ಜಲದಿಯಲ್ ಹುಟ್ಟೀತೇ ಜಂಬೂದೀಪದ ಕಲ್ಲು
ತಿಂಗಳಕೆ ಮೂರೋ ಕದರವೇ | ಲಕಮಣನ
ಸುಂಗಾರದಾ ಕೆಲಯಾ ತೊಡಗುವೊ| ಅಂದ್ ಇಸರರು

ಕೂತ ಮಂಚವ ಜಡದೆದ್ದೇ | ಇಸರರು
ಮಾಳೂಗಿ ಒಳಗೆ ನೆಡದಾರೆ | ಇಸರರು
ಅಟ್ಟತ್ತೀ ಪೆಟ್ಟುಗಿಯ ತೆಗ-ದಾರೇ | ಇಸರರು
ಮೆಟ್ಟಿ ಬೀಗವ ಕರೀ- ದಾರೆ | ಇಸರರು
ಮುಚ್ಚಿಲ ತಗದಿ ಕಡ- ಗಿಟ್ಟಿ | ಇಸರರು
ಪಟ್ಟೇ ಜೋತುರವ ನೆರ ದುಟ್ಟೇ| ಇಸರರು
ಮುತ್ತಿನ ಮುಂಡಸನ ತಲ್ಗೇ ಸುತ್ತಿ | ಇಸರರು
ಪಟ್ಟೇ ಜೋತುರವ ಹೊಗಲಿಗೇ | ಇಸರರು

ಬಣ್ಣದಲವಸ್ತ್ರ ಬಲಗಯ್ಲೀ | ತಡಕಂಡಿ
ಚಿನ್ನದುಂಗಿಲವ ಬೆರಳ್ ದುಂಬಿ | ಇಸರರು
ಪೆಟ್ಟುಗಿ ಬಾಯಲ್ಲಿ ಮಡಗರೇ | ಇಸರರು
ಮಾಳಗ್ಗಿಂದೆರಗೆ ಬರೋವಾರೆ | ಇಸರರು
ರಾಜಂಗ್ಳ ಮೆಟ್ಟಾ ಇಳದಾರೆ | ಇಸರರು
ರಾಜಬಿದಿಗಾಗೇ ನೆಡದಾರೆ | ಇಸರರು
ಕಲ್ಲದಣ್ಪಯಲ್ಲೇ ನಿಲೋವಾರೆ | ಇಸರರು

ಆಗೊಂದು ಮಾತಾ ನುಡಿದಾರೆ
ಆಲದೆಲೆ ಸಾಕ್ಷಿ ಮತ್ತೇ ಗೋಳಿ ಸಾಕ್ಷಿ
ನಿತ್ತ ಕಲ್ ದಣ್ಪೆ ಜಲಸಾಕ್ಷಿ | ಮಾಡಿನ್ನು
ಕವ್ಲರರಮನಗೇ ನಡೆದಾರೆ | ಇಸರರು
ಹೋಗಿ ಬಾಗಲ್ಲೇ ನೀಲೋವಾರೆ

ಹೋಗಿ ಬಾಗಲ್ಲಿ ನಿಲುವದ್ನು ಕವ್ಲರು
ಚಂಬಗಲೆ ಉದಕವ ತಡದಾರೆ
ಕವ್ಲರು ಕೊಟ್ಟುದಕಾ ತಟ್ಟನೇ ತಡದಾರೆ
ಕಾಲಾ ಸಿರಿಮೊಕವಾ ತೊಳದಾರೆ | ಇಸರರು
ಮಾಳೂಗಿ ಒಳಗೆ ನೆಡದಾರೆ | ಇಸರರು
ತೂಗು ಮಂಚದ್ಲೆ ಕುಳತಾರೆ
ತೂಗು ಮಂಚದ್ಲೆ ಕುಳುವದ್ನು ಕವ್ಲರು

ಮಾಳೂಗಿ ಒಳಗೆ ನೆಡುದಾರೆ
ಆಯುಳ್ಳ ಬೆಳಿ ಎಲೆ ಸೋಯಿಸಿದ ಹಣ್ಣಡಕೆ
ಹಾಲಿನಲಿ ಬೆಂದ ತೆನೆಸುಣ್ಣ| ತಡಕಂಡಿ
ಮಾಳಗ್ಗಿಂದೆರಗೆ ಬರೋವಾರೆ |ಕವ್ಲರು
ಇಸರರನೊಡನೋಗಿ ನಿಲುವಾರು | ಕವ್ಲರು
ಇಸರರ ಗೊಂದೀಳ್ಯ ಕೊಡೊವಾರು |
ಕವ್ಲರು ಕೊಟ್ಟೀಳ್ಯ ತಟ್ಟನೆ ತಡ್ಡಾರೆ

ಆಯಾಕೊಂದೀಳ್ಯ ಮೆಲುವಾರು
ಎಲಿಯೊಂದ್ ತಿಂದಾರೆ ರಜವಲ್ಲೆ ಉಗಳಾರೆ
ಮಂಗಲದ ಮಾತಾ ತೊಡಗಾರೆ
“ನಮ್ಮಲ್ ಹೆಣ್ಣದೆ ನಿಮ್ಮಲ್ ಗಂಡದೆ
ಮಾಡ್ವಾನಾ ಮುದ್ದೋ ಮೊದವೀಯ |ಕವ್ಲರೇ
ನೋಡ್ವಾನಾ ಒಂದೊ ಅರ್ತ್ಯವೇ”

“ನಮ್ಮಲ್ ಗಂಡದೆ ನಿಮ್ಮಲ್ ಹೆಣ್ಣದೆ
ಮಾಡ್ವನೆ ಮುದ್ದೋ ಮೊದವೀಯ | ಇಸರರೆ
ನೋಡುವೊ ಒಂದೊ. ಅರ್ತ್ಯವೇ “| ಅಂದೇಳಿ
ಮಂಗಲದಾ ಮಾತಾ ತೊಡಗಾರೆ
ಮಂಗಲದಾಮಾತಾ ತೊಡಗ್ವದ್ನು ಕವ್ಲರು
ಆಗೊಂದು ಮಾತಾ ನುಡಿದಾರೆ.

ಆಗೊಂದು ಮಾತಾ ಏನಂದಿ ನುಡಿದಾರೆ
“ಈ ಮಾತಾ ಲಕುಮಣಗೆ ಒರಿಯಾ ಬೆಡಿ
ಬಾಳಿಹಣ್ಣ ಕೊಡ್ತೆ ಬಾಯ್ತುಂಬ ಹೊನ್ನ ಕೊಡ್ತೆ
ಈ ಸುದ್ಧಿ ಲಕಮಣಗೆ ಒರೆಯಾಬೆಡಿ”

ಬಾಳಿ ಹಣ್ಣೂ ಬೆಡ ಬಾಯ್ತುಂಬ ಹೊನ್ನು ಬೆಡ
ಈ ಸುದ್ಧಿ ಲಕಮಣಗೆ ಒರಿಯಾಬೇಕು “| ಅಂದೇಳಿ
ಹಾರಿದವಂಬರಕೆ ಸರಿಯಾಗಿ | ಗಿಳಿಗೋಳು
ಲಕಮಣನ ಮನಗೇ ನೆಡದಾರೆ | ಗಿಳಿಗೋಳು
ಹೋಗಿ ಮಿಳಿಮೆನೆ ಕುಳತಾರೆ | ಗಿಳಿಗೋಳು
ಅರಗಿ ನೋಡಿದರೆ ಒಳಗೊಮ್ಮೆ | ಗಿಳಿಗೋಳು

ಲಾಗೊಂದು ಮಾತಾ ನುಡೀದಾರೆ
“ಮಾಳೂಗಿ ಒಳಗೆ ಹಾಲ್ಗಾರುಂಬು ಲಕ್ಮಣ
ಕೇಳಿ ಬಾರೊಂದು ಹೊಸಸುದ್ದೆ | ನಿನ್ನಾಲು
ಮಾವನ ಮಗಳ್ಹೆರಗೆ ಕೊಡತಾರೆ

ಮಾಳೂಗಿ ಒಳಗೆ ಹಾಲ್ಗಾರುಂಬು ಲಕ್ಮಣ್ಣ
ಕೇಳೀ ಬಾರೊಂದು ಹೊಸ ಸುದ್ದೇ | ನಿನ್ನಾಲ
ಅತ್ತೀ ಮಗಳ್ಹೆರಗೇ ಕೊಡತಾರೆ ನಿನ್ನಾಲ;

ಅಟ್ಟಂಬ ಮಾತಾ ಕೇಳಾನೆ ಲಕ್ಮಣ್ಣ
ಉಣತಾ ಕಯ್ಯಲ್ಲೇ ಕುಡಗೆದ್ದೇ |ಲಕ್ಮಣ್ಣ
ಪನ್ನೀರಲಿ ಮೊಕವಾ ತೊಳದಾನೆ | ಲಕ್ಮಣ್ಣ
ಗಿಳಿಗಳೊಡನೋಗೆ ನಿಲವೋವಾನೆ |
ಆಗೊಂದು ಮಾತಾ ನುಡೀದಾನೆ
“ಹುಸಿಯೇನರಗಿಳಿಯೇ ಹುಸಿಯೇನೆಬನಗಿಳಿಯೆ
ಹುಸ್ಮಾತಾ ತಂದಿ ಒರಿದೀರಾ ? ”

“ಹುಸಿಯಾದ್ರ ಅಪ್ಪನಾಣಿ ಹುಸಿಯಾದ್ರ ಅವ್ವನಾಣಿ
ಹುಸಿಯಾದ್ರ ನಾವ್ ಕೊಂಬು ಎರಿಆಣಿ | ನಿನ್ನಾಲು
ಮಾವ್ನ ಮಗ್ಳೆರಗೇ ಕೊಡತಾರೆ

ಹುಸಿಯಾದ್ರ ಅಪ್ಪಮಾಣಿ ಹುಸಿಯಾದ್ರ ಅವ್ವನಾಣಿ
ಹುಸಿಯಾದ್ರ ನಾವ್ ಕೊಂಬು ಎರಿಆಣಿ | ದೆವಾರೆ
ಹುಸ್ಮಾತಾ ತಂದೀ ಒರಿಯಾಲಿಲ್ಲ | ನಿನ್ನಾಲು
ಅತ್ತೀ ಮಗ್ಳೆರಗೇ ಕೊಡುತಾರೆ ”

ಅಟ್ಟಂಬ ಮಾತಾ ಕೇಳಾನೆ ಲಕಮಣ್ಣ
ಮಾಳೂಗಿ ಒಳಗೆ ನೆಡದಾನೆ | ಲಕಮಣ್ಣ
ತಟ್ಟೀಲ್ ಹಾಲಾ ಎರದಾನೆ | ಲಕಮಣ್ಣ
ಬಾಳೀ ಹಣ್ಣೇಳ ಸೊಲಿದಾನೆ | ಲಕಮಣ್ಣ
ಇಳ್ಳೀ ಹಣ್ಣೇಳ ಸೋಲದಾನೆ       
ಹಾಲೊಳಗಣ್ಣ ನುಳಿದಾನೇ | ಲಕಮಣ್ಣ
ಮಾಳಗ್ಗಿಂದೆರಗೇ ಬರೋವಾನೆ | ಲಕಮಣ್ಣ

ಗಿಳಿಗೋಳೊಡನೋಗೆ ನಿಲೋವಾನೆ
ಗಿಳೀಗೊಳೊಡನೊಗೆ ನಿಲುವುದ್ನು ಗಿಳಿಗೋಳು
ರಟ್ಟೇ ಅಲ್ಲಾಡೇ ಕುಡೀದಾವೆ
ಹಾಲಾ ಕುಡ್ದವೇ ಗಿಳಿಗೋಳು ಹಣ್ಣ ಮೆದ್ದವೆ ಗಿಳೀಗೋಳು
ಹಾರಿದವೇ ಅಂಬರಕೆ ಸೆರಿಯಾಗಿ | ಲಕ್ಮಣ್ಣ

ಮಾಳೂಗಿ ಒಳಗೆ ನೆಡದಾನೆ | ಲಕ್ಮಣ್ಣ
ಅಟ್ಟತ್ತೀ ಪೆಟ್ಟಗಿಯ ತೆಗದಾನೆ | ಲಕ್ಮಣ್ಣ
ಮೆಟ್ಟಿ ಬೀಗವ ಕರಿದಾನೆ | ಲಕ್ಮಣ್ಣ
ಮುಚ್ಚೀಲ ತಗ್ದೀ ಕೆಡಗಿಟ್ಟೇ | ಲಕ್ಮಣ್ಣ
ಪಟ್ಟೇ ಜೋತರವ ನೆರದುಟ್ಟೇ | ಲಕ್ಮಣ್ಣ
ಮುತ್ತನ ಮುಂಡಸನ ತಲ್ ಸುತ್ತೇ | ಲಕ್ಮಣ್ಣ
ಪಟ್ಟೇ ಹಚ್ಚಡವ ಹೊಗಲೀಗೆ | ಲಕ್ಮಣ್ಣ
ಚಿನ್ನ ದುಂಗಿಲವ ಬೆರಳ್ ದುಂಬೇ | ಲಕ್ಮಣ್ಣ

ಬಣದಲ ವಸ್ತ್ರ ಬಲಗಯ್ಲಿ | ತಡಕಂಡಿ
ಪೆಟ್ಟುಗಿ ಬಾಯಲ್ಲಿ ಮಡುಗಾನೆ | ಲಕ್ಮಣ
ಮಾಳಗ್ಗಿಂದೆರಗೇ ಬರುವಾನೆ | ಲಕ್ಮಣ
ಬಂದೀ ಬಾಗಲ್ಲಿ  ನಿಲುವಾನೆ
ಬಂದೀ ಬಾಗಲ್ಲಿ ನಿಲುವದ್ನು ತಾಯವ್ವಿ
ಆಗೊಂದು ಮಾತಾ ನುಡಿದಾಳೆ

“ಒಳದುಟ್ಟೆ ಮಗನೆ ಒಳ್ಳಾದುತೊಟ್ಟೆ ಮಗನೆ
ಎಲ್ಲಿಗೋ ಮಗನೆ ಸವನೀದೆ
ಅರಸುಗೋಳುಡಗಿ ಉಟ್ಟೇ ಅರಸುಗೋಳ್ ತೊಡಗಿ ತೊಟ್ಟೆ

ಎಲ್ಲಿಗೋ ಮಗನೇ ಸವನೀದೆ”
“ಅರಸು ಗೊಳೆಲ್ಲ ನಿಚ್ಚಾಗಳು ಇಡುವಾರೆ
ನಾ ಒಂದಿನುಟ್ಟೆ ಅಸಬಾಲಿ | ಅವ್ವಾ ಕೇಳೆ
ನನ್ನುಡಗಿ ನನಗೆ ಹೊರಿಯೇನೆ
ನನ್ನುಡಗಿ ನನಗೆ ಹೊರಿಯೆ |ನಂದೇಳ್ ಲಕ್ಮಣ

ರಾಜಂಗ್ಳ ಮೆಟ್ಟ ಇಳೀದಾನೆ | ಲಕ್ಮಣ
ರಾಜಬೀದಿಗಾಗೆ ನೆಡದಾನೆ | ಲಕ್ಷ್ಮಣ
ಮಾವ್ನರನೆಗೇ ನೆಡದಾನೆ | ಲಕ್ಮಣ
ಹೋಗಿ ರಾಜಂಗ್ಳ ನೆಗದತ್ತೇ | ಲಕ್ಮಣ
ಮಾಳೂಗಿ ಒಳಗೆ ನೆಡದಾನೆ | ಲಕ್ಮಣ
ತೂಗುಮಂಚದಲೆ ಕುಳತಾನೆ | ಲಕ್ಮಣ
ಆಗೊಂದು ಮಾತಾ ನುಡೀದಾನೆ
“ಮಾಳೂಗಿ ಒಳಗೆ ಹವ್ಳಾ ಸುರು ಅತ್ಯಮ್ಮ
ಮಾವನೋರೆತ್ತ ನೆಡದಾರ್ಯೆ ”

“ನೆರ್ಮನಿಗೋಗ್ವರಲ್ಲ ಹೊರಮನಿಗೋಗ್ವರಲ್ಲ
ಅಂಗ್ಳದ ಸುತ್ತೇ ಇರೋವಾರೋ | ಲಕ್ಮಣ್ಣ
ಇನ್ನೊಂದರಗಳಗ್ಲೆ ಬರೋವಾರೋ ”
“ಮೆತ್ತೀನ ಒಳಗೆ ಮುತ್ತಾ ಸುರು ಅತ್ಯಮ್ಮ
ಮಾವ್ನಾನೋರೆತ್ತಾ ನೆಡದಾರೆ”
“ನೆರಮನಿಗೋಗ್ವರಲ್ಲ ಹೊರಮನಿಗೋಗ್ವರಲ್ಲ
ಅಂಗ್ಲದ ಸುತ್ತೇ ಇರೋವಾರೋ | ಲಕ್ಮಣ    
ಇನ್ನೊಂದರಗಳಗ್ಲೇ ಬರೋವಾರೋ ”

ಅಟ್ಟಂಬಾ ಮಾತಾ ಕೇಳಾನೆ ಲಕಮಣ್ಣ
ಮಾದೇವಿಗಾಣೆ ಇಡೂವಾನೆ
“ಆಣಿ ಕಾಮನಾಣಿ ಆಣಿ ಬೀಮಾನಾಣಿ
ಆಣೀ ಅತ್ತೀಯ ಮೊಗಳೀಗೆ |ಗ್| ಅಂದ್ ಲಕ್ಮಣ
ಮಾದೇವಿ ಗಾಣಿ ಇಡೋವಾನೆ | ಲಕ್ಮಣ
ಕೂತ ಮಂಚದ ಜಡದೆದ್ದೇ | ಲಕ್ಮಣ
ರಾಜಂಗ್ಳ ಮೆಟ್ಟಾ ಇಳೀದಾನೆ | ಲಕ್ಮಣ
ಸೆಣ ಮಾವ್ನರ ಮನಗೇ ನೆಡದಾನೆ | ಲಕ್ಮಣ

ಹೋಗಿ ಬಾಗಲ್ಲೇ ನಿಲೋವಾನೆ
ಹೋಗಿ ಬಾಗಲ್ಲೆ ನಿಲುವುದ್ನು ಪರಮಿಂದ್ರರು
ತಡದರೆ ಚಂಬಗಲೆ ಉದಕವೆ
ಮಾವಾ ಕೊಟ್ಟೂದಕಾ ತಟ್ಟನೇ ತಡದಾನೆ
ಕಾಲು ಸಿರಿಮೊಕವಾತೊಳದಾನೆ| ಲಕುಮಣ್ಣ
ಮಾಳೂಗಿ ಒಳಗೆ ನೆಡದಾನೆ | ಲಕುಮಣ್ಣ
ತೂತು ಮಂದಲೆ ಕುಳತಾನೆ
ತೂಗು ಮಂಚದಲೆ ಕುಳುವುದನು ಪರಮಿಂದ್ರರು

ಮಳೂಗಿ ಒಳಗೆ ನೆಡದಾರೆ
ಆಯುಳ್ಳ ಹಣ್ಣಡಕೆ ಸೋಯಿಸಿದ ಬೆಳಿಎಲೆ
ಹಾಲಿನಲ್ಲಿ ಬೇಯಿಸಿದ ತೆನೆಸುಣ್ಣ | ತಡಕಂಡೆ
ಮಳಗಿಂದೆರಗೆ ಬರೋವಾರೆ | ಪರಮಿಂದ್ರರು
ಲಕ್ಮಣಗೊಂದೀಳ್ಯ ಕೊಡೋವಾರೇ
ಮಾವಾ ಕೊಟ್ಟೀಳ್ಯ ತಟ್ಟನೆ ತದಾನೆ
ಆಯಾಕೊಂದೀಳ್ಯ ಮೆಲೋವಾನೆ

ಎಲಿಯೊಂದ್ ತಿಂದಾನೆ ರಜವಲ್ಲೆ ಉಗಳಾನೆ
ಆಗೊಂದು ಮಾತು ನುಡದಾನೆ
“ಮಾವನ ಮಗಳು ನಾತರಬೇಕಂತಿದ್ದೆ
ನನ್ನ ಬಿಟ್ಟ ಹೆರುಗೆ ಕೊಡುತಾರೆ
ಅತ್ತಿಯ ಮಗ್ಳು ನಾತರಬೇಕು ಅಂತಿದ್ದೆ
ನನ್ನ ಬಿಟ್ಟಿ ಹೆರುಗೆ ಕೊಡುತಾರೆ ”

“ನಾವು ನೀ ಇದ್ದೀ ಮತ್ತೇ ಪರೋರಿದ್ದಿ
ನಿಂಗ್ಹೆರಗನ್ನ ಹೆಣ್ಣ ತರೋವಾನಿ | ಲಕ್ಮಣ
ಮಾಡ್ವಾನೋ ಮುದ್ದೋ ಮೊದವೀಯ | ಲಕ್ಮಣ
ನೋಡ್ವೋನೋ ಒಂದೋ ಅರತ್ಯವ
ದೂರಿದ್ದೇ ಕಾಂಬೋ ಅರತ್ಯವ ”

ಅಟ್ಟಂಬ ಮಾತಾ ಕೇಳಾನೆ ಲಕಮಣ್ಣ
ಸಿಟ್ಟಿನಲ್ಲೆದ್ದೇ ಬರೋವಾನೆ | ಲಕಮಣ್ಣ
ರಾಜಂಗ್ಳ ಮೆಟ್ಟ ಇಳೋವಾನೆ | ಲಕಮಣ್ಣ
ರಾಜಬೀದಿಗಾಗೇ ನೆಡದಾನೆ | ಲಕಮಣ್ಣ

ತೂಗು ಮಂಚದಲೆ ಕುಳೋತಾನೆ
ತೂಗೂ ಮಂಚದಲೆ ಕುಳುವುದ್ನು ತಾಯವ್ವಿ
ಊಟಕ್ ಬಾರಂದೇ ಕರದಾಳೆ

“ಮಾವನ ಮಗಳೂ ಲಗ್ಗನಾಗೂ ತಂಕೆ
ಊಟದ ಗೊಡವೆ ತನಗಿಲ್ಲ
ಅತ್ತೀಯ ಮಗಳು ಲಗ್ಗನಾಗೂ ತಂಕೆ
ಊಟದ ಗೊಡವೆ ತನಗಿಲ್ಲ” ಅಂದ್ ಲಕಮಣ್ಣ
ಮುಚ್ಚು ಮೂಡಾಕೆ ಮನಗಾನೆ

ಮಂಗಲ್ದ ಮಾತಾ ತೊಡಗಾರೆ ಇಸರರು
ಲಾಗೊಂದು ಮಾತಾ ನುಡದಾರೆ
“ಸುಕ್ರರ ತದಗಿಯೋ ಬ್ರಸ್ತರ ಬಿದಗಿಯೋ
ಸಣಿಯರ ಮಾದೇವಿ ಮುದವಿಯೋ
ಕಂಬು ಸಂದಕದಿಂದೇ ಸರ್ವ ವಾದದೀದಿಂದೆ
ಕವ್ಲರ ದಿಬ್ಬಣವೇ ಸವನಲೆ
ಕವ್ಲರ ದಿಬ್ಬಣವೇ ಸವ್ನೀ ಸುಂಗಾರಾಗಿ

ಆನಗಲ್ಲ ದಾರಿಗಾಗೇ ಬರೋಬೇಕೆ |ಕವ್ಲರು
ಬಾಳಿ ಬನದಲ್ಲಿ ನಿಲಬೇಕೋ |ಕು| ಅಂದೇಳಿ
ಮಂಗಲ್ದ ಮಾತಾ ಮುಗೀಸಾರೆ | ಇಸರರು
ಕೂತ ಮಂಚವ ಜಡದೆದ್ದೇ | ಇಸರರು
ರಾಜಂಗ್ಳ ಮೆಟ್ಟ ಇಳೀದಾರೆ | ಇಸರರು
ತಮ್ಮ ಅರಮನೆಗೆ ಬರೋವಾರೆ | ಇಸರರು

ಬಂದೀ ಬಾಗಲ್ಲೆ ನಿಲೋವಾರೆ
ಬಂದೀ ಬಾಗಲ್ಲೆ ನಿಲುವದ್ನು ಇಸರರ ಮಡದಿ
ಹಣ್ಣೆಲಿ ಅಂತೇ ಬಳಕೀತೆ | ಬಾಡೀತೆ
ಇಸರರಿ ಉದಕಾ ಕೊಡೋವಾಳೆ
ಮಡದಿ ಕೊಟ್ಟುದಕಾ ತಟ್ಟನೆ ತಡದಾರೆ
ಕಾಲಾ ಸಿರಿಮೊಕವಾ ತೊಳದಾರೆ | ಇಸರರು
ಆಗೊಂದು ಮಾತಾ ನುಡೀದಾರೆ

“ಅತ್ತೇ ಏನ್ ಬಯ್ದೀತೋ ಮಾವೇನ ಬಯ್ದನೋ
ಮನದಾದಿಯೋರ್ ಕುಂದಾ ನುಡದಾರಿಯೋ?”
“ಅತ್ತೆ ಏನ್ ಬಯ್ಲಿಲ್ಲ ಮಾವೇನ ಬಯ್ಲಿಲ್ಲ
ಮನದಾದಿಯೋರ್ ಕುಂದಾ ನುಡಿಯಾಲಿಲ್ಲ | ಸೋದರದಾ
ಲಕಮಣ ಮಾದೇವಿಯ ತಡದೋದಾ ”

“ಆಗಳ್ ಬಂದವನೆ ಆಗಳೆ ಹೋಗನಿಯ
ಮತ್ತೊಂದರಗಳಗೇ ನಿಲಲಿಲ್ಲ
ಮತ್ತೊಂದರಗಳಗೇ ನಿತ್ತದುಂಟಾದರೆ
ಮುಂದಲಿ ತಟ್ಟಿ ಎಳಿಯಾತಿದ್ದೆ | ಅವನಾಲೋ
ಹೆತ್ತಮ್ಮನೋಡಲೋ ಉರೋವಂಗೆ | ಅಂದೇಳೆ
ಕಾಲೂ ಸಿರಿಮೊಕವಾ ತೊಳದಾರೆ | ಇಸರರು
ತೂಗು ಮಂಚದಲೆ ಕುಳತಾರೆ
ತೂಗು ಮಂಚದಲೆ ಕುಳುವದನು ಇಸರರ ಮಡದಿ

ಮಾಳೂಗಿ ಒಳಗೆ ನೆಡುದಾಳೆ
ಆಯುಳ್ಳ ಹಣ್ಣಡಕೆ ಸೋಯಿಸಿದ ಬೆಳಿ ಎಲೆ
ಹಾಲಿನಲ್ಲಿ ಬೆಂದ ತೆನೆಸುಣ್ಣ | ತಡಕಂಡಿ
ಮಾಳಗ್ಗಿಂದೆರಗೆ ಬರೋವಾಳೆ | ಇಸರರ ಮಡದಿ
ಗಂಡಗೊಂದೀಳ್ಯ ಕೊಡೋವಾಳೆ
ಮಡದಿ ಕೊಟ್ಟೀಳ್ಯ ತಟ್ಟನೆ ತಡದಾರೆ
ಆಯಾ ಕೊಂದೀಳ್ಯ ಮೆಲೋವಾರೇ
ಎಲಿಯೊಂದ್ ತಿಂದಾರೆ ರಜವಲ್ಲೆ ಉಗಳಾರೆ

ಮಾಳೂಗಿ ಒಳಗೆ ನೆಡದಾರೆ | ಇಸರರು
ಸೆಣ್ಣ ಕಯ್ ಹಡ್ಪಾ ತಡದಾರೆ | ಇಸರರು
ಹಣ್ಣಡಕೆ ಬೆಳಿ ಎಲಿಯಾ ಹಡಪಕೆ | ಹಾಯಿಕಂಡೇ
ಹಡಪವ ಎತ್ತೇ ಹೋಗಲಿಗೇ | ಹಾಯಿಕಂಡೇ
ಮಾಳಗ್ಗಂದೆರಗೇ ಬರೋವಾರೇ | ಇಸರರು
ರಾಜಂಗ್ಳ ಮೆಟ್ಟ ಇಳೀದಾರೆ | ಇಸರರು
ನಾರಿಯರ್ ಕೇರಿಗಾಗೆ ನೆಡದಾರೆ |  ಇಸರರು
ಹೋಗಿ ಬಾಗಲ್ಲೇ ನಿಲೋವಾರೆ | ಇಸರರು
ನಾರಿಯರಿಗೊಂದೀಳ್ಯ ಕೊಡೋವಾರೆ | ಇಸರರು

“ಬ್ರಸ್ತರ ಬಿದಗಿಯೋ ಸುಕ್ರರ ತದಗಿಯೋ
ಸಣಿಯರ ಮಾದೇವಿ ಮೋದವಿಯೋ | ನಾರಿಯೋರೆ
ನೀವು ನಮ್ಮನಗೆ ಬರೋಬೇಕೆ | ನಮ್ಮನಿಯಾ
ಮೂಡಣಸಗರವಾ ತೊಳೀಯಾಬೇಕೆ ” | ಕು | ಅಂದೇಳಿ
ಕೊಡೋವಾರೆ,. | ಇಸರರು
ನಿಸ್ತ್ರೀಯರ ಕೇರಿಗಾಗೆ ನೆಡದಾರೆ | ಇಸರರು

ನಿಸ್ತೀರಿಯರಿಗೊಂದೀಳ್ಯ ಕೊಡೋವಾರೇ
ಬ್ರಸ್ತರ ಬಿದಗಿಯೋ ಸುಕ್ರರ ತದಗಿಯೋ
ಸಣಿಯರ ಮಾದೇವಿ ಮೊದವಿಯೋ | ನಿಸ್ತ್ರೀ ಯೋರೆ
ನೀವು ನಮ್ಮನಗೇ ಬರಬೇಕೆ ” |ಕು| ಅಂದೇಳಿ
ಬಿನ್ನಾಣಿ ಅರಮನಗೇ ನೆಡದಾರೆ | ಇಸರರು
ಬಿನ್ನಾಣಿ ಅರಮನಗೆ ನೆಡದಾರೆ | ಇಸರರು
ಬಿನ್ನಾಣಿಗೊಂದೀಳ್ಯ ಕೊಡುವಾರೆ

“ಬ್ರಸ್ತರ ಬಿದಗಿಯೋ ಸುಕ್ರರ ತದಗಿಯೋ
ಸಣಿಯರ ಮಾದೇವಿ ಮೊದವಿಯೋ |ಬಿನ್ನಣಿ
ನೀನು ನಮ್ಮನೆಗೇ ಬರಬೇಕೋ | ನಮ್ಮನಿಯ
ಮದೇವಿ ಸಿರಪನ್ನೀ ಗೆಯಬೇಕೋ |ಕು| ಅಂದೇಳೀ
ಆಚಾರಿ ಅರಮನಗೇ ನೆಡದಾರೆ | ಇಸರರು
ಹೋಗಿ ಬಾಗಲ್ಲೇ ನಿಲೂವಾರು | ಇಸರರು
ಆಚಾರಿಗೊಂದೀಳ್ಯ ಕೊಡುವಾರು

ಬ್ರಸ್ತರ ಬಿದಗಿಯೋ ಸುಕ್ರರ ತದಗಿಯೋ
ಸಣಿಯರ ಮಾದೇವಿ ಮೊದವಿಯೋ| ಆಚಾರಿ
ನೀನು ನಮ್ಮನಿಗೆ ಬರಬೇಕೋ | ಕು| ನಮ್ಮನಿಯ
ಬಾಗಲ ತೋರಣವಾ ಗೆಯಿಬೇಕೋ | ಅಂದೇಳಿ
ಕುಂಬರನರಮನಗೇ ನೆಡದಾರೇ| ಇಸರರು
ಕುಂಬರಗೊಂದೀಳ್ಯ ಕೊಡೋವಾರೇ

ಬ್ರಸ್ತರ ಬಿದಗಿಯೋ ಸುಕ್ರರ ತದಗಿಯೋ
ಸಣಿಯರ ಮಾದೇವಿ ಮೊದವಿಯೋ
ಕೊಂಬು ಕೊಂಬು ಗೆಯ್ಯೋ ಕುಂಬಗೆ ಮುಚ್ಚಳ ಗೆಯ್ಯೋ
ಅದಕೊಪ್ಪುದೆಯ್ಡು ರತಿಗೆಯ್ಯೋ | ಕುಂಬಾರ
ತಂದಿರಸೋ ನಮ್ಮಾ ಜಗಲ್ಯಲೋ| ಅಂದೇಳಿ
ಇಂದ್ರಾಲೋಕಕೆ ನೆಡದಾರೆ | ಇಸರರು
ಅಂಗ್ಡೀ ತೆಣೆಮೆನೆ ಕುಳತಾರೆ | ”

“ಅಂಗ್ಡೀ ಸೆಟ್ಟಿ” ಅಂದೇ ದೆನಿದೂರೇ
ಇಂದೂ ಕರದಂವಲ್ಲ ಬಂದನೇ ಅಂಗ್ಡೀ ಸೆಟ್ಟಿ
ನಿಂದನೇ ಇಸರರಾ ಒಡನಲ್ಲೇ| ನಿಂದೀ ಕಂಡೇ
“ಏನು ಕಾರಣಲೆ ಕರದಿಯೋ”
“ಕರದಂಕಾರಣವಿಲ್ಲ ಕಿರಿದಂಚಿ ಸಾರಿಲ್ಲ
ಇಂದ್ರ ಪಟ್ಟಿ ನೋಡೇ ತೆಗೆತಾರೋ”

ಅಟ್ಟಂಬಮಾತಾ ಕೇಳಾನೆ ಇಂದ್ರಸೆಟ್ಟಿ.
ವವಳಿಯ ದಿಂಡಾ ಬಿಡಸಾನೆ| ಅಂಗ್ಡಿ ಸೆಟ್ಟಿ
ಇಂದ್ರಾ ಪಟ್ಟಿ ನೋಡೇ ತೆಗುದಾನೆ | ಸೆಟ್ಟಿ.
ಮಾಳಗ್ಗಿಂದೆರಗೇನೆಡದಾನೆ | ಇಂದ್ರಾಸೆಟ್ಟಿ
ಇಸರರ ಬಲಗಯ್ಲಿ ಕೊಡೋವಾನೆ.
ಅಚಗಯ್ನ ಸರಗಾ ಇಚ್ಚ ಮಗ್ಚಿ ನೋಡಾರೆ