ಶ್ರೀರಾಮ ಸನಾತನಧರ್ಮ ದೇವರ ಅವತಾರವೆಂದು ಪೂಜಿಸಿಕೊಂಡು ಬಂದಿರುವ ಮಹಾಪುರುಷ. ಅವನಿಗೆ ನಮಸ್ಕಾರ ಸಲ್ಲಿಸುವಲ್ಲಿ ನಮ್ಮ ಸಂಪ್ರದಾಯ “ಶ್ರೀ ಸೀತಾ ಲಕ್ಷ್ಮಣ ಭರತ ಶತ್ರುಘ್ನ ಹನುಮತ್ಸಮೇತ ಶ್ರೀರಾಮ ಚಂದ್ರಸ್ವಾಮಿನೇ” ಎಂದು ಹೇಳುತ್ತದೆ. ಎಂದರೆ ನಾವು ಶ್ರೀರಾಮನಿಗೆ ನಮಸ್ಕಾರ ಮಾಡುವ ವೇಳೆ ಅವನ ಜೊತೆಗೆ ಅವನ ರಾಣಿ ಸೀತಾದೇವಿ, ಅವನ ಸೋದರರು ಲಕ್ಷ್ಮಣ ಭರತ, ಶತ್ರುಘ್ನ, ಅವನ ಸೇವಕ ಹನುಮಂತ, ಇವರಿಗೂ ನಮಸ್ಕಾರ ಸಲ್ಲಿಸುತ್ತೇವೆ. ಹೀಗೆ ಪೂಜೆಗೆ ಅರ್ಹರಾದ ಇವರಲ್ಲಿ ರಾಣಿ ಸೀತಾದೇವಿಯದು ಮೊದಲ ಸ್ಥಾನ; ಸೋದರ ಲಕ್ಷ್ಮಣನದು ಎರಡನೆಯದು. ಈ ಸಣ್ಣ ಪುಸ್ತಕದಲ್ಲಿ ನಮ್ಮ ಎಳೆಯರಿಗಾಗಿ ಈ ಮಹನೀಯ ಸೋದರನನ್ನು ಕುರಿತ ಮುಖ್ಯಸಂಗತಿಗಳನ್ನು ಸಂಗ್ರಹಿಸಿ ಹೇಳುವ ಯತ್ನ ಮಾಡಿದೆ.

ರಾಮಚಂದ್ರ ದಶರಥ ಚಕ್ರವರ್ತಿಯ ಹಿರಿಯ ಮಗ. ಲಕ್ಷ್ಮಣ ಎರಡನೆಯ ಮಗ ಇರಬೇಕು. ರಾಮನ ತಾಯಿ ದಶರಥನ ಹಿರಿಯ ರಾಣಿ ಕೌಸಲ್ಯಾದೇವಿ. ಲಕ್ಷ್ಮಣ ಶತ್ರುಘ್ನರು ಎರಡನೆಯ ರಾಣಿ ಸುಮಿತ್ರಾದೇವಿಯ ಮಕ್ಕಳು. ಭರತ ಮೂರನೇ ರಾಣಿ ಕೈಕಯೀದೇವಿಯ ಮಗ.

ಎಳೆತನದಿಂದ ಜೊತೆಯಾಗಿ ಬೆಳೆದು ರಾಮನಿಗೆ ಲಕ್ಷ್ಮಣ ಹೊರಗಡೆ ನಿಂತ ಇನ್ನೊಂದು ಪ್ರಾಣ ಎಂಬಂತೆ ಆದನು. ಮಗು ರಾಮಚಂದ್ರ ನಿದ್ರೆಮಾಡಬೇಕೆಂದರೆ ಜೊತೆಗೆ ಲಕ್ಷ್ಮಣ ಮಲಗಿರಬೇಕು. ಹಾಗೆಯೇ ಎಂಥ ರುಚಿಯಾದ ಉಣಿಸು ಎದುರಿಗಿದ್ದರೂ ಲಕ್ಷ್ಮಣ ಜೊತೆಗೆ ಬರುವವರೆಗೆ ರಾಮ ಅದನ್ನು ಮುಟ್ಟುತ್ತಿರಲಿಲ್ಲ. ಬೆಳೆದ ಮೇಲೆ ರಾಮ ಎಲ್ಲಿಗೆ ಹೋದರೆ ಅಲ್ಲಿ ಲಕ್ಷ್ಲಣ ಅವನ ಅನುಚರನಾಗಿ ನಡೆಯುವನು. ಕೊನೆಗೂ ಇವರಿಬ್ಬರೂ ಹೀಗೆಯೇ ಬಾಳಿದರು. ಹೀಗೆ ಲಕ್ಷ್ಮಣ ಲೋಕದಲ್ಲಿ ಒಳ್ಳೆಯ ತಮ್ಮನಾಗಿರುವವರಿಗೆ ಮೇಲ್ಪಂಕ್ತಿ ಆದನು.

ವಿಶ್ವಾಮಿತ್ರ ಮಹರ್ಷಿಯ ಅನುಗ್ರಹ

ಮಕ್ಕಳು ಬೆಳೆದರು. ವಿದ್ಯಾವಂತ ತರುಣರಾದರು. ಒಂದು ದಿನ ದಶರಥನ ಆಸ್ಥಾನಕ್ಕೆ ವಿಶ್ವಾಮಿತ್ರ ಮಹರ್ಷಿ ಬಂದನು. “ನಾನು ಒಂದು ಯಜ್ಞದಲ್ಲಿ ತೊಡಗಬೇಕೆಂದಿದ್ದೇನೆ. ಹಿಂದೆ ಇಂಥ ವೇಳೆ ತಾಟಕಿ ಎಂಬ ರಾಕ್ಷಸಿಯ ಮಕ್ಕಳಾದ ಮಾರೀಚ, ಸುಬಾಹು ಎಂಬ ಇಬ್ಬರು ದುಷ್ಟರು ಬಂದು ಯಜ್ಞಶಾಲೆಯನ್ನು ಅಪವಿತ್ರಮಾಡಿ ನನ್ನ ಕೆಲಸವನ್ನು ಕೆಡಿಸಿದ್ದಾರೆ. ಈ ಬಾರಿ ಅವರು ಹೀಗೆ ಮಾಡದಂತೆ ನೋಡಿಕೊಳ್ಳಬೇಕಾಗಿದೆ. ಯಜ್ಞವನ್ನು ರಕ್ಷಿಸುವುದಕ್ಕೆ ನಿನ್ನ ಮಗ ರಾಮನನ್ನು ಕಳುಹಿಸಿಕೊಡು, ಬಹು ಉಪಕಾರ ಆಗುತ್ತದೆ”, ಎಂದನು. ದಶರಥನಿಗೆ ಭಯವೋ ಭಯ. ರಾಮ ಇನ್ನೂ ಬಾಲಕ. ರಾಕ್ಷಸರನ್ನು ಎದುರಿಸುವುದು ಇವನಿಂದ ಸಾಧ್ಯವೇ? ಬಹು ಹೊತ್ತು ಮಾತಾಗಿ ಕೊನೆಗೆ ಅರಮನೆಯ ಪುರೋಹಿತರಾದ ವಸಿಷ್ಠರು ಚಕ್ರವರ್ತಿಗೆ, “ವಿಶ್ವಾಮಿತ್ರರು ಮಹಾಮಹಿಮ ತಪಸ್ವಿ. ಇವರು ನೋಡಿಕೊಳ್ಳುತ್ತಿರುವ ವೇಳೆ ರಾಜಕುಮಾರನಿಗೆ ಯಾವ ಹಾನಿಯೂ ತಟ್ಟದು.” ಎಂದು ವಿವರಿಸಿದ ಮೇಲೆ ತಂದೆ ರಾಮನನ್ನು ಋಷಿಯ ಜೊತೆ ಕಳುಹಿಸಲು ಒಪ್ಪಿದನು. ರಾಮ ಹೋಗುವನೆಂದ ಮೇಲೆ ಲಕ್ಷ್ಮಣ ಹೋಗುವನು ಎಂದಂತೆಯೇ ಅಣ್ಣ ತಮ್ಮಂದಿರು ವಿಶ್ವಾಮಿತ್ರ ಮಹರ್ಷಿಯ ಜೊತೆಯಲ್ಲಿ ಅವನ ತಪೋವನವನ್ನು ಕುರಿತು ಪ್ರಯಾಣ ಬೆಳೆಸಿದರು.

ವಿಶ್ವಾಮಿತ್ರನು ರಾಮಲಕ್ಷ್ಮಣರನ್ನು ಹಲವು ಪುಣ್ಯ ಕ್ಷೇತ್ರಗಳ ಮಾರ್ಗವಾಗಿ ತನ್ನ ಆಶ್ರಮಕ್ಕೆ ಒಯ್ದನು. ದಾರಿಯಲ್ಲಿ ಒಂದು ನದೀ ತೀರದಲ್ಲಿ ರಾಮನಿಗೆ ತನ್ನದೇ ಆಗಿದ್ದ ಬಲ ಅತಿಬಲ ಎಂಬ ಅಸ್ತ್ರಗಳನ್ನು ಕುರಿತ ಮಂತ್ರಗಳನ್ನು ಕಲಿಸಿದನು. ರಾಮನಿಗೆ ಕಲಿಸಿದನು ಎಂದ ಮೇಲೆ ಲಕ್ಷ್ಮಣನಿಗೂ ಕಲಿಸಿದನು ಎಂದೇ ತಿಳಿಯಬೇಕು. ಮಂತ್ರಗಳನ್ನು ಕಲಿಸಿದ ಬಳಿಕ ಋಷಿ ರಾಜಕುಮಾರರಿಗೆ ದಾರಿಯಲ್ಲಿ ಬಂದ ಪುಣ್ಯಕ್ಷೇತ್ರಗಳ ಕಥೆಗಳನ್ನು  ಹೇಳುತ್ತಾ ನಡೆದನು. ದಾರಿಯಲ್ಲಿ ಒಂದು ವನ. ಅಲ್ಲಿ ತಾಟಕಿ ಗರ್ಜಿಸುತ್ತ ಇವರ ಮೇಲೆ ಹಾಯ್ದುಬಂದಳು. ರಾಮನು ತಾಟಕಿಯನ್ನು ಸಂಹರಿಸಿದನು. ಇವರೆಲ್ಲ ಪ್ರಯಾಣವನ್ನು ಮುಂದುವರಿಸಿ ವಿಶ್ವಾಮಿತ್ರನ ಆಶ್ರಮವನ್ನು ಸೇರಿದರು.

ಯಜ್ಞ ನಡೆಯಿತು. ಮಾರೀಚ ಸುಬಾಹು ಬಂದೇ ಬಂದರು; ಯಜ್ಞವನ್ನು ಕೆಡಿಸಲು ಯತ್ನಿಸಿದರು. ರಾಮ ಲಕ್ಷ್ಮಣರು ಅವರನ್ನು ತಡೆದರು. ರಾಮನ ಬಾಣಗಳಿಂದ ಸುಬಾಹು ಸತ್ತನು; ಮಾರೀಚ ಪೆಟ್ಟುತಿಂದು ಓಟಕಿತ್ತನು. ಯಜ್ಞ ಸಾಂಗವಾಗಿ ನೆರವೇರಿತು.

ಇಲ್ಲಿ ಗ್ರಹಿಸಬೇಕಾದ ಒಂದು ವಿವರ ರಾಮ ಈ ಕಾರ್ಯವನ್ನು ಲಕ್ಷ್ಮಣನ ಸಹಾಯದಿಂದ ಸಾಧಿಸಿದ ನೆನ್ನುವುದು.

ಯಜ್ಞರಕ್ಷಣದ ಕಾರ್ಯ ಮುಗಿಯುತ್ತಲೆ ವಿಶ್ವಾಮಿತ್ರನು ರಾಮ ಲಕ್ಷ್ಮಣರನ್ನು ಕರೆದುಕೊಂಡು ಮಿಥಿಲಾ ನಗರಿಯನ್ನು ಕುರಿತು ಪ್ರಯಾಣ ಬೆಳೆಸಿದನು. ಮಿಥಿಲೆ ವಿದೇಹ ರಾಜ್ಯದ ರಾಜಧಾನಿ. ಆ ರಾಜ್ಯದ ಅರಸ ಜನಕ ಮಹಾರಾಜ ಆಗ ಒಂದು ಯಜ್ಞವನ್ನು ನಡೆಸುತ್ತಿದ್ದನು. ಜನಕನ ಬಳಿ ಒಂದು ಧನಸ್ಸು ಇತ್ತು. ಅದನ್ನು ಬಾಗಿಸುವುದು ಒಂದು ಮಹಾಕಾರ್ಯ. ರಾಮ ಅದನ್ನು ಬಾಗಿಸಬಲ್ಲನೆಂದು ವಿಶ್ವಾ-ಮಿತ್ರನ ನಂಬಿಕೆ. ಜನಕ ಮಹಾರಾಜನು ಇವರನ್ನು ಸ್ವಾಗತಿಸಿ ಕುಶಲಪ್ರಶ್ನೆ ಕೇಳಿದ ಬಳಿಕ ವಿಶ್ವಾಮಿತ್ರನು ಅವನಿಗೆ, “ನಿನ್ನ ಬಳಿಯಿರುವ ಆ ಧನಸ್ಸನ್ನು ತರಿಸು, ನನ್ನ ತರುಣ ಕ್ಷತ್ರಿಯ ಶಿಷ್ಯರು ಅದನ್ನು ನೋಡಲಿ” ಎಂದನು. ಜನಕನು ಆ ಧನಸ್ಸನ್ನು ತರಿಸಿ ಋಷಿಗೆ, “ಈ ಧನಸ್ಸನ್ನು ಬಾಗಿಸುವವರಿಗೆ ನಾನು ನನ್ನ ಮಗಳು ಸೀತಾದೇವಿಯನ್ನು ಕೊಟ್ಟು ಮದುವೆ ಮಾಡುವುದಾಗಿ ಶಪಥ ಮಾಡಿದ್ದೇನೆ”, ಎಂದು ವಿಜ್ಞಾಪಿಸಿದನು. ರಾಮನು ಬಿಲ್ಲನ್ನು ಎತ್ತಿ ಸುಲಭವಾಗಿಯೇ ಬಾಗಿಸಿದನು. ಆದರೆ ಹೆದೆಯೇರಿಸುವ ಪ್ರಸಂಗ ಬರಲಿಲ್ಲ; ಬಾಗಿದ ವೇಳೆ ಬಿಲ್ಲು ಮುರಿದೇ ಹೋಯಿತು.

ಬಿಲ್ಲನ್ನು ಬಾಗಿಸಿದ್ದರೆಯೇ ಸಾಕು, ಜನಕನು ರಾಮನಿಗೆ ಮಗಳನ್ನು ಕೊಟ್ಟು ಮದುವೆ ಮಾಡುವವನು. ಬಿಲ್ಲನ್ನು ಮುರಿದೇ ಬಿಟ್ಟನೆಂದರೆ ಹೇಳುವುದೇನು? ಜನಕನಿಗೆ ಇಬ್ಬರು ಹೆಣ್ಣುಮಕ್ಕಳು; ಸೀತಾದೇವಿ, ಉರ್ಮಿಳಾದೇವಿ. ಇವರನ್ನು ರಾಮನಿಗೆ, ಲಕ್ಷ್ಮಣನಿಗೆ ಕೊಡುವುದೆಂದು ನಿಶ್ಚಯ ಆಯಿತು. ಹೀಗೆಂದು ದಶರಥನಿಗೆ ಕರೆ ಹೋಗಿ, ಅವನು ಬಂದು ಮದುವೆ ಏರ್ಪಾಡಾಯಿತು. ಅದೇ ವೇಳೆ ವಿಶ್ವಾಮಿತ್ರ ಋಷಿ ಜನಕನಿಗೆ, “ನಿನ್ನ ತಮ್ಮನ ಹೆಣ್ಣ ಮಕ್ಕಳು ಮಾಂಡವಿ ಶ್ರುತಕೀರ್ತಿಯರನ್ನು ಭರತ ಶತ್ರುಘ್ನರಿಗಾಗಿ ಬೇಡುತ್ತೇನೆ. ಅವರ ವಿವಾಹವೂ ಈಗಲೇ ನಡೆಯಲಿ”, ಎಂದನು. ಜನಕನೂ ಅವನ ತಮ್ಮನೂ ಸಂತೋಷದಿಂದ ಒಪ್ಪಿದರು. ನಾಲ್ವರು ಕುಮಾರರ ವಿವಾಹವೂ ಏಕಕಾಲದಲ್ಲಿ ನಡೆಯಿತು. ಚಕ್ರವರ್ತಿ ಮಕ್ಕಳನ್ನೂ ಸೊಸೆಯಂದಿರನ್ನೂ ಕರೆದುಕೊಂಡು ಅಯೋಧ್ಯೆಗೆ ಹಿಂದಿರುಗಿದನು. ನವದಂಪತಿಗಳು ಕೆಲವು ಕಾಲ ಸುಖವಾಗಿದ್ದರು. ಅಷ್ಟರಲ್ಲಿ ಭರತನ ತಾತ, ಕೇಕಯ ರಾಷ್ಟ್ರದ ರಾಜ ಅಶ್ವಪತಿ ಮಹಾರಾಜನು ಮೊಮ್ಮಗನನ್ನು ನೋಡಬೇಕೆಂದು ಬಯಸಿ, ಅವನ ಮಗ ಯುಧಾಜಿತ್‌ ಅಳಿಯನನ್ನು ಕರೆದೊಯ್ಯಲು ಆಯೋಧ್ಯೆಗೆ ಬಂದನು. ಭರತ ಅವನೊಂದಿಗೆ ಹೊರಡಲು ಏರ್ಪಾಡಾಯಿತು. ಭರತ ಹೊರಟನೆಂದ ಮೇಲೆ ಆತನ ಜೊತೆಗೆ ಶತ್ರುಘ್ನನೂ ಹೊರಡಬೇಕಾಯಿತು. ಇವರಿಬ್ಬರೂ ಕೇಕಯ ರಾಷ್ಟ್ರವನ್ನು ಕುರಿತು ಪ್ರಯಾಣ ಬೆಳೆಸಿದರು.

ಶ್ರೀರಾಮನಿಗೆ ವನವಾಸ

ಇದಾದ ಕೆಲವು ಕಾಲದ ಬಳಿಕ ದಶರಥನಿಗೆ ತಾನು ಇನ್ನು ಬಹು ದಿನ ಜೀವಿಸಲಾರನೆಂದು ತೋರಿತು. ಅವನು, ರಾಮನು  ತನ್ನ ಬಳಿಕ ದೊರಯಾಗುವುದು ಏಕೆ, ಅವನಿಗೆ ಈಗಲೇ ದೊರೆತನವನ್ನು ವಹಿಸೋಣ, ಎಂದು ಯೋಚಿಸಿದನು. ಹೀಗೆ ಮಾಡಬೇಕೆಂದರೆ ರಾಮನಿಗೆ ಯುವರಾಜ ಪಟ್ಟವನ್ನು ಕಟ್ಟಬೇಕು. ದೊರೆ ಹೀಗೆ ಮಾಡುವುದೆಂದು ನಿಶ್ಚಯ ಮಾಡಿಕೊಂಡನು. ಇದಕ್ಕೆ ಮಂತ್ರಿ ಪುರೋಹಿತರ, ಸಾಮಂತರಾಜರ ಒಪ್ಪಿಗೆಯನ್ನು ಪಡೆದು ಮಗನನ್ನು ಕರೆಸಿ ಅವನಿಗೆ ತನ್ನ ಉದ್ದೇಶವನ್ನು ತಿಳಿಸಿದನು.

ಶ್ರೀರಾಮ ತಂದೆಯ ಅನುಗ್ರಹವನ್ನು ಸ್ವೀಕರಿಸಿ ಲಕ್ಷ್ಮಣನಿಗೆ, “ತಮ್ಮಾಜಿ, ಯುವರಾಜ ಪದದ ಭೋಗ ಏನಿದೆ ಅದನ್ನೆಲ್ಲ ಅನುಭವಿಸು,” ಎಂದು ಹೇಳುತ್ತಾ ತನ್ನ ಮನೆಗೆ ಬಂದು, ಬಳಿಕ ತಾಯಿಯ ಬಳಿಗೆ ಹೋಗಿ ತಂದೆ ತನ್ನ ವಿಷಯದಲ್ಲಿ ಮಾಡಿರುವ ಯೋಚನೆಯನ್ನು ನಿವೇದಿಸಿನು. ಕೌಸಲ್ಯದೇವಿಗೆ ಬಹು ಸಂತೋಷವಾಯಿತು. ಆಕೆ, ಮಗನ ಸಲುವಾಗಿ ಮಂಗಳ ಕಾರ್ಯವನ್ನು ನಡೆಸಲು ತೊಡಗಿದಳು. ಇದನ್ನು ಕೈಕೆಯಿಯ ದಾಸಿ ಮಂಥರೆ ಎಂಬುವಳು ಕೌಸಲ್ಯೆಯ ದಾಸಿಯೊಬ್ಬಳನ್ನು ಕುರಿತು “ನಿಮ್ಮ ಅರಮನೆಯಲ್ಲಿ ಏನು ಉತ್ಸವ?” ಎಂದು ಕೇಳಿದಳು. ಆ ದಾಸಿ ಇವಳಿಗೆ, “ನಾಳೆ ರಾಮನಿಗೆ ಯುವರಾಜಪಟ್ಟವಂತೆ,” ಎಂದಳು. ಮಂಥರೆಯ ಎದೆ ಬಿರಿಯಿತು. ಅವಳು ಅದುವರೆಗೆ, ತನ್ನ ರಾಣಿ ದಶರಥನಿಗೆ ಅತ್ಯಂತ ಪ್ರಿಯೆ. ಆದ್ದರಿಂದ ದಶರಥ ಅವಳ ಮಗ ಭರತನಿಗೆ ಪಟ್ಟಕಟ್ಟುತ್ತಾನೆ, ಎಂದು ತಿಳಿದಿದ್ದಳು. ಈಗ ಇದೆಲ್ಲ ತಲೆಕೆಳಗಾಯಿತು. ಅವಳು ವೇಗವಾಗಿ ತನ್ನ ಒಡತಿಯ ಬಳಿಗೆ ಬಂದು, “ನಿನ್ನ ಸ್ಥಿತಿ ಅತಂತ್ರವಾಯಿತು. ದೊರೆ ನಾಳೆ ರಾಮನಿಗೆ ಯುವರಾಜ ಪಟ್ಟಾಭಿಷೇಕ ನಡೆಸುತ್ತಾರಂತೆ,” ಎಂದಳು. ಕೈಕಯಿಗೆ ಇದು ಸಂತೋಷದ ಸುದ್ದಿ ಎನಿಸಿತು, ಮಂಥರೆ, “ಇದೇನು ದೇವಿ, ಕೇಡು ಒದಗಿರುವಾಗ ಭಾಗ್ಯ ಬಂದರೆ ಹೇಗೆ ಹಾಗೆ ಆಡುತ್ತಿದ್ದೀಯೆ? ರಾಮನಿಗೆ ಪಟ್ಟಾಭಿಷೇಕವಾದರೆ ಭರತನ ಬಹು ಒಳ್ಳೆಯ ತರುಣ, ನಮಗೆ ಯಾವ ಭಯವೂ ಬೇಡ,” ಎಂದಳು. ಮಂಥರೆ, “ರಾಮನ ಮಾತಾಯಿತು. ಕೌಸಲ್ಯೆಯ ಮಾತು ಹೇಗೆ? ನೀನು ಅವಳನ್ನು ಇದುವರೆಗೆ ತುಂಬ  ಅಸೂಯೆಯಿಂದ ಕಂಡಿದ್ದೀಯೆ. ಅವಳು ನಿನ್ನನ್ನು ಸುಮ್ಮನೆ ಬಾಳಿಸುತ್ತಾಳೆಯೇ?” ಎಂದಳು. ಆಗ ಕೈಕಯಿಯ ಮನಸ್ಸಿಗೂ ಭಯ ತಟ್ಟಿತು. ಅವಳು, “ಹೌದಲ್ಲೇ ಮಂಥರೆ, ನಿನ್ನ ಮಾತು ನಿಜ. ಈಗ ಏನು ಮಾಡೋಣ ಹೇಳು ರಾಮನಿಗೆ ಪಟ್ಟ ಆಗಕೂಡದು. ಭರತನಿಗೆ ಪಟ್ಟ ಆಗಬೇಕು,” ಎಂದಳು. ಮಂಥರೆ, “ದೊರೆಗೆ ನಿನ್ನನ್ನು ಕಂಡರೆ ಅಪಾರ ಮೋಹ. ಅವನು ಈ ದಿನ ಬಂದಾಗ ಅವನನ್ನು ಒಂದು ವರ ಬೇಕೆಂದು ಕೇಳು. ಒಪ್ಪಿ ವರ ಏನು ಎಂದಾಗ, ರಾಮ ಹದಿನಾಲ್ಕು ವರ್ಷ ವನವಾಸ ಹೊರಡಬೇಕು. ಭರತನಿಗೆ ಯುವರಾಜ ಪಟ್ಟಾಭಿಷೇಕ ಆಗಬೇಕು, ಎಂದು ಬೇಡು. ಏನು ಹೇಳಿದರೂ ಪಟ್ಟು ಬಿಡದೆ ಗಟ್ಟಿಯಾಗಿ ನಿಲ್ಲು. ರಾಮ ಕಾಡಿಗೆ ಹೋಗುತ್ತಾನೆ; ಭರತ ಯುವರಾಜನಾಗುತ್ತಾನೆ. ನಿನ್ನ ಇಷ್ಟಾರ್ಥ ಕೈಗೂಡುತ್ತದೆ,” ಎಂದು ಬೋಧಿಸಿದಳು. ಕೈಕಯೀ ಈ ಬೋಧೆಯನ್ನು ಅಂಗೀಕರಿಸಿದಳು.

ನನ್ನನ್ನು ಬಿಟ್ಟು ಹೋಗಬೇಡಿ

ಸಂಜೆ ದೊರೆ ವಾಡಿಕೆಯಂತೆ ಕೈಕೆಯಿಯ ಅರಮನೆಗೆ ಬಂದನು. ನಿಶ್ಚಯ ಮಾಡಿಕೊಂಡಿದ್ದಂತೆ ಅವಳು ದೊರೆಯಿಂದ ವರವನ್ನು ಬೇಡಿದಳು. ದೊರೆ ಆಗಲಿ ಎಂದ ಮೇಲೆ ತನ್ನ ಅಪೇಕ್ಷೆಯನ್ನು ತಿಳಿಸಿದಳು. ದೊರೆ ಏನೇನು ಹೇಳಿದರೂ, ಏನೆಂದೂ ಬೇಡಿದರೂ, ಎಷ್ಟು ಗೋಳಿ ಬಿಟ್ಟರೂ ತನ್ನ ಹಠವನ್ನು ಬಿಡದೆ ಪಟ್ಟು ಹಿಡಿದು ನಿಂತಳು. ರಾಮ ಕಾಡಿಗೆ ಹೋಗುವುದೆಂದು ನಿಶ್ಚಯವಾಯಿತು.

ತಂದೆಯ ಸನ್ನಿಧಿಯಲ್ಲಿ ಚಿಕ್ಕಮ  ರಾಮನಿಗೆ ಈ ಸಂಗತಿಯನ್ನು ತಿಳಿಸಿ ರಾಮ ಅದಕ್ಕೆ ಒಪ್ಪಿದಾಗ ಲಕ್ಷ್ಮಣ ಅವನ ಜೊತೆಯಲ್ಲಿದ್ದನಿಉ. ಅವನಿಗೆ ಚಿಕ್ಕಮ್ಮನ ನಡೆತೆ ನೀಚವೆಂದರೆ ನೀಚ ಎನ್ನಿಸಿತು. ಅವಳ ಮಗ ಭರತನಿಗೂ ತಾನೇ ದೊರೆಯಾಗಬೇಕೆಂಬ ಅಪೇಕ್ಷೆಯೋ? ಯಾರು ಬಲ್ಲರು? ಆ ಅಪೇಕ್ಷೆ ಇದ್ದರೆ ಆಶ್ಚರ್ಯವಲ್ಲ. ತಂದೆಯಾದರೂ ಇಂಥ ಅವಿವೇಕಿ! ಕಿರಿಯ ಹೆಂಡಿರ ಮೇಲೆ ಮೋಹದಿಂದ ಇವನು ರಾಮನಂಥ ಗುಣವಂತನಾದ ಮಗನನ್ನು ಕಾಡಿಗೆ ಅಟ್ಟಿ ಆ ಹೆಂಗಸಿನ ಮಗನಿಗೆ ಪಟ್ಟ ಕಟ್ಟಲು ಒಪ್ಪಿದನೇ. ಇವನು ಎಂಥ ತಂದೆ? ಇವನೊಬ್ಬ ತಂದೆಯೇ? ತಂದೆ, ಚಿಕ್ಕಮ್ಮನ ಮೇಲಣ ಈ ಕೋಪದಲ್ಲಿ ಲಕ್ಷ್ಮಣನಿಗೆ ಉಸಿರುಕಟ್ಟಿಹೋಯಿತು.

ಅಣ್ಣ ರಾಮ ತಾನು ಕಾಡಿಗೆ ಹೋಗುವವನು ಎಂದು ತಾಯಿಗೆ ತಿಳಿಸಲು ಹೋದಾಗ ಲಕ್ಷ್ಮಣ ಅವನ ಹಿಂದೆ ನಡೆದನು. ಕೌಸಲ್ಯದೇವಿ ರಾಮನಿಗೆ, “ನೀನು ಕಾಡಿಗೆ ಹೋಗುವುದು ಬೇಡ” ಎಂದು ಅಂಗಲಾಚಿ ಹೇಳಿದಳು. ಲಕ್ಷ್ಮಣ, “ಹೌದು ದೇವಿ, ನಿನ್ನ ಈ ಮಾತು ನನಗೆ ಒಪ್ಪಿಗೆ. ರಾಮ ಕಾಡಿಗೆ ಹೋಗಬೇಕಾದ ಕಾರಣ ಏತರದೂ ಇಲ್ಲ. ಬುದ್ಧಿಗೆಟ್ಟ ಮುದಿ ತಂದೆ ಕಿರಿಯ ಹೆಂಡಿರ ಮೇಲಣ ಮೋಹದಿಂದ ಅವಿವೇಕದ ನಿಶ್ಚಯವನ್ನು ಮಾಡಿದ ಮಾತ್ರಕ್ಕೆ ಅಣ್ಣ ಕಾಡಿಗೆ ಹೋಗಬೇಕಾದದ್ದೇನು? ರಾಮನ ವಿಷಯ ಅಸಮಾಧಾನದ ಮಾತನ್ನಾಡುವವರು ಒಬ್ಬರೂ ಇಲ್ಲ. ಆಗದ ಜನ ಕೂಡ ಅಣ್ಣನನ್ನು ಹೊಗಳುತ್ತಾರೆ. ನನ್ನಣ್ಣ ಕಾಡಿಗೆ ಹೋಗುವುದಿಲ್ಲ. ನಾನು ಅದನ್ನು ಒಪ್ಪುವುದಿಲ್ಲ. ನಾನು ತಂದೆಯವರನ್ನು ಬಡಿದು ಹಾಕುತ್ತೇನೆ. ಹಿರಿಯರಾದವರು ಏನು ಮಾಡಬಹುದು ಏನು ಮಾಡಬಾರದು ಎಂಬ ವಿವೇಚನೆ ಇಲ್ಲದವರಾದರೆ ಅವರಿಗ ಬುದ್ಧಿ ಕಲಿಸುವುದು ತಪ್ಪಲ್ಲ. ರಾಮ ನಗರದಲ್ಲಿ ನಿಲ್ಲಲಿ. ಪಟ್ಟಾಭಿಷೇಕ ಮಾಡಿಕೊಳ್ಳಲಿ. ನಾನು ಅವನ ಜೊತೆಗಿದ್ದೇನೆ. ಯಾರು ಏನು ಮಾಡುವರು ನೋಡಿಕೊಳ್ಳುತ್ತೇನೆ,” ಎಂದನು.

ಕೌಸಲ್ಯೆಯ ಮನಸ್ಸಿನಲ್ಲಿ ಆಸೆ ಮೊಳೆಯಿತು. ಅವಳು ರಾಮನಿಗೆ, “ಅಪ್ಪಾಜಿ, ತಮ್ಮನ ಮಾತನ್ನು ಮನಸ್ಸಿಗೆ ತಂದುಕೊ. ಕಾಡಿಗೆ ಹೋಗುವ ಯೋಚನೆಯನ್ನು ಬಿಡು. ನಗರದಲ್ಲಿ ನಿಂತು ರಾಜನಾಗು,” ಎಂದು ಹೇಳಿದಳು.

ರಾಮ ಒಪ್ಪಲಿಲ್ಲ. ಅವನು ಲಕ್ಷ್ಮಣನಿಗೆ, “ತಮ್ಮಾಜಿ, ತಂದೆ ನಮಗೆಲ್ಲ ಹಿರಿಯರು. ಅವರ ಮಾತನ್ನು ನಡೆಸುವುದು ನಮ್ಮೆಲ್ಲರ ಕರ್ತವ್ಯ. ತಾಯಿಯಾಗಲಿ, ನಾನಾಗಲೀ, ನೀನಾಗಲಿ ಇದನ್ನು ಬಿಡುವಂತಿಲ್ಲ. ನಾನು ಕಾಡಿಗೆ ಹೋಗುವುದು ಅದೃಷ್ಟ ನಿಯಮಿಸಿರುವ ಕ್ರಮ ಎಂದು ತಿಳಿ. ಚಿಕ್ಕಮ್ಮ ನನ್ನನ್ನು ತನ್ನ ಮಗನನ್ನು ಹೇಗೋ ಹಾಗೆ ಪ್ರೀತಿಸುತ್ತಿದ್ದರು. ಅದೇ ಚಿಕ್ಕಮ್ಮ ಈಗ ನಾನು ಕಾಡಿಗೆ ಹೋಗಬೇಕೆಂದು ಬಯಸುತ್ತಿದ್ದಾರಲ್ಲ. ಇದು ದೈವೇಚ್ಛೆ. ಇದನ್ನು ಗ್ರಹಿಸು,” ಎಂದು ಬುದ್ಧಿ ಹೇಳಿದನು. ಲಕ್ಷ್ಮಣ, “ದೈವ ದೈವ ಎಂಬ ಈ ಮಾತು ದುರ್ಬಲರಾದವರ ಮಾತು. ಶಕ್ತರು ದೈವವನ್ನು ಎದುರಿಸುತ್ತಾರೆ; ತಮ್ಮ ಇಚ್ಛೆಯನ್ನು ನಡೆಸುತ್ತಾರೆ. ನನಗೆ ತೋಳುಗಳು ಇರುವುದು ಶೋಭಾರ್ಥವಾಗಿ ಅಲ್ಲ. ಈ ಧನಸ್ಸು ಭೂಷಣಕ್ಕೆ ಎಂದಲ್ಲ. ಈ ಕತ್ತಿ ತೊಡವಾಗಿರಲಿ ಎಂದಲ್ಲ. ಅಂಬುಗಳು ಕಂಬವಾಗಿರುವುದಕ್ಕಲ್ಲ. ಆಗದ ಜನವನ್ನು ದಮನ ಮಾಡುವುದಕ್ಕೆಂದು ಈ ನಾಲ್ಕೂ ನನ್ನಲ್ಲಿವೆ. ಅಂಥವರನ್ನು ನಾನು ದಮನ ಮಾಡುತ್ತೇನೆ,” ಎಂದನು. ಶ್ರೀರಾಮ, “ತಮ್ಮ, ಧರ್ಮವನ್ನು ಬಿಟ್ಟು ಯಾವ ಐಶ್ವರ್ಯವನ್ನಾದರೂ ಪಡೆಯುವುದಕ್ಕೆ ನಾನು ಒಪ್ಪುವನಲ್ಲ. ಇದು ಖಂಡಿತ,” ಎಂದನು. ಅವನು ಕೌಸಲ್ಯಾ ದೇವಿಗೆ, “ಅಮ್ಮಾಜಿ, ಅಣ್ಣ ಕಾಡಿಗೆ ಹೋಗುವುದಾದರೆ ನಾನೂ ಕಾಡಿಗೆ ಹೋಗುವೆನು; ಅವನು ಅಗ್ನಿಯನ್ನು ಹೊಗಬೇಕೆ,  ಅದನ್ನು ಅವನಿಗೂ ಮೊದಲು ನಾನು ಹೊಗುವೆನು,” ಎಂದು ಶಪಥ ಮಾಡಿದನು. ತಾಯಿ ಕೌಸಲ್ಯೆ ತನ್ನ ಮಾತನ್ನೆಲ್ಲಾ ಹೇಳಿ ಯಾವುದೂ ನಡೆಯದೆ ಮಗ ರಾಮ ಕಾಡಿಗೆ ಹೋಗುವುದೇ ಮಾರ್ಗ ಎಂದು ಕಂಡಾಗ, “ಆಯಿತು; ಬೇರೆ ಏನು ದಾರಿ ಇದೆ? ಸ್ವಸ್ತೈಯನವನ್ನು ನುಡಿಯುತ್ತೇನೆ ಬಾ. ಆಮೇಲೆ ಹೊರಡುವೆಯಂತೆ,” ಎಂದಳು. ಶ್ರೀರಾಮನಿಗೆ ಒಳ್ಳೆಯದಾಗಲಿ ಎಂದು ಸ್ವಸ್ತ್ಯಯನವನ್ನು ನಡೆಸಿದಳು. ಶ್ರೀರಾಮನು ತಮ್ಮನೊಡನೆ ತನ್ನ ಮಂದಿರಕ್ಕೆ ಬಂದನು.

ಇಲ್ಲಿ ಸೀತೆಯೊಂದಿಗೆ ಮತ್ತಷ್ಟು ಮಾತು ನಡೆಯಿತು. ಕಾಡಿಗೆ ಹೋಗಬೇಡ ಎಂದಲ್ಲ. “ನನ್ನನ್ನು ಬಿಟ್ಟು ಹೋಗಬೇಡ, ನಾನು ನಿನ್ನ ಜೊತೆಗೆ ಬರುತ್ತೇನೆ” ಎಂದು. ಲಕ್ಷ್ಮಣ ಇದನ್ನೆಲ್ಲ ಕೇಳುತ್ತಿದ್ದನು. ಕೊನೆಗೆ ಅತ್ತಿಗೆ ಅಣ್ಣನೊಡನೆ ಕಾಡಿಗೆ ಹೋಗುವುದು ನಿಶ್ಚಯವಾದಾಗ ಇವನು ಅಣ್ಣನಿಗೆ, “ನೀವು ಇಬ್ಬರು ಕಾಡಿಗೆ ಹೋಗುವುದಾದರೆ ನಾನೂ ಜೊತೆಗೆ ಬರುತ್ತೇನೆ. ನಿದ್ರೆ ವೇಳೆಯಲ್ಲಿ ಎಚ್ಚರದ ವೇಳೆಯಲ್ಲಿ ನಿನಗೆ ಅವಶ್ಯಕವಾದ ಎಲ್ಲ ಸೇವೆಯನ್ನು ಮಾಡುತ್ತೇನೆ. ನನಗೆ ಅನುಮತಿ ಕೊಡು,” ಎಂದು ಬೇಡಿದನು. ರಾಮಚಂದ್ರ, “ತಮ್ಮ, ಇಲ್ಲಿಯ ಸ್ಥಿತಿಯನ್ನು ಮನಸ್ಸಿಗೆ ತಂದುಕೊ. ತಂದೆ ಹಣ್ಣು ಮುದುಕರಾಗಿದ್ದಾರೆ; ಚಿಕ್ಕಮ್ಮನ ಕೈಗೊಂಬೆಯಾಗಿದ್ದಾರೆ. ನಾನು ನೀನು ಕಾಡಿಗೆ ಹೋಗಿ ನಮ್ಮ ತಾಯಂದಿರನ್ನು ಇಲ್ಲಿ ಅಸಹಾಯಕರಾಗಿ ಬಾಳಲು ಬಿಡಬಹುದೆ? ನೀನು ಇಲ್ಲೇ ಇರಬೇಕಲು. ಇವರನ್ನು ನೋಡಿಕೊಳ್ಳಬೇಕು,” ಎಂದನು. ಲಕ್ಷ್ಮಣ, “ತಾಯಂದಿರನ್ನು ನಾನು ನೋಡಿ ಕೊಳ್ಳಬೇಕಾದ ಸ್ಥಿತಿ ಏನೂ ಬಂದಿಲ್ಲ. ದೊಡ್ಡಮ್ಮನವರಿಗೆ ಅವರದೇ ವರಮಾನವಿದೆ. ಭರತನಿಗೆ ನಿನ್ನ ಭಯ ಇದೆ. ಅವನು ನನ್ನ ದೊಡ್ಡಮ್ಮನನ್ನೂ ನನ್ನ ತಾಯಿಯನ್ನೂ ಸರಿಯಾಗಿ ನೋಡಿಕೊಳ್ಳುತ್ತಾನೆ. ಆಯಿತಲ್ಲ, ದೊಡ್ಡಮ್ಮನವರ ಎದುರಲ್ಲಿ ನಾನು ಜೊತೆಗೆ ಬರುವ ಮಾತಿಗೆ ಒಪ್ಪಿ ಈಗ ಬೇಡ ಎನ್ನುತ್ತಿದ್ದೀಯಲ್ಲಾ. ನಿನಗೆ ನನ್ನ ವಿಷಯದಲ್ಲಿ ನಂಬಿಕೆ ಇಲ್ಲವೆ? ಇದು ಹೇಗೆ? ನನಗೆ ತಿಳಿಯಬೇಕು,” ಎಂದನು. ತನ್ನ ಅಪೇಕ್ಷೆಗೆ ಅಣ್ಣ ಒಪ್ಪಿದ್ದರು ಎನ್ನುವುದು ಗ್ರಹಿಕೆಯ ಮಾತು. ತಾನು ಹೇಳಿದ್ದು, ಅಣ್ಣ ಕಾಡಿಗೆ ಹೋಗಬೇಕೆಂದರೆ ತಾನು ಕಾಡಿಗೆ ಹೋಗುವನು, ಅವನು ಅಗ್ನಿಯನ್ನು ಹೊಗಬೇಕಾದರೆ ತಾನು ಅವನಿಗೂ ಮುನ್ನ ಅಗ್ನಿಯನ್ನು ಹೊಗುವವನು, ಎನ್ನುವುದು. ಅಣ್ಣ ಅದನ್ನು ಬೇಡ ಎನ್ನಲ್ಲಿಲ್ಲ. ಬೇಡ ಎನ್ನಲಿಲ್ಲ ಎಂದ ಮೇಲೆ ಆಗಬಹುದು ಎಂದಂತೆ. ಎಂದರೆ ಒಪ್ಪಿದಂತೆ. ರಾಮಚಂದ್ರದ, “ಆಯಿತಪ್ಪ. ಹೋಗು ಪ್ರಯಾಣಕ್ಕೆ ಸಿದ್ಧನಾಗು. ಗುರು ವಸಿಷ್ಠರ ಮಗನನ್ನೂ ಇತರರನ್ನೂ ಕರೆದು ನಮ್ಮ ಮೂವರ ಒಡವೆ ವಸ್ತು ಏನಿವೆ ಅವನ್ನು ದಾನಮಾಡಿ ಹಂಚಿ ಊರಿಂದ ಹೊರಡಲಣಿಯಾಗು, ನಡೆ,” ಎಂದು ಅಪ್ಪಣೆ ಮಾಡಿದನು.

ಒಡವೆ ವಸ್ತುಗಳನ್ನು ಹಂಚಿದ್ದಾಯಿತು. ರಾಮ ಸೀತೆ ಲಕ್ಷ್ಮಣ ವೈಭವವನ್ನೆಲ್ಲ ತೊರೆದು ನಡೆಯುತ್ತ ದಶರಥನ ಬಳಿಗೆ ಬಂದರು. ಶ್ರೀರಾಮ ತಂದೆಗೆ, “ನಾನು ಕಾಡಿಗೆ ಹೋಗಲು ಹೊರಟಿದ್ದೇನೆ. ನಿಮ್ಮ ಸೊಸೆ ನನ್ನೊಂದಿಗೆ ಬರಲೇಬೇಕೆಂದು ಹಠ ಮಾಡಿದ್ದಾಳೆ. ತಮ್ಮ ಲಕ್ಷ್ಮಣನದೂ ಇದೇ ಹಠ. ಇವರಿಬ್ಬರೂ ಜೊತೆಗೆ ಬರಲು ನಾನು ಒಪ್ಪಿದ್ದೇನೆ. ನಮಗೆ ಆಶೀರ್ವಾದಮಾಡಿ ಪ್ರಯಾಣಕ್ಕೆ ಅನುಮತಿ ನೀಡಿರಿ,” ಎಂದು ಅರಿಕೆ ಮಾಡಿದನು. ಕಾಡಿಗೆ ಹೋಗುವ ಮೂವರೂ ದೊರೆಗೆ ಪ್ರದಕ್ಷಿಣೆ ನಮಸ್ಕಾರ ಮಾಡಿ ತಾಯಂದಿರಿಗೆ ಪ್ರಣಾಮಮಾಡಿ ಅಪ್ಪಣೆ ಪಡೆದು ಹೊರಟರು.

ಹೊರಡುತ್ತ ಲಕ್ಷ್ಮಣ ತಾಯಿಗೆ ನಮಸ್ಕಾರ ಮಾಡಿದಾಗ ಸುಮಿತ್ರಾದೇವಿ ಅವನಿಗೆ, “ನೀನು ವನವಾಸ ಮಾಡಲೆಂದೇ ಹುಟ್ಟಿದೆ ಮಗು; ಹೋಗಿ ಬಾ; ರಾಮನ ವಿಷಯದಲ್ಲಿ ಪುರ್ಣ ಶ್ರದ್ಧೆ ಇರಲಿ; ಅವನನ್ನು ದಶರಥನೆಂದು ತಿಳಿ; ಸೊಸೆ ಸೀತೆಯನ್ನು ತಾಯಿ ಎಂದು ತಿಳಿ, ಅಡವಿಯೇ ಅಯೋಧ್ಯೆ ಎಂದು ತಿಳಿ, ಹೋಗಿ ಬಾ,” ಎಂದು ಹರಸಿದಳು. ಸುಮಿತ್ರಾದೇವಿಯ ಸೌಜನ್ಯ ಅವಳ ಮಗನ ಚೇನತದಲ್ಲಿ ಅಣ್ಣ ಅತ್ತಿಗೆಯರ ವಿಷಯದಲ್ಲಿ ಅಪಾರ ಭಕ್ತಿಯಾಗಿ ಅವರನ್ನು ರಕ್ಷಿಸುವ ಕರ್ತವ್ಯದಲ್ಲಿ ಅಸೀಮ ಶ್ರದ್ಧೆಯಾಗಿ ರೂಪುಗೊಂಡಿತು. ಈ ಭಕ್ತಿ, ಈ ಶ್ರದ್ಧೆ ಇವನನ್ನು ಇನ್ನಿವನಿಗೆ ಎಣೆಯಿಲ್ಲ ಎಂಬ ಹೊಗಳಿಕೆಗೆ ಅರ್ಹನಾಗುವ ಸೋದರನನ್ನಾಗಿ ಮಾಡಿದುವು.

ವನಕ್ಕೆ ಹೋಗುತ್ತ ದಾರಿಯಲ್ಲಿ ಸೀತಾರಾಮ ಲಕ್ಷ್ಮಣರು ರಾಮನ ಸುಖ ಗಂಗಾತೀರವಾಸಿ ದಾಶರಾಜ ಗುಹನ ಊರಿನ ಬಳಿ ಬಂದು ಇರುಳನ್ನು ಕಳೆದರು. ರಾಮ ಆ ರಾತ್ರಿ ಒಂದು ಮರದಡಿಯಲ್ಲಿ ಮಲಗಿದನು. ರಾಮ ನೆಲದ ಮೇಲೆ ಮಲಗಿದನೆಂದ ಮೇಲೆ ಸೀತಾದೇವಿಯ ಮಾತು ಅಷ್ಟೆ. ಇದು ಲಕ್ಷ್ಮಣನಿಗೆ ಸಹಿಸಲಾರದ ದುಃಖಕ್ಕೆ ಕಾರಣ ಆಯಿತು. ಅವನು ಗೋಳಾಡಿದನು. ಅಣ್ಣ ಅತ್ತಿಗೆಯ ರಕ್ಷೆಗೆಂದು ನಿದ್ದೆಗೆಟ್ಟು ನಿಂತನು. ಗುಹ, “ಅಪ್ಪಾಜಿ, ನಾನು ನನ್ನ ಜನವೂ ನಿಮ್ಮನ್ನು ನೋಡಿಕೊಳ್ಳುತ್ತೇವೆ. ನೀನು ಮಲಗು,’ ಎಂದು ಇವನನ್ನು ಬೇಡಿದನು. ಲಕ್ಷ್ಮಣ ಒಪ್ಪಲಿಲ್ಲ. ಅಣ್ಣನ ವಿಷಯ ಗುಹನೊಂದಿಗೆ ಮಾತನಾಡುತ್ತಲೇ ರಾತ್ರಿಯನ್ನೆಲ್ಲ ಕಳೆದನು. ಮಾರನೆಯ ಬೆಳಗು ರಾಮ ಲಕ್ಷ್ಮಣರು ತಾಪಸ ಜೀವನಕ್ಕೆ ತಾಗುವಂತೆ ತಮ್ಮ ತಲೆಗೆ ಅಂಟನ್ನು ಹಚ್ಚಿಕೊಂಡು ಜಟೆಗಳನ್ನು ತಳೆದರು. ಗುಹ ಇವರನ್ನು ತನ್ನ ಹರಿಗೋಲಿನಲ್ಲಿ ಗಂಗೆಯ ಆಚೆಗೆ ಒಯ್ದುಬಿಟ್ಟನು. ನದಿ ದಾಟಿದ ಮೇಲೆ ಅವರು ಮೂವರೇ ಮುಂದುವರಿದರು.

ಮುಂದೆ ರಾಮ, ಮಧ್ಯೆ ಸೀತಾದೇವಿ, ಹಿಂದೆ ಬಿಲ್ಲು ಹಿಡಿದು ಲಕ್ಷ್ಮಣ, ಹೀಗೆ ಇವರು ದಾರಿ ನಡೆದರು. ರಾಮನಿಗೆ ಈ ತಮ್ಮ ಎಲ್ಲಾದರೂ ಧೈರ್ಯಗೆಟ್ಟಾನು ಎಂದು ಭಯ. ಅವನು, “ಅಪ್ಪಾ, ಇನ್ನು ನಾವು ಕಾಡಿನ ವಾಸ ಎಂದರೆ ಏನು ಎಂದು ಕಾಣುತ್ತೇವೆ. ನೀನು ಧೈರ್ಯದಿಂದಿರಬೇಕು” ಎಂದನು. ಇದು ಹಿರಿಯನ ಶಂಕೆ ಅಷ್ಟೆ. ಕಿರಿಯನಿಗೆ ಇದರ ಯೋಚನೆಯೇ ಇರಲಿಲ್ಲ. ಅವನ ಯೋಚನೆಯೆಲ್ಲ ಅಣ್ಣಅತ್ತಿಗೆಯ ಪಾಡು ಹೀಗಾಯಿತೇ ಎನ್ನುವುದರಲ್ಲಿ ಮುಗಿದಿತ್ತು.

ಮುಂದೆ ರಾಮ, ಮಧ್ಯೆ ಸೀತಾದೇವಿ, ಹಿಂದೆ ಬಿಲ್ಲು ಹಿಡಿದು ಲಕ್ಷ್ಮಣ ನಡೆದರು.

 ಭರತನು ಬರುತ್ತಿರುವನಲ್ಲಏಕೆ?

ಚಿತ್ರಕೂಟ ಕಾನನದಲ್ಲಿ ಮಂದಾಕಿನೀ ನದಿಯ ತೀರದಲ್ಲಿ ಒಂದು ಆಶ್ರಮ ಮಾಡಿಕೊಂಡು ಇವರು ಕೆಲವು ತಿಂಗಳು ಕಳೆದಿದ್ದಾರೆ. ಒಂದು ದಿನ ಕಾಡಿನ ಮೃಗಗಳು ಭಯದಿಂದ ಆಶ್ರಮದ ಬಳಿಯಲ್ಲಿ ಓಡುತ್ತಿರುವುದು ಕಂಡಿತು. ಸ್ವಲ್ಪ ಹೊತ್ತು ಕಳೆದಿದೆ; ದೊಡ್ಡದೊಂದು ಬೇಟೆಯದೋ ಸೇನೆಯದೋ ಎಂದು ತೋರುವ ದೊಡ್ಡ ಗದ್ದಲ ಕೇಳಿಸಿತು. ಶ್ರೀರಾಮ ಲಕ್ಷ್ಮಣನಿಗೆ, “ಇದು ಏನಿರಬಹುದು ನೋಡು. ಈ ಮರವನ್ನೇರಿ ಅತ್ತ ಏನು ಕಾಣುತ್ತಿದೆ ತಿಳಿ,” ಎಂದನು.

ಲಕ್ಷ್ಮಣ ಮರವನ್ನೇರಿ ನೋಡಿದನು. ಒಂದು ಸೇನೆ ಬರುತ್ತಿದೆ. ಅದರ ಮಧ್ಯೆ ಕೋವಿದಾರ ಧ್ವಜ. ಇದು ಭರತದ ಧ್ವಜ. ಲಕ್ಷ್ಮಣ ಅಣ್ಣನಿಗೆ, ಒಂದು ಸೇನೆ ಬರುತ್ತಿದೆ , ಅಣ್ಣ. ಅದು ಭರತನ ಸೇನೆ. ಧ್ವಜ ಅವನದು. ರಾಜ್ಯವನ್ನು ಪಡೆದು ಪಾಪಿ ಅಷ್ಟರಿಂದ ತೃಪ್ತಿಯಾಗದೆ ನಿನಗೆ ಇನ್ನಷ್ಟು ಕೇಡು ಮಾಡೋಣ ಎಂದು ಬರುತ್ತಿದ್ದಾನೆ ಎಂದು ಕಾಣುತ್ತದೆ. ಅತ್ತಿಗೆಯೊಂದಿಗೆ ನೀನು ಭದ್ರವಾದ ಕಡೆ ನಿಲ್ಲು. ನಾನು ಈ ದುಷ್ಟನನ್ನು ಕೊಲ್ಲುತ್ತೇನೆ. ತನ್ನ ದುರ್ವರ್ತನೆಯಿಂದ ಮಗನಿಗೆ ರಾಜ್ಯವನ್ನು ಸಂಪಾದಿಸಿ ಕೊಟ್ಟ  ಅವನ ತಾಯಿ ನಾನು ಅವನನ್ನು ಕೊಂದಿರುವುದನ್ನು ನೋಡಲಿ,” ಎಂದನು. ಶ್ರೀರಾಮ, “ಭರತನು ಬರುತ್ತಿದ್ದಾನೆ ಏನ್ನುತ್ತೀಯಾ? ನೀನು ಯಾವ ಕಾರಣದಿಂದ ಅವನನ್ನು ಕುರಿತು ಹೀಗೆ ಯೋಚಿಸುತ್ತಿದ್ದೀಯೆ? ತಾಯಿ ಮಾಡಿದ ಅಕೃತ್ಯವನ್ನು ತಿಳಿದು ಬೇಸರಗೊಂಡು ಅವಳನ್ನು ಖಂಡಿಸಿ ನನ್ನ ತಮ್ಮ ನನ್ನನ್ನು ನಗರಕ್ಕೆ ಹಿಂದಿರುಗಿಸಲು ಬರುತ್ತಿರಬೇಕು. ನಿಮಗಾಗಿ ಅಲ್ಲದೆ ನನಗೆ ಮೂರು ಲೋಕದ ದೊರೆತನವೂ ಬೇಡ,” ಎಂದುಬಿಟ್ಟನು. ಲಕ್ಷ್ಮಣನಿಗೆ ತುಂಬ ನಾಚಿಕೆ ಆಯಿತು.

ಸ್ವಲ್ಪ ಹೊತ್ತಿನಲ್ಲಿ ಭರತ ಬಂದನು. ರಾಮನನ್ನು ಅವನ ನಿರೀಕ್ಷೆಯಂತೆ ಊರಿಗೆ ಹಿಂತಿರುಗಬೇಕೆಮದು ಬೇಡಿದನು. ರಾಮ ಒಪ್ಪಲಿಲ್ಲ. ತಂದೆ ತೀರಿಕೊಂಡರೆಂದು ತಿಳಿಸಿದ ಮೇಲಂತೂ ಅದು ತೀರ ಅಸಾಧ್ಯ ಎಂದೇ ಅವನಿಗೆ ಕಂಡಿತು. ಭರತ ರಾಮನ ಪಾದುಕೆಯನ್ನು ತೆಗೆದುಕೊಂಡು ಹಿಂತಿರುಗಿದನು. ಹೊರಡುತ್ತ, “ಇದು ನಿನಗೆ ಪ್ರತಿಯಾಗಿ ರಾಜ್ಯವನ್ನು ಆಳುತ್ತದೆ. ನೀನು ಹದಿನಾಲ್ಕು ವರ್ಷವಾದೊಡನೆ ಹಿಂದಿರುಗಿ ಬರಬೇಕು. ಬಾರದೆ ಹೋದರೆ ನಾನು ಅಗ್ನಿಯನ್ನು ಹೊಕ್ಕು ಜೀವವನ್ನು ಬಿಡುವವನು.” ಎಂದು ಶಪಥ ಮಾಡಿದನು.

ಭರತನ ರೀತಿ ತಾನು ನಿರೀಕ್ಷಿಸಿದ ರೀತಿಗೆ ಹೀಗೆ ತೀರ ವಿರುದ್ಧವಾದದ್ದನ್ನು ಕಂಡಾಗ ಲಕ್ಷ್ಮಣನಿಗೆ ತುಂಬ ಆಶ್ಚರ್ಯವಾಗಿರಬೇಕು. ತುಂಬ ಸಂತೋಷ ಅಂತೂ ಆಯಿತು. ಆಮೇಲೆ ಅವನು ಭರತನ ವಿಷಯ ಇಂಥ ಯೋಚನೆ ಮಾಡಿಲ್ಲ. ಒಮ್ಮೆ ಅವನನ್ನು ಕುರಿತು ನೆನೆಸಿಕೊಂಡು ರಾಮನಿಗೆ, “ತಮ್ಮ, ಭರತ ಸುಕುಮಾರ, ನಿನಗಾಗಿ ತಪಿಸುತ್ತಾ ಊರಲ್ಲಿ ಕಾದಿದ್ದಾನೆ,” ಎಂದು ಮರುಕದ ಅಂತೇ ಅಕ್ಕರೆಯ ಮಾತನ್ನಾಡಿದನು. ಭರತ ಬಂದಾಗ ಕೈಕಯೀದೇವಿಯೂ ಬಂದಿದ್ದಳು. ಅವಳೂ ರಾಮ ಹಿಂದಿರುಗಿ ಬರಲೆಂದು ಬಯಸಿದ್ದು ಲಕ್ಷ್ಮಣನಿಗೆ ಕಂಡಿರಬೇಕು. ಆದರೂ ಅವನ ಮನಸ್ಸು ಅವಳ ವಿಷಯದಲ್ಲಿ ಕಹಿಯಾಗಿಯೇ ಇದ್ದಿತು. “ಮಗ ತಂದೆಯಂತೆ ಆಗುತ್ತಾನೆ, ತಾಯಂತೆ ಆಗುವುದಿಲ್ಲ, ಎಂದು ಜನ ಹೇಳುತ್ತಾರೆ. ಇದು ದಿಟ ಎಂದು ಕಾಣುತ್ತದೆ. ಭರತ ತಾಯಿಯಂತೆ ಆಗಲಿಲ್ಲ” ಎಂದನು. ಶ್ರೀರಾಮ, “ತಮ್ಮನ ವಿಷಯ  ಒಳ್ಳೆಯ ಮಾತು ಏನಿದೆ ಅದನ್ನು ಆಡು; ಚಿಕ್ಕಮ್ಮನ ವಿಷಯ ನೀನು ಕೆಟ್ಟ ಮಾತನ್ನಾಡುವುದು ನನಗೆ ರುಚಿಸುವುದಿಲ್ಲ,” ಎಂದನು. ಲಕ್ಷ್ಮಣ ಸುಮ್ಮನಾದನು.

ಅಣ್ಣನನ್ನು ವಹಿಸಿಕೊಂಡು ತಾನು ಇಂಥ ಮಾತನ್ನಾಡಿದಾಗ ಆ ಅಣ್ಣನೇ ಆ ಆಗದವರನ್ನು ವಹಿಸಿಕೊಂಡು ತನನ್ನು ಖಂಡಿಸಿದನೇ ಎಂದು ಲಕ್ಷ್ಮಣನಿಗೆ ರಾಮನನ್ನು ಕುರಿತು ಬೇಸರ ಇಲ್ಲ. ರಾಮನ ನಡತೆ ಇವನನ್ನು ಆ ಅಣ್ಣನಿಗೆ ತಮ್ಮ ಎನ್ನುವುದಕ್ಕಿಂತ ಹೆಚ್ಚಾಗಿ ದಾಸನನ್ನಾಗಿ ಮಾಡಿತು.

ಆಶ್ರಮಗಳ ಮಂಡಲ ಒಂದರಿಂದ ಇನ್ನೊಂದಕ್ಕೆ ಹೋಗಿ ಒಂದೊಂದರಲ್ಲೂ ತಿಂಗಳು, ಎರಡು ತಿಂಗಳು, ಆರು ತಿಂಗಳು ಇದ್ದು ಹತ್ತು ವರುಷದ ವೇಳೆಗೆ ಜನಸ್ಥಾನ ಎಂಬ ಕಾನನ ಪ್ರದೇಶದ ಅಂಚಿಗೆ ಬಂದು ಸೇರಿದರು.

ಜನಸ್ಥಾನ ಆಗ್ಯೇ ರಾಕ್ಷಸರ ವಶದಲ್ಲಿತ್ತು. ಇವರ ದೊರೆ ರಾವಣ. ಲಂಕೆಯ ರಾಜ. ಅವನ ಪಾಳೆಯದ ಪ್ರಭುಗಳು ಎಂದು ಇಲ್ಲಿಯ ನಾಯಕರು ಬಹಳ ದರ್ಪದಿಂದ ನಡೆಯುತ್ತಿದ್ದರು. ಖರ, ದೂಷಣ, ತ್ರಿಶಿರ ಎಂಬ ಮೂವರು ಈ ನಾಯಕರು. ಜನಸ್ಥಾನದ ಅಂಚಿನ ಒಂದು ಸ್ಥಳಕ್ಕೆ ಬಂದು ಶ್ರೀರಾಮ ಇಲ್ಲಿ ಆಶ್ರಮ ಮಾಡಿಕೊಳ್ಳೋಣ ಎಂದು ನಿಶ್ಚಯಿಸಿದನು. ಲಕ್ಷ್ಮಣ ಕುಟೀರಗಳನ್ನು ನಿರ್ಮಿಸಿದನು. ತಮ್ಮನ ಕೆಲಸ ಶ್ರೀರಾಮನಿಗೆ ಬಹು ಮೆಚ್ಚಿಗೆ ಆಯಿತು. ಅವನು ಈ ತಮ್ಮನನ್ನು ಶ್ಲಾಘಿಸಿ ಅಪ್ಪಿಕೊಂಡನು.

ಈ ಆಶ್ರಮದಲ್ಲಿ ಇವರು ಕೆಲವು ಕಾಲ ಸುಖವಾಗಿಯೇ ಇದ್ದರು. ಇವರ ಬದಿಯಲ್ಲಿಯೇ ಜಟಾಯು ಎಂಬ ಗೃಧ್ರಾಜನ ನೆಲೆ ಇತ್ತು.  (ಗೃಧ್ರರಾಜ ಎಂದರೆ ಒಂದು ಹದ್ದು, ಪಕ್ಷಿ, ಎಂಬಂತೆ ವಾಲ್ಮೀಕಿಯದೆಂಬ ಈಗಿನ ಕಾವ್ಯದಲ್ಲಿ ಪದ್ಯಗಳಿವೆ. ಪಕ್ಷಿ ಮಾತಾಡಿತು, ಮನುಷ್ಯನಂತೆ ವ್ಯವಹಾರ ನಡೆಸಿತು ಎನ್ನುವುದು ಕಟ್ಟುಕಥೆ ಆಗುತ್ತದೆ. ಗೃಧ್ರರಾಜ ಎಂದರೆ ಗೃಧ್ರದ ಪತಾಕೆಯನ್ನು ಬಳಸುತ್ತ ಇದ್ದ ರಾಜ ಎಂದು ನಾವು ತಿಳಿಯಬೇಕೆಂದು ಕಾಣುತ್ತದೆ.) ಜಟಾಯು ತಾನು ದಶರಥನ ಸ್ನೇಹಿತನೆಂದು ತಿಳಿಸಿ ಇವರ ವಿಷಯದಲ್ಲಿ ಬಹು ಅಕ್ಕರೆಯಿಂದ ನಡೆದುಕೊಂಡನು.

ನಾನು ರಾವಣನ ತಂಗಿ

ಕೆಲವು ಕಾಲ ಕಳೆದಿದೆ. ಆಶ್ರಮಕ್ಕೆ ಒಂದು ದಿನ ಒಬ್ಬ ರಾಣಿ ಬಂದಳು. ರಾಮ ಲಕ್ಷ್ಮಣರನ್ನು ನೋಡಿ ಅವರ ರೂಪಕ್ಕೆ ಮರುಳಾದಳು. ರಾಮ, ಸೀತೆ ಜೊತೆಯಾಗಿ ಕುಳಿತಿದ್ದಾರೆ. ಲಕ್ಷ್ಮಣ ಸಮೀಪದಲ್ಲೇ ಇದ್ದಾನೆ. ಇವರ ಬಳಿಗೆ ಬಂದು ಅವಳು, ನೀವು ಯಾರು, ಏನು, ಎಂದು ಕೇಳಿದಳು. ಶ್ರೀರಾಮ ತಮ್ಮ ಸಂಗತಿಯನ್ನು ತಿಳಿಸಿದನು. ಅವಳನ್ನು, ನೀನು ಯಾರು, ಎಂದು ಕೇಳಿದನು. ತರುಣಿ, “ನಾನು ರಾವಣನ ತಂಗಿ. ಇಲ್ಲಿ ಪಾಳೆಯದಲ್ಲಿದ್ದೇನೆ. ನನಗೆ ನಿನ್ನನ್ನು ಮದುವೆಯಾಗೋಣ ಎನ್ನಿಸುತ್ತಿದೆ. ನನ್ನನ್ನು ಸ್ವೀಕರಿಸು” ಎಂದಳು. ರಾಮನಿಗೆ ಆಶ್ಚರ್ಯ, ಬೇಸರ. ಅವನು ಹಾಸ್ಯವಾಗಿ, “ನನ್ನ ಹೆಂಡತಿಯಿದ್ದಾಳೆ. ಸವತಿಯೇಕೆ ಆಗುತ್ತಿಯೇ? ನನ್ನ ತಮ್ಮ ಇವನಿಗೆ ಹೆಂಡಿರಿಲ್ಲ. ಇವನನ್ನು ವರಿಸು,” ಎಂದನು. ತರುಣಿ ಅದಾದರೂ ಸರಿಯೆ ಎಂದು, ತನ್ನನ್ನು ಒಪ್ಪಿಕೋ, ಎಂದು ಲಕ್ಷ್ಮಣನನ್ನು ಬೇಡಿದಳು. ಲಕ್ಷ್ಮಣ ಹಾಸ್ಯವಾಗಿಯೇ, “ಅಣ್ಣ ದೊರೆ, ನಾನು ದಾಸ; ಅವನ ಹೆಂಡಿರಾಗುವುದನ್ನು ಬಿಟ್ಟು ದಾಸನ ಹೆಂಡಿರಾಗಲು ಬಯಸುವುದುಂಟೇ?” ಎಂದನು. ಹೆಂಗಸು “ಇದೂ ಸರಿಯಾದ ಮಾತೇ,” ಎನ್ನುತ್ತ ಮತ್ತೆ ರಾಮನಿಗೆ, “ಬಾ, ನನ್ನನ್ನು ಮದುವೆಯಾಗು?” ಈ ಹೆಂಡತಿಯಿದ್ದಾಳೆ ಎಂದಲ್ಲವೇ ನೀನು ನನ್ನನ್ನು ಒಲ್ಲೆ ಎನ್ನುತ್ತೀಯೆ, ನಾನು ಇವಳನ್ನು ಮುಗಿಸುತ್ತೇನೆ,” ಸೀತಾದೇವಿಯ ಮೇಲೆ ಹಾಯ್ದಳು. ದೇವಿ ಅಂಜಿದ್ದು ಕಂಡಿತು. ಶ್ರೀರಾಮ ತಮ್ಮನಿಗೆ, ‘ಈ ದುಷ್ಟೆಯನ್ನು ತಡೆ,’ ಎಂದು ಆಜ್ಞೆಮಾಡಿದನು. ಲಕ್ಷ್ಮಣ ಅವಳನ್ನು ದಂಡಿಸಿದನು. ಅವಳು ಓಡಿ ಹೋದಳು.

(ದಂಡಿಸಿದನೆಂದರೆ ಅವಳ ಕಿವಿ ಮೂಗನ್ನು ಕುಯ್ದನು ಎಂದು ಅರ್ಥದ ಶ್ಲೋಕ ಈಗಿನ ಕಾವ್ಯದಲ್ಲಿದೆ. ಅದು ಮೂಲದಲ್ಲಿ ಇದ್ದಿತು ಎಂದು ಹೇಳಲಾಗುವುದಿಲ್ಲ. ಇರಲಿಲ್ಲವೆಂದು ಕಾಣುತ್ತದೆ. ಈ ಹೆಂಗಸು ಶೂರ್ಪಣಖಿ ಎಂದು ಹೇಳುವ ಕಾವ್ಯ ಅವಳು ಆಮೇಲೆ ಲಂಕೆಗೆ ಹೋಗಿ ತನ್ನ ಅಣ್ಣನನ್ನು ಕಂಡಳೆಂದು ಹೇಳುತ್ತದೆ. ಆ ಸಂದರ್ಭದಲ್ಲಿ ಅವನು ಅವಳ ಕಿವಿ, ಮೂಗು ಇಲ್ಲವೆಂಬ ಮಾತನ್ನೇ ಎತ್ತುವುದಿಲ್ಲ. ತಂಗಿಯಾದವಳು ಕಿವಿ ಮೂಗನ್ನು ಕಳೆದುಕೊಂಡು ಎದರಿಗೆ ಬಂದರೆ , ಅಣ್ಣನಾದವನು ಇದನ್ನು ನೋಡಲಿಲ್ಲವೆಂದೋ ನೋಡಿದರೂ ಅದರ ಮಾತನ್ನೆತ್ತಲಿಲ್ಲವೆಂದೋ ಯಾರು ಹೇಳಿಯಾರು?  ಈ ಕಿವಿ ಮೂಗಿನ ಕಥೆ ಆಮೇಲೆ ಕಾವ್ಯದಲ್ಲಿ ಸೇರಿ ಬಂದದ್ದು ಎಂದು ತೋರುತ್ತದೆ. ಇಂಥ ಪ್ರಸಂಗ ರಾಮಾಯಣದಲ್ಲಿ ಹಲವು ಉಂಟು. ಇವನ್ನು ಬೇರೆಯವರು ಬರೆದು ಆಮೇಲಿನ ದಿನಗಳಲ್ಲಿ ರಾಮಾಯಣಕ್ಕೆ ಸೇರಿಸದರು.)

ಲಕ್ಷ್ಮಣನಿಂದ ದಂಡನೆ ಪಡೆದ ಹೆಂಗಸು ಓಡಿಹೋಗಿ ಖರನಲ್ಲಿ ದೂರು ಹೇಳಿದಳು. ಅವನೂ ಅವನ ಸೋದರ ಜನರೂ ರಾಮನ ಮೇಲೆ ಕೈ ಮಾಡಿ ಬಂದು ಸೋತರು, ಸತ್ತರು. ಈ ಸಂಗತಿ ವರದಿಯಾಗಿ ರಾವಣ ರಾಮನ ಮೇಲೆ ಹಗೆ ತೀರಿಸಿಕೊಳ್ಳಲು ತನ್ನ ಅನುಯಾಯಿ ಮಾರೀಚನೊಂದಿಗೆ ತಂತ್ರ ಮಾಡಿ ಅವನ ಜೊತೆಯಲ್ಲಿ ರಾಮನ ಆಶ್ರಮಕ್ಕೆ ಬಂದನು.

ಸೀತೆ ಏಲ್ಲಿ?

ಮಾರೀಚ ವೇಷ ಹಾಕುವುದರಲ್ಲಿ ಜಾಣ. ಅವನು ಚೆಲುವಾದ ಒಂದು ಮೃಗದಂತೆ ವೇಷ ಹಾಕಿ ಇವರ ಆಶ್ರಮದ ಎದುರ ಲ್ಲಿ ಸುಳಿದಾಡಿನು. ಸೀತಾದೇವಿ ಈ ಮೃಗವನ್ನು ನೋಡಿದಳು. ಅದರ ಚೆಲುವಿಗೆ ಮರುಳಾದಳು. ಅದನ್ನು ನೋಡಿ ಬನ್ನಿ ಎಂದು ರಾಮಲಕ್ಷ್ಮಣರನ್ನು ಕರೆದಳು. ಅಣ್ಣ ತಮ್ಮ ಬಂದರು. ದೇವಿ, “ಈ ಮೃಗ ಬಹು ಚೆನ್ನಾಗಿದೆ. ಇದನ್ನು ಹಿಡಿದು ತನ್ನಿ. ಇಲ್ಲಿ ಆಶ್ರಮದಲ್ಲಿ ಸಾಕೋಣ. ಜೀವಂತವಾಗಿ ಹಿಡಿಯಲಾಗದಿದ್ದರೆ ಕೊಂದೇ ತನ್ನಿ. ಇದರ ಚರ್ಮ ಇಷ್ಟು ಚೆನ್ನಾಗಿದೆ, ಇದಕ್ಕೆ ಹುಲ್ಲು ತುಂಬಿ ಇರಿಸಿದರೆ ಅಯೋಧ್ಯೆಯ ಅರಮನೆಯಲ್ಲಲಿ ಇಡುವುದಕ್ಕೆ ಆಗುತ್ತದೆ,” ಎಂದಳು. ಶ್ರೀರಾಮನಿಗೂ ಮೃಗವನ್ನು ನೋಡಿ ಮೋಹ ಆಯಿತು. ಲಕ್ಷ್ಮಣ, “ಇದು ಮಾಯಾಮೃಗ ಇರಬಹುದು. ಇದನ್ನು ಹಿಡಿಯ ಹೋಗುವುದು ಒಳ್ಳೆಯದಲ್ಲ,” ಎಂದನು. ಸೀತಾದೇವಿಗೆ ಈ ಮಾತು ರುಚಿಸಲಿಲ್ಲ. ಶ್ರೀರಾಮ ಕೂಡ ಮೃಗವನ್ನು ಹಿಡಿಯಹೋಗುವುದು ಸರಿಯೆಂದು ಯೋಚಿಸದನು. “ಮೋಸದಿಂದ ಹಗೆಗಳಲು ಮಾಡುವುದೇನು? ಮೋಸವೇ ಹೌದಾದರೆ ಅದನ್ನು ಚಚ್ಚಿ ಮುಗಿಸುವುದು ಯುಕ್ತ. ನೀನು ಇಲ್ಲಿಯೇ ಇರು. ದೇವಿಯನ್ನು ನೋಡಿಕೊ. ನಾನು ಈ ಮೃಗವನ್ನು ಬೇಟೆಯಾಡಿ ಬರುತ್ತೇನೆ,” ಎಂದನು. ಅದನ್ನು ಅಟ್ಟಿಕೊಂಡು ಹೋದನು.

ಮೃಗ ಓಡಿತು. ರಾಮ ಬೆನ್ನು ಹತ್ತಿದನು. ಎಷ್ಟೋ ದೂರ ಹೋಗಿರಬೇಕು. ಆಗ ಕಾಡಿನಿಂದ “ಓ ಲಕ್ಷ್ಮಣಾ, ಓ ಸೀತೇ” ಎಂದು ಆರ್ತ ಧ್ವನಿಯಲ್ಲಿ ಕೂಗು ಕೇಳಿಸಿತು. ಅದು ರಾಮನ ಧನಿಯಂತೆ ಕಂಡಿತು. ಸೀತಾದೇವಿ ತನ್ನ ಗಂಡನಿಗೆ ಏನೋ ಅಪಾಯ ಆಗಿದೆ ಎಂದು ಅಂಜಿದಳು. ಮೈದುನನಿಗೆ, “ಒಡನೆ ಹೊರಡು, ರಾಮ ನೆರವು ಬೇಡಿ ಕೂಗುತ್ತಿದ್ದಾನೆ. ಓಡು,” ಎಂದಳು. ಲಕ್ಷ್ಮಣ, “ರಾಮನಿಗೆ ಅಪಾಯವೆನ್ನುವುದು ಉಂಟೆ? ಬಂದಿತು, ಅವನು ಹೀಗೆ ಕೂಗುವನೆಂಬುದು ಉಂಟೆ? ಇದು ಇಲ್ಲಿಯ ರಾಕ್ಷಸರ ಮೋಸ. ನಿನಗೆ ಭಯ ಬೇಡ ಅತ್ತಿಗೆ, ಸುಮ್ಮನಿರು,” ಎಂದು ಸಮಾಧಾನ ಹೇಳಿದನು. ಮನಸ್ಸು ಎಂದು ಸಮಾಧಾನ ಹೇಳಿದನು. ದೇವಿಗೆ ಮನಸ್ಸು ತಡೆಯಲಿಲ್ಲ. ಅವಳು ಏನಾದರೂ ಮಾಡಿ ಇವನು ರಾಮನ ನೆರವಿಗೆ ಹೋಗುವಂತೆ ಮಾಡಬೇಕೆಂದು ನಿಶ್ಚಯಿಸಿದಳು. ಅದಕ್ಕೆ ಅವಶ್ಯಕವೆಂದು ತೋರಿದ ಕೆಟ್ಟ ಮಾತನ್ನು ಹೇಳಿದಳು. ಇದೇನಿದು ಲಕ್ಷ್ಮಣ? ಅಣ್ಣನಿಗೆ ಅಪಾಯವಾಗಿದೆ  ಎಂದರೆ, ಆದರೆ ಆಗಲಿ ಎಂಬಂತೆ ನಿಂತಿದೀಯೆ. ಅವನಿಗೆ ಕೇಡಾಗಲಿ ಎಂದೇ ಬಯಸುತ್ತಿದ್ದೀಯೋ ಹೇಗೆ?  ಆಗಲಿ ಇರು. ರಾಮ ಏನಾದರೂ ಆದರೆ ನಾನು ಉಳಿಯುವುದಿಲ್ಲ . ನೀನು ನನ್ನನ್ನು ಮುಟ್ಟಲಾರೆ. ರಾಮನಲ್ಲದೆ ನಾನು ಯಾರನ್ನೂ ಕಾಲಿನಿಂದ ಮುಟ್ಟುವವಳಲ್ಲ,” ಎಂದು ಚೀರಿದಳು. ಕೆಟ್ಟ ಮಾತು; ಆಡಬಾರದ ಮಾತು. ದೇವಿ ಬಲ್ಲಳು; ಸುಳ್ಳು ಮಾತು.  ಆದರೂ ಆಕೆ ಅದನ್ನು ಆಡಿ ಮುಗಿಸಿದಳು. ಲಕ್ಷ್ಮಣನ ತಾಳ್ಮೆ ಮುರಿಯಿತು. ಅವಳ ಇಷ್ಟ ನಡೆಯಿತು. ಅಣ್ಣನನ್ನು ದೇವರೆಂದು, ಅತ್ತಿಗೆಯನ್ನು ತಾಯಿಯೆಂದು, ಕಾಣುತ್ತಿದ್ದ ತನಗೆ ಇಂತಹ ಮಾತೆ ಎಂದು ಅವನಿಗೆ ಕೋಪ ಬಂದಿತು. ಅವನು, ‘ಇಂಥ ಮಾತನ್ನು ಕೇಳಿ ಇಲ್ಲಿ ನಿಲ್ಲಲಾರೆ. ನಿನ್ನ ಇಷ್ಟ. ಅಣ್ಣನ ಹಿಂದೆ ಹೋಗುತ್ತೇನೆ. ಇಲ್ಲಿ ದೇವತೆಗಳು ನಿನ್ನನ್ನು ನೋಡಿಕೊಳ್ಳಲಿ,” ಎಂದನು. ಧ್ವನಿ ಬಂದ ದಿಕ್ಕಿನಲ್ಲಿ ಕಾಡನ್ನು ಹೊಕ್ಕನು.

ಆಶ್ರಮದ ಬದಿಯಲ್ಲಿ ಮರೆಯಲ್ಲಿದ್ದ ರಾವಣ ಇದನ್ನು ನಿರೀಕ್ಷಿಸಿ ಕಾದಿದ್ದನು. ಲಕ್ಷ್ಮಣ ಅತ್ತ ಹೊರಡುತ್ತಲೇ ಅವನು ಒಬ್ಬ ಸಂನ್ಯಾಸಿಯ ವೇಷದಲ್ಲಿ ಆಶ್ರಮದ ಮುಂಭಾಗದಲ್ಲಿ ಕಾಣಿಸಿಕೊಂಡನು. ತಾನು ರಾವಣ ಎಂದು ತಿಳಿಸಿ, ದೇವಿ ತನ್ನನ್ನು ಸೇರಬೇಕೆಂದು ಬಯಸಿದನು. ಅವಳು ಅವನನ್ನು ಧಿಕ್ಕರಿಸಲು ಅವಳನ್ನು ಬಲಾತ್ಕಾರದಿಂದ ಸೆಳೆದು ರಥದ ಮೇಲೆ ಕುಳ್ಳಿರಿಸಿಕೊಂಡು ಹೊರಟನು. ದೇವಿ ಕೂಗಿ ಕೊಂಡದ್ದರಿಂದ ಬದಿಯ ತನ್ನ ನೆಲೆಯಲ್ಲಿದ್ದ ಜಟಾಯು ಅಲ್ಲಿಗೆ ಬಂದು ಇವನ ಈ ಅಕೃತ್ಯವನ್ನು ಕಂಡು ಅವನನ್ನು ತಡೆಯಲು ಯತ್ನಿಸಿದನು. ರಾವಣ ಅವನನ್ನು ಬಡಿದು ಕೆಳಗುರುಳಿಸಿ ದೇವಿಯನ್ನು ರಥದ ಮೇಲೆ ಕುಳ್ಳಿರಿಸಿಕೊಂಡು ಹೊರಟೇ ಹೋದನು.

ಅಣ್ಣನನ್ನು ಸೇರಲು ಹೊರಟ ಲಕ್ಷ್ಮಣ ತಕ್ಕಷ್ಟು ದೂರ ಹೋಗಿದ್ದಾನೆ. ಶ್ರೀರಾಮ ದಾರಿಯಲ್ಲಿ ಎದುರಿಗೆ ಕಂಡನು. “ಇದೇನಪ್ಪಾ ಇಲ್ಲಿ ಬರುತ್ತಿದ್ದೀಯಲ್ಲಾ? ಸೀತೆಯನ್ನು ಒಬ್ಬಳನ್ನೇ ಬಿಟ್ಟು ಬರಬಹುದೇ? ಆ ಮೃಗ ಮೃಗವಲ್ಲ. ರಾಕ್ಷಸ, ವೇಷಹಾಕಿ ಬಂದಿದ್ದನು. ಅವನನ್ನು ಕೊಂದೆದನು. ಅವನು ನನ್ನ ಧ್ವನಿಯಲ್ಲಿ ಕೂಗು ಹಾಕಿದಾಗ ನೀವು ಭಯಪಡುತ್ತೀರೆಂದು ನಾನು ತಿಳಿದೆ. ಆದರೂ ನೀನು ಹೀಗೆ ಬರಬಹುದೆ? ಸೀತೆಗೆ ಏನಾದರೂ ಕೇಡಾದೀತು ಎಂದು ಭಯ ಬೇಡವೆ?” ಎಂದು ತಮ್ಮನನ್ನು ಆಕ್ಷೇಪಿಸಿದನು. ನಡೆದಿದೆ ಸಂಗತಿಯನ್ನು ಲಕ್ಷ್ಮಣ ವಿಜ್ಞಾಪಿಸಿದನು. “ನಾನು ಎಷ್ಟು ಧೈರ್ಯ ಹೇಳಿದರೂ ಅತ್ತಿಗೆ ಕೇಳಲಿಲ್ಲ. ಆಡಬಾರದ ಮಾತನ್ನು ಆಡಿದರು. ನಾನು ಬಂದುಬಿಟ್ಟೆ” ಎಂದು ವಿವರಿಸಿದನು. ರಾಮ ಒಪ್ಪಲಿಲ್ಲ.

ಆಶ್ರಮಕ್ಕೆ ಬಂದು ನೋಡಿದರೆ ದೇವಿ ಆಶ್ರಮ ಪ್ರದೇಶದಲ್ಲಿ ಎಲ್ಲಿಯೂ ಇಲ್ಲ, ಆಕೆ ಏನಾದರು?

ರಾಮಚಂದ್ರ ದುಃಖದಲ್ಲಿ ಹುಚ್ಚನಂತೆ ಪ್ರಲಾಪಿಸಿದನು.ಅಣ್ಣನಿಗೆ ಸಮಾಧಾನ ಹೇಳುವುದೇ ಲಕ್ಷ್ಮಣನಿಗೆ ಕಷ್ಟವಾಯಿತು. ಅಣ್ಣನಿಗೆ ಸಮಾಧಾನ ಹೇಳಿ ಮುಂದಿನ ಯೋಚನೆ ಏನು ಎಂದು ನಿಶ್ಚಯಿಸುವುದಕ್ಕೆ ಅವನು ತೊಳಲಿದನು.

ಆಶ್ರಮದ ಸುತ್ತಿನಲ್ಲಿ ದೇವಿ ಮುಡಿದಿದ್ದ ಹೂಗಳು ಚೆಲ್ಲಿದ್ದವು. ಅಲ್ಲಿಯೇ ಹತ್ತಿರದಲ್ಲಿ ದೊಡ್ಡ ಕದನ ಆದ ಚಿಹ್ನೆಗಳಿದ್ದವು. ಅಲ್ಲೇ ಸ್ವಲ್ಪ ದೂರದಲ್ಲಿ ಜಟಾಯು ಬಿದ್ದಿದ್ದನು. ಅವನು ಇವರಿಗೆ ದೇವಿಯನ್ನು ರಾವಣ ಕದ್ದೊಯ್ದನು ಎಂದು ತಿಳಿಸಿದನು.

ಸುಗ್ರೀವನ ಸ್ನೇಹ

ಜಟಾಯು ದೇಹಕ್ಕೆ ಸಂಸ್ಕಾರಮಾಡಿ ಅಣ್ಣ ತಮ್ಮಂದಿರು ದಕ್ಷಿಣಕ್ಕೆ ನಡೆದರು. ದಾರಿಯಲ್ಲಿ ಕಬಂಧ ಎಂಬ ಕಾನನವಾಸಿಯಿಂದ ರಾವಣನ ವಿಷಯ ಕೆಲವು ಸಂಗತಿಗಳನ್ನು ತಿಳಿದರು. “ವಾನರರಾಜ ವಾಲಿ ಎಂಬವನ ತಮ್ಮ ವನವಾಸದಲ್ಲಿದ್ದಾನೆ. ಅವನ ಹೆಸರು ಸುಗ್ರೀವ. ಅವನ ಸ್ನೇಹವನ್ನು ಗಳಿಸಿ. ಅವನು ನಿಮಗೆ ಸಹಾಯ ಮಾಡುತ್ತಾನೆ,” ಎಂದು ಸಲಹೆ ಪಡೆದರು. ಅಲ್ಲಿಂದ ಮುಂದೆ ನಡೆದು ಶಬರಿ ಎಂಬ ತಾಪಸಿಯನ್ನು ಕಂಡು ಇನ್ನಷ್ಟು ಮುಂದಕ್ಕೆ ಹೋಗುವಲ್ಲಿ ಸುಗ್ರೀವ ಇವರನ್ನು ಕಂಡು ಭಯಪಟ್ಟು ಇವರ ವಿಷಯ ಏನು ಎಂದು ತಿಳಿಯಲು ತನ್ನ ಮಂತ್ರಿ ಹನುಮಂತನನ್ನು ಕಳುಹಿಸಿದನು. ಈಗ ಇರುವಂತೆ ಕಾವ್ಯದಲ್ಲಿ ಇವರನ್ನು ಕಪಿಗಳೆಂದು ಕರೆದಿದೆಯಾದರೂ ಇವರೂ ಜಟಾಯುವಂತೆ ಮನುಷ್ಯರೆಂದು ನಾವು ತಿಳಿಯಬೇಕು. ಹನುಮಂತನೊಂದಿಗೆ ಮಾತನಾಡಿ ರಾಮಲಕ್ಷ್ಮಣರು ಸುಗ್ರೀವನ ಬಳಿಗೆ ಹೋದರು.  ಅವನೊಡನೆ ಸ್ನೇಹವನ್ನು ಬೆಳೆಸಿದರು. ಸುಗ್ರೀವನಿಗೆ ಅವನ ಅನ್ಣ ಬಹು ಅನ್ಯಾಯ ಮಾಡಿದ್ದನು. ಅವನ ರಾಜದಾನಿ ಕಿಷ್ಕಿಂಧೆ. ವಾಲಿ ತಮ್ಮನನ್ನು ಅಲ್ಲಿರದಂತೆ ಓಡಿಸಿ ಅವನ ಹೆಂಡಿರನ್ನು ತನ್ನ ವಶದಲ್ಲಿರಿಸಿಕೊಂಡಿದ್ದನು. ಸುಗ್ರೀವ ತನ್ನ ಕಥೆಯನ್ನೆಲ್ಲ ರಾಮನಿಗೆ ಹೇಳಿದನು. ರಾಮಚಂದ್ರ ವಾಲಿಯನ್ನು ಕೊಂದು ಇವನನ್ನು ಕಿಷ್ಕಿಂಧೆಯ ದೊರೆಯಾಗಿ ಮಾಡುವೆನೆಂದು ಮಾತುಕೊಟ್ಟನು. ಸುಗ್ರೀವ ಆ ಬಳಿಕ ದೇವಿಯನ್ನು ಅರಸಿ ಅವರಿರುವ ಸ್ಥಳವನ್ನು ಕಂಡುಹಿಡಿದು ಅವರನ್ನು ಬಿಡಿಸುವ ಕೆಲಸದಲ್ಲಿ ಸಹಾಯ ಮಾಡುವುದಾಗಿ ರಾಮನಿಗೆ ಮಾತುಕೊಟ್ಟನು.

ಸುಗ್ರೀವನ ಸಖ್ಯ ಆದಮೇಲೆ ರಾಮಲಕ್ಷ್ಮಣರಿಗೆ ದೇವಿಯ ಗತಾಗತಿಯ ವಿಷಯದಲ್ಲಿ ಒಂದು ಸುಳಿವು ಸಿಕ್ಕಿತು. ಆ ಸ್ವಲ್ಪ ಹಿಂದೆ ಸುಗ್ರೀವನೂ ಅವನ ಮಂತ್ರಿಗಳೂ ತಮ್ಮ ಗಿರಿಶಿಖರದಲ್ಲಿ ಕುಳಿತಿರುವಾಗ ಒಬ್ಬ ರಥಿಕ ಒಬ್ಬ ಸ್ತ್ರೀಯನ್ನು ಅದರಲ್ಲಿ ಕೂರಿಸಿಕೊಂಡು ಹೋಗುತ್ತಿದ್ದದ್ದು ಕಂಡಿತು. ಆ ಸ್ತ್ರೀ ತನ್ನ ಕೆಲವು ಒಡವೆಗಳನ್ನು ತನ್ನ ಸೀರೆಯ ಒಂದು ತುಂಡಿನಲ್ಲಿ ಕಟ್ಟಿ ಇವರು ಇದ್ದ ಸ್ಥಳದಲ್ಲಿ ಬೀಳುವಂತೆ ಕೆಳಕ್ಕೆ ಹಾಕಿದ್ದಳು. ಆಕೆ ಸೀತಾದೇವಿ ಇರಬಹುದೇ? ಆ ಒಡವೆಯನ್ನು ನೋಡಿದರೆ ಇದು ತಿಳಿಯಬಹುದು. ಶ್ರೀರಾಮ ಆತುರದಿಂದ, ಆ ಗಂಟನ್ನು ತರಿಸು, ಎಂದು ಸಖನನ್ನು ಬೇಡಿದನು. ಅದು ಬಂದಿತು. ಒಡವೆ ದೇವಿಯವು ಹೌದು. ರಾಮ ಅವನ್ನು ಗುರುತಿಸಿದನು; ನಿನಗೆ ಗುರುತು ಸಿಕ್ಕುತ್ತದೆಯೇ ಎಂದು ಲಕ್ಷ್ಮಣನನ್ನು ಕೇಳಿದನು. ಲಕ್ಷ್ಮಣ, “ಕೇಯೂರ ಕುಂಡಲಗಳು ಗುರುತು ಸಿಕ್ಕುವುದಿಲ್ಲ.  ನೂಪುರದ ಗುರುತು ಸಿಕ್ಕುತ್ತದೆ . ನಾನು ದಿನವೂ ಅಡಿಗೆ ತಲೆಯಿಟ್ಟು ನಮಸ್ಕರ ಮಾಡುವಲ್ಲಿ ಇವನ್ನು ನೋಡುತ್ತಿದ್ದೆ,” ಎಂದನು.

ಇದರಿಂದ ಲಕ್ಷ್ಮಣನ ಮನಸ್ಸು ಎಷ್ಟು ನಿಷ್ಕಲ್ಮಷ ಎನ್ನುವುದು ಕಾಣುತ್ತದೆ. ಅವನು ಅತ್ತಿಗೆಯ ಮುಖವನ್ನು ನೋಡಿರಲಿಲ್ಲವೆಂದು ಅಲ್ಲ. ಅವನಿಗೆ ಆಕೆಯ ಮುಖದ ಗುರುತು ಇರಲಿಲ್ಲವೆಂದೂ ಅಲ್ಲ. ಅವನು ಅತ್ತಿಗೆಯನ್ನು ಚೆನ್ನಾಗಿಯೇ ನೋಡಿದ್ದನು. ಆಕೆಯ ಮುಖ ಬಿಸಿಲಿನಿಂದ ಕಂದಿದೆ ಎಂದು ಸಹ ಒಮ್ಮೆ ಅಣ್ಣನಿಗೆ ಹೇಳಿದ್ದನು. ಆದರೆ ಅವನ ನೋಟ ಆಕೆಯ ಕೇಯೂರ ಹೇಗಿದೆ ಎನ್ನುವುದನ್ನೂ ಕುಂಡಲ ಹೇಗಿದೆ ಎನ್ನುವುದನ್ನೂ ತಿಳಿಯುವಂಥಾಗಿರಲಿಲ್ಲ.

ರಾಮಚಂದ್ರ ವಾಲಿಯನ್ನು ಕೊಂದನು. ಸುಗ್ರೀವನಿಗೆ ಪಟ್ಟ ಆಯಿತು. ಮಳೆಯ ದಿನ ಆದುದರಿಂದ ಒಡೆನೆಯೇ ಏನೂ ಮಾಡುವಂತಿರಲಿಲ್ಲ. ಮಳೆ ನಿಲ್ಲಲಿ, ದೇವಿಯನ್ನು ಅರಸುವ ಕೆಲಸದಲ್ಲಿ ತೊಡಗೋಣ, ಎಂದು ಹೇಳಿ ಸುಗ್ರೀವ ಕಿಷ್ಕಿಂಧೆಯಲ್ಲಿ ನಿಂತನು. ಈ ಅಣ್ಣ ತಮ್ಮಂದಿರು ಬಳಿಯ ಋಷ್ಯಾಶ್ರಮದಲ್ಲಿ ನಿಂತರು.

ತಿಂಗಳು ಕಳೆಯಿತು. ಮಳೆ ನಿಂತಿತು. ಸುಗ್ರೀವ ಮತ್ತೆ ಬರಲಿಲ್ಲ. ಏನನ್ನಾದರೂ ಮಾಡುವ ಸುಳಿವೂ ಕಾಣಲಿಲ್ಲ. ತನ್ನ ಅಣ್ಣನನ್ನು ಹೀಗೆ ಅನಾದರಿಸಿದನೇ ಎಂದು ಲಕ್ಷ್ಮಣನಿಗೆ ತುಂಬ ಕೋಪ . ರಾಮ ನಿಗೂ ಈ ವಿಷಯ ಅಸಮಾಧಾನವೇ. ಅಣ್ಣನ ಅಪ್ಪಣೆ ಪಡೆದು ಲಕ್ಷ್ಮಣ ಕಿಷ್ಕಿಂಧೆಗೆ ಹೋಗಿ ಸುಗ್ರೀವನನ್ನು ಖಂಡಿಸಿ ಕೃತಘ್ನನಾಗಬೇಡ ಎಂದು ಎಚ್ಚರ ಹೇಳಿದನು. ಸುಗ್ರೀವ ಇವರನ್ನು ಕಾಣಲು ಬರದೆ ನಿಂತುಬಿಟ್ಟಿದ್ದದು ದಿಟ. ಆದರೆ ಅವನು ತನ್ನ ಕೆಲಸವನ್ನು ತೀರ ಮರೆತಿರಲಿಲ್ಲ.  ಹನುಮಂತ ದೊರೆಗೆ ನೆನಪುಕೊಟ್ಟು ಅದರ ಫಲವಾಗಿ ಸುಗ್ರೀವ ಬೇರೆ ಬೇರೆ ಪ್ರದೇಶಗಳಿಂದ ವಾನರ ಪ್ರಮುಖರು ಬರಲಿ ಎಂದು ಹೇಳಿ ಕಳುಹಿಸಿದ್ದನು. ಲಕ್ಷ್ಮಣ ಬಂದದ್ದೆ ಸುಗ್ರೀವ ತಾನು ಕೃತಘ್ನ ಅಲ್ಲವೇ ಅಲ್ಲ ಎಂದು ಹೇಳಿ ಅವನೊಡನೆ ರಾಮಚಂದ್ರನ ಸನ್ನಿಧಿಗೆ ಬಂದು ಮುಂದಿನ ಏರ್ಪಾಡನ್ನೆಲ್ಲ ಮಾಡಿದನು. ಹತ್ತು ಕಡೆಯಿಂದ ವಾನರ ಪ್ರಮುಖರು ಬಂದರು. ಸುಗ್ರೀವ ಅವರಲ್ಲಿ ಬಹು ದಕ್ಷರಾದವರನ್ನು ಸೀತಾದೇವಿಯವರು  ಎಲ್ಲಿದ್ದಾರೆ ತಿಳಿದುಬರಲು ಕಳುಹಿಸಿಕೊಟ್ಟನು. ಹನುಮಂತ ಮುಂತಾದವರು ಹೋಗಿ ದೇವಿ ಲಂಕೆಯಲ್ಲಿ ರಾವಣನ ಸೆರೆಯಾಗಿದ್ದಾರೆ ಎಂದು ತಿಳಿದುಬಂದರು. ಸುಗ್ರೀವ ಸೇನೆಯೊಡನೆ ಲಂಕೆಗೆ ಹೋಗಲು ಅನುವಾದನು.

ವೀರರಲ್ಲಿ ವೀರ ಲಕ್ಷ್ಮಣ

ಲಂಕೆ  ದ್ವೀಪ. ಅದನ್ನು ಸೇರಬೇಕೆಂದರೆ ಸಾಗರಕ್ಕೆ ಸೇತುವೆ ಕಟ್ಟಬೇಕು. ಇದನ್ನ ಕಟ್ಟ ಇದ್ದಾಯಿತು. ರಾಮ ಲಕ್ಷ್ಮಣ ಸುಗ್ರ ಈವರ ಮುಂದಾಳುತನದಲ್ಲಿ ಸೇನೆ ಲಂಕೆಯನ್ನು ಮುಟ್ಟಿತು.

ವಾನರ ರಾಕ್ಷಸರ ಕದನ ಘೋರವಾಗಿ ನಡೆಯಿತು. ರಾಕ್ಷಸನಾಯಕರು ಒಬ್ಬರಾದ ಮೇಲೆ ಒಬ್ಬರು ಸತ್ತರು. ವಾನರರು ಅಳತೆ ಮೀರಿದ ಶೌರ್ಯದಿಂದ ಕಾದಿದರು. ಒಮ್ಮೊಮ್ಮೆ ಶತ್ರು ನಾಯಕರ ಪೆಟ್ಟನ್ನು ಸಹಿಸಲಾರದೆ ಹಿಮ್ಮೆಟ್ಟಿದರು. ಅಂಥ ವೇಳೆ ರಾಮನೋ ಲಕ್ಷ್ಮಣನೋ ಅವರ ಮುಂದೆ ನಿಂತು ತಾವೇ ಯುದ್ಧಮಾಡಿ ಈ ಅನುಚರ ಜನರನ್ನು ಕಾಪಾಡಿಕೊಂಡರು. ಈ ಕಾರ್ಯದಲ್ಲಿ ಲಕ್ಷ್ಮಣನ ಭಾಗ ರಾಮನ ಭಾಗಕ್ಕಿಂತ ಕಡಿಮೆಯಾಗಲಿಲ್ಲ. ಆ ಮೊದಲೇ ಹನುಮಂತ, ಶೌರ್ಯದಲ್ಲಿ ರಾಮನಿಗೆ ಮಿಗಿಲಿಲ್ಲ, ಲಕ್ಷ್ಮಣನಿಗೆ ಎಣೆಯಿಲ್ಲ ಎಂದು ಕಂಡಿದ್ದನು.

ರಾವಣನ ಮಗ, ಇಂದ್ರಜಿತ್‌ ಎಂದು ಪ್ರಖ್ಯಾತನಾದ ಮೇಘನಾದ ಯುದ್ಧದ ಒಂದು ಘಟ್ಟದಲ್ಲಿ ಈ ಸೋದರರನ್ನು ಒಂದು ಮಾಯಾ ಅಸ್ತ್ರದಿಂದ ಕಟ್ಟಿಹಾಕಿದನು. ಅದರಿಂದ ಬಿಡಿಸಿಕೊಳ್ಳುವುದೇ ಬಹು ಶ್ರಮವಾಯಿತು. ಯುದ್ಧದ ಇನ್ನೊಂದು ಘಟ್ಟದಲ್ಲಿ ಇಂದ್ರಜಿತ್‌ ಮಾಯಾಯುದ್ಧ ಮಾಡಲು ನಿಶ್ಚಯಿಸಿ ಅದಕ್ಕೆ ಪೂರ್ವಭಾವಿಯಾಗಿ ನಿಕುಂಭಿಲಾ ಎಂಬ ಒಂದು ಯಾಗವನ್ನು ನಡೆಸತೊಡಗಿದನು. ವಿಭೀಷಣ ಇದನ್ನು ತಿಳಿದು ರಾಮನ ಬಳಿಗೆ ಬಂದು, “ಲಕ್ಷ್ಮಣನನ್ನು ನನ್ನೊಡನೆ ಕಳುಹಿರಿ. ಇಂದ್ರಜಿತ್‌ ಈ ಯಜ್ಞವನ್ನು ಮುಗಿಸದಂತೆ ತಡೆಯಬೇಕು” ಎಂದನು. ರಾಮ ತಮ್ಮನನ್ನು ಆ ಕೆಲಸಕ್ಕಾಗಿ ಕಳುಹಿಸಿದನು. ಲಕ್ಷ್ಮಣ ಇಂದ್ರಜಿತ್‌ನ ಯಾಗ ನಡೆಯದಂತೆ ತಡೆದನು. ಇಂದ್ರಜಿತ್‌ ಯಜ್ಞವನ್ನು ನಿಲ್ಲಿಸಿ ಇವರೆದುರಿಗೆ ಬಂದನು; ವಿಭೀಷಣನನ್ನು ಹೀಯಾಳಿಸಿ ಬೈದು ಲಕ್ಷ್ಮಣನೊಡನೆ ಕಾದಲು ನಿಂತನು. ಕಾದಿಕಾದಿ ಕೊನೆಯಲ್ಲಿ ಲಕ್ಷ್ಮಣ ಒಂದು ಬಾಣವನ್ನು ಮಂತ್ರಿಸಿ, “ದಶರಥ ರಾಜನ ಮಗ ನನ್ನ ಅಣ್ಣ ರಾಮ ಧರ್ಮಾತ್ಮ ಸತ್ಯಸಂಧ. ಆದ್ದರಿಂದ ಓ ಬಾಣವೇ, ನೀನು ಹೇಗಿ  ಈ ರಾವಣಿಯನ್ನು ಕೊಲ್ಲು” ಎಂದು ಬೆಸಸಿ ಅದನ್ನು ಬಿಟ್ಟನು. ಅದು ಹಾರಿತು; ಇಂದ್ರಜಿತ್‌ನನ್ನು ಮುಟ್ಟಿತು; ಅವನನ್ನು ಕೊಂದಿತು. ಕದನದಲ್ಲಿ ಈ ಪ್ರಬಲವಾದ ವೈರಿಯನ್ನು ಸದೆದು ಹಿಂದಿರುಗಿದ ತಮ್ಮನನ್ನು ಶ್ರೀರಾಮ ತೊಡೆಯ ಮೇಲೆ ಕುಳ್ಳಿರಿಸಿಕೊಂಡನು; ಅಳವಿಲ್ಲದ ಅಕ್ಕರೆಯಿಂದ ಲಾಲಿಸಿದನು.

ಕೊನೆಗೆ ರಾವಣನೇ ಯುದ್ಧಕ್ಕೆ ಬಂದನು.  ಈ ಘಟ್ಟದಲ್ಲಿ ಲಕ್ಷ್ಮಣ ವಿಭೀಷಣರೊಡನೆ ನಿಂತು ರಾವಣನನ್ನು ಎದುರಿಸಿದಾಗ ರಾವಣ ತಮ್ಮನ ಮೇಲೆ ಕೋಪದಿಂದ ಅವನನ್ನು ಕೊಲ್ಲಲೆಂದು ಒಂದು ಶಕ್ತಿ ಆಯುಧವನ್ನು ಎಸೆದನು. ಅದು ವಿಭೀಷಣನಿಗೆ ತಾಗದಂತೆ ಲಕ್ಷ್ಮಣ ಅದನ್ನು ತಡೆದುಬಿಟ್ಟನು. ರಾವಣ, “ಇನ್ನೊಬ್ಬನ ಮೇಲೆ ಹಾಕಿದ ಶಕ್ತಿಯನ್ನು ನೀನು ತಡೆದೆಯಾ , ಬಾ ನಿನ್ನ ಮೇಲೆಯೇ ಒಂದನ್ನು ಎಸೆಯುತ್ತೇನೆ,” ಒಂದು ಹೇಳಿ ಅಷ್ಟಘಂಟಾ ಎಂಬ ಹೆಸರಿನ ಒಂದು ಶಕ್ತಿಯನ್ನು ಇವನ ಮೇಲೆ ಎಸೆದನು. ಲಕ್ಷ್ಮಣ ಅದರಿಂದ ಮೂರ್ಛೆಹೋದನು. ಶ್ರೀರಾಮ ತನ್ನ ತಮ್ಮ ತೀರಿಕೊಂಡನೆಂದೇ ಅಂಜಿದನು. “ನಿನ್ನನ್ನು ಕಳೆದುಕೊಂಡ ಮೇಲೆ ನನಗೆ ಲೋಕದಲ್ಲಿ ಏನು ಬೇಕು, ನಾನೂ ಜೀವ ಬಿಡುತ್ತೇನೆ,” ಎಂದು ಪ್ರಲಾಪ ಮಾಡಿದನು. ವಾನರ ವೈದ್ಯ ಸುಷೇಣ, “ಲಕ್ಷ್ಮಣ ದೇವ ತೀರಿಕೊಂಡಿಲ್ಲ, ಮುಖದ ಲಕ್ಷಣ ನೋಡಿ,  ಜೀವಂತ ದೇಹ ಎನ್ನುವುದನ್ನು ತೋರುತ್ತಿದೆ,” ಎಂದು ಧೈರ್ಯ ಹೇಳಿದನು. ಹನುಮಂತನನ್ನು ಕರೆದು, “ತಂದ್ರದ್ರೋಣ ಎಂಬ ಪರ್ವತದಿಂದ ಇಂಥ ಮೂಲಿಕೆಯನ್ನು ತೆಗೆದುಕೊಂಡು ಬಾ, ಲಕ್ಷ್ಮಣದೇವನಿಗೆ ಅದನ್ನು ಸೋಕಿಸಿದರೆ ಗುಣವಾಗುತ್ತದೆ,” ಎಂದು ಅವನನ್ನು ಕಳುಹಿಸಿದನು. ಹನುಮಂತ ಅದನ್ನು ತಂದನು. ಅದನ್ನು ಮೂಸಿ ಲಕ್ಷ್ಮಣ ಎಚ್ಚರಗೊಂಡನು. ರಾವಣನನ್ನು ಕೊಂದಾಯಿತೇ ಎಂದು ಅಣ್ಣನನ್ನು ಕೇಳಿದನು. ಅದು ಇನ್ನು ಮೇಲೆ ಎಂದು ರಾಮ ಹೇಳಲು “ರಾವಣನನ್ನು ಕೊಲ್ಲುವುದಾಗಿ ಪ್ರತಿಜ್ಞೆಮಾಡಿದ್ದೀಯೆ. ಅದನ್ನು ನಡೆಸು,” ಎಂದು ಅವನನ್ನು ಬೇಡಿದನು. ಇದಾದ ಬಳಿಕ ರಾಮ ರಾವಣನನ್ನು ಎದುರಿಸಿ ಘೋರ ಯುದ್ಧವನ್ನು ನಡೆಸಿ ರಾವಣನನ್ನು ಕೊಂದನು.

ಅತ್ತಿಗೆಗಾಗಿ ಚಿತೆ

ರಾವಣನನ್ನು ಕೊಂದ ಬಳಿಕ ಸೀತಾದೇವಿಯನ್ನು ಪರಿಗ್ರಹಿಸುವ ಮುನ್ನ ಶ್ರೀರಾಮ ದೇವಿಯನ್ನು ಉಗ್ರ ಪರೀಕ್ಷೆಗೆ ಗುರಿಮಾಡಿದನು.  ಆಕೆಯನ್ನು ಬರಮಾಡಿ, “ನಿನ್ನನ್ನು ರಾವಣ ಹೇಗೆ ಕಂಡನೋ ಯಾರು ಬಲ್ಲರು?” ಎಂದನು. ದೇವಿ, “ಇಂಥ ಮಾತನ್ನು ಕೇಳಿ ನಾನು ಜೀವಂತ ಇರುವವಳಲ್ಲ,” ಎಂದು ಉತ್ತರ ಕೊಟ್ಟು ಲಕ್ಷ್ಮಣನನ್ನು ಕುರಿತು, “ಲಕ್ಷ್ಮಣ, ಒಂದು ಚಿತೆಯನ್ನು ಮಾಡು; ನಾನು ಅಗ್ನಿಯನ್ನು ಹೊಕ್ಕು ಜೀವ ಬಿಡುತ್ತೇನೆ,” ಎಂದಳು. ದೇವಿಗೆ ಲಕ್ಷ್ಮಣನಲ್ಲಿ ಇಂಥ ವಿಶ್ವಾಸ; ಯಾವ ಕೆಲಸಕ್ಕೂ ಅವನೇ ಅವಳ ಕಿಂಕರ. ರಾಮನ ನೆರವಿಗೆ ಹೋಗಲೆಂಬ ಆತುರದಲ್ಲಿ ಆಡಬಾರದ ಮಾತನ್ನಾಡಿ ಅವಳು ಅವನನ್ನು ನೋಯಿಸಿದ್ದಳು. ಆದರೂ ಆಕೆ ಇಂಥ ಶುದ್ಧ ಮನಸ್ಸಿನ ಮನುಷ್ಯ ಇನ್ನಿಲ್ಲ ಎಂದು ಬಲ್ಲಳು. ಹನುಮಂತ ಬಂದು ತನ್ನೊಂದಿಗೆ ಮಾತನಾಡಿದಾಗ ಆಕೆ ಅವನಿಗೆ ಮೈದುನನ್ನು ಕುರಿತು ಬಹು ಪ್ರೀತಿಯ ಮಾತನ್ನು ಹೇಳಿದಳು.  “ಈ ತಮ್ಮ ಇರುವ ಕಾರಣ ನನ್ನರಸ ಶ್ರೀರಾಮ ತನ್ನ ತಂದೆ ತೀರಿಕೊಂಡದ್ದರ ನಷ್ಟವನ್ನು ಅನುಭವಿಸದೆ ಇದಾನೆ,” ಎಂದಳು. ಅದೇ ಲಕ್ಷ್ಮಣ ಈಗ ದೇವಿಗೆ ಪ್ರಾಣತ್ಯಾಗ ಮಾಡಲು ಒಂದು ಚಿತೆಯನ್ನು ಏರ್ಪಡಿಸಬೇಕಾಯಿತು.

ಲಕ್ಷ್ಮಣ ಅಣ್ಣನ ಮನಸ್ಸು ಹೇಗೆ ಎಂದು ನೋಡಿದನು. ಚಿತೆಯನ್ನು ಮಾಡುವುದು ರಾಮನಿಗೆ ಸಮ್ಮತ ಎನ್ನುವುದನ್ನು ಕಂಡು ಒಂದನ್ನು ನಿರ್ಮಿಸಿದನು. ದೇವಿ ಅಗ್ನಿಯನ್ನು ಪ್ರದಕ್ಷಿಣೆ ಮಾಡಿದಳು. ಸಾಯುತ್ತೇನೆ ಎಂದು ಹೇಳದೆ, “ನಾನು ಸತ್ಯವಂತೆ , ಶುದ್ಧಚಾರಿತ್ರೆ, ನನ್ನನ್ನು ಅಗ್ನಿ ರಕ್ಷಿಸಲಿ,” ಎಂದು ಶಪಥ ಮಾಡಿ ಅದನ್ನು ಹೊಕ್ಕಳು.

ಪರೀಕ್ಷೆ ಮುಗಿದು ದೇವಿ ಸುಖವಾಗಿ ಹೊರಗೆ ಬಂದಳು. ಶ್ರೀರಾಮ ಅವಳು ಶ್ರದ್ಧೆ ಎನ್ನುವುದು ಲೋಕಕ್ಕೆ ತಿಳಿಯಲಿ ಎನ್ನುವುದಕ್ಕಾಗಿ ಹೀಗೆ ಮಾಡಿದೆ ಎಂದು ಇವರ ಹೇಳಿ ಆಕೆಯನ್ನು ಸ್ವೀಕರಿಸಿದನು.

ರಾಮನ ತಮ್ಮ

ಲಂಕೆಯಿಂದ ಅಯೋಧ್ಯೆಗೆ ಹಿಂತಿರುಗಿ ಶ್ರೀರಾಮ ಪಟ್ಟಾಭಿಷಿಕ್ತನಾದನು. ತಾನು ದೊರೆಯಾದ ಮೇಲೆ ಲಕ್ಷ್ಮಣನನ್ನು ಕರೆದು ನೀನು ಯುವರಾಜನಾನು ಎಂದನು. ಏನೇನು ಹೇಳದರೂ ಲಕ್ಷ್ಮಣ ಒಪ್ಪಲಿಲ್ಲ. ಲಕ್ಷ್ಮಣ ಖಂಡಿತವಾಗಿಯೂ ಒಲ್ಲೆ ಎಂದ ಮೇಲೆ ಭರತ ಯುವರಾಜನಾಗುವುದು ಎಂದು ಏರ್ಪಾಡಾಯಿತು.

ಶ್ರೀರಾಮ ರಾಜ್ಯವಾಳಿದ ದಿನವೆಲ್ಲ ಲಕ್ಷ್ಮಣ ಅವನ ಅನುಚರನಾಗಿ ನಡೆದನು.  ರಾಮನ ತಮ್ಮ ಎನ್ನುವ ಪದವಿ ಅವನ ಪಾಲಿಗೆ ಮೂರು ಲೋಕದ ದೊರೆತನಕ್ಕಿಂತ ಹಿರಿಯ ಪದವಿ: ಈ ತಮ್ಮನದು ಈ ಅಣ್ಣನ ವಿಷಯದಲ್ಲಿ ಇಂಥ ಭಕ್ತಿ. ಈ ಕಾರಣವೇ ಲೋಕ  ಈ ಅಣ್ಣ ತಮ್ಮಂದಿರನ್ನು ಆದರ್ಶ ಸೋದರರೆಂದು ಪೂಜಿಸಿದೆ. ಕಥನದ ಆರಂಭದಲ್ಲಿ ಹೇಳಿರುವಂತೆ ಶ್ರೀರಾಮನಿಗೆ ನಮಸ್ಕಾರ ಎನ್ನುವಲ್ಲಿ ಭಕ್ತಸಮುದಾಯ ಆ ಹೆಸರಿನೊಂದಿಗೆ ಮೊದಲು ಅವನ ರಾಣಿ ಸೀತೆಯ ಹೆಸರನ್ನು ಹೇಳಿ ಒಡನೆಯೆ ಲಕ್ಷ್ಮಣನ ಹೆಸರನ್ನು ಹೊಗಳುತ್ತದೆ.

* * *