ಲಂಡನ್ ನಗರದ ಪಾತಾಳ ಪ್ರಪಂಚದಾ-
ಳಗಳಲ್ಲಿ ಮಿಂಚಿನ ವೇಗದ ಘಟ
ಸರ್ಪಗಳಂತೆ ಸದಾ ಸಂಚರಿಸುವ ಟ್ಯೂ-
ಬುಗಳ ಹೊಟ್ಟೆಯ ಹೊಕ್ಕು, ಎಸ್ಕುಲೇಟ-
ರಿನ ಗರುಡರೆಕ್ಕೆಯನ್ನೇರಿ, ಬಿಲದ ಬಾಗಿಲ
ತೂರಿ, ನಾಗರಿಕ ಜೀವನದ ನಿಷ್ಕರುಣ
ಚಕ್ರಗತಿಗಳ ನಡುವೆ ಹೈಡ್ಪಾರ್ಕ್ ಜೇಮ್ಸ್
ಪಾರ್ಕುಗಳ ಅಲೆಮಾರಿಗಳ ಹಸುರ್ದಾಣ-
ಗಳ ದಾರಿಯ ಹುಡುಕಿ, ಹಾಯಾಗಿ ಕನಸು
ಕಾಣುತ್ತೇನೆ. ಸ್ಯಾಂಡ್ವಿಚ್ ತಿಂದು, ಮ್ಯೂಸಿ-
ಯಮ್ಮುಗಳ ಚಕ್ರವ್ಯೂಹದೊಳನುಗ್ಗಿ, ಪ್ರ
ಪ್ರಾಚೀನ ಸ್ಮೃತಿಗಳ ಮಧ್ಯೆ ಭ್ರಮಿಸಿ
ಹೊರಬಂದು, ಟ್ರಫಾಲ್ಗರ್ ಸ್ಕ್ವೇರಿನಲ್ಲಿ ಸಹ-
ಸ್ರಾರು ಪಾರಿವಾಳಗಳ ಜತೆಗೆ ರೆಕ್ಕೆ
ಬಿಚ್ಚುತ್ತೇನೆ. ಥೇಮ್ಸ್ ನದಿಯ ಜಲವಿಸ್ತಾರ-
ದಲ್ಲಿ ಗಂಗೆಯ ನೆನೆದು, ಪುಟ್ಟನೌಕೆ-
ಯನ್ನೇರಿ ವಿಹಾರ ಮಾಡುತ್ತೇನೆ. ಆಕ್ಸ್ಫರ್ಡ್
ಸ್ಟ್ರೀಟಿನಂಗಡಿಯ ಸಾಲುಗಳ ಝಗಮಗದ
ನಡುವೆ ಗಮಾರನಂತೆ ತೊಳಲುತ್ತೇನೆ. ಬಕಿಂಗ್
ಹ್ಯಾಂ ಪ್ಯಾಲೇಸಿನೆದುರು ನಿಶ್ಚಲವಾದ
ಶಿಲಾ ಪ್ರತಿಮೆಗಳಾಗಿ ನಿಂತ ಕಾವಲಿನವರ
ಮೌನಕ್ಕೆ ಬೆರಗಾಗುತ್ತ, ಲಂಡನ್ ಟವರಿ
ನಿತಿಹಾಸಗಳ ಕತ್ತಲಿನಲ್ಲಿ ನಿಡುಸುಯ್ಯುತ್ತ,
ದೇಶದೇಶಗಳ ಲೂಟಿಯ ಮಾಡಿ ಹೇರಿ
ತಂದೈಶ್ವರ್ಯಗಳ ಪ್ರದರ್ಶನಾಲಯವನ್ನು
ಕನಿಕರ-ತಿರಸ್ಕಾರಗಳಿಂದ ನೋಡುತ್ತ
ಸಾಕ್ಷೀಭೂತವಾಗಿ ನಿಂತಿರುವ ಬಿಗ್ಬೆನ್
ಗಡಿಯಾರ ಸ್ತಂಭಕ್ಕೆ ಕೈ ಮುಗಿಯುತ್ತ
ವೆಸ್ಟ್ಮಿನಿಸ್ಟರ್ ಅಬೆಯ ಸ್ಮಶಾನ ವೈಭವದ
ಮಧ್ಯೆ ದಿಗ್ಭ್ರಮೆಗೊಂಡು ನಿಲ್ಲುತ್ತೇನೆ.
ಕಿರೀಟಗಳು, ಖಡ್ಗಗಳು, ಲೇಖನಿಗಳು, ತುತೂರಿಗಳು
ಮಣ್ಣಾಗಿ ಮಲಗಿದ ಪರಿಗೆ ಮಣಿಯುತ್ತೇನೆ.
Leave A Comment