ನೀವೊಬ್ಬರೇ ನೀರಾ ಹೊರವರಿ| ಅಂದೇಳಿ
ಓಡಾಡೇ ನೀರಾ ತರೂವಾನೆ.
“ಕಾರಾಗೆದ್ದಿಲ್ಲಿ ಬಂದೀ ಕಾಲು ಕೆಸರಾಗದೆ
ಚಂದಾಗೇ  ಕಾಲಾ ತೊಳಕಣಿ” | ಅಂದೇಳಿ
ಓಡಾಡೇ ನೀರಾ ಹೊಯೀದಾನೆ
ಓಡಾಡೇ ನೀರಾ ಹೊಯ್ವದ್ನು ಕವ್ಲರು
ಬಂದೀ ಬಾಗಲ್ಲೇ ನಿಲುವಾರು
ಬಂದೀ ಬಾಗಲ್ಲೇ ನಿಲುವದ್ನು |ಇಸ್ರರ ಮಡದೀ

ಆರತಿ ತೆಕ್ಕಂಡೀ ಬರೂವಾಳೇ
ಆರತಿ ತೆಕ್ಕಂಡೀ ಬರುವುದ್ನು ಕವ್ಲರು
ಆರತಿಗೊಮ್ಮೆ ಸರಣಂದಿ| ಕವ್ಲರು
ಮಾಳೂಗಿ ಒಳಗೆ ನೆಡದಾರೆ | ಕವ್ಲರು
ಮಂಟಪದಲ್ಲೇ ಕುಳತಾರೆ | ಕವ್ಲರು
ಪಟ್ಟೀಯ ಸೀರಿ ತೆಗದಾರೆ
ಪಟ್ಟೀಯ ಸೀರಿ ತೆಗ್ವದ್ನು ಕವ್ಲರ

ಪಟ್ಟೆಲ್ಲ ಕುಂಕುಮದ ಹೊಡಿಯಾಗೆ
ಪಟ್ಟೆಲ್ಲ ಕುಂಕುಮದ ಹೊಡಿಯಾಗುತ್ನು ಕವ್ಲರು
ಚಿನ್ನದ ಕಯ್ಡಗಿಯ ತೆಗದಾರೆ | ಕವ್ಲರು
ಚಿನ್ನೆಲ್ಲ ಸಾಸಮಿಯ ಹೊಡಿಯಾಗೆ | ಕವ್ಲರು
ಎಳಿಯ ಸಿಂಗರವ ತೆಗದಾರ
ಹೂಂಗೆಲ್ಲ ಸಾಸಮಿಯ ಹೊಡಿಯಾಗೇ |ಕವ್ಲರು
ಬೂಮಗೆ ಸೆರಿಯಾಗೆ ತಲೆಬಾಗೇ
ಬೂಮಿಗೆ ಸೆರಿಯಾಘೆ ತಲ್ಬಾಗುತ್ನು ಜೋಗಿಯೂ
ಆಗೊಂದು ಮಾತಾ  ನುಡೀದಾನೆ

“ಅದು ಏನು ಕವ್ಲರೆ ತಲಬಾಗೇ ಕೂತಿರಿ
ನನ್ನ ಕೂಡದೇ ಬಡಪಟ್ಟೀ ಕವ್ಲರೆ
ಉಡ್ ಸಬೇಕಾರ್ ದಾರೀ ಎರಕಣಿ|” ಅಂದೇಳಿ
ತನ ಕಯ್ನಾ ಪೆಟ್ಟೀ ಕೊಡೋವಾನೆ
“ಅದು ಏನು ಕವ್ಲರೆ ತಲಬಾಗೇ ಕೂತಿರಿ
ನನ್ನಾ ಕೊಡದೇ ಬಡಚಿನ್ನಾ | ಕವ್ಲರೆ

ಇಟ್ಕಾಬೇಕಾರ್ ದಾರೀ ಎರಕಣೀ”| ಅಂದೇಳಿ
ಜೋಗಿ ಕಯ್ನಚಿನ್ನಾ ಕೊಡೋವಾನೆ
ಅದು ಏನು ಕವ್ಲರೆ ತಲಬಾಗೇ ಕೂತಿರಿ
ನನ್ನಾ ಕೂಡದೇ ಬಡಾಹೂಂಗು | ಕವ್ಲರೆ,
ಮುಡಿಸ್ಕಾಬೇಕಾರೆ ದಾರೀ ಎರಕಣಿ” ಅಂದೇಳಿ
ತನ್ ಕೂಡ್ನ ಹೂಂಗಾ ಕೋಡವಾನೆ
“ಅದು ಏನು ಕವ್ಲರ ತಲಬಾಗಿ ಕೂತಿರಿ
ನನ್ನಾ ಕೊಡದೆ ಬಡಾತೊಂಡ್ಲಾ| ಕವ್ಲರೆ
ಇಟ್ಕ ಬೇಕಾರೆ ದಾರೀ ಎರಕಣಿ”| ಅಂದೇಳಿ

ತನ್ ಕಯ್ನತೊಂಡ್ಲಾ ಕೋಡೋವಾನೆ
ಮುತ್ತನ ತೊಂಡಲಾ ಕೊಡುವದ್ನು ಕವ್ಲರು
ಮಾಳೂಗಿ ಒಳಗೆ ನೆಡದರೆ | ಕವ್ಲರು
ಮಾದೇವಿಗೆ ಪಟ್ಟೀ ಉಡಸಾರೆ | ಕವ್ಲರು
ಮಾದೇವಿಗೆ ಚಿನ್ನಾ ಇಡೋವಾರೇ  ಕವ್ಲರು

ಮಾದೇವಿಗೆ ಹೂಂಗಾ ಮುಡಸ್ವಾರೆ |ಕವ್ಲರು
ಮಾದೇವಿಗೆ ತೊಂಡಲ ಇಡೋವಾರೆ | ಕವ್ಲರು
ಲಾಗೊಂದು ಮಾತಾ ನುಡೀದಾರೆ

“ದಾರಿಎರ‍್ವಂಗೆ ಜೋಗಿ ಇಟಕಣಬಾರಾ
ಪಡಿಯಾ ಕೊಟ್ಟವ್ನಾ ಕಳಗೀರಿ ”
ಅಟ್ಟಂಬಾ ಮಾತಾ ಕೇಳಾರೆ ಇಸರರು
ಪಡಿಯಾ ತಕ್ಕಂಡೇ ಬರೋವಾರೆ | ಇಸರರು
“ಇಕ್ಕೊಳ್ಳೊ ಜೋಗಗೀ ಪಡೀದಾನಾ”
“ನಿಮ್ಮ ಕಯ್ ಪಡಿಯಾ ಮುಟ್ಟು ಜೋಗಿಯಲ್ಲ
ಮಾದೇವಿ ಕಯ್ ಪಡಿಯೇ ಬರಬೇಕೇ ”

ಮಾದೇವಿ ಕಯ್ ಪಡಿಯೇ ಬಂದ್ದುಂಟಾದರೆ
ತೆಕ್ಕಂಡಿ ತನ್ ಮಟಕೆ ನೆಡೀತೀನೋ| ಅಂಬುದ್ನು
ಏನು ಹೇಳದ್ರೂ ಕೇಳ್ ನಂದ್ ಇಸ್ರರು
ಮಾದೇವಿ ಕಯ್ಲ್ ಪಡಿಯಾಕೊಡುವಾರೇ
ಮಾದೇವಿ ಕಯ್ಲ ಪಡಿಯಾ ಕೊಡುವುದ್ನು ಮಾದೇವಿ
ಬಂದೀ  ಬಾಗಲ್ಲೆ ನಿಲೋವಾಳೇ| ಮಾದೇವಿ
ಇಕ್ಕೊಳ್ಳೋ ಜೋಗಿ ಪಡೀದಾನಾ |ಅಂಬುದ್ನು

ಹಗಲಬಂದಿರುಳಾ ನೆನಸಾನೆ | ಜೋಗಿಯು
ಮಾದೇವಿ ನೆಕ್ಕಂಡೇ ನೆಡದಾನೆ |”
ಬಾಳಿ ಬನದಲ್ಲೇ ಇರೂವಾನೆ.
ಬಾಳಿ ಬನದಲ್ಲೇ ಇರ್‌ವುದ್ನು ಕವ್ಲರು
ಭೂಮಿಗೆ ಸರಿಯಾಗೇ ತಲಬಾಗೇ
ಭೂಮಿಗೆ ಸರಿಯಾಗಿ ತಲಬಾಗುತ್ನು ಇಸರರು
ಆಗೊಂದು ಮಾತಾ ನುಡಿದಾರೆ

“ಅವ್ನಾ ಮಾಯ್ಕವಲ್ಲ ಇವ್ನಾ ಮಾಯ್ಕವಲ್ಲ
ಲಕ್ಮಣನ ಮಾಯಕವೇ ಹಿರಿದಾದೊ | ಅಂದೇಳೀ
ಆಡೂಕೋದ್ ಪಾರ್ವತಿಯ ದೆನಿದೂರ ಇಸ್ರರು
ಕಾಲುಗ್ರು ಮುರಿಲಿಲ್ಲಾ ಕಯ್ಯುಗ್ರು ಮುರಿಲಿಲ್ಲಾ
ಯಾವ ಸಾಯಿತ್ರೂ ನಮಗಿಲ್ಲ| ಪಾರ್ವತಿಯ
ಗೋಳೋಗೇ ಲಕ್ಮಣ್ಗೇ ಅರಗಲಿ| ಅಂದೇಳಿ
ತಂದೀ ಮಂಟಪಲೇ ಕುಳೂಸಾರೆ
ಚಲಕೇ ಚೋಳಕೀಚದ್ರು ಕುಲಕೇತುಂಬಿಹೂಂಗು
ಕೆಂದೀಯಾ ಕರ‍್ದೀ ನೊರಿಹಾಲು | ಲಾ| ಗಿಂಡಿ ತುಂಬೀ
ಚೋಳಚೀಯಾ ಮೆನೆ ಮುಡಗಾರೆ | ಹೆಣ್ಣಿನಪ್ಪಾ
ಹೊತ್ತಾನೆ ಹೊನ್ನಾ ಮುಡಿಮೆನೆ | ಹೆಣ್ಣಿಪ್ಪಾ

ಕಾವಣದಲ್ಲೇ ನಿಲೋವಾನೆ
ಎಡದಾ ತೊಡಿಮೆನೆ ಅಳಿಯಾ ಬಲವಾ ತೊಡಿಮೆನೆಮಗಳು
ಸಿರಿಗಂಗೀಗೇರಿ ತೊಡಿಯಾ ಮೆನೆ | ಕುಳ್ಳಿಸಿಕಂಡಿ
ಜಯ್ ವಂದೇ ದಾರೀ ಎರದಾನೆ
ದಾರಿ  ಎರ‍್ದಪ್ಪಾ ಮಾಳಗ್ಗೆ ಹೋಗಾನೆ
ಆನಂದದ ಗೆರೆ ಇರಳೀಯೇ| ಕಾಮನ ಬಯ್ಲಾ

ತೋರಿ ಉಂಬಳಿಯಾ ಕೊಡೋವಾನೇ
ಮಾಳೂಗಿ ಒಳಗೆ ಹತ್ತು ತಂದಾ ಸಿಕ್ಕಾ
ಹತ್ತಕ್ಕೆ ಹತ್ತು ಕಿರುನಳ್ಳೀ | ಕಂಚಿನುಟ್ಟು
ಮಗಳೀಗೆ ಬಳವರಿಯಾ ಕೊಡೋವಾನೆ
ಮಾಳೂಗಿ ಒಳಗೆ ಆರು ತಂದಾ ಸಿಕ್ಕಾ
ಆರಕ್ಕೆ ಆರು ಕಿರುನಳ್ಳಿ| ಕಂಚೀನುಟ್ಟು
ಮಗಳಿಗೆ ಬಳವರಿಯಾ ಕೊಡೋವಾನೆ
ಮಾಳೂಗಿ ಒಳಗೆ ಆಡ್ಡಾಗೋಡಿಯ ಮೆನೆ

ಮುದ್ದಕ್ಕನಂಬಾ ಹರಿವಾಳ
ಕಂಬು ಸಂದಕದಿಂದೆ ಸರ್ವಾದೀದಿಂದೆ
ಕವ್ಲರು ದಿಬ್ಬಣವೇ ಸವನದೆ
ಕಂಬು ಸಂದಕದಿಂದ ಸರ್ವವಾದೀದಿಂದೆ
ಪಾರ್ವತಿ ದಿಬ್ಬಣವೆ ಸವನದೆ
ಪಾರ್ವತಿ ದಿಬ್ಬಣವೇ ಸವ್ನಿ ಸುಂಗಾರಾಗಿ

ಒಟ್ಟಾಗ್ ಒಂದಾನಿ ನೆಗದಾರೆ | ಕವ್ಲರದಿಬ್ಣಾ
ತಮ್ಮಾ ಅರಮನಗೇ ನೆಡದಾರೆ.
ತಮ್ಮಾ ಅರ‍್ಮನಗೇ ನೆಡ್ವದ್ನು ಜೋಗಿಯು
ಕೆದೂಗಿ ಬನವಾ ಇಳೀದಾನೆ| ಜೋಗಿಯು
ಆಗೊಂದು ಮಾತಾ ನುಡೀದಾನೆ.
“ಜೋಗಿ ಅಂಬೆಸ್ರು ಇಲ್ ಗಿಂದ್ ಇತ್ತಾಗಿರಲೇ

ಲಕ್ಷ್ಮಣನೆಂಬಸ್ರು ನೆಡಿಯಾಲೆ |ಲ್|ಂದ್ ಲಕ್ಮಣ್ಣಾ
ಕೆದೂಗಿ ಬನ್ವಾ ಇಳೀದಾನೆ | ಲಕ್ಮಣ್ಣಾ
ಕೆದೂಗೊಂದೊಲಿ ಒಗೆದಾನೆ | ಲಕ್ಮಣ್ಣಾ
ಸೆಳ್ಳುಗರೀಲೋಲಿ ಬರದಾನೆ.

“ಜೀವಕೆ ರೋಗಾದ್ರೆ ಬಾಯೇನೆಡಿಯಾವೊ
ಬಾಡಿ ಹೋಗುವಾ ಎಳಿ ಎಲೆ ಹಣ್ಣಡಕೀಯಾ
ನೀಡೂವಾಕೇನು ಎಡಿಯಾವೋ| ಮಾವನೆ
ದಾರೀ ಅಂಬೂದಾ ಎರದೋಗೊ” ಅಂದ್
ಸೆಳ್ಳೂಗರಿಲೋಲಿ ಬರದಾನೆ | ಲಕ್‌ಮಣ್ಣಾ
ತನ್ನಾ ಗಿಳಿಗೋಳಾ ದೆನಿದೂರೇ |

ಇಂದೂ ಕರ್ದಂವಲ್ಲ ಬಂದಾವೇ ಗಿಳಿಗೋಳು
ನಿಂದವೇ ಲಕ್ಮಣಾ ಒಡನಲ್ಲೇ |ಮಾವನ ಕಯ್ಲಿ
ದಾರೀ ಅಂಬೂದಾ ಎರದೋಗೋ”  ಅಂದ್
ಕೊಟ್ಟಾನೆ ಕಯ್ಯಾ ಬರದೋಲೆ
ಕೊಟ್ಟಾ ವಾಲಿಯಾ ರಟ್ಟಿಯಲ್ ಅಡಗಸಕಂಡೇ

ಹಾರಿದವಂಬರಕೇ ಸರಿಯಾಗಿ | ಗಿಳೀಗೋಳು
ಇಸ್ರರರ ಮನಗೇನೆಡದಾವೇ | ಗಿಳಿಗೋಳು
ಬಂದೀ ಮಿಳಿಮೆನೇ ಕುಳತಾವೇ | ಇಸರರು
ವಾಲಗ್ಗುಂಡಾರೆ ಹಸಿಯಲ್ಲೇ | ಗಿಳಿಗೋಳು
ಆಗೊಂದು ಮಾತಾ ನುಡೀದಾರೆ |

“ಜೀವಂಕೆ ರೋಗಾದ್ರೆ ಬಾಯೇನಡಿಯಾವೋ
ಬಾಡಿಹೋಗುವ ಎಳಿ ಎಲೆ| ಹಣ್ಣಡಕಿಯಾ
ನೀಡೂವಾಕೇನು ಎಡಿಯಾವೋ | ಮಾವನೆ
ದಾರೀ ಅಂಬೂದಾ ಎರ‍್ದೊಗೋ |ಅಂದೇಳಿ
ಕೊಟ್ಟಾರೆ ಕಯ್ಯಾ ಬರದೋಲೆ
ಕೊಟ್ಟಾ ಒಲಿಯಾ ತಟ್ಟಾನೆ ತಡ್ದಾರೆ
ಕೊಟ್ಟಾ ವಾಲೀಯಾ  ದುಟ್ಟೆತ್ತಿ ನೋಡಾರೆ
ಪನ್ನೀ ಮರಿಯಲ್ಲೇ ಮುಗುಳು ನಗ್ಗೆ | ಅದೀತಾ

ಮಾಳೂಗಿ ಒಳಗೇ ನೆಡದಾರೆ | ಇಸುರರು
ಹಾಲ್ತಟ್ಟೀಲ್ಹಾರಾ ಎರೆದಾರೆ | ಇಸುರರು
ಬಾಳೀ ಹಣ್ಣೇಳಾ ಸೂಲಿದಾರೆ | ಇಸುರರು
ಇಳ್ಳೀ ಹಣ್ಣೇಳಾ ಸೊಲಿದಾರೆ | ಇಸುರರು
ಹಾಲೊಗಳಣ್ಣಾ ನುಡೀದಾರೆ | ಇಸುರರು
ಮಾಳಗ್ಗಿಂದೆರಗೇ ಬರೋವಾರೆ ಇಸುರರು
ಗಿಳಿಗೋಳೊಡನೋಗೆ ನಿಲೋವಾರೇ | ಇಸುರರು

ಗಿಳಿಗೋಳಿಗ್ ಹಾಲಾ ಕೊಡೋವಾರೆ
ಗಿಳಿಗೋಳಿಗ್ ಹಾಲ್ ಕೊಡುವುದ್ನು ಗಿಳಿಗೋಳು
ರಟ್ಟೇ ಅಲ್ಲಾಡೇ ಕುಡಿದಾವೇ
ಹಾಲಾ ಕುಡ್ದವೇ ಗಿಳಿಗೊಳು ಹಣ್ಣಾ   ಮೆದ್ದವೇ ಗಿಳಿಗೋಳು
ಇಸರರ ರಾಜ್ಯಾ ಗಳೀದಾವೇ
ಇಸರರ ರಾಜ್ಯಾಗಳವದ್ನು ಇಸ್ರರು
ಮಾಳೂಗಿ ಒಳಗೇ ನೆಡದಾರೆ | ಇಸ್ರರು

ಮೆಟ್ಟೀ ಬೀಗವಾ ಕರೀದಾರೆ | ಇಸ್ರರು
ಮುಚ್ಚೀಲ ತಗದೇ ಕಡಗಿಕ್ಕೆ | ಇಸ್ರರು
ಮುತ್ನ ಮುಂಡಸ್ನಾ ತಲಗ್ ಸುತ್ತೇ | ಇಸ್ರರು
ಪಟ್ಟೇ ಜೋತರವಾ ನೆರದುಟ್ಟೇ | ಇಸ್ರರು
ಕೋಲು ನೆವಳಲಾ ಇಳಬಿಟ್ಟೇ | ಇಸ್ರರು
ಪಟ್ಟೇ ಹಚ್ಚಡವಾ ಹೊಗಲೀಗೆ | ಹಾಯಿಕಂಡೇ

ಮಾಳಗ್ಗಿಂದೆರಗೇ ನೆಡದಾರೆ | ಇಸ್ರರು
ರಾಜಂಗ್ಳ ಮೆಟ್ಟಾ ಇಳದಾರೆ |  ಇಸ್ರರು
ಬಾಳೀಯ ಬನವಾ ಇಳದಾರೆ | ಇಸ್ರರು
ಲಕ್ಮಣ್ನಾ ಒಡನೋಗೇ ನಿಲೋವಾರೆ
ಲಕ್ಮಣ್ನಾ ಒಡನೋಗೇ ನಿಲುವುದ್ನು ಲಕ್ಮಣ್ಣಾ
ಮುತ್ತೀನಾ ಬಾಸಿಂಗಾ ಮುಡೀದಾನೆ | ಇಸ್ರರು

ಲಕ್ಮಣ್ನಾ ಕರ್ಕಂಡೇ ಬರೋವಾರೆ | ಇಸ್ರರು
ಮಾದೇವಿ ಕರ್ಕಂಡೇ ಬರೋವಾರೆ | ಇಸ್ರರು
ಬಂದೀ ಮಂಟಪಲೆ ಕುಳಸಾರೆ
ಚಲಕೇ ತೋಳ್ಚಿ ಕದ್ರು ಕುಲ್ಕೇ ತುಂಬೀ ಹೊಂಗು
ಕೇಂದಿಯಾ ಕರ್ದೆ ನೋರಿ ಹಾಲು |ಲ| ಗಿಂಡೀತುಂಬಿ
ಚೋಳಚೀಯಾ ಮೆನೇ ಮಡೂಗಾರೆ | ಇಸ್ರರು
ಹೊತ್ತಾರೆ ಹೊನ್ನಾ ಮುಡಿಮೆನೆ

ಎಡದ ತೊಡಿಮೆನೆ ಅಳಿಯಾ ಬಲದಾ ತೋಡಿಮೆನಿಮಗಳು
ಸಿರಿಗಂಗೀ ಗವರೀ ತೊಡಿಯಾಮೆನೆ | ಕೂರಿಸಿಕಂಡಿ
ಜಯ್ ವಂದೇ ದಾರೀ ಎರದಾರೆ
ಚಪ್ಪರದಲ್ಲೇ ಹತ್ತು ತರದ ಕಂಬೋ
ಹತ್ತಕ್ಕೆ ಹತ್ತು ಗುರುಗೋಳು | ಬಟ್ಟಕ್ಕೋಳು
ಹೊತ್ತಾ ನೋಡ್ ದಾರಿ ಎರದಾರೆ
ಕಾವಾಣದಲ್ಲಿ ಆರು ತರದಾ ಕಂಬೋ

ಆರಕ್ಕೆ ಆರು ಗುರುಗೋಳು| ಬಟ್ಟಕ್ಕೋಳು
ಏಳೀ ನೋಡ್ ದಾರೀ ಎರದಾರೆ
ಮಾಳೂಗಿ ಒಳಗೆ ಹತ್ತು ತರದಾ ಸಿಕ್ಕಾ
ಹತ್ತಕ್ಕೆ ಹತ್ತು ಕಿರುನಳ್ಳಿ | ಕಂಚೀನುಟ್ಟು
ಮಗಳಿಗೆ ಬಳವರಿಯಾ ಕೊಡೋವಾರೆ
ಮಾಳೂಗಿ ಒಳಗೆ ಆರುತರದಾ ಸಿಕ್ಕಾ
ಆರಕ್ಕೆ ಆರು ಕಿರುನಳ್ಳಿ| ಕಂಚೀನುಟ್ಟು
ಮಗಳಿಗೆ ಬಳವರಿಯಾ ಕೊಡೋವಾರೆ
ಕೊಟ್ಟೂಗಿ ಬಳಗನ ಗಟ್ಟು ಮಣಿಕೆಮ್ಮಿಯಾ
ಬಾಲಕೆ ಸವರ್ಣ ಗಳಸೀದಾ| ಎಮ್ಮೀಯಾ

ಮಗಳಿಗೆ ಬಳವರಿಯಾ ಕೊಡೊವಾರೇ
ಕೊಂಬು ಸಂದಕದಿಂದೇ ಸರ್ವವಾದೀದಿಂದೇ
ಮಾದೇವಿ ದಿಬ್ಬಣವೇ ಸವನದೇ
ಕೊಂಬು ಸಂದಕದಿಂದೆ ಸರ್ವವಾದೀದಿಂದೆ
ಲಕ್ಮಣ್ನ ದಿಬ್ಬಣವೇ ಸವನದೆ
ಲಕ್ಮಣ್ಣ ದಿಬ್ಬಣವೇ ಸವ್ನಿ ಸುಂಗಾರಾಗಿ

ಒಟ್ಟಾಗೊಂದಾನೀ ನೆಗೆದತ್ತೀ | ಮಾದೇವಿ ಲಕ್ಮಣ್ಣಾ
ತಮ್ಮ ಅರಮನೆಗೆ ನೆಡದಾರೆ.
ಈ ಹಾಡಾ ಹೇಳೋರಗಿ ಆಲಿಸಿ ಕೆಳ್ದೋರ್ಗೆ
ದನ ಕರೆಯಲೆ ದಾನ್ಯ ಬೆಳಿಯಲೆ | ಈ ಹಾಡಾ
ಚಿತ್ತಯ್ಸಿ ಕೇಳ್ದೋರು ಕಲಿಯೊಲೆ

ಈ ಹಾಡಾ ಹೇಳೋರ್ಗೆ ಸೆರ ದೆನಿ ಕೊಟ್ಟೋರ್ಗ
ಹಾದಿ ಗೊಕನದಾ ಸಿಣಗಂಗೆ| ತೀರುತವಾ
ಹೋಗಿ ಮಿಂದಟ್ಟೋ ಪಲಾಉಂಟೇ

ಗಿಂಡೀ ಗಿಂಡೀ ತುಂಬೇ ಗಿಂಡೀಲುದ್ಕಾ ತುಂಬೇ
ಗಿಂಡೀ ಬಾಯೀಗೆ ತರಳಾ ತುಂಬೇ |ಬೀ| ದಂತೆ
ತುಂಬಿರಲೇನಮ್ಮಾ ಮನದಲ್ಲೇ | ಈ ಹಾಡು
ಬರತಿರಲೇ ಹಬ್ಬಾ ಮೊದವೀಗೆ

ಚಂಬು ಚಂಬು ತುಂಬೇ ಚಂಬೀಲುದ್ಕಾ ತುಂಬೇ
ಚಂಬೀನಾ ಬಾಯೀಗೆ ತರಳಾ ತುಂಬೇ |ಬೀ| ದಂತೆ
ತುಂಬಿರಲೇ ನಮ್ಮಾ ಮನಾದಲ್ಲೇ| ಈ ಹಾಡು
ಬರತಿರಲೆ ಹಬ್ಬಾ ಮೊದವೀಗೆ.

* * *