ಯಾರಿಗೂ ತಿಳಿಯದು ನಮ್ಮೂರು
ಸುಖಸಾರವೇ ಆಗಿದೆ ನಮ್ಮೂರು
ಆರರ ನೆಲೆಯ ನಮ್ಮೂರು ಹದಿಮೂರರ
ಮೇಲಿದೆ ನಮ್ಮೂರು || ಯಾರಿಗೂ ||

ನಾಥರ ಕೊಡದು ನಮ್ಮೂರು | ಬಂಧು ನಾಥರಿಗದು
ನೆಲೆ ನಮ್ಮೂರು | ಮಾತಿಗೆ ಸಿಲುಕದು ನಮ್ಮೂರು
ಯಮದೂತರ ಮಾರಿಯು ನಮ್ಮೂರು || ಯಾರಿಗೂ ||

ಲಕ್ಷಕೆ ಸಿಲುಕದು ನಮ್ಮೂರು
ಬಹು ಲಕ್ಷಣವಾಗಿದೆ ನಮ್ಮೂರು | ಸಾಕ್ಷಿಯ |
ಮೀರಿದ ನಮ್ಮೂರು | ಈ ಖುಷಿಯೊಳಡಗಿದೆ
ನಮ್ಮೂರು || ಯಾರಿಗೂ ||

ಕಳದುಳಿಯುವುದೆ ನಮ್ಮೂರು ದುರ್ಮರವಿಲ್ಲದ
ನಮ್ಮೂರು | ನೆಲೆ ನಮ್ಮೂರು | ಕೆಳಮೇಲಿಲ್ಲವು
ನಮ್ಮೂರು | ಬಲುದಳ ಥಳಿಸುತಲಿದೆ ನಮ್ಮೂರು || ಯಾರಿಗೂ ||

ಕಣ್ಣಿಗೆ ಕಾಣದು ನಮ್ಮೂರು ಬಹು ಬಣ್ಣಗಳಾಗಿದೆ
ನಮ್ಮೂರು ಬಿನ್ನವ ಸುಡುವುದು ನಮ್ಮೂರು |
ಸುರ ಕಿನ್ನರರಿಯದ ನಮ್ಮೂರು || ಯಾರಿಗೂ ||

ತೋರುವುದಲ್ಲಿ ನಮ್ಮೂರು ಪುನೆ ತೋರದ
ನಿಜ ಪದ ನಮ್ಮೂರು ಪಾರವ ಮೀರಿದೆ ನಮ್ಮೂರು
ನಿಜ ಧೀರರ ಗುಡಿಯು ನಮ್ಮೂರು || ಯಾರಿಗೂ ||

ಸಂಕಟವಿಲ್ಲದ ನಮ್ಮೂರು |
ಆತಂಕವ ಮೀರಿದೆ ನಮ್ಮೂರು ||
ಸುಖವ ಕೇಳದು ನಮ್ಮೂರು |
ಗುರುಶಂಕರ ನೆರಮನೆ ನಮ್ಮೂರು || ಯಾರಿಗೂ ||