ಲಂಬಾಣಿ ಮಹಿಳಾ ಸಂವೇದನೆಗಳು

ಪುರುಷ ಪ್ರಧಾನ ಸಮೂಹ ವ್ಯವಸ್ಥೆ ರೂಪಗೊಂಡಂತೆ, ಆರ್ಥಿಕ ಪರಾವಲಂಬನೆಯಿಂದ ಪುರುಷಾಧೀನಕ್ಕೊಳಪಟ್ಟು, ಸ್ವತಂತ್ರ ಅಸ್ತಿತ್ವವನ್ನು ಕಳೆದುಕೊಂಡು ಹೆಣ್ಣು ಕೇವಲ ಭೋಗದ ವಸ್ತುವೆಂದು ಪರಿಗಣಿಸಲ್ಪಟ್ಟು, ವ್ಯವಸ್ಥೆಯ ತುಳಿತಕ್ಕೊಳಗಾಗಿ ನರಳಿದ್ದು ಮಾನವ ಇತಿಹಾಸದ ದುರಂತ. ಅಸಹಾಯಕನಾಗಿಯೋ, ಅನಿವಾರ್ಯವಾಗಿಯೋ, ಪುರುಷ ತನ್ನ ಸ್ವಾರ್ಥಕ್ಕಾಗಿ ಸೃಷ್ಟಿಸಿದ ಮೌಲ್ಯಗಳನ್ನೇ ಒಪ್ಪಿಕೊಂಡರು. ಕೆಲವು ಸಲ ಆ ಮೌಲ್ಯಗಳನ್ನೇ ತನ್ನ ಪ್ರತೀಕಾರಕ್ಕಾಗಿ ಬಳಸಿಕೊಂಡು ಹೋರಾಡಿದ್ದನ್ನು ಮಾನವನ, ಸಾಮಾಜಿಕ, ಸಾಂಸ್ಕೃತಿಕ ಇತಿಹಾಸದ ಪುಟಗಳಲ್ಲಿ ಕಾಣಬಹುದು.

ಅಲೆಮಾರಿ, ಅರೆ ಅಲೆಮಾರಿ, ಜನಪದ ವೃಂದ, ಬುಡಕಟ್ಟು ಮುಂತಾದ ಗುಂಪುಗಳಲ್ಲಿಯೂ ಕೂಡ ಹೆಣ್ಣಿನ ಪರಿಸ್ಥಿತಿ ಚಿಂತಾಜನಕವಾಗಿದೆ. ಅನಕ್ಷರತೆ ತಾಂಡವ ಮಾಡುತ್ತಿರುವ ಈ ಬುಡಕಟ್ಟುಗಳಲ್ಲಿ ಮೂಲದಲ್ಲಿ ’ತೆರವು’ ಪದ್ಧತಿ ಇತ್ತು. ಇಂದು ’ತೆರವು ಪದ್ಧತಿ’ ಯ ಬದಲಾಗಿ ವರದಕ್ಷಿಣೆ ಭೂತ ಆವರಿಸಿಕೊಂಡಿದೆ, ಇಂತಹ ಅನೇಕ ಸಮಸ್ಯೆಗಳು ಬುಡಕಟ್ಟಿನ ಮಹಿಳೆಯರಿಗಿದೆ. ಈ ಮಾತು ಲಂಬಾಣಿ, ಬಂಜಾರ, ಬುಡಕಟ್ಟಿನ ಮಹಿಳೆಯರಿಗೂ ಹೊರತಾಗಿಲ್ಲ.

ಬಂಜಾರ ಸಮಾಜದಲ್ಲಿ ಮೊದಲಿನಿಂದಲೂ ಹೆಣ್ಣೆಂದರೆ ತಾತ್ಸಾರ ಭಾವನೆ ಇದ್ದಂತೆ ಕಂಡು ಬರುತ್ತದೆ. ಹೆಣ್ಣು ಮಗುವಾದರೆ ಅದೊಂದು ಹೊರೆ ಏನೋ, ಅನ್ನುವ ಭಾವನೆ ಇವರ ಸಾಮಾಜಿಕ ಅಧೋಗತಿಗೆ ಹಿಡಿದ ಕನ್ನಡಿಯಾಗಿದೆ. ಉದಾ. ಗಂಡು ಮಗು (ಛೋರಾ) ಹುಟ್ಟಿದೊಡನೆ ಈ ಬುಡಕಟ್ಟಿನ ಜನರಿಗೆ ಎಲ್ಲಿಲ್ಲದ ಸಂತೋಷ. ಮಗು ಭೂಮಿ ಮೇಲೆ ಸ್ಪರ್ಶ ಮಾಡುವುದೊಂದೆ ತಡ, ತಾಂಡಾದಲ್ಲಿಯ ಸೇವಾಲಾಲನ ಗುಡಿ (ದೇವಳ) ಗೆ ಹೋಗಿ (ನಗಾರಿ) ನಂಗಾರ ಬಾರಿಸುವುದರ ಮೂಲಕ, ತಾಂಡಾಕ್ಕೆಲ್ಲ ಸುದ್ದಿ  ಪ್ರಸಾರ ಮಾಡುವ ಸುದ್ಧಿ ಸೂರಪ್ಪಗಳಿಗೇನು ಕೊರತೆಯಿಲ್ಲ. ಅದೇ ವರ್ಷದ ಹೋಳಿ ಹಬ್ಬದ ಸಂದರ್ಭದಲ್ಲಿ ಮಗುವಿನ ’ದೂಂಡ’ ಕಾರ್ಯ ಅದ್ದೂರಿಯಾಗಿ ಮಾಡುತ್ತಾರೆ. ಇದೊಂದು ಹುಟ್ಟುಹಬ್ಬದ ಸಂಭ್ರಮ. ಈ ಸಂದರ್ಭದಲ್ಲಿ ಹೋಳಿ ಹಬ್ಬದ ಸಂಜೆ ತಾಂಡಾದ ಜನರೆಲ್ಲರೂ ಸೇರಿಕೊಂಡು ಮಗುವಿಗೆ ಶುಭಕೋರಿ ’ಧೂಂಡ’ ಗೀತೆ ಹಾಡುತ್ತಾರೆ.

ಸರಿಕ್ ಸರಿಯಾ ಜಂಪಾ ಜೋಲ
ಜುಂ ಜುಂ ಜಂಪಾ ಲೇರಾಲ
ಜುಂ ಜುಂ ಪೂಲ ಫೇಲಾಲ ಹೋ
ಪೇಲೋ ಬೇಟಾ ನಾಯಕಿಕರಚ
ಜೇರ ಪಾಚೇರೋ ಕಾರಭಾರ ಕರ
ಜೇರ ಪಾಚೇರೋ ಮಾಯೇನ ಸಮಾಳ
ಜೇರ ಪಾಚೇರೋ ಬಾಪೇನ ಸಮಾಳ
ಜೇರ ಪಾಚೇರೋ ಘೋಡೋ ಡುಕಾವ
ಬೇಟೋ ಸಸರೋ ಪಾವ ದಬಾವ
ಬೇಟಿ ಸಾಸು ನವಣ ಕರಾವ
ವೂಟ ಗದಡಿಯಾ ತಾಳ ಭರಾವ
ಸೀಕಚ ಸಿಕಾವಚ, ಸಿಕ ಹಾತ ಘಲಾವಚ
ಸಿಕಜೇರಿ ಸಾಟ ಪೋಳೀ ಘೀಯಾ ಸಪೋಳೀ
ಠೋಕರ ಖಾಸಿ ಹಾ, ಹೋ
ಈ ಬಾಳಾ ಅವಡಾ ವೇಗೋ’

ಅರ್ಥ: ಲಂಬಾಣಿಗರು ಹೋಳಿ ಹಬ್ಬದ ಸಂದರ್ಭದಲ್ಲಿ ಅದೇ ವರ್ಷ ಹುಟ್ಟಿದ ಮಗುವಿನ ದೂಂಡ (ಹುಟ್ಟು ಹಬ್ಬದ) ಕಾರ್ಯಕ್ರಮ ಮಾಡುತ್ತಾರೆ. ತಾಂಡಾದ ಬಂಧು ಬಾಂಧವರೆಲ್ಲರೂ ಸೇರಿ ಆ ಮಗುವಿಗೆ ಆಶೀರ್ವದಿಸುತ್ತಾರೆ. ಮೊದಲನೆಯ ಮಗು ನಾಯಕನಾಗುತ್ತಾನೆ, ಎರಡನೆಯವ ತಾಂಡಾದ ಕಾರ್ಯಭಾರ ಮಾಡುತ್ತಾನೆ. ಮುಂದಿನವನು ತಾಯಿಯನ್ನು ಸಂರಕ್ಷಿಸಿದರೆ, ಇನ್ನುಳಿದವನು ತಂದೆಯನ್ನು ಕಾಪಾಡುತ್ತಾನೆ. ಮುಂದಿನವನು ಕುದುರೆಗೆ ನೀರು ಕುಡಿಸಿದರೆ, ಹೆಣ್ಣು ಕೊಟ್ಟ ಮಾವನು ಕಾಲು ಒತ್ತಿಸಿಕೊಳ್ಳುತ್ತಾನೆ. ಅತ್ತೆಯಾದವಳು ನಮಸ್ಕರಿಸಿಕೊಳ್ಳುತ್ತಾಳೆ. ಮಗು ಮೆಲ್ಲ ಮೆಲ್ಲಗೆ ಏಳು, ದೊಡ್ಡವನಾಗು, ಹಿರಿಯರ ಹೇಳಿದ್ದನ್ನು ಕೇಳು, ಕಲಿಸಿದ್ದನ್ನು ಕಲಿತುಕೋ, ಕೊಟ್ಟಂತಹ ತಿಂಡಿ ತಿನಿಸುಗಳನ್ನು ತಿಂದುಂಡು ಬೆಳೆದು ದೊಡ್ಡವನಾಗು. ಬೆಳೆಯುವ ಸಂದರ್ಭದಲ್ಲಿ ಅನೇಕ ಬಗೆಯ ರೋಗ, ರುಜಿನು ಬಂದರು ಅದನ್ನು ಎದುರಿಸಿ ದೊಡ್ಡವನಾಗು ಎಂದು ಹಾಡಿನ ಮುಖಾಂತರ ಮಗುವಿಗೆ ಆಶೀರ್ವದಿಸುತ್ತಾರೆ.

ಧೂಂಡ ಕಾರ್ಯದ ಸಂದರ್ಭದಲ್ಲಿ ಮಗುವಿನ ತಂದೆ ಖುಷಿಯಲ್ಲಿ  ತಾಂಡಾದ ಜನರಿಗೆ ಶೇರೆ -ಶಿಂದಿ ಕುಡಿಸುತ್ತಾನೆ. ಗಂಡಸರು ಕುಡಿದು ಉನ್ಮತ್ತರಾಗಿ ಕುಣಿಯುವುದು ಸಹಜ. ಆದರೆ ಕೆಲವೊಮ್ಮೆ ಹೆಂಗಳೆಯರು ಕುಡಿದು ಉನ್ಮತ್ತರಾಗಿ (ಲೇಂಗಿ) ಲೈಂಗಿಕ ಹಾಡುಗಳನ್ನು ಹಾಡುತ್ತ, ರಸಿಕತೆಯ ಸಂಕೇತವಾಗಿ ಮೈದುನರಿಗೆ ಕಟ್ಟಿಗೆಯಿಂದ ಹೊಡೆದು ಅವರ ತಲೆಯ ಮೇಲಿನ ಟೊಪ್ಪಿಗೆ, ಹೆಗಲ ಮೇಲಿನ ಟವಲನ್ನು ಕಸಿದುಕೊಳ್ಳುತ್ತಾರೆ. ಇಲ್ಲಿ ಗೋಪಿಕಾಸ್ತ್ರೀಯರು, ಶ್ರೀಕೃಷ್ಣನಿಗೆ ಕಟ್ಟಿಗೆಯಿಂದ ಹೊಡೆಯುವ ದೃಶ್ಯ ನೆನಪಿಗೆ ತಂದುಕೊಡುತ್ತದೆ. ಇದು ಲಂಬಾಣಿಗರಲ್ಲಿ ಗಂಡು ಮಗುವಾದಾಗಿನ ಚಿತ್ರಣ.

ಹೆಣ್ಣು ಮಗು ಹುಟ್ಟಿದರೆ ಅರೇರೇ ಹೆಣ್ಣು ಮಗಳಾದಳು (ಛೋರಿ ಹುಯಿ ರಾಂಡ) ರಂಡಿ ಎಂದು ಉದ್ಗರಿಸುತ್ತಾರೆ. ಇಲ್ಲಿ ಗಮನಿಸಬೇಕಾದ ಸಂಗತಿಯೆಂದರೆ, ಹೆಣ್ಣು ಹಸುಗೂಸು ಇರುವಾಗಲೇ ಅವಳಿಗೆ ’ರಂಡಿ’ ಎಂದು ದೂಷಿಸುತ್ತಾರೆ. ಅಲ್ಲದೆ ಅವಳಿಗೆ ಜನ್ಮ ಕೊಟ್ಟವಳಿಗೂ ದೂಷಿಸುತ್ತಾರೆ. ಅಂದ ಮೇಲೆ ಹೆಣ್ಣಿನ ಬಗ್ಗೆ ಇವರಿಗಿದ್ದ ತಾತ್ಸಾರ ಭಾವನೆಯೇ ಮೂಲ ಕಾರಣ ಎಂಬುದು ಸ್ಪಷ್ಟವಾಗುತ್ತದೆ. ಹೆಣ್ಣು ಮಗುವಾದರೆ ಯಾವ ನಗಾರಿ ಅಥವಾ ಭೇರಿಯ ಶಬ್ದ ಈ ಸಂದರ್ಭದಲ್ಲಿ ಕೇಳಿ ಬರುವುದಿಲ್ಲ. ಆದರೆ ಹಸುಗೂಸಿಗೆ ಅಳುವುದಕ್ಕೆ ಯಾವುದೇ ಬಗೆಯ ನಿರ್ಬಂಧ ಇರುವುದಿಲ್ಲ ! ಇದು ಲಂಬಾಣಿ ಸಮಾಜದಲ್ಲಿ ಹೆಣ್ಣು ಮಗು ಹುಟ್ಟಿದಾಗಿನ ಚಿತ್ರಣ.

ಲಂಬಾಣಿಗರಲ್ಲಿ ಪಿತೃಪ್ರಧಾನ ಕುಟುಂಬಗಳೇ ಹೆಚ್ಚಾಗಿ ಕಂಡು ಬರುತ್ತದೆ.  ಮಹಿಳೆಯರಿಗಿಂತ ಪುರುಷರ ಸ್ಥಾನಮಾನಗಳು ಗೌರವಯುತವಾಗಿವೆ. ಕುಟುಂಬದ ಆಗು ಹೋಗುಗಳಿಗೆ ಪುರುಷನೇ ಜವಾಬ್ದಾರ. ಪಿತೃಪ್ರಧಾನ ಕುಟುಂಬ ಪದ್ಧತಿ ಜಾರಿಯಲ್ಲಿರುವುದರಿಂದ ಆಸ್ತಿಯ ಹಕ್ಕು ವಂಶದ ಕೀರ್ತಿ, ಮುಂತಾದವುಗಳು ತಂದೆಯಿಂದ ಮಗನಿಗೆ ಮುಂದುವರೆದುಕೊಂಡು ಹೋಗುತ್ತದೆ.

’ಲಮಾಣ್ಯಾರಿಗೆ ಹೆಣ್ಣು ಕೊಟ್ಟಾಂಗ’ ಎಂದು ಇತರ ಸಮಾಜದವರು ಲಂಬಾಣಿಗರಿಗೆ ದೂಷಿಸುತ್ತಾರೆ. ಲಂಬಾಣಿ ಸಮಾಜದಲ್ಲಿ ಹೆಣ್ಣು ಕೊಟ್ಟರೆ ಮುಗಿಯಿತು ತಿರುಗಿ ಭೆಟ್ಟಿ ಆಗುವುದೇ ಇಲ್ಲ ಎಂಬ ನಂಬಿಕೆಯಿತ್ತು. ಹಿಂದೆ ಅಲೆಮಾರಿಗಳಾಗಿದ್ದ ಲಂಬಾಣಿಗರ ತಂಡ ಮತ್ತೊಂದು ತಂಡದ ಜೊತೆಗೆ ಭೇಟಿಯಾಗುವುದು ದುಸ್ತರವಾಗಿತ್ತು. ಬಹುಶಃ ಈ ಬಗೆಯ ಅಗಲುವಿಕೆಯೇ ಅವರ ಅಳುವಿಕೆಗೆ ಮೂಲ ಕಾರಣವಾಗಿರಬೇಕು. ಇಂದು ತಾಂಡಾಗಳನ್ನು ಕಟ್ಟಿಕೊಂಡು ನಿಗದಿತ ನೆಲೆಯಲ್ಲಿ ನಿಂತುಕೊಂಡಿದ್ದರೂ ಪೂರ್ವದ, ಅಳುವ ಸಂಪ್ರದಾಯ, ಇಂದಿಗೂ ರೂಢಿಯಲ್ಲಿದೆ. ಹವೇಲಿ ಹೇಳುವಾಗ ಹೆಣ್ಣುಮಗಳು ಧಾರಾಕಾರವಾಗಿ ಕಣ್ಣೀರು ಹಾಕುತ್ತಾಳೆ. ತಾಂಡಾದ ನಾಯಕ, ಕಾರಭಾರಿ, ಡಾವ, ಕುಟುಂಬದ ಸದಸ್ಯರು ಕೂಡಿಕೊಂಡು ಮದುಮಗಳಿಗೆ ಗಂಡನ ಮನೆಗೆ ಕಳಿಸುವ ಸಂದರ್ಭದಲ್ಲಿ, ಹಿತೋಪದೇಶದ ನುಡಿಗಳಿಗೆ ಪ್ರತ್ಯುತ್ತರವಾಗಿ ಹವೇಲಿ ಮೂಲಕ ಹೀಗೆ ಗುಣಗಾನ ಮಾಡುತ್ತಾಳೆ.

ತಮಾರೆ ಸೀಕೆವಾಡಿನ ಆಂಟೆ ಘಾಲು
ಗಾಂಟೆ ಘಾಲು ಸೂಯಿವೇನ ಮಾಯಿಗಿತೋ
ಕಿಡಿವೇನ ಚಾಲಿಂಯು ತಮಾರಿ ನಂಗರಿನ
ಓಳಮಾ ಕೋನಿ ಲಾಂವು ಬಾಪು ಅಹಿಯ್ಯಾ’

ಅರ್ಥ: ತಮ್ಮೆಲ್ಲರ ಉಪದೇಶಗಳನ್ನು ಬಲು ಕಟ್ಟುನಿಟ್ಟಾಗಿ ಪಾಲಿಸುವೆ, ಎಂಥ ಕಷ್ಟ ಬಂದರೂ ಗಂಡನ ಮನೆಯ ಸದಸ್ಯರೊಂದಿಗೆ ನಡೆದುಕೊಳ್ಳುವೆ, ಬಟ್ಟೆ ಹೊಲೆಯುವಾಗ ಸೂಜಿ ಪ್ರವೇಶಿಸಿ ಪಾರಾಗುವಂತೆ ಗಂಡನ ಮನೆಯಲ್ಲಿ ಏನೆಲ್ಲ ಕೆಲಸವಿದ್ದರೂ ಅದನ್ನು ಸಂತೋಷದಿಂದ ಮಾಡುತ್ತೇನೆ. ನನ್ನ ತಾಂಡಾಕ್ಕೆ ಮತ್ತು ಕುಟುಂಬದ ಹಿರಿಯರಿಗೆ ಕೆಟ್ಟ ಹೆಸರು ಬರದಂತೆ ದುಡಿಯುತ್ತೇನೆ ಎಂದು ಮನಕರಗುವಂತೆ ಮದುವಣಗಿತ್ತಿ ಈ ಹವೇರಲಿ ಗೀತೆಯಲ್ಲಿ ತೋಡಿಕೊಂಡಿದ್ದಾಳೆ.

ಹೂನಾಸತಿ : ಹೂನಾಬಾಯಿಯ ತಂದೆಯ ಹೆಸರು ರಾಮಚಂದ್ರ, ತಾಯಿಯ ಹೆಸರು ಘಮಲಾಬಾಯಿ, ದಾಮಾ ಮತ್ತು ಭೀಮಾ ಸಹೋದರರು, ಕೇಶಿಬಾಯಿ ಅವಳ ಗೆಳತಿ, ಹೂನಾಬಾಯಿಯ ಭಾವಿ ಗಂಡನ ಹೆಸರು ರಾಮಜಿ. ಹೂನಾಬಾಯಿಯ ಮದುವೆ ಬೇರೊಂದು ತಾಂಡಾದ ಭೀಮಾ ನಾಯಕನ ಮಗ, ರಾಮಜಿಯೊಂದಿಗೆ ನಿಶ್ಚಯವಾಗಿರುತ್ತದೆ. ದೀಪಾವಳಿ ಹಬ್ಬದ ನಂತರ ಮದುವೆ ಮಾಡಬೇಕೆಂದು ಕುಟುಂಬದ ಹಿರಿಯರು ನಿಶ್ಚಯಿಸಿರುತ್ತಾರೆ. ಗೋವುಗಳನ್ನು ಅಡವಿಗೆ ಹೊಡೆದುಕೊಂಡು ಹೋಗಿ ಮೇಯಿಸುವ ಕೆಲಸ ರಾಮಜಿಯದು.

ಇತ್ತ ಹೂನಾಬಾಯಿ ಪ್ರಾಯಕ್ಕೆ ಬಂದಂತೆ ರಾಮಜಿಯನ್ನು ಕುರಿತು ಸುಂದರ ಕನಸುಗಳನ್ನು ಕಾಣುತ್ತಾಳೆ. ಒಮ್ಮೆ ಭೀಕರ ಬರಗಾಲ ಬರುತ್ತದೆ. ಆಗ ರಾಮಜಿಯ ತಾಂಡಾದವರು ಬೇರೊಂದು ಪ್ರದೇಶಕ್ಕೆ ಹೊರಡಲು ನಿಶ್ಚಯಿಸುತ್ತಾರೆ. ಹೂನಾಬಾಯಿಯನ್ನು ಬಿಟ್ಟು ದೂರ ಹೋಗಲು ಮನಸ್ಸಿಲ್ಲದಿದ್ದರೂ, ರಾಮಜಿ ಕುಟುಂಬದ ಸದಸ್ಯರೊಂದಿಗೆ ತಾಂಡಾದವರೊಡನೆ ಅನಿವಾರ್ಯವಾಗಿ ಹೊರಡಬೇಕಾಗುತ್ತದೆ.

ಬಂದರಗಾಮ ಎಂಬ ಊರಿನ ಸಮೀಪ ಈ ತಾಂಡಾದವರು ಗಂಟು ಮೂಟೆಗಳನ್ನು ಇಳಿಸಿ ಬೀಡಾರ ಹೂಡುತ್ತಾರೆ. ರಾಮಜಿ ಒಂದು ದಿನ ತಂದೆಯೊಡನೆ ಸಂತೆಗೆ ಹೋಗುತ್ತಾನೆ. ಸಂತೆ ಮಾಡಿಕೊಂಡ ಮೇಲೆ ಅಪ್ಪ ಮಗ ಶರೆ ಕುಡಿಯುತ್ತಾರೆ ರಾಮಜಿ ಕುಡಿತದ ಅಮಲಿನಲ್ಲಿ ಬೇಗ ಮದುವೆ ಮಾಡಿಸಲಿಲ್ಲವೆಂದು ತಂದೆಯೊಡನೆ ಜಗಳವಾಡುತ್ತಾನೆ.

ಬಾಪೇ ಬೇಟಾರೋ ಭೀಯಾ ಝಗಡೋ ವೆಗೋ
ಜಲದಿ ವಾಯಾ ಕರಾಯೋ ಕೋನಿಕೇನ ರಿಸಾಗೋ
ರಿಸಾಯೋ ತಿಸಾಯೋ ರಾಮಜಿ ವಾಟ ಝಲಲಿದೋ

ಅರ್ಥ : ಬೇಗ  ಮದುವೆ ಮಾಡಿಸಲಿಲ್ಲವೆಂಬ ನೆಪ ತೆಗೆದು, ತಂದೆಯೊಡನೆ ಜಗಳಾಡಿ ಮಧ್ಯರಾತ್ರಿ ತಾಂಡಕ್ಕೆ ಬರುತ್ತಾನೆ. ತಾಂಡಾಕ್ಕೆ ಹೋಗಿ ಊಟ ಮಾಡದೆ,  ಮನೆಯವರ ಮಾತು ಕೇಳದೆ ಒಬ್ಬೊಂಟಿಗನಾಗಿ ದನಗಳನ್ನು ಕಟ್ಟುವ ದಾಮಣಿಯಲ್ಲಿ ಮಲಗುತ್ತಾನೆ. ಮರುದಿನ ಬೆಳಗಿನ ಜಾವ ಸಿಟ್ಟಿನಲ್ಲಿಯೇ ಗೋವುಗಳನ್ನು ಗುಡ್ಡದ ಕಡೆಗೆ ಹೊಡೆದುಕೊಂಡು ಹೋಗಿ ಅವುಗಳನ್ನು ಗುಡ್ಡದ ಕ್ವಾರಿಗೆ ಮೇಯಲು ಬಿಟ್ಟು, ಬಾಸೂರಿ ಊದುತ್ತ ಮೈಮರೆತು ಕುಳಿತುಕೊಳ್ಳುತ್ತಾನೆ.

ಸ್ವಲ್ಪ ಹೊತ್ತಿನಲ್ಲಿಯೇ ರಾಮಜಿಗೆ ಅನೇಕ ಬಗೆಯ ಅಪಶಕುನಗಳು ಕಾಣಿಸುತ್ತವೆ. ಅವನು ಕುಳಿತಿದ್ದ ಸ್ವಲ್ಪ ದೂರದಲ್ಲಿಯೇ ಗುಡ್ಡದ ಹತ್ತಿರದ ಗುಹೆಯಲ್ಲಿದ್ದ ಹುಲಿಯೊಂದು ಬಾಸೂರಿಯ ಧ್ವನಿ ಕೇಳಿ ದನಗಳಿದ್ದ ಕಡೆಗೆ ಬರುತ್ತದೆ. ರಾಮಜಿಯ ಮೇಲೆ ಆಕ್ರಮಣ ಮಾಡಬೇಕೆನ್ನುವಷ್ಟರಲ್ಲಿ, ಗೋವುಗಳ ಗುಂಪಿನಲ್ಲಿದ್ದ ಬೀಜರ ಹೋರಿ ಹುಲಿಯನ್ನು ಕೆಣಕಿ, ಮೊದಲು ತನ್ನ ಜೊತೆ ಸೆಣಸಾಡಬೇಕೆಂದು ಹೇಳಿದಾಗ, ಹುಲಿಗೂ ಮತ್ತು ಹೋರಿಗೂ ಭಯಂಕರ ಕಾದಾಟವಾಗಿ ಹೋರಿ ಗಾಯಗೊಂಡು ಓಡುತ್ತ ಬಂದು ರಾಮಜಿಗೆ ಎಚ್ಚರಿಕೆ ಹೇಳಿ ಪ್ರಾಣ ಬಿಡುತ್ತದೆ.

ಈ ವಿಷಯ ಗೊತ್ತಾದ ತಾಂಡಾದ ಜನ ಭಯಭೀತರಾಗಿ ರಾಮಜಿ ಬಗ್ಗೆ ಚಿಂತೆಗೊಳಗಾಗುತ್ತಾರೆ. ಅವನಿಗೆ ಅಪಾಯ ಬರದಂತೆ  ಇಡೀ ರಾತ್ರಿ ಕಾಯುತ್ತಾರೆ. ನಸುಕಿನ ಜಾವ ಅವೆಲ್ಲ ಮಲಗಲು ಹೋದಾಗ, ಹುಲಿ ಬಂದು ರಾಮಜಿಯನ್ನು ಹುಡುಕಿ ಕೊಲ್ಲುತ್ತದೆ.

ಇತ್ತ ಹೂನಾಬಾಯಿಗೆ ಅದೇ ರಾತ್ರಿ ದುಃಸ್ವಪ್ನವಾಗಿ ತನ್ನ ಗೆಳತಿ ಕೇಶಿಬಾಯಿಯನ್ನು ಎಬ್ಬಿಸಿ ನೀರು ತರಲು ಹೋಗೋಣವೆಂದು ದೂರು ಕರೆದೊಯ್ಯುತ್ತಾಳೆ. ನೀರಿಗಾಗಿ ಒರತೆಯನ್ನು  ತೋಡುತ್ತಿದ್ದಾಗ ಅಲ್ಲಿ ಚಂಚಿ, ಹುಕ್ಕಾ ಮತ್ತು ರಕ್ತ ಕಾಣಿಸುತ್ತದೆ. ಇದು ಅಪಶಕುನ ರಾಮಜಿಗೆ ಏನೋ ತೊಂದರೆ ಬಂದಿದೆ ಎಂದು ದುಃಖಿಸುತ್ತ ಕೇಶಿ ಬಾಯಿಯೊಂದಿಗೆ ತಾಂಡಾದ ದಾರಿ ಹಿಡಿಯುತ್ತಾಳೆ.

ತಾಂಡಾದ ಮನೆಗೆ ಬಂದು ಸಹೋದರ ದಮಾ ಮತ್ತು ಭೀಮಾನಿಗೆ ಕೂಗಿ ತಲೆಯ ಮೇಲಿನ ಕೊಡ ಇಳಿಸಬೇಕೆಂದು ಕೇಳುತ್ತಾಳೆ. ಮಧ್ಯರಾತ್ರಿ ಮನೆ ಬಿಟ್ಟು ಹೋದದ್ದಕ್ಕೆ  ಅವಮಾನವಾಗುವಂತೆ ಬೈಯ್ಯುತ್ತಾರೆ. ತಾಯಿ, ತಂದೆಗೂ ಮಧ್ಯರಾತ್ರಿ ನೀರು ತರಲು ಹೋದದ್ದು ಸರಿ ಕಾಣದೇ, ಕೊಡ ಇಳಿಸಲು ನಿರಾಕರಿಸುತ್ತಾರೆ. ಇವೆಲ್ಲ ಸನ್ನಿವೇಶಗಳನ್ನು ಕಂಡು ಬೇಸರದಿಂದ ಹೂನಾಬಾಯಿ ನಿಂತಲ್ಲಿಂದಲೇ ಕೊಡವನ್ನು ಬೀಸಿ ಒಗೆಯುತ್ತಾಳೆ. ಇವರ ವರ್ತನೆಯನ್ನು ಕಂಡ ತಾಂಡಾದ ಜನ ಹೂನಾಬಾಯಿಗೆ ದೆವ್ವ ಬಡಿದಿದೆ ಎಂದು ತಿಳಿದು, ಮಾಂತ್ರಿಕನನ್ನು ಕರೆಯಿಸಿ ಅವನಿಂದ ಮಂತ್ರ ಹಾಕಿಸುತ್ತಾರೆ. ಈ ವರ್ತನೆಗೆ ನೊಂದು, ರೋಸಿ, ಮಾಂತ್ರಿಕನ ಮನೆಗೆ ಬೆಂಕಿ ಹತ್ತಲಿ ಎಂದು ಶಾಪ ಕೊಡುತ್ತಾಳೆ. ತಕ್ಷಣವೇ ಮಾಂತ್ರಿಕನ ಮನೆಗೆ ಬೆಂಕಿ ಹತ್ತಿ ಅವನ ಮಗ ಸಾಯುತ್ತಾನೆ.

ಮರುದಿನ ಹೂನಾಬಾಯಿ ರಾಮಜಿಯನ್ನು ನೋಡಿ ಬರುತ್ತೇನೆಂದು ಹೋಗುತ್ತಾಳೆ. ಮಾವ, ಮೈದುನರನ್ನು ಕಂಡು ರಾಮಜಿಯ ಬಗ್ಗೆ ವಿಚಾರಿಸಿದಾಗ ಕಠೋರ ಸತ್ಯ ಸಂಗತಿ ಬಯಲಾಗುತ್ತದೆ. ದುಃಖಿತಳಾದ ಹೂನಾಬಾಯಿ ರಾಮಜಿಯ ರುಮಾಲು, ಚಂಚಿಗಳನ್ನು ಅತ್ತೆಯಿಂದ ಉಡಿಯಲ್ಲಿ ಹಾಕಿಸಿಕೊಂಡು ಹಿಂದಿರುಗುವಳು. ಚಿತೆ ಏರುವ ನಿರ್ಧಾರ ತೆಗೆದುಕೊಳ್ಳುವಳು. ಎಲುಕೂರಾ ಊರಿನ ಹನುಮರೆಡ್ಡಿಯ ಹೊಲದಲ್ಲಿ ಯೋಗ್ಯ ಸ್ಥಳವನ್ನು ಆರಿಸಿಕೊಂಡು ಚಂದನದ ಕಟ್ಟಿಗೆಗಳನ್ನು ಚಿತೆಗಾಗಿ ತರಿಸಿ, ಚಿತೆ ಏರಲು ಸ್ಥಳವಾಕಾಶ  ಮಾಡಿಕೊಡುತ್ತಾರೆ.

ಮಂಗಳ ವಸ್ತುಗಳನ್ನು ಹೊತ್ತವರು, ವಾದ್ಯ ಮೇಳದವರು ಉದ್ಘೋಷಿಸುತ್ತಿರುವಾಗ ಹೂನಾಬಾಯಿ ಅಗ್ನಿಗೆ ಏಳು ಸಲ ಪ್ರದಕ್ಷಿಣೆ ಮಾಡಿ ರಾಮಜಿಯನ್ನು ಸ್ಮರಿಸಿ ಚಿತೆ ಏರುತ್ತಾಳೆ.

ರಾಮ ಸತ್ ರಾಮ ಸತ್ ಹೂನಿ ಭಜಕ
ಅಂಗ ಪಾಂಚ ಹೂಬೇಜೇ ಮಳಾವೇನ ಹಾತ ಜೊಡಚ
ಸಾತ ಸೂತ ಫರನ ಹೂನಿ ಆಗ್ಯಾರಿಮ ಕೂದಚ’

ಅರ್ಥ : ರಾಮಜಿಯ ಸ್ಮರಣೆ ಮಾಡುತ್ತ, ಅಗ್ನಿಗೆ ಏಳು ಸುತ್ತ ಪ್ರದಕ್ಷಿಣೆ ಹಾಕಿ ಸುತ್ತ ನೆರೆದವರಿಗೆ ಕೈ ಜೋಡಿಸಿ ಚಿತೆ ಏರುತ್ತಾಳೆ.

ಈ ಘಟನೆಯಿಂದ ಹೂನಾಬಾಯಿಯನ್ನು ಮಹಾಸತಿ ಎಂದು ಸ್ಮರಿಸುತ್ತಾರೆ. ಅವಳು ಬೇಡಿದ ವರಗಳನ್ನು ಕರುಣಿಸುವಳು ಎಂಬ ನಂಬಿಕೆಯ ಹಿನ್ನೆಲೆಯಲ್ಲಿ, ಅನೇಕ ಕಥನ ಗೀತೆಗಳು ಲಂಬಾಣಿಗರ ಮೌಖಿಕ ಪರಂಪರೆಯಲ್ಲಿ ಉಳಿದುಕೊಂಡು ಬಂದಿವೆ.

ಹೂನಾಬಾಯಿ ಕಥನಗೀತೆಯ ಆಧಾರದಿಂದ ಅವಳು ಬೆಳೆದುಬಂದ ಕೌಟುಂಬಿಕ ಹಿನ್ನೆಲೆಯನ್ನು ನೋಡಿದರೆ ಅವಳು ತಂದೆ ತಾಯಿಗಳ ಒಬ್ಬಳೆ ಮಗಳಾಗಿದ್ದರೂ, ಯಾವುದೇ ಸ್ವಾತಂತ್ರ‍್ಯವಿರಲಿಲ್ಲ ಎನ್ನುವುದು ಸ್ಪಷ್ಟವಾಗುತ್ತದೆ. ಲಂಬಾಣಿ ಸಮಾಜದಲ್ಲಿ ಮೊದಲಿನಿಂದಲೂ ಮಹಿಳೆಯರಿಗೆ ಪ್ರಾಧಾನ್ಯತೆ ಇಲ್ಲದಿರುವುದು ಕಾಣುತ್ತದೆ.

ಚಿತೆಯೇರುವ ಸಂದರ್ಭದಲ್ಲಿ ಒಟ್ಟು ಸಮೂಹ ಅವಳಿಗೆ ಜಯ ಜಯಕಾರ ಮಾಡುತ್ತ, ಅವಳು ಚಿತೆಯೇರುವುದನ್ನು ನೋಡುತ್ತ ಕೊಂಡಾಡುವುದು. ಇವೆಲ್ಲ ಸಮಾಜದ ಮೌಢ್ಯಕ್ಕೆ ಕನ್ನಡಿ ಹಿಡಿಯುತ್ತವೆ.

ಹೂನಾಸತಿ, ರಾಮಜಿಯನ್ನೇ ನೆನೆಯುತ್ತ ಬೆಂಕಿಯಲ್ಲಿ ಕಮರಿ ಹೋದಾಗ, ಅವಳನ್ನು ಮಹಾಸತಿ ಎಂದು ಕೀರ್ತಿಸಿ ಹಾಡಿರುವರು.

ರಾಧಾ ದಾದಿ : ಒಂದು ಐತಿಹ್ಯದ ಪ್ರಕಾರ, ರಾಜಸ್ಥಾನದ ರಜಪೂತ ಮನೆತನದಲ್ಲಿ ಬೆಂಗನ್ (ದಿಡಾ) ಎಂಬುವನು ದುಡಿಯುತ್ತಿದ್ದನು. ಮುಂದೆ ಅದೇ ಮನೆತನದ ಭೀಕರಿ ಎಂಬುವಳಿಗೆ ಅಪಹರಿಸಿಕೊಂಡು ಹೋಗಿ  ಮದುವೆಯಾದನು. ಅವನಿಂದ ಐದು ಜನ ಮಕ್ಕಳು. ಅವರಲ್ಲಿ ’ಮೋಲಾ’ ಒಬ್ಬನು. ನಾಲ್ಕು ಜನರಿಗೆ ಮದುವೆಯಾಯಿತು. ಮೊಲಾ ಮದುವೆಯಾಗದೆ ಬ್ರಹ್ಮಚಾರಿಯಾಗಿ ಉಳಿದನು. ಮುಂದೆ ಶ್ರೀ ಕೃಷ್ಣನ ಆಸ್ಥಾನದಲ್ಲಿ ಗೋವುಗಳನ್ನು ಕಾಯುತ್ತಿದ್ದನು. ಹಲವು ದಿನಗಳಾದ ಮೇಲೆ ಶ್ರೀಕೃಷ್ಣನು ಗೋಪಿಕಾ ಸ್ತ್ರೀಯರನ್ನು ದಾನದ ರೂಪದಲ್ಲಿ ಕೊಡುತ್ತಿದ್ದನು. ಈ ವಿಷಯ ಮೋಲಾನಿಗೆ ಗೊತ್ತಾದಾಗ ಶ್ರೀಕೃಷ್ಣನಿಗೆ ಭೆಟ್ಟಿಯಾಗಿ ತನಗೂ ಒಂದು ಗೋಪಿಕಾ ಸ್ತ್ರೀಯನ್ನು ದಾನ ಕೊಟ್ಟರೆ ಸಂಸಾರ ಮಾಡುತ್ತೇನೆಂದು ಬೇಡಿಕೊಂಡನು. ಆಗ ಶ್ರೀ ಕೃಷ್ಣನು ಬಹಳಷ್ಟು  ಗೋಪಿಕಾ ಸ್ತ್ರೀಯರಿಗೆ ದಾನ ಮಾಡಿರುವೆ. ಉಳಿದವಳು ರಾಧಿಕಾ ಒಬ್ಬಳೆ, ಹೇಗೆ ಮಾಡುವುದು ಎಂದು ಶ್ರೀ ಕೃಷ್ಣನಿಗೆ ಚಿಂತೆ ಆಯಿತು. ಆಗ ಒಂದು ಉಪಾಯ ಹೊಳೆಯಿತು. ರಾಧಿಕಾಳಿಗೆ ದಾನವಾಗಿ ಕೊಡುವೆ ಆದರೆ ಯಾವುದೇ ಬಗೆಯ ಸಂಪರ್ಕ ಇರಿಸಕೂಡದೆಂದು ಹೇಳಿದನು. ಅದಕ್ಕೆ ಮೋಲಾ ಒಪ್ಪಿಕೊಂಡನು. ಶ್ರೀಕೃಷ್ಣ, ರಾಧಿಕಾಳಿಗೆ, ಇದ್ದ ವಿಷಯ ಹೇಳಿ, ಮೋಲಾನ ಜೊತೆಗೆ ಕಳಿಸಿದನು.

ಮೋಲಾ – ರಾಧಿಕಾ ಇಬ್ಬರು ಶ್ರೀಕೃಷ್ಣನ ಆಶೀರ್ವಾದ ಪಡೆದು, ಮಥುರಾದಿಂದ ಬರುತ್ತಿದ್ದಾಗ ಮಹಾಮಂತ್ರವಾದಿ ಭವಯ್ಯನ ಪರಿಚಯವಾಯಿತು. ಈ ಮೂವರು ಕೂಡಿಕೊಂಡು ರಾಹುಗಡ (ರಾಠೋಡ) ಪಾವುಗಡ (ಪವಾರ) ಮತ್ತು ಚಾವುಗಡ (ಚವ್ವಾಣ) ಈ ಮೂರು ರಾಜರ ಆಸ್ಥಾನಗಳಿಗೆ ಹೋಗಿ ನೃತ್ಯ ಮಾಡಿ, ಮೂವರು ರಾಜರಿಂದ ಮೂವರು ದತ್ತಕ ಪುತ್ರರನ್ನು ಪಡೆದು ತಂದರು. ಈ ರಾಜರ ಆಸ್ಥಾನಗಳ ನೆನಪಿಗಾಗಿ ರಾಹುಗಡದಿಂದ ತಂದವನಿಗೆ ರಾಠೋಡ, ಪಾವುಗಡದಿಂದ ತಂದವನಿಗ ಪವಾರ ಮತ್ತು ಚಾವುಗಡದಿಂದ  ತಂದವನಿಗೆ ಚವ್ವಾಣ ಎಂದು ನಾಮಕರಣ ಮಾಡಿದರು. ಇದಕ್ಕೆಲ್ಲ ಮೂಲಸೂತ್ರ ಧಾರಗಳಾದ ’ರಾಧಾ ದಾದಿ’ ಲಂಬಾಣಿಗರ ಸಮಾಜ ಬೆಳೆಯಲಿಕ್ಕೆ ಮೂಲ ಕಾರಣಳಾದಳು. ಆದ್ದರಿಂದ ರಾಧಾ ದಾದಿಗೆ (ಅಜ್ಜಿ) ಬಂಜಾರಾ ಸಮಾಜದಲ್ಲಿ ಮಹಾಮಾತೆಯ ಸ್ಥಾನವಿದೆ.

ನಾಗರಶಿ, ಕೊಗರಶಿ, ಅಶಾವಾರಿ : ಮೋಲಾದಾದಾ, ರಾಧಾದಾದಿ, ಮಹಾಮಂತ್ರವಾದಿ ಭವಯ್ಯ, ರಾಠೋಡ, ಪವಾರ ಮತ್ತು ಚವ್ವಾಣ ಇವರೆಲ್ಲರೂ ಜೊತೆಗೂಡಿ ಕಾಡು ಮಾರ್ಗವಾಗಿ ಬರುತ್ತಿರುತ್ತಾರೆ. ಆಗ ಸುಖದೇವ ಬ್ರಾಹ್ಮಣನ ಮೂವರು ಪುತ್ರಿಯರಾದ, ನಾಗರಶಿ, ಕೋಗರಶಿ ಮತ್ತು ಆಶಾವಾರಿ ಇವರು ಒಂದು ಮರದ ಕೆಳಗಡೆ ಕುಳಿತುಕೊಂಡು ಅಳುತ್ತಿದ್ದರು. ಅವರ ಅಳುವನ್ನು ಕೇಳಿ, ಅವರ ಬಳಿ ಬಂದು ಭೆಟ್ಟಿ ಆಗಿ ವಿಷಯ ತಿಳಿದುಕೊಳ್ಳುತ್ತಾರೆ. ಆಗ ತಮ್ಮ ತಂದೆ ಮದುವೆ ಮಾಡಿಸುವುದು ಆಗದಿದ್ದಕ್ಕೆ ಅಡವಿಗೆ ತಂದು ಬಿಟ್ಟು ಹೋಗಿದ್ದಾನೆ ಎಂದು ಹೇಳುತ್ತಾರೆ. ತಬ್ಬಲಿಯಾದ ಮೂವರು ಕನ್ಯೆಯರನ್ನು ತಮ್ಮ ಜೊತೆ ಕರೆದುಕೊಂಡು, ಕಣ್ವ ಋಷಿ ಆಶ್ರಮಕ್ಕೆ ಬರುತ್ತಾರೆ. ಆಶ್ರಮದಲ್ಲಿ ಋಷಿಯ ಆಶೀರ್ವಾದ ಪಡೆದು ನಡೆದ ಸಂಗತಿ ಹೇಳುತ್ತಾರೆ. ಆಗ ಕಣ್ವ ಋಷಿ ಸ್ವಲ್ಪ ವಿಚಾರಿಸಿ ಜೊತೆಗಿದ್ದ ಮೂವರು ಪುತ್ರಿಯರ ಬಗ್ಗೆ ವಿಚಾರಿಸುತ್ತಾರೆ. ಆಗ ಎಲ್ಲ ವಿಷಯ ಹೇಳಿದರು. ಕಣ್ವ ಋಷಿ ಯಾವುದೇ ಭಯ ಪಡದೆ ಮೂವರು ಕ್ಷತ್ರಿಯ ಪುತ್ರರಿಗೆ ಈ ಮೂವರು ಬ್ರಾಹ್ಮಣ ಕನ್ಯೆಯರನ್ನು ಕನ್ಯಾದಾನ ಮಾಡುವುದರಲ್ಲಿ ತಪ್ಪೇನಿಲ್ಲ ಎಂದು ಹೇಳಿದರು. ಎಲ್ಲರ ಮುಖದಲ್ಲಿಯೂ ಸಂತಸ, ರಾಹುನಿಕ (ರಾಠೋಡ) ನಾಗರಶಿ, ಪಾವುನಿಗೆ (ಪವಾರ) ಕೋಗರಶಿ ಮತ್ತು ಚಾವುನಿಗೆ (ಚವ್ವಾಣ) ಆಶಾವರಿಯನ್ನು ಕೊಟ್ಟು ಕಣ್ವ ಋಷಿಯ ಸಮ್ಮುಖದಲ್ಲಿಯೇ ಮದುವೆ ಮಾಡಿದರು. ಹೀಗೆ ಮುಂದುವರೆದ ಗುಂಪಿನವರೆ ಲಂಬಾಣಿಗಳೆಂದು ನಂಬಲಾಗಿದೆ.

ಧರಮಣಿ ಮಾತಾ : ಬಂಜಾರ ಸಮಾಜದಲ್ಲಿ ಧರಮಣಿಗೆ ಮಾತೃ ಸಮಾನಳೆಂದು ಪೂಜ್ಯ ಭಾವನೆಯಿಂದ ಕಾಣುತ್ತಾರೆ.  ಇವಳು ಬಂಜಾರ ಕುಲಗುರು ಸಂತ ಸೇವಾಲಾಲರ ತಾಯಿ. ಹೆಸರಿಗೆ ತಕ್ಕ ಹಾಗೆ ದಾನ, ಧರ್ಮ ಮಾಡುವುದರಲ್ಲಿ ಎತ್ತಿದ ಕೈ. ಧರ್ಮ, ನಿಷ್ಠೆ, ಭಕ್ತಿ, ಪರೋಪಕಾರಗಳ ಉಪಾಸಕಳಾಗಿ ಪ್ರಸಿದ್ಧಿ ಪಡೆದವಳು. ಅಚ್ಚುಕಟ್ಟಾದ ತಾಂಡಾದಿಂದ ಬಂದವಳಾದ್ದರಿಂದ ಪಶುಪಾಲನೆ, ಪೋಷಣೆಯಲ್ಲಿ ಗಂಡನ ಹೆಗಲಿಗೆ ಹೆಗಲು ಕೊಟ್ಟು ಕೆಲಸ ಮಾಡಿದವಳು. ದುಡಿಮೆಯ ಮಹಿಮೆಯನ್ನು ಆಕೆ ಸ್ವತಃ ಆಚರಿಸಿ ತೋರಿಸಿದ ಮಹಾಸಾದ್ವಿ. ಶಿರ್ಶಿ ಮಾರಿಕಾಂಬೆಯ ಮೇಲೆ ಅಪಾರ ಭಕ್ತಿ ಹೊಂದಿದವಳು.

ಚಿತ್ತೋರಗಡ (ಚಿತ್ರದುರ್ಗ) ದ ಸಮೀಪದಲ್ಲಿದ್ದ ಒಂದು ಲಂಬಾಣಿ ತಾಂಡಾದಲ್ಲಿ  ಜಯರಾಮ ಜಾಧವನೆಂಬುವನಿಗೆ ಧರಮಣಿ ಎಂಬುವಳು ಏಕೈಕ ಪುತ್ರಿ. ನೋಡಲು ಸುಂದರವಾಗಿದ್ದ ಇವಳೀಗೆ ೩೭೫೫ ಗೋವುಗಳನ್ನು ಹೊಂದಿದ್ದ ದೊಡ್ಡ ಶ್ರೀಮಂತ ರಾಮಜಿ ನಾಯಕ ಮತ್ತು ಮಂಗಲಾಬಾಯಿಯ ಪುತ್ರ ಭೀಮಾನಿಗೆ ಕೊಟ್ಟು ಮದುವೆ ಮಾಡುತ್ತಾರೆ.

ಭೀಮಾ ಮತ್ತು ಧರಮಣಿ ಸಂತಾನ ಕುರಿತು ಒಂದು ಜನಪದ ಐತಿಹ್ಯ ಹೀಗಿದೆ. ಭೀಮಾ ದಂಪತಿಗಳಿಗೆ ಮದುವೆ ಆಗಿ ಹನ್ನೆರಡು  ವರ್ಷಗಳು ಕಳೆದರೂ ಮಕ್ಕಳಾಗಿರಲಿಲ್ಲ. ಭೀಮಾ ನಾಯಕ ಶಿರ್ಶಿ ಮಾರಿಕಾಂಬೆಯ ಹೆಸರಿನ ಮೇಲೆ “ಝೇಂಡಿ ಝೋಲ್ ’ (ಶಿಂದಿ ಗಿಡಗನ ಬನ) ದಲ್ಲಿ ತಪಸ್ಸು ಮಾಡುತ್ತಾನೆ. ಹಲವು ವರ್ಷಗಳಾದ ಮೇಲೆ ಭೀಮಾ ನಾಯಕನ ಭಕ್ತಿಗೆ ಮೆಚ್ಚಿದ ಮಾರಿಕಾಂಬೆ ಪ್ರತ್ಯಕ್ಷಳಾಗಿ ಪುತ್ರ ಸಂತಾನದ ಫಲಕೊಡುವೆ, ಆದರೆ ಹಿರಿಯ ಮಗನಿಗೆ ತನ್ನ ಸೇವಕ (ಭಕ್ತ) ನನ್ನಾಗಿ ಮಾಡಬೇಕೆಂದು ಭೀಮಾನಾಯಕನಿಂದ ವಚನ ಪಡೆಯುತ್ತಾಳೆ. ಮಾರಿಕಾಂಬೆ, ಭೀಮಾ ನಾಯಕನಿಗೆ ಪ್ರಸಾದಕೊಟ್ಟು ಆಶೀರ್ವದಿಸಿ ಮಾಯವಾಗುತ್ತಾಳೆ. ಭೀಮಾ ನಾಯಕ ಪ್ರಸಾದವನ್ನು ತೆಗೆದುಕೊಂಡು ಮನೆಗೆ ಬಂದು ಧರಮಣಿಗೆ ಕೊಟ್ಟು, ಎಲ್ಲ ವಿಷಯವನ್ನು ಹೇಳುತ್ತಾನೆ. ಧರಮಣಿ ದೇವಿಯ ಆಶೀರ್ವಾದದಂತೆ ಪ್ರಸಾದ ಸ್ವೀಕರಿಸಿ ಅವಳ ಭಕ್ತಿಯಲ್ಲಿ ತೊಡಗುತ್ತಾಳೆ. ಕೆಲವು ದಿನಗಳಾದ ಮೇಲೆ ಧರಮಣಿ ಗರ್ಭವತಿ ಆಗುತ್ತಾಳೆ. ತಾಂಡಾದ ಜನರಿಗೆ ಅತೀವ ಸಂತೋಷ., ಮುಂದೆ ನವಮಾಸಗಳು ತುಂಬಿ ಒಂಭತ್ತನೆಯ ದಿನದಂದು ಮಾತಾ ಧರಮಣಿ ಗಂಡು ಮಗುವಿಗೆ ಜನ್ಮ ನೀಡುತ್ತಾಳೆ.

ನೌ ಮೀನಾ ನೌಧನ್ನ ಪುರೋರೇ ಭರಾನ
ನಕ್ಷತ್ರ ಲಾಗೋರೇ ರೋಹಿಣಿರೋ ಧನ್ನ
ಮಾದೇವೆರೋ ಧನ್ನ ಸೋಮವಾರರೇನ       ೧

ತಾರೀಖ ಪಂದ್ರ ಮೀನಾ ದುಸರೇನ
ಸಾಲ ಸತ್ರ ಏಕ್ಕೋಣ ಚಾಳಿಸೇನ
ಜನ್ಮಲಿದೋ ಸೇವಾಲಾಲ ಅವತಾರ ಲಿದೋರ          ೨

ಅರ್ಥ : ಒಂಭತ್ತು ತಿಂಗಳು, ಒಂಭತ್ತು ದಿನಗಳು ತುಂಬಿ ರೋಹಿಣಿ ನಕ್ಷತ್ರ, ಸೋಮವಾರ ದಿನಾಂಕ ೧೫.೨.೧೭೩೯ ರಂದು ಸೇವಾಲಾಲ ಜನ್ಮ ತಾಳುತ್ತಾನೆ.

ಸೇವಾಲಾಲ ಚಿಕ್ಕವನಿದ್ದಾಗ ಮಾರಿಕಾಂಬೆಯ ಭಕ್ತನಾಗಲು ತಾಯಿ, ತಂದೆ ಹೇಳುತ್ತಾರೆ. ಅದಕ್ಕೆ ಸೇವಾಲಾಲ ನಿರಾಕರಿಸುತ್ತಾನೆ. ಮುಂದೆ ಮರಿಯಮ್ಮ ಸೇವಾಲಾಲನ ಕನಸಿನಲ್ಲಿ ಬಂದು ಪೀಡಿಸತೊಡಗಿದಳು. ಸೇವಾಲಾಲ ಮರಿಯಮ್ಮಳ ಮಾತಿಗೆ ಒಪ್ಪದೆ ತನ್ನ ತಾಯಿ, ತಂದೆಯ ಸೇವೆಯಲ್ಲಿ ತೊಡಗುತ್ತಾನೆ. ಮುಂದೆ ತಾರುಣ್ಯದಿಂದ ಹಿಡಿದು ಪ್ರೌಢಾವಸ್ಥೆ, ಮುಪ್ಪಿನವರೆಗೂ ಮಾರಿಕಾಂಬೆ ಸೇವಾಲಾಲನಿಗೆ ಕನಸಿನಲ್ಲಿ ಬಂದು ಪೀಡಿಸುತ್ತಾಳೆ. ಸೇವಾಲಾಲ ಬ್ರಹ್ಮಚಾರಿ ಆಗಿ ಉಳಿಯುವುದಕ್ಕಿಂತ ಗ್ರಹಸ್ಥನಾಗು ಎಂದು ಹೇಳುತ್ತಾಳೆ. ಅದನ್ನು ನಿರಾಕರಿಸಿದಾಗ ಮರಿಯಮ್ಮ ಸೇವಾಲಾಲ ಸ್ವರ್ಗಕ್ಕೆ ಹೋಗಲು ನಿರ್ಧರಿಸಿ ದೇವಸ್ಥಾನಕ್ಕೆ ಬರುತ್ತಾರೆ.

ಸೇವಾಲಾಲ ತನ್ನ ಸಹೋದರರಾದ ಹಾಂಪಾ, ಬದ್ದುನಿಗೆ ಕರೆದು ಬೇವಿನ ಸೊಪ್ಪುಗಳನ್ನು ತರಿಸಿ, ಅದರ ಹಾಸಿಗೆ ಮಾಡಿಸುತ್ತಾನೆ. ಹೋಗುವ ಪೂರ್ವದಲ್ಲಿ ನಾಲ್ಕು ನಿಯಮಗಳನ್ನು ಪಾಲಿಸಲು ಹೇಳುತ್ತಾನೆ. ೧. ಬೇವಿನ ಸೊಪ್ಪುಗಳ ಮೇಲಿಂದ ತಾನು ಏಳುವವರೆಗೆ ಯಾರೂ ಮುಟ್ಟಬಾರದು. ೨. ಸ್ವರ್ಗದಿಂದ ಹಿಂತಿರುಗಿ ಬರುವವರೆಗೆ ನಾಲ್ಕು ಮೂಲೆಗಳಲ್ಲಿ ದೀಪ ಉರಿಯುತ್ತಿರಬೇಕು. ೩. ಮೂರು ದಿನಗಳವರೆಗೆ ತನ್ನ ಸುತ್ತ ಭಜನೆ ಮೇಳ ನಡೆಯುತ್ತಿರಬೇಕು. ೪. ತಾನು ಸ್ವರ್ಗಕ್ಕೆ ಹೋದ ವಿಷಯ ತಾಯಿ ಧರಮಣಿಗೆ ಗೊತ್ತಾಗಬಾರದು. ಈ ನಾಲ್ಕು ನಿಯಮಗಳನ್ನು ಪಾಲಿಸಲು ಹೇಳಿ, ತನ್ನನ್ನು ಸಂಪೂರ್ಣವಾಗಿ ಬೇವಿನ ಸೊಪ್ಪಿನಲ್ಲಿ ಮುಚ್ಚುವಂತೆ ಹೇಳಿ, ಮರಿಯಮ್ಮಳ ಜೊತೆ ಸ್ವರ್ಗಕ್ಕೆ ಹೋಗುತ್ತಾನೆ. ಸ್ವರ್ಗದಲ್ಲಿ ರಾಮ – ಬ್ರಹ್ಮರ ಬಳಿ ಬಂದು ಸೇವಾಲಾಲರ ಹಣೆಬರಹ ನೋಡಲಾಗಿದೆ, ಬ್ರಹ್ಮಚಾರಿ ಎಂಬುದು ಸ್ಪಷ್ಟವಾಗುತ್ತದೆ. ಮರಿಯಮ್ಮ, ಸೇವಾಲಾಲನಿಗೆ ಅಲ್ಲಿಯೇ ಕೂಡ್ರಿಸಿ ಸ್ವರ್ಗದಲ್ಲಿ ತನ್ನ ಸಹೋದರಿಯರು ಇದ್ದಾರೆ ಅವರನ್ನು ಭೆಟ್ಟಿ ಆಗಿ ಬರುತ್ತೇನೆ ಎಂದು ಹೇಳಿ ಭೂಲೋಕಕ್ಕೆ ಧರಮಣಿಯ ಬಳಿ ಬಂದು, ನಿನ್ನ ಮಗ ಸತ್ತು ಇಂದಿಗೆ ಮೂರು ದಿನಗಳಾದವು ನಿನಗೆ ಗೊತ್ತಿಲ್ಲವೇನು ಎಂದು ಹೇಳುತ್ತಾಳೆ. ಸೇವಾಲಾಲ ನಿಧನ ಹೊಂದಿದ ವಿಷಯ ತಾಯಿ ಧರಮಣಿಗೆ ಗೊತ್ತಾದಾಗ, ಮುಗಿಲೇ ತಲೆಯ ಮೇಲೆ ಬಿದ್ದಂತಾಯಿತು. ಹೆತ್ತ ಕರಳು ತಡೆಯದೆ ರೋಧಿಸುತ್ತ ಸೇವಾಲಾಲರ ದೇಹವಿದ್ದ ಕಡೆಗೆ ಓಡಿ ಬರುತ್ತಾಳೆ. ಧರಮಣಿ, ಸೇವಾಲಾಲನ ದೇಹ ಸ್ಪರ್ಶ ಮಾಡದಂತೆ ತಡೆಯುತ್ತಾರೆ. ದೂರದಲ್ಲಿ ಮಾಯಾರೂಪದಲ್ಲಿ ನಿಂತು ನೋಡುತ್ತಿದ್ದ ಮರಿಯಮ್ಮ, ಅಲ್ಲಿಯೂ ವಿಫಲಳಾದೆ ಎಂದು ತಿಳಿದು ಕೊನೆಗಳಿಗೆಯಲ್ಲಿ, ಹಾರಾಡುವ ಚಿಟ್ಟಿಯಾಗಿ ದೇವಸ್ಥಾನ ಪ್ರವೇಶಿಸಿ ದೀಪ ಆರಿಸುತ್ತಾಳೆ. ದೀಪಗಳು ಆರಿದೊಡನೆ ಹಾಂಪಾ, ಬದ್ದು ತಾಯಿಯನ್ನು ಬಿಟ್ಟು ದೀಪ ಹಚ್ಚಲು ಮುಂದಾಗುತ್ತಾರೆ. ಇತ್ತ ಧರಮಣಿ ಬೇವಿನಸೊಪ್ಪಿನಲ್ಲಿದ್ದ ಸೇವಾಲಾಲರ ಶರೀರದ ಮೇಲೆ ಬಿದ್ದು ರೋಧಿಸುತ್ತಾಳೆ. ಧರಮಣಿ ದೇಹ ಸ್ಪರ್ಶ ಮಾಡಿದಾಗ, ಸೇವಾಲಾಲರ ದೇಹವು ಮೂರು ಬಾರಿ ನೆಗೆದು ಅವರ ಪ್ರಾಣಪಕ್ಷಿ ಹಾರಿ ಹೋಗುತ್ತದೆ.

ಸೇವಾಲಾಲರ ಮೇಲೆ ಧರಮಣಿಗೆ ಅಪಾರ ಪ್ರೀತಿ ಇತ್ತು.  ಪ್ರೀತಿಯೇ ಹಾಡಿನ ಮೂಲ ಸೆಲೆ. ಅದಕ್ಕೆ ಲಂಬಾಣಿಗಳ ಪ್ರತಿಯೊಂದು ತಾಂಡಾಗಳಲ್ಲಿ ಧರಮಣಿ ಮಾತೆಯನ್ನು ಕುರಿತು, ಭಜನೆ ಹಾಡುಗಳನ್ನು ಹಾಡಿ ಸ್ತುತಿಸುವುದನ್ನು ಕಾಣಬಹುದು.

ರಾಜಕೀಯದಲ್ಲಿ ಲಂಬಾಣಿ ಮಹಿಳೆಯರು

ಕರ್ನಾಟಕದಲ್ಲಿ ಬಂಜಾರಾ ಬುಡಕಟ್ಟಿನ ಮಹಿಳೆಯರಲ್ಲಿ ರಾಜಕೀಯ ಪ್ರವೇಶಿಸಿದವರೆಂದರೆ ಶ್ರೀಮತಿ ಬಿ.ಟಿ. ಲಲಿತಾ ನಾಯಕ, ಶ್ರೀಮತಿ ಜಲಜಾ ನಾಯಕ, ಮುಂತಾದವರನ್ನು ಹೆಸರಿಸಬಹುದು. ಬಿ.ಟಿ. ಲಲಿತಾ ನಾಯಕರು ರಾಜ್ಯದ ವಿಧಾನ ಪರಿಷತ್ತಿನ ಸದಸ್ಯರಾಗಿಯೂ ಹಾಗೂ ರಾಜ್ಯದ ಸಚಿವೆಯಾಗಿಯೂ ಕೆಲಸ ಮಾಡಿದ್ದಾರೆ. ಬಂಜಾರಾ ಮಹಿಳೆಯರಿಗೆ ಅನ್ಯಾಯವಾದರೆ ಮೊದಲಿಗೆ ಪ್ರತಿಭಟನೆ ಮಾಡುವ ಮನೋಭಾವದವರು. ಇವರು ಸಚಿವರಾಗಿದ್ದಾಗ ಲಂಬಾಣಿ ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾಡಬೇಕೆಂದು ಬಹಳ ಪ್ರಯತ್ನಿಸಿದರು. ಲಲಿತಾ ನಾಯಕರು ಮಹಿಳೆ ಕವಯತ್ರಿಯರು ಹೌದು. ಇವರು ಹಲವಾರು ಕೃತಿಗಳನ್ನು ರಚಿಸಿದ್ದಾರೆ. ಇವರಿಗೆ ಇತ್ತೀಚೆಗೆ ’ಅತ್ತಿಮಬ್ಬೆ ಪ್ರಶಸ್ತಿ’ ದೊರೆತಿರುವುದು ಹೆಮ್ಮೆಯ ಸಂಗತಿ.

ಶ್ರೀಮತಿ ಜಲಜಾ ನಾಯಕರು ಎಂ.ಎಲ್.ಸಿ. ಆಗಿ ಕಾರ್ಯ ಮಾಡಿದವರು. ಇವರು ಮಹಿಳೆಯರ ಏಳ್ಗೆಗಾಗಿ ಕಾರ್ಯ ಮಾಡಿದ್ದಾರೆ. ಕುವೆಂಪು ವಿಶ್ವವಿದ್ಯಾಲಯದ ಸೆನೆಟ್ ಸದಸ್ಯರಾಗಿಯೂ ಕಾರ್ಯ ಮಾಡಿದ್ದಾರೆ. ಒಟ್ಟಾರೆ ಬುಡಕಟ್ಟಿನ ಮಹಿಳೆಯರ ಧ್ವನಿಯಾಗಿದ್ದರು ಎನ್ನಬಹುದು.

ಇತ್ತೀಚೆಗೆ ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ ಜಿಲ್ಲಾ ಪಂಚಾಯತ ಮತ್ತು ಗ್ರಾಮ ಪಂಚಾಯತ, ತಾಲೂಕಾ ಪಂಚಾಯತಗಳಲ್ಲಿಯೂ ಹಲವಾರು ಬಂಜಾರಾ ಮಹಿಳೆಯರು ಪ್ರತಿನಿಧಿಸಿ, ಆಯ್ಕೆ ಆಗಿದ್ದಾರೆ. ಒಟ್ಟಾರೆ ಇದೀಗ ಕಣ್ತೆರೆಯುತ್ತಿರುವ ಈ ಸಮುದಾಯಕ್ಕೆ, ಇದೇ ಸಮುದಾಯದ ಮೂಲದಿಂದ ಬಂದು ಇಂದು ರಾಜಕೀಯ ಕ್ಷೇತ್ರದಲ್ಲಿ ಪ್ರತಿಷ್ಠೆಯ ಸ್ಥಾನ ಪಡೆದಿರುವ ಜನರು ಇದಕ್ಕಾಗಿ ಹಗಲಿರುಳು ಶ್ರಮಿಸಬೇಕಾದ ಅಗತ್ಯವಿದೆ.

ಉಪ ಸಂಹಾರ

ಒಟ್ಟಾರೆಯಾಗಿ ಲಂಬಾಣಿ ಬುಡಕಟ್ಟಿನಲ್ಲಿ ಕೆಲವು ಸೂಕ್ಷ್ಮ ಸಂಗತಿಗಳನ್ನು ಗಮನಿಸಿದಾಗ ಹೆಣ್ಣು ಮಕ್ಕಳಿಗೆ ಅಷ್ಟೊಂದು ಪ್ರಾಮುಖ್ಯತೆ ಇದ್ದಂತೆ ಕಂಡು ಬರುವುದಿಲ್ಲ. ಇಡೀ ದಿನ ಹೆಣ್ಣು ಮಗಳು ಬೆಳಿಗ್ಗೆ ಒಲೆ ಹೊತ್ತಿಸುವುದರಿಂದ ಹಿಡಿದು, ರಾತ್ರಿ ಊಟವಾದ ಮೇಲೆ ಒಲೆ ಆರಿಸುವುದರ ತನಕ ಇವಳ ಕೆಲಸ ಕಾರ್ಯಗಳೂ, ನಡೆಯುತ್ತಲೇ ಇರುತ್ತದೆ. ರಾತ್ರಿ ಊಟವಾಗಿ ಮಲಗುವ ಸಂದರ್ಭದಲ್ಲಿ ಮನೆಯ ಸೊಸೆಯಾದವಳು, ಅತ್ತೆ ಮತ್ತು ಮಾವನರಿಗೆ ಕೈ ಕಾಲುಗಳನ್ನು ಒತ್ತಬೇಕು (ಈ ಸಂಪ್ರದಾಯ ಯಾವ ಬುಡಕಟ್ಟಿನ ಮಹಿಳೆಯರಲ್ಲಿಯೂ ಕಂಡುಬರುವುದಿಲ್ಲ) ಇಲ್ಲದೆ ಹೋದರೆ ಅಂಥವಳಿಗೆ ಮನೆಯಲ್ಲಿ ಉಳಿಗಾಲವಿಲ್ಲ ಎಂದು ಊಹಿಸಬಹುದು. ಲಂಬಾಣಿ ಬುಡಕಟ್ಟಿನಲ್ಲಿ ಎಲ್ಲ ಸ್ಥಾನಮಾನಗಳಲ್ಲಿಯೂ ಪುರುಷರದ್ದೆ ಮೇಲುಗೈ, ಹೆಣ್ಣು ಮಗಳು ಪುರುಷನ ಅಧೀನದಲ್ಲಿಯೇ ಬಾಳುವಂಥವಳು. ಹೆಣ್ಣು ಮಕ್ಕಳಲ್ಲಿ ಶಿಕ್ಷಣದ ಕೊರತೆ ಎದ್ದು ಕಾಣುತ್ತದೆ.

೧. ಪ್ರತಿಯೊಂದು ಲಂಬಾಣಿ ತಾಂಡಾಗಳಲ್ಲಿ ವಸತಿ ನಿಲಯದ ಸೌಲಭ್ಯ ಕಲ್ಪಿಸಬೇಕು. ಕಾರಣ ಪಾಲಕರು  ಜೀವನೋಪಾಯಕ್ಕಾಗಿ ಗುಳೆ ಹೋಗುವಂಥ ಸಂದರ್ಭದಲ್ಲಿ ವಸತಿ ನಿಲಯದಲ್ಲಿದ್ದುಕೊಂಡು ಹೆಣ್ಣುಮಗಳು ಶಿಕ್ಷಣ ಕಲಿಯಬಹುದು. ಆರ್ಥಿಕ ಸಮಸ್ಯೆಯಿದ್ದ ಹೆಣ್ಣು ಮಕ್ಕಳು ವಸತಿ ಶಾಲೆಯಲ್ಲಿ ಓದಲು ಸಾಧ್ಯವಾಗುತ್ತದೆ.

೨. ಪ್ರತಿ ತಾಂಡಾಗಳಿಗೂ ಬಸ್ಸಿನ ಸೌಕರ್ಯ ಒದಗಿಸಬೇಕು. (ರಸ್ತೆ, ಸುಧಾರಣೆ ಇತ್ಯಾದಿ) ಹೆಣ್ಣು ಮಕ್ಕಳಿಗೆ ತಾಂಡಾದಿಂದ ಹಳ್ಳಿ ಅಥವಾ ಪಟ್ಟಣಗಳಿಗೆ ಹೋಗಿ ಉನ್ನತ ಶಿಕ್ಷಣ ಕಲಿಯಲು ಅನುಕೂಲವಾಗುವಂತೆ ನೋಡಿಕೊಳ್ಳಬೇಕು.

೩. ಬಾಲಕಿಯರನ್ನು ಪ್ರೌಢ ಶಿಕ್ಷಣ ಮತ್ತು ಉನ್ನತ ಶಿಕ್ಷಣ ಕಲಿಯುವಂತೆ ಪಾಲಕರು ಸಹಕಾರ ನೀಡಬೇಕು.

ಈ ಕೆಲವು ಸಹಕಾರಗಳ ಜೊತೆಗೆ ಕುಟುಂಬದ ಸದಸ್ಯರಲ್ಲಿ ಮತ್ತು ತಾಂಡಾದ ಜನರಲ್ಲಿ ಹೆಣ್ಣು ಮಕ್ಕಳು ಗಂಡಸರಷ್ಟೆ ಸಮಾನ, ಅವಳಿಗೂ ಪ್ರತಿಯೊಂದು ಹಂತದಲ್ಲಿ ಮುಂದೆ ಬರುವಂತೆ ಸಹಾಯ, ಸಹಕಾರ ನೀಡುವಲ್ಲಿ ಕಾಳಜಿ ವಹಿಸಬೇಕು. ಕುಟುಂಬದಲ್ಲಿ ಮತ್ತು ಸಮಾಜದಲ್ಲಿ ಅವಳಿಗೆ ಕೀಳರಿಮೆಯಿಂದ ಕಾಣುವ ಮನೋಭಾವ ತೊಲಗಬೇಕು. ಅಂದಾಗ ಮಾತ್ರ ಲಂಬಾಣಿ ಮಹಿಳೆಯ ಜೀವನದಲ್ಲಿ ಬದಲಾವಣೆ ಆಗುವುದು ಸಾಧ್ಯ. ಅಂಥ ಒಂದು ಮಹತ್ವದ ಕ್ಷಣಕ್ಕಾಗಿ ಲಂಬಾಣಿ ಕೋಗಿಲೆಗಳು ಕಾತರದಿಂದ ನಿರೀಕ್ಷಿಸುತ್ತಿವೆ.

ವಕ್ತ್ಯಗಳ ವಿವರ

೧. ಶ್ರೀಮತಿ ಘಮಣಾಬಾಯಿ, ಖೀರು, ಪವಾರ, ಮನೆಕೆಲಸ, ಇಲ್ಲ ೭೦, ರಾಜನಾಳ ತಾಂಡಾ, ತಾ. ಇಂಡಿ.

೨. ಶ್ರೀಮತಿ ಧಾನಾಬಾಯಿ, ಗುಂಡು, ರಾಠೋಡ, ಮನೆಕೆಲಸ, ಇಲ್ಲ, ೬೫ ಸಾವಳಸಂಗ ತಾಂಡಾ, ತಾ. ಇಂಡಿ

೩. ಶ್ರೀಮತಿ ರಕಿಬಾಯಿ, ಲಾಲು, ರಾಠೋಡ, ೭೦, ಬಸನಾಳ, ತಾಂಡಾ, ತಾ. ಇಂಡಿ

೪. ಶ್ರೀಮತಿ ಮಾತೋಬಾಯಿ, ಲಕ್ಕು, ರಾಠೋಡ, ಇಲ್ಲ,  ೭೦ ರಾಜನಾಳ ತಾಂಡಾ, ತಾ. ಇಂಡಿ

೫. ಶ್ರೀಮತಿ ಸೀತಾಬಾಯಿ, ಲಚಮು, ಪವಾರ, ವೃದ್ಧೆ, ೮೦, ರಾಜನಾಳ ತಾಂಡಾ, ತಾ. ಇಂಡಿ

೬. ಶ್ರೀಮತಿ ತುಳಸಬಾಯಿ ಜಗನಪ್ಪ, ಲಮಾಣಿ, ಇಲ್ಲ, ೮೫, ಬಡ್ಲಿ ತಾಂಡಾ, ತಾ. ಸವದತ್ತಿ

೭. ಶ್ರೀಮತಿ ರಮಣಾಬಾಯಿ, ಕಾರಭಾರಿ, ಕೂಲಿ, ೫೮, ಬಡ್ಲಿ ತಾಂಡಾ, ತಾ. ಸವದತ್ತಿ

೮. ಶ್ರೀಮತಿ ಕಾಣುಬಾಯಿ, ಚಂದು, ಚವ್ವಾಣ, ಕೂಲಿ, ೫೦ ರಾಮದುರ್ಗ ತಾಂಡಾ. ತಾ. ರಾಮದುರ್ಗ

೯., ಶ್ರೀಮತಿ ನಿರ್ಮಲಾ, ದೇವಿದಾಸ, ಮುಡೆ ಮನೆಕೆಲಸ, ೪ನೇ ಇಯತ್ತೆ, ೬೫ ಉಮರಖೇಡ, ಮಹಾರಾಷ್ಟ್ರ

೧೦. ಶ್ರೀಮತಿ ಮುನಿ, ನೂರಸಿಂಗ ನಾಯಕ, ನಾಯಕಣ, ೬೫, ಕೋಠಾರಿ, ಮಹಾರಾಷ್ಟ್ರ

೧೧. ಶ್ರೀಮತಿ ನಿಶಾ, ಹರಿಲಾಲ ಪವಾರ, ಅಧ್ಯಾಪಕಿ ಎಂ.ಎ., ೩೮, ಕೊಲ್ಲಾಪುರ

೧೨. ಶ್ರೀಮತಿ ಶಿವಾನಿ, ವಿನೋದ ಮುಡೆ, ಮನೆ ಕೆಲಸ, ಬಿ.ಎ, ೩೧, ಕೊಲ್ಲಾಪುರ

ಗ್ರಂಥ ಋಣ

೧. ’ಕರ್ನಾಟಕದ ಜಾನಪದ ಕಲೆಗಳು”- ಸಂ. ಗೊ.ರು. ಚನ್ನಬಸಪ್ಪ, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು, ೧೯೭೭

೨.”ಸಂಶೋಧನೆ ತರಂಗ – ಭಾಗ ೨ ’- ಡಾ. ಎಂ. ಚಿದಾನಂದಮೂರ್ತಿ, ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು, ೧೯೭೦

೩. ’ಲಂಬಾಣೀಗರ ಜನಪದ ಗೀತೆಗಳು” – ಸಂ. ಬೆನಕನಹಳ್ಳಿ, ಜಿ. ನಾಯಕ, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು, ೧೯೮೧

೪. ’ಲಂಬಾಣಿಗರು” – ನೆಲ್ಲಿಸರ ಬಸವರಾಜ, ಐ.ಬಿ.ಹೆಚ್. ಪ್ರಕಾಶನ, ಬೆಂಗಳೂರು, ೧೯೮೦

೫. ’ಲಂಬಾಣಿಗರು ಮತ್ತು ಬಗ್ಗರು”- ನೆಲ್ಲಿಸರ ಬಸವರಾಜ, ಯಕ್ಷ ಪ್ರಕಾಶನ, ಮೈಸೂರು, ೧೯೭೭

೬. ’ಲಂಬಾಣಿ ಗಾದೆಗಳು” – ಸಂ. ಸಣ್ಣರಾಮ, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು, ೧೯೮೨

೭.”ಕರ್ನಾಟಕದ ಲಂಬಾಣಿಗಳು ಒಂದು ಸಾಂಸ್ಕೃತಿಕ ಅಧ್ಯಯನ ’- ಡಾ.ಪಿ.ಕೆ. ಖಂಡೋಬಾ, ದಿ. ತೇಜಸಿಂಗ ರಾಠೋಡ ಮೆಮೋರಿಯಲ್ ಟ್ರಸ್ಟ್, ಗುಲಬರ್ಗಾ, ೧೯೯೧.

೮. ’ಲಂಬಾಣಿ ಜನಪದ ಸಾಹಿತ್ಯ ’ – ಡಾ.ಡಿ.ಬಿ. ನಾಯಕ, ಬಂಜಾರಾ, ಪ್ರಕಾಶನ, ಗುಲಬರ್ಗಾ, ೨೦೦೦

೯.”ಸಾಮಾಜಿಕ ಮಾನವಶಾಸ್ತ್ರ’ – ಎಂ. ನಂಜಮ್ಮಣ್ಣಿ, ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು, ೧೯೯೪

೧೦.”ಪ್ರವಾಸಿ ಕಂಡ ಇಂಡಿಯಾ ’- ಸಂ. ಎಚ್.ಎಲ್. ನಾಗೇಗೌಡ, ಮೈಸೂರು, ವಿಶ್ವವಿದ್ಯಾನಿಲಯ, ೧೯೬೯

೧೧. ’ಬಂಜಾರಾ ಗೋತ್ರಗಳು”- ಡಾ. ಹರಿಲಾಲ ಪವಾರ, ಪ್ರೀತಮ್ ಪ್ರಕಾಶನ, ಧಾರವಾಡ, ೨೦೦೨

೧೨.”ಕರ್ನಾಟಕದ ಹೆಳವರು ಒಂದು ಜಾನಪದೀಯ ಅಧ್ಯಯನ ’- ಡಾ. ಹರಿಲಾಲ ಪವಾರ, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು, ೧೯೯೫

೧೩. ’ಲಂಬಾಣಿಗರಲ್ಲಿ ಹೋಳಿ ಹಬ್ಬ”- ಡಾ. ಹರಿಲಾಲ ಪವಾರ, ಶಶಿ ಪ್ರಕಾಶನ, ಧಾರವಾಡ, ೧೯೯೭

೧೪. ’ಲಂಬಾಣಿಗರಲ್ಲಿ ಮದುವೆ ಸಂಪ್ರದಾಯಗಳು ’- ಡಾ. ಹರಿಲಾಲ ಪವಾರ, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ,೧೯೯೬

೧೫.”ಬೆಂಕಿಯಲ್ಲಿ ಕಮರಿದ ಹೂವು ಹೂನಾಸತಿ ’ – ಡಾ. ಹರಿಲಾಲ ಪವಾರ, ಪ್ರೀತಮ್ ಪ್ರಕಾಶನ, ಧಾರವಾಡ, ೨೦೦೪

೧೬.’ಸಂತ ಸೇವಾಲಾಲ ’ – ಡಾ. ಹರಿಲಾಲ ಪವಾರ, ಜಗದ್ಗುರು ಸಂಸ್ಥಾನ ಮಠ, ಡಂಬಳ, ಗದಗ, ೧೯೯೮

೧೭. ’ಬದುಕೊಂಡು ಚಿತ್ತಾರ ಲಂಬಾಣಿ ಬುಡಕಟ್ಟು” – ಡಾ. ಹರಿಲಾಲ ಪವಾರ, ಪ್ರಸಾರಾಂಗ ಕ.ವಿ.ವಿ., ಧಾರವಾಡ, ೨೦೦೭

೧೮.”ಮಹಿಳೆ ಮತ್ತು ಸಂಸ್ಕೃತಿ ’- ಡಾ. ಶಾಂತಾ ಇಮ್ರಾಪುರ, ಚೇತನಾ ಪ್ರಕಾಶನ, ಧಾರವಾಡ, ೨೦೦೧

೧೯. ’ಲಂಬಾಣಿ ಸಂಸ್ಕೃತಿಯ ಕೆಲವು ಅಧ್ಯಯನಗಳು ’ – ಮಹಾದೇವಿಬಾಯಿ, ಸಂವಹನ ಪ್ರಕಾಶನ, ಮೈಸೂರು, ೨೦೦೨

೨೦.”ಲಂಬಾಣಿ ಸಂಸ್ಕೃತಿ ’- ಡಾ.ಪಿ.ಕೆ. ಖಂಡೋಬಾ, ದಿ. ತೇಜಸಿಂಗ ರಾಠೋಡ ಮೆಮೋರಿಯಲ್ ಟ್ರಸ್ಟ್, ಗುಲಬರ್ಗಾ, ೧೯೮೮

೨೧. ’ಲಂಬಾಣಿ ಸಂಸ್ಕೃತಿ” – ಡಾ. ಸಣ್ಣರಾಮ, ಕುವೆಂಪು ವಿಶ್ವವಿದ್ಯಾಲಯ, ಶಂಕರಘಟ್ಟ, ೧೯೯೯.

೨೨.”Monograph on the Banjara clan’, F.N. Cumberlez, 1882

೨೩.”The race of the N.U.P. of India’, Vol-1 London, 1968

೨೪. ’The Linguistic survey of Indi”, Vol-1, London, 1969

೨೫. ’Army of Indian Moghal”, Irvine

೨೬. ’Punjab Castes and Tribe”, Vol – II, Ibbestson, 1883

೨೭.’ The Mysore Tribes and Castes’ Vol-II, H.V. Nanjundayya and L.K. Ananth Krishna Iyer, 1928

೨೮. ’Report of All India Banjara Sevak Siber’, Delhi, Ranjit Naik, 1966

೨೯. ’The Castes and Tribes of Southern India’ Vol-  IV E, Thurston and Rangachari, 1909

೩೦.”The Tribes and Castes of the Central Provinces of India’ Vol- II, Rusel R.V. 1975