ಜನನ : ೨೯-೧೦-೧೯೩೯ ರಂದು ಬೆಳ್ತಂಗಡಿಯ ಹತ್ಯಡ್ಕ ಗ್ರಾಮದಲ್ಲಿ

ಮನೆತನ : ವೈದಿಕ ಸಂಪ್ರದಾಯದ ಮನೆತನ. ತಂದೆ ಕೃಷ್ಣ ಗಣೇಶ್ ಮೇಲ್ಹಣಕರ್., ತಾಯಿ ರುಕ್ಮೀನಿಬಾಯಿ. ಮಗ ದತ್ತಾತ್ರೇಯ ಮೇಲ್ಹಣಕರ್ ಹಿಂದುಸ್ತಾನಿ ಸಂಗೀತ ಗಾಯಕ ಕೀರ್ತನ ಕಲೆಯಲ್ಲಿ ಬಾಲ ಪ್ರತಿಭೆಯಾಗಿ ಮೆರೆದಿದ್ದಾನೆ.

ಶಿಕ್ಷಣ : ಮೊದಲಿಗೆ ಗಮಕಿ ರಾಮಕೃಷ್ಣ ಶಾಸ್ತ್ರಿಗಳಲ್ಲಿ ಕೀರ್ತನಾಭ್ಯಾಸ. ಅವರ ಪುತ್ರ ಹೆಚ್. ಆರ್. ಸೀತಾರಾಮಶಾಸ್ತ್ರಿಗಳಲ್ಲಿ ವಿಧ್ಯುಕ್ತವಾಗಿ ಸಂಗೀತಾಭ್ಯಾಸ. ಅನಂತರ ಸಂತ ಭದ್ರಗಿರಿ ಅಚ್ಯುತದಾಸರು ಹಾಗೂ ಸತತ ಭದ್ರಗಿರಿ ಕೇಶವದಾಸರಲ್ಲಿ ಉನ್ನತ ಶಿಕ್ಷಣ ಮಾರ್ಗದರ್ಶನ. ಜೊತೆ ಜೊತೆಯಲ್ಲೇ ಸಂಸ್ಕೃತ ವೇದಾಧ್ಯಯನ. ಹಿಂದಿ, ಕನ್ನಡ, ಮರಾಠಿ ಭಾಷೆಗಳಲ್ಲಿ ಪ್ರಭುತ್ವ.

ಕ್ಷೇತ್ರ ಸಾಧನೆ : ೧೯೬೩ ರಲ್ಲಿ ಮಲ್ಲೇಶ್ವರದ ಶ್ರೀಮತಿ ಸರಸ್ವತಿ ರಾಮಚಂದ್ರರಾಯರ ಮನೆಯಲ್ಲಿ ಸಂತ ಭದ್ರಗಿರಿ ಅಚ್ಯುತದಾಸರ ಸಮ್ಮುಖದಲ್ಲಿ ’ಭಕ್ತ ಅಂಬರೀಷ’ ಕಥೆಯೊಂದಿಗೆ ಮೊದಲ ಕಾರ್ಯಕ್ರಮ. ಕೀರ್ತನ ರಂಗ ಪ್ರವೇಶ. ಅನಂತರ ೧೯೬೪ ರಲ್ಲಿ ನಡೆದ ಅಖಿಲ ಕರ್ನಾಟಕ ಕೀರ್ತನಕಾರರ ಸಮ್ಮೇಳನದಲ್ಲಿ ದಿಗ್ಗಜರ ಸಮ್ಮುಖದಲ್ಲಿ ಕಥಾನಿರೂಪಣೆ. ಮುಂದೆ ಸಾರ್ವಜನಿಕ ಕ್ಷೇತ್ರದಲ್ಲಿ ಅವ್ಯಾಹತವಾಗಿ ಕಾರ್ಯಕ್ರಮಗಳು. ರಾಜ್ಯಾದ್ಯಂತ ಪ್ರವಾಸ ಮಾಡಿರುವುದೇ ಅಲ್ಲದೆ ಗೋವಾ, ಹೈದರಾಬಾದ್, ಮಹಾರಾಷ್ಟ್ರ ಕೇರಳ ರಾಜ್ಯಗಳಲ್ಲೂ ಪ್ರವಾಸ ಮಾಡಿ ಕಥಾ ಕೀರ್ತನ ನಡೆಸಿದ್ದಾರೆ. ದಾಸಾಶ್ರಮದ ಮೂಲಕ ನಡೆಸಲ್ಪಡುವ ಹರಿದಾಸರ ಸಮ್ಮೇಳನ, ಕೀರ್ತನ ಶಿಕ್ಷಣ ಶಿಬಿರಗಳ ಸೂತ್ರಧಾರರಾಗಿ, ಯಶಸ್ವಿಯಗಿ ಕಾರ್ಯನಿರ್ವಹಣೆ ಮಾಡಿರುತ್ತಾರೆ. ಕರ್ನಾಟಕ ಕೀರ್ತನ ಕಲಾ ಪರಿಷತ್ತಿನ ಪ್ರಧಾನ ಕಾರ್ಯದರ್ಶಿಯಾಗಿ, ದಾಸಾಶ್ರಮದ ಮೂಲಕ ನಡೆಸುವ ಕೀರ್ತನ ಮಹಾ ವಿದ್ಯಾಲಯದ ಪ್ರಾಚಾರ್ಯರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.

ದಾಸಾಶ್ರಮ ಹೊರತರುತ್ತಿರುವ ’ದಾಸವಾಣಿ’ ಮಾಸಪತ್ರಿಕೆಯ ಸಹ ಸಂಪಾದಕರಾಗಿ ಅದರಲ್ಲಿ ಅನೇಕ ವೈಚಾರಿಕ, ಆಧ್ಯಾತ್ಮಿಕ ಲೇಖನಗಳನ್ನು ಬರೆದು ಪ್ರಕಟಿಸಿದ್ದಾರೆ. ಹರಿಕಥಾ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ರೀತಿಯಲ್ಲಿ ’ಕಥಾ ಕೀರ್ತನಗಳು’ ’ಶ್ರೀ ಪುರಂದರ ದಾಸರು’, ’ಕೀರ್ತನ ಸುಮನ ಹಾರ’, ’ಕೀರ್ತನ ಕಲೆ’ ಎಂಬ ಗ್ರಂಥಗಳನ್ನು ಬರೆದಿದ್ದಾರೆ. ಗೋರಕಪುರದ ’ಗೀತಾ ಪ್ರಕಾಶನ ಸಂಸ್ಥೆಯಲ್ಲಿ ಕನ್ನಡ ಅನುವಾದಕರಾಗಿ ಕೆಲಸ ಮಾಡುತ್ತಿದ್ದಾರೆ. ಕರ್ನಾಟಕ ಸಂಗೀತ – ನೃತ್ಯ ಅಕಾಡೆಮಿಯ ಸದಸ್ಯರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಯಕ್ಷಗಾನ – ನಾಟಕಗಳಲ್ಲೂ ಪರಿಶ್ರಮವಿದೆ.

ಪ್ರಶಸ್ತಿ – ಪುರಸ್ಕಾರಗಳು : ೧೯೬೪ ರ ಅಖಿಲ ಕರ್ನಾಟಕ ಕೀರ್ತನ ಸಮ್ಮೇಳನದಲ್ಲಿ ’ಕೀರ್ತನ ಚತುರ’, ಅನೇಕ ಮಠಾಧೀಶರುಗಳಿಂದ, ವಿಶ್ವಶಾಂತಿ ಆಶ್ರಮದ ವತಿಯಿಂದ ಸನ್ಮಾನಿಸಲ್ಪಟ್ಟಿದ್ದಾರೆ.

ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ತನ್ನ ೧೯೯೯-೨೦೦೦ರ ಸಾಲಿನ ’ಕರ್ನಾಟಕ ಕಲಾಶ್ರೀ’ ಪ್ರಶಸ್ತಿ ನೀಡಿ ಗೌರವಿಸಿದೆ.