ್ಟವಾಗಿ ನಮೂದಾಗಿರುತ್ತದೆ. ಇಷ್ಟರ ಮೇಲೂ ಗೊಂದಲಕ್ಕೆ ಒಳಗಾದರೆ, ರೈಲ್ವೆ ಇಲಾಖೆಯ ಅಧಿಕಾರಿಗಳಾಗಲೀ, ಸಹಪ್ರಯಾಣಿಕರಾಗಲೀ ಸಹಾಯ ಮಾಡುವಷ್ಟು ಸೌಜನ್ಯಪರರಾಗಿರುತ್ತಾರೆ. ಒಂದು ವೇಳೆ ನಾವು ಯಾವುದೋ ಒಂದು ದಿಕ್ಕಿಗೆ ಹೋಗಬೇಕಾದ ಆ ಕ್ಷಣದ ರೈಲು ತಪ್ಪಿತು ಎಂದರೂ ಯೋಚನೆ ಮಾಡಬೇಕಾಗಿಲ್ಲ. ಕೆಲವೇ ಕೆಲವು ನಿಮಿಷಗಳಲ್ಲಿ, ಸುರಂಗದ ಕತ್ತಲನ್ನು ಸೀಳಿಕೊಂಡು ನಾವು ನಿಂತ ನಿಲುಗಡೆಯ ಬೆಳಕಿನ ವರ್ತುಲದೊಳಕ್ಕೆ ಮತ್ತೊಂದು ರೈಲು ಧಾವಿಸಿ ಬಂದು ಧಡ್ ಎಂದು ನಿಲ್ಲುತ್ತದೆ. ರೈಲಿನ ಗಾಜು-ಬಾಗಿಲುಗಳು ತಾವಾಗಿಯೇ ತೆರೆದುಕೊಳ್ಳುತ್ತವೆ. ಇಳಿಯುವವರು ಚಕಚಕನೆ ಇಳಿಯುತ್ತಾರೆ; ಹತ್ತುವವರು ಸರಸರನೆ ಒಳಗೆ ಪ್ರವೇಶಿಸುತ್ತಾರೆ. ಕೇವಲ ಒಂದೆರಡು ಮೂರು ನಿಮಿಷಗಳಲ್ಲಿಯೆ ಸ್ವಯಂಚಾಲಿತ  ಬಾಗಿಲುಗಳು ತಾವಾಗಿಯೇ ಮುಚ್ಚಿಕೊಳ್ಳುತ್ತವೆ. ಸುರಂಗ ರೈಲು ಮತ್ತೆ ಧಡಧಡನೆ ಆ ಪಾತಾಳ ಪ್ರಪಂಚದಲ್ಲಿ ಮರೆಯಾಗುತ್ತದೆ. ರೈಲಿಳಿದ ಬಹುಸಂಖ್ಯೆಯ ಪಯಣಿಗರು, ಅಲ್ಲೇ ಇರುವ ಎಸ್ಕುಲೇಟರ್‌ಗಳ ಮೇಲೆ ನಿಂತು, ನೂರಲ್ಲ ಐನೂರು – ಆರುನೂರು ಅಡಿಗಳ ಎತ್ತರಕ್ಕೆ ಏರಿ ಹೋಗುತ್ತಾರೆ; ಹಾಗೆಯೇ ಕೆಳಕ್ಕೆ ಬರುವ ನೂರಲ್ಲ, ಸಾವಿರ ಪಯಣಿಗರು ಸಮಾನಾಂತರವಾದ ಎಸ್ಕುಲೇಟರಿನ ಮೇಲೆ ನಿಂತು ಕೆಳಕ್ಕೆ ಇಳಿದು ಬರುತ್ತಾರೆ. ಹಗಲೂ ರಾತ್ರಿಯೂ, ಸಂಚರಿಸುವ ರೈಲುಗಳು, ಏರಿಳಿಯುವ ಎಸ್ಕುಲೇಟರುಗಳು ಒಂದೇ ಸಮನೆ ಚಲನಶೀಲವಾಗಿರುತ್ತವೆ. ಮೇಲೇರಿದವರು ಆ ಎತ್ತರದ ಆಚೆ, ತೆರೆದ ಬಾಗಿಲನ್ನು ಪ್ರವೇಶಿಸಿ ಗಡಿಬಿಡಿಯ ಚಕ್ರಗತಿಗಳ ಲಂಡನ್ ನಗರದೊಳಕ್ಕೆ  ಕಾಲಿಡುತ್ತಾರೆ. ಕೆಳಕ್ಕೆ ಬಂದವರು ಟ್ಯೂಬುಗಳ ಹೊಟ್ಟೆಯನ್ನು ಹೊಕ್ಕು, ಪಯಣ ಮಾಡಿ ಮತ್ತೆಲ್ಲೋ ಇಳಿದು, ಮೇಲೇರಿ, ಈ ಮಹಾನಗರದ ಮತ್ತಾವುದೋ ಭಾಗದಲ್ಲಿ ಹೊರಬರುತ್ತಾರೆ. ಒಳ ಹೊಗುವ ಹಾಗೂ ಹೊರಬರುವ ಈ ನಿರಂತರ ಕ್ರಿಯೆಯ ಪಾತಾಳದಾಳಗಳಲ್ಲಿ, ಈ ನಗರದ ನರ – ನಾಡಿಗಳಂತೆ ಉದ್ದಕ್ಕೂ ವ್ಯಾಪಿಸಿದ ಈ ಸುರಂಗ ರೈಲುಮಾರ್ಗಗಳ ಮೇಲೆ ಅವ್ಯಾಹತವಾಗಿ ನಡೆಯುತ್ತದೆ ಜನಸಂಚಾರ.

ಅಂದಂದಿನ ಸಂಚಾರಕ್ಕೆ ಪಡೆದುಕೊಳ್ಳಬಹುದಾದ, ‘ಡೇ ಟಿಕೆಟ್’ ಅನ್ನು ಪ್ರತಿಯೊಂದು ಹೊರದಾರಿಯ ನಿಲ್ದಾಣದಲ್ಲೂ ಇರುವ ಏಳೆಂಟು ಗೇಟುಗಳ ಅಡ್ಡ ಕಂಬಿಯ ಮೊದಲ ಸೀಳಿನಲ್ಲಿ ತೂರಿಸಿದರೆ, ಅದು ಚಕ್ಕನೆ ಅದೇ ಕಂಬಿಯ ಇನ್ನೊಂದು ಸೀಳಿನಲ್ಲಿ ಹೊರಬರುತ್ತದೆ. ಆಗ, ನಾವು ಹೊರಕ್ಕೆ ಹೋಗಲು ರೆಕ್ಕೆಯಾಕಾರದ ತಡೆಗಳು ತೆರೆದುಕೊಂಡು ದಾರಿ ಮಾಡಿಕೊಡುತ್ತವೆ. ನಮ್ಮ ಟಿಕೆಟ್‌ನಲ್ಲೇ ಏನಾದರೂ ಹೆಚ್ಚು ಕಡಿಮೆಯಾಗಿದ್ದರೆ, ಅಂದರೆ ಹಿಂದಿನ ದಿನದ ಟಿಕೆಟ್ ಅನ್ನು ಮರುದಿನದ ಪಯಣಕ್ಕೂ ಬಳಸಿದ್ದರೆ ಅಥವಾ ಒಂದು ವಲಯಕ್ಕೆ ಕೊಂಡುಕೊಂಡ ಟಿಕೆಟ್ಟನ್ನು, ತಿಳಿಯದೆ ಬೇರೊಂದು ವಲಯದ ಸಂಚಾರಕ್ಕೆ ಬಳಸಿದ್ದರೆ, ತೆರೆದುಕೊಳ್ಳಬೇಕಾದ ಬಾಗಿಲು ತೆರೆದುಕೊಳ್ಳುವುದಿಲ್ಲ. ಕೂಡಲೆ ಅಲ್ಲೇ ಕೊಂಚ ದೂರದಲ್ಲಿ ನಿಂತು ಉಸ್ತುವಾರಿಯಲ್ಲಿ ತೊಡಗಿರುವ ರೈಲ್ವೆ ಇಲಾಖೆಯ ಅಧಿಕಾರಿಯೊಬ್ಬ ಬಂದು, ಆಗಿರುವ ತೊಡಕೇನೆಂಬುನ್ನು ತಿಳಿದು, ಅತ್ಯಂತ ನಯವಾಗಿ ಘಟಿಸಿರಬಹುದಾದ ತಪ್ಪನ್ನು ಪಯಣಿಗರ  ಗಮನಕ್ಕೆ ತಂದು, ನಿಮ್ಮ ಪಯಣ ತೊಡಕಿಲ್ಲದೆ ಮೂಂದುವರಿಯಲು ತಕ್ಕ ಕ್ರಮವನ್ನು ಕುರಿತ ತಿಳಿವಳಿಕೆ ನೀಡುತ್ತಾನೆ. ಒಂದು ವಿಶೇಷವೆಂದರೆ ದಿನವಿಡೀ ಸಂಚರಿಸಲನುಕೂಲವಾದ ಈ ರೈಲಿನ ಟಿಕೆಟ್ ಅನ್ನು ನೀವು ಬಸ್ಸುಗಳ ಪಯಣಕ್ಕೂ ಬಳಸಬಹುದು. ಇಂಥದೊಂದು ಟಿಕೆಟನ್ನು ನಾನು ದಿನವೂ ಬೆಳಿಗ್ಗೆ ಕೊಂಡುಕೊಂಡು ನಾಲ್ಕು ದಿನಗಳ ಕಾಲ ಇಡೀ ಲಂಡನ್ ನಗರವನ್ನು ಸಂಚಾರ ಮಾಡಿದೆ. ಬೆಳಿಗ್ಗೆ ವೆಸ್ಟ್ ಕೆನ್ಸಿಂಗ್ಟ್‌ನ್ ಸ್ಟೇಷನ್ನಿಗೆ ಸಮೀಪದ ಭಾರತೀಯ ವಿದ್ಯಾಭವನದ ಅತಿಥಿಗೃಹದಲ್ಲಿ ಒಂದಷ್ಟು ‘ಬ್ರೆಕ್ ಫಾಸ್ಟ್’ ಮುಗಿಸಿ ಹೊರಟೆನೆಂದರೆ ಮತ್ತೆ ನಾನು ಹಿಂದಿರುಗುತ್ತಿದ್ದದ್ದು ಸಂಜೆಗೇ. ಇಡೀ ದಿನ ನಾನು ನೋಡಬೇಕೆಂದಿರುವ ಸ್ಥಳಗಳನ್ನು ನೋಡುತ್ತಾ, ಮಧ್ಯಾಹ್ನದ ವೇಳೆಗೆ ಯಾವುದೋ ಕ್ಯಾಫಿಟೇರಿಯದಲ್ಲಿ ಒಂದಷ್ಟು ತಿನ್ನಬಹುದಾದ್ದನ್ನು ತಿಂದು ಅಥವಾ ಒಂದಷ್ಟು ಸ್ಯಾಂಡ್‌ವಿಚ್, ಹಣ್ಣಿನರಸ ಹಾಗೂ  ಯೋಗರ್ಟ (ಒಂದು ರೀತಿಯ ಮೊಸರು) – ಇತ್ಯಾದಿಗಳನ್ನು ಕೊಂಡು ಬಗಲ ಚೀಲದಲ್ಲಿರಿಸಿಕೊಂಡು, ಮಧ್ಯಾಹ್ನ ಯಾವುದೋ ಪಾರ್ಕಿನ (ಇಲ್ಲಿ ಎಲ್ಲೆಂದರಲ್ಲಿ ಈ ಬಗೆಯ ಪಾರ್ಕುಗಳು ಇವೆ) ಮರದ ಕೆಳಗಿನ ಪೀಠಗಳ ಮೇಲೆ ಕೂತು ನನ್ನ ಲಂಚ್ ಅನ್ನು ಮುಗಿಸಿ ಮುಂದಿನ ಸಂಚಾರಕ್ಕೆ ಹೊರಡುತ್ತಿದ್ದೆ. ಹಾಗೆ ಪಾರ್ಕಿನಲ್ಲಿ ಕೂತು ಮಧ್ಯಾಹ್ನದ ಲಂಚ್‌ನಲ್ಲಿ ತೊಡಗಿದಾಗ, ನಮ್ಮಲ್ಲಿನ ಹಾಗೆ ಬಂದು ಪೀಡಿಸುವ ಭಿಕ್ಷುಕರ ಕಾಟ  ಇಲ್ಲಿಲ್ಲ. ನಮ್ಮಲ್ಲೇನಾದರೂ ಹೀಗೆ ತಿಂಡಿ – ತೀರ್ಥಗಳನ್ನು ಬಿಚ್ಚಿಕೊಂಡು ಕೂತೆವೆಂದರೆ ಕಾಗೆಗಳು, ನಾಯಿಗಳು ಹಾಗೂ ಕೈಚಾಚಿ ಅರಚುವ ಭಿಕ್ಷುಕರೂ ಸುತ್ತ ಮುತ್ತಿಕೊಂಡು, ನೀವು ತಿನ್ನುವ ಅನ್ನ ಗಂಟಲಲ್ಲಿ ಇಳಿಯದಂತೆ ಮಾಡಿಬಿಡುತ್ತಾರೆ. ಸದ್ಯ ಈ ದೇಶದಲ್ಲಿ ಅಂಥ ಪರಿಸ್ಥಿತಿ ಯಾರಿಗೂ ಪ್ರಾಪ್ತವಾಗುವುದಿಲ್ಲ. ಹಾಗೆಂದರೆ ಈ ದೇಶದಲ್ಲಿ ಭಿಕ್ಷುಕರೇ ಇಲ್ಲವೆಂದೇನೂ ಅಲ್ಲ, ಇದ್ದಾರೆ. ಅವರೆಲ್ಲ ಒಂದು ರೀತಿಯಲ್ಲಿ ಮರ್ಯಾದಸ್ಥ ಭಿಕ್ಷುಕರು! ರೈಲ್ವೆ ಸ್ಟೇಷನ್ ಮುಂದುಗಡೆಯೋ ಅಥವಾ ‘ಸಬ್‌ವೇ’ಗಳಲ್ಲಿಯೋ ತಮ್ಮ ಹ್ಯಾಟನ್ನು ಮುಂದೆ ಇರಿಸಿಕೊಂಡು “I am hungry and helpless. Please help me” (ನಾನು ಹಸಿದಿದ್ದೇನೆ, ನಿಸ್ಸಹಾಯಕನಾಗಿದ್ದೇನೆ. ದಯಮಾಡಿ ಸಹಾಯ ನೀಡಿ) ಎಂಬ ಚಿಕ್ಕ ಬೋರ್ಡು ಹಿಡಿದು ಕೂತವರನ್ನು ನೋಡಿದ್ದೇನೆ; ಕೆಲವರು ಪಿಟೀಲೊಂದನ್ನು ಬಾರಿಸುತ್ತ ನಿಂತುಕೊಂಡು-ಕೆಳಗೆ ತಮ್ಮ ಪಿಟೀಲು ವಾದನದ ತೆರೆದ ಪೆಟ್ಟಿಗೆಯನ್ನಿರಿಸಿಕೊಂಡಿರುತ್ತಾರೆ; ಕೆಲವರು ಚರ್ಮವಾದ್ಯವೊಂದನ್ನು ಬಾರಿಸುತ್ತ ನಿಂತುಕೊಂಡು – ಎದುರಿಗೆ ತಮ್ಮ ಕೋಟನ್ನೆ ಬಿಚ್ಚಿ ಹಾಸಿರುತ್ತಾರೆ. ಅವರೆದುರಿಗೆ ಸಾಕಷ್ಟು ನಾಣ್ಯಗಳನ್ನು ಇಷ್ಟವಿದ್ದವರು ಹಾಕುತ್ತಾರೆ. ಆದರೆ ನೀವು ದಾನ ಮಾಡಲೇಬೇಕೆಂಬ ಅಂಗಲಾಚುಗಳಾಗಲೀ, ನೀವು ದಾನ ಮಾಡದಿದ್ದರೇನು ಗತಿ ಎಂಬ ಆತಂಕಗಳಾಗಲೀ, ದೈನ್ಯವಾಗಲೀ, ನೀವು ಏನನ್ನಾದರೂ ಹಾಕಿದಿರಾ, ಬಿಟ್ಟಿರಾ ಎಂಬ ಕಡೆ ಪ್ರತ್ಯೇಕವಾದ ಗಮನವಾಗಲೀ ಅವರ ನಡವಳಿಕೆಗಳಲ್ಲಿ ನನಗೆ ಕಂಡುಬರಲಿಲ್ಲ. ಹಾಗೆ ನೋಡಿದರೆ ಇಂಗ್ಲೆಂಡಿನ ಸರ್ಕಾರ ಪ್ರತಿಯೊಬ್ಬನಿಗೂ ತಕ್ಕ ಉದ್ಯೋಗ ದೊರೆಯುವವರೆಗೂ, ‘ನಿರುದ್ಯೋಗಿ’ಗಳಾದವರಿಗೂ ಸಹ, ಅವರಿಗೆ  ಉದ್ಯೋಗ ದೊರೆಯುವವರೆಗೂ ‘ನಿರುದ್ಯೋಗ ಭತ್ಯ’ವನ್ನು ಕೊಡುತ್ತದೆ. ತೀರಾ ಕಡಿಮೆ ವರಮಾನದವರಿಗಾಗಿ ಹಾಗೂ ನಿರುದ್ಯೋಗಿ ಸಂಸಾರದವರಿಗೆ, ಪ್ರತಿಯೊಂದು ಮುಖ್ಯವಾದ ನಗರಗಳಲ್ಲೂ ಪ್ರತ್ಯೇಕವಾದ ವಸತಿಗಳೇ ಇವೆ. ಹೀಗಾಗಿ ಅತ್ಯಂತ ‘ಕಡುಬಡತನ’ದ ಪ್ರಮಾಣ ಕಡಿಮೆಯೆಂದೇ ಹೇಳಬಹುದು.

ಅಮೆರಿಕಾದ ನಗರಗಳಿಗೆ ಹೋಲಿಸಿದರೆ ಲಂಡನ್ ನಗರ ಒಂದು ರೀತಿಯಲ್ಲಿ ಸುಂದರವಾದ ನಗರವೆಂದೇ ಹೇಳಬೇಕು. ಯದ್ವಾ-ತದ್ವಾ ಮೇಲೇರಿ ಹೋಗುವ ಗಗನಚುಂಬಿಗಳೇ ಪ್ರಮುಖವಾದ ಅಮೆರಿಕಾದ ನಗರಗಳಿಗಿಂತ, ಎತ್ತರವಾದ, ಚಚ್ಚೌಕವಾದ ಹಾಗೂ ಓರಣವಾದ ಕಟ್ಟಡಗಳನ್ನುಳ್ಳ ಬೀದಿಗಳ ಲಂಡನ್ ನಗರ ನನಗೆ ಹೆಚ್ಚು ಇಷ್ಟವಾಯಿತು. ಜಗತ್ತಿನ ಎಲ್ಲಾ ನಗರಗಳಂತೆ ವಾಹನಗಳ ದಟ್ಟಣೆ, ಪರಿಸರ ಮಾಲಿನ್ಯದ ಆತಂಕ ಇತ್ಯಾದಿಗಳು ಲಂಡನ್ ನಗರಕ್ಕೆ ಇದ್ದರೂ, ನಮ್ಮ ನಗರ ಸಂಚಾರ ಈ ಕಾರಣಕ್ಕೆ ಒಂದು ಕಿರಿಕಿರಿ ಅನ್ನಿಸಲಿಲ್ಲ. ಅದರಲ್ಲೂ ನಗರದೊಳಗಿನ ವಾಹನದ ದಟ್ಟಣೆಗಳ ಬಹಿರಂಗ ವಲಯದಿಂದ ಪಾರಾಗಿ, ನೆಲದೊಳಗಿನ ಸುರಂಗ ಮಾರ್ಗದ ಟ್ಯೂಬುಗಳನ್ನವಲಂಬಿಸುವುದಾದರೆ, ಲಂಡನ್ನಿನಲ್ಲಿ ಹೆಚ್ಚು ಸಮಯವನ್ನು ವ್ಯಯ ಮಾಡದೆ, ನಮ್ಮ ನಮ್ಮ ಕಾಲಮಿತಿಯೊಳಗೇ ನೋಡಲು ಸಾಧ್ಯವಾದಷ್ಟನ್ನು ನೋಡಬಹುದು.

ಅದೊಂದು ದಿನ ನಾನು ವೆಸ್ಟ್ ಕೆನ್ಸಿಂಗ್‌ಟನ್‌ದಿಂದ, ಸುರಂಗ ರೈಲು ಹಿಡಿದು, ‘ಸೇಂಟ್ ಜೇಮ್ಸ್ ಪಾರ್ಕ್’ ಎಂಬ ಸ್ಟೇಷನ್ನಿನಲ್ಲಿಳಿದು, ಎಸ್ಕುಲೇಟರಿನ ಗರುಡರೆಕ್ಕೆಯನ್ನೇರಿ ಹೊರಬಂದು ಬಕಿಂಗ್‌ಹ್ಯಾಂ ಪ್ಯಾಲೇಸಿನ ದಾರಿಯನ್ನು ಹಿಡಿದೆ. ಸ್ವಲ್ಪ ಹೊತ್ತಿನಲ್ಲೆ ನಾನು ಇಂಗ್ಲೆಂಡಿನ ಮಹಾರಾಣಿಯ ಅರಮನೆಯ ಹತ್ತಿರಕ್ಕೆ ಬಂದೆ. ಸೆಪ್ಟೆಂಬರಿನ ಹಿತವಾದ ಬಿಸಿಲಿನಲ್ಲಿ, ಬಕಿಂಗ್‌ಹ್ಯಾಂ ಅರಮನೆಯ ಕಟ್ಟಡವು ಎತ್ತರವಾಗಿ ಹಾಗೂ ವಿಸ್ತಾರವಾಗಿ ಹರಡಿಕೊಂಡಿತ್ತು. ಅದರ ಮುಂದಿನ ಬೃಹದಾಕಾರವಾದ ಗೇಟುಗಳ ಹೊರಗೆ ಬಹುಸಂಖ್ಯೆಯ ದೇಶವಿದೇಶಗಳ ಜನ ಜಮಾಯಿಸಿದ್ದರು. ಅವರೆಲ್ಲರೂ ಕುತೂಹಲದಿಂದ ಗಮನಿಸುತ್ತ ಇದ್ದದ್ದು, ಅರಮನೆಯ ಮಹಾದ್ವಾರದ ಅಕ್ಕಪಕ್ಕಗಳಲ್ಲಿ, ಬಣ್ಣ ಬಣ್ಣದ ಸಮವಸ್ತ್ರ ಧರಿಸಿ, ನಿಶ್ಚಲವಾದ ಶಿಲಾ ಪ್ರತಿಮೆಗಳಂತೆ ನಿಂತ ಕಾವಲಿನವರನ್ನು. ಆಗಾಗ ಕಾವಲಿನವರ ಸರದಿ ಬದಲಾಯಿಸುವ ದೃಶ್ಯವೂ ತುಂಬ ಆಕರ್ಷಕವಾಗಿರುತ್ತದೆಂದು ಹೇಳಲಾಗಿದೆ. ನಾನೂ ಕೊಂಚ ಹೊತ್ತು ‘ಗಾರ್ಡು’ಗಳ ಪ್ರತಿಮಾಯೋಗವನ್ನು ವೀಕ್ಷಿಸಿ, ಅಂದು ಅರಮನೆಯೊಳಕ್ಕೆ ಟಿಕೆಟ್ ಮೂಲಕ ಪ್ರವೇಶದ ಅವಕಾಶವಿದೆಯೆಂಬುದನ್ನು, ಅಲ್ಲಿನ ರಕ್ಷಕ ಪಡೆಯವರಿಂದ ತಿಳಿದು, ಟಿಕೆಟ್ ಕೌಂಟರನ್ನು ಹುಡುಕಿಕೊಂಡು  ಹೋಗಿ, ಆರು ಪೌಂಡ್ ತೆತ್ತು ಟಿಕೆಟ್ ಅನ್ನು ಕೊಂಡುಕೊಂಡು ಬಂದು, ಜನದ ಪಾಳಿಯಲ್ಲಿ ನಿಂತೆ. ಕಂದು ಬಣ್ಣದ ಕಲ್ಲುಗಳ ರಚನೆಯಿಂದ ಕೂಡಿದ ಅರಮನೆಯ ಚೌಕಾಕಾರ ವಿಸ್ತಾರವಾದ ಕಟ್ಟಡವು, ಬೆಳಗಿನ ಹಿತವಾದ ಬಿಸಿಲಿನಲ್ಲಿ ಅತ್ಯಂತ ನವೀನವೆಂಬಂತೆ ಭಾಸವಾಗುತ್ತಿತ್ತು. ಆದರೆ ಅದಕ್ಕೆ ನಮ್ಮ ಮೈಸೂರಿನ ಮಹಾರಾಜರ ಅರಮನೆಯ ಚೆಲುವಾಗಲೀ, ಗಾಂಭೀರ‍್ಯವಾಗಲೀ ಇದ್ದಂತೆ ತೋರಲಿಲ್ಲ. ಇಂಡಿಯಾದ ರಾಜಮಹಾರಾಜರುಗಳ ಅರಮನೆಗಳ ವಾಸ್ತುವೈಭವಕ್ಕೆ ಹೋಲಿಸಿದರೆ ಯೂರೋಪಿನಲ್ಲಿ ನಾನು ಕಂಡ ಎಷ್ಟೋ ಅರಮನೆಗಳು ಅಷ್ಟಕ್ಕಷ್ಟೆ ಅನ್ನಿಸಿತು. ಬಕಿಂಗ್ ಹ್ಯಾಂ ಅರಮನೆಯ ವಾಸ್ತು ಕೂಡಾ ಯೂರೋಪಿಯನ್  ಶಿಲ್ಪಸಂಪ್ರದಾಯಕ್ಕೆ ಸೇರಿದ್ದೇ.

ಕ್ಯೂನಲ್ಲಿ ನಿಂತು ಮುಂದಕ್ಕೆ ಚಲಿಸಿದಂತೆ, ಬಕಿಂಗ್‌ಹ್ಯಾಂ ಪ್ಯಾಲೇಸಿನ ಒಂದು ಬದಿಯಿಂದ ಗೇಟು ತೆರೆದುಕೊಂಡು, ನಮ್ಮನ್ನು ಒಳಕ್ಕೆ ಬಿಟ್ಟ ನಂತರ ಪ್ರೇಕ್ಷಕರನ್ನು ಹತ್ತು ಹತ್ತು ಜನದ ತಂಡಗಳನ್ನಾಗಿ ವಿಂಗಡಿಸಿ, ಅರಮನೆಯೊಳಗೆ ಪ್ರವೇಶಿಸಲು ಸೂಚಿಸಲಾಯಿತು. ಇಂಗ್ಲೆಂಡಿನ ಮಹಾರಾಣಿ ಹಾಗೂ ಅವರ ಪರಿವಾರದವರು ವಾಸವಾಗಿರುವ ಈ ಅರಮನೆಯ ಒಂದು ಪಾರ್ಶ್ವವನ್ನು ಮಾತ್ರ ವೀಕ್ಷಕರ ಪ್ರವೇಶಕ್ಕೆ ತೆರವಾಗಿರಿಸಲಾಗಿದೆ. ಒಳಗೆ ಪ್ರವೇಶಿಸಿದಂತೆ ಉದ್ದವಾದ ಮೊಗಸಾಲೆಗಳು ಹಾಗೂ ಕೋಣೆಗಳು ರಾಜೋಚಿತವಾದ ಪೀಠಗಳಿಂದ ಹಾಗೂ ಒಳರಚನೆಗಳಿಂದ ಆಕರ್ಷಕವಾಗಿವೆ. ‘ರಾಣಿಯ ಚಿತ್ರಶಾಲೆ’ (Queens Gallery) ಎಂಬ ಒಂದು ಭಾಗವಂತೂ, ಕಳೆದ ನಾಲ್ಕು ಶತಮಾನಗಳ ಕಾಲಮಾನದಲ್ಲಿ, ಅಂದಂದಿನ ರಾಜರು ಸಂಗ್ರಹಿಸಿದ ವರ್ಣಚಿತ್ರಗಳನ್ನು ಒಳಗೊಂಡಿದೆ. ಇಲ್ಲಿ ಲಿಯೋನಾರ್ಡೊ ಡಾವಿಂಚಿ ಎಂಬ ಮಹಾಕಲಾವಿದನ ಅನೇಕ ಚಿತ್ರಗಳಿವೆ. ಉದ್ದಕ್ಕೂ ಅನೇಕ ಅಮೃತ ಶಿಲೆಯ ವಿಗ್ರಹಗಳೂ, ಇಂಗ್ಲೆಂಡಿನ ರಾಜಮನೆತನಗಳ ಚರಿತ್ರೆಗೆ ಸಂಬಂಧಿಸಿದ ವರ್ಣಚಿತ್ರಗಳೂ ಇಲ್ಲಿವೆ. ಛಾವಣಿಯ ತುಂಬ ವಿವಿಧ ರೇಖಾ ವಿನ್ಯಾಸಗಳೂ, ಅಲ್ಲಿಂದ ತೂಗುವ ದಿಪಸ್ತಂಭಕ ರಾಜಿಗಳೂ ಮೋಹಕವಾಗೇನೋ ಇವೆ. ಆದರೆ ಎಲ್ಲೂ ಅದ್ಭುತವೆನಿಸುವ ಅನುಭವ ನನಗೇನೂ ಆಗಲಿಲ್ಲ. ಅರಮನೆಗೆ ಆತುಕೊಂಡಂತಿರುವ ಜೇಮ್ಸ್ ಪಾರ್ಕ್ ಎಂಬ ಹಚ್ಚ ಹಸುರಿನ ಉದ್ಯಾನವೂ  ಅಲ್ಲಿರುವ ಸುದೀರ್ಘವಾದೊಂದು ಸರೋವರವೂ ಮನಸ್ಸಿಗೆ ಶಾಂತಿಯನ್ನೂ, ಆಹ್ಲಾದವನ್ನೂ ಉಂಟುಮಾಡುವಷ್ಟು ರಮ್ಯವಾಗಿದೆ.

ಒಂದು ವಿಶೇಷದ ಸಂಗತಿಯೆಂದರೆ ಇಂಗ್ಲೆಂಡಿನ ಜನ, ರಾಜಸತ್ತೆಯನ್ನೂ ಪ್ರಜಾಪ್ರಭುತ್ವವನ್ನೂ ಒಂದು ರೀತಿಯಲ್ಲಿ ಒಟ್ಟಿಗೇ ಉಳಿಸಿಕೊಂಡವರು. ಪ್ರಜಾಪ್ರಭುತ್ವಕ್ಕೆ ರಾಜತ್ವದೊಂದಿಗೆ ವಿರಸವೋ, ಸಂಘರ್ಷವೋ ಉಂಟಾದ ಸಮಯಗಳಲ್ಲಿ, ರಾಜರನ್ನೇ ಸಿಂಹಾಸನಚ್ಯುತಗೊಳಿಸಿದ ಹಾಗೂ ರಾಜನ ಶಿರಶ್ಛೇದನವನ್ನೆ ಮಾಡಿದ ನಿದರ್ಶನಗಳು ಇಂಗ್ಲೆಂಡಿನ ಚರಿತ್ರೆಯಲ್ಲಿವೆ. ಆದರೂ ತಮ್ಮ ರಾಜನ ಇತಿಹಾಸ ಹಾಗು ಪರಂಪರೆಯನ್ನು ಈ ಜನ ತಮ್ಮ ವರ್ತಮಾನದೊಂದಿಗೆ ಬೆಸೆದುಕೊಂಡಿದ್ದಾರೆ. ಇಂಗ್ಲೆಂಡಿನ ಯಾವ ನಗರದಲ್ಲೂ, ಈ ದೇಶದ ರಾಜಮನೆತನಗಳ ಹಾಗೂ ರಾಜರಾಣಿಯರ ಹೆಸರನ್ನು ಹೊತ್ತ ಬೀದಿಗಳು, ಚೌಕಗಳೂ, ಮಾರುಕಟ್ಟೆಗಳೂ ಮತ್ತಿತರ ಸ್ಮಾರಕಗಳೂ ಕಣ್ಣಿಗೆ ಕಾಣುತ್ತವೆ.

ಇಂಗ್ಲೆಂಡಿನ ರಾಜಮನೆತನಕ್ಕೆ ಸಂಬಂಧಿಸಿದ ಅತ್ಯಂತ ಮುಖ್ಯವಾದ ಸ್ಮಾರಕವೊಂದು ಲಂಡನ್ ನಗರದಲ್ಲಿದೆ. ಅದೇ ‘ಟವರ್ ಆಫ್ ಲಂಡನ್’, ಇಂಗ್ಲೆಂಡಿನ ಇತಿಹಾಸದಲ್ಲಿ ಭಯಾನಕವಾದ ನೆನಪುಗಳನ್ನು ಉಳಿಸಿಕೊಂಡಿರುವ ಸ್ಮಾರಕ ಇದು. ಥೇಮ್ಸ್ ನದಿಯ ದಡದಲ್ಲಿರುವ ವಿಸ್ತಾರವಾದ ವೃತ್ತಾಕಾರವಾದ ಕೋಟೆಯ ಪ್ರಾಕಾರದಲ್ಲಿ ಹಲವು ಗೋಪುರ (Tower) ಗಳ ಸಮುಚ್ಚಯವನ್ನುಳ್ಳ ಮತ್ತು ಕೋಟೆಯ ಗೋಡೆಯ ನಡುವಿನ ಹರಹಿನಲ್ಲಿ ಹಲವು ಕಟ್ಟಡಗಳನ್ನುಳ್ಳ ಪ್ರದೇಶ ಇದು. ಇಡಿಯಾಗಿ ಇದನ್ನು ‘ಟವರ್’ ಎಂದು ಕರೆಯಲಾಗಿದೆ. ಈ ಕೋಟೆ ಗೋಡೆಯ ಆಚೆ ಸುತ್ತಲೂ ಕಂದಕವಿದೆ. ಹಿಂದೆ ಅದರ ತುಂಬ ಥೇಮ್ಸ್ ನದಿಯ ನೀರನ್ನು, ರಕ್ಷಣಾ ಸಾಧನವನ್ನಾಗಿ ತುಂಬಿಸುತ್ತಿದ್ದರೆಂದು ಕಾಣುತ್ತದೆ. ಈಗ ನೀರಿನ ಬದಲು ಸಾಫಾಗಿ ಹುಲ್ಲು ಬೆಳೆದುಕೊಂಡಿದೆ.

ಈ ಟವರ್ ಅನ್ನುವುದು ವಾಸ್ತವವಾಗಿ ಒಂದು ಕಾರಾಗೃಹವೇ. ಅನೇಕ ಪಿತೂರಿಗಳು, ಕೊಲೆಗಳು ಇಲ್ಲಿ ನಡೆದಿವೆ. ತಮಗೆ ಆಗದವರನ್ನು ಅಥವಾ ತಮಗೆ ದ್ರೋಹ ಬಗೆದವರನ್ನು ಇಂಗ್ಲೆಂಡಿನ ರಾಜರು, ವಿಚಾರಣೆ ನಡೆಸಿಯೋ, ನಡೆಸದೆಯೊ ಸೆರೆಮನೆಗೆ ತಳ್ಳುತ್ತಿದ್ದ ಸ್ಥಳ ಇದು. ಹಾಗೆ ಸೆರೆಯಾದವರಲ್ಲಿ ಸರ್ ಥಾಮಸ್ ಮೋರ್, ಸರ್ ವಾಲ್ಟರ್ ರ‍್ಯಾಲೆ, ಮೇರಿ ಕ್ವೀನ್ ಆಫ್ ಸ್ಕಾಟ್ಸ್, ರಾಣಿ ಆನಿಬೊಲೀನ – ಇತ್ಯಾದಿ. ಅವರಲ್ಲಿ ರಾಣಿ ಆನಿಬೊಲೀನ ಮತ್ತು ಸರ್ ಥಾಮಸ್ ಮೋರ್ ಇವರಿಬ್ಬರ ತಲೆಯನ್ನು ಕಡಿಯಲಾಯಿತು. ಇದರ ಜೊತೆ ಇನ್ನೆಷ್ಟೋ ಜನ ನಿರಪರಾಧಿಗಳೂ, ಮುಗ್ಧರೂ ಇಲ್ಲಿ ಶಿಕ್ಷೆಗೆ ಒಳಗಾಗಿದ್ದಾರೆ. ಚರಿತ್ರೆಯೇ ಹೀಗೆ. ಈ ಚರಿತ್ರೆಯ ಮಬ್ಬು ಕವಿದ ಸುರಂಗಮಾರ್ಗದಲ್ಲಿ ಶತಮಾನಗಳ ನೆತ್ತರ್‌ಗೆಸರು ಕಾಲಿಗೆ ಮೆತ್ತಿಕೊಳ್ಳುತ್ತದೆ. ನರಳುವ ದನಿಗಳಿಂದ ಮಾರ್ದನಿಗೊಂಡ, ರಕ್ತದ ಕಲೆಗಳಿಂದ ಅಂಕಿತಗೊಂಡ, ನಿರಪರಾದಿಗಳ ನಿಟ್ಟುಸಿರಿನ ನೆನಪುಗಳಿಂದ, ಈ ಟವರಿನ  ಕತ್ತಲೆಯ ಮೂಲೆಗಳೂ, ಕಾರಾಗೃಹರೂಪದ ನೆಲಮಾಳಿಗೆಯ ಕೂಪಗಳೂ ಇಂದು ಹೇಳಲಾಗದ ವ್ಯಥೆಗಳನ್ನು ಹುದುಗಿಸಿಕೊಂಡು ಸ್ತಬ್ಧವಾಗಿವೆ. ಇತಿಹಾಸದ ಪುಟಗಳೊಳಗೆ ಹೀಗೆ ದಾಖಲಾಗುತ್ತಲೇ ಇರುವ ಮನುಷ್ಯನ ಮಹಾತ್ವಾಕಾಂಕ್ಷೆ ಹಾಗೂ ಕ್ರೌರ್ಯಗಳಿಗೆ ಕೊನೆಯೆಂಬುದೇ ಇಲ್ಲ.

ಈ ಟವರಿನೊಳಗೆ ರತ್ನಭಂಡಾರ (Jewel house) ವೊಂದಿದೆ. ಅತ್ಯಂತ ಬಿಗಿಯಾದ ಕಾವಲಿನಲ್ಲಿರುವ ಈ ಐಶ್ವರ್ಯ ವಸ್ತು ಪ್ರದರ್ಶನಾಲಯದೊಳಗೆ ರಾಜ ಮಹಾರಾಜರ ರತ್ನಖಚಿತ ಕಿರೀಟಗಳೂ, ಅವರ ಝಗಝಗಿಸುವ ಉಡುಗೆ ತೊಡುಗೆಗಳೂ, ಅವರ ಸುವರ್ಣ ರಾಜದಂಡಗಳೂ, ಕಿರೀಟಧಾರಣೆಯ ಸಂದರ್ಭದ ಅಮೂಲ್ಯ ರಾಜವಸ್ತ್ರ ವಿಲಾಸಗಳೂ, ಅವರು ಬಳಸುತ್ತಿದ್ದ ಬಂಗಾರದ ಪಾನ ಪಾತ್ರೆ ಮತ್ತಿತರ ಪರಿಕರಗಳೂ ಇವೆ. ಇಲ್ಲಿರುವ ಇನ್ನೂ ಅನೇಕ ಐಶ್ವರ್ಯ ಸೂಚಕ ಸಾಮಗ್ರಿಗಳು, ಬ್ರಿಟಿಷ್ ಸಾಮ್ರಾಜ್ಯವು ತನ್ನ ವಸಾಹತುಗಳಿಂದ ದೋಚಿ ತಂದವುಗಳಾಗಿವೆ. ಇಂಡಿಯಾದಿಂದ ಕೊಳ್ಳೆಹೊಡೆದುಕೊಂಡು ಹೋಗಿ, ಇಲ್ಲಿ ಪ್ರದರ್ಶನಕ್ಕೆ ಇರಿಸಿರುವ ಅಮೂಲ್ಯವಾದ ವಸ್ತುಗಳಲ್ಲಿ ಜಗತ್ ಪ್ರಸಿದ್ಧವಾದ ಕೊಹಿನೂರು ವಜ್ರವೂ ಒಂದು.

ಲಂಡನ್ ನಗರದೊಳಗಿನ ಮ್ಯೂಸಿಯಂಗಳು ಜಗತ್ ಪ್ರಸಿದ್ಧವಾದವುಗಳು. ಬ್ರಿಟಿಷ್ ಮ್ಯೂಸಿಯಂ, ಆಲ್ಪರ್ಟ್ ವಿಕ್ಟರ್ ಮ್ಯೂಸಿಯಂ, ನ್ಯಾಚುರಲ್ ಸೈನ್ಸ್ ಮ್ಯೂಸಿಯಂ, ಆರ್ಟ್ಸ್ ಮ್ಯೂಸಿಯಂ, ಹಿಸ್ಟರಿ ಮ್ಯೂಸಿಯಂ – ಹೀಗೆ ಇನ್ನೂ ಅನೇಕ. ಇವುಗಳ ಒಳ ಹೊಕ್ಕರೆ, ಅವುಗಳ ವಿಸ್ತಾರ ಹಾಗೂ ವಸ್ತು ವೈವಿಧ್ಯ ಯಾರನ್ನಾದರೂ ಕಕ್ಕಾಬಿಕ್ಕಿಯನ್ನಾಗಿಸುತ್ತದೆ. ಅನೇಕ ಹಂತಗಳಲ್ಲಿ ಏರಿ ಇಳಿದು, ಇಳಿದು ಏರಿ ಜಗತ್ತಿನ ಪ್ರಪ್ರಾಚೀನ ಸ್ಮೃತಿಗಳ ಚಕ್ರವ್ಯೂಹದೊಳಗೆ ಭ್ರಮಿಸುತ್ತಾ- ಗ್ರೀಕ್, ಇಟಲಿ, ರೋಂ, ಈಜಿಪ್ಟ್ ದೇಶಗಳ ನಾಗರಿಕತೆಯನ್ನು, ಶಿಲ್ಪಕಲಾ ಬೃಹತ್ಸಾಧನೆಗಳನ್ನು ಪರಿಚಯ ಮಾಡಿಕೊಡುವ ಬ್ರಿಟಿಷ್ ಮ್ಯೂಸಿಯಂ, ಮತ್ತು ಜಗತ್ತಿನ ಹಲವು ದೇಶಗಳ ಚಿತ್ರ  ಶಿಲ್ಪಾದಿಗಳ ಪರಿಚಯ ಮಾಡಿಕೊಡುವ ಆಲ್ಪರ್ಟ್ ವಿಕ್ಟರ್ ಮ್ಯೂಸಿಯಂಗಳು ಮುಖ್ಯವಾದವುಗಳು. ನ್ಯಾಚುರಲ್ ಸೈನ್ಸ್ ಮ್ಯೂಸಿಯಂ ಅಂತೂ ಜಗತ್ತಿನ ಜೀವ ವಿಕಾಸದ ಶತಶತಮಾನಗಳ ಇತಿಹಾಸವನ್ನು ಒಳಗೊಂಡಿದೆ. ಬ್ರಿಟಿಷ್ ಮ್ಯೂಸಿಯಂನಲ್ಲಿರುವ ಹಸ್ತಪ್ರತಿಗಳ ವಿಭಾಗ, ಸಾಹಿತ್ಯದ ವಿದ್ಯಾರ್ಥಿಯಾದ ನನಗೆ ತುಂಬ ಸಂಭ್ರಮವನ್ನು ಉಕ್ಕಿಸಿತು. ಇಲ್ಲಿ ನನಗೆ ಪ್ರಿಯರಾದ ಅನೇಕ ಇಂಗ್ಲಿಷ್ ಕವಿಗಳ ಹಸ್ತಪ್ರತಿಗಳನ್ನು ಕಂಡು ಕೈಮುಗಿದು ನಿಂತೆ. ನಾನು ಇಂಟರ್ ಮೀಡಿಯೇಟ್ ತರಗತಿಯಲ್ಲಿ ಓದುವಾಗ ನನ್ನ ಅಧ್ಯಾಪಕರು ಪಾಠ ಮಾಡಿದ ಹಾಗೂ ನನ್ನ ಕವಿತೆಯೊಂದಕ್ಕೆ ಪ್ರೇರಕವಾದ, ಥಾಮಸ್ ಗ್ರೇ ಕವಿಯ An elegy written on a country church yard (ಗ್ರಾಮಾಂತರದ ಶ್ಮಶಾನದ ಅಂಗಳವನ್ನು ಕುರಿತ ಒಂದು ಶೋಕಗೀತೆ) – ಎಂಬ ಕವಿತೆಯ ಹಸ್ತಪ್ರತಿಯನ್ನು ನೋಡುತ್ತಾ, ಅರ್ಧಶತಮಾನಕ್ಕೂ ಹಿಂದಿನ ತುಮಕೂರು ಇಂಟರ್ ಮೀಡಿಯೇಟ್ ಕಾಲೇಜಿನ ದಿನಗಳನ್ನು ನೆನೆದುಕೊಂಡೆ. ವರ್ಡ್ಸ್‌ವರ್ತ್, ಗೋಲ್ಡ್‌ಸ್ಮಿತ್, ಜೇನ್ ಆಸ್ಟಿನ್, ಎಮಿಲಿ ಬ್ರಾಂಟೆ, ಅನಂತರ ಮಹಾಕವಿ ಷೇಕ್ಸ್‌ಪಿಯರನ ಕೈಬರೆಹವನ್ನೂ ಕಂಡು ರೋಮಾಂಚನಗೊಂಡೆ.

ಈ ನಗರದ ಇಂಥ ಹಲವಾರು ಮ್ಯೂಸಿಯಂಗಳಲ್ಲಿ ತುಂಬ ವಿಶಿಷ್ಟವಾದದ್ದೂ ಹಾಗೂ ಆಧುನಿಕವಾದದ್ದು ಮೇಡಾಮ್ ಟ್ಯೂಸಾಡ್‌ಳ್ ‘ ವ್ಯಾಕ್ಸ್ ಮ್ಯೂಸಿಯಂ’, ಡಾ.ವಿ.ಕೃ.ಗೋಕಾಕರು ಮೂವತ್ತರ ದಶಕದಲ್ಲಿ ಬರೆದ ‘ಸಮುದ್ರದಾಚೆಯಿಂದ’ ಎಂಬ ಪ್ರವಾಸ ಕಥನದೊಳಗೆ, ಈ ಮ್ಯೂಸಿಯಂ ಬಗ್ಗೆ ಓದಿ ನಾನು ಕುತೂಹಲವನ್ನು ತಾಳಿದ್ದೆ. ಆ ನೆನಪು ಹಾಗೂ ಆಕರ್ಷಣೆ ನನ್ನನ್ನು ಈ ಮೇಣದ ಮೂರ್ತಿಗಳ ವಸ್ತು ಪ್ರದರ್ಶನಾಲಯದ ಬಳಿಗೆ ಸೆಳೆಯಿತು. ಈ ಪ್ರದರ್ಶನಾಲಯದಲ್ಲಿ ಮೇಡಾಂ ಟ್ಯೂಸಾಡ್ ಎಂಬಾಕೆ ನಿರ್ಮಿಸಿರುವ ಮೇಣ ಮೂರ್ತಿಗಳ ಹೊಸತನ ಹಾಗೂ ಸಜೀವ ಸಾದೃಶ್ಯ ಇಂದಿಗೂ ದಂಗುಬಡಿಸುವಂತಿದೆ. ಗೋಕಾಕರು ಇಂಗ್ಲೆಂಡಿನಲ್ಲಿ ಅಧ್ಯಯನ ಮಾಡುತ್ತಿದ್ದ, ಈ ಶತಮಾನದ ಮೂವತ್ತರ ದಶಕದ ಕಾಲದಲ್ಲಿ ಅವರು ಕಂಡ ಮೇಣ ಮೂರ್ತಿಗಳ ಜತೆಗೆ, ಈಚಿನ ಕಾಲದವರೆಗೆ ಒಂದಷ್ಟು ಹೊಸ ಸೇರ್ಪಡೆಗಳಾಗಿವೆ. ಆದರೆ ಇಡೀ ಮ್ಯೂಸಿಯಂದೊಳಗಿನ ಮೂರ್ತಿಗಳ ಹೊಚ್ಚ ಹೊಸತನ ಇಂದಿಗೂ ಚಕಿತಗೊಳಿಸುತ್ತದೆ. ಇಂಗ್ಲೆಂಡಿನ ಇತಿಹಾಸದ ಪುಟಗಳೊಳಗಿನಿಂದ ಎದ್ದು ಬಂದಂತಿರುವ ಈ ಮೇಣದ ಮೂರ್ತಿಗಳು, ತಮ್ಮ ಜೀವಂತಿಕೆಯಿಂದ ಬೆರಗುಗೊಳಿಸುತ್ತವೆ. ನಮ್ಮ ಎದುರಿಗೆ ಈ ಕ್ಷಣ ಸುಮ್ಮನೆ ನಿಂತಿರುವ ಈ ಮೂರ್ತಿಗಳು ಇನ್ನೇನು ಇನ್ನೊಂದು ಕ್ಷಣದಲ್ಲಿ ಚಲಿಸಬಹುದೇನೋ ಎಂಬ ಶಂಕೆಯನ್ನು ನೋಟಕರಲ್ಲಿ ಹುಟ್ಟಿಸುವಂತಿರುವ ಇವುಗಳ ಶರೀರ ರಚನೆ, ಮುಖಭಾವ ಮತ್ತು ಆಯಾ ಸಂದರ್ಭದ ಮನೋಧರ್ಮವನ್ನು ಬಿಂಬಿಸುವಂತಿರುವ ಕಣ್ಣನೋಟ ಹಾಗೂ ಅಂಗಭಂಗಿಗಳು, ನಾವು ಜೀವಂತ ವ್ಯಕ್ತಿಗಳ ಹತ್ತಿರವೇ ನಿಂತ ಭ್ರಮೆಯನ್ನುಂಟುಮಾಡುತ್ತವೆ. ಈ ಎಲ್ಲ ಮೂರ್ತಿಗಳ ನಡುವೆ ರಾಜಶಯ್ಯೆಯಲ್ಲಿ ಪವಡಿಸಿರುವ ನಿದ್ರಾಸುಂದರಿ (Sleeping Beauty) ಯ ಮೇಣದ ಶಿಲ್ಪಸಮುಚ್ಚಯ ಅದ್ಭುತವಾಗಿದೆ. ಸುಂದರಿಯೊಬ್ಬಳು ರಾಜಶಯ್ಯೆಯಲ್ಲಿ ಪವಡಿಸಿರುವ ರೀತಿ, ಹಾಸಿಗೆಯ ವೈಭವ, ಅವಳ ಕಾಲ ಬದಿಯಲ್ಲಿ ಕೂತು ತೂಕಡಿಸುತ್ತ ಅರೆನಿದ್ದೆಗೆ ಸಂದಿರುವ ಸೇವಕರು, ಅವಳ ನಿದ್ರಾಮುದ್ರಿತ ಸುಂದರ ಮುಖಮಂಡಲವನ್ನು ವೀಕ್ಷಿಸುತ್ತ ಪಕ್ಕದಲ್ಲಿ ನಿಂತ ಅವಳ ಪ್ರಿಯಕರ (?) – ಈ ಎಲ್ಲವೂ ನಿದ್ರಾವಸ್ಥೆಯ ಒಂದು ಸ್ಥಿತಿಯನ್ನು ಮೋಹಕವಾದ ಕಲಾತ್ಮಕೆಯ ನೆಲೆಗೆ ಏರಿಸಿರುವ ರೀತಿ ಪ್ರಶಂಸನೀಯವಾಗಿದೆ. ಈ ಪ್ರತಿಮಾಗೃಹದಿಂದ ಮುಂದೆ ಹೋದರೆ ನಾವು ‘ಜನರಲ್ ಹಾಲ್’ ಅನ್ನು ಪ್ರವೇಶಿಸುತ್ತೇವೆ. ಅಲ್ಲಿ ಜಗತ್ತಿನ ಅನೇಕ ಮಹಾವ್ಯಕ್ತಿಗಳ ಮೂರ್ತಿಗಳಿವೆ. ಇಂಗ್ಲೆಂಡಿನ ರಾಜರಾಣಿಯರು, ಸೇನಾನಿಗಳು, ರಾಜಕಾರಣಿಗಳು, ಸಾಹಿತಿಗಳು, ಅಮೆರಿಕಾ ದೇಶದ ಆಧ್ಯಕ್ಷರುಗಳು, ಬೇರೆ ಬೇರೆ ದೇಶದ ಪ್ರಮುಖ ವ್ಯಕ್ತಿಗಳು ಇತ್ಯಾದಿ. ಈ ನಡುವೆ ಇಂದಿರಾಗಾಂಧಿ ಮತ್ತು ರಾಜೀವಗಾಂಧಿಯವರ ಮೂರ್ತಿಗಳೂ ಇಲ್ಲಿ ಸೇರ್ಪಡೆಗೊಂಡಿವೆ. ಮಹಾತ್ಮಾಗಾಂಧಿಯವರ ಮೇಣದ ಮೂರ್ತಿಯೊಂದು ಇಲ್ಲಿರುವುದಾದರೂ, ಯಾಕೋ ಅದರ ಆಕೃತಿ ಹಾಗೂ ಮುಖಭಾವ ಮಹಾತ್ಮಗಾಂಧಿಯವರನ್ನು ಸರಿಯಾಗಿ ಗ್ರಹಿಸಿ ರೂಪಿಸಿದಂತೆ ತೋರುವುದಿಲ್ಲ. ಈ ಎಲ್ಲ ಮೂರ್ತಿಗಳ  ನಡುವೆ ಇಂಗ್ಲೆಂಡಿನ ರಾಜ ಎಂಟನೆಯ ಹೆನ್ರಿ ತನ್ನ ಆರೇಳು ಮಡದಿಯರ ಜತೆಗೆ ಗಂಡುದರ್ಪದಿಂದ ನಿಂತಿರುವ ಭಂಗಿ ತುಂಬ ಮೋಜಿನದಾಗಿದೆ.

ಈ ‘ಜನರಲ್ ಹಾಲ್’ನಿಂದ ಮುಂದೆ ಹೋದರೆ ‘ಛೇಂಬರ್ ಆಫ್ ಹಾರರ‍್ಸ್’ಗೆ ದಾರಿ. ಈ ಭೀಕರತೆಯ ಭವನದೊಳಕ್ಕೆ ಮೆಟ್ಟಿಲ ಮೂಲಕ ಇಳಿದು ಪ್ರವೇಶಿಸುವ ಬಾಗಿಲಲ್ಲಿ ಹಿಟ್ಲರನ ಮೇಣದ ಮೂರ್ತಿ ಎದುರಾಗುತ್ತದೆ. ಮೆಟ್ಟಿಲನ್ನು ಇಳಿದರೆ ಒಂದು ಮಬ್ಬುಗತ್ತಲ ಭವನ. ಅಲ್ಲಿ ಉದ್ದಕ್ಕೂ ರೋದನ, ಹುಯಿಲು, ಚೀತ್ಕಾರಗಳು ನಮ್ಮನ್ನು ತಲ್ಲಣಗೊಳಿಸುತ್ತವೆ. ಶಿಕ್ಷೆಯ ವಿವಿಧ ವಿಧಾನಗಳು, ಯಾವ ಯಾವ ರೀತಿಯಲ್ಲಿ ಅಪರಾಧಿಗಳನ್ನು ಶಿಕ್ಷೆಗೆ ಗುರಿಪಡಿಸಬಹುದೆಂಬ, ಗುರಿಪಡಿಸಿದರೆಂಬ ಸಂಗತಿಗಳು ಹಾಗೂ ಚಿತ್ರಗಳು ಇಲ್ಲಿವೆ. ನೇಣುಹಾಕುವ ಕ್ರಮ, ವಿದ್ಯುತ್ ಕುರ್ಚಿಗೇರಿಸುವ ವಿಧಾನ, ಕತ್ತಿಯಿಂದ ಅಥವಾ ಮತ್ತಾವುದೆ ಆಯುಧದಿಂದ ಮರಣದಂಡನೆ ವಿಧಿಸುವ ಕ್ರಮಗಳು ಇಲ್ಲಿ ಸಚಿತ್ರವಾಗಿ ರೂಪುಗೊಂಡಿವೆ. ಫ್ರೆಂಚ್ ಮಹಾಕ್ರಾಂತಿಯಲ್ಲಿ ವಿದ್ರೋಹಿಗಳ ತಲೆತೆಗೆಯಲು ಬಳಸುತ್ತಿದ್ದ ಜಿಲೊಟಿನ್ ಯಂತ್ರದ ಒಂದು ಮಾದರಿ (model) ಯ ಜತೆಗೆ, ಆಗ ಈ ಜಿಲೊಟಿನ್ ಎಂಬ ತಲೆಗಡುಕ ಯಂತ್ರಕ್ಕೆ ನಿಜವಾಗಿಯೂ ಬಳಸಲಾದ ಅಲಗು (Blades) ಗಳನ್ನು ಇಲ್ಲಿ ಪ್ರದರ್ಶನಕ್ಕೆ ಇರಿಸಲಾಗಿದೆ. ಹಿಟ್ಲರನು ಜೂಷ್ ಜನಾಂಗದವರನ್ನು ಗ್ಯಾಸ್ ಚೇಂಬರಿಗೆ ಹಾಕಿಸಿದ ಒಂದು ಶ್ರವ್ಯ ಪ್ರದರ್ಶನವೂ ಇಲ್ಲಿದೆ. ಒಂದು ಮುಚ್ಚಿದ ಕೋಣೆಯೊಳಗಿನಿಂದ, ಗ್ಯಾಸ್ ಅಥವಾ ಮಾರಕ ವಿಷಾನಿಲಕ್ಕೆ ಗುರಿಯಾಗಿ, ಚಡಪಡಿಸುವ, ಕೆಮ್ಮುವ, ನರಳುವ, ಹುಯ್ಯಲಿಡುವ ಜನರ ಆರ್ತನಾದಗಳು ನಮ್ಮನ್ನು ತಲ್ಲಣಗೊಳಿಸುತ್ತವೆ. ಹಾಗೆಯೇ ಹಲವಾರು ಕುಪ್ರಸಿದ್ಧ ಕೊಲೆಗಾರರ ಚಿತ್ರಗಳೂ, ಅವರು ನಡೆಸಿದ ಕೊಲೆಗಳ ವಿವರಗಳೂ ಇಲ್ಲಿ ದಾಖಲಾಗಿವೆ. ಮನುಷ್ಯನೊಳಗಡಗಿದ ಹಿಂಸಾರತಿಯ ಅಮಾನವೀಯವಾದ ಕ್ರೌರ್ಯಗಳ ‘ವಿಶ್ವ ರೂಪದರ್ಶನ’ ಮಾಡಿಸುವ ಈ ಭವನವನ್ನು ಪ್ರವೇಶಿಸಿ ಹೊರಬಂದ ನಂತರ ನಮ್ಮ ಮನಸ್ಸಿನ ನೆಮ್ಮದಿಯನ್ನು ಉಳಿಸಿಕೊಳ್ಳುವುದು ಸುಲಭವಲ್ಲ.

ಈ ತಲ್ಲಣಗೊಳಿಸುವ ಚರಿತ್ರೆಯಿಂದ ಹಾಗೂ ದಟ್ಟವಾದ ವಾಹನ ಸಂಚಾರದ ಗಡಿಬಿಡಿಯ ಗೊಂದಲಗಳಿಂದ ಪಾರಾಗಿ, ಹಾಯಾಗಿ ಸುತ್ತಾಡಲು, ಲಂಡನ್ ನಗರದೊಳಗೆ ವಿಸ್ತಾರವಾದ ಹಚ್ಚ ಹಸುರಿನ ಅನೇಕ ಪಾರ್ಕುಗಳಿವೆ. ಬಕಿಂಗ್ ಹ್ಯಾಂ ಪ್ಯಾಲೇಸಿನಿಂದ ಪ್ರಾರಂಭವಾಗುವ ಜೇಮ್ಸ್ ಪಾರ್ಕ್, ಅದರ ಮೂಲಕವೇ ವಿಸ್ತರಿಸಿಕೊಂಡ ಹೈಡ್ ಪಾರ್ಕ್, ಕೆನ್ಸಿಂಗ್‌ಟನ್ ಗಾರ್ಡನ್, ರೀಜೆಂಟ್ಸ್ ಪಾರ್ಕ್ ಹಾಗೂ ಇನ್ನೂ ಇತರ ರಾಜೋದ್ಯಾನಗಳೂ ಇಲ್ಲಿವೆ. ಇವುಗಳಲ್ಲಿ ಹೈಡ್ ಪಾರ್ಕ್ ತುಂಬ ಜನಪ್ರಿಯವಾದದ್ದು. ನೂರಾರು ಎಕರೆಗಳಷ್ಟು ವಿಸ್ತಾರವಾದ ಈ ಪಾರ್ಕು, ಒಂದು ಕಾಲದಲ್ಲಿ ದಟ್ಟವಾದ ಅರಣ್ಯಪ್ರದೇಶವಾಗಿತ್ತು. ಕ್ರಿ.ಶ. ೧೫೩೬ರಲ್ಲಿ ಇಂಗ್ಲೆಂಡಿನ ರಾಜನಾಗಿದ್ದ ಎಂಟನೆ ಹೆನ್ರಿಯ ಬೇಟೆಯ ಮೋಜಿಗಾಗಿ ಈ ಅರಣ್ಯ ಪರಿಸರವನ್ನು ಸ್ವಾಧೀನಪಡಿಸಿಕೊಂಡು ಒಂದು ರಾಜೋದ್ಯಾನವನ್ನಾಗಿ ಪರಿವರ್ತಿಸಲಾಯಿತು. ಎಲ್ಲ ಬಗೆಯ ವಾಹನ ಸಂಚಾರವನ್ನು ನಿಷೇಧಿಸಿರುವುದರಿಂದ ಈ ಪಾರ್ಕಿನ ಹುಲ್ಲು ಬಯಲು ಹಾಗೂ ದಟ್ಟವಾದ ಮರಗಳ ನಡುವಣ ದಾರಿಗಳಲ್ಲಿ ನಿರಾತಂಕವಾಗಿ ಸಂಚರಿಸಬಹುದು. ಲಂಡನ್ನಿನಂಥ ಗಡಿಬಿಡಿಯ ನಗರದ ನಡುವೆ ಇದೊಂದು ಹಸುರ್ದಾಣದ ಪ್ರಶಾಂತ ದ್ವೀಪದಂತಿದೆ. ಇಂಥ ‘ಸೋಮಾರಿಗಳ ಸ್ವರ್ಗ’ದಲ್ಲಿ ನಾನೂ ಒಂದರ್ಧ ದಿನ ಅಲೆದಾಡಿದೆ. ಪಾರ್ಕಿನ ತುಂಬ ಜನ ಜನ ಜನ. ಸಾಲು ಮರಗಳ ಬದಿಗೆ ಹಾಕಿರುವ ಮರದ ಒರಗು ಪೀಠಗಳ ಮೇಲೆ ಕೂತು ಹಿತವಾದ ಬಿಸಿಲಿಗೆ ಮೈಯೊಡ್ಡಿದ ಮುದುಕರು; ಬಾಡಿಗೆ ಕುದುರೆಗಳನ್ನೇರಿ ಪಾರ್ಕಿನ ಉದ್ದಗಲಕ್ಕೂ ದೌಡಾಯಿಸಿ ಸವಾರಿ ಮಾಡುತ್ತ ಖುಷಿ ಪಡುವ ತರುಣರು;  ಹುಲ್ಲುಬಯಲಿನ ನಡುವೆ ಮಕ್ಕಳು ಮರಿಗಳ ಸಹಿತ ಕೂತು ಮಧ್ಯಾಹ್ನದ ಉಪಹಾರದಲ್ಲಿ ತೊಡಗಿರುವ ಸಂಸಾರವಂದಿಗರು; ಪಾರ್ಕಿನ ದಿಕ್ಕು ದಿಕ್ಕುಗಳಲ್ಲಿ ಕೂತೂಹಲದಿಂದ ಸಂಚರಿಸುತ್ತಿರುವ  ನನ್ನಂಥ ವಿದೇಶೀ ಪ್ರವಾಸಿಗಳು; ಸರೋವರದ ನೀರಿನಲ್ಲಿ ದೋಣಿಯನ್ನೇರಿ ವಿಹರಿಸುವ ಹದಿಹರೆಯದ ಉತ್ಸಾಹಿಗಳು; ಅದೇ ಸರೋವರದ ಬದಿಯಲ್ಲಿ ಆರಾಮ ಕುರ್ಚಿಗಳನ್ನು ಬಾಡಿಗೆಗೆ ಪಡೆದು, ಹಾಯಾಗಿ ಕಾಲು ಚಾಚಿಕೊಂಡು, ಕಾಲವನ್ನೆ ಮರೆಯಲು ಬಂದು ಕೂತಂತಿರುವ ಮಧ್ಯವಯಸ್ಕರು; ಮರ ಮರಗಳ ತಂಪು ನೆರಳಿನ ಕೆಳಗೆ ಒಬ್ಬರನ್ನೊಬ್ಬರು ತಬ್ಬಿಕೊಂಡು ಮಲಗಿರುವ ನಲ್ಲನಲ್ಲೆಯರು; ಇದಾವುದರ ಪರಿವೆಯೂ ಇಲ್ಲದೆ ಅಲ್ಲಲ್ಲಿ ಉತ್ಸಾಹದ ಬುಗ್ಗೆಗಳಂತೆ ಆಟದಲ್ಲಿ ತೊಡಗಿರುವ ಮಕ್ಕಳು.

ನಾನು ಸ್ವಲ್ಪ ಹೊತ್ತು ಸರೋವರದ ಬದಿಯಲ್ಲಿ ನಿಂತು, ಅದರೊಳಗೆ ತೇಲುವ ಹಂಸಗಳನ್ನೂ, ಬಾತುಕೋಳಿಗಳನ್ನೂ ಹಾಗೂ ದೋಣಿಯ ವಿಹಾರವನ್ನೂ ನೋಡಿ, ಪಕ್ಕದ ರೆಸ್ಟೋರಾಂಟಿನೊಳಗೆ ಪ್ರವೇಶಿಸಿ ಒಂದಷ್ಟು ಸ್ಯಾಂಡ್‌ವಿಚ್ ಅನ್ನೂ, ಪೆಪ್ಸಿಯನ್ನೂ ಕೊಂಡುಕೊಂಡು ಮಧ್ಯಾಹ್ನದ ‘ಊಟ’ದ ಶಾಸ್ತ್ರ ಮುಗಿಸಿ, ಈ ಪಾರ್ಕಿನ ಮೂಲೆಯೊಂದರಲ್ಲಿರುವ ‘ಸ್ಪೀಕರ್ಸ್ ಕಾರ್ನರ್’ ಅನ್ನು ಹುಡುಕಿಕೊಂಡು ಹೊರಟೆ. ಇದು ಈ ಪಾರ್ಕಿನ ವಿಶೇಷಗಳಲ್ಲೊಂದು ಕೂಡಾ. ಈ ಪಾರ್ಕಿನ ಮೂಲೆಯೊಂದರಲ್ಲಿ ಒಂದಷ್ಟು ಸ್ಥಳವನ್ನು ‘ವಾಗ್ಮಿ’ಗಳಿಗಾಗಿ ಮೀಸಲಾಗಿರಿಸಲಾಗಿದೆ. ಅಲ್ಲೊಂದು ವೇದಿಕೆ. ಅದರ ಮೇಲೆ ನಿಂತು, ಯಾರು ಯಾವ ವಿಷಯವನ್ನು ಬೇಕಾದರೂ ಕುರಿತು ಮಾತನಾಡಬಹುದು. ಭಾನುವಾರಗಳಲ್ಲಿ ಮಾತ್ರ ಅವಕಾಶವಿರುವ ಈ ಸ್ಪೀಕರ್ಸ್ ಕಾರ್ನರ್‌ನಲ್ಲಿ, ಮಾತನಾಡುವ ಚಪಲವಿರುವ ಅಥವಾ ಅದಮ್ಯವಾದ ಒತ್ತಡವಿರುವ ಭಾಷಣಕಾರರು ಬೆಳಗಿಂದ ಸಂಜೆಯತನಕ ಒಬ್ಬರ ನಂತರ ಮತ್ತೊಬ್ಬರು ಮೂಲೆಯ ವೇದಿಕೆಯ ಮೇಲೆ ನಿಂತು ಉಪನ್ಯಾಸ ಮಾಡುತ್ತಾರಂತೆ. ಭಾನುವಾರವಾದ್ದರಿಂದ ಕುತೂಹಲವುಳ್ಳ ಕಿವಿಗಳ ಸಂಖ್ಯೆಗೂ ಇಲ್ಲಿ ಕೊರತೆಯಿಲ್ಲವಂತೆ. ಇಂಗ್ಲೆಂಡಿನ ಅನೇಕ ಭಾಷಣ ಪಟುಗಳ ಮೊದಲ ತರಬೇತಿಯ ಮೆಟ್ಟಿಲೂ ಇದು ಆಗಿದೆಯೆಂದು ಹೇಳಲಾಗಿದೆ.

‘ಲಂಡನ್ನಿಗೆ ಹೋದಾಗ ನೀವು ಥೇಮ್ಸ್ ನದಿಯ ಮೇಲೆ ದೋಣಿಯಲ್ಲೋ ಲಾಂಚ್‌ನಲ್ಲೋ ಪಯಣ ಮಾಡುವ ಅವಕಾಶವನ್ನು ಕಳೆದುಕೊಳ್ಳಬೇಡಿ. ಅದೊಂದು ರೋಮಾಂಚಕ ಅನುಭವ’ – ಎಂದು, ನನ್ನ ಗೆಳೆಯರೊಬ್ಬರು ಹೇಳಿದ್ದರು. ಅದೊಂದು ದಿನ ನಾನು ಸುರಂಗ ರೈಲು ಹಿಡಿದು ಇದೇ ಉದ್ದೇಶದಿಂದ ಚಾರಿಂಗ್ ಕ್ರಾಸ್ ಎಂಬ ನಿಲ್ದಾಣದಲ್ಲಿ ಇಳಿದು, ಮೆಟ್ಟಿಲೇರಿ ಮೇಲಕ್ಕೆ ಬಂದು, ಥೇಮ್ಸ್ ನದೀ ತೀರದಿಂದ ಈ ಪಯಣದ ದೋಣಿ ಇತ್ಯಾದಿಗಳು ಹೊರಡುವ ಸ್ಥಳವಾವುದೆಂದು ಅವರಿವರನ್ನು ಕೇಳುತ್ತ ಮುಂದುವರಿದೆ. ನೋಡುತ್ತೇನೆ ಎದುರಿಗೆ ಅನತಿ ದೂರದಲ್ಲಿ ಹಲವು ದಾರಿಗಳು ಕೂಡುವ ಚೌಕದ ಮಧ್ಯೆ ಪುಟಿಯುವ ಚಿಲುಮೆಗಳ ಬದಿಗೆ, ವಿಸ್ತಾರವಾದ ಶಿಲಾಪೀಠವೊಂದರಿಂದ ಗಗನದೆತ್ತರಕ್ಕೆ ಚಾಚಿಕೊಂಡ ಉನ್ನತ ಸ್ತಂಭ ಶಿಲ್ಪವೂ, ಅದರ ತುದಿಯಲ್ಲೊಂದು ಮಾನವ ಮೂರ್ತಿಯೂ – ಅತ್ಯಂತ ಪ್ರಭಾವಶಾಲಿಯಾಗಿ ರಾರಾಜಿಸುತ್ತಿದೆ. ಕುತೂಹಲದಿಂದ ವಿಚಾರಿಸಿದೆ. ಇದು ಇಂಗ್ಲೆಂಡಿನ ಸುಪ್ರಸಿದ್ಧ ಐತಿಹಾಸಿಕ ಸ್ಮಾರಕವನ್ನು ಒಳಗೊಂಡ ಟ್ರಫಾಲ್ಗರ್ ಸ್ಕ್ವೈರ್ ಎಂದು ತಿಳಿಯಿತು. ನಾನು ರಸ್ತೆಯನ್ನು ದಾಟಿ ಆ ಸ್ಮಾರಕದ ಬಳಿ ಬಂದೆ. ಸಾಕಷ್ಟು ಪ್ರವಾಸಿಗಳು ನಿಂತು  ಛಾಯಾಚಿತ್ರಗಳನ್ನು ತೆಗೆಯುತ್ತಿದ್ದರು. ಅವರ ಸುತ್ತ ನೂರಾರು  ಕಂದುಬಣ್ಣದ ಪಾರಿವಾಳಗಳು. ಎತ್ತರವೂ ಅಗಲವೂ ಆದ ಶಿಲಾಪೀಠದ ಮೇಲೆ ನಿಲ್ಲಿಸಿರುವ ಕಲ್ಲಿನ ವಿಜಯಸ್ತಂಭವೆ ನೂರಾ ಅರುವತ್ತೇಳು ಅಡಿಗಳಿಗೂ ಮೀರಿದ ಎತ್ತರವನ್ನು ಹೊಂದಿದೆ;  ಆ ಸ್ತಂಭದ ಮೇಲಿರುವ, ಇಂಗ್ಲೆಂಡಿನ ನೌಕಾಪಡೆಯ ದಂಡನಾಯಕ ನೆಲ್ಸನ್‌ನ ಪ್ರತಿಮೆ ಸುಮಾರು ಹದಿನೇಳೂ ಕಾಲು ಅಡಿ ಎತ್ತರವಿದೆ. ಫ್ರೆಂಚ್ ಹಾಗೂ ಸ್ಪೇನ್ ದೇಶದ ನೌಕಾಪಡೆಗಳೆರಡೂ – ನೆಪೋಲಿಯನ್ನನ ಕಾಲದಲ್ಲಿ ಇಂಗ್ಲೆಂಡಿನ ನೌಕಾಬಲಗಳ ಮೇಲೆ ದಾಳಿ ಮಾಡಿದಾಗ, ಟ್ರಫಾಲ್ಗರ್ ಎಂಬಲ್ಲಿ ಆ ಪಡೆಗಳನ್ನು ಅತ್ಯಂತ ದಕ್ಷತೆಯಿಂದ ಸೋಲಿಸಿ, ಇಂಗ್ಲೆಂಡನ್ನು ಅನ್ಯಾಕ್ರಮಣದಿಂದ ಪಾರುಮಾಡಿದ್ದಲ್ಲದೆ, ಇಂಗ್ಲೆಂಡಿನ ಸಮುದ್ರಶಕ್ತಿಯನ್ನು ಜಗತ್ತಿಗೆ ಪ್ರಕಟಿಸಿ ಹುತಾತ್ಮನಾದ ನೆಲ್ಸನ್‌ನ ನೆನಪಿಗಾಗಿ ನಿರ್ಮಿಸಲಾದ ಸ್ಮಾರಕ ಇದು.

ಸ್ವಲ್ಪ ಹೊತ್ತು ಟ್ರಫಾಲ್ಗರ್ ಚೌಕದ ಬಳಿ ನಿಂತು, ಅದರ ಸುತ್ತಲೂ ಕಿಕ್ಕಿರಿದ ಲಂಡನ್ ನಗರದ ಕಟ್ಟಡಗಳ ವಿನ್ಯಾಸವನ್ನೂ, ಹಲವಾರು ದಾರಿಗಳು ಬಂದು ಸಂಧಿಸುವ ಈ ವೃತ್ತದಲ್ಲಿರುವ ಸ್ಮಾರಕದ ಶಿಲ್ಪಕಲಾನೈಪುಣ್ಯವನ್ನೂ ವೀಕ್ಷಿಸಿ, ಕೆಲವೇ ನಿಮಿಷಗಳಲ್ಲಿ ಚಾರಿಂಗ್ ಕ್ರಾಸ್ ಎಂಬಲ್ಲಿಗೆ ಬಂದೆ. ಎದುರಿಗೆ ವಿಸ್ತಾರವಾಗಿ ವೇಗವಾಗಿ ಪ್ರವಹಿಸುತ್ತಿತ್ತು ಥೇಮ್ಸ್ ನದಿ.

ಥೇಮ್ಸ್ ನದಿ ಲಂಡನ್ ನಗರದ ಬಹುದೊಡ್ಡ ಆಕರ್ಷಣೆಯಾಗಿದೆ. ಈ ನಗರದ ಹೃದಯ ಭಾಗದಲ್ಲಿ ಪ್ರವಹಿಸುವ ಈ ನದಿ ಇಂಗ್ಲೆಂಡಿನ ಇತಿಹಾಸದಲ್ಲಿ ಅನೇಕ ನೆನಪುಗಳನ್ನು ಬಿಂಬಿಸುವ ಕಾಲದ ಸಂಕೇತದಂತಿದೆ. ಜಗತ್ತಿನ ಮುಖ್ಯ ನದಿಗಳಲ್ಲಿ ಒಂದೆಂದು ಹೇಳಲಾದ ಈ ನದಿ, ಇನ್ನೂರಾ ಹದಿನೈದು ಮೈಲಿಗಳಷ್ಟು ಸುದೀರ್ಘವಾಗಿದ್ದು ಬಹು ಹಿಂದಿನಿಂದಲೂ ಈ ದೇಶದ ವಾಣಿಜ್ಯ ಸಂವರ್ಧನೆಯಲ್ಲಿ ಮುಖ್ಯವಾದ ಪಾತ್ರವನ್ನು ವಹಿಸಿದೆ. ಸರುಕು ಸಾಗಾಣಿಕೆಯ ಹಡಗುಗಳಿಗೆ ಹೇಗೋ, ಪ್ರವಾಸಿಗಳ ವಿಹಾರಕ್ಕೂ ತಕ್ಕ ಅನುಕೂಲಗಳನ್ನು ಹೊಂದಿದೆ. ದಿನವೂ ಬೆಳಿಗ್ಗೆಯಿಂದ ಸಂಜೆಯವರೆಗೂ ದೋಣಿಗಳಲ್ಲಿ, ಲಾಂಚುಗಳಲ್ಲಿ ಸಣ್ಣ – ಪುಟ್ಟ ಹಡುಗುಗಳಲ್ಲಿ ಪ್ರವಾಸಿಗಳು ಸಂಚರಿಸುತ್ತಾರೆ. ನದೀ ದಡದ ಎರಡೂ ಕಡೆ ಕಿಕ್ಕಿರಿದ ಲಂಡನ್ ನಗರದ ಎಷ್ಟೋ ಚಾರಿತ್ರಿಕ ಮಹತ್ವದ ಸ್ಥಳಗಳನ್ನು ಸಂದರ್ಶಿಸುತ್ತಾರೆ. ಈ ನದಿಗೆ ಲಂಡನ್ ನಗರ  ಪರಿಸರದಲ್ಲಿಯೇ, ನಾನು ಗಮನಿಸಿದಂತೆ ಸುಮಾರು ಎಂಟು ಬೃಹದಾಕಾರವಾದ ಸೇತುವೆಗಳಿವೆ. ನದಿಯ ಆಚೆಯ ಹಾಗೂ ಈಚೆಯ ನಗರ ಭಾಗಗಳ ಸಂಪರ್ಕ ಮಾಧ್ಯಮದಂತೆ ಇರುವ ಸೇತುವೆಗಳಿಗೆ ಅವುಗಳದೆ ಆದ ಚರಿತ್ರೆ ಇದೆ. ನಿದರ್ಶನಕ್ಕೆ ಹೇಳುವುದಾದರೆ, ‘ಲಂಡನ್ ಬ್ರಿಡ್ಜ್’ ಎನ್ನುವ ಸೇತುವೆ ಮೊಟ್ಟಮೊದಲಿಗೆ ರೋಮನ್ನರ ಕಾಲದಲ್ಲಿಯೆ ನಿರ್ಮಾಣಗೊಂಡಿತೆಂದು ಹೇಳಲಾಗಿದೆ. ಹಾಗೆಯೆ ಹದಿನೆಂಟನೆಯ ಶತಮಾನದಲ್ಲಿ ನಿರ್ಮಾಣಗೊಂಡ ‘ವೆಸ್ಟ್ ಮಿನಿಸ್ಟರ್ ಬ್ರಿಡ್ಜ್’, ಇಂಗ್ಲಿಷ್ ಸಾಹಿತ್ಯದ ವಿದ್ಯಾರ್ಥಿಗಳ ನೆನಪಿನಲ್ಲಿ ವರ್ಡ್ಸ್‌ವರ್ತ್ ಕವಿಯ ಸಾನೆಟ್ ಒಂದರ ಮೂಲಕ ಅಂಕಿತವಾಗಿದೆ. ಹಾಗೂ ಆ ಸಾನೆಟ್‌ನಲ್ಲಿ ಕವಿ ವರ್ಡ್ಸ್‌ವರ್ತ್ ಒಂದು ಮುಂಜಾನೆ ಕಂಡ ಸೂರ್ಯೋದಯದ ವೈಭವವೂ, ಅಂದಿನ ಲಂಡನ್ ನಗರದ ಒಂದು ಚಿತ್ರವೂ ದಾಖಲಾಗಿದೆ.  ಲಂಡನ್ನಿನ ಟವರ್‌ಬ್ರಿಡ್ಜ್, ಆಧುನಿಕ ತಂತ್ರಜ್ಞಾನದ ಒಂದು ಅದ್ಭುತವಾಗಿದ್ದು, ಸುಮಾರು ಒಂದು ಸಾವಿರ ಟನ್ ತೂಗುವ ಆ ಸೇತುವೆಯ ಎರಡು ಭಾಗಗಳು, ಕೇವಲ ತೊಂಬತ್ತು ಸೆಕೆಂಡುಗಳ ಅವಧಿಯಲ್ಲಿ ಎತ್ತಲ್ಪಟ್ಟು, ಹಡಗುಗಳ ಸಂಚಾರಕ್ಕೆ ಅವಕಾಶ ಕಲ್ಪಿಸುವ ಯಂತ್ರಕೌಶಲವನ್ನು ಅಳವಡಿಸಿಕೊಂಡಿದೆ.

ನಾನು ಚಾರಿಂಗ್‌ಕ್ರಾಸ್‌ನಲ್ಲಿ ಎರಡು ಗಂಟೆಗಳ ಅವಧಿಯ ಟಿಕೆಟ್‌ಅನ್ನು ಕೊಂಡುಕೊಂಡು, ವಿಹಾರ ನೌಕೆಯೊಂದನ್ನೇರಿದೆ. ಥೇಮ್ಸ್ ನದಿ ಸುದೀರ್ಘವಾಗಿ, ಅಗಲವಾಗಿ ಹಾಗೂ ವೇಗವಾಗಿ ಪ್ರವಹಿಸುತ್ತಿತ್ತು. ಆ ಪ್ರವಾಹದ ರಭಸ ನನಗೆ ಗಂಗಾನದಿಯ ನೆನಪು ತಂದಿತು. ವಿಹಾರ ನೌಕೆ ಈ ವೇಗಗಾಮಿನಿಯೊಳಗೆ ಮುಂದುವರಿದಂತೆ, ಮಾರ್ಗದರ್ಶಕನೊಬ್ಬ ಧ್ವನಿವರ್ಧಕವನ್ನು ಹಿಡಿದುಕೊಂಡು, ಆ ನದಿಯ ಎರಡೂ ಬದಿಯ ಮುಖ್ಯ ಕಟ್ಟಡಗಳನ್ನೂ, ಸ್ಥಳಗಳನ್ನೂ ಅವುಗಳ ವಿಶೇಷತೆಯೊಂದಿಗೆ ಪರಿಚಯ ಮಾಡಿಕೊಡುತ್ತ ಹೋಗುತ್ತಾನೆ; ಅಲ್ಲಿ ನೋಡಿ ಅಲ್ಲೊಂದು ಎತ್ತರವಾದ ಕಟ್ಟಡವಿದೆಯಲ್ಲ ನಿಮ್ಮ ಎಡಗಡೆಗೆ, ಅದು ಮೇಫ್ಲವರ್ ಎಂಬ ಹಡಗಿನಲ್ಲಿ ಇಂಗ್ಲೆಂಡಿನ ಕೆಲವು ಜನ ಕೂತು ಅಮೆರಿಕಾಗೆ ಮೊಟ್ಟ ಮೊದಲು ಪ್ರಯಾಣಮಾಡಿದರಲ್ಲ, ಅವರ ನೆನಪಿನ ಸಂಕೇತ; ಅಲ್ಲಿ ಕಾಣುತ್ತಲ್ಲ ಅದು ಬೌದ್ಧರ ಶಾಂತಿಮಂದಿರ; ಅಗೊ ಅಲ್ಲಿದೆಯಲ್ಲ ಅದು ಸೇಂಟ್ ಪಾಲ್ ಸಂತನ ಚರ್ಚು, ಅದರ ಗುಮ್ಮಟವೆ ಮುನ್ನೂರ ಅರುವತ್ತೈದು ಅಡಿ ಎತ್ತರವಿದೆ; ಅಗೊ ಅಲ್ಲೊಂದು ಮನೆ ಕಾಣುತ್ತದಲ್ಲ, ಆ ಮನೆಯಲ್ಲೇ ಕೂತು ಚಾರ್ಲ್ಸ್ ಡಿಕನ್ಸ್ ತನ್ನ ಕಾದಂಬರಿಗಳನ್ನು ಬರೆದದ್ದು; ಈ ಕಡೆ ಕಾಣುವುದಲ್ಲ ಮನೆ, ಅಲ್ಲೆ ಷೇಕ್ಸ್‌ಪಿಯರ್ ವಾಸ ಮಾಡುತ್ತಿದ್ದ; ಇನ್ನೂ ಆ ಕಡೆ ಇದೆಯಲ್ಲ, ಅದೇ ಗ್ಲೋಬ್ ಥಿಯೇಟರ್ – ಹೀಗೆ ಯಾವ ಕಟ್ಟಡ ಯಾವ ಯಾವ ಚಾರಿತ್ರಿಕ ಹಾಗೂ ಸಾಂಸ್ಕೃತಿಕ ಕಾರಣಗಳಿಗೆ ಮುಖ್ಯವಾಗುತ್ತದೆ ಎಂಬುದನ್ನು ಕುರಿತು ಈ ಮಾರ್ಗದರ್ಶಕ ನೀಡುವ ವ್ಯಾಖ್ಯಾನಗಳು ನಮ್ಮ ತಿಳಿವಳಿಕೆಯ ಒಂದು ಭಾಗವಾಗುತ್ತವೆ., ಚಾರಿತ್ರಿಕವಾದ ಈ ಮಾಹಿತಿ ಎಷ್ಟೋ ವೇಳೆ, ನಿಮ್ಮ ರಸಾಸ್ವಾದಕ್ಕೆ ಭಂಗ ತರುವಷ್ಟು ಕಿರಿಕಿರಿ ಮಾಡಿದರೆ, ಅದನ್ನು ‘ಕೆಳಗಿವಿಗೇಳ್ದು’,  ನದಿಯ ವೇಗ ವಿಸ್ತಾರವನ್ನೂ, ಅದರ ಉದ್ದಕ್ಕೂ ತೇಲುವ ವಿವಿಧ ಯಾನಗಳನ್ನೂ, ಸಂಜೆಯ ಆಕಾಶದ ವರ್ಣವೈವಿಧ್ಯಗಳು ಹರಿಯುವ ನೀರಿನ ಮೇಲೆ ಮಾಡುವ ಮೋಡಿಯನ್ನೂ, ಇನ್ನೂ ಕತ್ತಲಾದಂತೆ ಎರಡೂ ಕಡೆಯ ನಗರದ ದೀಪದ ಬೆಳಕುಗಳು ನದಿಯ ಮೇಲೆ ಪ್ರತಿಫಲಿಸಿ, ಇಡೀ ನದಿ ಪ್ರಾಚೀನ ಕಾಲದ ಯಾವುದೋ ಒಂದು ಬೃಹತ್ ಗಾತ್ರದ ಆದಿಶೇಷ ಸದೃಶವಾದ ಸರೀಸೃಪದಂತೆ ಭಾಸವಾಗುವ ವಿಸ್ಮಯವನ್ನೂ ಪರಿಭಾವಿಸುತ್ತ ಸುಮ್ಮನೆ ಕೂರಬಹುದು.

ಮರುದಿನ ಬೆಳಿಗ್ಗೆ ಮತ್ತೆ ಟ್ರಫಾಲ್ಗರ್ ಚೌಕಕ್ಕೆ ಬಂದು, ಅಲ್ಲಿಂದ ಪಾರ್ಲಿಮೆಂಟ್ ಭವನದ ಕಡೆಗೆ ನಡೆದೆ. ಪಾರ್ಲಿಮೆಂಟ್ ಭವನವನ್ನು ತಲುಪುವ ಮುನ್ನ ಇಂಗ್ಲೆಂಡಿನ ಆಡಳಿತದ ಹಲವು ಕಛೇರಿಗಳನ್ನು ಹಾದು ಹೋಗುವಾಗ ನನಗೆ ಆಶ್ಚರ್ಯವಾದದ್ದೆಂದರೆ, ಅರ್ಥಸಚಿವಶಾಖೆ, ರಕ್ಷಣಾಸಚಿವಶಾಖೆ, ಎಂಬ ಫಲಕಗಳನ್ನು ತಗುಲಿಸಿಕೊಂಡ ಕಛೇರಿ ಕಟ್ಟಡಗಳ ಸುತ್ತ ಮುತ್ತ ಜನಸಂಚಾರವೇ ಇರಲಿಲ್ಲ. ಕಛೇರಿಯ ಕೆಲಸದ ಸಮಯವಾಗಿತ್ತೇನೋ ನಿಜ. ಆದರೆ ನಾನು ಕಂಡದ್ದು ಕಛೇರಿಯ ಹೊರಗೆ ಸದ್ದಿಲ್ಲದೆ ನಿಂತ ಕಾರುಗಳು ಹಾಗೂ ಆಗಾಗ ಕಛೇರಿಯಿಂದ ಹೊರಬರುವ ಹಾಗೂ ಕಛೇರಿಯೊಳಕ್ಕೆ ಹೋಗುವ ಒಬ್ಬರೋ ಇಬ್ಬರೋ ವ್ಯಕ್ತಿಗಳು. ನಮ್ಮ ದೇಶದ ಸರ್ಕಾರಿ ಆಡಳಿತ  ಕಚೇರಿಗಳ ಮುಂದೆ ಕೆಲಸದ ವೇಳೆಗಳಲ್ಲಿ ಜನದ ಸಂತೆಯೆ ಸೇರಿರುತ್ತದೆ. ನಾನು ವಿಚಾರಿಸಿ ತಿಳಿದುಕೊಂಡಂತೆ, ಇಲ್ಲಿ ಯಾರೂ ಅಷ್ಟಾಗಿ ಫೈಲುಗಳ ಬೆನ್ನಟ್ಟಿ, ಅಧಿಕಾರಿಗಳ ಮರ್ಜಿಯನ್ನು ಕಾದು, ಕಂಬ ಸುತ್ತುವ ಅವಸ್ಥೆಗೆ ಈಡಾಗಬೇಕಾಗಿಲ್ಲ. ನೀವು ಸರ್ಕಾರಕ್ಕೆ ಏನಾದರೂ ಪತ್ರ ಬರೆದರೆ ಅದಕ್ಕೆ ತಾನಾಗಿಯೇ ಉತ್ತರ ಬರುತ್ತದೆ. ಹೀಗಾಗಿ ಜನ ಕಛೇರಿಗಳ ಬಾಗಿಲು ಕಾಯುವ ಅಗತ್ಯವಿಲ್ಲ.

ವೆಸ್ಟ್ ಮಿನಿಸ್ಟರ್ ಎಂದು ಕರೆಯಲಾದ ಲಂಡನ್ನಿನ ಈ ಪರಿಸರದಲ್ಲಿರುವ ಪಾರ್ಲಿಮೆಂಟ್ ಭವನವನ್ನು ತಲುಪುವ ಹೊತ್ತಿಗೆ ಹನ್ನೊಂದು ಗಂಟೆಯಾಗಿತ್ತು. ಪಾರ್ಲಿಮೆಂಟ್ ಭವನವಂತೂ ನಿಜಕ್ಕೂ ‘ಗ್ರ್ಯಾಂಡ್’ ಅನ್ನುವಂತಿದೆ. ವಿಸ್ತಾರಭವ್ಯವಾದ ಈ ಪಾರ್ಲಿಮೆಂಟ್ ಕಟ್ಟಡಗಳಿಗೆ ಹೊಂದಿಕೊಂಡಂತೆ, ಎತ್ತರವಾಗಿ ಮೇಲೆದ್ದು ಕಾಣುವ ಬಿಗ್‌ಬೆನ್ ಗಡಿಯಾರ ಸ್ತಂಭವಂತೂ ಸಾಕ್ಷೀಭೂತ ಕಾಲದ ಸಂಕೇತದಂತೆ ನಿಂತು, ಕಾಲದ ಇನ್ನೊಂದು ಚಲನಸ್ಥಿತಿಯೋ ಎಂಬಂತಿರುವ ಥೇಮ್ಸ್ ನದಿಯ ಕಡೆ ನೊಡುವಂತೆ ತೋರುತ್ತದೆ,. ಪಾರ್ಲಿಮೆಂಟ್ ಭವನದ ಎದುರಿಗೆ ಅನತಿ ದೂರದಲ್ಲೇ ಇದೆ ‘ವೆಸ್ಟ್ ಮಿನಿಸ್ಟರ್ ಅಬೆ’ ಎಂಬ ಹೆಸರಿನ ಅತ್ಯಂತ ಪ್ರಾಚೀನವಾದ ಹಾಗೂ ಮಹತ್ವದ ಒಂದು ಚರ್ಚು. ಎರಡು ಗೋಪುರಗಳಿಂದ ಗಮನ ಸೆಳೆಯುವ ವಿಸ್ತಾರವಾದ ಈ ಚರ್ಚು ಇಂಗ್ಲೆಂಡಿನ ರಾಜಕೀಯ ಹಾಗೂ ಧಾರ್ಮಿಕ ಇತಿಹಾಸದಲ್ಲಿ ವಹಿಸಿರುವ ಪಾತ್ರ ಬಹು ದೊಡ್ಡದು. ಒಂದು ಕಡೆ ಪಾರ್ಲಿಮೆಂಟ್, ಮತ್ತೊಂದು ಕಡೆ ಧರ್ಮಾಧಿಕರಣವಾದ ಚರ್ಚ್ – ಈ ಎರಡೂ ಕಳೆದ ಒಂಬತ್ತು ಶತಮಾನಗಳ ಕಾಲಮಾನದಲ್ಲಿ ಇಂಗ್ಲೆಂಡಿನ ರಾಷ್ಟ್ರ ಜೀವನದೊಂದಿಗೆ ಗಾಢವಾಗಿ ಬೆಸೆದುಕೊಂಡಿವೆ. ಪ್ರಭುತ್ವ ದೊಡ್ಡದೋ, ಧರ್ಮ ದೊಡ್ಡದೋ – ನೋಡಿಯೇ ಬೀಡೋಣವೆಂಬ ಮುಖಾಮುಖಿ ಹಾಗೂ ಸಂಘರ್ಷಗಳು ಈ ದೇಶದ ಚರಿತ್ರೆಯಲ್ಲಿ ದಾಖಲಾಗಿವೆ. ಸ್ವಾರಸ್ಯದ ಸಂಗತಿ ಎಂದರೆ ಇಂಗ್ಲೆಂಡಿನ ರಾಜರುಗಳಿಗೆ ಕಿರೀಟಧಾರಣೆಯಾಗುವದೂ ಈ ಚರ್ಚಿನೊಳಗೇ. ಅವರ ಮರಣಾನಂತರ ಅವರು ಗೋರಿಯಾಗುವುದೂ ಈ ಚರ್ಚಿನೊಳಗೇ ಭೋಗ – ವೈಭವಗಳ ಹಾಗೂ ಅವುಗಳ ನಶ್ವರತೆಯ ಸಂಯುಕ್ತ ಸಂಕೇತದಂತಿದೆ ಈ ‘ವೆಸ್ಟ್ ಮಿನಿಸ್ಟರ್ ಅಬೆ’.

ಎಡ್ವಡ ದಿ ಕನ್‌ಫೆಸರ್ ಎಂಬ ಹೆಸರಿನ ಸ್ಯಾಕ್ಸನ್ ರಾಜನ ಕಾಲದಲ್ಲಿ (೧೦೪೨-೧೦೬೬) ಸ್ಥಾಪಿತವಾದ ಈ ಚರ್ಚ್ ಅಂದಿನಿಂದ ಹಲವು ಶತಮಾನಗಳ ಕಾಲಮಾನದಲ್ಲಿ ವಿಸ್ತರಣೆಗೊಳ್ಳುತ್ತ ಈಗ ಕಾಣುವ ಈ ಆಕೃತಿಯನ್ನು ಪಡೆದುಕೊಂಡಿದೆ. ಈ ಚರ್ಚಿನ ಒಳಗಿನ  ವಿಸ್ತಾರ, ಬೃಹತ್ತಾದ ಕಮಾನುಗಳು, ಬಹುಸಂಖ್ಯೆಯ ಕಂಬಗಳು ಇತ್ಯಾದಿಗಳಿಂದ ಗಾಥಿಕ್ ಮಾದರಿಯ ವಾಸ್ತುರಚನೆಯಿಂದ ದಂಗುಬಡಿಸುವಂತಿದೆ. ಅನೇಕ ವಿಭಾಗಗಳ ತುಂಬ ಪ್ರತಿಷ್ಠಿತ ವ್ಯಕ್ತಿಗಳ ಸ್ಮಾರಕಗಳನ್ನು ಒಳಗೊಳ್ಳುವ ಈ ಬೃಹದ್ದೇವತಾ ಮಂದಿರವು ಏಕಕಾಲಕ್ಕೆ ಪೂಜಾಗೃಹವೂ ಹೌದು, ರುದ್ರ ಭೂಮಿಯೂ ಹೌದು. ಇಂಗ್ಲೆಂಡಿನ ಮಹಾರಾಜಕಾರಣಿಗಳು, ಕಲಾವಿದರು, ರಾಜ- ರಾಣಿಯರು, ಧರ್ಮಗುರುಗಳು, ಸೇನಾನಿಗಳು ಮತ್ತು ಕವಿಗಳು ಇಲ್ಲಿ ನಿಶ್ಯಬ್ದವಾಗಿ ಮಲಗಿದ್ದಾರೆ. ಅವರೆಲ್ಲರನ್ನೂ ಹುದುಗಿಸಿಕೊಂಡ ಗೋರಿಗಳ ಮೇಲೆ ಅವರ ನಾಮಾಂಕಿತಗಳನ್ನೂ, ಮತ್ತಿತರ ಸಂಕೇತಗಳನ್ನೂ ಕಾಣಬಹುದು. ರಾಣಿ ಮೊದಲ ಎಲಿಜಬೆತ್ ಹಾಗೂ ಮೇರೀ ಕ್ವೀನ್ ಆಫ್ ಸ್ಕಾಟ್ಸ್‌ಳ ಪ್ರತ್ಯೇಕವಾದ ಸಮಾಧಿಗಳು ಇಲ್ಲಿವೆ. ಈ ಆವರಣದಲ್ಲಿರುವ ‘ಕವಿಗಳ ಮೂಲೆ’ Poets Corner – ನನ್ನ ಗಮನವನ್ನು ಸೆಳೆಯಿತು. ಇಲ್ಲಿ ಮಿಲ್ಟನ್, ಬೈರನ್, ಟೆನಿಸನ್, ಜಾನ್ಸನ್, ಲಾರೆನ್ಸ್, ಡಿಕನ್ಸ್, ಅಡೆನ್, ಹೆನ್ರಿಜೇಮ್ಸ್, ಇಲಿಯೆಟ್, ಬ್ಲೇಕ್ ಇತ್ಯಾದಿ ಚಿರಪರಿಚಿತರಾದ ಅನೇಕ ಕವಿಗಳ ಸಮಾಧಿಗಳಿವೆ.  ಷೇಕ್ಸ್‌ಪಿಯರ್, ವರ್ಡ್ಸ್‌ವರ್ತ್, ಬರ್ನ್ಸ್- ಇವರ ನಿಜವಾದ ಸಮಾಧಿಗಳೂ ಅವರವರ ಹುಟ್ಟೂರುಗಳಲ್ಲಿ ಇದ್ದರೂ, ಇಲ್ಲಿ ಅವರವರನ್ನು ಹೋಲುವ ಶಿಲಾಪ್ರತಿಮೆಗಳನ್ನು ಇರಿಸಿ ಗೌರವಿಸಲಾಗಿದೆ. ಈ ಗತಕಾಲದ ಪ್ರತಿಭಾವಂತರ ನೆನಪುಗಳ ನಡುವೆ ನಾನು ನಿಶ್ಯಬ್ದವಾಗಿ ಬಹುಕಾಲ ನಿಂತೆ.