ಲಂಬಾಣಿ – ಸುಕಾಲಿ – ಬಂಜಾರ

’ಲಂಬಾಣಿ’, ಅಥವಾ”ಲಮಾಣಿ ’ಎಂಬ ಪದಗಳು ಯಾವುದೇ ಜಾತಿ ಸೂಚಕ ಪದಗಳಾಗಿರದೆ ಅದು ಅವರ ಕುಲವೃತ್ತಿಯಿಂದ ಬಂದುದಾಗಿದೆ. ’ಲಂಬಾಣಿ, ಲಮಾಣಿ, ಲಂಬಾಡಾ, ಲಬಾನ, ಲಭಾನ” ಮುಂತಾದ ಹೆಸರುಗಳಿಂದ ಕರೆಸಿಕೊಳ್ಳುವ ಬಂಜಾರರು ಆಂಧ್ರಪ್ರದೇಶ, ಮಹಾರಾಷ್ಟ್ರ, ಮತ್ತು ಕರ್ನಾಟಕದಲ್ಲಿ ನೆಲೆಸಿಕೊಂಡಿರುತ್ತಾರೆ. The Mysore Tribes and Castes Vol – II (1928) ದಲ್ಲಿ ಎಚ್.ವಿ. ನಂಜುಂಡಯ್ಯ ಮತ್ತು ಎಲ್.ಕೆ. ಅನಂತಕೃಷ್ಣ ಅಯ್ಯರ ಅವರು ’ಲಂಬಾಣಿ ಅಥವಾ ಲಮಾಣಿ’ ಎಂಬ ಪದವು ಸಂಸ್ಕೃತದ ’ಲವಣ’ (ಉಪ್ಪು) ಶಬ್ದದಿಂದ ಬಂದಿದೆ. ’ಲವ” ಎನ್ನುವ ಶಬ್ದವು ಅಪಭ್ರಂಶವಾಗಿ ಲವಣ, ಲಮಾಣಿ ಆಗಿದೆ. ಪೂರ್ವದಲ್ಲಿ ಈ ಬುಡಕಟ್ಟಿನವರು ’ಲವಣ’ದ ವ್ಯಾಪಾರವನ್ನು ಮಾಡುತ್ತಿದ್ದರಿಂದ ’ಲವಣಿ’ಗರೆಂದು, ಇದ ಶಬ್ದ ಮುಂದೆ ಅಪ್ರಭ್ರಂಶಗೊಂಡು ಲಮಾಣಿಗ, ಲಂಬಾಣಿಗ, ಲಂಬಾಣಿಗರು ಎಂದು ನಿಷ್ಪತ್ತಿ ಹೊಂದಿ ಮುಂದೆ ಇವೆ ಹೆಸರುಗಳಿಂದ ಕರೆಯಲ್ಪಟ್ಟರು. ಲಂಬಾಣಿ ಅಥವಾ ಲಂಬಾಡಿ ಎಂಬುದು ಲಮಾನಿ ಲಮಾನೆ ಅಥವಾ ಲಭಾನೆ ಎಂಬ ಪದದ ಇನ್ನೊಂದು ರೂಪವೆಂದು ಹೇಳುತ್ತಾರೆ. ಲಭಾನೆ ಎಂಬುದು ಬಣಜಾರರ ಜಾತಿಯ ಪ್ರಭೇದಗಳಲ್ಲೊಂದು ಎಂದು ಅಭಿಪ್ರಾಯ ಪಡುತ್ತಾರೆ (ನಂಜುಂಡಯ್ಯ ಮತ್ತು ಅಯ್ಯರ್, ೧೯೨೮, ೧೩೬)

ಸುಕಾಲಿ – ಸುಗಾಲಿ : ಬಂಜಾರಗಳಲ್ಲಿಯೇ ಕೆಲವರಿಗೆ ಸುಕಾಲಿ ಅಥವಾ ಸುಗಾಲಿ ಎಂಬ ಹೆಸರಿನಿಂದ ಕರೆಯುತ್ತಾರೆ. ಇವರು ಆಂಧ್ರ, ಕರ್ನಾಟಕ, ಕೇರಳ, ತಮಿಳುನಾಡಿನಲ್ಲಿ ಕಾಣಸಿಗುತ್ತಾರೆ. ತೆಲುಗಿನಲ್ಲಿ ಸುಗಾಲಿ ಎಂದರೆ ಗೋವುಗಳು ಎಂದರ್ಥ. ಸುಗಾಲಿ ಪದದ ಪರ್ಯಾಯ ಪದವೇ ಸುಕಾಲಿ ಲಂಬಾಣಿಗರ ಮೂಲ ಪುರುಷ ಮೋಲಾ ದಾದಾ ಶ್ರೀಕೃಷ್ಣನ ಆಸ್ಥಾನದಲ್ಲಿಟ್ಟುಕೊಂಡು ಗೋವುಗಳನ್ನು ಕಾಯುತ್ತಿದ್ದನು ಎಂಬ ಐತಿಹ್ಯ ಲಂಬಾಣಿಗರಲ್ಲಿ ಪ್ರಚಲಿತವಿದೆ. ಸುಕಾಲಿ ಅಥವಾ ಸುಕಾಳಿ ಎಂದರೆ ದನಗಾಯ ಮತ್ತು ದನನ ಕಾಯುವವ, ಗೋಪಾಲಕ ಎಂದರ್ಥ. ಆದರೆ ಈ ಶಬ್ದವನ್ನು ಒಮ್ಮೊಮ್ಮೆ ಬೈಗುಳಕ್ಕಾಗಿ ಉಪಯೋಗಿಸುವುದುಂಟು. ಉದಾ. ಹುಡುಸುಕಾಳಿ (ಹೋಗೋ ದನ ಕಾಯುವವ) ಎಂದು ಬೈಯ್ಯುತ್ತಾರೆ. ಅಲ್ಲದೆ ಇವರನ್ನು ಕುರಿತು ಸುಕಾಳಿ ಸುಕಾಳಿ ಕಾಂದಾವಕಾಳಿ (ಸುಕಾಲಿಗರು ಈರುಳ್ಳಿ ಕುದಿಸಿದರು) ಎಂದು ವ್ಯಂಗ್ಯವಾಗಿ ಹೇಳುವುದುಂಟು. ತಾತ್ಪರ್ಯ ಇಷ್ಟೇ. ಸಂದರ್ಭ ಬಂದಾಗ ಹೊಟ್ಟೆಪಾಡಿಗಾಗಿ ಈರುಳ್ಳಿ ಕುದಿಸಿ ತಿಂದುದರ ಪ್ರಸ್ತಾಪ ಬರುತ್ತದೆ. ಸುಕಾಲಿ ಅಥವಾ ಸುಗಾಲಿ ಗರು ಕರ್ನಾಟಕದ ಶಿವಮೊಗ್ಗ ಚಿತ್ರದುರ್ಗ, ಭಾಗಗಳಲ್ಲಿ ಕಂಡು ಬರುತ್ತಾರೆ.

ಬಂಜಾರ, ಬಂಜಾರಾ : ಬಂಜಾರ ಅಥವಾ ಬಂಜಾರಾ ಪದಪ್ರಯೋಗ ಹೆಚ್ಚು ಕಡಿಮೆ ಎಲ್ಲ ಕಡೆಗಳಲ್ಲಿಯೂ ಪ್ರಚಲಿತದಲ್ಲಿದೆ. ಮೂಲತಃ ಇವರುಗಳು ವರ್ತಕರಾಗಿದ್ದರೆಂಬುದನ್ನು ಇದು ಸೂಚಿಸುತ್ತದೆ. ಬಂಜಾರ ಅಥವಾ ಬಂಜಾರಾ ಸಂಸ್ಕೃತದ ವಾಣಿಜ್ಯ ಎಂಬ ಶಬ್ದದಿಂದ ಉತ್ಪತ್ತಿಯಾಗಿದೆ. ಈ ಗುಂಪಿನವರು ಪೂರ್ವದಲ್ಲಿ ವ್ಯಾಪಾರವನ್ನು ಕೈಕೊಂಡು ದೇಶ ವಿದೇಶಗಳಲ್ಲಿಯೂ ಸಂಚರಿಸುತ್ತಿದ್ದುದರಿಂದ ಇವರಿಗೆ ಬಂಜಾರ ಅಥವಾ ಬಂಜಾರಾ ಎಂಬ ಹೆಸರುಗಳಿಂದ ಕರೆದರು.

ಕ್ರಿ.ಶ. ೧೧-೧೨ನೆಯ ಶತಮಾನದ ಸಂಸ್ಕೃತದ ದಶಕುಮಾರ ಚರಿತಂ ಎಂಬ ಗ್ರಂಥದಲ್ಲಿ ಬಂಜಾರ ಶಬ್ದದ ಉಲ್ಲೇಖವಿದೆ. ಅಲ್ಲದೆ ಕ್ರಿ.ಶ. ಪೂರ್ವ ೪ನೆಯ ಶತಮಾನದಲ್ಲಿ ಒಂದು ಸಂಚಾರಿ ಜನಾಂಗದ ಉಲ್ಲೇಖ ದೊರೆಯುತ್ತಿದ್ದು. ಈ ಜನರು ಗುಡಿಸಲು ವಾಸಿಗಳಾಗಿದ್ದರಲ್ಲದೆ, ತಮ್ಮ ದನಕರುಗಳ ಪಾಲನೆಗಾಗಿ ಅಡವಿಯಲ್ಲಿ ಸಂಚರಿಸುತ್ತಾರೆ ಎಂದು ಸರ್.ಎಚ್. ಎಂ. ಎಲಿಯಟ್ ಅವರುThe Races of the N.U.P. of India Vol – I (1869) ದಲ್ಲಿ ಉಲ್ಲೇಖಿಸಿದ್ದಾರೆ.

ಮೇಲೆ ಉಲ್ಲೇಖಿಸಿದ ಹಲವಾರು  ಜನ ವಿದ್ವಾಂಸರುಗಳ ಅಭಿಪ್ರಾಯಗಳನ್ನು ಗಮನಿಸಿದಾಗ ಬಂಜಾರ ಅಥವಾ ಬಂಜಾರಾ ಪದಕ್ಕೆ ಸಂಸ್ಕೃತದ ವಾಣಿಜ್ಯಕಾರ ಎಂಬ ಪದವು ಮೂಲವಾಗಿದೆ ಎಂದು ಹೇಳಬಹುದು.

ತಾಂಡಾ ರಚನೆ :

ಲಂಬಾಣಿಗರು ಮೂಲತಃ ಅಲೆಮಾರಿ ಗುಂಪಿನವರಾಗಿದ್ದು, ಮೊದ ಮೊದಲು ಬೇಕೆಂದಾಗ ಮಡಚಿಕಟ್ಟಿ ಎತ್ತಿಕೊಂಡು ಹೋಗಬಹುದಾದ ಹೆಣೆದ ಕಡ್ಡಿ ಚಾಪೆ, ಈಚಲು ಚಾಪೆಯ ಗುಡಿಸಲು (ಚಟಾಯಿ) ಕಾಲಾ ನಂತರ ಬಟ್ಟೆಯ ಡೇರೆಗಳನ್ನು ತಮಗೆ ಅನುಕೂಲವಾದಲ್ಲಿ ಸಾಗಿಸಿ ಅದನ್ನೇ ತಮ್ಮ ತಾತ್ಪೂರ್ತಿಕ ವಾಸಸ್ಥಳಗಳನ್ನಾಗಿ ಮಾಡಿಕೊಳ್ಳುತ್ತಿದ್ದರು. ಕಾಲ ಬದಲಾದಂತೆ ಎಂಟ್ಹತ್ತು ಗುಡಿಸಲುಗಳನ್ನು ಕಟ್ಟಿಕೊಂಡು ತಾಂಡಾಗಳ ಹುಟ್ಟಿಗೆ ಕಾರಣರಾದರು.

ಸಾಮಾನ್ಯವಾಗಿ ಹಳ್ಳಿನಗರಗಳಿಂದ ದೂರದಲ್ಲಿ ಕಾಡು – ಮೇಡು, ಕೊಳ್ಳ – ಕಣಿವೆ, ಗುಡ್ಡಗಾಡುಗಳಲ್ಲಿ ಲಂಬಾಣಿಗಳ ’ತಾಂಡಾ ’ ಇರುತ್ತದೆ. ನಿಸರ್ಗದ ಮಡಿಲಲ್ಲಿಯೇ ಹುಟ್ಟಿ ಬೆಳೆದಿರುವ ಲಂಬಾಣಿಗರು ನಿಸರ್ಗ ಪ್ರಿಯರು. ನಿಸರ್ಗದೊಡನೆ ಏಗುತ್ತಾ ಬದುಕುವ ಇವರದ್ದು ಸಾಹಸಮಯ ಬದುಕು. ಹರಿವ ಹೊಳೆಯ ಪಕ್ಕದಲ್ಲಿ ಹಸಿರು ಹೊದ್ದ ಕಾಡುಗಳಲ್ಲಿ ಸುತ್ತಾಡುವಾಗ ಅವರ ಅಂತರಾಳದಿಂದ ಹೊರಹೊಮ್ಮುವ ಹಾಡುಗಳು. ಹಲವಾರು. ಉದಾಹರಣೆಗೆ ಒಂದು ಹಾಡು

’ನಂದಿರ ಕರಾಡ ಜಾಗ ಪೂಲೇರೋ
ಕುಣ ಛಣಕೋ ಬಾಯಿ ರಂಗೇರೋ ಛಾಟೋ
ಹರೋ ಓಡನ ಬಾಯಿ ಕುಣ ಸತೋಚ
ಪಾಣಿ ಪಿರೇಚ ಕಾಯಿ ಕಸನಾರ ಖಾಡು
ಕುಣಸೋ ಅಂಗಾರ ಬಾಯಿ ಅತಮಣ ದಿಸಚ
ಲಾಲೋ ರಂಗವೇರೋ ಬಾಯಿ ಜಾರಿ ಮಲಕೇಮ’

ಅರ್ಥ : ನದಿ ದಡದಲ್ಲಿ ಹೂವಿನತೋಟವಿದೆ. ಇದರಲ್ಲಿ ಯಾರು ಕೆಂಪು ಬೀಜಗಳನ್ನು ಬಿತ್ತಿದಾರೆ. ಹಸಿರು ಹೊದ್ದು ಯಾರು ಮಲಗಿದ್ದಾರೆ. ಕೃಷ್ಣನ ಗೋವುಗಳು ನೀರು ಕುಡಿಯುತ್ತಿವೆ. ಬೆಂಕಿಯ ಹಾಗೆ ಎಲ್ಲ ಕಡೆ ಕಾಣುತ್ತಿದೆ. ನಾಲ್ಕು ಕಡೆಗಳಲ್ಲಿ ನಿಸರ್ಗ ಕೆಂಪು ಬಣ್ಣದಂತೆ ಸೊಗಸಾಗಿ ಕಾಣಿಸುತ್ತಿದೆ.

ತಮ್ಮ ತಾಂಡಾಗಳಲ್ಲಿ ’ಸೇವಾಲಾಲ ಮತ್ತು ಮರಿಯಮ್ಮ ದೇವಿಯ ಹೆಸರಿನ ದೇವರ (ಗುಡಿ) ಕಟ್ಟಿರುತ್ತಾರೆ. ಸೇವಾಲಾಲ ಗುಡಿಯ ಮುಂದೆ ಬಿಳಿ ಬಾವುಟ ಮತ್ತು ಮರಿಯಮ್ಮದೇವಿ ಗುಡಿಯ ಮುಂದೆ ಕೆಂಪು ಬಾವುಟ ಹಾಕಿರುತ್ತಾರೆ. ಇವರುಗಳು ಇತರರೊಂದಿಗೆ ಕೂಡಿರದೇ ಪ್ರತ್ಯೇಕವಾಗಿಯೇ ತಮ್ಮದೇ ’ತಾಂಡಾ’ ಕಟ್ಟಿಕೊಂಡಿರುತ್ತಾರೆ.

ಲಂಬಾಣಿ ಮಹಿಳೆಯ ಜೀವನ ವಿಧಾನ :

ಕೌಟುಂಬಿಕ ವ್ಯವಸ್ಥೆ : ಪಿತೃ ಪ್ರಧಾನ ಕುಟುಂಬ ಪದ್ಧತಿ ಇವರಲ್ಲಿ ರೂಢಿಯಲ್ಲಿದೆ. ಕ್ವಚಿತ್ತಾಗಿ ಎಲ್ಲೋ ಒಂದು ಕಡೆ ಮಾತೃ ಪ್ರಧಾನ ಕುಟುಂಬ ಪದ್ಧತಿ ಕಂಡು ಬರುತ್ತದೆ. ತಾಂಡಾದ ಯಾವುದೇ ಆಗು ಹೋಗುಗಳಲ್ಲಿ ಪುರುಷನಿಗೆ ಗೌರವಯುತ ಸ್ಥಾನ. ಕುಟುಂಬದ ಜವಾಬ್ದಾರಿಯೂ ಕೂಡ ಪುರುಷನಿಗೆ ಇರುತ್ತದೆ. ಸ್ತ್ರೀಯರು, ಪುರುಷನಿಗೆ ಅಧೀನಳಾಗಿ ಬಾಳುತ್ತಾಳೆ. ತಂದೆಯ ಆಸ್ತಿಯ ಒಡೆತನಕ್ಕೆ ಹಿರಿಯ ಮಗನೆ ವಾರಸುದಾರನಾಗುತ್ತಾನೆ. ಒಟ್ಟಾರೆ ಪುರುಷ ಪ್ರಧಾನವಾದ ವ್ಯವಸ್ಥೆ ಲಂಬಾಣಿ ಸಮಾಜದಲ್ಲಿದೆ.

ಲಂಬಾಣಿಗರಲ್ಲಿ ಹಲವಾರು ಗೋತ್ರಗಳಿವೆ. ಇವರು ತಮ್ಮ ಗೋತ್ರವನ್ನು ’ಗೋತ್ರ’ ಜಾತ ಪಾಡಾ ಮತ್ತು ಖಾಂಪೆ ಎಂದು ಹೇಳುತ್ತಾರೆ. ’ಗೋತ”ಮತ್ತು ’ಜಾತ ’ಈ ಶಬ್ದಗಳಿಗೆ ಸಂಸ್ಕೃತ ಭಾಷೆಯ ಗೋತ್ರ ಮತ್ತು ಜಾತಿ ಎಂಬ ಪದಗಳು ಮೂಲವಾಗಿರಬೇಕು.

ರಜಪೂತರಲ್ಲಿ ಕಂಡು ಬರುವ ರಾಠೋಡ, ಪವಾರ, ಚವ್ಹಾಣ, ಮತ್ತು ಜಾಧವ ಎಂಬ ಗೋತ್ರಗಳು ಬಂಜಾರಗಳಲ್ಲಿಯೂ ಕಂಡು ಬರುತ್ತದೆ. ಗೋತ್ರಗಳ ಆಧಾರದ ಮೇಲೆ ಮದುವೆ ಕಾರ್ಯಗಳು ನಡೆಯುತ್ತವೆ. ಜಾತ ಮತ್ತು ಭುಕ್ಯಾ ಎಂಬೆರಡು ಪಂಗಡಗಳಿವೆ. ರಾಠೋಡ, ಭುಕ್ಯಾ ಪಂಗಡಕ್ಕೆ ಸೇರಿದರೆ, ಪವಾರ, ಚವ್ಹಾಣ, ಮತ್ತು ಜಾಧವ ಜಾತ ಪಂಗಡಕ್ಕೆ ಸೇರುತ್ತವೆ. ಜಾತಿಯು ಉಪಜಾತಿಗಳಲ್ಲಿ, ಉಪಜಾತಿಗಳು ಕುಲಗಳಲ್ಲಿ ಹಾಗೂ ಕುಲಗಳು ಗೋತ್ರಗಳಲ್ಲಿ ಅಲ್ಲದೇ ಈ ಗೋತ್ರಗಳು ಉಪಗೋತ್ರಗಳಲ್ಲಿ ಸಮಾವೇಶ ಗೊಂಡಿರುತ್ತವೆ.

ಬಂಜಾರಗಳಲ್ಲಿ ಅವಿಭಕ್ತ ಕುಟುಂಬ ಜೀವನ ಶೈಲಿಯೇ ಕಂಡು ಬರುತ್ತಿದ್ದರು, ಬಹಳ ಕಡೆಗಳಲ್ಲಿ ವಿಭಕ್ತ ಕುಟುಂಬ ಜೀವನ ಶೈಲಿಯೇ ಹೆಚ್ಚು. ಗಂಡು ಮಕ್ಕಳು ಮದುವೆಯಾಗುವವರೆಗೆ ಮಾತ್ರ ಕುಟುಂಬದಲ್ಲಿ ಕೂಡಿದ್ದು ಜೀವನ ಆರಂಭಿಸುತ್ತಾರೆ. ಮದುವೆ ಮಾಡಿಕೊಂಡ ಮೇಲೆ ಬಾಳಸಂಗಾತಿ ಜೊತೆ ಬೇರೆ ಜೀವನ ಆರಂಭಿಸುತ್ತಾರೆ.  ಅದಕ್ಕೇನೆ ಲಂಬಾಣಿಗರೂ ’ದಿ ಕಾನೇರ ಚಾರ ಕಾನ ವೇಗೆ, ನಾಳಿ ಕರನ ಖೋ ಬೇಟಾ’ (ಎರಡು ಕಿವಿಗಳಿಂದ ನಾಲ್ಕು ಕಿವಿಗಳಾದವು, ಬೇರೆಯಾಗಿ ಜೀವನ ಆರಂಭಿಸು ಮಗು) ಎನ್ನುತ್ತಾರೆ.

ಬಂಜಾರಗಳಲ್ಲಿ ಬಾಲ್ಯವಿವಾಹ ಪದ್ಧತಿ ಪ್ರಚಲಿತವಿತ್ತು. ಆದರೆ ಇಂದು ಬಾಲ್ಯ ವಿವಾಹ ಪದ್ಧತಿ ಕಡಿಮೆ ಆಗಿದೆ. ಇವರಲ್ಲಿ ಏಕಪತ್ನಿತ್ವ, ಬಹುಪತ್ನಿತ್ವ, ವಿಧವಾ ವಿವಾಹ ಮತ್ತು ಅತ್ತಿಗೆ ಮೈದುನನ ವಿವಾಹ ರೂಢಿಯಲ್ಲಿತ್ತು. ಆದರೆ ಇಂದು ಈ ಬಗೆಯ ವಿವಾಹ ಪದ್ಧತಿ ಕಂಡು ಬರುವುದಿಲ್ಲ.

ದಾಂಪತ್ಯ ದೀವಿಗೆ : ಉರಿಯುವ ಮಹಿಳೆ : ಮದುವೆಯಾದ ಬಳಿಕ ಗಂಡ – ಹೆಂಡತಿ ಪ್ರೀತಿಯಿಂದ ಇರಬೇಕೆಂಬ ಹಂಬಲ ಲಂಬಾಣಿಗರಲ್ಲಿರುತ್ತದೆ. ಆದರೆ ಪರಿಸ್ಥಿತಿಯ ಕಾರಣದಿಂದ ಅವರಿಗೆ ಪ್ರತ್ಯೇಕವಾದ ಮನೆಗಳಾಗಲಿ, ಸ್ವಚ್ಛಂದವಾಗಿ ಅಲೆದಾಡುವಂಥ ಸಂದರ್ಭ ಒದಗಿ ಬರುವುದಿಲ್ಲ. ಏನಿದ್ದರೂ ರಾತ್ರಿ ಊಟವಾಗಿ ಮಲಗುವ ಸಂದರ್ಭದಲ್ಲಿ ಮಾತ್ರ ಒಟ್ಟಿಗೆ ಇರುವ ಅವಕಾಶ ಸಿಗುತ್ತದೆ. ಅದು ಒಂದೇ ಗುಡಿಸಲು ಮನೆ, ಬಹಳವೆಂದರೆ ಗುಡಿಸಲು ಪಕ್ಕದಲ್ಲಿ ಒಂದು ಚಪ್ಪರ ಅಥವಾ ಸಣ್ಣ ಕೊಟ್ಟಿಗೆ ಕಟ್ಟಿರುತ್ತಾರೆ. ಲಂಬಾಣಿಗಳದು ಎಲ್ಲರೂ ಕೂಡಿಕೊಂಡು ಬಾಳುವ ಅವಿಭಕ್ತ ಕುಟುಂಬ, ಮದುವೆಯಾಗಿ ಕೆಲವು ವರ್ಷಗಳವರೆಗಾದರೂ ಕೂಡಿರಬೇಕಾಗುತ್ತದೆ. ಆದ್ದರಿಂದ ಗಂಡ ಹೆಂಡತಿಗೆ ತಮಗೆ ಬೇಕೆಂದಾಗ ಒತ್ತಟ್ಟಿಗೆ ಸರಸ ಸಲ್ಲಾಪದಲ್ಲಿ ಕೂಡ್ರುವಂಥ ಅವಕಾಶಗಳಿಂದ ವಂಚಿತರಾಗಿರುತ್ತಾರೆ. ಅಲ್ಲದೇ ಇಡೀ ಕುಟುಂಬದ ಜವಾಬ್ದಾರಿ ಬೇರೆ, ಬಹಳಷ್ಟು ಕೆಲಸಕಾರ್ಯಗಳಲ್ಲಿ ತೊಡಗಬೇಕಾಗುತ್ತದೆ. ಇಂಥ ಕಠಿಣ ಪರಿಸ್ಥಿತಿಯಲ್ಲಿಯೂ ಗಂಡ ಹೆಂಡತಿ ಪ್ರೀತಿ ವಿಶ್ವಾಸದಿಂದ ಬಾಳುತ್ತಾರೆ. ಮಕ್ಕಳಾಗದೆ ತನ್ನ ಹೆಂಡತಿ ಬಂಜೆ ಎಂದು ಕುಟುಂಬದಲ್ಲಿ  ಮರು ಮದುವೆ ಆಗಲು ಅವಕಾಶವಿರುತ್ತದೆ.  ಆದರೆ ಕೆಲವರು ಮೊದಲನೆಯ  ಹೆಂಡತಿಯಿಂದ ಮಕ್ಕಳಿದ್ದರೂ ಎರಡನೆಯ ಮದುವೆಯಾದ ಉದಾಹರಣೆಗಳು ಸಿಗುತ್ತವೆ.

ಮದುವೆ ಸಂದರ್ಭದಲ್ಲಿ ತೆರವು ಕೊಡುವ ಪದ್ಧತಿ ರೂಢಿಯಲ್ಲಿತ್ತು. ಇಂದು ಲಂಬಾಣಿಗಳಲ್ಲಿಯೂ ಶಿಕ್ಷಣ ಪಡೆಯುತ್ತಿರುವ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗಿರುವುದರಿಂದ ಇವರಲ್ಲಿಯೂ ವರದಕ್ಷಿಣೆ ಎಂಬ ಪೆಡಂಭೂತ ಕಾಣಿಸಿಕೊಂಡಿದೆ. ಇತ್ತೀಚೆಗೆ ಮದುವೆ ಕಾರ್ಯಗಳಲ್ಲಿಯೂ ಸಾಕಷ್ಟು ಬದಲಾವಣೆ ಆಗಿರುವುದನ್ನು ಕಾಣಬಹುದು. ಮದುವೆ ಸಂದರ್ಭದಲ್ಲಿ ಮದುಮಗಳಿಗೆ ತಿಲಕ ಹಚ್ಚುವಾಗ ಕಂಚಿನ ತಟ್ಟೆಯಲ್ಲಿ ಅರಿಶಿಣ ತಿಲಕ ಮಾಡಿದ ವಾಟೆ, ಒಂದು ರೂಪಾಯಿ ಹಾಗೂ ದಂತದ ಚೂಡಿ ಬಳೆ ಹಾಕಿಡುತ್ತಾರೆ. ಈ ಸಂದರ್ಭದಲ್ಲಿ ಮದುಮಗನ ಸಹೋದರ, ಮದುಮಗಳ ತಲೆಯ ಮೇಲೆ ಹೊದ್ದಿರುವ ಮುಸುಕನ್ನು ಸ್ವಲ್ಪ ಹಿಂದೆ ಸರಿಸಿ, ಮದುವಣಗಿತ್ತಿಯ ಹಣೆಗೆ ತಿಲಕ ಹಚ್ಚುತ್ತಾನೆ. ಆ ಸಂದರ್ಭದಲ್ಲಿ ಮದುಮಗಳು ತಾನು ಬೇರೆಯವರ ಮನೆಯವಳಾದೆ ತನ್ನ ಹಣೆಗೆ ತಿಲಕ ಹಚ್ಚಬೇಡಿರೆಂದು ದುಃಖದಿಂದ ಅಳುತ್ತಾಳೆ. ಆ ಸಂದರ್ಭದಲ್ಲಿ ಹಾಡುವ ಒಂದು ಗೀತೆ ಹೀಗಿದೆ.

’ಮತ ಲಗಾಡೋರೆ ಈರೇಣಾ
ಇಣಿಚುಣಿ ಹಳದಿರೂ ಟಿಕೋ
ತಮಜೆ ಲಗಾಡಿಯತೋ
ತಮಾರಿ ಭೇನ ವೆರಾಣಿ ದಿಸ
ಮತಜೆ ಲಗಾಡೋರೆ, ಈರೇಣಾ
ತಾರಿ ಮುಪಳಿಸಿ, ಅಂಗಳಿನ ಈಟಿ ಕಬೂಲ ಕರೂ
ತಮಜ ಲಗಾಡಿಯತೋ ತಮಾರಿ ಭೇನ
ವೆರಾಣಿ ದಿಸ ಭೀಯಾ
ತಾರೇಜ ಕಾನೇನ ಕನಿಯಾ, ಕಬೂಲ ಕರಿಯತೋ
ಹಾತೇಮ ಕಳ್ದಾ ಕಬೂಲ ಕರೂ ಈರಾ
ತೋನ ಕಬೂಲ ಕರೂಜು ಈಟಿ ಲಗಾಡಮಲ ಈರಾ

ಅರ್ಥ: ಸಹೋದರ, ಆರಿಸಿ ತಂದು ತಯಾರಿಸಿರುವ ಅರಿಶಿಣದ ತಿಲಕ ಹಚ್ಚಬೇಡ, ನೀವು ತಿಲಕ ಹಚ್ಚಿದರೆ ನಿಮ್ ಸಹೋದರಿ ಬೇರೆಯವರ ಮನೆಯವಳಾಗುತ್ತಾಳೆ. ತಿಲಕ ಹಚ್ಚಬೇಡ ಸಹೋದರನೆ ನಿನ್ನ ಬೆರಳಿಗೆ ಉಂಗುರ ತಂದುಕೊಡುವೆ. ಅಣ್ಣನೆ ನನಗೆ ತಿಲಕ ಹಚ್ಚಬೇಡ. ನೀನು ತಿಲಕ ಹಚ್ಚಿದರೆ ನಿಮ್ಮ ಸಹೋದರಿ ಬೇರೆಯವರ ಮನೆಯವಳಾಗುತ್ತಾಳೆ. ನಿನಗೆ ಕಿವಿಯಲ್ಲಿ ಹಾಕಿಕೊಳ್ಳಲು ಮುರುವು ತಂದು ಕೊಡುವೆ ಕೈಯಲ್ಲಿ ಹಾಕಿಕೊಳ್ಳಲು ಖಡೆ ತಂದು ಕೊಡುವೆ.

ಅಲೆಮಾರಿಗಳಾಗಿದ್ದ ಲಂಬಾಣಿಗರು ತಮ್ಮ ಜೀವನೋಪಾಯಕ್ಕಾಗಿ ತಮ್ಮ ಗುಂಪಿನವರ ಜೊತೆಗೆ ತಂಡೋಪತಂಡವಾಗಿ ವಲಸೆ ಹೋಗುತ್ತಿದ್ದರು. ಆಗ ತಮ್ಮ ಹೆಣ್ಣು ಮಕ್ಕಳನ್ನು ಬೇರೆ ತಂಡದವರ ಜೊತೆಗೆ ಮದುವೆ ಮಾಡಿಕೊಟ್ಟರೆ ಮತ್ತೊಮ್ಮೆ  ಪರಸ್ಪರ ಭೆಟ್ಟಿ ಆಗುವುದು ಅಪರೂಪ. ಆ ಒಂದು ಕಾರಣಕ್ಕಾಗಿ ಹೆಣ್ಣುಮಕ್ಕಳು ಒಬ್ಬರಿಗೊಬ್ಬರು ದುಃಖದಿಂದ ಕೊರಳು ತಬ್ಬಿಕೊಂಡು ಅಳುತ್ತಿದ್ದರು. ಇಂದು ತಾಂಡಾಗಳ ರೂಪದಲ್ಲಿ ಮನೆಗಳನ್ನು ಕಟ್ಟಿಕೊಂಡು ವಾಸಿಸುತ್ತಿದ್ರೂ, ಮೊದಲಿನ ಅಳುವ ಸಂಪ್ರದಾಯ ಹಾಗೆಯೇ ಮುಂದುವರಿದು ಬಂದಿದೆ.

ಕೊಟ್ಟ ಮನೆತನಕ್ಕೆ ಕೆಟ್ಟ ಹೆಸರು ತರಲಾರೆ : ಪುರುಷ ಪ್ರಧಾನವಾದ ಲಂಬಾಣಿ ಸಮಾಜದಲ್ಲಿ, ಹೆಣ್ಣು ಮಗಳು ಪುರುಷನ ನೆರಳಿನಲ್ಲಿಯೇ ಬದುಕಬೇಕಾಗುತ್ತದೆ. ಸಂಸಾರದಲ್ಲಿ ಹಲವಾರು ಸಮಸ್ಯೆಗಳಿದ್ದರೂ ಅವೆಲ್ಲವುಗಳನ್ನು ಬಹಿರಂಗವಾಗಿ ಹೇಳದೆ ತನ್ನ ಉಡಿಯಲ್ಲಿ ಹಾಕಿಕೊಂಡೆ ಬದುಕಬೇಕಾಗುತ್ತದೆ. ಗಂಡನ ಮನೆಯಲ್ಲಿ ಅತ್ತೆ-ಮಾವ, ಮೈದುನ, ನಾದಿನಿ ಮುಂತಾದವರಿಗೆ ಧಿಕ್ಕರಿಸಿ ತವರೂರಿಗೆ ಹಿಂತಿರುಗಿ ಹೋಗಿ ಕೂಡ್ರುವ ಪರಿಸ್ಥಿತಿಯೂ ಇರುವುದಿಲ್ಲ. ಒಂದು ವೇಳೆ ತವರು ಮನೆಯಲ್ಲಿ ಹೋಗಿ ಕೂಡ್ರಬೇಕೆಂದರೆ ಆರ್ಥಿಕ ಪರಿಸ್ಥಿತಿಯೂ ಅಷ್ಟಕಷ್ಟೇ. ಇವೆಲ್ಲವುಗಳಿಗಿಂತ ಮಿಗಿಲಾದದ್ದು. ’ತಾಂಡಾ ಸಂಸ್ಕೃತಿಯ ವಜ್ರಕವಚ, ಅದನ್ನು ಮೀರಿ ನಡೆಯುವ ಹಾಗಿಲ್ಲ. ಮದುವೆಯಾಗಿ ಗಂಡನ ಮನೆಗೆ ಕಳಿಸುವ ಸಂದರ್ಭದಲ್ಲಿ, ತಾಂಡಾದ ಜನ ಮತ್ತು ಕುಟುಂಬದ ಸದಸ್ಯರು ಗಂಡನ ಮನೆಯಲ್ಲಿ ಎಷ್ಟೇ ಕಷ್ಟ ಬಂದರೂ, ಎದುರುತ್ತರ ಕೊಡದೆ ಜಾಣತನದಿಂದ ಸಂಸಾರ ಮಾಡು ಎಂದು ಉಪದೇಶ ಮಾಡಿ ಬೀಳ್ಕೊಟ್ಟಿರುತ್ತಾರೆ. ಅವರ ಹಿತೋಪದೇಶದ ನುಡಿಗಳೀಗೆ ಪ್ರತ್ಯುತ್ತರವಾಗಿ ’ತಮಾರೆ ಸಿಕೇವಾಡಿನ, ಆಂಟೆ ಘಾಲು ಗಾಂಟೆ ಘಾಲು’ (ನಿಮ್ಮ ಬುದ್ಧಿಯ ಮಾತುಗಳನ್ನು, ಓಢಣಿಯ ತುದಿಗೆ ಕಟ್ಟಿಕೊಂಡಿದ್ದೇನೆ). ಗಂಡನ ಮನೆಯಲ್ಲಿ ಯಾವುದೇ ಬಗೆಯ ತೊಂದರೆಯಾದರೂ, ಸಂಬಾಳಿಸಿಕೊಂಡು ಸಂಸಾರ ಮಾಡುತ್ತೇನೆ ಎಂದು ತವರು ಮನೆಯಿಂದ ಗಂಡನ ಮನೆಗೆ ಬರುವ ಸಂದರ್ಭದಲ್ಲಿ ಹವೇಲಿ ಗೀತೆ ಮುಖಾಂತರ ಮದುವಣಗಿತ್ತಿ ಅಳುತ್ತ ಪ್ರತಿಜ್ಞೆ ಗೈಯುತ್ತಾಳೆ.

ಲಂಬಾಣಿ ಸಮಾಜದಲ್ಲಿ ಮದುವೆಯಾಗಿ ಒಂದೆರಡು ವರ್ಷದಲ್ಲಿ ಮಗುವಾಗಬೇಕು, ಅದು ಗಂಡು ಮಗುವೆ ಆಗಿರಬೇಕು. ಕಾರಣ ಹೋಳಿ ಹಬ್ಬದ ಸಂದರ್ಭದಲ್ಲಿ ’ಧೂಂಡ’ (ನಾಮಕರಣ) ಕಾರ್ಯ ಮಾಡುವಾಗ ತಾಂಡಾದ ಎಲ್ಲ ಜನರು ಮತ್ತು ಕುಟುಂಬದ ಸದಸ್ಯರು ಕೂಡಿಕೊಂಡು ’ಪೇಲೋ ಬೇಟಾ ನಾಯಿಕ ಕರ’ (ಮೊದಲನೆಯ ಮಗು ಮನೆಯ ಕಾರ್ಯಭಾರ ಮಾಡುತ್ತಾನೆ) ಹಿರಿ ಮಗನು ಮನೆಯ ತಾಂಡಾದ ಆಗು ಹೋಗುಗಳನ್ನು ನಿಭಾಯಿಸುತ್ತಾನೆ ಎಂದು ಆಶೀರ್ವಸುತ್ತಾರೆ. ಅಂದ ಮೇಲೆ ಮೊದಲನೆಯ ಮಗು ಹೆಣ್ಣು ಮಗುವಾದರೆ, ಒಂದು ಬಗೆಯ ಕಸಿವಿಸಿ ಆದಂತೆ ಸರಿ.

ಹೆಣ್ಣಿಗೆ ಮದುವೆ ಅನ್ನುವ ಮೂಗದಾಣ :

ಮದುವೆ ಅನ್ನುವುದು ಹೆಣ್ಣಿಗೆ ಒಂದು ಬಗೆಯ ಮೂಗದಾಣ ಇದ್ದ ಹಾಗೆ. ಲಂಬಾಣಿಗರಲ್ಲಿ ಮದುವೆ ಮಾಡಿಕೊಟ್ಟ ಮೇಲೆ ಹೆಣ್ಣು ಮಗಳು ಗಂಡನ ಮನೆಯಲ್ಲಿ ಒಂದು ಬಗೆಯ ಬಂಧನಕ್ಕೊಳಪಡುತ್ತಾಳೆ. ತನಗೆ ಯಾವುದೇ ಬಗೆಯ ಸ್ವಾತಂತ್ರ‍್ಯ ಇಲ್ಲದ ಹಾಗೆ ಕುಟುಂಬದ ಸದಸ್ಯರ ಮಧ್ಯೆ ಅವರ ಕೈಗೊಂಬೆಯಂತೆ ನರ್ತಿಸಬೇಕಾಗುತ್ತದೆ. ಯಾವುದಕ್ಕೂ ಅವರನ್ನು ಕೇಳಿಯೇ ಕೆಲಸ ಮಾಡಬೇಕು. ಹೊಸದಾಗಿ ಮದುವೆಯಾಗಿ ಬಂದ ಮೇಲೆ ಅವಳು ಇಡೀ ಕುಟುಂಬದ ಕಾರ್ಯಭಾರವನ್ನು ನೋಡಿಕೊಳ್ಳುವಲ್ಲಿ ಜವಾಬ್ದಾರಿಯಾಗಿ ಕೆಲಸ ಮಾಡಬೇಕಾಗುತ್ತದೆ. ಕುಟುಂಬ ನಡೆಸಲಿಕ್ಕೆ ಹೆಣ್ಣಿಗೆ ಒಂದು ಬಗೆಯ ಅಗ್ನಿ ಪರೀಕ್ಷೆ ಇದ್ದಂತೆ. ಬೆಳಗಿನ ಜಾವ ಎದ್ದು ದೂರದ ಬಾವಿಗೆ ಹೋಗಿ ನೀರು ಹೊತ್ತು ತರಬೇಕು. ಕುಟುಂಬದವರ ಸ್ನಾನ ಮುಗಿದ ಬಳಿಕ, ಅವರ ಬಟ್ಟೆಗಳನ್ನೂ ಹಳ್ಳಕ್ಕೆ ಹೋಗಿ ಒಗೆದುಕೊಂಡು ಬರಬೇಕು. ಮನೆಯಲ್ಲಿ ರೊಟ್ಟಿ ಮಾಡಲಿಕ್ಕೆ ಹಿಟ್ಟಿಲ್ಲದಿದ್ದರೆ ಬುಟ್ಟಿ ತುಂಬ ಜೋಳ ತೆಗೆದುಕೊಂಡು ಬೀಸಬೇಕು. ನಂತರ ಕುಟುಂಬದವರಿಗಾಗಿ ಅಡುಗೆ ಸಿದ್ಧಪಡಿಸಬೇಕು. ಆಮೇಲೆ ತಾನು ತಯಾರಿ ಆಗಿ ಗಂಡನ ಜೊತೆ ಬೇರೆಯವರ ಬಳಿ ಕೂಲಿ ನಾಲಿ ಕೆಲಸಕ್ಕೆ ಹೋಗಬೇಕು. ಉದಾ. ಬಾವಿಯ  ಕೆಲಸ, ವಡ್ಡಿನ ಕೆಲಸ, ರಸ್ತೆಯ ಕೆಲಸ, ಕಸ ತೆಗೆಯುವುದು ಮುಂತಾದ ಕೆಲಸಗಳು. ಗಂಡಸರು ಕೆಲಸದ ಮಧ್ಯದಲ್ಲಿ ಎಲೆ ಅಡಿಗೆ ತಿನ್ನಲು ವಿರಾಮ ಮಾಡಿದಾಗ, ಹೆಣ್ಣುಮಗಳು ತನ್ನ ಉಡಿಯಲ್ಲಿ ಹಾಕಿರುವ ಕಸೂತಿ ಕೆಲಸದ ಬುಟ್ಟಿಯನ್ನು ತೆಗೆದು ಕಸೂತಿ ಹೆಣೆಯಬೇಕು. ಮಧ್ಯಾಹ್ನ ಕೆಲಸ ಮುಗಿಸಿಕೊಂಡು ಮನೆಗೆ ಬರುವಾಗ ತನ್ನ ಸಹವರ್ತಿ ಹೆಣ್ಣುಮಗಳ ಜೊತೆಗೂಡಿ ಉರಿಯಲಿಕ್ಕೆ ಕಟ್ಟಿಗೆಗಳನ್ನು ಕಡಿದುಕೊಂಡು ಹೊರೆಮಾಡಿ ಹೊತ್ತುಕೊಂಡು ಬರಬೇಕು. ಮನೆಗೆ ಬಂದು ಕಟ್ಟಿಗೆಯ ಹೊರೆ ಒಗೆಯುವುದಷ್ಟೇ ತಡ, ಮತ್ತೆ ಅವಳಿಗಾಗಿ ಹಲವಾರು ಕೆಲಸ ಕಾರ್ಯಗಳು ಇರುತ್ತವೆ.

ಸಂಜೆ ಹೊತ್ತಿಗೆ ಕಸಗುಡಿಸಿ ನೀರು ತುಂಬಿಕೊಂಡು ಬರುವುದು ಉರಿಯಲಿಕ್ಕೆ ಕಟ್ಟಿಗೆಯ ಸಿದ್ಧತೆ, ಅಡುಗೆ ಮಾಡುವುದು, ಎಲ್ಲರಿಗೂ ಊಟ ಬಡಿಸಿದ ಬಳಿಕ ಅವಳು ಉಣ್ಣಬೇಕು. ಮಲಗುವ ಮುಂಚೆ ಅತ್ತೆ ಮಾವನ ಕೈಕಾಲುಗಳನ್ನು ಒತ್ತಬೇಕು. ಒಂದು ವೇಳೆ ಅತ್ತೆ ಮಾವರ ಸೇವೆ ಮಾಡದಿದ್ದರೆ ಸೊಸೆಯ ಮರ್ಯಾದೆ ಮೂರಾಬಟ್ಟಿ ಆಗುವಂತೆ ರಂಪಾಟ ಎಬ್ಬಿಸುತ್ತಾರೆ. ದಿನನಿತ್ಯದ ಕೆಲಸ ಕಾರ್ಯಗಳಲ್ಲಿ ಇಂತಹ ಹಲವಾರು ಕೆಲಸ ಕಾರ್ಯಗಳನ್ನು ಹೆಣ್ಣುಮಗಳು ಮಾಡಬೇಕಾಗುತ್ತದೆ. ಅತ್ತೆ ಮಾವರಿಂದ ಮತ್ತು ಕೆಲಸ ಕಾರ್ಯಗಳಿಂದ ಬೇಸತ್ತ ಹೆಣ್ಣುಮಗಳು ಯಾವುದಾದರೂ ಕುಂಟನೆಪ ಮಾಡಿ ತವರೂರಿಗೆ ಹೋಗಿ ಬಿಡುತ್ತಾಳೆ.  ತವರೂರಿಗೆ ಹೋಗಿ ಕೆಲವು ದಿನಗಳಾದ ಮೇಲೆ ಹಿಂತಿರುಗಿ ಗಂಡನ ಮನೆಗೆ ಹೋಗಲು ನಿರಾಕರಿಸುತ್ತಾಳೆ. ಹೆಣ್ಣುಮಗಳು ಗಂಡನ ಮನೆಯಲ್ಲಿ ಅನುಭವಿಸಿದ ನೋವುಗಳ ಬಗ್ಗೆ ಹಾಡಿರುವುದು ಈ ಹಾಡಿನಲ್ಲಿ ಸ್ಪಷ್ಟವಾಗುತ್ತದೆ.

“ಖೇರಾಳಿರಿ ಖೂಟಿನ ಕರುಂಡೇರಿ ಘಟ್ಟಿ
ಮಾಯೇ ಬಾಪೇರ ಪೇಟ ಏಕಲಿಕ ಬೇಟಿ
ಜಾವೂನಿ ನಾಂದೇನ ಬಾಪು ಜಾವೂನಿ ನಾಂದೇನ.
ಸಸರೋ ಮುಚಾಳೋ ವೊರೆ ಪೇಟೆಮಾಯಿ ಕಾಳೋ
ದಾಬೇನ ಜಾವುವತ್ತ ಹಾತ ಗೋಡಾವಾಳೋ
ಸಸರೇರ ಘರೇ ಅಂಗ ಭಂದಿ ಬಾಂಡಿ ಘೋಡಿ
ಘೋಡಿನ ಲಾಗರೇಚ ಜಂಜೋಡಾ ಜಂಜೋಡಿ’

ಅರ್ಥ : ಬೀಸುಕಲ್ಲಿಗೆ ತೇರದ ಕಟ್ಟಿಗೆಯ ಕೀಲ, ತಾಯಿ  – ತಂದೆಯವರಿಗೆ ಒಬ್ಬಳೇ ಮಗಳು, ಒಗೆತನ ಮಾಡಲಿಕ್ಕೆ ಗಂಡನ ಮನೆಗೆ ಹೋಗುವುದಿಲ್ಲ. ಮಾವನಿಗೆ ಕೋರೆಮೀಸೆ, ಅವನ ಹೊಟ್ಟೆಯಲ್ಲಿ ದುರ್ಬುದ್ಧಿ, ಒತ್ತಲಿಕ್ಕೆ ಹೋದಾಗ ಉದ್ದನೆಯ ಕೈ ಕಾಲುಗಳು. ಮಾವನ ಮನೆಯ ಮುಂದೆ ಬಾಲಿಲ್ಲದ ಹೆಣ್ಣು ಕುದುರೆ ಕಟ್ಟಿದೆ. ಆ ಕುದುರೆಗೆ ಮೈ ತುಂಬ ತೊನ್ನ ಹತ್ತಿವೆ.

ಇಲ್ಲಿ ಗಮನಿಸಬೇಕಾದ ಸಂಗತಿ ಎಂದರೆ ಹೆಣ್ಣುಮಗಳು, ತನ್ನ ಮಾವನಿಗೆ ಕೈ ಕಾಲು ಒತ್ತುವ ಪ್ರಸಂಗದಲ್ಲಿ ಮಾವನ ಕಾಮಾಲೆ ಕಣ್ಣಿನಿಂದ, ಒಮ್ಮೊಮ್ಮೆ ಸೊಸೆಯಾದವಳು ಲೈಂಗಿಕ ಕಿರುಕುಳಕ್ಕೆ ಒಳಗಾದ ಉದಾಹರಣೆಗಳಿವೆ. ಇವೆಲ್ಲ ನೋವುಗಳನ್ನು ನುಂಗಿಕೊಂಡೆ ಸಂಸಾರ ಮಾಡುವಂಥ ಪ್ರಸಂಗ ಒಂದೊಂದು ಕಡೆ ಕಂಡು ಬರುತ್ತದೆ.

ವಿಧವಾ ವಿವಾಹ : ವಿಧವಾ ಸಮಸ್ಯೆ ಇಂದಿನ ದಿನಗಳಲ್ಲಿ ಬೆಳೆಯುತ್ತಲೇ ಇದೆ. ಈ ಸಮಸ್ಯೆ ಲಂಬಾಣಿಗರಿಗೆ ಹೊರತಾಗಿಲ್ಲ. ಗಂಡ ಸತ್ತ ಬಳಿಕ ವಿಧವೆ ಬೇರೊಂದು ಮದುವೆ ಆಗುವುದಕ್ಕೆ ’ಘುಗರಿ ಘಾಲೇರೋ’ (ಮುತ್ತೈದೆ ಸೂಚಕ ಆಭರಣ) ಎನ್ನುತ್ತಾರೆ. ಗಂಡ ತೀರಿಕೊಂಡಿದ್ದರೆ ಅಥವಾ ವಿವಾಹ ವಿಚ್ಛೇದನವಾಗಿದ್ದರೆ ಅಂಥ ಹೆಣ್ಣುಮಗಳು ತನಗೆ ಇಷ್ಟವಾದ ಪುರುಷನ ಜೊತೆಗೆ ಮರುಮದುವೆ ಆಗಬಹುದು. ವಿಧವಾ ವಿವಾಹಕ್ಕೆ ಲಂಬಾಣಿಗರಲ್ಲಿ ಏನೂ ಸಮಸ್ಯೆಯಿಲ್ಲ. ಅವಿವಾಹಿತನೂ ವಿಧವೆಯನ್ನು ಮದುವೆ ಆಗುವ ಉದಾಹರಣೆ ಬಹಳ ಕಡಿಮೆ.  ಆದರೆ ವಿಧವಾ ವಿವಾಹ ವಿಧರ ಮತ್ತು ವಿಧವೆಯ ಜೊತೆ ನಡೆಯುತ್ತದೆ. ಇಂಥ ಮದುವೆ ತಾಂಡಾದ ನಾಯಕ, ಕಾರಭಾರಿ, ಡಾವ ಮತ್ತು ಹಿರಿಯರ ಸಮ್ಮುಖದಲ್ಲಿ ನಡೆಯುತ್ತದೆ. ಔಪಚಾರಿಕವಾಗಿ ಮೊದಲಿನ ಗಂಡನ ಸಂಬಂಧಿಕರ ಅಪ್ಪಣೆ ಪಡೆಯಬೇಕಾಗುತ್ತದೆ. ಮದುವೆ ಆಗಬಯಸುವವನ ಕಡೆಯವರು ವಿಧವೆಯ ಗಂಡನ ಮನೆಗೆ ಬಂದು, ಹಿರಿಯರ ಒಪ್ಪಿಗೆಯ ಮೇರೆಗೆ ಸಂಪ್ರದಾಯ ಪ್ರಕಾರ ಕುರಿಯನ್ನು ಬಲಿಕೊಟ್ಟು, ಮಣ್ಣಿನ ಹರಿವಿಯಲ್ಲಿ ಅಡಿಗೆ ಮಾಡುತ್ತಾರೆ. ಮಾಂಸಾಹಾರದ ಊಟದ ಸಂದರ್ಭದಲ್ಲಿ, ಶರೆ, ಶಿಂದಿ ಕೊಡುತ್ತಾರೆ. ಊಟ ಮುಗಿದ ಬಳಿಕ ಮಾಂಸ ಕುದಿಸಿದ ಮಣ್ಣಿನ ಹರಿವಿಯನ್ನು (ಮಾಂಬಲೋ, ಭಾಂಡಾ ಫೋಡೇರೋ) ಒಡೆಯುತ್ತಾರೆ. ಈ ರೀತಿ ಮಾಡುವುದರಿಂದ ವಿಧುರನ ಸಂಪೂರ್ಣ ಹಕ್ಕು ಆ ವಿಧವೆಯ ಮೇಲೆ ಆದಂತೆ. ಒಂದು ವೇಳೆ ಮಣ್ಣಿನ ಪಾತ್ರೆ ಒಡೆಯದೆ ಮದುವೆ ಆದರೆ, ಆ ಹೆಣ್ಣನ್ನು ಬೇರೆಯವರು ಕರೆದುಕೊಂಡು ಹೋಗಬಹುದು.

ಅತ್ತಿಗೆ – ಮೈದುನನ ಮದುವೆ : ಇದು ಲಂಬಾಣಿಗಳಲ್ಲಿ ಕಂಡು ಬರುವ ವಿಶೇಷ ಪದ್ಧತಿ. ಅಣ್ಣ ಸತ್ತರೆ ಅಣ್ಣನ ಹೆಂಡತಿಯನ್ನು ತಮ್ಮನಾದವನು ಮದುವೆ ಆಗಬಹುದು. ಆದರೆ ತಮ್ಮ ಸತ್ತರೆ, ತಮ್ಮನ ಹೆಂಡತಿಯನ್ನು ಅಣ್ಣನಾದವನು ಮದುವೆ ಆಗಲು ಬರುವುದಿಲ್ಲ. ಈ ಪದ್ಧತಿ ಪೂರ್ವದಲ್ಲಿ ರೂಢಿಯಲ್ಲಿತ್ತು. ಆದರೆ ಇಂದು ಈ ಪದ್ಧತಿ ಲಂಬಾಣಿಗರಲ್ಲಿ ಕಂಡು ಬರುವುದಿಲ್ಲ.

ಪೂರ್ವದಲ್ಲಿ ಲಂಬಾಣಿಗರಲ್ಲಿ ಮದುವೆ ಕಾರ್ಯಗಳು ಒಂದು ತಿಂಗಳವರೆಗೆ ನಡೆಯುತ್ತಿತ್ತು. ಇಂದು ಒಂದೆರಡು ದಿನದಲ್ಲಿ ಮುಗಿದು ಹೋಗುವ ಸರಳ ಮದುವೆ ರೂಢಿಯಲ್ಲಿದೆ. ಲಂಬಾಣಿಗರಲ್ಲಿ ಮದುವೆ ಸಂಪ್ರದಾಯಗಳಲ್ಲಿ ಹಲವಾರು ಬಗೆಗಳಿವೆ.  ಉದಾ. ವಧುವಿನ ನಿಶ್ಚಯ ಕಾರ್ಯ, ಬೆಲ್ಲದ ಕಾರ್ಯ, ಮದುವೆ ಸಮಾರಂಭ, ವದಾಯಿ ಕಾರ್ಯಸಾಡಿತಾಣೆರೋ, ಮದುಮಗನಿಗೆ ಬೀಳ್ಕೊಡುಗೆ, ತಿಲಕ ಕಾರ್ಯ, ವಿವಾಹ ಬಂಧನ, ಸುರಗಿ ಕಾರ್ಯ, ಮಾಂಗಳ್ಯ ಧಾರಣ, ಗೋಟ ಸಂಪ್ರದಾಯ, ಮದುಮಕ್ಕಳಿಗೆ ಬೀಳ್ಕೊಡುವುದು, ಹವೇಲಿ ಮನೆ ತುಂಬಿಸುವುದು ಮುಂತಾದವುಗಳು ಮದುಮಗಳನ್ನು ಗಂಡನ ಮನೆಗೆ ಬೀಳ್ಕೊಡುವ ಸಂದರ್ಭದ ’ಢಾವಲೋ’ ಹಾಘೂ ಹವೇಲಿ (ಆಳುವ ಸಂಪ್ರದಾಯ) ಬಹಳ ಮಹತ್ವದ್ದು. ’ಢಾವಲೋ ಹಾಗೂ ಹವೇಲಿ ಎರಡು ಸಂಪ್ರದಾಯಗಳನ್ನು ಗಮನಿಸಿದಾಗ ಇದು ಲಂಬಾಣಿಹೆಣ್ಣು ಮಕ್ಕಳು ಪಾಲಿಸಿಕೊಂಡು ಹೋಗಬಹುದಾದ ಸಂಪ್ರದಾಯ. ಬೀಗರು ಮನೆಗೆ ಬಂದರೆ ಮೊದಲಿಗೆ ಲಂಬಾಣಿ ಹೆಣ್ಣುಮಗಳು ಒಂದು ಲೋಟ ನೀರನ್ನು ಕೊಟ್ಟು ಕೊರಳು ತಬ್ಬಿಕೊಂಡು ಅಳುತ್ತಾಳೆ. ಈ ಪದ್ಧತಿಗೆ ’ಢಾವಲೋ’ ಎನ್ನುತ್ತಾರೆ. ಈ ಢಾವಲೋ ಮುಖಾಂತರ ಹೆಣ್ಣು ಮಗಳು ಗಂಡನ ಮನೆಯಲ್ಲಿ ಆದ ದುಃಖ ಮುಂತಾದ ನೋವನ್ನು ಢಾವಲೋ ಮುಖಾಂತರ ಹೇಳುತ್ತಾಳೆ.

’ಹವೇಲಿ’ ಇದು ಮದುವೆ ಮುಗಿದು ಗಂಡನ ಮನೆಗೆ ಮದುಮಗಳನ್ನು ಕಳಿಸುವಾಗ, ಮದುಮಗಳು ಆಕಳಿನ ಮೇಲೆ ನಿಂತುಕೊಂಡು, ಎರಡು ಕೈಗಳನ್ನು ಮೇಲೆ ಮಾಡಿ ತಮ್ಮ ಕುಲಬಾಂಧವರ ಗುಣಗಾನ ಮಾಡಿ ಹವೇಲಿ (ಆಳುವ ಸಂಪ್ರದಾಯ) ಹೇಳುತ್ತಾಳೆ. ಉದಾ :

’ಹವೇಲಿಯೇ ಯಾ ಅಹಿಯಾ„
ಹೋಟೋ ಫರ ಆಂವುತೋ
ಮಾರೇ ನಾಯಕ ಬಾಪುರಿ  ನಂಗರಿ
ಹರಿರೇಸ ಹರಿಯಾಳಿರೇಸ
ಹವೇಲಿಯೇ ಯಾ ಅಹಿಯಾ
ಘಲರಾಸು ವದೇಸ, ವಡಲಾಸು ಫೇಲೇಸ
ಕಡಿಯಾದೇಕ ಪೇರಿ, ಉಬನಾದೇಕ ಓಡಿ
ತೋಡಾ ತೋಡಾ ಕರ ಸಾಸಿ
ಕೋಡಿ ಕೋಡಿ ಕರ ಮಾಯಾ ಜೋಡಿ
ಹವೇಲಿಯೇ ಯಾ ಅಹಿಯಾ

ಚಾಂದಾ ಸೂರಿಯಾರಿ ಜೋಡಿ
ಕೂಂ ತಪ ಜೂಂ ಮಾರೇ
ಪಾಂಚಿನ ಪಾಂಚಿ ದಸಿ ಭಾಯಿರ
ಜೋಡಿ ತಪೇಸ
ಹವೇಲಿಯೇ ಯಾ ಅಹಿಯಾ

ಅರ್ಥ : ಓ ನನ್ನ ಹಡೆದ ತಾಯೆ, ಹಿಂತಿರುಗಿ ಬಂದು ನನ್ನ ನಾಯಕ ತಂದೆಯ ತಾಂಡೆ ಹಸಿರು ಹುಲ್ಲಿನಂತೆ ನಿತ್ಯ  ಹಸಿರಾಗಿರಲಿ, ಓ ನನ್ನ ಹಡೆದ ತಾಯೆ, ಅತ್ತಿಯ ಗಿಡದಂತೆ ಬೆಳೆದು, ಆಲದ ಮರದಂತೆ ಪಸರಿಸು, ಹೊಸಬಟ್ಟೆ ತೊಟ್ಟುಕೊಂಡು ಓಢಣಿ ಹೊದ್ದಿಕೊಂಡೆ ವಿವಿಧ ದಾರಗಳಿಂದ ಉಡುಪು ಸಿದ್ಧಗೊಳಿಸಿದೆ. ಪ್ರೀತಿ ವಿಶ್ವಾಸಗಳಿಂದ ಮನವೊಲಿಸಿದೆ ಓ ನನ್ನ ಹಡೆದ ತಾಯೆ, ಚಂದ್ರ, ಸೂರ್ಯರ ಜೋಡಿಯಂತೆ ನನ್ನ ಐದು, ಹತ್ತು ಸಹೋದರರು ಕೂಡಿರಲಿ, ಅವರಿಗೆ ತುಷ್ಟಿ, ಪುಷ್ಟಿ, ಸಂತುಷ್ಟಿ ದೊರೆಯಲೆಂದು ದೇವರಲ್ಲಿ ಪ್ರಾರ್ಥಿಸುವೆ.

ಮನೆಯ ಯಜಮಾನಿ (ಘರೇರ ನಾಯಕಣ): ಮದುವೆಯಾಗಿ ಬಂದು, ಇಡೀ ಕುಟುಂಬದ ಜವಾಬ್ದಾರಿಯನ್ನು ನಿಭಾಯಿಸಿಕೊಂಡು ಹೋಗುವಲ್ಲಿ ಲಂಬಾಣಿ ಹೆಣ್ಣುಮಗಳಿಗೆ ಸಾಕುಬೇಕಾಗಿರುತ್ತದೆ. ಒಂದರ‍ಹಿಂದೆ ಒಂದರಂತೆ ಗೊತ್ತು ಗುರಿಯಿಲ್ಲದೆ ಏಳೆಂಟು ಮಕ್ಕಳನ್ನು ಹಡೆದು ಬಿಡುತ್ತಾಳೆ. ಇಂತಹ ಕಠಿಣ ಪರಿಸ್ಥಿತಿಯಲ್ಲಿಯೂ ಇಡೀ ಕುಟುಂಬದ ಜವಾಬ್ದಾರಿ ಇವಳ ಮೇಲೆ ಇರುತ್ತದೆ. ಮನೆಗೆ ಬರುವಂಥ ಬೀಗರು ಬಿಜ್ಜರಿಂದ ಹಿಡಿದು, ಕುಲಬಾಂಧವರು ಹಾಗೂ ಮಕ್ಕಳ ಪಾಲನೆ ಪೋಷಣೆಯಲ್ಲಿ ಅತೀವ ಕಾಳಜಿ ವಹಿಸಬೇಕಾಗುತ್ತದೆ. ಈ ಸಮಾಜದಲ್ಲಿ ಎಷ್ಟೇ ಕಷ್ಟ ಬಂದರೂ ಹೆಣ್ಣುಮಗಳು ಧೈರ್ಯದಿಂದ ಸಂಸಾರವನ್ನು ನಿಭಾಯಿಸುತ್ತಾಳೆ ಆದ್ದರಿಂದಲೇ ಅವಳಿಗೆ ಘರೇರ ನಾಯಕಣ (ಮನೆಯ ಯಜಮಾನಿ) ಎಂದು ಕರೆಯುತ್ತಾರೆ. ಕುಟುಂಬದಲ್ಲಿ ಮಾನಸಿಕ ಹಿಂಸೆ ಇದ್ದೇ ಇರುತ್ತದೆ. ಆಕೆ ತನ್ನ ಭೋಗದ ವಸ್ತು ಎಂದು ಅರಿತ ಗಂಡಸು ಎಲ್ಲವೂ ಅವಳ ಕೊರಳಿಗೆ ಕಟ್ಟುತ್ತಾನೆ.  ಮಕ್ಕಳ ಹೆರಿಗೆಯಿಂದ ಹಿಡಿದು, ಮಸಣದವರೆಗಿನ ಕೆಲಸ ಕಾರ್ಯಗಳನ್ನು ನಿಭಾಯಿಸುವಲ್ಲಿ, ಅವಳ ಪಾತ್ರ ಬಲು ದೊಡ್ಡದು. ಸಂಸಾರದಲ್ಲಿ ಗಂಡನಿಂದ ಹಿಡಿದು ಅತ್ತೆ, ಮಾವ ಮೈದುನರ ಕೈಯಿಂದಲೂ ಹೊಡೆಸಿಕೊಂಡು, ಬಡೆಸಿಕೊಂಡು ಜೀವನ ನಡೆಸುತ್ತ ಬಂದಿದ್ದಾಳೆ. ಎಷ್ಟೋ ಸಲ ಹೆಣ್ಣು ಮಗಳನ್ನು ಮನೆಯಿಂದ ಹೊರ ಹಾಕಿದ ಉದಾಹರಣೆಗಳಿವೆ.

ಹಸುಕೂಸುಗಳ ಮಾರಾಟ : ೨೮, ಜೂನ್, ೨೦೦೧ರಂದು, ಸುಧಾ ವಾರಪತ್ರಿಕೆಯಲ್ಲಿ ’ಲಂಬಾಣಿ ’ ಹೆಣ್ಣು ಹಸುಕೂಸುಗಳನ್ನು ಪುಡಿಕಾಶಿಗಾಗಿ ಮಾರಾಟ ಮಾಡಿದ್ದರ ಮಾಹಿತಿ ಓದಿರಬಹುದು.’ಅಮಾಯಕರ ಬಡತನವನ್ನೇ ಬಂಡವಾಳ ಮಾಡಿಕೊಂಡವರ ಕಥೆ, ಬಡತನ, ಅಜ್ಞಾನದಿಂದ ತುಂಬಿದ ಲಂಬಾಣಿ ತಾಂಡಾಗಳಿಗೆ ಕೆಲ ವರ್ಷಗಳ ಹಿಂದೆ ಶಿಶು ವ್ಯಾಪಾರಿಗಳು ದಾಳಿ ಇಟ್ಟರು. ಹಸಿದ ಹೊಟ್ಟೆಗಳ ಎದುರು ಗರಿ ಗರಿ ನೋಟಿನ ಆಮಿಷ ಒಡ್ಡಿದರು. ಪೋಷಣೆ ನೆಪದಲ್ಲಿ ಅನಾಥಾಶ್ರಮದ ಮುಖವಾಡ ಹೊತ್ತ ವ್ಯಾಪಾರಿ ಕೇಂದ್ರಗಳು ಹಣಗಳಿಕೆಯಲ್ಲಿ ಮಾನವೀಯತೆ ಮರೆತವು (ಎ.ಎಸ್.ನಾರಾಯಣ್ ರಾವ್ ೨೦೦೧ : ೧೫)

ಹೈದ್ರಾಬಾದ – ಕರ್ನಾಟಕದ ಗಡಿ ಭಾಗದಲ್ಲಿರುವ ಚಿಂಚೋಳ ತಾಲೂಕಿನ ಕೊಂಚಾವರಂ ಸುತ್ತಲಿನ ಲಂಬಾಣಿ ತಾಂಡಾಗಳಲ್ಲಿ ನಡೆದ ಘಟನೆ ಇದು. ಈ ತಾಂಡಾಗಳಲ್ಲಿ ಗರ್ಭಿಣಿ ಲಂಬಾಣಿ ಮಹಿಳೆಯೊಬ್ಬಳು ಗಂಡು ಮಗುವಿಗೆ ಜನ್ಮ ನೀಡಿದರೆ ತಾಯಿಗೆ ಸಂತೋಷ. ಹೆಣ್ಣು ಮಗುವಿಗೆ ಜನ್ಮನೀಡಿದರೆ ಬೇಸರ. ಆದರೆ ಸೂಲಗಿತ್ತಿಗೆ ಖುಷಿ ದುಪ್ಪಟ್ಟಾಗುತ್ತದೆ. ಕಾರಣ ಹೆಣ್ಣು ಮಗುವನ್ನು ಹೇಗೆ ಸಾಕುತ್ತಿ? ಅವಳಿಗೆ ಶಿಕ್ಷಣ ಕೊಡುವುದು ನಿನ್ನಿಂದ ಆಗುವುದಿಲ್ಲ. ನಿನ್ನ ಮಗುವನ್ನು ಅನಾಥಾಶ್ರಮಕ್ಕೆ ಸೇರಿಸಿ ಒಳ್ಳೆ ಊಟ, ಶಿಕ್ಷಣ ಕೊಡಿಸುತ್ತೇನೆ. ನಿನಗಂತೂ ಸಾಕಲು ಯೋಗ್ಯತೆಯಿಲ್ಲ. ಅನಾಥಾಶ್ರಮದಲ್ಲಿಯಾದರೂ ಮಗು ಚೆನ್ನಾಗಿ ಓದಲಿ ಎಂದು ಹೇಳಿ ಸೂಲಗಿತ್ತಿ ನಾಟಕಿ ಮಾಡಿ ಮೋಸತನನಿಂದ ಹೆಣ್ಣುಮಕ್ಕಳನ್ನು ೫೦೦ ರೂಪಾಯಿಗೆ ಮಾರಾಟ ಮಾಡಿರುವ ಉದಾಹರಣೆ ಇದೆ.

ಕ್ರಿಶ್ಚಿಯನ್ನರು ಲಂಬಾಣಿ ತಾಂಡಾಗಳನ್ನೇ ಆಯ್ಕೆಮಾಡಿಕೊಳ್ಳಲು ಕಾರಣವೇನು ಎಂದು ಹುಡುಕಿದಾಗ, ಸಾಮಾನ್ಯವಾಗಿ ಲಂಬಾಣಿ ಶಿಶುಗಳು ನೋಡಲು ಬೆಳ್ಳಗೆ ಇರುತ್ತಾರೆ. ವಿದೇಶಿಪೋಷಕರಿಗೆ ಮಗು ಮನಸ್ಸಿಗೆ ಬರುತ್ತದೆ. ಆಗ ಧಂದೆ ಮಾಡಲು ಅನುಕೂಲವಾಗುತ್ತದೆ ಎಂಬ ತಂತ್ರ. ಮುಂದೆ ಇದೇ ಮಕ್ಕಳು ಬೆಳೆದು ದೊಡ್ಡವರಾದ ಮೇಲೆ ಇವರನ್ನು ವೇಶ್ಯಾವಾಟಿಕೆಗೆ ತೊಡಗಿಸುತ್ತಿದ್ದರಂತೆ!

ಬಡತನ, ಅನಕ್ಷರತೆ, ಅಜ್ಞಾನ, ಅಸಮತೋಲನದಿಂದ ತುಂಬಿದ ಹಲವಾರು ಲಂಬಾಣಿ ತಾಂಡಾಗಳು, ಸ್ವಾತಂತ್ರ‍್ಯ ಸಿಕ್ಕು ಹಲವಾರು ವರ್ಷಗಳು ಗತಿಸಿದರೂ, ಮೂಲ ಸೌಕರ್ಯಗಳಿಲ್ಲದೆ ಹಾಗೆಯೇ ಉಳಿದಿವೆ. ಈ ಜನಾಂಗಕ್ಕೆ ಶಿಕ್ಷಣ ಪಡೆಯುವ ಸೌಲಭ್ಯ ದೊರೆತು, ನಾಡಿನ ವಿವಿಧ ಕ್ಷೇತ್ರಗಳಲ್ಲಿ ಪ್ರವೇಶ ಪಡೆದು ರಾಷ್ಟ್ರೀಯ ಪ್ರವಾಹದಲ್ಲಿ ಒಂದಾಗುವ ಹಿನ್ನೆಲೆಯಲ್ಲಿ ಆಗಬೇಕಾಗಿರುವ ಕಾರ್ಯ ಬೆಟ್ಟದಷ್ಟಿದೆ. ಇದೀಗ ಕಣ್ತೆರೆಯುತ್ತಿರುವ ಈ ಸಮುದಾಯಕ್ಕೆ ಸೇರಿದ ವಿದ್ಯಾವಂತರು  ಪ್ರತಿಷ್ಠಿತರು ತಮ್ಮ ಸಮುದಾಯವನ್ನೇ ಮರೆತು ಹಿಂದುಳಿದ ತಮ್ಮವರೇ ಆದ ಲಂಬಾಣಿಗಳಿಗಿಂತ ಬೇರೆ ಎನ್ನುವ ಮನೋಭಾವನೆಯನ್ನು ಬೆಳೆಸಿಕೊಂಡರೆ ಇನ್ನು ಅಪಾಯಕಾರಿ. ಕಾರಣ ಸರಕಾರ ನೀಡುತ್ತಿರುವ ಸೌಲಭ್ಯಗಳ ಜೊತೆಗೆ ವಿವಿಧ ವರ್ಗದ ಜನರ ಸಹಕಾರ ಪ್ರೋತ್ಸಾಹ ಮತ್ತು ವಿಶ್ವಾಸಗಳು ದೊರಕುವ ದಿಕ್ಕಿನಲ್ಲಿ ಸಾಮಾಜಿಕ ಚಟುವಟಿಕೆಗಳು ರೂಪಗೊಳ್ಳಬೇಕಾಗಿದೆ. ಆಗ ಮಾತ್ರ ಈ ಸಮುದಾಯ ತನ್ನ ಸತ್ವಪೂರ್ಣವಾದ ವಿಶಿಷ್ಟ ಗುಣಗಳನ್ನು ಉಳಿಸಿಕೊಳ್ಳುತ್ತದೆ. ಸಾಮಾಜಿಕ ಸಂಸ್ಕೃತಿಯ ಪುನರುತ್ಥಾನದಲ್ಲಿ ಭಾಗಿಯಾಗುವುದು ಸಾಧ್ಯ (ಡಾ. ಪವಾರ ೨೦೦೭:೧೬)

ಗುಳೆ ಹೋಗುವಿಕೆ : ಉತ್ತರ ಕರ್ನಾಟಕದ ಬಹುತೇಕ ಲಂಬಾಣಿ ತಾಂಡಾಗಳಲ್ಲಿಯ ಗಂಡಸರು ಮತ್ತು ಹೆಂಗಸರು ದಸರಾ ಮತ್ತು ದೀಪಾವಳಿ ಹಬ್ಬಗಳು ಮುಗಿದ ಮೇಲೆ, ಮಹಾರಾಷ್ಟ್ರ ಮತ್ತು ಗೋವಾದ ಕಡೆ ಗುಳೆ ಹೋಗುತ್ತಾರೆ. ಆ ಸಂದರ್ಭದಲ್ಲಿ ಜೊತೆಗೆ ತಮ್ಮ ಮಕ್ಕಳನ್ನು ಕರೆದುಕೊಂಡು ಹೋಗುತ್ತಾರೆ. ಕಾರಣ ನಮ್ಮಲ್ಲಿ ವರ್ಷದ ಉದ್ದಕ್ಕೂ ಕೂಲಿ, ನಾಲಿ, ಕೆಲಸ ಸಿಗುವುದು ಬಲು ಕಷ್ಟ. ಒಮ್ಮೆ ಮಳೆ ಆದರೆ ನಾಲ್ಕೈದು ವರ್ಷ ಸರಿಯಾಗಿ ಮಳೆ ಆಗುವುದಿಲ್ಲ. ಕುಟುಂಬದಲ್ಲಿ ಹಿಂಡುಗಟ್ಟಲೆ ಮಕ್ಕಳು, ಸಾಕುವುದು ಕಷ್ಟ ಒಮ್ಮೊಮ್ಮೆ ತುತ್ತು ಊಟಕ್ಕೂ ಗತಿ ಇಲ್ಲದಂತೆ ಆಗುತ್ತದೆ. ಈ ಕೆಲವು ಕಾರಣಗಳಿಂದ ಇವರು ಪ್ರತಿವರ್ಷ ಮಹಾರಾಷ್ಟ್ರ, ಗೋವಾಕ್ಕೆ ಗುಳೇ ಹೋಗುತ್ತೇವೆ ಎನ್ನುತ್ತಾರೆ.  ಇಲ್ಲಿ ಮಣ್ಣಿನ ಕೆಲಸಕ್ಕೆ ಒಂದು ದಿನಕ್ಕೆ ಕೂಲಿ, ಅಂದಾಜು ಗಂಡಸರಿಗೆ ನೂರರಿಂದ ನೂರೈವತ್ತು, ಹೆಣ್ಣುಮಕ್ಕಳಿಗೆ ಎಪ್ಪತ್ತೈದು ರೂಪಾಯಿಯಿಂದ ನೂರು ರೂಪಾಯಿಯವರೆಗೆ ಸಂಬಳ ಸಿಗುತ್ತದೆ ಎಂದು ಈ ಜನರು ಹೇಳುತ್ತಾರೆ. ಇಂಥ ಪರಿಸ್ಥಿತಿಯಲ್ಲಿ ಮಕ್ಕಳಿಗೆ ಶಿಕ್ಷಣ ಕೊಡುವುದು ಬಲು ಕಷ್ಟ. ಅಕ್ಟೋಬರನಿಂದ ಏಪ್ರಿಲ್ ಮೇ ತಿಂಗಳವರೆಗೆ ಇವರು ದುಡಿಯುತ್ತಾರೆ. ಮಳೆಗಾಲ ಆರಂಭವಾಗುತ್ತಲೇ ’ಮತ್ತೆ ಗೂಡಿಗೆ ಮರಳುವ ಹಕ್ಕಿಗಳಂತೆ’ ತಮ್ಮ ತಾಂಡಾಕ್ಕೆ ಗಂಟುಮೂಟೆಗಳನ್ನು ಕಟ್ಟಿಕೊಂಡು ಬರುತ್ತಾರೆ. ಇವರು ದುಡಿಯಲಿಕ್ಕೆ ಹೋಗುವಂಥ ಸಂದರ್ಭದಲ್ಲಿ ತಾಂಡಾದ ಜನರು ಇವರನ್ನು ಬೀಳ್ಕೊಡುತ್ತಾರೆ. ಹೆಣ್ಣುಮಕ್ಕಳು ಒಬ್ಬರಿಗೊಬ್ಬರು ತೆಕ್ಕೆ ಹಾಕಿಕೊಂಡು ಅಳುತ್ತಾರೆ. ಅಂಥ ಸಂದರ್ಭಧಲ್ಲಿ ಗಂಡಸರು ಹಾಡುವ ಪದ್ಯ ನೆನಪಿಗೆ ಬರುತ್ತದೆ.

ವಡಜಾಯಾರ ಪಕೇರಿ ವಡಜಾಯಾರ
ಹೋಟೋ ಫರ ಮಲಕೇನ ಕನಾ ಆಯಾರ

ಅರ್ಥ: ಪಕ್ಷಿಗಳ ಹಾಗೆ ಹಾರಿ ಹೋಗುತ್ತಿದ್ದೇವೆ. ಮರಳೀ ತಾಂಡಾಕ್ಕೆ ಎಂದು ಬರುತ್ತೇವೆ ಎಂದು ದುಃಖಮಯವಾಗಿ ಹಾಡುತ್ತಾರೆ.

ಲಂಬಾಣಿಗರಲ್ಲಿ ಕ್ಷಣ ಕ್ಷಣಕ್ಕೂ ಹಾಡುಗಳನ್ನು ಕಟ್ಟಿ ಹಾಡುವಂತಹ ಶಕ್ತಿ ಸಾಮರ್ಥ್ಯವಿದೆ. ಇವರು ಶ್ರಮಜೀವನದಲ್ಲಿ ಸಂತೃಪ್ತಿಯನ್ನು ಕಂಡವರು. ಲಂಬಾಣಿ ಜನ ಬಲು ಗಟ್ಟಿಗರು. ದುಡಿಯಲು ಹಿಂಜರಿಯುವುದಿಲ್ಲ. ಕಷ್ಟದಿಂದ ದುಡಿದು ಸಂಪಾದನೆ ಮಾಡುವಂಥ ಜಾಯಮಾನದವರು. ಆದರೆ ಆರ್ಥಿಕ ಪರಿಸ್ಥಿತಿಯಿಂದ ಮತ್ತು ಕುಟುಂಬದಲ್ಲಿ ಬಹಳಷ್ಟು ಮಕ್ಕಳಿರುವುದರಿಂದ, ಎಲ್ಲರಿಗೂ ಶಿಕ್ಷಣ ಕೊಡಿಸುವುದಾಗಲೀ ಅವರಿಗೆ ಒಳ್ಳೆಯ ರೀತಿಯಿಂದ ನೋಡಿಕೊಳ್ಳುವುದಾಗಲೀ ಸಾಧ್ಯವಾಗುತ್ತಿಲ್ಲ. ಈ ಕಾರಣದಿಂದ ಶಿಕ್ಷಣ ಕೊಡುವುದು ತೊಂದರೆ ಆಗುತ್ತಿದೆ ಎಂದು ವಕ್ತ್ಯಗಳ ಅನಿಸಿಕೆ.  ಈ ಹಲವು ಕಾರಣದಿಂದ ಬಂಜಾರ ಬುಡಕಟ್ಟಿನ ಮಕ್ಕಳು ಶಿಕ್ಷಣ ಪಡೆಯುವಲ್ಲಿ ವಿಫಲರಾಗುತ್ತಿದ್ದಾರೆ ಎಂದು ಹೇಳಬಹುದು.

ಹೊರ ಜಗತ್ತೆಂಬ ಕತ್ತಲು : ಲಂಬಾಣಿ ಸಮಾಜದಲ್ಲಿ ನೂರಕ್ಕೆ ಶೇ. ೫ ರಷ್ಟು ಮಾತ್ರ ಹೆಣ್ಣುಮಕ್ಕಳು ಶಿಕ್ಷಣ ಪಡೆದಿದ್ದಾರೆ. ಉಳಿದವರು ಕೂಲಿ ನಾಲಿ ಕೆಲಸ ಮಾಡುವುದು, ಕೆಲಸ ಸಿಗದಿದ್ದಾಗ ಗುಂಪಿನವರ ಜೊತೆ ಗುಳೆ ಹೋಗುವ ಪದ್ಧತಿ ಇವರಿಗೆ ತಪ್ಪಿದ್ದಲ್ಲ. ಹೊಟ್ಟೆ ತುಂಬಿಕೊಳ್ಳುವುದೇ ಕಷ್ಟವಾದಾಗ ಶಿಕ್ಷಣ ಪಡೆಯುವುದಾದರೂ ಹೇಗೆ? ಶಿಕ್ಷಣವೇ ಪಡೆದಿಲ್ಲ ಅಂದ ಮೇಲೆ ಹೊರ ಜಗತ್ತಿನ ಪರಿಚಯವಾದರೂ  ಹೇಗಾಗುತ್ತದೆ. ಲಂಬಾಣಿ ಮಹಿಳೆಗೆ ಶಿಕ್ಷಣದ ಕೊರತೆ ಇದ್ದುದರಿಂದಲೇ ಅವಳು ತಾನಾಯ್ತು ತನ್ನ ಸಂಸಾರವಾಯ್ತು ಎಂದು ’ತಾಂಡಾ ಸಂಸ್ಕತಿಯ’ ಮಡಿಲಲ್ಲಿಯೇ ಬೆಳೆದವಳು. ಆದರೆ ತಾಂಡಾ ಸಂಸ್ಕೃತಿ, ಮತ್ತು ನಿಸರ್ಗದಿಂದ ಲಂಬಾಣಿ ಹೆಣ್ಣುಮಗಳು ಬಹಳಷ್ಟು ಕಲಿತಿದ್ದಾಳೆ ಎಂದರೆ ತಪ್ಪಾಗದು.

ಲಂಬಾಣಿ ಮಹಿಳಾ ವೈಶಿಷ್ಟ್ಯಗಳು

ಹಚ್ಚೆಕಲೆ : ಸಾಮಾನ್ಯವಾಗಿ ಹಚ್ಚೆ ಕಲೆ ಹಾಕಿಸುವಲ್ಲಿ ಲಂಬಾಣಿ ಮಹಿಳೆಯರು ಹಿಂದೆ ಬಿದ್ದಿಲ್ಲ. ಹಚ್ಚೆಕಲೆ ಮದುವೆಯ ಪೂರ್ವದಲ್ಲಿಯೇ ಕಿಳ್ಳೆಕ್ಯಾತರ ಹೆಣ್ಣುಮಕ್ಕಳಿಂದ ಹುಯ್ಸಿಕೊಳ್ಳುತ್ತಾರೆ. ಹಚ್ಚೆಹಾಕಿಸಿಕೊಳ್ಳುವ ಭಾಗಗಳೆಂದರೆ ಹಣೆ, ಕಣ್ಣು, ಪಕ್ಕದಲ್ಲಿ, ಕೆನ್ನೆ, ಗದ್ದ, ಹುಬ್ಬು, ತೋಳು, ಅಂಗೈಯಿಂದ ಮುಂಗೈವರೆಗೆ, ಕೈಬೆರಳುಗಳ ಮೇಲೆ, ಮುಂತಾದ ದೇಹದ ಭಾಗಗಳಲ್ಲಿ ಹಚ್ಚೆ ಹುಯ್ಸಿಕೊಳ್ಳುವ ಪದ್ಧತಿ ಇದೆ. ಇವರು ಬಿಡಿಸಿಕೊಳ್ಳುವ ಚಿತ್ತಾರಗಳೆಂದರೆ ಗೆಳತಿಯರು, ಸಹೋದರರು, ಹೂ ಬಳ್ಳಿ, ಬಾಸಿಂಗ, ಹಾವು, ಚೇಳು, ನೊಣ, ಮೀನು, ಗೋಮಾತೆ, ದೇವಿ, ಆಂಜನೇಯ ಸಹೋದರರ ಹೆಸರು, ಭಾವಿ ಪತಿಯ ಹೆಸರು ಮೊದಲಾದ ಚಿತ್ತಾರದ ವಿನ್ಯಾಶಗಳ ಹಚ್ಚೆ ಹುಯ್ಸಿಕೊಳ್ಳುತ್ತಾರೆ.

ಉಡುಪುಗಳು : ಲಂಬಾಣಿ ಹೆಣ್ಣುಮಕ್ಕಳು ಉಡುಪು ತೊಡಪುಗಳ ದೃಷ್ಟಿಯಿಂದ ತುಂಬಾ ಆಕರ್ಷಣೀಯವಾಗಿರುವುದು. ಆಕರ್ಷಕ ಬಣ್ಣಗಳಿಂದ ತುಂಬಿದ ವಿವಿಧ ಉಡುಗೆಗಳ ರೂಪಣದಲ್ಲಿ ಅವರು ಬಳಸುವ ಕೆಂಚು ಕನ್ನಡಿ ಅವುಗಳನ್ನು ತಮ್ಮ ಉಡುಪುಗಳಿಗೆ ಹೆಣೆಯುವಾಗ ಅವರು ತೋರುವ ಕುಸುರಿನ ಕೆಲಸ, ತೊಡುಪುಗಳಲ್ಲಿ ಬಳಸುವ ವಸ್ತ್ರ ವಿನ್ಯಾಸ, ಅಂದರೆ ಬೆಳ್ಳಿ ಬಂಗಾರದಿಂದ ಹಿಡಿದು ತಾಮ್ರ ಹಿತ್ತಾಳೆಯವರೆಗೆ, ಹಸ್ತದಂತಿಯಿಂದ ಹಿಡಿದು ಕಟ್ಟಿಗೆಯ ದಿಂಡು ಬೆಂಡುಗಳವರೆಗೆ ಕಾಜಿನ ಬಿಲ್ಲೆಗಳಿಂದ ಹಿಡಿದು ಮಿಶ್ರಧಾತು ಪಾವಲಾ (ನಾಣ್ಯ) ಗಳವರೆಗೆ ತವರು ತಗಡುಗಳಿಂದ ಹಿಡಿದು, ಉಣ್ಣೆಯ ಝಾಂಡಿ ಗೊಂಡೆಗಳ ವರೆಗೆ ಹೀಗೆ ಇವರ ಪ್ರತಿಯೊಂದು ವಸ್ತುವು ಪ್ರತ್ಯೇಕ ಗುಣಲಕ್ಷಣಗಳನ್ನು ಹೊಂದಿದ್ದು ಇತರ ಯಾವುದೇ ಜನಪದ ಗುಂಪುಗಳಿಗಿರದಂಥ ವಿಶಿಷ್ಟ ಜಾಣ್ಮೆ ಮತ್ತು ಕುಶಲಕಲೆ ಇವರ ವೇಷಭೂಷಣಕ್ಕೆ ಇದೆ. ಈ ದೃಷ್ಟಿಯಿಂದ  ಲಂಬಾಣೀಗರ ಉಡಪು ತೊಡುಪುಗಳು ಅತ್ಯಂತ ಚಿತ್ತಾಕರ್ಷಕವಾಗಿದ್ದು ಮೇಲು ನೋಟಕ್ಕೆ ಇದು ಲಂಬಾಣಿಗರ ವೇಷ ಎಂದು ಹೇಳುವಷ್ಟು ರಮಣೀಯವಾಗಿರುತ್ತದೆ. ಹೆಣ್ಣುಮಕ್ಕಳು ಬಳಸುವ ಬಟ್ಟೆಗಳಲ್ಲಿ ಮುಖ್ಯವಾಗಿ ಕೆಂಪುಬಣ್ಣದ ಬಟ್ಟೆಗಳನ್ನು ಬಳಸುತ್ತಾರೆ. ವಿವಿಧ ಬಣ್ಣಗಳ ದಾರಗಳಿಂದ ಬೇರೆ ಬೇರೆ ಬಗೆಯ ಕಸೂತಿಗಳನ್ನು ತೆಗೆಯುತ್ತಾರೆ. ಉದಾ. ಕೋತರಾರನಕ (ನಾಯಿ ಉಗುರು) ಪಿಸಾರ ಘರ (ನಾಣ್ಯಗಳ ಮನೆ) ದೋಳಮಾಕಿ (ಬಿಳಿ ನೊಣ) ರೇಲಾ ಮಾಕಿ (ಸಾಲು ನೊಣಗಳು) ಇತ್ಯಾದಿ. ಹೆಣ್ಣುಮಕ್ಕಳು ತೊಟ್ಟುಕೊಳ್ಳುವ ಉಡುಪುಗಳಲ್ಲಿ ಕಾಂಚಳಿ, (ಕುಪ್ಪಸ) ಫೇಟಿಯಾ (ಲಂಗ) ಛಾಂಟಿಯಾ (ಮೇಲು ಹೊದಿಕೆ) ಇತ್ಯಾದಿ. ಕಾಂಚಳಿ ಒಂದು ಮೊಳದಷ್ಟು ಉದ್ದವಿರುತ್ತದೆ. ಅಳತೆ ಪಟ್ಟಿ  (ಹೊಟ್ಟೆಯ ಅಳತೆಪಟ್ಟಿ) ಎದೆಯ ಮೇಲೆ ಮತ್ತು ಎಡತೋಳಿನ ಮೇಲೆ ಖಚಿಯಾ ಇರುತ್ತದೆ. ಇವುಗಳಿಗೆ ಕಾಜಿನ ಬಿಲ್ಲೆಗಳನ್ನು ಹಾಕಿ ಹೊಲಿದಿರುತ್ತಾರೆ. ಕಾಂಚಳಿಯ ತುಂಬೆಲ್ಲಾ ಅಲ್ಲಲ್ಲಿ ಕಾಜಿನ ಸಣ್ಣ ಸಣ್ಣ ಬಿಲ್ಲೆಗಳು ತವರು ತಗಡಿನ ಗುಂಡಿ ಇರುತ್ತವೆ. ಬೆನ್ನ ಮೇಲಿನ ಭಾಗ ಪೂರ್ತಿ ಖಾಲಿ ಇರುತ್ತದೆ. ಮೇಲ್ಭಾಗದಲ್ಲಿ ಮತ್ತು ಮಧ್ಯಭಾಗದಲ್ಲಿ ಕಟ್ಟಿಕೊಳ್ಳಲು ಎರಡೆರಡು ಕಸಿಗಳನ್ನು ಹೊಲಿದಿರುತ್ತಾರೆ. ಫೇಟಿಯಾದಲ್ಲಿ ಐದು ಭಾಗವಿರುತ್ತವೆ. ಲೇಪೋ (ಸೊಂಟಪಟ್ಟಿ) ಕಾಳೋ ಘೇರೋ (ಕರಿಬಟ್ಟೆ) ರಾತಡೋ ಛಾಂಟಿಯಾ (ಕೆಂಪು ಬಟ್ಟೆ) ಪೀತಾಂಬರ ಜರಸಿ ಮತ್ತು ಲಾವಣಿ, ಇವುಗಳಿಂದ ಒಂದು ಫೇಟಿಯಾ ತಯಾರಿಸಿ ಅಂದ ಚಂದದ ಕಸೂತಿ ಹಾಕಿ ಹೊಲಿದಿರುತ್ತಾರೆ. ಸೊಂಟಪಟ್ಟಿಯ ಎರಡೂ ತುದಿಗೆ ಉದ್ದನೆಯ ಕಸಿಗಳನ್ನು ಬಿಟ್ಟಿರುತ್ತಾರೆ.  ಬಲಗಡೆಗೆ ಎರಡೂವರೆಯಿಂದ ಮೂರು ಫೂಟಿನಷ್ಟು ಮೂರು ಸಾಲಿನ ಉದ್ದನೆಯ ಸಡಕ (ಕವಡೆಸರ)ಗಳನ್ನು ಇಳಿಬಿಟ್ಟಿರುತ್ತಾರೆ. ಛಾಂಟಿಯಾ ಅನ್ನುವ ಮೇಲು ಹೊದಿಕೆ ನೋಡಲು ಸುಂದರವಾಗಿರುವಂತೆ, ಕಾಜಿನ ಬಿಲ್ಲೆಗಳನ್ನು ಅಂದ ಚಂದದ ಕಸೂತಿ ಹಾಕಿ ಹೊಲಿದಿರುತ್ತಾರೆ. ಇದನ್ನು ಕೆಂಪು ಹಸಿರು ಇಲ್ಲವೆ ಕಂದು ಬಣ್ಣದ ಬಟ್ಟೆಗಳಿಂದ ಸಿದ್ಧಪಡಿಸಿರುತ್ತಾರೆ. ಇದು ಲಂಬಾಣಿ ಹೆಂಗಸರ ಉಡುಪುಗಳಿಗೆ ಒಂದು ಸ್ಥೂಲ ನೋಟ.