ತೊಡಪುಗಳು : ಲಂಬಾಣಿ ಹೆಣ್ಣು ಮಕ್ಕಳು ಆಭರಣಗಳನ್ನು ತಲೆಗೂದಲಿಗೆ, ಕಿವಿ, ಮೂಗು, ಕೊರಳಿಗೆ ಕಾಲುಗಳಲ್ಲಿ ಹಾಕಿರುತ್ತಾರೆ. ಯುವತಿಯರು ಮೂಗಿನಲ್ಲಿ ಮೂಗುತಿ, ಕಿವಿಯಲ್ಲಿ ಓಲೆ, ಕೊರ‍ಳಲ್ಲಿ ಬಣ್ಣ ಬಣ್ಣದ ಮಣಿಗಳ ಹಾರ, ಕೈಯಲ್ಲಿ ಬಳೆ, ಕಾಲಲ್ಲಿ ಝಾಂಜರಿ, ಕರಿಮಣಿಸರ ಹಾಕಿರುತ್ತಾರೆ. ಹೆಣ್ಣುಮಕ್ಕಳು ಮುಂಗೂದಲಿಗೆ ಇಳಿಬಿಟ್ಟು ಘುಗರಿ ಮತ್ತು ಎರಡೂ ಮುಂಗೈಗಳಿಗೆ ಹಾಕಿರುವ ಚುಡೋ ಇವುಗಳು ಲಂಬಾಣೀ ಮಹಿಳೆಯರ ಸುಮಂಗಲೆಯ ಸಂಕೇತ. ತೋಳುಗಳಿಗೆ ಕಸೋಟಿಯಾ, ಮೂಗಿನಲ್ಲಿ ಭೂರಿಯಾ, ತುರಬಿನಲ್ಲಿ ಅಂಟಿಗೆ ಟೋಪ, ಕವಡಿಸರ, ಉಣ್ಣೆಯ ಗೊಂಡೆ ಮತ್ತು ಕವಡೆಯ ಚೋಕಡಿ ಹಾಕುತ್ತಾರೆ. ಕಾಲಲ್ಲಿ, ಕಸ, ಕೈಬೆರಳುಗಳಿಗೆ ಬೆಳ್ಳಿ ನಾಣ್ಯ ಬೆಸೆದು ಮಾಡಿರುವ ವಿಂಟಿ ಚಾಲಾವಿಂಟಿ, ಕಾಲ್ಬೆರಳಿಗೆ ಬಿಚವಾ, ಚಟಕಿ, ಕಾಲಲ್ಲಿ ದೊಡ್ಡ ಬೆಳ್ಳಿಯ ಕಡಗ, ಹಣೆಯ ಮೇಲೆ ಟಕಿಯಾ ಇರುತ್ತದೆ. ಇದು ಲಂಬಾಣಿ ಹೆಣ್ಣು ಮಕ್ಕಳು ತೊಟ್ಟುಕೊಳ್ಳುವ ತೊಡಪುಗಳ ಒಂದು ಸಂಕ್ಷಿಪ್ತ ಮಾಹಿತಿ.

ನೃತ್ಯ ಕುಣಿತ : ಲಂಬಾಣಿ ಬುಡಕಟ್ಟನ್ನು ನಾವು ನೆನೆದಾಕ್ಷಣ, ನಮ್ಮ ಕಣ್ಣೆದುರಿಗೆ ಹತ್ತಾರು ಚದುರಿದ ಚಿತ್ತ ಚಿತ್ತಾರದ ಚಿತ್ರಗಳು ಕಾಣುತ್ತವೆ. ಅವರ ತಾಂಡಾದ ಬದುಕು ಮತ್ತು ಲಂಬಾಣಿ ಸ್ತ್ರೀಯರ ರಂಗುರಂಗಿನ ವೇಷಭೂಷಣ, ಮೇಲ್ನೋಟಕ್ಕೆ ಜನಮನವನ್ನೇ ಸೆಳೆಯುತ್ತದೆ. ತಮ್ಮ ಸುಖ ದುಃಖ ನೋವು ನಲಿವುಗಳನ್ನು ಪರಸ್ಪರರಲ್ಲಿ ಹಂಚಿಕೊಂಡು ಉಣ್ಣುವ ಬುಡಕಟ್ಟು ಇದು. ಹಬ್ಬಗಳು ಇರಲಿ ಅಥವಾ ಇಲ್ಲದಿರಲಿ ಜೀವನ ಉತ್ಸಾಹ ಮೋಜು, ಕುಣಿತ ಇತ್ಯಾದಿಗಳು ಲಂಬಾಣಿ ಬುಡಕಟ್ಟಿನ ವೈಶಿಷ್ಟ್ಯಗಳಾಗಿವೆ. ರಂಗುರಂಗಿನ ವೇಷಭೂಷಣಕ್ಕೆ ತಕ್ಕ ಹಾಗೆ ಲಂಬಾಣಿ ಕೋಗಿಲೆಗಳ ಮೈಮಾಟ, ಕುಣಿತ ವರ್ತುಳಾಕಾರದಲ್ಲಿ ನಿಂತುಕೊಂಡು ಹಾಡುವ ದೃಶ್ಯ, ಹಲಿಗೆಯ ನಾದಕ್ಕೆ ತಕ್ಕಂತೆ ಹೆಜ್ಜೆ ಹಾಕುವ ನೋಟ, ಹುಣ್ಣಿಮೆಯ ಚಂದಿರದ ಬೆಳಕಿನಲ್ಲಿ ಯುವತಿಯರು ತೊಟ್ಟಿದ್ದ ಚುನರಿಯ ಕಾಜಿನ ಬಿಲ್ಲೆಗಳು, ನಕ್ಷತ್ರದಂತೆ ಫಳ ಫಳನೆ ಹೊಳೆಯುತ್ತಿರುತ್ತದೆ.

‘”ಕಾಳೋ ಕಿಸನ ವಜಾಯೋ ಮೋರಲಿ ಬಾಯಿಯ
ಯಮುನಾಮ ಕರ ಹಂಗೋಳೀ ಬಾಯಿಯ
ಕಾಳೋ ಕಿಸನೇರಿ ನಾರಿ ಘಣಿಚ ಬಾಯಿಯ
ಯಮನಾಮ ಕರ ಹಂಗೋಳಿ ಬಾಯಿಯ
ಘಾಟ ಕಪಡಾರಿ ಗಟಡಿ ಭಾಂದಿ ಬಾಯಿಯ
ಕಾಳೋ ಕಿಸನ ಯಮುನಾಮ ಹಂಗೋಳಿಕರ ಬಾಯಿಯ
ಕಾಳೋ ಕಿಸನಾರಿ ತಿನಸೇ ಸಾಠ ರಾಣಿ ಬಾಯಿಯ
ಯಮುನಾಮ ಹಂಗೋಳಿನ ಜಾರಿ ಬಾಯಿಯ
ಯಮುನಾಮ ಚಾಳೋ ಮಾಂಡೀಚ ಬಾಯಿಯ
ಕಾಳೋ ಕಿಸನ ಘಣೋ ನಾಕರೋಚ ಬಾಯಿಯ
ಗುಜರಣಿರ ಘಾಗರೋ ಪಾಡೋಚ ಬಾಯಿಯ
ಯಮುನಾಮ ಹಂಗೋಳಿ ಕರರಿಚ ಬಾಯಿಯ
ಕಾಳೋ ಕಿಸನ ಝಾಡ ಚಡೋಚ ಬಾಯಿಯ
ಗುಜರಣಿವನೂರ ಸಾಡೇರ ಗಾಟ ಭಾಂದೋಚ ಬಾಯಿಯ
ಕಾಳೋ ಕಿಸನ ವಾಂಸಳಿ ಬೋಲಾಯೋ ಬಾಯಿಯ
ಗುಜರಣಿವೋ ಝಾಡೇನ ದೀಟಿಚ ಬಾಯಿಯ
ಕಾಳೋ ಕಿಸನೇನ ಅರದಾಸ ಕೀದಿಚ ಬಾಯಿಯ
ಕಾಳೋ ಕಿಸನೇನ ಹಾತ ಜೋಡಿಚ ಬಾಯಿಯ
ಆಂಗ ಪಾಂಚ ಹಾತ ಲಗಾಯಿ ಬಾಯಿಯ
ಕಾಳೋ ಕಿಸನೇನ ತಾಪ ವೇಗಿಚ ಬಾಯಿಯ
ಕಾಳೋ ಕಿಸನ ಲಂಗೋಟಾ ದಿನೋಚ ಬಾಯಿಯ
ಗುಜರಣಿ ವನೇರ ಮಾನ ಬುರೋಚ ಬಾಯಿಯ
ಡುಂಗರ ಖೋಳಾಮ ಗವಾ ಛೋಡೋಚ ಬಾಯಿಯ
ದಡಿಯಾ ಡುಂಗರೇಮ ಗವಾ ಚರಾಯೋ ಬಾಯಿಯ
ಗವಾಮ ಮೋರಲಿ ಫೇರೋಚ ಬಾಯಿಯ
ದುದಿಯಾ ತಳಾಯೇನ ಪಾಣಿನ ಜಾರೋಚ ಬಾಯಿಯ
ದುದಿಯಾ ತಳಾಯೇನು ಪಾಣಿ ಪರಾಯೋ ಬಾಯಿಯ
ನಾಗಸರ್ಪ ಗವಾನ ಡಸೋಚ ಬಾಯಿಯ
ಬಾಲ, ಗೋಪಾಲ ಧಾಸನ ಆಯೇಚ ಬಾಯಿಯ
ಕಾಳೊ ಕಿಸನೇನ ಫರ್ಯಾದಿ ಕಿದೇಚ ಬಾಯಿಯ
ಕಾಳೋ ಕಿಸನ ಧಾಸನ ಆಯೋಚ ಬಾಯಿಯ
ನಾಗ ಸರ್ಪೇರಿ ಫಣ್ಣ ಖೇಚೋಚ ಬಾಯಿಯ
ನಾಗ ಸರ್ಪೇರಿ ನಾಡಿ ತೋಡೋಚ ಬಾಯಿಯ
ತಳಾಯೇರ ಪಾಣಿ ಗದಳೋ ಕಿದೋಚ ಬಾಯಿಯ
ಗವಾನ ಪಾಣಿ ಪರಾಯೇಚ ಬಾಯಿಯ
ಸಾಠ ಸೇ ಗವಾನ ಬೇಟ ಕಿದೋಚ ಬಾಯಿಯ

ಅರ್ಥ :  ಕೃಷ್ಣ ಮತ್ತು  ಗೋಪಿಕಾಸ್ತ್ರೀಯರನ್ನು ಕುರಿತು ಈ ಪದ್ಯದಲ್ಲಿ ಬಣ್ಣಿಸಲಾಗಿದೆ. ಕರಿವರ್ಣದ ಕೃಷ್ಣ ಬಾಸುರಿ ಊದುತ್ತ ಯಮುನಾ ನದಿಯಲ್ಲಿ

ಸ್ನಾನ ಮಾಡುತ್ತಿದ್ದ. ಕೃಷ್ಣನಿಗೆ ಬಹಳ ನಾರಿಯರಿದ್ದರು. ನಾರಿಯರು ಬಟ್ಟೆಯ ಗಂಟುಗಳನ್ನು ಕಟ್ಟಿಕೊಂಡು ಯಮುನಾ ನದಿ ತೀರಕ್ಕೆ ಬಂದರು.  ಕೃಷ್ಣನ ಮೂರು ನೂರಾ ಅರವತ್ತು ರಾಣಿಯರು ಸ್ನಾನಕ್ಕೆ ನದಿಯಲ್ಲಿ ಇಳಿದು ಜಲಕ್ರೀಡೆ ಆಡತೊಡಗಿದರು. ಕೃಷ್ಣ ಬಹಳ ಚಾಲಾಕಿ, ಗೋಪಿಕಾ ಸ್ತ್ರೀಯರು ನೀರಾಟ ಆಡುವುದರಲ್ಲಿ ತಲ್ಲೀನರಾಗಿದ್ದಾಗ, ಕೃಷ್ಣನು ಅವರ ಬಟ್ಟೆಗಳನ್ನು ಕದ್ದು ಮೆಲ್ಲನೆ ಮರ ಹತ್ತಿದ. ಗೋಪಿಯರ ಸೀರೆಗಳ ಗಂಟು ಕಟ್ಟಿದನು. ಹಾಗೆಯೇ ಅವರನ್ನೆಲ್ಲ  ವಾರಿಗಣ್ಣಿನಿಂದ ನೋಡ ನೋಡುತ್ತ ಬಾಸುರಿ ಬಾರಿಸತೊಡಗಿದ. ಗೋಪಿಯರು ಮರದ ಬಳಿ ಇದ್ದ ತಮ್ಮ ಬಟ್ಟೆ ಕಣ್ಮರೆಯಾದುದನ್ನು ಕಂಡು ಗಾಬರಿಗೊಂಡರು. ಕೃಷ್ಣನಿಗೆ ಕೈಮುಗಿದು ಬಟ್ಟೆಗಳನ್ನು ಕೊಡುವಂತೆ ವಿನಂತಿಸಿಕೊಂಡರು. ಹಿಂದೆ ಮುಂದೆ ತಮ್ಮ ಅಂಗಾಂಗಗಳ ಮೇಲೆ ಕೈಯಿಟ್ಟುಕೊಂಡರು. ಇದನ್ನು ಕಂಡು ಕೃಷ್ಣನಿಗೆ ತಾಪವಾಯಿತು. ಆತ ನಾರಿಯರ ಮಾನ ಮುಚ್ಚಿಕೊಳ್ಳಲು ಅವರಿಗೆ ಬಟ್ಟೆಗಳನ್ನು ಹಿಂತಿರುಗಿಸಿದನು.

ಗುಡ್ಡ ಗಾಡುಗಳಲ್ಲಿ ಗೋವುಗಳನ್ನು ಮೇಯಲು ಬಿಟ್ಟು ಕೃಷ್ಣ ಬಾಸುರಿಯನ್ನು ಊದುತ್ತ ಗೋವುಗಳನ್ನು ಕಾಯುತ್ತಿದ್ದ. ಅಲ್ಲಿರುವ (ಹಾಲು) ಕೆರೆಗೆ ಗೋವುಗಳಿಗೆ ನೀರುಣಿಸಲಿಕ್ಕೆ ಹೊರಟನು. ಕೆರೆಯಲ್ಲಿ ನೀರು ಕುಡಿಯಲಿಕ್ಕೆ ಗೋವಿಗಳನ್ನು ಬಿಟ್ಟನು. ಗೋವುಗಳು ನೀರು ಕುಡಿಯುತ್ತಿದ್ದ ಸಂದರ್ಭದಲ್ಲಿ ನಾಗಸರ್ಪವೊಂದು ಬಂದು ಗೋವುಗಳನ್ನು ಕಚ್ಚಿತು. ಇದನ್ನು ನೋಡಿದ್ದ ಬಾಲ ಗೋಪಾಲಕರು ಓಡುತ್ತ ಹೋಗಿ ಕೃಷ್ಣನಿಗೆ ವಿಷಯ ತಿಳಿಸಿದರು. ಕೃಷ್ಣ ಓಡುತ್ತ ಬಂದು, ಕೆರೆಯಲ್ಲಿಳಿದು ನಾಗಸರ್ಪದ ಹೆಡೆಯ ಮೇಲೆ ನಿಂತು ಜಗ್ಗಿದನು. ನಾಗಸರ್ಪದ ಹೆಡೆಯ ನಾಡಿ ಮುರಿದು ಬಿಟ್ಟನು. ಕೆರೆಯ ನೀರು ರಾಡಿ ಮಾಡಿ ಗೋವುಗಳಿಗೆ ನೀರು ಕುಡಿಸಿದನು. ಅರವತ್ತು ಸಾವಿರ ಗೋವುಗಳಿಗೆ ನಾಗಸರ್ಪದಿಂದ ರಕ್ಷಿಸಿದನು.

ಶ್ರಮಜೀವನದ ನಡುವೆಯೂ ಹಾಡು ಕುಣಿತಗಳಲ್ಲಿ ಲಂಬಾಣಿಗರು ಮೈಮರೆಯುತ್ತಾರೆ. ಹೆಂಗಸರ ಕುಣಿತಕ್ಕೆ ಇಷ್ಟೇ ಜನರಿರಬೇಕೆಂಬ ನಿಯಮವೇನು ಇಲ್ಲ. ಹತ್ತು ಹದಿನೈದರಿಂದ ಹಿಡಿದು ಮೂವತ್ತು ನಲವತ್ತು ಜನರವರೆಗೂ ಇರಬಹುದು. ಸಾಮಾನ್ಯವಾಗಿ ಕುಣಿತಕ್ಕೆ ಹೆಣ್ಣು ಮಕ್ಕಳು ನಿಲ್ಲುವುದು ವೃತ್ತಾಕಾರದಲ್ಲಿ. ಹಾಡಿಲ್ಲದೇ ಲಂಬಾಣಿ ಕುಣಿತವೇ ಇಲ್ಲ. ಮಧ್ಯದಲ್ಲಿ ನಿಂತುಕೊಂಡು ಗಂಡಸರೊಬ್ಬರು ಹಲಿಗೆ ಬಾರಿಸುತ್ತಾರೆ. ಆಮೇಲೆ ಹೆಣ್ಣು ಮಕ್ಕಳು ಪ್ರತಿಸೊಲ್ಲಿನ ನಂತರ ಪಲ್ಲವಿಯನ್ನು ಪುನರ್ ಹಾಡುತ್ತಾರೆ.

ಲಂಬಾಣೀಗರಲ್ಲಿಯೂ ಸಾಕಷ್ಟು ಗಾಧೆ, ಒಗಟು ಒಡಪುಗಳು ಪ್ರಚಲಿತದಲ್ಲಿರುವುದನ್ನು ಕಾಣಬಹುದು. ಉದಾ.

ಛೋರಿನ ಛೇಡಾರ ಹೂಂಸ’
ತಾಂಡರೀನ ಘೊಂಗಟೇರಿ ಹೂಂಸ
ಮಾಟೀನ ವಾತೇರ ಹೂಂಸ
ವೇಳ ಆವಗೀಕತೋ ಕಟಜಾಯ ತಾರಕೂಂಚ

ಅರ್ಥ : ಹುಡುಗಿಗೆ ಮದುವೆ ನೆಚ್ಚು, ಹೆಂಗಸಿಗೆ ಗಂಡನ ಹೆಚ್ಚು, ಗಂಡಸಿಗೆ ಮಾತಿನ ನೆಚ್ಚು, ಸಮಯ ಬಂದರೆ ಇಲ್ಲವಾದೀತು ನಿನ್ನ ಬಲ.

ಗಾತೇ ಜಾವ ಬಂಜಾರಾ (ಹಾಡುತ್ತ ಹೋಗುವ ಲಂಬಾಣಿಗಳು)

ಮೈ ಬಂಜಾರಾ ಲೇ ಇಕತಾರಾ
ಘುಮಾ ಭಾರತ ಸಾರಾ

ನಾನು ಬಂಜಾರಾ, ಇಕತಾರಾ (ವಾದ್ಯ) ತೆಗೆದುಕೊಂಡು, ಇಡೀ ಭಾರತವನ್ನು ಸುತ್ತಾಡುವೆ’ ಎಂದು ದೇಶದ ಬಗ್ಗೆ ಗುಣಗಾನ ಮಾಡುವ ಬಂಜಾರರನ್ನು ಅಸೇತು ಹಿಮಾಚಲದಾದ್ಯಂತ ಕಾಣಬಹುದಾಗಿದೆ.

ನಾಗರಿಕ ಸಮಾಜಗಳಿಂದ ದೂರವಾಗಿ ಕಾಡು-ಕಣಿವೆ, ಬೆಟ್ಟ – ಗುಡ್ಡ, ಹಳ್ಳ – ಕೊಳ್ಳಗಳಿದ್ದ ಎಡೆಯಲ್ಲಿ, ಬಂಜಾರಾಗಳ ತಾಂಡಾ ಇರುತ್ತದೆ. ಶಿಷ್ಟ ಸಂಸ್ಕೃತಿಯಿಂದ ಪ್ರತ್ಯೇಕವಾದ ಜೀವನವನ್ನು ನಡೆಸುತ್ತಾರೆ. ಅನ್ಯ ಸಂಸ್ಕೃತಿಯ ರಭಸಕ್ಕೆ ಒಳಗಾಗದೆ ತಮ್ಮ ಸಂಸ್ಕೃತಿಯ ಫಲೆಯುಳಿಕೆಗಳು, ಯಾಂತ್ರಿಕ ರಭಸಕ್ಕೆ ಸಿಲುಕದಂತೆ, ಕಾಪಾಡಿಕೊಂಡು ಬಂದವರು, ತಮ್ಮದೇ ಆದ ಭಾಷೆ, ಆಚಾರ – ವಿಚಾರ, ನಂಬಿಕೆ – ಸಂಪ್ರದಾಯ, ಉಡಿಗೆ -ತೊಡಿಗೆ, ಹಾಡು – ಕುಣಿತ, ದೇವರು – ದಿಂಡರು, ವಿಧಿ – ನಿಷೇಧ, ಮಾಟ – ಮಂತ್ರ, ಆಹಾರ ಪಾನೀಯ, ಸಾಮಾಜಿಕ ಕಟ್ಟುಪಾಡು ಮೊದಲಾದವುಗಳು ನಾಗರಿಕರ ಕಣ್ಣಿಗೆ ವಿಚಿತ್ರವೆಂಬಂತೆ ಕಂಡರು ಅದು ಸತ್ಯ. ಏಕೆಂದರೆ ಬಂಜಾರಾ ತಾಂಡಾಗಳಿರುವುದು ಕಾಡುಮೇಡುಗಳಲ್ಲಿ, ನಿಸರ್ಗದ ಮಡಿಲಲ್ಲಿ ಹುಟ್ಟಿ ಬೆಳೆದು ನಿಸರ್ಗದೊಡನೆ ಏಗುತ್ತಾ ಬದುಕುವ ಬಂಜಾರಾಗಳದ್ದು ಸಾಹಸಮಯ ಜೀವನ. ಕಾಡು, ಕಣಿವೆ ಬೆಟ್ಟಗಳ ಮಡಿಲಲ್ಲಿ ಹಚ್ಚ ಹಸುರಿನ ತಾಣ, ಸುತ್ತಲೂ ಗಿಡಮರಗಳು. ಆ ಗಿಡಮರಗಳಲ್ಲಿ ಪಕ್ಷಿಗಳ ಮಧುರವಾದ ಇಂಚರ. ಮೈ ಮನ ಪುಳಕಿಸುವಂಥ ವಾತಾವರಣ, ನಿಸರ್ಗದ ಮಡಿಲಿಗೆ ದನ – ಕುರಿಗಳನ್ನು ಬಿಟ್ಟು, ಬಂಜಾರಾ ಕೋಗಿಲೆಗಳು ತಮ್ಮ ಮಧುರ ಕಂಠದಿಂದ, ನಿಸರ್ಗವನ್ನು ಕುರಿತು ಹಾಡಿ ಮನದಣಿಯುತ್ತಾರೆ. ಸಹಜವಾಗಿಯೇ ಅವರ ಅಂತರಾಳದಿಂದ ಹೊರಹೊಮ್ಮುವ ಒಂದು ಆಡು.

ಏ ಬಾಯಿ ಕಾಳೋತೋ ಕಾಳೋ ಕೋಟ ಉತರೋಚ
ಏ ಬಾಯಿ ಯಮುನಾ ಜಮುನಾರಿ ಈಜ ಖವರೀಚ
ಏ ಬಾಯಿ ಏಕಲೋ ಈರೇಣಾ ಸಾಲಿನ ಗೇಚ
ಏ ಬಾಯಿ ಚಡು ಮಾಳಗಿನ ದೇಕು ಈರೇಣಾನ
ಏ ಬಾಯಿ ಮನ ಡರಲಾಗ, ಯಾಡಿನ ಘೋರಲಾಗ’

ಅರ್ಥ : ಗುಡುಗು ಸಿಡಲಿನಿಂದ ಕೂಡಿದ ಆರ್ಭಟದ ಮಳೆ ಬರುವ ಸಂಭವವಿದೆ. ಒಬ್ಬನೇ ಸಹೋದರ ಶಾಲಿಗೆ ಹೋಗಿದ್ದಾನೆ. ಸಹೋದರಿ ಮಾಳಿಗೆ ಹತ್ತಿ ಅವನ ಬರುವಿಕೆಯನ್ನು ವೀಕ್ಷಿಸುತ್ತಾಳೆ. ತನಗೆ ಚಿಂತೆ, ತಾಯಿಗೆ ಭಯ ಆಗುತ್ತಿದೆ.

ಬಂಜಾರಾ ಲೋಕ ಗೀತೆಗಳಲ್ಲಿ ಸಂಸ್ಕಾರಕ್ಕೆ ಸಂಬಂಧಪಟ್ಟ ಗೀತೆಗಳೇ ಅಧಿಕವಾಗಿವೆ. ಇವುಗಳಿಗೆ ’ತಾಂಡೇರ ಗೀತ’ (ತಾಂಡಾದ ಹಾಡುಗಳು) ಎಂದು ಕರೆಯಬಹುದು. ಉದಾ. ಜನನ, ನಾಮಕರಣ, (ಧಳವಾ ಧೋಕಾಯೇರೋ) ಮೈನೆರೆಯುವುದು, ನಿಶ್ಚಯಕಾರ್ಯ, ಮದುವೆ (ಸಾಡಿತಾಣೆರೋ), ಹವೇಲಿ, ಸೀಮಂತ, ಮರಣ ಗೀತೆ ಮುಂತಾದವುಗಳನ್ನು ಉದಾಹರಿಸಬಹುದು.

ಬಂಜಾರಾಗಳು ಕಾಡು-ಮೇಡುಗಳಲ್ಲಿ ಜೀವಿಸುವುದರಿಂದ ತಮ್ಮ ದಿನನಿತ್ಯದ ಆಗು ಹೋಗುಗಳಿಗೆ ತಮ್ಮದೇ ದೈವಗಳನ್ನು ತಮ್ಮದೇ ರೀತಿಯಲ್ಲಿ ಆರಾಧಿಸುತ್ತಾರೆ. ’ಸೇವಾಲಾಲ’ (ಕುಲದೇವರು) ಮರಿಯಮ್ಮಳ (ಶಕ್ತಿಯ ರೂಫ) ಗುಡಿ-ಗುಂಡಾರಗಳನ್ನು ಕಟ್ಟಿರುತ್ತಾರೆ. ಸೇವಾಲಾಲ ಸ್ತುತಿ ಗೌರವದ ಸಂಕೇತ. ಬೆಳಗಿನಿಂದ ರಾತ್ರಿ ಉಂಡು ಮಲಗುವವರೆಗೆ, ಪ್ರತಿಯೊಬ್ಬ ಬಂಜಾರಗಳ ಬಾಯಲ್ಲಿ ಗುನು, ಗುನು ಅನ್ನುವ ಒಂದು ಬಗೆಯ ನಿನಾದ ಅದುವೆ ಸೇವಾಲಾಲ ಸ್ತುತಿ (ಸೇವಾ ಸ್ತುತಿ) ಅವರ ಅಂತರಾಳದಿಂದ ಹೊರಹೊಮ್ಮುತ್ತದೆ. ಏಕೆಂದರೆ ಬಂಜಾರಾಗಳ ಪಾಡೆ ಹಾಡಾಗಿ ಪುಟಿಯುತ್ತದೆ.

ಇಡೀ ದಿನ ದುಡಿದು ಸಂಜೆಯ ಹೊತ್ತಿಗೆ ತಾಂಡಾ ಸೇರುವ ಬಂಜಾರಾಗಳಿಗೆ ಬೇಸರಿಕೆ ಎನ್ನುವುದೇ ಇಲ್ಲ. ಶ್ರಮ ಜೀವನದಲ್ಲಿ ಸಂತೃಪ್ತಿ ಕಂಡ ಇವರಿಗೆ ಹಾಡು ಕುಣಿತವೆಂದರೆ ನೀರು ಕುಡಿದಷ್ಟೇ ಸರಳ. ಇವರಲ್ಲಿ ಹಾಡು ಕುಣಿತ ಕಲಿಯದೇ ಇರುವವರು ವಿರಳ. ಸಂಜೆಯಾದೊಡನೆ ಗೂಡಿಗೆ ಮರಳುವ ಕೋಗಿಲೆಯಂತೆ ತಾಂಡಾ ಸೇರುತ್ತಾರೆ.

ಸೇವಾಲಾಲರ ಗುಡಿಯ ಮುಂದೆ ಜನ ಸೇರುತ್ತಾರೆ. ಗಂಡಸರು (ಭಜನಾ ಮೇಳದವರು) ತಮ್ಮ ವಾದ್ಯ ಪರಿಕರಗಳನ್ನು ತೆಗೆದುಕೊಂಡು ಹಾಡಲು ಆರಂಭಿಸುತ್ತಾರೆ. ಮೊದಲಿಗೆ ಸೇವಾಲಾಲ ಗುಣ ಸ್ತುತಿಯಿಂದ ಹಾಡು ಆರಂಭಿಸುತ್ತಾರೆ. ಮುಂದೆ ಬೇರೆ ಬೇರೆ ಹಾಡುಗಳನ್ನು ಹಾಡುತ್ತಾರೆ.

ಹಾಂಸಲೋ ದೇಯಾ ನಾಚೇನ ಜಾಂವುಚು
ಹಾಂಸಲೇರಿ ತಿತರಿ ಝಾಡಿಯಾಂವುಚು
ಮ ಡಿಗರಿಯಾಂವುಚು
ಭೂರಿಯಾ ದೇಯಾ ನಾಚೇನ ಚಾಂವುಚೂ
ಭೂರಿಯಾರಿ ರಮಣಾ ಝಾಡಿಯಾಂವುಚೂ
ಮ ಡಿಗರಿಯಾಂವುಚು
ಮಾಟಲಿ ದೇಯಾ ನಾಚೇನ ಜಾಂವುಚು
ಮಾಟಲಿರ ಘುಗರಾ ಝಾಡಿಯಾಂವುಚು
ಮ ಡಿಗರಿಯಾಂವುಚು

ಅರ್ಥ : ಹಾಂಸಲಿ (ಕೊರಳಹಾರ) ಕೊಡು ತಾಯಿ ಕುಣಿತಕ್ಕೆ ಹೋಗುವೆ, ಹಾಂಸಲಿಯ ಗೆಜ್ಜೆಗಳು ಬೀಳುವಂತೆ ಕುಣಿದು ಬರುವೆ. ಭೂರಿಯಾ (ನತ್ತು) ಕೊಡು ತಾಯಿ ಕುಣಿತಕ್ಕೆ ಹೋಗುವೆ. ಭೂರಿಯಾದ ಗುಂಡುಗಳು ಬೀಳುವಂತೆ ಕುಣಿದು ಬರುವೆ. ಮಾಟಲಿ (ನಾಣ್ಯಗಳಿಂದ ಮಾಡಿದ ಒಡವೆ) ಕೊಡು ತಾಯಿ ಕುಣಿತಕ್ಕೆ ಹೋಗುವೆ. ಮಾಟಲಿಯ ಗೆಜ್ಜೆಗಳು ಬೀಳುವಂತೆ ಕುಣಿದು ಬರುವೆ.

ಮೇಲಿನ ಲೋಕಗೀತೆಯಲ್ಲಿ ಯುವತಿ, ತನ್ನ ತಾಯಿಯ ಬಳಿಯಿಂದ ಬೇರೆ ಬೇರೆ ವಸ್ತು ಒಡವೆಗಳನ್ನು ಬೇಡುತ್ತಾಳೆ. ಅವುಗಳನ್ನು ಮೈಮೇಲೆ ಹಾಕಿಕೊಂಡು ಕುಣಿತದಲ್ಲಿ ಪಾಲ್ಗೊಂಡು, ತಂಡದ ಇತರ ಹೆಣ್ಣು ಮಕ್ಕಳಿಗಿಂತ ಭೇಷ್ ಅನ್ನುವ ಹಾಗೆ ಕುಣಿದು ಬರುವೆ ಎಂದು, ತನ್ನ ತಾಯಿಗೆ ಹೇಳುತ್ತಾಳೆ.

ಕುಣಿತಕ್ಕೆ ಸುತ್ತಕಟ್ಟಿ ನಿಂತರೆ ಭದ್ರಕೋಟೆಯಂತಿರುತ್ತದೆ. ಈ ಸುತ್ತು ಕುಣಿತ ಈ ಜನರ ಒಗ್ಗಟಿನ ಸಂಕೇತ. ಸುತ್ತು  ಸಾಲು ಇವರ ಸಂಸ್ಕೃತಿ – ಸಂಪ್ರದಾಯಗಳ ರಕ್ಷಣೆಗೆ ಹಾಕಿದ ಸುತ್ತ ಬೇಲಿ, ಆ ಬೇಲಿ ದಾಟುವುದು ಅಷ್ಟು ಸುಲಭದ ಮಾತಲ್ಲ. ಲಂಬಾಣಿ ಹೆಂಗಳೆಯರ ಕುಣಿತದ ರೀತಿ ಬಹು ಆಕರ್ಷಣೀಯ. ಕುಣಿತದಲ್ಲಿ ಕೈ ಕಾಲು ಮತ್ತು ಸೊಂಟಗಳಿಗೆ ಹೆಚ್ಚು ಕೆಲಸ. ಎರಡೂ ಕೈಗಳನ್ನು ಮೇಲಕ್ಕೆತ್ತಿ ಹಾಗೆಯೇ ಎಡಕ್ಕೂ, ಬಲಕ್ಕೂ ಮುಖ ತಿರಿಗಿಸುತ್ತಾ, ಒಂದೊಂದೆ ಕೈಯನ್ನು ನೇರವಾಗಿ ನೆಲದವರೆಗೆ ಇಳಿಸಿ ಮತ್ತೆ ಮೇಲಕ್ಕೆತ್ತುತ್ತಾರೆ. ಈ ಚಲನೆಗೆ ತಕ್ಕಂತೆ ಸೊಂಟವೂ ಬಳುಕುತ್ತಿರುತ್ತದೆ. ಕೈ ಚಲನೆಯೊಂದಿಗೆ ಹೆಜ್ಜೆಗಳನ್ನು ಹಿಂದಕ್ಕೆ ಮುಂದಕ್ಕೆ ಹಾಕುತ್ತಾ ಚಪ್ಪಾಳೆ ತಟ್ಟುತ್ತಾರೆ. (ಗೊ.ರೂ.ಚ. ೧೯೭೭ ೧೫೫)

ಲಂಬಾಣಿ ಮಹಿಳೆಯರಲ್ಲಿ ಆಚಾರ ವಿಚಾರಗಳು ನೂತನ ಮತ್ತು ವೈವಿಧ್ಯಪೂರ್ಣ ಆಗಿರುವುದರಿಂದ ಅವರ ಜಾನಪದೀಯ ವಿಷಯಗಳನ್ನು ಅಗೆಯುತ್ತ ಹೋದಂತೆ ಉಳಿಯುವುದೇ ಹೆಚ್ಚು.

ಗಾದೆ ಜನಪದ ವೇದ ಮನುಕುಲದ ನಂದಾದೀಪ ಮಾನವ ಬಾಳಿನ ಅನಂತ ಸಾಗರದಿಂದ ಆರಿಸಿ ತೆಗೆದ ಅಣಿಮುತ್ತು ಎಂದು ನಮ್ಮ ಜಾನಪದ ವಿದ್ವಾಂಸರು ಹೊಗಳಿದ್ದಾರೆ. ಲಂಬಾಣಿಗಳ ಜೀವನದ ಪ್ರತಿಯೊಂದು ಆಗುಹೋಗುಗಳಲ್ಲಿ ಗಾದೆ ಸಹಜವಾಗಿಯೇ ಹಾಸು ಹೊಕ್ಕಾಗಿರುವುದನ್ನು ಕಾಣಬಹುದು. ಇದು ಸಂಸ್ಕೃತಿಯ ದೃಷ್ಟಿಯಿಂದಲೂ ತುಂಬಾ ಮಹತ್ವ ಪಡೆದುಕೊಂಡಿದೆ.

’ಕರ್ಮವೇಗೋ ಖೋಟೋತೋ
ಭಗವಾನ ವೇಗೋ ರೂಟೋ
ಭಗವಾನ ವೇಗೋ ರೂಟೋತೋ
ಸಾಂಸೋ ವೇಗೋ ರೂಟೋ”

ಅರ್ಥ: ಹಣೆಬರಹ ಸುಮಾರಾಗಿದ್ದರೆ ಭಗವಂತನು ವೈರಿಯಾಗುತ್ತಾನೆಂದು, ಭಗವಂತನು ವೈರಿಯಾದರೆ ಮನುಷ್ಯ ಪ್ರಯತ್ನಗಳೆಲ್ಲ ವ್ಯರ್ಥವಾಗುತ್ತದೆಂಬುದು ಇಲ್ಲಿಯ ಧ್ವನಿತಾರ್ಥ. ಯಾವುದಕ್ಕೂ ಭಗವಂತನೇ ಕಾರಣ ಎಂಬುದನ್ನು ಇವರು ಕಂಡು ಕೊಂಡಿದ್ದಾರೆ.

ಒಗಟಿಗೆ ಲಂಬಾಣಿಗರು ಪೋಡೇರ ಸಾಕಿ, ಕಬದೆ ಎಂದೂ ಕರೆಯುತ್ತಾರೆ. ವ್ಯಂಗ್ಯವಾಗಿ ಚಿತ್ರಿಸುವ ಈ ಒಗಟುಗಳು ಲಂಬಾಣಿಗರ ವೈಚಾರಿಕ ಮನೋಭಾವನೆಯನ್ನು ಪ್ರತಿಬಿಂಬಿಸುತ್ತದೆ. ಉದಾ.

ತೀನ ಭಾಯಿ ಎಕ್ಕಜ ದಾಡೇಮ ಜಲಮಲಿದೇ’

ಅರ್ಥ: ಮೂರು ಸಹೋದರರು ಒಂದೇ ದಿನ ಜನ್ಮ ತಾಳಿದರು (ಹಾಲು, ಮೊಸರು, ಮಜ್ಜಿಗೆ) ಲಂಬಾಣಿ ಮಹಿಳೆಯರು ತಮಗಾದ ಪರಿಶ್ರಮ ಹಾಗೂ ನೋವನ್ನು ಮರೆಯಲಿಕ್ಕೆ ಒಗಟುಗಳನ್ನು ಹೇಳುತ್ತಾರೆ.

ಲಂಬಾಣಿ ಕುವರಿಯರು ತಮ್ಮ ಗೆಳತಿಯರೊಡನೆ ಕೂಡಿಕೊಂಡು ಬೇರೆ ಬೇರೆ ಸಂದರ್ಭ, ಸನ್ನಿವೇಶಗಳ ಹಿನ್ನೆಲೆಯಲ್ಲಿ ಶಿಶು ಗೀತೆಗಳನ್ನು ಹಾಡುತ್ತಾರೆ. ಉದಾ.

ಚಾಂದಾಮಾಮಾ ಚಂದಾಮಾಮಾ
ಕತ್ ಗೇತೋ ಹಾಟಗೇತೋ
ಕಾಂಯಿ ಲಾಯೋ ಝಿಗಲಾ ಟೋಪಿ
ಕೆರಸಾರು, ಬಾಳಾ ಸಾರು

ಅರ್ಥ: ಈ ಶಿಶು ಗೀತೆಯಲ್ಲಿ ಚಂದ್ರನನ್ನು ಕುರಿತ ವರ್ಣನೆ ಬರುತ್ತದೆ. ಚಂದಮಾಮಾ, ಚಂದಮಾಮಾ ಎಲ್ಲಿಗೆ ಹೋಗಿದ್ದೇ ಎಂದು ಕೇಳಿದಾಗ ಮತ್ತೊಬ್ಬ ಬಾಲಕ ಸಂತೆಗೆ ಹೋಗಿದ್ದೆ ಎನ್ನುತ್ತಾನೆ. ಸಂತೆಯಿಂದ ಏನು ತಂದಿರುವಿ ಎಂದಾಗ, ಅಂಗಿ ಟೊಪ್ಪಿಗೆ, ಯಾರ ಸಲುವಾಗಿ, ಮಗುವಿನ ಸಲುವಾಗಿ’ ಎನ್ನುತ್ತಾನೆ. ಬೆಳ್ಳನೆಯ ಬೆಳದಿಂಗಳ ನೋಟವನ್ನು ನೋಡಿ ಪುಟಾಣಿಗಳು ಚಂದ್ರನನ್ನು ಕುರಿತು ಹಾಡುವ ಹಲವಾರು ಶಿಶುಗೀತೆಗಳನ್ನು ಹಾಡಿ ಮನದಣಿಯುತ್ತಾರೆ.

ಲಂಬಾಣಿ ಯುವತಿಯರು ಮತ್ತು ಹೆಂಗಸರು ಈ ಬಗೆಯ ಅನೇಕ ಹಾಡು, ಕಥೆ, ಗಾದೆ, ಒಗಟು, ಒಡಪುಗಳನ್ನು ಸಂದರ್ಭಕ್ಕನುಸಾರವಾಗಿ ಬಳಸಿಕೊಳ್ಳುತ್ತಾರೆ. ಹಾಡುಗಳಲ್ಲಿ ಹಲವು ವಿಧಗಳು, ಬೀಸುವಾಗ, ಕುಟ್ಟುವಾಗ, ಕಸ ತೆಗೆಯುವಾಗ, ತೆನೆ ಕೊಯ್ಯುವಾಗ, ರಾಶಿ ಮಾಡುವಾಗ, ವಿವಾಹ ಸಂದರ್ಭ, ತಾಂಡಾದ ದೇವರ ಉತ್ಸವ ಮುಂತಾದ ಸಂದರ್ಭಗಳಲ್ಲಿ ಹಲವಾರು ಗೀತೆಗಳನ್ನು ಹಾಡುತ್ತಾರೆ.

ಲಂಬಾಣಿ ತಾಂಡಾದಲ್ಲಿ ಯಾವುದೇ ಕಾರ್ಯ ಮಾಡಿದರೆ ಸೇವಾಲಾಲನ ಸ್ತುತಿಯಿಂದ ಆರಂಭವಾಗುತ್ತದೆ. ಯಾಕೆಂದರೆ ತಾಂಡಾ ಸಂಸ್ಕೃತಿ ಇರುವ ಯಾವುದೇ ತಾಂಡಾದಲ್ಲೂ ಹೋದರೂ ಸೇವಾಲಾಲರ ಬಗ್ಗೆ ಇಂದಿಗೂ ಅಪಾರ ಭಕ್ತಿ, ಶ್ರದ್ಧೆ, ಇದೆ. ಮತ್ತು ಸೇವಾಲಾಲರನ್ನು ಅಪಾರ ಗೌರವದಿಂದ ಇಡೀ ಲಂಬಾಣಿ ಜನಾಂಗ ಪೂಜಿಸುತ್ತದೆ. ಆತನ ಮಹಿಮೆಗಳನ್ನು ಕುರಿತು ಹಾಡುತ್ತಾರೆ. ಇದು ಕೇವಲ ಗೋವುಗಳ (ಗೋಪಾಲ) ರಕ್ಷಕನಾಗಿದ್ದರಿಂದ ಮಾತ್ರ ಅಲ್ಲ. ದುಡಿಮೆಯ ಮಹಿಮೆಯನ್ನು ಆತ ಸ್ವತಃ ಆಚರಿಸಿ ತೋರಿಸಿ ಇಡೀ ಬಂಜಾರಾ ಜನಾಂಗವನ್ನು ರಕ್ಷಿಸಿದ. ಆದ್ದರಿಂದಲೇ ಯಾವುದೇ ಭಾಗದಲ್ಲಿಯ ’ತಾಂಡಾ’ ಜನರು ಇಂದಿಗೂ ಸೇವಾಲಾಲರನ್ನು ನಂಬುತ್ತಾರೆ, ಆರಾಧಿಸುತ್ತಾರೆ, ಸ್ತುತಿಸುತ್ತಾರೆ.

ಸೇವಾಭಾಯಾರ ನಾಮಲೀಯಾ ಲಾಲ
ಜೇರಪಚ ಹಮತೋ ನಾಚೀಯಾ ಲಾಲ

ಅರ್ಥ : ಸೇವಾ ಸಹೋದರನ ನಾಮಸ್ಮರಣೆ ಮಾಡುತ್ತೇವೆ, ಆಮೇಲೆ ನಾವು ಕುಣಿಯುತ್ತೇವೆ ಎಂದು ಮಹಿಳೆಯರು ಆರಾಧಿಸುತ್ತಾರೆ.

ಸೇವಾಲಾಲ ಒಬ್ಬ ಸಂತನಾಗಿ ಇಡೀ ಲಂಬಾಣಿ ಸಮಾಜಕ್ಕೆ ಒಬ್ಬ ಪ್ರಿಯ ’ಭಾಯಾ’ ಆಗಿದ್ದರು. ದುಡಿಯುವ ಮಾರ್ಗದ ಧರ್ಮ ಬೋಧನೆ ಮಾಡುತ್ತ ಈ ಸಮುದಾಯ ಪ್ರಗತಿ ಕಾಣುವಲ್ಲಿ ಶ್ರಮಿಸಿದರು. ವಿಶೇಷವಾಗಿ ಮಹಿಳೆಯರ ಬಗ್ಗೆ ಅಪಾರ ಪ್ರೀತಿ ಹೊಂದಿದವನು ಆದ್ದರಿಂದಲೇ ಮಹಿಳೆಯರು ಯಾವುದೇ ಹಾಡು ಹಾಡಿದರೂ ಮೊದಲು ಸೇವಾ ಸಹೋದರನ ಸ್ತುತಿ, ಗುಣಗಾನ ಮಾಡುತ್ತಾರೆ.

ಹಬ್ಬ ಹರಿದಿನಗಳು : ಲಂಬಾಣಿ ಹೆಣ್ಣುಮಕ್ಕಳಿಗೆ ಹಬ್ಬ ಹರಿದಿನಗಳೆಂದರೆ ಅತೀವ ಸಂತೋಷ. ಸಾಮಾನ್ಯವಾಗಿ ಇವರು ತೀಜ, ದಸರಾ, ದೀಪಾವಳಿ, ಹೋಳಿ, ಯುಗಾದಿ ಮುಂತಾದ ಹಬ್ಬಗಳನ್ನು ಬಲು ಸಡಗರದಿಂದ ಆಚರಿಸುತ್ತಾರೆ. ಯುವತಿಯರು ತೀಜ ಹಬ್ಬವನ್ನು ಶ್ರೀಕೃಷ್ಣನಿಗೆ ಪೂಜೆ ಸಲ್ಲಿಸುವ ಹಿನ್ನೆಲೆಯಲ್ಲಿ ಆಚರಿಸುತ್ತಾರೆ. ಗೋಧಿ ಸಸಿಗಳ ಪೂಜೆಗೂ ಶ್ರೀಕೃಷ್ಣನ ಪೂಜೆಗೂ ಇರುವ ಸಂಬಂಧವನ್ನು ತಳುಕು ಮಳಕು ಹಾಕಿ ಹೇಳುವ ಐತಿಹ್ಯ ಪ್ರಚಲಿತವಿದೆ. ನಿರಂತರವಾಗಿ ಹತ್ತು ದಿನಗಳವರೆಗೆ ಹಬ್ಬದ ಸಡಗರ ನಡೆಯುತ್ತದೆ. ಈ ಸಂದರ್ಭದಲ್ಲಿ ಯುವತಿಯರಿಂದ ಗೀತ ನರ್ತನಗಳು ನಡೆಯುತ್ತವೆ. ಕೊನೆಯ ದಿನ ಬೆಳಗಿನ ಜಾವ ತಾಂಡಾದ ನಾಯಕನ ಅಪ್ಪಣೆ ಪಡೆದು, ಕೆರೆ ಅಥವಾ ಹಳ್ಳಕ್ಕೆ ಹೋಗಿ ಗೋಧಿ ಸಸಿಗಳನ್ನು ವಿಸರ್ಜಿಸಿ ಬರುತ್ತಾರೆ. ಈ ಸಂದರ್ಭದಲ್ಲಿ ಯುವಕರು, ಯುವತಿಯರಿಗೆ ಹಾಸ್ಯ ನುಡಿಗಳನ್ನು ಹೇಳಿ ತಮಾಷೆ ಮಾಡುವುದುಂಟು. ಕೆಲವು ಯುವತಿಯರು  ಹಿರಿಯರಿಗೆ ಕೊರಳು ತಬ್ಬಿಕೊಂಡು ಅಳುವುದು ಕಂಡು ಬರುತ್ತದೆ.

ದೀಪಾವಳಿ ಅಮವಾಸ್ಯೆಯ ದಿನ ಲಕ್ಷ್ಮೀ ಪೂಜೆಯ ಮೊದಲು ಗೋಪೂಜೆ ಮಾಡುತ್ತಾರೆ. ಈ ಹಬ್ಬದಲ್ಲಿಯೂ ಯುವತಿಯರದ್ದೇ ಮೇಲುಗೈ. ಅಮವಾಸ್ಯೆಯ ರಾತ್ರಿ ಯುವತಿಯರು ಶೃಂಗರಿಸಿಕೊಂಡು ಹರಳೆಣ್ಣೆ ದೀಪದ ಆರತಿಗಳನ್ನು ಹಚ್ಚಿಕೊಂಡು ತಾಂಡಾದ ನಾಯಕನ ಮನೆಗೆ ಹೋಗಿ ಆರತಿ ಬೆಳಗುತ್ತಾರೆ. ಈ ಸಂದರ್ಭಧಲ್ಲಿ ತಾಂಡಾದ ಪ್ರತಿಯೊಂದು ಮನೆಯವರು ಯುವತಿಯರು ಆರತಿ ಬೆಳಗಿನ ನಂತರ ಸಾಲಾಗಿ ಎಲ್ಲರಿಗೂ ರೂಪಾಯಿ, ಎರಡು ರೂಪಾಯಿಗಳನ್ನು ಕಾಣಿಕೆಯಾಗಿ ಢಾಕಣಿ (ಪಣತಿ)ಯಲ್ಲಿ ಹಾಕುತ್ತಾರೆ. ಈ ಸಂದರ್ಭದಲ್ಲಿ ಯುವತಿಯರು ಮೇರಾ (ಆರತಿ) ಗೀತೆಗಳನ್ನು ಹಾಡುತ್ತಾರೆ. ಉದಾ.

ಬಾಪು ತೋನ ಮೇರಾ
ವರ್ಷೆ ದಾಡೇರ ಕೋಟ ದವಾಳಿ
ಯಾರಿ ತೋನ ಮೇರಾ
ವರ್ಷೆ ದಾಡೇರ ಕೋಟ ದವಾಳಿ
ಭೀಯಾ ತೋನ ಮೇರಾ
ವರ್ಷೆ ದಾಡೇರ ಕೋಟ ದವಾಳಿ

ಅರ್ಥ: ಆರತಿ ರೂಪದ ಮೇಲಿನ ಗೀತೆಯಲ್ಲಿ, ಯುವತಿಯರು ತಂದೆ, ತಾಯಿ ಸಹೋದರ ಮುಂತಾದವರ ಗುಣಗಾನ ಮಾಡಿರುವುದು ಕಂಡು ಬರುತ್ತದೆ.

ದೀಪಾವಳಿ ಹಬ್ಬದ ಸಂದರ್ಭದಲ್ಲಿಯೇ ಗೋವರ್ಧನ ಪೂಜೆ, ಬಲಿಪಾಡ್ಯ ಮುಂತಾದ ಆಚರಣೆಗಳನ್ನು ಮಾಡುತ್ತಾರೆ.

ಹೋಳಿ ಹಬ್ಬವನ್ನು ಹೆಂಗಸರು ಮತ್ತು ಗಂಡಸರು ಕೂಡಿಕೊಂಡು ಆಚರಿಸುವಂಥ ಹಬ್ಬ. ಈ ಸಂದರ್ಭದಲ್ಲಿ ಶೃಂಗಾರದ ಗೀತೆಗಳನ್ನು ಹಾಡುತ್ತಾರೆ. ಇದಕ್ಕೆ ಲೇಂಗಿ ಎಂದು ಕರೆಯುತ್ತಾರೆ. ಬಹುಶಃ ಲೈಂಗಿಕ ಶಬ್ದದಿಂದ ’ಲೇಂಗಿ’ ಎಂದಾಗಿರಬೇಕು. ಗೆರಣಿ (ಯುವತಿ) ಯ ಸೌಂದರ್ಯಕ್ಕೆ ಮಾರುಹೋಗಿರುವ ಗೇರಿಯಾ (ಯುವಕ)ನ ಮನಸ್ಸು ಅವಳಿಗಾಗಿ ಹಂಬಲಿಸುತ್ತದೆ. ಆ ಸಂದರ್ಭದಲ್ಲಿ ಗೆರಣಿಯನ್ನು ಕುರಿತು ಹಾಡುವ ಒಂದು ಲೇಂಗಿ ಹೀಗಿದೆ.

ಕುಂವಾರಿ ಛೋರಿರಿ ಕಾಚೇರಿ ಕಾಚಳಿ
ಕಾಚೇರಿ ಕಾಚಳಿರ ಉಪ್ಪರ
ಭಡತ ಮಾಚಳಿ ಅಂಬಾ ಲಳಕೇಜಾವ
ಕಾಂಯಿ ಚುಂಚಿ ಚಾಂಚಿ ಗೋಟಲಿರ
ಅಂಬಾ ಲಳಕೇಜಾವ;

ಅರ್ಥ: ಯುವತಿ ಕಾಜಿನ ಬೆಲ್ಲೆಗಳಿಂದ ಕೂಡಿದ ಕುಪ್ಪಸ (ಚೋಲಿ) ತೊಟ್ಟಿದ್ದಾಳೆ. ಕುಪ್ಪಸದ ಮೇಲಿರುವ ಕಾಜಿನ ಬಿಲ್ಲೆಗಳು ಮೀನಿನ ಹಾಗೆ ಫಳ ಫಳನೆ ಹೊಳೆಯುತ್ತಿದೆ. ಕುಪ್ಪಸದ ಒಳಗಡೆ ಇರುವ ಅವಳ ಮೊಲೆ, ಮಾವಿನ ಹಣ್ಣಿನಂತಿದೆ.

ಲಂಬಾಣಿಗರು ಹಾಡುವ ಲೇಂಗಿ ಹಾಡುಗಳು ಒಂದರ್ಥದಲ್ಲಿ ಮುಕ್ತಕಗಳೆಂದು ಕರೆಯಬಹುದು. ಈ ಮುಕ್ತಕಗಳು ತ್ರಿಪದಿ, ಚೌಪದಿ, ಷಟ್ಪದಿ ಮೊದಲಾದ ಯಾವುದೇ ರೂಪದಲ್ಲಿರಬಹುದು. ಈ ಸಂದರ್ಭದಲ್ಲಿ ಗಂಡಸರು ಹೆಂಗಸರು ಹಾಡಿ ಕುಣಿದು ಸಂತೋಷ ಪಡುತ್ತಾರೆ.

ಅಲೆಮಾರಿಗಳಾಗಿ ಜೀವನ ಆರಂಭಿಸಿದ ಲಂಬಾಣಿಗರು ಕಾಡು, ಮೇಡು, ಹಳ್ಳ ಕೊಳ್ಳಗಳಿದ್ದೆಡೆಯಲ್ಲಿ ನೆಲೆ ನಿಂತು ಬೆಳೆದು ಬಂದವರು. ಮೊದಲಿನಿಂದಲೂ ಇವರು ಬೇಟೆ ಪ್ರಿಯರು. ಗಂಡಸರು ಅಡವಿಗೆ ಹೋಗಿ ಬೇಟೆಯಾಡಿ ತಂದು ಮನೆಯಲ್ಲಿ ಹೆಂಗಸರಿಗೆ ಕೊಡುತ್ತಾರೆ. ಆಮೇಲೆ ಅಡುಗೆ ತಯಾರಿಸುವ ಕೆಲಸ ಹೆಂಗಸರಿಗೆ ಸೇರಿದ್ದು. ಹೆಂಗಸರು ಮಾಂಸಾಹಾರದ ಅಡುಗೆ ತಯಾರಿಸುವುದರಲ್ಲಿ ನಿಪುಣರು. ಕುರಿ, ಮೇಕೆಗಳ ತಲೆಯಿಂದ ತಯಾರಿಸುವ ’ಸಳೋಯಿ’ ಎಂಬ ವಿಶಿಷ್ಟ ಪದಾರ್ಥ ಬಲು ರುಚಿಯಾಗಿರುತ್ತದೆ. ಇದು ಲಂಬಾಣಿಗರನ್ನು ಬಿಟ್ಟು ಬೇರೆಯವರು ಯಾರು ತಯಾರಿಸುವುದಿಲ್ಲ. ಉಳಿದ ಮಾಂಸಾಹಾರದ ಅಡುಗೆಗಳನ್ನು ಲಂಬಾಣಿ ಮಹಿಳೆಯರು ಬಲು ಅಚ್ಚುಕಟ್ಟುತನದಿಂದ ತಯಾರಿಸುತ್ತಾರೆ. ಉದಾ. ಏಡಿಯ ಅಡುಗೆ, ಮೀನಿನ ಸಾರು, ಬುರ್ಲಿ, ಪಾರಿವಾಳ, ಕವುಜಗ, ಮೊಲ, ಜಿಂಕೆ ಮುಂತಾದ ಪ್ರಾಣಿ-ಪಕ್ಷಿಗಳ ಅಡುಗೆಯನ್ನು ತಯಾರಿಸುತ್ತಾರೆ. ಶಾಖಾಹಾರದ ಅಡುಗೆಯನ್ನು ತಯಾರಿಸುತ್ತಾರೆ. ಉದಾ. ಗೋಧಿಯಿಂದ ತಯಾರಿಸುವ ಲಾಪಸಿ, ಸಜ್ಜಕ ಸುಂವಾಳಿ (ಪುರಿ) ಹೋಳಿಗೆ, ಸಜ್ಜೆರೊಟ್ಟಿ ಮುಂತಾದವುಗಳು.

ಜನಪದ ನಂಬಿಕೆಗಳು : ಲಂಬಾಣಿ ಬುಡಕಟ್ಟಿನ ಮಹಿಳೆಯರಲ್ಲಿ ದಿನನಿತ್ಯದ ಕಾರ್ಯಗಳಲ್ಲಿ ಹಲವಾರು ನಂಬಿಕೆ, ಆಚರಣೆ, ಸಂಪ್ರದಾಯಗಳನ್ನು ಪಾಲಿಸಿಕೊಂಡು ಬಂದವರು. ಪೂರ್ವದಲ್ಲಿ ಲಂಬಾಣಿಗರು ಮಹತ್ವದ ಕೆಲಸ ಕಾರ್ಯಗಳನ್ನು ಮಾಡಬೇಕಾದ ಸಂದರ್ಭದಲ್ಲಿ, ನಂಬಿಕೆ, ಆಚರಣೆಗಳು ಅಡ್ಡ ಬಂದರೆ ಸಾರಾಸಗಟವಾಗಿ ಒಳ್ಳೆಯ ಕಾರ್ಯಗಳನ್ನು ಮಾಡದೆ ಮುಂದೂಡುತ್ತಿದ್ದರು (ಇಂದು ಕೆಲವು ಬದಲಾವಣೆಗಳಾಗಿವೆ) ಈ ಬುಡಕಟ್ಟಿನಲ್ಲಿಯೂ ಅನೇಕ ಬಗೆಯ ನಂಬಿಕೆಗಳಿವೆ. ಉದಾ. ಧಾರ್ಮಿಕ ನಂಬಿಕೆಗಳು, ಹೆಣ್ಣಿನ ಜೀವನ ಚಕ್ರಕ್ಕೆ ಸಂಬಂಧಿಸಿದ ನಂಬಿಕೆಗಳು, ವಿಶೇಷ ನಂಬಿಕೆಗಳು, ಕೌಟುಂಬಿಕ ನಂಬಿಕೆಗಳು, ಮೂಢ ನಂಬಿಕೆಗಳು ಮುಂತಾದವುಗಳು. ಉದಾಹರಣೆಗೆ ಕೆಲವೊಂದನ್ನು ಇಲ್ಲಿ ಹೇಳಲಾಗಿದೆ.

೧. ಹೆಣ್ಣು ಮಗಳು ಗುಡಿ (ದೇವಳ)ಯ ಗರ್ಭಗುಡಿ ಪ್ರವೇಶಿಸುವಂತಿಲ್ಲ.

೨. ಗಂಡನಿಗೆ ದೇವರೆಂದು (ಧಣಿನ) ಕಾಣಬೇಕು.

೩. ಋತುಮತಿಯಾದಾಗ (ಛೇಟಿ ವೇಜಾವಜನಾ) ಅಡಿಗೆ ಮಾಡಬಾರದು.

೪.ಕನ್ಯೆ ನೋಡಲು ಹೋದಾಗ ವಿಧವೆ (ರಂಡಾರಿ ಬಾಯಿ) ಯ ಮುಖದರ್ಶನ ಆಗಕೂಡದು.

೫. ಗರ್ಭಿಣಿಯರು (ಆಸಾತಿ ಬಾಯಿ) ಹೆಣ ನೋಡಬಾರದು.

೬. ಬಂಜೆಯ (ವಾಂಜಡಿ) ಕೈಯಲ್ಲಿ ಹಸಗೂರು ಕೊಡಬಾರದು.

೭. ಲಂಬಾಣಿ ಮಹಿಳೆಯರು ಮಳೆರಾಯನ (ಗುರ್ಜಿ) ಹಾಡುಗಳನ್ನು ಹಾಡಿದರೆ ಮಳೆ ಬರುತ್ತದೆ.

೮. ಬಂಜೆಯ (ವಾಂಜಡಿ) ಬದುಕು ಬದುಕಲ್ಲ.

೯. ಬಂಜೆ ಮಂಗಲ (ವಾಯಾ-ನಾತ್ರಾ) ಕಾರ್ಯಗಳಲ್ಲಿ ಭಾಗವಹಿಸುವಂತಿಲ್ಲ.

೧೦. ಬಾಣಂತಿ (ಜಣಮಲಜಕೋ) ಮನೆಯ ಬಚ್ಚಲಿನಲ್ಲಿ ಸ್ನಾನ ಮಾಡಬಾರದು.

೧೧. ಹೊಕ್ಕಳ (ಸೊಂಟಿರ) ಬಳ್ಳಿಯನ್ನು ನಾಯಿ, ಕಾಗೆ ಮುಂತಾದವುಗಳು ಎಳೆದು ತಿಂದರೆ ತಾಯಿ ಮೊಲೆ ಹಾಲು ಬತ್ತಿಹೋಗುವುದು.

೧೨. ಬಾಣಂತಿ ಮಲಗುವ ಹಾಸಿಗೆಯ ಕೆಳಗಡೆ ಅಥವಾ ಕಾಲಬಳಿ ಕಸಬರಿಗೆ ಕುಡಗೋಲು ಇಟ್ಟಿರುತ್ತಾರೆ.

೧೩. ಬಾಣಂತಿ ಮಲಮೂತ್ರ ವಿಸರ್ಜನೆಗೆ (ಝಾಡ ಝಟಗೋ) ಹೋದಾಗ ಕೈಯಲ್ಲಿ ಕುಡಗೋಲು ಅಥವಾ ಖುರಪಿ ಒಯ್ಯುತ್ತಾಳೆ.

೧೪. ಹೆಣ್ಣುಮಕ್ಕಳು (ಮಸಾಣಃ) ಸ್ಮಶಾನಕ್ಕೆ ಹೋಗುವಂತಿಲ್ಲ.

೧೫. ಹೆಣದ (ಮರದಾ) ಕಾಲಿಗೆ ದಾರಿಖರ್ಚಿಗೆಂದು ಐದಾಣೆ ಕಟ್ಟುತ್ತಾರೆ. (ಇಂದು ಐದಾಣೆ ಬದಲಿಗೆ ಒಂದು ರೂಪಾಯಿ ಕಟ್ಟುತ್ತಾರೆ)

ಮೇಲೆ ಉಲ್ಲೇಖಿಸಿದ ಕೆಲವು ನಂಬಿಕೆಗಳನ್ನು ಗಮನಿಸಿದಾಗ, ಲಂಬಾಣಿ ಬುಡಕಟ್ಟಿನ ಪ್ರತಿಯೊಂದು ಆಗುಹೋಗುಗಳಲ್ಲಿ ಪುರುಷರದ್ದೇ ಮೇಲುಗೈ ಇರುವುದು ಸ್ಪಷ್ಟವಾಗುತ್ತದೆ. ಮಹಿಳೆ ಪುರುಷರಿಗೆ ಅಧೀನಳಾಗಿ ಬಾಳಬೇಕಾಗುತ್ತದೆ.