ಲಕ್ಷ್ಮಣ ಕಾಶೀನಾಥ ಕಿರ್ಲೋಸ್ಕರ್

ಬೆಳಗಿನ ಪೂಜೆಯನ್ನು ಮುಗಿಸಿ ಕಾಶೀನಾಥ ಪಂತರು ಭಗವದ್ಗೀತೆಯ ಪಾರಾಯಣ ಮಾಡುತ್ತಿದ್ದಾರೆ. ಅವರ ಮಗ ಲಖೂ ಬಂದು, “ಅಣ್ಣಾ, ನಾಳೆಯಿಂದ ನಾನು ಶಾಲೆಗೆ  ಹೋಗುವುದಿಲ್ಲ” ಎಂದನು.

ಕಾಶೀನಾಥ ಪಂತರು ಒಂದು ನಿಮಿಷ ಅವಕ್ಕಾದರು. ಆದರೂ ಶಾಂತಿಪ್ರಿಯರಾದ, ವೇದಾಂತಿಗಳಾದ ಅವರು ಹಡುಗನ ಮಾತಿಗೆ ಕೋಪಿಸಿಕೊಳ್ಳದೆ, “ಓದುವುದನ್ನು ಬಿಟ್ಟು ಏನು ಮಾಡುವೆ?” ಎಂದು ಕೇಳಿದರು.

“ನಾನು ಮುಂಬಯಿಗೆ ಹೋಗಿ ಚಿತ್ರಕಲೆಯನ್ನು ಮತ್ತು ಯಂತ್ರಗಳನ್ನು ಅಭ್ಯಾಸ ಮಾಡುತ್ತೇನೆ” ಲಖೂ ಧೈರ್ಯವಾಗಿ ಉತ್ತರ ಹೇಳಿದ.

ಕಾಶೀನಾಥ ಪಂತರು ಕೆಲವು ನಿಮಿಷಗಳ ಕಾಲ ಆಲೋಚಿಸಿದರು. “ಮಗೂ, ನನಗೆ ಬರುವ ಹನ್ನೆರಡು ರೂಪಾಯಿ ಸಂಬಳದಲ್ಲಿ ನಿನ್ನನ್ನು ಮುಂಬಯಿಗೆ ಕಳುಹಿಸಿ ಓದಿಸುವಷ್ಟು ಚೈತನ್ಯ ನನಗಿಲ್ಲ. ನಿನ್ನ ಕಾಲಮೇಲೆ ನೀನು ನಿಲ್ಲುವ ಶಕ್ತಿ ಇದ್ದರೆ ನನ್ನ ಅಡ್ಡಿ ಏನೂ ಇಲ್ಲ” ಎಂದರು.

“ಹಣದ ಚಿಂತೆ ನೀವು ಮಾಡಬೇಡಿ ಅಣ್ಣಾ, ನಿಮ್ಮ ಆಶೀರ್ವಾದ ಒಂದಿದ್ದರೆ ಸಾಕು!”

 

ನಾನು ಮುಂಬಯಿಯಲ್ಲಿ ಚಿತ್ರಕಲೆಯನ್ನೂ ಯಂತ್ರಗಳನ್ನೂ ಅಭ್ಯಾಸ ಮಾಡುತ್ತೇನೆ.’

“ಸರಿ, ಹಾಗಾದರೆ ಹೋಗಿ ಬಾ, ನನ್ನ ಆಶೀರ್ವಾದದ ಬಲವಿದೆ. ಎಲ್ಲಾ ಕೆಲಸಗಳಿಗೂ ಮೂಲ ಆರೋಗ್ಯ. ಅದನ್ನು ಚೆನ್ನಾಗಿ ಕಾಪಾಡಿಕೋ! ಆರೋಗ್ಯ ತಿಳಿಸಿ ಆಗಾಗ ಮನೆಗೆ ಕಾಗದ ಬರೆಯುವುದನ್ನು ಮಾತ್ರ ಮರೆಯಬೇಡ.”

ಆಗ ಲಖೂಗೆ ವಯಸ್ಸು ಹದಿನೈದು ವರ್ಷ. ಲಖೂ ಮುಂದೆ ಯಂತ್ರಯೋಗಿ ಲಕ್ಷ್ಮಣರಾವ್ ಕಿರ್ಲೋಸ್ಕರ್ ಎಂದು ಪ್ರಸಿದ್ಧನಾದ.

ಡ್ರಾಯಿಂಗ್ ಶಿಕ್ಷಕರು

ಕಿರ್ಲೋಸ್ಕರ್ ಲಕ್ಷ್ಮಣರಾಯರ ಪೂರ್ವಜರು ಕೊಂಕಣದ ಮಾಲವಣಾ ತಾಲೂಕಿನ ಕಿರ್ಲೋನಿ ಎಂಬ ಹಳ್ಳಿಯಿಂದ ಬಂದವರಾದುದರಿಂದ ಈ ಮನೆತನಕ್ಕೆ ’ಕಿರ್ಲೋಸ್ಕರ್’ ಎಂದು ಹೆಸರು ಬಂದಿತು.

ಮಹಾರಾಷ್ಟ್ರ ಮತ್ತು ಕರ್ನಾಟಕದಲ್ಲಿ ಕಿರ್ಲೋಸ್ಕರ್ ಎಂಬ ಹೆಸರು ಮನೆಮಾತಾಗಿದೆ. ಈ ಮನೆತನದ ಕೈಗಾರಿಕೋದ್ಯಮ ಗಳು ಸಾವಿರಾರು ಮಂದಿಗೆ ಜೀವನೋಪಾಯ ಒದಗಿಸಿವೆ.

ಲಕ್ಷ್ಮಣರಾಯರು ೧೮೬೯ ನೇ ಜೂನ್ ೩೦ನೇ ತಾರೀಖು ಧಾರವಾಡ ಜಿಲ್ಲೆಯ ಗುರ್ಲಹೊಸೂರು (ಗುರುಗಳ ಹೊಸ ಊರು) ಎಂಬಲ್ಲಿ ಜನಿಸಿದರು. ತಂದೆ ಕಾಶೀನಾಥ ಪಂಡಿತರು. ತಾಯಿ ಅನ್ನಪೂರ್ಣಬಾಯಿ. ಲಕ್ಷ್ಮಣರಾಯರು ನಾಲ್ಕು ವರ್ಷದವರಾಗಿದ್ದಾಗ ತಾಯಿ ತೀರಿಕೊಂಡರು.

ತಂದೆಯ ಆಶ್ರಯದಲ್ಲಿ ಬೆಳೆದು ಲಕ್ಷ್ಮಣರಾಯರು ಧಾರವಾಡದ ಹನುಮನ ಗುಡಿಯಲ್ಲಿ ಭಾವೂಪಂತರೆಂಬ ಉಪಾಧ್ಯಾಯರಲ್ಲಿ ತಮ್ಮ ಬಾಲ್ಯದ ವಿದ್ಯಾಭ್ಯಾಸವನ್ನು ಮಾಡಿದರು. ಅನಂತರ ತಂದೆಯ ಆಶೀರ್ವಾದ ಪಡೆದು ಮುಂಬಯಿಗೆ ಪ್ರಯಾಣ ಮಾಡಿದರು. ಅಲ್ಲಿ ಅವರ ಅಣ್ಣ ವಾಸುದೇವರೊಡನೆ ವಾಸ. ಅವರ ಅಭಿಲಾಷೆಯಂತೆ ಜೆ.ಜೆ.ಕಲಾಶಾಲೆಗೆ ಸೇರಿ ಚಿತ್ರಾಭ್ಯಾಸವನ್ನು ಮಾಡತೊಡಗಿದರು. ಲಕ್ಷ್ಮಣರಾಯರ ರೇಖಾ ಚಿತ್ರವನ್ನು-ಡ್ರಾಯಿಂಗ್ ಅನ್ನು-ನೋಡಿ ಮೆಚ್ಚಿಕೊಂಡ ವಿಕ್ಟೋರಿಯಾ ಜ್ಯೂಬಿಲಿ ಇನ್‌ಸ್ಟಿಟ್ಯೂಟಿನ ಪ್ರಾಧ್ಯಾಪಕರು ತಿಂಗಳಿಗೆ ೩೫ ರೂ. ಸಂಬಳದಂತೆ ರಾಯರನ್ನು ‘ಡ್ರಾಯಿಂಗ್’ ಉಪಾಧ್ಯಾಯರಾಗಿ ನೇಮಿಸಿ ಕೊಂಡರು.

ಬೈಸಿಕಲ್‌ಗಳ ವ್ಯವಹಾರ

ರಾಯರು ಬಿಡುವಿನ ವೇಳೆಯನ್ನು ವ್ಯರ್ಥವಾಗಿ ಕಳೆಯದೆ ಇನ್‌ಸ್ಟಿಟ್ಯೂಟಿಗೆ ಸೇರಿದ ಕಾರ್ಯಾಗಾರದಲ್ಲಿ ಯಂತ್ರಗಳನ್ನು ನೋಡುತ್ತಾ ಯಂತ್ರಗಳ ವಿಷಯಗಳನ್ನೆಲ್ಲಾ ವಿವರವಾಗಿ ತಿಳಿದು ಕೊಂಡರು. ಕೆಟ್ಟ ಯಂತ್ರಗಳನ್ನು ಸರಿಪಡಿಸುವುದರಲ್ಲಿ ನಿಸ್ಸೀಮರಾದರು.

ಆಗ ಒಂದು ಪ್ರಸಂಗ ಜರುಗಿತು. ಅದು ಮುಂದೆ ಅವರ ಜೀವನವನ್ನೇ ಮಾರ್ಪಡಿಸಿದ ಸುಸಂಧಿ.

ಈಗ ನಾವು ಉಪಯೋಗಿಸುವ ಬೈಸಿಕಲ್ ಆಗಿನ ಕಾಲದಲ್ಲಿ ಇರಲಿಲ್ಲ.

ಒಂದು ದಿವಸ ಲಕ್ಷ್ಮಣರಾಯರು ಬೀದಿಯಲ್ಲಿ ಹೋಗುತ್ತಿದ್ದಾಗ ಅವರ ಮುಂದೆ ಒಬ್ಬ ವ್ಯಕ್ತಿಯು ಮುಂದೆ ಒಂದು ದೊಡ್ಡ ಚಕ್ರ, ಹಿಂದೆ ಒಂದು ಸಣ್ಣ ಚಕ್ರವಿದ್ದ ವಾಹನದ ಮೇಲೆ ಕುಳಿತು ವೇಗವಾಗಿ ಹೋಗುತ್ತಿರುವುದನ್ನು ಕಂಡರು.

ಆಗ ಮುಂಬಯಿ ಈಗಿನಷ್ಟು ದೊಡ್ಡ ಪಟ್ಟಣವಾಗಿರಲಿಲ್ಲ. ಕುದುರೆಗಳು ಎಳೆಯುತ್ತಿದ್ದ ಟ್ರಾಮುಗಳಿದ್ದವು. ವಿದ್ಯುಚ್ಛಕ್ತಿ ಇಲ್ಲ. ಬೀದಿಯಲ್ಲಿ ಗ್ಯಾಸ್ ದೀಪಗಳು. ಅಂತಹ ದಿನಗಳಲ್ಲಿ ಈ ವಿಚಿತ್ರ ವಾಹನವನ್ನು ನೋಡಿದ ರಾಯರಿಗೆ ತುಂಬಾ ಕುತೂಹಲವಾಯಿತು. ಈ ಗಾಡಿಯನ್ನು ಮಾಡುವುದು ಹೇಗೆ? ಅದರಲ್ಲಿ ಎಷ್ಟು ಭಾಗಗಳು? ಅವನ್ನು ಜೋಡಿಸುವುದು ಹೇಗೆ? ಹೀಗೆ ಹಲವು ಪ್ರಶ್ನೆಗಳು ಅವರ ಕುತೂಹಲವನ್ನು ಕೆದಕಿದವು.

ಲಕ್ಷ್ಮಣರಾಯರು ಅಲ್ಲಿ ಇಲ್ಲಿ ವಿಚಾರಿಸಿ, ಗಾಡಿಯ ವಿವರಗಳು ಸರಿಯಾಗಿ ತಿಳಿಯಬೇಕಾದರೆ ಇಂಗ್ಲೆಂಡಿನಲ್ಲಿ ಅವನ್ನು ತಯಾರು ಮಾಡುವವರಿಂದಲೇ ಎಂದು ತಿಳಿದು ಕೊಂಡರು. ಕಷ್ಟಪಟ್ಟು ಅವರ ವಿಳಾಸ ಪತ್ತೆ ಮಾಡಿದರು. ಅವರಿಗೆ ಕಾಗದ ಬರೆದರು. ಬಿಡಿ ಭಾಗಗಳನ್ನು ತಾವೇ ತಂದರು, ಜೋಡಿಸಿ ನೋಡಿದರು. ತಪ್ಪಾದುದನ್ನು ತಿದ್ದಿಕೊಂಡರು. ಕೆಲವೇ ದಿನಗಳಲ್ಲಿ ಈ ಗಾಡಿಯನ್ನು ತಯಾರಿಸುವ ರೀತಿಯನ್ನು ಸಂಪೂರ್ಣವಾಗಿ ತಿಳಿದು ಕೊಂಡರು.

ಮುಂದೆ ಈ ಬೈಸಿಕಲ್ ಬಡವರ ವಾಹನವಾಗುತ್ತದೆ ಎಂಬುದನ್ನು ಅವರು ಆಗಲೇ ಕಂಡುಕೊಂಡರು.

೧೮೮೮ ರಲ್ಲಿ ’ಕಿರ್ಲೋಸ್ಕರ್ ಬಂಧುಗಳು’ ಎಂಬ ಸಂಸ್ಥೆ ಯನ್ನು ಸ್ಥಾಪಿಸಿದರು. ಹೊರದೇಶದಿಂದ ಬೈಸಿಕಲ್‌ಗಳನ್ನು ತರಿಸಿ ವ್ಯವಹಾರವನ್ನು ಪ್ರಾರಂಭಿಸಿದರು. ದಿನೇದಿನೇ ಈ ವ್ಯವಹಾರ ಅಭಿವೃದ್ಧಿ ಬಂದಿತು.

ಆಗಿನ ಕಾಲದಲ್ಲಿ ಬೆಳಗಾವಿಯಲ್ಲಿ ಇಂಗ್ಲಿಷರು ಸೈನ್ಯವನ್ನು ಇಟ್ಟಿದ್ದರು. ಅಲ್ಲಿ ಸೈನಿಕರಿಗೆ ಸೈಕಲ್ ಕಲಿಯುವ ಆಸೆ ಬಹಳವಾಗಿತ್ತು. ಇದನ್ನು ಅರಿತ ಲಕ್ಷ್ಮಣರಾಯರು ತಮ್ಮ ಅಣ್ಣನ ಸಹಾಯದಿಂದ ಬೆಳಗಾವಿಯಲ್ಲಿ ಒಂದು ಸೈಕಲ್ ಅಂಗಡಿಯನ್ನು ಪ್ರಾರಂಭಿಸಿದರು. ಮಹಾರಾಷ್ಟ್ರದಲ್ಲೂ ಕರ್ನಾಟಕದಲ್ಲೂ ಹೆಸರುವಾಸಿಯಾದರು.

ಯಂತ್ರಗಳ ಜಾದೂಗಾರ

ಲಕ್ಷ್ಮಣರಾಯರಿಗೆ ಶಾಲಾ ಶಿಕ್ಷಣ ದೊರೆತದ್ದು ಹೆಚ್ಚಿಲ್ಲ. ಆದರೆ ಹೊಸ ವಿಷಯಗಳನ್ನು ತಿಳಿದುಕೊಳ್ಳುವ ಕುತೂಹಲ ಅಪಾರ. ಯಂತ್ರಗಳ ವಿಷಯವಾಗಿ ಅಮೆರಿಕ ಮತ್ತು ಇಂಗ್ಲೆಂಡಿನಿಂದ ಪುಸ್ತಕಗಳನ್ನು ತರಿಸಿ ಓದುತ್ತಿದ್ದರು. ರಾಯರು ಕಲಿಸುತ್ತಿದ್ದ ಸಂಸ್ಥೆಯಲ್ಲಿ ಒಮ್ಮೆ ಆವಿಯ ವಿಚಾರವಾಗಿ ಕಲಿಸುತ್ತಿದ್ದ ಪ್ರಾಧ್ಯಾಪಕರು ರಜಾ ಪಡೆದಿದ್ದರು. ಆಗ ಮುಖ್ಯೋಪಾಧ್ಯಾಯರು ಲಕ್ಷ್ಮಣರಾಯರನ್ನು ಕರೆಸಿ ಕೇಳಿದಾಗ ಅವರು ಪಾಠ ಹೇಳಲು ಕೂಡಲೇ ಒಪ್ಪಿದರು. ಚಿತ್ರಗಳನ್ನು ಬರೆದು ಆವಿಯ ವಿಷಯವನ್ನು ಹೇಳಲು ಮೊದಲು ಮಾಡಿದರು. ಎಲ್ಲರಿಗೂ ಆಶ್ಚರ್ಯ.

ಅಮೆರಿಕದಲ್ಲಿ ಥಾಮಸ್ ಅಲ್ವ ಎಡಿಸನ್ ಎಂಬಾತ ಗ್ರಾಮಾಫೋನ್ ಕಂಡುಹಿಡಿದನು. ರಾಯರು ಕೂಡಲೇ ಅದನ್ನು ತರಿಸಿ ಪ್ರಯೋಗ ಮಾಡಿದರು. ಯಂತ್ರವನ್ನು ನೋಡಲು ಸಾವಿರಾರು ಜನ ಸೇರುತ್ತಿದ್ದರಂತೆ.

ಒಂದು ಸಲ ಒಂದು ಮೆಡಿಕಲ್ ಕಾಲೇಜಿನ ಸೂಕ್ಷ್ಮದರ್ಶಕ ಯಂತ್ರ ಕೆಟ್ಟುಹೋಯಿತು. ಡಾ. ರಾವ್ ಎಂಬುವರು ಅದನ್ನು ಲಕ್ಷ್ಮಣರಾಯರ ಬಳಿಗೆ ತಂದರು. ರಾಯರು ಯಂತ್ರವನ್ನು ಪರೀಕ್ಷಿಸಿ ನೋಡಿ ಕೂಡಲೇ ಅದನ್ನು ಸರಿಪಡಿಸಿಕೊಟ್ಟರು. ಅಂದಿನಿಂದ ರಾಯರಿಗೂ ಡಾ. ರಾವ್‌ರವರಿಗೂ ಸ್ನೇಹ ಬೆಳೆಯಿತು.

ಗುಲಾಮಗಿರಿ ಬೇಡ

ಮುಂಬಯಿಯಲ್ಲಿ ಇನ್‌ಸ್ಟಿಟ್ಯೂಟ್‌ನಲ್ಲಿ ಕೆಲಸ ಸಿಕ್ಕಿದನಂತರ ಲಕ್ಷ್ಮಣರಾಯರು ಮದುವೆಯಾದರು. ರಾಯರ ಧರ್ಮಪತ್ನಿ ಬೆಳಗಾವಿ ಜಿಲ್ಲೆಯ ಅಸೋಗಾ ಎನ್ನುವ ಹಳ್ಳಿಯವರು. ಆಕೆಯ ಹೆಸರು ರಾಧಾಬಾಯಿ. ಗಂಡ, ಹೆಂಡಿರು ಅನ್ಯೋನ್ಯವಾಗಿದ್ದು, ಬಂದ ಸಂಬಳದಲ್ಲಿಯೇ ರಾಧಾಬಾಯಿಯವರು ಅಚ್ಚುಕಟ್ಟಾಗಿ ಸಂಸಾರ ಮಾಡುತ್ತಿದ್ದರು.

ರಾಯರು ಕೆಲಸ ಮಾಡುತ್ತಿದ್ದ ಸಂಸ್ಥೆಯ ಮೇಲಧಿಕಾರಿ ಕೆಲಸ ಬಿಟ್ಟ. ಎಲ್ಲಾ ವಿಧದಲ್ಲಿಯೂ ಆ ಕೆಲಸಕ್ಕೆ ರಾಯರು ಅರ್ಹರಾಗಿದ್ದರೂ ಸಹ, ಆಗ ತಾನೇ ಹೊಸದಾಗಿ ಬಂದ ಪ್ರಿನ್ಸಿಪಾಲರು ತಮ್ಮ ದೇಶದ ಒಬ್ಬ ಇಂಗ್ಲಿಷರವನನ್ನು ಆ ಹುದ್ದೆಗೆ ನೇಮಿಸಿಕೊಂಡರು. ಮತ್ತು ಭಾರತದ ಜನರ ವಿಷಯವಾಗಿ ತುಚ್ಛ ಭಾವನೆಯನ್ನು ವ್ಯಕ್ತಪಡಿಸಿದರು.

ಸ್ವಾಭಿಮಾನಿಗಳಾದ, ದೇಶಭಕ್ತರಾದ ರಾಯರು ತಮ್ಮ ಕೆಲಸವನ್ನು ಬಿಡಲು ರಾಜೀನಾಮೆ ಪತ್ರವನ್ನು ಸಲ್ಲಿಸಿದರು. ‘ಸರ್ಕಾರದ ಕೆಲಸ ಸಿಕ್ಕುವುದು ಕಷ್ಟ. ರಾಜಿನಾಮೆ ಪತ್ರವನ್ನು ಹಿಂದಕ್ಕೆ ಪಡೆಯಿರಿ’ ಎಂದು ರಾಯರಿಗೆ ಬಹಳ ಜನರು ಹಿತವಚನವನ್ನು ಹೇಳಲು ಬಂದರು. ಆದರೆ ಲಕ್ಷ್ಮಣರಾಯರು, ‘ಇತರರ ಹಂಗಿನಲ್ಲಿ ಗುಲಾಮನಾಗಿ ಬಾಳುವುದಕ್ಕಿಂತ ಉಪವಾಸವಿದ್ದರೂ ಸ್ವತಂತ್ರವಾಗಿ ಬಾಳುವುದೇ ಲೇಸು’ ಎಂದು ದೃಢ ಮನಸ್ಸು ಮಾಡಿ ಸಂಸ್ಥೆಯನ್ನು ಬಿಟ್ಟರು.

ಕೆಲಸ ಬಿಟ್ಟನಂತರ ಲಕ್ಷ್ಮಣರಾಯರು ಸ್ವಂತ ಉದ್ಯಮಗಳ ಕಡೆಗೆ ಗಮನ ಹರಿಸಿದರು.

ಒಂದಲ್ಲ ಒಂದು ಉದ್ಯಮ

ಭಾರತವನ್ನು ಇಂಗ್ಲಿಷರು ಆಳುತ್ತಿದ್ದ ಕಾಲ ಅದು. ಅವರು ನಮ್ಮ ದೇಶದ ಸಂಪತ್ತನ್ನು ಸೂರೆಗೊಂಡು ಸ್ವದೇಶಕ್ಕೆ ಸಾಗಿಸುತ್ತಿದ್ದರು. ಇಲ್ಲಿ ಕಚ್ಚಾ ವಸ್ತುಗಳನ್ನು ಕಡಿಮೆ ಬೆಲೆಗೆ ಕೊಂಡು, ಸಿದ್ಧವಾದ ಮಾಲನ್ನು ನಮ್ಮ ಜನಗಳಿಗೇ ಮಾರಿ ಲಾಭಗಳಿಸುತ್ತಿದ್ದರು. ನಮ್ಮ ಜನಕ್ಕೆ ಪರದೇಶದ ವಸ್ತುಗಳ ಮೇಲೆ ವ್ಯಾಮೋಹ, ಸ್ವದೇಶೀ ವಸ್ತುಗಳ ಮೇಲೆ ತಾತ್ಸಾರ. ದೇಶಾಭಿಮಾನ ಕೆಲವರಿಗೆ ಕುಗ್ಗಿತ್ತು. ಇಂಗ್ಲಿಷರ ಕೈಕೆಳಗೆ ದುಡಿಯಲು ಹಲವರು ಸಿದ್ಧರಿದ್ದರು. ಸ್ವತಂತ್ರ ಉದ್ಯಮವನ್ನು ಮಾಡಲು ಕೈಹಾಕಬೇಕೆಂಬುದನ್ನು ಮರೆತಿದ್ದರು.

ಇಂತಹ ಕಠಿಣ ಪರಿಸ್ಥಿತಿಯಲ್ಲಿ ರಾಯರು ಕಷ್ಟಪಟ್ಟು ಕೆಲವರಿಂದ ಸಾಲ ಪಡೆದು ಅಲ್ಪ ಬಂಡವಾಳದಿಂದ ಅಂಗಿಗಳಿಗೆ ಬೇಕಾಗುವ ಗುಂಡಿಗಳನ್ನು ತಯಾರಿಸಲು ಯೋಚಿಸಿ, ಅದಕ್ಕೆ ಬೇಕಾಗುವ ಯಂತ್ರಸಾಮಾಗ್ರಿಗಳ ಬಗ್ಗೆ ಜ್ಞಾನ ಸಂಪಾದಿಸಿ, ಉದ್ಯಮವನ್ನು ಆರಂಭಿಸಿದರು.

ಸ್ವದೇಶೀ ವಸ್ತುಗಳಿಗೆ ಬೇಡಿಕೆ ಇಲ್ಲದೆ ರಾಯರ ಯತ್ನ ವಿಫಲವಾಯಿತು. ರಾಯರು ಧೈರ್ಯಗೆಡದೆ ವೈದ್ಯರಿಗೆ, ಔಷಧಿ ತಯಾರಿಸುವವರಿಗೆ ಗುಳಿಗೆಗಳನ್ನು ಹಾಕಲು ಬೇಕಾಗುವ ಕಾಗದದ ಪೆಟ್ಟಿಗೆಗಳನ್ನು ಮಾಡಲು ಪ್ರಾರಂಭಿಸಿದರು.

ಆದರೆ ಬಂಡವಾಳ ಸಾಲಲಿಲ್ಲ. ಹಣ ಎಲ್ಲಿಂದ ತರುವುದು? ರಾಯರಿಗೆ ನಿರಾಸೆಯಾಯಿತು. ರಾಯರ ಪತ್ನಿ ರಾಧಾಬಾಯಿ ಯವರು ತಮ್ಮ ಬಂಗಾರದ ಬಳೆಗಳನ್ನು ಕೈಗಳಿಂದ ತೆಗೆದುಕೊಟ್ಟು, “ಇದನ್ನು ಮಾರಿ ಬಂಡವಾಳ ಮಾಡಿಕೊಳ್ಳಿ” ಎಂದರು. ರಾಯರ ಉದ್ಯಮ ಚೆನ್ನಾಗಿ ನಡೆಯತೊಡಗಿತು.

ಆದರೆ ೧೮೯೬ ರಲ್ಲಿ ಮುಂಬಯಿಯಲ್ಲಿ ಪ್ಲೇಗು ಬಂತು. ಸಾವಿರಾರು ಜನ ಸತ್ತರು. ರಾಧಾಬಾಯಿಯವರಿಗೂ ಪ್ಲೇಗು ತಗುಲಿತು. ರಾಯರ ಸ್ನೇಹಿತರಾದ ಡಾ. ರಾವ್ ಅವರ ಚಿಕಿತ್ಸೆಯಿಂದ ರಾಧಾಬಾಯಿಯವರು ಗುಣಮುಖರಾದರು.

ಪ್ಲೇಗಿನ ಹಾವಳಿಯಿಂದ ರಾಯರು ಕಾರ್ಖಾನೆಯನ್ನು ಮುಚ್ಚಬೇಕಾಯಿತು. ರಾಯರು ಬೆಳಗಾವಿಯಲ್ಲಿ ಸ್ವಂತ ಉದ್ಯಮವನ್ನು ಪ್ರಾರಂಭಿಸಿದರು.

ಹೊಸ ಯಂತ್ರಗಳು

ಬೆಳಗಾವಿಯಲ್ಲಿ ಬೈಸಿಕಲ್ ವ್ಯಾಪಾರ ಚೆನ್ನಾಗಿ ನಡೆಯ ತೊಡಗಿತು.

ಅತ್ಯಂತ ಮೇಧಾವಿಗಳಾದವರಿಗೆ ಜೀವನದಲ್ಲಿ ತೃಪ್ತಿ ಇರುವುದಿಲ್ಲವಂತೆ. ಈ ಮಾತು ಲಕ್ಷ್ಮಣರಾಯರಿಗೆ ಅನ್ವಯಿಸುತ್ತದೆ. ಆ ಕಾಲದಲ್ಲಿ ಬೆಳಗಾವಿಯಲ್ಲಿ ನಲ್ಲಿಗಳು ಇರಲಿಲ್ಲ. ಬಾವಿಯಿಂದ ನೀರು ಸೇದುತ್ತಿದ್ದರು. ಅಮೆರಿಕದಲ್ಲಿ ವ್ಯವಸಾಯಕ್ಕೆ ಗಾಳಿಯಿಂದ ಚಲಿಸುವ ಪವನ ಚಕ್ಕಿಯ ಮೂಲಕ ನೀರು ಹಾಯಿಸುವರೆಂದು ಲಕ್ಷ್ಮಣರಾಯರಿಗೆ ತಿಳಿದು ಬಂತು. ಅಮೆರಿಕದ ಸ್ಯಾಮ್‌ಸನ್ ಕಂಪೆನಿಯಿಂದ ಪವನ ಚಕ್ಕಿಗಳನ್ನು ತರಿಸಿ, ಬೆಳಗಾವಿಯ ಅನೇಕ ಶ್ರೀಮಂತರ ಮನೆಯ ಬಾವಿಗಳಿಗೆ ಜೋಡಿಸಿ ನೀರು ಬರುವಂತೆ ಮಾಡಿದರು.

ಈ ಸಮಾಚಾರ ಈಚಲ ಕರಂಜಿಯ ಅಧಿಪತಿಗಳಾದ ಬಾಬಾಸಾಹೇಬ ಘೋರ್ಪಡೆಯವರಿಗೂ ತಿಳಿಯಿತು. ಆಗ ಈಚಲ ಕರಂಜಿಯಲ್ಲಿ ನೀರಿಗೆ ತೊಂದರೆಯಾಗಿತ್ತು. ಬಾಬಾ ಸಾಹೇಬರ ಆದೇಶದಂತೆ ರಾಯರು ಈಚಲ ಕರಂಜಿಯ ಬಳಿಯ ನದಿಗೆ ಪವನ ಚಕ್ಕಿಗಳನ್ನು ಜೋಡಿಸಿ ಊರಿಗೆಲ್ಲಾ ನೀರು ಸರಬರಾಜು ಆಗುವಂತೆ ಮಾಡಿದರು. ಆಗ ಅಲ್ಲಿನ ಜನರಿಗೆ ಆದ ಆನಂದ ಹೇಳತೀರದು. ಇದರಿಂದ ರಾಯರ ಖ್ಯಾತಿ ದೇಶದಲ್ಲೆಲ್ಲಾ ಹರಡಿತು.

ಇದೇ ವೇಳೆಗೆ ಬೆಳಗಾವಿಯಲ್ಲಿ ಪ್ಲೇಗು ತಲೆದೋರಿದ್ದ ರಿಂದ, ರಾಯರು ಕೆಲವು ಸ್ನೇಹಿತರೊಡನೆ ಊರಾಚೆ ಗುಡಿಸಿಲುಗಳನ್ನು ಕಟ್ಟಿಕೊಂಡು ಅಲ್ಲೇ ಎರಡು ಬಾವಿಗಳನ್ನು ತೋಡಿ ಅವಕ್ಕೆ ಪವನ ಚಕ್ಕಿಗಳನ್ನು ಅಳವಡಿಸಿ ನೀರಿನ ಸೌಕರ್ಯ ಮಾಡಿಕೊಂಡರು.

ಲಕ್ಷ್ಮಣರಾಯರು ಅಮೆರಿಕದ ಮಾಸಪತ್ರಿಕೆಯೊಂದನ್ನು ಓದುತ್ತಿದ್ದಾಗ ಮೇವು ಕತ್ತರಿಸುವ ಯಂತ್ರದ ಚಿತ್ರ ಕಣ್ಣಿಗೆ ಬಿದ್ದಿತು. ನಮ್ಮ ದೇಶದ ದನಗಳ ಮೇವಿಗೆ ಮೇವು ಕತ್ತರಿಸುವ ಯಂತ್ರ ಅನುಕೂಲವಾಗುವುದೇ ಎಂದು ಯೋಚಿಸಿದರು. ಕೆಲವೇ ದಿನಗಳಲ್ಲಿ ತಮ್ಮ ಬೈಸಿಕಲ್ ಅಂಗಡಿಯಲ್ಲಿದ್ದ ಯಂತ್ರಗಳ ಸಹಾಯದಿಂದ ಮೇವು ಕತ್ತರಿಸುವ ಉತ್ತಮ ಯಂತ್ರವನ್ನು ಸ್ವಂತವಾಗಿ ತಯಾರಿಸಿದರು. ಮೊದಮೊದಲು ರೈತರು ಈ ಯಂತ್ರವನ್ನು ಬಳಸಲು ಒಪ್ಪಲಿಲ್ಲ. ದಿನಕ್ರಮೇಣ ಮೇವು ಕತ್ತರಿಸುವ ಯಂತ್ರಕ್ಕೆ ಬೇಡಿಕೆಗಳು ಬರತೊಡಗಿದವು.

ಔಂಧ್ ಸಂಸ್ಥಾನದ ಮಹಾರಾಜರು, ಅಲ್ಲಿನ ಯಮಾಯಿ ದೇವಸ್ಥಾನದ ಇದಿರಿಗೆ ದೊಡ್ಡ ಮಂಟಪವನ್ನು ಕಟ್ಟಿಸಬೇಕೆಂದು ರಾಯರಿಗೆ ಸೂಚಿಸಿ ಅದಕ್ಕೆ ಬೇಕಾಗುವ ಹಣವನ್ನು ಒದಗಿಸಿದರು. ಲಕ್ಷ್ಮಣರಾಯರು ಮೂರು ವರ್ಷಗಳ ಕಾಲ ಔಂಧ್‌ನಲ್ಲಿ ನೆಲಸಿ ಭವ್ಯವಾದ ದೊಡ್ಡ ಮಂಟಪವನ್ನು ಕಟ್ಟಿದರು. ದೇವಸ್ಥಾನದ ಕಳಶಕ್ಕೆ ವಿದ್ಯುಚ್ಛಕ್ತಿಯ ಸಹಾಯದಿಂದ ಬೆಳ್ಳಿ ಕಲಾಯಿಯನ್ನು ಮಾಡಿ ಮಹಾರಾಜರ ವಿಶ್ವಾಸಕ್ಕೆ ಪಾತ್ರರಾದರು.

ನೇಗಿಲುಗಳು

ಭಾರತ ಕೃಷಿ ಪ್ರಧಾನವಾದ ದೇಶ. ಉತ್ತು, ಬಿತ್ತಿ ಬೆಳೆದ ಫಸಲು ಚೆನ್ನಾಗಿ ಬಂದರೆ ಆಹಾರ ಸಮಸ್ಯೆ ನಿವಾರಣೆ ಯಾಗುತ್ತದೆ. ಆದರೆ ರೈತರು ಉಪಯೋಗಿಸುತ್ತಿದ್ದುದು ಹಿಂದಿನ ಕಾಲದ ಸಾಧನಗಳನ್ನು. ಭೂಮಿಯನ್ನು ಆಳವಾಗಿ ಉಳಲು ಬೇಕಾಗುವ ಕಬ್ಬಿಣದ ನೇಗಿಲುಗಳನ್ನು ತಾವು ತಯಾರಿಸಬೇಕು ಎಂದು ಲಕ್ಷ್ಮಣರಾಯರು ಯೋಚಿಸಿದರು. ಪರದೇಶದಿಂದ ಕೆಲವು ಕಬ್ಬಿಣದ ನೇಗಿಲುಗಳನ್ನು ತರಿಸಿ, ಆ ವಿಚಾರವಾಗಿ ಚೆನ್ನಾಗಿ ಅಧ್ಯಯನ ಮಾಡಿದರು. ನೇಗಿಲುಗಳ ಬಗ್ಗೆ ಪೂರ್ಣ ಜ್ಞಾನವನ್ನು ಪಡೆದಿದ್ದ ಮಲ್ಹಾರ ಲಿಂಗೋ ಕುಲಕರ್ಣಿ ಎಂಬುವರೊಡನೆ ಆಳವಾಗಿ ಚರ್ಚೆಮಾಡಿದರು, ಕಬ್ಬಿಣದ ನೇಗಿಲನ್ನು ಮಾಡಬೇಕೆಂದು ಸಂಕಲ್ಪ ಮಾಡಿದರು. ಕಬ್ಬಿಣದ ನೇಗಿಲನ್ನು ಮಾಡಬೇಕಾದರೆ ಒಂದು ‘ಫೌಂಡ್ರಿ’ (ಎರಕ ಹೊಯ್ಯುವ ಕಾರ್ಖಾನೆ) ಬೇಕಾಯಿತು. ಬೈಸಿಕಲ್‌ನ ವ್ಯಾಪಾರವನ್ನು ಮಾರಿ ಆ ಹಣದಿಂದ ಸಣ್ಣ ಫೌಂಡ್ರಿಯನ್ನು ಕಟ್ಟಿದರು.

ಮೊದಲು ಕೆಲವು ಅಡ್ಡಿ ಆತಂಕಗಳು ಬಂದರೂ ರಾಯರು ಎದೆಗೆಡಲಿಲ್ಲ. ತಮ್ಮ ಮನಸ್ಸಿಗೆ ಒಪ್ಪಿಗೆಯಾಗುವ ಕಬ್ಬಿಣದ ನೇಗಿಲುಗಳನ್ನು ಸಿದ್ಧಪಡಿಸಿದರು.

ನೇಗಿಲುಗಳೇನೋ ಸಿದ್ಧವಾದವು. ಆದರೆ ಜನ ಜಾಗೃತಿ ಯಾಗದೆ ಏನು ಪ್ರಯೋಜನ? ರೈತರು ಹಳೆಯ ಪದ್ಧತಿಯನ್ನು ಬಿಡಲು ಸಿದ್ಧರಿರಲಿಲ್ಲ. ಕಬ್ಬಿಣದ ಈ ಹೊಸ ನೇಗಿಲ ಬಗ್ಗೆ ರೈತರು ಅಪಪ್ರಚಾರ ಮಾಡಿದರು.

ಸರ್ಕಾರದವರು ಈ ನೇಗಿಲನ್ನು ಒಪ್ಪಿಕೊಂಡರೆ ವ್ಯಾಪಾರ ಕುದುರುವುದೆಂದು ಲಕ್ಷ್ಮಣರಾಯರು ಕೆಲವು ನೇಗಿಲುಗಳನ್ನು ವ್ಯವಸಾಯ ಇಲಾಖೆಗೆ ಕಳುಹಿಸಿದರು. ವ್ಯವಸಾಯ ಖಾತೆಯ ಮುಖ್ಯಾಧಿಕಾರಿಗಳು ಇಂಗ್ಲಿಷರು. ಅವರು ವಿದೇಶದ ನೇಗಿಲಿಗೆ ಪ್ರೋತ್ಸಾಹಿಸುತ್ತಿದ್ದರು. ಲಕ್ಷ್ಮಣರಾಯರು ತಯಾರಿಸಿದ ದೇಶೀ ನೇಗಿಲು ಬೇಗ ಸವೆದುಹೋಗುತ್ತದೆ ಎಂದು ಅಧಿಕಾರಿಗಳು ವಾದಿಸಿದರು.

ರಾಯರು ಕೆಲವು ವಿದೇಶೀ ನೇಗಿಲುಗಳನ್ನು ತರಿಸಿ, ಅವುಗಳನ್ನು ಒಡೆದು ಪರೀಕ್ಷೆ ಮಾಡಿ, ಭೂಮಿಯನ್ನು ಉಳುವ ನೇಗಿಲ ಕುಳಗಳ ಭಾಗವು ಅತ್ಯಂತ ಕಠಿಣವಾಗಿದ್ದು ಬೇಗ ಸವೆಯುವುದಿಲ್ಲ ಎಂದು ಕಂಡುಕೊಂಡರು. ಅದೇ ರೀತಿ ತಾವೂ ಮಾಡಿ ಯಶಸ್ಸುಗಳಿಸಬೇಕೆಂದು ಹಗಲೂ ಇರುಳೂ ಶ್ರಮಿಸಿ ಉತ್ತಮವಾದ ಕುಳಗಳನ್ನು ತಯಾರಿಸಿ, ಮುಖ್ಯಾಧಿಕಾರಿ ಗಳಿಗೆ ತೋರಿಸಿದರು. ಲಕ್ಷ್ಮಣರಾಯರು ತಯಾರಿಸಿದ ನೇಗಿಲುಗಳಿಗೆ ವ್ಯವಸಾಯ ಇಲಾಖೆಯ ಅಧಿಕಾರಿಗಳಿಂದ ಮಾನ್ಯತೆ ಸಿಕ್ಕಿತು. ರಾಯರ ನೇಗಿಲುಗಳು ಲಕ್ಷಗಟ್ಟಲೆ ಖರ್ಚಾದವು. ಈ ರೀತಿಯಾಗಿ ಉಳುವ ಉಪಕರಣದಲ್ಲಿ ರಾಯರು ಒಂದು ಕ್ರಾಂತಿಯನ್ನೇ ಮಾಡಿದರು. ರಾಯರ ಪಾಲಿಗೆ ಇದೊಂದು ಅದ್ಭುತ ವಿಜಯ.

ಈ ನಡುವೆ ಇನ್ನೊಂದು ಸಮಸ್ಯೆ ಹುಟ್ಟಿತು. ನೇಗಿಲುಗಳ ಬೇಡಿಕೆ ಸೆಪ್ಟೆಂಬರ್‌ನಿಂದ ಫೆಬ್ರವರಿವರೆಗೆ ಮಾತ್ರ. ಉಳಿದ ದಿನಗಳಲ್ಲಿ ಕಾರ್ಖಾನೆ ನಡೆಯುವ ರೀತಿ ಹೇಗೆ-ಎಂಬ ಪ್ರಶ್ನೆ.

ಆಗ ಕಾರ್ಖಾನೆಯಲ್ಲಿ ಮನೆಮನೆಯಲ್ಲೂ ಅವಶ್ಯಕವಾದ ದೋಸೆ ಹಂಚುಗಳನ್ನು ಮಾಡಲು ಆರಂಭಿಸಿದರು. ಅವು ಕೆಲ ಕಾಲದಲ್ಲಿಯೇ ಜನಪ್ರಿಯವಾದವು. ರಾಯರ ಕಾರ್ಖಾನೆ ಅಭಿವೃದ್ಧಿ ಹೊಂದಿ, ಸುತ್ತಲೂ ಮನೆಗಳಾಗಿ ಆ ಜಾಗಕ್ಕೆ ‘ಠಳಕವಾಡಿ’ ಎಂದು ಹೆಸರಾಯಿತು.

ಲೋಕಮಾನ್ಯ ಬಾಲಗಂಗಾಧರ ತಿಲಕರು ರಾಯರ ಕಾರ್ಖಾನೆಗೆ ಭೇಟಿಕೊಟ್ಟು ರಾಯರ ಸಾಹಸಕ್ಕೆ ಮೆಚ್ಚಿ, “ಕಿರ್ಲೋಸ್ಕರರೇ, ನೀವು ಬಹು ದೊಡ್ಡ ರಾಷ್ಟ್ರ ಕಾರ್ಯ ಮಾಡುತ್ತಿರುವಿರಿ. ನಾಳೆ ರಾಷ್ಟ್ರ ಸ್ವತಂತ್ರವಾದರೂ ವ್ಯಾಪಾರ ಉದ್ಯೋಗಗಳ ಬೆಳವಣಿಗೆ ಆಗಲೇಬೇಕು. ಆದುದರಿಂದ ಯಾವ ಕಷ್ಟಗಳಿಗೂ ಬೇಸರಪಡಬೇಡಿ. ಭವಿಷ್ಯದ ಕಡೆಗೆ ದೃಷ್ಟಿ ಇಟ್ಟು ನಿಮ್ಮ ಕಾರ್ಯವನ್ನು ಭರದಿಂದ ಸಾಗಿಸಿರಿ. ಇಂದಲ್ಲ ನಾಳೆ ನಿಮಗೆ ಯಶಸ್ಸು ದೊರೆಯುವುದರಲ್ಲಿ ಸಂದೇಹವಿಲ್ಲ” ಎಂದರು.

ಕಾರ್ಖಾನೆಯನ್ನು ಬೇರೆಡೆಗೆ ಸಾಗಿಸಿ

ಒಳ್ಳೆಯ ಕೆಲಸಕ್ಕೆ ಬಹು ವಿಘ್ನಗಳು ಎಂಬಂತೆ ಎಲ್ಲಾ ಸರಿಯಾಯಿತು ಎನ್ನುವಷ್ಟರಲ್ಲಿ ಬೆಳಗಾವಿ ಮುನಿಸಿಪಾಲಿಟಿ ಯವರು ಊರನ್ನು ವಿಸ್ತರಿಸುವ ಸಲುವಾಗಿ ಕಿರ್ಲೋಸ್ಕರ್ ಬಂಧುಗಳು ಆರು ತಿಂಗಳಲ್ಲಿ ಕಾರ್ಖಾನೆಯನ್ನು ಬೇರೆ ಕಡೆಗೆ ಸಾಗಿಸಬೇಕೆಂದು ಹೇಳಿದರು. ಲಕ್ಷ್ಮಣರಾಯರು ಈ ಸಂಕಟ ದಿಂದ ಪಾರಾಗಲು ದಾರಿ ಹುಡುಕತೊಡಗಿದರು. ದೈವ ಸಹಾಯ ಎಂಬಂತೆ ಔಂಧ್‌ನ ರಾಜರಾದ ಬಾಳಾ ಸಾಹೇಬರು ರಾಯರಿಗೆ ಒದಗಿದ ಪರಿಸ್ಥಿತಿಯನ್ನು ಕೇಳಿ, ತಮ್ಮ ಸಂಸ್ಥಾನದಲ್ಲಿ ಕಾರ್ಖಾನೆ ಸ್ಥಾಪಿಸುವಂತಿದ್ದರೆ ಎಲ್ಲಾ ಅನುಕೂಲಗಳನ್ನೂ ಮಾಡಿಕೊಡುವುದಾಗಿ ತಿಳಿಸಿದರು.

 

ರಾಯರೂ ಬೂದಿ ತುಂಬಿದ ಬುಟ್ಟಿಯನ್ನು ತಲೆಯ ಮೇಲೆ ಹೊತ್ತು ಸಾಗಿಸಿದರು.

.

ಲಕ್ಷ್ಮಣರಾಯರು, ಕಾರ್ಖಾನೆ ರೈಲ್ವೆ ಸ್ಟೇಷನ್ನಿಗೆ ಸಮೀಪ ವಾಗಿದ್ದರೆ ಒಳ್ಳೆಯದು ಎಂದು, ಕಂಡಲಗಿರಿ ಎಂಬ ಚಿಕ್ಕ ಸ್ಟೇಷನ್ ಬಳಿ ಇದ್ದ ವಿಶಾಲವಾದ ಜಾಗವನ್ನು ಕೋರಿದರು. ಲಕ್ಷ್ಮಣರಾಯರ ಇಚ್ಛೆಯಂತೆ ಬಾಳಾಸಾಹೇಬರು ಇನಾಮು ಪತ್ರವನ್ನು ಬರೆಯಿಸಿ ಆ ಜಾಗವನ್ನು ರಾಯರ ವಶಕ್ಕೆ ಒಪ್ಪಿಸಿದರು.

ಕಿರ್ಲೋಸ್ಕರ್ ವಾಡಿಯ ಸ್ಥಾಪನೆ

ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಅದರಲ್ಲೂ ಬಹಳ ದೂರದ ಸ್ಥಳಕ್ಕೆ ಕಾರ್ಖಾನೆಯನ್ನು, ನೂರಾರು ಜನರನ್ನು ಸಾಗಿಸಿ, ಅವರಿಗೆ ವಸತಿ ಸೌಕರ್ಯವನ್ನು ಮಾಡಿ ಔದ್ಯೋಗಿಕ ಪಟ್ಟಣವನ್ನು ನಿರ್ಮಿಸಬೇಕಾದರೆ ಎಷ್ಟು ಸಮಸ್ಯೆ ಗಳನ್ನು ಎದುರಿಸಬೇಕು! ಲಕ್ಷ್ಮಣರಾಯರು ಕುಂಡಲಗಿರಿ ಸ್ಟೇಷನ್ ಬಳಿ ಆರಿಸಿದ ಜಾಗ ಬರೀ ಬೆಂಗಾಡು ನೆಲ, ಎಲ್ಲೂ ನೀರಿಲ್ಲ; ಮುಳ್ಳು ಕಳ್ಳಿಗಿಡಗಳು, ರಣಗುಟ್ಟುವ ಬಿಸಿಲು. ೧೯೧೦ ಮಾರ್ಚ್ ತಮ್ಮ ಸಹೋದ್ಯೋಗಿಗಳ ಜೊತೆ ಕುಂಡಲಗಿರಿ ಸ್ಟೇಷನ್‌ನಲ್ಲಿ ಇಳಿದು ಕಾರ್ಖಾನೆ, ವಾಸದ ಮನೆಗಳನ್ನು ಎಲ್ಲೆಲ್ಲಿ ಕಟ್ಟಬೇಕು ಎಂಬುದನ್ನು ಆಲೋಚಿಸಿ ಬೆಳಗಾವಿಗೆ ಮರಳಿದರು. ರಾಜಾಸಾಹೇಬರು ಕೊಟ್ಟ ಕೈಸಾಲ ಹತ್ತುಸಾವಿರ, ಬೆಳಗಾವಿಯ ಕಲೆಕ್ಟರರು ಠಳಕವಾಡಿಯ ಕಾರ್ಖಾನೆಯ ಜಾಗಕ್ಕೆ ಪರಿಹಾರ ಧನವೆಂದು ಕೊಟ್ಟ ನಾಲ್ಕುಸಾವಿರದ ಐನೂರು ಇಷ್ಟೇ ಬಂಡವಾಳ.

ಎಲ್ಲದಕ್ಕಿಂತ ಹೆಚ್ಚಾಗಿ ಆತ್ಮವಿಶ್ವಾಸದ ಬಲದ ಬಂಡವಾಳ ದಿಂದ ಲಕ್ಷ್ಮಣರಾಯ ಕಾರ್ಖಾನೆ, ವಾಸದ ಮನೆಗಳನ್ನು ಕಟ್ಟಲು ಆರಂಭಿಸಿದರು. ಕೆಲಸಗಾರರಿಗೆ ಒಳ್ಳೆಯ ಅನುಕೂಲ ಮಾಡಿಕೊಟ್ಟರೆ, ಅವರು ಉತ್ಸಾಹದಿಂದ ಚೆನ್ನಾಗಿ ಕೆಲಸ ಮಾಡುವರೆಂದು ಲಕ್ಷ್ಮಣರಾಯರ ನಂಬಿಕೆ. ಈ ಸಿದ್ಧಾಂತ ವನ್ನೇ ಈಗ ಸರ್ಕಾರದವರು ಅಳವಡಿಸಿಕೊಂಡು ‘ಪಬ್ಲಿಕ್ ಸೆಕ್ಟರ್’ ಕಾರ್ಖಾನೆಗಳಲ್ಲಿ ಕೆಲಸಗಾರರಿಗೆ ವಸತಿ, ಆಸ್ಪತ್ರೆ, ಶಾಲೆ, ಮಕ್ಕಳ ಆಟಕ್ಕೆ ಉದ್ಯಾನವನವನ್ನು ಸ್ಥಾಪಿಸಿ ಕೆಲಸಗಾರರ ಸೌಕರ್ಯಗಳಿಗೆ ತುಂಬಾ ಗಮನ ಕೊಡುತ್ತಿದ್ದಾರೆ.

ಈ ತತ್ವವನ್ನು ಮೊಟ್ಟಮೊದಲಿಗೆ ಮಾಡಿತೋರಿಸಿದ ಕೀರ್ತಿ ಲಕ್ಷ್ಮಣರಾಯರಿಗೆ ಸಲ್ಲುತ್ತದೆ ಎಂದರೆ ಅತಿಶಯೋಕ್ತಿಯಲ್ಲ. ಒಂದು ವರ್ಷದಲ್ಲಿ ಕಿರ್ಲೋಸ್ಕರ್ ವಾಡಿ (ಜನವಸತಿ ಪ್ರದೇಶ) ಯು ಒಂದು ರೂಪಕ್ಕೆ ಬಂದಿತು. ನೀರಿನ ಸೌಕರ್ಯವಿಲ್ಲ, ಬಯಲಿನಲ್ಲೇ ಅಡಿಗೆ ಮಾಡಬೇಕಾದ ಪ್ರಸಂಗ, ಮನೆಕಟ್ಟಲು ಬೇಕಾಗುವ ಸಾಮಾನುಗಳನ್ನು ದೂರದಿಂದ ತರಬೇಕು. ಒಂದು ಸಾರಿ ಕಾರ್ಮಿಕನೊಬ್ಬನ ಪತ್ನಿಗೆ ಹೆರಿಗೆ ಆಗಬೇಕಾದಾಗ ಎರಡು ತಗಡುಗಳನ್ನು ಕಟ್ಟಿ ನಿಲ್ಲಿಸಿ, ಲಕ್ಷ್ಮಣರಾಯರ ಧರ್ಮ ಪತ್ನಿ ರಾಧಾಬಾಯಿಯವರು, ಆಕೆಗೆ ನೆರವಿಗೆ ಬಂದರು.

ಲಕ್ಷ್ಮಣರಾಯರು ಅನೇಕ ಸಮಸ್ಯೆಗಳನ್ನು ಎದುರಿಸಿ ೩೫ ಮನೆಗಳನ್ನೂ ಕಾರ್ಖಾನೆಗಳನ್ನೂ ಕಟ್ಟಿ ಒಂದು ಉತ್ತಮ ಸ್ಥಿತಿಗೆ ತಂದರು. ರಾಯರ ದೂರಾಲೋಚನೆ, ಎಲ್ಲರನ್ನೂ ಒಟ್ಟು ಗೂಡಿಸುವ ಮುಂದಾಳತ್ವ, ‘ಯಾವ ಕಷ್ಟದ ಕೆಲಸವಾಗಲಿ, ಮಾಡಬಲ್ಲೆ’ ಎಂಬ ಆತ್ಮವಿಶ್ವಾಸ ಇವನ್ನು ಎಷ್ಟು ಹೊಗಳಿದರೂ ಸಾಲದು. ರಾಯರೊಡನೆ ಅವರನ್ನೇ ನಂಬಿಬಂದ, ಜೊತೆಗೆ ದುಡಿದ ಕೆಲಸಗಾರರಿಗೂ ಅವರು ಕುಟುಂಬ ವರ್ಗಕ್ಕೂ ಈ ಗೌರವ ಸಲ್ಲುತ್ತದೆ.

ಶ್ರಮದಾನ, ಸ್ವಾವಲಂಬನೆ ಇವುಗಳ ವಿಷಯದಲ್ಲಿ ಲಕ್ಷ್ಮಣರಾಯರು ಆದರ್ಶವಾದಿಗಳು, ಕಾರ್ಯಶೀಲರು. ಆ ವಸತಿಯ ಪ್ರದೇಶದಲ್ಲಿ ಉತ್ಸವಗಳನ್ನು ನಡೆಸಲು ದೊಡ್ಡ ಕಟ್ಟಡ ಇರಲಿಲ್ಲ. ಎಲ್ಲಾ ಜನರು ಕೂಡಿ ಶ್ರಮದಾನದಿಂದ, ರಾಯರ ನೆರವಿನಿಂದ ಕೇವಲ ಮೂರು ವಾರಗಳಲ್ಲಿ ಸುಮಾರು ಆರುನೂರು ಜನ ಕೂಡುವ ಸಭಾ ಮಂದಿರವನ್ನು ಕಟ್ಟಿದರು. ಸಭಾಮಂದಿರದಲ್ಲಿ ಬಡವ, ಬಲ್ಲಿದ, ಜಾತಿ, ಮತ ಬೇಧ ವಿಲ್ಲದೆ ಎಲ್ಲಾ ಸಾರ್ವಜನಿಕ ಕಾರ್ಯಗಳು ನಡೆಯುತ್ತಿದ್ದವು.

ಯುವಕರೆಲ್ಲಾ ಸೇರಿ ಗಣೇಶೋತ್ಸವ ಮಾಡಿ, ‘ನಾಟಕ ವಾಡುತ್ತೇವೆ’ ಎಂದಾಗ ಲಕ್ಷ್ಮಣರಾಯರು ಮನಃಪೂರ್ವಕ ವಾಗಿ ಆಶೀರ್ವದಿಸಿ, ಬೇಕಾದ ನೆರವು ನೀಡಿ, ತಾವೂ ಕಾರ್ಯಕ್ರಮಕ್ಕೆ ಹೋಗಿ ನೋಡಿ ಆನಂದಿಸಿ ಪ್ರೋತ್ಸಾಹ ನೀಡಿದರು. ಯುವಕರು ದೃಢಕಾಯರಾಗಿರಬೇಕೆಂದು ಅವರಿಗೆ ಕ್ರಿಕೆಟ್, ಫುಟ್‌ಬಾಲ್, ಟೆನಿಸ್, ಟೇಬಲ್ ಟೆನಿಸ್ ಆಡಲು ಅನುಕೂಲ ಮಾಡಿಕೊಟ್ಟು ಆಗಾಗ ಪಂದ್ಯಗಳನ್ನು ಏರ್ಪಡಿ ಸುತ್ತಿದ್ದರು. ‘ಹೆಂಗಸರ ಪಾತ್ರವನ್ನು ಗಂಡಸರು ಮಾಡುವು ದಕ್ಕಿಂತ ಹೆಂಗಸರೇ ಮಾಡಬೇಕು’ ಎಂದು ಲಕ್ಷ್ಮಣರಾಯರು ಯೋಚಿಸಿದರು. ಗೌರವಸ್ಥ ಸ್ತ್ರೀಯರು ರಂಗಭೂಮಿಯ ಮೇಲೆ ಬರಬಾರದು ಎಂದು ಕಟ್ಟಾಗಿದ್ದ ಆ ಕಾಲದಲ್ಲಿ ವಾಡಿಯ ಮಹಿಳೆಯರಿಂದ ನಾಟಕ ಮಾಡಿಸಿದರು.

ಕಾರ್ಖಾನೆಯ ಕೆಲಸಗಾರರಿಗಾಗಿ ಮತ್ತು ಮಹಿಳೆಯರಿಗಾಗಿ ಪತ್ರಿಕೆಗಳನ್ನೂ ಪ್ರಾರಂಭಿಸಿದರು.

ಕೃಷ್ಣಾನದಿಯ ಪ್ರವಾಹ ಹೆಚ್ಚಿ ವಾಡಿಯ ಸಮೀಪದ ಬುರ್ಲಿ ಗ್ರಾಮವು ನೀರಿನಲ್ಲಿ ಮುಳುಗುವಂತಾಯಿತು. ಲಕ್ಷ್ಮಣರಾಯರು ಬುರ್ಲಿಯ ಜನರನ್ನು ನಾವಿಗಳಲ್ಲಿ ಕರೆತಂದು ವಾಡಿಯಲ್ಲಿ ಊಟ ವಸತಿ ಕಲ್ಪಿಸಿದರು. ರಾಯರ ಸಾಹಸ-ಸೇವೆಗಳನ್ನು ಮೆಚ್ಚಿ ಬ್ರಿಟಿಷ್ ಸರ್ಕಾರ ಅವರಿಗೆ ಕೈಸರ್-ಇ-ಹಿಂದ್ ಪ್ರಶಸ್ತಿ ಕೊಟ್ಟಿತು.

ದರೋಡೆಕಾರನನ್ನೇ ಪಳಗಿಸಿದರು

ಆಚಾರ್ಯ ವಿನೋಬ ಭಾವೆ, ಜಯಪ್ರಕಾಶ್ ನಾರಾಯಣ್ ಇವರು ಮಧ್ಯಪ್ರದೇಶದ ದರೋಡೆಕಾರರನ್ನು ಸಭ್ಯ ಪ್ರಜೆಗಳನ್ನಾಗಿ ಮಾಡಲು ಶ್ರಮಿಸಿದ್ದು ಎಲ್ಲರಿಗೂ ಗೊತ್ತಿದೆ.

ಎಪ್ಪತ್ತು ವರ್ಷಗಳ ಹಿಂದೆಯೇ ಲಕ್ಷ್ಮಣರಾಯರು ಈ ಕೆಲಸದಲ್ಲಿ ಯಶಸ್ವಿಗಳಾದರೆಂದು ಕೇಳಿದರೆ ಆಶ್ಚರ್ಯವಾಗುತ್ತದೆ.

ಸಾತಾರಾ ಜಿಲ್ಲೆಯಲ್ಲಿ ಪೀರ‍್ಯಾ ಎಂಬ ಬಲಶಾಲಿಯಾದ ದರೋಡೆಕಾರನಿದ್ದ. ಪೊಲೀಸರು ತುಂಬಾ ಶ್ರಮವಹಿಸಿ ಪೀರ‍್ಯಾನನ್ನು, ಅವನ ಸಂಗಡಿಗರನ್ನು ಜೈಲಿಗೆ ಸೇರಿಸಿದ್ದರು.

‘ಪೀರ‍್ಯಾನನ್ನೂ ಅವನ ಮೂವರು ಸಂಗಡಿಗರನ್ನೂ ಜೈಲಿ ನಿಂದ ಬಿಡುಗಡೆ ಮಾಡಿಸಿಕೊಟ್ಟರೆ ಅವರಿಗೆ ಕಾರ್ಖಾನೆಯಲ್ಲಿ ಕೆಲಸ ಕೊಟ್ಟು, ಸಭ್ಯ ಗೃಹಸ್ಥರನ್ನಾಗಿ ಮಾಡಲು ಪ್ರಯತ್ನಿ ಸುತ್ತೇನೆ’ ಎಂದು ಲಕ್ಷ್ಮಣರಾಯರು ಹೇಳಿದಾಗ ಎಲ್ಲರೂ ಬೆರಗಾದರು.

ಲಕ್ಷ್ಮಣರಾಯರ ಒತ್ತಾಯಕ್ಕೆ ಮಣಿದು ವಿಧಿ ಇಲ್ಲದೆ ಔಂಧ್‌ನ ರಾಜಾಸಾಹೇಬರು ಖೈದಿಗಳ ಬಿಡುಗಡೆಗೆ ಆಜ್ಞೆಕೊಟ್ಟರು.

“ವಾಡಿಯು ಕಾರ್ಖಾನೆಯನ್ನು ರಕ್ಷಿಸಲು ಪೊಲೀಸರನ್ನು ಕೊಡುತ್ತೇವೆ” ಎಂದು ರಾಜಾಸಾಹೇಬರು ಹೇಳಿದರೂ ಕೇಳದೆ ಲಕ್ಷ್ಮಣರಾಯರು ಸಾವಿರಾರು ಜನರ ಸಭೆ ಸೇರಿಸಿ ಸಮಾರಂಭ ದಲ್ಲಿ ಪೀರ‍್ಯಾನಿಗೆ, ಅವನ ಸಂಗಡಿಗರ ಕೈಗೆ ಚಿಟಿಕೆ ಉಪ್ಪನ್ನು ಹಾಕಿ ‘ಉಪ್ಪಿಕ್ಕಿದ ಮನೆ ಮುಪ್ಪಿನ ತನಕ ಮರೆಯಲಾರೆ, ದ್ರೋಹ ಬಗೆಯಲಾರೆ’ ಎಂದು ಪ್ರಮಾಣ ಮಾಡಿಸಿದರು.

ಕಾರ್ಖಾನೆಯ ಸುತ್ತ ಗುಸ್ತು ತಿರುಗುವ ಕೆಲಸವನ್ನು ಪೀರ‍್ಯಾನಿಗೆ, ಅವನ ಸಂಗಡಿಗರಿಗೆ ಕೊಟ್ಟರು. ವಾಡಿಯಲ್ಲಿ ಕಳ್ಳಕಾಕರ ಭಯ ಇಲ್ಲವಾಯಿತು.

ಪೀರ‍್ಯಾನ ಕತೆ ಇಲ್ಲಿಗೇ ಮುಗಿಯಲಿಲ್ಲ.

ಪೀರ‍್ಯಾ, ಅವನ ಸ್ನೇಹಿತರು ಚೆನ್ನಾಗಿ ಶೇಂದಿ ಕುಡಿದು ಮತ್ತರಾಗಿ ಕೈಯಲ್ಲಿ ಕೊಡಲಿ ಹಿಡಿದು ಊರಿನ ಜನರನ್ನೆಲ್ಲಾ ಅವಾಚ್ಯ ಶಬ್ದಗಳಿಂದ ಬೈಯುತ್ತಾ ತಿರುಗತೊಡಗಿದಾಗ ಜನರು ಹೆದರಿ ಓಡಿಹೋಗಿ ಲಕ್ಷ್ಮಣರಾಯರಿಗೆ ಸಮಾಚಾರ ತಿಳಿಸಿ ದರು. ರಾಯರು ಕೂಡಲೇ ಕೋಪದಿಂದ ಪೀರ‍್ಯಾ, ಅವನ ಸಂಗಡಿಗರು ಇದ್ದಲ್ಲಿಗೆ ಹೊರಟರು.

ಭಯಂಕರ ಪೀರ‍್ಯಾ, ಅವನ ಸಂಗಡಿಗರು ಕುಡಿದು ಮತ್ತರಾಗಿದ್ದಾರೆ; ಇನ್ನೇನು ಅನಾಹುತವಾಗುವುದೋ ಎಂದು ಎಲ್ಲರೂ ಹೆದರಿದರು. ಪೀರ‍್ಯಾನ ಭೀಮಾಕಾರದ ಮುಂದೆ ರಾಯರು ಮಾಮನಮೂರ್ತಿ. ರಾಯರು ಹೋಗಿ ಪೀರ‍್ಯಾನ ಕೆನ್ನೆಗೆ ಪಟಪಟನೆ ನಾಲ್ಕೇಟು ಬಿಗಿದರು. ಮಂತ್ರಕ್ಕೆ ಮಣಿದ ಹಾವಿನಂತೆ ಪೀರ‍್ಯಾ ಕೊಡಲಿ ಕೆಳಕ್ಕೆ ಹಾಕಿ ರಾಯರ ಕಾಲಿಗೆ ಬಿದ್ದು, ‘ಇನ್ನೆಂದೂ ಕುಡಿಯುವುದಿಲ್ಲ’ ಎಂದು ಪ್ರತಿಜ್ಞೆಮಾಡಿದ. ರಾಯರ ಸಿದ್ಧಾಂತಕ್ಕೆ ಜಯವಾಯಿತು. ಜನರು ರಾಯರ ಧೈರ್ಯವನ್ನು ಕೊಂಡಾಡಿದರು.

ಸಮಾಜ ಸೇವೆ

ಕೆಲವು ದಿನಗಳಲ್ಲಿ ಪೀರ‍್ಯಾನ ಮಗನ ವಿವಾಹದ ಏರ್ಪಾಡಾಯಿತು. ಲಕ್ಷ್ಮಣರಾಯರು ಪತ್ನಿ ರಾಧಾಬಾಯಿ ಯೊಡನೆ ಬಂದರು. ರಾಧಾಬಾಯಿ ಪೀರ‍್ಯಾನ ಇಬ್ಬರು ಪತ್ನಿ ಯರಿಗೆ ಉಡಿ ತುಂಬಿಸಿದರು. ಆಹ್ವಾನಿತರೆಲ್ಲಾ ಬಂದರು. ವಿವಾಹದ ಸಮಯಕ್ಕೆ ಮದುವೆ ಮಾಡಿಸಬೇಕಾದ ಪುರೋಹಿತರು ಬರಲಿಲ್ಲ. ಹೇಗೋ ಅಲ್ಲಿಯೇ ಇದ್ದವರಿಂದ ಮಂಗಳಾಷ್ಟಕ ಹೇಳಿಸಿ, ರಾಯರು ಲಗ್ನ ಕಾರ್ಯ ಪೂರೈಸಿದರು.

ಕುಂಡಲಗಿರಿಯ ಪುರೋಹಿತರೆಲ್ಲ ಸೇರಿ, ‘ರಾಯರು ವೈದಿಕ ಧರ್ಮಕ್ಕೆ ವಿರುದ್ಧ ನಡೆಯುತ್ತಿದ್ದಾರೆ’ ಎಂದು ಕುರ್ತುಕೋಟಿ ಶಂಕರಾಚಾರ್ಯರಿಗೆ ದೂರಿತ್ತರು.

ಶಂಕರಾಚಾರ್ಯರು ವಾಡಿಗೆ ಭೇಟಿಕೊಟ್ಟು ಕಾರ್ಖಾನೆ ಯನ್ನೆಲ್ಲಾ ನೋಡಿದರು. ಲಕ್ಷ್ಮಣರಾಯರು ಶಂಕರಾಚಾರ್ಯ ರಲ್ಲಿ, “ವಾಡಿ ಹೊಸ ಊರು, ಕಾರ್ಖಾನೆ ಎಲ್ಲಾ ಜಾತಿಯ ಜನಗಳಿಂದ ನಡೆಯುತ್ತಿದೆ. ಇಲ್ಲಿ ಇರುವುದು ಕೆಲಸಗಾರರ ಜಾತಿ ಒಂದೇ. ಎಲ್ಲರನ್ನೂ ಒಂದೇ ರೀತಿಯಾಗಿ ಕಾಣುವುದೇ ನನ್ನ ತತ್ವ. ನಮ್ಮ ದೇಶ ಮುಂದಕ್ಕೆ ಬರಬೇಕಾದರೆ, ಕಾರ್ಖಾನೆ ಗಳು ಬೇಕಿದ್ದರೆ ಈ ಮಾತನ್ನು ಪಾಲಿಸಬೇಕಾಗುತ್ತದೆ” ಎಂದರು. ವಿದ್ವಾಂಸರೂ ಮುಂದಾಲೋಚನೆ ಉಳ್ಳವರೂ ಆದ ಕುರ್ತುಕೋಟಿ ಶಂಕರಾಚಾರ್ಯರು, ಲಕ್ಷ್ಮಣರಾಯರ ಆದರ್ಶವಾದ ವಿಚಾರಗಳಿಗೆ ಮೆಚ್ಚಿ, ಜನಗಳಿಗೆ ‘ಧರ್ಮದ ಸ್ವರೂಪವೇನು? ದೇಶ ಮುಂದುವರಿಯ ಬೇಕಾದರೆ ಉದ್ಯೋಗವೇ ಸರ್ವಧರ್ಮ. ಸ್ಪೃಶ್ಯ, ಅಸ್ಪೃಶ್ಯತೆಗೆ ಎಡೆ ಕೊಡಬಾರದು’ ಎಂದು ಬುದ್ಧಿ ಹೇಳಿದರು. ಈ ವಿಷಯ ಎಲ್ಲಾ ಕಡೆ ಹರಡಿ, ಲಕ್ಷ್ಮಣರಾಯರ ಕೀರ್ತಿ ಮತ್ತಷ್ಟು ಬೆಳಗಿತು.

 

ರಾಯರು ಪೀರ‍್ಯಾನ ಕೆನ್ನೆಗೆ ಪಟಪಟನೆ ನಾಲ್ಕೇಟು ಬಿಗಿದರು.

ಪ್ರತಿ ಸಮಸ್ಯೆಗೂ ಪರಿಹಾರ

 

೧೯೧೪ರಲ್ಲಿ ಮೊದಲನೆಯ ಮಹಾಯುದ್ಧ ಪ್ರಾರಂಭ ವಾಯಿತು. ಈ ಶಾಖವು ಕಾರ್ಖಾನೆಗಳಿಗೆಲ್ಲಾ ತಗುಲಿತು. ಜರ್ಮನಿಯಿಂದ ಬರುತ್ತಿದ್ದ ಬೀಡು ಕಬ್ಬಿಣ, ಬಣ್ಣ ನಿಂತು ಹೋಯಿತು. ಕಲ್ಲಿದ್ದಲಿನ ಅಭಾವ. ಕಾರ್ಖಾನೆ ನಡೆಸುವುದೇ ರಾಯರಿಗೆ ಕಷ್ಟವಾಯಿತು. ರಾಯರು ಧೈರ್ಯ ಗೆಡದೆ, ಕೊಲ್ಲಾ ಪುರದಲ್ಲಿ ನೂರಾರು ಹಳೆಯ ತೋಪುಗಳು ಇವೆ ಎಂದು ತಿಳಿದು ಹೋಗಿ ಅಲ್ಲಿ ಶಾಹೂ ಮಹಾರಾಜರ ಅನುಮತಿ ಪಡೆದು ತೋಪುಗಳನ್ನು ವಾಡಿಗೆ ಸಾಗಿಸಿ ಅವುಗಳನ್ನು ಒಡೆದು ಕರಗಿಸಿ ನೇಗಿಲುಗಳನ್ನಾಗಿ ಮಾಡಿದರು. ‘ಲೋಕದಲ್ಲಿ ಶಾಂತಿ, ನೆಮ್ಮದಿ ಶಾಶ್ವತವಾಗಿ ಇರಬೇಕಾದರೆ ಜಗತ್ತಿನ ಕತ್ತಿ, ಕಠಾರಿ, ತೋಫುಗಳನ್ನೆಲ್ಲಾ ಕರಗಿಸಿ ಕುಳಗಳನ್ನಾಗಿ ಮಾಡಬೇಕು’ ಎಂಬರ್ಥದ ಇಂಗ್ಲಿಷ್ ಗಾದೆ ಇದೆ. ಫಿರಂಗಿಗಳನ್ನು ಕರಗಿಸಿ ನೇಗಿಲುಗಳನ್ನು ಮಾಡಿ, ಬಣ್ಣ ಸಿಕ್ಕದಾಗ ಕಾವಿ, ಎಣ್ಣೆ ಸೇರಿಸಿ ಭಟ್ಟಿಯಲ್ಲಿ ಹಾಕಿ ನೇಗಿಲುಗಳಿಗೆ ಕಾವೀ ಬಣ್ಣ ಹಚ್ಚಿ ರೈತರಿಗೆ ಲಕ್ಷ್ಮಣರಾಯರು ಅನುಕೂಲ ಮಾಡಿಕೊಟ್ಟರು.

ಕಾರ್ಖಾನೆಗೆ ಕಲ್ಲಿದ್ದಲು ಸಿಕ್ಕಲಿಲ್ಲ. ಕಟ್ಟಿಗೆಯ ಇದ್ದಿಲಿ ನಿಂದಲೇ ಕಾರ್ಖಾನೆ ನಡೆಸಬೇಕೆಂದು ರಾಯರು ಯೋಚಿಸಿ ಹೊಸ ಪದ್ಧತಿಯಿಂದ ಇದ್ದಿಲು ಮಾಡುವ ರೀತಿಯನ್ನು ಜಪಾನಿನಿಂದ ಕಲಿತುಬಂದಿದ್ದ ರಾಧಾನಗರದ ಸಾಲಿಗ್ರಾಮ ಎಂಬುವರ ಫೌಂಡ್ರಿಗೆ ಹೋಗಿ ನೋಡಿ ದಟ್ಟವಾದ ಅಡವಿಯನ್ನು ಕೊಂಡು ಇದ್ದಿಲು ಮಾಡಿದರು.

ರಾಯರು ಇದ್ದಿಲಿಗೆ ಇನ್ನೊಂದು ಉಪಾಯ ಮಾಡಿದರು. ಕುಂಡಲ ಸ್ಟೇಷನ್‌ನಲ್ಲಿ ಬೆಟ್ಟದಂತೆ ಬಿದ್ದಿದ್ದ ರೈಲ್ವೆ ಎಂಜಿನ್ನಿನ ಬೂದಿಯನ್ನು ಜರಡಿ ಆಡಿಸಿ ಮೇಲೆ ಬರುವ ಇದ್ದಿಲ ಚೂರುಗಳನ್ನು ಉಪಯೋಗಿಸಿದರು.

ಬೂದಿ ಸಾಗಿಸಲು ಹಗುರವಾಗುವಂತೆ ಕೆಲಸಗಾರರನ್ನೆಲ್ಲಾ ಸಾಲಾಗಿ ನಿಲ್ಲಿಸಿ ಒಬ್ಬರ ಕೈಯಿಂದ ಇನ್ನೊಬ್ಬರ ಕೈಗೆ ಬೂದಿಯ ಬುಟ್ಟಿ ತಲುಪಿಸಲು ತಾವೂ ಕಾರ್ಮಿಕನಂತೆ ಅರ್ಧಚಡ್ಡಿ, ಅಂಗಿ ತೊಟ್ಟು ಬೂದಿ ತುಂಬಿದ ಬುಟ್ಟಿಯನ್ನು ತಲೆಯ ಮೇಲೆ ಹೊತ್ತು ಸಾಗಿಸಿದರು. ರಾಯರು ಸ್ಥಾಪಿಸಿದ್ದ ಕಾರ್ಮಿಕರ ಸಂಘ ವನ್ನು ನೋಡಲು ಬಂದ ಸರ್ಕಾರದ ಇನ್ಸ್‌ಪೆಕ್ಟರ್ ಈ ದೃಶ್ಯ ವನ್ನು ಕಂಡು ಬೆರಗಾದರು.

ಸಾಹಸದ ಹಲವು ಮುಖಗಳು

ಯುದ್ಧದ ಕಾರಣದಿಂದ ಇಂಗ್ಲೆಂಡಿನಿಂದ ನೇಗಿಲುಗಳು ಬರುವುದು ನಿಂತುಹೋಯಿತು. ಲಕ್ಷ್ಮಣರಾಯರ ನೇಗಿಲುಗಳು ಹೇರಳವಾಗಿ ವ್ಯಾಪಾರವಾಗತೊಡಗಿದವು. ರೈತರಿಂದ ನೇಗಿಲು ಗಳಿಗೆ ಬೇಡಿಕೆ ಹೆಚ್ಚಾದಾಗ ಅದನ್ನು ಹೆಚ್ಚಾಗಿ ತಯಾರಿಸಲು ಕಾರ್ಖಾನೆಯನ್ನು ವಿಸ್ತಾರ ಮಾಡುವುದಕ್ಕಾಗಿ, ಜನರಿಂದ ಷೇರುಗಳನ್ನು ಸೇರಿಸಿ ಅನೇಕ ಜನರನ್ನು ಕೂಡಿಸಿ ಕಾರ್ಖಾನೆಗೆ ‘ಕಿರ್ಲೋಸ್ಕರ್ ಬ್ರದರ್ಸ್ ಲಿಮಿಟೆಡ್’ ಎಂದು ಹೆಸರಿಟ್ಟರು. ಕಿರ್ಲೋಸ್ಕರ್ ವಾಡಿಯ ಕಾರ್ಖಾನೆ ಒಂದು ರೂಪಕ್ಕೆ ಬಂದ ನಂತರ, ದೇಶಕ್ಕೆ ಆಯಿಲ್ ಎಂಜಿನ್ಸ್, ಮೆಷಿನ್ ಟೂಲ್ಸ್, ಎಲೆಕ್ಟ್ರಿಕ್ ಮೋಟರುಗಳ ಅವಶ್ಯಕತೆ ಇದೆ ಎಂದು ಲಕ್ಷ್ಮಣ ರಾಯರು ತಿಳಿದು ತಾವೇ ಮೊದಲು ಅವನ್ನು ಸ್ಥಾಪಿಸ ಬೇಕೆಂದು, ಆ ಬಗ್ಗೆ ಉನ್ನತ ಶಿಕ್ಷಣವನ್ನು ಪಡೆದು ಬರುವುದ ಕ್ಕಾಗಿ ತಮ್ಮ ಮಕ್ಕಳನ್ನು ಅಮೆರಿಕಕ್ಕೆ ಕಳುಹಿಸಿದರು.

ಮೈಸೂರು ಸಂಸ್ಥಾನದ ದಿವಾನರಾಗಿದ್ದ ಮಿರ್ಜಾ ಇಸ್ಮಾಯಿಲ್‌ರವರು ವಾಡಿಯಲ್ಲಿನ ಕಾರ್ಖಾನೆಯ ಕೆಲಸವನ್ನು ಕೇಳಿ ಸಂತೋಷಿಸಿ, ಮೈಸೂರು ಸಂಸ್ಥಾನದಲ್ಲಿಯೂ ಒಂದು ಕಾರ್ಖಾನೆಯನ್ನು ಸ್ಥಾಪಿಸಿದರೆ ಎಲ್ಲಾ ಸೌಕರ್ಯವನ್ನೂ ಒದಗಿಸುವುದಾಗಿ ಹೇಳಿದರು.

ಇದರಿಂದ ಹರಿಹರದಲ್ಲಿ ‘ಮೈಸೂರು ಕಿರ್ಲೋಸ್ಕರ್ ಲಿಮಿಟೆಡ್’ ಎಂಬ ಕಾರ್ಖಾನೆ ಸ್ಥಾಪನೆಯಾಯಿತು.

ಲಕ್ಷ್ಮಣರಾಯರು ವಾಡಿಯಲ್ಲಿ ಕಬ್ಬಿಣದ ನೇಗಿಲುಗಳ ಜೊತೆಗೆ ಕಬ್ಬನ್ನು ಅರೆಯುವ ಗಾಣಗಳನ್ನೂ ತಯಾರಿಸ ತೊಡಗಿದರು. ರಾಯರಿಗೆ ತೋಟಗಾರಿದೆ ವ್ಯವಸಾಯದಲ್ಲೂ ಆಸಕ್ತಿ ಇತ್ತು. ವಾಡಿಯ ಭೂಮಿಯಲ್ಲಿ ದ್ರಾಕ್ಷಿ ಬೆಳೆಯುವುದಿಲ್ಲ ಎಂದು ಅವರ ಸ್ನೇಹಿತ ದಾದಾಸಾಹೇಬರು ಹೇಳಿದರು. ಅದನ್ನೆ ಸವಾಲೆಂದು ಸ್ವೀಕರಿಸಿದ ರಾಯರು ದ್ರಾಕ್ಷಿಯ ಬೆಳೆ ಬೆಳೆಸಿ ತೋರಿಸಿದರು.

ಲಕ್ಷ್ಮಣರಾಯರು ಕಾರ್ಖಾನೆಯ ಸಮೀಪ ತುಂಗಭದ್ರಾ ನದಿಯ ದಡದಲ್ಲಿನ ಭೂಮಿಯನ್ನು ತಾವೇ ಕೈಯಾರೆ ಉತ್ತು ಬಿತ್ತು ಬೆಳೆದ ಮುಸುಕಿನ ಜೋಳ, ಜೋಳ, ತರಕಾರಿಯನ್ನು ಎಲ್ಲ ಜನರಿಗೂ ಕೊಡುತ್ತಿದ್ದರು.

ವಾಡಿಯಲ್ಲಿ ಕಬ್ಬಿಣದ ನೇಗಿಲುಗಳ ಜೊತೆಗೆ ಕಬ್ಬು ಅರೆಯುವ ಗಾಣಕ್ಕೂ ಬೇಡಿಕೆ ಹೆಚ್ಚಿತು. ಅಲ್ಲದೆ ಹೊಸ ಮಾದರಿಯ ಮೇಜು, ಕುರ್ಚಿ, ಮಂಚ, ಸೋಫಾ ಸೆಟ್ಟುಗಳನ್ನು ಮಾಡಲು ಮತ್ತು ಬಸ್ಸಿನ ‘ಬಾಡಿ’ ಸಹ ಕಟ್ಟಲು ಪ್ರಾರಂಭಿ ಸಿದರು. ಅಮೆರಿಕದಿಂದ ಬರುತ್ತಿದ್ದ ಮಾದರಿಯ ಕೈಪಂಪು ಗಳನ್ನೂ ತಯಾರಿಸಿದರು. ಕೈ ಪಂಪು ಜನಪ್ರಿಯವಾಯಿತು. ಇದರಿಂದ ನಮ್ಮ ದೇಶದಿಂದ ಪರದೇಶಕ್ಕೆ ಹೊನ್ನಿನ ಹೊಳೆಯಾಗಿ ಹರಿದು ಹೋಗುತ್ತಿದ್ದ ಹಣ ಉಳಿಯಿತು. ಕಡಲೆ ಕಾಯಿ ಒಡೆಯುವ ‘ಕಲ್ಯಾನಸೇಂಗಾ’ ಯಂತ್ರ ತಯಾರಾಯಿತು.

ಗಾಂಧೀಜಿಯವರ ಶಿಷ್ಯ ಎಸ್. ಕೆ. ಅಳಕೇಕರರು ಲಕ್ಷ್ಮಣ ರಾಯರಿಗೆ ಖಾದೀ ದೀಕ್ಷೆಯನ್ನು ಕೊಟ್ಟರು. ವಾಡಿಯಲ್ಲಿ ಚರಖಾಗಳು ತಿರುಗತೊಡಗಿದವು. ಕಾಂಗ್ರೆಸ್ ಮುಖಂಡರ ಉಪನ್ಯಾಸಗಳಾದವು. ಕಾಳೆ ಎಂಬುವರ ಸಲಹೆ ಪಡೆದು ಚರಖಾದಲ್ಲಿ ಕೆಲವು ಸುಧಾರಣೆಗಳನ್ನು ಮಾಡಿ ಲಕ್ಷ್ಮಣ ರಾಯರು ಕಬ್ಬಿಣದ ಚರಖಾವನ್ನು ತಯಾರಿಸಿ, ಈ ಚರಖಾವನ್ನು ಕೊಂಡೊಯ್ದು ಗಾಂಧೀಜಿಯವರಿಗೆ ತೋರಿಸಿ ಬಂದರು.

ಮಂತ್ರಿ

೧೯೩೩ರಲ್ಲಿ ಔಂಧ್ ಸಂಸ್ಥಾನದ ರಾಜರು ಲಕ್ಷ್ಮಣ ರಾಯರನ್ನು ಸಂಸ್ಥಾನದ ಲೋಕನಿಯುಕ್ತ ಮಂತ್ರಿಗಳನ್ನಾಗಿ ಆರಿಸಿದರು.

ಲಕ್ಷ್ಮಣರಾಯರು ಮಂತ್ರಿಗಳಾದಾಗ ಹಳ್ಳಿಗಳ, ರೈತರ ಅಭಿವೃದ್ಧಿಗೆ ಗ್ರಾಮ ಪಂಚಾಯಿತಿ, ರೈತರ ಸಹಕಾರ ಸಂಘಗಳ ಸ್ಥಾಪನೆಗೆ ಪ್ರೋತ್ಸಾಹಿಸಿದರು. ಕೆಲವು ಜಿನ್ನಿಂಗ್ (ಹತ್ತಿಯಿಂದ ಬೀಜವನ್ನು ಬೇರ್ಪಡಿಸುವ ಯಂತ್ರ) ಕಾರ್ಖಾನೆಗಳು ಮತ್ತು ಭವಾನಿ ನಗರದಲ್ಲಿ ಕಲ್ಲುಸಕ್ಕರೆ ಕಾರ್ಖಾನೆ ಇವನ್ನು ಸ್ಥಾಪಿಸಿದರು. ಔಂಧ್‌ನಲ್ಲಿ ದೊಡ್ಡ ಆಸ್ಪತ್ರೆ ಪ್ರಾರಂಭಿಸಿದರು. ಕುಡಿಯುವ ನೀರಿನ ಬಾವಿಗಳನ್ನು ತೋಡಿಸಿದರು. ಔದ್ಯೋಗಿದ ಪ್ರದರ್ಶನಗಳನ್ನು ಏರ್ಪಡಿಸಿದರು. ಹೀಗೆ ಅನೇಕ ಉತ್ತಮ ಕಾರ್ಯಗಳನ್ನೂ ಮಾಡಿದರು.

ಹೊಸ ಹೆಜ್ಜೆಗಳು

ಎತ್ತುಗಳಿಗೆ ಬದಲಾಗಿ ಯಂತ್ರಶಕ್ತಿಯಿಂದ ಬಾವಿಯ ನೀರನ್ನು ಜಮೀನುಗಳಿಗೆ ಹಾಯಿಸಬೇಕೆಂಬ ಲಕ್ಷ್ಮಣರಾಯರ ಬಯಕೆಯ ಕಾರ್ಯರೂಪಕ್ಕೆ ಬಂದು, ಗ್ಯಾಸ್ ಎಂಜಿನ್, ಆಯಿಲ್ ಎಂಜಿನ್ ಸಿದ್ಧವಾದವು.

ಆಯಿಲ್ ಎಂಜಿನ್, ಗ್ಯಾಸ್ ಎಂಜಿನ್, ಪಂಪುಗಳು ತಯಾರಾಗಿ ಪ್ರಚಾರವಾಗುತ್ತಿದ್ದಂತೆಯೇ ರಾಯರ ಮನಸ್ಸು ಬಟ್ಟೆ ತಯಾರಿಸುವ ಉದ್ಯಮದ ಕಡೆಗೆ ತಿರುಗಿತು. ವಾಡಿಯಲ್ಲಿ ‘ರಾಧಾ ವೀವಿಂಗ್ ಮಿಲ್’ ಕಾರ್ಖಾನೆ ತೆರೆದರು. ವಾಡಿಯ ಕಾರ್ಖಾನೆ ದಿನೇದಿನೇ ಅಭಿವೃದ್ಧಿ ಹೊಂದುತ್ತಿತ್ತು.

ಅಲ್ಲಿನ ಯಂತ್ರಗಳಿಗೆ ಹೊರದೇಶಗಳಿಂದ ತರಿಸಿದ ವಿದ್ಯುತ್ ಮೋಟರುಗಳನ್ನು ಅಳವಡಿಸಿದ್ದರು. ಅವು ಕೆಟ್ಟುಹೋದಾಗ ಸರಿಪಡಿಸಲು ಯಂತ್ರವನ್ನು ಮುಂಬಯಿಗೆ ಕಳುಹಿಸ ಬೇಕಾಗುತ್ತಿತ.

ಆಗ ವಾಡಿಯಲ್ಲಿ ಇದ್ದ ಜೋಶಿಯವರ ಸಲಹೆಯಂತೆ ವಾಡಿಯಲ್ಲೇ ಸರಿಮಾಡತೊಡಗಿದರು. ಇದರಿಂದ ಉತ್ತೇಜಿತ ರಾಗಿ ಎಲೆಕ್ಟ್ರಿಕ್ ಮೋಟಾರುಗಳನ್ನು ವಾಡಿಯಲ್ಲೇ ಏಕೆ ತಯಾರುಮಾಡಬಾರದು ಎಂಬ ವಿಚಾರ ರಾಯರ ಮನಸ್ಸಿನಲ್ಲಿ ಹುಟ್ಟಿ, ಬೇಕಾದ ಸಾಮಾಗ್ರಿಗಳನ್ನು ತರಿಸಿ ೧೯೩೮ ರಲ್ಲಿ ಐದು ಅಶ್ವ ಶಕ್ತಿಗಳ ಒಂದು ಮೋಟರನ್ನು ಮಾಡಿದರು. ಇದರಿಂದ ಪರದೇಶಗಳಿಗೆ ಹೋಗುತ್ತಿದ್ದ ಅಪಾರವಾದ ಹಣ ಉಳಿಯಿತು.

ಈ ಸುಮಾರಿಗೆ ಎರಡನೇ ಮಹಾಯುದ್ಧವು ಪ್ರಾರಂಭ ವಾಯಿತು. ಅಷ್ಟುಹೊತ್ತಿಗೆ ಲಕ್ಷ್ಮಣರಾಯರ ಕಿರಿಯ ಮಗ ರವೀಂದ್ರ ಕಿರ್ಲೋಸ್ಕರರು ಎಲೆಕ್ಟ್ರಿಕಲ್ ಎಂಜಿನೀಯರಿಂಗ್ ಪಾಸುಮಾಡಿ ಅಮೆರಿಕದಿಂದ ಭಾರತಕ್ಕೆ ಮರಳಿದರು. ಅವರ ನೇತೃತ್ವದಲ್ಲಿ ಎಲೆಕ್ಟ್ರಿಕ್ ಮೋಟರ್ ಭಾಗವು ವಾಡಿಯಲ್ಲಿ ಬೆಳೆಯಿತು.

ಒಳ್ಳೆ ಅಭಿವೃದ್ಧಿಗೆ ಬರಲಿರುವ ಬೆಂಗಳೂರಿನಲ್ಲಿಯೂ ಉದ್ಯೋಗ ಕ್ಷೇತ್ರವನ್ನು ಪ್ರಾರಂಭಿಸಬೇಕೆಂದು ಲಕ್ಷ್ಮಣರಾಯರು ಯೋಚಿಸಿ ೧೯೪೭ ರಲ್ಲಿ ಕಾರ್ಖಾನೆಗೆ ಅಸ್ತಿಭಾರವನ್ನು ಹಾಕಿದರು. ಎಲೆಕ್ಟ್ರಿಕ್ ಮೋಟಾರುಗಳು, ಟ್ರಾನ್ಸ್ ಫಾರ್ಮರ್ ಗಳು, ವಿದ್ಯುತ್ ಉಪಕರಣಗಳನ್ನು ಮಾಡುವ ಈ ಕಿರ್ಲೋಸ್ಕರ್ ಎಲೆಕ್ಟ್ರಿಕ್ ಕಂಪನಿಯ ಒಡೆತನವನ್ನು ರವೀಂದ್ರ ಕಿರ್ಲೋಸ್ಕರರು ವಹಿಸಿಕೊಂಡರು. ಈ ಕಾರ್ಖಾನೆಯು ಚೆನ್ನಾಗಿ ಅಭಿವೃದ್ಧಿ ಹೊಂದಿ ಇಡೀ ಭಾರತಕ್ಕೆಲ್ಲಾ ಎಲೆಕ್ಟ್ರಿಕ್ ಮೋಟಾರುಗಳನ್ನು ಸರಬರಾಜು ಮಾಡತೊಡಗಿತು.

ನಕ್ಷೆಯಿಂದ ಯಂತ್ರ

ಎರಡನೇ ಮಹಾಯುದ್ಧವು ಪ್ರಾರಂಭವಾದ ಮೇಲೆ ಬ್ರಿಟಿಷರಿಗೆ ಷೆಲ್‌ಗಳ ಅಭಾವವಾಗಿ ಸೈನ್ಯಕ್ಕೆ ಯುದ್ಧ ಸಾಮಾಗ್ರಿ ಗಳನ್ನು ಪೂರೈಸುವುದು ಕಷ್ಟವಾಯಿತು. ಆಗ ಸರ್ಕಾರವು ಎಲ್ಲಾ ಕೈಗಾರಿಕೋದ್ಯಮಿಗಳನ್ನು ದೆಹಲಿಗೆ ಕರೆಸಿ ತನ್ನ ಕಷ್ಟ ಗಳನ್ನು ತಿಳಿಸಿತು. “ಷೆಲ್‌ಗಳನ್ನು ಮಾಡುವ ಯಂತ್ರ ದೇಶದಲ್ಲಿ ಎಲ್ಲೂ ಇರಲಿಲ್ಲ. ಇಂಗ್ಲೆಂಡಿನಿಂದ ತರಿಸಲು ಯುದ್ಧದ ದೆಸೆಯಿಂದ ಸಾಧ್ಯವಿಲ್ಲ. ಯಂತ್ರದ ನಕ್ಷೆ ಮಾತ್ರ ಇದೆ. ಅದರ ಆಧಾರದ ಮೇಲೆ ಯಂತ್ರವನ್ನು ಮಾಡಿಕೊಟ್ಟರೆ ನಮ್ಮ ಪ್ರೋತ್ಸಾಹ ಇದೆ” ಎಂದು ಸರ್ಕಾರ ತಿಳಿಸಿತು.

ಕೂಡಲೇ ವಾಡಿಯಲ್ಲಿದ್ದ ಎಲ್ಲಾ ಯಂತ್ರನಿಪುಣರು ಸೇರಿ ಮೂರು ತಿಂಗಳವರೆಗೆ ಕಷ್ಟಪಟ್ಟು ಆ ಯಂತ್ರವನ್ನು ತಯಾರಿಸಿ ಕೊಟ್ಟರು.

ಪುಣೆಯಲ್ಲಿ ಆಯಿಲ್ ಎಂಜಿನ್ ಕಾರ್ಖಾನೆಯು ತಲೆಯೆತ್ತಿ ನಿಂತಿತ್ತು. ಕಿರ್ಲೋಸ್ಕರ್ ವಾಡಿಯು ಲಕ್ಷ್ಮಣರಾಯರ ಕನಸನ್ನು ನನಸಾಗಿಸಿದ ನಗರವಾಗಿ ಮೆರೆಯುತ್ತಿತ್ತು. ಹರಿಹರದಲ್ಲಿ ಮೆಷಿನ್‌ಟೂಲ್ಸ್ ಕಾರ್ಖಾನೆ ಕಂಗೊಳಿಸುತ್ತಿತ್ತು. ಬೆಂಗಳೂರಿನಲ್ಲಿ ಕಿರ್ಲೋಸ್ಕರ್ ಎಲೆಕ್ಟ್ರಿಕ್ ಕಾರ್ಖಾನೆ ಭವ್ಯವಾಗಿ ಬೆಳಗಿ ಪ್ರವರ್ಧಮಾನವಾಗುತ್ತಿತ್ತು. ಲಕ್ಷ್ಮಣರಾಯರ ಮಕ್ಕಳು ಎಲ್ಲಾ ಕಾರ್ಖಾನೆಗಳ ಆಡಳಿತವನ್ನು ಯಶಸ್ವಿಯಾಗಿ ನಡೆಸಿಕೊಂಡು ಹೋಗುತ್ತಿದ್ದರು. ಕಿರ್ಲೋಸ್ಕರ್ ಕಾರ್ಖಾನೆಗಳ ಹೆಸರು

ಭಾರತದಲ್ಲೇ ಅಲ್ಲದೆ ದೇಶವಿದೇಶಗಳಲ್ಲಿಯೂ ಪ್ರಖ್ಯಾತ ವಾಗಿತ್ತು.

ಇತರರಿಗೆ ಬೆಂಬಲ

ಲಕ್ಷ್ಮಣರಾಯರು ಸ್ವತಃ ಕಾರ್ಖಾನೆಗಳನ್ನು ಸ್ಥಾಪಿಸಿದ್ದಲ್ಲದೆ ಯಾರಾದರೂ ಕೈಗಾರಿಕೆಯಲ್ಲಿ ಮುಂದೆ ಬರಲು ಆಸಕ್ತಿ ತೋರಿಸಿದರೆ ಅವರಿಗೆ ಬೆಂಬಲವಾಗಿ ನಿಂತು ಅವರಿಗೆ ಬೇಕಾದ ಬಂಡವಾಳ ಸೌಕರ್ಯಗಳನ್ನು ನೀಡುತ್ತಿದ್ದರು. ಹೀಗೆ ಮುಂದೆ ಬಂದ ಕಾರ್ಖಾನೆಗಳು ನೂರಾರು. ಓಗಲೆ ವಾಡಿಯ ಗಾಜಿನ ಕಾರ್ಖಾನೆ, ಲೋನಾವಳದ ಲಕಾಃ ವರ್ಕ್ಸ್ ಲಿಮಿಟೆಡ್, ಟೇಕೇಕರ್ ವಾಡಿಯ ಶಿವಾಜಿ ವರ್ಕ್ಸ್ ಲಿಮಿಟೆಡ್, ಸಾತಾರದ ಕೂಪರ್ ಎಂಜಿನೀಯರಿಂಗ್ ವರ್ಕ್ಸ್ ಮುಖ್ಯವಾದವು.

ಇಷ್ಟಲ್ಲದೆ ಚಿಕ್ಕಚಿಕ್ಕ ಮತ್ತು ಮಧ್ಯಮ ತರಗತಿಯ ಅನೇಕ ಕಾರ್ಖಾನೆಗಳಿಗೆ ಲಕ್ಷ್ಮಣರಾಯರು ನೆರವು ನೀಡಿದರು. ಬೆಳಗಾವಿಯ ಜಕ್ಸ್ ಕಾರ್ಖಾನೆ, ಸಂಕೇಶ್ವರದ ಭಾರತ್ ಮೆಟಲ್ ವರ್ಕ್ಸ್, ಹರಿಹರದ ಸೋನಾಲ್ಕರ್ ಎಂಜಿ ನೀಯರಿಂಗ್ ವರ್ಕ್ಸ್ ಹೀಗೆ ಎಷ್ಟೋ ಉದ್ಯಮಗಳು ರಾಯರ ಆಶ್ರಯದಿಂದ ಬೆಳೆದವು. ಲಕ್ಷ್ಮಣರಾಯರಿಗೆ ವಯಸ್ಸಾಗುತ್ತಾ ಬಂದರೂ ವಿಶ್ರಾಂತಿ ಎಂಬ ಪದವನ್ನೇ ಅರಿಯರು. ಪುಣೆಯಲ್ಲಿ ಹಿರಿಯ ಮಗ ಶಂತನರಾವ್ ಕಿರ್ಲೋಸ್ಕರ ರೊಡನೆ ಪ್ರತಿದಿನ ಕಾರ್ಖಾನೆಗೆ ಭೇಟಿ ಕೊಡುವುದು, ಅಲ್ಲಿಂದ ಹೊರಬೀಳುವ ಯಂತ್ರಗಳನ್ನು ಪರಿಶೀಲಿಸುವುದು ಅವರ ಕೆಲಸವಾಗಿತ್ತು. ಸುಮ್ಮನೆ ಕೂಡಲು ಇಷ್ಟವಿಲ್ಲದೆ ಬೇಸಾಯ ಮಾಡುತ್ತಿದ್ದರು. ಹೊಸ ರೀತಿಯ ಸುಧಾರಿಸಿದ ಪದ್ಧತಿಯಿಂದ ಭತ್ತ ಬೆಳೆಯುವ ವಿಧಾನ ಅನುಸರಿಸಿ ಭತ್ತ ಬೆಳೆದರು.

ಲಕ್ಷ್ಮಣರಾಯರು ಕಷ್ಟದಲ್ಲಿದ್ದವರಿಗೆ ಮಾಡಿದ ಸಹಾಯದ ಲೆಖ್ಖವೇ ಇಲ್ಲ. ೧೯೪೩ ರಲ್ಲಿ ಬಂಗಾಳದಲ್ಲಿ ಘೋರ ಕ್ಷಾಮ ತಲೆದೋರಿತು. ಅಲ್ಲಿನ ಜನರ ನೆರವಿಗಾಗಿ ಹಣ ಕೂಡಿಸು ತ್ತಿದ್ದವರು ಇಬ್ಬರು ರಾಯರ ಬಳಿಗೆ ಬಂದರು. ರಾಯರು ತಮ್ಮ ಕಾರ್ಯದರ್ಶಿಯನ್ನು, “ಇವತ್ತು ಬ್ಯಾಂಕಿನಲ್ಲಿ ನನ್ನ ಲೆಖ್ಖದಲ್ಲಿ ಎಷ್ಟು ಹಣ ಇದೆ?” ಎಂದು ಕೇಳಿದರು. ಇದ್ದ ಎಂಟು ಸಾವಿರ ರೂಪಾಯಿಗಳನ್ನು ಕೊಟ್ಟುಬಿಟ್ಟರು.

೧೯೫೩ ರ ಆಗಸ್ಟ್ ೩ ನೇ ದಿನಾಂಕ ಮರಾಠಾ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರೀಸ್ ಸಂಸ್ಥೆಯ ಮೋಕ್ಷ ಗುಂಡಂ ವಿಶ್ವೇಶ್ವರಯ್ಯನವರ ಅಧ್ಯಕ್ಷತೆಯಲ್ಲಿ ಲಕ್ಷ್ಮಣರಾಯ ರನ್ನು ಗೌರವಿಸಿತು.

೧೯೫೫ ರ ಫೆಬ್ರವರಿ ೨೭ ರಂದು ರಾಯರ ಜೀವನದಲ್ಲಿ ಅಪೂರ್ವ ಸುಸಂಧಿ. ‘ಡೀಜಲ್ ಎಂಜಿನ್‌ನ ಜನ್ಮಭೂಮಿ’ ಎನ್ನಿಸಿಕೊಂಡ ಜರ್ಮನಿಗೇ ಕಿರ್ಲೋಸ್ಕರ್ ಕಂಪನಿಯಲ್ಲಿ ತಯಾರಾದ ಇಪ್ಪತ್ತು ಡೀಜಲ್ ಎಂಜಿನ್‌ಗಳನ್ನು ಕಳುಹಿಸುವ ಸಮಾರಂಭವು ರಾಯರ ನೇತೃತ್ವದಲ್ಲಿ ನೆರವೇರಿತು. ಲಕ್ಷ್ಮಣರಾಯರ ಬಾಳು ಸಾರ್ಥಕವಾಗಿತ್ತು.

ಕೆಲಸವೇ ದೇವರು

ಬರಿಗೈಯಲ್ಲಿ ಮುಂಬಯಿಗೆ ಹೊರಟಿದ್ದ ಬಾಲಕ ‘ಲಖೂ’ ಎನ್ನಿಸಿಕೊಂಡಿದ್ದ ಲಕ್ಷ್ಮಣರಾಯರು ಈಗ ಹಲವಾರು ಕಾರ್ಖಾನೆಗಳನ್ನು ಸ್ಥಾಪಿಸಿ ದೇಶದ ಸಂಪತ್ತನ್ನು ಹೆಚ್ಚಿಸಿದರು. ಸಾವಿರಾರು ಮಂದಿಗೆ ಉದ್ಯೋಗ ಒದಗಿಸಿದರು. ಅಲ್ಲದೆ ಸ್ವಾವಲಂಬನ-ಸಾಹಸ ಪ್ರವೃತ್ತಿಗಳ ಮೇಲ್ಪಂಕ್ತಿಯನ್ನು ಹಾಕಿ ಕೊಟ್ಟರು.

೧೯೫೬ರ ಆಗಸ್ಟ್ ೭ ರಂದು ನಿತ್ಯದಂತೆ ಬೆಳಗಿನ ಸ್ನಾನವನ್ನು ಮಾಡಿ ಹೊಲದ ಬಳಿಗೆ ಹೋಗಿ ಕೆಲಸವನ್ನು ನೋಡುತ್ತಿದ್ದಾಗ ಲಕ್ಷ್ಮಣರಾಯರಿಗೆ ಎದೆಯಲ್ಲಿ ಬೇನೆ ಕಾಣಿಸಿ ಕೊಂಡಿತು. ಮೂರ್ಛಿತರಾದರು. ಸೆಪ್ಟೆಂಬರ್ ೨೫ರ ರಾತ್ರಿ ನಿಧನರಾದರು. ಆಗ ಅವರಿಗೆ ಎಂಬತ್ತೇಳು ವರ್ಷ. ಲಕ್ಷ್ಮಣರಾಯರು ಮಣ್ಣಿನಲ್ಲಿ ಐಕ್ಯವಾದರೂ ಅವರ ಭವ್ಯ ಮೂರ್ತಿಯು ಸದಾ ದಿವ್ಯ ಸಂದೇಶವನ್ನು ಸಾರುತ್ತಿದೆ. ಸ್ವಾವಲಂಬನೆಯ ಅಡಿಪಾಯದ ಮೇಲೆ ಬಾಳನ್ನು ಕಟ್ಟಬೇಕು, ಕೆಲಸವೇ ದೇವರು-ಇದು ಅವರ ಜೀವನದ ಸಂದೇಶ.